ನಮಗೆಲ್ಲ ಹೆದರಿಕೆ ಆಯಿತು..
"ಪಕ್ಕೇಶ್ ಹೆಗ್ಡೆರೆ ...
ಹೆದರ್ ಬೇಡ್ರಾ...
ಇದು "ಹಸಿರುಳ್ಳೆ" ಹಾವು..
ಇದು ಎಂತಾ ಮಾಡಿದ್ರೂ.. ಕಚ್ಚೂದಿಲ್ಲ... ನೋಡಿ.."
ಎಂದು ಅದರ ಬಾಯೊಳಗೆ ಬೆರಳು ಹಾಕಿ ತೂರಿಸಿದ..!
ನಮಗೂ ಸ್ವಲ್ಪ ಧೈರ್ಯ ಬಂತು...!
ನಾವು ಮುಟ್ಟಿ... ಕೊರಳಿಗೆ ಎಲ್ಲ ಸುತ್ತಿಕೊಂಡು ಆಟ ಆಡಿದೆವು..
ಯಾಕೋ ಆ ಹಾವಿನ ಮೇಲೆ ಪ್ರೀತಿಯೂ ಬೆಳೆಯಿತು..
ನಾಗುವಿಗೆ ಒಂದು ಉಪಾಯ ಬಂತು...
"ಕುಷ್ಟಾ..
ಈ ಹಾವನ್ನು ನಾವು ಸಾಕಿದರೆ ಹೇಗೆ?..
ಈ ಹಾವು ನಮಗೆ ಸಹಾಯ ಮಾಡಬಹುದಾ?
ಮೊನ್ನೆ ಒಂದು ಸಿನೇಮಾದಲ್ಲಿ ..
ಹಾವು ಒಬ್ಬ ಹುಡುಗನಿಗೆ ಸಹಾಯ ಮಾಡುತ್ತಿತ್ತಲ್ಲ ಹಾಗೆ.."
"ನಾಗಣ್ಣ.. ಇದೆಲ್ಲ ನಮಗೆ ಯಾಕ್ರ ಉಸಾಬರಿ..? "
"ಇಲ್ಲಾ ಕುಷ್ಟ ..
ನಾವು ಇದನ್ನು ಸಾಕೋಣ.."
ನಾಗು ಹೇಳಿದ ಮೇಲೆ ಅದಕ್ಕೆ ಯಾರೂ ಏನೂ ಹೇಳುವದಿಲ್ಲವಾಗಿತ್ತು...
ಸರಿ...
ಮನೆಗೆ ಬಂದು ಅಟ್ಟದ ಮೇಲಿಂದ "ಕಸ್ತೂರಿ ನೀಲಮ್ ಬಾರ್ ಸೋಪ್" ರಟ್ಟಿನ ಬಾಕ್ಸನ್ನು ತೆಗೆದೆವು...
ಅದರ ಮೇಲಿನ ಕವರನ್ನು ಕತ್ತರಿಸಿ ಅದಕ್ಕೆ ಪ್ಲಾಸ್ಟಿಕ್ ಅಂಟಿಸಿದೆವು..
ನಮಗೆ ಹೊರಗಿನಿಂದ ನೋಡಲು ಅನುಕೂಲವಾಗಲಿ ಅಂತ..
ಆ ಪ್ಲಾಸ್ಟಿಕ್ಕಿಗೆ ಮಧ್ಯದಲ್ಲಿ ನಾಲ್ಕೈದು ತೂತುಗಳನ್ನು ಮಾಡಿದೆವು..
ಹಾವಿಗೆ ಉಸಿರಾಡಲು ಆಗಲಿ ಅಂತ..!
ರಟ್ಟಿನ ಬಾಕ್ಸಿನ ಒಳಗೆ ಒಂದು ತೆಂಗಿನ ಕಾಯಿ "ಗರಟೆ" ಇಟ್ಟು ಅದರಲ್ಲಿ ನೀರು ತುಂಬಿದೆವು..
ಹಾಗೆ ಅಕ್ಕಿ ಕಾಳುಗಳನ್ನು ಹಾಕಿದೆವು...
ಹಾವು ಅಕ್ಕಿ ತಿನ್ನ ಬಹುದು ಅಂತ...!
ದಿನಾಲೂ ಸ್ಕೂಲ್ ಬಿಟ್ಟು ಬಂದು ರಟ್ಟಿನ ಬಾಕ್ಸಿನ ಮುಂದೆ ನಮ್ಮ ಮೀಟಿಂಗು...
ದಿನ ಕಳೆಯುತ್ತಿದ್ದ ಹಾಗೆ ಆ ಹಾವು ಯಾಕೋ ಡಲ್ ಆಗತೊಡಗಿತು...
ಆಗ...
ನಮ್ಮೂರ ಶಾಲೆಯಲ್ಲಿ ನಾವು ಕಲಿಯುವಾಗ ಏಳನೆ ತರಗತಿಯವರೆಗೆ ಎರಡೆ ಮಾಸ್ತರು..
ಮಾಸ್ತರರಿಗೆ ಬಹಳ ಕಷ್ಟವಾಗುತ್ತಿತ್ತು..
ಹಾಗಾಗಿ ಊರವರೆಲ್ಲ ಒಂದು ಸಭೆ ಮಾಡಿ ಪಕ್ಕದ ಊರಿಂದ ಒಬ್ಬ "ಅಕ್ಕೋರನ್ನು" ನೇಮಕ ಮಾಡಿಕೊಂಡರು..
"ಲೇಡಿ ಟೀಚರನ್ನು "ಅಕ್ಕೋರು" ಅಂತ ಕರೆಯುತ್ತಿದ್ದೇವು..
ಅವರು ಬಹಳ ಕಟ್ಟುನಿಟ್ಟಿನ, ಶಿಸ್ತಿನ "ಅಕ್ಕೋರ್ರಾಗಿದ್ರು..
ಆಗತಾನೆ ಇಂಗ್ಲೀಷ್ ಶುರುವಾಗಿತ್ತು..
ನಮಗೂ ಉತ್ಸಾಹ..
ನಮ್ಮ ಅಕ್ಕೋರ್ರು ಕನ್ನಡದ "ಅ.. ಆ.. ಇ ಈ.." ಗಳನ್ನು ಇಂಗ್ಲೀಷಿನಲ್ಲಿ ಬರೆಸುತ್ತಿದ್ದರು..
ಅದನ್ನು ಕಲಿತ ಮೇಲೆ ನಮ್ಮ ಹೆಸರುಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಹೇಳಿದರು..
" ನಾಗೇಶಾ..... ನಿನ್ನ ಹೆಸರಿನ ಸ್ಪೆಲ್ಲಿಂಗ್ ಹೇಳೊ.."
"ಅಕ್ಕೋರ್ರೆ.... N.. A . G.. E.. S..H..A.."
" ನಾಗೂ..ನಿನ್ನ ಹೆಸರಲ್ಲಿ ಕೊನೆಯಲ್ಲಿ "A " ಬರೋದಿಲ್ಲ.. !."
"ಯಾಕೆ ಅಕ್ಕೊರೆ..? "
"ನಿನ್ನ ಹೆಸರು ಇಂಗ್ಲೀಷಿನಲ್ಲಿ "ನಾಗೇಶ್ " ಅಂತಾಗುತ್ತದೆ.. ಅದಕ್ಕೆ"
" ಅಕ್ಕೋರ್ರೆ.....
ನನ್ನ ಹೆಸರನ್ನ ಕನ್ನಡದಲ್ಲಿ "ನಾಗೇಶಾ" ಅಂತ ಇಟ್ಟಿದ್ದಾರೆ..
ಇಂಗ್ಲಿಷಿನಲ್ಲಿ ಅಲ್ಲಾ..
ನನ್ನ ಅಪ್ಪನಿಗೆ ಇಂಗ್ಲೀಷ್ ಬರೋದಿಲ್ಲಾ..!
ಹಾಗಾಗಿ..
ನನ್ನ ಹೆಸರು "ನಾಗೇಶ" ಅಂತ...."
ಅಕ್ಕೊರ್ರಿಗೆ ಸಿಕ್ಕಾಪಟ್ಟೆ ಕೋಪ ಬಂತು...!
"ಎದುರು ಉತ್ತರ ಕೊಡ್ತಿಯೇನೊ.. ಎಲ್ಲಿ ಕೈ ಹಿಡಿ.."
ನಾಗೂ ಕೈ ಹಿಡಿದ..
ಕೈ ಕೆಂಪಗೆ ಆಗುವ ಹಾಗೆ ಬೆಚ್ಚಗೆ ಎರಡು ಏಟು ಕೊಟ್ಟರು..
ಹುಡುಗರೆಲ್ಲ ನಕ್ಕರು.. ನಾಗುವಿಗೆ ಅಳು ಬಂತು..
ಪಕ್ಕದಲ್ಲಿದ್ದ ಕುಷ್ಟ ಸಮಾಧಾನ ಮಾಡಿದ..
"ನಾಗಣ್ಣ..
ಅಳ ಬೇಡ್ರಾ...
ಈ ಅಕ್ಕೋರ್ರಿಗೆ ಒಂದು ಉಪಾಯ ಮಾಡುವ..
ಇನ್ನು ಮುಂದೆ ನಮ್ಮ ಸುದ್ದೀಗೆ ಬರಬಾರ್ದು....
ಹಾಂಗ್ ಮಾಡುವ..
ನೀವು ಕಣ್ಣಿರು..ಸುಂಬಳ ಒರೆಸ್ಕಣಿ.."
ಕುಷ್ಟನಿಗೆ ನಾಗು ಕಂಡರೆ ಪ್ರೀತಿ..
ನಾಗುವೂ ಬೇಕಾದಷ್ಟು ಬಾರಿ " ಅಕ್ಕೊರ್ರಿಂದ " ಪೆಟ್ಟು ತಿಂದಿದ್ದ..
ಕುಷ್ಟನಿಗೆ ಒಂದು ಉಪಾಯ ಬಂತು..
"ನಾವು ಸಾಕಿದ ಹಾವನ್ನು ..
ನಮ್ಮ ಪಾಟಿಚೀಲದೊಳಗೆ ಹಾಕಿಕೊಂಡು ಹೋಗೋಣ..!!.."
ಎಂದು ಒಳ್ಳೆಯ ಘನಂದಾರಿ ಉಪಾಯ ಕೊಟ್ಟ..
ನಮಗೆಲ್ಲ ಅವನ ಉಪಾಯ ಇಷ್ಟವಾಯಿತು..
ನಾಗೂ ಪಾಟೀಚೀಲದೊಳಗೆ ಆ ಹಾವನ್ನು ತುಂಬಿಕೊಂಡು ಶಾಲೆಗೆ ಬಂದ...
ಅಕ್ಕೋರು ಬಂದವರೆ...
"ಮಕ್ಕಳೆ ...
ನಿನ್ನೆ ನಿಮಗೆ ಬರೆಯಲು ಕೊಟ್ಟ ಪಾಠವನ್ನು ಬರೆದಿದ್ದೀರಾ?
ಒಬ್ಬೊಬ್ಬರಾಗಿ ತೋರಿಸಿ..
ನಾಗು..
ಎಲ್ಲಿ ಪಾಠ ಬರೆದುದನ್ನು ತೋರಿಸು"
"ಅಕ್ಕೋರ್ರೆ...
ನನ್ನ ಪಾಟೀಚೀಲ ತೆಗೆಯಲು ಆಗ್ತ ಇಲ್ಲ.."
"ಇಲ್ಲಿ ತಗೋ ಬಾ... ನಾನು ತೆಗೆದು ಕೊಡ್ತೇನೆ.."
ನಾಗು ಪಾಟೀಚೀಲ ತೆಗೆದುಕೊಂಡು ಅವರಿಗೆ ಕೊಟ್ಟ...
ಅಷ್ಟರಲ್ಲಿ ಪಕ್ಕದ ಕೋಣೆಯಿಂದ ನಮ್ಮ ಹೆಡ್ ಮಾಸ್ತರ್ರೂ ಬಂದಿದ್ದರು....
ಅಕ್ಕೋರು ಪಾಟಿಚೀಲ ತೆಗೆದರು.. !!
ಅದರೊಳಗಿದ್ದ ಹಾವು ನೋಡಿ ಕಂಗಾಲಾದರು... !!!.
"ಅಯ್ಯೊಯ್ಯೊ..!!
ಅಯ್ಯಯ್ಯೋ...!!!..." ಅಂತ ಹೊರಗೆ ಓಡಿದರು..!
ಹೆಡ್ ಮಾಸ್ತರ್ರಿಗೆ ಕಣ್ಣು ಕೆಂಪಗಾಯಿತು...!
" ಯಾರದ್ದು... ಈ ಕಿತಾಪತಿ ?..? "
ಎಂದು ವಿಚಾರಣೆ ಮಾಡಿ ...
ನಾಗುವಿಗೆ ..
ಕುಷ್ಟನಿಗೆ ಮತ್ತು ನನಗೂ ಬೆತ್ತದ ರುಚಿ ತೋರಿಸಿದರು..
"ಹೋಗಿ ...
ಈ ಹಾವನ್ನು ಅದು ಎಲ್ಲಿತ್ತೋ ಅಲ್ಲಿ ಬಿಟ್ಟು ಬನ್ನಿ"
ಅಂತ ಗದರಿಸಿದರು..
ಸ್ವಲ್ಪ ದಿನ ಕಳೆಯಿತು..
ಆಗೆಲ್ಲ ...
ಸರಕಾರಿ ಶಾಲೆಗಳನ್ನು ವರ್ಷಕ್ಕೊಮ್ಮೆ ತಪಾಸಣೆ ಮಾಡಲು ತಾಲೂಕಿನಿಂದ "ಮೇಲಾಧಿಕಾರಿಗಳು" ಬರುತ್ತಿದ್ದರು..
ಅವರಿಗೆ ನಾವೆಲ್ಲ "ಇನ್ನಿಸ್ಪೆಟ್ಟರ್ರು" ಅಂತ್ತಿದ್ದೆವು..
ಆ ವರ್ಷವೂ ಒಬ್ಬರು ಬಂದರು..
ಅವರು ಬಂದಾಗ ..
ನಮ್ಮನ್ನೆಲ್ಲ ಪ್ರಶ್ನೆ ಕೇಳಿ...
ನಮಗೆ ಶಿಕ್ಷಕರು ಹೇಗೆ ಕಲಿಸಿದ್ದಾರೆ ಎಂದು ಚೆಕ್ ಮಾಡುತ್ತಿದ್ದರು...
ಅವರು ಬಂದು ನಮ್ಮನ್ನು ಉದ್ದೇಶಿಸಿ..
"ಮಕ್ಕಳೆ...
ನಾನು ಇವತ್ತು ನಿಮಗೆಲ್ಲ ಪುಸ್ತಕದ ಪ್ರಶ್ನೆ ಕೇಳುವದಿಲ್ಲ..
ಬದಲಿಗೆ ನೀವೇ.. ನನ್ನನ್ನು ಪ್ರಶ್ನೆ ಕೇಳಿ..
ನಿಮಗೆ ಎಂತಹ ಸಂಶಯ ಬಂದಿದ್ದರೂ ಕೇಳಿ ನಿವೆಲ್ಲ ಜನರಲ್ ನಾಲೇಜನ್ನು ಬೆಳೆಸಿಕೊಳ್ಳ ಬೇಕು..
ನನಗೆ ನಿಮ್ಮ ಜನರಲ್ ನಾಲೇಜನ್ನು ಪರಿಕ್ಷಿಸ ಬೇಕಾಗಿದೆ"
ಯಾರೂ ಮಾತನಾಡಲಿಲ್ಲ..
"ಮಕ್ಕಳೆ ..
ಹೆದರ ಬೇಡಿ..
ನಿಮಗೆ ದಿನ ನಿತ್ಯದಲ್ಲಿ ಕಾಣುವ ಯಾವುದೆ ಸಂಶಯದ ಬಗೆಗೆ ಪ್ರಶ್ನೆ ಕೇಳಿ..
ಪ್ರಶ್ನೆ ಕೇಳಲಿಕ್ಕೆ ಹೆದರ ಬಾರದು..
ಪ್ರಶ್ನೆ ಕೇಳುವದನ್ನು ನೀವು ಬೆಳೆಸಿಕೊಳ್ಳ ಬೇಕು "
ಈಗ ಅಲ್ಲಲ್ಲಿ ಸಣ್ಣಗೆ ಗುಸು ಗುಸು ಶುರುವಾಯಿತು...
ನಾಗು ಸಟಕ್ಕನೆ ಎದ್ದು ನಿಂತ...!!
" ಇನ್ನಿಸ್ಪೆಟ್ಟರ್ರೆ. ...
ಏನು ಬೇಕಾದರೂ ..
ಪ್ರಶ್ನೆ ಕೇಳ ಬಹುದಾ ?. !! "
"ನೋಡಿ ಮಕ್ಕಳೆ ...
ಹೀಗೆ ದೈರ್ಯವಾಗಿ ಪ್ರಶ್ನೆ ಕೇಳ ಬೇಕು...
ಕೇಳಪಾ ಏನು ನಿನ್ನ ಪ್ರಶ್ನೆ..? "
" ಇನ್ನಿಸ್ಪೆಟ್ಟರ್ರೆ..
ಹಾವು ಯಾಕೆ "ಉಚ್ಚೆ" ಹೊಯ್ಯುವದಿಲ್ಲ..? ? "
ಮೇಲಾಧಿಕಾರಿಗಳು ಕಂಗಾಲಾದರು..!!
"ಏನು ?...!!
ಹಾವು ಉಚ್ಚೆ ಹೊಯ್ಯುವದಿಲ್ಲವಾ ?.. !!
ಎಂಥಾ ಪ್ರಶ್ನೆ ಇದು..!! "
ಬಹುಷಃ ಅವರಿಗೂ ಉತ್ತರ ಗೊತ್ತಿರಲಿಕ್ಕಿಲ್ಲ..
ನಾಗುವಿಗೆ ಈಗ ಮತ್ತೂ ಧೈರ್ಯ ಬಂತು...!
ಹೆಮ್ಮೆಯಿಂದ ಎದೆ ಸೆಟೆದು ಮತ್ತೆ ಕೇಳಿದ..!
"ಇನ್ನಿಸ್ಪೆಟ್ಟರ್ರೆ...
ನಾವು ಒಂದು ಹಾವನ್ನು ಸಾಕಿದ್ದೆವು...
ಅದು ಒಂದು ವಾರ ಆದರೂ "ಉಚ್ಚೆ" ಹೊಯ್ಯಲಿಲ್ಲ..
ಯಾಕೆ ? !.."
ಮೇಲಾಧಿಕಾರಿಗಳಿಗೆ ಅವಾಕ್ಕಾದರು... !!
ಉತ್ತರ ಕೊಡಲಾಗದೆ ತಡವರಿಸಿದರು..!!
ಈಗ ಮಾಸ್ತರ್ರು ನಾಗುವಿಗೆ ಗದರಿದರು..
"ಕುತ್ಕೊಳ್ಳೋ...!
ಭಾರಿ.. ಬುದ್ಧಿವಂತ...!
ಹಾವು ಉಚ್ಚೆ ಹೊಯ್ಯುವದಿಲ್ಲವಂತೆ..!
ಅದು ಉಚ್ಚೆ ಹೊಯ್ದರೆಷ್ಟು ..
ಬಿಟ್ಟರೆಷ್ಟು..?
ಮಹಾ ಸಂಶಯ ಇವಂದು...
ಕೂತ್ಕೋ.. ತಲೆಹರಟೆ.. !!"
ನಾಗು ಕುಳಿತು ಕೊಂಡ..
"ಎಂಥಾ ... ಮಕ್ಕಳ್ರೀ.. ಇವ್ರು..?
ಈಗ್ಲೇ ...ಹೀಗೆ.. !
ದೊಡ್ಡವರಾದ ಮೇಲೆ ಇನ್ನು ಹೇಗೆ..?
ಅಬ್ಬಬ್ಬಾ...!!
ಹೇಗೆ ಸಂಭಾಳಿಸ್ತೀರ್ರಿ ನೀವು"
ಅಂತ ಮೇಲಾಧಿಕಾರಿಗಳು ಮಾಸ್ತರ್ರನ್ನು ಕೇಳಿದರು..
ಮಾಸ್ತರ್ರಿಗೂ ಅವಮಾನ ಆದಂತಾಯಿತು..
ನಮ್ಮ ಮೂವರನ್ನು ದುರುಗುಟ್ಟಿ ನೋಡಿದರು...!!
ಕುಷ್ಟ ನನ್ನ ಕಿವಿಯಲ್ಲಿ ಪಿಸುಗುಟ್ಟಿದ..
"ಪಕ್ಕೇಶ್ ಹೆಗ್ಡೆರ್ರೆ....
ಯಾಕೆ ಬೇಕಿತ್ತು ಈ ಪ್ರಶ್ನೆ..?
ಇನ್ನಿಸ್ಪೆಟ್ರು ಹೋದಮೇಲೆ ಮತ್ತೆ ಪೆಟ್ಟು ತಿನ್ನ ಬೇಕಲ್ರಾ?
ಈ ಮಾಸ್ತರ್ರು ...
ನಮ್ಮ ಮೂರೂ ಜನಕ್ಕೆ ಬೆತ್ತ ಪುಡಿ... ಪುಡಿ ಮಾಡ್ತಾರೆ ನೋಡಿ.."
ನನಗೆ ಸಣ್ಣಗೆ ನಡುಕ ಶುರುವಾಯಿತು..
ಮಾಸ್ತರರು ಎಲ್ಲರೆದುರಿಗೆ ನಾಗುವಿಗೆ ಗದರಿದ್ದರಿಂದ ನಾಗುವಿಗೆ ಅಳು ಬಂದಂತಾಗಿತ್ತು..
ಶಾಲೆಯಿಂದ ಹೊರಗೆ ಬರುತ್ತಿದ್ದ ಹಾಗೆ ಕುಷ್ಟ ನಾಗುವಿಗೆ ಸಮಾಧಾನ ಮಾಡಿದ..
"ನಾಗಣ್ಣ ..
ನೀವು ಬೇಜಾರು ಮಾಡ್ಕೋಬ್ಯಾಡ್ರಿ..
ಆ ಇನ್ನಿಸ್ ಪೆಟ್ರಿಗೆ ಎಂತದೂ ಗೊತ್ತಿಲ್ರ...!
ನೀವೇ.. ಹೇಳಿ.. ನಮ್ಮ ದೇವರು ಶಿವನ ಕೊರಳಲ್ಲಿ ಎನಿದೆರ್ರ..?.."
" ಹಾವು... !! "
"ಆ ಹಾವು ..
ನಾವು ಮಾಸ್ತರರ ಹತ್ರ ಕೇಳಿದ ಹಾಗೆ ..
ಸ್ವಲ್ಪ "ಉಚ್ಚೆ ಹೊಯ್ದು ಬರ್ತೆ.."
ಅಂತ ಆಗಾಗ ಹೋಗ್ತಾ ಇದ್ರೆ ಶಿವನಿಗೆ ಕಿರಿಕಿರಿ ಅಲ್ವೇನ್ರ ?..?
"ಹೌದು.."
" ಇನ್ನು.. ದೇವ್ರು "ವಿಷ್ಣು " ಎಲ್ಲಿ ಮಲಗಿದೆನ್ರಾ..?"
"ಹಾವಿನ ಮೇಲೆ.."
ಈ ಹಾವು.. ಆಗಾಗ..
"ನಾನು ಉಚ್ಚೆ ಹೊಯ್ದು ಬರ್ತೆ..
ನಾನು ಸ್ವಲ್ಪ ಉಚ್ಚೆ ಹೊಯ್ದು ಬರ್ತೆ..
ಸ್ವಲ್ಪ ಆಚೆ ನಿಂತು ಕೊಳ್ರಿ.."
ಅಂತ ಹೇಳಿದರೆ ಹ್ಯಾಂಗ್ರ .. ? ?
ಹಂಗೆಯಾ ನಮ್ಮ ಡೊಳ್ಳು ಹೊಟ್ಟೆ ಗಣಪ
ಹಾವನ್ನು ಬೆಲ್ಟಿನ ತರಹ ಹೊಟ್ಟೆಗೆ ಹಾಕ್ಕೊಂಡಿದ್ದ ..
ಆ ಹಾವು ಪದೆ.. ಪದೇ....
" ಸ್ವಲ್ಪ ಇರಪ್ಪಾ.. .. ಉಚ್ಚೆ ಹೊಯ್ದು ಬರ್ತೀನಿ..."
ಅಂತಾ ಇದ್ರೆ..
ನಮ್ಮ ಗಣಪನ ಹೊಟ್ಟೆ ಗತಿ ಏನಾಗ್ತಿತ್ತು...?
"ಅದಕ್ಕೆ ಏನೀಗ..?"
"ನೀವು ಬೇಜಾರು ಮಾಡ್ಕೋ ಬ್ಯಾಡ್ರಿ ..
ಆ... ದೇವ್ರೇ ಹಾವಿಗೆ ಉಚ್ಚೆ ಹೊಯ್ಯದ ಹಾಗೆ ಮಾಡಿದೆನ್ರ..
ಆ ಮಾಸ್ತರರಿಗೆ.. ಇನ್ನಿಸ್ ಪೆಟ್ರಿಗೆ ಏನೂ ಗೊತ್ತಿಲ್ರ.."
ನಾನು.. ನಾಗೂ ಇಬ್ಬರೂ ..
ಹೌದು ಅಂತ ತಲೆ ಅಲ್ಲಾಡಿಸಿದೆವು...
( ದಯವಿಟ್ಟು ಪ್ರತಿಕ್ರಿಯೆ ಓದಿ...)