Tuesday, January 27, 2009

ಹೀಗೊಂದು.. ಕಾಗೆ ಪುರಾಣ...

ನ್ನೂರು ಬೆಳಗಾವಿ..ರೀ...
ಮೊನ್ನೆ ರಾಜಕಾರಣಿಗಳು ಬೆಳಗಾವಿಗೆ ಬಂದು ಗಲಾಟೆ ಮಾಡಿದ್ದು ನೋಡಿ..
ಇನ್ನು ನನಗೆ ಅಲ್ಲಿ ಕೆಲಸ ಇಲ್ಲ ಅಂದುಕೊಂಡು...
ರಂಗನ ತಿಟ್ಟು .. ಬಂದೆ...
ಇಲ್ಲಿ
ನನಗೊಬ್ಬ ಗೆಳತಿ ಇದಾಳ...!
ಭಾಳ .. ಛಂದ... ಅದಾಳ್ರೀ.. !!
ನಿಮ್ಮ
ಮನುಷ್ಯ ಜಾತಿಗೆ ಚಂದ ಅಂದ್ರ ಬೆಳ್ಳಗ ಇರಬೇಕ್ರಿ...
ನಮ್ಮ ಚಂದ ಹಂಗಲ್ರೀ.. ಬ್ಯಾರೆನೇ ಅದ..
ನಮಗ ಕಪ್ಪೆ ಚಂದ ರೀ....

ಇಲ್ಲಿ ರಂಗನ ತಿಟ್ಟುನಲ್ಲಿ ಬಣ್ಣಬಣ್ಣ ಹಕ್ಕಿ ನೋಡಿ ನನ್ನ ತಲಿ ಕೆಟ್ಟು ಹೋತ್ರಿ..

ಹಂಗೆ... ಬೇಜಾರ್ರೂ... ಆತ್ರಿ.. ಯಪಾ..!

ಜನ ಎಲ್ಲ ಬಂದು ಬಿಳೀ ... ಹಕ್ಕಿ ಫೋಟೋ ತೆಗಿತಾರೆ...

ನನ್ನದು ಯಾಕೆ ತೆಗಿಯೂದಿಲ್ಲ...?


ನೋಡ್ರಿ ಇಲ್ಲಿ ಕುಂತಾನಲ್ಲ ಅಂವ..

"
ನಾಗೇಂದ್ರ .. ಮುತ್ತುಮುರಡು.." ...ಹೇಳ್ರಿ....

ಭಾಳ .. ಛಂದ.. ಫೋಟೋ ತೆಗಿತಾನ್ರಿ.... ಯಪ...

ಸಾಹಿತ್ಯಾನೂ ಓದಾದಿದಾನ್ರಿ..

ರಾಷ್ಟ್ರ ಮಟ್ಟದಲ್ಲಿ
...ಬಹಳ ಬಹುಮಾನ ಕೂಡ ಬಂದೈತ್ರಿ....!
" ಲೇ.. ತಮ್ಮಾ... ನಾಗೇಂದ್ರ..

ನನ್ನ
ಫೋಟೋನೂ ತೆಗಿಯೋ ಮಾರಾಯಾ..!...

ಜಗತ್ತಿನ್ಯಾಗ ಎಲ್ಲಾನೂ ಬೆಳ್ಳಗೆ.. ಇರವಲ್ದು...

ಕಂಡಿದ್ದೆಲ್ಲ ಬೆಳಿ ಅಲ್ಲಪಾ....

ಮನಸ್ಸಿನೋಳಕ್ಕೂ ಕರ್ರಗೆ ಇರ್ತಾರಪಾ..

ನೋಡು ನಂದೂ ಒಂದು ಫೋಟೋ ತೆಗ್ಯಪಾ..! ನೋಡೋನು...!

ಏನಪಾ.. ! ಇಂವ ನನ್ನ ನೋಡ್ತಾನೆ ಇಲ್ಲಪಾ..!

ಪಕ್ಕ ಹೋಗಿ ನೋಡ್ತೀನಿ...ಇರ್ರಿ...


ನೋಡಪಾ.. ನಾಗೇಂದ್ರ..!

ನಾನು ಕಪ್ಪಗಿದಿನಿ ಅಂತ ಫೋಟೋ ತೆಗ್ಯುದಿಲ್ಲ.....
ಇದು ಭಾಳ.. ಅನ್ಯಾಯ ನೋಡಪಾ....!

ನಾನೂ ದೇವರ ಸ್ರಷ್ಟಿ.. ಅಲ್ಲೆನಪಾ..? ನಂದೂ ಫೋಟೋ ತೆಗಿ....


ಅಂತೂ .. ದೊಡ್ಡ ಮನಸ್ಸು ಮಾಡಿದೇ ಕಣಪಾ...

ದೇವ್ರು ನಿನ್ನ ತಂಪಾಗಿ ಇಟ್ಟಿರ್ಲಿ

ಮೊದ್ಲು.. ಎದುರಗಡೆ ತೇಗಿ...
ಫುಲ್
.. ಬರಬೇಕಪಾ..
ಕಾಲು.., ತಲಿ ಎಲ್ಲಾ ಬರಬೇಕಪಾ..!




ಈಗೊಂದು ಕ್ಲೋಸ್ ಅಪ್ ತೇಗಿ.. ಯಪಾ..!

ಮುಖ ಅಷ್ಟೆ ಬರ ಬೆಕಪಾ..!




ಹಾಗೆ ಒಂದು ಸೈಡ್.. ಪೋಸ್ ತೆಗಿಯಪಾ...

ಫೋಟೋ ಛಂದ ಬರಬೇಕಪಾ...

ಫೋಟೋ ಛಂದ ಬಂದದೆ.. ಅಂತ..

ನನ್ .. ಕಿವಿಯಲಿ... "ಹೂ...." ಇದಬ್ಯಾಡ .. ನೋಡು...!

ಭಾಳ ಜನರು ಇಡಲಿಕ್ಕೆ ನೋಡ್ಯಾರ...!

ಏನ್ ... ಮಾಡೋದೂ ... ನಂ ಜನ್ಮಾನೆ ಹಂಗೈತಿ..

ನೀ.. ಒಳ್ಳೆ ಮನಶ್ಯಾ ಇದಿಯಪಾ......

ಫೋಟೋ.. ಛಂದ.. ತೆಗಿಯಪಾ..!




ಆಕಡೆ .. ಸಾಕು.. .. ಸೈಡ್ ಬಾರಾಪಾ...
ಸ್ವಲ್ಪ ಕುತ್ತಿಗಿನೂ .ಬರಬೇಕು.. ಹಂಗೆ ತೇಗಿ ,
ರೆಕ್ಕೆ ಪುಕ್ಕನೂ...ಬರೋ.. ಹಂಗೆ...ಒಂದು
ಫೋಟೋ...

ನೋಡು
.. ನಂಗೆ... ನಗಲಿಕ್ಕ ಬರೋದಿಲ್ಲ...
ಇಷ್ಟು..... ನಕ್ಕರೆ.. .. ಸಾಕೆನಪಾ.!






ಈಗ ಕಡೆ ಸೈಡ್ ಫುಲ್ ತೆಗಿಯಪಾ..
ಮೊನ್ನೆ ನಿಂಗೆ ರಾಷ್ಟ್ರ ಮಟ್ಟದಲ್ಲಿ ಅವಾರ್ಡು ಬಂತಲ್ಲಪಾ..
ಭಾಳ ಚೊಲೋ ಆತು ನೋಡು...!

ಅದೇನೋ " ವೈಪಿಎಸ್..".. ಅವಾರ್ಡ್ ಅಂತೆ ..

ನಿಂಗೆ ಬಂತಲ್ಲಪಾ...ಖುಷಿ ಆತು.. ನೋಡು...

ನಮ್ಮೆಲ್ಲರ
ಕಡಿಯಿಂದ.. ನಿನಗೆ "ಅಭಿನಂದನೆಗಳು ಕಣಪಾ..!







ನೋಡು ನಾಗೇಂದ್ರ... ನೀನು ಕ್ರಷಿ...ಮಾಡ್ಕೊಂಡು..
ಹೊಲದಲ್ಲಿ ಕೆಲಸಾನೂ ಮಾಡ್ಕೊಂಡು..
ಫೋಟೋನೂ ಹಚ್ಚಗೊಂಡು ...

ಬಹಳ
ಸಾಧನೆ ಮಾಡಿದೀಯಪಾ..
ದೇವರು
ನಿನಗೆ ಒಳ್ಳೇದು ಮಾಡ್ಲಿ..

ಮತ್ತ.. ಫೋಟೋ ತೋರ್ಸೂದ.. ಮರಿ ಬೇಡಪಾ ..!

ನಾನ್.... ಬರ್ತಿನಪಾ.. ಮತ್ತ ಸಿಗ್ತೀನಿ..!


(" ನಾಗೇಂದ್ರ " ಬಹ ಳ ಒಳ್ಳೆಯ ಛಾಯ ಗ್ರಾಹಕ.. ಹಳ್ಳಿಯಲ್ಲಿದ್ದರೂ...
ಛಾಯಾಗ್ರಹಣವನ್ನು ಹವ್ಯಾಸ ಮಾಡಿಕೊಂಡು..
ಬಹಳ ಸಾಧನೆ ಮಾಡಿದ್ದಾರೆ..
೧೫ -೨೦ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ..

ಸ್ವತಹ.. ತೋಟದಲ್ಲಿ ಕೆಲಸ ಮಾಡುತ್ತಾರೆ....
ಉತ್ತಮ ಪ್ರಗತಿ ಪರ.. ಕ್ರಷಿಕರೆಂದು ಪ್ರಸಿದ್ದರು..

ಹಳ್ಳಿಯಲ್ಲಿದ್ದುಕೊಂಡು ಆವರು ಮಾಡಿದ..

ಸಾಧನೆಗೆ ನಮ್ಮ " ಅಭಿನಂದನೆ "ತಿಳಿಸೋಣ....

ಈ ಘಟನೆ..

ಕಾಗೆ ಮನುಷ್ಯನ ಹತ್ತಿರ ಬರೋದೇ ಇಲ್ಲ..
ಅದರ ಕಣ್ಣು ವಿಶಿಷ್ಟವಾಗಿರುವದರಿಂದ..
ಬಹಳ ಹೆದರಿಕೆ ಅದಕ್ಕೆ..

ಇಲ್ಲಿ ತುಂಬಾ ಹತ್ತಿರದಲ್ಲಿದೆ...!..!

ನಾನೂ ಅವರೂ ...ರಂಗನ ತಿಟ್ಟು ಗೆ ಹೋದಾಗ ಆದದ್ದು )






Friday, January 23, 2009

ಅಕ್ಕ ನೋಡಿದ.....ಆಗ್ರಾದ ಹುಡುಗಿ... .!!

ಜೆಯಲ್ಲಿ ಮತ್ತೆ ಬೆಂಗಳೂರಿಗೆ ಬಂದಿದ್ದೆ..
ಮದುವೆಯ "ಹುಡುಗಿ" ಫಿಕ್ಸ್ ಆಗಿದ್ದಳು.....


ಆಗ್ರದಲ್ಲಿ ಬೆಳೆದು ..., ಓದಿದ ಹುಡುಗಿ ..

ಒಮ್ಮೆ ಅಕ್ಕನ ಮನೆಗೆ ಆಗ್ರಾಕ್ಕೆ ಹೋದಾಗ ನೋಡಿ ಮನಸೋತಿದ್ದೆ...!

ಅಕ್ಕ ನೋಡಿ.. ನಿಶ್ಚಯ ಮಾಡಿದ ಹುಡುಗಿ....!

ಪತ್ರದ ಮೂಲಕ ಪ್ರೇಮ , ವಿರಹ ಹಂಚಿಕೊಳ್ಳುತ್ತಿದ್ದೇವು...

ದಿನಕ್ಕೊಂದು ಪತ್ರ... ಕೊನೆಕೊನೆಗೆ..

"ಇದು ಪತ್ರ .. ನಂ... ೨೫೪ ಕ್ಕೆ ಉತ್ತರ" ಎಂದೆಲ್ಲ ಬರೆಯುತ್ತಿದ್ದೇವು..

ವಿರಹಾ..ನೂರು..ನೂರು ತರಹಾ...
ವಿರಹಾ..ಪ್ರೇಮ ಕಾವ್ಯದ ...
ಕಹಿ ... ಬರಹಾ.....

ಯಾವ ಕವಿ ಕಲ್ಪನೆಯಿಂದ ಬರೆದನೋ..!
ಬಹಳ ಅನುಭವಿಸಿ ಬರೆದ ಸೊಗಸಾದ ಕವನ.. ಹಾಡು...!

ದೂರ .. ಅಗಲಿಕೆ.. ವಿರಹ...
ಹೇಳಲಾಗದ ಅನುಭಾವ ...

ಅದು.. ನೋವಾದರೂ... ಹಿತವಾಗಿತ್ತು....

ಅವಳ ಪತ್ರದ ತುಂಬೆಲ್ಲ ಪ್ರೇಮ ತುಂಬಿರುತ್ತಿತ್ತು..
ಅದು ಅವ್ಯಕ್ತ ಆನಂದ...

ಎಷ್ಟು ಓದಿದರೂ ಹೊಸತಾಗಿರುತ್ತಿತ್ತು...
ಪ್ರತಿ ಬಾರಿಯೂ ಹೊಸ ಭಾವ,.. ಹೊಸ .. ಅರ್ಥ..!
ಅವಳ ಕಿರು ನಗು... ಅವಳ ರೂಪ...

ಅದರಲ್ಲಿರುತ್ತಿತ್ತು...

ಅವಳ ಪತ್ರಗಳೊ...ಕಾದಂಬರಿ ಥರ ಇರುತ್ತಿತ್ತು...

ಕೆಲಸದಲ್ಲಿರುವಾಗ " ಅದು" ನನಗೆ ಸಿಗುತ್ತಿತ್ತು...

ಹೇಗೆ ಓದುವದು...?

ಆಫಿಸಿನಲ್ಲಿ ಓದಿದರೆ ಸಹವರ್ತಿಗಳು ತಪ್ಪು ತಿಳಿದಾರೆಂಬ.. ಭಾವನೆ..

ಸೈಟಿನಲ್ಲಿ ಓದಲು.. ಲೇಬರ್ ಎದುರು ಸಣ್ಣವನಗಿಬಿಡುತ್ತೇನೆಂಬ ಅಳುಕು...

ಕೊನೆಗೆ ನಾಗುವಿನ ಐಡಿಯಾ ಕೆಲಸಕ್ಕೆ ಬಂತು...

ಟೊಯ್ಲೆಟ್ಟಿಗೆ ಹೋಗಿ ಓದುತ್ತಿದ್ದೆ....!

ಅಲ್ಲಿಯ ಏಕಾಂತ.. ಯಾರ ಭಯವೂ ಇರುತ್ತಿರಲಿಲ್ಲ...
ನನ್ನದೇ ಲೋಕ....ನನ್ನದೇ ಪ್ರಪಂಚ...!

ಅಲ್ಲಿ ಓದುವ ಚಟ ಈಗಲೂ ಮುಂದುವರೆದಿದೆ...

ಪ್ರತಿದಿನ ಬೆಳಿಗ್ಗೆ ಪೇಪರ್ ಓದುವದು....


ತುಂಬುಗಲ್ಲದ ಹುಡುಗಿಯ ನೆನಪಾದೋಡೆ.... ..
ಭಾರತಕ್ಕೆ...ಓಡಿ ಹೋಗಿ ಬಿಡೋಣ ಅನ್ನಿಸಿ ಬಿಡುತ್ತಿತ್ತು...

ಎಲ್ಲ ಪ್ರೇಮಗೀತೆಗಳು..ಗಝಲ್ ಗಳು ನಮ್ಮ ಪ್ರೇಮಕ್ಕ್ಕಾಗಿಯೇ ಇದೆ ಅನಿಸುತ್ತಿತ್ತು...

ಒಮ್ಮೆ ನನ್ನ ಹುಡುಗಿಯನ್ನು ಕಣ್ಣಾರೆ ..
ಮನದಣಿಯೇ ನೋಡಿಕೊಂಡು ಬರೋಣ ಅನಿಸುತ್ತಿತ್ತು...

ಇನ್ನೂ ಅಧಿಕ್ರತವಾಗಿ ಹುಡುಗಿ ನೋಡಿಲ್ಲವಾಗಿತ್ತು...
ಅಕ್ಕ ಕಳುಹಿದ ಮೂರು ಫೋಟೊಗಳಿಂದಲೇ ತ್ರಪ್ತಿ ಪಡಬೇಕಿತ್ತು...

ಈ ರಜೆಯಲ್ಲು ಮದುವೆ ಅಗುವ ಪರಿಸ್ಥಿತಿ ಇಲ್ಲವಾಗಿತ್ತು..

ನನ್ನ ಕಷ್ಟ ಅರ್ಥ ಮಾಡಿಕೊಂಡ ಅಕ್ಕ.....

" ಪ್ರಕಾಶು ಒಂದುಸಾರಿ ಆಗ್ರಾಕ್ಕೆ ಹೋಗಿ ..ಹುಡುಗಿ ನೋಡಿ ಬಾ ಮಗನೆ.....?"
ಹೇಳಿದಳು...


ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು..!

ಇದಕ್ಕೆ ಬಾವನೂ ಆಶೀರ್ವಾದ ಮಾಡಿದ...

ಇನ್ನೇನು..??.... ನಾನು . ಅಮಾಯಕ "ವಿನಾಯಕ" ಹೊರಟೇ ಬಿಟ್ಟೆವು....

ಆಗ್ರಾಕ್ಕೆ...ಟ್ರೇನಿನಲ್ಲಿ....

ದಾರಿಯಲ್ಲಿ..
ವಾಕ್ ಮನ್ನಲ್ಲಿ... "ಆಷೀಖಿ..".... ಹಾಡು...ಕೇಳುತ್ತಿದ್ದೆ...

"ನಝರ್ ಕೆ ಸಾಮನೇ..
ಝಿಗರ್ ಕೆ ಪಾಸ್...

ಕೋಯಿ .. ರೆಹೆ..ಥಾ....ಹೇ ...

ವೋ..ಹೊ...ತುಮ್...!!

( ನನ್ನ.. ಕಣ್ಣಿನ ಮುಂದೆ.....

ಹ್ರದಯದ ಬಳಿ .... ಯಾರಾದರೂ ಇದ್ದರೆ.. ..!

ಅದು..ನೀನೇ..! ... )



ಅಗ್ರಾಕ್ಕೆ ಹೋಗಿ ಹೊಟೆಲ್ಲಿನಲ್ಲಿ ರೂಮು ಮಾಡಿದೆವು...


ನಾವು "ಹುಡುಗಿಯನ್ನು " ನೋಡಲಿಕ್ಕೆ ಬರುವ ವಿಷಯ ಗುಟ್ಟಾಗಿ ಇಟ್ಟಿದ್ದೇವು...

ಅಂದು ಉಗಾದಿ ಹಬ್ಬ...!

ಮಧ್ಯಾನ್ಹ.. ಹನ್ನೊಂದು.. ಗಂಟೆಯ ಸುಮಾರಿಗೆ..

ಏರ್ಫೋರ್ಸ್... ಕಂಪೌಂಡಿನಲ್ಲಿರುವ .. ಅವರಮನೆಗೆ ಬಂದೆವು...

ನಮ್ಮ ಮಾವ " ಏರ್ ಫೋರ್ಸ್ ಆಫಿಸರ್."....!

ನಾನೇ ಬಾಗಿಲು ತಟ್ಟಿದೆ...

ಕಡು ನೀಲಿ ಬಣ್ಣದ ಸ್ಕರ್ಟ್ ತೊಟ್ಟ ನನ್ನ ..
ನನ್ನ ಮನದನ್ನೆಯೇ... ಬಾಗಿಲು ತೆಗೆದಳು...!


ಯಾರಿಗಾಗಿ ಹಗಲಿರುಳು ಹಂಬಲಿಸಿದ್ದೇನೊ..

ಆ ಚಂದದ ಹುಡುಗಿ ಕಣ್ಣ ಮುಂದಿದ್ದಳು.....! ಅವಳಿಗೆ ನನ್ನ ಪರಿಚಯವಾಗಲಿಲ್ಲ..!

.. "ಕೌನ್ ..ಹೇ..?... "

ಕೇಳಿದಳು..

ನನಗೆ ಹೇಳಲಾಗದ ತಳಮಳ...ಆತಂಕ...!

ನನಗೆ ಭಯವಾ..?

ಸಂಕೋಚವಾ..?

ಬಾಯಿಬಡುಕನಾದ ನನಗೆ ಮಾತೇ ಬರಲಿಲ್ಲ...

ಅಷ್ಟರಲ್ಲಿ ಅಮಾಯಕ ವಿನಾಯಕ ಮುಂದೆ ಬಂದ..
ಅವನ ಗುರುತು ಅವಳಿಗೆ ಹತ್ತಿತು..!

"ಅರೆ ವಿನೂ ಅಣ್ಣ!!..ಬಾ..ಬಾ" ಅಂದು ...ಕರೆದು...
ಒಳಗೆ... ಓಡಿದಳು...

ಮನೆಯವರಿಗೆಲ್ಲ ಸಂಭ್ರಮ..!
"ಅಳಿಯನಾಗುವವ ಬಂದಿದ್ದಾನೆ...!
ತನ್ನ ಮಗಳ ಬಾಳ ಸಂಗಾತಿಯಾಗುವವ ಬಂದಿದ್ದಾನೆ...!

ಮಾತಾಡಿಸುವ ಧ್ವನಿ ಆಕಾಶಕ್ಕೇರಿತು...

ಅವರಿಗಾದ ಖುಷಿ.. ಅವರಏರಿದ ಧ್ವನಿಯಲ್ಲಿ ಕಾಣಬಹುದಿತ್ತು...!

ನಮ್ಮ ಧ್ವನಿಯೂ ಅನಿವಾರ್ಯವಾಗಿ ಅವರ ಮಟ್ಟಕ್ಕೆ ಏರಿಸಬೇಕಾಯಿತು...!

"ಲೀಲೂ... ಪಾನಿ ಲಾವೊ..ಬೇಟಾ.."

ನನ್ನತ್ತೆ ಸಂಭ್ರಮದಿಂದ ಹೇಳಿದಳು...

ನನ್ನ ಕಣ್ಣು ಕಾತುರದಿದಂದ..ಒಳ್ಗೆ ನೋಡುತ್ತಿತ್ತು...!

ಟ್ರೇಯಲ್ಲಿ ಎರಡು ಗ್ಲಾಸು ಹಿಡಿದು ನನ್ನ ಮುಂದೆ ನಿಂತಳು...

ನಾನು ಬಹಳ... ಅದ್ರಷ್ಟವಂತ....!

ಎಷ್ಟು ಚಂದದ ಹುಡುಗಿ..!

ಅವಳ.. ಕೈ ಥರಥರ..ನಡುಗುತ್ತಿತ್ತು...
ಆ ಕಂಪನದಿಂದಾಗಿ...
ಟ್ರೇಯಲ್ಲಿ ತುಂಬಿದ ಗ್ಲಾಸಿನ "ಕಣ..ಕಣ "ಶಬ್ಧ ನನಗೂ ಕೇಳಿಸುತ್ತಿತ್ತು..

ನನವಳ ಕಾಲನ್ನೇ ನೋಡುತ್ತಿದ್ದೆ...

ಅದೂ.... ಚಂದವಾಗಿ ,.. ಕಾಣುತ್ತಿತ್ತು..!....!

ವಿನಾಯಕ ನೀರನ್ನು ತೆಗೆದು ಕೊಂಡು
" ತಗೊಳೊ..ಪ್ರಕಾಶಾ."....ಎಚ್ಚರಿಸಿದ..

ನಾನು ನೀರು ಕುಡಿದೆ...

ದಿನಾಲೂ ಕುಡಿಯುತ್ತಲೇ... ಇದ್ದೇನೆ..!

( ಕುಡಿಸುತ್ತಲೆ ಇದ್ದಾಳೆ..!)

ಏನು ಉಪಚಾರ..? ಏನು ಸಂಭ್ರಮ..!

"ಊಟ ಮಾಡಿಕೊಂಡು ಹೋಗಲೇ..ಬೇಕು....."

ನನ್ನ ಮಾವ ಹೇಳಿದರು ..ನಾವೂ ಒಪ್ಪಿದೆವು...

ನಮ್ಮಲ್ಲಿಯ ಪದ್ಧತಿಯಹಾಗೆ ಕುಳಿತು ಊಟದ ವ್ಯವಸ್ಥೆ ಮಾಡಲಾಗಿತ್ತು...

ಉಗಾದಿ ಹಬ್ಬದ ಊಟ..!

ಮೊದಲು ಒಂದೊಂದಾಗಿ ಬಡಿಸಿದರು..

ಮಧ್ಯದಲ್ಲಿ ಜಿಂಕೆ ಮರಿಯೂ... ಬರುತ್ತಿದ್ದಳು...!

ಅವಳು ತಂದಿದ್ದನ್ನು ನಾನು ಬೇಡವೆನ್ನುತ್ತಿರಲಿಲ್ಲ...

ಚಪಾತಿ ಬಡಿಸಿದರು...ಪಲ್ಯ.. ಚಟ್ನಿ..
ನನಗೊ ರುಚಿಯೇ ಗೊತ್ತಾಗುತ್ತಿರಲಿಲ್ಲ....
ಮತ್ತೆ ಬಡಿಸಿದರು..

ನನಗೆ ಅನ್ನದ ರುಚಿ ನೋಡುವ ಆಸೆ...

ಅತ್ತೆ ಮತ್ತೊಂದು ಬಾರಿ ಚಪಾತಿ ಕೇಳಿದರು..
ನಾನು ಬೇಡವೆಂದು ಕೈ ಅಡ್ಡ ಮಾಡಿದೆ...

"ಹಾಕ್ಕೊಳಪ್ಪಾ...!" ಚಪಾತಿಯನ್ನು."....ನಮ್ಮ ಲೀಲು..ತೆಳ್ಳಗೆ ಲಟ್ಟಿಸಿದ್ದಾಳೆ....!

ಅವಳೇ ಬೇಯಿಸಿದ್ದು.. ಉಬ್ಬಿದೆ ನೋಡು.. ಹಾಕ್ಕೊ..!"

"ಇಲ್ಲ..ಸಾಕು..ಸಾಕು... ಆಗಲೇ ಎರಡು.. "ಚಪಾತಿ.." ಹಾಕ್ಕೊಂಡಿದ್ದಿನಲ್ಲ.."

ಛೇ..ಛೇ... ..ಕೈ ತೆಗಿ.. ನಿಮ್ಮಂಥ ಹುಡುಗರು ಹೇಗೆ ತಿನ್ನಬೇಕು ಗೊತ್ತಾ..? ಹಾಕ್ಕೊಪಾ.."

"ಇ..ಇಲ್ಲ..ನನಗೆ.. " ಚಪಾತಿ " ಬಗೆಗೆ ಸಂಕೋಚ ಇಲ್ಲ.."

"ನೋಡಪ್ಪಾ.. ದೋಹಾದಲ್ಲಿ ಎಲ್ಲಿ " ಚಪಾತಿ " ಸಿಗುತ್ತದೆ..?? ನಿಂಗೆ ಅಪರೂಪ..! ಹಾಕ್ಕೊ.."

"ಇಲ್ಲ.. ಇಲ್ಲ.. ನಂಗೆ " ಚಪಾತಿ " ಅಂದರೆ ಪ್ರೀತಿ..!

ಅಲ್ಲಿಯೂ ಸಿಗುತ್ತದೆ ಅಲ್ಲೂ ಹಾಕ್ಕೋತೀನಿ....!

ಆದರೆ ಒಂದು.ಅಥವಾ ಎರಡು..!.. ಜಾಸ್ತಿ.. ಆಗೋದಿಲ್ಲ.....!"


ವಿನಾಯಕನಿಗೆ ನೋಡಿದೆ.. ಅವನಿಗೆ ನಗು ತಡೆಯಲಾಗುತ್ತಿಲ್ಲ...!

ಬಹಳ ಕಷ್ಟಪಟ್ಟು ತಡೇದು ಕೊಂಡಿದ್ದ..!

ಅತ್ತೆಗೆ ಅಳಿಯನಿಗೆ .. " ಚಪಾತಿ " ಹಾಕಿಯೇ ತೀರಬೆಕೆಂಬ ಪ್ರೀತಿ...!

"ನೋಡಪ್ಪಾ.." ಸಣ್ಣ ಚಪಾತಿ." ..!..ಹಾಕ್ಕೋ....ಒಂದು..!!..."

ಅಲ್ಲಿಯವರೆಗೆ ಸುಮ್ಮನಿದ್ದ ವಿನಾಯಕ...

"ಅತ್ತೆ...ಆತ.. ಹಾಕ್ಕೊಳ್ಳೋದು .. " ದೊಡ್ಡ ಚಪಾತಿಯೇ...!.." ...

ನೀವು ಹಾಕಿ..ಬಹಳ.. ಸಂಕೋಚ ಅವನಿಗೆ...!.."

ನನಗೆ ಬರುತ್ತಿದ್ದ ನಗು ಕಷ್ಟಪಟ್ಟು ತಡೇ ಹಿಡಿದುಕೊಂಡಿದ್ದೆ...!

ನಾನು ಮತ್ತೆ ಕೈ ಅಡ್ಡ ಮಾಡಿದೆ...

ಅತ್ತೆ ಈಗ ಮಗಳನ್ನು ಕರೆದಳು...!

"ಲೀಲು.. ನೀನೆ ಹಾಕು . . " ಚಪಾತಿ.."... ಪ್ರಕಾಶನಿಗೆ.....!..

..ನೀನು ಹೇಳಿದರೆ ಹಾಕ್ಕೊಳ್ಳಬಹುದು..!!... "

ಮಗಳಿಗೆ ಹಸ್ತಾಂತರಿಸಿದಳು...

ಅವಳಿಗೂ ಸಂಭ್ರಮ....!

" ಮಾತಾಡದೆ ಕೈ ಮುಂದೆ ಮಾಡಿದಳು.. "..ಚಪಾತಿ " ಹಾಕಲು...

"... ನಾನು ತಂದಿದ್ದಕ್ಕಾದರೂ ... ಮರ್ಯಾದಿ ಕೊಡಿ..!! ."


ಆ.. ಧ್ವನಿ.. ಕೋಗಿಲೆ.. ಹಾಡಿದಂತಿತ್ತು ...

ಸಾವಿರ.. ಸಾವಿರ... ಮಾತು ಹೇಳುವ.. ..

ಆ ..ಕಣ್ಣುಗಳು.....

ಆ.. ಮುಖ.... ನೋಡುತ್ತಾ....

ನಾನು ಕೈ ..ಹಿಂದೆ.. ತೆಗೆದುಕೊಂಡೆ....!



" ಹೌದಾ.. .ನೋಡಿ....ಪ್ರಕಾಶನಿಗೆ..." ಚಪಾತಿ "... ಹಾಕಲು.....

ನಮ್ಮ.... ಲೀಲೂನೆ.. ಬರಬೇಕಾಯಿತು...!!.."


ನನ್ನ ಮಾವ ಗರ್ವದಿಂದ ಹೇಳಿ ಬೀಗಿದರು....!

ವಿನಯಕನಿಗೆ ನಗು ತಡೆಯಲಾಗಲಿಲ್ಲ....

ವಿನಾಯಕನ ಬಾಯಲ್ಲಿದ್ದಿದ್ದೆಲ್ಲ..... ಹೊರಕ್ಕೆ ಬಂತು....!!

ಘೊಳ್ಳನೆ.... ನಕ್ಕುಬಿಟ್ಟ...!...

ಮಾವ ತಬ್ಬಿಬ್ಬಾದರು...!

ವಿನಾಯಕ ಯಾಕೆ ಅಷ್ಟೆಲ್ಲಾ.. ನಕ್ಕ..?...

ಅವರಿಗೆ ಅರ್ಥವಾಗಲಿಲ್ಲ....!




(ಮಡದಿ ಹಾಕಿದ.. "ಚಪಾತಿ.. ".... ಅರ್ಥವಾಗಬೇಕಾದರೆ..

ನಾಗುವಿನ "ಹಾಡು ಮತ್ತು "ಚಪಾತಿ"

ಓದಿ... )

Monday, January 19, 2009

" ರಾಜಿ."..ಬಲು ಸುಂದರ ಹುಡುಗಿ....!!

ಪರೀಕ್ಷೆಗೆ ಇನ್ನೂ ಕೇವಲ ಒಂದು ತಿಂಗಳು ಬಾಕಿ....

ಇದ್ದಕ್ಕಿದ್ದಂತೆ ಹುಡುಗರೆಲ್ಲ ಗಂಭೀರರಾಗಿಬಿಟ್ಟಿದ್ದರು...

ನಾನು ಮತ್ತು ಉಮಾಪತಿ ಸಿದ್ಧಾಪುರದ...
"ಪದ್ಮನಾಭ ಭಟ್ಟರಮನೆಯ " ಮಹಡಿಯಲ್ಲಿ ರೂಮ್ ಮಾಡಿದ್ದೇವು....

ಅಲ್ಲಿ ಇನ್ನೂ ನಾಲ್ಕಾರು ರೂಮುಗಳಿದ್ದವು....


ಉಮಾಪತಿ ಏನೋ ಟೆನ್ಷನ್ ನಲ್ಲಿದ್ದ.....

ಸುಮ್ಮನಿರುವ, ನಾಚಿಕೆ ಸ್ವಭಾವದ ವ್ಯಕ್ತಿ...

ಏನನನ್ನೂ ಮನಸ್ಸು ಬಿಚ್ಚಿ ಹೇಳಲಾರ...

ನಾನೇ ಕೆದಕಿ , ಕೆದಕಿ ಕೇಳಿದರೆ ಹೇಳುತ್ತಿದ್ದ...

ತುಂಬ ಒಳ್ಳೆಯ.... ಸಾಧು ಮನುಷ್ಯ....

ಆದರೆ ಇಂದು ಅವನೇ ಮಾತನಾಡುವ ಉತ್ಸುಕತೆ ತೋರುತ್ತಿದ್ದ....

" ಪ್ರಕಾಶು.... ಒಂದು ವಿಷಯ ನಿನ್ನ ಹತ್ರ ಮಾತಾಡಬೇಕು...

ಯಾರಿಗೂ ಹೇಳಬಾರದು.. ನಗಬಾರದು...!!..."

ಕಂಡಿಷನ್ ಇಡುತ್ತಲೇ ಶುರು ಮಾಡಿದ...

" ಉಮಿ... ನೀನು ಹೇಳು ಮೊದಲು.....
ನನ್ನಿಂದ ಆದ ಸಹಾಯ ಮಾಡುತ್ತೇನೆ..
ಹಣದ ವಿಷಯ ಬಿಟ್ಟು"

ಎಂದೆ...

ಮತ್ತೇನಿಲ್ಲ.. ಮತ್ತೇನಿಲ್ಲ..ಅದು ಹೇಗೊ ಹೇಳುವದು...?."

ಮುಂದೆ ಹೋಗುತ್ತಲೇ ಇಲ್ಲ ಅವನ ಮಾತು..

" ಲೋ.. ಉಮಿ.. ನಿನಗೆ ಹೊತ್ತು ಹೋಗದಿದ್ದರೆ...
ಹೊರಗಡೆ ತೆಂಗಿನಕಾಯಿತಲೆ ಇದ್ದಾನೆ ಅವನ ಹತ್ರ ಹೋಗು..
ಸುಮ್ಮನೆ ನನ್ನ ಟೈಮ್ ವೇಸ್ಟ್ ಮಾಡಬೇಡ್ವೊ.. ಗುರುವೆ.."
ಅಂದೆ


" ಅದು ಏನಿಲ್ಲ.....

..ನೀನು... ಯಾರಿಗೂ ಹೇಳಬಾರದು ಕಣಪ್ಪಾ.."


" ಲೋ..... ಹೇಳೊ ಮೊದ್ಲು...!"

" ನೋಡು .... ನಗಬಾರದು... ಅದು...

ಅದೂ ....ನಾನು...


" ಮೊಗೆಕಾಯಿ " ಲವ್ವ್ ಮಾಡ್ತಾ ಇದ್ದೀನಿ...!! ??"

ಅಂದ...

" ಮೊಗೆಕಾಯಿ... !! "

ಇದು ನಾಗು ಒಂದು " ಹುಡುಗಿಗೆ " ಇಟ್ಟ ಹೆಸರು...!

ನನಗೆ ಎಚ್ಚರ ತಪ್ಪಿ ಬೀಳುವದೊಂದು ಬಾಕಿ...!

ಅವಳು 'ಮಾಧುರಿ" ಥರ ಚಂದವಾಗಿ ಇದ್ದ ಹುಡುಗಿ....!

ಈ .. ಉಮಾಪತಿಯ... ಲವ್ವಾ..?

ನಾವೆಲ್ಲ... ಇವನಿಗೇ " ಮುರಾರ್ಜಿ ದೇಸಾಯಿ" ಅನ್ನುತ್ತಿದ್ದೇವು...

ಕಪ್ಪಗೆ.. ದಪ್ಪ ತುಟಿ.....

ಬೆನ್ನು ಆಗಲೇ ಬಾಗಿತ್ತು..

ದಪ್ಪನೆಯ.. ಸೋಡಾ ಗ್ಲಾಸ್ ಕೂಡ.. ಬಂದಿತ್ತು...


"ಲೋ.. ಆರಾಮಿದ್ದೀಯೇನೋ..?

ಆ ಸುಂದರ.. ಮೊಗೆಕಾಯಿ ಎಲ್ಲಿ..?

ನೀನೆಲ್ಲಿ...? ಇದು ಆಗೋ ಹೋಗೊ ಮಾತಲ್ಲ...

ಆಗೋ ಕೆಲ್ಸ ಮಾಡು..."

ನನಗೆ ಕೋಪಾನೂ ಬಂದಿತ್ತು...

" ನಂಗೊತ್ತು.. ಪ್ರಕಾಶು...?

ಏನು ಮಾಡಲಿ... ನನಗೆ .".ಲವ್ವು .." ..ಆಗಿಬಿಟ್ಟಿದೆ...!..."


" ನಿನ್ ತಲೆ.... ಕನ್ನಡಿಯಲ್ಲಿ ಮುಖಾ ನೋಡಿದೀಯಾ...?

ಅವಳೆಷ್ಟು ಚಂದ .. ಇದ್ದಾಳೆ..?.!!..

ನಿನ್ನನ್ನು ಒಪ್ತಾಳೇನೋ...?"


" ನನ್ನ ಸಮಸ್ಯೆ ಅದಲ್ಲೋ.... ಪ್ರಕಾಶು....!

ನನಗೆ... ಪರೀಕ್ಷೆಗೆ... ಓದಲು ಆಗ್ತಾ ಇಲ್ಲ..!

ಪುಸ್ತಕ... ತೆರೆದರೆ...ಅವಳ ಮುಖಾನೆ ಎದುರಿಗೆ ಬರ್ತದೆ....! "



ಉಮಾಪತಿ ಧ್ವನಿಯಲ್ಲಿ ಒಂದು ಥರ ಕಂಪನ ಇತ್ತು...

ಬಹಳ ಸೀರಿಯಸ್ ಆಗಿ ಹೇಳ್ತಿದ್ದ....

" ಪ್ರಕಾಶು.. ನೀನೆ ಸಹಾಯ ಮಾಡೊ...

ಪುಸ್ತಕ ಹಿಡಿದಾಗಲೆಲ್ಲ ಅವಳ ಮುಖಾನೆ ಕಣ್ಣಿಗೆ ಬರುತ್ತದೆ...

ಮಲಗಿದಾಗಲೂ ಅವಳೇ.... ನೆನಪಿಗೆ... ಬರ್ತಾಳೆ....!

ಅವಳು ನಕ್ಕಿದಂಗೇ ಕಾಣ್ತದೆ..!

ನಾನು ಎಲ್ಲಿ ಹೋದ್ರು.. ಅವಳು ಮುಖ ಎದುರಿಗೆ ಬರ್ತದೆ...!

ದೇವರ ಪೂಜೆ ಮಾಡುವಾಗಲೂ...

ಅವಳದೇ ನೆನಪು... ಮಾರಾಯಾ..!!

ನಾನು ಪಾಸ್ ಆಗುವದು ಡೌಟ್ ಕಣೊ....

ನೀನೆ ಏನಾದರು ಸಹಾಯ ಮಾಡೋ... ಪ್ಲೀಸ್..."

ಉಮಾಪತಿ ಗೋಗರೆದ..

ಎಲಾ ಇವನಾ..!

ನನಗೂ ಏನು ಮಾಡಬೇಕೆಂದು ಗೊತ್ತಾಗಲಿಲ್ಲ...

ಈ ಉಮಾಪತಿ... ಬಹಳ... ಮುಗ್ಧ.....

ಸಿನೇಮಾ ನೋಡಿ ಹೀಗಾಗಿ ಬಿಟ್ಟಿದೆ ಅನ್ನಿಸಿತು...

ಇವನ ಸಮಸ್ಯೆಗೆ "ನಾಗೂ " ನೇ ಪರಿಹಾರ ಕೊಡಬಲ್ಲ ಅನ್ನಿಸಿತು...

"ನಾಗೂ ಬಳಿ ಹೆಳ್ಕೊ ಮಾರಾಯಾ.. ಏನಾದ್ರೂ ಮಾಡ್ತಾನೆ..."

ನಾಗು ಏನೆ ಸಮಸ್ಯೆ ಬಂದ್ರೂ ಪರಿಹಾರ ಮಾಡ್ತಿದ್ದ...

" ಅವನ ಬಾಯಿ ಬೊಂಬಾಯಿ ಮಾರಾಯಾ.. !

ಟಿವಿ ಬ್ರೇಕಿಂಗ್ ನ್ಯೂಸ್ ಥರ .. ಅವನೆಲ್ಲಿ ಸುಮ್ನಿರ್ತಾನೋ..?

ಎಲ್ಲರಿಗೂ ಡಂಗುರ.. ಸಾರಿ ಬಿಡ್ತಾನೆ..ಮಾರಾಯಾ..!"

ಉಮಾಪತಿಯ ಆತಂಕ ಸಹಜವಾಗಿತ್ತು...

ನಾಗು ಸ್ವಲ್ಪ ಹಾಗೇನೇ...

" ನೀನು ಸುಮ್ನಿರು ನಾನು ಮಾತಾಡ್ತಿನಿ...."

ಮರುದಿವಸ ನಾಗು ನಮ್ಮ ರೂಮ್ ಗೆ ಬಂದಾಗ.. ವಿಷಯ ಎಲ್ಲ ಹೇಳಿದೆ...


" ಲೊ ಯಾಕೊ ಹಾಳಾಗ್ತೀರಾ...!

ಈ...ಹುಡ್ಗಿಯರ ಹಿಂದೆ ಬಿದ್ದು....!

ಮನೆಯಲ್ಲಿ ಓದು ಅಂತ ಕಾಲೇಜಿಗೆ ಕಳಿಸಿದ್ರೆ ಇದೇನಾ ಮಾಡೋದು...?

ಸರಿ... ಪರಿಹಾರ ಇದೆ...

ನಾನು ಕೊಡ್ತೀನಿ...

ಪಕ್ಕದ ರೂಮಿನ ತೆಂಗಿನಕಾಯಿ ತಲೇನೂ ಕರ್ಕೊಂಡು ಬಾ....."


"ಲೇ ನಾಗೂ.. ಇಲ್ಲಿ ತೆಂಗಿನಕಾಯಿ ತಲೆ ಯಾಕೊ..?

ಇದನ್ನು.. ಗುಟ್ಟಾಗಿ ಇಡಬೇಕು ಮಾರಾಯಾ..!"


" ನೀನು ಕರಿ ಮೊದ್ಲು... ನಾನು ಆಮೇಲೆ ಎಲ್ಲ ಹೇಳ್ತೀನಿ..."

ಉಮಾಪತಿ ಆತಂಕದಿಂದಲೇ.. .. ಹೋಗಿ ಸೀತಾರಾಮ (ತೆಂಗಿನಕಾಯಿತಲೆ) ಕರೆದು ಕೋಂಡು ಬಂದ...

"ನೋಡ್ರಪಾ..ಪಾಪ... ಆ.." ಮೊಗೆಕಾಯಿ."....!.

ಒಬ್ರು ಲವ್ ಮಾಡಿದ್ರೆ ಸಾಕಿತ್ತು ಕಣ್ರೊ....!

ನಿವಿಬ್ರೂ.... ಅವಳನ್ನೇ...ಲವ್.. ಮಾಡ್ತಾ ಇದ್ದೀರಲ್ಲೋ...!

ಇನ್ನೇಷ್ಟು ಜನ ಮಾಡ್ತಾ ಇದ್ದಾರೋ... !

ನೋಡ್ರಪಾ... ಸೀತಾರಾಮು.... ಉಮಾಪತಿ..!

ನಿಮ್ಮ ಸಮಸ್ಯೆ ಪರಿಹಾರ ನಾನು.... ಮಾಡಿಕೊಡ್ತೇನೆ.....

ಆದ್ರೆ ಒಂದು ಕಂಡೀಷನ್ ಇದೆ..."


ತೆಂಗಿನಕಾಯಿತಲೆಗೆ ಕೋಪ ಬಂತು...


"ಈ ಉಮಾಪತಿ ಸಂಗಡ ನನ್ನ ಇಡಬೇಡ್ರೋ...

ನನ್ನದು ಪ್ಯುವರ್ ಲವ್...!

ಹ್ರದಯದಿಂದ ಲವ್ ಮಾಡ್ತಾ ಇದೀನಿ....!

ಆದ್ರೆ ಪರಿಕ್ಷೆ ಹತ್ರ ಬಂತಲ್ಲ..ಓದ್ಲಿಕ್ಕೆ ಆಗ್ತಾ ಇಲ್ಲ...!

ಪರೀಕ್ಷೆ ಮುಗಿದಮೇಲೆ ಅವಳಿಗೆ ಹೇಳಿ ಬಿಡ್ತಿನ್ರೊ.....!

ಇದೇ ತಲೆಯಲ್ಲಿ ಪಾಸಾಗೋದು ಕಷ್ಟ....ಮಾರಾಯ್ರಾ...!

ಏನು...ಎಂಥಾ ಕಂಡೀಷನ್ನೊ.. ಹೇಳು.."


"ನಂಗೂ.. ಪ್ರಕಾಶಂಗೂ ನಿರ್ಮಲಾ ಹೋಟ್ಲಲ್ಲಿ ನಾವು ತಿನ್ನುವಷ್ಟು ಮಸಾಲೆ ದೋಸೆ ತಿನ್ನಿಸ ಬೇಕು...

ಪ್ರತೀ ದಿನ ಮಧ್ಯಾನ್ಹದ ಮೇಲೆ ನಮಗಿಬ್ಬರಿಗೂ ....

ಲಕ್ಕಣ್ಣನ... ಅಂಗಡಿಯಲ್ಲಿ ಮಸಾಲೆ ಮಂಡಕ್ಕಿ, ಚಹ ಕುಡಿಸಬೇಕು..!

ಲಕ್ಷ್ಮೀ.. ಟಾಕೀಸ್ ನಲ್ಲಿ ಸಿನೆಮಾ ತೋರಿಸ.. ಬೇಕು...!

ಇನ್ನೊಂದು ವಿಷಯ...

ನಾನು ಹೇಳೊ ಪರಿಹಾರ ಯಾರಿಗೂ ಹೇಳಬಾರದು...!!


ಇದಕ್ಕೆಲ್ಲ... ಓಕೆ ಅಂದ್ರೆ ಮುಂದಿನ ಮಾತು ಅಡುವಾ..!"


ಇಬ್ಬರೂ ಕಂಜೂಸ್ ನನ್ನ್ ಮಕ್ಕಳು...

ಆದರೂ....ಒಪ್ಪಿದರು...ಪರೀಕ್ಷೆ ಪಾಸಾಗ ಬೇಕಲ್ಲ....!

ಮಧ್ಯಾನ್ಹದ ಮೇಲೆ ನಿರ್ಮಲ ಹೋಟೆಲ್ಲಿಗೆ ಹೋಗಿ..

ಗಡದ್ದಾಗಿ ತಿಂದು....

ಸಿನೆಮಾನು ನೋಡಿ....

"ಐನ್ ಕೈ" ಕೂಲ್ ಡ್ರಿಂಕ್ಸ್ ನಲ್ಲಿ ಜ್ಯೂಸ್ ಕುಡಿದೆವು ...

ಇಬ್ಬರಿಗೂ ನಮ್ಮ ಬಿಲ್ಲ ನೋಡಿ ಹೊಟ್ಟೆ ಉರುದು ಹೋಯಿತು....


" ನಾಗೂ.... ಒಂದುವೇಳೆ ನಿನ್ನತ್ರೆ ....

ಪರಿಹಾರ ಕೊಡಲಿಕ್ಕೆ ಆಗದೇ ಇದ್ರೆ... ?? !... "


ಈ... ಉಮಾಪತಿಯೇ... ಹಾಗೆ... ...

ಅವನಿಗೆ ಅನುಮಾನ ಬರುತ್ತದೆ.....!

ಆದರೆ ಕೆಲಸ ಮುಗಿಯುವ ಹೊತ್ತಿನಲ್ಲಿ.......!


ನಾಗು ಸುಮ್ಮನೆ ನಕ್ಕ.....

"ನಿನ್ನ ಸಮಸ್ಯೆ... ನನ್ನದು ಅಂದು ಕೊಳ್ತೀನಿ...ಕಣ್ರೊ...!

ನನ್ನ ಮೇಲೆ ನಂಬಿಗೆ ಇಡಿ.. ಸಾಕು..!!..!..."

ಬಾಯಿ ಮುಚ್ಚಿಸಿದ...

ನನಗೂ ಸಹ ಸಂಶಯ ಬಂತು...

ಈ ನಾಗು ಏನು ಮಾಡಬಹುದು....?


ಆದರೆ ನಂಬಿಕಸ್ಥ .....ಹೇಳಿದ ಮೇಲೆ ಮಾಡಿ ತೋರಿಸ್ತಾನೆ...!

ಎಂದು ಸುಮ್ಮನಾದೆ...

ರೂಮಿಗೆ ಮರಳಿದೆವು....

ಕತ್ತಲೆಯಾಗಿತ್ತು....

" ಲೋ... ತೆಂಗಿನಕಾಯಿ... ನನ್ನ ಸಂಗಡ ಬಾ..

ಸೀತಾರಾಮನಿಗೆ ಆತಂಕ...

"ಎಲ್ಲಿಗೋ..."

ಸುಮ್ನೆ ಬಾರೊ.."

ಆಮೇಲೆ ಉಮಾಪತಿಗೆ ಹೇಳಿದ..

" ಮೊದಲು ಈ ತೆಂಗಿನಕಾಯಿಗೆ ಪರಿಹಾರ ಕೊಡ್ತೇನೆ..

ಆಮೇಲೆ ನಿನಗೆ....

ಈತ ಬಹಳ ಡೀಪಾಗಿ ಹಚ್ಕೊ ಬಿಟ್ಟಿದಾನೆ..

ಇವಂದೇ ಕಷ್ಟ...

ಉಮಾಪತಿದು ಕಷ್ಟವೇನಿಲ್ಲ..

ಪ್ರಕಾಶು ನೀನು ಇಲ್ಲೇ ಇರು.."


ಒಳ್ಳೆ ಡಾಕ್ಟರ ಥರ ಮಾತಾಡಿ....

ಸೀತಾರಾಮನನ್ನು ಕರೆದು ಕೋಡು ಭಟ್ಟರ ಮನೆಯ ಹಿಂದೆ ಬೆಟ್ಟಕ್ಕೆ ಹೋದ....

ಅಮವಾಸ್ಯೆ ಬೇರೆ...!

ಈ ಕತ್ತಲಲ್ಲಿ ಸೀತಾರಾಮನಿಗೆ ಏನು ಮಾಡ್ತಾನೆ...?

ನನ್ನ ತಲೆಯಲ್ಲ ಧಿಮ್ಮ್ ಎಂದಿತು....

ನಂಗೆ ಗೊತ್ತಿಲ್ದೇ ಇರೋದು ಇವ ಏನು ಮಾಡ್ತಾನೆ...?

ಹದಿನೈದು ನಿಮಿಷ.. ಆಯಿತು....

ಅರ್ಧ ತಾಸು ಆಯಿತು...

ಬರಲಿಲ್ಲ.....


ಒಂದು ತಾಸಾಯಿತು......

ಸೀತಾರಾಮ ಓಡೋಡಿ ಬಂದ...

ತಲೆಯನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದ...

ಏನೂ ಮಾತಾಡೋ ಸ್ಥಿತಿಯಲ್ಲಿರಲಿಲ್ಲ.....

"ಏನೋ ಆಯಿತು...!!?? ?
ಯಾಕೋ ಒಂಥರಾ ಇದ್ದೀಯಾ..?

ನಾಗು ಎಲ್ಲೋ..?"

ನಾವು ಗಾಭರಿಯಿಂದ... ಕೇಳಿದೇವು...

ಸೀತಾರಾಮ ಲಗುಬಗೆಯಿಂದ ರೂಮಿನ ಬಾಗಿಲು ಹಾಕಿಕೋಂಡ....!

" ನೋಡ್ರೊ ನನ್ನ ಏನೂ ಕೇಳ್ಬೇಡಿ...

ನೀವಿಬ್ಬರೂ ಬೆಟ್ಟದ ಮೇಲೆ ಹೋಗಿ.....

ನಾಗೂ ಬರ್ಲಿಕ್ಕೆ ಹೇಳಿದಾನೆ..."

ರೂಮಿನ ಒಳಗಿಂದಲೆ ಹೇಳಿದ...

ಉಮಾಪತಿಗೆ ಆತಂಕ...!

" ಯಾಕೊ ಏನು ಪರಿಹಾರ ಕೊಟ್ಟಿದ್ದಾನೆ..?

ಏನಾದರೂ .. ಎಡವಟ್ಟು ಆಯಿತೇನೋ...? .?"

ಜೋರಾಗಿ ಕೂಗಿ ಕೇಳಿದ...


" ಆ ನಾಗೂನೊ....!

ಅವನ ಐಡಿಯಾನೊ..!

ಅದೆಂಥಾ.... ಪರಿಹಾರನೊ..!

ಗೊತ್ತಾಗ್ತಾಇಲ್ಲ.. !

ಆದ್ರೆ ಆ ಹುಡುಗಿನ ತಲೆಯಿಂದ ತೆಗಿದಿದ್ದಾನೆ...!

ಹೊಗ್ರೊ... ನನಗೆ ಓದ್ಕೊ ಬೇಕು..."

ಸೀತಾರಾಮ... ಮತ್ತೆ... ಕೂಗಿ ಹೇಳಿದ...

" ಆ ಮೊಗೆಕಾಯಿ ....

ನನಗೆ ಇಂದಿನಿಂದ .". ಅತ್ತಿಗೆ.." ಕಣ್ರೊ...

ನನಗಂತೂ... ಆ ಹುಡುಗಿ ಬೇಡವೆ ಬೇಡ ಕಣ್ರೋ..!!.!..."

ಒಂಥರಾ ಮಾತಾಡಿದ...

ನಮಗೆ ಆಶ್ಚರ್ಯವೋ.. ಆಶ್ಚರ್ಯ...!!

ನಮಗೆ ಇನ್ನೂ ಒಗಟಾಗಿಯೇ ಉಳಿಯಿತು...

ಉಮಾಪತಿಗೆ ಖುಷಿಯಾಯಿತು..

ಅವನು " ಅತ್ತಿಗೆ " ಅಂದಿದ್ದಕ್ಕೊ ...

ಅಥವಾ ನಾಗು ಪರಿಹಾರ ಕೊಟ್ಟಿದ್ದಕ್ಕೊ ..

ಗೊತ್ತಾಗಲಿಲ್ಲ....

ನಾನು ಉಮಾಪತಿ ಲಗುಬಗೆಯಿಂದ ಬೆಟ್ಟ ಹತ್ತಿ ಬಂದೆವು ..

ನಾಗು ಒಂದು ಮರದ ಕೆಳಗೆ ಕುಳಿತು ಕೋಂಡಿದ್ದ...

" ಉಮಾಪತಿ... ಇಲ್ಲಿ ಬಾ... ಕುತ್ಗೊ..."

ನಾಗು ಅವನನ್ನು ತನ್ನ ಬಳಿ ಕುಳ್ಳಿರಿಸಿ ಕೊಂಡ...

" ನೋಡು ನಾನು ಹೇಳುವದನ್ನು ನಿಧಾನವಾಗಿ ಕೇಳ ಬೇಕು ..

... ಕಣ್ಣು ಮುಚ್ಚಿಕೊಂಡು...

ಏಕಾಗ್ರತೆಯಿಂದ.. ಕೇಳ ಬೇಕು......"


ಉಮಾಪತಿ ಹಾಗೆ ಮಾಡಿದ...

ಸುತ್ತಲೂ ಕತ್ತಲು...

ಅಗಾಧ ಮೌನ....

ನಾಗುವಿನ ಮಾತೊಂದೆ ಅಲ್ಲಿ... ಶಬ್ಧ....

ನಾಗು ಬಹಳ ಗಂಭಿರವಾದ ಧ್ವನಿಯಲ್ಲಿ ..ಹೇಳ ತೊಡಗಿದ....

" ಕಣ್ಮುಚ್ಚು... ಉಮಾಪತಿ....

ನಾನು ಹೇಳುವದನ್ನೆ ಕೇಳು...

ಆ ಮೊಗೆಕಾಯಿಯ ಮುಖ ನೆನಪು ಮಾಡಿಕೊ.....

ಅವಳು ಬಾಯಿ ತೆಗೆಯುತ್ತಿದ್ದಾಳೆ...ಅಂದು ಕೊ....

ಬಾಯೆಲ್ಲ... ಗಲೀಜು...

ಹಲ್ಲಿನ ಒಸಡು.. ಹುಳಿತ ಹಲ್ಲು...

ಬಾಯಿ ನಾರಿ ಗಬ್ಬು ವಾಸನೆ... ..

ಅವಳ ಮೂಗು... ನೆಗಡಿಯಾಗಿದೆ...

ಗೊಣ್ಣೆ... ಮೂಗಿನಲ್ಲಿದೆ....

ಆ ಗೊಣ್ಣೆ...ಅರ್ಧ ಹೊರಕ್ಕೆ ಬಂದಿದೆ...

ಗಟ್ಟಿಯಾಗಿ.. ಹಳದಿ ಕಲರ್ ಆಗಿದೆ...

ಅದು ಮೇಲಿನ ತುಟಿಯ ಹತ್ತಿರ ಬಂದಿದೆ....

ಸುರಕ್ಕನೆ ಒಳ್ಗೆ ಎಳೆದು ಕೋಂಡಿದ್ದಾಳೆ...

ಗೊಣ್ಣೆ ಮೂಗಿನ ಸುತ್ತಲೂ.. ತಾಗಿದೆ.....

ಆ... ಸಿಂಬಳ...ಆ ಜೋಲುತ್ತಿರುವ.. ಲೋಳೆ....

ಗಲೀಜಾಗಿದೆ.... ಆ ಆಮೊಗೆಕಾಯಿ.ಮುಖ... .."

ಮತ್ತೆ ಅವಳ.. ಕೈ ಕಾಲ ಮೇಲೆ ಕಜ್ಜಿಯಾಗಿದೆ....

ಹುಳು ಕಜ್ಜಿ ರಸಿಕೆಯಾಗಿದೆ.....

ಕೀವು ಎಲ್ಲ ಮೈಯಲ್ಲಿ ತುರುಕೆ ಆಗುತ್ತಿದೆ...

ಮೈ ತುರಿಸಿ ಕೊಳ್ಳುತ್ತಿದ್ದಾಳೆ....

ಈಗ ಅವಳು ಟೊಯ್ಲೆಟ್ ನಲ್ಲಿದ್ದಾಳೆ....

ಕಜ್ಜಿ...ಯಾಗಿದೆ..

ಅದೇ ಕೀವು ,,,ರಸಿಗೆ.......!!

ಒಂದುಸಾರಿ ಎಲ್ಲ ....

ನೆನಪಿಸಿಕೊ.....

ಅಮಾಪತಿ....

ಅವಳ.... ಈ.. ಸ್ಥಿತಿಯಾ....!!..."

ನಾಗು ಇನ್ನು ಹೇಳುವವನಿದ್ದ......


ಉಮಾಪತಿ...ಹಾರಿ ಜಿಗಿದ....!!

ತಲೆಯನ್ನು ಗಟ್ಟಿಯಾಗಿ .. ಎರಡೂ...ಕೈಯಿಂದ..ಹಿಡಿದು ಕೊಂಡಿದ್ದ...!


" ಸಾಕೊ... ಮಾರಾಯಾ... ಸಾಕು.....!

ನಿಲ್ಲಿಸು... ಮಾರಾಯಾ..!

ನನ್ನಿಂದ ತಡೆದು ಕೊಳ್ಳಲಾಗುತ್ತಿಲ್ಲ...!!..."

ಎನ್ನುತ್ತ ಉಮಾಪತಿ....

ಎದ್ದೂ ಬಿದ್ದೂ ಓಡಿದ... ರೂಮಿನ ಕಡೆಗೆ........


ನಾಗು... ನನ್ನ ಕಡೆ...ನೋಡಿ

"ನಿನಗೆ " ವಿಜಯಾ...".... ತೊಂದರೆ ಇದೆಯೇನೋ..?...!.."

ಕೇಳಿದ...


" ಇಲ್ಲೊ ....ಪುಣ್ಯಾತ್ಮಾ...!

ಛೇ... ..ಎಂಥಾ ಮನುಷ್ಯನೊ... ನೀನು...?

ಉಮಾಪತಿಗೆ ಐದು ನಿಮಿಷ...ಮಾತಾಡಿದೆ...!

ಓಡಿ ಹೋಗಿಬಿಟ್ಟ...!

ಆ ಸಿತಾರಾಮನಿಗೆ ಒಂದು .. ತಾಸು..ಕೊರಿದ್ದಿಯಾ....!

ಏನಾಗಿರ ಬಹುದು ಅವನಸ್ಥಿತಿ..?... "



ನಾಗು ಹತ್ತಿರ ಬಂದು ನನ್ನ ಕೈಯನ್ನು ಹಿಡಿದು ಕೊಂಡು....

"ಲೋ ಪ್ರಕಾಶು... ಆ ... " ಮೊಗೆಕಾಯಿ " ನಾನು ಪ್ರೀತಿಸುತ್ತೇನೆ ಕಣೊ...

ನನಗೆ ಅವಳು ಬೇಕು ಕಣೊ..!!

ನೀನು ಸಹಾಯ ಮಾಡೊ.!!..."

ನನ್ನ ದುಂಬಾಲು ಬಿದ್ದ...!


.. ಆ..ಮೊಗೆಕಾಯಿಯ.. .. ಹೆಸರು... ".. ರಾಜಿ.."..!!..

ಬೊಗಸೆ ಕಣ್ಣಿನ...

ಬಲು ಸುಂದರ ಹುಡುಗಿ....!


ನಾಗೂ..ದೂ ಅವಳದೂ... ದೊಡ್ಡ ಕಥೆಯೇ..ಇದೆ...!!

ಪಾಪ......!!

ಆ ಸಿತಾರಾಮಾ, ಉಮಾಪತಿ..

ಇಬ್ಬರೂ....

ಮತ್ತೆ ಆ " ಮೊಗೆಕಾಯಿಯ.. " ಹೆಸರು ಹೇಳಲಿಲ್ಲ...!!


( ಈ .. ಮೊದಲು ಬರೆದ...

ನಾಗುವಿನ ಹಾಡು ಮತ್ತು ಚಪಾತಿ..
http://ittigecement.blogspot.com/2008/12/blog-post_23.html
ನನಗೊಂhttp://ittigecement.blogspot.com/2008/11/blog-post_07.htmlದು ಮಹದಾಸೆ..."

ನಗುವವರ ಮುಂದೆ ಎಡವಿ ಬೀಳ ಬೇಡ...
http://ittigecement.blogspot.com/2008/12/blog-post_14.html

ಓದಿದರೆ "ನಾಗು " ಪರಿಚಯ ಆಗುತ್ತದೆ...)

Friday, January 16, 2009

ಪ್ರಕ್ರತಿ... ಬಲು ಸುಂದರ.....!!


ನನ್ನೂರು ಮಲೆನಾಡಿನ ತಪ್ಪಲು...

ದಟ್ಟವಾದ ಬೆಟ್ಟ, ಗಿಡ, ಮರಗಳ ಮಧ್ಯೆ ಕಳೆದ ಬಾಲ್ಯ...

ಸಣ್ಣವನಿದ್ದಾಗ ಪಾಟಿ ಚೀಲ...

ಹೆಗಲಿಗೇರಿಸಿ
... ಶಾಲೆಗೆ ಹೋಗುವಾಗ..

ಬಣ್ಣ.... ಬಣ್ಣದ ಹಕ್ಕಿ .....

ನೋಡಿ
.... ಸೋಜಿಗ ನಾಗುತ್ತಿದ್ದೆ.....!!

ಅದರಂತೆ ಕೂಗಲು ..... ಪ್ರಯತ್ನಿಸುತ್ತಿದ್ದೆ...!!

ಅದರಂತೆ ನನಗೂ ಹಾರಲು ಬಂದಿದ್ದರೇ.....!! ? ..

ಗಿಡಗಳ ಮೇಲೆ ಕುಳಿತು.. ಹಣ್ಣುಗಳನ್ನು ತಿನ್ನ ಬಹುದಲ್ಲ..!

ಅವುಗಳನ್ನು ನೋಡಿ ಅಸೂಯೆ ಕೂಡ ಆಗುತ್ತಿತ್ತು...!


ಶಾಲೆಯ ದಾರಿಯಲ್ಲಿ ದೊಡ್ಡದಾದ ಬಸರಿ ಮರ...!

ಬೆಟ್ಟದ ಹಣ್ಣುಗಳು...!

ಅವುಗಳ ರುಚಿ...!! ನೆಲ್ಲಿಕಾಯಿ...

ಮಾವಿನ ಹಣ್ಣು..ಸಳ್ಳೆ ಹಣ್ಣು....

ನೆರಳ
ಹಣ್ಣು.. ನುರುಕಲು ಹಣ್ಣು...

ಹಲಿಗೆ ಹಣ್ಣು... ರಂಜಲೇ ಹಣ್ಣು....

ಒಂದೇ.. ಎರಡೇ...?

ಒಹ್......!!

ಅದೆಲ್ಲಾ... ಈಗೊಂದು... ಕನಸಂತೆ.. ಕಾಣುತ್ತದೆ...!

ಪರೀಕ್ಷೆಯ ಸಮಯದಲ್ಲಿ ಮನೆಯ ಹಿಂದಿನ .....

ಬೆಟ್ಟದ
.... ಹಲಸಿನ ...ಮರದ ಕೆಳಗೆ ಓದಲು ಹೋಗುತ್ತಿದ್ದೆವು..

ಅಲ್ಲಿ ಶಾಂತ ವಾತಾವರಣ ಅನ್ನುವದೇ ಇಲ್ಲ... !

ಹಕ್ಕಿಗಳ ಚಿಲಿಪಿಲಿ... ಸದ್ದು...!!

ಒಣಗಿದ ಎಲೆಗಳ ಚರ ಚರ ಸದ್ದು...!!

ಅದೆಲ್ಲ ... ಒಂದು ರೀತಿಯ ಸಂಗೀತ...!!

ಅಲ್ಲಿಯ ಮೌನವೂ ಬಲು ಹಿತವಾಗಿರುತ್ತದೆ......!!


ಕೆಲವು ದಿನಗಳ ಹಿಂದೆ ಸಿಂಗಾಪುರ ಹೋಗಿ ಬಂದೆ...

ಸಿಂಗಾಪುರದ ಪಕ್ಷಿಧಾಮದಲ್ಲಿ ಕಂಡ ಕೆಲವು ಹಕ್ಕಿಗಳು ಇವು...

ಅಲ್ಲಿ ದಿನ ಪೂರ್ತಿ ಓಡಾಡಿದೆ...

ಮನದಣಿಯೆ.. ಹಕ್ಕಿಗಳನ್ನು ನೋಡಿದೆ...

ಅದು ಸ್ವರ್ಗ...!

ಪ್ರಾಕ್ರತಿಕವಾಗಿ ಅಲ್ಲಿ ಏನು ಇಲ್ಲ...!

ಎಲ್ಲ ಮಾನವ ನಿರ್ಮಿತ.... !

ಅವರ ಕೆಲಸ, ದಕ್ಷತೆ ನೋಡಿ ಮೂಕನಾದೆ....

ಅಲ್ಲಿಯ ವ್ಯವಸ್ಥೆ..,

ಇಚ್ಚಾ ಶಕ್ತಿಗೆ ತಲೆ ದೂಗಿದೆ....!


ಇದೆಲ್ಲ ನೋಡಿದ ಮೇಲೆ ನನ್ನ ಮಗ ಕೇಳಿದ...

"ಅಪ್ಪಾ... ಇವೆಲ್ಲ ನಮ್ಮಲ್ಲಿ ಇಲ್ಲವಾ...?

ಇಲ್ಲಿರುವ ಎಲ್ಲ ಹಕ್ಕಿಗಳ ಹೆಸರು ನಿನಗೆ ಗೊತ್ತಲ್ಲ...!

ಅಲ್ಲಿ ನನಗೇಕೆ ತೋರಿಸಿಲ್ಲ...?...? "


ನಮ್ಮುಉರಲ್ಲಿ ನಾನು ಏನು ತೋರಿಸಲಿ... ಇವನಿಗೆ...?

ಬೋಳು ಬೆಟ್ಟದಲ್ಲಿ...! ಮರಗಳೇ ಇಲ್ಲದ ಕಾಡಿನಲ್ಲಿ...!


ನನ್ನೂರು ಮಲೆನಾಡು...

ಈಗ ಹೆಸರಿಗೆ... ಮಾತ್ರ....!

ಹಳೆಯ ಸೊಬಗು ಈಗ... ನಶಿಸುತ್ತಿದೆ....

ಮಳೆ
ಕಡಿಮೆಯಾಗುತ್ತಿದೆ...

ಮೊದಲಿನ ಹಾಗೆ ಹಗಲು ರಾತ್ರಿ.......

ಒಂದೇ ಸವನೆ ಸುರಿಯುವ ಮಳೆ ಈಗಿಲ್ಲ....!

ಮುಂದಿನ ಪೀಳಿಗೆಗೆ... ನಾವು ಏನು ಕೊಡುತ್ತಿದ್ದೇವೆ...?

ಏನು ಉಳಿಸುತ್ತಿದ್ದೇವೆ...?

ಭವಿಷ್ಯ... ಭಯಾನಕವಾಗಿದೆ...!

ಊಹಿಸಲು ಹೆದರಿಕೆಯಾಗುತ್ತದೆ...!

ಚಂದದ ಪ್ರಕ್ರತಿಯ ಮೇಲೆ ಅತ್ಯಾಚಾರ,, ಆಕ್ರಮಣ...

ಬಹಳ...
ದುಃಖ ತರಿಸುತ್ತದೆ...

ಹಾಗೆಯೇ ಬೇಂದ್ರೆಯವರ "ಭ್ರಂಗದಾ ಬೆನ್ನೇರಿ ಬಂತು... ಕಲ್ಪನಾ.. ವಿಲಾಸಾ...."
ಹಾಡು ಕೂಡಾ ನೆನಪಾಯಿತು....

ಪ್ರಕ್ರತಿಯಂಥಹ ಕಲಾಕಾರ ಬೇರೊಂದಿಲ್ಲಾ...

ನಾವು ನಮ್ಮ ಮುಂದಿನ ಪೀಳಿಗೆಗೆ ಏನು ಕೊಡುತ್ತಿದ್ದೇವೆ..?

ಕಲ್ಪನೆಗೂ ನಿಲುಕದ್ದು...
ವಿಚಾರ ಮಾಡಿದರೆ ಭಯವಾಗುತ್ತದೆ...

Tuesday, January 13, 2009

ಚಂದದ..ಮಗಳೇ...

ನನ್ನ ಚಂದದ ಮಗಳೇ...

ಪುಟ್ಟ.. ಪುಟ್ಟ..ಹೆಜ್ಜೆ ಗೆಜ್ಜೆಯ ಸದ್ದುಗಳು...

ನಿನ್ನ ಪ್ರೀತಿ.. ಪ್ರೇಮದ ತೊದಲು ಮಾತುಗಳು...

ಮುದ್ದು ಮುಖದ ಕಿರುನಗು...

ನನ್ನೆದೆಯಲ್ಲಿ ಬಿಟ್ಟು ಹೋಗುವದೇಕೆ.. ಮಗಳೇ...

ಇಲ್ಲಿ.... ಹೀಗೆಯೇ ಇರಬಾರದೇ...?



ಮುಂದೊಂದು ದಿನ..ಇನಿಯನೊಬ್ಬನ ಮಡದಿಯಾಗಿ....

ಅವನಾಸೆ... ಬೇಕುಗಳಲಿ.....

ಕಳೆದು ಹೋಗದಿರು... ಮಗಳೆ...

ಈ.. ಮುದಿ ಜೀವದ ನೆನಪು ಮರೆತು....!



ನಿನ್ನ ಸಾಧನೆಯ ಉತ್ತುಂಗದಲಿ..

ನನ್ನಾಸೆ,ಹೆಮ್ಮೆಯ ಗೆಲುವನ್ನು ಕಂಡೆ...

ನಿನ್ನ ಚಂದದ ನಗುವಿನ ಸಂಸಾರವ ನೋಡಿ...

ನಿನ್ನಗಲಿಕೆಯ..ಎದೆಯ. ಹಿಂಡುವ.. ನೋವ.. ಮರೆಯಲೆತ್ನಿಸಿದೆ...



ಮತ್ತೆ ಮುದ್ದು ಮೊಮ್ಮಗನ ಆಸೆ...

ಅವನ ನಗು ತುಂಟತನದ ಸೊಗಸು....

ಈ ಜೀವಕೆ ಮತ್ತೆ ನಕ್ಕು.. ಬದುಕುವಾಸೆ..

ನೀನೇ ತಂದೆ... ತಾಯಿಯಾಗಿ.... ಮಗಳೇ....!


ಸಂಕ್ರಮಣದ...
ಶುಭಾಶಯಗಳು...!!

ನಿಮ್ಮೆಲ್ಲ...
ಕನಸು.. ನನಸಾಗಲಿ....!!


Friday, January 9, 2009

ನಾನು ಮಾಡಿದ.. ಕೆಲ್ಸಕ್ಕೆ ..ಮರ್ಯಾದೆ.. ಬೇಡವಾ..??

" ಅಮಾಯಕ ವಿನಾಯಕ " ಪೇಪರ್ ಓದುತ್ತಿದ್ದ...

ಇದು... "ಸರಸತ್ತೆ" ಇಟ್ಟ ಹೆಸರು...

ಅವನು ಬೆಂಗಳೂರಲ್ಲಿ ಬದುಕು ಕಾಣಲು... ಬಂದಿದ್ದ..

ನಮ್ಮ ಬಾವ "ನೆಸ್ಟ್ಲೆ" ಏಜನ್ಸಿ ಕೊಡಿಸುವವನಿದ್ದ..

ಅದರ ಇಂಟರ್ವ್ಯೂ ಮರುದಿವಸ ಇತ್ತು...
ಯಾವುದೋ ಕಾರಣಕ್ಕೆ ಬ್ಯಾಂಕ್ ಗೆ ..ಬಂದಿದ್ದ ..

ನನ್ನ ಬಾವ ಬಹಳ ಸತ್ಕಾರದ ಮನುಷ್ಯ..
ಮನೆಗೆ ಸ್ನೇಹಿತರು , ನೆಂಟರು ಬಂದಷ್ಟೂ ಖುಷಿ..
ಹೊತ್ತು , ಗೊತ್ತು ಇಲ್ಲದೆ ಸಹಾಯ ಮಾಡುವದು ಅವನ ಹವ್ಯಾಸ..
ಈ ವಿನಾಯಕ ನನ್ನು ಅಂದು.. ಮನೆಗೆ ಕರೆ ತಂದಿದ್ದ...

"ಸರಸತ್ತೆ ಅಂತ.. ದೂರದ ಸಂಬಂಧ..ಹೋಗಿ ಬರೋಣ .. ಬಾ" ಎಂದು... ಒತ್ತಾಯ ಮಾಡಿದ್ದ..
ವಿನಾಯಕನಿಗೆ ಇಲ್ಲವೆನ್ನಲಾಗಲಿಲ್ಲ..
ಹೋಗಿ ಬಂದಮೇಲೆ..
ನಮ್ಮೆಲ್ಲರ..ಹಾಗೆ.. ಮರುದಿವಸ ವಿನಾಯಕನ ಸ್ಥಿತಿ...
ಶೋಚನಿಯವಾಯಿತು...
ಎಲ್ಲರ ಥರಹ...

ಬಾತ್ ರೂಮ್.. ಟೊಯ್ಲೆಟ್ ತಿರುಗಿ.. ತಿರುಗಿ..ತಿರುಗಿ..
"ಇಂಟರ್ವ್ಯೂ" ಹೋಗಲಾಗಲಿಲ್ಲ...!
ಮತ್ತೊಂದು ದಿನ ಸರಸತ್ತೆ ಬಂದಾಗ.. ಅವನಿಗೆ ಆರೋಗ್ಯ ಸರಿ ಇಲ್ಲದ ವಿಷಯ ಕೇಳಿ...

"ಪಾಪ..ಅಮಾಯಕ ವಿನಾಯಕ..!" ಅಂದು ಬಿಟ್ಟಿದ್ದಳು...

ಅದೇ ಹೆಸರು ಇವನಿಗೆ ಖಾಯಮ್ ಆಯಿತು....


ನಾವು ಒಂದು ಹಂತದ ಹನಿಮೂನ ಮುಗಿಸಿ ಅಕ್ಕನ ಮನೆಗೆ ವಾಪಸ್.. ಬಂದಿದ್ದೇವು..

"ಪ್ರಕಾಶ.. ಇವತ್ತು ಒನ್ ಡೇ ಮ್ಯಾಚ್ ಇದೆ.. ಪಾಕಿಸ್ತಾನ್, ಭಾರತ..!! " ಅಂದ... ವಿನಾಯಕ..

ನನಗೆ ಕ್ರಿಕೆಟ್ ಹುಚ್ಚು ಬಹಳ..

ಅಂದು.. ಮನೆ ತುಂಬಾ.. ನೆಂಟರು ... ಊರಿನಿಂದ ಆಯಿ.. ದೊಡ್ಡಮ್ಮ..!
ಪಿಳ್ಳೆ ಮಕ್ಕಳು.. ಗದ್ದಲವೋ..ಗದ್ದಲ...!

ಆರಾಮಾಗಿ ಮುದ್ದು ಮುಖದ ಸಂಗಡ ಲಲ್ಲೆಗರೆಯುತ್ತ ಇದ್ದು ಬಿಡೋಣಾ ಅಂದರೆ ಆಗಲ್ಲ..

ತಲೆಗೊಂದು ಮಾತಾಡಿ.. ಗದ್ದಲ ಮಾಡಿಬಿಡುತ್ತಾರೆ...
ಚಾಳಿಸುತ್ತಾರೆ...!!
ಮ್ಯಾಚ್ ನೋಡೋಣ ಅಂದರೆ ಅಕ್ಕನ ಮನೆಯಲ್ಲಿ ಕೇಬಲ್ ಇಲ್ಲ...

"ಏನು ಮಾಡೋಣವೋ.. ನೀನೆ ಹೇಳು.."
ವಿನಾಯಕನ ದುಂಭಾಲು ಬಿದ್ದೆ...

ನನ್ನ ಕ್ರಿಕೆಟ್ ಹುಚ್ಚು ಅಕ್ಕನಿಗೆ ಗೊತ್ತಿತ್ತು...

"ಸರಸಕ್ಕನ ಮನೆಯಲ್ಲಿ ಕೇಬಲ್ ಇದೆ.. ನೋಡ್ಕೊಂಡು ಬನ್ನಿ.." ಎಂದು ಹೇಳೀದಳು..

" ಯಾಕೆ ನಾವು ಆರಾಮಾಗಿ ಇರುವದನ್ನು ನೋಡಿ ಹೊಟ್ಟೆಕಿಚ್ಚಾ.. ನಿನಗೆ..?
ನಮ್ಮ ಹನೀಮೂನ್ ಕಾರ್ಯಕ್ರಮ ಮುಗಿದಿಲ್ಲ ..!
ನಾನೂ ಇನ್ನೂ ಎರ್ಕಾಡು..ಸೇಲಮ್.. ಕಾರ್ಯಕ್ರಮ ಇಟ್ಟು ಕೊಂಡಿದ್ದೀನಿ..ಮಹತಾಯಿ..!!
ನಿಮ್ಮನೆ ಟೊಯ್ಲೆಟ್ ಸರ್ವೆ ಮಾಡೋದೊಂದೇ ಕೆಲ್ಸಾನಾ..? "

"ಸುಮ್ಮನಿರೋ.. ನಾನು ಒಂದು ಉಪಾಯ ಮಾಡ್ತೀನಿ.."
ಎಂದು ಸರಸತ್ತೆಗೆ ಫೋನ್ ಮಾಡಿದಳು...

"ಸರಸತ್ತೆ... ಪ್ರಕಾಶಾ, ವಿನಾಯಕ.. ಇಬ್ಬರೂ.. ನಿಮ್ಮನೆಗೆ ಕ್ರಿಕೆಟ್.. ನೋಡಲು ಬರಬೇಕಿಂದಿದ್ದಾರೆ.. ಏನಾದರೂ ತೊಂದರೆ ಯಾಗುತ್ತಾ..?
"ಬಹುಶಃ ತೊಂದರೆ ಇಲ್ಲಾ ಅಂದಿರಬೇಕು...
ಅಕ್ಕ ಮತ್ತೆ ತಾನೇ ಮುಂದುವರಿಸಿದಳು...

"ಅವರಿಬ್ಬರಿಗೂ.. ಹೊಟ್ಟೆ ಸರಿ ಇಲ್ಲ.. ನೀನು ತಿನ್ನಲಿಕ್ಕೆ ಏನೂ ಕೊಡಬಾರದು..
ಹಾಗಿದ್ದರೆ ಮಾತ್ರ ಬರ್ತಿನಿ ಅಂತಿದ್ದಾರೆ..!"

ಬಾಣ ಬಿಟ್ಟಳು.. ಅಕ್ಕ...

ಸ್ವಲ್ಪ ಹೊತ್ತು ಚರ್ಚೆ ನಡೆದು ಸರಸತ್ತೆ ತಾನು " ಏನೂ ತಿನ್ನಲು ಕೊಡುವದಿಲ್ಲ ಅವರನ್ನು ನಮ್ಮನೆಗೆ ಕಳಿಸು.." ಅನ್ನುವವರೆಗೆ ಅಕ್ಕ ಬಿಡಲಿಲ್ಲ...

ನನಗೂ.. ವಿನಾಯಕನಿಗೂ ಧೈರ್ಯ ಬಂತು..
ಸರಿ ಅಂತ ಹೊರಟೇ ಬಿಟ್ಟೆವು...
ಮನೆಯ ಬಾಗಿಲಲ್ಲೇ ಕಾಯುತಿದ್ದಳು.. ಸರಸತ್ತೆ..

" ಪ್ರಕಾಶು ..ಏನು ತುಂಬಾ ಬಡವ ಆಗಿ ಹೋಗಿದ್ದೀಯಾ..?
ಹನಿಮೂನ್ ಜೋರಾ,,? ಊಟ ತೀಡಿ ಸರಿ ಹೋಗಿಲ್ಲವೇನೂ..? ಬನ್ನಿ.. ...ಬನ್ನಿ.. "
ಎಂದು ಉಪಚಾರದ ಮಾತಡಿ ಟಿವಿ ಹಚ್ಚಿ ಕೊಟ್ಟಳು.

ಹಾಲಿನಲ್ಲಿ ಒಂದು.. ನಾಯಿ ಸುಮ್ಮನೇ ಮಲಗಿತ್ತು...
ಅದನ್ನು ಕಟ್ಟಲಿಲ್ಲವಾಗಿತ್ತು..

'ಸರಸತ್ತೆ.. ಈ.. ನಾಯಿ.. ಕಟ್ಟಿ ಬಿಡಿ.." ಎಂದೆ...

"ಅಯ್ಯೊ.. ಇದಾ..ಅದು ಏನೂ ಮಾಡಲ್ಲ...
ಹಗಲು ಯಾರಾದರೂ ಬಂದರೆ ..ಬಂದವರೆ ಅದನ್ನು ನೋಡಿ ಕೂಗಬೇಕು...
ರಾತ್ರಿ ಮಾತ್ರಾ ಕೂಗುತ್ತೆ.. ಹಗಲು ಸುಮ್ಮನೆ ಮಲಗಿರುತ್ತೆ..
ನಾನು ಅಡಿಗೆ ಮಾಡುವಾಗ... ಕೂಗುತ್ತದೆ.. ಈ..ನಾಯಿ ಮುಂಡೇದು.."

ಅದಕ್ಕೆ ಹಿಡಿ ಶಾಪ ಹಾಕಿದಳು...

"ನೀವು ನೋಡುತ್ತಾ ಇರಿ.. ನಾನು ನನ್ನ ಕೆಲಸ ಮಾಡಿ ಕೊಳ್ಳುತ್ತೇನೆ...ನಿಮಗೆ ಏನಾದರೂ ಬೇಕಾದರೆ ನನ್ನನ್ನು ಕೂಗಿ.." ಎಂದು ಒಳಗೆ ಹೋದಳು...

ನಾನು ನನ್ನ ಸಕಲ ದೇವರುಗಳಿಗೆ..
ಅಕ್ಕನಿಗೆ ಸಾವಿರ ವಂದನೆ ಅರ್ಪಿಸಿದೆ...

"ಏನೂ ತಿಂಡಿ,ತೀರ್ಥ ಕೊಡಲಿಲ್ಲವಲ್ಲ..!!

"ಹಳೆ ಸ್ಟಾಕ್ ಇರಿಲಿಕ್ಕಿಲ್ಲ ಕಣಪ್ಪಾ..!"

ಈ ವಿನಾಯಕ.... ನನ್ನ ಮನಸ್ಸನ್ನು ಓದಿದವನ ಹಾಗೆ ಹೇಳಿದ.. .

ನಾವು ಟಿವಿ ನೋಡುತ್ತ ಕಳೆದು ಹೋಗಿ ಬಿಟ್ಟೆವು
ಭಾರತ ಪಾಕಿಸ್ತಾನ ಮ್ಯಾಚ್...!!
ರೋಮಾಂಚಕಾರಿಯಾಗಿತ್ತು... ಕೊನೆಯ ೭-೮ ಓವರ್ ಗಳು ಬಾಕಿ ಇತ್ತು...

"ಇನ್ನೂ ಮುಗಿದಿಲ್ಲವಾ.. ಹಸಿವೆ ಆಯಿತೇನ್ರೋ...
ಇರಿ ದೋಸೆ ತಿನ್ನುವೀರಂತೆ.. ದೋಸೆ ಹಿಟ್ಟು ಇದೆ..."

ಎನ್ನುತ್ತ ಬಂದೇ ಬಿಟ್ಟಳು.. ಸರಸತ್ತೆ...

"ಅಯ್ಯೊಯ್ಯೊ.. ಬೇಡವೇ ..ಬೇಡ.. ಸರಸತ್ತೆ.. ನಮ್ಮ ಆರೋಗ್ಯ ಸರಿ ಇಲ್ಲ..
ವ್ರಥಾ ನಿಮಗೇಕೆ ತೊಂದ್ರೆ.."
ನಾವು ಸುನಾಮಿ ಬಂದವರ ಥರಹ ಆಗಿಬಿಟ್ಟೆವು...

"ಇರ್ರೋ.. ಹೊಟೆಲ್ ತಿಂಡಿ ತಿಂದು ಹಾಗಾಗಿರ್ತದೆ... ಮನೆಯದು ತಿಂದರೆ ಏನೂ ಆಗಲ್ಲ.. "

ನಮ್ಮ ಮಾತು ಕೇಳುವ ಸ್ಥಿತಿಲ್ಲೇ ಇಲ್ಲ ಈ ಸರಸತ್ತೆ...!

ಅಯ್ಯೋ ದೇವರೆ.. ಇದೇನಾಗುತ್ತಿದೆ...!!

ವಿಚಾರ ಮಾಡುವದರಷ್ಟರಲ್ಲೆ ಫ್ರಿಜ್ಜಿನ ಬಾಗಿಲು ತೆರೆದೇ ಬಿಟ್ಟರು...

ಓಪನ್ ಕಿಚನ್...!!

ಒಂಥರಾ ವಾಸನೆ ಘಮ್ಮೆಂದು ಮೂಗಿಗೆ ಅಡರಿತು...!!

ನಮ್ಮ ಕೂದಲುಗಳೆಲ್ಲ ನಿಮಿರಿ ನಿಂತು ಬಿಟ್ಟವು..!!

ಸಾವಕಾಶವಾಗಿ... ಹಿಟ್ಟಿನ ಪಾತ್ರೆ ತೆಗೆದಳು..

ಪಾತ್ರೆ ತುಂಬಿಹೋಗಿ ಉಕ್ಕುವಸ್ಥಿತಿಯಲ್ಲಿತ್ತು..

ಹುಳಿ ಬಂದು ನೊರೆ.. "ಜೋರ್ರೆನ್ನುತ್ತಿತ್ತು..!!..

ಇದು ದೋಸೆ ಮಾಡಲಿಕ್ಕೆ ಬರೋದಿಲ್ಲ..!!

ತವದಿಂದ ಎದ್ದರೆ ಮಾತ್ರ ತಾನೆ..?

ನಾನು ಸಿರ್ಸಿ ಸಾಮ್ರಾಟ್ ಹೊಟೆಲ್ಲಿನಲ್ಲಿ ಸಪ್ಲೈರ್ ಕೆಲಸದ ಅನುಭವ ಇಲ್ಲಿ ಉಪಯೋಗಕ್ಕೆ ಬಂತು..!

ನನಗೆ ಧೈರ್ಯ ಬಂತು...
ವಿನಯಕ ಶಾಕ್ ನಿಂದ ಇನ್ನೂ ಚೇತರಿಕೊಳ್ಳುತ್ತಿದ್ದ...

" ನನ್ನಿಂದ ಇಲ್ಲಿ ಇರಲು ಸಾಧ್ಯಾನೆ.. ಇಲ್ಲ...!!
ಮನೆಗೆ ಓಡಿ ಹೋಗಿಬಿಡೋಣಾ. ಪ್ರಕಾಶಾ.. ..."

ಪಿಸು ಮಾತಲ್ಲಿ ಐಡಿಯಾ ಕೊಟ್ಟ...

"ಸುಮ್ನೆ ಇರೊ.. ಇಂಥಾ ಹುಳಿ ಹಿಟ್ಟಿನಿಂದ ದೋಸೆ ಆಗಲ್ಲಪ್ಪಾ..
ತವ ದಿಂದ ಎದ್ದರೆ ತಾನೆ..?
ಸುಮ್ನೆ ಮ್ಯಾಚ್ ನೋಡು... ಧೈರ್ಯದಿಂದಿರು....!!... "'

ನಾನು ಧೈರ್ಯ ಕೊಟ್ಟೆ...ಅವನಿಗೂ ತುಸು ಸಮಾಧಾನ ವಾಯಿತು..

ನಾಯಿ ... ಸುಮ್ಮನೆ ಮಲಗಿತ್ತು....

ಸರಸತ್ತೆ.....ತನ್ನಷ್ಟಕ್ಕೆ ಹಾಡು ಹೇಳುತ್ತ.. ....
ತವಾದ ಮೇಲೆ ದೋಸೆ ಹಿಟ್ಟು ಹೊಯ್ದಳು...

ಚುಂಯ್ ಶಬ್ಧ ಬಂತು...

ಅಲ್ಲಿಯವರೆಗೆ ಸುಮ್ಮನಿದ್ದ ನಾಯಿ ಗುರ್ರ್ ಅಂತ ಒಂದೇಸವನೇ... ಕೂಗಲಿಕ್ಕೆ ಶುರು ಮಾಡಿತು...

ಸರಸತ್ತೆಗೆ ಕೋಪ ನೆತ್ತಿಗೇರಿತು..

"ಎಂಥಾ ಧರಿದ್ರ ನಾಯಿ ಇದು..
ನಾನು ಅಡಿಗೆ ಮಾಡುವಾಗಲೆಲ್ಲ ಕೂಗ್ತದೆ..!
ಬಂದವರೆದುರಿಗೆ ನನ್ನ ಮಾನ ಕಳಿತದೆ.!! ..."

ಎನ್ನುತ್ತ ಅದಕ್ಕೆ ಗ್ಲಾಸಿನಿಂದ ಸ್ವಲ್ಪ ನೀರು ಸೋಕಿದಳು...

ನಾಯಿ ತನ್ನ ಡ್ಯೂಟಿ ಮುಗಿಯಿತು ಎಂಬಂತೆ ಸುಮ್ಮನಾಯಿತು..

"ನಾನು ಹೇಳುವಷ್ಟು ಹೇಳಿದ್ದೇನೆ..ಇನ್ನು ಇವರ ಹಣೆ ಬರಹ..!! ಎನ್ನುವಂತೆ...

ನಮ್ಮ ವಿರುದ್ಧ ದಿಕ್ಕಿಗೆ ಮುಖ ಮಾಡಿ ಮಲಗಿತು...

ಶ್ರೀನಾಥ್ ಬೋಲ್ ಮಾಡುತ್ತಿದ್ದ...!

ಅಫ್ರಿದಿ..ಬ್ಯಾಟು ಮಾಡುತ್ತಿದ್ದ...!

"ದೇವರೇ.... ಈ ಪಾಕಿಸ್ತಾನಿ..ಬೇಗನೇ.. ಔಟಾಗಲಿ..ಎಂದು ಪ್ರಾರ್ಥಿಸುತ್ತಿದ್ದೆ...

ಇಲ್ಲಿ ಜಗತ್ತಿನ ಎಂಟನೆಯ ಆಶ್ಚರ್ಯ...!! ಸರಸತ್ತೆ ದೋಸೆ ಎತ್ತಿ ಪ್ಲೇಟಿಗೆ ಹಾಕುತ್ತಿದ್ದಳು...


ನೋಡು..ನೋಡು ತ್ತಿದ್ದಂತೆ..ನಮ್ಮೆದುರಿಗೆ ಎರಡು ಪ್ಲೇಟಿನಲ್ಲಿ ದೋಸೆಗಳೊಂದಿಗೆ ಸರಸತ್ತೆ ಹಾಜರಾದಳು..

ಈ... ಕ್ರಿಕೆಟ್ ಮ್ಯಾಚ್ ಹಾಳಾಗಿ ಹೋಗಲಿ ಎನಿಸಿತು.....!!

ಆಶಾಳ ಮುದ್ದು ಮುಖ ನೆನನಪಿಗೆ ಬರುತ್ತಿತ್ತು....!
ಎದುರಿಗೆ ಸರಸತ್ತೆ ದೋಸೆ...!
ಅಕ್ಕನ ಮನೆ ಟಾಯ್ಲೆಟ್ ಸಹ.....!
ಬೇಡ.. ಬೇಡವೆಂದರೂ .... ನೆನಪಾಯಿತು..!!

'"ತಗೊಳಿ.. ಎರಡೆ ದೋಸೆ ಹೊಯ್ದಿದ್ದೀನಿ.. ಇದಕ್ಕೆ ಏನು ಹಾಕಲಿ..?.. ತುಪ್ಪ .., ಬೆಲ್ಲ..?..! "

ಅಯ್ಯಯ್ಯೋ..ತುಪ್ಪಾನಾ,....!! ಯಾವ ಶತಮಾನದ್ದೋ..!

" ಏನೂ ಬೇಡ..." ನಮಗೆ ಏನು ಹೇಳ ಬೇಕೆಂದು ತೋಚಲಿಲ್ಲ...

ಇರುಳಲ್ಲಿ ಕಂಡ ಬಾವಿಯಲ್ಲಿ....
ಹಗಲಲ್ಲಿ ಬಿದ್ದದಂತಾಯಿತು ನಮ್ಮ ಸ್ಥಿತಿ...!

ವಿನಾಯಕ ಒಂಥರಾ ಮುಖ ಮಾಡಿ ನನ್ನ ಮುಖಾನೇ ನೋಡುತ್ತಿದ್ದ....!

'ಈ ಪಾಪಿ..ಹೊರಗೆ,,.... ಸಿಗಲಿ.. ನೋಡ್ಕೊತ್ತಿನಿ... ಒಂದು ಕೈನಾ.." ಅನ್ನುವಂತಿತ್ತು..

... ಅಷ್ಟರಲ್ಲಿ ಸರಸತ್ತೆ ಏನೋ ನೆನಒಪಾದವರಂತೆ ಮತ್ತೆ ಫ್ರಿಜ್ ಬಾಗಿಲು ತೆಗೆದರು..

ಯಪ್ಪಾ....!!

ಮತ್ತೆ... ಅದೇ ಯಮಯಾತನೆಯ....ವಾಸನೇ...!!

ಈ.. ಜಗತ್ತಿನಲ್ಲಿ ಅದೆಷ್ಟು ... ಕೆಟ್ಟ...... ವಾಸನೆಗಳಿದಿಯೋ..?

ಅದೆಲ್ಲ "ಸರಸತ್ತೆ " ಫ್ರಿಜ್ಜಿನಲ್ಲೇ ಇದ್ದಿರಬಹುದಾ...!!

" ನೋಡ್ರೊ.. ನಿಮ್ಮ ಅದ್ರಷ್ಟ.. ಚೆನ್ನಾಗಿದೆ... ಚಟ್ನಿ ಇದೆ.....
ತುಂಬಾ ಹಳೆಯದೆನಲ್ಲ....!!
ಹಾಳಾಗಲಿಲ್ಲ.... ಹಾಕ್ಕೊಳ್ಳಿ....
ನನಗೆ ಇತ್ತೀಚೆಗೆ ಮರೆವು ಜಾಸ್ತಿ....!!

ಎಂದು ದೋಸೆ ಪಕ್ಕದಲ್ಲಿ ನಾಲ್ಕು..ನಾಲ್ಕು ಸ್ಪೂನ್ ಹಾಕಿಯೇ ಬಿಟ್ಟರು...!

ಅಷ್ಟರಲ್ಲಿ ಯಾರೋ ಹೊರಗಡೆ... ಕೂಗಿದರು..

"ನೀವು ತಿನ್ನಿ ನಾನು ಬಂದೆ" ಎನ್ನುತ್ತ..ಹೊರಗಡೇ ಹೊರಟರು...

ನಾನು ವಿನಾಯಕನ ಮುಖ.....
ವಿನಾಯಕ ನನ್ನ ಮುಖ ....
ನೋಡುತ್ತ..." ಶಾಕ್ " ಹೊಡೆದವರ ಹಾಗೆ ಕುಳಿತು ಬಿಟ್ಟಿದ್ದೇವು...

ಏನಾದರೂ ಮಾಡಲೇ... ಬೇಕಿತ್ತು...!!...??..

ನಾನು ಚಚಕನೇ ದೋಸೆ ಮಡಚಿ ಪ್ಯಾಂಟಿನ ಕಿಸೆಗೆ ತುರುಕಿ ಕೊಂಡೆ..

ವಿನಾಯಕ ದೋಸೆಯ...ಒಂದು ಚೂರನ್ನು ಮುರಿದು ಬಾಯಿಗೆ ಹಾಕಿ ಕೊಂಡ..

ತಿನ್ನಲಾಗಲಿಲ್ಲ ...

ಅಲ್ಲಿಯವರೆಗೆ.. ನಮ್ಮನ್ನು ಗಮನಿಸುತ್ತಿದ್ದ . ..ನಾಯಿ...

ಬಹಳ ಆಸಕ್ತಿಯಿಂದ ಕಿವಿ ತಿರುಗಿಸಿ ನಮ್ಮನ್ನೇ ನೋಡ ತೊಡಗಿತು...!

"ಅರೆ.. !! .?? ... ತಿನ್ನುತ್ತಿದ್ದಾನಲ್ಲ..!! .. ? ..ಎಂಬಂತೆ...!!

ವಿನಾಯಕ.." ಪಾಪ.. ನಾಯಿ... ನೂಡುತ್ತಿದೆಯೋ ..ಅದಕ್ಕೆ ಹಾಕ್ತಿನಿ .. ಕಣೊ... ! "

ಅಂತ ಅದರ ಮುಂದೆ ಎಸೆದ...

ಅದು ಮೂಸಿ ನೋಡಿತು..

"...ಬುಸುಕ್ ..." ಎಂದು ಶಬ್ದ ಮಾಡಿ......

ಮುಖತಿರುವಿ......

ಮತ್ತೆ ದೂರ.... ಹೋಗಿ.. ಮಲಗಿಬಿಟ್ಟಿತು.... !!...

ಇವರ " ಸಹಾವಾಸವೇ " ..ಸಾಕು ಎಂಬಂತೆ...!

ಚಟ್ನಿ ಏನು ಮಾಡಬೇಕು..??
ಅಲ್ಲಿ ..ಇಲ್ಲಿ ಹುಡು ಕಾಡಿದೆ...
ಟಿಪಾಯಿ ಕೆಳಗೆ " ತಿರುಪತಿ " ಪ್ರಸಾದದ.. ಪೊಲಿಥಿನ್ ಕವರ್ ಖಾಲಿ ..ಇತ್ತು...
ಲಗುಬಗೆಯಿಂದ ಚಟ್ನಿ ಅದರೊಳಗೆ.. ಹೇಗೇಗೋ... ಹಾಕಿದೆ......

ವಿನಾಯಕನೂ ಹಾಗೆ ಮಾಡಿದ..

ಅಷ್ಟರಲ್ಲಿ... ಸರಸತ್ತೆ ಏನೋ ಗೋಣಗುತ್ತ ಒಳಗೆ ಬಂದಳು...

ನಾನು ಸಾವಕಾಶವಾಗಿ ಚಟ್ನಿ ಕವರ್ ಪ್ಯಾಂಟಿನ ಮತ್ತೊಂದು ಕಿಸೆಗೆ ಸೇರಿಸಿದೆ...

"ಇಷ್ಟು ಜಲ್ದಿ ತಿಂದು ಬಿಟ್ರಾ...! ಛೇ..ಈ ಹಾಳು ನಾಯಿಗೆ ಏಕೆ ಹಾಕಿದ್ದೀರಿ...?

ಆ ಧರಿದ್ರ ನಾಯಿ.. ನಾನು ಏನೇ ಮಾಡಿದ್ರೂ ತಿನ್ನಲ್ಲ..

ಹೊಟೆಲ್ಲಿನ ಹಳಸಿದ ತಿಂಡಿಯಾದ್ರೂ ಪರವಾಗಿಲ್ಲ..

ಮುಕ್ಕುತ್ತದೆ.. !! ನಾನು ಮಾಡಿದ್ದು ಮಾತ್ರ ಬೇಡ...!!

ಯಾರು ಹಾಕಿದ್ದು ಅದಕ್ಕೆ...? "

ನಮ್ಮಿಬ್ಬರ ಕಡೆಗೆ ನೋಡಿದಳು..

ನಾನು ವಿನಾಯಕನ ಕಡೆಗೆ ನೋಡಿದೆ...

" ವಿನಾಯಕ...ಏನಪ್ಪಾ ಹೀಗೆ ಮಾಡ್ತೀಯಾ..? ಇದು ಸರಿನಾ..? ... .
ಬೆಳೆಯುವ ಹುಡುಗರು ಹೇಗೆ ತಿನ್ನ ಬೇಕು ಗೊತ್ತಾ..?..
ಇರು ಬೇರೆ ದೋಸೆ ಮಾಡ್ತೀನಿ..."

ಎನ್ನುತ್ತ ಕಿಚನ್ ಕಡೆ ಹೊರಟಳು...

"ಸರಸತ್ತೆ.. ಬೇಡವೇ ಬೇಡ..
ನನ್ನತ್ರೆ ಸಾಧ್ಯನೇ ಇಲ್ಲ.. !
ನೀವು ಹೀಗೆಲ್ಲ ಮಾಡಿದ್ರೆ... ನಾವಿನ್ನು ಬರುವದೇ ಇಲ್ಲ..!! .."

ಅಮಾಯಕ ವಿನಾಯಕ ಗೋಗರೆದ...

" ಇದು ಒಳ್ಳೆ ಚೆನ್ನಾಗಿದೆ...

ನಾನು ನಿಮಗೆ... ಅಂತ ಮಾಡಿದ್ದನ್ನು..

ಆ.. .. ಧರಿದ್ರ .. ನಾಯಿಗೆ ಹಾಕಿದ್ದಿಯಾ... !!....??

ನಾನು ಮಾಡಿದ ಕೆಲಸಕ್ಕೆ ಮರ್ಯಾದಿ ಬೇಡ್ವಾ....?

ನೀನು ತಿನ್ನಲೇ ಬೇಕು,,..!! .."

ಎಂದು ಹೊರಟೇ ಬಿಟ್ಟಳು...

ಚಟ್ನಿ ತಾಗಿದ ಕೈ ತೋಳೆಯಲೇದು ವಾಷ ಬೇಸಿನ್ ಬಳಿ ಹೋದವ...
ವಿನಾಯಕ ಗೇಟಿನ ಕಡೆಗೆ ಓಡ ತೊಡಗಿದ...
ನನಗೂ ಏನು ಮಾಡಬೇಕೆಂದು ತೋಚಲಿಲ್ಲ...

ನಾನೂ ಓಡಿದೆ...

"ನಿಲ್ರೋ..ನಿಲ್ರೋ.."

ಅಂತ ಸರಸತ್ತೆ ಕೂಗುತ್ತಿದ್ದರೂ .......

ನಾವು ಎದ್ದು ಬಿದ್ದು ಓಡಿಯೇ ಬಿಟ್ಟೆವು...

ಸ್ವಲ್ಪ ದೂರ ಬಂದಮೇಲೆ.. ದೋಸೆಯನ್ನು ಎಸೆದು ಬಿಟ್ಟೆ...

"ಮನೆಯಲ್ಲಿ ಏನೂ ..ಹೇಳುವದು ಬೇಡ..
" ಸರಸತ್ತೆ " ಹೇಳಿದರೆ ನೋಡಿ ಕೊಳ್ಳೋಣ....
ಮನೆ ತುಂಬಾ ನೆಂಟರು..
ಸುಮ್ಮನೆ ನಮ್ಮನ್ನು ನೋಡಿ ಗೇಲಿ .ಮಾಡಿ.... ನಗೋದು ಬೇಡ..."
ಎಂದು ವಿನಾಯಕ ಐಡಿಯ ಕೊಟ್ಟ...

ನನಗೂ... ಹೌದೆನಿಸಿತು....

ಮ್ಯಾಚು ಏನಾಯಿತೋ..? ?

ಕೊನೆಯ ಓವರ್ ನೋಡಲಿಕ್ಕೆ ಅಗಲೇ ಇಲ್ಲ.

ಛೆ.....!!

ಮನೆಗೆ ಬಂದು ಊಟ ಮಾಡಿ..
ಹಾಲಿನಲ್ಲಿ ಕುಳಿತು ಅದೂ ಇದೂ ಮಾತಾಡುತ್ತ..ಕುಳಿತ್ತಿದ್ದೇವು..

ಅಷ್ಟರಲ್ಲಿ ಬೆಡ್ಡ .. ರೂಮಿನಿಂದ ಬಾತ್ ರೂಂ ಗೆ ಯಾರೋ ಓಡಿದರು..

"ಉವ್ವೇ... ಊವ್ವೇ..ವ್ಯಾಕ್ಕ್ಕ್ಕ್ಕ್"

ಶಬ್ಧ..!!
ಯಾರೋ " ವಾಂತಿ " ಮಾಡುತ್ತಿದ್ದಾರೆ...ನಾನು ಓಡಿದೆ...

ಮುದ್ದಿನ ಮಡದಿ...!!

ಏನಾಯ್ತೆ..?? ." ನಾನು ಗಾಭರಿಯಾದೆ..

ಅಕ್ಕ ,, ಆಯಿ ಎಲ್ಲ ಓಡಿ ಬಂದರು...

ಮಡದಿಯನ್ನು ಹಿಡಿದು ಕೊಂಡರು..

ಅಕ್ಕನ ಮುಖದಲ್ಲಿ ಖುಷಿ... ಕಾಣುತ್ತಿತ್ತು.. .!!

" ಪ್ರಕಾಶೋ...? ಎಷ್ಟು ಫಾಸ್ಟ್ ಇದ್ದಿಯೋ...?
ಆಯೀ.. ದೊಡ್ಡಮ್ಮಾ...!
ಆಶಾದೂ.... ಹೊಸ ಸುದ್ಧಿ..!!..."

ಅಕ್ಕ.. ಸಂಬ್ರ್ಹಮದಿಂದ ಕುಣಿದಾಡಿಬಿಟ್ಟಳು...!

" ಸುಮ್ನಿರೆ..ಸಾಕು..!!
ಇನ್ನೂ ಮದುವೆಯಾಗಿ ಹದಿನೈದು ದಿನ ಆಗಲಿಲ್ಲ..!!
ಹೊಸ ಸುದ್ಧಿ ಹೇಗೆ ಆಗ್ತದೆ...?.."

ದೊಡ್ಡಮ್ಮ ಅನುಭವ ತೆರೆದಿಟ್ಟಳು...

ಮತ್ತೆ "" ...ಊವ್ವೇ...ಉವ್ವೇ..ಊಊಊವ್ವೇ.." ಶಬ್ಧ...!!

"ದೊಡ್ಡಮ್ಮ ...ನಿನಗೆ ಈಗಿನ ಕಾಲ ಎಲ್ಲ ಗೊತ್ತಗಲ್ಲ...
ಈ ಪ್ರಕಾಶಾ... ಈ ಹುಡುಗಿ..ಎಮ್.ಜೀ ರೋಡು..
ಪಾರ್ಕು.. ಸೀನೇಮಾ ..ಅಂಥಾ ತಿರ್ಗಿದಾರೆ..
ಲಾಡ್ಜಿಗೂ ಹೋಗಿರ್ತಾರೆ..!!
ಈಗೆಲ್ಲ ಇದೆಲ್ಲ ಸಾಮಾನ್ಯಾ..
ದೋಡ್ಡಮ್ಮ " ಇದೆಲ್ಲ " ನಿನಗೆ ..ಗೊತ್ತಾಗಲ್ಲ..!! ."


ಅಕ್ಕ ಖುಷಿಯಿಂದ ಕುಣೀದಾಡಿ ಬಿಟ್ಟಳು..!!

ಅಯ್ಯೋ ದೇವರೆ ಇದೇನಾಗ್ತಾ ಇದೆ..?

ಮತ್ತೆ " ಊಊವ್ವೇ..ಉವ್ವೇ.." ಶಬ್ಧ...
!!

ಅದು ನನ್ನ ಎದೆ ಇರಿಯುತ್ತಿರುವಂತೆ ಅನಿಸುತ್ತಿತ್ತು...

ಸ್ವಲ್ಪ ಹೊತ್ತಿಗೆ ಮಡದಿಗೆ ಸ್ವಲ್ಪ ಸಮಾಧಾನ ಆಯಿತು..

ಅಕ್ಕ.. ಅವಳನ್ನು ಹಿಡಿದು ಕೊಂಡು.. ಬೆಡ್ಡ ರೂಮಿಗೆ ಕರೆ ತಂದರು...

ರೂಮಿನಲ್ಲಿ ಒಂಥರಾ.. ವಾಸನೆ.. ಘಮ್ಮೆನ್ನುತ್ತಿದೆ...!

ಮತ್ತೆ ".. ಓಕ್.... ಊಕ್ .." ಅಂದಳು..

... ಏದುಸಿರು ಬಿಡುತ್ತ ...
."...ಮೊದಲು...
ಆ.. ಹೊಲಸು ವಾಸನೆ..!
ಧರಿದ್ರ ...ಪ್ಯಾಂಟನ್ನು... ಹೊರಗೆ ಬೀಸಾಕಿ.. !!
ನನ್ನಿಂದ ತಡೆಯಲು ಆಗ್ತಾ ಇಲ್ಲ.. "

ಅಂತ ಕೂಗಿದಳು..

ನಾನು ಓಡೋಡಿ ಹೋಗಿ ಬಾಥ್ ರೂಮಿಗೆ ಹಾಕಿ ಬಂದೆ...

" ಅದು ಎಂಥದ್ದು..?? ಪ್ಯಾಂಟಿನ.. ಕಿಸೆಯಲ್ಲಿ..?

ತಿರುಪತಿ ಪ್ರಸಾದ ಎಂದು ಮೂಸಿದರೆ. .. ಅಯ್ಯೋ ತಡಿಲಿಕ್ಕೆ ಆಗಲ್ಲ..!!

".. ವ್ಯಾಕ್... ಉಉಕ್...."

ಮತ್ತೆ ಹೇಳಲಾಗಲಿಲ್ಲ..

'ಊಕ್..ಊಕ್.." ಆಯಿತು

ಈ ಅಮಾಯಕ ವಿನಾಯಕ..ನಗಲು ಶುರು ಮಾಡಿದ...!!

ನನಗೆ ದೋಸೆ ಸಂಗಡ".. ಚಟ್ನಿ .." ಎಸೆಯಲು ಮರೆತು ಹೋಗಿತ್ತು....!!.

ಪ್ಯಾಂಟಿನ ಕಿಸೆಯಲ್ಲೇ ಉಳಿದು ಬಿಟ್ಟಿತ್ತು...!!

ಆದರೆ ....

ಯಾವಾಗಲೂ..... ಕ್ರಿಕೆಟ್ ಮ್ಯಾಚ್ ನೋಡುವಾಗಲೆಲ್ಲ " ಇದು " ನೆನಪಾಗುತ್ತದೆ.....


ಈಗಲೂ.......

ನನ್ನ ಪ್ಯಾಂಟಿನ ಕಿಸೆಯಲ್ಲಿ ಏನೇ ...ಇಟ್ಟರೂ....

ಭದ್ರವಾಗಿ ...... ಸುರಕ್ಷಿತವಾಗಿರುತ್ತದೆ.......

ಹಾಗೆಯೇ...

ಅಕ್ಕನ ಆಸೆಯನ್ನೂ... ಬಲು .. ಬೇಗನೇ .. ನೆರವೇರಿಸ ಬೇಕಾಯಿತು...!

(ಇದರ ಮೊದಲ ಭಾಗ ಗಳನ್ನೂ ಓದಿ...)

A) " ನಾನು ಕರೆಯೋದು.. ಹೆಚ್ಚೋ... ನೀವು ಬರೋದು ಹೆಚ್ಚೋ..."
B) ಶ್ರವಣ ಬೆಳಗೊಳದಲ್ಲಿ....

ಓದಿರಿ ...
"ಮಸ್ತ್ ಮಜಾ ಮಾಡಿ..."


Tuesday, January 6, 2009

ಆಕಳಿಕೆಯಲ್ಲಿದೆ...ಸ್ವರ್ಗ ಸುಖಾ...!!!


ಈ... ಪ್ರಪಂಚದ.. ಅರಿವೇ ಇಲ್ಲದೆ.. ಬೆಕ್ಕಣ್ಣ ಮಲಗಿತ್ತು...
ಆಶೀಷನಿಗೆ ಸುಮ್ಮನಿರಲಾಗಲಿಲ...
"ಅಪ್ಪಾ ..ಸುಮ್ಮನೆ..ಮಲಗಿ.. ಬಿಟ್ಟಿದೆಯಲ್ಲಪ್ಪಾ.....!! "
ಬಹಳ .. ಪೇಚಾಡಿದ.....
"ಮಗನೆ .. ಕ್ಯಾಮರಾ.. ತಗೊಂಡು .. ಬಾ. ." ಅಂದೇ.....
ಆಶೀಷ.. ಒಂದು ದಾರದ ತುದಿಯಿಂದ..... ..
ಅದರ ಮೂಗಿಗೆ..." ಗಿಲಾಗಿಲಾ.."
ಅಂತ ... ಮಾಡಿದ...
ನಾನು ಫೋಟೋ ತೆಗೆಯುತ್ತಾ ಹೋದೆ....

ಆಕಳಿಕೆಯಲ್ಲಿದೆ ಸ್ವರ್ಗ ಸುಖಾ.....!!

ಬೆಕ್ಕಣ್ಣನಿಗೆ ಕಣ್ಣು ಬಿಡಲೂ... ಬೇಜಾರು...

ಆಶೀಶನ....... ಕಿತಾಪತಿ...... ಈಗ..ಪರಿಣಾಮ ಆಗಿದೆ......

ಛೆ... ಎಂಥಾ ಬಂಗಾರದಂಥಹ ನಿದ್ರೆ... ಹಾಳಾಯಿತಲ್ಲ...!!



ಆಕಳಿಕೆಯಲ್ಲಿದೆ... ಸ್ವರ್ಗ ಸುಖಾ...!!


"ಯಾರ್ರಿ.. ಇವರು..?? ನನ್ನ ನಿದ್ರೆ.. ಹಾಳು ಮಾಡಿದವರು...??"


ಆರಾಮಾಗಿ.. ಮಲಗಿದ ಬೆಕ್ಕಣ್ಣನಿಗೆ
ಈಗ ಸ್ವಲ್ಪ ಎಚ್ಚರವಾಗಿ ಬಾಯಿ ತೆರೆಯುತ್ತಿದೆ....

ಆಕಳಿಕೆಯಲ್ಲಿದೇ... ಸ್ವರ್ಗ ಸುಖಾ...!!


" ನಾನು ಯಾವಾಗಲೂ ಟೂಥ್... ಪೇಸ್ಟ್.. ಉಪಯೋಗಿಸುವದಿಲ್ಲಾ...!!.. "


ಟೂಥ್ ಪೇಸ್ಟ್ ನವರ ಜಾಹೀರಾತಿಗೆ ಪೋಸ್ ಕೊಡುವಂತೆ ಬಾಯಿ ಕಳೆಯಿತು...

ಆಹಾ..,... ಆಕಳಿಕೆಯಲ್ಲೂ... ಸ್ವರ್ಗ ಸುಖಾ...!!

ಈಗ ಮತ್ತೆ ತೊಂದರೆ ಕೊಡುವ ಮನಸ್ಸು ಬರಲಿಲ್ಲ....

" ಮಲಗಿದ್ದವರಿಗೆ ತೊಂದರೆ ಕೊಡ ಬಾರದಪ್ಪಾ...." ......!!

ಎಂದು ಮಗನಿಗೆ ಬುದ್ಧಿವಾದ ಹೇಳಿದೆ..
ಬೇಕ್ಕಣ್ಣನ ನಿದ್ದೆ ಕೆಡಿಸಿದ್ದಕ್ಕೆ ಬೇಜಾರೂ ಆಯಿತು...

Friday, January 2, 2009

ನಾನು ನಿಮಗೆಲ್ಲ .. ತುಂಬಾ,,ಇದಾಗಿದ್ದೇನೆ...!!..

ಗಿರಿನಗರದಲ್ಲಿ ಒಂದು ಸಭೆ...

ಪರಮ ಪೂಜ್ಯ ಸ್ವಾಮೀಜಿಯವರ.. ಆಗಮನ ಇನ್ನೂ... ಆಗಿರಲಿಲ್ಲ...

ವೇದಿಕೆಯಲ್ಲಿದ್ದ ಸಿ.ಎಚ್.ಎಸ್, ಭಟ್ ರವರು ತುಂಬ ಹಾಸ್ಯಮಯವಾಗಿ.. ಮಾತಾಡುತ್ತಿದ್ದರು..

ಅವರು ಒಳ್ಳೆಯ ಮಾತುಗಾರರು..

ಅವರು " ಪ್ರೇರಣಾ ಮೋಟಾರ್ಸ್ " ನಲ್ಲಿ ವ್ಯವಸ್ಥಾಪಕರು..

ತುಸು ಹೊತ್ತು ಅವರೇ.. ಹಾಸ್ಯವಾಗಿ..ಮಾತಾಡಿದರು..

ಸ್ವಾಮೀಜಿಯವರು ಇನ್ನೂ ಬರಲಿಲ್ಲ..


" ಸಭಾಸದರೆ.. ತುಂಬಾ ಹೊತ್ತಿನಿಂದ ನಾನೇ ಮಾತಾನಾಡುತ್ತಿದ್ದೇನೆ...

ಇಲ್ಲಿ ಯಾರಾದರೂ ಏನಾದರೂ ಹಾಸ್ಯ, ಜೋಕು,

ಮಿಮಿಕ್ರಿ ಮಾಡುವದಾದರೆ.. ಬನ್ನಿ... ಈ ವೇದಿಕೆ ನಿಮಗಾಗಿದೆ.."

ಶುದ್ಢವಾದ ಭಾಷೆಯಲ್ಲಿ ಭಟ್ಟರು ಆಹ್ವಾನ ಇತ್ತರು..

ಸಭೆಯಲ್ಲಿ ಗದ್ದಲ ಶುರುವಾಯಿತು...

ಸ್ವಲ್ಪ ಹೊತ್ತು ಕಳೆಯಿತು..

ಎಲ್ಲರೂ ತಮ್ಮತಮ್ಮಲ್ಲೇ ಮಾತಾಡುತ್ತಿದ್ದರೇ ಹೊರತು ವೇದಿಕೆಗೆ ಯಾರೂ ಬರಲಿಲ್ಲ...

ಒಂದು ಮೂಲೆಯಲ್ಲಿ ನಾನು , ನನ್ನ ಮಡದಿ, ನನ್ನ ಮಗ ಕುಳಿತ್ತಿದ್ದೇವು...

" ನಾನು ಕಾಲೇಜು ದಿನಗಳಲ್ಲಿ.. ಈ ಥರ ವೇದಿಕೆ ಸಿಕ್ಕಿದಾಗ ಮಿಮಿಕ್ರಿ ಮಾಡುತ್ತಿದ್ದೆ...
ಇಲ್ಲಿ ಯಾರೂ ಈ ಥರ ಇಲ್ಲವಾ..?
ಬೋರಾಗಿದೆ..... ಏನಾದರೂ ಜೋಕು ಮಾಡಿದ್ದರೆ.. ನಗಬಹುದಿತ್ತು.."

ಎಂದು ನಾನು ಹೇಳಿದೆ


" ಮನೆಯಲ್ಲಿ ಅಷ್ಟೆಲ್ಲ ಬಡಾಯಿ ಬಿಡುತ್ತೀರಲ್ಲ..

ಹೋಗಿ ಏನಾದರೂ ಮಾಡಿ.. ನೋಡೋಣ....!! "

ಎಂದು ವ್ಯಂಗವಾಗಿ ಬಾಣ ಬಿಟ್ಟಳು ನನ್ನ ಮಡದಿ....!


" ನಾನು ಮಾಡುತ್ತಿದ್ದುದು ಕಾಲೇಜು ದಿನಗಳಲ್ಲಿ..
ಈಗಲ್ಲ.. ..ನೀನು ಸುಮ್ಮನಿರು... "

ನಾನು ಬಾಯಿ ಮುಚ್ಚಿಸಲು ನೋಡಿದೆ...


" ಅಮ್ಮಾ.. ಇಂದು ರಾತ್ರಿ ನನಗೆ ಮಲಗುವಾಗ ...

"ಉತ್ತರನ ಪೌರುಷದ " .... ಕಥೆ ಹೇಳಮ್ಮ..!! "

ಎಂದು ಮಗನೂ ಬಾಣ ಬಿಟ್ಟು ಬಿಟ್ಟ..!


" ಅದು ಹಾಗಲ್ಲ.. ಇಷ್ಟೆಲ್ಲ ಜನರ ನಡುವೆ ಮಾತಾಡುವ ಮೋದಲು...
ಸ್ವಲ್ಪವಾದರೂ ತಯಾರಿ.. ಬೇಡವೆ....?..."

ನಾನು ತರ್ಕಶಾಸ್ತ್ರದ ಪಾಠ ಶುರು ಮಾಡಿದೆ..

" ನೋಡಿ ನಿಮ್ಮ ಕಾಲೇಜಿನ ಕಥೆ ಕೇಳಿ,... ಕೇಳಿ...
ಕಿವಿ ತೂತು ಆಗಿ ಬಿಟ್ಟಿದೆ..!
ಬರಿ.. ಬಾಯಿ ಬಡಾಯಿ...!
ಸ್ಟೇಜ್ ಗೆ ಹೋಗಿ.. ಏನಾದರು ಮಾಡಿ....!
ಒಂದು ಸಾರಿಯಾದರೂ ..ಏನಾದರೂ ಮಾಡಿ...
ಸಾಬೀತು ಪಡಿಸಿ ಬಿಡಿ ...ನೋಡಿ ಬಿಡೋಣ...!
ಆಗ ನೀವು ಇಲ್ಲಿಯವರೆಗೆ ಹೇಳಿದ್ದೆಲ್ಲ ನಿಜ ಎಂದು ಒಪ್ಪುತ್ತೇನೆ...!! .. "

ಮತ್ತೆ ಸವಾಲು...!!

ಏಳು ವರ್ಷದ ಸಂಸಾರ ನಡೆಸಿದ್ದೇನೆ...!

ಆದರೂ... ನಂಬಿಕೆ... ಇಲ್ಲವಾ..?..!!

ಸಧ್ಯ..... "ಗಂಡಸಾಗಿದ್ದರೆ.. ಸ್ಟೇಜ್ ಮೇಲೆ ಹೋಗಿ ನೋಡುವಾ...!! "

ಪುಣ್ಯ..ಹಾಗೆ ....ಅನ್ನಲಿಲ್ಲವಲ್ಲ!

ಭೂಮಿ ... ಬಾಯ್ಬಿರಿದು..... ನನ್ನನ್ನು.. ನುಂಗ ಬಾರದೆ..?
ಅನ್ನಿಸಿ ಬಿಡ್ತು...

ಯಾಕೋ ಒಂದು ಕೈ ನೋಡಿಯೇ ಬಿಡೋಣ ಅನ್ನಿಸಿತು...

ಮಗನ ಕಣ್ಣಲ್ಲಿ "ಹಿರೋ" ಆಗಿ ಬಿಡುವಂಥ.. ಅವಕಾಶ...!


ಸಾವಾಕಾಶವಾಗಿ ಎದ್ದು ನಿಂತೆ..

" ರೀ... ತಮಾಷೆಗಂದೆ ಕೂತ್ಕೊಳ್ಳಿ..!! "

ನನ್ನ ಮಡದಿ ಗಾಭರಿಯಿಂದ ಹೇಳಿದಳು..

ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ..

ಅಲ್ಲಲ್ಲಿ ಜಾಗ ಮಾಡಿಕೊಳ್ಳುತ್ತ ವೇದಿಕೆಗೆ ಬಂದೆ...

ಸಿ.ಎಚ್.ಎಸ್. ಭಟ್ಟರು ಸ್ವಾಗತಿಸಿದರು..

" ಈಗ ಪ್ರಕಾಶ ಹೆಗಡೆಯವರು ತಮ್ಮೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.."

ಅನೌನ್ಸ್ ಮಾಡಿಯೇ ಬಿಟ್ಟರು...!!

ನಾನು ಮೈಕಿನ ಮುಂದೆ ಬಂದು ನಿಂತೆ...

ನನಗೆ ಮೊದಲಿನಿಂದಲೂ ಸಭಾ ಕಂಪನ ಇಲ್ಲವಾಗಿತ್ತು...

ಆದರೂ ... ಎಲ್ಲೋ ..... ಅಳುಕು...!

ದೈರ್ಯವಾಗಿ ಶುರು ಮಾಡಿಕೊಂಡೆ..

" ಮಾನ್ಯ.. ಇವರೆ... ಸನ್ಮಾನ್ಯ ...ಅವರೇ..!

ಹಾಗೂ ಇಲ್ಲಿ ಇದಾಂಥಹ.." ಇವರುಗಳೆ.."...!!.. "

ಎನ್ನುತ್ತ ಸೇರಿದ ಜನರ ಕಡೆಗೆ ನೋಡಿದೆ..

ಜನರಿಗೆ ಮೊದಲು ಅಷ್ಟಾಗಿ ಗೊತ್ತಾಗಲಿಲ್ಲ....

" ಇನ್ನು ಸ್ವಲ್ಪ ಇದರಲ್ಲೇ ..ಪರಮ ಪೂಜ್ಯ.." ಇವರು.." ಇಲ್ಲಿಗೆ ಇದಾಗಲಿದ್ದಾರೆ...
ಈ .".ಅವರು.." ತುಂಬಾ ಅದು ಮಾಡಿದ್ದಾರೆ...

ಅದಕ್ಕಾಗಿ.. ನಾನು.." ಅವರಿಗೆ..".. ಇದು ಮಾಡುತ್ತೇನೆ"

ಎಂದು ಕೈ ಮುಗಿದೆ...

ಜನರಿಗೆ ಸ್ವಲ್ಪ ಗೊತ್ತಾಗ.. ಹತ್ತಿತು...

" ಮಾನ್ಯರೆ...

ಇಂದು ನಾವು "ಇದನ್ನು " ಮಾಡುತ್ತಿಲ್ಲ...

ನಾವೇ ನಮ್ಮ "ಇದನ್ನು" ಇದು ಮಾಡದಿದ್ದರೆ....
ಇನ್ನು.." ಇದನ್ನು " ಯಾರು... ಮಾಡಬೇಕು..?

ನಮ್ಮ ಹಿಂದಿನವರು ."..ಇದನ್ನು.." ಮಾಡುತ್ತಿದ್ದರು..

ಈಗ ನಾವು ಮತ್ತೆ .".ಇದನ್ನು " ಮಾಡಲು ಶುರು ಮಾಡಬೇಕು.. "


ನನ್ನ ಮಗನ ಕಡೆ ನೋಡಿದೆ...

ಜನರ ಸಂಗಡ ಈತನೂ ನಗಲು.. ಶುರು ಮಾಡಿದ್ದ....!!

" ಮಹಾಜನಗಳೇ......

ನಮ್ಮ " ಇದು " ಅದಾಗುತ್ತಿದೆ....

ನಾವು " ಅದಾಗಲಿಕ್ಕೆ.." ಬಿಡಬಾರದು....!!..."

ಎಂದು ಘರ್ಜಿಸಿದೆ...!!


ಜನ ಚಪ್ಪಳೆ ಶುರು ಮಾಡಿದರು..!!
ಖುಷಿಯಿಂದ ನಗಲಿಕ್ಕೆ ಶುರು ಮಾಡಿದರು...!!
ನನಗೆ ಮತ್ತೂ ...ಉತ್ಸಾಹ ...ಬಂತು..

" ಯುವರಾಜ್ ಸಿಂಗ್ " ಬ್ಯಾಟಿಂಗ್ ಫಾರ್ಮ್ ಗೆ...
ಬಂದ ಹಾಗೆ ಇತ್ತು ನನ್ನ ಮಾತುಗಳು...

" ಸನ್ಮಾನ್ಯ ಇವರುಗಳೇ...

ಇಂದಿನ.. ಈ... ಇದಕ್ಕೆ ನಮ್ಮೆಲ್ಲರ..." ಇದೆ " ಕಾರಣ...!
ಹಾಗಾಗಿ ನಾವೆಲ್ಲ " ಇದಾಗಬೇಕು." ... !
ನಮ್ಮಲ್ಲಿ ಯಾವುದೇ " ಇದಿರಬಾರಾರದು." ....."

ಮಗ ಖುರ್ಚಿಯಮೇಲೆ ನಿಂತುಕೊಂಡು ಎಂಜೋಯ್... ಮಾಡುತ್ತಿದ್ದ...!

ನಾನು ಇನ್ನೂ ಸ್ವಲ್ಪ ಹೊತ್ತು ... " ಅದೂ ..ಇದು " ಮಾತನಾಡಿ.....

" ಇಲ್ಲಿಯವರೆಗೆ ನನ್ನ ಈ ... " ಇದನ್ನು" ...

" ಅದು "ಮಾಡಿದ್ದಕ್ಕೆ ..

ನಾನು ನಿಮಗೆಲ್ಲ " ಇದಾಗಿದ್ದೇನೆ."..!!....

ನನಗೆ " ಇದನ್ನು " ಮಾಡಲಿಕ್ಕೆ...

" ಇದು " ಮಾಡಿದ ...ಇವರಿಗೆ...

ನಾನು... ತುಂಬಾ " ಇದಾಗಿದ್ದೇನೆ "....!

ಇಲ್ಲಿಗೆ ನನ್ನೀ " ಇದನ್ನು " ಅದು ಮಾಡುತ್ತೇನೆ....!! .."

ಅಂದೆ...!


ಚಪ್ಪಾಳೆಯೋ ....!!... ಚಪ್ಪಾಳೆ...!!

ಜನರಿಗೆ ಎಷ್ಟು "ಇದಾಯಿತೋ..ಅದಾಯಿತೋ " ಗೊತಾಗಲಿಲ್ಲ...!

ತಕ್ಷಣ ಸಿ.ಎಚ್.ಎಸ್. ಭಟ್ಟರು ಮೈಕ್ ಬಳಿ ಬಂದರು...

" ಇಲ್ಲಿಯವರೆಗೆ ನಮ್ಮನ್ನು ... " ಇದು " ಮಾಡಿದ ...

"ಇವರಿಗೆ " ...ನಾವೆಲ್ಲ ತುಂಬಾ " ಇದಾಗಿದ್ದೇವೆ "....!

ಅವರಿಗೆ ತುಂಬಾ " ಇವುಗಳನ್ನು ".. ಅರ್ಪಿಸುತ್ತೇವೆ... !! .. "


ಅಂದಾಗ ಮತ್ತೆ ಚಪ್ಪಾಳೆ...!!

ಮಗ ನನ್ನನ್ನು ಅಭಿಮಾನದಿಂದ ನೋಡುತ್ತಿದ್ದ...!!

ಜನರೆಲ್ಲ ನನ್ನನ್ನೇ ನೋಡುತ್ತಿದ್ದರು......


ನನಗೆ.... ಒಂದು ರೀತಿಯಲ್ಲಿ.....

"ಇದಾಗಿ.." .... .."ಅದಾಗಿತ್ತು..'..!!...

" ಅದೂ" ......ಆಗಿ ..." ಇದಾಗಿ " ...ಬಿಟ್ಟಿತ್ತು..........!!