Sunday, September 18, 2011

ರೀತಿ...


ನನ್ನ ಅಪ್ಪನ ಬಗೆಗೆ ನಿಮಗೆ ಗೊತ್ತಿಲ್ಲ..


ತುಂಬಾ ಹಠದ ಸ್ವಭಾವದವನು..
ಅವನ ಮಗಳಾದ ನಾನೂ ಕೂಡ ಹಾಗೇನೆ..
ಅಪ್ಪ , ಅಮ್ಮರ ಮುದ್ದಿನ ಮಗಳು ನಾನು.. 
ನನ್ನ ಎಲ್ಲ ಬೇಕು ಬೇಡಗಳನ್ನು ನನ್ನ ಅಪ್ಪ, ಅಮ್ಮ ಗೌರವಿಸಿದರು..
ಎಲ್ಲವನ್ನೂ... ನನ್ನ ಇಚ್ಛೆಯಂತೆ ಬೆಳೆಸಿದ್ದಾರೆ..


ಮತ್ತೇನು ಸಮಸ್ಯೆ ಅಂತೀರಾ?


ನನ್ನಪ್ಪ ನನಗೆ ಮದುವೆ ಗಂಡು ಹುಡುಕುತ್ತಿದ್ದಾರೆ...


"ಅಪ್ಪಾ..
ನನ್ನಿಷ್ಟದ ಗಂಡು ನನಗೆ ಬೇಕು..
ನನ್ನ ಸ್ವಭಾವ, ರುಚಿಗಳಿಗೆ ಹೊಂದಿಕೊಳ್ಳುವಂಥಹ ಗಂಡು ನನಗೆ ಬೇಕು..
ನನ್ನ ಗಂಡ ಹೇಗಿರ ಬೇಕು ಅಂತ ನನ್ನದೇ.. ಆದ ಕನಸುಗಳಿವೆ..


ಇದು ನನ್ನ ಮದುವೆ..
ಗಂಡನನ್ನೂ ನಾನೇ ಹುಡುಕಿಕೊಳ್ಳುತ್ತೇನೆ..."


ಅಪ್ಪ ಒಪ್ಪಲಿಲ್ಲ..


"ಮಗಳೆ..
ಪ್ರೇಮ ವಿವಾಹ ಯಶಸ್ಸು ಕಾಣುವದು ಕಷ್ಟ.."


" ಯಾಕೆ ಹಾಗೆ..? 
ಅರೇಂಜ್ ಮದುವೆ ಹೇಗೆ ಯಶಸ್ಸಾಗುತ್ತದೆ..?
ಇದೆಲ್ಲ ನಾನು ಒಪ್ಪೋದಿಲ್ಲ ಅಪ್ಪಾ..."


"ಮಗಳೆ..
ಅರೇಂಜ್ ಮದುವೆಗಳಲ್ಲಿ ಗಂಡು, ಹೆಣ್ಣು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆರೆಂಟು ತಿಂಗಳಾಗಿರುತ್ತದೆ..
ಯೌವ್ವನದ ಬಿಸಿ....
ಅಷ್ಟರಲ್ಲಿ ಮಕ್ಕಳಾಗಿ ಬಿಡುತ್ತದೆ..
ಮಗುವನ್ನು ದೊಡ್ಡ ಮಾಡುತ್ತಿದ್ದಹಾಗೆ ಪರಸ್ಪರ ಹೊಂದಾಣಿಕೆ ಅನಿವಾರ್ಯವಾಗುತ್ತದೆ..


ಇಂಥಹ ಅನಿವಾರ್ಯತೆಗಳು ಪ್ರೀತಿಯನ್ನು ಬೆಳೆಸಿ ....
ದಾಂಪತ್ಯ ಯಶಸ್ವಿಯಾಗುತ್ತದೆ....."


ಅಪ್ಪ ಹೇಳಿದ್ದು ಹೌದಾಗಿರಬಹುದು...


"ಅಪ್ಪಾ...
ಸರಿ... 
ನೀನೇ ಗಂಡು ಹುಡುಕು...
ಮದುವೆಗೆ ಮೊದಲು ನೀನು ಹುಡುಕಿದ ಗಂಡಿನೊಡನೆ ನನಗೆ ಮುಕ್ತವಾಗಿ ಮಾತನಾಡಲು ಬಿಡು..
ಮದುವೆ  ನಂತರ ಬದುಕುವವರು ನಾವು...
ಹಾಗಾಗಿ..
ಮದುವೆಗೆ ಮುನ್ನ  ಹುಡುಗನನ್ನು ಅರ್ಥ ಮಾಡಿಕೊಳ್ಳುವದು ಅತ್ಯವಶ್ಯ...."


ಅಪ್ಪ ಗಂಡು ಹುಡುಕತೊಡಗಿದ..
ಹುಡುಕಿಯೂ ಬಿಟ್ಟ..
ಹುಡುಗ ನನ್ನನ್ನು ಒಪ್ಪಿಯೂ ಬಿಟ್ಟ..


ನಮ್ಮಿಬ್ಬರ ಭೇಟಿಯೂ ನಿಶ್ಚಯವಾಯಿತು..


"ನೋಡಿ..
ನಾನು ಪುರುಷ ಸಮಾಜ ಬಯಸುವಂಥಹ ಹೆಣ್ಣು ನಾನಲ್ಲ..
ನಾನೂ ಕೆಲಸ ಮಾಡುತ್ತೇನೆ.. ಗಳಿಸುತ್ತೇನೆ..
ಮನೆಗೆ ಬಂದ ಮೇಲೆ ಒಬ್ಬಳೇ ...
ಅಡಿಗೆ ಕೆಲಸ ಮಾಡ ಬೇಕೆಂದರೆ ನನ್ನಿಂದ ಆಗುವದಿಲ್ಲ..


ಬಚ್ಚಲು ಮನೆಯಲ್ಲಿ ...
ನಿಮ್ಮ ಒಳ ಚಡ್ಡಿಯನ್ನು ತೊಳೆಯುವಂಥಹ ಹೆಂಡತಿ ನಾನಾಗಲಾರೆ.."


" ಇದನ್ನು ನಾನೂ ಒಪ್ಪುತ್ತೇನೆ..
ನನ್ನ ಅಪ್ಪ, ಅಮ್ಮ ..ನನ್ನನ್ನೂ.. ಮುದ್ದಿನಿಂದ ಬೆಳೆಸಿದ್ದಾರೆ...
ಆದರೆ..
ಅಡಿಗೆ ಕೆಲಸ ನನಗೂ ಗೊತ್ತು.. ನನ್ನಮ್ಮನಿಗೆ ನಾನು ಸಹಾಯ ಮಾಡುತ್ತೇನೆ..
ಗಂಡ ಹೆಂಡತಿಯೆಂದರೆ ಮೇಲು ಕೀಳುಗಳಿಲ್ಲ..
ಇಬ್ಬರೂ ಸಮಾನರು..
ಇಬ್ಬರೂ ಸ್ನೇಹಿತರಂತೆ ಇರಬೇಕು..."


ಹುಡುಗ ನನಗೆ ಇಷ್ಟವಾಗತೊಡಗಿದ..
ಚಿಗುರು ಮೀಸೆಯ ಹುಡುಗ ಬೆಳ್ಳಗೂ ಇದ್ದ...


ಹುಡುಗನ ಬಗೆಗೆ ನನಗೆ ಇನ್ನೂ ತಿಳಿದುಕೊಳ್ಳಬೇಕಿತ್ತು...
ಅವನ ನೀಲಿ ಕಣ್ಣುಗಳನ್ನೇ ನೋಡುತ್ತ ಕೇಳಿದೆ..


" ನಿಮ್ಮ ಸ್ವಭಾವದ ಬಗೆಗೆ ಹೇಳಿ.."


"ನನ್ನ ಸ್ವಭಾವ ತುಂಬಾ ಒಳ್ಳೆಯದು..


ಪ್ರತಿಯೊಬ್ಬರೂ ಹೀಗೇಯೇ ಹೇಳುತ್ತಾರೆ..
ಮಾತನಾಡುವಾಗ ನಾವು ಏನು ಅಲ್ಲವೋ ಅದನ್ನು ನಾವು ಹೇಳುತ್ತೇವೆ..
ಹಾಗಾಗಿ ಮಾತು ಕೇಳುವಾಗ..
"ಏನು ಹೇಳುತ್ತಾರೋ ಅದನ್ನು ಕೇಳಬಾರದು..
ಅವರು ಏನು ಹೇಳುತ್ತಿಲ್ಲವೋ ಅದನ್ನು ಕೇಳಬೇಕು"
ಇದು ನನ್ನ ಅನುಭವ.."


"ಅಂದರೆ ಏನು ಅರ್ಥ..?"


"ನೋಡಿ..


ಮದುವೆಗೆ ಮುನ್ನ ಎಲ್ಲವು ಬಣ್ಣ ಬಣ್ಣದ ಮಾತುಗಳು...
ಅವುಗಳ ಸತ್ಯದ ಬಣ್ಣ ಮದುವೆಯ ನಂತರ ಗೊತ್ತಾಗುತ್ತದೆ..


ಮದುವೆಗೆ ಮುನ್ನ ಏನೆಲ್ಲ ಮಾತನಾಡಿದರೂ..
ಮದುವೆಯಾದ ಮೇಲೆ ಪರಸ್ಪರ ಹೊಂದಾಣಿಕೆ..
ವಿಶ್ವಾಸ ಬಹಳ ಮುಖ್ಯ..
ನಿಮಗಾಗಿ ನಾನು ..
ನನಗಾಗಿ ನೀವು  ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು...


ಮದುವೆಯೆಂದರೆ " ನಮ್ಮದಲ್ಲದ ಅಪರಿಚಿತ ಸ್ವಭಾವದೊಡನೆ ಹೊಂದಾಣಿಕೆ ಮಾಡಿಕೊಳ್ಳುವದು"
ನಾವು ಎಷ್ಟು ಅಡ್ಜಸ್ಟ್ ಆಗುತ್ತೇವೋ ಅಷ್ಟರ ಮಟ್ಟಿಗೆ ದಾಂಪತ್ಯ ಯಶಸ್ಸಾಗುತ್ತದೆ..
ಹಾಗೆಯೇ ಪರಸ್ಪರ ವಿಶ್ವಾಸ..
ಇಬ್ಬರೂ ದುಡಿಯುವದರಿಂದ ನಂಬಿಕೆ ಬಹಳ ಮುಖ್ಯ.."


ಹುಡುಗ ಚಂದವಷ್ಟೇ ಅಲ್ಲ.. ಬುದ್ಧಿವಂತ ಕೂಡ...


ಹುಡುಗನನ್ನು ಇನ್ನೂ ಮಾತನಾಡಿಸಬೇಕು ಅನ್ನಿಸಿತು...


"ನೀವು... ನನ್ನಲ್ಲಿ ಏನನ್ನು ಇಷ್ಟ ಪಟ್ಟಿದ್ದೀರಿ..?"


ಹುಡುಗ ಸ್ವಲ್ಪ ನಾಚಿ ಕೆಂಪಗಾದ..
ತಡವರಿಸಿದ..


"ನನಗೆ....
ನಿಮ್ಮ ತುಂಬು ಕೆನ್ನೆ.. ಕೆನ್ನೆಯ ಮೇಲಿನ ಮಚ್ಚೆ..
ನಿಮ್ಮ ಮುಗುಳು ನಗೆ...
ಕೆನ್ನೆಯ ಮೇಲಿನ ಮಚ್ಚೆಯ ಹುಡುಗಿಯನ್ನು ನಾನು ಹುಡುಕುತ್ತಿದ್ದೆ..


ನನ್ನ ಅದೃಷ್ಟ ನೀವು ಸಿಕ್ಕಿದ್ದೀರಿ..."


ನನಗೂ ನಾಚಿಕೆಯಾಯಿತು.. ಒಳಗೊಳಗೆ ಖುಷಿಯೂ ಆಯಿತು..


ಸರಿ .. ಇನ್ನೇನು..?


ಮದುವೆ ನಿಶ್ಚಯವಾಯಿತು.. 


ಎಷ್ಟೆಲ್ಲ ಸಡಗರ.. ಸಂಭ್ರಮದ ನಡುವೆ..
ಹೆದರಿಕೆಯ ಢವ ಢವದೊಡನೆ  ಮದುವೆಯೂ ಆಯಿತು...!!


ಮೊದಲ ರಾತ್ರಿಯ ಸನ್ನಿವೇಶಗಳನ್ನು ...
ಸಿನೇಮಾದಲ್ಲಿ ನೋಡಿದ್ದೆ...


ಇಂದು ಆ ಅನುಭವ ನನ್ನದಾಗಲಿದೆ !!


ಏನೋ ಒಂದು ರೀತಿಯ ಥ್ರಿಲ್ಲು...!
ಗಂಡು ಬೀರಿಯಾದ ನನಗೂ ಹೆದರಿಕೆ.. 
ನಾಚಿಕೆ.. ಆತಂಕ.. ಆಗತೊಡಗಿತು...


ಹುಡುಗ ನನ್ನ ಹತ್ತಿರ ಬಂದ..
ನನಗೆ ಹೇಗೋ ಹೇಗೋ ಆಯಿತು....
ಕೈ ಕಾಲು ಬೆವರ ತೊಡಗಿತು...


ಎಷ್ಟೆಂದರೂ ಗಂಡಿನ ಮೊದಲ ಸ್ಪರ್ಷ...! 
ರೋಮಾಂಚನ... !


ಹುಡುಗ ನನ್ನ ಕೆನ್ನೆ ಮುಟ್ಟಿದ...
ಕೆನ್ನೆಯ ಮೇಲಿನ ಮಚ್ಚೆಯನ್ನು ಮೃದುವಾಗಿ ಸವರಿದ..


ನನ್ನ ಕೆನ್ನೆಯ ಕಪ್ಪು ಮಚ್ಚೆಯ ಬಗೆಗೆ ನನಗೆ ಹೆಮ್ಮೆಯಾಯಿತು...


" ನೀನು..
ನಿನ್ನ ಕೆನ್ನೆ... ಈ ಮಚ್ಚೆ ನನಗೆ ಬಲು ಇಷ್ಟ.. ಕಣೆ..."


ಹುಡುಗ ಕಿವಿಯಲ್ಲಿ ಉಸುರಿದ...
ಮೈ ಬಿಸಿಯಾಗ ತೊಡಗಿತು...


ಒಂದು ವಿಷಯ ಕೇಳಲು ಮರೆತು ಬಿಟ್ಟಿದ್ದೆ...
ನಡುಗುವ ಧ್ವನಿಯಲ್ಲಿ..


" ಒಂದು ವಿಷಯ ಕೇಳಲಾ...?"


"ಕೇಳು..ಪುಟ್ಟಣ್ಣಿ.."


ಅವನು ಪುಟ್ಟಣ್ಣಿ.. ಅಂತ ಕರೆದದ್ದು ಇಷ್ಟವಾಯಿತು... 
ಅಪ್ಯಾಯಮಾನವಾಯಿತು...


"ನೋಡಿ..
ನೀವೂ ಕೂಡ ತುಂಬಾ ಚಂದವಿದ್ದಿರಿ..
ಮದುವೆಗೆ ಮುನ್ನ ಯಾವುದಾದರೂ ಗೆಳತಿ ಇದ್ದಳಾ...?"


"ಛೇ.. ಛೇ... ನಾನು ಅಂಥವನಲ್ಲ..."


"ನಿಮ್ಮ ಕಾಲೇಜಿನಲ್ಲಿ..."


"ನಾನು ನಾಚಿಕೆ ಸ್ವಭಾವದವನು..
ಕಾಲೇಜಿನ ದಿನಗಳಲ್ಲಂತೂ ಪುಸ್ತಕದ ಹುಳುವಾಗಿದ್ದೆ..
ರಾಜ್ಯಕ್ಕೆ ನಾನು ಎರಡನೆ Rank   ಗೊತ್ತಾ...?"


ನೀಲಿ ಕಣ್ಣಿನ ಹುಡುಗನ ಧ್ವನಿ ಕೇಳಲು  ಇಷ್ಟ...


"ನಿಮ್ಮ ಆಫೀಸಿನಲ್ಲಿ ಚಂದದ ಹುಡುಗಿಯರು ಇಲ್ವಾ?"


"ಇದ್ದಾರೆ..
ಆದರೆ ನನ್ನ ಕೆಲಸ ನನಗೆ ಬಹಳ ಮುಖ್ಯ...
ಆಫೀಸಿನಲ್ಲಿ ನಾನು ಬಹಳ ಕಠಿಣವಾಗಿರುತ್ತೇನೆ"


"ನಿಮ್ಮ ಸಂಬಂಧಿಕರಲ್ಲಿ.. ಅಂದದ ಹುಡುಗಿಯರು ಇಲ್ವಾ?"


"ಹಾಂ...
ಒಬ್ಬಳಿದ್ದಾಳೆ..
ನನ್ನ ಅತ್ತಿಗೆಯ ತಂಗಿ.."


ನನಗೆ ಕುತೂಹಲ... !!


" ಹೇಗಿದ್ದಾಳೆ..??"


" ಚಂದ ಇದ್ದಾಳೆ...
ಒಂದು ವಿಷಯ ಹೇಳಿ ಬಿಡುತ್ತೇನೆ...
ಅವಳಿಗೂ ನಿನ್ನ ಹಾಗೆಯೇ..
ಕೆನ್ನೆ ಮೇಲೆ ಮಚ್ಚೆಯಿದೆ..
ನನ್ನ ಅದೃಷ್ಟ.. ಕೆನ್ನೆ ಮಚ್ಚೆಯ ಹುಡುಗಿಯೇ ನನಗೆ ಸಿಕ್ಕಿದ್ದಾಳೆ..."


ಹೌದಾ... !!
ಅಬ್ಭಾ ಗಂಡಸೆ.. !!
ನನಗೆ ಅನುಮಾನ ಬರತೊಡಗಿತು...!


"ಅವಳು ಮದುವೆಗೆ ಮುನ್ನ ನಿಮ್ಮನೆಗೆ ಬರುತ್ತಿದ್ದಳಾ?"


"ಬರುತ್ತಿದ್ದಳು..."


"ನೀವಿಬ್ಬರೇ ಏಕಾಂತದಲ್ಲಿ ಭೇಟಿಯಾಗಲಿಲ್ವಾ?"


"ಛೇ.. ಛೇ.. ಹಾಗೇನಿಲ್ಲ"


"ಅದು ಹೇಗೆ ಸಾಧ್ಯ..?
ಸಂಬಂಧಿಕರೆಂದ ಮೇಲೆ ಭೇಟಿಯಾಗಿರಬೇಕಲ್ಲವೆ?"


"ಅವಳಿಗೆ ...
ಅತ್ತಿಗೆಯ ಮದುವೆಯಾಗುವ ಮೊದಲೆ ನಿಶ್ಚಯವಾಗಿತ್ತು...
ನನ್ನ ಅತ್ತಿಗೆಯ  ಮದುವೆಯಾಗಿ ಆರು ತಿಂಗಳಲ್ಲಿಯೇ ಅವಳ ಮದುವೆಯೂ ಆಯಿತು.."


"ಅವಳಿಗ ಎಲ್ಲಿದ್ದಾಳೆ...? ಏನು ಮಾಡುತ್ತಾಳೆ...?"


" ಅವಳೂ ಕೆಲಸ ಮಾಡುತ್ತಾಳೆ.. 
ನಮ್ಮ ಆಫೀಸಿನ ಪಕ್ಕದ ಬಿಲ್ಡಿಂಗಿನಲ್ಲಿ ಅವಳ ಆಫೀಸಿದೆ.."


ನನಗೆ ಕೋಪ ಬರತೊಡಗಿತು...


ಇವರಿಬ್ಬರೂ ದಿನಾಲೂ ಭೇಟಿಯಾಗ ಬಹುದಲ್ವಾ?.. 


ಛೇ..!!


"ಇದನ್ನೆಲ್ಲ.... ನೀವು ಮೊದಲೇ ಯಾಕೆ ಹೇಳಲಿಲ್ಲ..?"


"ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ..?


ಅವಳ ಚಂದ ಇಷ್ಟಪಟ್ಟೆ ಅಷ್ಟೆ... 
ಬಯಸಲಿಲ್ಲ..
ನಾನು ಇಷ್ಟಪಟ್ಟು ಬಯಸಿದ್ದು ನಿನ್ನನ್ನು...
ಪ್ರೀತಿಸ್ತಾ ಇರೋದು ನಿನ್ನನ್ನು..."


" ಇದನ್ನು ನಾನು ಹೇಗೆ ನಂಬಲಿ...? "


ನನ್ನನ್ನು ಹಿಡಿದುಕೊಂಡಿದ್ದ ಕೈಗಳು ಸಡಿಲವಾಗತೊಡಗಿತು..
ಹುಡುಗನ ಧ್ವನಿ ಗಡುಸಾಯಿತು... 
ಬಹಳ ಕಠಿಣವಾಗಿ ಹೇಳಿದ...


"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ.. 
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."


ಆತ ...
ಮುಖತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...


ನನಗೂ.. ಅಸಾಧ್ಯ ಕೋಪ ಬಂತು..

ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
(ಇದು ಕಥೆ...

ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ... ಚೆನ್ನಾಗಿವೆ...)