Monday, January 18, 2010

ನನ್ನಜ್ಜಿ ಅಂದ್ರೆ ... ನಂಗಿಷ್ಟ....

ನಾನೇನೂ ಸಣ್ಣವನಲ್ಲ...  
ಹೈಸ್ಕೂಲ್  ಎಂಟನೆಯ ಕ್ಲಾಸ್...
ಎಲ್ಲವು ಅರ್ಥವಾಗುತ್ತದೆ...
ಆದರೆ....
ನನ್ನಪ್ಪ ಮಾತ್ರ  ನನಗೆ ಅರ್ಥನೇ.. ಆಗುವದಿಲ್ಲ...
ಯಾವಾಗ ಬೈತಾನೆ... ಯಾವಾಗ ಹೊಗಳುತ್ತಾನೆ.. ಒಂದೂ ಅರ್ಥನೇ ಆಗುವದಿಲ್ಲ.
ನನಗೆ ಒಂದು ಹೊಸ  " ಹದಿನೆಂಟು ಗೇರಿನ"   ಸೈಕಲ್ ಬೇಕಿತ್ತು.. 
ನನ್ನ ಎಲ್ಲ ಗೆಳೆಯರ ಬಳಿ ಹೊಸದಾಗಿ ಬಂದಿದೆ... 
ನನಗೂ ಆಸೆ ಆಯಿತು..
ನನ್ನಪ್ಪ  ನನ್ನಾಸೆಗಳಿಗೆ ಎಂದು  ಅಡ್ಡಿ ಬಂದವನಲ್ಲ...
ಹೇಗಿದ್ದರೂ ತೆಗೆಸಿಕೊಡುತ್ತಾರೆ ಅಂತ  ನನ್ನ  ಗೆಳೆಯರ ಬಳಿ  ಬಹಳ ಬಡಾಯಿ ಕೊಚ್ಚಿಕೊಂಡಿದ್ದೆ...
ಸಮಯ ನೋಡಿ ನನ್ನಪ್ಪನನ್ನು  ಕೇಳಿದೆ..


" ಈಗ ಆಗೋದಿಲ್ಲ. 
ನಮ್ಮ  ಪರಿಸ್ಥಿತಿ ಸ್ವಲ್ಪ ಕಷ್ಟವಾಗಿದೆ. ಹಣ ಖರ್ಚು ಮಾಡೋ ಹಾಗಿಲ್ಲ.
ಮುಂದೆ ಪರಿಸ್ಥಿತಿ ಸುಧಾರಿಸದ ಮೇಲೆ ನೋಡೋಣ."


"ಇಲ್ಲ.. ಅಪ್ಪ ನನಗೆ ಈ ಸೈಕಲ್  ಬೇಕೇ ಬೇಕು..
ನನ್ನ  ಫ್ರೆಂಡ್ಸ್  ಬಳಿ ಹೊಸ ಸೈಕಲ್ ತರುತ್ತೇನೆ ಅಂತ ಹೇಳಿಬಿಟ್ಟಿದ್ದೇನೆ..
ಇಲ್ಲಾ.. ಅಂದ್ರೆ ನನಗೆ  ಬಹಳ ಅವಮಾನ ಆಗುತ್ತೆ...
 ನನ್ನ  ಫ್ರೆಂಡ್ಸ್ ಎಲ್ಲರ ಬಳಿ  ಇದು  ಇದೆ.. 
ಪ್ಲೀಸ್  ಅಪ್ಪಾ  ನಂಗೆ  ಬೇಕು.. ಪ್ಲೀಸ್ ..."


" ನಿನ್ನ  ಗೆಳೆಯರ ಹತ್ತಿರ ಇದೆ ಅಂತ ನೀನು ಖರಿದಿಸ ಬೇಕಾ..? 
ನಿನ್ನ  ಬಳಿ  ಒಂದು ಸೈಕಲ್ ಇದೆಯಲ್ಲ..
ಅದನ್ನೇ  ಉಪಯೋಗಿಸು.. 
ನಾನೂ ಕೂಡ ನಮ್ಮ ಹೊಸ ಕಾರು ಕೊಡ್ತಾ ಇದ್ದೀನಿ.
ನಮ್ಮ ಹಳೆ ಕಾರು ಉಪಯೋಗಿಸ್ತಿನಿ..
ನಮ್ಮ  ಪರಿಸ್ಥಿತಿ ಕಷ್ಟ ಇದೆ.. ಬಿಸಿನೆಸ್  ಡಲ್  ಆಗಿದೆ.."


ಅಪ್ಪ  ಮುಖ ಗಂಟಿಕ್ಕಿ  ಖಾರವಾಗಿ ಹೇಳಿದ..
ನಾನು ಮುಂದೆ ಮಾತನಾಡಲಿಲ್ಲ...


ನನ್ನ ಗೆಳೆಯರೆಲ್ಲರ  ಬಳಿ ಇದೇ ಸೈಕಲ್ ಇದೆ.
 ನನಗೂ ಬೇಕಿತ್ತು...
ನನಗೆ ಬಹಳ ಅವಮಾನ ಆಗುತ್ತಾದಲ್ಲಾ...
ಅದೂ  ನನ್ನ ಗೆಳೆಯರ ಮುಂದೆ....!
ನನ್ನ  ಮನಸ್ಸೆಲ್ಲ ಹಾಳಾಗಿ ಹೋಯಿತು... 
ಊಟವೂ ಸರಿಯಾಗಿ  ಮಾಡಲಿಲ್ಲ..


ರಾತ್ರಿಯಾಯಿತು... 


ನಾನು ಯಾವಾಗಲೂ ನನ್ನ ಅಜ್ಜಿಯ ಸಂಗಡ ಮಲಗುವದು...


ನನ್ನಜ್ಜಿ ಅಂದರೆ ನನಗೆ ಬಹಳ ಇಷ್ಟ. 


ಅವಳಿಗೆ ಕೋಪ ಬರುವದೇ.. ಇಲ್ಲ.
ನಮ್ಮ ಮನೆಯಲ್ಲಿ ನನ್ನ ಪರವಾಗಿ ಯಾರಾದರೂ  ಮಾತನಾಡುತ್ತಾರೆ ಅಂದರೆ ಅವರು ನನ್ನಜ್ಜಿ..
ಅಜ್ಜಿಗೆ ನನ್ನ ಕಂಡರೆ  ಬಹಳ ಅಕ್ಕರೆ...  
ಅಜ್ಜಿ ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ..
ನನಗೆ ಮಲಗುವಾಗ ಕಥೆ ಹೇಳುತ್ತಾರೆ...


ಇಂದು ಹಾಗೇ ಆಯಿತು...


"ಕಥೆ.. ಹೇಳ ಬೇಕೇನೋ.. ಪುಟ್ಟಾ.. "
ಅಂತ ಪ್ರೀತಿಯಿಂದ  ತಲೆ  ಸವರಿದರು...


ನನಗೆ ಅಳು ಬಂದಂತಾಯಿತು...


"ಅಜ್ಜಿ... ..
 ಕಷ್ಟ.. ಯಾಕೆ  ಕಷ್ಟ  ಆಗೇ  ಇರಬೇಕು... 
ಈ ಕಷ್ಟಗಳೆಲ್ಲ  ಸ್ವಲ್ಪ  ಖುಷಿಯಾಗಿ ಯಾಕೆ ಇರಬಾರದು...? "


"ಯಾಕೋ ಕಂದಾ..?
ನಿನಗೆ ಎಂಥಹ ಕಷ್ಟನೋ...?..! "


" ನೋಡು ಅಜ್ಜಿ.. 
ಅಪ್ಪನಿಗೆ  ಹಣಕಾಸಿನ ಕಷ್ಟ ಅಂತೆ..
ನನಗೆ ಮೊದಲಿನ ಹಾಗೆ  ಪಿಜ್ಜಾ.. ಪಾನಿ ಪುರಿ, 
ಅಯಿಸ್ ಕ್ರೀಮ್ ...
 ಏನೂ ಸಿಕ್ತಾ ಇಲ್ಲ..
ಪೆಪ್ಸಿ ಕುಡಿಯದೆ ಬಹಳ ದಿನ ಆಯ್ತು.. 
 ಇವತ್ತು ಹೊಸ ಸೈಕಲ್ಲು ಬೇಕು ಅಂತ ಕೇಳಿದೆ...
ಅದೂ ... ಆಗಲ್ಲ ಅಂತ ಹೇಳಿ ಬಿಟ್ಟರು..
ಈ... ಕಷ್ಟ   ಇಷ್ಟೆಲ್ಲ  ಕಷ್ಟ ಇರ ಬಾರದು ಅಲ್ಲವಾ...?"


" ಹೌದು  ಪುಟ್ಟಾ...
 ಕಷ್ಟ ಯಾವಾಗಲೂ ಹಾಗೇನೆ.. 
ಅವರವರ ಕಷ್ಟ ಅವರವರಿಗೆ ದೊಡ್ಡದು...
ಆನೆಗೆ  ಆನೆಯಂಥ  ಕಷ್ಟ...
ಇರುವೆಗೆ  ಇರುವೆಯಂಥ  ಕಷ್ಟ.. 
ಎಲ್ಲರಿಗೂ  ಅವರವರ  ಕಷ್ಟ  ದೊಡ್ಡದು..."


" ಈಗ ಹೊಸ ಸೈಕಲ್ಲು ಇಲ್ದೇ ಹೊದ್ರೆ...
 ನನ್ನ ಗೆಳೆಯರ ಮುಂದೆ ಎಷ್ಟು ಅವಮಾನ ಗೊತ್ತಾ ಅಜ್ಜಿ...? 
ಅವರಿಗೆ ನನ್ನ ಮುಖ ಹೇಗೆ ತೋರಿಸಲಿ..??
ತುಂಬಾ  ಅವಮಾನ ಆಗುತ್ತದೆ ಅಜ್ಜಿ...
ಅಪ್ಪನಿಗೆ ಇದೊಂದೂ ಅರ್ಥನೇ ಆಗೋದಿಲ್ಲ... ನನ್ನನ್ನು ಅವರು ಅರ್ಥನೇ ಮಾಡಿಕೊಳ್ಳುವದಿಲ್ಲ..."


" ನೋಡು ನಿನ್ನಪ್ಪನಿಗೆ  ಬಹಳ ಕಷ್ಟ ಇದೆ... 
ಅವರ ಬಿಸಿನೆಸ್ಸ್ ಚೆನ್ನಾಗಿದ್ದಾಗ ನಿನಗೆ  ಏನು ಬೇಕೋ ಅದನ್ನೆಲ್ಲ  ತೆಗೆಸಿ ಕೊಡಲಿಲ್ಲವಾ..?
ಈಗ ತೊಂದರೆ ಇದೆ...
ಸ್ವಲ್ಪ ಅಡ್ಜಸ್ಟ್ ಮಾಡ್ಕೊ.."


" ಅಜ್ಜಿ ...
ನೀನು ಅಪ್ಪನ ಪರವಾಗಿ ಮಾತಾಡ ಬೇಡ. 
ಅಪ್ಪ, ಅಮ್ಮ ಸೇರಿ ನಿಂಗೆ  ಅವಮಾನ ಮಾಡಿದ್ದು ನಂಗೆ ಗೊತ್ತಿದೆ ಅಜ್ಜಿ...
ನಾನು ಸಣ್ಣವನಲ್ಲ .. ನಂಗೆ ಎಲ್ಲವೂ ಅರ್ಥ ಆಗ್ತದೆ... 
ನಿನಗೆ ಸ್ವಲ್ಪನೂ ಬೆಲೆ ಕೊಡುವದಿಲ್ಲ...
 ನಿಂಗೆ ಯಾರೂ ಏನೂ ಕೇಳುವದಿಲ್ಲ..
ನಿನ್ನನ್ನ್ನು ಒಬ್ಬನೆ ಬಿಟ್ಟು ಸಿನೆಮಾಕ್ಕೆ ಹೋಗ್ತಾರಲ್ಲ...
ಪಾರ್ಟಿಗೆ ಹೋಗುವಾಗ ಮನೆಯಲ್ಲಿ ನಿನ್ನ ಒಬ್ಬನೇ  ಬಿಟ್ಟು ..
ಹೊರಗಿನಿಂದ ಬಾಗಿಲಿಗೆ ಬೀಗ  ಹಾಕಿ  ಹೋಗ್ತಾರೆ...
 ನಿನಗೆ  ಅವಮಾನ ಅಲ್ಲವಾ  ಅಜ್ಜಿ..?"


ಅಜ್ಜಿ ಸ್ವಲ್ಪ ಹೊತ್ತು ಮಾತನಾಡಲಿಲ್ಲ... 
ನನ್ನ ತಲೆ ಸವರುತ್ತಿದ್ದರು...
ನಾನೇ ಮಾತನಾಡಿದೆ..


" ಅಜ್ಜಿ.. ...
ನಿಂಗೆ ಇಷ್ಟೆಲ್ಲ ವಯಸ್ಸಾಗಿದೆ... ನೀನು ಕಷ್ಟ ಅನುಭವಿಸಲಿಲ್ಲವಾ..?"


" ಕಷ್ಟ.. ಅನ್ನೋದು  ತುಂಬಾ ವಿಚಿತ್ರ  ನೋಡು... 
ಎಷ್ಟೇ ಅನುಭವಿಸದರೂ....
 ಅದರ ನೆನಪು..
ಅದನ್ನು ದಾಟಿ ಬಂದ ನೆನಪುಗಳು..
ಬಹಳ  ಖುಷಿ ಪುಟ್ಟಾ...   ತುಂಬಾ  ಸುಖ ಕಣೊ..
ನಿಂಗೆ ಇದೆಲ್ಲ ಅರ್ಥ ಆಗೋದಿಲ್ಲ ಬಿಡು..."


" ಅಜ್ಜಿ... ..ಅಜ್ಜಿ....
ನೀನು ಅನುಭವಿಸಿದ  ಅತ್ಯಂತ ಕೆಟ್ಟದಾದ ಕಷ್ಟ ಯಾವುದು..?
ಅಪ್ಪ, ದೊಡ್ಡಪ್ಪನವರನ್ನು ಕಷ್ಟ ಪಟ್ಟು ಬೆಳೆಸಿದೆಯಂತೆ.. 
ಅದು ಕಷ್ಟ ಆಯ್ತಾ..?
ಹೊಲದಲ್ಲಿ ಕೆಲಸ ಮಾಡಿದೆಯಂತೆ..
 ಬೆಳೆ  ಬೆಳೆಯುತ್ತಿದ್ಯಂತೆ...  ಬಡತನ ಇತ್ತಂತೆ...
ಕೈಯಲ್ಲಿ ಹಣ ಇಲ್ಲವಾಗಿತ್ತಂತೆ..
ಇದೆಲ್ಲ  ಬಹಳ ಕಷ್ಟ ಅಲ್ಲವಾ..?"


" ಅದೆಲ್ಲ ಕಷ್ಟ ಅನಿಸಲಿಲ್ಲ ನೋಡು ಪುಟ್ಟ... 
ಆಗ ನನ್ನ ಕಣ್ಣೆದುರಿಗೆ  ನಿನ್ನಪ್ಪ, ದೊಡ್ಡಪ್ಪ ಇದ್ದರಲ್ಲ..
ಅವರಿಗೊಂದು  ಭವಿಷ್ಯ ಮಾಡಬೇಕಿತ್ತಲ್ಲ...
ಹಾಗಾಗಿ ಅದು ಕಷ್ಟ ಅಂತ ಅನಿಸಲೇ ಇಲ್ಲ.."


" ಮತ್ತೆ...  
ನಿನ್ನ  ದೊಡ್ಡ ಕಷ್ಟ  ಯಾವುದು ಅಜ್ಜಿ...?"


ಅಜ್ಜಿ  ಸ್ವಲ್ಪ ಹೊತ್ತು  ಸುಮ್ಮನಾದಳು...
 ಅವಳ ಕೈ  ನನ್ನ ತಲೆ ಸವರುತ್ತಿತ್ತು...


" ಅವತ್ತೊಂದು ದಿನ  ನಮ್ಮನೆಗೆ  ಡಾಕ್ಟರ್ ಬಂದು ..
" ನಿನ್ನ ಗಂಡ  ಹೆಚ್ಚಿಗೆ ದಿನ  ಬದುಕುವದಿಲ್ಲ...
ಈ ರೋಗಕ್ಕೆ  ಔಷಧವಿಲ್ಲ..  
ನಿಮ್ಮ ಸಮಾಧಾನಕ್ಕೆ ಬೇಕಾದರೆ  ಶಿವಮೊಗ್ಗದ ದೊಡ್ಡ ಆಸ್ಪತ್ರೆಗೆ ಹೋಗಿ ಬರಬಹುದು"
 ಅಂದು ಬಿಟ್ಟರು..."


ಹೇಳುತ್ತ ಅಜ್ಜಿ  ಸ್ವಲ್ಪ ಹೊತ್ತು   ಸುಮ್ಮನಾದರು... 
ಮತ್ತೆ ಅವರೆ ಹೇಳಿದರು...


" ಬದುಕಿನ  ಭರವಸೆಯ  ಗಂಡ.. ಸಾಯುತ್ತಾನೆಂದರೂ.. 
ನಂಬಲು ಕಷ್ಟ...
 "ಶಿವಮೊಗ್ಗದ ಡಾಕ್ಟರ್ ಬಳಿ  ಔಷಧ  ಇದ್ದು ಬಿಟ್ಟರೆ..!
ನನ್ನ  ಗಂಡ ಬದುಕಿ ಬಿಟ್ಟರೆ..!!!"  ಅಂತ ಆಸೆ ಆಯ್ತು..
ಆದರೆ... ಕೈಯಲ್ಲಿ ಹಣ ಇಲ್ಲ.."


"ಇದು ತುಂಬಾ ಕಷ್ಟ.. ಅಲ್ಲವಾ  ಅಜ್ಜಿ...? 
ಇದಾ  ನಿನ್ನ  ದೊಡ್ಡದಾದ ಕಷ್ಟ..?"


" ಅದೂ ಕೂಡ ಕಷ್ಟ ಅನಿಸಲಿಲ್ಲ... ಪುಟ್ಟಾ... 
ಕಣ್ಣೆದುರಿಗೆ ಗಂಡ ಇದ್ದನಲ್ಲ...
ಆಗ ನನ್ನ  ಸಹಾಯಕ್ಕೆ ಬಂದವರು ...
 ನನ್ನ ಗಂಡನ ತಮ್ಮ..
ನಿನ್ನ  ಸಣ್ಣಜ್ಜ...
ಆಗ ಅವ   ಇನ್ನೂ  ಹೈಸ್ಕೂಲ್ ಓದುವ  ಹುಡುಗ...
ವಯಸ್ಸಿಗೆ  ಮೀರಿದ  ತಿಳುವಳಿಕೆ...
ಜವಾಬ್ದಾರಿ  ಅವನಿಗೆ....
ಮನೆಯಲ್ಲಿದ್ದ  ಚೂರು ಪಾರು ಬಂಗಾರ  ಶೆಟ್ಟಿಯ ಹತ್ತಿರ  ಇಟ್ಟು ಹಣ ಹೊಂದಿಸಿದೆ..
ಮನೆಯಲ್ಲಿ  ಉಳಿದವರಾರೂ ಸಹಾಯಕ್ಕೆ ಬರಲಿಲ್ಲ...
ಒಟ್ಟು ಕುಟುಂಬ ಆದರೂ...
ಒಬ್ಬಂಟಿಯಾಗಿದ್ದೆ.."


" ಹೌದಜ್ಜಿ...
ಒಟ್ಟಿಗೆ ಇದ್ದಾರೆಂದ ಮೇಲೆ ಕಷ್ಟದಲ್ಲೂ ಇರಬೇಕಲ್ಲ ...ಅಜ್ಜಿ...? 
ಇದು  ತುಂಬಾ  ಕಷ್ಟ ಆಯ್ತಾ..??.."


" ಅದೂ ಕೂಡ ಕಷ್ಟ ಅನಿಸಲಿಲ್ಲ.
ನಿನ್ನ  ಸಣ್ಣಜ್ಜ  ಕಷ್ಟಪಟ್ಟು  ಒಂದು ಗಾಡಿ ವ್ಯವಸ್ಥೆ ಮಾಡಿದ...
ಶಿವಮೊಗ್ಗದ  ದೊಡ್ಡ ಆಸ್ಪತ್ರೆಗೆ ಬಂದೆ...
ದೊಡ್ಡ ಆಸ್ಪತ್ರೆ... ಪಟ್ಟಣ ಬೇರೆ... 
 ಅಲ್ಲಿ  ಸ್ವಲ್ಪ ತೊಂದರೆ ಆಯ್ತು.."


"ಇದಾ...??   ಅಜ್ಜಿ ನಿನ್ನ ದೊಡ್ಡ ತೊಂದರೆ..?..! "


"ಅಲ್ಲಪ್ಪ.....
ಅಲ್ಲಿ  ಡಾಕ್ಟರ್   ಎಲ್ಲ  ಪರಿಕ್ಷೆ ಮಾಡಿ 
 " ಈಗ ಏನೂ ಮಾಡಲಾಗುವದಿಲ್ಲ..ಮನೆಗೆ ಕರೆದು ಕೊಂಡು ಹೋಗಿ.." ಅಂದು ಬಿಟ್ಟರು..
ಹಾಗೆ ಸ್ವಲ್ಪ ಹೊತ್ತಿನಲ್ಲೆಯೆ.. ನನ್ನ  ಗಂಡ..
" ಇನ್ನೂ ಸಣ್ಣ  ಸಣ್ಣ ಮಕ್ಕಳು..
 ಇವರನ್ನೆಲ್ಲ ಹೇಗೆ ದೊಡ್ಡ ಮಾಡ್ತಿಯಾ..?.." 
ಅಂತ ನೋವು, ಸಂಕಟ ಪಡುತ್ತ... 
ಪ್ರಾಣ ಬಿಟ್ಟು ಬಿಟ್ಟರು...
 ಜೀವ ಹೋಗುವಾಗ  ಅವರು ನನ್ನ ಕೈ ಹಿಡಿದು ಕೊಂಡಿದ್ದರು...
ಭರವಸೆಯ  ಗಂಡನೂ  ಒಂಟಿಯಾಗಿ  ಬಿಟ್ಟು ಹೋಗಿದ್ದ...
ಆಗ ಕತ್ತಲಾಗುತ್ತಿತ್ತು.....    
ಒಂದೇ.. ಒಂದು ಆಸೆ ಇತ್ತು.. ಅದೂ ಕೂಡ  ಕರಗಿ ಹೋಯಿತು....."


ಅಜ್ಜಿ ಧ್ವನಿ  ಕಂಪಿಸುತ್ತಿತ್ತು... 
ಸ್ವಲ್ಪ ಹೊತ್ತು ಸುಮ್ಮನಾದರು... 
ಹಳೆಯ ದುಃಖ ಉಮ್ಮಳಿಸಿ ಬಂದಿತ್ತು...


"ಅಜ್ಜಿ... ..
 ಆ ದೇವರು ಬಹಳ ಕೆಟ್ಟವನು .. 
ಹೌದಜ್ಜಿ... ಇದು  ಬಹಳ ಕೆಟ್ಟದಾದ ಕಷ್ಟ.. ಅಲ್ಲವಾ..?"


" ಆಗ ನಂಗೆ  ಮುಂದೇನು ..?
ಅನ್ನುವಂಥಹ ಚಿಂತೆ.. 
ಕಷ್ಟದ ಬಗ್ಗೆ ವಿಚಾರ ಮಾಡುತ್ತ ಕುಳಿತುಕೊಳ್ಳುವಂತಿಲ್ಲ..
ತಿರುಗಿ ಊರಿಗೆ ಹೋಗ ಬೇಕಿತ್ತು..."


" ಆ ಕತ್ತಲೆಯಲ್ಲಿ.. ಪಟ್ಟಣದಲ್ಲಿ ..
 ಗಾಡಿ ಹುಡುಕುವದು  ಕಷ್ಟ ಆಯ್ತಾ  ಅಜ್ಜಿ..?"


"ಇಲ್ಲಪ್ಪ... 
ನಿನ್ನ  ಸಣ್ಣಜ್ಜ  ಇದ್ದಿದ್ದನಲ್ಲ.. 
ಸಣ್ಣ ಹುಡುಗನಾಗಿದ್ದರೂ... 
ವಯಸ್ಸಿಗೆ ಮೀರಿದ ಜವಾಬ್ದಾರಿ ಹೊತ್ತುಕೊಂಡ...
ಎಲ್ಲಿಂದಲೋ ಒಂದು ಗಾಡಿ  ವ್ಯವಸ್ಥೆ ಮಾಡಿದ...
ರಾತ್ರಿಯೇ  ಊರಿಗೆ ಬಂದೆವು... 
ಮನೆಯಲ್ಲಿ  ಎಲ್ಲರೂ ಮೌನ.. 
ಒಬ್ಬರೂ  ಮಾತನಾಡಲಿಲ್ಲ ನೋಡು.."


" ಎಂಥಹ ಜನ ಅಜ್ಜಿ..? 
ನೀನು ಬೇಜಾರದಲ್ಲಿದ್ದೀಯಾ... 
ದುಃಖದಲ್ಲಿದ್ದೀಯಾ.. 
ಯಾರೂ ಮಾತನಾಡಲಿಲ್ಲವಾ..? 
ಇದು ಬಹಳ ಕಷ್ಟ ಅಲ್ಲವಾ  ಅಜ್ಜಿ..?
ಬೇಜಾರದಲ್ಲಿದ್ದಾಗ..
ಯಾರದರೂ ಸಮಾಧಾನ ಮಾಡಲಿ ಅಂತ ಮನಸ್ಸು ಹೇಳುತ್ತದೆ.."


" ಆಗ ನನಗೆ  ಯಾರ ಸಂತ್ವನವೂ  ಬೇಕಿರಲಿಲ್ಲ..
  ಪುಟ್ಟಾ... 
ಕುಹಕ ಮಾತುಗಳಿಂದ ಸ್ವಾಗತ ಮಾಡ್ತಾರೆ ಅಂತ ಗೊತ್ತಿತ್ತು..
ದುಃಖ ಅನ್ನೋದು  ಒಂಟಿ...
ಅದನ್ನು  ಒಬ್ಬನೇ ಅನುಭವಿಸ ಬೇಕು  .. ಕಂದಾ..!
 ಹೆಣವನ್ನು ಬೆಳಿಗ್ಗೆ ಸುಡಬೇಕು ಅಂತ  ಊರವರೆಲ್ಲ ನಿರ್ಧಾರ ಮಾಡಿದರು..
ಮನೆ  ತುಂಬಾ  ಜನ....
ಆದರೆ  ರಾತ್ರಿ ಹೆಣದ ಬಳಿ  ಕುಳಿತು ಕೊಳ್ಳಲು ಯಾರೂ ಮುಂದೆ ಬರಲಿಲ್ಲ.."


" ಅಜ್ಜಿ...
 ಇದು  ಬಹಳ ಕಷ್ಟ ಅಲ್ಲವಾ..? ಹೆದರಿಕೆ ಬೇರೆ.. 
ಅಲ್ಲವಾ ಅಜ್ಜಿ..?"


"ಇಲ್ಲಪ್ಪ...
 ಆ ದೇಹದೊಂದಿಗೆ, ಆ  ಮನುಷ್ಯನೊಂದಿಗೆ..
ಬದುಕು ಕಳೆದಿದ್ದೆನಲ್ಲ... 
ಸುಖ ಸಂತೋಷ ಅಲ್ಲಿ ಇತ್ತಲ್ಲ... 
ಅವನ ನೆನಪು ನನ್ನೊಂದಿಗೆ ಇತ್ತು....
ಅದನ್ನು ಕಾಯುವದು ನನಗೆ  ಕಷ್ಟ ಆಗಲ್ಲಿಲ್ಲ..
ನಿನ್ನ ಅಪ್ಪ, ದೊಡ್ಡಪ್ಪ ಇನ್ನೂ ಚಿಕ್ಕವರು.. 
ನನ್ನ ದುಃಖ ಕಂಡು ಅವರೂ ಅಳುತ್ತಿದ್ದರು...
ಅವರನ್ನೂ  ಸಮಾಧನ ಪಡಿಸುತ್ತ...
ನಾನೂ ಸಮಾಧಾನ ಪಟ್ಟುಕೊಳ್ಳ ಬೇಕಿತ್ತು..."


"ಛೇ.. ಅಜ್ಜಿ...
 ಎಷ್ಟೆಲ್ಲ  ಕಷ್ಟ ನೋದಿದ್ದೀಯಾ...? !
 ಇದೆಲ್ಲ ಬಹಳ ಕಷ್ಟ ಅಲ್ಲವಾ..?"


" ಪುಟ್ಟಾ.... !
ಕಷ್ಟ ಬಂದಾಗ ಅಳುವದು ಅನ್ನುವದು ಇದೆಯಲ್ಲ.. !
ಅದು ನಮಗೆ ದೇವರು ಮಾಡಿದ ಉಪಕಾರ ಕಣಪ್ಪಾ..
ಅಳೋದು  ಗೊತ್ತಿಲ್ಲದೇ.. ಹೋಗಿದ್ರೆ   ಹುಚ್ಚಿಯಾಗಿ ಬಿಡ್ತಿದ್ದೆ...
ಕಣ್ಣಲ್ಲಿ ನೀರು ಬರುವಷ್ಟು ಅತ್ತೆ... 
ನನ್ನ ಗಂಡನ ದೇಹವಲ್ಲವಾ...?
ಯಾರೂ ಬರದಿದ್ದರೂ ... ಹೆಣವನ್ನು  ಕಾದೆ..."


" ಅಜ್ಜಿ....
 ಅಜ್ಜನ ಹೆಣದ ಸಂಗಡ  ರಾತ್ರಿಯೆಲ್ಲ ಇದ್ದೆಯಲ್ಲ.. 
ಅಜ್ಜಿ  ಅದು  ಬಹಳ ಕಷ್ಟ  ಅಲ್ಲವಾ..?"


"ಅದೂ... ಅಲ್ಲಪ್ಪ... 
ಅಲ್ಲಿ ಕುಳಿತಾಗ  ಅಜ್ಜನೊಡನೆ  ಕಳೆದ ನೆನಪು ಇತ್ತು... 
ಪಕ್ಕದಲ್ಲಿ ಮಕ್ಕಳಿದ್ದರು.. 
ಮುಂದೆ ಏನು ಅಂತ  ಕಾಡುವ  ಚಿಂತೆ ಇತ್ತು..
ರಾತ್ರಿ  ಮುಗಿದದ್ದೇ ಗೊತ್ತಾಗಲಿಲ್ಲ.. 
ಬೆಳಗಾಯಿತು.. "


" ಅಜ್ಜಿ... 
ಬೆಳಗಾದ ಮೇಲೆ  ಹೆಣ ಸುಡುತ್ತಾರಲ್ಲ.. 
ಅದು  ಕೆಟ್ಟದಾದ ಕಷ್ಟ ಅಲ್ಲವಾ..?"


 " ಅದು ಅಷ್ಟೆಲ್ಲ ಕಷ್ಟ ಅಲ್ಲಪ್ಪ... 
ಬೆಳಗಾಯಿತು... 
ಮನೆಯಲ್ಲಿ ಎಲ್ಲರೂ  ಬೆಳಗಿನ ತಿಂಡಿಗೆ ತೊಡಗಿದ್ದರು...
ದೋಸೆ  ಮಾಡುವ  ಶಬ್ದ.. ವಾಸನೆ  ಬರ್ತಿತ್ತು..."


ಎನ್ನುತ್ತ ಅಜ್ಜಿಗೆ ದುಃಖವಾಯಿತು... 
ಮಾತನಾಡಲಾಗಲಿಲ್ಲ... 
ಅವರೇ ಸಮಾಧಾನ ಮಾಡಿಕೊಂಡರು...


" ಮನೆಯ ಒಳಗೆ  ಸಿಹಿ ಬೆಲ್ಲದ ದೋಸೆ ಮಾಡಿದ್ದರು..."


" ಎಂಥಹ ಜನ ಅಜ್ಜಿ..!!? 
ನೀನು ದುಃಖ ಇದ್ದೀಯಾ... 
ಮನೆಯವರು  ಬೆಲ್ಲದ ದೋಸೆ  ತಿನ್ನುತ್ತಿದ್ದರಾ..? 
ಇಂಥಹ ಕಷ್ಟ ಯಾರಿಗೂ ಬೇಡ ಅಜ್ಜಿ...
ಇದಲ್ಲವಾ.. ಅಜ್ಜಿ  ಕೆಟ್ಟದಾದ ಕಷ್ಟ..?"


"ಅಲ್ಲಪ್ಪಾ.... 
ಅವರು ಬೆಲ್ಲದ ದೋಸೆ ತಿಂದರೆ  ನನಗೇನು..? 
ನನ್ನ ಗಂಡ ವಾಪಸ್ಸು ಬರ್ತಾನಾ...?
ಅದಲ್ಲಪ್ಪ.. ಪುಟ್ಟಾ...
ಇದ್ಯಾವದೂ.. ಕಷ್ಟವೇ.. ಅಲ್ಲ...!


" ಅಜ್ಜಿ...
ಮತ್ತೆ .. ಯಾವುದು    ಕಷ್ಟ...?"


ಅಜ್ಜಿಯ  ಧ್ವನಿ ಭಾರವಾಯಿತು...
ಅಳುತ್ತಲೇ ಹೇಳುತ್ತಿದ್ದರು...


"ನಮ್ಮ ಜೀವದ ಜೀವ.. 
ಪ್ರೀತಿಯವರ ಹೆಣ ಇಟ್ಟುಕೊಂಡು... 
ಹಸಿವೆಯಾಗುತ್ತದಲ್ಲ...!! 
ಅದು ಅತ್ಯಂತ ಕಷ್ಟ  ಪುಟ್ಟಾ...!!
ಪುಟ್ಟಾ....!
ಅಳಲು ಕಣ್ಣೀರೂ... ಇರುವದಿಲ್ಲ...
ಸತ್ತವರು ಬದುಕಿ ಬರುವದಿಲ್ಲ...


ಬದುಕಿದ್ದವರಿಗೆ  ಹಸಿವೆ ಎನ್ನುವದು ಇದೆಯಲ್ಲ ಪುಟ್ಟ...!


ಆ ಹೆಣದ ಮುಂದೆ ಹಸಿವೆಯಾಗುತ್ತದಲ್ಲ... !
ಅದು  ಬಹಳ ಕೆಟ್ಟದಾದ ಕಷ್ಟ...!
ಆಗ ತಿನ್ನುವದು.... ಇದೆಯಲ್ಲ ಅದು ಬಹಳ ಕಷ್ಟ..!
 ಪುಟ್ಟಾ.....!
ನಾವು ಯಾಕಾದರೂ  ಬದುಕ ಬೇಕು ಎನ್ನಿಸಿ ಬಿಡುತ್ತದೆ.. 
ನಮ್ಮ ಬಗೆಗೆ ನಮಗೆ ಅಸಹ್ಯವಾಗಿಬಿದುತ್ತದೆ...!
ಕಂದಾ..!!..
ನನ್ನ ಗಂಡನ ಹೆಣ ಇಟ್ಟುಕೊಂಡು ನಾನೂ...  ತಿಂದೆ...!"


ಎನ್ನುತ್ತಾ  ಅಜ್ಜಿ ಅಳಲು ಶುರು ಮಾಡಿದರು...


ನನಗೂ   ಅಳು ಬಂತು....
ಕತ್ತಲಲ್ಲಿ ಅಜ್ಜಿಯ ಕಣ್ಣಿರು ಒರೆಸಲು  ತಡಕಾಡಿದೆ...


ಆಗಲಿಲ್ಲ...


ಅಜ್ಜಿಯನ್ನು  ಗಟ್ಟಿಯಾಗಿ  ತಬ್ಬಿಕೊಂಡೆ...










(ಇದು  ಕಥೆ.... )

ಭಾವ ಪೂರ್ಣ ಪ್ರತಿಕ್ರಿಯೆಗಳಿವೆ...
ದಯವಿಟ್ಟು  "ಪ್ರತಿಕ್ರಿಯೆಗಳನ್ನೂ ಓದಿ...



Sunday, January 17, 2010

ನನ್ನದೊಂದು ಪುಟ್ಟ ಸಲಾಮ್....!

ನನ್ನ  ಮಿತ್ರ "ಗೌತಮ್" ಮೊಬೈಲ್ ನಿಂದ ಒಂದು ಮೆಸೆಜ್ ಕೊಟ್ಟಿದ್ದರು..

"ಪ್ರಕಾಶಣ್ಣ ನಿನ್ನ ಬಗ್ಗೆ ಬ್ಲಾಗಿನಲ್ಲಿ ಕವಿತೆ ಬಂದಿದೆ...!


ಮನೆಗೆ ಬಂದು ಲಗುಬಗೆಯಿಂದ ನೆಟ್ ಓಪನ್ ಮಾಡಿದೆ...!


ಅಮೇರಿಕಾದ ಟೆಕ್ಸಾಸ್‍ನಲ್ಲಿರುವ...
 ಸಹೋದರಿ "ವನಿತಾ"ರವರು ಆರ್ಕುಟ್‍ನಲ್ಲಿ ನನಗೊಂದು ಮೆಸೆಜ್ ಇಟ್ಟಿದ್ದರು..
ಹಾಗೆಯೇ ಒಂದು ಲಿಂಕ್ ಕೊಟ್ಟಿದ್ದರು..
ಅಲ್ಲಿ ಕ್ಲಿಕ್ ಮಾಡಿ ಹೋದರೆ..


ಅದು ಕುವೈತ್‍ನಲ್ಲಿರುವ ಗೆಳೆಯ "ಮಹೇಶ್""ಸವಿಗನಸು " ಬ್ಲಾಗ್..


ಅವರ ಬ್ಲಾಗಿನಲ್ಲಿ ನನ್ನ ಬಗೆಗೊಂದು ಕವನ...!


ಅದಕ್ಕೆ ಹಲವಾರು ಪ್ರತಿಕ್ರಿಯೆಗಳು....!




ಇಂದು ಬೆಳಿಗ್ಗೆ ಇನ್ನೊಂದು ಮೆಸ್ಸೆಜು...!


ಕತಾರ್ ದೇಶದಲ್ಲಿರುವ...


ಗೆಳೆಯ "ಮೂರ್ತಿ ಹೊಸಬಾಳೆ "

ನನ್ನ ಬಗೆಗೊಂದು ಲೇಖನ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ...!


ಈಗ್ಗೆ ಕೆಲವು ದಿನಗಳ ಹಿಂದೆ ನನ್ನ ಮತ್ತೊಬ್ಬ ಬ್ಲಾಗ್ ಮಿತ್ರ
( ಜಲಾನಯನ  ಬ್ಲಾಗ್,  ಇವರು  ಕುವೈತ್  ದೇಶದಲ್ಲಿರುತ್ತಾರೆ)
"ಆಝಾದ್ ಭಾಯ್" ನನ್ನ ಬಗ್ಗೆ ತಮ್ಮ ಬ್ಲಾಗಿನಲ್ಲಿ ಬರೆದಿದ್ದರು...


ಬೆಂಗಳೂರಿನಲ್ಲಿ ಕೆಲವೇ ಗಂಟೆಗಳಿದ್ದರೂ..
ನನ್ನನ್ನು ಭೇಟಿಯಾಗಲು ಬಂದಿದ್ದರು...!

ದೂರದ ಊರಿಂದ ಓದುಗ ಗೆಳೆಯರಾದ
ಅನಿಲ್ ಬೆಡ್ಗೆ...
ಶಿವ ಶಂಕರ್ ಯಳವತ್ತಿ...
ನಾಗರಾಜ...
ಕೊಡಗಿನ  ಹಿರಿಯರಾದ "ಪರಮೇಶ್ವರ" ರವರು....


ಇನ್ನೂ ಅನೇಕರ ಹೆಸರು ನೆನಪಾಗುತ್ತಿಲ್ಲ...


ಇವರೆಲ್ಲ ನನ್ನನ್ನು ಭೇಟಿಯಾಗಲು ಬರುತ್ತಾರೆ... !
ತುಂಬಾ ಆತ್ಮಿಯತೆಯಿಂದ  , ಸ್ನೇಹದಿಂದ  ಮಾತನಾಡುತ್ತಾರೆ....!


ನನ್ನ ಆರ್ಕುಟಿನಲ್ಲಿ,
ಫೇಸ್ ಬುಕ್ಕಿನಲ್ಲಿ..
ಈಮೇಲ್ ನಲ್ಲಿ..
ಮೊಬೈಲಿನಲ್ಲಿ...
ಪ್ರೀತಿಯ ಸಂದೇಶಗಳು ನೂರಾರಿವೆ...

ಪ್ರೀತಿಯ ಓದುಗ ಮಿತ್ರರೆ...


ತೀರಾ ಸಾಮಾನ್ಯನಾದ ನನಗೆ ಇದೆಲ್ಲ ಸಂಗತಿಗಳು ಖುಷಿಯಾದರೂ...
ಹೆದರಿಕೆಯನ್ನೂ ಕೊಟ್ಟಿದೆ...
ಇಲ್ಲಿಯವರೆಗೆನೋ... ಬರೆದೆ...
ಸರಿ....
ಇನ್ನೂ ಮುಂದೆಯೂ ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳ ಬಲ್ಲೇನೆಯೇ...?


ನನ್ನ ಜವಾಬ್ದಾರಿ ಹೆಚ್ಚಿಗೆಯಾಗಿಬಿಟ್ಟಿದೆ ... ಅನಿಸಿಬಿಟ್ಟಿದೆ...


ಮತ್ತೆ ಮತ್ತೆ ನನ್ನ ಬಗ್ಗೆ ಬ್ಲಾಗಿನಲ್ಲಿ ಬರೆದುಕೊಳ್ಳಲಿಕ್ಕೆ ಒಂದುರೀತಿಯ ಸಂಕೋಚವಾಗುತ್ತದೆ...
ನನ್ನ ಬ್ಲಾಗ್ ಗೆಳೆಯರ ಸ್ನೇಹಕ್ಕೆ...
ಅವರ ಪ್ರೀತಿಗೆ...
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ....
ಹೃದಯ ತುಂಬಿ ಬಂದಿದೆ...
ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ಧಗಳಿಲ್ಲ...


ನಿಮ್ಮ ಪ್ರೀತಿಗೆ...
ಆತ್ಮೀಯತೆಗೆ...
ಕೃತಜ್ಞತೆಗಳು...
ನನ್ನ ಹೃದಯ ಪೂರ್ವಕ ವಂದನೆಗಳು...


ನಿಜ ಹೇಳ ಬೇಕೆಂದರೆ ನಿನ್ನೆ ಒಂದು ಕಥೆಯನ್ನು ರೆಡಿ ಮಾಡಿ ಇಟ್ಟಿದ್ದೆ...
ಆದರೆ ನನ್ನ ಮಿತ್ರ ಮಹೇಶ್ ತಮ್ಮ ಬ್ಲಾಗಿನಲ್ಲಿ
"ಪ್ರಕಾಶಣ್ಣ ತಮ್ಮ  ಬ್ಲಾಗಿನಲ್ಲಿ "ನಗಿಸುತ್ತಾರೆ" ಅಂದಿದ್ದರು..


ನಾನು ಬರೆದ ಕಥೆಯ ಭಾವ ಸ್ವಲ್ಪ ದುಃಖದ್ದು...


ಹಾಗಾಗಿ ಹಾಕಲಿಲ್ಲ...ನಾಳೆ ಕಥೆಯನ್ನು ಹಾಕುವೆ...


ಮತ್ತೊಮ್ಮೆ.. ಮಗದೊಮ್ಮೆ..
ನಿಮಗೆಲ್ಲರಿಗೂ.. ನನ್ನ ನುಡಿ ನಮನಗಳು...

ನನ್ನದೊಂದು  ಪುಟ್ಟ  ಸಲಾಮ್....!

ಭಾವ..
ಅನುಭಾವ...
ಹೃದಯ..
ಅನುಭವಿಸಿದಾಗ..
ಮಾತು ಬೇಕಿರದ
ಶಬ್ಧಗಳು...
ಪ್ರೀತಿ..
ಸ್ನೇಹ.. ಬಾಂಧವ್ಯ...!!

Saturday, January 9, 2010

ಕನ್ನಡ ಮಾತನಾಡ ಬೇಕು ಅಂತಾರೆ...!! ಹೇಗೆ ಮಾತನಾಡುವದು..?!!

ಇತ್ತೀಚೆಗೆ  ವಾತಾವರಣ ಹೇಗಿರುತ್ತದೆ ಅಂತ ಹೇಳುವದೇ ಕಷ್ಟ..
ಸುಡು ಬಿಸಿಲು..
ಹೊಸ ಪ್ರಾಜೆಕ್ಟಿನ ಮಾರ್ಕಿಂಗ್ ಕೆಲಸ ಮಾಡಿ ಬಂದಿದ್ದೆ..


ದೊಡ್ಡ ಶರೀರ ಹೊತ್ತು  ಬಹಳ ಆಯಾಸವಾಗಿತ್ತು...
ಹಸಿವೆಯೂ ಆಗಿತ್ತು..
ಸಹಕಾರ ನಗರದ "ಶಾಂತಿಸಾಗರದ" ಹೊಟೆಲ್ಲಿನಲ್ಲಿ ಬಹಳ ರಷ್...

ಚೆನ್ನಾಗಿ  ತಿಂದು ಬಿಡೋಣ ಅಂದರೆ ತೂಕದ ನೆನಪಾಗಿ..
ಏನು ಮಾಡೋಣ ಆಂತ ತಲೆಕೆರೆದು ಕೊಳ್ಳುತ್ತ  ನಿಂತಿದ್ದೆ...

ಅದು ಸ್ವಸಹಾಯ ಪದ್ಧತಿಯ ಹೊಟೆಲ್.. ಊಟದ ಚೀಟಿ ತೆಗೆದು ಕೊಂಡರಾಯಿತು ಅಂದುಕೊಳ್ಳುತ್ತಿದ್ದೆ...

"ನಮಸ್ಕಾರ ಸಾರ್...ನೀವು  ಪ್ರಕಾಶಣ್ಣಾ..   ಅಲ್ಲವಾ..?"

ನನಗೆ  ಆಶ್ಚರ್ಯದ ಜೊತೆಗೆ  ಸಿಕ್ಕಾಪಟ್ಟೆ ಸಂತೋಷವೂ ಆಯಿತು..
ಪುಸ್ತಕ ಬಿಡುಗಡೆ ಆದಮೇಲೆ  ಜನಪ್ರಿಯ ಆಗಿಬಿಟ್ಟಿದ್ದೀನಾ..??!!

"ಹೌದು... ನಾನು  ಪ್ರಕಾಶಣ್ಣ...."

"ಸಾರ್... ಇಟ್ಟಿಗೆ ಸಿಮೆಂಟು  ಪ್ರಕಾಶಣ್ಣಾ...ಅಲ್ಲವಾ..??!!!!"

"ದೇವರಾಣೆ ಹೌದು..  ನಾನೇ.. ಆ  ಪ್ರಕಾಶ್ .."
ನನಗೆ  ಹೆಮ್ಮೆಯೂ ಆಗುತ್ತಿತ್ತು..

ಅಕ್ಕಪಕ್ಕದಲ್ಲಿ ಯಾರಾದರೂ ನೋಡುತ್ತಿದ್ದಾರಾ...  ಗಮನಿಸಿಕೊಂಡೆ..
ಎಲ್ಲರೂ ಅವರ ಪಾಡಿಗೆ  ಅವರಿದ್ದರು..

"ಸಾರ್..!! ನಿಮ್ಮನ್ನ  ನೋಡ  ಬೇಕೆಂದು  ಬಹಳ  ಆಸೆ ಇತ್ತು  ನೋಡಿ...
ಎಷ್ಟು  ಖುಷಿ ಆಗ್ತಾ  ಇದೆ  ಗೊತ್ತಾ  ಸಾರ್..!!???!! 
ಇರಿ.. ಸಾರ್.. ಇ..ಇಲ್ಲೇ  ಇರಿ..
ನಮ್ಮ ಅಪ್ಪನನ್ನು  ಕರ್ಕೊಂಡು ಬರ್ತೇನೆ...
ಇ.. ಇಲ್ಲೇ ಊಟ ಮಾಡ್ತಾ ಇದ್ದಾರೆ..ಅವರೂ  ನಿಮ್ಮ  ಫ್ಯಾನ್.. ಸಾರ್.."

ನನಗೆ ಆದ ಆಯಾಸ .., ಹಸಿವೆ ಎಲ್ಲ  ಮರೆತು  ಹೋಯ್ತು..!!

ಬೇಡ  ಅಂತ ಹೇಳುವದೊರಳಗೆ ಆ ಮನುಷ್ಯ  ಜನ ಜಂಗುಳಿಯಲ್ಲಿ ಮಾಯವಾದ...

ಜನ  ಆರ್ಡರ್  ಕೊಡುತ್ತಿದ್ದರು..

ನಾನು ಸ್ವಲ್ಪ ಹಿಂದಾದೆ..
ಇಷ್ಟೊಂದು  ಪ್ರೀತಿ  ತೋರಸ್ತಾ ಇದ್ದಾನೆ ಈ ಮನುಷ್ಯ..!
ಒಮ್ಮೆ ಮಾತನಾಡಿ  ಆಮೇಲೆ  ಊಟದ ಚೀಟಿ ತೆಗೆದು ಕೊಡರೆ ಆಯ್ತು ಅಂತ ಸಮಾಧಾನ ಮಾಡಿಕೊಂಡೆ...

ಸ್ವಲ್ಪ ಹೊತ್ತಿನಲ್ಲಿ ತನ್ನ ಅಪ್ಪನನ್ನು ಕರೆದು ಕೊಂಡು ಬಂದ...
ಅವರು ಊಟ ಮಾಡುತ್ತಿದ್ದರು.. ಅರ್ಧ  ಆಗಿತ್ತು ಅನ್ನಿಸುತ್ತದೆ...

ಎಂಜಲು  ಕೈಯನ್ನು  ಸ್ವಲ್ಪ ಮೇಲೆತ್ತಿಕೊಂಡು ಬಂದರು..

"ಅಪ್ಪಾ.. ಅಪ್ಪಾ...! ಇವರೇ  ಪ್ರಕಾಶಣ್ಣಾ.. ...!!!"

ಅವರು ಎಡಗೈಯಿಂದ ತಲೆ ಕೆರೆದು ಕೊಂಡರು..
ಅವರಿಗೆ  ಅರ್ಧ ಊಟ ಬಿಟ್ಟು ಬಂದಿದ್ದಕ್ಕೋ... ಅಥವಾ.. ನಿಜವಾಗಿಯೂ ನೆನಪಾಗಲಿಲ್ಲವೋ ಗೊತ್ತಾಗಲಿಲ್ಲ...

"ಯಾವ  ಪ್ರಕಾಶ್ ...??!! ಸಾಫ್ಟ್ ವೇರ್.. ಇಂಜನೀಯರ್ರಾ..??
ಅಲ್ಲ ಇವರ ಮುಖ ನೋಡಿದ್ರೆ  ಹಾಗಿಲ್ಲವಲ್ಲಾ..!!"

ನನಗೆ ಸ್ವಲ್ಪ ಅವಮಾನ ಆದಂತಾಯಿತು..

ಆದರೂ ಆ ಹುಡುಗನ ಉತ್ಸಾಹ ನೋಡಿ  ಸುಮ್ಮನೆ  ಬಾರದ ನಗು ನಕ್ಕೆ...

"ಅಪ್ಪಾ... ಈ  ಪ್ರಕಾಶಣ್ಣಾ.. ! ಗೊತ್ತಾಗಲಿಲ್ಲವಾ..??
ಅದೇ... ಚಪಾತಿ..  ಪ್ರಕಾಶಣ್ಣಾ.....!!!..
"ಹೆಸರೇ ಬೇಡ " ಪುಸ್ತಕ..!
 ಚಪಾತಿ  ಪ್ರಕಾಶ್  ಹೆಗಡೆ..!!"

ಅವರ ಮುಖದಲ್ಲಿ ಈಗ  ಸಂತೋಷ ಕಂಡಿತು..
ನನಗೆ ಕಸಿವಿಸಿಯಾಯಿತು..

"ಓಹೋ...ಹಾಗೆ ಹೇಳು ಮತ್ತೆ...!
ಸುಮ್ಮನೆ  ಪ್ರಕಾಶಣ್ಣಾ.....  ಪ್ರಕಾಶಣ್ಣಾ.. ..

ಅಂದ್ರೆ  ಹೇಗೆ  ಗೊತ್ತಾಗ ಬೇಕು..?
ಇವರೇನಾ... ಚಪಾತಿ ಪ್ರಕಾಶ್  ಹೆಗಡೆ..??!!"

ಅವರಿಗೆ  ಆಶ್ಚರ್ಯ ಆಯ್ತೊ.... ಸಂತೋಷ ಆಯ್ತೊ ಗೊತ್ತಾಗಲಿಲ್ಲ...
ಧ್ವನಿ  ಏರಿಸಿ  ಮಾತನಾಡಲು  ಶುರು ಮಾಡಿದರು..

ನನಗೆ  ಇವರು  ಹೊಗಳುತ್ತಿದ್ದಾರೊ... ಏನು ಮಾಡ್ತಿದ್ದಾರೆ ಅರ್ಥ ಆಗಲಿಲ್ಲ...

ಕೆಲವು  ಜನ  ನಮ್ಮೆಡೆಗೆ  ನೋಡಲು ಶುರು ಮಾಡಿದರು...!


"ಸಾರ್... ಎಷ್ಟು  ಚಂದ  ಬರ್ದಿದ್ದೀರಿ ..??  

ನಿಮ್ಮನ್ನು  ನೋಡ  ಬೇಕು.. ಮಾತನಾಡ ಬೇಕು ಅಂತ  ಬಹಳ ಆಸೆ ಇತ್ತು...
ನೋಡಿ.. ಸುಮ್ಮನೆ  ಪ್ರಕಾಶ್   ಅಂದ್ರೆ  ಗೊತ್ತಾಗಲಿಲ್ಲ...
ಬೇಜಾರು ಮಾಡ್ಕೋ ಬೇಡಿ...
"ಚಪಾತಿ  ಪ್ರಕಾಶ್ ಹೆಗಡೆ" ಅಂದ ಮೇಲೆ ಅರ್ಥ  ಆಯ್ತು.."

ತನ್ನ ಮಗನ ಕಡೆಗೆ  ತಿರುಗಿದರು..

" ನಿನಗೆ ಇನ್ನೂ ಬುದ್ಧಿ ಬರ್ಲಿಲ್ಲ ನೋಡು...
ಮೊದಲೇ ಹೇಳ ಬಾರದಿತ್ತೇನೊ.. ಇವರೇ " ಚಪಾತಿ ಪ್ರಕಾಶಣ್ಣಾ.." ಅಂತ...!!"

ನನಗೆ ಈಗ ಹಸಿವೆಯ ನೆನಪಾಯ್ತು...

"ಸರಿ  ಸಾರ್.. ಊಟ ಮಾಡಿ.. ನಾನೂ ಊಟ  ಮಾಡ್ತೇನೆ..."

"ಸಾರ್ .. ಎರಡೇ ನಿಮಿಷ.. ಮಾತಾಡ್ತಿನಿ.. 

ಬಹಳ  ಚಂದ  ಬರಿತಿರಿ ಸಾರ್..! 
 ಈಗ ನೀವು  ಏನು ಮಾಡ ಬೇಕು ಗೊತ್ತಾ..?"

ನನಗೆ ಆಶ್ಚರ್ಯ ಆಯಿತು...!

"ಏನು ಮಾಡ ಬೇಕು..?"

" ಕನ್ನಡ ಸಾಹಿತ್ಯ ಪರಿಷತ್ ನವರಿಗೆ  ಒಂದು ಪತ್ರ ಬರಿಬೇಕು.."

"ಸಾಹಿತ್ಯ ಪರಿಷತ್ ನವರಿಗಾ..?? ಪತ್ರನಾ..? ಏನಂತ ಬರಿಬೇಕು..?"

" ನೋಡಿ ಸಾರ್.. ನಮ್ಮ ಕನ್ನಡಲ್ಲಿ ಕೆಲವು  ಕೆಟ್ಟ ಶಬ್ಧಗಳಿವೆ..
ಅಂಥಹ ಶಬ್ಧಗಳೆನ್ನೆಲ್ಲ ನಮ್ಮ ನಿಮ್ಮೊಂತೋರು  ಹೇಳುವ ಹಾಗೆಯೇ ಇಲ್ಲ.. ಸಾರ್...
 ಅದನ್ನೆಲ್ಲ  ಬದಲಾಯಿಸ ಬೇಕು..
ಅವೆಲ್ಲ  ಹೇಳೊದಕ್ಕೊಂದೆ ಅಲ್ಲ ಸಾರ್.. ನೆನಪಾದರೂ.. ಅಸಹ್ಯ..!
ನೀವೇ ಹೇಳಿ.. !
"ಕಾಚ"  ಅಂತ ಹೇಳೋದು  ಎಷ್ಟು ಕಷ್ಟ..!!
ಅದರಲ್ಲೂ  ಹೆಣ್ಣುಮಕ್ಕಳಿಗೆ  ಬಹಳ  ಕಷ್ಟ.. ಅಲ್ಲವಾ..??"

" ಅದಕ್ಕೆ  ಏನು ಮಾಡ ಬೇಕು...?"

"ನಮ್ಮ  ಸಾಹಿತ್ಯ ಪರಿಷತ್ ನವರು ಅಂಥಹ ಶಬ್ಧಗಳನ್ನು  ಚೇಂಜ್ ಮಾಡ ಬೇಕು..
ಅದಕ್ಕೊಂದು ಕಮೀಟಿ ಮಾಡ ಬೇಕು.. 

ಅದರಲ್ಲಿ ನೀವೂ ಇರಬೇಕು.. ಸಾರ್...
ನೀವು ಇನ್ನೊಂದು ಕೆಲ್ಸಾನೂ ಮಾಡಿ..."

"ಏನು...??"

"ನಮ್ಮ.. ಮುಖ್ಯ ಮಂತ್ರಿ..  ಯಡ್ಯೂರಪ್ಪನವರಿಗೂ  ಒಂದು ಪತ್ರ ಬರೀರಿ..
ಎಲ್ಲರೂ..ಕನ್ನಡ ಮಾತನಾಡ ಬೇಕು ಅಂತಾರೆ...
ಅಂಡರ್ ವೇರ್ ಅಂತಾರೆ... 

ಕಾಚ ಅನ್ನೋದು  ಕಷ್ಟ ಸಾರ್..
ಅದಕ್ಕೆ.. ನಮ್ಮೋಂಥೋರು.. ಇಂಗ್ಲೀಷ್ ಶಬ್ಧ ಬಳಸ್ತೀವಿ...
ನೀವು  ಓಕೆ ಅಂದ್ರೆ  ನಾನೊಂದು  ಕೆಲ್ಸ  ಮಾಡ್ತೇನೆ.."

"ಏನು ಮಾಡ್ತೀರಿ..?"

"ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರಿಗೆ..
ಅದೇ.. ನಾರಾಯಣ ಗೌಡರ ಹತ್ರ ನಾನು ಮಾತಾಡ್ತೇನೆ... ನಂಗೆ ಅವರು ಬಹಳ ಪರಿಚಯ..
ನಂಗೆ ವಾಟಾಳ್ ನಾಗರಾಜ್ ಕೂಡ  ಪರಿಚಯ ಸಾರ್...!!"

ಯಾಕೋ ಪರಿಸ್ಥಿತಿ  ಎಲ್ಲಿಗೋ ಹೋಗ್ತಾ ಇದೆ ಅನ್ನಿಸ್ತು...
  ಈಗ ಸಮಸ್ಯೆ  ಆಯಿತು... ಹೇಗೆ ಇವರಿಂದ ತಪ್ಪಿಸಿಕೊಳ್ಳುವದು...?

" ಅಪ್ಪಾ... 

ಇವರ ಬ್ಲಾಗ್ ನೀವಿನ್ನೂ ಓದಿಲ್ಲ... 
ಅದರಲ್ಲಿ.. "ಹಾವು.. ಆತ್ಮ... " ಇನ್ನೂ  ಏನೇನೋ... ಇದೆ...!!.."

ನಾನು ಅಲ್ಲಿಂದ  ತಪ್ಪಿಸಿ ಕೊಳ್ಳಲೇ ಬೇಕಿತ್ತು...

" ಸಾರ್.. ನೀವು ಊಟ ಅರ್ಧ  ಮಾಡಿದ್ದೀರಿ... 

ನಿಮ್ಮ ಪ್ಲೇಟ್  ಎತ್ತಿಕೊಂಡು ಹೋಗಿ ಬಿಡ್ತಾರೆ.. 
ನಾನು ನೀವು ಕೂತಲ್ಲೇ ಬರ್ತಿನಿ..
ಅಲ್ಲೇ ಮಾತನಾಡೋಣ.. ನೀವು ಹೊರಡಿ..."

ಅವರಿಗೆ ಈಗ ಗಾಭರಿ ಆಯಿತು...!


" ನೋಡೊ.. ಅಲ್ಲಿ..!!

ನನ್ನ ಪ್ಲೇಟ್ ಅಲ್ಲಿದೆಯೋ  ಇಲ್ಲವೋ ಅಂತ... !
ಈ  "ಚಪಾತಿ  ಪ್ರಕಾಶ್ ಹೆಗಡೆಯವರು" ಸಿಕ್ರು ಅಂತ ಉಟ ಬಿಟ್ಟು ಬಂದೆ ..

ಚಪಾತಿ ಬಗ್ಗೆ ಮಾತನಾಡ್ತಾ.. ಊಟ ಮರ್ತು ಬಿಟ್ಟೆ ನೋಡಿ.."

ಈಗ ಮತ್ತೆ ನನ್ನೆಡೆಗೆ ತಿರುಗಿದರು...

" ಉಟಕ್ಕೆ ಬಳಸೋ ಚಪಾತಿಗೆ  ಯಾವ ರೀತಿ ಕರಿಬೇಕು ಸಾರ್..? ಅದಕ್ಕೊಂದು ಬೇರೆ ಶಬ್ದ  ಕಂಡು ಹಿಡಿದು ಬಿಡಿ...!.."

ನಾನು ತಲೆ ಅಲ್ಲಾಡಿಸಿದೆ....
ಅವರು ಮರೆಯಾಗುತ್ತಿದ್ದ ಹಾಗೆ.. ನಾನು ಹೊಟೆಲ್ಲಿನಿಂದ ಹೊರಗೆ ಬಂದೆ..

ಈಗ  ಎಷ್ಟೇ ಹಸಿವಾದರೂ  ಆ ಹೋಟೆಲ್ಲಿಗೆ ಮಾತ್ರ ಹೋಗುವದಿಲ್ಲ...
.....................................................................................
.................................................................................



 ಪ್ರಿಯ ಓದುಗರೇ...
" ಹೆಸರೇ.. ಬೇಡ " ಪುಸ್ತಕದ ಒಂದು ಸಾವಿರ  ಪ್ರತಿಗಳು ಖರ್ಚಾಗಿವೆ...!
ಇದು ನನಗೆ   ಬಲು ದೊಡ್ಡ ಸಂತೋಷದ ಸಂಗತಿ..
ಪುಸ್ತಕ ಪ್ರಪಂಚಕ್ಕೆ ಹೊಸಬನಾದ  ನನಗೆ ಇಂಥಹ ಸ್ವಾಗತದ  ನಿರೀಕ್ಷೆ ಇರಲಿಲ್ಲ...

ನವಕರ್ನಾಟಕದ  ಎಲ್ಲ ಪುಸ್ತಕ ಅಂಗಡಿಗಳಲ್ಲಿ  "ಹೆಸರೇ.. ಬೇಡ" ಸಿಗುತ್ತದೆ...
ಅವರ ಪ್ರೋತ್ಸಾಹಕ್ಕೆ  ನಾನು  ಚಿರ ಋಣಿ...
ಆವರಿಗೆ  ನಾನು ಆಭಾರಿಯಾಗಿದ್ದೇನೆ...


ಅಂಕಿತ ಪ್ರಕಾಶನ ದಲ್ಲೂ "ಹೆಸರೇ.. ಬೇಡ " ಸಿಗುತ್ತದೆ..

ಪ್ರಕಾಶ್  ಕಂಬತ್ತಳ್ಳಿ ಅವರಿಗೆ    ಧನ್ಯವಾದಗಳು...

ಮೊದಲಿನಿಂದಲೂ  ನನಗೆ ಬೆನ್ನುತಟ್ಟಿ ಪ್ರೋತ್ಸಾಹ ಕೊಡುತ್ತಿರುವ 
ನಮ್ಮೆಲ್ಲರ ಪ್ರೀತಿಯ  "ಜಿ. ಎನ್ ಮೋಹನ್ " ರವರಿಗೆ ನಾನು ತುಂಬಾ.. ತುಂಬಾ ಆಭಾರಿಯಾಗಿದ್ದೇನೆ..
ಅವರಿಗೆ  ನನ್ನ ನಮನಗಳು...
"ಅವಧಿಯಲ್ಲೂ " ಹೆಸರೇ ಬೇಡ ಪುಸ್ತಕ ಸಿಗುತ್ತದೆ...


ವ್ಯವಹಾರದಲ್ಲಿ ಸದಾ ಮುಳುಗಿರುತ್ತಿದ್ದ ನನ್ನನ್ನು ..
ನನ್ನ ಬ್ಲಾಗನ್ನು , ನನ್ನ  ಪುಸ್ತಕವನ್ನು ..
ಪ್ರೋತ್ಸಾಹಿಸಿದ ನೆಮಗೆಲ್ಲರಿಗೂ  ನನ್ನ 
ಹೃದಯ ಪೂರ್ವಕ  ವಂದನೆಗಳು...


ನಿಮ್ಮ  ಪ್ರೋತ್ಸಾಹ ಹೀಗೆಯೇ ಇರಲಿ....!!



ಕ್ಷಮಿಸಿ  ..
ಇನ್ನೂ ಒಂದು ವಿಷಯ ಹೇಳುವದಿದೆ...


ಜನಪ್ರಿಯ ಲೇಖಕ  "ಮಣಿಕಾಂತ್ "ರವರ  "ಹಾಡು ಹುಟ್ಟಿದ ಸಮಯ.."
ಪುಸ್ತಕ ಬಿಡುಗಡೆ ನಾಳೆ.. "ರವಿಂದ್ರ ಕಲಾಕ್ಷೇತ್ರದಲ್ಲಿ " ನಡೆಯಲಿದೆ...
ದಯವಿಟ್ಟು ಬನ್ನಿ...
ನಾನು   ಅಲ್ಲಿರುತ್ತೇನೆ....
ನಿಮಗಾಗಿ ಕಾಯುತ್ತೇನೆ.... ಬರುವಿರಲ್ಲಾ..??



( "ಚಪಾತಿ" ವಿಷಯ ಅರ್ಥವಾಗದಿದ್ದಲ್ಲಿ  ದಯವಿಟ್ಟು "ಹೆಸರೇ.. ಬೇಡ"  ಓದಿ...)

Saturday, January 2, 2010

ದೃಷ್ಟಿ... ಭಾವ...

ನನಗೆ ಇನ್ನೂ ಚೆನ್ನಾಗಿ ನೆನಪಿದೆ.....

ಹೆಣ್ಣು ನೋಡುವ ಶಾಸ್ತ್ರಕ್ಕೆ ನಾನೂ ಹೋಗಲೇ ಬೇಕಿತ್ತು...
ಯಾಕೆಂದರೆ ಅದು ನನ್ನ ಮದುವೆಯಾಗಿತ್ತು...


ನಾನು ಮದುವೆಯಾಗುವ ಹುಡುಗಿಯನ್ನು ಅಪ್ಪ, ಅಮ್ಮ ನೋಡಿ  ಫಿಕ್ಸ್ ಮಾಡಿದ್ದರು.
 

"ನೋಡೋ..
ನಿಂಗೆ ಚಂದ, ಅಂದ ನೋಡೊ ವಯಸ್ಸು..
ಹುಡುಗಿಯ ಗುಣ, ಮನೆತನ ಎಲ್ಲ ನೋಡ ಬೇಕಾಗ್ತದೆ..
ನಾವು ಎಲ್ಲವನ್ನೂ ನೋಡಿ ನಿನ್ನ  ಸ್ವಭಾವಕ್ಕೆ ಯೋಗ್ಯವಾದ ಹುಡುಗಿಯನ್ನು ಹುಡುಕಿದ್ದೇವೆ..
ಹುಡುಗಿ ಲೋಕನಿತಿ ಇದ್ದಾಳೆ...
ಬದುಕಲಿಕ್ಕೆ.. ಸಂಸಾರಕ್ಕೆ..

ಬರಿ ಚಂದವೊಂದೆ ಏನೂ ಸಾಲೋದಿಲ್ಲ..
ಆದರೆ  ಉಳಿದ ಎಲ್ಲ ರೀತಿಯಿಂದಲೂ ನಿನಗೆ ಅತ್ಯುತ್ತಮ ಜೋಡಿ.."
 

ಅರ್ಥ ಇಷ್ಟೆ..

ನಿನಗೆ ಹೆಣ್ಣನ್ನು ನಾವು ನೋಡಿದ್ದೇವೆ..
" ನೀನ್ನು  ಬಂದು, ತಲೆಹಾಕಿ  ಒಪ್ಪಿಗೆ ಸೂಚಿಸು..
ನಿರ್ಧಾರ ಮಾಡಿಯಾಗಿದೆ" ಅನ್ನುವಂತಿತ್ತು.


"ಹೇಗಿರ ಬಹುದು... ಹುಡುಗಿ !! ??"
ಕುತೂಹಲದಿಂದ ಹೋಗಿದ್ದೆ...


ತಿಂಡಿ ತಂದು ಕೊಡುವಾಗ ಮುಖ ನೋಡಿದೆ...


ದೊಡ್ಡ ನಿರಾಸೆಯಾಗಿತ್ತು...
ಸ್ವಲ್ಪವೂ ಚಂದ ಇಲ್ಲವಾಗಿತ್ತು.. ಆ ಕಪ್ಪನೆಯ ಹುಡುಗಿ...!
ಯಾವ ರೀತಿಯಿಂದಲೂ..
ಹೇಗೆ ನೋಡಿದರೂ  .. ಸೌಂದರ್ಯ ಶಬ್ಧದ ಅರ್ಥವನ್ನು ಅಲ್ಲಿ ಹುಡುಕುವದು  ಕಷ್ಟವಾಗಿತ್ತು....

ಇವಳ ಜೊತೆ ಜೀವನ ಪೂರ್ತಿ ಬಾಳ ಬೇಕಾ...?


" ನಿಮ್ಮ ಮಗಳ ಹತ್ತಿರ ಒಂದು ಹಾಡು ಹೇಳಿಸಿ... ದಯವಿಟ್ಟು..."
ನನ್ನಪ್ಪ ತನ್ನ ಕೋರಿಕೆ ಇಟ್ಟಿದ್ದ...


ಬಹಳ ಸೌಜನ್ಯದಿಂದ ಆ ಹುಡುಗಿ ಹಾಡು ಹೇಳಿದ್ದಳು...


" ನನ್ನೊಳಗಿನ  ಪ್ರೇಮ ಭಾವದ ಮಳೆಯಿಂದ..
ನಮ್ಮ ಬಾಳ ಹೂ ಅರಳಿಸುವೆ ..
ಗೆಳೆಯಾ...
ಇನಿತು ಜಾಗವು ಸಾಕೆನಗೆ...
ಹೃದಯವ ನಗೆಯ ನಂದನ ಮಾಡುವೆ ..
ಇನಿಯಾ...."


ಅವಳು ಕಣ್ಮುಚ್ಚಿ ತನ್ಮಯಳಾಗಿ ಹಾಡುತ್ತಿರುವಾಗ ನಾನು ಮೈ ಮರೆತಿದ್ದೆ..!!


ಅವಳ ಭಾವದ ಅಲೆಯೊಳು ಮೈ ಮರೆತಿತ್ತು..!!
ನನಗೆ ರೋಮಾಂಚನವಾಗಿತ್ತು....!
 
ಅಂದ ಚಂದವೆಲ್ಲ ಯಾಕೆ  ಬೇಕು...??

ಹಾಡು ಕೇಳಿದ ಮೇಲೆ  ಆ ಹುಡುಗಿ ಬಹಳ ಇಷ್ಟವಾದಳು...!

ಆಗ ನನಗೆ ಅನಿಸಿತ್ತು...
" ಚಂದವೇನೂ ಬೇಕಿಲ್ಲ..
ಅವಳ ಮಧುರ ಕಂಠದ ಹಾಡೊಂದು ಸಾಕು..
ಅವಳನ್ನು ಬೆಟ್ಟದಷ್ಟು ಪ್ರೀತಿಸ ಬಲ್ಲೆ" ಎನಿಸಿತ್ತು....

ಹಾಗೆಯೇ.. ಆಯಿತು...

ಈಗಲೂ ದಿನಾಲು ನಾನು ಸಾಯಂಕಾಲ ಮನೆಗೆ ಹೋದಾಗ ಕಾಫಿ ಕೊಟ್ಟು
ಒಂದು ಚಂದದ ನನ್ನಿಷ್ಟದ ಹಾಡು ಹಾಡುತ್ತಾಳೆ...
ನನ್ನ ಆಯಾಸವೆಲ್ಲ ಮರೆಯಾಗುತ್ತದೆ...
ತಲೆಯಲ್ಲಿ ಕೊರೆಯುವ ಒತ್ತಡಗಳೆಲ್ಲ ಮರೆಯಾಗುತ್ತದೆ...

ನನ್ನ ಹೆಂಡತಿ ಬಲು ಜಾಣೆ...
ಮನೆಯನ್ನು.. ಅಂದವಾಗಿ.. ಚೊಕ್ಕಟವಾಗಿ ಇಟ್ಟುಕೊಳ್ಳುತ್ತಾಳೆ...
ಮಕ್ಕಳನ್ನು  ಚೆನ್ನಾಗಿ ನೋಡಿಕೊಳ್ಳುತ್ತಾಳೆ..

ಮನೆಗೆ ಬಂದ  ಅತಿಥಿಗಳನ್ನು ಚೆನ್ನಾಗಿ ಸತ್ಕಾರಮಾಡುತ್ತಾಳೆ...


ನಾನು ಪುಣ್ಯವಂತ...!

ಒಂದು ಒಳ್ಳೆಯ ಮಡದಿ.. ಚಂದದ ಎರಡು ಮಕ್ಕಳು..
ಯಾರಾದರೂ ಹೊಟ್ಟೆಕಿಚ್ಚು ಪಡುವಂಥಹ ಸಂಸಾರ ನನ್ನದು....


ಎಲ್ಲವೂ ಸರಿಯಾಗಿಯೇ ಇತ್ತು...
ಸ್ವಲ್ಪ ಎಡವಟ್ಟಾಗಿದ್ದು ತೀರಾ ಇತ್ತೀಚೆಗೆ.....


ನಮ್ಮ ಆಫೀಸಿಗೆ ಹೊಸದಾಗಿ ಒಬ್ಬಳು ಹುಡುಗಿ ಬಂದಿದ್ದಾಳೆ..
ಬಹಳ..
ಬಹಳ ಚಂದ ಇದ್ದಾಳೆ..

ಮದುವೆಯಾಗಿ ತುಂಬು ಸಂಸಾರ ನಡೆಸುತ್ತಿರುವ ನಾನು ಅವಳನ್ನು ನೋಡುವದು ತಪ್ಪು ಅಂತೀರಾ..?

ಚಂದವನ್ನು ಇಷ್ಟ ಪಡದ ಮನಸು ಯಾವುದಿಲ್ಲ ಹೇಳಿ..?

ಸಹಜವಾಗಿ ನೋಡಿದೆ... ಮಾತುಕತೆ ಆಯಿತು..

ಸ್ವಲ್ಪ ಸಲುಗೆಯೂ ಆಯಿತು... ಒಂದುದಿನ  ಟೀ ಕುಡಿಯಲೂ ಒಟ್ಟಿಗೆ ಹೋದೆವು...

ಇದಕ್ಕೆಲ್ಲ ಅಪಾರ್ಥ ಭಾವಿಸುವದು ಬೇಡ.. ಎಲ್ಲ ಸ್ನೇಹಿತರಂತೆ ಹೋಗಿ ಹರಟಿದೆವು...

ಅವಳೇ ಮಾತಿಗೆ ಶುರುಮಾಡಿದಳು..

"ನೋಡಿ.. ನಾನು ಒಬ್ಬ  ಡೈವೋರ್ಸಿ... ಸ್ವಲ್ಪ ಬಿಂದಾಸ್ ಸ್ವಭಾವ ನನ್ನದು..
 ನನಗೆ ಮದುವೆಯ ಬಂಧನ ಇಷ್ಟವಾಗಲಿಲ್ಲ...
ನನ್ನ  ಸ್ವಭಾವ ನನ್ನ ಗಂಡನಿಗೂ ಇಷ್ಟವಾಗಲಿಲ್ಲ..
ಇಬ್ಬರೂ ಮಾತಾಡಿಕೊಂಡು  ವಿಚ್ಛೇಧನ ಪಡೆದು ಕೊಂಡೆವು..."


"ಹೌದಾ..!!  ನನಗೆ ನಂಬಲಿಕ್ಕೆ  ಆಗ್ತಿಲ್ಲಾ..."


"ನಾನು ನೇರವಾಗಿ ಮಾತನಾಡುತ್ತೇನೆ.
ನೀವು ಬೇಸರ ಪಟ್ಟುಕೊಳ್ಳುವದಿಲ್ಲ ಅಂದರೆ ನಿಮ್ಮ  ಹತ್ತಿರ ಒಂದು ವಿಷಯ ಕೇಳಬೇಕಿತ್ತು.."


"ಕೇಳಿ... ನಾನು ಬೇಸರ ಪಟ್ಟು ಕೊಳ್ಳುವದಿಲ್ಲ"


" ನನಗೆ ನೀವು ಬಹಳ ಇಷ್ಟವಾಗಿದ್ದೀರಿ..
ಅದಕ್ಕೆ ಪ್ರೀತಿ, ಪ್ರೇಮ ಅಂತ ಬಣ್ಣ ಬಳಿಯುವದಿಲ್ಲ..
ನೀವು ನನ್ನನ್ನು ಎಂಜಾಯ್ ಮಾಡ ಬಹುದು..
ನನ್ನಿಂದ ನಿಮಗೆ ಯಾವುದೇ ಬಂಧನದ ತೊಡಕು ಆಗುವದಿಲ್ಲ...
ಎಲ್ಲಿಯೂ ಹೆಸರು ಹಾಳಾಗಂತೆ ನೋಡಿಕೊಂಡು ಮುದುವರೆಯುವ ..
ನಾನು ನಿಮ್ಮ  ಸಂಸಾರದಲ್ಲಿ  ತೊಂದರೆ ಮಾಡುವದಿಲ್ಲ...
ಆಗ ಬಹುದಾ...?"


ನಾನು ಅವಕ್ಕಾದೆ...!!!
ಇಷ್ಟು ಧೈರ್ಯವಾಗಿ.. ನೇರವಾಗಿ ಒಬ್ಬ ಚಂದದ ಹೆಣ್ಣು ಕೇಳುತ್ತಿದ್ದಾಳೆ ಅಂದರೆ..??


" ನೋಡಿ .. ನಾನು ಅಂಥವನಲ್ಲ...
ನಾನು ನನ್ನ ಹೆಂಡತಿಯಿಂದ ಎಲ್ಲರಿತಿಯಿಂದಲೂ ಸಂತೋಷವಾಗಿರುವೆ..
ಒಳ್ಳೆಯ ಹೆಂಡತಿ.. ಚಂದದ ಮಕ್ಕಳು..

ವಿ ಅರ್ ಹ್ಯಾಪಿ..."


" ನೀವು ಸಂತೋಷವಾಗಿ ನಿಮ್ಮ ಕುಟುಂಬದೊಂದಿಗೆ ಇರಿ..
ನನ್ನಿಂದ ನಿಮ್ಮ  ಸಂಸಾರದಿಂದ ಯಾವ ತೊಂದರೆಯೂ ಆಗುವದಿಲ್ಲ..
ಇಂಥಹದೊಂದು ಸಂಬಂಧ ಹೊಸ ಥ್ರಿಲ್ ಕೊಡುತ್ತದೆ..
ಹೊಸ ಉತ್ಸಾಹ ಕೊಡುತ್ತದೆ..
ನಾನು ಮಾನಗೆಟ್ಟವಳು... ಅಂದು ಕೊಳ್ಳ ಬೇಡಿ..

ನನಗೆ ಹಣದ ತೊಂದರೆಯಿಲ್ಲ.. ನಿಮ್ಮಿಂದ ಹಣ ಕೇಳುವದಿಲ್ಲ.
ನನಗೆ ಈ ಮದುವೆಯ ಬಂಧನ ಇಷ್ಟವಿಲ್ಲ..

ನಾನು ನಿಮ್ಮ ಕಣ್ಣುಗಳಲ್ಲಿ ನನ್ನ ಬಗ್ಗೆ ಆಸಕ್ತಿಯನ್ನು ಕಂಡೆ..
ಅದಕ್ಕೇ ಕೇಳಿದೆ..

ದಯವಿಟ್ಟು ಬೇಸರ ಪಟ್ಟುಕೊಳ್ಳ ಬೇಡಿ..
ಮನೆ ಊಟ ಚೆನ್ನಾಗಿಯೇ ಇರುತ್ತದೆ... ಮಧ್ಯದಲ್ಲಿ ಹೊಟೆಲ್ಲಿನ ಊಟದ ಆಸೆಯಾಗುವದಿಲ್ಲವೆ.. ಹಾಗೆ.."


" ಕ್ಷಮಿಸಿ..

ನಾನು ನಿಮಗೆ ಗೆಳೆಯನಾಗಿ ಇರಬಲ್ಲೆ..
ದಿನದ ಇಪ್ಪತ್ತು ನಾಲ್ಕು ಗಂಟೆ ನನ್ನ ಬಗೆಗೆ ಚಿಂತೆ ಮಾಡುವ ನನ್ನ ಮಡದಿಗೆ ಮೋಸ ಮಾಡಲು ಮನ ಒಪ್ಪುವದಿಲ್ಲ..
ದಯವಿಟ್ಟು ಕ್ಷಮಿಸಿ"


" ನೋಡಿ  ಮಾನಸಿಕವಾಗಿ ಎಲ್ಲರೂ ವ್ಯಭಿಚಾರರೇ...
ಆಹಾರ.. ನಿದ್ರಾ .. ಮೈಥುನ... ತುಂಬಾ  ಸಹಜ..
ಇವೆಲ್ಲ  ದೈಹಿಕ ಅಗತ್ಯಗಳು...

ಇದಕ್ಕೆ ತೀರಾ ಮಹತ್ವ ಕೊಡುವ ಅಗತ್ಯವಿಲ್ಲ ಎನ್ನುವದು ನನ್ನ  ಭಾವನೆ..
ನಿಮಗೆ ತೊಂದರೆ ಆಗುವದ್ದಿದ್ದರೆ ನನ್ನಿಂದ.
ನಾನು ಏನೂ ತೊಂದರೆ ಕೊಡುವದಿಲ್ಲ.
ನಿಮ್ಮ  ಮಡದಿ ನೋಡಲಿಕ್ಕೆ  ಚಂದವಾಗಿದ್ದಾಳಾ...?"


" ನನ್ನ ಹೆಂಡತಿ  ಚಂದವಿಲ್ಲ...

ಅವಳು ಅಂದವಿಲ್ಲ ಅಂತ
ನನಗೆ ಇದುವರೆಗೆ ಅನ್ನಿಸಿಯೇ ಇಲ್ಲ...
ಚಂದದ ರೂಪವಿದ್ದು ... ಹೊಂದಿಕೊಲ್ಲಲಾಗದ ಸ್ವಭಾವಕ್ಕಿಂತ ..
ನನ್ನ ಸ್ಥಿತಿ  ಮೇಲೆಂದು ನನಗನ್ನಿಸುತ್ತದೆ...
ರುಚಿಯಾಗಿ ಅಡುಗೆ ಮಾಡುತ್ತಾಳೆ..
ನನ್ನ ಎಲ್ಲ ಬೇಕು, ಬೇಡಗಳು  ಚೆನ್ನಾಗಿ ಗೊತ್ತು..
ನನ್ನ ತಲೆಯೊಳಗಿನ ವಿಚಾರವನ್ನು ತನ್ನ ಬಾಯಲ್ಲಿ ಹೇಳಿಬಿಡುತ್ತಾಳೆ..
ಅವಳು ನನ್ನ ಮಡದಿ ಅನ್ನುವದಕ್ಕಿಂತ..
ಅವಳು ನನ್ನ ಆತ್ಮೀಯ ಗೆಳೆಯ..

ನನ್ನ  ಬೆಸ್ಟ್ ಫ್ರೆಂಡ್..
ಚಂದವೊಂದೆ ಅಲ್ಲವಲ್ಲ ಜೀವನದಲ್ಲಿ..
ಅವಳು ಚಂದವಿಲ್ಲ ಎಂದು ನನಗೆ ಅನ್ನಿಸಿಯೇ ಇಲ್ಲ..
ಅವಳೊಂದು  ಆದರ್ಶ ಮಡದಿ.. "

"ಹೌದಾ...? ಅವರನ್ನು ನಾನೊಮ್ಮೆ ಭೇಟಿಯಾಗಬೇಕಲ್ಲ...!"

" ಖಂಡಿತ  ಬನ್ನಿ... ನಾಳೆ ಭಾನುವಾರ .. ಊಟಕ್ಕೇ ಬನ್ನಿ.."

ಅವಳು ನನ್ನ ಆಮಂತ್ರಣಕ್ಕೆ ಒಪ್ಪಿದಳು..

ನಾನು ಮನೆಗೆ ಬಂದು ನನ್ನ ಮಡದಿಗೆ ಹೇಳಿದೆ..

" ನಾಳೆ ಭಾನುವಾರ ನಮ್ಮನೆಗೆ ನಮ್ಮ ಆಫೀಸಿನ ಮಹಿಳೆಯೊಬ್ಬರು ಬರುತ್ತಾರೆ..
ಊಟಕ್ಕೆ ಬರುತ್ತಾರೆ... ನಿನ್ನ  ಕೈ ಅಡುಗೆಯ ರುಚಿ ನೋಡಲು"

ನನ್ನಾಕೆಗೂ ಖುಷಿಯಾಯಿತು..ಮನೆಗೆ ಅಥಿತಿಗಳು ಬರುತ್ತಾರೆಂದರೆ ಅವಳಿಗೂ ಇಷ್ಟ...

ಮರುದಿನ ಹತ್ತು ಗಂಟೆಗೆ  ಬೆಡಗಿ ನಮ್ಮನೆಗೆ ಬಂದೇ ಬಿಟ್ಟಳು...
ನಾನು ಸ್ವಾಗತಿಸಿದೆ...

ನನ್ನಾಕೆಯನ್ನು ಕರೆದು ಪರಿಚಯಿಸಿದೆ...

ನಾನು  ಅವಳನ್ನೊಮ್ಮೆ..

ನನ್ನಾಕೆಯನ್ನೊಮ್ಮೆ ಅವಲೋಕಿಸಿದೆ...

ಇವತ್ತು ಬೆಡಗಿ ಬಹಳ ಚಂದವಾಗಿ ಶೃಂಗರಿಸಿಕೊಂಡು ಬಂದಿದ್ದಳು...

ಬಹಳ ಪುರುಸೊತ್ತಿನಿಂದ ದೇವರು ಅವಳನ್ನು ಮಾಡಿದ್ದ ಅನಿಸುತ್ತದೆ..
ಕಣ್ಣು.. ಗಲ್ಲ.. ಮೂಗು ಎಲ್ಲವೂ ಒಪ್ಪವಾಗಿದ್ದವು...

ಹೆಣ್ಣಿನ ಕೆನ್ನೆಯೂ ಇಷ್ಟೊಂದು  ಸುಂದರ ವಾಗಿರುತ್ತದೆ.. ಅಂತ ಗೊತ್ತಿರಲಿಲ್ಲ..

ನಾನು ಅವಳ ತುಟಿಯನ್ನೇ ಗಮನಿಸುತ್ತಿದ್ದೆ...

ಇಷ್ಟೆಲ್ಲ ಚಂದವನ್ನು ಗಮನಿಸುತ್ತಿರುವದು ನಾನು ಇದೇ  ಮೊದಲಾ...?

ಹೆಣ್ಣಿಗೆ ತನ್ನ ಚಂದವನ್ನು ಯಾರಾದರೂ ನೋಡುತ್ತಿದ್ದರೆ ಅದು ಮೊದಲು ಅವಳಿಗೆ ಗೊತ್ತಾಗಿ ಬಿಡುತ್ತದೆ...!
ಬೆಡಗಿ ಮಾತಿಗೆ ಶುರು ಮಾಡಿದಳು..

" ಸರ್ ನಿಮ್ಮನೆ ತುಂಬಾ  ಚೆನ್ನಾಗಿದೆ..
ಎಲ್ಲಕಡೆ  ನಿಮ್ಮಾಕೆಯ  ಕೈ ಕುಶಲತೆ ಎದ್ದು ಕಾಣುತ್ತದೆ..
ನಿಮ್ಮಾಕೆಯ  ಕಲೆಗೆ ನಾನು ಫ್ಯಾನ್ ಆಗಿಬಿಟ್ಟಿದ್ದೇನೆ"

ನನಗೆ ಅಷ್ಟಾಗಿ ಖುಷಿಯಾಗಲಿಲ್ಲ..

ನಮ್ಮನೆಗೆ ಬಂದ ಎಲ್ಲರೂ ಇದೇ ಮಾತು ಹೇಳುತ್ತಾರೆ..

ನಮ್ಮ ಮದುವೆಯ ಅಲ್ಬಮ್ ನೋಡಿದಳು..

"ನಿಮ್ಮನ್ನು ನೋಡಿದರೆ.. ಅಮಿರ್ ಖಾನ್ ನೆನಪಾಗುತ್ತಾನೆ ..
ಅವನ ಸಭ್ಯತೆ.. ಮೃದು ಮಾತು...

ಮಾತಾಡುವ ರೀತಿ  ಎಲ್ಲರಿಗೂ ಇಷ್ಟವಾಗಿಬಿಡುತ್ತದೆ..
ನೀವು ಅವನ ಥರಹವೇ.. ಇದ್ದಿರಿ..."

ಮೆಚ್ಚುಗೆ ಸೂಸಿದಳು... ನನಗೆ ಒಂಥರಾ  ಖುಷಿಯಾಯಿತು..

ಊಟವೂ ಆಯಿತು...
ನನ್ನಾಕೆ ಬಹಳ ಸೊಗಸಾಗಿ ಅಡುಗೆ ಮಾಡಿದ್ದಳು...
ಬಾಯಿ ಚಪ್ಪರಿಸುತ್ತ ತಿಂದಳು.. ಆ  ಬೆಡಗಿ...

ಊಟವಾದ ಮೇಲೆ  ಮಸಾಲೆ ಹಾಕಿದ ಅಡಿಕೆ ಪುಡಿಯನ್ನು ತಂದು ಕೊಟ್ಟಳು ನನ್ನಾಕೆ...

"ರಿ... ನೀವು ಸೊಗಸಾಗಿ ಹಾಡುತ್ತೀರಂತೆ.. ಒಂದು ಹಾಡು ಹೇಳಿ.. ಪ್ಲೀಸ್"

ನನ್ನಾಕೆಗೆ ಹಾಡುವದೆಂದರೆ ತುಂಬಾ  ಖುಷಿ...

"ಹಾಡು ..  ...

ಹಾಡು.. ಹಳೆಯದಾದರೇನು...?
ಭಾವ ನವನೀನ...!!..."

ಬೆಡಗಿಗೆ ಬಹಳ ಖುಷಿಯಾಯಿತು...
" ನಿಮ್ಮ  ಯಜಮಾನರು ನನ್ನ  ಬಳಿ ನಿಮ್ಮ ಬಗ್ಗೆ  ಹೊಗಳಿದ್ದರು..

ನಿಜ ಹೇಳ ಬೇಕೆಂದರೆ ಅವರು ನಿಮ್ಮ  ಬಗ್ಗೆ ಹೇಳಿದ್ದು ಕಡಿಮೆ..
ನಿಮ್ಮ  ಚಟುವಟಿಕೆ.. ಹಾಡು.. ಕಲೆ.. ಎಲ್ಲನೋಡಿ..
ನಾನು ನಿಮ್ಮ  ಫ್ಯಾನ್  ಆಗಿಬಿಟ್ಟಿದ್ದೇನೆ.."

ನನ್ನಾಕೆ  ಮುಗುಳು ನಕ್ಕಳು..

ನಾನು ನನ್ನಾಕೆಯನ್ನೊಮ್ಮೆ ನೋಡಿದೆ...

" ಸ್ವಲ್ಪವಾದರೂ  ಚಂದ  ಇರಬಹುದಾಗಿತ್ತು....
ನನ್ನಾಕೆ...!
ಹೌದು ... ಸ್ವಲ್ಪ  ಅಂದವಾಗಿರ ಬೇಕಿತ್ತು...!!"

ಬೆಡಗಿ  ಸ್ವಲ್ಪ ಹೊತ್ತಿನ  ನಂತರ ಹೊರಟುಬಿಟ್ಟಳು...

ನನ್ನಾಕೆ ನನ್ನ ಪಕ್ಕದಲ್ಲಿ ಕುಳಿತು ಕೊಂಡಳು..

"ರಿ... ಇವತ್ತು ಒಂದು ಹೊಸ ಹಾಡು ನೆನಪಾಯಿತು.. ಹಾಡಲಾ...?"

ನಾನು ನನ್ನಾಕೆ ಕಡೆ ನೋಡಲಿಲ್ಲ...


"ಬೇಡ ಕಣೆ.. ನಾಳೆ ಕೇಳ್ತೀನಿ.. ಈಗ ಸ್ವಲ್ಪ ಹೊತ್ತು ಮಲುಗುತ್ತೇನೆ.."

ದಾಂಪತ್ಯ ಜೀವನದಲ್ಲಿ ಮೊದಲ ಬಾರಿಗೆ  ನನ್ನಾಕೆಯ ಹಾಡು ಕೇಳುವದಿಲ್ಲವೆಂದು ಹೇಳಿದ್ದೆ....

ನನ್ನ ತಲೆಯ ತುಂಬಾ.. ಆ  ಬೆಡಗಿಯ ರೂಪ...
ಅವಳ ಬಿಂದಾಸ್ ಮಾತುಗಳು...

ಅವಳ ಚಂದದ ಮುಖ.. ಆವರಿಸಿಕೊಂಡುಬಿಟ್ಟಿತು..!!

ತಪ್ಪಲ್ಲವಾ ...ನಾನು ಮಾಡುತ್ತಿರುವದು...?

ಹೌದು... ಅಂತ ಎಲ್ಲೋ ಒಂದು ಮೂಲೆಯಲ್ಲಿ ಸಣ್ಣ ಧ್ವನಿಯಲ್ಲಿ ಅಂತರಾತ್ಮ ಹೇಳುತ್ತಿತ್ತು...
ಅದನ್ನು ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ..

ಎರಡು ಮೂರು ದಿನ ಇದೇ  ಚಿಂತೆಯಲ್ಲಿ ಕಳೆದೆ...

ಆಫಿಸಿನಲ್ಲಿ ನನ್ನ ಎದುರಿನ ಟೇಬಲ್ಲಿನ ಮೇಲೆಯೇ ಕುಳಿತುಕೊಳ್ಳುತ್ತಾಳೆ..
ಅವಳನ್ನು ಕಣ್ಣುತುಂಬಾ ತುಂಬಿಸಿಕೊಳ್ಳುತ್ತಿದ್ದೆ...

ಸರಿ.. ನಿರ್ಧಾರ ಮಾಡಿಯೇಬಿಟ್ಟೆ..!!

ಒಮ್ಮೆ ...!!
ಒಮ್ಮೇ ...ಮಾತ್ರ "ಆ ಚಂದ ಏನಿರುತ್ತದೆ..?" ನೋಡಿಯೇ ಬಿಡೋಣ...  
ಅನುಭವಿಸಿಯೇ.. ಬಿಡೋಣ...!
ಮತ್ತೆ ಮತ್ತೆ  ಹೋಗದಿದ್ದರಾಯಿತು...!!

ಜೀವನದಲ್ಲಿ ಒಮ್ಮೆ ಮಾತ್ರ ಅನುಭವಿಸಿ..
ಆಮೇಲೆ  ಹೆಂಡತಿಗೆ ಗಂಡನಾಗಿ ಇದ್ದುಬಿಡೋಣ  ಅಂದುಕೊಂಡೆ...
ಇದು  ತಪ್ಪಲ್ಲ... ಯಾರಿಗೂ ಹೇಳದೆ  ಸುಮ್ಮನಿದ್ದರಾಯಿತು.. ಅಷ್ಟೇ...!

ಬೆಡಗಿ  ಹೇಳಿದ್ದಳು..

"ನಿಮಗೆ  ನಾನು ಬೇಕೆನಿಸಿದಾಗ ಯಾವ ಮುಜುಗರವಿಲ್ಲದೇ ನೇರವಾಗಿ ನನಗೆ ಫೋನ್ ಮಾಡಿ,,
ನಿಮಗೆ ನಾನು ಸ್ವಾಗತಿಸುವೆ..!!"

ನಾನು ಫೋನ್ ಮಾಡಿದೆ...
ಎದೆ ಹೊಡೆದು ಕೊಳ್ಳುತ್ತಿತ್ತು...
ಧ್ವನಿಕಂಪಿಸುತ್ತಿತ್ತು..

"ನೋಡಿ... ನಾನು.. ನಿಮ್ಮನೆಗೆ  ಬರ ಬೇಕೆಂದು ನಿರ್ಧಾರ ಮಾಡಿರುವೆ.. ಬರಲಾ...?"

"ಹೌದಾ...??!! 
ಓಕೆ... ನಾಳೆ ಬರ್ತೀರಾ...?"

ನಾನು ಆಯಿತೆಂದೆ..

ಈ ನಾಳೆ ಯಾವಗ ಇಂದು ಆಗುತ್ತದೆ...!? ಇಂದು ಯಾವಾಗ ಈಗ ಆಗುತ್ತದೆ...??
ಹೊತ್ತು ಹೋಗುವದಿಲ್ಲ.. ಕಾಯುವದು ಬಹಳ ಕಷ್ಟ..

ಮರುದಿನ ಸ್ವಲ್ಪ ಜಲ್ದಿಯೇ ಆಫಿಸಿಗೆ ಬಂದೆ...

ಅವಳು ಬಂದಿರಲಿಲ್ಲ.....!! 
ಮನೆಯಲ್ಲಿ ನನಗಾಗಿ ಕಾಯುತ್ತಿರ ಬಹುದಾ...??
ನನಗೆ ಆಸೆ ಮತ್ತೆ ಗರಿಗೆದರಿತು...!
ಅವಳು ಒಬ್ಬಳೇ ಇರುತ್ತಾಳಲ್ಲ...!!!

ಅವಳಿಗೆ ಫೋನ್ ಮಾಡಿದೆ...

" ನಾನು ಈಗಲೇ ...ಬರಲಾ...? "

"ಬೇಡ ಪ್ಲೀಸ್...
ನಾನು ಸ್ವಲ್ಪ  ತಯಾರಿ ಮಾಡಿಕೊಳ್ಳುತ್ತಿರುವೆ..
ಸಾಯಂಕಾಲ ಬನ್ನಿ.. ಆಫಿಸ್ ಬಿಟ್ಟ ಮೇಲೆ...
ಬೇಸರ ಪಟ್ಟುಕೊಳ್ಳ ಬೇಡಿ..ಪ್ಲೀಸ್.."

ನನ್ನ ಚಡ ಪಡಿಕೆ ಜಾಸ್ತಿಯಾಯಿತು...

ಮನೆಯಿಂದ  ಆಗಾಗ ನನ್ನಾಕೆಯ ಫೋನ್ ಬರುತ್ತಿತ್ತು...
ಇದಕ್ಕೂ ಮೊದಲು ಬಹಳ ಖುಷಿಯಾಗುತ್ತಿತ್ತು..
ಈಗ ಅದು ಹಿಂಸೆಯಾಗುತ್ತಿತ್ತು...

ಸಾಯಂಕಾಲ ಆಫೀಸ್ ಬಿಟ್ಟಿತು.. ಶರವೇಗದಲ್ಲಿ ಅವಳ ಮನೆಯ ಮುಂದೆ ಬಂದಿದ್ದೆ...

ಒಂಥರಾ... ನರ್ವಸ್  ಆಗಿದ್ದೆ...!
ಹೆಂಡತಿ ಬಿಟ್ಟು ಬೇರೆ ಕಡೆ ನೋಡಿಲ್ಲ...!
ಹೊಸ ಅನುಭವ...!
ಹೆದರಿಕೆ.. !
ಹಿಂಜರಿಕೆ...!
ಕಾತುರ....!! ನಡುಗುವ ಕೈಯಿಂದ ಬಾಗಿಲು ತಟ್ಟಿದೆ....

ಬಾಗಿಲು ತೆರೆದಳು...
ಎಷ್ಟು ಚಂದವಾಗಿದ್ದಾಳೆ ಈ ಬೆಡಗಿ...!!
ವಾಹ್...!!
ಮನದ ತುಂಬಾ  ಹೆದರಿಕೆ ಇದ್ದರೂ ಪೇಲವ ನಗೆ ನಕ್ಕೆ...

ನಾನು ಮಾಡುತ್ತಿರುವದು ತಪ್ಪಲ್ಲವಾ...?
ಇಂಥಹ ಸಮದಲ್ಲೇ ಅದೆಲ್ಲ ಯಾಕೆ..??

"ಬನ್ನಿ.. !!

ಬನ್ನಿ.. !!!
ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು..!!.."
ಒಳಗೆ ಕರೆದು ಕೊಂಡು ಹೋದಳು...

" ವಿಶ್ವನಾಥ... ಬನ್ನಿ... ಇಲ್ಲಿ.."
ಯರನ್ನೋ ಕರೆದಳು...!!

ಆ ಮನುಷ್ಯ ಬಂದ...

" ನೋಡಿ  ಇವರು.. ಮತ್ತು.. ಇವರ ಮಡದಿ ನನ್ನಲ್ಲಿ ಹೊಸ ಭರವಸೆ.. ಆಸೆ ಹುಟ್ಟಿಸಿದರು...
ಮದುವೆ ಬಾಂಧವ್ಯದಲ್ಲಿ ನನಗೆ ಭರವಸೆಯೇ ಇರಲಿಲ್ಲವಾಗಿತ್ತು..
ವಿಶ್ವ... ಇವರ ಫ್ಯಾಮಿಲಿಯನ್ನು ನಾವೊಮ್ಮೆ ನೋಡ ಬೇಕು...!
ಬಹಳ ಚಂದದ ಸಂಸಾರ..!!

ಎಷ್ಟು   ಆದರ್ಶ ಸಂಸಾರ...!!
ಒಳ್ಳೆಯ  ಸಂಸಾರಕ್ಕೆ ಚಂದದ ಅವಶ್ಯಕತೆ ಇಲ್ಲ...!!

 
ಎನ್ನುತ್ತಾ  ಆಕೆ ನನ್ನೆಡೆಗೆ ತಿರುಗಿದಳು...


"ನೋಡಿ...
ಇವರನ್ನು ಪರಿಚಯಿಸುವದನ್ನು ಮರೆತು ಬಿಟ್ಟೆ...
ಇವರು ವಿಶ್ವನಾಥ..!

ನನಗಾಗಿ ಹಲವಾರು ವರ್ಷಗಳಿಂದ ಮದುವೆಯಾಗಲು ಕಾಯುತ್ತಿದ್ದರು..
ನಿಮ್ಮನ್ನು.., ನಿಮ್ಮ..

 ಫ್ಯಾಮಿಲಿಯನ್ನು ನೋಡಿದ ಮೇಲೆ  ಮತ್ತೆ ಮದುವೆಯಾಗಲು ನಿರ್ಧರಿಸಿದೆ...!!

ನಿಮಗೆ ನನ್ನ ಕೃತಜ್ಞತೆಗಳು...!!
ನಿಮ್ಮ  ಚಂದದ ಸಂಸಾರಕ್ಕೆ ನನ್ನ  ಅಭಿನಂದನೆಗಳು...!!
ನಿಮ್ಮಿಬ್ಬರ ಹೊಂದಾಣಿಕೆ  ಎಲ್ಲರಿಗೂ ಆದರ್ಶ..!!
ನಿಮ್ಮ ಸಂಸಾರಕ್ಕೆ ಯಾವ ಕೆಟ್ಟ ದೃಷ್ಟಿ ಬೀಳದಿರಲಿ..."



" ಪ್ರೀತಿಯ ಓದುಗರೇ..
ಹೊಸ ವರ್ಷದ ಶುಭಾಶಯಗಳು..."

(ಇದು  ಕಥೆ...)