ಆಗ ತಾನೇ ಹೊಸ ಮನೆ ಕಟ್ಟುವ ಕೆಲಸ ಶುರುಮಾಡಿದ್ದೆ....
ಬಿಸಿಲು ಜೋರಾಗಿತ್ತು...
ಸ್ವಲ್ಪ ದೂರದಲ್ಲಿ ಒಂದು ಬೇಕರಿ ಇತ್ತು... ಏನಾದರೂ ಕುಡಿದು ಬರೋಣ ಅಂತ ಹೊರಟೆ...
ಅಲ್ಲಿ ಒಂದು ತಿರುವು...
ಒಬ್ಬಳು ಭಿಕ್ಷೆ ಬೇಡುವ ಮುದುಕಿ ಕುಳಿತಿದ್ದಳು...
ನಾನು ಫೋನಿನಲ್ಲಿ ಮಾತನಾಡುತ್ತ ಮುಂದೆ ಹೋಗುತ್ತಿದ್ದೆ...
"ಲೇ... ಬಾರೋ ಇಲ್ಲಿ....."
ಆಶ್ಚರ್ಯವಾಯಿತು...
ಆ ಮುದುಕಿ ನನಗೆ ಜೋರಾಗಿ ಆವಾಜು ಹಾಕಿದ್ದಳು..
ಹತ್ತಿರ ಹೋದೆ..
"ಬೆಳಗಿನಿಂದ ಏನೂ ತಿಂದಿಲ್ಲ... ಕಾಸು ಕೊಡು...."
ಧ್ವನಿಯಲ್ಲಿ ಅಧಿಕಾರದ ದರ್ಪು ಇತ್ತು...
ಹಣ್ಣು ಹಣ್ಣು ಮುದುಕಿ...
ಹರಿದ ಸೀರೆ... ಮಣ್ಣು ಮಣ್ಣಾದ ಕುಪ್ಪುಸ...
ಹಸಿವೆಯ ನಿಸ್ತೇಜ ಕಣ್ಣುಗಳು..
ಕಿಸೆಗೆ ಕೈ ಹಾಕಿ ಐದು ರೂಪಾಯಿ ಕೊಟ್ಟೆ...
"ಐದು ರೂಪಾಯಿಗೆ ಏನೂ ಬರೋದಿಲ್ಲ ...
ಇನ್ನೂ ಐದು ಕೊಡು..."
ನಾನು ಹತ್ತು ರೂಪಾಯಿ ಕೊಟ್ಟೆ...
"ನೀನು ಮುದುಕನಾದಾಗ ...
ನಿನ್ನನ್ನು ...
ನೋಡಿಕೊಳ್ಳುವವರು ಪ್ರೀತಿಯಿಂದ ನೋಡಿಕೊಳ್ಳಲಪ್ಪಾ..."
ನಾನು ಮಾತನಾಡದೆ ಸುಮ್ಮನೆ ಬಂದೆ....
ಮರುದಿನವೂ ಆ ಮುದುಕಿ ನನ್ನನ್ನು ಕರೆದು ಕಾಸು ಹಾಕಿಸಿಕೊಂಡಳು...
ಮೇಸ್ತ್ರಿ ಕೇಳಿದ...
"ಅಣ್ಣಾ...
ಆ ಮುದುಕಿಗೆ ತುಂಬಾ ಸೊಕ್ಕು ಆಲ್ವಾ?
ಧಿಮಾಕಿನ ಮಾತನಾಡುತ್ತಾಳೆ .."
"ನಿನ್ನ ಬಳಿಯೂ ಹಣ ತೆಗೆದು ಕೊಂಡ್ಳಾ?...?"
"ಇಲ್ಲ ಅಣ್ಣಾ...
ತುಂಬಾ ವಿಚಿತ್ರ
ಅವಳಿಗೆ ಅವಶ್ಯಕತೆ ಇದ್ದಾಗ ಮಾತ್ರ ಕೇಳುತ್ತಾಳೆ...
ಭಿಕ್ಷೆಯನ್ನು ...
ಇಷ್ಟು ಧಿಮಾಕಿನಿಂದ ಬೇಡುವದನ್ನು ಮೊದಲಬಾರಿಗೆ ನೋಡ್ತಾ ಇದ್ದೇನೆ ಅಣ್ಣಾ..."
ನಾನೂ ತಲೆ ಹಾಕಿದೆ...
ಮರುದಿನ ಮೇಸ್ತ್ರಿ ಇನ್ನೊಂದು ವಿಷಯ ತಂದ...
"ಅಣ್ಣಾ..
ಆ ಮುದುಕಿಗೆ ಇಬ್ಬರು ಗಂಡು ಮಕ್ಕಳಂತೆ...
ಸೊಸೆಯರೊಡನೆ ಹೊಂದಿಕೊಳ್ಳಲು ಆಗಲಿಲ್ಲವಂತೆ...
ನಿತ್ಯ ಜಗಳ...
ಮಕ್ಕಳು ಮುದುಕಿಯನ್ನು ಮನೆಯಿಂದ ಹೊರಗೆ ಹಾಕಿದ್ದಾರಂತೆ..."
"ಈ ವಿಷಯ ಯಾರು ಹೇಳಿದ್ದು...?"
"ಬೇಕರಿಯವನು...
ಆ ಮಕ್ಕಳು ಇಲ್ಲೇ ಹತ್ತಿರದಲ್ಲಿ ಇರ್ತಾರಂತೆ...."
"ರಾತ್ರಿ ಎಲ್ಲಿ ಮಲಗುತ್ತಾಳೆ...?"
"ಅಲ್ಲೇ ರಸ್ತೆ ಬದಿಯಲ್ಲಿ ಮಲಗುತ್ತಾಳೆ...
ಮನೆಯಲ್ಲಿ ಹಳೆ ಹಾಸಿಗೆ ಇತ್ತು... ಕೊಟ್ಟು ಬಂದಿದ್ದೇನೆ..."
ಮನಸ್ಸು ಭಾರವಾಯಿತು...
ಯಾರು ಸರಿ...?
ಯಾರು ತಪ್ಪು ..?
ನಮ್ಮ ಮನೆಯ ಹತ್ತಿರ ಒಂದು ವೃದ್ಧಾಶ್ರಮವಿದೆ...
ಅಲ್ಲಿ ಸೇರಿಸಿದರೆ ಹೇಗೆ....?
ನಮ್ಮ ವಾಚಮೆನ್ ಷೆಡ್ಡಿನಲ್ಲೇ ಇರಬಹುದಲ್ಲಾ..
ಮೇಸ್ತ್ರಿಯ ಬಳಿ ಹೇಳಿದೆ...
ಮೇಸ್ತ್ರಿ ಹೋಗಿ ಮುದುಕಿಯ ಬಳಿ ಮಾತನಾಡಿ ಬಂದ...
"ಅಣ್ಣಾ...
ಆ ಮುದುಕಿಗೆ ತುಂಬಾ ಸೊಕ್ಕು...
ಅವಳು ಎಲ್ಲಿಯೂ ಹೋಗಲ್ಲಂತೆ..."
"ಹೋಗಲಿ ಬಿಡು ...
ಇದಕ್ಕಿಂತ ಜಾಸ್ತಿ ನಾವೂ ಸಹ ಏನೂ ಮಾಡುವಂತಿಲ್ಲ..."
ಆದರೆ ..
ದಿನಾಲು ನಾನು ಆ ಕಡೆ ಹೋದಾಗ ನನ್ನ ಕರೆದು ಕಾಸು ಹಾಕಿಸಿಕೊಳ್ಳುತ್ತಿದ್ದಳು...
ನಾನು ಬರದ ದಿವಸ ಮೇಸ್ತ್ರಿಯ ಬಳಿ ಕಾಸು ಹಾಕಿಸಿಕೊಳ್ಳುತ್ತಿದ್ದಳಂತೆ...
"ನಾಳೆ ನಿನ್ನ ಇಂಜನಿಯರ್ ಬರ್ತಾನಲ್ಲ...
ಅವನ ಬಳಿ ಈ ಹಣ ತೆಗೆದುಕೋ"
ಅಂತ ಆಜ್ಞೆ ಮಾಡುತ್ತಿದ್ದಳಂತೆ....
ದಿನ ಕಳೆದಂತೆ ...
ಮುದುಕಿಯೊಡನೆ ಸಲುಗೆ ಜಾಸ್ತಿಯಾಯಿತು....
ಕಾಸು ಕೊಟ್ಟು ಏನಾದರೂ ಮಾತನಾಡಿಸಿ ಬರ್ತಿದ್ದೆ....
ಕೆಲವೊಮ್ಮೆ ಕಾಸು ತೆಗೆದುಕೊಳ್ಳುತ್ತಿದ್ದಳು...
ಕೆಲವೊಮ್ಮೆ ಬೇಡ ಎನ್ನುತ್ತಿದ್ದಳು....
ಅವಳು ಅಧಿಕಾರಯುತವಾಗಿ ಮಾತನಾಡುವ ರೀತಿ... ನನಗೆ ಇಷ್ಟವಾಗುತ್ತಿತ್ತು....
ದಿನಾಲೂ ...
ಏನಾದರೂ ತನ್ನ ಬದುಕಿನ ಅನುಭವ ...
ಏನಾದರೂ ಘಟನೆ ಹೇಳಿಕೊಳ್ಳುತ್ತಿದ್ದಳು..
ಅವಳದ್ದೊಂದು ಸಣ್ಣ ತರಕಾರಿ ಅಂಗಡಿ ಇತ್ತಂತೆ....
ಅದರಲ್ಲಿ ಸಂಸಾರ ತೂಗಿಸಿ...
ಮಕ್ಕಳನ್ನು ಓದಿಸಿದ್ದಳಂತೆ.....
ಆದರೆ ಎಂದೂ ತನ್ನ ಕಷ್ಟಗಳನ್ನು ಹೇಳುತ್ತಿರಲಿಲ್ಲ....
ಮಕ್ಕಳನ್ನು..
ಸೊಸೆಯಿಂದಿರನ್ನು ಬಯ್ಯುತ್ತಿರಲಿಲ್ಲ...
ಒಂದು ದಿನ ಕುತೂಹಲದಿಂದ ಕೇಳಿದೆ...
"ನೋಡಜ್ಜಿ...
ನಿನ್ನ
ಮನೆ .... ಮಕ್ಕಳು... ಮೊಮ್ಮಕ್ಕಳು...
ಕುಟುಂಬ..
ಯಾರೂ ನಿನ್ನ ಹತ್ತಿರ ಇಲ್ಲ... !
ನಿನಗೆ ಒಂದು ತುತ್ತು ಅನ್ನ ಹಾಕುವವರು ಇಲ್ಲ...!
ಸಾಯ್ತಾ ಇದ್ದೀನಿ ಅಂದರೆ ..
ಬಾಯಿಗೆ ನೀರೂ ಹಾಕುವವರಿಲ್ಲ...
ಯಾವ ಪ್ರೀತಿಯೂ ಸಿಗದ ..
ಈ ವಯಸ್ಸಿನಲ್ಲಿ ..
ಸಾಯಬೇಕು ಅಂತ ಅನ್ನಿಸೋದಿಲ್ವಾ ?..
ಆತ್ಮ ಹತ್ಯೆಯ ವಿಚಾರ ಬರ್ತಾ ಇಲ್ವಾ ?."
ನಾನು ಕೇಳಬಾರದ ಪ್ರಶ್ನೆ ಕೇಳಿಬಿಟ್ಟಿದ್ದೆ...
ಮುದುಕಿ ಸ್ವಲ್ಪ ಹೊತ್ತು ಸುಮ್ಮನಾದಳು....
"ಈ ಹುಟ್ಟು ನಂದಾ?..."
"ಅಲ್ಲ..."
"ನನಗೆ ಬೇಕು ಅಂತ ಹುಟ್ಟಿ ಬಂದ್ನಾ? "
"ಇಲ್ಲ"
"ಈ ಬದುಕು ನಾನು ಬಯಸಿದ್ದಾ?..."
"ಅಲ್ಲ ... "
" ನಾನು ಬೆಳೆಸಿದ ಮಕ್ಕಳಿಂದ ..
"ಛೀ... ಥೂ..." ಅನ್ನಿಸಿಕೊಂಡು ...
ಮನೆಯಿಂದ ಹೊರಗೆ ಹಾಕಿಸಿಕೊಂಡೆನಲ್ಲಾ...
ಇದು ನಾನು ಬಯಸಿದ್ದಾ?..."
"ಇಲ್ಲಮ್ಮ..."
'ಈ ....
ಹುಟ್ಟು ನಂದಲ್ಲ ..
ಈ ಬದುಕೂ ನಂದಲ್ಲ....
ಸಾವು ಕೂಡ ನನ್ನದಾಗಿರಲಿಕ್ಕೆ ಸಾಧ್ಯವಿಲ್ಲ....
ಆ ಸಾವು ಕೂಡ "ಅವನೇ" ಕೊಡಲಿ....
ನನ್ನ ಹತ್ಯೆಯನ್ನು ನಾನು ಮಾಡಿಕೊಳ್ಳೋದಿಲ್ಲ....!
ಎಷ್ಟು ನರಳುತ್ತಾ ಸಾಯ್ತೆನೋ ಸಾಯಲಿ..... !
ಹಾಗೇ ಸಾಯ್ತೇನೆ...
ಎಷ್ಟು ನೋವು ಬೇಕಾದರೂ ಬರಲಿ....
ನನ್ನ ಮಕ್ಕಳು ಕೊಟ್ಟ ನೋವಿನಷ್ಟು ..
ಆ ನೋವು ..
ಇರೋದಿಲ್ಲ ಬಿಡು...."
ನನಗೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ...
ಮುದುಕಿಯ ಮುಖ ನೋಡಬೇಕು ಅಂತ ಅಂದುಕೊಂಡೆ....
ಧೈರ್ಯ ಸಾಲಲಿಲ್ಲ...
ಮನಸ್ಸು ಭಾರವಾಯಿತು.....
ಕೆಲವು ವರ್ಷಗಳ ಹಿಂದೆ....
ಒಬ್ಬ ಮಹನಿಯ....
ನನ್ನ ಬಳಿ ಮನೆ ಕಟ್ಟಿಸಿಕೊಂಡು ಕಾಸುಕೊಡದೆ ...
ಮೋಸ ಮಾಡಿದಾಗ ..
ಸಾಯುವ ಮನಸ್ಸು ಮಾಡಿದ್ದೆ....
ಆಗ..
ನನ್ನ ಓದು...
ತಿಳುವಳಿಕೆ ನನಗೆ ಧೈರ್ಯ ಕೊಡಲಿಲ್ಲ....
ಮಕ್ಕಳ ಮೇಲಿನ ಛಲವೋ...
ಹಠವೋ ...
ಕಷ್ಟ.. ನೋವು ಇದ್ದರೂ ...
ಸಾಯಲು ಬಯಸದ ಮುದುಕಿಯ ಮೇಲೆ ಗೌರವ ಮೂಡಿತು...
ಹುಟ್ಟು.... ಸಾವಿನ ನಡುವಿನ...
ಬದುಕಿನ..
ನೋವು... ನಲಿವು....
ಸುಖ.. ಸಂತೋಷ..
ಎಲ್ಲವನ್ನೂ ಅನುಭವಿಸುತ್ತೇವೆ....
ಸಾವನ್ನು ಕೂಡ ಅನುಭವಿಸಿಯೇ ಸಾಯಬೇಕು.......
ಆದರೂ...
ಆ ..
ಅಸಹಾಯಕ..ಅಸಹನೀಯ ...
ವೃದ್ಯಾಪ್ಯದ
ದೀನ ಬದುಕು ನಮ್ಮ ವೈರಿಗೂ ಬಾರದೆ ಇರಲಿ ಆಲ್ವಾ?....