ಕೆಲವು ಸಂದರ್ಭಗಳಲ್ಲಿ..
ನಮ್ಮ ನಡತೆಗಳಿಗೆ ...ನಮ್ಮ ಬಳಿಯೇ ಉತ್ತರವಿರುವದಿಲ್ಲ....
ನಮ್ಮ ಮನಸ್ಸಿಗೆ ಇಷ್ಟವಿಲ್ಲದಿದ್ದರೂ..
ಕೆಲವೊಂದು ಕಠಿಣ ನಿರ್ಧಾರಕ್ಕೆ ಬಂದುಬಿಡುತ್ತೇವೆ...
ಇದೆಲ್ಲ ಯಾಕೆ ಅಂತೀರಾ?
ನಾನು ನನ್ನ ಹುಟ್ಟಿದ ಊರಿಗೆ ಹೋಗದೇ ಬಹಳ ವರ್ಷಗಳೇ ಆದವು..
ಅಲ್ಲಿ ಅಪ್ಪ, ಅಮ್ಮ ಇರದಿದ್ದರೂ...
ಒಬ್ಬ ಒಡಹುಟ್ಟಿದ ತಮ್ಮನಿದ್ದ..
ಮೊನ್ನೆ ನನ್ನ ತಮ್ಮ ಆಸ್ಪತ್ರೆಯಲ್ಲಿ ತೀರಿಕೊಂಡನಂತೆ...
ತಮ್ಮನ ಹೆಂಡತಿಯ ಅಣ್ಣನ ಫೋನ್ ಬಂದಿತ್ತು...
" ನಿಮ್ಮ ತಮ್ಮ ತೀರಿಕೊಂಡಿದ್ದಾರೆ...
ವಾಸಿಯಾಗದ ಖಾಯಿಲೆಯಿಂದ..
ನಿಮ್ಮ ಬಳಿ ಮಾತನಾಡಬೇಕೆಂದು ಪ್ರಯತ್ನಿಸಿದರೂ..
ನೀವು ಮಾತನಾಡಲೇ ಇಲ್ಲ.."
ಅವರ ಧ್ವನಿಯಲ್ಲಿ ಆಕ್ಷೇಪಣೆಯಿತ್ತು .. ..
ನಾನು ಸುಮ್ಮನಿದ್ದೆ...
ನನಗೆ ಅವರ ಬಳಿ ಮಾತಿನ ಅವಶ್ಯಕತೆಯೂ ಇರಲಿಲ್ಲ...
"ನೋಡಿ ..
ಬದುಕಿದ್ದಾಗ ದ್ವೇಷ... ಹಗೆತನ...
ಈಗ ನಿಮ್ಮಿಬ್ಬರ ಜಮೀನು ಮಾರಾಟಮಾಡುವಂಥಹ ಸ್ಥಿತಿ ಇದೆ...
ಸಿಕ್ಕಾಪಟ್ಟೆ ಸಾಲವಿದೆ.."
ಓಹೋ...!
ಇದಕ್ಕೆ ಇಷ್ಟೆಲ್ಲ ಪೀಠಿಕೆ..!
ನನಗೆ ಕೋಪ ಬಂತು...
"ಮಾರಾಟ ಮಾಡಿಕೊಳ್ಳಿ..
ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ..
ನನ್ನದೂ.. ಅಂತ ಅಲ್ಲಿ ಯಾವದೂ... ಇಲ್ಲ...
ಯಾರೂ.... ಇಲ್ಲ.."
"ನೋಡಿ...
ನಿಮಗೆ ಬೇಡದಿದ್ದರೂ..
ಕಾಗದ ಪತ್ರಗಳಿಗೆ ಸಹಿ ಹಾಕಲು ನೀವೊಮ್ಮೆ ಬರಬೇಕಾಗುತ್ತದೆ..
ನಿಮ್ಮ ಸಹಿ ಇಲ್ಲದಿದ್ದರೆ ಯಾರೂ ಖರಿದಿಗೆ ಬರುತ್ತಿಲ್ಲ..
ದಯವಿಟ್ಟು ಇಲ್ಲವೆನ್ನಬೇಡಿ...
ನನ್ನ ತಂಗಿ.. ಮಕ್ಕಳ ಬಾಳಿನ ಪ್ರಶ್ನೆ...
ದಯವಿಟ್ಟು ಬನ್ನಿ.."
ಬಹಳ ಗೋಗರೆದರು...
ನಾನು ನನ್ನ ಮಡದಿಯ ಸಂಗಡ ಚರ್ಚಿಸಿದೆ...
"ಹೋಗಿ ಬನ್ನಿ...
ಸುಮ್ಮನೇ.. ಸಹಿ ಹಾಕಬೇಡಿ...
ಮನೆ ಸಾಲ ಇನ್ನು ತೀರಿಸಿಲ್ಲ...
ಮಕ್ಕಳು ದೊಡ್ದವರಾಗ್ತಾ ಇದ್ದಾರೆ...
ಅವರ ಓದಿಗೂ.. ಖರ್ಚುಗಳಿವೆ...
ಅಲ್ಲಿಂದ ಏನಾದರೂ "ನಮ್ಮ ಪಾಲನ್ನು" ಕಿತ್ತುಕೊಂಡು ಬನ್ನಿ..
ನಮ್ಮ ಕಷ್ಟದ ದಿನಗಳು ನಿಮಗೆ ನೆನಪಿದೆಯಲ್ಲವೆ...?"
ನಿಜ...
ನನಗೆ ಆ ದಿನಗಳು ಬೇಡವೆಂದರೂ ನೆನಪಾದವು....
ಆಗ ನಾನು ನನ್ನ ಸ್ನೇಹಿತನ ಸಾಲದ ಪತ್ರಕ್ಕೆ ಸಹಿ ಹಾಕಿ ಬಹಳ ತೊಂದರೆಗೆ ಸಿಲುಕಿದ್ದೆ...
ಸ್ನೇಹಿತ ನಾಪತ್ತೆಯಾಗಿ...
ಅವನ ಸಾಲವನ್ನೆಲ್ಲ ನಾನು ತೀರಿಸುವಂಥಹ ಅನಿವಾರ್ಯ ಸ್ಥಿತಿ ಬಂದಿದ್ದೆ...
ದಿನಾ ಬೆಳಗಾದರೆ.. ಸಾಲಗಾರರ...
ರೌಡಿಗಳ ಕಾಟ..!
ನಾನು ಮಾಡದ ತಪ್ಪಿಗೆ ಮರ್ಯಾದೆ ಹೋಗುತ್ತಿದೆ...!
ಆತ್ಮ ಹತ್ಯೆ ಮಾಡಿಕೊಳ್ಳುವಂಥಹ ಹೀನ ಸ್ಥಿತಿ... !!
ಆಗ ನೆನಪಾದದ್ದು ನನ್ನ ತಮ್ಮ...!
ಆಪತ್ತಿನಲ್ಲಿ ನೆನಪಾಗುವವರು ನಮ್ಮವರು ತಾನೆ?
"ಅಣ್ಣಾ...
ಇಲ್ಲಿ ಜಮೀನನಲ್ಲಿ ಏನೂ ಬೆಳೆ ಆಗುತ್ತಿಲ್ಲ..
ಈ ಕೂಲಿ ರೇಟು...
ಬೆಳೆಗೆ ಬೆಲೆ ಇಲ್ಲ...
ಈ ವರ್ಷ ಊಟ ಮಾಡಿಕೊಂಡು ಹೋಗುವದೇ.. ಕಷ್ಟವಾಗಿದೆ..."
ಪಕ್ಕದಲ್ಲಿದ್ದ ನನ್ನ ತಮ್ಮನ ಹೆಂಡತಿಯ ಮುಖದಲ್ಲಿನ ನಗು .. ...
ನನಗೆ ಬೇಡವೆಂದರೂ ಕಾಣುತ್ತಿತ್ತು...!
ಅದು ಅಪಹಾಸ್ಯದ ನಗು...! !
ಛೇ....
ಇದೆಂಥಹ... ಅವಮಾನ !!
ಸಾವಿರಾರು ಭರ್ಚಿಗಳಿಂದ ಮೈಯನ್ನು ಚುಚ್ಚಿದ ಅನುಭವ... !
ಮದುವೆಯಾದ ಮೇಲೆ ಈ... ರಕ್ತ ಸಂಬಂಧಗಳು...
ಬಾಂಧವ್ಯಗಳು ...
ಯಾಕೆ ಬದಲಾಗಿ ಬಿಡುತ್ತವೆ...?
ನಾನು ಕಣ್ಣೀರಿಡುತ್ತಿದ್ದರೆ..
ನನ್ನ ತಮ್ಮನ ಹೆಂಡತಿಗೆ ಇದು ಹಾಸ್ಯವಾಗಿ ಕಾಣುತ್ತಿದೆಯಾ?
ನನ್ನ ತಮ್ಮ ಮತ್ತು ಇವಳು ...
ಇಬ್ಬರೂ ಸೇರಿ ಮಾಡಿದ ಉಪಾಯವಲ್ಲವಾ?
ಕಷ್ಟದಲ್ಲಿ ಕಣ್ಣೀರು ಒರೆಸದ ಬಾಂಧವ್ಯ ಯಾಕೆ ಇರಬೇಕು...?
ಅದೇ.. ಕೊನೆ...!
ನಾನು ಮತ್ತೆ ಊರಿಗೆ ಹೋಗಲೇ ಇಲ್ಲ...!
ಅಲ್ಲಿನ ಆಸ್ತಿ... ಹಣ...
ರಕ್ತ ಸಂಬಂಧ ಎಲ್ಲವನ್ನೂ ಬಿಟ್ಟು ಬಂದೆ...!
ಈಗ ಮತ್ತೆ ಊರಿಗೆ ಹೋಗಬೇಕಾಗಿದೆ...
ಊರಿಗೆ ಬಂದಾಗ ಬೆಳಿಗ್ಗೆ ಏಳು ಗಂಟೆ...
ನಾನು ಹೊಟೆಲ್ಲಿನಲ್ಲಿ ನಾಷ್ಟ ಮಾಡಿಕೊಂಡು ನಮ್ಮೂರ ಗೌಡರ ಮನೆಗೆ ಬಂದೆ...
ಅವರು ನನ್ನ ತಂದೆಯ ಮಿತ್ರರು...
"ನೋಡಪ್ಪಾ...
ನಿನ್ನ ತಮ್ಮನ ಸಂಸಾರ ಬೀದಿಗೆ ಬಂದಿದೆ...
ಜಮೀನು ಪರ ಭಾರೆ ಆಗ್ತ ಇದೆ...
ನಿನ್ನ ತಂದೆಯವರು.. ನಾನೂ ಸ್ನೇಹಿತರು... ಇದೆಲ್ಲ ನೋಡಕ್ಕೆ ಆಗಲ್ಲಪ್ಪ...
ಮನೆಯ ದೊಡ್ಡ ಮಗ...
ನೀನೆ ಏನಾದ್ರೂ ಮಾಡು..."
"ನೋಡಿ... ಗೌಡ್ರೆ...
ಮುರಿದ ಮನಸ್ಸನ್ನು ಸೇರಿಸುವದು ಬಲು ಕಷ್ಟ....
ಆಸ್ಪತ್ರೆಗಳಲ್ಲಿ ನಡೆಯೋ ಅಪರೇಷನ್ ತರಹ ಅಲ್ಲವಲ್ಲ...
ನನ್ನ ತಮ್ಮ ಇದ್ದಾಗಲೇ...
ಎಲ್ಲ ಸಂಬಂಧವನ್ನೂ ನಾನು ಬಿಟ್ಟು ಬಿಟ್ಟಿದ್ದೇನೆ..
ಈಗ ಬಂದಿದ್ದು ಕಾಗದ ಪತ್ರಗಳಿಗೆ ಸಹಿ ಹಾಕಲು..
ಆ ಕೆಲಸ ಪೂರೈಸಿ ....
ನನಗೆ ವಾಪಸ್ಸು ಇವತ್ತೇ ಹೋಗಬೇಕು..."
"ಆಯ್ತಪ್ಪಾ..."
ಅವರು ಹೆಚ್ಚು ಮಾತನಾಡಲಲಿಲ್ಲ..
ಅವರು ತಮ್ಮನ ಹೆಂಡತಿಯನ್ನು ಕರೆಸಿದರು...
ಅವಳ ಮುಖನೋಡಲೂ ನನಗೆ ಇಷ್ಟವಿರಲಿಲ್ಲ...
ಅವಳೊಂದಿಗೆ ಸಣ್ಣ ಸಣ್ಣ ಮಕ್ಕಳೂ ಬಂದರು....
ಬದುಕು ಎಂಥಹ ಅನೀರೀಕ್ಷಿತ ತಿರುವುಗಳನ್ನು ತಂದಿಡುತ್ತದೆ... !
ತಮ್ಮನ ಹೆಂಡತಿ ತಲೆ ತಗ್ಗಿಸಿಯೇ ನಿಂತಿದ್ದಳು..
"ಭಾವ...
ಅವರ ಖಾಯಿಲೆಗೆ ಬಹಳ ಖರ್ಚಾಯಿತು..
ಅವರು ಬದುಕಿದರೆ ಸಾಕೆಂದು ಬಹಳ ಪ್ರಯತ್ನಿಸಿದೆ..
ಏನೂ ಪ್ರಯೋಜನ ಆಗಲಿಲ್ಲ...
ನಮ್ಮನ್ನೆಲ್ಲ ಬಿಟ್ಟು ಹೋಗಿ ಬಿಟ್ರು..."
ಅವಳಿಗೆ ಮುಂದೆ ಮಾತನಾಡಲಾಗಲಿಲ್ಲ... ದುಃಖ ಉಮ್ಮಳಿಸಿ ಬಂತು...
ನನಗೆ ಆ ಸನ್ನಿವೇಶ ಒಂಥರಾ ಮುಜುಗರವಾದರೂ...
"ನೋಡಮ್ಮ...
ನನಗೆ ಕಾಗದ ಪತ್ರಗಳನ್ನು ತಂದು ಕೊಡು..
ಸಹಿ ಹಾಕಿ ನನಗೆ ಇವತ್ತೇ ವಾಪಸ್ಸು ಹೋಗಬೇಕು.."
ನನ್ನ ಮಾತುಗಳು ನನಗೇ ಆಶ್ಚರ್ಯ ತರಿಸಿದವು...
ಇಷ್ಟು ಕಠಿಣವಾಗಿ ನಾನು ಮಾತನಾಡ ಬಲ್ಲೇನಾ ?
ಅನುಭವಿಸಿದ ಅಂದಿನ ಅಪಹಾಸ್ಯದ ಸಂದರ್ಭ ಬೇಡವೆಂದರೂ ನೆನಪಾಗುತ್ತಿತ್ತು...
ಅಷ್ಟರಲ್ಲಿ ಗೌಡರು ಚಹ ತರಿಸಿದರು..
ನಾನು ಚಹ ಕುಡಿಯುತ್ತಿದ್ದೆ...
ಕಾಲಿಗೆ ಏನೋ ತಡಕಿದಂತಾಯಿತು...
ಅದು ಒಂದು ಪುಟ್ಟ ಮಗು... !
" ದೊಡ್ಡಪ್ಪಾ...!
ಬೆಂಗಳೂರು ದೊಡ್ಡಪ್ಪಾ...
ನಾನು...!..
ನಾನು.. !.."
ಕೆದರಿದ ...
ಎಣ್ಣೆಯಿಲ್ಲದೆ ಜಿಡ್ಡುಗಟ್ಟಿದ ಕೂದಲು..!
ಅತ್ತೂ... ಅತ್ತು ಬಾಡಿದ.. ದೈನ್ಯ ಮುಖ..!
ಆದರೂ ಮಗು ಮುದ್ದಾಗಿತ್ತು... ಎತ್ತಿಕೊಂಡೆ...
"ನೀನು ಬೆಂಗಳೂರು ದೊಡ್ಡಪ್ಪ ಅಲ್ವಾ?
ಅಮ್ಮ ಹೇಳ್ತಾ ಇರ್ತಾಳೆ..."
ನಾನು ಹೌದು ಎನ್ನುವಂತೆ ತಲೆಯಾಡಿಸಿದೆ...
"ದೊಡ್ಡಪ್ಪಾ... ದೊಡ್ಡಪ್ಪಾ..
ಅಪ್ಪ ಎಲ್ಲಿಗೆ ಹೋಗಿದ್ದಾರೆ...?.."
ನನಗೆ ಉತ್ತರಿಸಲು ಆಗಲಿಲ್ಲ...
"ದೊಡ್ಡಪ್ಪಾ...
ದೊಡ್ಡಪ್ಪಾ...!
ಅಪ್ಪ... ಬೆಂಗಳೂರಿಗೆ ಹೋಗಿದ್ದಾನಂತೆ ಹೌದಾ?..
ಅಮ್ಮ ಬಹಳ ಕೆಟ್ಟವಳು ದೊಡ್ಡಪ್ಪಾ..
ಏನು ಕೇಳಿದರೂ ಕೊಡಿಸ್ತಾನೆ ಇಲ್ಲ.."
ಯಾಕೊ ನನ್ನ ಬಾಯಿಂದ ಮಾತೇ.. ಬರುತ್ತಿಲ್ಲ...
ಮಗು ಮಾತನಾಡುತ್ತಲೇ ಇತ್ತು...
" ದೊಡ್ಡಪ್ಪಾ..
ಅಪ್ಪ ಯಾವಾಗ ಬರ್ತಾನೆ..?...
ನಿನ್ನ ಸಂಗಡ.. ನನ್ನನ್ನೂ ಕರ್ಕೊಂಡು ಹೋಗು ದೊಡ್ಡಪ್ಪಾ...
ನನಗೆ ಅಪ್ಪನ್ನ ತೋರಿಸು..."
ಅಷ್ಟರಲ್ಲಿ ತಮ್ಮನ ಹೆಂಡತಿ ಕಾಗದ ಪತ್ರಗಳನ್ನು ತಂದಳು...
ಆಗ ಗೌಡರೆ.. ಕೇಳಿದರು...
"ನೋಡಪಾ..
ಇದರಲ್ಲಿ ನಿನಗೇನಾದರೂ ಪಾಲು ಬೇಕಿದ್ದರೆ ಈಗಲೇ ಹೇಳು...
ಇದು ಪಿತ್ರಾರ್ಜಿತ ಆಸ್ತಿ..
ನಿನ್ನ ಪಾಲಿನದು ನೀನು ಇಟ್ಟು ಕೊಳ್ಳ ಬಹುದು..."
ನನಗೆ ಮಡದಿಯ ಮಾತು ನೆನಪಾಯಿತು...
ಈ ಪುಟ್ಟ ಕಂದ..
ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿತ್ತು...!
ನಾನು ಹೇಳಿದೆ..
"ಗೌಡರೆ...
ನಾನು ಸಹಿ ಹಾಕುವದಿಲ್ಲ...
ನನಗೆ ಪಾಲೂ ಬೇಕಿಲ್ಲ..
ನನ್ನ ತಮ್ಮನ ಸಂಸಾರವನ್ನು ಎತ್ತಿ ನಿಲ್ಲಿಸುತ್ತೇನೆ...
ಎಷ್ಟು ಸಾಲವಿದೆ ಹೇಳಿ.. ಎಲ್ಲ ತೀರಿಸುತ್ತೇನೆ....."
ನಾನು ಏನು ಹೇಳ್ತಾ ಇದ್ದೇನೆ ಅಂತ ನನಗೆ ಗೊತ್ತಾಗ್ತಾ ಇಲ್ಲವಾಗಿತ್ತು....!
ಕಣ್ಣೆಲ್ಲ ಮಂಜಾಗಿದ್ದವು...
ಪುಟ್ಟ ಮಗುವನ್ನು ಬಿಗಿಯಾಗಿ ..
ಮತ್ತೂ ಜೋರಾಗಿ ಅಪ್ಪಿಕೊಂಡೆ....!
ನನಗೆ ನನ್ನ ತಮ್ಮ ನೆನಪಾದ...!
ಅವನೂ..
ಈ.. ಕಂದನ ಹಾಗೆಯೇ... ಇದ್ದ..!.
(ಇದು ಕಥೆ)
(ಒಳ್ಳೆಯ ಪ್ರತಿಕ್ರಿಯೆ ಗಳಿವೆ... ದಯವಿಟ್ಟು ಓದಿ...)