Wednesday, July 15, 2015

ಕತ್ತಲೆ.................

ಆಗಿನ್ನೂ
ನನಗೆ ಮದುವೆ ಆಗಿಲ್ಲವಾಗಿತ್ತು..

ಏಕಾಂತದಲ್ಲಿ 
ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..

ಸ್ನಾನ 
ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...

ಅರಮನೆಯ ಈಜುಕೊಳದ ಪಕ್ಕದಲ್ಲಿರುವ ಕೊಳಕ್ಕೆ ಸ್ನಾನಕ್ಕೆ ಹೋಗಿದ್ದೆ...

ಬಟ್ಟೆಯಲ್ಲವನ್ನೂ ಬಿಚ್ಚಿ
ಪಕ್ಕದಲ್ಲಿ ಇಟ್ಟು...
ಬಿಳಿಬಣ್ಣದ
ತೆಳು ವಸ್ತ್ರವನ್ನು ಸುತ್ತಿಕೊಂಡಿದ್ದೆ..

ಒಮ್ಮೆ
ಕೊಳದಲ್ಲಿ ಮುಳುಗೆದ್ದು ಮುಖ ಉಜ್ಜಿಕೊಂಡು ಮೇಲೆ ನೋಡಿದೆ..

ಕಿಟಾರನೆ ಕಿರುಚಿದೆ...

ಜಿಂಕೆ ಮರಿಯೊಂದು ನನ್ನನ್ನೇ ದಿಟ್ಟಿಸುತ್ತಿತ್ತು... !

ಅಲ್ಲೆ
ಪಕ್ಕದಲ್ಲಿದ್ದ ಅಮ್ಮ ಗಾಬರಿಯಿಂದ ಓಡೋಡಿ ಬಂದಳು

"ಏನಾಯ್ತು ಮಗಳೆ  ?".... 

ಬಂದವಳು 
ನನ್ನ ಅಮ್ಮನಾದರೂ 
ನಾನು 
ಕಷ್ಟಪಟ್ಟು ನನ್ನ ಎದೆಯ ಭಾಗವನ್ನು ಮುಚ್ಚಿಕೊಳ್ಳುತ್ತಿದ್ದೆ..

"ಅಮ್ಮಾ...
ಆ .. ಜಿಂಕೆಮರಿ ನನ್ನನ್ನೇ ದಿಟ್ಟಿಸುತ್ತಿದೆ...

ಮೊದಲು ಅದನ್ನು ಇಲ್ಲಿಂದ ಓಡಿಸು..."

ಅಮ್ಮ ಹೊಟ್ಟೆ ತುಂಬಾ ನಕ್ಕುಬಿಟ್ಟಳು..

"ನೋಡು ಮಗಳೆ..

ನೋಟಕ್ಕೊಂದು 
ಸಂವೇದನೆ..
ಭಾವನೆ 
ಇದ್ದರೆ ನಾಚಿಕೆ ಸಹಜವಾಗಿ ಆಗುತ್ತದೆ..

ಈ ಪುಟ್ಟ ಜಿಂಕೆಮರಿಗೆ ನಿನ್ನ ಚಂದ ಬೇಕಿಲ್ಲ...

ಅದು 
ಯಾವ ಭಾವನೆಗಳಿಲ್ಲದೆ 
ಶೂನ್ಯವಾಗಿ 
ಮುಗ್ಧವಾಗಿ ನೋಡುತ್ತದೆ.....

ಇದಕ್ಕೆಲ್ಲ ಸ್ಪಂದಿಸುವ ಅಗತ್ಯ ಇಲ್ಲ..."

ಆಗ
ಅಮ್ಮ ಹೇಳಿದ ಮಾತು ಅರ್ಥವಾಗಿರಲಿಲ್ಲ...

ಅರ್ಥವಾಗುವ ಹೊತ್ತಿಗೆ ಮದುವೆಯಾಗಿತ್ತು...

ನಾನು
ಎಷ್ಟೆಲ್ಲ ಕನಸು ಕಂಡಿದ್ದೆ...
ನನ್ನ ಕನಸಿನಲ್ಲಿ ಎಷ್ಟೆಲ್ಲ ಬಣ್ಣಗಳಿದ್ದವು..!

ನನಗೆ ಗೊತ್ತಿತ್ತು ನಾನು ಚಂದವಿದ್ದೇನೆ ಅಂತ..

ನನ್ನಮ್ಮನೂ ನನ್ನ ಕಿವಿಯಲ್ಲಿ ಉಸುರುತ್ತಿದ್ದರು..

"ಮಗಳೆ..
ನಿನ್ನನ್ನು ಮದುವೆಯಾಗುವವ ಪುಣ್ಯ ಮಾಡಿರಬೇಕು..

ದೇವರು
ಎಷ್ಟೆಲ್ಲ ಸಮಯ ತೆಗೆದುಕೊಂಡು ನಿನ್ನನ್ನು ಸೃಷ್ಟಿಸಿದನೋ ಗೊತ್ತಿಲ್ಲ...

ನೀ
ನನ್ನ ಮಗಳಾದರೂ
ನಿನ್ನಂದ ಕಂಡು ನನಗೆ ಹೊಟ್ಟೆಕಿಚ್ಚು ಆಗುತ್ತಿದೆ.."

ಒಮ್ಮೆ
ನನ್ನಪ್ಪನ ಆಸ್ಥಾನದಲ್ಲಿ 
ಕವಿಯೊಬ್ಬ 
ನನ್ನ ಕಣ್ಣುಗಳ ಬಗೆಗೆ ಕವನವನ್ನೇ ಓದಿ ಹೇಳಿದ್ದ...

ಅದೆಷ್ಟು ಬಾರಿ
ಒಬ್ಬಳೇ ಏಕಾಂತದಲ್ಲಿ
ನನ್ನ 
ಕೋಣೆಯಲ್ಲಿ ನಗ್ನವಾಗಿ 
ನನ್ನನ್ನು ನೋಡಿಕೊಳ್ಳುತ್ತಿದ್ದೇನೋ   ಗೊತ್ತಿಲ್ಲ... !

ಸುತ್ತಲೂ
ಇರುವ ಕನ್ನಡಿಯಲ್ಲಿ 
ನನ್ನಂದ ಚಂದವನ್ನು ನೋಡಿಕೊಂಡು ನನ್ನಷ್ಟಕ್ಕೇ ನಾಚಿಕೆ ಪಟ್ಟುಕೊಳ್ಳುತ್ತಿದ್ದೆ...
ಸಂಭ್ರಮಿಸುತ್ತಿದ್ದೆ...
ಹೆಮ್ಮೆ ಪಡುತ್ತಿದ್ದೆ...!

ನನ್ನ  ಕನಸುಗಳು 
ಬಲು ವಿಚಿತ್ರವಾಗಿರುತ್ತಿದ್ದವು...
ಮುಖ ಅಸ್ಪಷ್ಟವಾದ
ಒಬ್ಬ 
ರಾಜಕುಮಾರ 
ಬಿಳಿ ಬಣ್ಣದ ಕುದುರೆಯೇರಿ
ನನ್ನನ್ನು ಕರೆದೊಯ್ಯಲು ಬರುತ್ತಿದ್ದ...

ನನ್ನತ್ತ ಕೈಚಾಚುತ್ತಿದ್ದ..

ನಾನು
ಕೈ ಕೊಡುವಷ್ಟರಲ್ಲಿ ಆತನ ಕುದುರೆ ಮುಂದೆ ಓಡಿಹೋಗಿಬಿಡುತ್ತಿತ್ತು...

ಜೋರಾಗಿ ಬೀಳುವ ಮಳೆಯಲ್ಲಿ
ನಾನು
ಅಳುತ್ತ ನಿಂತಿರುತ್ತಿದ್ದೆ..

ಮಳೆಯ 
ಹನಿಗಳ ಜೊತೆ
ಕಣ್ಣ ಹನಿಗಳು ಇಳಿದು ಹೋಗುವಾಗ
ಕೆನ್ನೆಗೆ ಮಾತ್ರ ತುಸು ಬಿಸಿಯ ಅನುಭವ

ಸಣ್ಣಕೆ ಬಿಕ್ಕಳಿಕೆಯ ಸದ್ಧು...

ಅಳುತ್ತಿರುವಂತೆಯೇ ಎಚ್ಚರವಾಗುತ್ತಿತ್ತು.. !

ಕನಸುಗಳಿಗೆ ಅರ್ಥವಿಲ್ಲ...
ಹುಚ್ಚು ಬಣ್ಣಗಳು ಅವು ಅಂತ ಸಮಾಧಾನ ಪಟ್ಟುಕೊಳ್ಳುತ್ತಿದ್ದೆ...

ಅಂದಿನ ದಿನಗಳು
ಇನ್ನೂ
ನೆನಪಿದೆ..

ನೆನಪುಗಳಿಗೇನು  ?
ಹೊತ್ತುಗೊತ್ತು ಒಂದೂ ಇಲ್ಲ...

ಸುಮ್ಮನೆ ಬಂದು ಕದಡುತ್ತವೆ...

ಹಸ್ತಿನಾವತಿ ಪುರದ 
ವೃದ್ಧ ಯೋಧ 
ಭೀಷ್ಮ 
ನನ್ನಪ್ಪನಿಗೆ 
ಪತ್ರವೊಂದನ್ನು ಬರೆದು ಕಳುಹಿಸಿದ್ದ....

"ನಿನ್ನ ಮಗಳು ಗಾಂಧಾರಿಯನ್ನು
ನಮ್ಮ
ರಾಜಕುವರ "ಧೃತರಾಷ್ಟ್ರನಿಗೆ" ಮದುವೆ ಮಾಡಿಕೊಡಿ...

ಇಲ್ಲವಾದಲ್ಲಿ
ನಿಮ್ಮ ಗಾಂಧಾರ ದೇಶವನ್ನು ಸರ್ವ ನಾಶ ಮಾಡಿಬಿಡುವೆ..."

ಶಕ್ತಿವಂತರ..
ಬಲಶಾಲಿಗಳ ಸೊಕ್ಕಿಗೆ 

ಜಗತ್ತು ತಲೆಬಾಗುತ್ತದೆ...

ಹುಟ್ಟು ಕುರುಡ "ಧೃತರಾಷ್ಟ್ರ"  ... 
ತನ್ನ
ಬದುಕಿನಲ್ಲಿ ಎಂದೂ ಬಣ್ಣಗಳನ್ನು ನೋಡದವ...
ರಂಗು ರಂಗಿನ ಕನಸುಗಳನ್ನು ಕಾಣದವನ ಮಡದಿಯಾದೆ...

ಕುರುಡ
ನನ್ನ  ಪತಿಗಿರದ
ಬಣ್ಣಗಳ..
ಬೆಳಕಿನ ಭಾಗ್ಯ ನನಗೇಕೆ ಬೇಕು ?

ಘನ ಘೋರ ಪ್ರತಿಜ್ಞೆ ಮಾಡಿದೆ...

"ನಾನೂ ಕೂಡ 
"ಆಜೀವ ಪರ್ಯಂತ" ಕುರುಡಿಯಾಗಿಯೇ ಬದುಕುವೆ.. !
ನನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಅವನ ಬಾಳ ಸಂಗಾತಿಯಾಗುವೆ.."

ಲೋಕವೆಲ್ಲ ನನ್ನನ್ನು ಕೊಂಡಾಡಿತು...
ಹರ್ಷೋಧ್ಗಾರ  ಮಾಡಿತು..

ಆಕಾಶದಿಂದ ಪುಷ್ಪ ವೃಷ್ಠಿಯಾಯಿತು....

ನನ್ನ ಪತಿಯೂ ನನ್ನ ಬಗೆಗೆ ಹೆಮ್ಮೆ ಪಟ್ಟ..

ಲೋಕವೇ ಹೀಗೆ ..
ಏನಾದರೂ ಹೇಳುತ್ತದೆ..

ನಮ್ಮ ಕಾರ್ಯವನ್ನು ಮಾತ್ರ ನೋಡುತ್ತದೆ.. 
ನಮ್ಮ ಕ್ರಿಯೆಯ ಹಿಂದಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವದಿಲ್ಲ... 

ಯಾರೆಲ್ಲ ಯಾಕೆ ?
ನನ್ನ ತಮ್ಮ "ಶಕುನಿ" ಗೊತ್ತಲ್ಲ...
ಆತ ಹೇಳಿದ್ದು ಏನು ಗೊತ್ತಾ ?

"ಅಕ್ಕಾ...
ನೀನು ಬುದ್ಧಿವಂತೆ... ಚಾಣಾಕ್ಷೆ...

ಹುಟ್ಟುಕುರುಡನ ಮಡದಿಯಾಗಿ...

ಜೀವನ ಪರ್ಯಂತ
ಕುರುಡನ 
ಅಘೋಷಿತ ದಾಸಿಯಾಗಿ 
ಗುಲಾಮಗಿರಿ
ಬಾಳುವದಕ್ಕಿಂತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ರಾಣಿ ಸುಖವನ್ನಾದರೂ ಅನುಭವಿಸುವ ಕುತಂತ್ರ ಇದಲ್ಲವೆ ?

ಅಕ್ಕಾ...

ಕುರುಡನ ಪತ್ನಿಯಾಗಿ 
ಕಣ್ಣಿಗೆ ಬಟ್ಟೆ ಕಟ್ಟಿಕೊಂಡರೂ
ಬದುಕು ಪೂರ್ತಿಯಾಗಿ ಕುರುಡಾಗಲಿಲ್ಲ ನೋಡು..

ರಾಣಿಯಾಗಿ 
ಸೇವೆ ಮಾಡಿಸಿಕೊಳ್ಳುವ ಭಾಗ್ಯವಾದರೂ ಸಿಕ್ಕಿತಲ್ಲ..." !.... 

ಮದುವೆಯ 
ಶಾಸ್ತ್ರವೆಲ್ಲ ಮುಗಿದು
ಹಸ್ತಿನಾವತಿಗೆ ಹೋಗುವ ಮುನ್ನ
ಅಮ್ಮ
ನನ್ನನ್ನು ಬಿಗಿದಪ್ಪಿ ಅತ್ತಿದ್ದಳು...

"ಮಗಳೆ...
ನೀನು ದಿಟ್ಟಿಸುವ ನೋಟಗಳಿಗೆ ಹೆದರುತ್ತಿದ್ದೆಯಲ್ಲ...

ಆ ತೊಂದರೆ ಇನ್ನಿಲ್ಲ... 

ಕಣ್ಣಿನಲ್ಲಿ 
ಸಂವೇದನೆ ಸಿಗದಿದ್ದರೂ...
ಸ್ಪರ್ಷದಲ್ಲಾದರೂ ಸಿಗುತ್ತದೆ...

ಕುರುಡರಿಗೆ ಸ್ಪರ್ಷದಲ್ಲೇ ಕಣ್ಣಿರುತ್ತದಂತೆ....

ಪ್ರೀತಿಗೆ 
ನೋಟವೂ ಬೇಕಿಲ್ಲ ಮಗಳೆ.... 

ಪ್ರೀತಿ ಕುರುಡು ಅನ್ನುತ್ತಾರೆ ಹಿರಿಯರು... 

ಪ್ರತಿಯೊಂದೂ ದಾಂಪತ್ಯವೂ ಕೂಡ ಕುರುಡು... 
ಮಗಳೆ 
ಧೈರ್ಯವಾಗಿರು...

ದಂಪತಿಗಳ 
ಏಕಾಂತದ 
ರಾತ್ರಿಗಳ ಕೋಣೆಯಲ್ಲಿ ಬೆಳಕಿರುವದಿಲ್ಲ ಮಗಳೆ..."... 

ಆಗ  
ಅಮ್ಮನ ಮಾತು ನನಗೆ ಅರ್ಥವಾಗಿರಲಿಲ್ಲ...

ಮದುವೆಯಾದ
ಶುರುವಿನಲ್ಲಿ
ನನ್ನ ಸಖಿಯರಿಗೆ 
ಮೊದಲಿನ ಹಾಗೆ ಶೃಂಗಾರ ಮಾಡಿಕೊಡಲು ಹೇಳುತ್ತಿದ್ದೆ..

ಶೃಂಗರಿಸಿಕೊಳ್ಳುವದೆಂದರೆ ನನಗೆಲ್ಲಿಲ್ಲದ ಸಂಭ್ರಮ  !

ಅದರಲ್ಲೂ
ಹಸಿರು ಬಣ್ಣದ ಸೀರೆಗೆ..
ಗುಲಾಬಿ ಬಣ್ಣದ ಅಂಚು...
ಗುಲಾಬಿ ಬಣ್ಣದ ಕುಪ್ಪುಸ...

ಕುತ್ತಿಗೆಗೆ ಮುತ್ತಿನ ಹಾರ...
ಮೂಗಿಗೆ ದೊಡ್ಡದಾದ ನತ್ತು...! 

ಒಹ್  ..... !

ನನ್ನ
ಚಂದವನ್ನು ನಾನೂ ಸಹ ನೋಡಿಕೊಳ್ಳಲಾಗದ ಬದುಕು ನನ್ನದು !

ನನ್ನ ಪತಿಯೂ 
ನನ್ನಂದವನ್ನು ಅನುಭವಿಸಲಾರ...

ಇನ್ಯಾರಿಗೆ ಶೃಂಗರಿಸಿಕೊಳ್ಳಲಿ  ?...

ನನ್ನ
ಚಂದವನ್ನು ಹಗಲೆಲ್ಲ 
ನೋಡಿ
ನೋಡಿ ರಾತ್ರಿ ನನ್ನನ್ನು 
ನನ್ನಂದವನ್ನು ಅನುಭವಿಸುವ ಪರಿ ನನ್ನ ಪತಿಯದಾಗಿರಲಿಲ್ಲ...

ಅವನ ದೇಹಕ್ಕೆ
ಸುಖ 
ಬೇಕಾದಾಗ
ನನ್ನನ್ನು ಕರೆಯುತ್ತಿದ್ದ..

ಅವನ ಕಣ್ಣುಗಳಷ್ಟೇ ಅಲ್ಲ...
ಅವನಾಸೆಯಲ್ಲೂ ಕುರುಡುತನ ಕಾಣುತ್ತಿತ್ತು...

ಇಬ್ಬರ
ಕುರುಡು .... 
ಕತ್ತಲಲ್ಲಿ ನಡೆವ ಸುಖದ ಹುಡುಕಾಟ ಮಕ್ಕಳಾಟದಂತಿತ್ತು... 

ಚಂದದ
ರಮಿಸುವ..
ಶೃಂಗಾರದ ಮಾತುಗಳು...
ನನ್ನಂದದ ಕುರಿತು ಹೊಗಳುವ ಸಲ್ಲಾಪಗಳು 
ನನಗೆ ಮರಿಚಿಕೆಯಾಗಿತ್ತು...

ಮಕ್ಕಳಾದರು...
ಮಕ್ಕಳೂ  ದೊಡ್ಡವರಾದರು...

ಕುರುಡನ ಮಕ್ಕಳು
ಸ್ವಭಾವದಲ್ಲೂ  ಕುರುಡಾಗಿಬಿಟ್ಟರು.. !

ಹಿಡಿದು
ದಂಡಿಸುವ ಅಪ್ಪನಿಲ್ಲದಿದ್ದರೆ ಏನಾಗುತ್ತದೆ ಎನ್ನುವದಕ್ಕೆ
ನಮ್ಮ ಮಕ್ಕಳು ಸಾಕ್ಷಿಯಾಗಿಬಿಟ್ಟರು..

ಅಧಿಕಾರಕ್ಕಾಗಿ
ನಡೆದ ಕುರುಕ್ಷೇತ್ರ ಯುದ್ಧದಲ್ಲಿ
ಶ್ರೀಕೃಷ್ಣ
ತನ್ನ ಎಣಿಕೆಯಂತೆ ನನ್ನ ಮಕ್ಕಳನ್ನೆಲ್ಲ ಸಂಹರಿಸಿಬಿಟ್ಟ...

ಇದೀಗ
ಪಾಂಡವರು ರಾಜರಾಗಿದ್ದಾರೆ..

ನಮಗೆ ಗೌರವ ಕೊಟ್ಟು 
ಮರ್ಯಾದೆಯಿಂದ ನಡೆಸಿಕೊಳ್ಳುತ್ತಿದ್ದಾರೆ...

ನಾನಂತೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೆ..

ಬದುಕು
ಕತ್ತಲಾಗಿತ್ತು..

ಕತ್ತಲಿಗೆ 
ಯಾವಾಗಲೂ ತಬ್ಬಿಕೊಳ್ಳುವ ಆಸೆ...

ಬೆಳಕಿಗೆ ಓಡಿಸುವ ಹಂಬಲ... !

ಅತ್ತಿತ್ತ
ತಡಕಾಡುತ್ತಲೆ 
ಕತ್ತಲಲ್ಲಿ  ಬದುಕೆಲ್ಲ ಕಳೆದು ಹೋಗಿತ್ತು....

ಇದ್ದಕ್ಕಿದ್ದಂತೆ ಧೃತರಾಷ್ಟ್ರ... 

"ಗಾಂಧಾರಿ....
ನಮ್ಮ ಮಕ್ಕಳೂ ಇಲ್ಲಿಲ್ಲ...
ನಮ್ಮದಲ್ಲದ ಈ ರಾಜ್ಯದಲ್ಲಿ ನಾವಿರಬಾರದು..

ವಾನಪ್ರಸ್ಥ ಹೋಗೋಣ....

ನಮ್ಮ ಉಳಿದ ಬದುಕನ್ನು ಅಲ್ಲಿ ಕಳೆಯೋಣ.."... 

ಎಲ್ಲವನ್ನೂ ಕಳೆದುಕೊಂಡ
ಕುರುಡು 
ಬದುಕಿಗೆ ವನವಾದರೇನು ?
ನಾಡಾದರೇನು ?

ನಮ್ಮೊಡನೆ ಕುಂತಿಯೂ ಹೊರಟಳು..
ವಿಧುರನೂ ಜೊತೆಯಾದ...

ದಟ್ಟ 
ಕಾನನದಲ್ಲೊಂದು ಪುಟ್ಟ ಕುಟೀರದಲ್ಲಿ  ನಾವಿರತೊಡಗಿದೆವು...

ಅದೊಂದು ದಿನ...

ನಾನು 
ಸ್ನಾನ ಮಾಡಿ ಬಂದು ಕೂದಲು ಒಣಗಿಸಿಕೊಳ್ಳುತ್ತಿದ್ದೆ...

ಕುಂತಿ 
ನನ್ನ ತಲೆ ಬಾಚಲು ಬಂದಳು..

"ಕುಂತಿ..
ನಿನ್ನನ್ನು ಕಂಡರೆ 
ನನಗೆ ಮೊದಲೆಲ್ಲ ಎಷ್ಟೆಲ್ಲ ಅಸೂಯೆ ಇತ್ತು ...!

ಅದೆಲ್ಲ ನೆನಪಾದರೆ ಈಗ ನಗು ಬರುತ್ತದೆ...

ಸಾಧ್ಯವಾದಲ್ಲಿ ನನ್ನನ್ನು ಕ್ಷಮಿಸು..."

ಕುಂತಿ
ನಕ್ಕಳು...

" ಗಾಂಧಾರಿ...
ಏನು ಆಗಬೇಕಿತ್ತೋ ಅದೆಲ್ಲ ಆಗಿ ಹೋಯಿತು.. !
ಈಗೆಲ್ಲ ಅದರ ಬಗೆಗೆ ಮಾತನಾಡುವದು ವ್ಯರ್ಥವಲ್ಲವೆ ? "

"ಕುಂತಿ..
ಏನೇ ಹೇಳು...
ನೀನು ನನಗಿಂತ ಭಾಗ್ಯವಂತೆ...

ಬದುಕಿನಲ್ಲಿ ಹೆಚ್ಚು ಸುಖ ನೋಡಿದ್ದೀಯಾ..."

ಕುಂತಿ ಮತ್ತೊಮ್ಮೆ ನಕ್ಕ ಸದ್ಧು ನನಗೆ ಕೇಳಿಸಿತು...

"ಅದು ಹೇಗೆ ಹೇಳುತ್ತೀಯಾ ?"

"ನೋಡು...
ನಿನ್ನ ಗಂಡನಿಗೆ ಕಣ್ಣಿತ್ತು...

ನಿನ್ನಂದವನ್ನು ನೋಡಿ ಸುಖಿಸುತ್ತಿದ್ದ..

ಅವನ ಆಸೆಯ 
ನೋಟವನ್ನು
ಸುಖಿಸುವ ಭಾಗ್ಯ ನಿನಗಿತ್ತು..

ಹೆಣ್ಣಿನ ಜನ್ಮಕ್ಕೆ
ಗಂಡಿನ ಎದುರಲ್ಲಿ ... 
ಬೆತ್ತಲೆಯಾಗುವದೂ ಕೂಡ ಒಂದು ಸುಖ....!

ಬೆತ್ತಲೆಯಾಗುವ ಖುಷಿ..  
ಆ ನಾಚಿಕೆಯ ಸುಖ ನಿನಗೆ ಸಿಗುತ್ತಿತ್ತು...

ನಿನ್ನ 
ಬೆತ್ತಲೆಯ  ಅಂದವನ್ನು 
ಆತ 
ನೋಡಿ ಭೋರ್ಗರೆಯುತ್ತಿದ್ದನಲ್ಲ... 
ಅದನ್ನು
ನೋಡುವ ಸುಖ ನಿನಗಿತ್ತು..."... 

"ಗಾಂಧಾರಿ...
ಎಷ್ಟು 
ಬೆತ್ತಲೆಯಾದರೇನು ?... 

ನೋಡಿದರೆ ಸುಖ ಸಿಗುವದಿಲ್ಲ...

ನಾನು
ನಾಚಿದರೆ ದೇಹದ ಆಸೆ ತಣಿಯುವುದೆ ?... 

ಪ್ರೀತಿಯ
ಕತ್ತಲ ದಾಂಪತ್ಯದಲ್ಲಿ
ಬೆವರು ಹರಿಯಬೇಕು....

ನನ್ನಲ್ಲೂ ಬೆವರಿನ ಹನಿ ಹುಟ್ಟಿಸಬೇಕಿತ್ತು..

ಅದು ಅವನಿಂದ ಆಗಲಿಲ್ಲ..

ಅವನ ಆರೋಗ್ಯದ ಸ್ಥಿತಿ..
ಅವನ ಶಾಪದ ವಿಷಯ ಗೊತ್ತಲ್ಲವೆ ?

ಆತ ಪ್ರಣಯಕ್ಕೆ ಅಣಿಯಾದರೆ
ಅವನ ಮೃತ್ಯು ಅವನಿಗಾಗಿ ಕಾಯುತ್ತಿತ್ತು...

ಅಬಲಿಷ್ಠ ಗಂಡಸರ ಒಂದು ದೌರ್ಬಲ್ಯ ಏನು ಗೊತ್ತಾ ?

ಅವರಿಗೆ 
ದೈಹಿಕ ಅಶಕ್ತತೆ ಒಂದೇ ಅಲ್ಲ...
ಮಾನಸಿಕ ಅಶಕ್ತತೆಯೂ ಇರುತ್ತದೆ...

ಬದುಕಿನುದ್ದಕ್ಕೂ ಕೀಳರಿಮೆ ಅವರಿಗೆ ಕಾಡುತ್ತದೆ...

ನಾನು 
ಮಾನಸಿಕವಾಗಿಯಾದರೂ ಬೆತ್ತಲೆಯಾಗೋಣ ಅಂದರೆ..
ಅವರ ಕೀಳರಮೆಯಿಂದಾಗಿ..
ಅದಕ್ಕೂ ಅವಕಾಶವಿಲ್ಲವಾಗಿತ್ತು... 

ಮುಕ್ತವಾಗಿ 
ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶವೂ ಇಲ್ಲದೇ ಹೋಯ್ತು....!

ನೀನು 
ಮಾನಸಿಕವಾಗಿಯಾದರೂ ಬೆತ್ತಲೆಯಾಗುತ್ತಿದ್ದೆ ಅಲ್ಲವೆ ?

ನನಗೆ ಆದ ಹಾಗಲ್ಲ ನಿನಗೆ.. ... 
ಧೃತರಾಷ್ಟ್ರ ಬಲಿಷ್ಠನಾಗಿದ್ದ ಅಲ್ಲವೆ ?"... 

ನನಗೂ ನಗು ಬಂತು....

"ದಾಂಪತ್ಯಕ್ಕೊಂದು
ಮಾತಿನ..
ಅಂದದ ವರ್ಣನೆಯ 
ಪ್ರಣಯದ ಸೊಗಸು ಬೇಕು...ಸರಸ .. ಸಲ್ಲಾಪ ಬೇಕು.. 

ನಮ್ಮ 
ಪ್ರಣಯಕ್ಕೆ ಸಂವೇದನೆ ಎಲ್ಲಿತ್ತು ?... 

ಮಲಗುವ ಮಂಚದ 
ಮರದ ಕೊರಡಿನ ಜೊತೆ ಪ್ರಣಯ ಹೇಗಿರಲು ಸಾಧ್ಯ ?

ಕುರುಡನಿಗೂ ಮಾನಸಿಕ ವ್ಯಥೆ ಇತ್ತು..
ಕೀಳರಮೆ ಇತ್ತು...

ಅಂಗವಿಕಲತೆ 
ಮಾನಸಿಕವಾಗಿ ಇದ್ದಲ್ಲಿ ಬದುಕು ಬಹಳ ಕಷ್ಟ..."... 

ಕುಂತಿ ಈಗ ಜೋರಾಗಿ ನಕ್ಕಳು...

"ನೋಡು
ಗಾಂಧಾರಿ...

ಇಲ್ಲಿನ ಗಂಡಸರೆಲ್ಲ  ದಾಂಪತ್ಯದಲ್ಲಿ ಬಹುಷಃ ಎರಡು ಜಾತಿ..

ಒಬ್ಬ 
ಕಣ್ಣಿಲ್ಲದೆ
ಅಂದವನ್ನು ಭೋಗಿಸಲಾಗದ  ಕುರುಡು ಧೃತರಾಷ್ಟ್ರ .... 

ಇನ್ನೊಬ್ಬ 
ಕಣ್ಣಿದ್ದೂ 
ಅಂದವನ್ನು ನೋಡಿಯೂ 
ಅನುಭವಿಸಲಾಗದ... 
ಭೋಗಿಸಲಾಗದ ಅಸಹಾಯಕ ಪಾಂಡು ಮಹರಾಜ... "... 

ನನಗೂ ನಗು ಬಂತು...

"ಅದು ಹಾಗಲ್ಲ... 

ದಾಂಪತ್ಯದಲ್ಲಿ 
ದೌರ್ಬಲ್ಯದ ಜೊತೆ  ಬದುಕುವಾಗ 
ನಿನ್ನ ಹಾಗೆ 
ಕಣ್ಣಿದ್ದು ... 
ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು.. 

ಅಥವಾ 

ನನ್ನ ಹಾಗೆ 
ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕತ್ತಲಲ್ಲಿ ಇರಬೇಕು..."... 

"ಗಾಂಧಾರಿ...
ನೀನು 
ಪತಿವೃತಾ ಶಿರೋಮಣಿಗಳಲ್ಲಿ ಒಬ್ಬಳು ... ಅಲ್ಲವೆ ?"... 

ನಾನು 
ಸ್ವಲ್ಪ ಹೊತ್ತು ಸುಮ್ಮನಿದ್ದೆ...

"ಕುಂತಿ...
ಸಮಾಜದಲ್ಲಿ 
ದಾಂಪತ್ಯದ ಕುರಿತು 
ಶಿಷ್ಠಾಚಾರ ... ನೀತಿ ನಿಯಮಗಳು... 
ವ್ರತಗಳೆಲ್ಲ ಹೆಂಗಸರಿಗೆ ಮಾತ್ರ ...

ಈ ಜಗತ್ತಿನಲ್ಲಿ
ಒಬ್ಬನೇ 
ಒಬ್ಬ ಏಕ ಪತ್ನಿ ವ್ರತಸ್ಥನಿದ್ದ...

ಅವನು ಶ್ರೀರಾಮಚಂದ್ರ...!

ಆತ
ತುಂಬು ಬಸುರಿ 
ಮಡದಿಯನ್ನು
ಅನಾಥವಾಗಿ ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಬಂದ...

ಪತ್ನಿಯಾಗಿ
ಪತಿಯ ದೌರ್ಬಲ್ಯಗಳ ಜೊತೆ 
ಮೌನವಾಗಿ ಬದುಕಿದವರೆಲ್ಲ ಪತಿವ್ರತಾ  ಶಿರೋಮಣಿಗಳು...!

ಇವೆಲ್ಲ ಗಂಡು ಸಮಾಜದ ಪ್ರಶಸ್ತಿಗಳು... ಅಲ್ಲವಾ ?"

ಕುಂತಿ
ಮಾತನಾಡಲಿಲ್ಲ....

ಅಷ್ಟರಲ್ಲಿ ಏನೋ ಸದ್ಧು  .... 
ವಿಧುರ ಮತ್ತು  ಧೃತರಾಷ್ಟ್ರ ಬಂದರು ಅಂತ ಕಾಣುತ್ತದೆ...

ಧೃತರಾಷ್ಟ್ರ
ಒಳಗೆ ಬರುತ್ತಲೆ ಕೇಳಿದ...

"ಹಗಲು 
ಮುಗಿಯಿತಾ ?...... 

ರಾತ್ರಿ ಶುರುವಾಯಿತಾ ?"

ನನ್ನ ನಿಟ್ಟುಸಿರು ಅವನಿಗೂ ಕೇಳಿಸಿರಬೇಕು...

ಧೃತರಾಷ್ಟ್ರ...
ಕುರುಡು
ಕತ್ತಲೆಯ ಬದುಕಿಗೆ ಹಗಲಾದರೇನು  ?
ರಾತ್ರಿಯಾದರೇನು...?

ಎಲ್ಲ ಒಂದೇ ಅಲ್ಲವೆ  ?...."... 

ಧೃತರಾಷ್ಟ್ರ ಮತ್ತೆ ಹೇಳಿದ..

"ನಾನು 
ಕೇಳಿದ್ದು 
ಬೆಳಕು.. ಕತ್ತಲೆಗಳ ಬಗೆಗಲ್ಲ...

ನನಗೆ
ಹಸಿವೆಯಾಗುತ್ತಿದೆ...

ಅಸಾಧ್ಯ ಹಸಿವೆ....ತಡೆಯಲಾಗುತ್ತಿಲ್ಲ...

ಹಸಿವೆಗೆ ಮಾತ್ರ 
ಕತ್ತಲೆ... 
ಬೆಳಕು ... ಎನ್ನುವದಿಲ್ಲ ನೋಡು...." ............ 

ನಾನು
ಅಲ್ಲಿಂದ ಎದ್ದು ತಡಕಾಡುತ್ತ ಒಳಗೆ ಹೊರಟೆ....


(ಇದು ಕಾಲ್ಪನಿಕ.. 
ತಪ್ಪಿದ್ದಲ್ಲಿ ಬೇಸರಬೇಡ.. ಕ್ಷಮೆ ಇರಲಿ... )  
  ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....  

Monday, March 16, 2015

.........ವೈರುಧ್ಯ.........

ಎಷ್ಟು ಹೊತ್ತಿನಿಂದ ಕಣ್ಮುಚ್ಚಿದ್ದೆನೊ ಗೊತ್ತಾಗಲಿಲ್ಲ...
ಎಚ್ಚರವಾದಾಗ ಕಗ್ಗತ್ತಲೆ... ...

ಆಕಾಶದಲ್ಲಿ ಮಿಂಚುವ ತಾರೆಗಳು...

ಅಸಾಧ್ಯ ನೋವು.....!

ಆಗಾಗ 

ನರಿಗಳು.. ತೋಳಗಳು ಊಳಿಡುವ ವಿಕಾರ ಸ್ವರಗಳು  !

ಓಹ್...!


ನಾನು ಕುರುಕ್ಷೇತ್ರದ ರಣರಂಗದಲ್ಲಿದ್ದೇನೆ...

ಒಂಟಿಯಾಗಿ 
ಮಲಗಿದ್ದೇನೆ... !

ಯಾರೋ ತತ್ವಶಾಸ್ತ್ರಜ್ಞ ಹೇಳಿದ ಮಾತು ನೆನಪಾಯಿತು...

"ನೋವು...
ಸಂತೋಷ ಎರಡೂ ಒಂದೇ...!

ಅವುಗಳ 

ಅತ್ಯುನ್ನತ ಹಂತದಲ್ಲಿ ..
ಉತ್ಕಟದ ಉತ್ಕರ್ಷದಲ್ಲಿ....ಯಾರೂ ಬೇಕಾಗುವದಿಲ್ಲ... 
ನೀನೊಬ್ಬನೇ ಇರುತ್ತೀಯಾ....

ಒಬ್ಬನೆ

ಒಂಟೀಯಾಗಿ ಅನುಭವಿಸುತ್ತೀಯಾ...."... 

ಮಲಗಿದ್ದವನಿಗೆ ಪಕ್ಕಕ್ಕೆ ಹೊರಳಬೇಕೆನಿಸಿತು....

ಆಗಲಿಲ್ಲ....
ಬಾಣಗಳು ಚುಚ್ಚುತ್ತಿವೆ  ....!

ರಕ್ತ ಹೆಪ್ಪುಗಟ್ಟಿದ ಜಾಗದಲ್ಲಿ ಮತ್ತೆ ಬಿಸಿರಕ್ತ ಒಸರುತ್ತಿದೆ....

ಅಸಾಧ್ಯವಾದ ಉರಿ... ನೋವು  !

ನಾನು ಮಲಗಿದ್ದುದು ಬಾಣಗಳ ಹಾಸಿಗೆಯಮೇಲೆ...


ನನ್ನ ಮೊಮ್ಮಗ 

ಅರ್ಜುನ ನನ್ನನ್ನು ಯುದ್ಧದಲ್ಲಿ ಸೋಲಿಸಿ
ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದ್ದಾನೆ...

"ಅಜ್ಜಾ...

ಭೀಷ್ಮಜ್ಜಾ... 
ನಿನ್ನನ್ನು ನಾವು ಇದ್ದಲ್ಲಿಗೆ ಕರೆದೊಯ್ಯುತ್ತೇವೆ.. ಬಾ..."

ನಾನು ನಿರಾಕರಿಸಿದ್ದೆ...


"ನಾನು

ಎಂದಿಗೂ ರಣರಂಗದಲ್ಲಿ ಸೋತು ಅರಮನೆಗೆ ಹೋಗಿಲ್ಲ...

ಉತ್ತರಾಯಣ ಪರ್ವಕಾಲಕ್ಕಾಗಿ ಕಾಯುತ್ತಿದ್ದೇನೆ...

ಅಲ್ಲಿಯ ತನಕ ಇಲ್ಲೇ ಇರುವೆ.."

ಅವರೆಲ್ಲ ಹೋಗುವ ಮುನ್ನ

ನನ್ನ ಆರಾಧ್ಯ ದೈವ ಶ್ರೀಕೃಷ್ಣನಿಗೆ ಕೈ ಮುಗಿದಿದ್ದೆ...

"ಕೃಷ್ಣಾ....

ನನ್ನ ಜೀವ ನಿನ್ನ ಪಾದ ಸೇರುವ ಮುನ್ನ.. ನನ್ನಲ್ಲಿ 
ಒಂದಷ್ಟು ಪ್ರಶ್ನೆಗಳಿವೆ...

ಇಂದು ರಾತ್ರಿ 

ಯುದ್ಧ ಮುಗಿದ ಮೇಲೆ ಇಲ್ಲೊಮ್ಮೆ ಬರುವೆಯಾ  ?"...

ಕೃಷ್ಣ ನನ್ನಾಸೆಗೆ ಇಲ್ಲವೆನ್ನಲಿಲ್ಲ...

ಗಂಭೀರವಾಗಿ ನಕ್ಕು ತಲೆಯಾಡಿಸಿ ಹೋಗಿದ್ದ....

ಏನು ಅರ್ಥವಿದೆ .... 

ನನ್ನ ಇಷ್ಟು ಸುಧೀರ್ಘ ಬದುಕಿಗೆ....?... 

ಯಾವ ಪುರುಷಾರ್ಥಕಾಗಿ ಇಲ್ಲಿವರೆಗೆ ಬದುಕಿದೆ.... ?


ಹೆಂಡತಿ..

ಮಕ್ಕಳು... ?
ಸಂಸಾರ...?
ಯಾವುದೂ ನನಗಿಲ್ಲವಲ್ಲ... ... ! ... 

ಪ್ರಾಯಕ್ಕೆ 

ಬಂದ ಮಗನಿದ್ದಾನೆ ಎನ್ನುವದನ್ನೂ ಮರೆತು...
ನನ್ನ ಅಪ್ಪ "ಶಾಂತನು"... 
ಮಗನ ವಯಸ್ಸಿನ  ಚೆಲುವೆ "ಮತ್ಸ್ಯಗಂಧಿಯಲ್ಲಿ"  ಮೋಹಿತನಾಗಿದ್ದ...

ಆಗ 

ನನಗೂ ಉಕ್ಕುವ ಯೌವ್ವನ...
ಕಣ್ಣು ಕುಕ್ಕುವ ತಾರುಣ್ಯ... !

"ಅಪ್ಪಾ....ಚಿಂತಿಸಬೇಡ...

ಈ ಸಾಮ್ರಾಜ್ಯದ ಸಿಂಹಾಸನವನ್ನೂ ಎಂದೂ ಏರುವದಿಲ್ಲ....

ತಾಯಿ 

ಮತ್ಸ್ಯಗಂಧಿ ನನ್ನಮ್ಮನಾಗಿ ಬರಲಿ..
ಅವರ ಮಗ ಈ ಸಿಂಹಾಸನವನ್ನು ಆಳಲಿ..

ನನ್ನ ಸಮಸ್ತ ಶಕ್ತಿ..

ಬಾಹುಬಲ
ಯುದ್ಧ ಕೌಶಲ್ಯವನ್ನು ಈ ಸಿಂಹಾಸನದ ರಕ್ಷಣೆಗೆ ಮುಡಿಪಾಗಿಡುವೆ..."

ಅಪ್ಪನ ಮದುವೆಗಾಗಿ


ಪ್ರತಿಜ್ಞೆ  ಸಾಕಿತ್ತಲ್ಲವೆ  ?

ಮತ್ಸ್ಯಗಂಧಿಯ 

ಅಪ್ಪ 
ತನ್ನ ಮಗಳ ಭವಿಷ್ಯದ ವಿಚಾರ ಮಾಡಿದ...
ಅವನಿಗಾಗಿ..
ನನ್ನ ಚಿಕ್ಕಮ್ಮನಿಗಾಗಿ ... 
ಅವಳ ಮಕ್ಕಳು ರಾಜರಾಗಲೆಂದು ಇನ್ನೊಂದು ಪ್ರತಿಜ್ಞೆ ಮಾಡಿದೆ 

"ನನ್ನ

ಬದುಕಿನುದ್ದಕ್ಕೂ  ಬ್ರಹ್ಮಚಾರಿಯಾಗಿರುವೆ...

ಎಂದಿಗೂ ಮದುವೆಯಾಗಲಾರೆ  " .....!.. 


ಮುಂದೆ

ಎಂಥಹ ಸಂದರ್ಭ ಎದುರಾದರೂ ... 
ನಾನು
ಮದುವೆಯಾಗಲಿಲ್ಲ  .. 
ನನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡೆ.....
:::::::::::::::::::::::::::

ನನ್ನಪ್ಪ

ಬದುಕನ್ನು ಕಂಡವ...ಉಂಡಿದವ...

ತನ್ನ ಬದುಕಿನ 

ಪ್ರತಿಯೊಂದೂ ಕ್ಷಣ ಕ್ಷಣವನ್ನೂ ಅನುಭವಿಸಿದವ...

ನನ್ನ ಪ್ರತಿಜ್ಞೆಯನ್ನು ಕೇಳಿ

ಸಂತೋಷದಿಂದ ನನಗೊಂದು ವರವನ್ನು ದಯಪಾಲಿಸಿದ...

"ಮಗನೇ...

ನೀನು ಇಚ್ಛಾ ಮರಣಿಯಾಗು...."...  !.. 

"ಇಚ್ಛಾಮರಣಿ"  ಅಂದರೆ ಆತ್ಮಹತ್ಯೆ  ಅಲ್ಲವೇ  ?


ನನಗೆ ನಗು ಬರುತ್ತಿದೆ....

ನಗೋಣ ಎಂದು ಕೊಂಡೆ...

ನಗಲಾಗಲಿಲ್ಲ... ಕಣ್ಣಲ್ಲಿ ನೀರು ಒಸರುತ್ತಿದೆ...


"ಬದುಕಿನುದ್ದಕ್ಕೂ

ನನ್ನ ಮಗ 
ಹೆಣ್ಣು ಸಂಗಾತಿಯಿಲ್ಲದೆ ಇರುತ್ತಾನೆ..
ಒಂಟೀ ಜೀವ....

ಒಂಟೀ ಬದುಕು ಅಂದರೆ ಸಾವಿಗೆ ಹತ್ತಿರ...


"ಆತ್ಮ ಹತ್ಯಾ ದೋಷ ತನ್ನ ಮಗನನ್ನು ತಾಗದಿರಲಿ" 

ಅಂತ ಈ ವರವನ್ನು ಕೊಟ್ಟಿರಬಹುದಾ  ?...

ಸಾವನ್ನು ಎದುರು ನೋಡುತ್ತಿರುವ 

ಈ ಸಂದರ್ಭದಲ್ಲಿ
ಬದುಕಿನಲ್ಲಿ ನಡೆದ ಹಲವಾರು ಘಟನೆಗಳು 
ಬೇಡವೆಂದರೂ ನೆನಪಾಗುತ್ತಿವೆ....

"ಆಯ್ಯೋ...

ನೋವು...."...
ಯಾರೋ ಚೀರುವ ಸದ್ಧು....
ನನ್ನ ಮನಸ್ಸು ಮಮ್ಮಲ ಮರುಗಿತು...

ಈ ಕುರುಕ್ಷೇತ್ರ ಯುದ್ಧದಲ್ಲಿ

ಯಾರೆಲ್ಲ ಸಾಯುತ್ತಿದ್ದಾರೆ.. !

ಯಾರದ್ದೋ ಮಗ..

ಯಾರದ್ದೋ ಪತಿ...
ಇನ್ಯಾರದ್ದೋ ಅಪ್ಪ...

ಸಾಯುವವ ಒಬ್ಬ ವ್ಯಕ್ತಿಯಲ್ಲ...

ಒಂದು  ಕುಟುಂಬ... 
ಕುಟುಂಬದ ಭವಿಷ್ಯಗಳು ... ಆಸೆಗಳೂ ಇಲ್ಲಿ ಸಾಯುತ್ತಿವೆ.....
ಎಷ್ಟೋ ಕನಸುಗಳು ಇಲ್ಲಿ ಕಮರುತ್ತಿವೆ.... !

ಯಾರೋ ಬರುತ್ತಿರುವ  ಸದ್ಧು.....
ಕುತ್ತಿಗೆ ಹೊರಳಿಸುವ ಪ್ರಯತ್ನ ಮಾಡಿದೆ...

ಚುಚ್ಚಿದ ಬಾಣಗಳಿಂದಾಗಿ ಆಗಲಿಲ್ಲ...


" ಭೀಷ್ಮಾ... 

ನಾನು..
ನಿನ್ನ ಕೃಷ್ಣ ಬಂದಿರುವೆ.. "

ನನ್ನ ಕಣ್ಣುಗಳು ಮಿನುಗಿದವು !

ನನ್ನ ಆರಾಧ್ಯ ದೈವ ... ಶ್ರೀಕೃಷ್ಣ...! ... 

"ಕೃಷ್ಣಾ...

ಮಾಧವಾ... 
ಹರಿ...ಮುರಾರಿ...
ಗೋವರ್ಧನ ಗಿರಿಧಾರಿ....
ನನ್ನ 
ಬಾಯಿತುಂಬಾ ನಿನ್ನ ಹೆಸರನ್ನಾದರೂ ಹೇಳಿಬಿಡುತ್ತೇನೆ...!

ಕಣ್ ತುಂಬ ನೋಡಿ .... 

ಕೈ ಮುಗಿಯುವ ಭಾಗ್ಯವೂ ನನಗಿಲ್ಲ ನೋಡು...."

ನನ್ನ ಧ್ವನಿ ನಡುಗುತ್ತಿತ್ತು...

ಕಣ್ಣಲ್ಲಿ ನೀರು ತುಂಬಿತ್ತು...

ಈಗ ಕೃಷ್ಣ ನನ್ನ ಮುಂದೆ ಬಂದು ನಿಂತ...


"ಭಕ್ತಿಗೆ 

ಆಡಂಬರ ಬೇಕಿಲ್ಲ..
ಶುದ್ಧ ಅಂತಃಕರಣದ ಭಾವ ಸಾಕು...

ಭೀಷ್ಮಾ....

ನೋವಾಗುತ್ತಿದೆಯಾ... ?"... 

ನನಗೆ ನಗು ಬಂತು....


"ಮಾಧವಾ...

ಕಣ್ ಮುಚ್ಚಿದರೂ... 
ಕಾಡುವ
ಮಾನಸಿಕ ನೋವಾ.. ?..

ಕ್ಷಣ ಕ್ಷಣಕ್ಕೂ ಚುಚ್ಚುವ ಬಾಣಗಳ ದೈಹಿಕ ನೋವಾ ?... 


ಯಾವ ನೋವು ಅಂತ ಹೇಳಲಿ ಕೃಷ್ಣಾ ..  ?... 


ಇದುವರೆಗೂ 

ನೋವಿನೊಂದಿಗೆ ಜೊತೆ ಜೊತೆಯಾಗಿ ಬದುಕಿರುವೆ..".. 

ಕೃಷ್ಣ ಮುಗುಳು ನಗುತ್ತಿರುವಂತೆ ಕಾಣುತ್ತಿತ್ತು..


"ಭೀಷ್ಮಾ...

ನಿನಗೆಂಥಹ ನೋವು...?... 

ಹಸ್ತಿನಾವತಿಪುರದ  

ಮಹಾರಥಿ ಸೇನಾನಿ...
ಹರಿ ಹರರನ್ನೇ ಗೆಲ್ಲಬಲ್ಲ ಭೀಷ್ಮನಿಗೆ ನೋವೇ  ?..."

ನನಗೆ ಅರ್ಥವಾಯಿತು...

ಕೃಷ್ಣ ನನ್ನನ್ನು ಕೆಣಕುತ್ತಿದ್ದಾನೆ ಅಂತ...

"ಮಾಧವಾ...

ನನ್ನ ಅಂತರಂಗ ಅರಿತಿದ್ದರೂ..
ಮತ್ತೆ ಕೆಣಕುವೆಯೇಕೆ .. ?"

ಕೃಷ್ಣ ಮುಗುಳ್ನಕ್ಕ...


"ಭೀಷ್ಮಾ...

ನಿನ್ನ ಬದುಕನ್ನು ನಾನು ಬಲ್ಲೆ...

ಬದುಕಿನ ಕುರಿತ ನಿನ್ನ ನಿಷ್ಠೆಯನ್ನೂ ಬಲ್ಲೆ...


ರಾಜ ವೈಭೋಗವನ್ನು ಅನುಭವಿಸುತ್ತ...

ರಾಜನ ಆಸ್ಥಾನದಲ್ಲಿ 
ನರ್ತಕಿಯರ ನೃತ್ಯಗಳನ್ನು ನೋಡುತ್ತ...
ಆಸ್ಥಾನದ ಅರೆನಗ್ನ ಹೆಂಗಳೆಯರ ಪಟಗಳನ್ನು ನೋಡುತ್ತ...
ವೈಭೋಗದ ಮಧ್ಯೆ 
ಬ್ರಹ್ಮಚಾರಿಯಾಗಿವದು ಬಹಳ ಕಷ್ಟ...

ನೀನೊಬ್ಬ ಸೇನಾನಿ...

ವೀರ ಯೋಧ...!

ಹರಿ ಹರ .. 

ಬ್ರಹ್ಮಾದಿಗಳನ್ನು ಸೋಲಿಸಬಲ್ಲ ವೀರ...

ಶೂರತನ ಸುಲಭವಾಗಿ ಬರುವದಿಲ್ಲ...


ಅದಕ್ಕೆ ತಕ್ಕ ವ್ಯಾಯಾಮ...

ಪೌಷ್ಟಿಕ ಆಹಾರ ಸೇವಿಸುವ ಅನಿವಾರ್ಯ...

ಸಮರ್ಥ

ವೀರ್ಯವಂತನ.. 
ದೇಹ 
ತನ್ನ ಜೈವಿಕ ಕ್ರಿಯೆಯನ್ನು ಮಾಡಲೇ ಬೇಕಲ್ಲವೆ  ?... 

ಭೀಷ್ಮಾ...

ನೀನು ಪ್ರತಿಜ್ಞೆ ಮಾಡಿದ್ದು ನಿನ್ನ ಯೌವ್ವನದ ದಿನಗಳಲ್ಲಿ...

ಆರಮನೆಯ ರಾಜಕುವರ..

ಹತ್ತಾರು ಸುಂದರ ಹೆಂಗಳೆಯರ ಕನಸು ಕಂಡವ....!

ಪ್ರತಿಜ್ಞೆ ಮಾಡಿದರೂ..

ಬದುಕಿನುದ್ದಕ್ಕೂ ಕನಸುಗಳು ಕಾಡದೆ ಬಿಟ್ಟಾವೆಯೆ... ?... 

ಭೀಷ್ಮಾ..

ನಿನಗೆ .. 
ಕನಸುಗಳು ಕೂಡಾ   ನೋವುಗಳಾಗಿದ್ದವು  ಅಲ್ಲವೆ ?"...

ಈ 

ಕೃಷ್ಣ 
ನನ್ನನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದ...

ತಲೆ  ಅಲ್ಲಾಡಿಸುವ ಪ್ರಯತ್ನ ಮಾಡಿದೆ...ನೋವಿನಿಂದ ಮುಖ ಕಿವುಚಿದೆ...


"ಮಾಧವಾ....

ಬದುಕಿನುದ್ದಕ್ಕೂ .. 
ನಾನು 
"ಕಾಮವನ್ನು" ಧಿಕ್ಕರಿಸಿ ... ಎದುರಿಸಿ ಬದುಕಿದ್ದೇನೆ...

ನನ್ನ 

ಬದುಕಿನ ವೈರುಧ್ಯ ನೋಡು ಕೃಷ್ಣಾ...

ನನ್ನಿಂದ 

ಬ್ರಹ್ಮಚೈರ್ಯದ ಪ್ರತಿಜ್ಞೆ ಮಾಡಿಸಿದ
ನನ್ನ ಚಿಕ್ಕಮ್ಮ
ಮತ್ಸ್ಯಗಂಧಿಗೆ ಯೋಗ್ಯರಾದ ಸೊಸೆಯರನ್ನು ನಾನು ತರಬೇಕಾಯಿತು.... 

ಮುಂದೊಮ್ಮೆ 

ಅವರು  ಮಕ್ಕಳಾಗದೆ ವಿಧವೆಯರಾದರು....

ರಾಜ್ಯದ ಸಿಂಹಾಸನಕ್ಕೆ ಉತ್ತರಾಧಿಕಾರಿ ಬೇಕಲ್ಲ... !


ವೇದವ್ಯಾಸರು ಸಮಸ್ಯೆ ಪರಿಹರಿಸಲಿಕ್ಕೆ ಬರಬೇಕಾಯಿತು....


ಕುಟುಂಬದ ಹಿತೈಷಿಯಾಗಿ..

ಇದಕ್ಕೆಲ್ಲ ನಾನು ಸಾಕ್ಷಿಭೂತನಾಗಿದ್ದೆ....

ಎಲ್ಲೋ 

ಬೆಟ್ಟದಲ್ಲಿ ...
ಹಿಮಾಲಯದಲ್ಲಿ  ಮರದ ಕೆಳಗೆ
ಬದುಕಿನ ಸಂಬಂಧಗಳನ್ನೆಲ್ಲ 
ತೊರೆದು...
ಸನ್ಯಾಸಿಯಾಗಿ ಬ್ರಹ್ಮಚಾರಿಯಾಗುವದು ಸುಲಭ....

ರಾಜಭೋಗದಲ್ಲಿ .... 

ಸನ್ಯಾಸಿಯಾಗಿ ನಾನು ಗೆದ್ದಿರುವೆ ಕೃಷ್ಣಾ...."

ಕೃಷ್ಣ ನನ್ನನ್ನು ನೋಡಿ ಹೆಮ್ಮೆಯಿಂದ ನಕ್ಕ...


"ಕೃಷ್ಣಾ....

ಈ ಸೃಷ್ಟಿಯಲ್ಲಿ 
ಒಂದು ಗಂಡು..
ಒಂದು ಹೆಣ್ಣು ಹುಟ್ಟುವದು ಸಂತಾನೋತ್ಪತ್ತಿಗೋಸ್ಕರ...

ಇದು ನನಗೆ ತಿಳಿಯದ ವಿಷಯವೇನಲ್ಲ...


ನನ್ನ 

ಕಣ್ಣೇದುರಲ್ಲೇ ... 
ಕಾಮದ ಭಯಂಕರ ಆಟಗಳನ್ನು  ನೋಡಿರುವೆ..."

"ಎಲ್ಲಿ  ?"


"ಕೃಷ್ಣಾ...

ಧೃಥರಾಷ್ಟ್ರ ಹುಟ್ಟು ಕುರುಡ...!

ನಮ್ಮ ಕಣ್ಣಿಗೆ ಕಾಣುವ 

ಬಣ್ಣಗಳ ರಂಗುಗಳನ್ನು ಆತ ನೋಡಲೇ ಇಲ್ಲ...

ಹೆಣ್ಣಿನ ಸೌಂದರ್ಯದ 

ಸೊಬಗಿನ ಕಲ್ಪನೆ ಕೂಡ ಅವನಿಗಿಲ್ಲ...

ಅಂಥಹ ಹುಟ್ಟು ಕುರುಡನ

ಕಾಮಕ್ಕೆ 
ಮಡದಿ  ಗಾಂಧಾರಿ ಸಾಕಾಗಲಿಲ್ಲ...

ದಾಸಿಯಲ್ಲಿ ಮೋಹಿತನಾದ 

ಅವಳಲ್ಲಿ ಮಗುವನ್ನು ಪಡೆದ...

ಅದೊಂದು ದೊಡ್ಡ ಗಲಾಟೆಯೇ ಆಗಿ ಹೋಯಿತು... 

ಅವನ ಈ ಅವಾಂತರವನ್ನು ಪರಿಹರಿಸಿದ್ದು ನಾನು...

ಅವನ ದಾಸಿ ಪುತ್ರ 

"ಯಯತ್ಸು" ನಿನಗೂ ಗೊತ್ತಲ್ಲವೆ ?"

ಕೃಷ್ಣ ನಗುತ್ತ ತಲೆಯಾಡಿಸಿದ...


"ಕೃಷ್ಣಾ...

ಇದಕ್ಕಿಂತಲೂ ಆಶ್ಚರ್ಯವಾದ ಇನ್ನೊಂದು ವಿಷಯವಿದೆ...

ಧೃಥರಾಷ್ಟ್ರನ ಸಹೋದರ  

ಪಾಂಡು ಮಹಾರಾಜನಿಗೆ  ಒಂದು ಭಯಂಕರ ಶಾಪವಿತ್ತು...

"ನೀನು 

ಕಾಮಾತುರನಾಗಿ...
ಮಡದಿಯನ್ನು ಭೋಗಿಸಲು ಮುಂದಾದರೆ ನಿನಗೆ ಸಾವು ಖಂಡಿತ" .. 
ಅಂತ.....

ಕಾಮವನ್ನು ಅನುಭವಿಸಲು ಹೋದರೆ  ಸಾವು ಖಂಡಿತ !


ಈ ಪಾಂಡು ಮಾಡಿದ್ದೇನು  ?


ತನ್ನ ಸಾವನ್ನು ಲೆಕ್ಕಿಸದೆ...   

ಕಾಮವನ್ನು ಅನುಭವಿಸಲು ಹೋದ...
ಸತ್ತೂ  ಹೋದ.. "... 

ಸಾವಿನ ಭಯವಿದ್ದರೂ 

ದೇಹವನ್ನೂ ... ಮನಸ್ಸನ್ನೂ  
ಕಾಡುವ ಕಾಮವೇ ದೊಡ್ಡದಾಗಿ ಹೋಯ್ತು.... ! "... 

ಕೃಷ್ಣ ಮತ್ತೆ  ಕಿರು ನಗು ನಕ್ಕ.....


"ಕೃಷ್ಣಾ...

ನಿನ್ನಲ್ಲಿ ಒಂದು ಪ್ರಶ್ನೆಯಿದೆ...."

"ಏನದು ಪ್ರಶ್ನೆ...  ?....


"ಮಾಧವಾ...

ಬದುಕಿನುದ್ದಕ್ಕೂ ನಾನು "ಪ್ರಕೃತಿಯ"  ವಿರುದ್ಧವಾಗಿ ಬದುಕಿದೆ...

ಮನಸ್ಸಿನ...

ದೇಹದ ಸಹಜ ಆಸೆಗಳನ್ನು 
ಹತ್ತಿಕ್ಕಿ..
ಹಠದಿಂದ ಬದುಕಿದೆ...

ನನ್ನ

ಬದುಕಿನ ಕ್ಷಣ ಕ್ಷಣದಲ್ಲೂ 
ಈ ಹೆಣ್ಣು ... 
ಈ ಪ್ರಕೃತಿ .... ನನ್ನನ್ನು ಕಾಡಿದೆ...

ಅಂಬೆಗೆ 

ನಾನು ಮಾಡಿದ್ದೇನು... ?
ನನ್ನ ತಮ್ಮನಿಗಾಗಿ ಅವಳನ್ನು ಕರೆ ತಂದೆ...
"ನಾನು ಸಾಲ್ವ ಮಹಾರಾಜನನ್ನು ಪ್ರೀತಿಸಿದ್ದೇನೆ..." ಎಂದಾಗ
ಬಹಳ ಮರ್ಯಾದೆಯಿಂದ ಅವನಲ್ಲಿ ಅವಳನ್ನು ಕಳುಹಿಸಿಕೊಟ್ಟೆ...

ಸಾಲ್ವ ಮಹಾರಾಜ 

ಅಂಬೆಯನ್ನು  ತಿರಸ್ಕರಿಸಿದರೆ ನನ್ನ ತಪ್ಪೇನಿದೆ ? ... 

ಇಂದು ಅಂಬೆ ... 

ಶಿಖಂಡಿಯಾಗಿ ನನ್ನ ಸಾವಿಗೆ ಕಾರಣಳಾಗಿದ್ದಾಳೆ...

ಕೃಷ್ಣಾ...

ಇದುವರೆಗೂ 
ಕುರುವಂಶದ ಸಿಂಹಾಸನವನ್ನು 
ವೈರಿಗಳಿಂದ ಕಾಪಾಡಿಕೊಂಡು ಬಂದಿದ್ದೆ..
ಇಂದು 
ಮನೆಯ ಸೊಸೆ "ದ್ರೌಪದಿಯಿಂದಾಗಿ"  ಕುರುವಂಶ ನಾಶವಾಗುತ್ತಿದೆ...

ನನ್ನ 
ಬದುಕಿನಲ್ಲಿ  ಯಾವಾಗಲೂ 
"ಹೆಣ್ಣು "
ಈ ರೀತಿಯಾಗಿ  ಬಂದು 
ವಿಪರ್ಯಾಸಗಳನ್ನು ಹುಟ್ಟು ಹಾಕುವದು ಯಾಕೆ  ?

ಯಾಕೆ ಹೀಗೆ  ?


ಬ್ರಹ್ಮಚಾರಿಯಾಗಿರಬೇಕು ಎಂದರೆ ಕಾಮವನ್ನು ಗೆಲ್ಲಬೇಕು....


ಈ ಪ್ರಕೃತಿ..

ಈ ಸ್ತ್ರೀಯನ್ನು ವಿರೋಧಿಸಿ ಬದುಕಿದ್ದು ತಪ್ಪಾ ?....

ಕಾಮದ ಹೊರತಾಗಿ 

ಈ ಬದುಕಿನಲ್ಲಿ ಏನೂ ಇಲ್ಲವೆ ಕೃಷ್ಣಾ...  ?..."

ಕೃಷ್ಣ ನಗುತ್ತಿದ್ದ...

ಒಂದೇ ಸವನೆ ನಗುತ್ತಿದ್ದ...

ನಗುವ 

ಮುದ್ದು ಮುಖದ 
ಕೃಷ್ಣನ ಮುಖವನ್ನು ಕಣ್ ತುಂಬಾ ತುಂಬಿಕೊಂಡೆ...

"ಭೀಷ್ಮಾ....

ಏನು ಹೇಳಲಿ  ?...
ನಾನೂ ಸಹ ನಿನ್ನ ಹಾಗೆಯೇ ಬ್ರಹ್ಮಚಾರಿ.... 

ಇದು ನಿನಗೂ ಗೊತ್ತಲ್ಲವೆ  ?...


ಲೋಕದ ಸಹಜ  ಸೃಷ್ಟಿ "ಪ್ರಕೃತಿ.. ಪುರುಷ" ,...

ಇಲ್ಲಿ ಕಾಮವೂ ಸಹಜ....

ಸಹಜತೆಯನ್ನು

ಒಪ್ಪಿದರೂ .... 
ಅಪ್ಪಿ ಕೊಳ್ಳುವ ಅಗತ್ಯವೇನಿಲ್ಲ...."

ಭೀಷ್ಮಾ... 

ನಿನ್ನ ಬದುಕು .. 
ಸಾರ್ಥಕ ಬದುಕು... 

ಅಪ್ಪನಿಗಾಗಿ ಮಾಡಿದ ಪ್ರತಿಜ್ನೆಗಾಗಿ ನಿನ್ನ ಬದುಕನ್ನೇ ಮುಡಿಪಾಗಿಟ್ಟೆ... 


ವೈಭೋಗದ 

ಕಾಮಕೂಪದಲ್ಲಿದ್ದರೂ... 
ನಿನ್ನ ಛಲವನ್ನು ಬಿಡಲಿಲ್ಲ... 

ನೀನು ಗೆದ್ದಿದ್ದೀಯಾ  ಭೀಷ್ಮಾ... !


ನಿನ್ನದು ಸಾರ್ಥಕ ಬದುಕು... ".. 


ನನ್ನ 
ನೋವುಗಳನ್ನು ಲೆಕ್ಕಿಸದೆ ... 
ಬಾಣಗಳಿಂದ ಜರ್ಜರಿತವಾದ 
ರಕ್ತಸಿಕ್ತ ಕೈಗಳನ್ನು 
ಎತ್ತಿ 
ಕಣ್ಮುಚ್ಚಿ ಕೈಮುಗಿದೆ... 

ಭಕ್ತಿಯಿಂದ ಪರವಶನಾದೆ... 

ನನ್ನ ಧ್ವನಿ ನಡುಗುತ್ತಿತ್ತು... 

"ಕೃಷ್ಣಾ .... 

ಕೃಷ್ಣಾ ....... ಕೃಷ್ಣಾ ..."... 

ಕೃಷ್ಣ 

ಮೃದುವಾಗಿ  ಮೈದವಡುತ್ತಿದ್ದ... 

ನನ್ನ 
ಕಣ್ಣುಗಳಲ್ಲಿ  ಧಾರಾಕಾರವಾಗಿ ನೀರಿಳಿಯುತ್ತಿತ್ತು..
(ಆಸ್ತಿಕ ಮನಸ್ಸುಗಳ ಕ್ಷಮೆ ಕೋರುವೆ....)

ಸುಂದರ ಪ್ರತಿಕ್ರಿಯೆಗಳಿವೆ.... ದಯವಿಟ್ಟು ಪ್ರತಿಕ್ರಿಯೆಗಳನ್ನೂ  ನೋಡಿ...