Sunday, May 15, 2011

...ತಿರುವು...


ಈ ಗಂಡಸರು... ಮಹಾ ಬುದ್ಧಿವಂತರು....

ಹೆಣ್ಣನ್ನು  ಯಾಕೆ ಅಷ್ಟೆಲ್ಲ ಹೊಗಳಿ ಅಟ್ಟಕ್ಕೆ ಏರಿಸಿದರು ಅಂತ ಗೊತ್ತಾಗಿದ್ದು ...


ನಾನು ತಾಯಿಯಾದ ಮೇಲೆ...


ಮುಟ್ಟಲೂ  ಆಗದ ಮಾಂಸದ ಮುದ್ದೆಯಂತಿರುವ..
ಯಾವಾಗಲೂ ಅಳುವ ಮಕ್ಕಳ ...
ಬೇಕು ಬೇಡಗಳನ್ನು ನೋಡಲು ಈ ಗಂಡಸರಿಂದ ಆದೀತೆ?


ಅದಕ್ಕಾಗಿ  ಬಹಳ ಚಂದವಾಗಿ  " ಮಾತೃದೇವೋ ಭವ" ಅಂತ ಹೇಳಿ...
ಒಂದೆರಡು ಚಂದದ ಶ್ಲೋಕದ ಅರ್ಥವಿವರಣೆ ಕೊಟ್ಟು..
ತಾವು ಹಾಯಾಗಿ ಆರಾಮಾಗಿ  ಕುಳಿತು ಬಿಟ್ಟರು..


ನನಗೆ ಈ ಗಂಡಸರನ್ನು..
ಅದರಲ್ಲೂ  ಆಲಸ್ಯದ  ಅವತಾರವಾಗಿರುವ ....
ನನ್ನ ಗಂಡನನ್ನು ನೋಡಿದರೆ  ಎಲ್ಲಿಲ್ಲದ ಕೋಪ..


ನನ್ನ ಗಂಡ ಅಲ್ಪತೃಪ್ತ...
"ಇಷ್ಟಿದೆಯಲ್ಲ  ಸಾಕು" ಅನ್ನುವಂಥಹ ಪ್ರಾಣಿ..


ನಾನು  ಬಹಳ ಬಹಳ ಮಹತ್ವಾಕಾಂಕ್ಷಿ...


ಇನ್ನೂ ಸಾಧನೆ ಮಾಡಬೇಕು.. ! ಇನ್ನೂ ಸಾಧಿಸಬೇಕು...!


ಏನು ಮಾಡಲಿ  ?  ಈ ಹಾಳು ಹೆಣ್ಣು ಜನ್ಮ..!


ಮದುವೆಯಾಗ ಬೇಕು... 
ತಾಳಿ ಕಟ್ಟಿಸಿಕೊಳ್ಳ ಬೇಕು...
ಮಕ್ಕಳನ್ನು ಹಡೆಯ ಬೇಕು...
ಹಾಲುಣಿಸಿ ದೊಡ್ಡ ಮಾಡಬೇಕು...


 ಎಲ್ಲ ತೊಡರುಗಳನ್ನು  ಹೆಣ್ಣಿನ  ಕಾಲಿಗೆ ಕಟ್ಟಲಾಗಿದೆ...


ಪ್ರಕೃತಿಯೂ  ಸಹ.. ಹೆಣ್ಣಿಗೆ  ಅನ್ಯಾಯ ಮಾಡಿದೆ..


ಹೊರಗೆ ದುಡಿಯ ಬೇಕು... ಅಡಿಗೆ ಮನೆಯಲ್ಲಿ ಅಡುಗೆ ಮಾಡಬೇಕು...
ಪಾತ್ರೆ ತೊಳೆಯ ಬೇಕು.. ನೆಲ ಒರೆಸಬೇಕು..


"ಸ್ವಲ್ಪ ಸಹಾಯ ಮಾಡಿ" ಅಂತ  ನನ್ನ ಗಂಡನನ್ನು ಕೇಳಿದರೆ...


"ಯಾಕೆ ನೀನು ದುಡಿಯ ಬೇಕು..?
ಮನೆಯಲ್ಲೇ ಹಾಯಾಗಿರು..
ನಾನು ದುಡಿದು ತರುತ್ತೇನಲ್ಲ ಸಾಕು ಬಿಡು"


ನನ್ನವರ  ಸಂಪಾದನೆ ನನಗೆ ಗೊತ್ತಿಲ್ಲವೆ..?


ವಾರಕ್ಕೊಂದು ಸಿನೇಮಾ ನೋಡಲೂ ಆಗದಂಥಹ ಸಂಪಾದನೆ..


ಪಾನಿಪುರಿ... 
ಕೊನೆ ಪಕ್ಷ ವಾರಕ್ಕೊಂದು ಹೋಟೆಲ್ ಊಟ....


ನನ್ನ ಅಲಂಕಾರಿಕ ಪ್ರಸಾಧನಗಳು...!
ಬ್ಯೂಟಿ ಪಾರ್ಲರ್...
ಓಲೆ ಕ್ರೀಮ್... ಎಲ್ಲವನ್ನೂ  ಮರೆತು ಬಿಡಬೇಕಷ್ಟೇ...


ಮನೆಯ ಕೆಲಸದಲ್ಲೂ  ಸಹಾಯ ಮಾಡುವದಿಲ್ಲ..


ಮನೆಗೆ ಬಂದವನೇ... 
ಟಿವಿ ಮುಂದೆ  ಪ್ರತಿಷ್ಥಾಪನೆಯಾದರೆ  
ಅಲ್ಲಿಯೇ ಊಟ..
ಏಳುವದು ರಾತ್ರಿ ಮಲಗುವೇಳೆ... ಬೆಡ್ ರೂಮಿಗೆ ಹೋಗುವಾಗ...


ಸರಿ....
ಇವೆಲ್ಲವನ್ನೂ ಸಹಿಸಿಕೊಳ್ಳೋಣ...


ಹೋಗಲಿ ಈತ ..ರಸಿಕನೋ...?


ಪಿಸು ಮಾತು.... 
ರಸಿಕ ನಗು...!
ಸಿನೆಮಾ ಹಾಡುಗಳು...!
ತುಂಟತನ...


ನನ್ನ ಅಲಂಕಾರವನ್ನು ಮೆಚ್ಚಿ ಸೂಸುವ  ಆಸೆ ಕಣ್ಣುಗಳು..!


ಯಾವುದೂ ಇಲ್ಲ... !
ಏನೂ... ಇಲ್ಲ....!!


ನನ್ನ ಕಷ್ಟ..ನಿಮಗೆ ಅರ್ಥ ಆಗೋ ವಿಷಯ ಅಲ್ಲ ಬಿಡಿ..


ಕೆಲವು ಸಾರಿ ನನ್ನ ಅಪ್ಪ, ಅಮ್ಮನ ಬಗೆಗೆ ಎಲ್ಲಿಲ್ಲದ  ಕೋಪ ಬರುತ್ತದೆ...


ನಾನು ಒಬ್ಬಳೇ ಮಗಳು ಅಂತ  ಮುದ್ದಿನಿಂದ ..
ಕೆಳಿದ್ದೆಲ್ಲವನ್ನೂ  ಕೊಟ್ಟು.. ಬೆಳೆಸಿದರು..


ನಾನು  ನನ್ನ  ಕೆಲಸವನ್ನು ಬಹಳ ಶೃದ್ಧೆಯಿಂದ ಮಾಡುತ್ತೇನೆ..
ನನ್ನ ಕೆಲಸದ ಬಗೆಗೆ  ಯಾರೂ  ಎದುರು ಮಾತನಾಡುವದಿಲ್ಲ...


ನನ್ನ ತಪ್ಪುಗಳನ್ನು ಬೇರೆಯವರು ಹೇಳಿದರೆ ನನಗೆ  ಆಗುವದೇ ಇಲ್ಲ..


ಹಾಗಾಗಿ ಬಹಳ ಮುತುವರ್ಜಿಯಿಂದ ಮಾಡುತ್ತೇನೆ...


ತಪ್ಪೇ ಇಲ್ಲದೆ ಕೆಲಸ ಮಾಡುವ ನನ್ನನ್ನು ಕಂಡರೆ.. 
ಬಹಳ ಜನರಿಗೆ ಅಸೂಯೆ..
ಇನ್ನು ಕೆಲವರು ನನಗೆ  ಸೊಕ್ಕು..
ಜಂಬ.. ಅನ್ನುತ್ತಾರೆ..ಹೇಳಲಿ ಬಿಡಿ... ನಾನು ತಲೆ ಕೊಳ್ಳುವದಿಲ್ಲ..


ನನಗೆ ಬೇಕಿತ್ತೋ ಬೇಡಿತ್ತೋ ....
ನನ್ನಪ್ಪ ನನಗೊಂದು ಮದುವೆ ಮಾಡಿದರು...


ಇದೆ.. ಈ...ಗಂಡನ ಸಂಗಡ..


ನನ್ನ ಮಹತ್ವಾಕಾಂಕ್ಷೆ ಬಗೆಗೆ ಹೇಳಿದ್ದೆ.....
ಮದುವೆಯ ಸಂದರ್ಭದಲ್ಲಿ  ಕೋಲೆ ಬಸವನ ಹಾಗೆ ತಲೆ ಆಡಿಸಿದ...
ಬಹುಷಃ ನನ್ನ ಚಂದಕ್ಕೆ ಮರುಳಾಗಿರಬೇಕು..


ಮದುವೆಯಾದ ಮೇಲೆ ಇವನ ಅಸಲಿ ಬಣ್ಣ ಗೊತ್ತಾಗಿದ್ದು...


ನನ್ನ ಬದುಕು ನಿಂತ ನೀರಾಗುವದು ನನಗೆ ಬೇಕಿರಲಿಲ್ಲ...


ಮಗುವನ್ನು ಎತ್ತಿಕೊಂಡು..
ಗಂಡನ ಮನೆಯನ್ನು ಬಿಟ್ಟು ಬಂದೆ...


ಎಲ್ಲ ಅಪ್ಪ ಅಮ್ಮಂದಿರು ಹೇಳುವ  ಹಾಗೆ  ನನಗೂ ಬಹಳ ಉಪದೇಶ ಸಿಕ್ಕಿತು..


"ಹೊಂದಿಕೊಂಡು ಹೋಗು ಮಗಳೇ... " ಅಂತ


ನನ್ನಿಂದ ಅದು ಸಾಧ್ಯವಾಗದ ಮಾತು...


ಇಲ್ಲಿ ಅಪ್ಪನ ಮನೆಯಲ್ಲಿ ಮಗುವಿನೊಂದಿಗೆ ಬದುಕುವದು ಕಷ್ಟವಾದರೂ..
ಬೇಸರವಿರಲಿಲ್ಲ....


ನನ್ನ ಗಂಡನೂ ಆಗಾಗ ಫೋನ್ ಮಾಡುತ್ತಿರುತ್ತಾನೆ..
ಅವನ ಫೋನ್ ಎಂದರೆ  ನನಗೆ ಮೈಯೆಲ್ಲ  ಉರಿದು ಹೋಗುತ್ತದೆ...
ಕೋಪದಿಂದ  ಪರಚಿಕೊಳ್ಳುವಂತಾಗುತ್ತದೆ..


ಅವನ  ಬಗೆಗೆ  ನನಗೆ  ತಿರಸ್ಕಾರ  , ಅಸಹ್ಯವಿದೆ...


ಈ ಗಂಡಸರ ಸಹವಾಸವೇ ಸಾಕು ಅನಿಸಿಬಿಟ್ಟಿದೆ...


ಅಭಿಪ್ರಾಯಗಳು ಬದಲಾಗುತ್ತಿರುತ್ತವೆ..


ಕೆಲವೊಮ್ಮೆ ನಮ್ಮನ್ನೇ ಅಣಕಿಸುವಂತಿರುತ್ತದೆ...


ಒಂದು ದಿನ  ನನ್ನ ಕಾರ್ ರಸ್ತೆಯಲ್ಲಿ ಹಾಳಾಗಿತ್ತು.. 
ಅಪ್ಪನಿಗೆ ಫೋನ್ ಮಾಡಿ ಹೇಳಿದೆ...
ಅವರು ಒಬ್ಬ  ಮೆಕ್ಯಾನಿಕ್ ಕಳುಹಿಸಿದರು..
ಅವನೇ ಗ್ಯಾರೇಜ್  ಮಾಲಿಕನಂತೆ... ನಮಗೆ ದೂರದ ಸಂಬಂಧಿಯಂತೆ..


ಬಹಳ ಡೀಸೆಂಟ್ ವ್ಯಕ್ತಿ...


ಮಧ್ಯ ವಯಸ್ಕ.. ಕೂದಲು ಅಲ್ಲಲ್ಲಿ ಹಣ್ಣಾಗಿದೆ..


ಪರಿಚಯ ಸ್ನೇಹವಾಯಿತು..
ಆಗಾಗ ಟೀ, ಕಾಫಿಗೆ ಅಂತ ಅವನ ಜೊತೆ ಹೋಗುತ್ತಿದ್ದೆ...


ಆತನ ಮಾತು, ಕತೆಯಲ್ಲಿ  ಹೊಸತನವಿರುತ್ತಿತ್ತು...
ನನ್ನ  ಸ್ವಭಾವಕ್ಕೆ ಹೊಂದಿಕೊಳ್ಳುವಂಥಹ ಮನುಷ್ಯ ಅನ್ನಿಸುತ್ತಿತ್ತು...


ಕೆಲವೊಬ್ಬರು ನಮಗೆ ಏನೂ ಆಗಿರುವದಿಲ್ಲ... 
ಆದರೂ  ನಮ್ಮ ಮನಸ್ಸು  ಅವರ ಸಾಂಗತ್ಯವನ್ನು ಬಯಸುತ್ತದೆ.. 
ಅವರೊಡನೆ  ನಮಗೆ ಗೊತ್ತಿಲ್ಲದಂತೆ ನಮ್ಮ  ಮನಸ್ಸು ಹಗುರವಾಗುತ್ತದೆ..
ಅವರೊಡನೆ ಮಾತನಾಡ ಬೇಕೆನ್ನಿಸುತ್ತದೆ...


ನನಗೂ ಹಾಗಾಗುತ್ತಿತ್ತು...


ಒಮ್ಮೆ  ಆತನನ್ನು ಕೇಳಿದ್ದೆ.. 


"ನೀವು ನಿಮ್ಮ  ಬಗೆಗೆ ಹೇಳಲೇ.. ಇಲ್ಲ.. ನಿಮ್ಮ ಹೆಂಡತಿ ಮಕ್ಕಳ ಬಗೆಗೆ"


"ನನ್ನ  ಕೌಟುಂಬಿಕ ಬದುಕಿನ ಬಗೆಗೆ ಹೇಳುವಂಥಾದ್ದು  ಏನೂ ಇಲ್ಲ..
ಹೆಂಡತಿ ಇದ್ದಳು..
ಈಗಲೂ ಇದ್ದಾಳೆ.. 
ಅವಳ ತವರು ಮನೆಯಲ್ಲಿ ನನ್ನ ಮಗನ ಸಂಗಡ...
ಇದಕ್ಕಿಂತ  ಇನ್ನೇನೂ  ಹೇಳಲು ಆಗುವದಿಲ್ಲ... ಕ್ಷಮಿಸಿ"


ನನಗೆ ಅರ್ಥವಾಗಿತ್ತು...


ಹಾಲಿನ ರುಚಿನೋಡಿದ ಬೆಕ್ಕು...


ಒಂಟಿ  ಬದುಕು ಸಂಗಾತಿ ಬಯಸುತ್ತದೆ...
ನನ್ನ ಮನಸ್ಸೂ ಮತ್ತೂ ಅವನನ್ನು ಬಯಸಿತು... 

ದಾರಿ ಸುಗಮವಾಗಿದೆಯಲ್ಲ...


ನನಗೆ  ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳಲು ಆಗುವದಿಲ್ಲ....
ನನ್ನೊಳಗಿನ ಮಾತನ್ನು  ಇವನಿಗೆ ಹೇಳಬೇಕಿತ್ತು...

ಅದಕ್ಕೊಂದು  ಸಮಯ ಸಂದರ್ಭ ಬೇಕಿತ್ತು....


ಮೊನ್ನೆ ನನ್ನ  ಕಾರು  ಕೈಕೊಟ್ಟಿತ್ತು... ಆತ ನಮ್ಮನೆಗೆ ಬಂದು  ಕಾರು  ಗ್ಯಾರೇಜಿಗೆ  ಒಯ್ದಿದ್ದ...


ನಿನ್ನೆಯೂ ರಿಪೇರಿ ಆಗಿರಲಿಲ್ಲ...


"ಬೇಸರ ಮಾಡ್ಕೋಬೇಡಿ...
ನಿಮ್ಮ ಕಾರಿನ ಒಂದು  ನಟ್ಟು ಸಿಗುತ್ತಿಲ್ಲ...
ಹುಡುಕುತ್ತಾ ಇದ್ದೇನೆ.. 
ನಾಳೆ ಖಂಡಿತ  ರೆಡಿ ಮಾಡಿರುತ್ತೇನೆ.."


ನಾನು ಇದೇ ಸಮಯಕ್ಕೆ ಕಾಯುತ್ತಿದ್ದೆ...


" ನಾಳೆ ಹೇಗಿದ್ದರೂ  ಭಾನುವಾರ.. 
ಬರುತ್ತೇನೆ.. 
ನನಗೆ  ನಿಮ್ಮ  ಬಳಿ ಸ್ವಲ್ಪ ಮಾತನಾಡ ಬೇಕಿದೆ.."


ಮಧ್ಯ ವಯಸ್ಕನಿಗೆ ಆಶ್ಚರ್ಯ.. !


"ನನ್ನ ಬಳಿ ಮಾತನಾಡಬೇಕಾ?  
ಈಗಲೇ ಮಾತನಾಡಿ.. 
ಹೇಳಿ  ಏನು ವಿಷಯ ?.."


"ಹೀಗೆಲ್ಲ ಹೇಳಲು ಆಗುವದಿಲ್ಲ..
ನಾಳೆ ಬರುತ್ತೇನಲ್ಲ ಹೇಳುತ್ತೇನೆ"


"ಸುಂದರವಾಗಿದ್ದವರು  ಇಷ್ಟೆಲ್ಲ  ಕುತೂಹಲದ ಮಾತನಾಡ ಬಾರದು..
ಅಪಾರ್ಥವಾಗಿಬಿಡುತ್ತದೆ... 
ನನ್ನಂಥವರಿಗೆ  ಟೆನ್ಷನ್ ಶುರುವಾಗಿಬಿಡುತ್ತದೆ...
ದಯವಿಟ್ಟು ಹೇಳಿ..."


ನಾನು ಪೂರ್ವ ತಯಾರಿ  ಇಲ್ಲದೆ ಏನು ಮಾಡುವದಿಲ್ಲ...


"ನೀವು ಧಾರಾಳವಾಗಿ  ಟೆನ್ಷನ್ ಮಾಡಿಕೊಳ್ಳಿ... 
ನಾಳೆ ಸಿಗುತ್ತೇನೆ.."


ನನಗೆ ಒಳಗೊಳಗೇ  ಖುಷಿಯಾಗುತ್ತಿತ್ತು... 
ಆತನೂ  ನನ್ನಂತೇ  ಯೋಚಿಸುತ್ತಿರ ಬಹುದಾ...?


ಈತನೊಡನೆ ಫೋನ್ ಕಟ್ ಮಾಡುತ್ತಿದ್ದಂತೆಯೇ.. 
ನನ್ನ ಗಂಡನ   ಫೋನ್  ಬಂತು  !!


ಛೇ...


ಮುಖ ಗಂಟು ಹಾಕಿ ಕೇಳಿದೆ.. "ಏನು?"


"ನೋಡು ... 
ನಿನ್ನ  ಬದುಕಿನಲ್ಲಿ   ನಾನು ಬಹಳ ನಿಧಾನ ..
ಒಪ್ಪುತ್ತೇನೆ.. ಆದರೆ  ನಿನ್ನ ಸ್ಪೀಡಿಗೆ ನಾನೆಂದೂ ಅಡ್ಡಿ ಬರುವದಿಲ್ಲ..
ನಿನಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ..
ಈಗ ಅಡುಗೆಯನ್ನೂ ಕಲಿತುಕೊಂಡಿದ್ದೇನೆ..
ನೋಡು.. ನಮ್ಮಿಬ್ಬರ ಜಗಳದಿಂದನಮ್ಮ ಮಗುವಿಗೆ ಅನ್ಯಾಯವಾಗ ಬಾರದು...ಅಲ್ವಾ?
ಆ ಪಾಪು  ಏನು ತಪ್ಪು ಮಾಡಿದೆ?
ಅದಕ್ಕೆ ಅಪ್ಪ, ಅಮ್ಮನ ಪ್ರೀತಿ ಬೇಕು ಅಲ್ವಾ?"


ನನಗೆ ಮೈಯೆಲ್ಲ ಉರಿದು ಹೋಯಿತು...


ಒಂದು ಮಗುವಿನ ತಾಯಿಯಾದ ಮೇಲೆ ನನ್ನ ಆಕರ್ಷಣೆಗಳು ಕಡಿಮೆಯಾಗಿವೆ...
ಈತ ಇದ್ದ ಹಾಗೆಯೇ ಇದ್ದಾನೆ... ಹೊಸ ಮದುಮಗನ ತರಹ....!


ಈಗ ಹೊಂದಿಕೊಳ್ಳುತ್ತಾನಂತೆ...!!


'ಮಗುವಿನ  ಹೆಸರು ಹೇಳಿ.. 
ಇಮೋಷನಲ್ ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ..
ಈ.. ಕೆಟ್ಟ.. ಆಳಸಿ ಗಂಡಸು"


"ನಿಮಗೆ  ಮಗು ಬೇಕಿದ್ದರೆ ತೆಗೆದು ಕೊಂಡು ಹೋಗಿ...
ಎಲ್ಲ ಮುಗಿದ ವಿಷಯದ  ಬಗೆಗೆ ಮತ್ತೆ ಮಾತನಾಡುವದು  ನನಗೆ ಇಷ್ಟವಿಲ್ಲ.."


"ನೋಡು ಚಿನ್ನಾ.. ಇನ್ನೊಮ್ಮೆ ವಿಚಾರ ಮಾಡು .. 
ನೀನು ದೂರವಾದ ಮೇಲೆ ನನ್ನ ತಪ್ಪುಗಳು ಗೊತ್ತಾಗ ತೊಡಗಿವೆ...
ನಾಳೆ ಫೋನ್ ಮಾಡುತ್ತೇನೆ.."


ನಾನು ಫೊನ್ ಕಟ್ ಮಾಡಿದೆ...


ನಾಳೆ ...ಇಂದಾಯಿತು...


ಚಂದವಾಗಿ  ತಯಾರಾಗಿ ..  ಆತನ ಗ್ಯಾರೇಜಿಗೆ ಬಂದಿದ್ದೆ..


ಮಧ್ಯ ವಯಸ್ಕನ ಕಣ್ಣಲ್ಲಿ ಹೊಳಪಿತ್ತು....


"ಬನ್ನಿ.. ಬನ್ನಿ... 
ಸರಿಯಾದ ಸಮಯಕ್ಕೇ.. ಬಂದಿದ್ದೀರಿ...
ಕೆಲಸಗಾರರೂ ಇಲ್ಲ..ನೀವು  ಒಂದು ಸಣ್ಣ ಸಹಾಯ ಮಾಡಿ.. ಪ್ಲೀಸ್"


"ಓಹೋ.. 
ಅದಕ್ಕೇನಂತೆ.. ಏನು ಸಹಾಯ..?"


"ನೋಡಿ.. 
ಈ ಸ್ಪ್ಯಾನರ್  ಹಿಡಿದುಕೊಳ್ಳಿ.. 
ನಾನು ಈಕಡೆಯಿಂದ ಈ ನಟ್ಟು  ಬಿಗಿ ಮಾಡುತ್ತೇನೆ."....


ನಾನು ಬಗ್ಗಿ  ನಟ್ಟಿಗೆ   ಸರಿಯಾಗಿ  ಸ್ಪ್ಯಾನರ್ ಹಿಡಿದುಕೊಂಡೆ..


ಆತನೂ ಬಗ್ಗಿದ... !


ಆತನ ಬಿಸಿಯುಸಿರು  ನನ್ನ ಕಿವಿಗೆ  ತಾಗುತ್ತಿತ್ತು...


ಮನದ ಭಾವಗಳೆಲ್ಲ ಗರಿಗೆದರತೊಡಗಿತು...


ಮೈಯೆಲ್ಲ ಬಿಸಿಯಾಗ ತೊಡಗಿತು...


ಎಷ್ಟು ಆಕರ್ಷಕ ಈ ಭಾವಗಳು.... ಆಕರ್ಷಣೆಗಳು....!


ಅತನ ಬೆವರಿನ ವಾಸನೆ ಒಂಥರಾ ಮಾದಕವಾಗಿತ್ತು...


ಮಾತು ಬೇಕಿರದ ಸಮದಲ್ಲಿ.. ಆತ ಮಾತು ಶುರು ಮಾಡಿದ....


"ನೋಡಿ  ..
ಈ ಒಂದು ನಟ್ಟಿಗಾಗಿ  ಎಷ್ಟೆಲ್ಲ  ಕಷ್ಟಪಟ್ಟೆ ಗೊತ್ತಾ?
ನಿನ್ನೆ ಪೂರ್ತಿ  ಮಾರ್ಕೆಟ್ಟ್ ಹುಡುಕಿದೆ..
ಅಲ್ಲಿ ಎಲ್ಲೂ ಸಿಗಲಿಲ್ಲ...
ನನ್ನ ಬಳಿ ಇರುವ  ಎಲ್ಲ ನಮೂನೆಯ  ನಟ್ಟುಗಳಲ್ಲಿ ಹುಡುಕಿದೆ..
ಇಲ್ಲಿ ನೋಡಿ.."


ಅಂತ ನಟ್ಟಿನ ರಾಶಿಯನ್ನೇ ತೋರಿಸಿದ..


ಇಷ್ಟೆಲ್ಲಾ ನಟ್ಟಿನಲ್ಲಿ ಒಂದೂ ಸರಿ ಹೊಂದಲಿಲ್ಲವಾ....? ...!!


ಅತ ಮತ್ತೆ ಶುರು ಮಾಡಿದ..


"ನೋಡಿ  ...


ಈ.. ಬೋಲ್ಟಿಗೆ  ಇದೇ ನಟ್ಟು ಬೇಕಿತ್ತು...!


ಬೇರೆ ಯಾವುದೂ ಸೆಟ್ಟ್ ಆಗುವದಿಲ್ಲ..


ಒಂದು ವೇಳೆ  ಪ್ರಯತ್ನಿಸಿದರೂ.. ಬೋಲ್ಟ್ ಹಾಳಾಗುತ್ತದೆ...


ಥ್ರೆಡ್ ಹಾಳಾಗಿ ಹೋಗುತ್ತದೆ ...


ಒಮ್ಮೆ ಹಾಳಾದರೆ ಮತ್ತೆ ರಿಪೇರಿಯಾಗುವದಿಲ್ಲ..!


ನಿಮ್ಮ  ಈ ಒಂದು ನಟ್ಟಿಗಾಗಿ  ಬಹಳ ಕಷ್ಟಪಟ್ಟೆ... .."


ನನಗೆ ಒಂಥರಾ ಅನಿಸಿತು....


ನನ್ನ ಮೈ ಬೆವರಿತ್ತು... 
ಪಾತಾಳಕ್ಕೆ ಇಳಿದು ಹೋಗಿದ್ದೆ...!!


ನಟ್ಟು ಟೈಟ್ ಆಯಿತು.. 


ಗಾಡಿಯೂ ರೆಡಿಯಾಯಿತು.. ನಾನು ಲಗುಬಗೆಯಿಂದ ಕಾರಿನಲ್ಲಿ ಕುಳಿತೆ..


ಆದಷ್ಟು ಬೇಗ  ಅಲ್ಲಿಂದ ಹೊರಡ ಬೇಕಿತ್ತು...


"ಇವತ್ತು ಏನೋ ಮಾತನಾಡ ಬೇಕೆಂದು  ಹೇಳಿದಿದ್ರಿ...
ನಾನು  ನಿನ್ನೆ ರಾತ್ರಿಯಿಂದ  ನಿದ್ದೆ ಮಾಡದೆ ಕಾಯುತ್ತಿದ್ದೆ.."


ನಾನು  ಆ ಮಾತು ಕೇಳದವಳಂತೆ  ಗಾಡಿ ಸ್ಟಾರ್ಟ್ ಮಾಡಿದೆ... 
ಗಾಡಿ ಮುಂದಕ್ಕೆ ಚಲಿಸಿತು...


ಆತ ಪೆಚ್ಚು ಮೋರೆ ಹಾಕಿಕೊಂಡಿದ್ದ...


ಅಷ್ಟರಲ್ಲಿ ಫೋನ್ ರಿಂಗಾಯಿತು... 
ನನ್ನ ಗಂಡನ ಫೋನ್..!
ನಾನು ಫೋನ್ ತೆಗೆದು ಕೊಳ್ಳಲಿಲ್ಲ...


ಸ್ವಾಭಿಮಾನ ಅಡ್ಡ ಬಂತು....


ಕಾಲ್ ಕಟ್ ಮಾಡಿ..
ಅಪ್ಪನಿಗೆ ಫೋನ್ ಮಾಡಿ ಹೇಳಿದೆ...


"ಅಪ್ಪಾ... 
ನನ್ನ ಗಂಡನಿಗೆ ಫೋನ್ ಮಾಡಿ ಬರಲಿಕ್ಕೆ ಹೇಳಿ..
ನಾನು ಅವರ ಜೊತೆ ಇರ್ತೇನೆ..."


ಅಪ್ಪ ಸ್ವಲ್ಪ ಹೊತ್ತು ಏನೂ ಮಾತನಾಡಲಿಲ್ಲ...