Monday, December 29, 2008

ನಮ್ಮದಲ್ಲದ.. ಎಷ್ಟೋ... ಸಂಗತಿಗಳು...!!

ನಮ್ಮದಲ್ಲದ...
ಎಷ್ಟೋ ವಿಷಯಗಳನ್ನು...
ನಮ್ಮದಾಗಿಸಿ ಕೊಂಡಿದ್ದೇವೆ....

ನಮ್ಮ ಉಡುಗೆ.. ತೊಡಿಗೆ....

ಆಚಾರ ವಿಚಾರಗಳನ್ನ...

ಬದಲಾಯಿಸಿ ಕೋಂಡಿದ್ದೇವೆ...

ನಮ್ಮ ಊಟ ತಿಂಡಿ....

ಭಾಷೆಯನ್ನೂ.. ..

ಬದಲಾಯಿಸಿ ಕೊಳ್ಳುತ್ತಿದ್ದೇವೆ......

ನಮ್ಮದಲ್ಲದ ಎಷ್ಟೋ ಸಂಗತಿಗಳು ನಮ್ಮದಾಗಿದೆ...

ಆದರೆ...

ನಾವು ನಾವಾಗಿಯೇ ಇರೋಣ.... !!
ನಾವು ಬದಲಾಗೋದು ಬೇಡ.... !!

..... ಬದಲಾದರೂ...... ..


ನಮ್ಮ
ಸಂಸ್ಕ್ರತಿಯನ್ನು ಉಳಿಸಿ ಕೊಂಡು...

ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು...

ಉನ್ನತಿಯತ್ತ ಸಾಗೋಣ..

ನಮ್ಮ....


ಭವ್ಯ.. ಪರಂಪರೆ ಮರೆಯದಿರೋಣ...

...
ಎಲ್ಲಾ... ಬದಲಾವಣೆಗಳ ನಡುವೆ ಮತ್ತೊಂದು.. ..

ವರ್ಷ
ಕಳೆದು ಹೋಗಿದೆ...

ಇನ್ನೊಂದು...

ವರುಷ
ಬರುತ್ತಲಿದೆ... !

ಹೊಸ ವರುಷವು.....


ಸುಖ ಶಾಂತಿ.. ಸಮ್ರುದ್ಧಿಯನ್ನು ತರಲಿ... !


ಹೊಸ ಮನೆ ಕಟ್ಟುವ...ಭಾಗ್ಯವೊದಗಿ ಬರಲಿ...!!

ಭಾಗ್ಯ ಬಂದಾಗ...

" ಇಟ್ಟಿಗೆ ಸಿಮೆಂಟು.."

ಸದಾ.. ನಿಮ್ಮೊಂದಿಗಿರಲಿ....!!

ಸರ್ವರಿಗೂ..
ಹೊಸ.. ವರುಷ..
ಹೊಸ... ಹರುಷವ
ತರಲಿ... ..

"ಇಟ್ಟಿಗೆ ಸಿಮೆಂಟು"

Friday, December 26, 2008

ಮಿಲತೀ..ಹೇ..ಜಿಂದಗೀ...ಮೇ..ಮೊಹಬ್ಬತ್..... ಕಭಿ. .ಕಭೀ..


ಮುಂಬೈಯಲ್ಲಿರುವಾಗ ಜೀವನದಲ್ಲಿ ಒಂದು ಹಂತಕ್ಕೆ ಬರಬೇಕು ಅನ್ನುವದೇ ಗುರಿಯಾಗಿತ್ತು..

ಅಲ್ಲೂ ಕೂಡ ಒಂದೆರಡು ಹೆಣ್ಣು ಮಕ್ಕಳು ಎಡತಾಕಿ ಹೋಗಿದ್ದರು.

ಆದರೆ ನಾನಿನ್ನೂ "ವಿಜಯಾ" ಗುಂಗಿನಿಂದ ಹೊರಬಂದಿರಲಿಲ್ಲ...

ಆರ್ಥಿಕ ಭದ್ರತೆ ಬಂದ ಮೇಲೆ.. ಅವಳ ಮನೆಗೆ ಹೋಗಿ...
ಅವಳ ಅಣ್ಣನನ್ನೇ ಮಾತಾಡಿಸಿ ಬರುವ ವಿಚಾರ ನನ್ನದಾಗಿತ್ತು..

ಒಂದು ಚಂದದ ಮನೆ.. ಅವಳ ಪ್ರೀತಿ.....
ನಮ್ಮಿಬ್ಬರ ಲೋಕವೇ ಬೇರೆ......
ಎಂದೆಲ್ಲಾ ಹಗಲು ಕನಸು ಕಾಣುತ್ತಿದ್ದೆ...

ಅಲ್ಲಿ ಷಹ.., ಸುನಿಲ್ ಅಣ್ಣಮ್.., ವಿಲಾಸ್ ಮ್ಹುಳೆ..
ಇವರುಗಳು.. ನನಗೆ ಹಿಂದಿ ಸಿನೇಮಾ, ಗುಲ್ಜ್ಯಾರ್..ಸಿನೆಮಾಗಳು..
ಹಳೆಯ ಹಿಂದಿ ಸಿನೆಮಾ ಹಾಡುಗಳು...
ಒಳ್ಳೊಳ್ಳೆ ಗಝಲ್ ಗಳ ರುಚಿ ಹತ್ತಿಸಿದರು...

ಅವರೆಲ್ಲ ಈಗ ಎಲ್ಲಿ ಕಳೆದು ಹೋಗಿದ್ದಾರೋ...

ಒಮ್ಮೆ ಮುಂಬೈ ಗೆ ಹೋಗಿ ಪೇಪರನಲ್ಲಿ.., ಟಿವಿ ಯಲ್ಲಿ..,
ಜಾಹಿರಾತು ಕೊಟ್ಟು ಹುಡುಕಿಬಿಡೋಣ ಅನಿಸುತ್ತದೆ...


"ಒಮ್ಮೆ ಸಿಕ್ಕಿದ... ಪ್ರೀತಿಯನ್ನು ಬಿಡಬಾರದು..
ಭದ್ರವಾಗಿ ಹಿಡಿದು ಕೂಂಡು ಬಿಡಬೇಕು..
ಕಳೆದು ಹೋದರೆ ಮತ್ತೆ ಹುಡುಕುವದು ಬಲು ಕಷ್ಟ...

ಪ್ರೀತಿ ಮಾಡುವವರು ಸಿಕ್ಕಿದ್ದಾರಲ್ಲ.. !!
ಅವರನ್ನು ಹೋಗಲು ಬಿಡಬಾರದು...!"

"ಮಿಲತಿ ಹೆ ..ಜಿಂದಗೀ ..ಮೆ...
ಮೊಹಬ್ಬತ್..ಕಭೀ..ಕಬೀ...!!

ಹೋತಿ ಹೆ ದಿಲ್ಬರೋಂಸೆ.....
ಇನಾಯತ್ ..ಕಬೀ..ಕಭ್ಹೀ......"


ಇವರು ನೆನಪಾದಾಗಲೆಲ್ಲಾ..ಈ ಹಾಡು ನೆನಪಾಗುತ್ತದೆ...

ಹ್ರದಯ ಭಾರವಾಗುತ್ತದೆ....
ಅವರೊಂದಿಗೆ ಹಂಚಿಕೊಂಡ ಕ್ಷಣಗಳು..ಮಾತುಗಳು...
ಪ್ರತಿ ಶನಿವಾರ ಷಹಾನ ಪಾರ್ಟಿಗಳು....
ಅವನ ಹೆಂಡತಿ... ಅವನನ್ನು ಬಿಟ್ಟು ಓಡಿ ಹೋದ ಕಥೆ..

..ಅವನ ಹಾಡುವ ಶೋಕ ಗೀತೆಗಳು.....

"ಪಲ್..ಪಲ್..ದಿಲ್..ಕೇ..ಪಾಸ್..
ತುಮ್ ರೆಹತೀ..ಹೋ..."

ಹಾಡು ಮುಗಿದ ಮೇಲೆ ಅವನ ದುಃಖ...
ಅವನ ಕಣ್ಣಿರು...

"ಅವಳು ಯಾವಾಗಲಾದರೂ...ತಿರುಗಿ... ನನ್ನ ಬಳಿ ಬರಲಿ...
ನಾನು ಕಾಯುತ್ತೇನೆ,,,,
ನಾನು ಅವಳನ್ನು.. ಸ್ವೀಕಾರ ಮಾಡುತ್ತೇನೆ....
ಅವಳ.. " ಅವನ " ಮಗುವನ್ನೂ.... ಸಹ ಪ್ರೀತಿಸುತ್ತೇನೆ.."
ಅಂದಿದ್ದ..ಅವನ ಮಾತುಗಳು.....

ಹಣ ..ಐಶ್ವರ್ಯ ಇದ್ದರೂ ತಾನು ಮದುವೆಯಾಗದೆ ಇದ್ದಿದ್ದ....
ಅವಳನ್ನು ಜಿವದಷ್ಟು ಪ್ರೀತಿಸುತ್ತಿದ್ದ.. ಆ ಷಹಾ...!

ಎಲ್ಲ ನೆನಪಾಗುತ್ತಿವೆ...

ಇವರೆಲ್ಲ ಈ ಜಗದ ಜನ ಜಂಗುಳಿಯಲ್ಲಿ..ಕಳೆದು ಹೋಗಿದ್ದಾರೆ...

ಅವರ ಗೆಳೆತನ..ಹುಡುಗಾಟಿಕೆ...
ಅವರ........
ಪ್ರೀತಿಯೂ...
ಸಹ ಕಳೆದು ಹೋಗಿದೆ....

" ಜಾನೆ ಕಂಹಾ.. ಗಯೇ ವೋ..ದಿನ್....."....

ಆಗ ನನ್ನ ಬಾವ ಆಗ್ರಾದಲ್ಲಿದ್ದ.. ರಾಷ್ಟ್ರಿಕ್ರತ ಬ್ಯಾಂಕಲ್ಲಿ ವ್ಯವಸ್ಥಾಪಕ...

"ಪ್ರಕಾಶು..ಇಲ್ಲಿ ಬೋರು .ಬರ್ತಿದೆ... ಮಾರಾಯಾ ..
..ಹಿಂದಿ ಜನ...ಹಿಂದಿ...ಭಾಷೆ..ಒಮ್ಮೆ ಬಂದು ಹೋಗೊ.."
ಅಕ್ಕ ಗೋಗರೆದಿದ್ದಳು...


ಅಕ್ಕ...
ನಾನು ಯವತ್ತೂ ಅವಳನ್ನು "ಅಕ್ಕ " ಎಂದು ಕರೆಯಲೇ ಇಲ್ಲ....
ಹೆಸರು ಹೇಳಿಯೇ ಕರೆಯುತ್ತಿದ್ದೆ....
ಮೊನ್ನೆ ಹೆಂಡತಿ ಮಗನ ಸಂಗಡ " ..ತಾರೆ ಜಮೀನ್ ಪರ್ .." ಸಿನೆಮಾ ನೋಡುತ್ತಿದ್ದಾಗ ..
ಅಕ್ಕನ ನೆನಪಾಗಿ ಕಣ್ಣಲ್ಲಿ.. ನೀರಾಡಿತ್ತು...

ಫೋನ್ ಮಾಡಿ ಹೇಳಿಯೂ ಬಿಟ್ಟಿದ್ದೆ...

ಅಂಥಹ ಅಕ್ಕ...ನನ್ನಕ್ಕ...
ಅವಳು...ನನ್ನಮ್ಮ...ನನ್ನ.."ಆಯಿ" ಕೂಡ...

ನನ್ನ ಗೆಳೆಯ..ಗೆಳತಿ..ಹಾಗೆ...

ನನ್ನ.. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ...ಅವಳು ನಾಲ್ಕು ಗಂಟೆಗೆ ಏಳುತ್ತಿದ್ದಳು..
ನನ್ನನ್ನೂ ಎಬ್ಬಿಸುತ್ತಿದ್ದಳು..
ದೊಡ್ಡದಾಗಿ ಅಂದಿನ ಪರೀಕ್ಷೆಯ.."ಸಂಭಾವ್ಯ" ಪ್ರಶ್ನೋತ್ತರ ಗಳನ್ನು ಓದುತ್ತಿದ್ದಳು...
ನಾನು ಕೇಳುತ್ತಿದ್ದೆ.. ...
ಅವಳು ಮಾಡುತ್ತಿದ್ದುದನ್ನು ನೋಡುತ್ತಿದ್ದೆ...

ಗಣಿತವನ್ನೂ ಸಹ....

ಅವಳು ಮಾಡುತ್ತಿದ್ದುದು ನನ್ನ ಪರೀಕ್ಷೆಯ ತಯಾರಿ...

ಬೆಚ್ಚಗೆ ಚಾದರ ಹೊದ್ದು... ಕುಳಿತಿರುತ್ತಿದ್ದೆ..

ನಾನು ಪಾಸಾದಾಗಾ..ನನಗಿಂತ ಸಂಭ್ರಮ ಪಟ್ಟಿದ್ದಳು....

ನನ್ನ ತುಂಟತನ..ಮೊಂಡುತನ..ತಾಳ್ಮೆಯಿಂದ..ಸಹಿಸುತ್ತಿದ್ದಳು...
..ನನಗಿಂತ ಎರಡು ವರ್ಷ ದೊಡ್ಡವಳು...

ನನಗಾಗಲೇ ತಾಯಿಯಾಗಿದ್ದಳು...

ಇಬ್ಬರೂ ಸೇರಿದಾಗ ಜಗಳ ಮಾಡದೆ ..
ನಮ್ಮ ಪ್ರೀತಿ ಕೊನೆ ಗೊಳ್ಳುವದಿಲ್ಲ...

ಈಗಲೂ ಸಹ....

"ಫೂಲೊಂಕಾ..ತಾರೋಂಕಾ..ಸಬ್ ಕಾ..ಕೆಹನಾ..ಹೆ..
ಏಕ್ ಹಜಾರೋಂ...ಮೇ ..
ಮೇರಿ ಬೆಹೆನಾ..ಹೇ..."


ಪ್ರೀತಿ ಎಲ್ಲಿಯೂ ಸಿಗುವದಿಲ್ಲ...
ನಮ್ಮ ಬಳಿಯೇ ಇರುತ್ತದೆ...

ಹತ್ತಿರವೇ...... ಇರುತ್ತದೆ..

ನೋಡುವ ಕಣ್ಣುಗಳು..ಬೇಕು..
ಪ್ರೀತಿಯನ್ನು ..ಭಾವಿಸುವ.. ಮನಸೂ ಇರಬೇಕು...
ಅನುಭವಿಸುವ ಹ್ರದಯ ಬೇಕು...

ಅಪ್ಪನ ಕಾಣದ ನನಗೆ ಚಿಕ್ಕಪ್ಪ ಇದ್ದಾರೆ...

"ಮಗನೆ ಹೀಗಲ್ಲ..ಹೀಗೆ..
ಮಗನೆ.. ಇದು ಸರಿ..ಇದು ತಪ್ಪು......."
ನನ್ನ ಅಭ್ಯುದಯ ಕಂಡು ಖುಷಿ ಪಡುವ ಚಿಕ್ಕಪ್ಪ ಇದ್ದಾರೆ..

ಓದು ಬರಹ ತಿಳಿಯದ...
ಪ್ರೀತಿಯೊಂದೆ ಗೊತ್ತಿರುವ "ಆಯಿ"....
ಮಕ್ಕಳನ್ನು ಪ್ರೀತಿ ಮಾಡುವದನ್ನು ಬಿಟ್ಟು ಮತ್ತೇನೂ ಅರಿಯದ..ಆಯಿ....

ಹೌದು.....ನಾನೇ ....ಅದ್ರಷ್ಟವಂತ...

ಜೀವನದಲ್ಲಿ.. ಬೆಟ್ಟದಷ್ಟು ಪ್ರೀತಿ ಸಿಕ್ಕಿದೆ..
ನನ್ನ ಅನುಭವದ ಪ್ರತಿಯೊಬ್ಬರ ಪ್ರೇಮ ಸಿಕ್ಕಿದೆ...

ಜೀವಕ್ಕೆ ಜೀವ ಕೊಡುವ ಗೆಳೆಯರು..
ಅಕ್ಕ.. ಅಣ್ಣ..

ದೂರದ ಊರಿನಲ್ಲಿರುವ ತಮ್ಮ..ತಂಗಿ...

ಜಗತ್ತಿನ ಎಲ್ಲ ಬಗೆಯ... ಪ್ರೀತಿ ಪ್ರೇಮದ ಬಾಂಧವ್ಯ..

ಪ್ರೀತಿ ತುಂಬಿದ ಸಂಸಾರ....

ಅದರೆ......

ಅದರೂ.......


" ..ಅಪ್ಪಾ....ಅಪ್ಪಾ.....!

ನೀನೂ ..ಇರಬೇಕಿತ್ತು..!
ನಿನ್ನನ್ನು "...ಅಪ್ಪಾ.." ಎಂದು ಬಾಯಿತುಂಬಾ...ಕರೆಯಲು...!

ನಿನ್ನನ್ನೊಮ್ಮೆ ಬಿಗಿದಪ್ಪಿ..ಅಳಲು...!
ನನ್ನ ..ಖುಷಿ..ದುಃಖ..ನನ್ನ...ಸುಖ..ಸಂತೋಷ.. ಎಲ್ಲ...ಹಂಚಿಕೊಳ್ಳಲು..!

ಪ್ರಿತಿಯಿಂದ... ನನ್ನ .. ತಲೆ.. ಸವರಲು...!

ನೀನೂ ... ಇರಬೇಕಿತ್ತು ..ಅಪ್ಪಾ...!.."


(please read coments also....)

Tuesday, December 23, 2008

ನಾಗುವಿನ ..""ಹಾಡು.""... ಮತ್ತು.. ""ಚಪಾತಿ..""....!!

ಸಿರ್ಸಿ ರಾಯ್ಸರ್ ಬಿಲ್ಡಿಂಗನಲ್ಲಿ ದಿವಾಕರ ರೂಮ್ ಗೊತ್ತು ಮಾಡಿದ...

ಹತ್ತು ಅಡಿಗೆ ,, ಹತ್ತು ಅಡಿ ವಿಸ್ತೀರ್ಣದ ರೂಮಿನ ಒಂದು ಮೂಲೆಯಲ್ಲೇ ಅಡಿಗೆ ಮಾಡಿಕೊಳ್ಳುತ್ತಿದ್ದೇವು.
ಟೊಯ್ಲೆಟ್,, ಬಾತ್ ರೂಮ್ ಕೆಳಗಡೆ ಇತ್ತು...

ಕೆಳಗಡೆ ಮೂರು ಫಾಮಿಲಿ ಇರುತ್ತಿದ್ದರು...

ಮೇಲೆ ಒಟ್ಟು ಆರು ರೂಮುಗಳು. ಎಲ್ಲ ಗಂಡು ಮಕ್ಕಳೇ.. ಇರುತ್ತಿದ್ದರು.
ಪ್ರತಿ ವಾರ ಅಣ್ಣ ಊರಿನಿಂದ ಬಂದು ಅಕ್ಕಿ ಬೇಳೆ ತಂದು ಕೊಡುತ್ತಿದ್ದ.
ವಾರಕ್ಕೊಮ್ಮೆ ಅರ್ಧ ಲೀಟರ್ ಹಾಲು ತೆಗೆದು ಕೊಳ್ಳುತ್ತಿದ್ದೇವು.....

ಮಧ್ಯದಲ್ಲಿ ಏನಾದರು ತಿನ್ನುವ ಬಯಕೆಯಾದರೆ.....


" ಅವಲಕ್ಕಿ ಇದ್ದಿದ್ದರೆ... ಅವಲಕ್ಕಿ ಮೊಸರು ತಿನ್ನ ಬಹುದಿತ್ತು.. ಮಾರಯಾ..ಮೊಸರೇ ಇಲ್ಲವಲ್ಲೋ.....!!"

ಎಂದು ಹೇಳಿ ನಕ್ಕು ಬಿಡುತ್ತಿದ್ದೇವು...

ಸ್ವಲ್ಪ ದಿನಗಳ ನಂತರ ನಾಗು ನಮ್ಮನ್ನು ಸೇರಿಕೊಂಡ...
ನಂತರ ಊಟ ತಿಂಡಿಗೆ ತೊಂದರೆ ಯಾಗುತ್ತಿರಲಿಲ್ಲ.....

ಆದರೆ ಒಂದು ದೊಡ್ಡ ಸಮಸ್ಯೆ ಎದುರಿತ್ತು...

ಅಲ್ಲಿ ಎರಡು ಟೊಯ್ಲೆಟ್..ಹಾಗೂ ಎರಡು ಬಾತ್ ರೂಮ್ ಇತ್ತು..

ಬಾಗಿಲು... ಒಂದಕ್ಕೂ ಸರಿ ಇರಲಿಲ್ಲ...
ಒಳಗಿನಿಂದ ಚಿಲಕವೇ ಇರಲಿಲ್ಲ...

ಒಳಗಿನಿಂದ ಲಾಕ್ ಮಾಡಲು ಏನೂ ಇರಲಿಲ್ಲ....!!
ಯಾರಾದರೂ...."..ಒತ್ತಡ.." ಜಾಸ್ತಿ ಆದವರು...
ಧಡಾರ್..ಅಂತ ಒಳಗೆ ಬಂದು ಬಿಟ್ಟರೆ..?
ಛೆ..ಇದೇನಪ್ಪ.."ಆಸಮಯವನ್ನು.." ಎಂಜೋಯ್ ಮಾಡ್ಲಿಕ್ಕೂ ಅಗಲ್ಲವಲ್ಲ..!
ನಾನು ದೊಡ್ಡ ಬಕೆಟಿನಲ್ಲಿ ನೀರು ತುಂಬಿಕೋಡು ಬಾಗಿಲಿಗೆ ಅಡ್ಡ ವಾಗಿಟ್ಟು ಮುಂದುವರಿಯುತ್ತಿದ್ದೆ...
ಕೆಮ್ಮು ಬರದಿದ್ದರೂ ಆಗಾಗ "ಕೆಮ್ಮುತ್ತಿದ್ದೆ.."
ನನ್ನ ಇರುವಿಕೆಯನ್ನು ತೋರಿಸಲು...!

ನಾಗುವಿಗೆ ನನ್ನ ಸಮಸ್ಯೆ .... ಹೇಳಿದೆ.....
"ನೀನೇನು ಮಾಡ್ತೀಯಾ ನಾಗು..? ಕೇಳಿದೆ...
ನಾಳೆ ನನ್ನ ಸಂಗಡ ಬಾ" ಅಂದ..

ಸರಿ ಮರುದಿನ ಬೆಳಿಗ್ಗೆ ಅವನ ಸಂಗಡ ಬಕೆಟ್ ಹಿಡಿದು ಹೊರಟೆ...

ಬಕೆಟ್.. ಬೇಡ..ಇಲ್ಲೇ ಬಿಟ್ಟು ಬಾ,,"

ನನಗೆ ನಾಗುವಿನ ಮೇಲೆ ಭರವಸೆ... ಯಾವಾಗಲೂ.....

ಅವನೂ ಒಳಗೆ ಹೋದ ..ನಾನೂ ಒಳಗೆ ಹೋದೆ..
ಬಾಗಿಲನ್ನು ಹಾಕಿದೆ...ಸ್ವಲ್ಪ ಹೊತ್ತು ಸುಮ್ಮನಿದ್ದೆ .

ನಾಗು ಟೊಯ್ಲೆಟ್ಟಿನಿಂದ ಹಾಡುತ್ತಿದ್ದ...!!
ಕೆಟ್ಟ ವಾಸನೆಯ ತಾಣದಲ್ಲಿ...

" ನೀರಿನಲ್ಲಿ ಅಲೆಯ ಉಂಗುರಾ.....!
ಭೂಮಿಮೇಲೆ ಹೂವಿನ ಊಂಗುರಾ...!
ಮನಸೆಳೆದ ನಲ್ಲ ..ಕೊಟ್ಟನಲ್ಲ......!!.."

ಮಧ್ಯದಲ್ಲಿ ..ಉಸಿರು..ಕಟ್ಟಿ..ಬಿಡುತ್ತಿದ್ದರೂ.....
ಏರಿಳಿತವಿದ್ದರೂ ...ಸ್ವಲ್ಪ ದೊಡ್ಡದಾಗಿ ಹಾಡುತ್ತಿದ್ದ....
ಕೇಳೋಣ ಅನಿಸುವಂತಿತ್ತು..

ಅಂದಿನೀದ ನಾನೂ ಹಾಡುವದನ್ನು ರೂಢಿಸಿ ಕೊಂಡೆ....

ನಾಗೂ ನನಗೆ ಇನ್ನೂ ಬೇರೆ..ಬೇರೆ.. ಹಾಡುಗಳನ್ನೂ.. ಕಲಿಸಿ ಕೊಟ್ಟ...

" ಈ ..ಸಮಯಾ...ಆನಂದ..ಮಯಾ......
ನೂತನ..ಬಾಳಿನಾ..ಶುಭೋದಯ...!!..."

ಕೆಲವು ಸಾರಿ ನಾಗುವು ಆ ಕಡೆಯಿಂದ.....
"ಹಾಗಲ್ಲ ಪ್ರಿಯೆ.. ಈ.... ಸಮಯಾ..ಶ್ರಂಗಾರ ಮಯಾ.....

ಅನ್ನುತ್ತಾ.." ..ಸಾಥ್...".ನೀಡುತ್ತಿದ್ದ....!!.


ಆಗ ತಾನೆ ಕಾಲೇಜು ಶುರುವಾಗಿತ್ತು..

ಒಂದುದಿನ ನಾಗು ಸಾಯಂಕಾಲ ಸಪ್ಪೆ ಮೋರೆ ಹಾಕಿ ಕೊಂಡು ಕುಳಿತಿದ್ದ...ಹೊರಗೆ ಕರೆದರೂಬರಲಿಲ್ಲ...
ಎಲ್ಲರಿಗೂ ಆಶ್ಚರ್ಯ...!! " ಏನಾಯ್ತು ಇವನಿಗೆ..?'

" ಲೇ..ನಾಗೂ ಏನಾಯ್ತೊ..? ಮೈಗೆ..... ಚೆನ್ನಾಗಿಲ್ವೇನೋ...?? "

" ಚೆನ್ನಾಗಿದ್ದೀನಿ....ಮಾರಾಯ್ರಾ..... ..
ಮನೆಯ ಮಾಲಿಕರು ಬಂದಿದ್ರು..!!
ಕೆಳಗಿನ ಬಾಡಿಗೆ ಮನೆಯವರು ಕಂಪ್ಲೇಂಟ್ ನನ್ನ ಮೇಲೆ ಮಾಡಿದ್ದಾರಂತೆ.. !!
ಬಾತ ರೂಮನಲ್ಲಿ ಮಾತಾಡಿದ್ದಕ್ಕೇ ಒಂಥರಾ ಬೈದು ಹೋದ್ರು.. ಅದೂ ನನಗೆ..!..
ಇನ್ನು ಹೇಗೆ ಮುಖಾ ಇಟ್ಗೊಂಡು ಓಡಾಡೋದು..!!."

ತುಂಬಾ ಬೇಜಾರು ಮಾಡಿ ..ಕೊಂಡ...

"ಈಗ ಮತ್ತೆ ಬರ್ತಾರಂತೆ..ಮತ್ತೆ ..ನೀವೆಲ್ಲ ಬಂದ ಮೇಲೆ.. ಮತ್ತೆ ಮಂಗಳಾರತಿ.. ನಾವು ಬೇರೆ ಕಡೆ ಹೋಗೋಣ ..? ..ಈ ರೂಮು ಬೇಡ.. "

ಅಂದು ಗೋಗರೆಯಲು ಶುರು ಮಾಡಿದ...

ಬೇರೆ ಎಲ್ಲೂ ಈಷ್ಟು ಕಡಿಮೆ ದರದಲ್ಲಿ ರೂಮು ಸಿಗುವದಿಲ್ಲವಾಗಿತ್ತು....
ದಿವಾಕರ ಅವನಿಗೆ ಧೈರ್ಯ ತುಂಬಿದ..

ಅಷ್ಟರಲ್ಲಿ... ಕೇಳಗಿನ ಮನೆಯ ಗಂಡಸರು ಬಂದರು.. ಮನೆಯ ಮಾಲಿಕನೂ ಅವರ ಸಂಗಡ ಇದ್ದರು.....ಮುಖದಲ್ಲಿ ಕೋಪ ಎದ್ದು ಕಾಣುತಿತ್ತು...

ಮಾಲಿಕ ಹೇಳಿದ....
" ನೋಡ್ರಪಾ... ಇಲ್ಲಿ ಕೆಳಗಡೆ ಇರೋವ್ರು ಎಲ್ಲ ಮರ್ಯಾದಸ್ತರು..

ನೀವು ಬಾತ್ ರೂಮ್ ನಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಿರಂತೆ..
ಇದೆಲ್ಲ ಚೆನ್ನಾಗಿರಲ್ಲ..ಹೆಂಗಸರು..ಹೇಣ್ಣೂ ಮಕ್ಕಳು ಇರುವ ಜಾಗ..
ಹೀಗೆಲ್ಲ.. ಮಾಡೋದಿದ್ರೆ ನೀವು ಬೇರೆ ಕಡೆ.. ಹೋಗಿ.."

ಖಡಾ ಖಂಡಿತವಾಗಿ ಮಾತಾಡಿದ....
ನಮಗೋ..ಹೆದರಿಕೆ..
ಕಡಿಮೆ ದರದ ಬಾಡಿಗೆ ಮನೆ.. ನಾಗು ಬಂದ ಮೇಲೆ ಊಟ ತಿಂಡಿಗೆ ತೊಂದರೆ ಇರಲಿಲ್ಲ......

" ನಮ್ಮಿಂದ ಏನು ತಪ್ಪಾಗಿದೆ..? ಏನೇ ಆದರೂ ನಾವು ತಿದ್ದಿ ಕೊಳ್ತೇವೆ.. ಏನು ಹೇಳಿದ್ದೇವೆ..?"

ದಿವಾಕರ ಸ್ವಲ್ಪ ಧೈರ್ಯದಿಂದ ಮಾತಾಡಿದ..

ಆಗ ಒಬ್ಬ ಬಾಡಿಗೆ ಮನೆಯವರು ..
" ಅದನ್ನು ಹೇಗೆ ಹೇಳುವದು..? ನಮಗೆ ನಾಚಿಕೆ ಯಾಗುತ್ತದೆ..

ಅದರಲ್ಲೂ ಈ ಹುಡುಗ..ದೊಡ್ಡದಾಗಿ ಗಂಟಲು ಹರಿದು ಹೋಗೊ ಹಾಗೆ ಕೂಗುತ್ತಾನೆ....!! "

ಎಂದು ನಾಗುವನ್ನು ತೋರಿಸುತ್ತಾ ಹೇಳಿದ...

ನನಗೆ ಗೊತ್ತಾಯಿತು...!!

ಈ ನಾಗುವಿಗೆ ಮರೆವಿನ ಅಭ್ಯಾಸ.!!
ಕೆಳಗಡೇ ಸ್ನಾನಕ್ಕೆ ಹೋಗುವಾಗ ಅಂಡರ್ವೆರ್ ಮರೆತು ಹೋಗುತ್ತಿದ್ದ.. ..!!
ಸ್ನಾನ ಆದ ಮೇಲೆ ಅಲ್ಲಿಂದಲೇ......

" ಪ್ರಕಾಶಾ..ಕಾಚಾ.. ತಂದು ಕೊಡೊ.. "

ಅಂತ ಜೀವ ಹೋಗುವವರ ಹಾಗೆ ಕೂಗುತ್ತಿದ್ದ..

ಈ ಕನ್ನಡ ಪ್ರೇಮಿ ನಾಗು....!!

" ಬೇಡ ಮಾರಯಾ..ಇಂಗ್ಲೀಷನಲ್ಲಿ ಹೇಳು.. ಮರ್ಯಾದಿ ಇರುತ್ತದೆ ..."
ಅಂದರೂ ಕೇಳುತ್ತಿರಲಿಲ್ಲ...

ಅದು ಈಗ ದೊಡ್ಡ ಸಮಸ್ಯೆಯಾಗಿ ಕುಳಿತಿದೆ..!

ಇನ್ನೊಬ್ಬ ಬಾಡಿಗೆಯವ..ತನ್ನುದೂ ಸೇರಿಸಿದ..

" ನೋಡಿ ನಾನು ಬೆಳಿಗ್ಗೆ ಪೂಜೆಗೆ ಕೂತಿರ್ತಿನಿ,,..
ಅಗಲೇ ಇಂವ ಕೂಗುತ್ತಾನೆ..ನನಗೆ ಡಿಸ್ಟರ್ಬ್ ಆಗುತ್ತದೆ...
ಮನಸೆಲ್ಲ ಎಲ್ಲೊ ಹೋಗಿಬಿಡುತ್ತದೆ....!! "

ಮಾಲಿಕನಿಗೆ ಸಮಸ್ಯೆ.....!.
" ಏನು ಹೇಳುತ್ತಾರೆ ಇವರು..?'

"ಹೇಳುವದಿಲ್ಲ ಸ್ವಾಮಿ.. ..ಕೂಗುತ್ತಾರೆ..!
ಇಲ್ಲಿಯ ವಠಾದವರಿಗೆಲ್ಲ ಕೇಳುವಷ್ಟು ..ಕೂಗುತ್ತಾರೆ ..!

ಮನೆಯಲ್ಲಿ ಮದುವೆಗೆ ಬಂದ ಹೆಣ್ಣು ಮಕ್ಕಳಿದ್ದಾರೆ....
ನಾವು ಮರ್ಯಾದಸ್ತರು ಏನು ಮಾಡ ಬೇಕು..?

ಹೀಗಾದರೆ ನಾವೆಲ್ಲ ಬೇರೆ ಕಡೆ ನೋಡಿಕೊಳ್ಳುತ್ತೇವೆ..."

ಮತ್ತೊಬ್ಬ ನಿರ್ಣಯ.. ಸೇರಿಸಿದ...


" ಆದರೆ ಇವರು ಏನು ಕೂಗುತ್ತಾರೆ...?..? ಅದನ್ನ ಹೇಳಿ..ಮೊದಲು.."

ಮಾಲಿಕನಿಗೆ ಸಮಸ್ಯೆ ಬಗೆಹರಿಯಲಿಲ್ಲ...!!.

" ಅದನ್ನು..ಹೇಗೆ ..ಹೇಳುವದು.....? ಇವನ ಬಳಿಯೆ ಹೇಳಿಸಿ.."
ಎಂದು ಒಬ್ಬ ಮೈಗೆ ಎಣ್ಣೆ ಹಚ್ಚಿಕೊಂಡ..

ಈಗ ಕಾಲು ಬುಡಕ್ಕೇ ಬಂತು.!!.

ಆ ಥರ ಕೂಗುತ್ತಿದ್ದ ನಾಗುವಿಗೂ , ಏನು ಹೇಳದವನಂತಾಗಿ....ಸುಮ್ಮನೆ.... ಕುಳಿತಿದ್ದ..

ಅಷ್ಟರಲ್ಲಿ ದಿವಕರ ಮಧ್ಯದಲ್ಲಿ ಬಾಯಿ ಹಾಕಿದ..

" ಹೋಗಲಿ ಬಿಡಿಸಾರ್.. ಇನ್ನು ಮುಂದೆ ಹೀಗೆ ಕೂಗದ ಹಾಗೆ ನಾನು ನೋಡಿಕೊಳ್ಳುತ್ತೇನೆ.. ನೀವು ಬೇಜಾರು ಮಾಡಿಕೊಳ್ಳ ಬೇಡಿ..'
ಸಮಾಧಾನ ಪಡಿಸಲು ಪ್ರಯತ್ನಿಸಿದ..

" ಯಾವ ಗ್ಯಾರೆಂಟಿ..?? ಇವನಿಗೆ ದಿನಾಲೂ ಮರೆತು ಹೋಗುತ್ತದೆ.. ಮತ್ತೆ ಕೂಗಿಬಿಟ್ಟರೆ..?"

" ನಿಜ.. ಇವನಿಗೆ ಮರೆವಿನ ಅಭ್ಯಾಸ ಇದೆ.. ..ಅದರ..ಬದಲು..ನಾವು ಬೇರೆ ಒಳ್ಳೆಯ ಶಬ್ಧ ಕೂಗಲು ಹೇಳುತ್ತೇವೆ..
ಒಟ್ಟಿನಲ್ಲಿ ನಿಮಗೆ ಈ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತೇವೆ.."

' ಮಾಲಿಕರೆ ನೀವಿನ್ನು ಹೊರಡಿ.. ಇದು ಇನ್ನು ಮುಂದೆ ಆಗದ ಹಾಗೆ ನೋಡಿ ಕೊಳ್ಳುತ್ತೇವೆ...."

ಎಂದು ಸಾಗ ಹಾಕಿದೆವು...


ಮಾಲಿಕನಿಗೆ ಕೊನೆಯವರೆಗೆ "ಏನು ಕೂಗುತ್ತಾನೆ?" ಅಂತ ಗೊತ್ತಾಗಲಿಲ್ಲ....!!

ಹೋದ ಮೇಲೆ ರೂಮಿನಲ್ಲಿ ಸ್ಮಾಶನ ಮೌನ....

ನಾಗು ಮುಖ ದಪ್ಪ ಮಾಡಿ ಕೊಂಡು...ಕುಳಿತ್ತಿದ್ದ...ಮಾತಾಡಲಿಲ್ಲ..

" ನೋಡೊ ಬೇಜಾರು ಮಾಡ್ಕೋಬೇಡ..ನಾವೆಲ್ಲ ನಿನ್ನ ಸಂಗಡ ಇದ್ದೇವೆ ಮಾರಾಯ..
ಅದಕ್ಕೆ ಬೇರೆ ಶಬ್ಧ ಹೇಳಿದರಾಯಿತು.."


ಎಂದು ವೇದಾಂತಿಯಂತೆ.. ಸಮಾಧಾನ ಪಡಿಸಿದ...

ಆದರೆ "ಯಾವ" ಶಬ್ದ ಹೇಳ ಬೇಕು...? ತಲೆ ಕೆರೆದು ಕೊಳ್ಳುತ್ತಿದ್ದೆವು....

ದಿವಾಕರ ರಾತ್ರಿ ಚಪಾತಿ ಮಾಡಲು ಹಿಟ್ಟಿನ ಡಬ್ಬ ತೆಗೆದ..

ತಕ್ಷಣ ನಾಗುವಿನ ಮುಖದಲ್ಲಿ ನಗು ಕಾಣಿಸಿತು..

ತಕ್ಷಣ..ಆರ್ಕಿಮಿಡಿಸನ...ಹಾಗೆ ದೊಡ್ಡದಾಗಿ ಕೂಗಿದ....!

ಯುರೆಖಾ..!
" ನೋಡ್ರೊ... ನನ್ನ ಸಮಸ್ಯೆ ಬಗೆ ಹರಿಯಿತು..!

ಇನ್ನು ಮುಂದೆ ನಾನು ಆ ಶಬ್ದ ಅನ್ನೊಲ್ಲ..! ಚಪಾತಿ ಅನ್ನು ತ್ತೇನೆ....!
ಎರಡರ ಆಕಾರ ಒಂದೆ ತರಹ ಇರುತ್ತದೆ.....
ಚಪಾತಿ ಅನ್ನೋದೇ ಸರಿಯಾಗಿದೆ..!! "


ಏನೋ ಸಂಶೋಧನೆ ಮಾಡಿದವರ ಹಾಗೆ ಹೇಳಿದ..

..ನಾವೂ ಸಮ್ಮತಿಸಿದೇವು....

ಅಂದಿನಿಂದ ಈತ ಬಾತ್ ರೂಮಿನಿಂದ ದೊಡ್ಡದಾಗಿ

" ಪ್ರಕಾಶಾ.....ಚಪಾತಿ...! "

ಅನ್ನುತ್ತಿದ್ದ...

ನಾನು ತಂದು ಕೊಡುತ್ತಿದ್ದೆ...


ಒಂದುವಾರ ಕಳೆದಿರಬಹುದು...

ಕೆಳಗಡೆ ಮನೆಯವರೊಬ್ಬ.. ನನ್ನನ್ನು ಮಾತಾಡಿಸಿದರು..
ನಾನು ನಕ್ಕೆ..


"" ಏನ್ರಪಾ...ಈಗ.. ನಾನೇ.. ಅಡ್ಜಸ್ಟ್ ಮಾಡಿ ಕೊಂಡಿದ್ದೇನೆ..

ನಾನು ದೇವರ ಪೂಜೆ ಸಮಯ ಬದಲಿಸಿದ್ದೇನೆ.....

ಆದರೆ..ಅಂವ ಎಂಥಾ ಮನುಷ್ಯ ಮಾರಾಯಾ..?.....?

ಅವನಿಂದಾಗಿ...

ನಮ್ಮನೆಯಲ್ಲಿ .......ಚಪಾತಿಗೆ...ಚಪಾತಿ... ಅನ್ನುವದನ್ನು.....

ಬಿಟ್ಟು ಬಿಟ್ಟಿದ್ದೇವೆ....!!

ರೊಟ್ಟಿ ಹೇಳುವದನ್ನು ಅಭ್ಯಾಸ ಮಾಡಿ ಕೊಂಡಿದ್ದೇವೆ..!!..""

ಅಂದರು...


"" ಚಪಾತಿ ಬಹಳ ಜನಪ್ರಿಯವಾಯಿತು...""






Sunday, December 21, 2008

ಮಣ್ಣು...ಮರಳು...ನಾವೂ..ಮರುಳು...!!

ಐಟಿ..ಬಿಟಿ..ನಗರದಲ್ಲೊಂದು ಅಂಡರ್ ಪಾಸ್ ಕಾಮಗಾರಿ...

ನಿನ್ನೆ ನಾನು ಹೆಬ್ಬಾಳದಿಂದ ಬರುತ್ತಿದ್ದೆ. ಗಂಗಾನಗರದ ಬಳಿ ಬಳ್ಳಾರಿ ರಸ್ತೆಯಲ್ಲಿ ಒಂದು ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ.

ಅದು ಅಂತರ ರಾಷ್ಟೀಯ ವಿಮಾನ ನಿಲ್ದಾಣದ ರಸ್ತೆ...!

ಅಲ್ಲಿ ಬಳಸುವ ಮರಳನ್ನು ನೋಡಿ ದಂಗಾಗಿ ಹೋದೆ... !!


ಏನು ಮಾಡಬೇಕು...? ಏನು ಮಾಡಲಿ..?

ಗೊತ್ತಾಗಲಿಲ್ಲ.

ಸ್ನೇಹಿತ ಶಿವು ಗೆ ಫೋನ್ ಮಾಡಿ ನನಗಾದ ಬೇಜಾರು ಹೇಳಿಕೊಂಡೆ.

ಆದರೆ ಅವರು ಸುಮ್ಮನಿರ ಬೇಕಲ್ಲ......
ಜಾಗ, ವಿಳಾಸ ಎಲ್ಲ ಪಡೆದು ...ಅಲ್ಲಿ ಹೋಗಿ
ಕಷ್ಟಪಟ್ಟು ,... ಅಲ್ಲಿಯವರ ಕಣ್ಣು ತಪ್ಪಿಸಿ ಫೋಟೊ ತೆಗೆದು ಕಳಿಸಿದ್ದಾರೆ... !!

ನಾನು ಟಿ.ವಿ.೯ ಗೆ ಫೋನ್ ಮಾಡಿದೆ..ಯಾರೂ ಫೋನ್ ತೆಗೆದು ಕೊಂಡಿಲ್ಲ... !

ಉಪಚುನಾವಣೆಯಲ್ಲಿ ಮಗ್ನರಾಗಿರಾದ್ದಾರೋ..ಗೊತ್ತಾಗಲಿಲ್ಲ...

ಈಗ ತಮ್ಮೆಲ್ಲರ ಗಮನಕ್ಕೆ ಈ ಫೋಟೊಗಳನ್ನು ಇಡುತ್ತಿದ್ದೇನೆ...

ಇಲ್ಲಿ ಬಳಸುತ್ತಿರುವದು...ವಾಷ್ಡ್ ಸಾಂಡ್...

ಅರ್ಥಾತ್..ಫಿಲ್ಟರ್ ಮರಳು....

ಅಂದರೆ ಮಣ್ಣನ್ನು ನೀರಲ್ಲಿ ತೊಳೆದು ಇಡಲಾಗಿದೆ...

ನಮ್ಮ ಐಟಿ ಬಿಟಿ ನಗರದಲ್ಲಿ ಮರಳ ಬದಲು ಮಣ್ಣನ್ನು ಬಳಸುವ ಸಂಶೊಧನೆ ಆಗಿದೆಯ..?ಸರಕಾರ ಇದನ್ನು ಒಪ್ಪಿದೆಯಾ..?

ನಾವು..ನೀವು ಓಡಾಡುವ..ಈ ಅಂಡರ್ ಪಾಸ್ ಪೂರ್ತಿಯಾಗಿ ಇದೇ ಕಟ್ಟಿದ್ದಾರೆಯೆ..?

ಇದರ ಆಯಸ್ಸು ಎಷ್ಟು..?

ಇದಕ್ಕೆ ನಾವು ಏನು ಮಾಡಬಹುದು...?

ಯಾರಾದರೂ ತಿಳಿದವರು ಹೇಳ ಬಲ್ಲರೆ...?

ಬರಿ ಪ್ರಶ್ನೆಗಳು..ಪ್ರಶ್ನೆಗಳು...

ಉತ್ತರ...ಇದೆಯಾ..?




ಮಣ್ಣು..ಮರಳು...

ಸ್ವಾಮಿ..ಯಾವುದು ಮರಳು..?
ಯಾವುದು ಮಣ್ಣು..?

ಅಥವಾ..

ಜನ ಮರುಳು..?

ಮಣ್ಣು..ಮರಳು...ನಾವೂ..ಮರಳು..


ಮಣ್ಣೂ ಕೂಡ..ಮರಳು...!!

ಇಲ್ಲಿ ಮಣ್ಣೂ ಕೂಡ...ಮರುಳು....!!

ನಾವೂ ಕೂಡ...ಮರುಳು...!!

ಮಣ್ಣು..ಮರಳು...

ನಮಗೆ ..
ಮಣ್ಣು..ಮರಳಿನ..ವ್ಯತ್ಯಾಸ..ಗೊತ್ತಿಲ್ಲವೇ..?

ಮಣ್ಣಿನ ರಾಶಿ,, ಯಾವುದು...? ಮರಳು..ಯಾವುದು...?

ಫಿಲ್ಟರ್.....ಮಣ್ಣು..ಮರಳು..!

Thursday, December 18, 2008

ಎಮ್ಮೆ....ವ್ಯಾಪಾರಕ್ಕೆ ಹೋದಾಗ.....

ನಮ್ಮನೆಗೊಂದು ಎಮ್ಮೆ ಬೇಕಾಗಿತ್ತು. ಚಿಕ್ಕಪ್ಪ ನನ್ನನ್ನೂ ಕರೆದ.

"ಎಮ್ಮೆ" ಬಗೆಗೆ ನನಗೇನು ಗೊತ್ತು..? ಆದರೆ ಚಿಕ್ಕಪ್ಪ ಬಿಡಬೇಕಲ್ಲ.

" ಇಲ್ಲೆ ಪಕ್ಕದೂರು ...ಸುಬ್ಬಣ್ಣನ ಮನೆಯಲ್ಲಿ ಎಮ್ಮೆ ಇದೆಯಂತೆ ನೋಡಿ ಬರೋಣ ...ಬಾ." ಅಂದರು . ನನಗೆ ಇಲ್ಲ ಎನ್ನಲಾಗಲಿಲ್ಲ. ಹೊರಟೆ.

ನಾನು ಅದೇ ತಾನೆ ಭಾರತಕ್ಕೆ ಬಂದಿದ್ದೆ. ಅವರಿಗೆ ಕತಾರ ದೇಶದ ಬಗೆಗೆ ಕುತೂಹಲ..ನಾವು ಅದು ಇದು ಮಾತನಾಡುತ್ತ ಸುಬ್ಬಣ್ಣನ ಮನೆ ಬಳಿ ಬಂದಿದ್ದೇವು.

ಅಷ್ಟರಲ್ಲಿ.. ಓ..ಹೋಓ..ಹೋ.. ಕಮಲಾಕರ... ಬಾ..ಬಾ.." ಎಂದು ಒಬ್ಬರು ನಮ್ಮನ್ನು ಕರೆದರು.

"ಛೇ....ಇವತ್ತು ಕೆಲಸ ಆಗುವದಿಲ್ಲ..!! " ಎಂದು ಚಿಕ್ಕಪ್ಪ ಸಣ್ಣದಾಗಿ ಗೊಣಗಿದರು..

" ಇವರು ಗಂಗಣ್ಣ..ನಮ್ಮ ದೂರದ ಸಂಬಂಧ.. " ಎನ್ನುತ್ತ ಚಿಕ್ಕಪ್ಪ ಅವರ ಮನೆ ಪ್ರವೇಶಿಸಿದರು..ನಾನು ಹಿಂಬಾಲಿಸಿದೆ.

ಗಂಗಣ್ಣ ಎಲೆ ಅಡಿಕೆ ಜಗಿಯುತ್ತ........

" ಭಾರಿ..... ಅಪರೂಪ..ಮಾರಾಯಾ....!! ಇಂವ ಯಾರು..?"

ನನ್ನ ಬಗೆಗೆ ಕೇಳಿದರು.

" ಈತ ಪ್ರಕಾಶ..ಅಣ್ಣನ ಮಗ. ದುಬೈನಿಂದ ಬಂದಿದ್ದಾನೆ. ಇಲ್ಲೇ ಸುಬ್ಬಣ್ಣನ ಮನೆ ಎಮ್ಮೆ ನೋಡೋಣ ಅಂತ ಬಂದಿದ್ದೆವು....."

ಚಿಕ್ಕಪ್ಪ ಸಣ್ಣದಾಗಿ ಕಾರ್ಯಕ್ರಮದ ವಿವವರ ಕೊಟ್ಟರು..

""..ಭಾರಿ ಬಿಸಿಲು..ಏನು ಕುಡಿಯುತ್ತೀರಿ..?? ತಂಪಾಗಿರ್ಲೊ..ಬಿಸಿಯಾಗಿರ್ಲೋ..?" ಕೇಳಿದರು.

ನಾವು ಏನೂ ಬೇಡ ಅಂದರೂ ಕೇಳಲಿಲ್ಲ.ಹೆಂಡತಿಯನ್ನು ಕೂಗಿದರು..

" ಲೇ..ಎಲ್ಲಿ ಸತ್ತು ಹೋಗಿದ್ದೀಯೆ.....!!ಇಲ್ನೋಡೇ.. ದೇವಿಸರದ ಕಮಲು ಬಂದಿದ್ದಾನೆ..
ಎಲ್ಲಿ ಹಾಳಾಗಿ ಹೋದ್ಲೊ....!! "

ಅಷ್ಟರಲ್ಲಿ ತಡಬಡಾಯಿಸುತ್ತ ಅವರ ಹೆಂಡತಿ ಬಂದು ನಮ್ಮನ್ನು ಮಾತನಾಡಿಸಿದರು..ಹಾಗೆ ಒಳಗೆ ನಡೆದರು..

"ನೋಡು ಕಮಲಾಕರ.. ನಾನೇ ಬರಬೇಕು ಅಂದು ಕೋಡಿದ್ದೆ ...
ನೀನೇ ದೇವರಹಾಗೆ ಬಂದೆ.. ನಾಳಿದ್ದು ನಮ್ಮನೆಯಲ್ಲಿ ವಿಶೇಷವಿದೆ..
ನೀನು ಬರಲೇ ಬೇಕು...
ಏನು ನೆಪ ಹೇಳಕೂಡದು..ಹೇಳಿದರು ನಾನು ಕೇಳುವವನಲ್ಲ."

ಎಂದು ಆಜ್ನೆ ಹೊರಡಿಸಿದಹಾಗೆ ಹೇಳಿದರು..


" ನನಗೆ ಬರಲಿಕ್ಕೆ ಆಗುವದಿಲ್ಲ..ಸಿರ್ಸಿಗೆ ಹೋಗಬೇಕು..ಅಡಿಕೆ ವ್ಯಾಪಾರಕ್ಕೆ..
ನನ್ನ ಅಣ್ಣನ ಮಕ್ಕಳನ್ನು ಕಳಿಸಿ ಕೊಡ್ತೇನೆ..."

" ನಿನ್ನ ಅಣ್ಣನ ಮಕ್ಕಳು ಸಾಯಲಿ ಮಾರಾಯಾ..!! ನೀನು ಬರಲೇ ಬೇಕು ..!
ನೀನು ನಮ್ಮನೆ ಕಾರ್ಯಕ್ರಮಕ್ಕೆ ಬರುವದೇ ಇಲ್ಲ.."

" ಅದು.. ಅಡಿಕೆ ವ್ಯಾಪಾರಕ್ಕೆ ಹೋಗಬೇಕು...ಅಡಿಕೆ....ಹಾಳಾಗ್ತಾ ಇದೆ..
ನನ್ನ .. ಅಣ್ಣನ ಮಕ್ಕಳು..ಸಂಗಡ..... ನನ್ನ ಮಕ್ಕಳನ್ನೂ ಕಳಿಸಿ ಕೊಡ್ತೇನೆ.."

"ನಿನ್ನ ಅಣ್ಣನ ಮಕ್ಕಳು.. ..ನಿನ್ನ ಮಕ್ಕಳು ..ಎಲ್ಲ ..ಸಾಯಲಿ ....!!
ಮಾರಾಯಾ.. ನೀನು ಮಾತ್ರ ಬರಲೇ ಬೇಕು.."

" ಅದು ಬಹಳ ಕಷ್ಟ..ಗಂಗಣ್ಣ..ಬ್ಯಾಂಕ್ ಕೆಲಸ ಕೂಡ ಇದೆ....
ಅವರ ಎಲ್ಲರ ಸಂಗಡ...ನನ್ನ ಹೆಡ್ತಿನೂ ಕಳಿಸಿ ಕೊಡ್ತೇನೆ....ನನ್ನನ್ನು ಬಿಟ್ಟು ಬಿಡು.. ಮಾರಾಯಾ.."


" ನಿನ್ನ ಅಣ್ಣನ ಮಕ್ಕಳು.. ನಿನ್ನ ಮಕ್ಕಳು..ನಿನ್ನ ಹೆಂಡತಿ..ಎಲ್ಲ ಸಾಯಲಿ ..ಮಾರಾಯಾ..!!
ನೀನು ಮಾತ್ರ ತಪ್ಪಿಸಿ ಕೊಳ್ಳಬಾರದು....ಬರಲೇ ಬೇಕು"

ನನಗೆ ಪಿಕಲಾಟ ಶುರುವಾಯಿತು...ಇದೆಂಥಹ ಭಾಷೆ..?

ಅಷ್ಟರಲ್ಲಿ ಅವರ ಮಗ ಬಂದ... "ಎಲ್ಲಿ ಸತ್ತು ಹೋಗಿದ್ಯೊ.. ಹಾಳಾದವನೆ...!!
ಇಷ್ಟು ತಡ ಆಗಿ ಬರ್ತಿದ್ದೀಯಾ..?
ನೋಡು... ಈಗಲೇ ಶಾಸ್ತ್ರಿಗಳ ಮನೆಗೆ ಹೋಗು.. ನಾಳಿದ್ದು ನಮ್ಮನೆಗೆ ಬರ್ಲಿಕ್ಕೆ ಹೇಳು
ಬಂದು ಸಾಯ್ತಾರಾ ಕೇಳು..!!
ಅವರು ಬರದೇ ಇದ್ರೆ..ಅವರ ಮಗನಿಗಾದ್ರೂ ಬಂದು ಸಾಯಲಿಕ್ಕೆ ಹೇಳು....!!"

" ಅವರ ಮಗನೂ ಬರದೆ ಇದ್ರೇ..?

" ಬಂದೇ ಬರ್ತಾರೆ.. ಬರದೆ ಇದ್ರೆ.. ಪಕ್ಕದ ಮನೆ ಗೋವಿಂದ ಭಟ್ರಿಗೆ...ಹೇಳು....!
ಅವರಾದ್ರೂ ಬಂದು ಸಾಯಲಿ.. !!"

ಅವನು ತಲೆ ಅಲ್ಲಾಡಿಸಿ ಹೊರಟು ಹೋದ...

ಅಷ್ಟರಲ್ಲಿ ಚಹ..ಬಾಳೆಕಾಯಿ ಚಿಪ್ಸ್ ಬಂತು...

ಕೊಟ್ಟಿಗೆಯಿಂದ "ಅಂಬಾ" ಎಂದು ಆಕಳು ಕೂಗಿತು..

" ನೋಡೆ... ಆಕಳಿಗೆ ಹುಲ್ಲು.. ಹಾಕಿ ..ಸಾಯಿ..!
ಅದು ಎಷ್ಟು ಹಾಕಿದರೂ ತಿಂದು.. ಸಾಯ್ತದೆ..!!"

ನೀವು ತಗೊಳ್ಳಿ.. ಬಿಸಿ ಆರಿ ಹೋಗ್ತದೆ.."
ನಮಗೆ ಉಪಚರಿಸಿದರು..

ನಾವುಕುಡಿದು ಸುಬ್ಬಣ್ಣನ ಮನೆ ಕಡೆ.. ಹೊರಟೆವು..

" ಮರೆಯ ಬೇಡ..ಕಮಲಾಕರ..ಖಂಡಿತ.. ಬರಲೇ ಬೇಕು..

ಮತ್ತೆ ಪ್ರಕಾಶಾ...ನೆಂಟ್ರು ಎಲ್ಲ ಬರ್ತಾರೆ.. ಪರಿಚಯ ಆಗ್ತದೆ...
ನಿನ್ನ. ಅಪ್ಪಯ್ಯ ನಾನು ಬಹಳ ದೋಸ್ತರು..
ನಾಳಿದ್ದು ನೀನು... ಜಲ್ದಿ ...ಬಂದು ಸಾಯಿ ಮಾರಾಯಾ....!!
ತಡ ಮಾಡ್ಕೋ ಬೇಡ...!!

ಅಯ್ಯೋ ರಾಮಾ ನನ್ನ ನ್ನೂ ಸಾಯಿಸಿ ಬಿಟ್ರು..!!

ನಾವು ತಲೆ ಹಾಕುತ್ತ ಹೊರಟೇ ಬಿಟ್ಟೆವು......

"ಇನ್ನು ಎಷ್ಟು ಜನರನ್ನು ಸಾಯಿಸಿ ಬಿಡ್ತಾರೊ!!"
ಅಂತ ಹೆದರಿದೆ..

"ಇವರು ಯಾವಾಗಲೂ ಹೀಗೆ..ಮಾತಾಡೋದು..!!
ಆದರೆ ..ತುಂಬಾ..ಒಳ್ಳೇ ಮನುಷ್ಯ..!!
ಹ್ರದಯದಲ್ಲಿ ತುಂಬಾ ಸ್ವಚ್ಚ...!! "

ಚಿಕ್ಕಪ್ಪ ಸರ್ಟಿಫಿಕೇಟ್ ಕೊಟ್ಟರು...

ಕೆಲವರು ...ಹಾಗೆ...ಇರುತ್ತಾರೆ.....






Sunday, December 14, 2008

ನಗುವವರ ಮುಂದೆ..ಎಡವಿ ಬೀಳ ಬೇಡ...!!

ಲಕ್ಕಣ್ಣನ ಚಹ ಅಂಗಡಿಯಲ್ಲಿ ಮಸಾಲೆ ಮಂಡಕ್ಕಿ ತಿಂದು ಗೆಳೆಯರೆಲ್ಲ ಕೆಕೆ ಹಾಕುತ್ತ ಕಾಲೇಜಿನ ಕಡೆ ಹೊರಟಿದ್ದೇವು.. ನಮ್ಮ ಮಾತಿಗೆ ಲಂಗುಲಗಾಮು ಇಲ್ಲವಾಗಿತ್ತು..
ಅಂದು ಪಿಯುಸಿ ಪರೀಕ್ಷೆಯ ಫಲಿತಾಂಶದ ದಿನ...
ಎಲ್ಲರಿಗೂ ಉತ್ಸಾಹ ಕಾತುರ..ರಿಸಲ್ಟ್ ನೋಡಿಕೊಂಡು ಸಿರ್ಸಿ ಲಕ್ಶ್ಮೀ ಟಾಕಿಸಿನಲ್ಲಿ ಸಿನೇಮಾ ನೋಡೋಣ ಅಂತೆಲ್ಲಾ ಮಾತಾಡಿಕೊಳ್ಳುತ್ತಿದ್ದೇವು..
ಬಹಳ ದಿನಗಳ ನಂತರ ಗೆಳೆಯರೆಲ್ಲ ಒಟ್ಟಿಗೆ ಸೇರಿದ್ದೇವು..ರಜೆಯ ದಿನಗಳ ವಿಶೇಷ ಹೇಳಿಕೊಳ್ಳುತ್ತಿದ್ದೇವು..ಒಬ್ಬರಿಗೊಬ್ಬರು ಕೀಟಲೆ ಮಾಡಿಕೊಳ್ಳುತ್ತೀದ್ದೇವು....


"ಎಲ್ರಿಗೂ ಪಾಸಾಗುವ ಭರವಸೆ ಇದೆಯೇನ್ರೋ..ಇಲ್ಲಾ ಅಂದ್ರೆ.. ಪು.ಬ. ಕಳಿಸಿ ರಿಸಲ್ಟ್ ತರಿಸೋಣ" ವಿವೇಕ ಸ್ವಲ್ಪ ಮುಂದಾಲೋಚನೆ ತೋರಿಸಿದ..

ಪು.ಬ. ಅಂದ್ರೆ ಪುಸ್ತಕದ ಬದನೆಕಾಯಿ..ಉಮಾಪತಿಗೆ ನಾವೆಲ್ಲ ಹಾಗೆ ಕರೆಯುತ್ತಿದ್ದೇವು...

"ಈ ಪಬ್ಲಿಕ್ ಎಕ್ಸಾಮ್ ನಂಬಲಿಕ್ಕೆ ಆಗಲ್ಲಾ ಕಣ್ರೊ..ಪುಬ ಕಳಿಸೋಣ" ಎಂದು ನಾಗು ಉಸುರಿದ...
ಅವನಿಗೆ ಡೌಟ್ ಇತ್ತೇನೋ...

ಅವನ ಮತ್ತು ರಾಜಿಯ ಕಥೆ ಎಲ್ಲರಿಗೂ ಗೊತ್ತಿತ್ತು....

ಅಷ್ಟರಲ್ಲಿ ಸೀತಾರಾಮ ಆತಂಕದಿಂದ ಬಂದ...

"ಪ್ರಕಾಶು..ನಿನ್ನ ಹೆಸರು ಕಾಣ್ತಾ ಇಲ್ವಲ್ಲೊ..!!"'

ಸರಿಯಾಗಿ ನೋಡಿದ್ಯೇನೋ..ತೆಂಗಿನಕಾಯಿ ತಲೆಯವನೆ.." ವಿವೇಕ ಗದರಿದ...

ಸೀತಾರಾಮ ಎಂದಿಗೂ ತಮಾಷೆ ಮಾಡುವವನಲ್ಲ....

ನಾನು ಪಾತಾಳಕ್ಕೆ ಕುಸಿದಿದಿದ್ದೆ...

ಹೌದು ನಾನು ಫೇಲ್ ಆಗಿದ್ದೆ.....!! ಇಂಗ್ಲೀಷ್ ಗೆ ೧೬ ಮಾರ್ಕ್ಸ್ ಬಿದ್ದಿತ್ತು...!!

ಆಗಬಾರದಾಗಿತ್ತು..ಆಗಿ ಹೋಯಿತು...
ಮುಂದೇನು....??
ಅಂಧಾಕಾರ ಕವಿದಂತಾಗಿತ್ತು..

ಯಾವಾಗಲೂ ಮಾತಾಡಿ ನಗಿಸುತ್ತಿದ್ದ ನಾನಗೆ ಮಂಕು ಕವಿದಂತಾಯಿತು...

ಮನೆಗೆ ಬಂದು ವಿಷಯ ಹೇಳಿದೆ...

ಬೇಜಾರಾದರೂ..
ಆಯಿ, ಆಣ್ಣ ಇಬ್ಬರೂ ಸಮಾಧಾನ ಮಾಡಿದರು...


ಊರಿನವರಿಗೆ ಹೇಗೆ ಮುಖ ತೋರಿಸುವದು..?

ನಾಚಿಕೆ..ಸೋಲು.. , ಅವಮಾನಗಳಿಂದ ಕುಗ್ಗಿ ಹೋದೆ...

ಒಬ್ಬನೆ ಒಂಟಿಯಾಗಿ ರೋಧಿಸಿದೆ...ಹೀಗೇಕಾಯಿತು..?

ಒಂದುರೀತಿಯ ಶೂನ್ಯ ಆವರಿಸಿತು... ಮಾತಿಲ್ಲದೆ ಮಂಕಾಗಿಬಿಟ್ಟೆ....

ಅಣ್ಣ ನನ್ನ ರೂಪ ಕಂಡು ಹೆದರಿದ..ಚಿಂತಿತನಾದ..

"ನೋಡು ಇದ್ದ ಜಮೀನನಲ್ಲೇ ದುಡಿಯೋಣ... ನನ್ನ ಸಂಗಡ ಹೊಲಕ್ಕೆ ಬಾ..ಕೆಲಸ ಮಾಡುವದರಿಂದ ಸ್ವಲ್ಪ ಬದಲಾವಣೆಯಾಗುತ್ತದೆ..."

ನನಗೆ ಬೇರೆ ದಾರಿ ಇರಲಿಲ್ಲ. ಸುಮ್ಮನೆ ಮನೆಯಲ್ಲಿ ಕುಳಿತು ಏನು ಮಾಡುವದು..?

ನಮಗೆ ಆಸ್ತಿಯೂ ಕಡಿಮೆ..

ಅಣ್ಣನ ಸಂಗಡ ಕೆಲಸಕ್ಕೆ ಹೊರಟೆ..ಆಗ ಕೂಲಿ ಸಮಸ್ಯೆ.. ಊರಿನ ಗಂಡುಮಕ್ಕಳು ಪರಸ್ಪರ ಸಹಾಯ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದರು.

ಅವರ ಮನೆಗೆ ಇವರು..ಇವರ ಮನೆಗೆ ಅವರು ಕೆಲಸಕ್ಕೆ ಹೋಗುತ್ತಿದ್ದರು...

ಮೈಮುರಿದು ಕೆಲಸ ಮಾಡಿದೆ..ಮೈ ಕೈ ನೋವು ಬರುತ್ತಿತ್ತು...
ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಿತ್ತು..

ಬೆಳಿಗ್ಗೆ ತಿಂಡಿ ಆಗುವ ಮೊದಲು ಬೆಟ್ಟಕ್ಕೆ ಹೋಗಿ ಹುಲ್ಲು, ಸೊಪ್ಪು ತರುತ್ತಿದ್ದೆ.

ಆಮೇಲೆ ಅಣ್ಣನ ಸಂಗಡ..ಬೇರೆಯವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದೆ..

ಗೊಬ್ಬರ ತೆಗೆದೆ..ದನ ಕಾಯುವ ಕೆಲಸವನ್ನೂ ಮಾಡಿದೆ...
ಯಾಂತ್ರಿಕವಾಗಿ ದಿನಕಳೆಯುತ್ತಿತ್ತು....

ಇದೇ ನನ್ನ ಜೀವನ ..ಹೀಗೆಯೆ ನನ್ನ ಜೀವನ ಅಂದುಕೊಂಡು ಬಿಟ್ಟೆ...

ಒಂದು ದಿನ ದಿವಾಕರ ಬಂದ..

ಅವನ ಬಳಿ ಮುಖ ತೋರಿಸಿ ಮಾತಾಡಲೂ ನನಗೆ ಮುಜುಗರ....ಅವನಿಗೆ ನನ್ನ ಸ್ಥಿತಿ ಅರ್ಥವಾಯಿತು...
ನನ್ನನ್ನು ಊರಿನ ಗದ್ದೆ ಬಯಲಿನ ಹೊಳೆಯ ದಡಕ್ಕೆ ಕರೆದು ಕೊಂಡು ಹೋದ...

" ನೀನು ಫೇಲ್ ಆಗಿದ್ದು ಪರೀಕ್ಷೆಯಲ್ಲಿ..ಕಣೊ..ಜೀವನದಲ್ಲಿ ಅಲ್ಲ..ಇನ್ನೂ ಬೇಕಾದಷ್ಟು ಸಮಯ, ಅವಕಾಶ ನಮ್ಮ ಬಳಿ ಇವೆ..ಎಲ್ಲ ಕಳೆದು ಕೊಂಡವರ ಹಾಗೆ ಇದ್ದೀಯಲ್ಲ..ಏನಪ್ಪಾ ಇದು..ಮೈ ಕೊಡವಿ ಏಳು..
ಏನಾದರೂ ಮಾಡೋಣಾ..ಎಲ್ಲಾ ಹೊಸದಾಗಿ ಶುರು ಮಾಡೋಣಾ..." ಅಂದ

"ಏನು ಮಾಡಲಿ ಹೇಳು..?" ಮಂಕು ಕವಿದ ನನಗೆ ಏನೂ ತೋಚದ ಹಾಗೆ ಕೇಳಿದೆ.

"ನೀನು ಸಿವಿಲ್ ಇಂಜಿನಿಯರಿಂಗ್ ಓದು..

ಇದು ಸಾಧ್ಯವಾಗದ..ಕೆಲಸ.....

ಪಿಯುಸಿ "ಅರ್ಟ್ಸ್" ನಲ್ಲಿ ಫೇಲ್...!!.ಇಂಗ್ಲೀಷ ಗೆ ೧೬ ಮಾರ್ಕ್ಸ್..!!

ನಾನು ಸಿವಿಲ್ ಇಂಜನಿಯರಿಂಗ್ ಓದುವದೆ..? ಅದೂ ಇಂಗ್ಲೀಷ್ ಮಾಧ್ಯಮದಲ್ಲಿ..??

"ಮತ್ತೆ ಪರಿಕ್ಷೆಗೆ ಕಟ್ಟಿ ಪಾಸಾಗಿ..ಬಿ.ಎ. ಓದಿದರೆ ಹೇಗೆ..?' ನಾನು ಕೇಳಿದೆ...

'ಹೊಡೆದರೆ ಹುಲಿ ಹೊಡೆಯ ಬೇಕು.. ಮತ್ತೆ ಇಲಿ ಹೊಡೆಯಲು ಹೋಗಬಾರದು"

ಇದು ನನ್ನಿಂದ ಆದೀತೆ ದಿವಾಕರ..?"

"ಯಾಕೆ ಆಗಬಾರದು..?
ಅದೂ ಒಂದು ಸಬ್ಜೆಕ್ಟ್ ತಾನೆ..? ನೀನು ಸ್ವಲ್ಪ ಹೆಚ್ಚಿಗೆ ಓದಬೇಕಾಗಬಹುದು..
ಜಾಸ್ತಿ ಪ್ರಯತ್ನ ಪಡಬೇಕಾಗಬಹುದು ..ಖಂಡಿತ ಯಶಸ್ಸು ಇದೆ.."


ಖಚಿತವಾಗಿದ್ದ... ಅವನ ಧ್ವನಿಯಲ್ಲಿ ಆತ್ಮ ವಿಶ್ವಾಸ ತುಳುಕುತ್ತಿತ್ತು..ನನ್ನ ಮೇಲೆ ಅಪಾರ ಭರವಸೆ ಇತ್ತು..

ನಾನು ಮತ್ತೆ ಮಾತಾಡಲಿಲ್ಲ...
ಇಬ್ಬರೂ ಮನೆಗೆ ಬಂದಾಗ ಕತ್ತಲೆಯಾಗಿತ್ತು..

ಬೆಳಿಗ್ಗೆ ದಿವಾಕರ ಎದ್ದು ಊರಿಗೆ ಹೋದ...

ನಾನು ಅಣ್ಣನ ಸಂಗಡ ಕೆಲಸಕ್ಕೆ ಹೋದೆ..ಬೆಟ್ಟದಲ್ಲಿ ಹುಲ್ಲು ಕಟಾವ್ ಮಾಡುತ್ತಿದ್ದೇವು..

ನನಗೆ ದಿವಾಕರನ ಮಾತೇ ತಲೆಯಲ್ಲಿ ಕೊರೆಯುತ್ತಿತ್ತು..
ಮತ್ತೆ ಓದುವದು ನನ್ನಿಂದ ಆದೀತೆ..?

ಕತ್ತಿ ಬೀಸಿದೆ..ಅದು ಆಯ ತಪ್ಪಿ ನನ್ನ ಹೆಬ್ಬೆರಳ ಉಗುರಿನ ಬಳಿ ತಾಗಿತು...!!

ಚರ್ಮ, ಮಾಂಸ, ಕತ್ತರಿಸಿತು...ಚಿಳ್ಳನೇ ರಕ್ತ ಚಿಮ್ಮಿತು..

"ಜೀವ" ಹೋದಷ್ಟು ನೋವಾಯಿತು... !!
ಅಣ್ಣ ಓಡಿ ಬಂದ..ತಲೆಗೆ ಸುತ್ತಿದ್ದ ಬಟ್ಟೆ ಹರಿದು ಬ್ಯಾಂಡೇಜ್ ಕಟ್ಟಿದ..
ಒಂದು ಮಗ್ ನೀರು ಕುಡಿಸಿದ..ಬಹಳ ರಕ್ತ ಸ್ರಾವ ಆಯಿತು...


ರಾತ್ರಿ ಊಟ ಆದಮೇಲೆ ಅಣ್ಣ ನಿಧಾನವಾಗಿ ಮಾತಾಡಿದ....

"ನೋಡು..ನಿನ್ನ ಹೊಯ್ದಾಟ ಅರ್ಥವಾಗುತ್ತದೆ...
ನಮ್ಮ ಕೈ ಮೀರಿ ಆದ ಘಟನೆ ಬಗೆಗೆ ತಲೆ ಕೆಡಿಸಿ ಕೊಳ್ಳುವದರ ಬಗೆಗೆ ಅರ್ಥವಿಲ್ಲ..ಮುಂದೇನು ಮಾಡೋಣ..? ಅದರ ಬಗೆಗೆ ವಿಚಾರ ಮಾಡು...
ನೀನು ನಕ್ಕರೂ ಜೀವನ ಕಳೆಯುತ್ತದೆ..ನಗದಿದ್ದರೂ ಜೀವನ ಕಳೆದು ಹೋಗುತ್ತದೆ...
ನೀನು ನಗಬೇಕು ..ಮೊದಲಿನಂತಾಗಬೇಕು..
ಮುಂದೆ ಏನು ಮಾಡಬೇಕು ಅಂದು ಕೊಂಡಿದ್ದೀಯಾ..?"

ನನ್ನ ಬಳಿ ಯಾವುದೆ ಉತ್ತರ ಇರಲಿಲ್ಲ...ಯೋಚಿಸುವದನ್ನೇ ಬಿಟ್ಟುಬಿಟ್ಟಿದ್ದೆ...

"ನಂಗೇನೂ ಗೊತ್ತಾಗ್ತಾ ಇಲ್ಲ.. ಅಣ್ಣಯ್ಯಾ" ಹೇಳಿದೆ..

"ಸರಿ ನಮಗೆ ಇರುವ ಜಮೀನಿನಲ್ಲಿ ಒಂದು ಸಂಸಾರ ಜೀವನ ಮಾಡಬಹುದು.. ನೀನು ಮನೆ ಕಡೆ ಇದ್ದು ಆಯಿ...ಜಮೀನು ನೋಡಿಕೊ..ನಾನು ಪಟ್ಟಣಕ್ಕೆ ಹೋಗುತ್ತೇನೆ...
ಹೋಟೆಲಲ್ಲೊ ಎಲ್ಲೋ ಒಂದು ಕಡೆ ಕೆಲಸ ಮಾಡುತ್ತೇನೆ..ಜೀವನ ಮಾಡುತ್ತೇನೆ.. "

ಅವನ ಧ್ವನಿಯಲ್ಲಿ ಧ್ರಡತೆ ಇತ್ತು...

ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ....ಸುಮ್ಮನಿದ್ದೆ...

ಮತ್ತೆ ಅಣ್ಣನೇ ಹೇಳಿದ...."ನೀನು ವಿಚಾರ ಮಾಡಿ ತಿಳಿಸು..ನೀನು ಓದುವದಾದರೆ..ಓದು..ನಾನು ಓದಿಸುತ್ತೇನೆ..ಎಷ್ಟೇ ಕಷ್ಟವಾದರೂ ಚಿಂತೆಯಿಲ್ಲ.... ಒಟ್ಟಿನಲ್ಲಿ ನೀನು ಮೊದಲಿನ ಥರಹ ಆಗಬೇಕು..ನಗುತ್ತ ಕುಣಿಯುತ್ತ ಇರಬೇಕು.."

ನಾನು ವಿಚಾರಕ್ಕೆ ಬಿದ್ದೆ..ನಾನು ಜಮೀನಿನಲ್ಲಿ ಕೆಲಸ ಮಾಡಲೇ..?..

ಏನೂ ಓದಿರದ ಅಣ್ಣ ಪಟ್ಟಣದಲ್ಲಿ ಕೆಲಸ ಮಾಡುವದೆ..?
ಅವನಿಗೆ ಕ್ರಷಿ ಬಿಟ್ಟು ಮತ್ತೇನೂ ಗೊತ್ತಿಲ್ಲ...

ನನ್ನಿಂದ ಅಣ್ಣನಿಗೆ ತೊಂದರೆ ಆಗಬಾರದು...

ಬೆಳಿಗ್ಗೆ ಮನೆಯಲ್ಲೇ ಇದ್ದೆ..ಕೈ ನೋವು ಜಾಸ್ತಿ ಆಗಿತ್ತು..ಆಯಿ ಅರಿಷಿಣ..ಮತ್ತೇನೋ ಸೊಪ್ಪು ಹಾಕಿ ಕಟ್ಟಿದ್ದರು..

ಅಷ್ಟರಲ್ಲಿ ನಾಗು ಬಂದ್ದಿದ್ದ...!!

ನಿಜವಾಗೀಯೂ ಖುಷಿಯಾಯಿತು..

ಸ್ನೇಹ ಅಂದರೆ ಇದು....!!ನನ್ನ ಬೇಜಾರು ನೋಡಿ ಬಂದನಲ್ಲ..!!

ನಗಲು ಪ್ರಯತ್ನಿಸಿದೆ.. ಆಗಲಿಲ್ಲ .....

ಮಾತಾಡಿಸಿದೆ..ಚಹ, ಅವಲಕ್ಕಿ ತಿನ್ನುತ್ತಾ ಬಂದ ಕಾರಣ ಹೇಳಿದ....

"ಪ್ರಕಾಶು..ದೊಡ್ಡ ಸಮಸ್ಯೆ ಮಾರಾಯ.. ..
ನಾನು ರಾಜಿಗೆ ಬರೆದ ಬರೆದ ಪ್ರೇಮ ಪತ್ರ ರಾಜಿ ಅಪ್ಪನಿಗೆ ಸಿಕ್ಕಿ ಬಿಟ್ಟಿದೆ..!
ನಿನ್ನೆ ಸಿರ್ಸಿ ಸಂತೆಯಲ್ಲಿ ತೆಂಗಿನಕಾಯಿ ತಲೆ ಸೀತಾರಾಮನಿಗೆ ಸಿಕ್ಕಿದ್ರಂತೆ..
ಗರಮ್ ಆಗಿದ್ರಂತೆ.."ನೋಡು ನಾಗುನಿಗೆ ನಮ್ಮ ಮನೆಗೆ ಬರಲು ಹೇಳು..ಇಲ್ಲವಾದಲ್ಲಿ ನಾನೇ ಅವರ ಮನೆ ಹೋಗುತ್ತೇನೆ.. ಅವನ ಅಪ್ಪನ ಬಳಿ ಮಾತಾಡ್ತೇನೆ" ಅಂದರಂತೆ ಮಾರಾಯ..!!
ನನಗೆ ಏನೂ ಗೋತ್ತಾಗ್ತಾ ಇಲ್ಲ... ನೀನೆ ಪರಿಹಾರ ಹುಡುಕು....
ರಾಜಿ ಅಪ್ಪ ನಮ್ಮನೆಗೆ ಬರದ ಹಾಗೆ ಮಾಡಬೇಕು....! ಏನು ಮಾಡಲಿ..?.?'

"ಒಳ್ಳೆಯದಾಯತಲ್ಲ ..ನಿಂಗೆ ರಾಜಿ ಬೇಕು ತಾನೆ..ಅವರು ಬಂದು ನಿನ್ನ ಅಪ್ಪನ ಬಳಿ ಮಾತಾಡ್ಲಿ.. ಸಮಸ್ಯೆ ಪರಿಹಾರವಾಯಿತಲ್ಲ.." ಅಂದೆ...

"ನಿನ್ನ ತಲೆ.. ಎಂಥಾ ಮನುಷ್ಯ ಮಾರಾಯಾ ನೀನು....??
ನನ್ನ ಅಪ್ಪ ಸುಮ್ನಿರ್ತಾರೇನೊ..? ನನ್ನ ಸಾಯಿಸಿ ಬಿಡ್ತಾರೆ..
ಅದೆಲ್ಲ ಬೇಡ ..ನಾವೇ ರಾಜಿ ಅಪ್ಪನ ಬಳಿ ಹೋಗೋಣ..ನೀನು ಬಾ..ನೀನೆ ಮಾತಾಡು..
ಹೇಗಾದರೂ ಮಾಡಿ ಬೀಸೋ ದೊಣ್ಣೆ ತಪ್ಪಿಸು ಮಾರಾಯ.. ಈಗಲೇ ರೆಡಿ ಆಗು.."

ನಾಗು ಬಡಬಡಿಸಿದ..

ನಾಗುವಿನ ಸ್ಥಿತಿ ನೋಡಿ ನನಗೆ ನಗು ತಡೆಯಲಾಗಲಿಲ್ಲ..

ದೊಡ್ಡದಾಗಿ...ನಕ್ಕುಬಿಟ್ಟೆ......

ನಗು ಬರದಿದ್ದರೂ ನಾಗುವೂ ನಕ್ಕ..ಹುಳಿನಗು....
ಆಯಿ ಅಡುಗೆ ಮನೆಯಿಂದ ಇಣುಕಿದಳು...


"ಏನಾಯಿತ್ರೋ.....ಈ ಪ್ರಕಾಶನ ನಗು ನೋಡದೆ ಬಹಳ ದಿವಸ ಆಗಿತ್ತು..
ಅವನಿಗೆ ನಗು ಮರೆತೇ ಹೋಗಿತ್ತು..ನಾಗು ನೀನು ಇನ್ನೂ ನಾಲ್ಕುದಿವಸ ಇಲ್ಲೇ ಇರು..!!
ನೀನು ಅವನ ಮುಖದಲ್ಲಿ ನಗು ತರಿಸಿದೆ ನೋಡು.."

ನಾಗು ಹುಳಿ ನಗು ನಕ್ಕ ತಲೆ ಆಡಿಸಿದ ..ನನ್ನತ್ತ ನೋಡಿದ.....

ಅಷ್ಟರಲ್ಲಿ ಅಣ್ಣಯ್ಯ ಬಂದ..ನನ್ನ ನಗು ಮುಖ ನೋಡಿ ಅವನಿಗೆ ಆಶ್ಚರ್ಯ.!!..

"ನಾಗು..ನಾಲ್ಕು ದಿವಸ ನಮ್ಮಲ್ಲೇ.. ಇರಬೇಕು..ನಿವಿಬ್ರೂ ಗದ್ದೆ ತೋಟ ಸುತ್ತಾಡ್ಕೊಂಡು ಬನ್ನಿ." ಅಂದ..

ನಾಗುವಿಗೆ ಪಿಕಲಾಟವಿಕ್ಕಿತು..ಅಷ್ಟರಲ್ಲಿ ನಾನೇ ಹೇಳಿದೆ..

" ಅಣ್ಣಯ್ಯ ನಾನು ಸಿರ್ಸಿಗೆ ಹೋಗಬೇಕು..ಆರ್,ಎನ್. ಶೆಟ್ಟಿ ಕಾಲೇಜಿಗೆ....ನಾನು ಸಿವಿಲ್ ಇಂಜಿನಿಯರಿಂಗ್ ಓದುತ್ತೇನೆ..ಮಾಹಿತಿ ತಗೊಂಡು ಬರ್ತೇನೆ.."

ಏನೂ ಹೇಳ ಬೇಕಾಗಿಲ್ಲ ವಾಗಿತ್ತು ..ಅಣ್ಣಯ್ಯನ ಮುಖದಲ್ಲಿ ಸಂತೋಷ ಕಾಣಬಹುದಿತ್ತು...

ಪ್ರೀತಿಯಿಂದ ನನ್ನ ತಲೆ ಸವರಿದ

" ನೀನು ಏನು ಬೇಕಾದರೂ ಓದು..ಆದ್ರೆ..ನಮ್ಮ ನೋಡಿ ನಗುವವರ ಮುಂದೆ ಎಡವಿ ಬೀಳ ಬಾರದು ನೋಡು.. ನಿನ್ನ ಬೆನ್ನ ಹಿಂದೆ ನಾನಿದ್ದೇನೆ..ಹೋಗಿ ಬಾ"

"ಇಲ್ಲ ಅಣ್ಣಯ್ಯ ನಾನು ಓದುತ್ತೇನೆ.. ಮತ್ತೆ ಅದೇ ತಪ್ಪು ಮಾಡುವದಿಲ್ಲ.. ಮನಸ್ಸು ಗೊಟ್ಟು ಓದುತ್ತೇನೆ..."

ನಾನು ಆತ್ಮವಿಶ್ವಾಸದಿಂದ ಹೇಳಿದೆ....

ನಾನು ರೆಡಿಯಾದೆ .
ನಾಗುವಿನ ಬೈಕ್ ಏರಿದೆ..ಹೋಗುತ್ತಾ ಇರುವಾಗ ನಾಗು ಹೇಳಿದ..

'ನೀನು ಏನು ಬೇಕಾದ್ರೂ ಓದು ಮಾರಾಯಾ..ಮೊದಲು ಮಿಲಿಟರಿ ಸುಬ್ಬು ರಾವ್ ಮನೆಗೆ ಹೋಗೋಣ"

" ಮಿಲಿಟರಿಸುಬ್ಬುರಾವ್ ಯಾರೋ..?"

" .....ರಾಜಿ ಅಪ್ಪ ..!! ರಿಟಾಯರ್ಡ್..ಮೇಜರ್..!!??...."

....... ಸಮಸ್ಯೆ ದೋಡ್ಡದೇ ಆಗಿತ್ತು....



ನನಗೆ...... ದಪ್ಪ ಬಿಳಿಮೀಸೆ..... ಕೆಂಪು ಕಣ್ಣು.... ಸಂಗಡ ..ಕೋವಿ..(ಗನ್)..ನೆನಪಾಯಿತು........

Friday, December 12, 2008

ಹೀಗೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಂಡಿದ್ದು...

"ಪ್ರೋಗ್ರೆಸ್ಸ್" ಸ್ಪೆಲ್ಲಿಂಗ್ ನೋಡಿ...
(ಕಟ್ಟೇ ಶಂಕ್ರಣ್ಣನ ಅಭಿಮಾನಕ್ಕೆ ಈ ಫೋಟೋಗಳು..)
( ಎಲ್ಲ ಫೋಟೋಗಳ ಮೇಲೆ ಕ್ಲಿಕ್ ಮಾಡಿ ನೋಡಿ..)

ತರ್ಲೆ ನಾಗು..ಗೆ ಅನ್ನಿಸಿದ್ದು...

ಇದನ್ನು ನೋಡಿ ನನ್ನ ಸ್ನೇಹಿತ ನಾಗು..
"ನ್ಯಾಚುರಲ್ ಆಗಿ ಟಚ್...ಮಾಡಿ.
ಈ.. ಬೋರ್ಡ್ ಥರಾನೇ.....
ಚಂದ.. ಮಾಡ್ತಾರಂತೆ..ಕಣೋ.."... ಅಂದ..!

ಕೋಣನ ಕುಂಟೆ... ಕ್ರಾಸ್ನಲ್ಲಿ...

ಯಾಕೋ ಈ ಬೋರ್ಡು ತುಂಬಾ ಅಪ್ಯಾಯಮಾನವಾಗಿ ಕಂಡಿತು.....
ಜಲಸಂಪನ್ಮೂಲ ಸಚಿವರ ಕೆಲಸ ಇಷ್ಟವಾಯಿತು...
ನಿಮಗೆ..?

ಭಯೋ...ಟೆಕ್ನೋಲಜಿ...


ದಿನದ ಕೂಲಿಯಯಲಿ ಬದುಕ ಹಿಡಿಯುವವರ ಬೆದರಿಸುತ್ತಿದೆ
ಬೀದಿ ಬದಿಯ ಬಾಂಬು
ತಾರಾ ಲೋಕದ ತಾಜಾ ಸ್ವರ್ಗದಲಿ
ತೂಕಡಿಸುತ್ತಿದ್ದವರ ನಿದ್ದೆಗೆಡಿಸಿದೆ
ಕದ್ದು ಒಳನುಗ್ಗಿದ್ದವರ ಬಂದೂಕಿನ ಸದ್ದು.

ಇಲಿಯನ್ನು ಬಿಟ್ಟು ಬಿಲ ಮುಚ್ಚುವ ರಾಜತಾಂತ್ರಿಕರು
ಮರವನ್ನು ಬೆಳೆಯಲು ಬಿಟ್ಟು
ಬಿದ್ದ ಬೀಜವ ಆರಿಸುತ್ತಿದ್ದಾರೆ
ಮುಂದಿನ ಚುನಾವಣೆಯಲ್ಲಿ
ಬಿಸಿ ಬೆಳೆ ಬಾತಿಗೆ ಬೇಯಿಸಬಹುದೆಂದು.

ಕಪ್ಪು ಮುಸುಕಿನ ಹಗಲು ದೆವ್ವಗಳನ್ನುಅಲ್ಲಾಡಿಸಲಾಗದವರು ಕಸಿದಿದ್ದಾರೆ
ಸನ್ಯಾಸಿನಿಯ ಕಾವಿ ವಸನವನ್ನು
ಕೆಂಪು ಕಣ್ಣುಗಳಿಗೆಲ್ಲ ಕೇಸರಿಯ ರೋಗ
ಸ್ವಾಮಿ(ನಿ) ನಿಷ್ಠೆ ಮೆರೆದವರಿಗೆ
ಶಿಲುಬೆಯಡಿಯಲ್ಲಿ ಸೆಕ್ಯುಲರ್ ಸ್ವರ್ಗ

ಆದರೆ......
ಸಾವಿನ ನೋವನ್ನೂ ಮಾರುತ್ತಾರೆ ಮಾಧ್ಯಮದವರು
"ಭಯೋತ್ಪಾದಕರ ಗುಂಡಿಗೆ ಸತ್ತವರ ಸಂಖ್ಯೆ
ನೂರಕ್ಕೂ ಮೀರಬಹುದು"
ಜಾಹೀರಾತಿನ ನಂತರ ವಾರ್ತೆ ಮುಂದುವರೆಯುವದು.

ದಿವಾಕರ ಹೆಗಡೆ

( ನನ್ನ ಗೆಳೆಯ ಬರೆದದ್ದು..)

Monday, December 8, 2008

ಶ್ರವಣ..ಬೆಳಗೊಳದಲ್ಲಿ...!!


ಮುಖೇಶ್ ನ ಒಂದು ಹಾಡಿದೆ......

"'ಹಾಂ..ತುಮ್ ಬಿಲ್ಕುಲ್..ವೈಸಿ..ಹೋ....
ಜೈಸಾ..ಮೈನೆ..ಸೋಛಾ..ಥಾ......"

ನನ್ನಾಕೆ ಹೇಗಿರಬೇಕೆಂದು ಯೋಚಿಸಿದ್ದೇನೋ...ಹಾಗೆಯೆ...ಇದ್ದಳು...
ಇದ್ದಾಳೆ.....

ಮದುವೆಗೂ ಮೊದಲೇ ಹೇಳಿದ್ದೆ...ನನ್ನಾಕೆಗೆ...ನನ್ನ ಜಗತ್ತು ಬಹಳ ಸಣ್ಣದು...
ನನ್ನ ಸರ್ವಸ್ವ ನನ್ನ ಆಯಿ...ಅಣ್ಣ..ಅಕ್ಕ....
ಇದರ ಹೊರತು ಮತ್ತೇನಿಲ್ಲ...
ನಿನಗೆ ಸಂಪೂರ್ಣ ಸ್ವಾತಂತ್ರ್ಯವಿದೆ...ನೀನು ನನ್ನ ಮಡದಿಯಾಗಲ್ಲ......

ನನ್ನ ಗೆಳತಿಯಾಗಿ..ನನ್ನ ಜೇವನದಲ್ಲಿ..ಬಾ...

ಏನೇ ಸಂದರ್ಭ ಬಂದರೂ..ನನ್ನ "ಆಯಿಗೆ" ಏನೂ ಹೇಳಬೇಡ...

ನನ್ನಮ್ಮನ ತಪ್ಪಿದ್ದರೂ ಕೂಡ.... ಸುಮ್ಮನಿರು...

ನನ್ನ ತಂದೆ ತೀರಿದಾಗ ನನ್ನಮ್ಮನಿಗೆ ೨೪ ವರ್ಷ..ತಂದೆ ತೀರಿದ ಒಂದು ತಿಂಗಳಿಗೆ ಈ ಪ್ರಪಂಚಕ್ಕೆ ಬಂದೆ...
ಸಣ್ಣವಯಸ್ಸಿನಲ್ಲಿ ವೈಧವ್ಯ..ತುಂಬು ಬಸಿರು...
ಎರಡು ಚಿಕ್ಕ ಮಕ್ಕಳು....ಬದುಕಲ್ಲಿ...ಏನಿದೆ...?
ಕಷ್ಟವೋ..ದುಃಖವೊ...ಯಾರಬಳಿ..ಹೇಳುವದು...?
ಆತ್ಮಹತ್ಯೆ ಮಾಡಿಕೊಂಡಿದ್ದರೆ...ಆ ದೇವರ ಬಳಿಯೂ....ಉತ್ತರವಿರುತ್ತಿರಲಿಲ್ಲ....
ಮೌನವಾಗಿದ್ದಳು...ದುಖ ಸಹಿಸಿ ಕೊಂಡಳು...

ನಮ್ಮನ್ನು ದೊಡ್ಡವರನ್ನಾಗಿ ಮಾಡಿದಳು...
ಆ ತಾಯಿಗೆ ಎದುರಾಡ ಬೇಡ..ಏನೇ..ಹೇಳಿದರೂ...ಸುಮ್ಮನಿದ್ದುಬಿಡು....ಅಂದಿದ್ದೆ....

ಊರಿಂದ ಅಣ್ಣನ ಫೋನು.." ಹೇಗೆ ನಡಿತಿದೆ..ಹನಿಮೂನು...??

ನನ್ನ ಸಂಕಟ ನನಗೆ.. ಅಣ್ಣನಿಗೆ ಏನು ಹೇಳುವದು..ಈ ಸರಸತ್ತೆ..ಬಿಸಿಬೇಳೆ ಬಾತಿನ ವಿಷಯ....?

ನನಗೋ...ಸಾಕೋ ಸಾಕು..ಅನ್ನಿಸಿ ಬಿಡ್ತು....

ಏಳುವದು ಬೇಡ ..ಮಲಗುವದು ಬೇಡ...
ಟೊಯ್ಲೆಟಗೂ ರೂಮಿಗೂ ಓಡಾಡುವದೂ ಬೇಡ....
ಆ ಯಮಯಾತನೆಯ ದಿನಗಳು....

ಸರಸತ್ತೆ...ನೆನೆಸಿಕೊಂಡು ನಗಲೂ ಅಶಕ್ತತೆ....ಹೊಟ್ಟೆ ನೋವು...
ಹಾಗೂ ಹೀಗೂ ಐದು ದಿನ ಕಳೆಯಿತು..ಸುಧಾರಿಸಿ..ಕೊಂಡೆ....

ಅಕ್ಕ, ಭಾವ..ಪ್ಯಾಕೇಜ್ ಟ್ರಿಪ್ ಟಿಕೇಟ್..ಬುಕ್ ಮಾಡಿ ಕೊಟ್ಟಿದ್ದರು..
ಬೆಳಿಗ್ಗೆ ಬೇಗನೇ ಎದ್ದು ಹೊರಟೆವು...

"ದಾರಿಯಲ್ಲಿ ಒಳ್ಳೆ ಹೊಟೆಲ್ ನಲ್ಲೇ ಊಟಮಾಡಿ' ....ಅಕ್ಕನ ಹಿತವಚನ..!!

ಬಸ್ ಹತ್ತಿ ಕುಳಿತವರಿಗೆ ಈ ಪ್ರಪಂಚ ಮರೆತಿತ್ತು..

ಏನು ಮಾತೊ..ಏನು ಸುದ್ಧಿಯೊ...ನನ್ನಾಕೆಗೆ ಕನ್ನಡ ಅಷ್ಟಾಗಿ ಗೊತ್ತಿಲ್ಲವಾಗಿತ್ತು....
ಹಿಂದಿ, ಇಂಗ್ಲೀಷಿನಲ್ಲಿ ಮತಾಡುತ್ತಿದ್ದೇವು...
ಬಸ್ ನಿಲ್ಲಿಸಿದ್ದು ಮಯೂರ ಅಂತ ಹೊಟೆಲ್...ಬೇಲೂರಿನಲ್ಲಿ...

ಊಟ "ಗೊಬ್ಬರ" ಥರ ಇತ್ತು...ಅದನ್ನೇ ತಿಂದೆವು.....

ನಂತರ ಬಂದಿದ್ದು ಶ್ರವಣಬೆಳಗೊಳ......!

ದೊಡ್ಡ ಬೆಟ್ಟ...ಹತ್ತಿ ಹೋಗಬೇಕಿತ್ತು...

ಮತ್ತೆ ಸರಸಕ್ಕನ "ಬಿಸಿಬೇಳೆ ಬಾತ್" ನೆನಪಾಯಿತು..!!

ಮಯೂರ ಹೊಟೆಲಿನ "ಗೊಬ್ಬರವೂ ನೆನಪಾಯಿತು...!!

ಬೆಟ್ಟ ಹತ್ತುವಾಗ "ಒತ್ತಡ " ಜಾಸ್ತಿಯಾಗಿಬಿಟ್ಟರೆ..?

ಹೊಸ ಹೆಂಡತಿ...ಹೇಗೆ ಹೇಳಲಿ..?
ಮನಸ್ಸಿನ್ನಲ್ಲಿ ಗೊಂದಲ......

ಅಮೂಲಾಗ್ರವಾಗಿ ನನ್ನನ್ನೇ ಸೂಕ್ಷ್ಮವಾಗಿ ಅವಲೋಕಿಸಿಕೊಂಡೆ...

ಉಹೂಂ...ತೊಂದರೆ ಬರಲಿಕ್ಕಿಲ್ಲ ಅನ್ನಿಸಿತು....ಧೈರ್ಯ ತಂದು ಕೊಂಡೆ....

ಮಧ್ಯ ಎನೇನೊ ಮಾತು..ಸಲ್ಲಾಪ....
ಆ ವೈರಾಗ್ಯ ಮೂರ್ತಿಯ ಜಾಗದಲ್ಲಿ....
ಬೆಟ್ಟ ಏರಿದ್ದೆ ಗೊತ್ತಾಗಲಿಲ್ಲ....

ಶುರುವಾಯಿತು ಹೊಟ್ಟೆಲ್ಲಿ ಸಣ್ಣಗೆ....ತಳಮಳ....ಅಯ್ಯೊ ದೇವರೆ..ಇನ್ನೇನು..ಗತಿ ..!!

ಈ ಬೋಳು ಬೆಟ್ಟದಮೇಲೆ...??

ಸ್ವಲ್ಪ..ನೀರು ಸಿಗಬಹುದಾ... ನೋಡಿದೆ....ಇದೆ ಕೆಳಗಡೆ...ದೊಡ್ಡ ಕೆರೆ....!!
ಏನು.. ಪ್ರಯೋಜನ..?

ಮಡದಿ ಕಡೆ ನೋಡಿದೆ....

ನನ್ನ ಮಡದಿಗೊ..ಬಹಳ ಆಶ್ಚರ್ಯ...!

ಇಂಥಹ ದೇವರೂ ಇರುತ್ತದಾ..?

" ಹೇಗೆ ....ಕಣ್ಮುಚ್ಚಿ ....ಪ್ರಾರ್ಥಿಸುವದು............?"

"ನೋಡು ಇದು..ಜೈನರ ದೇವರು..ಬಹುಬಲಿ.."

ಬಾಹುಬಲಿ ಕಥೆ ಹೇಳಿದೆ...

ಅವಳಿಗಿನ್ನೂ ಬಾಹುಬಲಿ ಮೂರ್ತಿ ನೋಡಲು..ಒಂಥರಾ..ಮುಜುಗರ ಅನುಭವಿಸುತ್ತಿದ್ದಳು......

"ಛೀ... ಇಲ್ಲಿ ಬರಬಾರದಿತ್ತೂರಿ.."....... ನಾಚಿಕೆಯಿಂದ ಉಲಿದಳು....

ಇದೇ ಸಮಯ ಅಂದುಕೊಂಡು..."ಬಾ..ಬಾ..ಜಲ್ದಿ ಕೆಳಗಡೆ..ಹೋಗೋಣಾ..." ಅಂದೆ...

" ರೀ... ಫೋಟೊ... ತೆಗೆದೆ ಇಲ್ವಲ್ಲಾ..?" ಹೆಂಡತಿ ನೆನಪಿಸಿದಳು.

." ನನ್ನ ಅತ್ತಿಗೆ ಫೋಟೊ ತೆಗೆದ ಹಾಗೆ ಆಗಿಬಿಟ್ಟರೆ..?" ನಾನು ಕೇಳಿದೆ..
ಅದು ಅವಳಿಗೆ ಗೊತ್ತಿರಲಿಲ್ಲ...
ನಾನು ಲಗುಬಗೆಯಿಂದ ಅವಳ ಫೋಟೊ ತೆಗೆದೆ...

"ಜೋಡಿ ಫೋಟೊ..ಬೇಕು..ರೀ....."

ಇಲ್ಲ ಅನ್ನಲಿಕ್ಕಾಗುತ್ತದೆಯೆ...?

ನಾನಗೆ ಒತ್ತಡ ಜಾಸ್ತಿಯಾದರೆ..ಎಂಬ ಭಯ..

ಸುತ್ತಲೂ ನೋಡಿದಾಗ ಒಬ್ಬ ಒಳ್ಳೆಯ ಕ್ಯಾಮರ ಹೆಗಲಿಗೆ ಹಾಕಿ ಕೊಂಡಿದ್ದ... ಅವನಿಗೇ ವಿನಂತಿಸಿದೆ...

ಆ ಪುಣ್ಯಾತ್ಮನಿಗೊ ಆ ಸಮಯದಲ್ಲೇ ತನ್ನ ಬಗೆಗೆ ಹೇಳಿಕೊಳ್ಳುವ ಚಟ...

" ಸಾರ್... ನನಗೆ...ರಾಷ್ಟೀಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಬಂದಿದೆ....
ಈ ಕ್ಯಾಮರ ಎಲ್ಲಾ ನನಗೆ ಗೊತ್ತು..ಸಾರ್.."
ನಿಮಗೆ ಬಾಹುಬಲಿ ಮೂರ್ತಿ ಪೂರ್ತಿ ಬರಬೇಕಾ..ಸಾರ್.."..ಖುಷಿಯಿಮ್ದ..ಬಡಬಡಿಸಿದ...

ಮೂರ್ತಿ....ಪೂರ್ತಿ ಬರಬೇಕಾ ಅಂದರೆ ಏನರ್ಥ..?....

ನನ್ನ ಅತ್ತಿಗೆ ಗೊಮಟೇಶ್ವರನ ಫೋಟೊ ತೆಗೆದದ್ದು ನೆನಪಾಯಿತು... ನನಗೊ ಜಲ್ದಿ ಹೊರಡ ಬೇಕಿತ್ತು..

"ಹೇಗೊ ...ಬೇಗ... ತೆಗೆಯಿರಿ.." ಅಂದೇ.....

ನಿಮ್ಮ ಜೋಡಿ ಚೆನ್ನಾಗಿದೆ...ನನ್ನ ಕ್ಯಾಮರದಲ್ಲೂ ತೆಗೆದು ಕೊಳ್ಳಲೆ ..?"

"ನೋಡಿ ನಾವು ಬೇಗನೇ ಹೋಗಬೇಕು..ಜಲ್ದಿ ತೆಗೆದು ಕೊಡಿ..."

" ಸರ್ ..ಬಸ್ ಹೊರಡುವದು ಇನ್ನೂ ತಡ ಇದೆ.....

ಸ್ವಲ್ಪ್ ಸ್ಮೈಲ್ ಕೊಡಿ ಸರ್..ನಾನು ಮದುವೆ ಗಳಿಗೂ ಫೋಟೊ ತೆಗೆಯುತ್ತೇನೆ.."

ಇಂಥಹ ಸಮಯದಲ್ಲಿ....ಹೇಗೆ ಸ್ಮೈಲ್ ಕೊಡುವದು...??

"ನಮ್ಮ ಮದುವೆ ಆಗಿದೆ..ಪ್ಲೀಸ್ ಬೇಗ ತೆಗೆದು ಕೊಡಿ.." ಅಂದೆ.

ಅಂತೂ ಅವನಿಂದ ಬಿಡುಗಡೆ ಪಡೆದು ಕೆಳಗಡೆ ಹೊರಟೆವು..

ಹೇಗೇಗೋ "ಒತ್ತಡವನ್ನು" ನಿಭಾಯಿಸುತ್ತ..ಕೆಳಗಿಳಿದೆ...
ಕೆಳಗಡೆಇಳಿದವರೆ..ಹೊಟೆಲಿಗೆ ನುಗ್ಗಿದೇವು...

ನನ್ನ ಮಡದಿಗೆ.." ಬೆಟ್ಟದ ಮೇಲಿನ ಒತ್ತಡದ" ವಿಷಯವೂ ಗೊತ್ತಾಗಲಿಲ್ಲ....
"ಅತ್ತಿಗೆ" ತೆಗೆದ ಫೋಟೊ ಬಗೆಗೂ ಕೇಳಲಿಲ್ಲ....


ಅದರೆ...ಸುಖ..ದುಃಖ..ಸಂಸಾರದ ವ್ಯಾಮೋಹ ಎಲ್ಲ ತ್ಯಜಿಸಿ..ವಿರಕ್ತನಾದ.......


........ಗೊಮಟೇಶ್ವರ..ಈಗಲೂ ನೆನಪಾಗುತ್ತಾನೆ..ಹನಿಮೂನು,,ನೆನಪಾದಾಗಲೆಲ್ಲ..

Saturday, December 6, 2008

ಮುಗ್ಧತೆ...

ಮುಖದಲ್ಲಿನ..ಮುಗ್ಧತೆ...!!

ಮುಗ್ಧತೆ ಎಲ್ಲಿದ್ದರೂ..ಚಂದ.. ಅಲ್ಲವೇ..??

ನಾಯಿ ಮುಖದ..ಭಾವನೆ...


ಮುದ್ದಿಸಬೇಕು ಅನಿಸುತ್ತದೆ ಅಲ್ಲವೇ..?

ನಾಯಿ ಮುಖದ ಭಾವನೆ...

ಇದರ ಮುಖದಲ್ಲಿ ಎಷ್ಟು ಪ್ರಶ್ನೆಗಳಿವೆ..???
ಏನು ಇದರ ಭಾವನೆ...?

ನಾಯಿ ಮುಖದ ಭಾವನೆ...

" ಅನುಮತಿ ಕೇಳಿ ಫೋಟೋ ತೆಗೆದುಕೋ....."
.. ಮಗ ಕರ್ಣ ಮತ್ತು ತಾಯಿ ..ಆಡುತ್ತಿದ್ದರು.......ನಾನು ಫೋಟೋ..ತೆಗೆಯಲು ಹೋದೆ
ರಾಣಿ.. ನನ್ನನ್ನೇ ಗದರಿಸಿದೆ....!!

ನಾಯಿ ಮುಖದ..ಭಾವನೆ....

ಇದರ ಹೆಸರು ರಾಣಿ...ಸ್ವಲ್ಪ ಫೋಸ್..ಕೊಡೆ..ಪ್ಲೀಸ್..ಅಂದೆ...

ನಾಯಿ...ಮುಖದ.....ಭಾವನೆ.....


ನನಗೆ ನಾಯಿ ಎಂದರೆ ಬಹಳ ಪ್ರೀತಿ...

ಹಡಬೆ ಬೀದಿ ನಾಯಿ ತಂದು ಸಾಕುತ್ತಿದ್ದೆ...ಆಯಿ ..ಚಿಕ್ಕಪ್ಪ ಬೈದರೂ ಬಿಡುತ್ತಿರಲಿಲ್ಲ...

ಸಣ್ಣ ಮರಿ...ರಾತ್ರಿಯೆಲ್ಲಾ ತಾಯಿಯ ನೆನಪಾಗಿ ಕುಂಯ್ ..ಕುಂಯ್..ಅನ್ನುವಾಗ ನನ್ನ ಹಾಸಿಗೆಯಲ್ಲೇ.. ಮಲಗಿಸುತ್ತಿದ್ದೆ...

ಚಿಕ್ಕಪ್ಪ ಒಂದು ನಾಯಿ ಮರಿ ತಂದಿದ್ದರು.. " ಇದು ಅಲ್ಷೆಷ್ಯನ್..ನಾಯಿ " ಅಂದಿದ್ದರು...ನನಗೆ ಬಹಳ ಖುಷಿಯಾಯಿತು..

ಅದಕ್ಕೆ ಮಾತು ಕಲಿಸಬೇಕು ಎಂದು ಶುರು ಮಾಡಿದೆ... ಸ್ಕೂಲಿಂದ ಬಂದವನೇ..ಪಾಟಿ ಚೀಲ ಎಸೆದು ನಾಯಿ ಮರಿಗೆ ಪಾಠ ಶುರು ಮಾಡುತ್ತಿದ್ದೆ....

ಅದರ ಹೆಸರು "ಗುಂಡ".... ಕೆಲವೊಂದು ಮಾತು ಅದು ಕಲಿಯಿತು..
ಆದರೆ.....
ಮನೆಯಲ್ಲಿ ಎಲ್ಲರೂ ... ನನಗೆ ...ಬೈದರು....!!!
ಅದು ಮಾತು ಕಲಿಯುವ ಭರದಲ್ಲಿ....ಕೂಗುವದನ್ನೇ ಮರೆತು ಬಿಟ್ಟಿತು....ಮಾರಾಯರೇ...!!!

ಮನೆಗೆ ಬಂದವರೆ......ಅದನ್ನು ನೋಡಿ ಕೂಗ ಬೇಕಾಗಿತ್ತು....!!

ಹೊಸಬರು ಬಂದರೆ ಬಾಲ ಅಲ್ಲಾಡಿಸಿ ನಕ್ಕು ಬಿಡುತ್ತಿತ್ತು....


ನಾಯಿ ನಗುವುದೇ..??

ನಿಜ ಸ್ವಾಮಿ...ಮನುಷ್ಯರ ನಂತರ ಮುಖದಲ್ಲಿ ಹೆಚ್ಚಿನ ಭಾವನೆ ವ್ಯಕ್ತಪಡಿಸುವ ಪ್ರಾಣಿ ಅಂದರೆ..." ನಾಯಿ" ಅಂತ ಕೇಳಿದ್ದೇನೆ....
ನಾಯಿ ತನ್ನ ಭಾವನೆಯನ್ನು....ಪ್ರೀತಿಯನ್ನು...ತುಂಬ ಆತ್ಮೀಯವಾಗಿ..ವ್ಯಕ್ತಪಡಿಸುತ್ತದೆ...
ಭಾವನೆಯನ್ನು,,ಪ್ರೀತಿಯನ್ನು..ಎಲ್ಲ ಪ್ರಾಣಿಗಳು.. ಮುಖದಲ್ಲಿ..ವ್ಯಕ್ತ ಪಡಿಸುವದಿಲ್ಲ...
ನಾವು ಯಾವಾಗಲೋ..ಎಸೆದ ದೋಸೆಯ ಚೂರನ್ನು....
ತನ್ನ ..ಜೀವನ ಪರ್ಯಂತ...ನೆನಪಿಟ್ಟುಕೊಳ್ಳುತ್ತದೆ....
ನಮಗೆ ಹೆಚ್ಚಾದ...ಅನ್ನ ತಿಂದು...
ಬಾಲ ಅಲ್ಲಾಡಿಸುತ್ತದೆ... ಮನೆಕಾಯುತ್ತದೆ....
ಕ್ರತಜ್ನತೆಯಿಂದ..ಇರುತ್ತದೆ...... ಅಲ್ಲವೇ....?

(ಮೇಲಿನ..ಫೋಟೋಗಳಲ್ಲಿ ನಾಯಿಯ ಕಣ್ಣನ್ನು ಅವಲೋಕಿಸಿ.. ಕ್ಲೋಸ್-ಅಪ ನಲ್ಲಿ ನೋಡಿ)








Wednesday, December 3, 2008

ನಾನು ಕರೆಯೋದು ಹೆಚ್ಚೋ..? ನೀನು ಬರುವದು ಹೆಚ್ಚೋ..?

ನಾನಾಗ ಕತಾರ್ ನಿಂದ ಬಂದು ಮದುವೆಯಾಗಿದ್ದೆ. ಮದುವೆಯಾದ ಮೂರನೆ ದಿವಸ ಬೆಂಗಳೂರಿಗೆ ಬಂದಿದ್ದೇವು. ಇಲ್ಲಿಂದ ಮೊದಲು ಊಟಿ, ನಂತರ ಕೊಡೆಕೆನಾಲ್..ಆಮೇಲೆ ಶ್ರವಣಬೆಳಗೊಳ, ಬೇಲೂರು ಹಳೆಬೀಡು ಕಾರ್ಯಕ್ರಮ ಹಾಕಿ ಕೊಂಡಿದ್ದೆ.
ಬೆಳಿಗ್ಗೆ ಬಸ್ಸಿಗೆ ಬಂದು ನನ್ನಕ್ಕನ ಮನೆಗೆ ಬಂದು ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ..

ಅಕ್ಕ ಹುಡುಕಿದ ಮುದ್ದಾದ .. ...ಹೊಸ ಹೆಂಡತಿ... ಪತ್ರದಲ್ಲಿ ಮಾತ್ರ ಪ್ರೇಮ ಸಲ್ಲಾಪ ನಡೆದಿತ್ತು..ಹೆಚ್ಚಿಗೆ ಮಾತುಕತೆ ಆಗಲಿಲ್ಲವಾಗಿತ್ತು..
ಊರಲ್ಲಿ ಎಲ್ಲರೂ ನನಗೆ ತುಂಬಾ ಕೀಟಲೆ ಮಾಡುತ್ತಿದ್ದರಿಂದ ಮಾತನಾಡಲಿಕ್ಕೆ ಆಗಿಲ್ಲವಾಗಿತ್ತು.

ಸ್ವಲ್ಪ ಹೆದರಿಕೆ.. ಸಂಕೋಚ.. ಚಂದದ ಈ ಹುಡುಗಿ ಇನ್ನು ನನ್ನ ಮಡದಿ..
ನನ್ನ ಬಾಳ ಸಂಗಾತಿ....

ಒಂದುರೀತಿಯ ಭಯ ಮಿಶ್ರಿತ ಖುಷಿಯ ಅನುಭಾವ ಅನುಭವಿಸುತ್ತ ಇದ್ದೆ.

.' ಪ್ರಕಾಶು.. ಇಲ್ಲಿ ಬಾ " ಅಕ್ಕ ಕರೆದಳು..

ಈ ಅಕ್ಕನಿಗೆ ಕನಿಷ್ಟ ಮಟ್ಟದ ಸಾಮಾನ್ಯ ಜ್ನಾನವಾದರೂ ಬೇಡವೆ..? ಛೆ..
ಹೊರಕ್ಕೆ ಬಂದೆ .. ಡ್ರಮ್ಮು ಸೈಜಿನ ಮಹಿಳಮಣಿ ಬಂದಿದ್ದರು.
ನನ್ನನ್ನು ನೋಡಿದವರೇ...
"ಅರೇರೇ..ಪ್ರಕಾಶಾ..ಎಷ್ಟು ದೊಡ್ಡಾಗಿಬಿಟ್ಟಿದ್ದೀಯಾ..!! ಮದುವೆ ಆಯಿತಂತಲ್ಲೋ.?? ಎಲ್ಲೋ ನಿನ್ನ ಹೆಂಡತಿ..? ತೋರಿಸೊ.."
ಅಂದರು..

ಮುಖದ ತುಂಬಾ ಬಾಯಿನೊ..ಬಾಯಿ ತುಂಬಾ ಮುಖಾನೊ..
ಅಹಾ ಹಾ..ಏನು ಕಂಠ..ಏನು ಕಥೆ...?

ಈ ಗಲಾಟೆ ಕೇಳಿ ಗಾಭರಿ ಮುಖಮಾಡಿಕೊಂಡ ನನ್ನಾಕೆ ಓಡಿಬಂದಳು..

"ಓಹೊಹೊ..ಇವಳೇನಾ... ಇಲ್ಲಿ ಎಲ್ಲೂ ಸಿಗಲಿಲ್ಲ ಅಂತ ಆಗ್ರಾದಿಂದ ಬಂದವಳು..
ಒಳ್ಳೆ ಖುಷ್ಬು ಥರ ಇದ್ದಾಳಲ್ಲೋ..!! ಕನ್ನಡ ಬರುತ್ತೇನೋ..?"

ಏರಿದ ಕಂಠದಿಂದ ಮಾತಾಡುತ್ತಿದ್ದ ಆ ಮಾತೇಯನ್ನು ನಾವಿಬ್ಬರೂ ಅವಕ್ಕಾಗಿ ನೋಡುತ್ತಿದ್ದೇವು.

ಇಷ್ಟೆಲ್ಲಾ ಆತ್ಮೀಯವಾಗಿ ಮಾತಾಡುತ್ತಿದ್ದ ಇವರು ಯಾರು ಅಂತ ನನಗೆ ಗೊತ್ತಾಗಲಿಲ್ಲ.

ಸಾವಿರಾರು ಪ್ರಶ್ನಾರ್ಥಕ ಚಿನ್ಹೆ ಇಟ್ಟುಕೊಂಡು ಅಕ್ಕನ ಮುಖ ನೋಡಿದೆ.
ಅದು ಅವರಿಗೂ ಗೊತ್ತಾಯಿತು ಅನ್ನಿಸಿತ್ತೆ..ಮತ್ತೆ ಬಾಯಿತೆರೆದರು..
ಧಡೂತಿ ಮಹಿಳೆ ಆತ್ಮೀಯವಾಗಿ ಮಾತಾಡುತ್ತಿದ್ದಳು....

"ಅಲ್ಲೋ ಪ್ರಕಾಶಾ.. ನಿಂಗೆ ನನ್ನ ನೆನಪು ಇಲ್ಲೇನೋ..? ನಾನು ನಿನ್ನ ಎತ್ತಿ ಆಡಿಸಿ ಬೆಳಿಸಿದ್ದೀನೊ..
ನಿನ್ನ ಚಾಚಿ ತೆಗೆದು ಕ್ಲೀನ್ ಮಾಡಿದ್ದೀನೊ..ಗೊತ್ತಾಗಲಿಲ್ಲೇನೋ..?"

ನಮಗೆ ತಲೆ ಆಡಿಸುವದನ್ನು ಬಿಟ್ಟು ಮತ್ತಿನ್ನೇನಕ್ಕೂ ಅವಕಾಶವೇ ಇರಲಿಲ್ಲ...

"ನಾನು ದೂರದ ಸಂಬಂಧದಿಂದ ಅತ್ತೆ ಅಗಬೇಕು ಕಣೊ..ನೀವೆಲ್ಲ ಆಗ ಬಹಳ ಚಿಕ್ಕವರಿದ್ರಿ..ಎಲ್ಲಿ ನೆನಪಿರುತ್ತೆ?'

ಅವರೆ ಪ್ರಶ್ನೆ ಕೆಳಿಕೊಳ್ಳುತ್ತಿದ್ದರು..ಅವರೆ ಉತ್ತರ ಕೊಡುತ್ತಿದ್ದರು..

"ನಾನು ಸರಸತ್ತೆ...!!"

ಅಂತೂ ನಮಗೆ ಬೇಕಾದ ವಿಷಯ ಸಿಕ್ಕಿತು..!!

"ನೋಡೊ ತುಂಬಾ ಅಪರೂಪಕ್ಕೆ ಸಿಕ್ಕಿದೀಯಾ..ನಮ್ಮನೆಗೆ ಊಟಕ್ಕೇ ಕರೆಯೋಣ ಅಂತಿದ್ದೆ. ನಿಮಗೆ ಹನಿಮೂನಿಗೆ ಹೋಗಬೇಕಂತೆ.. ಅಕ್ಕ ಹೆಳಿದ್ದಾಳೆ.. ನಿಮ್ಮ ಸಮಯ ವೇಷ್ಟು ಮಾಡಲಿಕ್ಕೆ ನನಗೆ ಮನಸ್ಸಿಲ್ಲ..
ಯಾವಾಗ್ಲೂ ನಾನೊಬ್ಬಳೆ ನಿಮ್ಮನೆಗೆ ಬರ್ತಾ ಇರ್ತೀನಿ... ಇಂದು ಮಧ್ಯಾನ್ಹ ೫ ಗಂಟೆಗೆ ನೀವೆಲ್ಲರೂ ಬರಬೇಕು.."
ರಾಜಾಜ್ಞೆಥರ ಹೇಳಿದಳು..

ಇಲ್ಲಿಯವರಗೆ ಬಡಬಡಿಸುತ್ತಿದ್ದ ಬಾಯಿಗಳಿಗೆ ಸ್ವಲ್ಪ ಬ್ರೇಕ್ ಕೊಟ್ಟಳು..

"ನೋಡಿ ಸರಸತ್ತೆ ..ನಿಮಗ್ಯಾಕೆ ತೊಂದರೆ ಇನ್ನೊಂದು ದಿವಸ ಬರ್ತೇವೆ.."

ಕಾರ್ಯಕ್ರಮ ಮುಂದೂಡಿದವನು ಬಾಳಿಯಾನು ಎಂಬಂತೆ...ಹೇಳಿದೆ...

"ಛೆ..ಛೆ..ನಾನು ಕರೆಯೋದು ಹೆಚ್ಚೋ..ನೀನು ಬರೋದು ಹೆಚ್ಚೊ.. ಬರ್ಲೇ ಬೇಕಪ್ಪ. ವಾರದ ಹಿಂದಿನಿಂದಲೇ...ನಾನು ಎಲ್ಲ ತಯ್ಯಾರಿ ಮಾಡಿ ಕೊಂಡುಬಿಟ್ಟಿದ್ದೇನೆ.."

ಅಕ್ಕ ಮಧ್ಯ ಪ್ರವೇಶ ಮಾಡಿದಳು " ಆಯ್ತು ಸರಸತ್ತೆ " ನಾವೂ ಕೂಡ ನಿಮ್ಮನೆ ನೋಡಿಲ್ಲ. ಬಹಳ ದಿನದಿಂದ ಹೇಳ್ತಿದ್ದೀರ. ಎಲ್ಲರೂ ಬರ್ತೇವೆ"

ನಂತರ ಹೆಚ್ಚಿಗೆ ಮಾತನಾಡದೆ ಹೋದಳು..
ಒಂದುರೀತಿಯ ದೊಡ್ಡ ಮಳೆ ಬಂದು ಹೋದಂತಾಯಿತು...

ಅಕ್ಕ ಹೇಳಿದಳು " ನಂಗೂ ಕೂಡ ನೆನಪಿಲ್ಲ ಕಣೊ.... ಇಲ್ಲಿ ಒಮ್ಮೆ ಸಿಕ್ಕು ಅವಳೆ ಪರಿಚಯ ಹಿಡಿದು ಮಾತನಾಡಿ ಬಹಳ ಕರೆಯುತ್ತಿದ್ದಾಳೆ. ಏನೇನೊ ಸಂಬಂಧ ಹೇಳ್ತಾಳೆ....ನಾವೂ ಕೂಡ ಹೋಗಿಲ್ಲ. ಹೋಗಿ ಬಂದರಾಯಿತು ಬಿಡು."

"ಇವರು ಯಾವಾಗಲೂ ಹೀಗೆನಾ..? ಏನು ಧ್ವನಿ..ಏನು ಕಂಠ..? ಹೇಗೆ ಇವರ ಸ್ವಭಾವ?" ನಾನು ಕೇಳಿದೆ.

"ಅಯ್ಯೊ ಅದೇನು ಕೇಳ್ತೀಯಾ..ನಮ್ಮನೆಗೆ ಬಂದಾಗ ಟೀ ಸಂಗಡ ಲಾಡು..ಚಿಪ್ಸು ಏನೆ ಇಟ್ಟರೂ ಅದನ್ನು ಸೆರಗಿನಲ್ಲಿ ಗಂಟು ಕಟ್ಟಿ ಬಿಡುತ್ತಾಳೆ. ನಮ್ಮನೆಯ ಹಿರಿಯರ ತಿಥಿ, ಶ್ರಾದ್ಧ ಎಲ್ಲ ಇವರಿಗೆ ಗೊತ್ತು.. !
ಆ ಸಮಯದಲ್ಲಿ ಅವಳೇ ಮಾತನಾಡಿಸಿ ದಿನ ತಿಳಿದು ಕೊಂಡು ತಪ್ಪದೆ ಹಾಜರಾಗುತ್ತಾಳೆ..
ಅಂದೂ ಕೂಡ ಬಾಳೆ ಎಲೆಯಲ್ಲಿನ ಸ್ವೀಟು ಸೆರಗಿಗೆ ಗಂಟು ಕಟ್ಟುತ್ತಾಳೆ... ಹೋಗ್ಲಿಬಿಡು..ಸರಿ ನೀವುಗಳು ರೆಸ್ಟ್ ತಗೊಳಿ."

ಅಂತೂ ನಮ್ಮಕ್ಕ ಜ್ನಾನದ ಮಾತಾಡಿದಳು..

ಇಷ್ಟು ದೊಡ್ಡ ಮಳೆ ಬಂದು ಹೋದ ಮೇಲೆ ಇನ್ನೇನೂ ಆಗಲಿಲ್ಲ.

ಹೇಗಿದ್ದರೂ ರಾತ್ರಿ ಬೇಕಾದಷ್ಟು ಸಮಯವಿದೆಯಲ್ಲ..ನಾಳೆ ಬೆಳಿಗ್ಗೆ ಊಟಿ ಹೋಗುತ್ತಿದ್ದೇವಲ್ಲ ...ಅಂದು ಕೊಳ್ಳುತ್ತ.. ಸುಮ್ಮನೆ ಮಲಗಿದೆ...
ಮಧ್ಯದಲ್ಲಿ ನನ್ನಕ್ಕನ ಕೀಟಲೆ ಬೇರೆ..
ನಾಲ್ಕು ಗಂಟೆಯ ಸುಮಾರಿಗೆ ಬಾವ ಬಂದರು.
ಅವರ ಸಂಗಡ ನನ್ನ ದೊಡ್ಡಮ್ಮನ ಮಗ ವಿನಾಯಕ ಕೂಡ ಇದ್ದ.
ಎಲ್ಲರೂ ಸರಸತ್ತೆ ಮನೆಗೆ ಹೋದೆವು.ಮನೆ ತುಂಬಾ ಚೆನ್ನಾಗಿತ್ತು...

ದೊಡ್ಡ ದೇಶಾವರಿ ನಗುವಿನಿಂದ ಸ್ವಾಗತಿಸಿದಳು ಸರಸಕ್ಕ..."ನೋಡು ..ನಾನು ಕರೆಯೋದು ಹೆಚ್ಚಾ..ನೀನು ಬರೋದು ಹೆಚ್ಚಾ..?""
ಗಂಡನೂ ಅಲ್ಲಿಯೇ ಇದ್ದ ,ಬಹಳ ಮ್ರದು ಸ್ವಭಾವ ಅನ್ನಿಸುತ್ತಿತ್ತು.. ಹಾಗೆ ಇರಬೇಕಾದ ಅನಿರ್ವಾಯತೆಯೆನೊ..? ಮನಸ್ಸಿನಲ್ಲೆ ನಗು ಬಂತು...

"ಸರಸಕ್ಕ ಟಿ ಮಾಡಲಾ..ಕಾಫಿ..ಮಾಡಲಾ.." ಕೇಳಿದರು..
ನಾವು ಬೇಡ ..ಬೇಡ..ಅಂದೆವು...ಸ್ವಲ್ಪ ಹೊತ್ತು ಮಾತಿನಲ್ಲೆ ಕಳೆಯಿತು..

ನಾನು ನನ್ನಕ್ಕನ ಮುಖ ನೋಡಿದೆ..ಮನೆಯಲ್ಲಿ ಏನೂ ಸೇವಿಸದೆ ಬಂದಿದ್ದೇವು...

"ಸರಸಕ್ಕ ಏನು ಮಾಡ್ತಿರೊ ಮಾಡಿ..ಹೊಸ ಜೋಡಿಗಳು ಬ್ರಿಗೇಡ್ ರೋಡ್ ಕಡೆ ಹೋಗಿ ಬರ್ತಾರಂತೆ.." ಅಕ್ಕ ಸ್ವಲ್ಪ ಸಂಕೋಚ ಬಿಟ್ಟು ಹೇಳಿದರು...
" ಅಯ್ಯೊ ಎಲ್ಲ ರೆಡಿಯಾಗಿದೆ..ನಿಮ್ಮ ಬರುವದನ್ನೇ ಕಾಯುತ್ತಿದ್ದೆ.." ಅನ್ನುತ್ತ ಎದ್ದು ಒಳಗೆ ಹೋದರು..

ಸಂಗಡ ಅಕ್ಕ, ನನ್ನಾಕೆಯೂ ಹೀಂಬಾಲಿಸಿದರು...

ಸ್ವಲ್ಪ ಸಮಯದಲ್ಲಿ ಪ್ಲೇಟ್ ಗಳೊಂದಿಗೆ ಬಂದರು...
ದೊಡ್ಡ ಪ್ಲೇಟ್..ಅದರಲ್ಲಿ ಬಿಸಿಬೇಳೆ ಬಾತ್,
ಪಕ್ಕದಲ್ಲಿ ಹೋಳಿಗೆ.. ಅದಕ್ಕೆ... ಮೇಲಿಂದ ತುಪ್ಪ , ಸಕ್ಕರೆಪಾಕ...!
ವಾವ್..ಮನಸ್ಸಿಗೆ ಖುಷಿಯಾಯಿತು.. "ಇಷ್ಟೆಲ್ಲ ಬೇಡಾಗಿತ್ತು.. " ಎನ್ನುತ್ತ ಹೇಳುವಾಗಲೇ.. ಬಾಯಲ್ಲಿ ನೀರು ಬಂದಿತ್ತು.

ಹೊಸ ಮಡದಿಯ ಮುಖ ನೋಡಿದೆ..

ಕಣ್ಣಿಂದ ಏನೋ ಹೇಳುವಂತಿತ್ತು...

ಗೊತ್ತಾಗಲಿಲ್ಲ..ಅಕ್ಕನ ಮುಖನೋಡಿದೆ..
ಅಕ್ಕ ಕಣ್ಸನ್ನೇಯಿಂದ ತನ್ನ ಪ್ಲೇಟ್ ತೋರಿಸಿದಳು...

ಅವಳಿಗೆ ಬಿಸಿ ಬೇಳೆ ಬಾತ್ ಅಂದರೆ ಪಂಚ ಪ್ರಾಣ..ಪ್ಲೇಟಲ್ಲಿ ಸ್ವಲ್ಪವೇ ಇತ್ತು...!!
ಹೋಳಿಗೆ ಮೂರು ಹಾಕಿಸಿ ಕೊಂಡಿದ್ದಳು...ಹೋಳಿಗೆ ಅಕ್ಕಂಗೆ ಇಷ್ಟವೇ ಇಲ್ಲ.. !!

ನನಗೆ ಅರ್ಥವಾಗಲಿಲ್ಲ..
ಬಿಸಿಬೇಳೆ ಬಾತಿಗೆ ಸ್ಪೂನ್ ಹಾಕಿದೆ...
ಸ್ಪೂನ್ ಮೇಲೆ ಎತ್ತಿ ಬಾಯಿಗೆ ಹಾಕಿದೆ.... ಸ್ವಲ್ಪ ಲೋಳೆಯ ಥರ ಅನ್ನಿಸಿತು.....
ಇನ್ನೊಂದು ಸ್ಪೂನ್ ಬಾಯಿಗೆ ಹಾಕಿ ಕೊಂಡೆ..

ಹೌದು...ಸಿಂಬಳದ.. ಹಾಗೆ ಅನಿಸಿತು....

" ಇದು ಬಿಸಿ ಬೇಳೆ ಬಾಥ್ ಅಲ್ಲವೇ..?" ತುಂಬಾ ಆತಂಕದಿಂದ ಕೇಳಿದೆ..

" ಹೌದೊ ಮಾರಯಾ..ನಿನಗೆ ಪ್ರೀತಿ ಅಂತ... ಸಂಕೋಚ ಮಾಡಿಕೋಳ್ಳ ಬೇಡ..ಇನ್ನೊಂದು ಸಾರಿ ಹಾಕ್ಸೋಬೆಕು" ಅಂದಳು..ಸರಸತ್ತೆ.

ಇದೆಂಥದು.. ಬಿಸಿಬೇಳೆ ಬಾತ್... ??

ಬಾಯಿಗಿಟ್ಟೆ.. .ಒಂಥರಾ.. ..ಲೋಳೆ...ಲೋಳೇ.....ಏನೇನೋ ಆಯಿತು... !

ಆದರೆ..ಸುವಾಸನೆ..ಪರವಾಗಿಲ್ಲವಾಗಿತ್ತು....ಬಹಳ ಬಿಸಿ...

ಹಾಕಿದೆ..ಗಂಟಲಲ್ಲಿ ಇಳಿಯೋದೆ ಇಲ್ಲ.."ದೇವರೆ..ಇದೆಂಥ ಶಿಕ್ಷೆಯಪ್ಪ.." ಅಂದುಕೊಂಡೆ..


"ಪ್ರಕಾಶು...ಕತಾರ್ ದೇಶದಲ್ಲಿ ಇಂಥದ್ದೆಲ್ಲ ಸಿಗಲ್ಲಪ್ಪ..ನಿಧಾನವಾಗಿ ತಿನ್ನು..."
ಸರಸತ್ತೆ ಉಪಚಾರ ಮಾಡುತ್ತಿದ್ದಳು..

ಬಾವನನ್ನು ನೋಡಿದೆ..


ಬಾಯಿಗೆ ಹಾಕುತ್ತಿದ್ದರು......ನೀರು ಕುಡಿಉತ್ತಿದ್ದರು..!!

ಇದು.. ಗಂಟಲಿಗೆ ಇಳಿಸುವ ಉಪಾಯ..! ವಿನಾಯಕನೂ ಹಾಗೆ ಮಾಡುತ್ತಿದ್ದ...!
ಮನೆ ಯಜಮಾನನ್ನು ನೋಡಿದೆ...

ತನ್ನ ಪಾಡಿಗೆ ನಿರ್ವಿಕಾರವಾಗಿ ತಿನ್ನುತಿದ್ದರು...

ನಾನು ತಿನ್ನಲೇ ಬೇಕಾಗಿತ್ತು..!

ಹಾಗು ಹೀಗೂ.. ಮುಕ್ಕಾಲು ಭಾಗ ತಿನ್ನೊ ಹೊತ್ತಿಗೆ...
ಹೊಟ್ಟೆ ಇದು..ತನ್ನಿಂದ ಆಗಲ್ಲ..ಹೊರಗೆ ಕಳಿಸುತ್ತೇನೆ ಅನ್ನುವಂತಿತ್ತು...

ಇದು ಸಾಕು ಎಂದು ಹೋಳಿಗೆಗೆ ಕೈ ಹಚ್ಚಿದೆ....


ಮಡಿಸಿಟ್ಟ ಪದರು ಬಿಡಿಸಿದೆ..ಒಳಗೆ ಹತ್ತಿಯಂತೆ... ಬೂಸ್ಟ್ ಬಂದಿತ್ತು.. !


"ಅಯ್ಯೊ ದೇವರೆ..ಎಂಥಹ..ಧರ್ಮ ಸಂಕಟ...!! ಅದರ....ಸಕ್ಕರೆ ಪಾಕ ಖಾಲಿಯಾಗಿತ್ತು.....!!

ಅದನ್ನು ಬಿಸಿ ಬೇಳೆ ಬಾತಿಗೆ ಬಳಸಿ ಕೊಂಡಿದ್ದೆ... !!
ತಕ್ಷಣ ಒಂದು ಉಪಾಯ ಬಂತು...
ನನ್ನ ಪ್ಲೇಟ್ ಕೈ ಜಾರಿ ಕೆಳಗೆ ಬೀಳೀಸಿದೆ...!!

ಅಬ್ಭಾ ಗೆದ್ದೆ.....ಅನ್ನಿಸಿತು..!!


ಸರಸಕ್ಕ " ಸ್ವಲ್ಪ ಇರು ಪ್ರಕಾಶಾ....ಬೇರೆ ಪ್ಲೇಟ್....ತರುತ್ತೇನೆ.." ಅಂತ ಒಳಗೆ ಹೋಗಲು ಅನುವಾದಳು..

ಅಕ್ಕ ತಡೆದಳು..." ಸರಸಕ್ಕ..ಇವತ್ತು ನಾವೆಲ್ಲರೂ ಮಧಾನ್ಹ ಹೊಟೆಲ್ ಊಟ ಮಾಡಿದ್ದೇವೆ..ಯಾರಿಗೂ ಹಸಿವಿಲ್ಲ..ಯಾರಿಗೂ ಒತ್ತಾಯ ಬೇಡ.." ಎಂದು ಬಚಾವ್ ಮಾಡಿದಳು..
ಹಾಗೆ ಬಾವ , ವಿನಾಯಕರೂ ಅರ್ಧಕ್ಕಿಂತ ಬಿಟ್ಟು ಎದ್ದರು.. !!

"ಇರು.... ಕಾಫಿ.. ಮಾಡುತ್ತೇನೆ " ಅನ್ನುತ್ತ ಮತ್ತೆ ಆಕ್ರಮಣ ಮಾಡಲು ರೆಡಿ ಆದಳು.. ..

ನಾವೆಲ್ಲ ಬೇಡ ಬೇಡ ಅನ್ನುತ್ತ ತಪ್ಪಿಸಿ ಕೊಂಡು ಬರುವಷ್ಟರಲ್ಲಿ ಬಹಳ ಸಾಹಸ ಪಟ್ಟೆವು...!!

ಮನೆಗೆ ಬಂದವರು ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ...

ಹೊಟ್ಟೆಯಲ್ಲಿ ಒಂಥರ ಶಬ್ಧ..ಬೇಡವೆಂದರೂ ದೊಡ್ಡದಾಗಿ....ಬರುತ್ತಿತ್ತು... !

.ಟುಂಯಿ..ಟುಸ್ಕ್...ಕುಂಯ್ಯ್..ಅನ್ನುತ್ತಿತ್ತು..!!

ಬಾವ ಪರಿಚಯದ ಡಾಕ್ಟ್ರಿಗೆ ಫೋನ್ ಮಾಡಿದ...

ನಮ್ಮ ಹನಿ ಮೂನ್ ಪ್ರೊಗ್ರಾಮ್ ಟುಸ್ಸ್ ಆಯಿತು.. !
ಐದು ದಿವಸ ಹಾಸಿಗೆ ಬಿಟ್ಟು ಏಳಲಿಕ್ಕೆ ಆಗಲಿಲ್ಲ...!!


ಕೊನೆಗೆ ಬೇಲೂರು..ಹಳೆಬೀಡು.. ಶ್ರವಣಬೆಳ್ಗೊಳ ಮಾತ್ರ ಸಾಧ್ಯವಾಯಿತು.



ಈಗ ಶ್ರವಣಬೆಳಗೊಳ ಮಾತ್ರ ನೆನಪಿದೆ...!!

Monday, December 1, 2008

ನಂದಿ ಬೆಟ್ಟದಲ್ಲಿ...

ಮುಂಜಾನೆಯ..ಮಂಜಿನ..ಹನಿಗಳ..
ವಾಯು..ವಿಹಾರ..
ಬಹು..ಆಹ್ಲಾದಕರ....

ನಂದಿ ಬೆಟ್ಟದಲ್ಲಿ...

ರಾತ್ರಿ.. ರೂಮಿನಿಂದ..ಇಣುಕಿದಾಗ..ಹೀಗಿತ್ತು....
ಸುತ್ತ ಮುತ್ತಲೂ.....
ಮಂಜು..ಕತ್ತಲು...
ಇಲ್ಲೇ ಬಂತು ಸ್ವರ್ಗಾ
ಬಾ..ಓಡಾಡುವಾ.....

ನಂದಿ ಬೆಟ್ಟದಲ್ಲಿ...


ಹೊರಗೆ ತುಂಬಾ ಚಳಿ... ಒಳಗೆ ಬರಬಹುದಾ...?

ಮೂಡಲ..... ಮನೆಯಾ,,,,!!


ನಂದಿ ಬೆಟ್ಟಕ್ಕೆ ಹೋದಾಗ ನನ್ನ ಕ್ಯಾಮರದಲ್ಲಿ ಮುಡಿ ಬಂದ ಕೆಲವು ಫೋಟೋಗಳು...
ಚುಮು..ಚುಮು..ಬೆಳಕು... ಮಂಜಿನ ಹನಿಗಳು...
ರಾತ್ರಿ....ಕತ್ತಲು...ಬೆಳಕಿನ ಆಟ... ಕಂಡಿದ್ದು ಹೀಗೆ...

ಉಗ್ರಗಾಮಿಗಳ..ವಿರುದ್ಧ....!!???

ಮೊನ್ನೆ ನಡೆದ ಮುಂಬೈ ಘಟನೆಯಿಂದ ಮನಸ್ಸಿಗೆ ನೋವಾಗಿತ್ತು. ಹೀಗೆ ಆದಾಗಲೆಲ್ಲಾ ನಾನು ನನ್ನ ಚಿಕ್ಕಪ್ಪ ಅಥವಾ ನನ್ನ ಬಾವನ ಬಳಿ ಮಾತಾಡಿ ಮನಸ್ಸು ಹಗುರ ಮಾಡಿ ಕೊಳ್ಳುತ್ತೇನೆ

ನನ್ನ ಚಿಕ್ಕಪ್ಪ ಮತ್ತು ನನ್ನ ಬಾವ ಇಬ್ಬರೂ ಬಹಳ ಪ್ರಾಮಾಣಿಕ ವ್ಯಕ್ತಿಗಳು.....

ಚಿಕ್ಕಪ್ಪ ಅಧ್ಯಾಪಕ ವ್ರತ್ತಿಯಿಂದ ನಿವ್ರುತ್ತಿಯಾದರೂ ಆ ಹಳ್ಳಿಯಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ತೆಗೆಯ ಬೇಕೆಂದು ಒಡಾಟ, ಗುದ್ದಾಟ ಮಾಡಿ, ಈಗ ಅದರ ಗೌರವ ಮುಖ್ಯಾಧ್ಯಪಕರು.

ಅವರಿಗೆ ಹಣ ಮುಖ್ಯ ಅಲ್ಲ...
ಯಾರ್ಯಾರದ್ದೋ ಏನೇನೊ ಸಮಸ್ಯೆಯಲ್ಲ ತನ್ನ ಮೈಮೇಲೆ ಎಳೆದುಕೊಂಡು ಪರಿತಾಪ ಪಟ್ಟು ಕೊಂಡರೆ ಮಾತ್ರ ರಾತ್ರಿ ನಿದ್ದೆ ಬರುತ್ತೇನೊ..

ಇನ್ನು ನನ್ನ ಬಾವ ..ಅವರೂ ಕೂಡ ಹಾಗೆ..ರಾಷ್ಟ್ರಿಕ್ರತ ಬ್ಯಾಂಕ ವ್ಯವಸ್ಥಾಪಕರು..ಯಾರಿಗೂ ಇಲ್ಲಿಯವರೆಗೆ ಲಂಚಕೊಡದೆ ಬಾಳುವೆ ನಡೆಸಿದ್ದಾರೆ..!

ನನಗೆ ಬೇಸರ ವಾದಾಗಲೆಲ್ಲ ಇವರಿಬ್ಬರ ಸಂಗಡ ಮಾತನಾಡುತ್ತೇನೆ..ಮನಸ್ಸು ಹಗುರ ಮಾಡಿ ಕೊಳ್ಳಲು...

" ಹಲೋ ಬಾವಾ...ಎಲ್ಲಾ ಚೆನ್ನಾಗಿದ್ದೀರಾ..?"

ಹೌದಪಾ.. ನೀವೆಲ್ಲ ಚೆನ್ನಾಗಿದ್ದೀರಾ,,? ಮತ್ತೇನು ವಿಶೇಷ..? "

"ಮತ್ತೇನಿಲ್ಲ ಬಾವಾ.. ಮುಂಬೈ ವಿಚಾರ.. ಬಹಳ ಬೇಸರವಾಗಿದೆ.."

"ಸಂದಿಪ್.. ಅಂತ್ಯಕ್ರಿಯೆಲ್ಲಿ ಭಾಗವಹಿಸಿ ಶ್ರದ್ದಾಂಜಲಿ ಅರ್ಪಿಸಬೇಕಾಗಿತ್ತು..ಸ್ವಲ್ಪ ಸಮಾಧಾನ ವಾಗಿರುತ್ತಿತ್ತು.."

"ಅದಕ್ಕೆ ಹೋಗಿದ್ದೆ.. ತುಂಬಾ ಜನ..ಸಾವಿರಾರು ಗಾಡಿಗಳು ಬಂದಿದ್ದವು..ಅಲ್ಲೂ ಅವ್ಯವಸ್ಥೆ..!!!"

"ಯಾಕೆ ಏನಾಯ್ತು..?"

"ಬಹಳ ಜನರಿಗೆ ನೋಡಲಿಕ್ಕೆ ಆಗಲಿಲ್ಲ...!!. ಜನರೆಲ್ಲ ಶಾಪ ಹಾಕುತ್ತಿದ್ದರು.. !!."

"ಹೌದಾ.!!.?"

"ಅರಮನೆ ಮೈದಾನದಲ್ಲಿ ಈಡಬೇಕಾಗಿತ್ತು.. ! ಎಲ್ಲರೂ ನೋಡಬಹುದಾಗಿತ್ತು..! ಇತ್ಯಾದಿ.. ನೀನು ...ಏನೇ ಹೇಳು ಬಾವ ಜನ ಎಚ್ಚೆತ್ತು ಕೊಂಡಿದ್ದಾರೆ..! ಎಷ್ಟೆಲ್ಲಾ ಜನ..ಅವರಾಗಿಯೆ ಬಂದಿದ್ದವರು.! ಜನ ಬದಲಾವಣೆಯಾಗಿದ್ದಾರೆ.!! ಜನರಿಗೆ ದೇಶ ಭಕ್ತಿ ಜಾಸ್ತಿಯಾಗಿದೆ..!! ಈ ವ್ಯವಸ್ಟೆಯ ಬಗೆಗೆ ರೋಸಿ ಹೋಗಿದ್ದಾರೆ..!! " ... ನನಗೆ ಆವೇಶ ಬಂದಿತ್ತು..

"ಹೌದಾ..ಹಾಗಾದರೆ.. ನೀನೆ... ಸಂಘಟನೆ ಮಾಡು..!! ಬ್ರಷ್ಟಾಚಾರದ ವಿರುದ್ದ ಹೋರಾಟ ಮಾಡು..!!ಉಗ್ರಗಾಮಿಗಳ ವಿರುದ್ಧ ಆಂದೋಲನ ಶುರು ಮಾಡು..!!..ಎಷ್ಟು ಜನ ನಿನ್ನ ಹಿಂದೆ ಬರ್ತಾರೆ..ನೋಡು..??"

" ...... ಹ್ಹಾಂ...ನಾನಾ..?...!!??......" ನಾನು ಜರ್ರನೆ ಇಳಿದು ಹೋದೆ...

ನಾನು ಅವಕ್ಕಾದೆ..!!!

ನಾನು...??.. ಸಂಘಟನೆಯಾ....??? ನಾನೇನು..??..
ನನ್ನ ಬಿಸಿನೆಸ್ಸ್ ಏನು..?
ನನ್ನ ವ್ಯವಹಾರದ ಕಥೆಯೇನು..? ???

" ಬಾವಾ .....ಅಕ್ಕ ಚೆನ್ನಾಗಿದ್ದಾರಾ...? ...ಬೆಂಗಳೂರಿಗೆ ಯಾವಾಗ ಬರ್ತೀರಿ..? ಆಯಿ ..ಚೆನ್ನಾಗಿದ್ದಾಳಾ..? "

ಬಾವನಿಗೆ ಅರ್ಥವಾಗಿರಬೇಕು... ...

.. ಮತ್ತೆ ಚಿಕ್ಕಪ್ಪನಿಗೂ ಫೋನ್ ಮಾಡುವ ಧೈರ್ಯವೂ..ನನಗೆ... ಬರಲಿಲ್ಲ......!!.



Thursday, November 27, 2008

ಹೀಗೊಂದು..ತೀರದ ಆಸೆ...

ಮುಕ್ತಿ ಬೇಡ ದೇವರೆ...
ಪರಕಾಯ ಪ್ರವೇಶ ವಿದ್ಯೆ ತಿಳಿಸು..
ಜನ್ಮದಲಿ ತೀರದ ಅತ್ರಪ್ತಿ, ಕುತೂಹಲ....
ತೀರದ ಆಸೆಗಳಿವೆ...

ಸರಕಾರಿ ಸಂಬಳ ಸೌಲಭ್ಯ ಪಡೆದರೂ..
ಲಂಚದ ಸುಲಿಗೆ ಮಾಡಿ...
ಜನ್ಮ ಸಾರ್ಥಕದ ಅಧಿಕಾರಿಯ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...

ಧರ್ಮದ ಹೆಸರಲಿ..ಮುಗ್ಧ ಜನರ...
ಹತ್ಯೆ, ರಕ್ತದ ಓಕುಳಿಯಾಟವನಾಡಿ..
ಶಹೀದನಾಗುವ ಮತಾಂಧ ಉಗ್ರನ ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...


ಬಡತನ, ದಲಿತತನ ಶೋಷಣೆ ಮಾಡಿ...
ಹಣದ , ಸ್ವರ್ಗದ ಆಮಿಷ ತೋರಿಸಿ...
ತಮ್ಮ ದೋಷ ಮರೆಮಾಚುವ...
ಮತಾಂತರದ ಧರ್ಮಗುರುವಿನ..
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ....


ರಾಮನ ಆಣೆಮಾಡಿ, ಮತ ಪಡೆದು....
ಗಣಿ ಹಣಕ್ಕೆ ಮಾರಿಕೊಂಡು...
ಅಧಿಕಾರ, ಹಣದ ತೆವಲಿಗೆ ಬಿದ್ದಮಂತ್ರಿಗಳ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...


ದೇಶವೆಲ್ಲ ಬೆಂಕಿ ಹೊತ್ತಿ ಉರಿಯುತ್ತಿದ್ದರೂ...

ಆಸ್ತಿ ಮಾಡಿ ,ಮತ ಬ್ಯಾಂಕ ಆಸೆ, ಅಧಿಕಾರ ಮಾಡುವ....

ಜಾತ್ಯಾತೀತ ರಾಜಕಾರಣೀಯ...

ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...

(ಎಂದೂ ಕವನ ಬರೆಯದ ನಾನು , ಇಂದು ಮುಂಬೈ ನ್ಯೂಸ್ ನೋಡಿ..

ಮನದ ತುಮಲ ಹೊರಹಾಕಿದ್ದೇನೆ,,,

ತಪ್ಪಿದ್ದರೆ.. ಕ್ಷಮಿಸಿ )

Tuesday, November 25, 2008

ಹೀಗೂ....ಒಂದು..ಕಾಲವಿತ್ತು...!!!


ಕೆಂಪಜ್ಜಿ ನನ್ನಜ್ಜನ ಅಕ್ಕ. ಬಾಲ್ಯ ವಿಧವೆ. ಮದುವೆಯ ದಿವಸವೆ ಗಂಡನಿಗೆ ಹಾವು ಕಚ್ಚಿ, ತವರು ಮನೆ ಸೇರಿದಳು. ಕೆಂಪು ಸೀರೆ ಉಡುತ್ತಿದ್ದಳು.. ನಮಗೆಲ್ಲ "ಕೆಂಪಜ್ಜಿ" ಯಾಗಿದ್ದಳು.
ನಮ್ಮನೆಯ ಆಧಾರ ಸ್ಥಂಭ ಆ ಕೆಂಪಜ್ಜಿಗೆ ನನ್ನಜ್ಜ ಬಹಳ ಗೌರವ ಕೊಡುತಿದ್ದರು.
ನನ್ನ ಚಿಕ್ಕಪ್ಪ ಹೊಸ ಮನೆ ಕಟ್ಟಿದಾಗ ಕೆಂಪಜ್ಜಿ ಫೋಟೊ ದೇವರ ಪೀಠದಲ್ಲಿಟ್ಟಿದ್ದ.

ನಾವೆಲ್ಲ ಇಂದು ಕಾರಲ್ಲಿ,,, ವಿದೇಶದಲ್ಲಿ,, ಓಡಾಡುತ್ತಿದ್ದೇವೆ. ಇದನ್ನು ನೋಡಿ ಆನಂದ ಪಡಲು ಆ ಜೀವ ಇರಬೇಕಾಗಿತ್ತು...

ಆಗ ನಮ್ಮದು ದೊಡ್ಡ ಕುಟುಂಬ. ಮನೆ ತುಂಬಾ ಮಕ್ಕಳು. ಯಾವ ತಾಯಿಂದಿರಿಗೂ ಮಕ್ಕಳನ್ನು ನೋಡಿಕೊಳ್ಳಲು ಸಮಯ ಇರುತ್ತಿರಲಿಲ್ಲ. ಊಟ, ತಿಂಡಿ, ಸ್ನಾನ ಎಲ್ಲ ಕೆಂಪಜ್ಜಿ ಮಾಡಿಸುತ್ತಿದ್ದಳು.

ನಮಗೆ ಕೆಂಪಜ್ಜಿ ಬಹಳ ಅಚ್ಚುಮೆಚ್ಚು. ಅವಳ ಕಥೆ ಕೇಳಲು ಮುಗಿದು ಬೀಳುತ್ತಿದ್ದೇವು.

ನನಗೆ ಜಗಜಿತ್ ಸಿಂಗರ ಘಝಲ್ ನೆನಪಾಗುತ್ತಿದೆ. " ವೊ ಕಾಗಜ್ ಕಿ ಕಶ್ತಿ..ಬಾರಿಶ್ ಕಾ ಪಾನಿ..."

ಮಳೆಗಾಲ ದಿನಗಳು.. ಒದ್ದೆಯಾದ ಕಂಬಳಿ ಒಣಗಿಸಲು "ಹೊಡಚಲು" ಹಾಕುತ್ತಿದ್ದರು.

ಕಟ್ಟಿಗೆ ಬೆಂಕಿ.. ಅದರ ಮೇಲೆ ಚಪ್ಪರದಲ್ಲಿ ಕಂಬಳಿ...ಹೊಗೆ... ಸುತ್ತಲೂ ನಾವು ಐದಾರು ಮಕ್ಕಳು..

ಕೆಂಪಜ್ಜಿ ಕಥೆ.. ಹೊರಗೆ ಮುಸಲಧಾರೆ ಮಳೆ..

"ಕೆಂಪಜ್ಜಿ..ಕೆಂಪಜ್ಜಿ.. ಕಥೆ ಹೇಳು..."

"ಸ್ವಲ್ಪ ಇರ್ರೋ... ಹಲಸಿನ ಬೇಳೆ ಸುಡೋಣ" ಅನ್ನುತ್ತ ಬೇಳೆ ಸುಡಲು ಶುರು ಮಾಡುತ್ತಿದಳು

"ನಾನು ಸೈಕಲ್ಲು ಮೊದಲ ಬಾರಿ ನೋಡಿದ ವಿಷಯ ಹೇಳಲಾ..?" ಕೇಳಿದಳು.

ನಮಗೇನು..?. ಕೆಂಪಜ್ಜಿಯ ಮೋಡಿಗೆ ಒಳಗಾಗಿದ್ದೆವು..ಸಂಗಡ ಬಿಸಿ ಬಿಸಿಯಾಗಿ ಸುಟ್ಟಿದ ಹಲಸಿನ ಬೇಳೆ..!!
ಶುರುವಾಯಿತು..ಕೆಂಪಜ್ಜಿಯ... ಓಘ....

"ಆಗೆಲ್ಲಾ ರೆಡಿಯೊ ಕೂಡ ಅಪರೂಪ, ಪಟೆಲಜ್ಜನ ಮನೆಗೆ ಮೊದಲ ಬಾರಿಗೆ ರೆಡಿಯೋ ನೋಡಿ ನಾವೆಲ್ಲಾ ದಂಗಾಗಿ ಬಿಟ್ಟಿದ್ದೇವು.. ಪಟೆಲಜ್ಜ ಪೇಟ್ಟಿಗೆ ಥರ ಇದ್ದಿದ್ದ ಬೊಕ್ಸ್ ತಂದಿದ್ದ.. ಅದನ್ನು ಪಟ್ಟಣದಿಂದ ಬಂದಿದ್ದ ಒಬ್ಬಾತ ಸೆಲ್ಲ್ ಹಾಕಿ ಯಾವುದೊ ಬಿರಡೇ ತಿರುಗಿಸಿದ್ದ..
ಎಂತದೊ ಸುಡುಗಾಡು ಹಾಡು..ಹಿಂದಿ ಹಾಡಂತೆ.. ಬಂದಿತ್ತು..ನಮಗೆ ಅರ್ಥವಾಗದ ಭಾಷೆ.."

" ಕೆಂಪಜ್ಜಿ... ಸೈಕಲ್ಲು..ಕಥೆ..." ಚಂದಾವರದ "ಗಪ್ಪು" ನೆನಪಿಸಿದ..

" ಹೌದಲ್ಲಾ. ಮರೆತೇ ಬಿಟ್ಟಿದ್ದೆ....
ಪಟೆಲಜ್ಜನ ಮನೆಗೆ ಇಂಗ್ಲೀಷ್ ಜನ ಬರುತ್ತಿದ್ದರು. ಒಂದು ದಿನ ಅವರು ಹೋದ ಮೇಲೆ ಪಟೆಲಜ್ಜ
ಊರವರೆಲ್ಲರನ್ನೂ ಕರೆದು " ನಾಡಿದ್ದು ಕಾನಸೂರಿಗೆ ಸೈಕಲ್ಲು ಬರ್ತದೆ.. ಬೆಳಿಗ್ಗೆ ಆರು ಗಂಟೆಗೆ.. ನೋಡೊವರೆಲ್ಲ ಬರಬಹುದು.." ಅಂದ.

ನಮ್ಮನೆ ರಾಮಕ್ರಷ್ಣ( ನನ್ನ ಅಜ್ಜ) " ಅದೆಲ್ಲ..ಎಂತಾ ನೋಡದು..? ಸೈಕಲ್ಲಂತೆ.?
ಎಂಥಾ ಪ್ರಯೋಜನ..?. ಎರಡುಗಾಲಿ ಇರುತ್ತಂತೆ..ನೋಡಿ ಎಂತ ಮಾಡುವದು..?
ಅದ್ರಿಂದ ಹೊಟ್ಟೆ ತುಂಬುತ್ತಾ? ಯಾರೂ ಹೋಗುವದು ಬೇಡ" ಎಂದು ಫರ್ಮಾನು ಹೊರಡಿಸಿದ.

ನನಗೆ ಕೆಟ್ಟ ಕುತೂಹಲ..." ಎಂಥದು ಇದು ಸೈಕಲ್ಲು..? ಎರಡು ಗಾಲಿ ಮೇಲೆ ಮನುಷ್ಯ ಹೋಗಬಹುದಂತೆ..ಜೋರಾಗಿ ಹೋಗುತ್ತದಂತೆ..!.!!"

ರಾತ್ರಿಯಿಡಿ ನಿದ್ದೆಯಿಲ್ಲ.. ಬೆಳಗಾಗುತ್ತಿದ್ದಂತೆ ಗಟ್ಟಿ ಮನಸ್ಸು ಮಾಡಿಕೊಂಡೆ.
ಪಕ್ಕದ ಮನೆ ಭಾಗಕ್ಕ, ಅಣ್ಣಣ್ಣ ಇಬ್ರೂ " ನಾವು ಸೈಕಲ್ಲು ನೋಡಲಿಕ್ಕೆ ಕಾನಸೂರಿಗೆ ಹೋಗ್ತೇವೆ" ಅಂದಿದ್ರು.

ನಾನು ರಾಮಕ್ರಷ್ಣನಿಗೆ ಬೆಣ್ಣೆ ಹೊಸೆದೆ. "ತುಂಬಾ ದೂರ ಆಗಿದ್ರೆ ಹೊಗ್ತಿರಲಿಲ್ಲ..ಇಲ್ಲೇ ಕಾನಸೂರು , ಎಲ್ಲರ ಸಂಗಡ ಹೊಗಿ ಬರ್ತೇನೆ.." ದುಡ್ಡು ಎಂತದೂ ಬೇಡ ಮಾರಯಾ" ಅಂದೆ.

ಬಹಳ ಕಷ್ಟಪಟ್ಟು ..ಅಂತೂ ಅವನನನ್ನು ಒಪ್ಪಿಸಿದೆ..

ಊರಲ್ಲಿ ಸಂಭ್ರಮ...ಎಲ್ಲರೂ ಎಲ್ಲರನ್ನೂ ಕೇಳುವದು ಒಂದೆ ಪ್ರಶ್ನೆ.." ನೀನು ಸೈಕಲ್ಲು ನೋಡಲೆ ಬರಲ್ವಾ..?"

ಮರು ದಿನ ಬೆಳಿಗ್ಗೆ ನಾಲ್ಕು ಗಂಟೆಗ ಏಳಬೇಕು.. ತಿಂಡಿ ರೆಡಿ ಮಾಡ ಬೇಕು..

" ನಾಲ್ಕು ಗಂಟೆಗೆ ಹೇಗೆ ಏಳುವದು..? "

"ಕೆಂಪಜ್ಜಿ ..ಅಲಾರಮ್ ಕಿವಿ ತಿರುಪಿದ್ರೆ..ಅಯಿತಪ್ಪಾ..?" ರೆಖಾ ಮಧ್ಯದಲ್ಲಿ ಬಾಯಿ ಹಾಕಿದಳು..

"ಆಗೆಲ್ಲ.. ಅಲಾರಮ್ ಎಂತದೂ ಇರ್ಲಿಲ್ಲ.
ಬೇಳ್ಳನಾಯ್ಕನ ಕೋಳಿ ನಾಲ್ಕು ಗಂಟೆಗೆ ಕೂಗ್ತದೆ ಅಂತ ಪಟೇಲಜ್ಜನಿಗೆ ಗೊತ್ತಿತ್ತು.
ಬೆಳ್ಳನಾಯ್ಕಂಗೆ ಪಟೆಲಜ್ಜ ಕರೆಸಿ ಮಾತನಾಡಿದ." ನಾಳೆ ಬೆಳಿಗ್ಗೆ ನಿನ್ನ ಕೋಳಿ ಕೂಗಿದ ಕೂಡ್ಲೆ ನಮ್ಮೂರಿಗೆ ಬಂದು ಎಲ್ಲರನ್ನೂ ಎಬ್ಬಿಸು.."

ಪಟೆಲಜ್ಜ ಅಂದ್ರೆ ಎಲ್ಲರಿಗೂ ಗೌರವ.. ಅವನ ಮಾತಿಗೆ ಯಾರೂ "ಇಲ್ಲ" ಅನ್ನುತ್ತಿರಲಿಲ್ಲ.

ರಾತ್ರಿಯಾಯಿತು. ಜಲ್ದಿ ಊಟಮಾಡಿ ಮಲಗಬೇಕೆಂದು ಅಪ್ಪಣೆಯಾಗಿತ್ತು.
ನನಗೊ..ರಾತ್ರಿಯಿಡಿ ನಿದ್ದೇನೆ ಬರಲಿಲ್ಲ. ತಲೆಯಲೆಲ್ಲ ಇದೆ ಯೋಚನೆ.. "ಹೇಗಿರಬಹುದು..ಈ ಸೈಕಲ್ಲು..? ಎತ್ತಿನಗಾಡಿ ಥರ ಅಲ್ಲಂತೆ..ಇನ್ನು ಹೇಗಿರುತ್ತದೆ?"
ಹಾಸಿಗೆಯಲ್ಲಿ ಆಕಡೆ ಈಕಡೆ ಹೊರಳಾಡಿದೆ..
ಪಕ್ಕದ ಮನೆ ಅಡಿಗೆ ಮನೆಯಲ್ಲಿ ಕಣ ಪಣ ಸದ್ದು. ಕೇಳಿತು...!
ಭಾಗಕ್ಕ ಆಗಲೆ ಎದ್ದು ಬಿಟ್ಟಿದ್ದಾಳೆ..!!ನಾನೂ ಎದ್ದೆ. ನೀರು ಕಾಯಿಸಿ ಸ್ನಾನ ಮಾಡಿದೆ.

ಬೆಳ್ಳನಾಯ್ಕ ಬರುವಷ್ಟರಲ್ಲಿ ಇಡಿ ಊರಿನ ತಿಂಡಿ ಮುಗಿದಿತ್ತು..!!

ಪಟೆಲಜ್ಜನೂ ರೆಡಿ ಆದ. ಅವನಿಗೆ ಎತ್ತಿನ ಗಾಡಿ ತಯ್ಯಾರಾಗಿತ್ತು..
ಆಗ ಅಜಮಾಸು ಬೆಳಗಿನ ಜಾವ ನಾಲ್ಕು ಗಂಟೆ..

" ಆಗ ಬ್ಯಾಟರಿ(ಟಾರ್ಚ್) ಇರ್ಲಿಲ್ಲ.."
ಹಿಂದಿನ ದಿವಸವೇ ಅಡಿಕೆ ಮರದ ದಬ್ಬೆಯನ್ನು ಸೀಳಿ , ಮಾರುದ್ದಕ್ಕೆ ತುಂಡು ಮಾಡಿ.."ಸೂಡಿ" ತಯಾರು ಮಾಡಿದ್ದೆವು...ಅದಕ್ಕೆ ಬೆಂಕಿ ಹಚ್ಚಿಕೊಡೆವು. ಅದು ದಾರಿ ದೀಪವಾಯಿತು..

ರಾಮಕ್ರಷ್ಣನಿಗೆ.. ಹೇಳಿ ಹೊರಡೋಣ ಅಂದು ಕೊಂಡೆ..
ಎಲ್ಲಿ ಕಾಣಿಸ್ತಾನೆ ಇಲ್ಲಾ... ಮುಂದೆ ನೋಡ್ತಿನಿ.. ಬಿಳಿ ಕಚ್ಚೆ ಪಂಚೆ ಹಾಕಿ , ಕಿಸಿ..ಕಿಸಿ..ನಗುತ್ತಿದ್ದ..
ನನಗಿಂತ ಮೋದಲೆ ರೆಡಿ ಆಗಿದ್ದ.. !!

ಎಲ್ಲರೂ ಸಡಗರದಿಂದ ಹೊರಟೆವು..
ಕಾನಸೂರು..ಮೂರು ಮೈಲು.. ದೂರವಾಗಿ ಅನಿಸಲೆ ಇಲ್ಲ..ಕಾನಸೂರಿಗೆ ಬಂದು ನೋಡಿದರೆ.. ಜನಸಾಗರವೆ ಸೇರಿತ್ತು...
ಅಕ್ಕಪಕ್ಕದ ಊರಿಂದ ನಮಗಿಂತ ಮೊದಲೆ ಜಾಗ ಹಿಡಿದು ಕುಳಿತಿದ್ದರು.

ಎಲ್ಲಿ ನೋಡಿದರು ಗೌಜಿ..ಗದ್ದಲ.
ಒಂದು ತರಹದ ಕುತೂಹಲ.. ಕಾತುರ..
ಸಮಯ ಹೊಗ್ತಾನೆ ಇರಲಿಲ್ಲ..
ನಮ್ಮೂರಿನ ಜನ ಒಂದುಕಡೆ ಕಂಬಳಿ ಹಾಸಿ ರಸ್ತೆ ಪಕ್ಕದಲ್ಲಿ ಕುಳಿತು ಕೊಂಡಿದ್ದೆವು.
ಪಟೆಲಜ್ಜನಿಗೆ ಪ್ರತ್ಯೇಕ ಖುರ್ಚಿ ಎತ್ತಿನ ಗಾಡಿಯಿಂದ ಇಳಿಸಲಾಯಿತು..

ಎಲ್ಲರೂ ಆರು ಘಂಟೆ ಆಗುವದನ್ನೆ ಎದುರು ನೋಡುತ್ತಿದ್ದೆವು..

ಯಾರೊ ಕೂಗಿದರು

" ಬಂತು..ಬಂತು.. ಸೈಕಲ್ಲು..!!!??"

ನಾವು ನೋಡುತ್ತ..ನೋಡುತ್ತ ಇರುವ ಹಾಗೆ.. ಸೈಕಲ್ಲು ಬಂತು..

" ಮುಂದೆ ಒಂದು ಗಾಲಿ...!!. ಹಿಂದೆ ಒಂದು ಗಾಲಿ..!!."

ಮೇಲೆ ಒಬ್ಬ ಕುಳಿತ್ತಿದ್ದ...!
ಇದೇನಿದು ....ನೋಡುವಷ್ಟರಲ್ಲಿ.. ಟುಂಯ್ಯನೆ..ನಡೆದು ಬಿಟ್ಟಿದ್ದ...!!

"ಮುಂದೇನಾಯ್ತು..ಕೆಂಪಜ್ಜಿ..?" "ಶಾರಿ" ಬಾಯಿಕಳೆದು ಕೇಳಿದಳು..

"ಎಂತದೂ ಇಲ್ಲ..ನಾವೆಲ್ಲ ಆಶ್ಚರ್ಯದಿಂದ ಮೂಕರಾಗಿದ್ದೇವು. ಕಣ್ಣಾರೆ ನೋಡಿದ್ದರಿಂದ ನಂಬಲೆ ಬೇಕಾಗಿತ್ತು...
ಎಂಥಹ ಅದ್ಭುತ ದ್ರಶ್ಯ ಅದು... ನನ್ನ ಜೀವ ಇರುತನಕ ಮರೆಯಲಿಕ್ಕೆ.. ಅಗಲ್ಲಪ್ಪ..!!"

" ಎಲ್ಲರೂ ಊಟಕ್ಕೆ ಬನ್ನಿ" ಆಯಿ ಕೂಗಿದಳು..

ನಮಗೆ ಏಳಲು ಮನಸ್ಸಿರಲಿಲ್ಲ......
ಇನ್ನೂ ಕೆಂಪಜ್ಜಿಯ ಕಥೆಯ ಗುಂಗಿನಿಂದ ಹೋರಗೆ ಬಂದಿರಲಿಲ್ಲ....

Sunday, November 23, 2008

ಪಾಪಾ...ಕೆಹತೆ..ಹೇ...!!

ರ್ರಿ...ಹೋಗ್ರಿ... ಪಾಪಾ ಮೊದಲು.. ಚೆನ್ನಾಗಿ ಓದು..
ಆಮೇಲೆ ನೋಡೋಣಾ...ಅಂತಾರೆ...!!

ಪಾಪಾ...ಕೆಹತೆ..ಹೇ..!!!

ಏನು...ಆಗಲೀ...?
ಹ್ರತಿಕ್ ರೋಶನ್...?

ಪಾಪಾ ..ಕೆಹತೆ ...ಹೆ......!!!.

ಮುಂದೇನು ಮಾಡಲಿ...??
ಸುಪರ್..ಮಾಡೆಲ್.... ಆಗಲಾ...??

Wednesday, November 19, 2008

ಏನಪ್ಪಾ.. ಬಲಗಡೆ,,,ಎಡಗಡೆ,, ಗೊತ್ತಾಗಕಿಲ್ವಾ..!!??

ಒಮ್ಮೆ ನನಗೂ ನನ್ನ ಗೆಳೆಯ ಸತ್ಯನಾರಾಯಣನಿಗೂ ಕ್ರಷಿ ಜಮೀನು ಖರೀದಿ ಮಾಡಬೇಕು
ಎನ್ನುವ ವಿಚಾರ ತಲೆಗೆ ಹೊಕ್ಕಿತು.

ನಾವು ಇನ್ನು ಎಷ್ಟು ವರ್ಷ ಈ ಸಿಮೆಂಟು ಮರಳು ಅಂತ ಕೆಲಸ ಮಾಡಬಹುದು?
ಅದಕ್ಕೆ ಈಗಿಂದಲೆ ಜಮೀನು ಖರಿದಿ ಮಾಡಿ ತೆಂಗು, ಮಾವು ಎಲ್ಲ ಹಾಕಿದರೆ ಇನ್ನು ಹತ್ತು ವರ್ಷಕ್ಕೆ
ನಾವು ಅಲ್ಲಿ ಹೋಗಿ ಇರಬಹುದು ಎನ್ನುವ ಭಾರಿ ಮುಂದಾಲೋಚನೆ ಬಂತು..

ಒಂದು ಫಾರ್ಮ್ ಹೌಸ ತರಹ ಕಟ್ಟಿಸಿ... ಎಲ್ಲ ಸೌಲಭ್ಯ ಇಟ್ಟುಕೊಂಡು.... ಸ್ವಿಮಿಂಗ್ ಫೂಲ್....
ಇತ್ಯಾದಿ....ಇತ್ಯಾದಿ...
ಹೌದಲ್ಲ ..ಒಳ್ಳೆಯ ವಿಚಾರವೆ.. ಸರಿ,

ಬೆಂಗಳೂರಿನ ಆಸುಪಾಸು ಹುಡುಕಿದೆವು. ರಿಯಲ್ ಎಸ್ಟೇಟ್ ಏಜಂಟ್ ಗಳಿಗೆ ಹೇಳಿದೆವು.
ಅವರು ಎಲ್ಲೆಲ್ಲೊ ಜಮೀನು ತೋರಿಸಿದರು.. ಸಮಧಾನ ಆಗಲಿಲ್ಲ.

ರಿಯಲ್ ಎಸ್ಟೇಟ್ ಏಜಂಟರಗಳು ಗೊತ್ತಲ್ಲ..ಅವರೊ..ಅವರ ರೇಟುಗಳೊ..ಒಂದೊಕ್ಕೊಂದು ತತ್ಸಂಬಧವಿರೊದಿಲ್ಲ.

"ಈ ಏಜಂಟರ ಸಹವಾಸ ಬೇಡ ಮಾರಾಯ..ನಾವೇ ಹಳ್ಳಿಗೆ ಹೋಗಿ ಕೇಳಿ.. ಹುಡುಕೋಣ" ಎಂದೆ.

ಸತ್ಯ ಓಕೆ ಅಂದ. ಸತ್ಯನಾರಾಯಣ ನನ್ನ ಬಿಸಿನೆಸ್ ನಲ್ಲಿ ನನಗೆ ಹೆಂಡತಿ, ಗೆಳೆಯ ಎಲ್ಲಾ. ಅವನ ಸಲಹೆ
ಇಲ್ಲದೆ ನಾನು ಯಾವುದೆ ನಿರ್ಧಾರ ತೆಗೆದು ಕೊಳ್ಳುವದಿಲ್ಲ.

ಮಾಗಡಿ ರೋಡನಲ್ಲಿರುಅವ ತಾವರೆ ಕೆರೆ ಹಳ್ಳಿಗೆ ಹೋದೆವು.

ಒಂದು ಮನೆಯ ಎದುರಿನ ಕಟ್ಟೆಯ ಮೇಲೆ ವಯಸ್ಸಾದ ಹಿರಿಯರೊಬ್ಬರು ಎಲೆ ಅಡಿಕೆ ಜಗಿಯುತ್ತ
ಕುಳಿತಿದ್ದರು..

"ನಮಸ್ಕಾರ ಯಜಮಾನ್ರೆ.....ಈ ..ಊರಲ್ಲಿ ಯವುದದರೂ ಕ್ರಶಿ ಜಮೀನು ಮಾರಾಟಕ್ಕೆ ಇದೆಯಾ?"
ಸ್ವಲ್ಪ.. ಜಾಸ್ತಿ ವಿನಯದಿಂದಲೆ ಕೇಳಿದೆ.

" ಎಲ್ಲಾ ಹಳ್ಳಿ ಬಿಟ್ಟು ಪಟ್ಣ ಅಂತಿರುವಾಗ ನಿಮಗ್ಯಾಕಪ್ಪ ಈ ಉಸಾಬರಿ..? ಅಂದರು ಆ ಅಜ್ಜ.

" ನಮಗೆ ಬೇಕು ತಾತ, ಮಾರಾಟಕ್ಕೆ ಅಲ್ಲ" ಅಂದೆ.

" ಇದೆ.. ನನ್ನ ಅಣ್ಣನ ಮಕ್ಳದ್ದು..ಈಗ ಕ್ರಷಿ ಮಾಡದೆ ಜಡ್ಡು ಬೆಳೆದಿದೆ" ಅಂದರು ತುಸು ಬೇಸರದಿಂದ..

" ದಯವಿಟ್ಟು ತೋರ್ಸಿ, ಕಾರಲ್ಲೇ ಬನ್ನಿ, ಆಮೇಲೆ ನಿಮಗೆ ಇಲ್ಲೇ ಬಿಟ್ಟು ಕೊಡ್ತೇವೆ" ಅಂದೆ.

ಸರಿ ಅಂದರು ಆ ಯಜಮಾನ್ರು. ದೊಡ್ಡ ದೊಗಲೆ ಚಡ್ಡಿ.. ಅದ್ನಾನ ಸಮಿ ಸೈಜಿನ ಬನಿಯನ್ನು.. ..
ಕಾರನಲ್ಲಿ ಬಹಳ ಗತ್ತಿನಲ್ಲೆ ಕುಳಿತರು.

" ನಂಗೆ ಈ ಕಾರೆಲ್ಲ ಹೊಸತಲ್ಲ, ನಮ್ಮ ಹೆಂಡಿರನ್ನು ನೋಡ್ಲಿಕ್ಕೆ ಹೋಗುವಾಗ.. ಕಾರ್ನಲ್ಲೆ ಹೋಗಿದ್ದೆ"
ಅಜ್ಜ ಶುರು ಹಚ್ಚಿಕೊಂಡರು...

ಕಾರು ಬಿಡುತ್ತಿದ್ದ ನನಗೆ ಮುಂದೆ ದಾರಿ ಗೊತ್ತಾಗಲಿಲ್ಲ.

" ಯಜಮಾನ್ರೆ ಮುಂದೆ ಎಡಕ್ಕೊ ಬಲಕ್ಕೊ..?" ಕೇಳಿದೆ

" ಬಲಕ್ಕೆ... ರೈಟು.. ತಿರಕ್ಕಳಪ್ಪಾ.." ಅಂದರು ಗತ್ತಿನ ಇಂಗ್ಲೀಷ್ನಲ್ಲಿ.

ನಾನು ಬಲಕ್ಕೆ ತಿರುಗಿಸಿದೆ...

" ಈ ಕಡೇ ಅಲ್ಲಪ್ಪ.. ಈ ಕಡೆ ಬಲಕ್ಕೆ" ಅಂತ ಎಡಗಡೆ ತೋರಿಸಿದರು..

ನಾನು ಎಡಗಡೆ ತಿರುಗಿಸಿದೆ.

ಸ್ವಲ್ಪ ಮುಂದೆ ಹೋದೆ... ಮತ್ತೆ ಮುಂದೆ ದಾರಿ ಗೊತ್ತಾಗಲಿಲ್ಲ.

" ಯಜಮಾನ್ರೆ.. ಈಗ ಹೇಗೆ?" ...ಕೇಳಿದೆ.

" ಎಡಗಡೆ.. ಲೆಫ್ಟ್ ತಕಳಪ್ಪ.." ಅಂದರು.

ನಾನು ಎಡಗಡೆ ತಿರುಗಿಸಿದೆ...

" ಏನಪ್ಪಾ .. ಎಡ ಬಲ ಗೊತ್ತಾಗಕಿಲ್ವಾ..? ಈ ಕಡೆ..ಎಡಕ್ಕೆ " ಎಂದು ಬಲಕ್ಕೆ ಕೈ ತೋರಿಸಿದರು..!!!??

ನಾನು ಕನ್ಫ್ಯೂಸ್ ಆದೆ.. ಅವರು ಹೇಳಿದ ಹಾಗೆ ಮಾಡಿದೆ.

ಸ್ವಲ್ಪ ಮುಂದೆ ಮತ್ತೆ ಗೊತ್ತಾಗಲಿಲ್ಲ..

..... ಸ್ವಲ್ಪ ಅಳುಕಿನಿಂದಲೆ... " ಈಗ ಯಾವಕಡೇ ..ಯಜಮಾನ್ರೆ..?" ಕೇಳಿದೆ..

"ಸೀದಾ ಮುಂದಕ್ಕೆ ಹೋಗಪ್ಪಾ.. " ಅಂದರು.

" ಯಜಮಾನ್ರೆ.. ಸೀದಾ ಮುಂದುಗಡೆ ಮುಂದಕ್ಕೊ.. ಹಿಂದಗಡೆ ಮುಂದಕ್ಕೊ...!!? ಕೇಳಿದೆ..

ನಗುವೆ ಬರದ ಸತ್ಯ ನಿಗೆ ನಗು ತಡೆಯಲಾಗಲಿಲ್ಲ...

ಆ ನಗು ಹೇಗಿತ್ತೆಂದರೆ ಮಾಲ್ಲಿಕಾರ್ಜುನ ಖರ್ಗೆ, ಯಡ್ಯೂರಪ್ಪ ಮತ್ತು ದೇವೇಗೌಡ್ರು
ಎಲ್ಲಾ ಸೇರಿ ನಕ್ಕಾಂಗೆ ಇತ್ತು...!!!

Sunday, November 16, 2008

ನನಗೆ ಫೋಸು ಕೊಡಲು ಬರಲ್ಲಾ..!!



ಈ ಮಾಮಾ ನನ್ನ ಫೋಟೋ ತೆಗಿತಾನಂತೆ.. ನಂಗೆ ..ನಾಚಿಕೆ...!!