Monday, December 24, 2012

" ನನ್ನ ಹತ್ಯೆಯನ್ನು... ನಾನು ಮಾಡಿಕೊಳ್ಳೋದಿಲ್ಲ....! "


ಆಗ ತಾನೇ ಹೊಸ ಮನೆ ಕಟ್ಟುವ ಕೆಲಸ ಶುರುಮಾಡಿದ್ದೆ....

ಬಿಸಿಲು ಜೋರಾಗಿತ್ತು...


ಸ್ವಲ್ಪ ದೂರದಲ್ಲಿ ಒಂದು ಬೇಕರಿ ಇತ್ತು...  ಏನಾದರೂ ಕುಡಿದು ಬರೋಣ ಅಂತ ಹೊರಟೆ...


ಅಲ್ಲಿ ಒಂದು ತಿರುವು...

ಒಬ್ಬಳು ಭಿಕ್ಷೆ ಬೇಡುವ ಮುದುಕಿ ಕುಳಿತಿದ್ದಳು...

ನಾನು ಫೋನಿನಲ್ಲಿ ಮಾತನಾಡುತ್ತ ಮುಂದೆ ಹೋಗುತ್ತಿದ್ದೆ...


"ಲೇ... ಬಾರೋ ಇಲ್ಲಿ....."


ಆಶ್ಚರ್ಯವಾಯಿತು...

ಆ ಮುದುಕಿ ನನಗೆ  ಜೋರಾಗಿ ಆವಾಜು ಹಾಕಿದ್ದಳು..

ಹತ್ತಿರ ಹೋದೆ..


"ಬೆಳಗಿನಿಂದ ಏನೂ ತಿಂದಿಲ್ಲ... ಕಾಸು ಕೊಡು...."


ಧ್ವನಿಯಲ್ಲಿ ಅಧಿಕಾರದ ದರ್ಪು ಇತ್ತು...


ಹಣ್ಣು ಹಣ್ಣು ಮುದುಕಿ...

ಹರಿದ ಸೀರೆ... ಮಣ್ಣು ಮಣ್ಣಾದ  ಕುಪ್ಪುಸ...

ಹಸಿವೆಯ ನಿಸ್ತೇಜ  ಕಣ್ಣುಗಳು..


ಕಿಸೆಗೆ ಕೈ ಹಾಕಿ ಐದು ರೂಪಾಯಿ ಕೊಟ್ಟೆ...


"ಐದು ರೂಪಾಯಿಗೆ ಏನೂ ಬರೋದಿಲ್ಲ ... 

ಇನ್ನೂ ಐದು ಕೊಡು..."

ನಾನು ಹತ್ತು ರೂಪಾಯಿ ಕೊಟ್ಟೆ...


"ನೀನು ಮುದುಕನಾದಾಗ ...

ನಿನ್ನನ್ನು ...
ನೋಡಿಕೊಳ್ಳುವವರು ಪ್ರೀತಿಯಿಂದ ನೋಡಿಕೊಳ್ಳಲಪ್ಪಾ..."

ನಾನು ಮಾತನಾಡದೆ ಸುಮ್ಮನೆ ಬಂದೆ....


ಮರುದಿನವೂ ಆ ಮುದುಕಿ ನನ್ನನ್ನು ಕರೆದು ಕಾಸು ಹಾಕಿಸಿಕೊಂಡಳು...


ಮೇಸ್ತ್ರಿ ಕೇಳಿದ...


"ಅಣ್ಣಾ...

ಆ ಮುದುಕಿಗೆ ತುಂಬಾ ಸೊಕ್ಕು ಆಲ್ವಾ? 
ಧಿಮಾಕಿನ ಮಾತನಾಡುತ್ತಾಳೆ .."

"ನಿನ್ನ ಬಳಿಯೂ ಹಣ ತೆಗೆದು ಕೊಂಡ್ಳಾ?...?"


"ಇಲ್ಲ ಅಣ್ಣಾ...

ತುಂಬಾ ವಿಚಿತ್ರ 
ಅವಳಿಗೆ ಅವಶ್ಯಕತೆ ಇದ್ದಾಗ ಮಾತ್ರ ಕೇಳುತ್ತಾಳೆ...

ಭಿಕ್ಷೆಯನ್ನು ...

ಇಷ್ಟು ಧಿಮಾಕಿನಿಂದ ಬೇಡುವದನ್ನು ಮೊದಲಬಾರಿಗೆ  ನೋಡ್ತಾ ಇದ್ದೇನೆ ಅಣ್ಣಾ..."

ನಾನೂ ತಲೆ ಹಾಕಿದೆ...


ಮರುದಿನ ಮೇಸ್ತ್ರಿ ಇನ್ನೊಂದು ವಿಷಯ ತಂದ...


"ಅಣ್ಣಾ..

ಆ ಮುದುಕಿಗೆ ಇಬ್ಬರು ಗಂಡು ಮಕ್ಕಳಂತೆ...
ಸೊಸೆಯರೊಡನೆ ಹೊಂದಿಕೊಳ್ಳಲು ಆಗಲಿಲ್ಲವಂತೆ...
ನಿತ್ಯ ಜಗಳ...

ಮಕ್ಕಳು ಮುದುಕಿಯನ್ನು ಮನೆಯಿಂದ ಹೊರಗೆ ಹಾಕಿದ್ದಾರಂತೆ..."


"ಈ ವಿಷಯ ಯಾರು ಹೇಳಿದ್ದು...?"


"ಬೇಕರಿಯವನು...

ಆ ಮಕ್ಕಳು ಇಲ್ಲೇ ಹತ್ತಿರದಲ್ಲಿ ಇರ್ತಾರಂತೆ...."

"ರಾತ್ರಿ ಎಲ್ಲಿ ಮಲಗುತ್ತಾಳೆ...?"


"ಅಲ್ಲೇ ರಸ್ತೆ ಬದಿಯಲ್ಲಿ ಮಲಗುತ್ತಾಳೆ...

ಮನೆಯಲ್ಲಿ ಹಳೆ ಹಾಸಿಗೆ ಇತ್ತು... ಕೊಟ್ಟು ಬಂದಿದ್ದೇನೆ..."

ಮನಸ್ಸು ಭಾರವಾಯಿತು...

ಯಾರು ಸರಿ...?
ಯಾರು ತಪ್ಪು ..?

ನಮ್ಮ ಮನೆಯ ಹತ್ತಿರ ಒಂದು ವೃದ್ಧಾಶ್ರಮವಿದೆ... 

ಅಲ್ಲಿ ಸೇರಿಸಿದರೆ ಹೇಗೆ....?
ನಮ್ಮ ವಾಚಮೆನ್ ಷೆಡ್ಡಿನಲ್ಲೇ ಇರಬಹುದಲ್ಲಾ..

ಮೇಸ್ತ್ರಿಯ ಬಳಿ ಹೇಳಿದೆ...


ಮೇಸ್ತ್ರಿ ಹೋಗಿ ಮುದುಕಿಯ ಬಳಿ ಮಾತನಾಡಿ ಬಂದ...


"ಅಣ್ಣಾ...

ಆ ಮುದುಕಿಗೆ ತುಂಬಾ ಸೊಕ್ಕು... 
ಅವಳು ಎಲ್ಲಿಯೂ ಹೋಗಲ್ಲಂತೆ..."

"ಹೋಗಲಿ ಬಿಡು ... 

ಇದಕ್ಕಿಂತ ಜಾಸ್ತಿ ನಾವೂ ಸಹ ಏನೂ ಮಾಡುವಂತಿಲ್ಲ..."

ಆದರೆ ..

ದಿನಾಲು ನಾನು ಆ  ಕಡೆ ಹೋದಾಗ  ನನ್ನ ಕರೆದು ಕಾಸು ಹಾಕಿಸಿಕೊಳ್ಳುತ್ತಿದ್ದಳು...

ನಾನು ಬರದ ದಿವಸ ಮೇಸ್ತ್ರಿಯ ಬಳಿ  ಕಾಸು ಹಾಕಿಸಿಕೊಳ್ಳುತ್ತಿದ್ದಳಂತೆ...


"ನಾಳೆ ನಿನ್ನ ಇಂಜನಿಯರ್ ಬರ್ತಾನಲ್ಲ...

ಅವನ ಬಳಿ ಈ ಹಣ ತೆಗೆದುಕೋ" 

ಅಂತ ಆಜ್ಞೆ  ಮಾಡುತ್ತಿದ್ದಳಂತೆ....

ದಿನ ಕಳೆದಂತೆ ...

ಮುದುಕಿಯೊಡನೆ ಸಲುಗೆ ಜಾಸ್ತಿಯಾಯಿತು....
ಕಾಸು ಕೊಟ್ಟು ಏನಾದರೂ ಮಾತನಾಡಿಸಿ  ಬರ್ತಿದ್ದೆ....

ಕೆಲವೊಮ್ಮೆ ಕಾಸು ತೆಗೆದುಕೊಳ್ಳುತ್ತಿದ್ದಳು...

ಕೆಲವೊಮ್ಮೆ ಬೇಡ ಎನ್ನುತ್ತಿದ್ದಳು....

ಅವಳು ಅಧಿಕಾರಯುತವಾಗಿ ಮಾತನಾಡುವ ರೀತಿ... ನನಗೆ ಇಷ್ಟವಾಗುತ್ತಿತ್ತು....


ದಿನಾಲೂ ...

ಏನಾದರೂ ತನ್ನ ಬದುಕಿನ ಅನುಭವ ...
ಏನಾದರೂ ಘಟನೆ ಹೇಳಿಕೊಳ್ಳುತ್ತಿದ್ದಳು..

ಅವಳದ್ದೊಂದು ಸಣ್ಣ ತರಕಾರಿ ಅಂಗಡಿ ಇತ್ತಂತೆ....

ಅದರಲ್ಲಿ ಸಂಸಾರ ತೂಗಿಸಿ...
ಮಕ್ಕಳನ್ನು ಓದಿಸಿದ್ದಳಂತೆ.....

ಆದರೆ ಎಂದೂ ತನ್ನ ಕಷ್ಟಗಳನ್ನು ಹೇಳುತ್ತಿರಲಿಲ್ಲ....

ಮಕ್ಕಳನ್ನು..
ಸೊಸೆಯಿಂದಿರನ್ನು ಬಯ್ಯುತ್ತಿರಲಿಲ್ಲ...

ಒಂದು ದಿನ  ಕುತೂಹಲದಿಂದ   ಕೇಳಿದೆ...


"ನೋಡಜ್ಜಿ...

ನಿನ್ನ 
ಮನೆ  .... ಮಕ್ಕಳು... ಮೊಮ್ಮಕ್ಕಳು... 
ಕುಟುಂಬ.. 
ಯಾರೂ ನಿನ್ನ ಹತ್ತಿರ ಇಲ್ಲ... !

ನಿನಗೆ ಒಂದು ತುತ್ತು ಅನ್ನ  ಹಾಕುವವರು ಇಲ್ಲ...!


ಸಾಯ್ತಾ ಇದ್ದೀನಿ ಅಂದರೆ ..

ಬಾಯಿಗೆ ನೀರೂ ಹಾಕುವವರಿಲ್ಲ...

ಯಾವ ಪ್ರೀತಿಯೂ ಸಿಗದ ..

ಈ ವಯಸ್ಸಿನಲ್ಲಿ  ..
ಸಾಯಬೇಕು ಅಂತ ಅನ್ನಿಸೋದಿಲ್ವಾ  ?..

ಆತ್ಮ ಹತ್ಯೆಯ ವಿಚಾರ ಬರ್ತಾ ಇಲ್ವಾ ?."


ನಾನು ಕೇಳಬಾರದ ಪ್ರಶ್ನೆ ಕೇಳಿಬಿಟ್ಟಿದ್ದೆ...


ಮುದುಕಿ ಸ್ವಲ್ಪ ಹೊತ್ತು ಸುಮ್ಮನಾದಳು....


"ಈ ಹುಟ್ಟು ನಂದಾ?..."


"ಅಲ್ಲ..."


"ನನಗೆ ಬೇಕು  ಅಂತ ಹುಟ್ಟಿ ಬಂದ್ನಾ? "


"ಇಲ್ಲ"


"ಈ ಬದುಕು ನಾನು ಬಯಸಿದ್ದಾ?..."


"ಅಲ್ಲ ... "


" ನಾನು ಬೆಳೆಸಿದ ಮಕ್ಕಳಿಂದ ..

"ಛೀ... ಥೂ..." ಅನ್ನಿಸಿಕೊಂಡು ...
ಮನೆಯಿಂದ ಹೊರಗೆ ಹಾಕಿಸಿಕೊಂಡೆನಲ್ಲಾ... 

ಇದು ನಾನು ಬಯಸಿದ್ದಾ?..." 


"ಇಲ್ಲಮ್ಮ..."


'ಈ ....

ಹುಟ್ಟು ನಂದಲ್ಲ ..
ಈ ಬದುಕೂ  ನಂದಲ್ಲ....

ಸಾವು ಕೂಡ ನನ್ನದಾಗಿರಲಿಕ್ಕೆ ಸಾಧ್ಯವಿಲ್ಲ....


ಆ ಸಾವು ಕೂಡ "ಅವನೇ" ಕೊಡಲಿ.... 


ನನ್ನ ಹತ್ಯೆಯನ್ನು  ನಾನು ಮಾಡಿಕೊಳ್ಳೋದಿಲ್ಲ....!


ಎಷ್ಟು ನರಳುತ್ತಾ ಸಾಯ್ತೆನೋ  ಸಾಯಲಿ..... !

ಹಾಗೇ ಸಾಯ್ತೇನೆ...

ಎಷ್ಟು ನೋವು ಬೇಕಾದರೂ ಬರಲಿ....


ನನ್ನ ಮಕ್ಕಳು ಕೊಟ್ಟ ನೋವಿನಷ್ಟು ..

ಆ ನೋವು ..
ಇರೋದಿಲ್ಲ ಬಿಡು...."

ನನಗೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ...


ಮುದುಕಿಯ ಮುಖ ನೋಡಬೇಕು ಅಂತ ಅಂದುಕೊಂಡೆ....

ಧೈರ್ಯ ಸಾಲಲಿಲ್ಲ... 

ಮನಸ್ಸು ಭಾರವಾಯಿತು.....


ಕೆಲವು ವರ್ಷಗಳ ಹಿಂದೆ....

ಒಬ್ಬ ಮಹನಿಯ....
ನನ್ನ ಬಳಿ ಮನೆ ಕಟ್ಟಿಸಿಕೊಂಡು ಕಾಸುಕೊಡದೆ ... 
ಮೋಸ ಮಾಡಿದಾಗ ..
ಸಾಯುವ ಮನಸ್ಸು ಮಾಡಿದ್ದೆ....

ಆಗ..

ನನ್ನ ಓದು... 
ತಿಳುವಳಿಕೆ ನನಗೆ ಧೈರ್ಯ ಕೊಡಲಿಲ್ಲ....

ಮಕ್ಕಳ ಮೇಲಿನ ಛಲವೋ...

ಹಠವೋ ... 
ಕಷ್ಟ.. ನೋವು ಇದ್ದರೂ ...
ಸಾಯಲು ಬಯಸದ ಮುದುಕಿಯ ಮೇಲೆ ಗೌರವ ಮೂಡಿತು...

ಹುಟ್ಟು.... ಸಾವಿನ ನಡುವಿನ...


ಬದುಕಿನ..
ನೋವು... ನಲಿವು.... 
ಸುಖ.. ಸಂತೋಷ..
ಎಲ್ಲವನ್ನೂ ಅನುಭವಿಸುತ್ತೇವೆ....

ಸಾವನ್ನು ಕೂಡ  ಅನುಭವಿಸಿಯೇ ಸಾಯಬೇಕು.......


ಆದರೂ...


ಆ ..

ಅಸಹಾಯಕ..ಅಸಹನೀಯ ...
ವೃದ್ಯಾಪ್ಯದ 
ದೀನ ಬದುಕು ನಮ್ಮ ವೈರಿಗೂ ಬಾರದೆ ಇರಲಿ ಆಲ್ವಾ?....
Tuesday, December 18, 2012

ಚಾಚಿಕೊ... ಬಾಚಿಕೋ.... ಅಪ್ಪಿಕೋ... !! !


ಯಾಕೊ ಗೊತ್ತಿಲ್ಲ....

ಇತ್ತೀಚೆಗೆ ದಿನಗಳು ಬಹಳ ಬೋರ್ ಎನ್ನಿಸುತ್ತಿದೆ....

ಅಂಥಹ ಸಮಸ್ಯೆಗಳು...

ಒತ್ತಡಗಳು ಏನೂ ಇಲ್ಲ...

ಆದರೂ ಬದುಕು ಒಂಥರಾ ಬೋರ್... !


ನಮ್ಮನೆಗೆ ಗೆಳೆಯ ಸತ್ಯ ಬಂದಿದ್ದ..


ಅವನದ್ದೂ ಅದೇ ಕಥೆ... !


"ಜನವರಿ ಹದಿನೈದರತನಕ ...

ಹೊಸ ಪ್ರಾಜೆಕ್ಟ್ ಶುರು ಮಾಡೊ ಹಾಗಿಲ್ಲ...
ಅದೇನೋ ಸಮಯ ಸರಿ ಇಲ್ವಂತೆ 
ಎಲ್ಲಾದ್ರೂ ಹೋಗೋಣ ಅಂದ್ರೆ ಮಕ್ಕಳಿಗೆ ಕಾಲೇಜು... ಇದೆ....

ತುಂಬಾ  ಬೋರ್ ಕಣೊ..."


ಡಿಸೆಂಬರ್ ಇಪ್ಪತ್ತೊಂದಕ್ಕೆ ....

ಶಿರಸಿಯ ಪ್ರಸಿದ್ದ ಅಡಿಕೆ ವ್ಯಾಪಾರಿಗಳಾದ ಜಿಟಿ ಅಣ್ಣನ ...
(ಗಣಪತಿ ಅಣ್ಣ ಊರುತೋಟ)ಮಗನ ಮದುವೆ...
ಅವರು ಆತ್ಮೀಯರು...
ಸ್ವತಃ ಮದುವೆಗೆ ಕರೆದು ಹೋಗಿದ್ದರು...

ಸತ್ಯ ಕೇಳಿದ..


"ಪ್ರಕಾಶು ...

ಮಕ್ಕಳು ಬರುವ ಹಾಗಿಲ್ಲ...
ಮಕ್ಕಳನ್ನು ನೋಡಿಕೊಂಡು ...
ನಮ್ಮ ...
ನಮ್ಮ ಶ್ರೀಯುತ ಶ್ರೀಮತಿಗಳು ಮನೆಯಲ್ಲಿ ಇರ್ತಾರೆ...

ನಾವಿಬ್ಬರು ಮದುವೆಗೆ ಹೋಗಿ ಬರೋಣ...


ಏನಂತಿಯಾ?"


ನಾನು ತಲೆ ಹಾಕುವವನಿದ್ದೆ...


ಅಷ್ಟರಲ್ಲಿ ...

ಆಕಾಶ.. ಭೂಮಿಗಳು  ಒಡೆದು ಹೋಗುವಂಥಹ  ಮಾತು ..!
ಅಡಿಗೆ ಮನೆಯಿಂದ ಬಂತು.... !

"ಸತ್ಯಾ...

ನೀನು ಬೇಕಾದರೆ ಹೋಗು...
ನಮ್ಮವರು ಬರೊಲ್ಲ..."

ಮಾತು ಹೇಗಿತ್ತು ಅಂದರೆ ಕತ್ತಿಯ ಮೊನೆಯ ಕಚ್ಚಿನಂತಿತ್ತು....


ಸತ್ಯ ಪ್ರಶ್ನಾರ್ಥಕವಾಗಿ ನೋಡಿದ..


ನನ್ನಾಕೆ ಇನ್ನೂ ಜೋರಾಗಿ ಹೇಳಿದಳು..


"ಸತ್ಯಾ...

ಇಪ್ಪತ್ತೊಂದಕ್ಕೆ ಪ್ರಳಯ...

ನಾನು ..

ನನ್ನ ಗಂಡನನ್ನು  ಕಳಿಸುವದಿಲ್ಲ...!

ಇಷ್ಟು ದಿನ ಇಬ್ಬರು ಒಟ್ಟಿಗೆ ಇದ್ದೇವೆ...


ಪ್ರಳಯ ಆಗುತ್ತೊ.. ಬಿಡುತ್ತೊ ಗೊತ್ತಿಲ್ಲ...


ಅವತ್ತೊಂದು ದಿನ ಅವರು ನನ್ನೊಂದಿಗೆ ಇರಲೇ ಬೇಕು...."


ಸತ್ಯ ನೆಗೆಯಾಡಿದ...


" ಮಾರಾಯ್ತಿ.....

ಪ್ರಳಯದ ಬಗೆಗೆ ನನಗೂ  ಗೊತ್ತಿಲ್ಲ..!

ನಿಮ್ಮನೆಯಲ್ಲಿ 

"ಪ್ರೀತಿ..
ಪ್ರೇಮ.. ಪ್ರಣಯವಂತೂ " ....  ಆಗುತ್ತದೆ ಕಣೆ... ! "

ಎಲ್ಲರೂ ನಕ್ಕೆವು...


ನನ್ನಾಕೆ ...

ಓಡಿ ಬಂದು ನನ್ನನ್ನು ತಬ್ಬಿಕೊಂಡಳು...

ಆಕೆಯ  ಕಣ್ಣಲ್ಲಿ ನೀರ ಹನಿ ಇಣುಕಿತ್ತು...


ಈ ಹುಚ್ಚು ಪ್ರೀತಿ ಬಿಟ್ಟು ಒಬ್ಬನೇ  ಹೇಗೆ ಹೋಗಲಿ...?


ಆ ..ದೇವರು...

ಇಷ್ಟು ಚಂದದ ನಮ್ಮ ... 
ನಮ್ಮ ಜಗತ್ತುಗಳನ್ನು ..
ಹಾಳು ಮಾಡುವಷ್ಟು ಕ್ರೂರಿ ಇರಲಿಕ್ಕಿಲ್ಲ ಅಲ್ವಾ... ?

.....  ..................  ............ .....


............  .................. ..... ಶಾರಿ ಬಳಿ ಮಾತನಾಡದೆ ತುಂಬಾ ದಿನಗಳಾಗಿ ಬಿಟ್ಟಿತ್ತು...


ನಮ್ಮ ಮನೆಯಲ್ಲಿ ...

ಶಾರಿಗೆ ಫೋನ್ ಮಾಡಿದರೆ ಸ್ಪೀಕರ್ ಫೋನ್ ಚಾಲು ಮಾಡಿಯೇ ಮಾತನಾಡುತ್ತೇವೆ...

ನನ್ನ ಮಾತು ಕೇಳಿ ಶಾರಿಗೆ ಬಹಳ ಖುಷಿಯಾಗಿತ್ತು...


"ಏನೋ .... ಗೊಮಟೇಶ್ವರಾ...?


ಯಾವಾಗ ಬರ್ತಿಯೋ ಊರಿನ ಕಡೆ...

ಬಾರೊ.. ಬಹಳ ಬೇಜಾರು ಬಂದಿದೆ..."

"ಶಾರಿ...

ಪ್ರಳಯ ಮುಗಿದ ಮೇಲೆ ಬರ್ತಿನೆ..."

"ಅಯ್ಯೊ ... ಮಾರಾಯಾ..

ಈ ಪ್ರಳಯ ಆಗೋದಿಲ್ಲ ಕಣೊ... ! "

"ಹೇಗೆ ಹೇಳ್ತೀಯಾ?"


"ಮೊದಲು ನಮ್ಮ ರಾಜ್ಯದ ವಿಷಯ ...


ಎಷ್ಟೆಲ್ಲ ರಾಜಕಾರಣಿಗಳಿಗೆ ...

" ಮುಖ್ಯ ಮಂತ್ರಿ " ಆಗುವ ಆಸೆ ಇದೆ ನೋಡು...

ಕುಮಾರ ಸ್ವಾಮಿ..

ಯಡಿಯೂರಪ್ಪ... ಈಶ್ವರಪ್ಪ...
ಕಾಂಗ್ರೆಸ್ಸಿನಲ್ಲಿ ಲೆಕ್ಕವಿಲ್ಲದಷ್ಟು..
ಇನ್ನೂ ಬಾಲ ಉದ್ದವಿದೆ ಕಣೊ..

ನಮ್ಮ ಹಾಗೆ ಅಲ್ಲ  ಇವರೆಲ್ಲ...


 ಭಯಂಕರ ದೈವ ಭಕ್ತರು.... !


ಹೋಮ ...

ಹವನ... ಯಜ್ಞ  ಎಲ್ಲ ಮಾಡಿಸ್ತಾ ಇರ್ತಾರೆ.. !

ದೇವಸ್ಥಾನಗಳಿಗೆ ಹೋಗ್ತಾಇರ್ತಾರೆ..

ಹರಕೆ ಮಾಡಿಕೊಳ್ತಾರೆ....

ದೇವರು ...

ಅವರ ಆಸೆ ನೆರವೇರಿಸುವ ತನಕ ಪ್ರಳಯ ಮಾಡೊಲ್ಲ ಕಣೊ...!

ನಮ್ಮ ದೇವರು ...

ನಮ್ಮಂಥಹ ಸಾಮಾನ್ಯರ ಪ್ರಾರ್ಥನೆಗಳನ್ನು ಕೇಳುವದಿಲ್ಲ ಕಣೊ..."

"ಶಾರಿ...

ಅವರ ಸಂಖ್ಯೆ ಕಡಿಮೆ ಇದೆ ಕಣೆ...
ನಮ್ಮಂಥವರ ಸಂಖ್ಯೆ ಜಾಸ್ತಿ ಇದೆ..."

"ಡುಮ್ಮಣ್ಣ...

ನಮ್ ಜನಕ್ಕೆ ಏನೇ ಆದ್ರೂ ಸಮಸ್ಯೆ ಇಲ್ಲ...

ಸರ್ಕಾರಗಳು ..

ತ್ರಿ ಜಿ... ಕಲ್ಲಿದ್ದಲು  ಅಂತೆಲ್ಲ ...
ಹಗರಣಗಳ ಮೇಲೆ ಹಗರಣ ಮಾಡುತ್ತ...
ಕೋಟಿ ಗಟ್ಟಲೆ ಗುಳುಮ್ ಮಾಡುತ್ತಿದ್ದರೂ ನಿಶ್ಚಿಂತೆಯಿಂದ ಇರ್ತಾವೆ...

ಕೇಂದ್ರ  ಸರ್ಕಾರದ ಹಗರಣಗಳೊ... !

ರಾಮ ರಾಮಾ.... !

ಎಲ್ಲ ಪಕ್ಷಗಳು ..

ಹಗರಣಗಳನ್ನು ವಿರೋಧಿಸಿದರೂ...
ಸರ್ಕಾರ ಮಾತ್ರ ತನ್ನ ಅವಧಿಯನ್ನು ಪೂರೈಸುತ್ತದೆ...!


ಎಲ್ಲವೂ ದೊಡ್ಡವರ ...
ಕೊಡು..
ತೆಗೆದುಕೊಳ್ಳುವ ವಿಚಾರಗಳು...!

ಮುಂದೆಯೂ .. ಇಂಥಾದ್ದೇ  ಸರ್ಕಾರ ...ಬರುತ್ತದೆ...!

ಚುನಾವಣೆಯಲ್ಲಿ ಯಾರು ಆರಿಸಿ ಬಂದರೆ ಏನು ...?


ಮಹಿಷಾಸುರ ಹೋದರೆ....

ಭಸ್ಮಾಸುರ ಬರ್ತಾನೆ...!

ಎಲ್ಲರೂ ..

ತಮ್ಮ ಯಕ್ಷಗಾನ ಕುಣಿತ ತೋರಿಸಿ ಹೋಗ್ತಾರೆ.. !

ನಾವು ..

ನಮ್ಮ ಬೆವರು ಸುರಿಸಿದ ಹಣ ಕೊಟ್ಟು ...
ಇವರ ಯಕ್ಷಗಾನ ಕುಣಿತ ನೋಡಬೇಕು.... !

ಇದು ನಮ್ಮ ಕರ್ಮ... !


ನಿನಗೆ ಇದೆಲ್ಲ  ಅರ್ಥವಾಗುವದಿಲ್ಲ ಬಿಡು...


ದೇಹದ ಜೊತೆಗೆ ಸ್ವಲ್ಪ ಬುದ್ಧಿನೂ ಬೆಳೆಸಬೇಕಿತ್ತು ಕಣೊ..."


ನನಗೆ ಸಣ್ಣ ಕೋಪ ಬಂತು..


"ಶಾರಿ..

ನಿನಗೇನೆ ಮಹಾ ಅರ್ಥವಾಗುವದು...?"

"ನೋಡೊ...

ಹಾವೇರಿ ಸಮಾವೇಶ ಆಯ್ತು...

ಅಲ್ಲಿಗೆ  ...

ಶಾಸಕರು... ಮಂತ್ರಿಗಳು ಹೋಗಿದ್ದೂ ಆಯ್ತು...

ಬಿಜೇಪಿ ಸರ್ಕಾರದ ವಿರುದ್ಧವಾಗಿ ...

ಜನರ ಉದ್ಧಾರಕ್ಕಾಗಿ ಹೊಸ ಪಕ್ಷದ ಉದಯ ಆಯ್ತು... !

ಏನಾಯ್ತು...?


ಸರ್ಕಾರ ಬಿದ್ದು ಹೋಯ್ತಾ ?..."


"ಇಲ್ಲವಲ್ಲೆ... !! "


"ಅದೇ ಹೇಳಿದ್ದು...

ನಿನ್ ಹೊಟ್ಟೆ ಸೈಜಿಗೆ  ತಲೆ ಇರಬೇಕಾಗಿತ್ತು ಅಂತ...!

ದಿನಾ ಬೆಳಗಾದರೆ...

"ಕೆಟ್ಟ ಸರ್ಕಾರ ...
ಹಾಗೆ ಹೀಗೆ... "  ಎಂದು ಬಯ್ಯುವ ಪಕ್ಷಗಳು ..
ಶಾಸಕರು ...
ಮನಸ್ಸು ಮಾಡಿದರೆ ಬೀಳಿಸ ಬಹುದಲ್ಲವೆ?

ಕಾಂಗ್ರೆಸ್ಸು...

ಜೇಡಿಯೆಸ್ಸು.. ಕೇಜೆಪಿ....
ಯಾರೂ ಸರ್ಕಾರ ಬೀಳಿಸುವದಿಲ್ಲ ಕಣೊ... !

ಇಲ್ಲಿ ಅಂತ ಅಲ್ಲ...

ನಮ್ ದೇಶದಲ್ಲಿ 
ಎಲ್ಲ ಪಕ್ಷಗಳ ಉದ್ದೇಶ ಒಂದೇ ಕಣೊ...

ಅವರವರದ್ದು ಅವರವರಿಗೆ...

ಸಿಕ್ಕಿದಷ್ಟು "ಚಾಚಿಕೊ... ಬಾಚಿಕೋ.... ಅಪ್ಪಿಕೋ... !!

ನಾವು ಮೂರ್ಖರು... "


ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ..


"ಪ್ರಕಾಶು....

ನಮ್ಮ ಮಾಧ್ಯಮದವರು ಇನ್ನೂ ಎಚ್ಚರವಾಗಿರಬೇಕು...

ಇವರನ್ನು ...

 ಸರಿ ದಾರಿಗೆ ತರುವದಿದ್ದರೆ...
ಪ್ರಜಾಪ್ರಭುತ್ವ ಸರಿಯಾಗಿ ಇರಬೇಕೆಂದರೆ  ...
"ಎಚ್ಚೆತ್ತ ಮಾಧ್ಯಮಗಳಿಂದ ಮಾತ್ರ ಸಾಧ್ಯ....."

"ಸಾಕು ಮಾರಾಯ್ತಿ...

ಬಹಳ ಕೊರಿತಾ ಇದ್ದೀಯಾ...

ಹೇಗಿದ್ದರೂ ಪ್ರಳಯ ಆಗ್ತ ಇದೆಯಲ್ಲೆ...

ಎಲ್ಲ ಸರಿ ಆಗ್ತದೆ ಬಿಡು...."

"ಪ್ರಕಾಶು..

ಒಂದು ಮಾತು ಹೇಳ್ತೀನಿ...

ಪ್ರಳಯ ಆಗಬೇಕು ಕಣೊ... !


ಹುಟ್ಟಿದ ನಾವೆಲ್ಲ ಒಂದು ದಿನ ಸಾಯಲೇ ... ಬೇಕು...

ಸಾಯ್ತಿವಿ...
ಸಾಯುವಾಗ  ನಾವೆಲ್ಲ ಒಂಟಿಯಾಗಿ ಸಾಯ್ತಿವಿ...

 ನಾವು ಸಾಯುವಾಗ ..

ನಮ್ಮ ಹತ್ತಿರದವರೆಲ್ಲ ನಿಂತು ಅಳುತ್ತ ಇರ್ತಾರೆ...

ನಮಗೆ ಇವರನ್ನೆಲ್ಲ ಬಿಟ್ಟು ಹೋಗುವ ಸಂಕಟವೂ ಇರುತ್ತದೆ...ಇಂಥಾದ್ದೊಂದು ಪ್ರಳಯ ಆದರೆ ಮಜಾ ಕಣೊ... !
ಎಲ್ಲರೂ ಒಟ್ಟಿಗೆ ಸಾಯುತ್ತೇವೆ.. 

ದಿನಾ ಬೆಳಗಾದರೆ ..
ತಮ್ಮನೇ ಕಸವನ್ನು ನಮ್ಮನೆಗೆ ಎಸೆದು ...
ಜಗಳ ಮಾಡುವ ಪಕ್ಕದ ಮನೆ ಪರಮಣ್ಣ .. , 
ಯಾವಾಗಲೂ ಜಗಳ ಕಾಯುವ ಅವನ ಹೆಂಡತಿ  ವೆಂಕತ್ತೆ......

ಎಲ್ಲರೂ  ಒಟ್ಟಿಗೆ ಸಾಯ್ತೆವಲ್ಲೋ... !

"ಶಾರಿ...
ನಿನ್ನ ತಲೆ ಅದ್ಭುತ ಮಾರಾಯ್ತಿ...!"

"ಅಷ್ಟೇ ಅಲ್ವೋ...

ಯಾವಾಗಲೂ ಜಗಳ ಮಾಡುತ್ತ...
ಪ್ರೀತಿ ಮಾಡೊ ನನ್ನ ಗಂಡ...
ಮಕ್ಕಳು..
ನಮ್ ಗೆಳೆಯರು... ಎಲ್ಲರೂ ಒಟ್ಟಿಗೆ ಹೋಗ್ತಿವಲ್ಲೋ...!

ನಮ್ಮ ನಮ್ಮ ಆತ್ಮೀಯರನ್ನು ...

ಜೀವದ ಗೆಳೆಯರನ್ನು ...
ತಬ್ಬಿ ಹಿಡಿದುಕೊಂಡು ಸಾಯುವದು ಎಷ್ಟು ಮಜಾ ಅಲ್ವೇನೋ...!

"ಪ್ರಳಯದ ಶುಭಾಶಯಗಳು " ಅಂತ ಹೇಳಿ ಸಾಯಬಹುದಲ್ಲೋ...!


ಒಂಥರಾ ಥ್ರಿಲ್ಲು ಕಣೊ... ರೋಮಾಂಚನ ಆಗ್ತಿದೆ... !


ಇಡಿ ಜಗತ್ತಿನ ಜನ ...

ಒಂದು ದಿನ ಕಾದು ಕುಳಿತು...
ತಮ್ಮ....
ತಮ್ಮ ಅನಿವಾರ್ಯವಾದ ಸಾವನ್ನು ಕಾಣುವದು.... 
ಮಜಾ ಅಲ್ವೇನೋ... !! .."

ನನಗೂ ಮಜಾ ಅನ್ನಿಸಿತು... ವಾಹ್.... !


"ಲೇ...ಡುಮ್ಮಣ್ಣ...


ನೀನು ..

ನಿನ್ನ ಹೆಂಡ್ತಿ... ಮಗನ ಸಂಗಡ ಅಲ್ಲಿರಬೇಡ... !

ಸುಡುಗಾಡು ...

ಗಲೀಜು ಬೆಂಗಳೂರಲ್ಲಿ ಸಾಯಬೇಡ... !

ಮೊದಲೇ ಸ್ಮಶಾನದ ತರಹದ ಇದೆ.. ನಿಮ್ " ಮೆಟ್ರೊ" ಬೆಂಗಳೂರು  !


ಎಲ್ಲರೂ "ಪ್ರಳಯಕ್ಕಾಗಿ... "  ನಮ್ಮನೆಗೆ ಬನ್ನಿ...


ಒಟ್ಟಿಗೆ ಸಾಯೋಣ...

ಮಜಾ ಮಾಡೋಣ... ಏನಂತೀಯಾ...?... !!... 

ಡುಮ್ಮಣ್ಣ..

ಹ್ಯಾಪಿ ಪ್ರಳಯ ಇನ್ ಅಡ್ವಾನ್ಸ್... !..."

ನಾನು ತಲೆ ಕೆರೆದು ಕೊಂಡೆ ....


"ಹ್ಯಾಪಿ  ಪ್ರಳಯಾ... ! "   ಅಂತ  ಹೇಳಲಾ? ಬೇಡವಾ ಅಂತ.....
( ದಯವಿಟ್ಟು ಶಾರಿಯ ಮಾತುಗಳನ್ನು ಹಾಸ್ಯವಾಗಿ ಪರಿಗಣಿಸಿ ...)