Saturday, November 22, 2014

ತಾಳಿ

ನನ್ನ
ಮುಖದ ಮೇಲೆ
ಯಾರೊ ನೀರು ಚಿಮುಕಿಸಿದರು...

ಮೆಲ್ಲಗೆ ಕಣ್ಣು ಬಿಟ್ಟೆ...
ಎಚ್ಚರ ತಪ್ಪಿ ಬಿದ್ದಿದ್ದೆ ಅಂತ ಅನ್ನಿಸ್ತಿದೆ...

ಅಸಾಧ್ಯ ನೋವು..

"ಅಮ್ಮಾ..
ಅಯ್ಯೋ..."  .... ನರಳಿದೆ..

"ಸ್ವಲ್ಪ ಸಮಾಧಾನ ಮಾಡ್ಕೊ ತಾಯಿ...
ನಿಮ್ಮ ಹತ್ತಿರದವರ ಹೆಸರು ಹೇಳ್ತೀರಾ  ?"

ಮಾತನಾಡಲು ಬಾಯಿ ತೆರೆದೆ...

ತುಟಿ ನಡುಗುತ್ತಿತ್ತು...

ತುಟಿಯನ್ನು 
ರಕ್ತ ಬರುವಷ್ಟು ಹೀರಿದ್ದರು...

ಮತ್ತೆ ನೋವಿನಿಂದ ನರಳಿದೆ...

"ನನ್ನ ಮೊಬೈಲಿನಲ್ಲಿ  "ಅಪ್ಪ"  ಅಂತ ಇದೆ.. ನೋಡಿ.."

ಬಹಳ ಕಷ್ಟಪಟ್ಟು ಉಸುರಿದೆ..

ಸ್ವಲ್ಪ ನೀರು ಕುಡಿಸಿದರು..

ಕಣ್ಣಿಗೆ ಕತ್ತಲು ಕಟ್ಟಿತು..
ಮತ್ತೆ ಪ್ರಜ್ಞೆ ತಪ್ಪಿತು..

ಎಚ್ಚರವಾದಾಗ ಅಪ್ಪ ಕಣ್ಣೆದುರು ಇದ್ದರು..

"ಮಗಳೆ .."

ಅಂತ ತಬ್ಬಿಕೊಂಡರು...
ಅವರ ಕಣ್ಣಲ್ಲಿ ನೀರು ಇಳಿಯುತ್ತಿತ್ತು,...

ಆಮೇಲೆ ಗೊತ್ತಾಗಿದ್ದು ಇಷ್ಟು..

ಯಾರೊ ದಂಪತಿಗಳು 
ಸಾಯಂಕಾಲದ ಹೊತ್ತು 
ವಾಯುವಿಹಾರಕ್ಕೆ ಹೋಗುತ್ತಿದ್ದಾಗ
ರಸ್ತೆ ಬದಿಯ ಪೊದೆಯಲ್ಲಿ ನಾನು ನರಳುವ ಶಬ್ಧ ಕೇಳಿತಂತೆ..

ನನ್ನ ಮೇಲೆ ಅತ್ಯಾಚಾರವಾಗಿತ್ತು...!

ನನ್ನ 
ಮೊಬೈಲಿನಿಂದ ನನ್ನಪ್ಪನಿಗೆ ಫೋನ್ ಮಾಡಿ ಕರೆಸಿ..
ಡಾಕ್ಟರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು...

"ನೀವು ಪೋಲಿಸರಿಗೆ ದೂರು ನೀಡಿ..."

ಅಪ್ಪನ ಕಣ್ಣಲ್ಲಿ ನೀರು ಇಳಿಯುತ್ತಿತ್ತು..

"ಬೇಡಿ ಸಾರ್...
ನಾವು ಬಡವರು... 
ಮರ್ಯಾದೆ ಬೀದಿಗೆ ಬಂದರೆ ಬದುಕುವದು ಕಷ್ಟ..

ಬಡತನಕ್ಕೆ ಮರ್ಯಾದೆ ಬಲು ದೊಡ್ಡದು.. 

ಇಲ್ಲಿಯೇ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗುವೆ..."

"ಈ ಸ್ಥಿತಿಯಲ್ಲಿ 
ಮನೆಗೆ ಕರೆದುಕೊಂಡು ಹೋದರೆ .. 
ಅಕ್ಕಪಕ್ಕದವರು ಏನಂದಾರು  ?"

ನನ್ನಪ್ಪನ ಬಳಿ ಉತ್ತರ ಇರಲಿಲ್ಲ..

"ನೋಡಿ..
ಮಗಳಿಗೆ ತಂದೆಯಾಗಿ ನಿಮ್ಮ ಸ್ಥಿತಿ ಅರ್ಥವಾಗುತ್ತದೆ..

ಒಂದಷ್ಟು ದಿನ ಇವಳು ನಮ್ಮ ಮನೆಯಲ್ಲಿರಲಿ..

ನಮಗೇನೂ ತೊಂದರೆ ಇಲ್ಲ..."

ನಾನು ಧ್ವನಿ ಬಂದತ್ತ ತಿರುಗಿ ನೋಡಿದೆ..
ನನ್ನನ್ನು ಕಾಪಾಡಿದ ದಂಪತಿಗಳು 

ಅವರು ನಮಗೆ  ದೇವರಂತೆ ಕಂಡರು ...

ಅಪ್ಪ ಅವರ ಮಾತಿಗೆ ಒಪ್ಪಿದ 
ಅವರು ಅಪ್ಪನಿಗೂ ಪರಿಚಿತರಾಗಿದ್ದರು.. .

ನಾನು ಆ ಸಹೃದಯರ ಮನೆಗೆ ಬಂದೆ..

ಅವರಿಬ್ಬರೂ 
ನನಗೆ ಅಪರಿಚಿತರು ಅಂತ ಅನ್ನಿಸಲೇ ಇಲ್ಲ...
ಯಾವುದೋ ಜನ್ಮದ ನನ್ನ ಬಂಧುಗಳಂತೆ ಅನ್ನಿಸಿದರು...

ಸಿನೇಮಾದಲ್ಲಿ 
ವಿಲನ್ನುಗಳು ಅತ್ಯಾಚಾರ ಮಾಡುವದನ್ನು ನೋಡಿದ್ದೆ..
ನಾಯಕಿ ಕಿರಿಚಾಡುವದನ್ನು ಕೇಳಿದ್ದೆ..
ಪುಸ್ತಕಗಳಲ್ಲಿ ವರ್ಣನೆ ಓದಿದ್ದೆ..

ನನಗಾದ ಅನುಭವ ಇದೆಯಲ್ಲ...ಅದು  ಯಾರಿಗೂ ಬೇಡ..!

ಒಬ್ಬಾತ 
ನನ್ನನ್ನು ಮಲಗಿಸಿ ಕೈಯನ್ನು ತನ್ನ ಬೂಟುಕಾಲಲ್ಲಿ ಮೆಟ್ಟಿ ನಿಂತಿದ್ದ...

ಇನ್ನೊಬ್ಬ ಬಟ್ಟೆಯನ್ನು ಹರಿಯುತ್ತಿದ್ದ.. ...

ಅದೆಷ್ಟು ಆತುರ ಈ ದುರುಳರಿಗೆ..!

ಕೂಗೋಣವೆಂದರೆ 
ನನ್ನ ಬಾಯಿಗೆ ಬಟ್ಟೆ ತುರುಕಿದ್ದರು...!

ಸರಾಯಿ ವಾಸನೆ ಘಮ್ಮೆಂದು ಮೂಗಿಗೆ ಅಡರಿತು...

ಹರಿದಾಡಿದರು...
ಕೆನ್ನೆ.. ತುಟಿ..
ಮೂಗು
ಎದೆ.. ಎಲ್ಲೆಡೆ ಕಚ್ಚಿದರು..

ನನ್ನನ್ನು ಹೀರಿಬಿಟ್ಟರು...!

ನನಗೆ ನೋವು.. ಹಿಂಸೆ ಕೊಟ್ಟು 
ಈ ದೇಹದಿಂದ ಯಾವ ಸುಖ ಸಿಕ್ಕಿತೋ  ಆ ದುರಳರಿಗೆ ... ! .. 

ಕನಸಲ್ಲೂ 
ಊಹಿಸಲಾಗದ ಭಯಂಕರ ಅತ್ಯಾಚಾರ ನಡೆದೇ ಹೋಯಿತು....

ನೆನಪಾದಾಗಲೆಲ್ಲ ನೋವು ಜಾಸ್ತಿಯಾಗುತ್ತಿತ್ತು...

ನೋವು ದೇಹಕ್ಕಾಯಿತೊ... 
ಮನಸ್ಸಿಗೋ ... 

ನರಳಿದೆ..

ರೂಮಿನ ಬಾಗಿಲು ತೆಗೆದು
ನನ್ನನ್ನು ಕಾಪಾಡಿದವ  ನನ್ನ ಬಳಿ ಬಂದರು ...

ಮೆಲ್ಲಗೆ ನನ್ನ ಹಣೆ ಸ್ಪರ್ಷಿಸಿದರು ..

ಅವರ  ಮುಖದಲ್ಲಿ ಕರುಣೆಯಿತ್ತು... 
ಅನುಕಂಪವಿತ್ತು ..

ಸಾಂತ್ವನಕ್ಕೆ ಮಾತು ಬೇಕಿಲ್ಲ..
ನೋಟ..
ಸ್ಪರ್ಷ ಸಾಕು..

ನನ್ನನ್ನು ಎತ್ತಿ ಕುಳ್ಳಿರಿಸಿ ನೀರು ಕುಡಿಸಿದರು ...

ಈಗ
ಅವರ  ಮಡದಿಯೂ ರೂಮಿಗೆ ಬಂದಳು..

"ಆ ರಾಕ್ಷಸರನ್ನು 
ಸುಮ್ಮನೆ ಬಿಡಬಾರದು...!

ಕೊಚ್ಚಿ 
ಕೊಚ್ಚಿ ಕತ್ತರಿಸ ಬೇಕು..."

ಅತ್ತು ಬಿಡೋಣ ಎಂದುಕೊಂಡೆ...
ನನ್ನ ಕಣ್ಣಲ್ಲಿ ಈಗ ನೀರೂ ಸಹ ಬರುತ್ತಿಲ್ಲ...

ಆ ದಂಪತಿಗಳ ಮಮತೆಗೆ
ಸ್ನೇಹಕ್ಕೆ.. 
ಅವರ ಒಳ್ಳೆಯತನಕ್ಕೆ ನಾನು ಮನಸೋತೆ...

ಎಷ್ಟು ಅನ್ಯೋನ್ಯವಾಗಿದ್ದಾರೆ !

ನನ್ನ ಭಾಗ್ಯದಲ್ಲಿ  ಇಂಥಹ ಬಾಳುವೆ  ಇದೆಯಾ ?
ಜಗತ್ತಿನಲ್ಲಿ ಇಂಥವರೂ ಇರ್ತಾರಾ ?

ಅವರು ನನ್ನ ಸೇವೆ ಮಾಡುವಾಗ 
ಅವರಿಬ್ಬರನ್ನು ಕಣ್ ತುಂಬಾ ನೋಡುತ್ತಿದ್ದೆ.. 

ಅವರ 
ಮಮತೆಯ ಮಂದಿರವನ್ನು ನನ್ನ ಹೃದಯದಲ್ಲಿ ಕಟ್ಟಿಕೊಂಡೆ 

ಸುಮಾರು ಒಂದು ತಿಂಗಳಾಯಿತು..
ನಾನು ಅವರ ಮನೆಯವಳೇ ಆಗಿಬಿಟ್ಟೆ..

ಕ್ರಮೇಣ ನಾನು ಓಡಾಡುವಷ್ಟು ಆರೋಗ್ಯವಂತಳಾದೆ..

ನನ್ನನ್ನು 
ಇಬ್ಬರೂ ತುಂಬಾ ಮಮತೆಯಿಂದ..
ತಮ್ಮ ತಂಗಿಯಂತೆ ನೋಡಿಕೊಂಡರು..

"ಇವತ್ತು ಡಾಕ್ಟರ್ ಬಳಿ ಹೋಗಬೇಕು..
ರೆಡಿ ಆಗಮ್ಮ..."

ನನ್ನ ಅಣ್ಣನಂತಿದ್ದ
ಅವರ ಮುಖವನ್ನೇ ನೋಡಿದೆ..

"ನೋಡಮ್ಮ..
ನಿನ್ನ ದೇಹದ ಬಹಳಷ್ಟು ಗಾಯಗಳು ವಾಸಿಯಾದವು...

ಆ ದುರುಳರ ಕೆಟ್ಟ ಕೆಲಸದ ಪರಿಣಾಮ ನಿನ್ನ ಹೊಟ್ಟೆಯಲ್ಲಿ ಬೆಳೆಯಬಾರದು..

ಅವರಿಗೆಲ್ಲ ಯಾವ ರೋಗವಿತ್ತೊ.. ಏನೊ..

ಎಲ್ಲವನ್ನೂ ಒಮ್ಮೆ ಪರೀಕ್ಷಿಸಿಕೊಂಡು ಬರಬೇಕಮ್ಮ..."

ನಾನು ತಲೆಯಾಡಿಸಿದೆ...
ಅವರ ಮಡದಿ ನಮ್ಮನ್ನು ಬೀಳ್ಕೊಟ್ಟರು...

ಡಾಕ್ಟರ್ ಎಲ್ಲವನ್ನೂ ಪರೀಕ್ಷಿಸಿದರು...

"ಏನೂ ಸಮಸ್ಯೆ ಇಲ್ಲ... ಎಲ್ಲವೂ ವಾಸಿಯಾಗಿದೆ..."

ನನ್ನನ್ನು ಕರೆದುಕೊಂಡು ಬಂದವರಿಗೂ ಖುಷಿ ಆಯ್ತು.. 

ಒಂದಷ್ಟು ಮಾತ್ರೆ..
ಔಷಧಗಳನ್ನು ಬರೆದುಕೊಟ್ಟರು...

ಮೊದಲೆಲ್ಲ
ನನ್ನಮ್ಮ ನನ್ನ ಮೈ ಮುಟ್ಟಿದರೂ ನನಗೆ ನಾಚಿಕೆಯಾಗುತ್ತಿತ್ತು..
ಕಚಗುಳಿ ಇಟ್ಟಂತಾಗುತ್ತಿತ್ತು...

ಡಾಕ್ಟರ್ 
ನನ್ನ ದೇಹ ಪರೀಕ್ಷಿಸುತ್ತಿರುವಾಗ ನನಗೇನೂ ಅನ್ನಿಸಲೇ ಇಲ್ಲ...

ನಾನು 
ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ಬಿಟ್ಟೆನಾ ? 

ಇಬ್ಬರೂ ಮನೆಗೆ ಬಂದೆವು..
ಮನೆಯಲ್ಲಿ ಅವರ ಮಡದಿ ಕಾಣಲಿಲ್ಲ..

ಒಂದು ಚೀಟಿಯಿತ್ತು...

"ನಾನು 
ಅಣ್ಣನ ಮನೆಗೆ ಹೋಗುತ್ತಿದ್ದೇನೆ..
ನನಗಾಗಿ ಕಾಯಬೇಡಿ.. ನೀವಿಬ್ಬರೂ ಊಟ ಮಾಡಿ..."

ಅವರು ತುಂಬ ಪ್ರೀತಿಯಿಂದ 
ಮಮತೆಯಿಂದ ಬಡಿಸಿದರು..

"ಸರ್...

ನಿಮ್ಮಿಬ್ಬರಿಂದಾಗಿ  
ನಾನು ಈ ಆಘಾತದಿಂದ ಹೊರಗೆ ಬರ್ತಾ ಇದ್ದೀನಿ.. 

ನಿಮ್ಮಿಬ್ಬರ ಪ್ರೀತಿಗೆ..
ಮಮತೆಗೆ ನನಗೆ ಏನು ಹೇಳಬೇಕೆಂದೇ  ತಿಳಿಯುತ್ತಿಲ್ಲ...

ನಿಮಗೆ ಏನೆಂದು ನಾನು ಕರೆಯಲಿ  ? "

ಅವರು ನಸುನಕ್ಕರು..
ನಗುವಿನಲ್ಲಿ ಪ್ರೀತಿ ಇತ್ತು... 

"ಮನಸ್ಸಲ್ಲಿ ಪ್ರೀತಿ ಇದ್ದರೆ ಸಾಕಮ್ಮ...
ಏನು ಬೇಕಾದರೂ ಕರೆಯಬಹುದು.. ..

ನನ್ನದೇನೂ ಅಭ್ಯಂತರ ಇಲ್ಲ..."

"ನನ್ನ ಅಕ್ಕನ ಗಂಡ..
ನನ್ನ 
ಬಾವನನ್ನು  "ಜಿಜ್ಜು"  ಅಂತ ಕರೆಯುತ್ತಿದ್ದೆ.
ಅವರೀಗ ಇಲ್ಲ..

ನಿಮ್ಮಲ್ಲಿ ನನ್ನ ಬಾವನನ್ನು ಕಾಣುತ್ತಿದ್ದೇನೆ ಸರ್.."

ಅವರು ತಲೆ ಆಡಿಸುತ್ತ ಮತ್ತೆ ನಸು ನಕ್ಕರು...

ಊಟವಾಯಿತು..

ನಾನು ಡೈನಿಂಗ್ ಟೇಬಲ್ಲನ್ನು ಸ್ವಚ್ಛಗೊಳಿಸಲು ಹೋದೆ..

"ನೀನು ವಿಶ್ರಾಂತಿ ಮಾಡಮ್ಮ..
ಇದೆಲ್ಲ ನಾನು ಮಾಡ್ತಿನಿ..."

"ಜಿಜ್ಜು...
ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ..

ಈಗ ನೋವು ಕೂಡ ಇಲ್ಲ..

ಡಾಕ್ಟರ್ ಕೂಡ ಹೇಳಿದ್ದಾರಲ್ಲ ಸಂಪೂರ್ಣ ಗುಣಮುಖಳಾಗಿದ್ದೇನೆ..
ನನಗೆ ಯಾವ ಸಮಸ್ಯೆಯೂ ಇಲ್ಲ ಅಂತ..

ನಾನು ಇದೆಲ್ಲ ಮಾಡ್ತಿನಿ ಬಿಡಿ....."

ಅವರು ಬಂದು ನನ್ನ ಕೈಯಲ್ಲಿದ್ದ ಬಟ್ಟೆಯನ್ನು ಹಿಡಿದುಕೊಂಡರು...

"ಹಾಗಲ್ಲಮ್ಮ..
ನಿನ್ನ ಬಳಿ ಕೆಲಸ ಮಾಡಿಸಿದರೆ 
ನನ್ನವಳು ನನ್ನನ್ನು ಸುಮ್ಮನೆ ಬಿಡುವದಿಲ್ಲ.."

ನಾನು 
ಅವರ ಕೈಯಿಂದ ಬಿಡಿಸಿಕೊಳ್ಳಲು ಕೊಸರಾಡಿದೆ..

ಅವರು ಇನ್ನೂ ಜೋರಾಗಿ ಹಿಡಿದುಕೊಂಡರು...

"ನಿನ್ನ ಬಗೆಗೆ 
ನನಗೆ ಬಹಳ ದುಃಖ  ಇದೆಯಮ್ಮ..

ನಿನ್ನ ಮೊದಲ ಅನುಭವವೇ  ಹೀಗಾಗಬಾರದಿತ್ತು..."

ನನಗೆ ಅರ್ಥವಾಗಲಿಲ್ಲ...

ಅವರು ತಡವರಿಸಿದರು..

"ಅದು..

ಅದ್ದೂ.. ... 

ನಿನ್ನ ಮೊದಲ ಸೆಕ್ಸ್ ಅನುಭವ ಹೀಗಾಗ ಬಾರದಿತ್ತು...!... "

ಅವರಿನ್ನೂ ನನ್ನ ಕೈಯನ್ನು ಬಿಟ್ಟಿರಲಿಲ್ಲ..

"ನೋಡಮ್ಮ...
ಸೆಕ್ಸ್..
ಕಾಮವೆಂದರೆ ಒಂದು ಸುಂದರ ಅನುಭೂತಿ...

ಶಬ್ಧಗಳಿಗೆ ವರ್ಣನೆಗೆ ಸಿಗುವಂಥದ್ದಲ್ಲ...

ಕಾಮವಿಲ್ಲದಿದ್ದರೆ 
ಈ ಜಗತ್ತು ಶುಷ್ಕ... ನೀರಸ ... "

ನನಗೆ ಏನು ಹೇಳಬೇಕೆಂದು ತೋಚಲಿಲ್ಲ...

"ನಿನ್ನನ್ನು ಕೇಡಿಸಿದ್ದಾರಲ್ಲ..
ಅವರು ಮಾನಸಿಕ ರೋಗಿಗಳು...

ಪ್ರೀತಿಯಿಂದ ಪಡೆಯಬೇಕಾದಂಥಹುದನ್ನು ಬಲಾತ್ಕಾರವಾಗಿ ಪಡೆಯಲು ಪ್ರಯತ್ನಿಸಿದ್ದಾರೆ..

ಕ್ರೂರಿಗಳು..."

"ಹೌದು ಸರ್..
ಅವರು ರಾಕ್ಷಸರು..!.. "........ 

ಅವರು ನನ್ನ ಕೈಯನ್ನು ಬಿಡದೆ 
ಹಾಗೆ ಹಿಡಿದುಕೊಂಡು ನನ್ನನ್ನು ಬಳಸಿ ತಬ್ಬಿಕೊಂಡರು...

ಈಗ ನಾನು ಅಪ್ರತಿಭಳಾದೆ..

"ಇದೇನು ಸಾರ್.. ನೀವು  ?
ನನಗೆ ಇದೆಲ್ಲ ಇಷ್ಟ ಆಗಲ್ಲ.. ಪ್ಲೀಸ್ ಬಿಟ್ ಬಿಡಿ..."

ಅವರು 
ನನ್ನನ್ನು ನೋವಾಗದ ಹಾಗೆ ಹಿಡಿದುಕೊಂಡಿದ್ದರು...

"ನಿನಗೊಂದು ಸ್ವರ್ಗ ತೋರಿಸುತ್ತೇನೆ..!

ನಿನಗಾದ ಕಹಿ ಅನುಭವ ನೀನು ಮರೆತುಬಿಡಬೇಕು..

ಒಂದು ಅರ್ಧ .. 
ಮುಕ್ಕಾಲು ಗಂಟೆ ಸುಮ್ಮನಿದ್ದುಬಿಡು.... 

ಸೆಕ್ಸ್ ಎಂದರೆ ಸುಂದರ..
ಸಿಹಿಯಾದ 
ಸುಖ ಅಂತ ನಿನಗೂ ಅದರ ಅನುಭವ ಕೊಡುತ್ತೇನೆ..."

ನಾನು ಕೊಸರಾಡಿದೆ...

"ನೋಡು..
ಗಡಿಬಿಡಿ.. ಆತಂಕ ಏನೂ ಬೇಡ... 

ಒಂದು ಹತ್ತು ನಿಮಿಷ ನೀನು ಸುಮ್ಮನಿರು..

ಒಪ್ಪಿಕೊ... 

ನಿನ್ನ ದೇಹ ...
ಈ ಕ್ರಿಯೆಗೆ ಸಹಕರಿಸದಿದ್ದರೆ 
ನಾನು ನಿನ್ನನ್ನು ಬಿಟ್ಟು ಬಿಡುವೆ..

ಖಂಡಿತಾ ಬಲವಂತ ಮಾಡುವದಿಲ್ಲ... "

"ಸಾರ್..
ಇದೇನು.. ?

ನಿಮ್ಮದು ಪ್ರೀತಿಯ ಸಂಸಾರ...

ನಿಮ್ಮ ಮಡದಿ ಏನಂದುಕೊಂಡಾಳು... ?

ನನ್ನನ್ನು ಬಿಟ್ ಬಿಡಿ.. ಪ್ಲೀಸ್..."

ಅವರ ಕೈ .. 
ನನ್ನ ಮೈಮೇಲೆಲ್ಲ ಹರಿದಾಡುತ್ತಿತ್ತು...

ನನ್ನ ಕಿವಿಯ ಬಳಿ ಬಂದು ಉಸುರಿದರು...

"ಅವಳು ನನ್ನ ಮಡದಿ ನಿಜ..

ನಾನು .... 
ನನ್ನ 
ಎಲ್ಲ ಸುಖವನ್ನೂ ಅವಳ ಕುತ್ತಿಗೆಗೆ ಕಟ್ಟಲಿಲ್ಲ..

ತಾಳಿಯನ್ನಷ್ಟೆ ಕಟ್ಟಿದ್ದೇನೆ..."... 

ಅವರು ಏದುಸಿರು ಬಿಡುತ್ತಿದ್ದರು...

ಅಪ್ಪುಗೆ ಬಿಗಿಯಾಗ ತೊಡಗಿತು...(3K ಬಳಗಕ್ಕಾಗಿ ಬರೆದ ಕಥೆ ಇದು.... 
ಕೇವಲ ಕಥೆಯಲ್ಲ... 
ಸತ್ಯ ಅಂತನೂ  ಅಂದುಕೊಳ್ಳಬಹುದು...)