ಆಗ ನಾನು ಸಣ್ಣವನಿದ್ದೆ.....
ಮನೆಯ ಮುಂದಿನ ಹೇಡಿಗೆಯ ಮೇಲೆ ಕುಳಿತು ...
ರಸ್ತೆಯಲ್ಲಿ ಹೋಗುವ ನಾಯಿಗಳಿಗೆ ಕಲ್ಲು ಬೀಸುವದೆಂದರೆ ನನಗೆ ಬಲು ಮೋಜು....
ನಾನು ತುಂಬಾ ವೀಕಾಗಿದ್ದೆ...
ರಿಕೆಟ್ಸ್ ರೋಗದಿಂದ ಬಳಲುತ್ತಿದ್ದೆ.....
ಆಡಲು ಹೋದರೆ ಬಿದ್ದುಹೋಗುತ್ತಿದ್ದೆ...
ಬಹುಷಃ ..
ನನ್ನ ಅಸಹಾಯಕತೆಯ ಪೌರುಷವನ್ನು ನಾಯಿಯ ಮೇಲೆ ತೋರಿಸುತ್ತಿದ್ದೆ ಅಂತ ಈಗ ಅನ್ನಿಸುತ್ತಿದೆ...
ಹಾಗೆ ಒಂದು ನಾಯಿಗೆ ಕಲ್ಲು ಹೊಡೆದೆ..
ಅದು "ಕುಂಯ್ಯೋ... ಮುರ್ರೋ..." ಅಂತ ಅರಚುತ್ತ ಓಡಿತು...
ಮನೆಯ ಒಳಗಿದ್ದ ನನ್ನ ಕೇಶವ ಚಿಕ್ಕಪ್ಪ ಹೊರಗೆ ಬಂದರು..
"ನಾಯಿಗೆ ಹೊಡೆದೆಯಾ?"
"ಹೌದು ಚಿಕ್ಕಪ್ಪ..."
ಚಿಕ್ಕಪ್ಪ ಸ್ವಲ್ಪ ಹೊತ್ತು ಸುಮ್ಮನಿದ್ದು..
"ಒಳಗೆ ಬಾ ...
ಒಂದು ಕಥೆ ಹೇಳುತ್ತೇನೆ..."
ನನಗೆ ನನ್ನ ಚಿಕ್ಕಪ್ಪನ ಕಥೆಗಳೆಂದರೆ ಬಲು ಇಷ್ಟ...
"ಒಮ್ಮೆ..
ನಿನ್ನಂಥವನೊಬ್ಬ ಮನೆಯ ಮುಂದೆ ಕುಳಿತಿದ್ದ...
ಹೀಗೆ ರಸ್ತೆಯ ಮೇಲೆ ಹೋಗುತ್ತಿದ್ದ ಒಂದು ನಾಯಿಗೆ ಕಲ್ಲು ಹೊಡೆದ...
ನಾಯಿಗೆ ಆ ಏಟು ಜೋರಾಗಿ ತಾಗಿತು...
"ಆಯ್ಯೋಯ್ಯೋ... ಕುಂಯ್ಯೋ..." ಅಂತ ಆ ನಾಯಿ ಊಳಿಟ್ಟಿತು...
ಜೋರಾಗಿ ರೋಧಿಸಿತು....
ಆ ಕೂಗು ಮೇಲೆ ಇದ್ದ ದೇವರಿಗೆ ಕೇಳಿಸಿತು...!
ಆಗೆಲ್ಲ ದೇವರು ಇಷ್ಟೆಲ್ಲಾ ದುಬಾರಿಯಾಗಿರಲಿಲ್ಲ....
ಈಗಿನ ಹಾಗೆ ಗುಡಿಯೊಳಗೆ ಕತ್ತಲಲ್ಲೇ ಇರುತ್ತಿರಲಿಲ್ಲ...
ಸ್ವಲ್ಪ ಹೊರಗಡೆ ಓಡಾಡಲು ಬರುತ್ತಿದ್ದ...
ಕಷ್ಟದಲ್ಲ್ಲಿದ್ದವರ ಸಹಾಯಕ್ಕೆ ಕೂಡಲೇ ಬರುತ್ತಿದ್ದ...
ದೇವರು ನಾಯಿಯ ಬಳಿ ಪ್ರತ್ಯಕ್ಷನಾಗಿ
"ಯಾಕೆ ಅಳುತ್ತಿದ್ದೀಯಾ...? "
ಅಂತ ಕೇಳಿದ...
"ನನಗೆ ..
ಅಲ್ಲಿರುವ ಮನುಷ್ಯ... ಕಲ್ಲಿನಿಂದ ಹೊಡೆದ...! "
"ಸುಮ್ಮನೆ ..
ಯಾರಾದರೂ..
ಯಾಕೆ ಕಲ್ಲು ಹೊಡೆಯುತ್ತಾರೆ..?
ನೀನು ... ಏನೋ ಮಾಡಿರಬೇಕು..."
"ಇಲ್ಲ ದೇವರೆ...
ನಾನು ಅವನ ಕಡೆ ನೋಡಲೂ ಇಲ್ಲ...
ನನ್ನ ಪಾಡಿಗೆ ನಾನು ರಸ್ತೆಯಲ್ಲಿ ಬರುತ್ತಿದ್ದೆ..."
ಈಗ ದೇವರು ಮನುಷ್ಯನ ಬಳಿ ಬಂದ...
"ಯಾಕೆ ಆ ನಾಯಿಗೆ ಹೊಡೆದೆ...? "
"ನಿಜ ಹೇಳ್ತಿನಿ..
ಯಾಕೆ ಅಂತ ನನಗೂ ಗೊತ್ತಿಲ್ಲ...!
ಆ ನಾಯಿ ನೋಡಿದ ಕೂಡಲೆ ಹೊಡೆಯಬೇಕು ಅಂತ ಅನ್ನಿಸಿತು...
ಹೊಡೆದು ಬಿಟ್ಟೆ..."
"ಸುಮ್ಮನೆ ಹೋಗುತ್ತಿದ್ದ ನಾಯಿಗೆ ಹೊಡೆದಿದ್ದೀಯಾ..
ಇದು ತಪ್ಪು..
ನಿನಗೆ ಶಿಕ್ಷೆ ಆಗಲೇ ಬೇಕು..."
ದೇವರು ನಾಯಿಯ ಬಳಿ ಬಂದ...
"ಎಲೈ ... ನಾಯಿ...
ಆ ಮನುಷ್ಯ ತಾನು ಕಲ್ಲು ಹೊಡೆದದ್ದು ಹೌದೆಂದು ಒಪ್ಪಿಕೊಂಡಿದ್ದಾನೆ..
ಅವನಿಗೆ ಶಿಕ್ಷೆ ಕೊಡಬೇಕು..
ಯಾವ ಶಿಕ್ಷೆ ಅಂತ ನೀನು ಹೇಳು...
ನೋವು ಅನುಭವಿಸಿದವ ನೀನು..
ನೀನು ಹೇಳಿದ ಶಿಕ್ಷೆ ಅವನಿಗೆ ಕೊಡುತ್ತೇನೆ..."
"ದೇವರೆ..
ಹೇಳಿಕೇಳಿ ಬೀದಿ ನಾಯಿ ನಾನು..
ನೀನು ದೇವರು... ಅವನು ಮನುಷ್ಯ...
ಮನುಷ್ಯನಿಗೆ ಶಿಕ್ಷೆ ಕೊಡುವಂಥಹ ..
ಯೋಗ್ಯತೆಯಾಗಲಿ..
ಅಧಿಕಾರವಾಗಲಿ ನನ್ನಂಥಹ "ಹಡಬೆ" ಬೀದಿ ನಾಯಿಗಳಿಗಿಲ್ಲ...
ಅದೆಲ್ಲ ನೀವೇ ನೋಡಿಕೊಳ್ಳಿ.."
ದೇವರು ಒಪ್ಪಲಿಲ್ಲ...
ಮನುಷ್ಯನನ್ನು ಕರೆಸಿದ..
"ಕಾರಣವಿಲ್ಲದೆ ..
ನಾಯಿಗೆ ನೋವನ್ನುಂಟು ಮಾಡಿದ ತಪ್ಪಿಗೆ..
ಈ ನಾಯಿಕೊಡುವ ಶಿಕ್ಷೆಗೆ ನೀನು ಒಪ್ಪಿಕೊಳ್ಳಬೇಕು..."
ಆಗ ..
ಮನುಷ್ಯ ಈಗಿನಷ್ಟು ಕೆಟ್ಟು ಹಾಳಾಗಿರಲಿಲ್ಲ ..
ತಪ್ಪಾಗಿದ್ದರೆ ...
ದೇವರ ಬಳಿಯಾದರೂ ಒಪ್ಪಿಕೊಳ್ಳುತ್ತಿದ್ದ..
ಮನುಷ್ಯ ಒಪ್ಪಿಗೆ ಸೂಚಿಸಿದ...
ನಾಯಿ ಬಹಳಷ್ಟು ವಿಚಾರ ಮಾಡಿತು...
ಶಿಕ್ಷೆಯನ್ನು ಪ್ರಕಟಿಸಿತು....
" ನನಗೆ ..
ಕಲ್ಲು ಎಸೆದ ಈ ಮನುಷ್ಯ ಮುಂದಿನ ಜನ್ಮದಲ್ಲಿ...
ಬ್ರಹ್ಮಚಾರಿಯಾಗಿ..
ಯಾವುದಾದರೂ...
ಜಾತಿ.. ಮತ.. ಧರ್ಮದ ಗುರುಗಳಾಗಿ ಹುಟ್ಟಲಿ...
ಆಂತರ್ಯದಲ್ಲಿ ಮನುಷ್ಯನಾಗಿ...
ಜೀವನ ಪೂರ್ತಿ ಒಣ ಉಪದೇಶ ಮಾಡುತ್ತಿರಲಿ..."
ಚಿಕ್ಕಪ್ಪ ಕಥೆ ಮುಗಿಸಿದರು....
ನನಗೆ ಬಹಳ ಆಶ್ಚರ್ಯವಾಯಿತು...!
" ಅರೇ..
ಇದೇನಿದು..ಚಿಕ್ಕಪ್ಪಾ..!
ಇದು ಶಿಕ್ಷೆಯಾ?..."
"ಈ ಕಥೆಯ ಪ್ರಕಾರ ..
ಇದು ಬಲು ದೊಡ್ಡ ಶಿಕ್ಷೆ...
ನೀನು ದೊಡ್ದವನಾದ ಮೇಲೆ ಈ "ಶಿಕ್ಷೆಯ ಪ್ರಮಾಣ" ಇನ್ನೂ ಅರ್ಥವಾಗಬಹುದು.."
ಅಂದಿನಿಂದ ..
ನಾನು ಯಾವ ನಾಯಿಗೂ ಕಲ್ಲು ಹೊಡೆದದ್ದು ನೆನಪಿಲ್ಲ....
(ಆಸ್ತಿಕರ ಕ್ಷಮೆ ಕೋರುವೆ...)