ನನ್ನ ಮೌನ ನನಗಿಷ್ಟ...
ಮೌನ ನನಗೆ ಅನಿವಾರ್ಯ ಕೂಡ...
ನನ್ನ ಅಪ್ಪ.. ಅಮ್ಮ ..
ಹಿರಿಯರೂ ಇದನ್ನೇ ಹೇಳಿದರು....
"ನೋಡಮ್ಮ...
ನೀನು ಪ್ರಕೃತಿ .. ಹೆಣ್ಣು...
ಮೌನ ...ನಿನಗೆ ಭೂಷಣ..
ಮೌನ .... ನಿನಗೆ ಚಂದ..."
ನನಗೆ ಗೊತ್ತು...
ನಾನು ನೋಡಲಿಕ್ಕೂ ಸುಂದರಿ....
ಈ ಚಂದ ..
ಸೌಂದರ್ಯ ಎನ್ನುವದು ಸಂತೋಷ ಕೊಡುತ್ತದೆ..
ನಿಜ..
ಚಂದದ ಆತಂಕಗಳೇನು ಎನ್ನುವದನ್ನು ಚಂದವಿದ್ದವರನ್ನು ಕೇಳಬೇಕು...
ಬೇರೆಯವರೆಲ್ಲ ಯಾಕೆ...?
ನಾನೇ ಹೇಳುತ್ತೇನೆ ಕೇಳಿ..
ಒಹ್.. !!
ನಾನು ಯಾರೆಂದು ನಿಮಗೆ ಹೇಳಲೇ ಇಲ್ಲವಲ್ಲ... !
ನಾನು ತುಳಸಿ...
ಧರ್ಮಧ್ವಜ... ಮಹಾರಾಜನ ಮಗಳು....
ಮಹಾವಿಷ್ಣುವಿನ ಪರಮ ಭಕ್ತೆ...
ನನ್ನ..
ಮೌನಕ್ಕೆ ಭಾವನೆಗಳಿವೆ.... ಮಾತುಗಳಿವೆ...
ನನ್ನ..
ಮೌನದೊಡನೆ ಮಾತನಾಡುವಷ್ಟು ವ್ಯವಧಾನ ಯಾರಿಗಿದೆ ಹೇಳಿ....?
ನನ್ನ ಅಪ್ಪ ಬಾಡಿದ ಮುಖ ಮಾಡಿಕೊಂಡು ನನ್ನ ಬಳಿ ಬಂದಿದ್ದ..
ದುಗುಡ... ಆತಂಕ ಎದ್ದು ಕಾಣುತ್ತಿತ್ತು...
"ಮಗಳೆ..
ಇದೊಂದು ಇಕ್ಕಟ್ಟಿನ ಪರಿಸ್ಥಿತಿ..
ರಾಕ್ಷಸ ದೊರೆ..
" ಶಂಖಚೂಡ " ನಿನ್ನನ್ನು ಮದುವೆಯಾಗ ಬಯಸಿದ್ದಾನೆ...
ನಾನು ಒಪ್ಪಿಗೆ ಕೊಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ..."
ನಾನು ಸುಮ್ಮನಿದ್ದೆ..
"ಮಗಳೆ...
ನಿನಗೆ ಗೊತ್ತಲ್ಲ...
ನಾನು ನಿನ್ನನ್ನು ಕೊಡುವದಿಲ್ಲ ಅಂತ ಹೇಳಿದರೆ ..
ನಮ್ಮ ರಾಜ್ಯವನ್ನು ಆತ ಸರ್ವ ನಾಶ ಮಾಡಿಬಿಡುತ್ತಾನೆ..
ಈ ರಾಜ್ಯದ ರಾಜನಾಗಿ ..
ನಾನು ಆತಂಕದಲ್ಲಿದ್ದೇನೆ ಮಗಳೆ.."
ರಾಜ್ಯದ ಹಿತಾಸಕ್ತಿಯೋ ..
ಅಧಿಕಾರದ ಆಸೆಯೋ ನಾನು ರಾಕ್ಷಸನನ್ನು ಮದುವೆಯಾಗಬೇಕಿತ್ತು..
ನನ್ನಾಸೆಗಳನ್ನು ಬದಿಗಿಟ್ಟು...
"ಅಪ್ಪಾ...
ಆತ ರಾಕ್ಷಸ.. ಕೆಟ್ಟವ ಅಂತ ಹೇಳಿದವರ್ಯಾರು...?"
"ಇನ್ಯಾರಮ್ಮ...
ನಮ್ಮಂಥ ಮಾನವರು.. ದೇವತೆಗಳು.... "
"ಅಪ್ಪಯ್ಯ..
ಹುಲಿ.. ಸಿಂಹಗಳು ಕ್ರೂರಿಗಳೆಂದು ಹೇಳುವರ್ಯಾರು..?
ನಮ್ಮಂಥವರು ತಾನೆ..?
ಹುಲಿ ಜಿಂಕೆಯನ್ನು ಕೊಲ್ಲುತ್ತದೆ .. ..
ನಮ್ಮನ್ನೂ ತಿಂದುಬಿಡುತ್ತದೆ ಅಂತ..?.. "
"ಅಂದರೆ...?...... "
" ನಮ್ಮ ಹಿತಾಸಕ್ತಿಗಳಿಗೆ ಯಾರಾದರೂ ವಿರೋಧ ಮಾಡಿದರೆ ..
ಅವರು ಕೆಟ್ಟವರಾಗುತ್ತಾರೆ...
ರಾಕ್ಷಸರಾಗುತ್ತಾರೆ.. !..."
ದೇವತೆಗಳಿಗೂ... ರಾಕ್ಷಸರಿಗೂ ಎಷ್ಟೆಲ್ಲ ವರ್ಷಗಳಿಂದ ಯುದ್ಧ ನಡೆಯುತ್ತಿದೆಯಲ್ಲ...
ರಾಕ್ಷಸರೂ ಕಡಿಮೆಯೇನಿಲ್ಲ.."
"ಸ್ವಲ್ಪ ಬಿಡಿಸಿ ಹೇಳಮ್ಮ..."
"ಅಪ್ಪಯ್ಯಾ..
ಈ ದೇವತೆಗಳಿಗೆ ರಾಕ್ಷಸರು ಕೆಟ್ಟವರು !...
ಮನುಷ್ಯರು..
ಮಾನವೀಯತೆ...
ಈ ದೇವತೆಗಳು ..
ಎಲ್ಲರೂ ಸೇರಿಕೊಂಡು ಈ ಜಗತ್ತಿಗೆ ಇಷ್ಟೆಲ್ಲ ವರ್ಷಗಳಿಂದ ಏನು ಮಾಡಿದ್ದಾರೆ...?
ಈ ಒಳ್ಳೆಯವರೆಲ್ಲ ಸೇರಿ ...
ಇಲ್ಲಿತನಕ ಮಾಡಿದ್ದು ಜಗತ್ತಿನ..
ಈ ಭೂಮಿಯ ವಿನಾಶ ತಾನೆ?
ಒಂದು ವ್ಯವಸ್ಥಿತ ಅತ್ಯಾಚಾರ ತಾನೆ?...?.."
ಅಪ್ಪ ಸುಮ್ಮನಿದ್ದ...
"ಪಾಪ..
ಪುಣ್ಯಗಳು .. ತಪ್ಪು.. ಒಪ್ಪುಗಳು ..
ಎಲ್ಲವೂ ..
ಅವರವರ ಮೂಗಿನ ನೇರಕ್ಕೆ ಅಪ್ಪಯ್ಯಾ..."
ನನಗೆ ..
ವೈಯಕ್ತಿವಾಗಿ ನೋವಾದರೆ ಅದು ಅತ್ಯಾಚಾರ...
ಸಂತೋಷವಾದರೆ ಅದು ಸದಾಚಾರ..."
"ಮಗಳೆ..
ಈ ಮದುವೆಗೆ ನಿನ್ನ ಒಪ್ಪಿಗೆ ಇದೆಯಾ ? ... "
" ಅಪ್ಪಯ್ಯಾ..
ನನಗೆ ..
ನನ್ನ ಮೌನಕ್ಕೆ ಆಯ್ಕೆಯ ಸ್ವಾತಂತ್ರ್ಯವೆಲ್ಲಿದೆ...?
ರಾಕ್ಷಸರೋ... ಅಥವಾ ದೇವತೆಗಳೋ..
ಒಳ್ಳೆಯವರೋ... ಕೆಟ್ಟವರೋ...
ಎಲ್ಲರಿಗೂ ಬೇಕಾಗಿದ್ದು ನನ್ನ ಸೌಂದರ್ಯ ತಾನೆ...?
ನನ್ನ ಈ ಚಂದ ..
ಭೋಗಿಸಲ್ಪಡುವದಕ್ಕಾಗಿಯೇ.. ಇದ್ದದ್ದು...
ಉಪಯೋಗಿಸುವದಕ್ಕಾಗಿಯೇ .. ಇದ್ದದ್ದು..
ನನ್ನನ್ನು ಮದುವೆಯಾಗುವವ ..
ನನ್ನ ..
ಅಂದವನ್ನು ಆರಾಧಿಸುತ್ತಾನೋ...
ಭೋಗಿಸುತ್ತಾನೋ... ಗೊತ್ತಿಲ್ಲ...
ಪರಿಣಾಮ ನನ್ನ ದೇಹದ ಮೇಲೆ ತಾನೆ ?..
ಅಪ್ಪ ನನಗೂ ಈ ಭೂಮಿಗೂ ವ್ಯತ್ಯಾಸವೇನಿದೆ...?..
ಭಾಷೆ..
ಶಬ್ಧಗಳು ಏನೇ ಇದ್ದರೂ...
ಯಾವಾಗಲೂ "ಸೌಂದರ್ಯದ" ಮೇಲೆ ನಡೆಯುವದು ..
ಅತ್ಯಾಚಾರವೇ ಅಲ್ಲವೇ ..?
ಅಪ್ಪಾ...
ಮೌನವೆಂದರೆ "ಹೊಂದಾಣಿಕೆ" ಅಲ್ವೇನಪ್ಪಾ.?
ನಾನು ಎಷ್ಟೆಂದರೂ ಪ್ರಕೃತಿ... ಹೆಣ್ಣು...
ಪರಿಸ್ಥಿತಿಗೆ ಹೊಂದಿಕೊಂಡು ಹೋಗುವದೊಂದೆ ಉಳಿದಿರುವ ದಾರಿ...."
ಅಪ್ಪ ತಲೆ ತಗ್ಗಿಸಿದ...
ಅಪ್ಪನ ಅಸಹಾಯಕತೆಗೆ ಇನ್ನಷ್ಟು ಉಪದೇಶ ಕೊಡುವ ಮನಸ್ಸಾಗಲಿಲ್ಲ...
ನಮ್ಮ ಮದುವೆ ಬಲು ವಿಜ್ರಂಭಣೆಯಿಂದ ನಡೆಯಿತು...
ನನ್ನ ಗಂಡ..
ಮೊದಲ ರಾತ್ರಿಯಲ್ಲಿಯೇ.. ನನ್ನ ಮನ ಗೆದ್ದ...
"ನೋಡು...
ಲೋಕದ ಕಣ್ಣಿಗೆ ನಾನು ರಾಕ್ಷಸ...
ನನಗೆ ಬೇಕಾಗಿದ್ದನ್ನು "ಬೇಡಿ "ಅಭ್ಯಾಸವಿಲ್ಲ...
ಬೇಕಿದ್ದನ್ನು ..
ಯಾವ ಮುಲಾಜಿಲ್ಲದೆ ಪಡೆದು ..
ಅನುಭವಿಸುವದು ನನ್ನ ಸ್ವಭಾವ.."
ನನ್ನ ಬದುಕಿನಲ್ಲಿ..
ಮೊದಲ ಬಾರಿಗೆ ..
ನನ್ನ ಬಳಿ ಒಬ್ಬರು ಮುಖವಾಡವಿಲ್ಲದೆ ಮಾತನಾಡಿದ್ದರು... !
ನನಗೆ ಹೆದರಿಕೆ ಆಗಲೇ ಇಲ್ಲ...
ಬಲು ರಸಿಕ ಈ ಶಂಖಚೂಡ ...!
ಮಲಗುವ ಕೋಣೆಯ ಸೊಗಸಾದ ವಿನ್ಯಾಸ..
ಮೃದು ಹಾಸಿಗೆ...
ಉಣ್ಣೆಯ ಹೊದಿಕೆಗಳು...!
ಮೊದಲ ರಾತ್ರಿಯಲ್ಲಿ ಪ್ರೀತಿಯ ಮಳೆಗರೆದ...
ತನ್ನ
ಪೌರುಷ ಶಕ್ತಿಯಲಿ ನನ್ನನ್ನು ತೇಲಿಸಿದ...
ಭೋರ್ಗರೆದ....
ಭೋರ್ಗರೆವ ರಭಸದಲ್ಲೂ ಹಿತವಿತ್ತು....
ಪ್ರೇಮವೋ..
ಕಾಮವೋ....
ದೇಹಕ್ಕೂ ಅದು ಬೇಕಿತ್ತು....
ನನ್ನನ್ನು ಅರ್ಪಿಸಿಕೊಂಡ ಧನ್ಯತಾ ಭಾವನೆಯನ್ನು ಆತ ಮೂಡಿಸಿದ...
ಶಂಖಚೂಡ...ನನಗೆ ಇಷ್ಟವಾದ...
ಮನಸಾರೆ ಪ್ರೀತಿಸಿದೆ...
ಒಳಗಿನ ಹುಳುಕು..
ಕೆಟ್ಟತನವನ್ನು ಮುಚ್ಚಿ ...
ಹೊರಗೆ ಸಭ್ಯತೆಯ ಸೋಗಲಾಡಿತನ ಅವನಲ್ಲಿರಲಿಲ್ಲ....
ನನ್ನ ...
ಅಂತಃಪುರದಲ್ಲಿ ದೊಡ್ಡ ದೊಡ್ಡ ಕಿಡಕಿಗಳಿದ್ದವು...
ದೊಡ್ಡ ದೊಡ್ಡ ಪರದೆಗಳು ಇದ್ದವು..
ಶಂಖಚೂಡ ನನ್ನ ಗಂಡ...
ನನ್ನನ್ನು ಪ್ರೀತಿಸುತ್ತಾನೆ...
ಇಷ್ಟು ಸಾಕಿತ್ತು ನನ್ನ ಅಂತಃಪುರದ ರಾಣಿಯ ಪರದೆಯ ಬದುಕಿಗೆ....
ಹೊರಗಿನ ಪ್ರಪಂಚ ಏನು ಹೇಳುತ್ತದೆ..
ಅಲ್ಲಿ ಏನಾಯ್ತು...? ನನಗೆ ಅದೆಲ್ಲ ಬೇಕಿರಲಿಲ್ಲ..
ಒಂದು ದಿನ ನನ್ನ ಅಪ್ಪ ಬಂದ..
ಮತ್ತೆ ಅದೇ ಆತಂಕದ ಮುಖವಿತ್ತು...
"ಮಗಳೆ....
ನಿನಗೊಂದು ಕೆಟ್ಟ ಸುದ್ಧಿ..."
"ಏನು...?"
"ನಿನ್ನ ಗಂಡನನ್ನು ಸಾಯಿಸಲಿಕ್ಕೆ ...
ದೇವತೆಗಳಲ್ಲಿ ಸಭೆ ನಡೆಯಿತಂತೆ..."
ನನ್ನ ಗಂಡ ದಿನ ನಿತ್ಯ ಯುದ್ಧ ಮಾಡುತ್ತಿದ್ದ....
ಅದು ನನಗೆ ಗೊತ್ತಿತ್ತು...
ನಾನು ಏನ ಮಾತನಾಡಲಿ ಅಂತ ಗೊಂದಲದಲ್ಲಿದ್ದೆ...
ಮೌನವೆಂದರೆ ..
ದ್ವಂದ್ವ .... ಗೊಂದಲ... !
ನಾನು ಮಾತನಾಡಲೇಬೇಕಿತ್ತು...
"ಅಪ್ಪ...
ನನ್ನ ಗಂಡ ರಾಜ....
ಅದರಲ್ಲೂ ಆತ ಲೋಕದ ಕಣ್ಣಿಗೆ ರಾಕ್ಷಸ...
ಯುದ್ಧ ಅವನಿಗೆ ಅನಿವಾರ್ಯ...
ಯುದ್ಧವೆಂದಮೇಲೆ ನೋವಿನ ನಿರೀಕ್ಷೆಯನ್ನೂ ಇಟ್ಟುಕೊಳ್ಳಬೇಕು...."
"ಅದಲ್ಲ ಮಗಳೆ...
ಶಂಖಚೂಡ ಎಷ್ಟೇ ಯುದ್ಧ ಮಾಡಿದರೂ ಅವನಿಗೆ ಸಾವಿಲ್ಲ...!
ನಿನ್ನ ಪಾತಿವೃತ್ಯ ಅವನನ್ನು ಕಾಪಾಡುತ್ತದೆ...
ಕಾಪಾಡುತ್ತಿದೆ...!
ಆತ ಲೋಕ ಕಂಟಕನಾಗಿದ್ದಾನೆ...
ಮಾನವರ..
ಮಾನವೀಯತೆಯ ಹತ್ಯೆ ಮಾಡುತ್ತಿದ್ದಾನೆ...
ದೇವತೆಗಳನ್ನು ಯುದ್ಧದಲ್ಲಿ ಸೋಲಿಸುತ್ತಿದ್ದಾನೆ...."
ನನ್ನ ಅಪ್ಪ ...
ನನ್ನ ಬಳಿ ಯಾವಾಗಲೂ ನೇರವಾಗಿ ಮಾತನಾಡಿಮಾತನಾಡಿದ್ದೇ ಇಲ್ಲ...
ನಾನೇ ..
ಅವನ ಮಾತಿನ ಅರ್ಥವನ್ನು ಮಾಡಿಕೊಳ್ಳಬೇಕಿತ್ತು....
ನಾನು ನನ್ನ ಅಪ್ಪನ ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿದೆ...
"ಅಪ್ಪಯ್ಯಾ...
ನಾನೀಗ ನಿಮ್ಮ ಮಗಳಿಗಿಂತ ..
ನಾನವನ ಧರ್ಮ ಪತ್ನಿ..
ನನ್ನ ಮದುವೆಯ..
ಬಾಳಿನ ಪ್ರಶ್ನೆ ಇರುವಾಗ
ನಿನ್ನ..
ರಾಜ್ಯದ ಹಿತಾಸಕ್ತಿಗಾಗಿ ಇವನೊಡನೆ ನನ್ನ ಮದುವೆ ಮಾಡಿದೆ...
ನಾನಿಲ್ಲಿ ಸುಖವಾಗಿರುವೆ...
ಲೋಕದಲ್ಲಿ ಏನೇ ನಡೆದರೂ ..
ನನಗೂ ಅದಕ್ಕೂ ಏನೂ ಸಂಬಂಧವಿಲ್ಲ...
ನನಗೆ ಅದರ ಅಗತ್ಯವೂ ಇಲ್ಲ..
ನನ್ನಗಂಡ...
ನನ್ನ ಸಂಸಾರ... ನನ್ನ ಗಂಡನ ಸುಖವಷ್ಟೇ ನನಗೆ ಮುಖ್ಯ...."
ಅಪ್ಪ ಹೆಚ್ಚಿಗೆ ಮಾತನಾಡದೆ ಹೊರಟು ಹೋದ...
ಕೊನೆಗೆ ಗೊತ್ತಾಗಿದ್ದು..
ನನ್ನಪ್ಪ ತಾನಾಗಿಯೇ ನನ್ನನ್ನು ನೋಡಲು ಬಂದಿಲ್ಲ...
ದೇವತೆಗಳು ನನ್ನನ್ನು ಮಾತನಾಡಿಸಲು ಕಳಿಸಿದ್ದರಂತೆ....
ನನ್ನ ಪಾತಿವೃತ್ಯದ ಬಗೆಗೆ ವಿಷಯದ ಬಗೆಗೆ ಮಾತನಾಡಲಿಕ್ಕೆ...
ನನ್ನ ಗಂಡ ..
ತನ್ನ ಯುದ್ಧ ಕವಚವನ್ನು ಎಲ್ಲಿಯವರೆಗೆ ಕಳಚುವದಿಲ್ಲವೋ....
ನಾನು ಎಲ್ಲಿಯವರೆಗೆ ಪತಿವೃತೆಯಾಗಿರುತ್ತೇನೆಯೋ..
ಅಲ್ಲಿಯತನಕ ನನ್ನ ಗಂಡನಿಗೆ ಸಾವಿಲ್ಲ....
ಇದು ಸತ್ಯ...
ನನ್ನ ಅಪ್ಪನಿಗೆ ನನ್ನ ಪಾತಿವೃತ್ಯ ಬೇಕಿಲ್ಲವಾಗಿತ್ತಾ... !
ದೇವತೆಗಳಲ್ಲಿ
ಈ ವಿಷ್ಣು ಮಹಾ ಬುದ್ಧಿವಂತ..
ಆತನೇ ಏನಾದರೂ ಉಪಾಯ ಮಾಡಬಹುದೆ?
ನಾನು ಎಷ್ಟೆಂದರೂ ವಿಷ್ಣುವಿನ ಪರಮ ಭಕ್ತೆ...
ನಾನು ಪೂಜಿಸುವ ದೇವರು ನನಗೆ ಅನ್ಯಾಯ ಮಾಡುವದಿಲ್ಲವೆಂಬದು ನನ್ನ ನಂಬಿಕೆ...
ಇಂದು...
ನನ್ನ ಗಂಡ ಯುದ್ಧಕ್ಕೆ ಹೊರಡುವ ಮುನ್ನ ನನ್ನ ಎಡಗಣ್ಣು ಅದುರಿತು...!
ನನಗೆ ಆತಂಕವಾಯಿತು..
ತಕ್ಷಣ ದೇವರಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿದೆ....
ನನ್ನ ಪತಿದೇವ ಯುದ್ಧಕ್ಕೆ ಹೋಗಿ ಸ್ವಲ್ಪದರಲ್ಲೇ ತಿರುಗಿ ಬಂದ....
ನಾನು ಸ್ನಾನ ಮಾಡಿ...
ಪೂಜೆಗೆ ಅಣಿಯಾಗುತ್ತಿದ್ದೆ.... ತಲೆ ಕೂದಲು ಒದ್ದೆಯಿತ್ತು..
ಮುಡಿ ಕಟ್ಟಿಕೊಳ್ಳುತ್ತಿದ್ದೆ...
ಎಂದಿನಂತೆ
ಮೌನವಾಗಿ ನಗು ಮುಖದಿಂದ ಸ್ವಾಗತಿಸಿದೆ...
ಆತ ನನ್ನನ್ನು ತಬ್ಬಿಕೊಂಡ...
ನಮ್ಮ ಮಲಗುವ ಕೋಣೆಯವರೆಗೆ ತಬ್ಬಿಕೊಂಡೇ.. ಬಂದ....!
ಒಮ್ಮೆ "ಬೇಕು" ಅಂತಾದರೆ ...
ಈ ಗಂಡಸರಿಗೆ ತಾಳ್ಮೆಯೇ ಇರುವದಿಲ್ಲ....
ಪ್ರಕೃತಿಯಲ್ಲವೇ ...?
ನನ್ನ ಬೇಕು ಬೇಡಗಳನ್ನು ಕೇಳುವವರ್ಯಾರು..?
ಮೌನವೆಂದರೆ ಒಪ್ಪಿಗೆ......
ಸಮ್ಮತಿ.... !
ನನ್ನನ್ನು ರಮಿಸಿದ...
ಉನ್ಮಾದಿಸಿದ....ಉದ್ರೇಕಿಸಿದ...
ಮಧಿಸಿದ....
ನನ್ನೊಳಗಿನ ಉತ್ಕಟ ಬಯಕೆಗಳನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ...!
ಆತನ ಕ್ರೀಡೆಗಳಿಂದ ..
ನಾನು ಯಾವಾಗಲೂ ಮೈಮರೆತುಬಿಡುತ್ತಿದ್ದೆ...
ಜೊತೆಯಲ್ಲೇ ...
ಜೊತೆಯಾಗಿ ಕೊನೆಯ ಹಂತ ಸೇರಿಸುವ ಆತನ ಪರಿಗೆ ಆತನೇ ಸಾಟಿ... !
ಇಂದು ಯಾಕೋ ಹಾಗೆ ಆಗುತ್ತಿಲ್ಲ....!
ಮುಖ ನೋಡಿದೆ... !
ಹೌದು.. !
ನನ್ನ ಪತಿಯೇ ಹೌದು....
ಕಸಿವಿಸಿ ತಡೆಯಲಾಗಲಿಲ್ಲ....
"ನಿಜ ಹೇಳಿ... ಯಾರು ನೀವು...?"
ಆತ ನಸು ನಕ್ಕ.... ನಿಜ ರೂಪ ತೋರಿಸಿದ....!
ನನಗೆ ದಿಗ್ಭ್ರಮೆ ... !
ನಾನು ದಿನವೂ ಪೂಜಿಸುವ...
ಆರಾಧಿಸುವ ನನ್ನ ದೇವರು... ! ಮಹಾವಿಷ್ಣು... !!
ಛೇ.... !!
ಇವನೆದುರು ಬೆತ್ತಲಾದೇನೆ?
ಅಸಹ್ಯ... ಜಿಗುಪ್ಸೆ....
ಅಸಹಾಯಕತೆ...
ದುಃಖ... ಕೋಪ.... ನನಗೆ ಏನು ಮಾಡಬೇಕೆಂದು ತೋಚಲಿಲ್ಲ... !
ಮೌನ ..
ಅಸಹಾಯಕತೆ !!
ವಿಷ್ಣುವೇ ಮಾತನಾಡಿದ...
"ನಿನ್ನ ಗಂಡ ರಾಕ್ಷಸ...
ಲೋಕ ಕಂಟಕ....
ಅಲ್ಲಿ ಯುದ್ಧದಲ್ಲಿ ಶಿವ ನಿನ್ನ ಗಂಡನನ್ನು ವಧಿಸಿಯಾಗಿದೆ.....
ಬೇಸರಿಸದಿರು...
ಇದೆಲ್ಲವೂ ಲೋಕ ಕಲ್ಯಾಣಕ್ಕಾಗಿ..."
ನಾನು ಪೂಜಿಸುವ..
ಆರಾಧಿಸುವ ದೇವರ ಬಾಯಲ್ಲಿ ಇಂಥಹ ಮಾತು !!
"ವಿಷ್ಣು....
ನಿನಗೂ ನನ್ನ ಚಂದವೇ ಬೇಕಾಯಿತೆ...?
ನನ್ನ ಮನಸ್ಸು..
ನನ್ನ ಭಾವಗಳಿಗೆ ಬೆಲೆಯೇ ಇಲ್ಲವಾಯಿತೆ...?..
ಇದು ಯಾವ ನ್ಯಾಯ...? ಇದು ಅತ್ಯಾಚಾರವಲ್ಲವೆ?
ನನಗೇಕೆ ಈ ಶಿಕ್ಷೆ.. ?.. "
ವಿಷ್ಣು ಮುಗುಳ್ನಕ್ಕ...
" ತುಳಸಿ...
ನನ್ನಲ್ಲೂ ನಿನಗೆ ಪ್ರಶ್ನೆಯೆ...?... "
"ಪೂಜೆ ಮಾಡುತ್ತೇವೆ ಎಂದಾಕ್ಷಣ ಪ್ರಶ್ನಿಸ ಬಾರದೆ...?
ಲೋಕ ಕಲ್ಯಾಣಕ್ಕಾಗಿ ..
ಹತ್ತಾರು ಅವತಾರಗಳನ್ನು ಎತ್ತುವವನು ನೀನು...!
ನನ್ನಂಥಹ ಹುಲು ಮಾನವಳ ..
ಪಾತಿವೃತ್ಯ ಹರಣಕ್ಕೆ ನೀನೇ ಬರಬೇಕಾಯಿತೆ...?
ಮನ್ಮಥನನ್ನು ಕಳಿಸಿ ..
ನನ್ನ ಮನಸ್ಸನ್ನು ಚಂಚಲಗೊಳಿಸ ಬಹುದಿತ್ತಲ್ಲವೆ...?
ವಿಷ್ಣು...
ನಿನ್ನ ಪರಮ ಭಕ್ತೆಯಾದ ನನ್ನಲ್ಲೂ ಕೆಟ್ಟ ಕಾಮದಾಸೆಯೇ...?
ಛೀ...!"
ಕೋಪದಿಂದ ನನ್ನ ಮೈ ಅದುರುತ್ತಿತ್ತು....
ದೇವರಿಂದಲೇ ...
ಸೃಷ್ಟಿಯಿಂದಲೇ..... ಪ್ರಕೃತಿಯ ಮೇಲೆ ಅತ್ಯಾಚಾರವೇ...?...
ಆತ ಮುಗುಳ್ನಕ್ಕ....
"ಬೇಸರಿಸದಿರು ..
ತುಳಸಿ..
ಲೋಕಕಲ್ಯಾಣಕ್ಕಾಗಿ ಇದೆಲ್ಲ...!
ನಿನಗೊಂದು ವರವ ಕೊಡುವೆ....
ನನ್ನ ..
ನಿತ್ಯದ ಪೂಜೆ ತುಳಸಿ ದಳದ ಸಂಗಡ ಪೂಜಿಸಲಿ...
ಅದು ನನಗೆ ಶ್ರೇಷ್ಠ ಪೂಜೆಯಾಗಲಿ...""
ನನಗೆ ಮತ್ತೂ ಕೋಪ ಉಕ್ಕಿತು...
"ವಿಷ್ಣು...
ಇದು ಅತ್ಯಾಚಾರ...!
ನನ್ನ ಮನಸ್ಸಿನ ಮೇಲಿನ ಬಲಾತ್ಕಾರ.... !
ಅತ್ಯಾಚಾರಕ್ಕೆ ಯಾವ ಬಣ್ಣಕೊಟ್ಟರೇನು...?..
ಅಧಿಕಾರದವರು...
ದೊಡ್ಡವರು ಮಾಡಿದರೆ... ಅದು ಸದಾಚಾರವೆ..?
ವರಗಳ .. ಪರಿಹಾರಗಳ .... ಆಸೆ ತೋರಿಸುತ್ತೀಯಾ.. ?
ನಿನಗೆ ನನ್ನ ಧಿಕ್ಕಾರವಿದೆ ..... !! "
ನಾನು ಧಿಕ್ಕರಿಸಿದೆ....
ವಿಷ್ಣು ನನ್ನನ್ನು ರಮಿಸಿದ...
ತಿಳಿಸಿ ಹೇಳಿದ...
ಬುದ್ಧಿವಂತರ ನಡೆಯೇ ಹಾಗೆ....!
ಅವರ ಎಲ್ಲ ಕಾರ್ಯಗಳಿಗೂ...
ಅವರಲ್ಲಿ...
ಎಲ್ಲಕ್ಕೂ ಉತ್ತರ... ಪರಿಹಾರವಿರುತ್ತದೆ....
ಆತನ ವಾದ ಸರಣಿಗೆ ನಾನು ಮೌನವಾಗಬೇಕಾಯಿತು ..
ಲೋಕದ ಹಿತಕ್ಕಾಗಿ..
ನನ್ನ ಮೇಲಿನ ಅತ್ಯಾಚಾರವನ್ನೂ ಸಹಿಸಬೇಕಾಯಿತು....
"ವಿಷ್ಣು...
ನಿನ್ನ ವರವನ್ನು ಒಪ್ಪುವೆ...
ಉಳ್ಳವರ..
ಬುದ್ಧಿವಂತರ ಮುಂದೆ ನನ್ನದು ಯಾವ ಆಟ..?
ಸಮಸ್ತ ಜಗತ್ತಿನ ...
ಅಸಹಾಯಕ ..
"ಮೌನ ಪ್ರಕೃತಿಯ" ಮೇಲಿನ ಅತ್ಯಾಚಾರಕ್ಕೆ.. ಪ್ರತಿಭಟನೆಯಾಗಿ..
ಅನಿವಾರ್ಯವಾಗಿ..
ನಿನ್ನ ವರವನ್ನು ಒಪ್ಪುವೆ...."
ವಿಷ್ಣು ಮುಗುಳ್ನಕ್ಕ....
ನನ್ನ ಹಿಂದಿನ ಜನ್ಮಗಳ ಕಥೆ ಹೇಳಿದ.....
ನಾನು ಮತ್ತೆ ಮೌನವಾದೆ ಎಂದಿನಂತೆ......
ಈ ..
ಮೌನ ...
ಒಂದು ಪ್ರತಿಭಟನೆ....
ಅಂತರಂಗದಲಿ ನಡೆಯುವ ಯುದ್ಧ.. !
ಕುದಿಯುವ ಜ್ವಾಲಾಮುಖಿಯಂತೆ ....
ಭೂಕಂಪದಂತೆ....
ಪ್ರಳಯದಂತೆ....
( ಪುರಾಣದ ತುಳಸಿ ಕಥೆಯ ..
ಎಳೆ ಎಳೆಯ ಜೋತೆಗೆ..
ನನ್ನ ಒಂದಿಷ್ಟು ಕಲ್ಪನೆ... ಈ ಕಥೆ...
ಆಸ್ತಿಕ ಮನಗಳ ಕ್ಷಮೆ ಕೋರಿ....)
ಚಂದದ ಪ್ರತಿಕ್ರಿಯೆಗಳಿವೆ ದಯವಿಟ್ಟು ನೋಡಿ....
.