ನಾವಾಗ ಕನ್ನಡ ಶಾಲೆಯಲ್ಲಿ ಓದುತ್ತಿದ್ದೆವು...
ಶಾಲೆಯಲ್ಲಿ ಏಳು ಕ್ಲಾಸುಗಳಿಗೆ ಇಬ್ಬರೇ ಮಾಸ್ತರುಗಳು..
ಹಾಗಾಗಿ ಮಾಸ್ತರ್ರು ಕೆಲವು ಕ್ಲಾಸಿನ ಮಕ್ಕಳಿಗೆ ..
ನಿಬಂಧ.. ಪ್ರಶ್ನೋತ್ತರ ಬರೆಯುವ ಕೆಲಸ ಕೊಟ್ಟು ತಾವು ಪಾಠ ಮಾಡುತ್ತಿದ್ದರು...
ಇನ್ನು ಕೆಲವು ಕ್ಲಾಸಿನ ಮಕ್ಕಳಿಗೆ ಆಟ ಆಡಲು ಹೇಳುತ್ತಿದ್ದರು..
ಅಂದು ನಮಗೆ
" ಹೋಗ್ರೋ...
ಹೊರಗೆ ಹೋಗಿ ಆಟ ಆಡಿ..
ಗಲಾಟೆ ಮಾಡಬೇಡಿ.. ಸುಮ್ಮನೆ ಆಟ ಆಡಿ..
ಗಲಾಟೆ ಮಾಡಿದರೆ ಛಡಿ ಏಟು...!!.."
ಎಂದು ಕಣ್ಣು ಕೆಂಪಗೆ ಮಾಡಿ ಹೇಳಿದರು...
ಅವರು ಯಾವಾಗಲು ಹಾಗೇನೆ.. !
ನಾವು ಛಂಗನೇ ಜಿಗಿಯುತ್ತ ಆಟದ ಮೈದಾನಕ್ಕೆ ಬಂದಿದ್ದೆವು...
" ಏನು ಆಟ ಆಟ ಆಡೋಣ...?"
"ಕಳ್ಳ.. ಪೋಲಿಸು ಆಟ...? "
ಪರಮೇಸ್ರಣ್ಣಯ್ಯನಿಗೆ ಚಿಂತೆಯಾಯಿತು...
" ನೋಡ್ರೋ..
ನಮ್ಮನೆಗೆ ನನ್ನ ಅತ್ತೆಯ ಮಗ ಮಾಬ್ಲು ಬಂದಿದ್ದಾನೆ...
ಅವನನ್ನೂ ಸೇರಿಸ್ಕೊಂಡು ಆಟ ಆಡಿ ಅಂತ ಮನೆಯಲ್ಲಿ ಹೇಳಿದ್ದಾರೆ.."
ಮನೆಗೆ ನೆಂಟರ ಮಕ್ಕಳು ಬಂದರೆ ...
ಮನೆಯಲ್ಲಿ ಗಲಾಟೆ ಮಾಡುತ್ತಾರೆಂದು ಶಾಲೆಗೆ ಕಳಿಸುವದು ..
ಆಗ ನಮ್ಮೂರಲ್ಲಿ ಅದು ಸಾಮಾನ್ಯವಾಗಿತ್ತು...
ಪರಮೇಸ್ರಣ್ಣಯ್ಯ.. ಮಾಬ್ಲುವನ್ನು ಶಾಲೆಗೆ ಕರೆದುಕೊಂಡು ಬಂದಿದ್ದ...
ಇನ್ನೊಬ್ಬ ಹುಡುಗ ಆಡಲಿಕ್ಕೆ ಸಿಕ್ಕಿದ್ದಾನಲ್ಲ...!!
ಕುಷ್ಟನಿಗೆ ಖುಷಿಯಾಯ್ತು..
"ಒಳ್ಳೆಯದಾಯ್ತು ಬಿಡ್ರಾ..
ಪರಮೇಸ್ರಣ್ಣ..
ಆಡ್ಲಿಕ್ಕೆ ಇನ್ನೊಬ್ರು ಜಾಸ್ತಿ ಆದ್ರು..."
"ಹಾಗಲ್ರೋ...
ಮಾಬ್ಲುಗೆ ಆರೋಗ್ಯ ಸರಿ ಇಲ್ಲ...
ಅವನನ್ನು ಬಿಟ್ಟು ಹೇಗೆ ಆಡೋದು...?"
ನಾವೆಲ್ಲ ಮಾಬ್ಲು ಹತ್ತಿರ ಬಂದೆವು...
ಮುಖ ಬಾಡಿಸಿಕೊಂಡು ಕುಳಿತ್ತಿದ್ದ...
ಕುಷ್ಟನಿಗೆ ಬೇಸರ ಆಯ್ತು...
" ಮಾಬ್ಲು..
ಹೆದರ ಬೇಡ್ರಾ...
ಏನಾಗ್ತ ಇದೇರ್ರಾ...?.."
" ಹೊಟ್ಟೆಯಲ್ಲಿ ಏನೋ ಆಗ್ತ ಇದೆ...
ಸಣ್ಣಕೆ ನೋವು..ತಲೆ ನೋವು..."
ಕುಷ್ಟ ಮೈ ಮುಟ್ಟಿ ನೋಡಿದ..
"ಜ್ವರ ಇಲ್ರಾ...
ನೀವು ಇಲ್ಲೇ .. ಇರ್ರಾ...
ನಮ್ಮನೆಯಲ್ಲಿ ಮಾತ್ರೆ ಇದೇರ್ರಾ...
ತರ್ತೀನ್ರಾ.. "
ಕುಷ್ಟನ ಮನೆ ಶಾಲೆಯಿಂದ ತುಂಬಾ ಹತ್ತಿರ..
ಒಂದು ಏರು ಹತ್ತಿ..
ಒಂದು ಇಳಕಲು ಇಳಿದರೆ.. ಅವನ ಮನೆ !!
ಚಕ್ಕನೆ ಮನೆಗೆ ಓಡಿ ಹೋಗಿ ಬಂದ..
" ಮಾಬ್ಲು..
ನಮ್ಮ ಸಂಗಡ ಆಡ ಬಹುದ್ರಾ...
ಹೆದರ ಬೇಡ್ರಾ.. ಈ ಮಾತ್ರೆ ತಕಳಿ.."
ಪರಮೇಸ್ರಣ್ಣಯ್ಯ ಶಾಲೇಯಿಂದ ಚೊಂಬಲ್ಲಿ ನೀರು ತಂದ...
ನಮ್ಮ ಶಾಲೆಯಲ್ಲಿ ಲೋಟ ಇಲ್ಲವಾಗಿತ್ತು..
ಕುಷ್ಟ ಒಂದು ಮಾತ್ರೆ ಕೊಟ್ಟ.. ಮಾಬ್ಲು ನೀರು ಕುಡಿದು ಮಾತ್ರೆ ತಗೊಂಡ..
ಕುಷ್ಟ ಮಾಬ್ಲುವಿಗೆ ಮತ್ತಷ್ಟು ಧೈರ್ಯ ತುಂಬಿದ..
"ಏನೂ ಆಗೋದಿಲ್ರ..
ನಮ್ಮ ಸಂಗದ ಆಡ ಬಹುದ್ರಾ...
ಇದು ಹೊಟ್ಟೆ ನೋವಿನ ಮಾತ್ರೆ..
ಕಾನಸೂರು ಡಾಕ್ಟ್ರು ಕೊಟ್ಟಿದ್ರಾ...
ನೀವು ತಗಳ್ರಾ.."
ಕುಷ್ಟ ಈಗ ಐದು ಮಾತ್ರೆ ಕೊಟ್ಟ...
ಮಾಬ್ಲು ತಗೊಂಡ...
ಸ್ವಲ್ಪ ಹೊತ್ತು ಕಳೆಯಿತು.. ಮಾಬ್ಲುಗೆ ಕಡಿಮೆ ಆಗಲಿಲ್ಲ..
"ಮಾಬ್ಲು..
ಇನ್ನೂ ಮಾತ್ರೆ ಇದೇರ್ರಾ.. ಹೆದರ ಬೇಡ್ರಾ.. ತಕಳಿ..!!.."
ಅಂತ ಮತ್ತೆ ಒಂದಷ್ಟು ಮಾತ್ರೆ ಕೊಟ್ಟ..
ಮಾಬ್ಲುಗೆ ಸಣ್ಣ ಸಂಶಯ ಬಂತು..
" ಕುಷ್ಟಾ ...
ನಿನಗೆ ಹೇಗೆ ಗೊತ್ತು ಇದು ಹೊಟ್ಟೆ ನೋವಿನ ಮಾತ್ರೆ ಅಂತ...?
" ನನ್ನ ಅವ್ವಂಗೆ ..
ಆಗಾಗ ಹೊಟ್ಟೆ ನೋವು ಬರ್ತದರ್ರಾ..
ನೀವು ತಗಳ್ರಾ..
ಹೆದರಬೇಡ್ರಾ. !!.."
ಮಾಬ್ಲು ಕುಷ್ಟ ಕೊಟ್ಟ ಅಷ್ಟೂ ಮಾತ್ರೆ ತಗೊಂಡ...!
ಸ್ವಲ್ಪ ಹೊತ್ತು ಕಳೆಯಿತು...
ಮಾಬ್ಲು ಬೆವರ ತೊಡಗಿದ...
"ನನಗೆ ಏನೋ ಆಗ್ತಾ ಇದೆ... !
ಅಯ್ಯೋ.. ಅಯ್ಯೊಯ್ಯೋ.. !!
ಹೊಟ್ಟೆ ನೋವು..!
ತಡಿಲಿಕ್ಕೆ ಆಗ್ತ ಇಲ್ಲ...!.."
ಅಂತ ಬಿದ್ದು ಬಿದ್ದು..ಹೊರಳಾಡ ತೊಡಗಿದ...!
ನಾವೆಲ್ಲ ಗಾಭರಿಯಿಂದ ಮಾಸ್ತರ್ರ ಬಳಿ ಓಡಿದೆವು..
ಮಾಸ್ತರ್ರು ಓಡೋಡಿ ಬಂದರು...
"ಏನಾಯ್ತು..?.. !.."
" ಮಾಬ್ಲುಗೆ ಹೊಟ್ಟೆ ನೋವು..
ಕುಷ್ಟ ಮನೆಗೆ ಹೋಗಿ ಮಾತ್ರೆ ಕೊಟ್ಟ..
ಈಗ ಜಾಸ್ತಿ ಆಗೋಯ್ತು.."
ಈಗ ಮಾಸ್ತರ್ರೂ ಗಾಭರಿ ಬಿದ್ದರು..!
ಮಾಬ್ಲು ಹೊಟ್ಟೆ ನೋವಿನಿಂದ ಮತ್ತೂ ಜೋರಾಗಿ ಕೂಗಾಡತೊಡಗಿದ...
"ಅಯ್ಯೋ... ಅಯ್ಯೊಯ್ಯೋ... !!.."
ನೋವು ತಡೆಯಲಾಗದೆ ಹೊರಳಾಡ ತೊಡಗಿದ..!
ಮಾಸ್ತರ್ರು ಅಲ್ಲೆ ಇದ್ದ ಹಳ್ಳಿಯ ಜನರನ್ನು ಕೂಗಿ ...
ಮಾಬ್ಲುವನ್ನು ಕಾನಸೂರಿಗೆ ಕಳಿಸುವ ವ್ಯವಸ್ಥೆ ಮಾಡಿದರು...
ಅಗೆಲ್ಲ ವಾಹನ ಸೌಕರ್ಯ ಇರಲಿಲ್ಲ..
ಹಳ್ಳಿಯವರು ಕಂಬಳಿಯಲ್ಲಿ ಮಾಬ್ಲುವನ್ನು ಹಾಕಿ..
ಕಾನಸೂರಿಗೆ ಹೊತ್ತುಕೊಂಡು ಓಡೋಡಿ ಹೋದರು..
ನಮಗೆಲ್ಲ ಹೆದರಿಕೆ ಗಾಭರಿ... ಆತಂಕ... ಕುತೂಹಲ...!!
ನಮ್ಮೂರಿಂದ ಕಾನಸೂರು ನಾಲ್ಕು ಕಿಲೋಮೀಟರ್..
ಸಮತಟ್ಟಾದ ರಸ್ತೆಯೇ ಇಲ್ಲ.. ಮಣ್ಣು ರಸ್ತೆ..
ಅಲ್ಲಿ ನಡೆದು ಬರುವದೇ ಒಂದು ಸಾಹಸ.. !
ಸುಮಾರು ಹೊತ್ತಿನ ಮೇಲೆ ಒಬ್ಬ ಸೈಕಲಿನಲ್ಲಿ ಬಂದ...
ಗಡಿಬಿಡಿಯಲ್ಲಿದ್ದ.. !
ಬಹುಶಃ ಸೈಕಲ್ಲು ತಲೆ ಮೇಲೆ ಹೊತ್ತು ಬಂದಂತಿತ್ತು... !
ಬಹಳ ಏದುಸಿರು ಬಿಡುತ್ತಿದ್ದ...!
"ಮಾಸ್ತರ್ರೆ...
ಇಲ್ಲಿ ಕುಷ್ಟ ಅಂದ್ರೆ ಯಾರು..?"
ಮಾಸ್ತರು ಕುಷ್ಟನ ಕಡೆ ನೋಡಿದರು..
ಕುಷ್ಟನಿಗೆ ಕೈಕಾಲು ನಡುಕ ಹುಟ್ಟಿತು...!
ಕಾನಸೂರಿನಿಂದ ಬಂದವ ಬುಸು ಬುಸು ಶ್ವಾಸ ತೆಗೆಯುತ್ತಿದ್ದ...!
ಬೆವರುತ್ತಿದ್ದ...!
" ಕುಷ್ಟ..
ನೀನು ಯಾವ ಮಾತ್ರೆ ಕೊಟ್ಟಿದ್ದು..?"
" ಗೊತ್ತಿಲ್ರ... !
ಮನೆಯಲ್ಲಿತ್ತು... ತಂದೆರ್ರಾ...!!.."
ಕಾನಸೂರಿನಿಂದ ಬಂದವ ಬಹಳ ಟೆನ್ಷನ್ ಮಾಡ್ಕೊಂಡಿದ್ದ..
ಸಿಕ್ಕಾಪಟ್ಟೆ ಗಾಭರಿಯಲ್ಲಿದ್ದ.. !
" ಮಾಸ್ತರ್ರೆ...
ಇದು ಬಹಳ ಸೀರಿಯಸ್ ವಿಷಯ...!
ಅಲ್ಲಿ ಹುಡುಗ ಪ್ರಜ್ಞೆ ತಪ್ಪುತ್ತಿದ್ದಾನೆ...!
ಯಾವ ಮಾತ್ರೆ ಅಂತ ಗೊತ್ತಾಗದ ಹೊರತು ಔಷಧ ಕೊಡುವದು ಕಷ್ಟವಂತೆ..
ಕುಷ್ಟನ ಮನೆಯವರನ್ನು ಕೇಳೋಣ ..
ನಡೀರ್ರೀ.. !.."
ಮಾಸ್ತರ್ರು ನಾವು ಎಲ್ಲರೂ ಕುಷ್ಟನ ಮನೆಗೆ ಹೊರಟೆವು..
ಅಗ ಮಧ್ಯಾಹ್ನ ಊಟಕ್ಕೆ ಬಿಡುವ ಸಮಯ...!
ನಮ್ಮನ್ನೆಲ್ಲ ನೋಡಿ ಕುಷ್ಟನ ಮನೆಯವರೂ ಕಂಗಾಲು...!
ಆತಂಕ.. !!
"ಕುಷ್ಟಾ ..
ಮಾತ್ರೆ ಎಲ್ಲಿತ್ತು..?..?.. "
ಕುಷ್ಟನಿಗೂ ಹೆದರಿಕೆ ಆಗತೊಡಗಿತು..
ಧ್ವನಿ ಕಂಪಿಸುತ್ತಿತ್ತು..
"ಅಡಿಗೆ ಮನೆಯಲ್ಲಿ... !
ಮಜ್ಜಿಗೆ ಕಪಾಟಿನಲ್ಲಿ..!
ಒಗ್ಗರಣೆ ಡಬ್ಬ ಇಡುವ ಜಾಗದ ಪಕ್ಕದಲ್ಲಿತ್ರ ...!!.."
"ಅಲ್ಲಿ ಯಾವ ಮಾತ್ರೆ ಇತ್ತು...?.?"
ಕುಷ್ಟನ ಅಪ್ಪ ತೊದಲಿದ..
ಅವನೂ ಗಾಭರಿಯಲ್ಲಿದ್ದ..!
"ಭೂತನ ಕಟ್ಟೆ ಭೂತದ ಆಣೆ.. ಮಾಡ್ತಿನ್ರಾ..!
ನನಗೆ ಗೊತ್ತಿಲ್ರ..!!..."
ಮತ್ತೆ ಟೆನ್ಷನ್ !!
ಕುಷ್ಟನ ಅಮ್ಮನನ್ನು ಕರೆಸಲಾಯಿತು..!!
"ಮಜ್ಜಿಗೆ ಕಪಾಟಿನಲ್ಲಿ ಇಟ್ಟ ಮಾತ್ರೆ ಯಾವದು..?.. !.."
ಅಮ್ಮ ಸ್ವಲ್ಪ ನಾಚಿಕೊಂಡಳು..
"ಅದು ಹೆಂಗಸರ ಮಾತ್ರೆರ್ರಾ...
ಹೋದ ವರ್ಷ ತಂದಿದ್ದು... !"
ಮಾಸ್ತರರಿಗೆ ಕೋಪ ಬಂತು...
ಮಾಸ್ತರ್ರು ಸ್ವಲ್ಪ ಧ್ವನಿ ಏರಿಸಿದರು..
"ನೋಡಮ್ಮ ...
ಜಲ್ದಿ ಹೇಳು.. !
ಅಲ್ಲಿ ಹುಡುಗ ಪ್ರಜ್ಞೆ ತಪ್ಪುತ್ತಿದ್ದಾನೆ..!
ಯಾವ ಮಾತ್ರೆ ಅಂತ ಹೇಳಿ..
ಮೆಡಿಸಿನ್ ಕೊಡ್ಲಿಕ್ಕೆ ಅವಶ್ಯಕತೆ ಇದೆ.. !.."
ಕುಷ್ಟನ ಅಮ್ಮ ತಡವರಿಸಿದಳು...
"ಅದು..
ಅದೂ.. ಏನೂ ಇಲ್ರ.. !!
....
ಹೋದ ವರ್ಷ ಗಣೇಶನ ಹಬ್ಬಕ್ಕೆ ...
ತಿಂಗಳ ರಜೆ ಬಾರದಿರಲಿ ಅಂತ ತರಿಸಿದ್ದೇರ್ರಾ...!
ಮುಟ್ಟು ಮುಂದೆ ಹೋಗುವ ಮಾತ್ರೆ.. !!.. "
ಮಾಸ್ತರ್ರು ಎಚ್ಚರ ತಪ್ಪುವದೊಂದು ಬಾಕಿ...!!
ಅಯ್ಯೋ ರಾಮಾ !!
ಕಾನಸುರಿನಿಂದ ಬಂದವ ಕಂಗಾಲಾದ !
" ಎಷ್ಟು ಮಾತ್ರೆ ಇತ್ತು ?"
"ಯಾವದಕ್ಕೂ ಇರ್ಲಿ ಅಂತ ಹದಿನೈದು ತರ್ಸಿದ್ದೇರ್ರಾ..."
"ಯಾವುದಕ್ಕೂ ಇರ್ಲಿ ಅಂತ ಅಷ್ಟೆಲ್ಲ ತರಿಸಲಿಕ್ಕೆ...
ಅದೇನು
ಸಕ್ರೆ ಚೀಲಾನಾ? ?
ಎಣ್ಣೆ ಡಬ್ಬಾನಾ? ? ಛೆ.. ಛೆ.. !!.."
ಮಾಸ್ತರ್ರು ಈಗ ಕುಷ್ಟನ ಕಡೆ ತಿರುಗಿದರು...
ಕುಷ್ಟ ಎದ್ದೂ ಬಿದ್ದೂ ತೋಟದ ಕಡೆ ಓಡತೊಡಗಿದ...!!
ಮೂರು ನಾಲ್ಕು ದಿನ ಶಾಲೆಗೂ ಬರಲಿಲ್ಲ...!
ಸಧ್ಯ ಮಾಬ್ಲುಗೆ ಏನೂ ಆಗಲಿಲ್ಲ...
ಮಾಬ್ಲು... ನಮ್ಮೂರಿಗೆ ಈಗಲೂ ಬರ್ತಾನೆ...
ಅವನನ್ನು ನೋಡಿ ...
ನಾವು ಮನೆಗೆ ಬಂದು ಕನಿಷ್ಟ ಹತ್ತು ನಿಮಿಷವಾದರೂ ನಗುತ್ತೇವೆ...
ಕೆಲವು ಬಾರಿ ಬಿದ್ದು ಬಿದ್ದು...!
ಕಣ್ಣಲ್ಲಿ ನೀರು ಬರುವಷ್ಟು.. !!..
ಬೇಡ ಬೇಡವೆಂದರೂ ನಗು ಬರುತ್ತದೆ.. ತಡೆಯಲಾರದಷ್ಟು..!