ಸುಡು ಬಿಸಿಲು...
ಕೆಟ್ಟ ಟ್ರಾಫಿಕ್ಕಿನಲ್ಲಿ ಕಾರು ಓಡಿಸಿಕೊಂಡು...ಸಹಕಾರ ನಗರ ತಲುಪಿದಾಗ ಹನ್ನೊಂದು ಗಂಟೆ...
ನನ್ನ ಸಂಗಡ ಸತ್ಯ ಮತ್ತು ನಾಗು ಕೂಡ ಇದ್ದರು...
ಅಲ್ಲಿ ಬಂದು ನೋಡಿದರೆ ಯಾರೂ ಕೆಲಸಗಾರರೇ ಇಲ್ಲ...
ನನಗೆ ಪಿತ್ತ ನೆತ್ತಿಗೇರಿತು...
ಅಲ್ಲಿಯೇ ಇದ್ದ ಮೇಸ್ತ್ರಿ ಶಿಖಾಮಣಿಗೆ ಕೇಳಿದೆ..
"ಏನಪ್ಪಾ ಇದು ??
ಸೋಮವಾರ ರೂಫ್ ಕಾಂಕ್ರೀಟು... ಇನ್ನೂ ಏನೂ ತಯಾರಾಗಿಲ್ಲ.
ಎಲ್ಲ ಎಲ್ಲಿ ಹೋಗಿದ್ದಾರೆ ?"
"ಸಾರ್ ...
ಇಲೆಕ್ಷನ್ ಅಲ್ವಾ ? ಅದಕ್ಕೆ ಯಾರೂ ಇಲ್ಲ..."
"ಏನ್ರೀ ಇದು ?
ಬಿಬಿಎಂಪಿ ಚುನಾವಣೆಗೂ ನಮ್ಮ ಕೆಲಸಕ್ಕೂ ಏನ್ರೀ ಸಂಬಂಧ ?"
"ಸಾರ್..
ಎಲ್ಲಾ ಚುನಾವಣೆ ಪ್ರಚಾರಕ್ಕೆ..ಹೋಗಿದಾರೆ..
ಒಬ್ಬಬ್ಬರಿಗೆ .. ಒಂದು ದಿನಕ್ಕೆ
ಐದು ನೂರು ಕೊಡ್ತಾರೆ..
ಬೆಳಿಗ್ಗೆ ನಾಷ್ಟಾ... ಮಧ್ಯಾಹ್ನ ಬಿರ್ಯಾನಿ ಊಟ...
ಮಧ್ಯದಲ್ಲಿ ಕುಡಿಲಿಕ್ಕೆ ಪೆಪ್ಸಿ... ಕೋಲಾ...
ರಾತ್ರಿ ಮತ್ತೆ ಬಿರ್ಯಾನಿ ಊಟ...
ಮತ್ತೆ ಎಣ್ಣೆ...!!
ಅದು ಬೇಕಾದಷ್ಟು...!!... !.."
"ಎಣ್ಣೆ..... ??.. !!.."
"ಅದೇ... ಸಾ...! ಸರಾಯಿ... ಹೆಂಡ...!
ನಾವು ಗಾರೆ ಮೇಸ್ತ್ರಿಗೆ ಕೊಡೋದು ಮುನ್ನುರೈವತ್ತು...
ಯಾರು ಬರ್ತಾರೆ ಈ ಕೆಲಸಕ್ಕೆ?
ಇನ್ನು ಕೆಲಸ ಏನೇ ಇದ್ರೂ ಒಂದುವಾರದ ನಂತರ...
ಅದೂ ರಾಜಕೀಯದವರು ಕೊಟ್ಟ...
ಹಣ, ಹೆಂಡ ಖರ್ಚಾಗಿದ್ದರೆ ಮಾತ್ರ !! "
ನನಗೆ ಬೇಸರವಾಯಿತು...
"ನೀನು... ಒಬ್ಬ ಇಲ್ಲಿ ಯಾಕೆ ಇದ್ದೀಯಾ...?
ನೀನು ಯಾವುದಾದರೂ ಪಕ್ಷದ ಜೊತೆ ಹೋಗು ...!"
"ನನಗೆ ಎಲ್ಲಾ ರಾಜಕೀಯ ಪಕ್ಷನೂ ಒಂದೇ ಸಾರ್..!
ಒಂದೊಂದು ದಿನ ಒಂದೋಂದು ಪಕ್ಷದ ಪ್ರಚಾರಕ್ಕೆ ಹೋಗ್ತೀನಿ.....!"
"ಹೌದಾ... ?"
"ಹೌದು ಸಾ...!!. ಇಲ್ನೋಡಿ...
ಇದು ಎಲ್ಲಾ ಪಕ್ಷಕ್ಕೂ ಆಗುವಂಥಹ ಶಾಲು..!!.! "
ನಾನು ನೋಡಿದೆ...
ನಮ್ಮ ದೇಶದ ಧ್ವಜದ ಬಣ್ಣದ ಶಾಲು...!
ಕೇಸರಿ, ಬಿಳಿ, ಹಸಿರು ಬಣ್ಣದ್ದು...
ನನಗೆ ಅರ್ಥವಾಗಲಿಲ್ಲ...
"ಇದು ಎಲ್ಲ ಪಕ್ಷಕ್ಕೂ... ಹೇಗೆ ಸರಿ ಹೋಗ್ತದೆ ...?"
"ಇದು.. ತುಂಬಾ ಸಿಂಪಲ್ಲು ಸಾ...
ಸೋನಿಯಾಗಾಂಧಿಯವರದ್ದು... ಚರ್ಚು.. ಬಿಳಿ ಬಣ್ಣ...!
ಕಾಂಗ್ರೆಸ್ಸಿಗೆ... ಬಿಳಿ ಬಣ್ಣ...
ಇದಕ್ಕೆ ಸ್ವಲ್ಪ ಕೇಸರಿ, ಹಸಿರು.. ಕಂಡರೂ ಅಡ್ಡಿಯಿಲ್ಲ ಸಾ...!"
"ಏನಪ್ಪಾ ಇದು...?"
ಇಲ್ನೋಡಿ ಸಾ...
ಬಿಜೇಪಿದು ದೇವಸ್ಥಾನ... !
ಕೇಸರಿ ಬಣ್ಣ...
ಇವರಿಗೆ ಉಳಿದ ಎರಡು ಬಣ್ಣ ಸ್ವಲ್ಪ, ಸ್ವಲ್ಪ ಕಂಡರೆ ಪರವಾಗಿಲ್ಲ ಸಾ..."
ಇನ್ನು..
ದಳಕ್ಕೆ ...ಮಸೀದೆ..ಕಂಡರೆ ಪ್ರೀತಿ...!
ಮತ್ತೆ... ರೈತರ ಬಣ್ಣ ಹಸಿರು...!
ಇವರಿಗೂ ಅಷ್ಟೇ... ಆ ಕಡೆ.. ಈಕಡೆ....ಬಣ್ಣ..
ಸ್ವಲ್ಪ ಸ್ವಲ್ಪ ಕಂಡರೆ ಪರವಾಗಿಲ್ಲ ಸಾ...
ನಾನು...
ಯಾವ ಪಕ್ಷಕ್ಕೆ ಹೋಗ್ತೀನೊ...
ಅವತ್ತು ಶಾಲು ಮಡಚಿ ...
ಅವರ ಬಣ್ಣ ಎದುರಿಗೆ ಕಾಣುವ ಹಾಗೆ ಹಾಕೋತೀನಿ..."
ತುಂಬಾ ಸಿಂಪಲ್ಲು ಸಾ..."
"ನೀನು ಬುದ್ಧಿವಂತ ಕಣಪ್ಪಾ,,,!"
"ಇನ್ನೊಂದು ವಿಷ್ಯ ಗೊತ್ತಾ ಸಾ...?
ಇವರ ಎಲ್ಲಾರ ಬಣ್ಣಾನೂ ಅಸಲಿಗೆ ಒಂದೆ ಸಾರ್...!! "
"ಇದೆಲ್ಲಾ ಸರಿ... ವೋಟ್ ಯಾರಿಗೆ ಹಾಕ್ತಿಯಾ...?"
"ಸಾ...
ಎಣ್ಣೆ ಮೇಲೆ ಆಣೆ ಮಾಡಿ ಹೇಳ್ತೀನಿ...
ಯಾರಿಗೂ ಮೋಸ ಮಾಡೋದಿಲ್ಲ ಸಾ...
ಎಲ್ಲರಿಗೂ ವೋಟ್ ಹಾಕ್ತೀನಿ...
ಇಲ್ಲಾ ಅಂದ್ರೆ ...
ಅವತ್ತು ವೋಟ್ ಹಾಕ್ಲಿಕ್ಕೇ... ಹೋಗೋದಿಲ್ಲ...
ನನ್ನ ಒಬ್ಬನ ವೋಟಿಂದ ಏನೂ ಆಗೋದಿಲ್ಲ ಸಾರ್..!!
ಗೆಲ್ಲವರು ಗೆಲ್ತಾರೆ... ಸೋಲುವವರು.. ಸೋಲ್ತಾರೆ...!! "
ಅಲ್ಲಿಯೇ ಇದ್ದ ಸತ್ಯ ನನ್ನ ಭುಜದ ಮೇಲೆ ಕೈ ಹಾಕಿದ...
" ನಮ್ಮ ದೇಶದಲ್ಲೇ ಅಲ್ಲವಾ...
ಲಾಲ್ ಬಹಾದೂರ್ ಶಾಸ್ತ್ರಿ..
ಗಾಂಧಿ ತಾತ,
ಗುರ್ಜಾರಿಲಾಲ್ ನಂದ ಹುಟ್ಟಿರೋದು...?"
ನನಗೆ ಮುಂದೆ ಮಾತನಾಡುವ ಉತ್ಸಾಹ ಇರಲಿಲ್ಲ...
ಸತ್ಯ ನಮಗೆಲ್ಲ ಉತ್ಸಾಹ ತುಂಬಲು ಮತ್ತೆ ಅವನೇ ಹೇಳಿದ...
"ನೋಡ್ರೋ...
ಯಾವುದು ಯಾವಾಗ ಆಗಬೇಕೋ...
ಅದು ಆವಾಗಲೇ ಆಗುತ್ತದೆ..!
ಈಗ ಬೇಸರ ಯಾಕೆ ?
ಇನ್ನು ಒಂದು ವಾರ ರಜೆ..
ನಾಳೆ ಐಪಿಎಲ್ ಪಂದ್ಯ ಇದೆ..
ನಾನು ಟಿಕೆಟ್ ಬುಕ್ ಮಾಡ್ತೀನಿ ...
ಎಲ್ಲರೂ ಹೋಗಿ ಬರೋಣ...!! "
ಅಲ್ಲಿಯೇ ಇದ್ದ ನಾಗು ಸುಮ್ಮನಿರಲಾಗಲಿಲ್ಲ...
"ಈ ...ಐಪಿಎಲ್ ಒಂಥರಾ...
ರಾಮ ರಾವಣರ ಯುಧ್ಧದ ಹಾಗೆ ಕಣ್ರೋ..!!..."
"ರಾಮಾಯಣದ ಯುದ್ಧದ ಹಾಗಾ.!!.?"
"ನೋಡ್ರೋ...
ರಾಮ, ರಾವಣರ ಯುದ್ಧದಲ್ಲಿ... ಸತ್ತವರು ಯಾರು ?
ಚಂದವಾಗಿ ಬೆಟ್ಟದಲ್ಲಿ.. ಹಾಯಾಗಿದ್ದ ಕಪಿಗಳು ..!
ವಿನಾಕಾರಣ ಸತ್ರು...!
ಈ.. ರಾವಣ...
ರಾಮನ ಹೆಂಡತಿ ಎತ್ತುಕೊಂಡು ಹೋಗಿದ್ರೆ...
ಈ ಮರದಿಂದ ಮರಕ್ಕೆ ಹಾರೋ ಕಪಿಗಳಿಗೆ ಏನಾಗ ಬೇಕಿತ್ತೊ. !! ??...."
"ಏನೂ ಇಲ್ಲ..!!.."
"ಇದೂ ಕೂಡ ಹಾಗೆ...!
ಬೆಂಗಳೂರು ಟೀಮು ಅಂತಾರೆ..!
ಇಲ್ಲಿಯವರು ಮೂರು ಜನ ಇರ್ತಾರೆ..!
ಉಳಿದವರು ಯಾರೋ...? ಏನೋ..!
ನಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲ...
ಹುಚ್ಚರ ಹಾಗೆ...
ಟೈಮ್ ವೇಸ್ಟ್ ಮಾಡಿಕೊಂಡು ಟಿವಿ ಮುಂದೆ ಕುಳಿತಿರ್ತೀವಿ.....
ನಾವೆಲ್ಲಾ ರಾಮಾಯಣದ ಕಪಿಗಳು ಕಣ್ರೋ...! "
"ಅದಕ್ಕೆನಿಗ..?.."
ನಾವು ಹುಚ್ಚರು ಕಣ್ರೋ...
ನಮ್ಮ ಬೆಂಗಳೂರು ಟೀಮು ಅಂತ ಕುಣಿತಿವಿ...
ಅರಚ್ತಿವಿ...
ಎಷ್ಟು ಜನ ಕರ್ನಾಟಕದ ಆಟಗಾರರು ಇದ್ದಾರೆ ಅಲ್ಲಿ?
ಹುಚ್ಚರ ಮದುವೆಯಲ್ಲಿ ಉಂಡವನೇ..ನೇ ಜಾಣನಂತೆ...
"ಲೋ...
ನಾಗು ಹಾಗಲ್ವೋ..!
ಇಂಥಹ ಈವಂಟ್ ಗಳಿಂದ ಹಣ ಮಾರ್ಕೆಟ್ಟಿನಲ್ಲಿ ಓಡಾಡ್ತದೆ.. "
"ನೋಡ್ರೋ...
ಈ ಐಪಿಎಲ್ ನಿಂದ...
ಮಲ್ಯನ ಹೆಂಡ ಖರ್ಚಾಗ್ತದೆ...!
ಪೆಪ್ಸಿ, ಕೋಕಾಕೋಲದಂಥಹ ಪಾನೀಯ ಮಾರಾಟ ಆಗ್ತದೆ...!.
ಅಲ್ಲಿ ಬರುವ ಜಾಹಿರಾತುಗಳು...
ಆ ಆಟದ ಪ್ರಾಯೋಜಕರು ಎಲ್ಲವು "ವಿದೇಶಿ" ಕಂಪನಿಗಳು...!
ಒಂದಷ್ಟು ಮಕ್ಕಳು ಪರೀಕ್ಷೆಯಲ್ಲಿ ಸರಿಯಾಗಿ ಓದದೆ ಕಡಿಮೆ ಮಾರ್ಕ್ಸ್ ತಗೋತಾರೆ....
ಒಂದಷ್ಟು ಅಪ್ಪಂದಿರು ಮಕ್ಕಳಿಗೆ ಕ್ರಿಕೆಟ್ ಬ್ಯಾಟು ಕೊಡಸ್ತಾರೆ...
ಕ್ರಿಕೆಟ್ ಕೊಚಿಂಗಿಗೆ ಕಳಸ್ತಾರೆ...
ಬಿಸಿಸಿಐ ನವರು,
ಟಿವಿಯವರು ಕೊಳೆಯುವಷ್ಟು ಹಣ ಮಾಡ್ಕೋತಾರೆ.."
"ಇದಕ್ಕೆ ಪರಿಹಾರ ??"
"ನಾವು ಬದಲಾಗ ಬೇಕು...
ಇದು ಸಧ್ಯಕ್ಕೆ..ಸಾಧ್ಯವಾಗದ ಮಾತು...
ಒಂದು ಮಜಾ ವಿಷಯ ಹೇಳ್ತೀನಿ ಕೇಳಿ...
ಒಬ್ಬನಿಗೆ ಹುಚ್ಚು ಇತ್ತು..
ಹಾಗಾಗಿ ಮದುವೆ ಆಗಲಿಲ್ಲ...
ಆ ಊರಿನ ಡಾಕ್ಟರ್ ಹೇಳಿದ್ರು
"ಇವನಿಗೆ ಮದುವೆ ಹುಚ್ಚು ಇದೆ..
ಹುಚ್ಚು ಬಿಡಲಿಕ್ಕೆ ಮದುವೆ ಆಗಬೇಕು..."
ಆದರೆ ಆ ಹುಚ್ಚನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರ್ಲಿಲ್ಲ..."
"ಅಂದ್ರೆ...??"
"ಹುಚ್ಚು ಬಿಟ್ಟಂತೂ ಮದುವೆ ಆಗೋದಿಲ್ಲ...
ಮದುವೆ ಆದಂತೂ ಹುಚ್ಚು ಬಿಡೋದಿಲ್ಲ...
ನಮ್ಮ ಕಥೇನೂ.. ಅದೇ... ಕಣ್ರೋ...!
ನಾವೂ ಬದಲಾಗೋದಿಲ್ಲ..
ನಮ್ಮ ರಾಜಕಿಯದವರೂ ಬದಲಾಗೋದಿಲ್ಲ..!
ಅಷ್ಟರಲ್ಲಿ ಒಂದಷ್ಟು ನೂರು ಜನರ ಗುಂಪು ಬಂದಿತು...
" .... .. ಪಕ್ಷಕ್ಕೇ ಜಯವಾಗಲಿ...
ನಮ್ಮ ಪಕ್ಷ ಬಡವರ ಪಕ್ಷ...
ನಮ್ಮದು..ರೈತರ ಪಕ್ಷ...
ಅಭಿವೃದ್ಧಿಯ ಪಕ್ಷ..
ಬೆಂಗಳೂರಿನ ಅಭಿವೃಧ್ಧಿಗೆ ನಮಗೆ ಮತ ನೀಡಿ..."
ಮೈಕಿನಲ್ಲಿ ಒಬ್ಬ ಜೋರಾಗಿ ಕೂಗುತ್ತಿದ್ದ...
ಹಿಂದೆ ಇರುವ ಜನರೆಲ್ಲ ಜೈಕಾರ ಹಾಕುತ್ತಿದ್ದರು.....
ನಾನು ಸತ್ಯ...
ನಾಗು... ನಿಂತು ಸುಮ್ಮನೇ ನೋಡುತ್ತಿದ್ದೆವು...
( ಇಲ್ಲಿ ಬರೆದದ್ದು ಶಿಖಾಮಣಿಯ ಮುಗ್ಧ ಮಾತುಗಳು...
ದಯವಿಟ್ಟು ಎಲ್ಲರೂ..
ಇದ್ದಿದ್ದುದರಲ್ಲೇ ಯೋಗ್ಯರಾದವರಿಗೆ ಮತ ಹಾಕಿ...)