Thursday, November 27, 2008

ಹೀಗೊಂದು..ತೀರದ ಆಸೆ...

ಮುಕ್ತಿ ಬೇಡ ದೇವರೆ...
ಪರಕಾಯ ಪ್ರವೇಶ ವಿದ್ಯೆ ತಿಳಿಸು..
ಜನ್ಮದಲಿ ತೀರದ ಅತ್ರಪ್ತಿ, ಕುತೂಹಲ....
ತೀರದ ಆಸೆಗಳಿವೆ...

ಸರಕಾರಿ ಸಂಬಳ ಸೌಲಭ್ಯ ಪಡೆದರೂ..
ಲಂಚದ ಸುಲಿಗೆ ಮಾಡಿ...
ಜನ್ಮ ಸಾರ್ಥಕದ ಅಧಿಕಾರಿಯ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...

ಧರ್ಮದ ಹೆಸರಲಿ..ಮುಗ್ಧ ಜನರ...
ಹತ್ಯೆ, ರಕ್ತದ ಓಕುಳಿಯಾಟವನಾಡಿ..
ಶಹೀದನಾಗುವ ಮತಾಂಧ ಉಗ್ರನ ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...


ಬಡತನ, ದಲಿತತನ ಶೋಷಣೆ ಮಾಡಿ...
ಹಣದ , ಸ್ವರ್ಗದ ಆಮಿಷ ತೋರಿಸಿ...
ತಮ್ಮ ದೋಷ ಮರೆಮಾಚುವ...
ಮತಾಂತರದ ಧರ್ಮಗುರುವಿನ..
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ....


ರಾಮನ ಆಣೆಮಾಡಿ, ಮತ ಪಡೆದು....
ಗಣಿ ಹಣಕ್ಕೆ ಮಾರಿಕೊಂಡು...
ಅಧಿಕಾರ, ಹಣದ ತೆವಲಿಗೆ ಬಿದ್ದಮಂತ್ರಿಗಳ...
ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...


ದೇಶವೆಲ್ಲ ಬೆಂಕಿ ಹೊತ್ತಿ ಉರಿಯುತ್ತಿದ್ದರೂ...

ಆಸ್ತಿ ಮಾಡಿ ,ಮತ ಬ್ಯಾಂಕ ಆಸೆ, ಅಧಿಕಾರ ಮಾಡುವ....

ಜಾತ್ಯಾತೀತ ರಾಜಕಾರಣೀಯ...

ಮನಸ್ಥಿತಿ, ಆತ್ಮ ಸಾಕ್ಷಿ ಅರಿಯುವಾಸೆ...

(ಎಂದೂ ಕವನ ಬರೆಯದ ನಾನು , ಇಂದು ಮುಂಬೈ ನ್ಯೂಸ್ ನೋಡಿ..

ಮನದ ತುಮಲ ಹೊರಹಾಕಿದ್ದೇನೆ,,,

ತಪ್ಪಿದ್ದರೆ.. ಕ್ಷಮಿಸಿ )

Tuesday, November 25, 2008

ಹೀಗೂ....ಒಂದು..ಕಾಲವಿತ್ತು...!!!


ಕೆಂಪಜ್ಜಿ ನನ್ನಜ್ಜನ ಅಕ್ಕ. ಬಾಲ್ಯ ವಿಧವೆ. ಮದುವೆಯ ದಿವಸವೆ ಗಂಡನಿಗೆ ಹಾವು ಕಚ್ಚಿ, ತವರು ಮನೆ ಸೇರಿದಳು. ಕೆಂಪು ಸೀರೆ ಉಡುತ್ತಿದ್ದಳು.. ನಮಗೆಲ್ಲ "ಕೆಂಪಜ್ಜಿ" ಯಾಗಿದ್ದಳು.
ನಮ್ಮನೆಯ ಆಧಾರ ಸ್ಥಂಭ ಆ ಕೆಂಪಜ್ಜಿಗೆ ನನ್ನಜ್ಜ ಬಹಳ ಗೌರವ ಕೊಡುತಿದ್ದರು.
ನನ್ನ ಚಿಕ್ಕಪ್ಪ ಹೊಸ ಮನೆ ಕಟ್ಟಿದಾಗ ಕೆಂಪಜ್ಜಿ ಫೋಟೊ ದೇವರ ಪೀಠದಲ್ಲಿಟ್ಟಿದ್ದ.

ನಾವೆಲ್ಲ ಇಂದು ಕಾರಲ್ಲಿ,,, ವಿದೇಶದಲ್ಲಿ,, ಓಡಾಡುತ್ತಿದ್ದೇವೆ. ಇದನ್ನು ನೋಡಿ ಆನಂದ ಪಡಲು ಆ ಜೀವ ಇರಬೇಕಾಗಿತ್ತು...

ಆಗ ನಮ್ಮದು ದೊಡ್ಡ ಕುಟುಂಬ. ಮನೆ ತುಂಬಾ ಮಕ್ಕಳು. ಯಾವ ತಾಯಿಂದಿರಿಗೂ ಮಕ್ಕಳನ್ನು ನೋಡಿಕೊಳ್ಳಲು ಸಮಯ ಇರುತ್ತಿರಲಿಲ್ಲ. ಊಟ, ತಿಂಡಿ, ಸ್ನಾನ ಎಲ್ಲ ಕೆಂಪಜ್ಜಿ ಮಾಡಿಸುತ್ತಿದ್ದಳು.

ನಮಗೆ ಕೆಂಪಜ್ಜಿ ಬಹಳ ಅಚ್ಚುಮೆಚ್ಚು. ಅವಳ ಕಥೆ ಕೇಳಲು ಮುಗಿದು ಬೀಳುತ್ತಿದ್ದೇವು.

ನನಗೆ ಜಗಜಿತ್ ಸಿಂಗರ ಘಝಲ್ ನೆನಪಾಗುತ್ತಿದೆ. " ವೊ ಕಾಗಜ್ ಕಿ ಕಶ್ತಿ..ಬಾರಿಶ್ ಕಾ ಪಾನಿ..."

ಮಳೆಗಾಲ ದಿನಗಳು.. ಒದ್ದೆಯಾದ ಕಂಬಳಿ ಒಣಗಿಸಲು "ಹೊಡಚಲು" ಹಾಕುತ್ತಿದ್ದರು.

ಕಟ್ಟಿಗೆ ಬೆಂಕಿ.. ಅದರ ಮೇಲೆ ಚಪ್ಪರದಲ್ಲಿ ಕಂಬಳಿ...ಹೊಗೆ... ಸುತ್ತಲೂ ನಾವು ಐದಾರು ಮಕ್ಕಳು..

ಕೆಂಪಜ್ಜಿ ಕಥೆ.. ಹೊರಗೆ ಮುಸಲಧಾರೆ ಮಳೆ..

"ಕೆಂಪಜ್ಜಿ..ಕೆಂಪಜ್ಜಿ.. ಕಥೆ ಹೇಳು..."

"ಸ್ವಲ್ಪ ಇರ್ರೋ... ಹಲಸಿನ ಬೇಳೆ ಸುಡೋಣ" ಅನ್ನುತ್ತ ಬೇಳೆ ಸುಡಲು ಶುರು ಮಾಡುತ್ತಿದಳು

"ನಾನು ಸೈಕಲ್ಲು ಮೊದಲ ಬಾರಿ ನೋಡಿದ ವಿಷಯ ಹೇಳಲಾ..?" ಕೇಳಿದಳು.

ನಮಗೇನು..?. ಕೆಂಪಜ್ಜಿಯ ಮೋಡಿಗೆ ಒಳಗಾಗಿದ್ದೆವು..ಸಂಗಡ ಬಿಸಿ ಬಿಸಿಯಾಗಿ ಸುಟ್ಟಿದ ಹಲಸಿನ ಬೇಳೆ..!!
ಶುರುವಾಯಿತು..ಕೆಂಪಜ್ಜಿಯ... ಓಘ....

"ಆಗೆಲ್ಲಾ ರೆಡಿಯೊ ಕೂಡ ಅಪರೂಪ, ಪಟೆಲಜ್ಜನ ಮನೆಗೆ ಮೊದಲ ಬಾರಿಗೆ ರೆಡಿಯೋ ನೋಡಿ ನಾವೆಲ್ಲಾ ದಂಗಾಗಿ ಬಿಟ್ಟಿದ್ದೇವು.. ಪಟೆಲಜ್ಜ ಪೇಟ್ಟಿಗೆ ಥರ ಇದ್ದಿದ್ದ ಬೊಕ್ಸ್ ತಂದಿದ್ದ.. ಅದನ್ನು ಪಟ್ಟಣದಿಂದ ಬಂದಿದ್ದ ಒಬ್ಬಾತ ಸೆಲ್ಲ್ ಹಾಕಿ ಯಾವುದೊ ಬಿರಡೇ ತಿರುಗಿಸಿದ್ದ..
ಎಂತದೊ ಸುಡುಗಾಡು ಹಾಡು..ಹಿಂದಿ ಹಾಡಂತೆ.. ಬಂದಿತ್ತು..ನಮಗೆ ಅರ್ಥವಾಗದ ಭಾಷೆ.."

" ಕೆಂಪಜ್ಜಿ... ಸೈಕಲ್ಲು..ಕಥೆ..." ಚಂದಾವರದ "ಗಪ್ಪು" ನೆನಪಿಸಿದ..

" ಹೌದಲ್ಲಾ. ಮರೆತೇ ಬಿಟ್ಟಿದ್ದೆ....
ಪಟೆಲಜ್ಜನ ಮನೆಗೆ ಇಂಗ್ಲೀಷ್ ಜನ ಬರುತ್ತಿದ್ದರು. ಒಂದು ದಿನ ಅವರು ಹೋದ ಮೇಲೆ ಪಟೆಲಜ್ಜ
ಊರವರೆಲ್ಲರನ್ನೂ ಕರೆದು " ನಾಡಿದ್ದು ಕಾನಸೂರಿಗೆ ಸೈಕಲ್ಲು ಬರ್ತದೆ.. ಬೆಳಿಗ್ಗೆ ಆರು ಗಂಟೆಗೆ.. ನೋಡೊವರೆಲ್ಲ ಬರಬಹುದು.." ಅಂದ.

ನಮ್ಮನೆ ರಾಮಕ್ರಷ್ಣ( ನನ್ನ ಅಜ್ಜ) " ಅದೆಲ್ಲ..ಎಂತಾ ನೋಡದು..? ಸೈಕಲ್ಲಂತೆ.?
ಎಂಥಾ ಪ್ರಯೋಜನ..?. ಎರಡುಗಾಲಿ ಇರುತ್ತಂತೆ..ನೋಡಿ ಎಂತ ಮಾಡುವದು..?
ಅದ್ರಿಂದ ಹೊಟ್ಟೆ ತುಂಬುತ್ತಾ? ಯಾರೂ ಹೋಗುವದು ಬೇಡ" ಎಂದು ಫರ್ಮಾನು ಹೊರಡಿಸಿದ.

ನನಗೆ ಕೆಟ್ಟ ಕುತೂಹಲ..." ಎಂಥದು ಇದು ಸೈಕಲ್ಲು..? ಎರಡು ಗಾಲಿ ಮೇಲೆ ಮನುಷ್ಯ ಹೋಗಬಹುದಂತೆ..ಜೋರಾಗಿ ಹೋಗುತ್ತದಂತೆ..!.!!"

ರಾತ್ರಿಯಿಡಿ ನಿದ್ದೆಯಿಲ್ಲ.. ಬೆಳಗಾಗುತ್ತಿದ್ದಂತೆ ಗಟ್ಟಿ ಮನಸ್ಸು ಮಾಡಿಕೊಂಡೆ.
ಪಕ್ಕದ ಮನೆ ಭಾಗಕ್ಕ, ಅಣ್ಣಣ್ಣ ಇಬ್ರೂ " ನಾವು ಸೈಕಲ್ಲು ನೋಡಲಿಕ್ಕೆ ಕಾನಸೂರಿಗೆ ಹೋಗ್ತೇವೆ" ಅಂದಿದ್ರು.

ನಾನು ರಾಮಕ್ರಷ್ಣನಿಗೆ ಬೆಣ್ಣೆ ಹೊಸೆದೆ. "ತುಂಬಾ ದೂರ ಆಗಿದ್ರೆ ಹೊಗ್ತಿರಲಿಲ್ಲ..ಇಲ್ಲೇ ಕಾನಸೂರು , ಎಲ್ಲರ ಸಂಗಡ ಹೊಗಿ ಬರ್ತೇನೆ.." ದುಡ್ಡು ಎಂತದೂ ಬೇಡ ಮಾರಯಾ" ಅಂದೆ.

ಬಹಳ ಕಷ್ಟಪಟ್ಟು ..ಅಂತೂ ಅವನನನ್ನು ಒಪ್ಪಿಸಿದೆ..

ಊರಲ್ಲಿ ಸಂಭ್ರಮ...ಎಲ್ಲರೂ ಎಲ್ಲರನ್ನೂ ಕೇಳುವದು ಒಂದೆ ಪ್ರಶ್ನೆ.." ನೀನು ಸೈಕಲ್ಲು ನೋಡಲೆ ಬರಲ್ವಾ..?"

ಮರು ದಿನ ಬೆಳಿಗ್ಗೆ ನಾಲ್ಕು ಗಂಟೆಗ ಏಳಬೇಕು.. ತಿಂಡಿ ರೆಡಿ ಮಾಡ ಬೇಕು..

" ನಾಲ್ಕು ಗಂಟೆಗೆ ಹೇಗೆ ಏಳುವದು..? "

"ಕೆಂಪಜ್ಜಿ ..ಅಲಾರಮ್ ಕಿವಿ ತಿರುಪಿದ್ರೆ..ಅಯಿತಪ್ಪಾ..?" ರೆಖಾ ಮಧ್ಯದಲ್ಲಿ ಬಾಯಿ ಹಾಕಿದಳು..

"ಆಗೆಲ್ಲ.. ಅಲಾರಮ್ ಎಂತದೂ ಇರ್ಲಿಲ್ಲ.
ಬೇಳ್ಳನಾಯ್ಕನ ಕೋಳಿ ನಾಲ್ಕು ಗಂಟೆಗೆ ಕೂಗ್ತದೆ ಅಂತ ಪಟೇಲಜ್ಜನಿಗೆ ಗೊತ್ತಿತ್ತು.
ಬೆಳ್ಳನಾಯ್ಕಂಗೆ ಪಟೆಲಜ್ಜ ಕರೆಸಿ ಮಾತನಾಡಿದ." ನಾಳೆ ಬೆಳಿಗ್ಗೆ ನಿನ್ನ ಕೋಳಿ ಕೂಗಿದ ಕೂಡ್ಲೆ ನಮ್ಮೂರಿಗೆ ಬಂದು ಎಲ್ಲರನ್ನೂ ಎಬ್ಬಿಸು.."

ಪಟೆಲಜ್ಜ ಅಂದ್ರೆ ಎಲ್ಲರಿಗೂ ಗೌರವ.. ಅವನ ಮಾತಿಗೆ ಯಾರೂ "ಇಲ್ಲ" ಅನ್ನುತ್ತಿರಲಿಲ್ಲ.

ರಾತ್ರಿಯಾಯಿತು. ಜಲ್ದಿ ಊಟಮಾಡಿ ಮಲಗಬೇಕೆಂದು ಅಪ್ಪಣೆಯಾಗಿತ್ತು.
ನನಗೊ..ರಾತ್ರಿಯಿಡಿ ನಿದ್ದೇನೆ ಬರಲಿಲ್ಲ. ತಲೆಯಲೆಲ್ಲ ಇದೆ ಯೋಚನೆ.. "ಹೇಗಿರಬಹುದು..ಈ ಸೈಕಲ್ಲು..? ಎತ್ತಿನಗಾಡಿ ಥರ ಅಲ್ಲಂತೆ..ಇನ್ನು ಹೇಗಿರುತ್ತದೆ?"
ಹಾಸಿಗೆಯಲ್ಲಿ ಆಕಡೆ ಈಕಡೆ ಹೊರಳಾಡಿದೆ..
ಪಕ್ಕದ ಮನೆ ಅಡಿಗೆ ಮನೆಯಲ್ಲಿ ಕಣ ಪಣ ಸದ್ದು. ಕೇಳಿತು...!
ಭಾಗಕ್ಕ ಆಗಲೆ ಎದ್ದು ಬಿಟ್ಟಿದ್ದಾಳೆ..!!ನಾನೂ ಎದ್ದೆ. ನೀರು ಕಾಯಿಸಿ ಸ್ನಾನ ಮಾಡಿದೆ.

ಬೆಳ್ಳನಾಯ್ಕ ಬರುವಷ್ಟರಲ್ಲಿ ಇಡಿ ಊರಿನ ತಿಂಡಿ ಮುಗಿದಿತ್ತು..!!

ಪಟೆಲಜ್ಜನೂ ರೆಡಿ ಆದ. ಅವನಿಗೆ ಎತ್ತಿನ ಗಾಡಿ ತಯ್ಯಾರಾಗಿತ್ತು..
ಆಗ ಅಜಮಾಸು ಬೆಳಗಿನ ಜಾವ ನಾಲ್ಕು ಗಂಟೆ..

" ಆಗ ಬ್ಯಾಟರಿ(ಟಾರ್ಚ್) ಇರ್ಲಿಲ್ಲ.."
ಹಿಂದಿನ ದಿವಸವೇ ಅಡಿಕೆ ಮರದ ದಬ್ಬೆಯನ್ನು ಸೀಳಿ , ಮಾರುದ್ದಕ್ಕೆ ತುಂಡು ಮಾಡಿ.."ಸೂಡಿ" ತಯಾರು ಮಾಡಿದ್ದೆವು...ಅದಕ್ಕೆ ಬೆಂಕಿ ಹಚ್ಚಿಕೊಡೆವು. ಅದು ದಾರಿ ದೀಪವಾಯಿತು..

ರಾಮಕ್ರಷ್ಣನಿಗೆ.. ಹೇಳಿ ಹೊರಡೋಣ ಅಂದು ಕೊಂಡೆ..
ಎಲ್ಲಿ ಕಾಣಿಸ್ತಾನೆ ಇಲ್ಲಾ... ಮುಂದೆ ನೋಡ್ತಿನಿ.. ಬಿಳಿ ಕಚ್ಚೆ ಪಂಚೆ ಹಾಕಿ , ಕಿಸಿ..ಕಿಸಿ..ನಗುತ್ತಿದ್ದ..
ನನಗಿಂತ ಮೋದಲೆ ರೆಡಿ ಆಗಿದ್ದ.. !!

ಎಲ್ಲರೂ ಸಡಗರದಿಂದ ಹೊರಟೆವು..
ಕಾನಸೂರು..ಮೂರು ಮೈಲು.. ದೂರವಾಗಿ ಅನಿಸಲೆ ಇಲ್ಲ..ಕಾನಸೂರಿಗೆ ಬಂದು ನೋಡಿದರೆ.. ಜನಸಾಗರವೆ ಸೇರಿತ್ತು...
ಅಕ್ಕಪಕ್ಕದ ಊರಿಂದ ನಮಗಿಂತ ಮೊದಲೆ ಜಾಗ ಹಿಡಿದು ಕುಳಿತಿದ್ದರು.

ಎಲ್ಲಿ ನೋಡಿದರು ಗೌಜಿ..ಗದ್ದಲ.
ಒಂದು ತರಹದ ಕುತೂಹಲ.. ಕಾತುರ..
ಸಮಯ ಹೊಗ್ತಾನೆ ಇರಲಿಲ್ಲ..
ನಮ್ಮೂರಿನ ಜನ ಒಂದುಕಡೆ ಕಂಬಳಿ ಹಾಸಿ ರಸ್ತೆ ಪಕ್ಕದಲ್ಲಿ ಕುಳಿತು ಕೊಂಡಿದ್ದೆವು.
ಪಟೆಲಜ್ಜನಿಗೆ ಪ್ರತ್ಯೇಕ ಖುರ್ಚಿ ಎತ್ತಿನ ಗಾಡಿಯಿಂದ ಇಳಿಸಲಾಯಿತು..

ಎಲ್ಲರೂ ಆರು ಘಂಟೆ ಆಗುವದನ್ನೆ ಎದುರು ನೋಡುತ್ತಿದ್ದೆವು..

ಯಾರೊ ಕೂಗಿದರು

" ಬಂತು..ಬಂತು.. ಸೈಕಲ್ಲು..!!!??"

ನಾವು ನೋಡುತ್ತ..ನೋಡುತ್ತ ಇರುವ ಹಾಗೆ.. ಸೈಕಲ್ಲು ಬಂತು..

" ಮುಂದೆ ಒಂದು ಗಾಲಿ...!!. ಹಿಂದೆ ಒಂದು ಗಾಲಿ..!!."

ಮೇಲೆ ಒಬ್ಬ ಕುಳಿತ್ತಿದ್ದ...!
ಇದೇನಿದು ....ನೋಡುವಷ್ಟರಲ್ಲಿ.. ಟುಂಯ್ಯನೆ..ನಡೆದು ಬಿಟ್ಟಿದ್ದ...!!

"ಮುಂದೇನಾಯ್ತು..ಕೆಂಪಜ್ಜಿ..?" "ಶಾರಿ" ಬಾಯಿಕಳೆದು ಕೇಳಿದಳು..

"ಎಂತದೂ ಇಲ್ಲ..ನಾವೆಲ್ಲ ಆಶ್ಚರ್ಯದಿಂದ ಮೂಕರಾಗಿದ್ದೇವು. ಕಣ್ಣಾರೆ ನೋಡಿದ್ದರಿಂದ ನಂಬಲೆ ಬೇಕಾಗಿತ್ತು...
ಎಂಥಹ ಅದ್ಭುತ ದ್ರಶ್ಯ ಅದು... ನನ್ನ ಜೀವ ಇರುತನಕ ಮರೆಯಲಿಕ್ಕೆ.. ಅಗಲ್ಲಪ್ಪ..!!"

" ಎಲ್ಲರೂ ಊಟಕ್ಕೆ ಬನ್ನಿ" ಆಯಿ ಕೂಗಿದಳು..

ನಮಗೆ ಏಳಲು ಮನಸ್ಸಿರಲಿಲ್ಲ......
ಇನ್ನೂ ಕೆಂಪಜ್ಜಿಯ ಕಥೆಯ ಗುಂಗಿನಿಂದ ಹೋರಗೆ ಬಂದಿರಲಿಲ್ಲ....

Sunday, November 23, 2008

ಪಾಪಾ...ಕೆಹತೆ..ಹೇ...!!

ರ್ರಿ...ಹೋಗ್ರಿ... ಪಾಪಾ ಮೊದಲು.. ಚೆನ್ನಾಗಿ ಓದು..
ಆಮೇಲೆ ನೋಡೋಣಾ...ಅಂತಾರೆ...!!

ಪಾಪಾ...ಕೆಹತೆ..ಹೇ..!!!

ಏನು...ಆಗಲೀ...?
ಹ್ರತಿಕ್ ರೋಶನ್...?

ಪಾಪಾ ..ಕೆಹತೆ ...ಹೆ......!!!.

ಮುಂದೇನು ಮಾಡಲಿ...??
ಸುಪರ್..ಮಾಡೆಲ್.... ಆಗಲಾ...??

Wednesday, November 19, 2008

ಏನಪ್ಪಾ.. ಬಲಗಡೆ,,,ಎಡಗಡೆ,, ಗೊತ್ತಾಗಕಿಲ್ವಾ..!!??

ಒಮ್ಮೆ ನನಗೂ ನನ್ನ ಗೆಳೆಯ ಸತ್ಯನಾರಾಯಣನಿಗೂ ಕ್ರಷಿ ಜಮೀನು ಖರೀದಿ ಮಾಡಬೇಕು
ಎನ್ನುವ ವಿಚಾರ ತಲೆಗೆ ಹೊಕ್ಕಿತು.

ನಾವು ಇನ್ನು ಎಷ್ಟು ವರ್ಷ ಈ ಸಿಮೆಂಟು ಮರಳು ಅಂತ ಕೆಲಸ ಮಾಡಬಹುದು?
ಅದಕ್ಕೆ ಈಗಿಂದಲೆ ಜಮೀನು ಖರಿದಿ ಮಾಡಿ ತೆಂಗು, ಮಾವು ಎಲ್ಲ ಹಾಕಿದರೆ ಇನ್ನು ಹತ್ತು ವರ್ಷಕ್ಕೆ
ನಾವು ಅಲ್ಲಿ ಹೋಗಿ ಇರಬಹುದು ಎನ್ನುವ ಭಾರಿ ಮುಂದಾಲೋಚನೆ ಬಂತು..

ಒಂದು ಫಾರ್ಮ್ ಹೌಸ ತರಹ ಕಟ್ಟಿಸಿ... ಎಲ್ಲ ಸೌಲಭ್ಯ ಇಟ್ಟುಕೊಂಡು.... ಸ್ವಿಮಿಂಗ್ ಫೂಲ್....
ಇತ್ಯಾದಿ....ಇತ್ಯಾದಿ...
ಹೌದಲ್ಲ ..ಒಳ್ಳೆಯ ವಿಚಾರವೆ.. ಸರಿ,

ಬೆಂಗಳೂರಿನ ಆಸುಪಾಸು ಹುಡುಕಿದೆವು. ರಿಯಲ್ ಎಸ್ಟೇಟ್ ಏಜಂಟ್ ಗಳಿಗೆ ಹೇಳಿದೆವು.
ಅವರು ಎಲ್ಲೆಲ್ಲೊ ಜಮೀನು ತೋರಿಸಿದರು.. ಸಮಧಾನ ಆಗಲಿಲ್ಲ.

ರಿಯಲ್ ಎಸ್ಟೇಟ್ ಏಜಂಟರಗಳು ಗೊತ್ತಲ್ಲ..ಅವರೊ..ಅವರ ರೇಟುಗಳೊ..ಒಂದೊಕ್ಕೊಂದು ತತ್ಸಂಬಧವಿರೊದಿಲ್ಲ.

"ಈ ಏಜಂಟರ ಸಹವಾಸ ಬೇಡ ಮಾರಾಯ..ನಾವೇ ಹಳ್ಳಿಗೆ ಹೋಗಿ ಕೇಳಿ.. ಹುಡುಕೋಣ" ಎಂದೆ.

ಸತ್ಯ ಓಕೆ ಅಂದ. ಸತ್ಯನಾರಾಯಣ ನನ್ನ ಬಿಸಿನೆಸ್ ನಲ್ಲಿ ನನಗೆ ಹೆಂಡತಿ, ಗೆಳೆಯ ಎಲ್ಲಾ. ಅವನ ಸಲಹೆ
ಇಲ್ಲದೆ ನಾನು ಯಾವುದೆ ನಿರ್ಧಾರ ತೆಗೆದು ಕೊಳ್ಳುವದಿಲ್ಲ.

ಮಾಗಡಿ ರೋಡನಲ್ಲಿರುಅವ ತಾವರೆ ಕೆರೆ ಹಳ್ಳಿಗೆ ಹೋದೆವು.

ಒಂದು ಮನೆಯ ಎದುರಿನ ಕಟ್ಟೆಯ ಮೇಲೆ ವಯಸ್ಸಾದ ಹಿರಿಯರೊಬ್ಬರು ಎಲೆ ಅಡಿಕೆ ಜಗಿಯುತ್ತ
ಕುಳಿತಿದ್ದರು..

"ನಮಸ್ಕಾರ ಯಜಮಾನ್ರೆ.....ಈ ..ಊರಲ್ಲಿ ಯವುದದರೂ ಕ್ರಶಿ ಜಮೀನು ಮಾರಾಟಕ್ಕೆ ಇದೆಯಾ?"
ಸ್ವಲ್ಪ.. ಜಾಸ್ತಿ ವಿನಯದಿಂದಲೆ ಕೇಳಿದೆ.

" ಎಲ್ಲಾ ಹಳ್ಳಿ ಬಿಟ್ಟು ಪಟ್ಣ ಅಂತಿರುವಾಗ ನಿಮಗ್ಯಾಕಪ್ಪ ಈ ಉಸಾಬರಿ..? ಅಂದರು ಆ ಅಜ್ಜ.

" ನಮಗೆ ಬೇಕು ತಾತ, ಮಾರಾಟಕ್ಕೆ ಅಲ್ಲ" ಅಂದೆ.

" ಇದೆ.. ನನ್ನ ಅಣ್ಣನ ಮಕ್ಳದ್ದು..ಈಗ ಕ್ರಷಿ ಮಾಡದೆ ಜಡ್ಡು ಬೆಳೆದಿದೆ" ಅಂದರು ತುಸು ಬೇಸರದಿಂದ..

" ದಯವಿಟ್ಟು ತೋರ್ಸಿ, ಕಾರಲ್ಲೇ ಬನ್ನಿ, ಆಮೇಲೆ ನಿಮಗೆ ಇಲ್ಲೇ ಬಿಟ್ಟು ಕೊಡ್ತೇವೆ" ಅಂದೆ.

ಸರಿ ಅಂದರು ಆ ಯಜಮಾನ್ರು. ದೊಡ್ಡ ದೊಗಲೆ ಚಡ್ಡಿ.. ಅದ್ನಾನ ಸಮಿ ಸೈಜಿನ ಬನಿಯನ್ನು.. ..
ಕಾರನಲ್ಲಿ ಬಹಳ ಗತ್ತಿನಲ್ಲೆ ಕುಳಿತರು.

" ನಂಗೆ ಈ ಕಾರೆಲ್ಲ ಹೊಸತಲ್ಲ, ನಮ್ಮ ಹೆಂಡಿರನ್ನು ನೋಡ್ಲಿಕ್ಕೆ ಹೋಗುವಾಗ.. ಕಾರ್ನಲ್ಲೆ ಹೋಗಿದ್ದೆ"
ಅಜ್ಜ ಶುರು ಹಚ್ಚಿಕೊಂಡರು...

ಕಾರು ಬಿಡುತ್ತಿದ್ದ ನನಗೆ ಮುಂದೆ ದಾರಿ ಗೊತ್ತಾಗಲಿಲ್ಲ.

" ಯಜಮಾನ್ರೆ ಮುಂದೆ ಎಡಕ್ಕೊ ಬಲಕ್ಕೊ..?" ಕೇಳಿದೆ

" ಬಲಕ್ಕೆ... ರೈಟು.. ತಿರಕ್ಕಳಪ್ಪಾ.." ಅಂದರು ಗತ್ತಿನ ಇಂಗ್ಲೀಷ್ನಲ್ಲಿ.

ನಾನು ಬಲಕ್ಕೆ ತಿರುಗಿಸಿದೆ...

" ಈ ಕಡೇ ಅಲ್ಲಪ್ಪ.. ಈ ಕಡೆ ಬಲಕ್ಕೆ" ಅಂತ ಎಡಗಡೆ ತೋರಿಸಿದರು..

ನಾನು ಎಡಗಡೆ ತಿರುಗಿಸಿದೆ.

ಸ್ವಲ್ಪ ಮುಂದೆ ಹೋದೆ... ಮತ್ತೆ ಮುಂದೆ ದಾರಿ ಗೊತ್ತಾಗಲಿಲ್ಲ.

" ಯಜಮಾನ್ರೆ.. ಈಗ ಹೇಗೆ?" ...ಕೇಳಿದೆ.

" ಎಡಗಡೆ.. ಲೆಫ್ಟ್ ತಕಳಪ್ಪ.." ಅಂದರು.

ನಾನು ಎಡಗಡೆ ತಿರುಗಿಸಿದೆ...

" ಏನಪ್ಪಾ .. ಎಡ ಬಲ ಗೊತ್ತಾಗಕಿಲ್ವಾ..? ಈ ಕಡೆ..ಎಡಕ್ಕೆ " ಎಂದು ಬಲಕ್ಕೆ ಕೈ ತೋರಿಸಿದರು..!!!??

ನಾನು ಕನ್ಫ್ಯೂಸ್ ಆದೆ.. ಅವರು ಹೇಳಿದ ಹಾಗೆ ಮಾಡಿದೆ.

ಸ್ವಲ್ಪ ಮುಂದೆ ಮತ್ತೆ ಗೊತ್ತಾಗಲಿಲ್ಲ..

..... ಸ್ವಲ್ಪ ಅಳುಕಿನಿಂದಲೆ... " ಈಗ ಯಾವಕಡೇ ..ಯಜಮಾನ್ರೆ..?" ಕೇಳಿದೆ..

"ಸೀದಾ ಮುಂದಕ್ಕೆ ಹೋಗಪ್ಪಾ.. " ಅಂದರು.

" ಯಜಮಾನ್ರೆ.. ಸೀದಾ ಮುಂದುಗಡೆ ಮುಂದಕ್ಕೊ.. ಹಿಂದಗಡೆ ಮುಂದಕ್ಕೊ...!!? ಕೇಳಿದೆ..

ನಗುವೆ ಬರದ ಸತ್ಯ ನಿಗೆ ನಗು ತಡೆಯಲಾಗಲಿಲ್ಲ...

ಆ ನಗು ಹೇಗಿತ್ತೆಂದರೆ ಮಾಲ್ಲಿಕಾರ್ಜುನ ಖರ್ಗೆ, ಯಡ್ಯೂರಪ್ಪ ಮತ್ತು ದೇವೇಗೌಡ್ರು
ಎಲ್ಲಾ ಸೇರಿ ನಕ್ಕಾಂಗೆ ಇತ್ತು...!!!

Sunday, November 16, 2008

ನನಗೆ ಫೋಸು ಕೊಡಲು ಬರಲ್ಲಾ..!!ಈ ಮಾಮಾ ನನ್ನ ಫೋಟೋ ತೆಗಿತಾನಂತೆ.. ನಂಗೆ ..ನಾಚಿಕೆ...!!

ಸಂತೋಷ .. ಸಡಗರ... ಸಂಭ್ರಮ...ಈ.. ಲಂಗ ದಾವಣಿ.. ಹಾಕ್ಕೊಳೋದು.. ಎಷ್ಟು ಕಷ್ಟಾ.. !!

ನಾನು.. ಹುಡುಗಿ ಥರಾ ಕಾಣ್ತೀನಾ..??

ಯಾವ ಕವಿಯು ಬರೆಯಲಾರ...


ನಾನು..ಯಾವ.. ಹೂ..ಥರ ಕಾಣ್ತೀನಿ..??

Wednesday, November 12, 2008

ಇಂಥವರೂ.. ಇರ್ತಾರೆ...!!

ನನ್ನ ಸ್ನೇಹಿತರ ಸ್ನೇಹಿತರೋಬ್ಬರು ಸೈಟ್ ಖರಿದಿಸಿದರು. ಮುಂದೇನು ಅಂದಾಗ ನನ್ನ ಸ್ನೇಹಿತರು ನನ್ನ ಹೆಸರು ಹೇಳಿದರಂತೆ.
"ನೋಡಿ ಪ್ರಕಾಶ್, ನನ್ನ ಸೈಟ್ ವಿದ್ಯಾರಣ್ಯಪುರದ ಹತ್ತಿರ ಇದೆ. ಏನು ಮಾಡ ಬಹುದು ಅಂತ ನೀವು ಹೇಳಬೇಕು" ಅಂದರು.
ನನಗೆ ಈ ಥರ ಅತೀ ಬುದ್ದಿವಂತಿಕೆಯಿಂದ ಮಾತನಾಡುವವರನ್ನು ಕಂಡರೆ ಇಷ್ಟವಾಗುವದಿಲ್ಲ.
ಸೈಟ್ ಇದೆ ಅಂದಮೇಲೆ ಇನ್ನೇನು ಮಾಡ ಬಹುದು? ಅದೂ ನನ್ನ ಹತ್ತಿರ ಕೇಳಿದರೆ ನಾನು ಇನ್ನೇನು ಅನ್ನ ಬಹುದು?
" ಮನೆ ಕಟ್ಟಿಸಿಬಿಡಿ ಸರ್" ಎಂದೆ.
" ನಾಳೆ ಜಾಗ ತೋರಿಸುತ್ತೇನೆ" ಅಂದರು ನಾನು ಸಮ್ಮತಿಸಿದೆ.
ಮರುದಿನ ನನಗೆ ಸೈಟ್ ಬಳಿ ಕರೆದು ಕೊಂಡು ಹೋದರು.
"ನೋಡಿ ಇದೆ ಸೈಟು.." ಮೊದಲು ಕಂಪೌಂಡು ಹಾಕಬೇಕು" ಅಂದರು.
" ಮನೆ ಕಟ್ಟಿಸುವ ವಿಚಾರ ಇದೆಯಾ?" ಎಂದು ಕೇಳಿದೆ.
" ಹೌದು..ಆದರೆ ಮೊದಲು ನಾಲ್ಕೂ ಕಡೆ ಕಂಪೌಂಡು ಹಾಕಬೇಕು."
"ಹಾಗಾದರೆ ಮನೆ ಕಟ್ಟಿ ಆದಮೇಲೆ ಕಂಪೌಂಡು ಹಾಕೋಣ. ಈಗಲೆ ಕಟ್ಟಿದರೆ ಮನೆಕೆಲಸಕ್ಕೆ, ಒಳಗಡೆ ಕೆಲಸಕ್ಕೆ ತೊದರೆ ಅಗುತ್ತದೆ.." ಅಂದೆ.
"ಇಲ್ಲಾರಿ.. ನಾಲ್ಕೂಕಡೆ ಕಂಪೌಂಡ್ ಮೊದಲು ಹಾಕಬೇಕು ಆಮೇಲೆ ಮುಂದಿನ ಕೆಲಸ" ಅಂದರು
" ಯಾಕೆ ಹಾಗೆ? ನಮ್ಮ ಅನುಕೂಲ ನೋಡಿಕೊಳ್ಳಬೇಕಲ್ಲವೆ?" ಎಂದೆ.
" ನನ್ನ ಹೆಂಡ್ತಿ ತಮ್ಮ ಬಿ.ಇ. ಚಿನ್ನದ ಪದಕ ಹೋಲ್ಡರ್, ಅವರು ಹಾಗೆ ಮಾಡಲಿಕ್ಕೆ ಹೇಳಿದ್ದಾರೆ. ಹಾಗೆ ಮಾಡ ಬೇಕು."

ಇದೇನಪ್ಪ ಶುರುವಿನಲ್ಲೆ ಹೀಗೆ.. ಮುಂದೇನು..? ತಲೆ ಕೆರೆದು ಕೊಂಡೆ...

" ನಿಮ್ಮ ಹೆಂಡ್ತಿ ತಮ್ಮ ಎಲ್ಲಿ ಇರ್ತಾರೆ?" ಎಂದು ಸಾವಕಾಶವಾಗಿ ಕೇಳಿದೆ.
" ಇಲ್ಲೆ ಪಕ್ಕದಲ್ಲಿ.. ನಿಮ್ಮ ಕೆಲಸದ ಮೇಲ್ವಿಚಾರಣೆ ಅವರಿಗೆ ಹೇಳಿದ್ದೇನೆ. ಅವರು ಕೆಲಸ ಹುಡುಕುತ್ತಿದ್ದಾರೆ . ಅಲ್ಲಿವರೆಗೆ ಇಲ್ಲಿ ಬರ್ತಿತ್ತಾರೆ ..ಅವರು ಹೇಳಿದ ಹಾಗೆ ಮಾಡಿಬಿಡಿ..."

" ಸರ್.. ಕಾಂಟ್ರಕ್ಟು ಒಬ್ಬರಿಗೆ..ಮೇಲ್ವಿಚಾರಣೆ ಒಬ್ಬರಿಗೆ..ಬೇಡ. ನಿಮ್ಮ ಹಣಾನೂ ಉಳಿಯುತ್ತದೆ. ಅವರಿಗೆ ಕೆಲಸನೂ ವಹಿಸಿ ಬಿಡಿ.
ಮನೆಯವರ ಥರ ಮಾಡಿ ಕೊಡ್ತಾರೆ. ಎಷ್ಟೆಂದರೂ ಹೆಂಡ್ತಿ ತಮ್ಮನಲ್ಲವೆ?" ಅಂದೆ.

ಮನೆ ಕಟ್ಟೊ ಮೊದಲೆ ಕಂಪೌಂಡ್ ಕಟ್ಟುವ ಸಲಹೆ ಕೊಡುವವನ ಮೇಲ್ವಿಚಾರಣೆ ಇನ್ನು ಹೇಗಿರುತ್ತದೆ...?

ನಾನು ಮೆಲ್ಲಗೆ ಜಾರಿಕೊಂಡೆ..
ಜೀವನ ಪೂರ್ತಿ..ಕಲಿಯುತ್ತ....ಇರಬೇಕು....... !!

Friday, November 7, 2008

ನನಗೊಂದು ಮಹದಾಸೆ..

ನನಗೆ ಬಹುದಿನಗಳಿಂದ ಮನದಲ್ಲೇ ಉಳಿದ...
ಮಹದಾಸೆ ಒಂದಿದೆ...

ಅವಳು...ವಿಜಯಾ....
ನಾನು ಹೈಸ್ಕೂಲಲ್ಲಿ ಓದುತ್ತಿರುವಾಗ ಉದ್ದ ಲಂಗದ ಹುಡುಗಿ ಬಹಳವಾಗಿ ಕಾಡಿದ್ದಳು.
ಅದು ಪ್ರೇಮವಾ..?
ಹದಿಹರೆಯದ ಬಣ್ಣದ ಕನಸಾ..?
ಗೊತ್ತಿಲ್ಲ. ಅವಳೂ ನನ್ನ ಕಡೆಗೆ ನೋಡುತ್ತಿದ್ದಳು. ನಾನೂ ಕೂಡ.
ಮಲೆನಾಡಿನ ಹಳ್ಳಿ ಶಾಲೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಆಗ ನಡೆಯುತ್ತಿರಲಿಲ್ಲ.
ಎಲ್ಲೊ ಅಪರೂಪಕ್ಕೆ ಒಂದು ಮಾತನಾಡಿದರೆ ಸ್ವರ್ಗದಷ್ಟು ಸಂತೋಷ.. ...
ಅವಳು ಹೈಸ್ಕೂಲ್ ನಂತರ ನನಗೆ ಸಿಕ್ಕೇ ಇಲ್ಲ. ಈಗ ಎಲ್ಲಿದ್ದಾಳೊ.. ಏನೊ..

ಆದರೆ ಅವಳು ನನ್ನ ಹೃದಯದಲ್ಲಿ... ಮನಸ್ಸಲ್ಲಿ ಯಾವಾಗಲೂ ಉಳಿದು ಬಿಟ್ಟಿದ್ದಳು....

ನನಗೂ ಮದುವೆಯಾಗಿ ಸಂಸಾರದ ಸಂತೋಷ ದಲ್ಲಿರುವಾಗಲೂ...........
ಕಾಡುತ್ತಾಳೆ... ನೆನಪಾಗಿ....

ನನ್ನ ಈ ಪರಿತಾಪ ನನ್ನ ಗೆಳೆಯ "ನಾಗು"ಗೆ ಗೊತ್ತು.
ಅವನು ಬೆಂಗಳೂರಲ್ಲೆ ಇದ್ದಾನೆ. ಸಿರ್ಸಿ ಬಿಟ್ಟು ಬೆಂಗಳೂರಿಗೆಬಂದು..
ಕೆಲಸ ಹುಡುಕಿ.. ಬಾಡಿಗೆ ಮನೆ ಮಾಡಿದಾಗ ಮತ್ತೆ ಕಾಡಿದ್ದಳು..ಆ ..ಹುಡುಗಿ..

ದೇಶವೆಲ್ಲ ಸುತ್ತಿ.. ನೌಕರಿ ಮಾಡಿ..
ಬಳಲಿದಲಾಗಲೆಲ್ಲ ಅವಳ ನೆನಪಾಗುತ್ತಿತ್ತು..
ನಾನು ಮದ್ರಾಸಿನಲ್ಲಿ, ಬಾಂಬೆಯಲ್ಲಿ,, ಕಲ್ಕತ್ತಾದಲ್ಲಿ...
ದೆಹಲಿಯ ಬೀದಿಯಲ್ಲಿ ಸುತ್ತುವಾಗ .....
ದೂರದ ಕತಾರ್ ದೇಶದ ದೋಹಾದಲ್ಲಿ..
ಎಲ್ಲ ಕಡೆ ಕಾಡಿದ್ದಳು ಆ ಹುಡುಗಿ..
ಅವಳ ದಟ್ಟನೆಯ ಕಣ್ಣು..... ಮರೆಯಲು ಆಗಲೇ ಇಲ್ಲ....

ದೋಹಾದಲ್ಲಿದ್ದಾಗ ಮನೆಯಿಂದ ಮದುವೆ ಪ್ರಸ್ತಾಪ ಬಂದಿತು.
ಮತ್ತೆ ನೆನಪಾದಳು .
ವಿಚಾರಿಸಿದೆ....
ನಾಗು ಹೇಳಿದ " ಹೈಸ್ಕೂಲ್ ಮುಗಿದ ನಂತರ ಅವಳಣ್ಣ ಮದುವೆ ಮಾಡಿಬಿಟ್ಟಿದ್ದ"..
ಬೇಜಾರಾಯಿತು..

ಬಹುಶಃ ನನಗೆ ಅವಳ ನೆನಪಿನ ಭಾಗ್ಯವನ್ನು ಮಾತ್ರ..
ಆ ಭಗವಂತ ಬರೆದಿದ್ದಾನೋ.... ಇದ್ದಿರ ಬಹುದು....

ಅಕ್ಕ ಹುಡುಕಿದ ಹುಡುಗಿ ಮುದ್ದಾಗಿದ್ದಳು.... ಈಗಲೂ ಕೂಡ....
ಕನಸಿನಲ್ಲಿ ಬಯಸುವಂಥಹ ಹುಡುಗಿ...
ಅವಳಾದಳು ನನ್ನ ಮಡದಿ..

ಮಡದಿಗೆ ಕಾಡಿದ ಹುಡುಗಿಯ ಬಗೆಗೆ ಹೇಳಿದೆ..

ಅವಳಿಂದ ಮೊದಲನೆ ಪ್ರಶ್ನೆ " ಹೇಗಿದ್ದಾಳೆ ನಿಮ್ಮ ಕಾಡಿದ ಹುಡುಗಿ..?"

" ನನ್ನ ಹದಿಹರೆಯ ಬಯಸಿದ ಹುಡುಗಿ...
ಚೆನ್ನಾಗಿದ್ದಳು... ಆಗ...
ನನಗೆ ಮಹದಾಸೆ ಒಂದಿದೆ..
ಕಾಡಿದ ಹುಡುಗಿಯನ್ನು ನಿನಗೊಮ್ಮೆ ತೋರಿಸಬೇಕು.." ..

ನನ್ನಾಕೆಗೂ ಕುತೂಹಲ...!
ಆ ನನ್ನ ಅಭಿರುಚಿ ಹೇಗಿತ್ತು ಅಂತಿರ ಬಹುದಾ...?
ನಾನು ಆ ಬಗೆಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ....

ಆದರೆ ಹೇಗೆ.. ತೋರಿಸುವದು...??

ನಾಗು ನನ್ನ ಪರಿತಾಪ ಅರ್ಥ ಮಾಡಿಕೊಂಡಿದ್ದ.
"ನಾನು ಪ್ರಯತ್ನ ಮಾಡುತ್ತೇನೆ.. ಕಣೊ.." ಎಂದಿದ್ದ.
ಅವನೂ ನಾನೂ ಊರಿಗೆ ಹೋಗಿದ್ದಾಗ ಗೆಳೆಯರನ್ನ, ...
ಅವರಿವರನ್ನು ಕೇಳಿದ್ದರೂ ಯಾರೂ ಸರಿಯಾಗಿ ಹೇಳಲಿಲ್ಲ..

ಹಾಗೆ ದಿನಕಳೆಯಿತು..
ಬಿಸಿನೆಸ್ ವ್ಯವಹಾರ..ಮಕ್ಕಳು ಮರಿ ಸಂಸಾರ..
ಏನೇ ಇದ್ದರೂ ಅಗಾಗ ನೆನಪಾಗುತಿದ್ದಳು....

ಒಂದು ದಿವಸ ನಾಗು ಫೋನ್ ...
" ನೋಡಪ್ಪಾ.. ನಿನ್ನ ಪ್ರೀತಿ ಪ್ರೇಮದ ಹುಡುಗಿಯ ಮಗಳ ಮದುವೆ.
ರಾಜಾಜಿ ನಗರದ ಕಲ್ಯಾಣ ಮಂಟಪದಲ್ಲಿ.
ಭಾನುವಾರ. ನಿನ್ನ ಹೆಂಡತಿ ಮಗನನ್ನು ಕರೆದು ಕೊಂಡು ಬಾ. ನಿನ್ನ ಮಹದಾಸೆ ಈಡೇರುತ್ತದೆ..... "

ಹೌದಾ...? ನಿಜವಾ...?
ನನಗೆ ಆಶ್ಚರ್ಯ.. ಸಂತೋಷ.. ಭಾವನೆ ಹೇಳಲಿಕ್ಕೆ ಶಬ್ಧಗಳೀಲ್ಲವಾಗಿತ್ತು....!
ಮಡದಿಗೂ ಹೇಳಿದೆ.....!

ಹೇಗಿರಬಹುದು..??
ಹೇಗಾಗಿರ ಬಹುದು,,.?
ಆ ಕಣ್ಣು ಹಾಗೆ ಇದ್ದಿರ ಬಹುದಾ...?
ಹಾಗೆ ಒಂದು ತರಹದ ಹೆದರಿಕೆ ಕೂಡ ಆಗಿತ್ತು..
ಯಾವ ಡ್ರೆಸ್ಸ್ ಹಾಕಿ ಕೊಳ್ಳಲಿ..?
ನನ್ನ ಸಂಭ್ರಮ ಸಡಗರ ನೋಡಿ ಮಡದಿಗೂ ಹೊಟ್ಟೆಕಿಚ್ಚಾಯಿತಾ?
ಆಗಿದ್ದರೂ ಹೇಳಲಿಲ್ಲ.
ಅವಳಿಗೂ " ಹೇಗಿದ್ದಿರ ಬಹುದು" ಎಂಬ ಕುತೂಹಲ.

ಭಾನುವಾರ ಬಂದೇಬಿಟ್ಟಿತು.
ನಿಜ ಹೇಳ ಬೇಕೆಂದರೆ ರಾತ್ರಿ ನಿದ್ರೆ ಸರಿಯಾಗಿ ಆಗಿರಲಿಲ್ಲ.
೯ ಗಂಟೆಗೆ ಕಲ್ಯಾಣಮಂಟಪಕ್ಕೆ ಬರಲಿಕ್ಕೆ ಹೇಳಿದ್ದ ನಾಗು.
ಟೆನ್ಶನ್ನಲ್ಲಿ ಡ್ರೈವ್ ಮಾಡಿ ಕಲ್ಯಾಣ ಮಂಟಪಕ್ಕೆ ಬಂದೇವು.

ನಾಗು ನಮಗಾಗಿ ಕಾಯುತ್ತಿದ್ದ.
ನನಗೊ ಒಳಗೊಳಗೆ ಒಂದುರೀತಿಯ ಭಯ ಆತಂಕ..
ಹೊಸತಾಗಿ ಮದುವೆಯಾಗಲು ಹುಡುಗಿಯನ್ನು ನೋಡುವ ತರಹ ಭಯ... ಆತಂಕ....!!

ಛೇ... !!
ಬೆಳೆಯುತ್ತಿರುವ ಮಗ... ಹೆಂಡತಿ...
ಮುದ್ದಾದ ಸಂಸಾರ.....!!
ಇಂಥಹ ಭಾವಗಳು ಯಾಕೆ....?

ನಾವು ಒಳಗೆ ಹೋದೆವು. ನನ್ನ ಕಣ್ಣುಗಳು ಹುಡುಕುತ್ತಿದ್ದವು.
ಹೇಗಾಗಿದ್ದಾಳೆ..??
ತವಕ.. ಆತಂಕ..ಎದೆ ಢವ..ಢವ..!!

ನಾನೀಗ ಕಾಲೇಜಿಗೆ ಹೋಗುವ ಹುಡುಗ ಅಲ್ಲವಲ್ಲ. ...
ಗಾಂಭಿರ್ಯತೆ ಅಗತ್ಯವಾಗಿತ್ತು.

ಒಬ್ಬ ದೊಡ್ಡ ಹೊಟ್ಟೆಯ.. ಬಕ್ಕುತಲೆಯ ಬಾಂಡ್ಲಿ ನಮ್ಮ ಬಳಿ ಬಂದ.

"ಪ್ರಕಾಶು.... ಇವರು ,,ವಿಜಯಾ.... ಯಜಮಾನರು..
ಸರ್.. ಇವರು ಪ್ರಕಾಶ ಹೆಗಡೆ.."
ಎಂದು ನಾಗು ಪರಿಚಯ ಮಾಡಿಕೊಟ್ಟ.
ನಾನು ನಮಸ್ಕಾರ ಮಾಡಿದೆ..

ಹೌದಾ..? ಕಾಡಿದ ಹುಡುಗಿಗೆ ಇಂಥಾ ಗಂಡನಾ..?
ಇನ್ನೂ ಸ್ವಲ್ಪ ಚಂದ..... ಸ್ವಲ್ಪ ಬೆಳ್ಳಗಾದರೂ.. ಇರಬಹುದಿತ್ತು ..ಅಂದುಕೊಂಡೆ..
ಇವನೇ ಹಿಗಿದ್ದಾನೆ... !!
ಅವಳು ಹೇಗಾಗಿರ ಬಹುದು....?

ನನ್ನ ಮಗ " ಅಪ್ಪಾ ಊಟ ಮಾಡೋಣ.. ಆಮೇಲೆ ನಿಮ್ಮ ಫ್ರೆಂಡ್ ಭೆಟಿಯಾಗು ..
ಹಸಿವು..ಆಮೇಲೆ ಸೀಟು ಸಿಗೊದಿಲ್ಲ" ಅಂದ.
ಅದಕ್ಕೆ ನಾಗು.. ನನ್ನ ಹೆಂಡತಿ ಎಲ್ಲರೂ ಓಕೆ ಅಂದರು...

ನಾನು ಒಳಗೊಳಗೆ ಕುದಿಯುತ್ತಿದ್ದೆ.

ಇನ್ನೇನು ..ನಾನೂ ಅವರನ್ನು ಹಿಂಬಾಲಿಸಿದೆ.
ಊಟವಾಯಿತು..
ಉಡುಗೋರೆ ಕೊಡೊಣ ಎಂದು ಹೊರಟೆವು..
ತುಂಬಾ ರಷ್....!
ವಧು ವರರ ಸಂಗಡ ಆ ಡುಮ್ಮ ..ಬಾಂಡ್ಲಿ ನಿಂತಿದ್ದ... ಪಕ್ಕದಲ್ಲಿ..?

ಉಹೂಂ....!.
ಅವಳಲ್ಲ ನನ್ನ ಕಾಡಿದ ಹುಡುಗಿ.. ..!
ಹಾಗದರೆ ಇನ್ನೆಲ್ಲಿ..?...??....

ನಾನು ನಾಗು ಹಿಂಬಾಲಿಸಿದೆ.
ನಾಗು ವಧು ವರರಿಗೆ ನನ್ನ ಪರಿಚಯಿಸಿದ.
" ಇವರು ಪ್ರಕಾಶ.. ಅಂತ. ದೊಡ್ಡ ಗುತ್ತಿಗೆ ದಾರ..
ನಿಮ್ಮಮ್ಮನ ಕ್ಲಾಸ್ ಮೇಟ್."
ನಾನು ಉಡುಗೋರೆ.. ಕೊಟ್ಟೆ.. ನನ್ನ ಕಣ್ಣುಗಳು ಹುಡುಕುತ್ತಿದ್ದವು....

ಡುಮ್ಮ ಪರಿಚಯದ ನಗು ನಕ್ಕ.

ಎಲ್ಲಿ...? ಎಲ್ಲಿ.. ಆ ಹುಡುಗಿ..??

ಡುಮ್ಮನ ಪಕ್ಕದಲ್ಲಿದ್ದ ದಪ್ಪನೆಯ ಹೆಂಗಸು ಬಾಯಿತುಂಬಾ ನಗುತ್ತಿದ್ದಳು.
ಸಂಭ್ರಮ ನೋಡಿದರೆ ಅವಳೆ ವಧುವಿನ ಅಮ್ಮನಂತಿದ್ದಳು.
ಅವಳೆ ನಮ್ಮ ಬಳಿ ಬಂದಳು..

" ಹೋಯ್ ಪ್ರಕಾಶಾ.. !!
ನಾನು ..ವಿಜಯಾ... ನನ್ನ ಗುರುತು ..ಸಿಗಲಿಲ್ಲವಾ?..
ನಾಗೂಗೆ ನಿನ್ನನ್ನೂ ಕರೆದು ಕೊಂಡು ಬರಲು ಹೇಳಿದ್ದೆ.
ಬಂದ್ಯಲ್ಲ ಬಹಳ ಖುಷಿಯಯಿತು.. ಎಷ್ಟು ವರ್ಷ ಆಯಿತೋ ಮಾರಾಯಾ...
ನಿನ್ನನ್ನೆಲ್ಲ ನೋಡಿ...!!"

ಓಹೋ.....!!
ಈ ವಿಜಯಾನಾ.. ?..??...

ನಮ್ಮ ಕ್ಲಾಸಿನಲ್ಲಿ ಇಬ್ಬರು ವಿಜಯಾಗಳಿದ್ದರು....!!!!

ನಾನು ನಾಗು ಮುಖ ನೋಡಿದೆ..
ಅವನಲ್ಲಿ ತುಂಟ ನಗು ಇತ್ತು.
" ಸಾರಿ ..ಕಣೊ ... ಪ್ರಕಾಶು...."
ಅಂದ.

ನನ್ನ ಕೈಯಲ್ಲಿ ಚಾಕು ಇದ್ದರೆ ಅವನ ಹೊಟ್ಟೆಗೆ ಹಾಕಿ ಸಾಯಿಸಿ ಬಿಡುತ್ತಿದ್ದೆ...,,,
ಬಡ್ಡಿಮಗ ನಾಗು....!!
Sunday, November 2, 2008

ಸ್ವಾಮಿ..ದೇವೇಗೌಡರ ..ಮನೆಗೆ..!!!?

ನಮ್ಮೂರಿನ ಗದ್ದೆ ಬಯಲಿನ ಸಂಜೆ ಹೊತ್ತು.....

ಮಗ್ನ.....