Sunday, September 27, 2009

ಹೇಳ ಬಾರದೆಂದರೂ.. ಬಾಯಲ್ಲಿ ಬರುತ್ತಿತ್ತು ಸುಳ್ಳು ..!

part 1


part ..1

ಮನಸ್ಸೆಲ್ಲ ಘಾಸಿಯಾಗಿತ್ತು... ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿತ್ತು...

ಮನೆ ಕಟ್ಟಿ ಮುಗಿದಿತ್ತು.. ಮನೆಯ ಮಾಲೀಕರು  ಈಗ ತಕರಾರು ತೆಗೆದಿದ್ದರು...

"ನೋಡಿ... ಸರ್...
ಯಾರ ಬಳಿಯಾದರೂ..ಬಿಲ್ ಚೆಕ್ ಮಾಡಿಸಿ..
ಅವರು ಹೇಳಿದ ಮಾತಿಗೆ ನಾನು ಒಪ್ಪಿಕೊಳ್ಳುತ್ತೇನೆ"

"ಯಾರಾದರೂ ಆರ್ಕಿಟೆಕ್ಟ್ ನಮ್ಮನೆಗೆ ಬಂದರೆ ಅವರ ಕಾಲು ಮುರಿಯುತ್ತೇನೆ"

ಹೀಗೆ ಹೇಳಿದವ ನನ್ನ ದೂರದ ಸಂಬಂಧಿ..!


ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿ.!


ಅವರ ಮನೆ ಕಟ್ಟಿ ಬಿಲ್ಲಿನ ಹಣ ಕೇಳಿದ್ದಕ್ಕೆ ಇಂಥಹ ಉತ್ತರ...

ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು...!

ಕೆಲಸಮಾಡುವಾಗ ಮಾತಾಡದ ಅವರ ಹೆಂಡತಿ ...

ಈಗ ತಮ್ಮ ಮಾತು ಶುರು ಮಾಡಿದ್ದರು..

"ಕಿಚನ್‍ನಲ್ಲಿ ಟೈಲ್ಸ್ ಹಾಕಿದ್ದು ಸರಿ ಇಲ್ಲ.. ನೀರು ನಿಲ್ಲುತ್ತದೆ..."

" ಅಮ್ಮಾ...ತಾಯಿ ....

ನೀವು ನನಗೆ ಬರಬೇಕಾದ ಹಣ ಕೊಡಿ..
ನನ್ನಿಂದ ಏನೇ ತಪ್ಪಾಗಿದ್ದರೂ ಸರಿ ಪಡಿಸುತ್ತೇನೆ..

ದಿನಾ ಬೆಳಗಾದರೆ ಸಾಲಗಾರರ ಕಾಟ...
ನನ್ನ ಮರ್ಯಾದೆ ಹೋಗುತ್ತಿದೆ... ಹಣ ಇಟ್ಟುಕೊಂಡು ಬಿಸಿನೆಸ್ ನಾನು ಶುರು ಮಾಡಿಲ್ಲ..
ಮಟೀರಿಯಲ್ ಸಪ್ಲೈದಾರರ ಬಳಿ ಸಾಲ ತಂದಿದ್ದೇನೆ..

 

ನಾನು ನಂಬಿ ಮನೆ ಕಟ್ಟಿ ಕೊಟ್ಟ ವ್ಯಕ್ತಿಯನ್ನು ನಾನು ಆರಾಧಿಸುತ್ತಿದ್ದೆ...
ನನ್ನ ದೃಷ್ಟಿಯಲ್ಲಿ ಅವರು ಬಹಳ ದೊಡ್ಡ ವ್ಯಕ್ತಿ..

ಅಂಥವರು ಇಷ್ಟು ಚೀಪ್ ಆಗಿ ವರ್ತಿಸಿ ಬಿಡ್ತಾರಾ...?


ಕೆಟ್ಟ ಮನಸ್ಸಿನ ಜನಕ್ಕೆ ದೇಶ, ಭಾಷೆ,ರಕ್ತ ಸಂಬಂಧಗಳ ಗಡಿ ಇರುವದಿಲ್ಲ...
ಹಾಗೆ ಒಳ್ಳೆಯ ಹೃದಯವಂತರಿಗೂ ಸಹ...
ಎಲ್ಲ ಕಡೆಯೂ ಇರುತ್ತಾರೆ...



ನಾನು ಮತ್ತೊಮ್ಮೆ  ಮಾಲಿಕರ ಬಳಿ  ವಿನಂತಿಸಿದೆ...


" ಸಾಲ ಕೊಟ್ಟವರೆಲ್ಲ   ಫೋನ್ ಮಾಡ್ತಿದ್ದಾರೆ..
ನನಗೆ ಬಹಳ ಕಷ್ಟ ಆಗುತ್ತಿದೆ.. 
ದಯವಿಟ್ಟು ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ..."


ಜನಕ್ಕೆ ಯಾಕಾದರೂ ಇಂಥಹ ಮನಸ್ಥಿತಿ ಬಂದು ಬಿಡುತ್ತದೋ...


ಕೆಲಸ ಮಾಡಿಸಿಕೊಂಡು ಹಣ ಕೊಡದೇ ಇರುವಂಥಹ ಕ್ರೂರ ಬುದ್ಧಿ...!


ಮುಂದೇನು...??


ಎಲ್ಲ ಕಡೆ ಮೈತುಂಬ ಸಾಲ...
ಸಿಕ್ಕಾಪಟ್ಟೆ ಫೋನ್ ಕಾಲ್ ..


ಏನು ಅಂತ ಉತ್ತರ ಕೊಡಲಿ...?
ನಾಳೆ...? ನಾಡಿದ್ದು...?



ಒಂದು ವಾರದ ನಂತರ...?


ಯಾವಗಲಾದರೂ ಕೊಡಲೇ ಬೇಕಿತ್ತಲ್ಲ...!


ಸಾಲ ತಂದವರ ಬಳಿ ಸುಳ್ಳು ಹೇಳುತ್ತಿದ್ದೆ...
ಮನೆಯಲ್ಲಿದ್ದರೂ ಇಲ್ಲ ಅನ್ನುತ್ತಿದ್ದೆ...

ಹೇಳ ಬಾರದೆಂದರೂ.... ಬಾಯಲ್ಲಿ ಬರುತ್ತಿತ್ತು ಸುಳ್ಳು
...!

ನಾಳೆ ಕೊಡುತ್ತೇನೆ..
ಒಂದು ವಾರ ಬಿಟ್ಟು ಹಣ ಕೊಡುತ್ತೇನೆ ಎಂದೆಲ್ಲ ಸುಳ್ಳು ಹೇಳುತ್ತಿದ್ದೆ...


ಅವರ ಕಣ್ಣು ತಪ್ಪಿಸಿ ತಿರುಗುತ್ತಿದ್ದೆ...
ಮನೆಯಲ್ಲೇ.... ಇದ್ದರೂ ಇಲ್ಲ ಅನ್ನುತ್ತಿದ್ದೆ....



ಇದರಿಂದ ಹೇಗೆ ಪಾರಾಗುವದು...?
ಹಣ ಹೇಗೆ ಕೊಡುವದು...?


ಮನೆಯಲ್ಲಿದ್ದ ಒಡವೆಗಳನ್ನು ಬ್ಯಾಂಕಿನಲ್ಲಿಟ್ಟು ಹಣ ತಂದಾಗಿತ್ತು...!
ದೈನಂದಿನ ಬದುಕೂ ದುಸ್ಥರವಾಗಿ ಹೋಯಿತು...
ಖರ್ಚು ಹೇಗೆ ನಿಭಾಯಿಸುವದು..?


" ಅಪ್ಪಾ... 
ಹೃತೀಕ್ ರೋಷನ್ ಸಿನೇಮಾ ಬಂದಿದೆ..
ಹೋಗೋಣ ಅಪ್ಪಾ..."


ಮುದ್ದಿನ ಮಗನ ಬೇಡಿಕೆ...


ಮಗನ ಆಸೆಯನ್ನೂ ಪೂರೈಸಲಾಗದಷ್ಟು ಕೆಟ್ಟ ಸ್ಥಿತಿ....!


ಕಿಸೆಯಲ್ಲಿದ್ದ ಹಣ ಎಣಿಸಿದೆ...


ಒಂದು ಸಾವಿರ ಇತ್ತು...


"ಆಯ್ತು ಮಗನೆ... ಹೋಗೋಣ ... ಅಮ್ಮನಿಗೆ ರೆಡಿಯಾಗಲಿಕ್ಕೆ ಹೇಳು.."


ನನ್ನ ಹಣಕಾಸಿನ ಸ್ಥಿತಿಯ ಅರಿವು ನನ್ನಾಕೆ ಚೆನ್ನಾಗಿ ಗೊತ್ತು...


"ಇಂಥಹ ಸ್ಥಿತಿಯಲ್ಲಿ ಸಿನೇಮಾ ಎಲ್ಲ ಯಾಕೆ..?
ಸಿನೇಮಾಕ್ಕೆ ಹೋದರೆ ಏನಿಲ್ಲ ಅಂದರೂ ನಾಲ್ಕು ನೂರು ಖರ್ಚಾಗುತ್ತದೆ..."



"ನೋಡು... ನನಗೆ ಬೇಕಾಗಿದ್ದು...ಮೂರು ಲಕ್ಷ..
ಮುನ್ನೂರು ರುಪಾಯಿ ಉಳಿಸುವದರಿಂದ ಏನೂ ಆಗುವದಿಲ...
ಇಲ್ಲಿ ಪ್ರತಿ ನಿಮಿಷವೂ ಹಿಂಸೆ ಆಗ್ತಾ ಇದೆ..
ನನ್ನ ಬುದ್ಧಿಗೆ ಏನೂ ಸೂಚಿಸ್ತಾ ಇಲ್ಲ...!
ಸ್ವಲ್ಪ ಮೂಡ್ ಚೇಂಜ್ ಆಗ ಬಹುದು ಬಾ.."



ಮನಸ್ಸಿಲ್ಲದಿದ್ದರೂ ಹೊರಟಳು..ನನ್ನಾಕೆ..


ಸಿನೇಮಾ ಹಾಲಿನಲ್ಲಿಯೂ ಮನಸ್ಸು ಸರಿಯಾಗಲಿಲ್ಲ...
ಗೃಹಪ್ರವೇಶ ಅಗುವವರೆಗೆ ಚಂದವಾಗಿ ಮಾತಾಡಿ ....
ಕೆಲಸ ಮಾಡಿಸಿಕೊಂಡ ಅವರು ಹಣ ಕೊಡುವಾಗ ಹೀಗೇಕೆ..?


ಹೀಗೆ ಕೈ ಕೊಡ ಬಹುದೆಂಬ ಸಂಶಯ ಸ್ವಲ್ಪವೂ ಬರಲೇ ಇಲ್ಲ...


"ಬದುಕಿಗಿಂತ ಸಿನೇಮಾವೇ ಚಂದ...
ಇಲ್ಲಿ ವಜ್ರಮುನಿ, ಅಮರಿಷ್ ಪುರಿ... ಬಂದ ತಕ್ಷಣ ಇವರು ವಿಲನ್ ಅಂತ ಗೊತ್ತಾಗಿ ಬಿಡುತ್ತದೆ...


ಜೀವನದಲ್ಲಿ ಹಾಗಿಲ್ಲವಲ್ಲ...!


ಜನರ ಕ್ರೂರ.. ಕಹಿ ವರ್ತನೆ ಅರ್ಥವೇ ಅಗುವದಿಲ್ಲ...


ಸಿನೇಮಾ ನೋಡಿ ಗಾಂಧಿ ಬಜಾರ್‍ನಲ್ಲಿ ಬರುತ್ತಿದ್ದೆ...


"ಅಪ್ಪಾ... ದಾಳಿಂಬೆ ಕೊಡಿಸು... ಇಲ್ಲಿ ಚೆನ್ನಾಗಿರ್ತದೆ"


ಇಲ್ಲ ಅಂತ ಹೇಳಲಾಗಲಿಲ್ಲ...


ಅಲ್ಲಿ ಸಾಲಾಗಿ ಹಣ್ಣಿನ ಅಂಗಡಿಗಳು...


"ದಾಳಿಂಬೆ ರೇಟು ಏನು..?"


"ಸ್ವಾಮಿ ....
ನಲವತ್ತು ರುಪಾಯಿ..."


ನಾನು ಮರು ಮಾತಾಡದೆ ಒಂದು ಕೇಜಿ ತೆಗೆದು ಕೊಂಡೆ..



"ರೇಟು ಕಡಿಮೆ ಮಾಡಿ ಅಂತ ಕೇಳ ಬೇಕಿತ್ತು.."
ನನ್ನಾಕೆ ಆಕ್ಷೇಪ ಮಾಡಿದಳು..


"ನೋಡು ...
ಇವರೂ ನಮ್ಮಂತೆಯೇ... ದಿನ ನಿತ್ಯ ಹೋರಟದ ಬದುಕು..
ದೊಡ್ಡ ಅಂಗಡಿಗೆ ಹೋದರೆ ರೇಟು ಕೇಳದೆ ಮಾತಾಡದೇ ತರ್ತೀವಲ್ಲ..
ನೋಡು ಇವರ ಅಂಗಡಿಗೆ ನೆರಳೂ ಇಲ್ಲ...
ಇಂಥವರ ಬಳಿ ಚೌಕಾಸಿ ಮಾಡಿದರೆ ಪಾಪ ಬರುತ್ತದೆ...
ನೀನು ಸುಮ್ನಿರು..."



ಅಷ್ಟರಲ್ಲಿ ಫೋನ್ ಕಾಲ್... 
ಇಟ್ಟಿಗೆ ಕೊಡುತ್ತಿದ್ದ ಭೈರಪ್ಪನವರು...
ಭಾರಪ್ಪನವರಿಗೆ ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ....


" ನೋಡಿ ಭೈರಪ್ಪನವರೆ... 
ನಿಮ್ಮ ಬಿಲ್ಲು ಮುಂದಿನವಾರ ಕೊಡ್ತೇನೆ...
ಇನ್ನೊಂದು  ಮನೆ ಕಟ್ಟೋ ಕೆಲ್ಸ ಸಿಕ್ಕಿದೆ...
ಮಟೀರಿಯಲ್ಸ್ ನೀವೆ ಸಪ್ಲೈ ಮಾಡ್ಕೋಡ ಬೇಕು..."



ಸುಳ್ಳು ಹೇಳ ಬಾರದೆಂದರೂ ಬಾಯಲ್ಲಿ ಬಂದು ಬಿಡುತ್ತಿತ್ತು...


" ಸ್ವಾಮಿ.....
 ಹಣ ವಾಪಸ್ ಕೊಡ್ಲಿಕ್ಕೆ ಆಗಲ್ಲ ಅಂದ್ರೆ ಯಾಕೆ ಮಟೀರಿಯಲ್ ತೆಗೆದು ಕೊಳ್ತೀರಿ...?
ನನಗೂ ಹೆಂಡತಿ ಮಕ್ಕಳಿವೆ..
ಈ ದಂಧೆಯಿಂದಲೆ ಜೀವನ ಮಾಡ ಬೇಕು..

ಇಂದು ಕೊಡ್ತೀನಿ... ನಾಳೆ ಕೊಡ್ತೀನಿ.. ಅನ್ನೋ... 
ನಿಮ್ಮ ಮಾತು ಕೇಳಿ ಸಾಕಾಗಿ ಹೋಗಿದೆ..
ನಾಳೆ ಬೆಳಿಗ್ಗೆ ನಿಮ್ಮನೆಗೆ ಬರ್ತೇನೆ ...
ಮನೆಯಲ್ಲಿರೋ  ಟಿವಿ, ಸೋಫಾನಾದ್ರೂ ಎತ್ತಿಕೊಂಡು ಹೋಗ್ತೇನೆ..
ಏನು ಮಾಡ್ತೀರೋ  ಮಾಡ್ಕೊಳ್ಳಿ...."


ಅವರು ನನಗೆ ಮಾತಾಡಲು ಅವಕಾಶ ಕೊಡದೆ ಕಾಲ್ ಕಟ್ ಮಾಡಿದರು...


ನನ್ನ ಸಂಭಾಷಣೆ ಗಮನಿಸಿದ ಹಣ್ಣಿನ ಅಂಗಡಿಯವ


"ಸ್ವಾಮಿ ..
ನೀವು ಕಾಂಟ್ರಾಕ್ಟರ್ರಾ..?
ನಮ್ಮದೂ ಸಟಿದೆ ಮನೆ ಕಟ್ಟಿಸ ಬೇಕಿತ್ತು...ನಿಮ್ಮ ಫೋನ್ ನಂಬರ್ ಕೊಡಿ..

ನನ್ನ ಮಗ ಬಂದು ನಿಮ್ಮ ಬಳಿ ಮಾತಾಡ್ತಾನೆ.."


ನಾನು ಫೋನ್ ನಂಬರ್ ಕೊಟ್ಟೆ...


ಬೀದಿಯಲ್ಲಿ ಹಣ್ಣು ಮಾರಾಟ ಮಾಡುವವ ಮನೆಕಟ್ಟಿಸುತ್ತಾನಾ...?


ಮತ್ತೆ ದುತ್ತೆಂದು ಸಾಲದ ನೆನಪಾಯಿತು....


ಬೆಳಗಾದರೆ ಮನೆ ಮುಂದೆ ಬರುವ ಭೈರಪ್ಪ...
ಅಕ್ಕಪಕ್ಕದ ಮನೆಯವರು....
ಹೆಂಡತಿ... ಮಗನ ಎದುರಿಗೆ ಅವಮಾನ...!
ಸ್ನೇಹಿತರು... ಬಂಧುಗಳಿಗೂ ಗೊತ್ತಾಗುತ್ತದೆ....!



ಕಣ್ಣೆಲ್ಲ ಮಂಜಾಗಿ ... ಕತ್ತಲಾಗಿ..
ಎಲ್ಲಕಡೆಯಿಂದಲೂ ದಾರಿ ಕಾಣದಾಗಿತ್ತು......


ಈ ರಾತ್ರಿ ಬಹಳ ಉದ್ದವಾದದ್ದು.....!


ನಾಳೆಯ ಬೆಳಗನ್ನು ಹೇಗೆ ಎದುರಿಸಲಿ...?


ನಾನೇ... ಇಲ್ಲವಾದರೆ ಹೇಗೆ...?


ಅತ್ಮಹತ್ಯೆ...!!..??
ಹೌದು....!
ಇದೊಂದೆ ದಾರಿ ಉಳಿದದ್ದು...!





( ಇದು ಯಾವುದೇ ವ್ಯಕ್ತಿ ದೂಷಣೆಗೆ ಬರೆದಿದ್ದಲ್ಲ...




ಅದು ನನ್ನ ಉದ್ದೇಶವೂ ಅಲ್ಲ...


ಎಲ್ಲರ ಜೀವನದಲ್ಲೂ ಇಂಥಹ ಘಟನೆ ಘಟಿಸುತ್ತದೆ...


ವ್ಯಕ್ತಿಗಳು.., ಸಂದರ್ಭಗಳು ಬೇರೆ ಬೇರೆಯಾಗಿರುತ್ತದೆ...


ಓದಿ ಎಚ್ಚೆತ್ತು ಕೊಂಡರೆ ಅನುಭವ ಹಂಚಿಕೊಂಡಿದ್ದಕ್ಕೆ ಸಾರ್ಥಕತೆ ಬರುತ್ತದೆ....)


(ನಾನು ಬರೆದ ..








ನಂಬಿಕೆ ವಿಶ್ವಾಸಗಳ ಬಗೆಗೆ ಬಹಳ ದುಬಾರಿ ಪಾಠ


ಇದನ್ನೂ ಓದಿ...)


( ಎಲ್ಲರಿಗೂ "ನಾಡಹಬ್ಬದ" ಶುಭಾಶಯಗಳು...)



Sunday, September 20, 2009

ವರುಷದೊಳಗೆ .. ಸಂಖ್ಯೆ ನೂರು........



ವಿಶ್ವೇಶ್ವರ ಭಟ್ ರವರ ಪುಸ್ತಕ ಬಿಡುಗಡೆ ಸಮಾರಂಭ...

ಜಯಂತ್ ಕಾಯ್ಕಿಣಿಯವರ ಮಾತಿನ ಮೋಡಿಯಲ್ಲಿ ಕಳೆದು ಹೋಗಿದ್ದೆ...

ಯಾರೋ ಬೆನ್ನು ತಟ್ಟಿದರು...

"ಸರ್... ನೀವು ಇಟ್ಟಿಗೆ ಸಿಮೆಂಟಾ...?"

ನನಗೆ ಆಶ್ಚರ್ಯವಾಯಿತು....
ನನಗೆ ಏನು ಹೇಳ ಬೇಕೆಂದು ತೋಚಲಿಲ್ಲ...

ಇತ್ತೀಚೆಗೆ ನಾನು "ಇಟ್ಟಿಗೆ ಸಿಮೆಂಟು" ಅಂತ ಆಗಿದ್ದು...
ಆ... ಥರಹ ... ನನ್ನನ್ನು ಗುರುತಿಸುತ್ತಿರುವದು....

ಸ್ವಲ್ಪ ಬೇಸರವಾಗುತ್ತಿದ್ದರೂ...
ಖುಷಿಯಾಗುತ್ತಿದೆ...

ಬೇರೆ ಥರಹ ನನ್ನನ್ನು ಗುರುತಿಸುತ್ತಿದ್ದಾರಲ್ಲ
ಸಂತೋಷವೂ ಆಗುತ್ತಿದೆ...

ಘಟನೆ .. ಒಂದು...

ಮೊನ್ನೆ ಪರಿಸರ ವಿಜ್ಞಾನಿ, ಪರಿಸರ ಪ್ರೇಮಿ.. ನಾಗೇಶ ಹೆಗಡೆಯವರನ್ನು ಭೇಟಿಯಾಗುವ ಸುಯೋಗ ಬಂದಿತ್ತು...
ಅವರೊಡನೆ ಮೂರುತಾಸು ಮಾತನಾಡಿದ್ದೆ....
ಅವರೊಂದು ಜ್ಞಾನದ ಸಮುದ್ರ...
ಅವರ ಸಾಧನೆ... ಅಧ್ಯಯನ ಬಲು ದೊಡ್ಡದು...

ದೊಡ್ಡ ವ್ಯಕ್ತಿಯಾಗಿದ್ದರೂ ಅವರ ಸರಳತೆ ನೋಡಿ ಮೂಕನಾಗಿದ್ದೆ....

ಅಂಥವರೊಡನೆ ಕುಳಿತು ಮಾತನಾಡಿದ್ದು ನನ್ನ ಸುಯೋಗ...
ನನ್ನ ಪುಣ್ಯ...!
ಅವರು ನನ್ನ ಬ್ಲಾಗಿನ ಬಗೆಗೆ ಮೆಚ್ಚುಗೆಯ ಮಾತನಾಡುತ್ತಿದ್ದಾಗ ಖುಷಿಯಿಂದ ಕಣ್ಣಲ್ಲಿ ನಿರು ಬಂದಿತ್ತು......

ಘಟನೆ ಎರಡು...

"ಹೆಸರೇ... ಬೇಕಿರದ" ನನ್ನದೊಂದು ಪುಸ್ತಕಕ್ಕೆ.....
ಜಿ.ಎನ್ ಮೋಹನ್ ಸುಂದರ ಮುನ್ನುಡಿ ಬರೆದು ಕೊಟ್ಟಿದ್ದಾರೆ....
ಹಿತನುಡಿಗಳನ್ನು.. ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ....

ತಮ್ಮ ಕೆಲಸದ ಒತ್ತಡದ ನಡುವೆಯೂ ...
ನನ್ನ ಕೆಲಸವನ್ನೂ ಮಾಡಿಕೊಡುತ್ತಾರೆ.... ಇನ್ನು ಬರೆಯಿರಿ ಅಂತ ಬೆನ್ನು ತಟ್ಟುತ್ತಾರೆ....
ಅವರ ಶುಭ ಹಾರೈಕೆಗಳು, ಪ್ರೋತ್ಸಾಹಕ್ಕೆ...
ನನ್ನ ಉತ್ಸಾಹ ಇಮ್ಮಡಿಯಾಗುತ್ತಿದೆ..

ಹಲವಾರು ಗಣ್ಯರು ಪ್ರೋತ್ಸಾಹಕ ನುಡಿಗಳನ್ನು ಬರೆದುಕೊಟ್ಟು ಬೆನ್ನು ತಟ್ಟುತ್ತಿದ್ದಾರೆ....

ಘಟನೆ ಮೂರು...

ರಂಗಶಂಕರದದಲ್ಲಿ ಕಲಾ ಗಂಗೊತ್ರಿಯವರ
"
ಮೈಸೂರು ಮಲ್ಲಿಗೆ " ನಾಟಕದ ಕೊನೆಯಲ್ಲಿ...
ಡಾ. ಬಿವಿ ರಾಜಾರಾಂ ಅವರು....
"ಇಟ್ಟಿಗೆ ಸಿಮೆಂಟಿನ ಪ್ರಕಾಶ ಹೆಗಡೆಯವರು..
ವೇದಿಕೆಗೆ ಬರಬೇಕು"
ಎಂದು ನೆನಪಿನ ಕಾಣಿಕೆ ಕೊಟ್ಟರು.....ಅಷ್ಟೆಲ್ಲಾ ಪ್ರೇಕ್ಷಕರ ಮುಂದೆ...!

ನಾನು ಮಾತು ಬಾರದೆ ಮೂಕನಾಗಿದ್ದೆ....

ಘಟನೆ ನಾಲ್ಕು.....

ಸುಶ್ರುತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ..
ಮೆಚ್ಚಿನ ಕಥೆಗಾರ "ವಸುಧೇಂದ್ರ " ಸಿಕ್ಕಿದ್ದರು...

"ಚೆನ್ನಾಗಿದ್ದೀರಾ... ಏನನ್ನುತ್ತದೆ ಇಟ್ಟಿಗೆ ಸಿಮೆಂಟು..?.."

ಎಂದು ಆತ್ಮೀಯವಾಗಿ ಕೇಳಿದರು..
ಅಂಥಹ ದೊಡ್ಡ ಕಥೆಗಾರ..!

ಘಟನೆ... ಐದು....

"ಸ್ವಾಮಿ... ನೀವು ಯಾರೆಂದು ಗೊತ್ತಿಲ್ಲ...
ನೀವು ಬರೆದ ಲೇಖನ ಓದಿ ...
ಮನೆಬಿಟ್ಟು ಓಡಿಹೋಗಿದ್ದ ನನ್ನ ಮಗ
ಐದು ವರ್ಷದ ನಂತರ ಮನೆಗೆ ಮರಳಿದ್ದಾನೆ..."

ಫೋನ್ ಮಾಡಿದವರು ಖುಷಿಯಿಂದ ಅಳುತ್ತಿದ್ದರೆ.....
ನನ್ನ ಕಣ್ಣಲ್ಲೂ ನೀರಾಡಿತ್ತು...

ಭಾವುಕನಾಗಿಬಿಟ್ಟಿದ್ದೆ....

( ಲೇಖನ....
"
ಮಿಲ್ತಿ ಹೇ ಜಿಂದಗಿ ಮೇ ಮೊಹಬ್ಬತ್ ಕಭಿ... ಕಭಿ."...)

ನನ್ನ ಬ್ಲಾಗಿನ ಪ್ರೊಫೈಲ್ ನೋಡಿದವರ ಸಂಖ್ಯೆ ಹದಿಮೂರು ಸಾವಿರ ದಾಟಿದೆ...

ಬೆಂಗಳೂರಿನ ಟ್ರಾಫಿಕ್ ಜಾಮಿನಲ್ಲಿ ಕಳೆದು ಹೋಗಿ...
ವ್ಯವಹಾರ.. ಕೆಲಸದ ಒತ್ತಡದಲ್ಲಿ ಮುಳುಗಿರುತ್ತಿದ್ದ...
ನನ್ನಂಥಹ ಸಾಮಾನ್ಯನಿಗೆ ಇವೆಲ್ಲ ಅಚ್ಚರಿಯ ಸಂಗತಿಗಳು...

ನಿರೀಕ್ಷೆಯೇ ಇರದ ಅನಿರೀಕ್ಷಿತ... ಖುಷಿಗಳು....

ಕನಸೋ... ನನಸೋ ಎಂದು ಚಿಗುಟಿ ನೋಡಿಕೊಳ್ಳುವಂಥಹ ಸಂಗತಿಗಳು....

ನನ್ನ ಮೆಚ್ಚಿನ ....
ಜೋಗಿ, ಬಿ. ಸುರೇಶ, ಪಿ. ಶೇಷಾದ್ರಿ...
ಪತ್ರಕರ್ತ "ಅಶೋಕ್ ಕುಮಾರ್" ಅವರ ಪ್ರೋತ್ಸಾಹ ಮರೆಯಲಾರೆ..

ಪ್ರೋತ್ಸಾಹಿಸಿದ ಇನ್ನೂ ಅನೇಕರ ಹೆಸರು ಬಿಟ್ಟುಹೋಗಿದೆ...
ಬರೆಯಲು ಜಾಗವೂ ಸಾಲುವದಿಲ್ಲ...
ಅವರಿಗೆಲ್ಲ ಹೇಗೆ ಕೃತಜ್ಞತೆ ಅರ್ಪಿಸಲಿ...?

ಮೆಚ್ಚಿನ ಅಭಿನೇತ್ರಿ ಜಯಲಕ್ಷ್ಮಿ ಪಾಟಿಲ್
(
ಮುಕ್ತಾದ "ಮಂಗಳತ್ತೆ")
ಇನ್ನೂ ಅನೇಕರು...ಅನೇಕರು....
ಹಲವರ ಹೆಸರೇ... ಗೊತ್ತಿಲ್ಲ...
ನನ್ನ ಬ್ಲಾಗಿಗೆ ಬಂದು ಮೆಚ್ಚುಗೆಯಮಾತುಗಳನ್ನಾಡುತ್ತಾರೆ...

ಅವರು ಪ್ರೋತ್ಸಾಹಕ್ಕಾಗಿ...
ಸೌಜನ್ಯಕ್ಕೆಂದು ಹೇಳಿದ ಮಾತುಗಳಾದರೂ...
ನನಗಂತೂ ಖುಷಿಯಾಗುತ್ತದೆ...

ಇವೆಲ್ಲ ನಿಜವಾ....?
ಅಚ್ಚರಿಯಾಗುತ್ತದೆ.....
ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತದೆ....

ದಿನನಿತ್ಯ ಬರುವ ಹಲವಾರು ಮೇಲ್ ಗಳು ..,
ಲೇಖನಕ್ಕೆ ಬರುವ ಪ್ರೋತ್ಸಾಹದ ನುಡಿಗಳು...
ನನ್ನ ಪುಟ್ಟ ಪ್ರಪಂಚವನ್ನು ಬದಲಿಸಿ ಬಿಟ್ಟಿದೆ....

ಹಲವರ ಜೀವಮಾನದ ಕನಸುಗಳನ್ನು ನನಸು ಮಾಡುತ್ತಾ..
ಅವರ ಮನೆಕಟ್ಟಿ.....
ಅದರಲ್ಲಿ ಲಾಭ.., ನಷ್ಟ , ಕಷ್ಟ ಸುಖದಲ್ಲಿ ಮುಳುಗಿರುತ್ತಿದ್ದ...
ನನ್ನನ್ನು..
"ಇಟ್ಟಿಗೆ ಸಿಮೆಂಟು " ಬದಲಿಸಿ ಬಿಟ್ಟಿದೆ...

ಓದುಗರ ಪ್ರತಿಕ್ರಿಯೆಗಾಗಿ ಕಾಯುವದೂ ..
ಮುಂದಿನ ಬರಹಕ್ಕಾಗಿ ಯೋಚಿಸುವದೂ.... ಖುಷಿಯಾಗುತ್ತಿದೆ....

ಸ್ನೇಹಿತರಾದ ಶಿವೂ, ಮಲ್ಲಿಕಾರ್ಜುನ್ ಇನ್ನೂ ಹಲವರ ಪ್ರೋತ್ಸಾಹಗಳು..
ನನ್ನನ್ನು ಬಹಳ ಪ್ರೇರೇಪಿಸಿವೆ....

" ಬ್ಲಾಗಿನಿಂದ ಹೊಟ್ಟೆ ತುಂಬುವದಿಲ್ಲ ..."
ಎಂದು ನನ್ನ ಸ್ನೇಹಿತರು ಹಿತವಚನ ಕೊಡುತ್ತಿದ್ದರು......

ಅದಕ್ಕೂ ಈಗ ಉತ್ತರ ಸಿಕ್ಕಿದೆ...

ನನ್ನ ಬ್ಲಾಗ್ ಓದುಗರು ನನಗೆ ಮನೆಕಟ್ಟುವ ಗುತ್ತಿಗೆ ಕೊಟ್ಟಿದ್ದಾರೆ...
ಆರ್ಥಿಕ ಹಿಂಜರಿತದ ದಿನಗಳಲ್ಲೂ ಬ್ಲಾಗ್ ಓದುಗರು ಎರಡು ಕೆಲಸ ಕೊಟ್ಟಿದ್ದಾರೆ...
ಮನೆಕಟ್ಟುವವರು ನನ್ನ ಬಳಿ ಮಾಹಿತಿ ಪಡೆಯುತ್ತಿದ್ದಾರೆ..

ನನ್ನ ಈ ಬ್ಲಾಗಿನಿಂದ ನನಗೆ ಬಿಸಿನೆಸ್ ಸಿಕ್ಕುತ್ತಿದೆ..

ನಿಮಗೆಲ್ಲ ಹೇಗೆ ಕೃತಜ್ಞತೆ ಹೇಳಲಿ...?

ಇದಕ್ಕೆಲ್ಲ ಕಾರಣ ನನ್ನ ಬ್ಲಾಗ್....ಈ ಬ್ಲಾಗ್ ಲೋಕ....!

ಬ್ಲಾಗ್ ಶುರುಮಾಡಿ ಇನ್ನೂ ಒಂದು ವರ್ಷವೂ ಆಗಿಲ್ಲ...
ಸಂಖ್ಯೆ ನೂರಾಗುತ್ತಿದೆ...
ಫೋಟೋಗಳನ್ನೂ ಸೇರಿಸಿ....

ಖುಷಿಯಾಗುತ್ತಿದೆ... ಭಾವುಕನಾಗಿಬಿಡುತ್ತೇನೆ....

ಮನದ ಹಿಗ್ಗು....
ಸಂತೋಷದ
ಬುಗ್ಗೆಯಾಗಿದೆ...

ನನಗೆ ಪ್ರೋತ್ಸಾಹ ಕೊಡುತ್ತಿರುವ ಅಸಂಖ್ಯಾತ ಓದುಗರಿಗೆ...
ಅನಂತ... ಅನಂತ...
ತುಂಬಾ.... ತುಂಬಾ....
ರಾಶಿ... ರಾಶಿ... ಸಿಕ್ಕಾಪಟ್ಟೆ ಧನ್ಯವಾದಗಳು...

ನನ್ನ ತಪ್ಪು, ಒಪ್ಪುಗಳನ್ನು ತಿದ್ದಿ ಪ್ರತಿಕ್ರಿಯಿಸಿದ...
ನೋಡಿ ಪ್ರೋತ್ಸಾಹಿಸಿದ... ನಿಮಗೆಲ್ಲ ನಾನು ತುಂಬಾ ಆಭಾರಿಯಾಗಿದ್ದೇನೆ..

ಬ್ಲಾಗ್ ಲೋಕದ ...... ಈ ...ಆತ್ಮೀಯತೆಗೆ..
ಸ್ನೇಹ ಭಾವಕ್ಕೆ ನನ್ನದೊಂದು ಸಲಾಮ್...

ನನ್ನ ಬ್ಲಾಗ್ ಫಾಲೋ ಮಾಡಿ...
ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲ ಕೃತಜ್ಞತೆ ಹೇಳಲೂ...
ನನ್ನ ಬಳಿ ಶಬ್ಧಗಳಿಲ್ಲ...

ನಿಮ್ಮಿಂದಾಗಿ ನನ್ನ ಜವಾಬ್ದಾರಿ ಹೆಚ್ಚಿದೆ...
ಅದಕ್ಕೆ ತಕ್ಕಂತೆ ನಡೆಯುವ ಪ್ರಯತ್ನ ಮಾಡುತ್ತೇನೆ...

ವರುಷದೊಳಗೆ ಸಂಖ್ಯೆ ನೂರು...
ನಿಮ್ಮ ಭಾವ ಜಗದೊಳು..
ಇನಿತು ಜಾಗವಷ್ಟೇ ಸಾಕು ಎನಗೆ.....
ಅಂಕೆ ಸಂಖ್ಯೆಗಳೆಲ್ಲವೂ...
ಅಗಣಿತ ಗಣಿತದ ಲೆಕ್ಕಾಚಾರವು...

ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದೂ ಇರಲಿ....

ಪ್ರೀತಿಯಿಂದ....
ಇಟ್ಟಿಗೆ ಸಿಮೆಂಟು....



Thursday, September 10, 2009

ಹೆಸರೇ... ಇಲ್ಲದ ... ಗುರುತು.. ಇರಬೇಕಿತ್ತು....!!

ಆರ್ಥಿಕ ಹಿಂಜರಿತದ ಈ ದಿನಗಳಲ್ಲಿ ಕೆಲಸದ ದಕ್ಷತೆ ಜಾಸ್ತಿಯಾಗಿ ಬಿಡುತ್ತದೆ..

ನಾಳೆಯೇ .. ಕಾಂಕ್ರೀಟು..
ನೋಡಿ ಬರೋಣ ಎಂದು ಬಿಲ್ಡಿಂಗ್ ಕಡೆ ಹೊರಟೆ..


ಎಲ್ಲರೂ ಮನೆಕಡೆ ಹೊರಟಿದ್ದರು...

ಗೋವು ಮಾತ್ರ ತನ್ನಪಾಡಿಗೆ ಕೆಲಸದಲ್ಲಿ ಮಗ್ನನಾಗಿದ್ದ...

"ಗೋವು.... ಟೈಮ್ ಆಯ್ತಲ್ಲಪಾ.. ಹೊರಡು.." ಅಂದೆ...

" ಸರ್... ಇರಿ.. ನಿಮ್ಮ ಹತ್ರ ಮಾತಾಡಬೇಕು...
ಸ್ವಲ್ಪ ಇರಿ.. ಟೀ ತರ್ತೇನೆ.."

ಎಂದು ಓಡಿ ಹೋಗಿ ಕಾಕಾ ಅಂಗಡಿಯಿಂದ ಪ್ಲಾಸ್ಕಿನಲ್ಲಿ ಟೀ ತಂದ...

"ಏನಪಾ .. ಗೋವು ... ಎಲ್ಲ ಹೇಗೆ ನಡಿತಿದೆ...?"
ಸಹಜವಾಗಿ ಕೇಳಿದೆ...

"ಸಾರ್... ಈ ಜಗತ್ತಿನಲ್ಲಿ "ದೇವರೇ.. ಇಲ್ಲದ ಧರ್ಮ ಇರಬೇಕಿತ್ತು... ಅಲ್ಲವಾ...?"

"ಏನಾಯ್ತೋ ನಿಂಗೆ...?.. "

" ಸಾರ್.. ಈ ದೇವರುಗಳಿಂದಲೇ... ಜಗತ್ತು ಹಾಳಾಗಿದೆ...
ಕ್ರಿಶ್ಚಿಯನ್ಸು.. ಮುಸ್ಲಿಮ್ಸು... ಹಿಂದೂಗಳು... ದೇವರುಗಳಿಂದಲೇ ಹಾಳಾಗಿರೋದು...
ಎಲ್ಲರೂ ಬಡಿದಾಡೋದು...
ಆ ದೇವರೇ... ಇಲ್ದೇ.. ಇದ್ದಿದ್ರೆ.. ಈ ಜಗಳ ಎಲ್ಲ ಆಗ್ತಿರಿಲಿಲ್ಲ..ಸಾರ್.."

"ಅದು ಹೌದು ...ನೋಡು.. ಬೆಲ್ಲದದಂಥಹ ಮಾತು.."

"ಅಷ್ಟೆ... ಸಾರ್...!
ಬಣ್ಣವೇ ಇಲ್ಲದ ಬೆಳಕು ಇರಬೇಕಿತ್ತು......

ಈ ಬಣ್ಣದಿಂದಲೇ ಎಲ್ಲ ಹಾಳಾಗ್ತಿರೋದು..."

"ಏನೋ... ಗೋವು.. ಆರಾಮಿಲ್ಲೇನೊ...?"

"ನೋಡಿ ಸಾರ್...
ಹಿಂದೂಗಳ ಕೇಸರಿ ಬಣ್ಣ...
ಕ್ರಿಶ್ಚ್ಯನ್ನರ ಬಿಳಿ ಬಣ್ಣ.. ಮುಸ್ಲಿಮ್ಮರ ಹಸಿರು ಬಣ್ಣ..
ಎಲ್ಲ ತಮ್ಮ.. ತಮ್ಮ ಬಣ್ಣಗಳಿಗೆ ಸಾಯ್ತಾರೆ...!

ಬದುಕಲಿಕ್ಕೆ...ಯಾಕೆ ಬಣ್ಣ ಬೇಕು ಸಾರ್...?

ಸಾಯಲಿಕ್ಕೆ.... ಸತ್ತ ಮೇಲೆ.... ಯಾವ ಬಣ್ಣವೂ ಬೇಡ...
ಸಾಯಲಿಕ್ಕೂ ಬೇಡದ ಬಣ್ಣ ಬದುಕಿಗೆ ಯಾಕೆ ಬೇಕು...?
ಬಣ್ಣವೇ.. ಇಲ್ಲದ ಬೆಳಕು ಇರಬೇಕಿತ್ತು...ಅಲ್ವಾ... ಸಾರ್..."

"ಏನು ಹೇಳ್ತಾ ಇದ್ದೀಯಾ... ಗೋವು...!!
ಸತ್ಯವಾದ ಮಾತು..
ಸಾವಿಗೂ.. ಬದುಕಿಗೂ ಬಣ್ಣವೇ ಬೇಡ ನೋಡು...
ಅಂದರೆ... ಎಲ್ಲಾ ಬ್ಲ್ಯಾಕ್ ಎಂಡ್ ವೈಟು...
ಕಪ್ಪು.. ಬಿಳುಪು ಇರಬೇಕು ಅನ್ನು..."

"ಕಪ್ಪೂ... ಬಿಳುಪೂ ಬಣ್ಣವೇ ಅಲ್ಲವಾ...?
ಆಫ್ರಿಕಾದಲ್ಲಿ...
ದೊಡ್ಡ... ಶ್ರೀಮಂತ... ಧರಿದ್ರ ದೇಶ ...
ಅಮೇರಿಕಾದಲ್ಲೂ ಕಪ್ಪು, ಬಿಳುಪಿನ ಸಮಸ್ಯೆ ಅಲ್ಲವಾ...?

ಯಾವುದೇ ಬಣ್ಣವೇ ಇರಬಾರದಾಗಿತ್ತು..."

ನನಗೆ ತಲೆ ಕೆಡಲಿಕ್ಕೆ ಶುರುವಾಯ್ತು...

ಈ ಹುಡುಗನಿಗೆ ಏನಾಗಿದೆ...??
ವಿಚಿತ್ರವಾಗಿ ಮಾತಾಡ್ತಾ ಇದ್ದಾನಲ್ಲ.. ಎಂದು....

ನೋಡೋಣ ಸ್ವಲ್ಪ ಕಾಲೆಳೆಯುವ ಅಂತ.. ವಿಚಾರ ಮಾಡಿದೆ...

"ಬಣ್ಣವೇ ಇಲ್ದೇ ಇದ್ರೆ ಬದುಕಿಗೆ ಎಲ್ಲಿದೇ ಚಂದ...?
ಗೋವು...

ಬದುಕಿನ ಸ್ವಾರಸ್ಯವೇ ಬಣ್ಣ ಅಲ್ಲವೇನೊ...?
ಬಣ್ಣಗಳು ಚಂದ...ಕೆಂಪು..ಹಸಿರು.. ಗುಲಾಬಿ...!"

"ಸಾರ್.... ಚಂದ ಯಾರು ನೋಡ್ತಾರೆ...?
ಹೊಟ್ಟೆ ತುಂಬಿದವರು...!
ಹಸಿವು ಇರುವವನಿಗೆ ಚಂದ ಕಾಣಿಸೋದಿಲ್ಲ... ಸಾರ್...!
ಅವನಿಗೆ ಅದರ ಅಗತ್ಯವೂ ಇಲ್ಲ...
ಬಣ್ಣ... ಬಣ್ಣದ ಬದುಕು..
ಅಂದ.. ಚಂದ...

ಎಲ್ಲ ಹೊಟ್ಟೆ ತುಂಬಿದವರಿಗೆ... ಸಾರ್...!
ಹಸಿವಿಗೆ ಧರ್ಮವೇ.. ಇಲ್ಲ ಸಾರ್...!
ಅದಕ್ಕೆ ಧರ್ಮವೇ ಬೇಕಿಲ್ಲ..."

ಈ ಗೋವು ಎಲ್ಲಿಂದಲೋ ಎಲ್ಲಿಗೋ ಹೋಗ್ತಾ ಇದ್ದಾನಲ್ಲ...!
ವಿಚಿತ್ರವಾದ ಅವನ ವಾದ ಸರಣಿ ನನಗೆ ಕುತೂಹಲ ಹುಟ್ಟಿತು....

"ಏನೋ ಹಾಂಗದ್ರೆ...?
ಜಗತ್ತಿನಲ್ಲಿ ಹಸಿವೆ ಇದೆ ಅಂತ...
ಹೊಟ್ಟೆ ತುಂಬಿದವರಿಗೆ ಬಣ್ಣ ಬೇಡವಾ,,?
ಬಣ್ಣದ ಬದುಕು ಬೇಡವೇನೋ...?
ಏನಾಯ್ತೋ ನಿಂಗೆ..? ಯಾಕೋ ತಲೆ ಬಿಸಿ ಮಾಡ್ಕೊಂಡಿದ್ದೀಯಾ...?"

" ಸಾರ್... ಈ ಬಿಸಿನೇ ಇರಬಾರದು...
ಬಿಸಿನೇ...ಇಲ್ದಿರೋ...ಬೆಂಕಿ ಇರಬೇಕು...
ಈ ಬಿಸಿನೇ ಸುಡೋದು... ಸಾಯ್ಸೋದು...!
ಮನಸ್ಸನ್ನೂ.. ಸುಡ್ತದೆ...
ಹೃದಯಾನೂ ಸುಡ್ತದೆ..

ಇರಲಿಕ್ಕೂ ಬಿಡೋದಿಲ್ಲ... ಸಾಯಲಿಕ್ಕೂ ಬಿಡೋದಿಲ್ಲ..."

"ಗೋವು... ನಿಜ ಹೇಳು ಏನಾಯ್ತು..?
ಹೀಗೆಲ್ಲ ಒಗಟಾಗಿ ಮಾತಾಡ ಬೇಡ.. ಏನಾಯ್ತು...?"

"ಸಾರ್...
ನನ್ನ ಅಪ್ಪ ನನಗೆ ಮದುವೆ ಆಗಲಿಕ್ಕೆ ಒತ್ತಾಯ ಮಾಡ್ತಾ ಇದ್ದಾನೆ...

ನಂಗೆ ಇಷ್ಟ ಇಲ್ಲ...
ನಂಗೆ ಮದುವೆನೇ.. ಬೇಡ..

ಲಿಂಗ ಇಲ್ದಿರೋ ಮನುಷ್ಯ ಜಾತಿ ಇರ್ಬೇಕಿತ್ತು...
ಗಂಡು.. ಹೆಣ್ಣು ಅಂತ ಇರಬಾರದಿತ್ತು..
ಈ ಮದುವೆ.. ಮಕ್ಕಳು.. ಸಂಸಾರ.. ಸಮಸ್ಯೆನೇ ಇರ್ತಿರಲಿಲ್ಲ...."

" ಯಾವ ವಯಸ್ಸಿನಲ್ಲಿ ಏನು ಆಗಬೇಕೊ ಅದು ಆಗ ಬೇಕು...
ನಿಂಗೆ.. ಮದುವೆ ಆಗಲಿಕ್ಕೆ ಏನು ತೊಂದ್ರೆ...?"

"ಸಾರ್...
ಈಗಿನ ಹೆಣ್ಣು ಮಕ್ಕಳು ಅತ್ತೆ ,ಮಾವನ್ನ ಸರಿಯಾಗಿ ನೋಡಿಕೊಳ್ಳೋದಿಲ್ಲ...
ಅವರಿಗೆ ತಮ್ಮ ವಯಕ್ತಿಕ ಬದುಕೇ ಮಹತ್ವ...
ನಾನೂ ನನ್ನ ಫ್ರೆಂಡು.. ಸಂಬಂಧಿಕರ ಮನೆಗಳಲ್ಲಿ ನೋಡಿದಿನಿ...

ಅತ್ತೆ, ಮಾವಂದಿರ ಬಗೆಗೆ ಅವರಿಗೆ ಸ್ವಲ್ಪವೂ ಗೌರವ ಇರೋದಿಲ್ಲ..
ಗಂಡನ ಮನಸ್ಸನ್ನೂ ತಿರುಗಿಸಿ ಬಿಡ್ತಾರೆ...
ಆ ಗಂಡನಿಗೂ ಹೆಂಡತಿಗೆ ಹೊಂದಿಕೊಳ್ಳೋ ...
ಅನಿವಾರ್ಯ ಸ್ಥಿತಿ ತಂದಿಟ್ಟು ಬಿಡ್ತಾರೆ..."


" ಎಲ್ಲರೂ ಹಾಗಿರೊಲ್ಲ... ಗೊತ್ತಿರೋ ಹೆಣ್ಣು ನೋಡಿ ಮದುವೆ ಆಗ ಬೇಕು..."

"ಅಲ್ಲೇ ಸಾರ್... ಇರೋದು...
ನಮ್ಮ ಮೇಸ್ತ್ರಿ ಮಾವನ ಮಗಳು ನಮಗೆ ಸಣ್ಣ ಇರುವಾಗಿಲಿನಿಂದ ಗೊತ್ತು..
ಅವಳು ನನ್ನ ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಾಳೆ...
ನಮ್ಮ ಮನೆ ಸ್ಥಿತಿ ಎಲ್ಲ ಅವಳಿಗೆ ಗೊತ್ತು...
ಅವಳು ನನಗೆ ಇಷ್ಟ..
ನಾನು ಅಂದರೆ ಅವಳಿಗೂ ಇಷ್ಟ...."


"ಸರಿ ಇನ್ನೇನು...?
ಇಬ್ಬರ ಬಳಿಯೂ ನಾನು ಮಾತಾಡ್ತೇನೆ..."


"ಇಲ್ಲ ಸಾರ್...
ಇಬ್ಬರೂ ಹಾವು... ಮುಂಗುಸಿ ಥರ ಇದ್ದಾರೆ..
ನಮ್ಮ ಜಾತಿ.. ಭಾಷೆಗಳು.. ಬೇರೆ.. ಬೇರೆ..
ಹೃದಯಕ್ಕೆ ಬೇಡದ ಜಾತಿಯನ್ನು ಯಾರು ಮಾಡಿದ್ದು... ಸಾರ್...?
ನನ್ನ ಅಪ್ಪನಿಗೆ ಇತ್ತೀಚೆಗೆ ಮೇಸ್ತ್ರಿ ಕಂಡ್ರೆ ಆಗಲ್ಲ...
ಇನ್ನು ಮೇಸ್ತ್ರಿ ಮಾವನಿಗೆ..
ನನ್ನ ಹೆಸರು ಕೇಳಿದ್ರೆ.. ಆಗೋದಿಲ್ಲ.."


"ಯಾಕೆ...?"

"ಸರ್....ಜಗತ್ತಿನಲ್ಲಿ..
ಮನುಷ್ಯರಿಗೆ...ಈ ಹೆಸರೇ... ಇರಬಾರ್ದು...
ಹೆಸರೇ ಇಲ್ದಿರೋ ಗುರುತು ಇರಬೇಕಿತ್ತು...
ಒಂದು ಮನಷ್ಯನನ್ನು ನೋಡಿದ್ರೆ...
ಪಕ್ಕದಲ್ಲಿ ಕಂಪ್ಯೂಟರನಲ್ಲಿ ಬರ್ತದಲ್ಲಾ..

ಆ...ಥರಹ ಒಂದು ಸ್ಕ್ರೀನ್ ಬರ್ಬೇಕು..
ಅದರಲ್ಲಿ ಅವನ ಒಳ್ಳೇ ಕೆಲಸಗಳು.. ಕೆಟ್ಟ ಕೆಲಸಗಳು ಬಂದು ಬಿಡಬೇಕು...
ಜನ ಅವನ ಒಳ್ಳೆಯ ಕೆಲಸದಿಂದ ಗುರುತು ಹಿಡಿಯ ಬೇಕಿತ್ತು...

ಹೆಸರೇ ಇಲ್ದಿರೊ ಗುರುತು ಇರಬೇಕಿತ್ತು..."

"ಅದಕ್ಕೂ ... ನಿನ್ನ ವಿಷ್ಯಕ್ಕೂ ಏನೋ ಸಂಬಂಧ...?"

"ಸಾರ್.. ನಾಲ್ಕಾರು ವರ್ಷದ ಹಿಂದೆ..
ನಾನೊಂದು ಹುಡ್ಗಿಗೆ ಲೈನ್ ಹೊಡಿತಿದ್ನಂತೆ..

ಅದನ್ನು ಮೇಸ್ತ್ರಿ ಮಾವ ನೋಡಿದ್ನಂತೆ...
ಅಲ್ಲಿಂದ ಅವನಿಗೆ ನನ್ನ ಮೇಲೆ ಒಳ್ಳೆಯ ಅಭಿಪ್ರಾಯ ಇಲ್ಲ..

ನಾನು ಬದಲಾಗಿದ್ದೇನೆ... ಸರ್...
ನಾನು ಆಥರಹ ಇಲ್ಲ...
ಜನ ಯಾಕೆ ಹಳೆಯದನ್ನೇ ಹಿಡಕೊಂಡು ಕೂತಿರ್ತಾರೆ...?
ಬದಲಾವಣೆ ಕಾಣೋದಿಲ್ವಾ...? ಯಾಕೆ ನೋಡೋದಿಲ್ಲಾ...?"

"ಓಹೊ .. ಇದೋ ಸಮಾಚಾರ..!
ನಾನು ಏನು ಮಾಡ ಬೇಕು...? ಹೇಳು..."


"ಸಾರ್...
ಸಧ್ಯದಲ್ಲೇ ನನ್ನಪ್ಪ ನಿಮ್ಮ ಹತ್ರ ಮಾತಾಡುವವರಿದ್ದಾರೆ..

ನನ್ನನ್ನು ಮದುವೆಗೆ ಒಪ್ಪಿಸಲಿಕ್ಕೆ..
ನೀವು ಹೇಳಿದ್ರೆ ನಾನು ಒಪ್ತೀನಿ ಅಂತ..
ನಾನು ಮದುವೆ ಆದ್ರೆ ಮೇಸ್ತ್ರಿ ಮಾವನ ಮಗಳನ್ನು..
ಇಲ್ಲ ಅಂದ್ರೆ ನಂಗೆ ಮದುವೇನೇ.. ಬೇಡ..

ಈ ಮೇಸ್ತ್ರಿ ಮಾವ... ನನ್ನಪ್ಪ ನಮ್ಮ ಮದುವೆಗೆ ಒಪ್ಪೋದಿಲ್ಲ...

ನನಗೆ ಹೆಚ್ಚಿಗೆ ಒತ್ತಾಯ ಮಾಡಿದ್ರೆ ದೇಶಾಂತರ ಹೊರಟು ಹೋಗ್ತೇನೆ..."

" ಛೇ.. ಹಾಗೆಲ್ಲ ಮಾತಾಡ ಬೇಡ...
ನಿಮ್ಮಿಬ್ಬರ ಮದುವೆ ನಾನು ಸಹಾಯ ಮಾಡ್ತೇನೆ..
ನೋಡೋಣ ಇರು..."

ನಾನೇನೋ ಧೈರ್ಯ ಆವನಿಗೆ ಹೇಳಿದೆ....

ಹೇಗಾದರೂ ಮಾಡಿ ಇವರಿಬ್ಬರ ಮದುವೆ ಮಾಡಿಸ ಬೇಕಲ್ಲ.....!

ಮೊದಲು ಇವನನ್ನು ಇಷ್ಟಪಡುವ ಆಹುಡುಗಿಯ ಸಂಗಡ ಮಾತನಾಡ ಬೇಕು...!
ಅವಳ ಮನಸ್ಸಲ್ಲಿ ಏನಿದೆ...?
ಅದನ್ನು ಮೊದಲು ತಿಳಿದು ಕೊಳ್ಳ ಬೇಕು...

ಆದರೆ...

ಭೇಟಿಯಾಗುವದು...
ಹೇಗೆ...?

ಎಲ್ಲಿ..?



( ನಮ್ಮ ಗೋವು ಅಂದರೆ ನಿಮಗೆ ನೆನಪಾಯ್ತಾ...?
ಅದೇ ಪಲ್ಸರ್ ಬೈಕ್... ಸೈಕಲ್ ಬೆಲ್ಲು..!!

ಇಲ್ಲಿ ನೋಡಿ...

ಜನಕ್ಕೆ ನಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಬರಲಿಕ್ಕೆ .. ನಮ್ಮ ಒಡನಾಟವಷ್ಟೇ.. ಸಾಲೋದಿಲ್ಲ......


ಚಂದವಾದ.. ಮನೋಜ್ಞವಾದ ಪ್ರತಿಕ್ರಿಯೆಗಳಿವೆ...
ದಯವಿಟ್ಟು ಓದಿ

Saturday, September 5, 2009

ನಮಗೆ.. ಬೆಂಕಿ ಇಡ್ಲಿಕ್ಕಾದ್ರೂ... ಗಂಡು ಮಕ್ಳು ಬೇಕಲ್ಲಾ...!!

ನನ್ನ ಮದುವೆಯ ಮಾರನೆ ದಿನ...
ಮನೆಯಲ್ಲಿ ನೆಂಟರು, ಗೆಳೆಯರು .. ಸಡಗರ.. ಸಂಬ್ರ್ಹಮ...
ಬಾಯಿತುಂಬಾ ಮಾತುಗಳು... ಗೌಜಿ.. ಗದ್ದಲ...!

ನನ್ನ ಮುದ್ದಿನ ಮಡದಿ ಸಂಗಡ... ನೆಂಟರ..ಸ್ನೇಹಿತರ ಜೊತೆ... ತಮಾಷೆಯಾಗಿ ಮಾತಾಡುತ್ತ ಕುಳಿತಿದ್ದೆವು...

" ಪಕ್ಕೇಶ ಹೆಗಡೇರು ಇದ್ದಾರಾ...?"

ನನ್ನೆದುರಿಗೇ.. ನನ್ನನ್ನು "ಪಕ್ಕು" ಎಂದು ಕರೆಯುವವದು....
ಈ ಜಗತ್ತಿನಲ್ಲಿ ಒಬ್ಬನೇ...
ಅದೂ ಅತ್ಯಂತ ಪ್ರೀತಿಯಿಂದ... ಅಭಿಮಾನದಿಂದ...

ನಾನು ಬಗ್ಗಿ ನೋಡಿದೆ... ಕುಷ್ಟ... ಬಂದಿದ್ದ...

"ಅರೇ.. ಕುಷ್ಟ ಬಾರೊ... ಚೆನ್ನಾಗಿದ್ದೀಯಾ...?"

" ನಾ ...ಚೆನ್ನಾಗಿದ್ದೀನ್ರಾ..... ನಿಮಗೆ ಮದುವೆ ಆಯ್ತಂತೆ... ಎಲ್ಲಿ ಸಣ್ಣಮ್ಮ..?"

ನಾನು ನನ್ನಾಕೆಯನ್ನು ಕರೆದೆ... ತೋರಿಸಿದೆ...
ಕುಷ್ಟ ಸ್ವಲ್ಪ ನಾಚಿಕೆ ಮಾಡಿಕೊಂಡ...

" ಪಕ್ಕೇಶ ಹೆಗ್ಡೇರೆ... ಜೋಡಿ ಚಂದಾಗೈತೆ... "
ಎಂದು ಏನೋ ಉಡುಗೋರೆ ಕೊಟ್ಟ..

"ಇದೆಲ್ಲ ಯಾಕೆ ಕುಷ್ಟ... ?...ಪ್ರೀತಿ ಇದ್ರೆ ಆಯ್ತಪ್ಪಾ.."

"ಇರ್ಲಿ ಬಿಡ್ರಾ... ಇದೂ ಪ್ರೀತಿಗೇ ಕೊಟ್ಟಿದ್ದು..."

ನಾನೂ ಅವನೂ ಅದೂ ಇದೂ ಲೋಕಾಭಿರಾಮವಾಗಿ ಮಾತಾಡಿದೆವು...

ನಮ್ಮ ತಾತನ ಕಾಲದಿಂದಲೂ ಕುಷ್ಟನ ಮನೆಯವರು ನಮ್ಮನೆಯಲ್ಲಿ ಕೆಲಸ ಮಾಡುತ್ತಾರೆ..
ಅತ್ಯಂತ ನಂಬಿಕಸ್ಥ ಜನ... ಹೃದಯವಂತರು...

ಕುಷ್ಟ ಮತ್ತು ನಾನು ಒಂದೇ ವಯಸ್ಸಿನವರು.. ಹಾಗಾಗಿ ಸಲುಗೆ ಇತ್ತು...

ಅವರಿಗೂ ಸ್ವಲ್ಪ ಜಮಿನು, ಅಡಿಕೆ ತೋಟ ಇದ್ದುದರಿಂದ ವರ್ಷವಿಡಿ ಕೆಲಸಕ್ಕೆ ಬರುತ್ತಿರಲಿಲ್ಲ...
ಅವರ ಹೊಲದಲ್ಲಿ ಕೆಲಸವಿಲ್ಲದಿದ್ದಾಗ ನಮ್ಮನೆಗೆ ಬಂದು ಕೆಲಸ ಮಾಡಿಕೊಡುತ್ತಿದ್ದರು..

ನಾನು ಕಾಲೇಜಿಗೆ ಹೋಗುವಾಗಲೇ ಈತನ ಮದುವೆಯಾಗಿತ್ತು...
ಓದು ಬರಹ ಅಷ್ಟಾಗಿ... ಅರಿಯದ ಕುಷ್ಟನದು ಪ್ರೇಮ ವಿವಾಹ... !!
ಅದೊಂದು ದೊಡ್ಡ ಕಥೆ...
ನಾನು ಸಿರ್ಸಿಯಲ್ಲಿ ಓದುವಾಗ ಮನೆಗೆ ಬಂದಾಗ ನಾನು ತಪ್ಪದೆ ಕುಷ್ಟನನ್ನು ಭೇಟಿ ಮಾಡುತ್ತಿದ್ದೆ...

ಇವನಿಗೆ ಒಂದಾದ ಮೇಲೊಂದು ಹೆಣ್ಣುಮಕ್ಕಳು... ಮನೆ ತುಂಬಾ ಹೆಣ್ಣುಮಕ್ಕಳು...

"ಕುಷ್ಟ... ಇಷ್ಟೆಲ್ಲ ಮಕ್ಕಳು ಯಾಕಪ್ಪಾ..?? ಮುಂದೆ ಕಷ್ಟ ಆಗ್ತದೆ...."

"ಅದೆಲ್ಲ..ನಮ್ಮ ಕೈಲಿ ಏನೈತ್ರ...?
ದೇವರು ಕೊಟ್ಟಂಗೆ ಆಗ್ತದೆ..

ಗಂಡು ಮಗ ಬೇಕು ಅಂತ ಎಲ್ಲ ಹೆಣ್ಣು ಮಕ್ಳು ಆಗಿ ಬಿಟ್ರು..."

"ಕುಷ್ಟ ..ಈಗಿನ ಕಾಲದಲ್ಲಿ ಹೆಣ್ಣು ಮಕ್ಳು ಗಂಡು ಮಕ್ಳು ಎಲ್ಲ ಒಂದೇಯಾ..
ಹೆಣ್ಣು ಮಗಳಿಗೆ ಮದುವೆ ಮಾಡಿ ಮನೆಯಲ್ಲೇ ಇಟ್ಗೊ..."

" ಅಯ್ಯೋ ರಾಮ ...!
ನೀವು ಓದಿದವರು... ನಿಮಗೇ ಗೊತ್ತಿಲ್ವಾ..?
ನಮ್ಮ ಕೀರ್ತನೆ ದಾಸರು ಹೇಳಿದ್ದು ಕೇಳಿಲ್ವ...?"

" ಏನು ..?"

" ನಾವು ಸತ್ತಾಗ ನಮಗೆ ಗಂಡು ಮಕ್ಳು ಬೆಂಕಿ ಇಟ್ರೆ .. ಸ್ವರ್ಗ ಲೋಕ ಸಿಕ್ತದಂತೆ...
ನಮಗೆ ಬೆಂಕಿ ಇಡ್ಲಿಕ್ಕಾದ್ರೂ ಗಂಡು ಮಗ ಬೇಕಲ್ರ..!
ಗಂಡಾಗ್ತದೆ.. ಗಂಡಾಗ್ತದೆ... ಅಂತ ಎಲ್ಲ ಹೆಣ್ಣಾಗಿ ಹೋದ್ವು..."

"ಮಾರಾಯಾ...!
ಕಿರ್ತನೇ ದಾಸರು ಹೇಳಿದ್ದು ರಾಮಾಯಣದ ಕಥೆ... ಈಗಿಂದಲ್ಲ..
ಅದೆಲ್ಲಾ ಪುರಾಣ ಕಾಲದಲ್ಲಿ... ಈಗಲ್ಲ.."

ಅವನ ಮುಗ್ಧತನಕ್ಕೆ ಬಹಳಷ್ಟು ತಿಳಿ ಹೇಳಿದ್ದೆ...

ನಾನು ಮುಂಬೈ ಹೋಗಿ ಅಲ್ಲಿಂದ.. ಕಲ್ಕತ್ತಾ.. ಲಕ್ನೋ.... ದೋಹಾ ಎಲ್ಲ ತಿರುಗಿದ್ದೆ..

ಹಲವು ವರ್ಷಗಳ ನಂತರ ಈಗ ಸಿಕ್ಕಿದ್ದ...

" ಪಕ್ಕೇಶ ಹೆಗ್ಡೇರೆ... ನಿಮ್ಮ ಹತ್ರ ಒಂದು ವಿಷ್ಯಾ ಹೇಳ ಬೇಕ್ರಾ..
ಹೆಂಗಸ್ರೂ .. ಮಕ್ಕಳ್ರೂ ಎದುರಿಗೆ ಆ .. ವಿಷ್ಯಾ..
ಮಾತಾಡುದು.. ಬ್ಯಾಡ್ರಾ...

ಇಲ್ಲೆಲ್ಲ ಬ್ಯಾಡಾ..ಅಡಿಕೆ ತೋಟಕ್ಕೆ ಹೋಗೋಣ..."

ನನ್ನ ಅಣ್ಣನಿಗೂ ಕುತೂಹಲ ಹುಟ್ಟಿತು..

"ಏನೋ ಕುಷ್ಟಾ... ನಾನೂ ಬರಬಹುದೇನೋ...?"

"ಬನ್ನಿ ವಡೆಯಾ..ನಿಮಗೆ ಪ್ರಯೋಜನ ಇಲ್ರಾ..
ನಿಮಗೆ ವಯಸ್ಸಾಯಿತಲ್ರಾ..!
ಪಕ್ಕೇಶ ಹೆಗ್ಡೆರಿಗೆ ಉಪಯೋಗ ಆಗ್ತದೆ..
ಈಗಷ್ಟೇ ಮದುವೆ ಆಗಿದೆಯಲ್ರ...!!"

ನನಗೂ ಕೆಟ್ಟ ಕುತೂಹಲ ಹುಟ್ಟಿತು..!!

ಏನಿರ ಬಹುದು ..!!..? ?

"ನಡಿ .. ಕುಷ್ಟ.... ಇಲ್ಲೇ ಅಡಿಕೆ ತೋಟಕ್ಕೆ ಹೋಗೋಣ.."

ತೋಟಕ್ಕೆ ಹೊರಟೇ ಬಿಟ್ಟೇವು... !!

ಅಣ್ಣ ಮನೆಯಲ್ಲೇ ಉಳಿದ....

"ಕುಷ್ಟ ... ಎಷ್ಟು ಮಕ್ಳು ಈಗ ನಿನಗೆ...? "

" ನಂಗೆ ಎಂಟು ಮಕ್ಕಳು ....
ಇನ್ನು ಮಕ್ಳು ಅಗದೆ ಇದ್ದಾಂಗೆ... "ವೆಲ್ಡಿಂಗ್ " ಮಾಡ್ಕೋ ಬಿಟ್ಟಿದ್ದೀನಿ....."

"ವೆಲ್ಡಿಂಗಾ...? ಏನೋ ಇದು...?"

"ಅದೇ.... ಸಿರ್ಸಿ ಪೇಟೆಯಲ್ಲಿ.. .ಕಬ್ಬಿಣ ಎಲ್ಲ ಮಾಡ್ತಾರಲ್ರ... ಹಂಗೆಯಾ...!!
ನನಗೂ .. ನಮ್ಮ ಹೆಂಡ್ರಿಗೂ ಮಕ್ಕಳು ಆಗ್ದಿದ್ದಾಂಗೆ ವೆಲ್ಡಿಂಗ್ ಮಾಡ್ಕೋಬಿಟ್ಟಿದ್ದೇವೆ....!!...
ಅದೇ...ತೂತು ಬಿದ್ದಿರೊ ಹಿತ್ತಾಳೆ ಪಾತ್ರಕ್ಕೆ ವೆಲ್ಡಿಂಗು ಮಾಡ್ತಾರಲ್ರ....!
ಅದೇ ಥರ..!!"

" ಅಯ್ಯೋ.. ಮಾರಾಯಾ...!!
ಅಪರೇಷನ್ನು ಅನ್ನು...!!
ಒಳ್ಳೆದಾಯ್ತು ನೋಡು..ತುಂಬಾ ತಡ ಆದ್ರೂ..
ಬುದ್ಧಿ ಬಂತಲ್ಲ...ನಿನಗೆ.."

" ನಂಗೆ ಎಂಟನೆಯದು ಗಂಡು ಮಗುವ್ರಾ..!
ಅದನ್ನೇ.. ನಿಮಗೆ ಹೇಳ್ಬೇಕಿತ್ರಾ..."


"ಅಂತೂ..ಗಂಡು ಮಗು ಆಯ್ತಾ...!! ಅದೂ.. ಒಳ್ಳೆದಾಯ್ತು ಬಿಡು.."

"ಸುಮ್ನೆ.. ಕಾಲಿ ಪುಕ್ಕಟೆ.. ಗಂಡು ಮಗಾ ಆಗ್ಲಿಲ್ರಾ.. !
ನಾವು ಗಂಡ ಹೆಂಡ್ತಿ.. ಸಿಕ್ಕಾಪಟ್ಟೆ ..ಕಷ್ಟಪಟ್ಟಾಯ್ತು..!
ಸಿರ್ಸಿಯಲ್ಲಿ ಎಲ್ಲಾ ಡಾಕ್ಟ್ರ ಹತ್ರ ಹೋದೆ..
ಆ.. ಇಂಗ್ಲೀಷ್ ಡಾಕ್ಟ್ರ ಹತ್ರ.. ಏನೂ ಆಗ್ಲಿಲ್ಲ..!."

" ಹೌದಾ..? ಏನು ಮಾಡ್ದೆ...?"

" ನಮ್ಮ..ಕಾಮತ್‍ರು ಗೊತ್ತಲ್ಲ...!!
ಅದೇ... ಮಂತ್ರ ಎಲ್ಲ ಮಾಡ್ತರಲ್ರ.. "ಕಾಮತ್ ಹತ್ರ ಹೋಗಿದ್ದೆರಾ.."

"ಕಾಮತ್‍ರಾ...? ಅವರು .. ಏನು ಮಾಡಿದ್ರು...?"

" ಅವರು ನಂಗೂ... ನನ್ನ ಹೆಂಗಸ್ರಿಗೂ ...
ತಾಯತ ಕೊಟ್ಟು ಮಂತ್ರಿಸಿ ಕೊಟ್ರು ... ನೋಡಿ.. !!
ಎಂತಾ.. ಮಂತ್ರ ಶಕ್ತಿ ಅಂತೀರ್ರೀ..!!.?
ಗಂಡು ಮಗು ಆಗೇ ಬಿಡ್ತು.. !!
ಮಗು ಹೆಂಗೈತೆ ಅಂತಿರ್ರಾ...!!..???
ಹೂವೇ..ಹೂವು...!
ಕಾಮತ್‍ರ ಹಂಗೇ ಐತೆ..!!.

ಬೆಳ್ಳಗೆ..ಕೆಂಪಗೆ ಟೊಮೆಟೊ ಹಂಗೆ ಐತೆ...!!.."

"ಛೇ.. ಛೇ... ಹಾಗೆಲ್ಲ ಹೇಳಬೇಡಪ್ಪ..."

" ನನ್ನ ಮಗನ್ನ ನೋಡದು ಬ್ಯಾಡಾ...!
ಕಾಮತ್ರ ನೋಡದು ಬ್ಯಾಡಾ..!
ಹೂವೇ..ಹೂವು.... ಕಾಮತ್ರು..!!.. ಪಕ್ಕೇಶ್ ಹೆಗಡೇರೆ...!.."

" ಥೂ ... ಮಳ್ಳ ...!
ಹಂಗೆಲ್ಲ ಬೇರೆ ಯಾರತ್ರೂ ಹೇಳ್ಬೇಡ..!
ಅಪಾರ್ಥ ಮಾಡ್ಕೋತಾರೆ..
ನಿನ್ನ ಹೆಂಡ್ತಿ ಬೆಳ್ಳಗೆ ಇದ್ದಾಳೆ ..
ಮಗುನೂ ಬೆಳ್ಳಗೆ ಹುಟ್ಟಿದೆ...
ಅದರ್ಲಿ ...
ಏನೋ ಹೇಳ್ಬೇಕು ಅಂದ್ಯಲ್ಲಾ... ಏನು..?"


" ಪಕ್ಕೇಶ್ ಹೆಗ್ದೇರೆ...!
ನಮಗೂ ನಿಮಗೂ ದೋಸ್ತಿ ಐತೆ..
ಅದಕ್ಕೆ ಮನಸ್ಸು ತಡಿಲಿಕ್ಕೆ ಆಗ್ದೆ.... ಹೇಳ್ಳಿಕ್ಕೆ ಬಂದೆ....
ನೀವೂ ಹೊಸತಾಗಿ ಮದುವೆ ಆಗಿದ್ದೀರಿ...
ನೀವೂ..ನಂಥರ ಎಡವಟ್ಟು ಮಾಡ್ಕೋಬೇಡಿ..!!.
ಕಾಮತ್‍ರ ಹತ್ರ ಹೋಗಿ ತಾಯತ ಕಟ್ಟಿಸಕ್ಕಳ್ಳಿ ...
ಗಂಡು ಮಗು ಆಗ್ತದೆ.."

ಯಾರೋ ಹಿಂದುಗಡೆಯಿಂದ ಕಿಸಕ್ಕನೇ ನಕ್ಕಂತಾಯಿತು...

ಹಿಂದೆ ನೋಡಿದ್ರೆ ಅಣ್ಣ ಬಿದ್ದೂ ಬಿದ್ದೂ ನಗ್ತಾ ಇದ್ದ....!!

ಅಣ್ಣ ನಗುತ್ತಲೆ...ಕುಷ್ಟನನ್ನು ಕೇಳಿದ...

"ಕುಷ್ಟಾ... ನಿನಗೆ ವೆಲ್ಡಿಂಗ್ ಮಾಡಿದ್ದು ಯಾರು...???..!
ಕಾಮತ್ರಾ...?"

ಕಾಮತ್ರಿಗೆ.. ವೆಲ್ಡಿಂಗ್ ಮಾಡ್ಲಿಕ್ಕೆ ಬರೂದಿಲ್ರ...!
ಅವರು ಏನಿದ್ರೂ ..ವೆಲ್ಡಿಂಗ್ ತೆಗಿತಾರ್ರಾ....!!..
ಅವರ ಮಂತ್ರ ಶಕ್ತಿಗೆ .. ಅವರ ತಾಯತಕ್ಕೆ.. ಸಿಕ್ಕಾಪಟ್ಟೆ ತಾಕತ್ ಐತ್ರ..!
ನಮಗೆ ವೆಲ್ದಿಂಗು.. ಸಿರ್ಸಿ ಡಾಕ್ಟ್ರು ಮಾಡಿದ್ದು.."

ಮತ್ತೆ ಕುಷ್ಟನೇ ಹೇಳಿದ...

" ದೊಡ್ಡ ಹೆಗ್ಡೇರೆ....
ನೀವಾದ್ರೂ ಹೇಳಿ... ಪಕ್ಕೇಶ ಹೆಗ್ಡೆರಿಗೆ...
ಜೀವನದಲ್ಲಿ ಬದುಕಲಿಕ್ಕೆ ಕಷ್ಟ ಪಡ್ತೀವಿ...
ಸತ್ತಮೇಲಾದ್ರೂ.. ಆರಾಮ್ ಇರುಬಹ್ದು...
ಗಂಡು ಮಕ್ಳು ಹುಟ್ಟಿ..ಬೆಂಕಿ ಇಟ್ರೆ ....
ಸ್ವರ್ಗಕ್ಕೆ ಹೋಗಬಹುದಲ್ಲ..!
ಕಾಮತ್‍ರ ತಾಯತ ..ಕಟ್ಟಿಸ್ಕಳ್ಳಿಕ್ಕೆ..ನಿವಾದ್ರೂ.. ಹೇಳ್ರೀ..."

...............................................................



( ಕುಷ್ಟನ ಮಾತುಗಳು ನಿಮಗೆ ಅರ್ಥವಾಗುತ್ತದಾ...?
ಅದು ಅಲ್ಲಿನ ಆಡು ಭಾಷೆ...)