Wednesday, April 22, 2009

ಹೀಗೊಂದು... ನೆನಪು....!

ಆಗತಾನೆ ಹತ್ತನೆಯ ತರಗತಿಯ ಫಲಿತಾಂಶ ಬಂದಿತ್ತು...

ನಾನು ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿದ್ದೆ...
ಮುಂದೇನು ಓದಬೇಕು ಎನ್ನುವದರ ಬಗೆಗೆ ಮನೆಯಲ್ಲಿ ಚರ್ಚೆ ನಡೆದಿತ್ತು...

ನನಗೆ ಚಿತ್ರಕಲೆಯೆಂದರೆ ಬಹಳ ಇಷ್ಟವಾಗಿತ್ತು.

"ಚಿಕ್ಕಪ್ಪ ... ಡ್ರಾಯಿಂಗ್ ಓದುತ್ತೇನೆ"

" ಡ್ರಾಯಿಂಗ್ ಓದಿ ಹೊಟ್ಟೆ ತುಂಬಿಸಿಕೊಂಡವರು ಕಡಿಮೆ ...
ಮಗನೆ ಅದು ಬೇಡ..

ನೀನು ಸಂಪಾದನೆ ಶುರು ಮಾಡಿಕೊ...
ನಿನ್ನ ಕಾಲಲ್ಲಿ ನಿಂತುಕೊ..
ಆಮೇಲೆ ಹವ್ಯಾಸವಾಗಿ ಏನುಬೇಕಾದರೂ ಮಾಡು"

ಬುದ್ಧಿ ಮಾತು ಹೇಳಿದರು...

ಮತ್ತೇ ಏನು ಮಾಡಬೇಕು...?

" ವಿಜ್ಞಾನ ಓದು"

" ನಿಮ್ಮ ಕುಟುಂಬದಲ್ಲಿ.., ಸುತ್ತಮುತ್ತಲ ಹಳ್ಳಿಯಲ್ಲಿ ವಿಜ್ಞಾನ, ಗಣಿತವನ್ನು ಯಾರೂ ಓದಿಲ್ಲ...
ಇವನು ಪಾಸಾದದ್ದು ಸೆಕೆಂಡ್ ಕ್ಲಾಸ್..
ಇದು ಇವನ ತಲೆಗೆ ಹತ್ತೊದಿಲ್ಲ....
ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಆಗ್ತದೆ..."


ಪಕ್ಕದ ಮನೆಯವರೊಬ್ಬರು ಚಿಕ್ಕಪ್ಪನಿಗೆ ತಮ್ಮ ಅಮೂಲ್ಯ ಸಲಹೆ ಇತ್ತರು

ಅಷ್ಟರಲ್ಲಿ ನನ್ನಮ್ಮ ಕೊಟ್ಟಿಗೆಯಿಂದ ಒಳಗೆ ಅಡುಗೆಮನೆ ಕಡೆ ಹೋಗುತ್ತಿದ್ದರು...

ಅದೇ ಪಕ್ಕದ ಮನೆಯ ಮಹಾಶಯ ಅಮ್ಮನ ಬಳಿ....

"ಸಾವಿತ್ರಿ... ನಿನ್ನ ಮಗ ಮುಂದೆ ಏನಾಗ ಬೇಕು ಅಂತ ಬಯಸ್ತೀಯ..?"

ಅಂತ ಕೇಳಿದ....

"ಅವನು ಏನು ಬೇಕಾದರೂ ಓದಲಿ...
ಒಳ್ಳೆಯ ಮನುಷ್ಯನಾಗಲಿ...
ರಾಜಕುಮಾರ್ ಮಾಡಿದ ಪಾರ್ಟ್ ಹಾಗೆ..
ಹಣ ಮಾಡದಿದ್ದರೂ ಚಿಂತೆಯಿಲ್ಲ..
ಮರ್ಯಾದೆಯಿಂದ ಬಾಳಲಿ.."

ನನ್ನಮ್ಮ ಓದಿಲ್ಲ...
ಅಕ್ಷರ ಜ್ಞಾನ ಇಲ್ಲ...
ಅವಳು ಹೇಳಿದ ಮಾತು ಇನ್ನೂ ನನ್ನ ಕಿವಿಯಲ್ಲಿದೆ....

ಇದೇ ಬರುವ ೨೪ನೇ ದಿನಾಂಕದಂದು ರಾಜಕುಮಾರ್ ಹುಟ್ಟಿದ ದಿನ..

ಈ ನಮ್ಮ ರಾಜಕುಮಾರ್ ಬಹಳ ನೆನಪಾಗುತ್ತಿದ್ದಾರೆ..

ತಮ್ಮ ನಡತೆಯಿಂದ..
ಮಾಡಿದ ಪಾತ್ರಗಳಿಂದ...
ರಾಮಾಯಣ, ಮಹಭಾರತದ ಪಾತ್ರಗಳ ಹಾಗೆ..
ನಮ್ಮ ಜನತೆಯ ಜನಜೀವನದಲ್ಲಿ ಬೆರೆತು ಹೋಗಿದ್ದಾರೆ...

ರಜನಿಕಾಂತ್ ಹಾಗೆ ಜಿಲ್ಲೆಗಳಲ್ಲಿ ಬಡವರಿಗೆ ಕಲ್ಯಾಣ ಮಂಟಪ ,
ಬಡವರಿಗೆ ಸಹಾಯವಾಗುವಂಥಹ ಕೆಲಸ ಮಾಡದೇ ಇರಬಹುದು...

ತಮ್ಮ ಕೆಲಸದಲ್ಲಿ ತೋರುವ ಶ್ರದ್ಧೆಯಿಂದ..
ಆದರೆ ತಮ್ಮ ವಿನಮ್ರ ನಡತೆಯಿಂದ..
ಮಾಡಿದ ಪಾತ್ರಗಳಿಂದ..
ತಾವು ಹಾಡಿದ ಹಾಡಿನಿಂದ.. ನಮ್ಮ ಮನಸ್ಸಲ್ಲಿ ಆಳವಾಗಿ ಬೇರೂರಿಬಿಟ್ಟಿದ್ದಾರೆ..

ಕನ್ನಡವನ್ನು ಸ್ಪಷ್ಟವಾಗಿ ಹೇಗೆ ಮತಾಡಬೇಕು ಎನ್ನುವದಕ್ಕೆ ಅವರು ಮಾದರಿ..
ಅವರ ಮಾತುಗಳಲ್ಲಿ, ಹಾಡುಗಳಲ್ಲಿ..
ದೋಷಗಳನ್ನು ನಾವು ಹುಡುಕಿದರೂ ಸಿಗುವದಿಲ್ಲ...

ಅವರ ಸಿನೇಮಾಗಳಲ್ಲಿ ಕೆಟ್ಟ ಭಾಷೆಯಲ್ಲಿ ಬಯ್ಯುವ ಸನ್ನಿವೇಷ ಇರುವದಿಲ್ಲವಾಗಿತ್ತು..
ಗುರು, ಹಿರಿಯರಿಗೆ,
ತಂದೆ ತಾಯಿಯರಿಗೆ ಗೌರವ,
ದೇಶ, ಭಾಷೆಗಳ ಸಂಸ್ಕ್ರತಿ ಬಗೆಗೆ.. ಅವುಗಳ ಹಿರಿಮೆ ಇರುತ್ತಿತ್ತು...

ನಾವು ನಮ್ಮ ಕುಟುಂಬದ ಸದಸ್ಯರ ಸಂಗಡ ಧೈರ್ಯವಾಗಿ ಕುಳಿತು ನೋಡುವ ಸಿನೇಮಾ ಮಾಡುತ್ತಿದ್ದರು..
ಮಕ್ಕಳ , ಹಿರಿಯರ ಸಂಗಡ ಸಿನೇಮಾಕ್ಕೆ ಹೋದರೆ ...
ಮುಜುಗರದ ಸನ್ನಿವೇಶ ಖಂಡಿತ ಬರುವದಿಲ್ಲವಾಗಿತ್ತು...

ಅವರು ಇನ್ನಷ್ಟು ನಮ್ಮ ನಾಡಿಗೆ ಮಾಡಬಹುದಿತ್ತು ಅನ್ನುವವರಿಗೆ...

ನನ್ನದೊಂದು ಮಾತು...

ಮಾಡಿದ್ದು, ಸಾಧಿಸಿದ್ದು ಬಹಳ ಇದೆಯಲ್ಲ....

ನಾವೆಲ್ಲ ಹೇಗಿರಬೇಕು ಅನ್ನುವದಕ್ಕೆ ಅವರೊಂದು ಉದಾಹರಣೆಯಾಗಿದ್ದರು.. ಮಾದರಿಯಾಗಿದ್ದರು...

ನಾವೆಲ್ಲ ಅಂಥಹ ಸಿನೇಮಾನಟನನ್ನು ಆದರ್ಶವಾಗಿಟ್ಟುಕೊಂಡು ಬೆಳೆದಿದ್ದೇವೆ...

ನಮ್ಮ ಮಕ್ಕಳಿಗೆ ಯಾರಿದ್ದಾರೆ ಅಂಥಹ ಆದರ್ಶದ ವ್ಯಕ್ತಿ...?

ಅವರ ಜನ್ಮದಿನದ ಸಂದರ್ಭದಲ್ಲಿ ಅವರ ನೆನಪು...
ಅವರ ಸಾಧನೆಗಳ ಇಣುಕು ನೋಟ ನನ್ನ ದ್ರಷ್ಟಿಯಲ್ಲಿ...

ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ....




(ಸಿರ್ಸಿಗೆ ಹೋಗುತ್ತಿರುವೆ... ಹತ್ತು ದಿವಸ...

ನನ್ನ ಮಿತ್ರರ ಬ್ಲಾಗ್ ಗಳಿಗೆ ಹೋಗಿ ಪ್ರತಿಕ್ರಿಯೆ ಕೊಡಲಿಕ್ಕೆ ಆಗದಿರಬಹುದು...

ಅಲ್ಲಿಂದ ಬಂದ ಮೇಲೆ ನಿಮ್ಮೆಲ್ಲ ಪ್ರತಿಕ್ರಿಯೆಗಳಿಗೆ ಉತ್ತರ ಕೊಡುವೆ...

ಬಂದಮೇಲೆ ....

ಹೊಸದೊಂದು ಲೇಖನ ನನ್ನ ಬ್ಲಾಗಿನಲ್ಲಿ...

ಸಹಕರಿಸಿ...

ಪ್ರೀತಿಯಿಂದ

ಇಟ್ಟಿಗೆ ಸಿಮೆಂಟು)

Sunday, April 19, 2009

ಹೀಗೂ... ಆಗಿರಬಹುದಲ್ಲ...! (ಭಾಗ ೩)


ಊರಿಗೆ ಬಂದಿದ್ದೆ... ಮಲೆನಾಡಾದದರೂ ಸೆಖೆ ಇತ್ತು...
ಆಗಾಗ ಬೀಸುವ ಗಾಳಿಯಿಂದಾಗಿ ಸೆಖೆಯೂ ಸುಖವಾಗಿತ್ತು...

ನಾಗು ನಮ್ಮನೆಗೆ ಫೋನ್ ಮಾಡಿದ್ದ....
"ಪ್ರಕಾಶು ಕೆಲಸದ ಫಲಿತಾಂಶ "ಹಣ್ಣು"
ವಿಳಾಸ ಸಿಕ್ಕಿದೆ... ಸಿದ್ದಾಪುರದ ಹತ್ತಿರ "ಹಾರ್ಸಿಕಟ್ಟಾ..." ಹಳ್ಳಿ...
ನಾಳೆ ನಮ್ಮನೆಗೆ ಬಾ..
ಆಶಾಳನ್ನು ಕರೆದು ಕೊಂಡು ಬರುವ ವಿಚಾರ ನಿಂಗೆ ಬಿಟ್ಟಿದ್ದೇನೆ....."

ಎಲ್ಲ ಎಣಿಸಿದಂತೆ ಆಗುತ್ತಿದೆ...!

ನಾಳೆ ಏನಾಗ ಬಹುದು...?

ಹಳ್ಳಿಯಲ್ಲೇ ಇದ್ದಾಳಾ...?
ರೈತನೊಂದಿಗೆ ಮದುವೆಯಾಗಿದೆಯಾ...?

ನನ್ನಂತೆ ಭಾವುಕತೆ ಅವಳಿಗಿಲ್ಲದಿರಬಹುದು..

ಹಳ್ಳಿಯಲ್ಲಿ ಅಡಿಗೆ ಮನೆ, ತೋಟದಲ್ಲಿ ..
ಕೊಟ್ಟಿಗೆ ಮನೆಯಲ್ಲಿ ಹಸು, ಎಮ್ಮೆಗಳ ಜೊತೆಯಲ್ಲಿ...
ಅವಳ ಭಾವಗಳು.., ಓದಿದ ಸಾಹಿತ್ಯ..,
ಜೀವನದ ರೀತಿ..
ಬದುಕಿನ ನೋಟವನ್ನು ಬದಲಾಯಿಸಿರ ಬಹುದಲ್ಲ...!

ತೋಟ, ಗಂಡ, ಅಡಿಗೆ ಮನೆ.. ಮಕ್ಕಳು..ಹಸು.., ಎಮ್ಮೆ....
ಅವಳ ಬದುಕಿನ ಮುಖ್ಯ ವಿಷಯ ಆಗಿರ ಬಹುದು....

ಅವಳಿಗೆ ಖಂಡಿತ ನನ್ನ ಗುರುತು ಸಿಗುವದಿಲ್ಲ...
ಅಂಥಹ ಮುಜುಗರ ಸನ್ನಿವೇಶದಲ್ಲಿ ಆಶಾ ಇಲ್ಲದಿರುವದು ಉತ್ತಮ....
ಮತ್ತೊಮ್ಮೆ ತೋರಿಸಿದರಾಯಿತು... ಅಂದುಕೊಂಡೆ....

"ಏನ್ರೀ... ಏನೋ ಬದಲಾಗಿ ಬಿಟ್ಟಿದ್ದೀರಿ ಅನಿಸ್ತಾ ಇದೆ....
ಏನಾದ್ರೂ ಸಮಸ್ಯೆ ಇದೆಯಾ...? ಏನಾಗಿದೆ..?
ಕಳೆದು ಹೋಗುವವರ ಹಾಗೇ ಇದ್ದೀರಿ...?"

"ಏನಿಲ್ಲ... ನಾಳೆ ನಾಗು ಮನೆಗೆ ಹೋಗಿ ಬರ್ತಾ ಇದ್ದೇನೆ...
ಮಧ್ಯಾಹ್ನ ಊಟಕ್ಕೆ ವಾಪಸ್ಸು ಬರ್ತೀನಿ.."

ಆಶಾ ಮುಂದೆ ಮಾತಾಡದಿದ್ದರೂ... ಕಣ್ಣುಗಳು
"ಸಮಾಧಾನ ಆಗಲಿಲ್ಲ ಎಂದು ಹೇಳುತ್ತಿತ್ತು....

ಎಲ್ಲೋ ಒಂದು ರೀತಿಯ ಸಂಕೋಚ..ಅಳುಕು.. ಅಪರಾಧಿ ಮನೋಭಾವ ನನಗಿತ್ತು...
ಮಡದಿಗೆ ಮುಚ್ಚಿಡುತ್ತಿದ್ದೆನಲ್ಲ... ಅನ್ನುವ ಭಾವ....

ಬೆಳಿಗ್ಗೆ ಸೀದಾ ನಾಗು ಮನೆಗೆ ಬಂದೆ...
ನಾಗು ರೆಡಿಯಾಗಿದ್ದ....
"ಚಲೊ.... ನಿನ್ನ ಕಾರಲ್ಲೇ ಹೋಗೋಣ..."

"ಸರಿಯಪ್ಪ... ದಾರಿ ನಿನಗೆ ಗೊತ್ತಲ್ಲ...."

ನಾಗು ದಾರಿ ಹೇಳುತ್ತ ಹೋದ... ನಾನು ಡ್ರೈವ್ ಮಾಡಿದೆ...

ಅರ್ಧ ತಾಸು ದಾರಿ ಸಾಗಿದ ಮೇಲೆ ಒಂದು ಹಳ್ಳಿ ಕಾಣಿಸಿತು...
ಇಲ್ಲೇ ಅಶ್ವತ್ಥ ಮರದ ಪಕ್ಕದ ಮನೆ... ಅಲ್ಲಿ ಕಾರು ನಿಲ್ಲಿಸು...."

ಎದೆಯಲ್ಲಿ ಢವ... ಢವ....!

ಅದೇ ಆತಂಕ...ಮತ್ತದೇ ತಳಮಳ....

ನನಗೆ ವಯಸ್ಸಾಗುತ್ತಿದ್ದರೂ....
ಮನವನ್ನು ಕಾಡುವ ಭಾವಗಳಿಗೆ ವಯಸ್ಸಾಗುವದಿಲ್ಲವಲ್ಲ...!

"ಧೀರ್ಘವಾಗಿ ಶ್ವಾಸೋಚ್ಛ್ವಾಸ ಮಾಡಿಕೊ...
ಅವಳೆದುರು ನರ್ವಸ್ ಮುಖ ಮಾಡ್ಕೋ ಬೇಡ.."

ನಾಗು ನನ್ನ ಮನಸ್ಥಿತಿ ನೋಡಿ ಹೇಳಿದನೇನೊ...

ನನಗೆ ಗಡಿಬಿಡಿ...ಆತಂಕ... !
ಹ್ರದಯದಲ್ಲಿ ಅಲೆಗಳ ಭೋರ್ಗರೆತ....!!


ಮನೆಯ ಎದುರಿಗೆ ಬಂದೆವು...

ಮನೆಯ ಹೆಸರು "ಬೆಳಕು"...!!

ನನ್ನ ಹೆಸರಿನ ಅರ್ಥವಾ...?

"ಪ್ರಕಾಶು... ಕಾಕತಾಳೀಯ ಕಣೊ...
ಏನೇನೋ ಅಂದ್ಕೊ ಬಿಡಬೇಡ.... ಸಹಜವಾಗಿ ಬೆಳಕು: ಅಂತ ಇಟ್ಟಿರಬಹುದು.."
ಸುಮ್ನೆ ಬಾ..."

ನಾಗು ನನ್ನ ಭಾವೋದ್ವೇಗ ಸಮಾಧಾನಿಸಿದ....

ಗೇಟನ್ನು ದಾಟಿ ಅಂಗಳಕ್ಕೆ ಬಂದೆವು....

ಯಾರೂ ಇರಲಿಲ್ಲ....
ಹೊರಗಿನ ಜಗುಲಿಗೆ ಬಂದೆವು...ಕುಳಿತು ಕೊಳ್ಳಲಿಕ್ಕೆ ಖುರ್ಚಿಗಳಿದ್ದವು...

"ನಾಗು ವಿಳಾಸ ಸರಿ ಇದೆಯೇನೋ... ಖಾತ್ರಿ ಇದೇ ಮನೆಯೇನೋ..?"
ನನ್ನ ಅನುಮಾನ ಹೊರ ಹಾಕಿದೆ....

"ನೂರಕ್ಕೆ ನೂರು... ಸರಿ ಇದೆ.. ಅನುಮಾನ ಬೇಡ... ನೀನು ಸುಮ್ನೆ ಇರು.."

ನಾಗು ಒಳಗೆ ಯಾರೆಂದು ನೋಡಿದ...

"ಹಲೋ ಯಾರಿದ್ದೀರಿ...?"

ಎಂಟು ವರ್ಷದ ಹುಡುಗ ಬಂದ....

ಕಪ್ಪನೆಯ ದಟ್ಟವಾದ ಕಣ್ಣುಗಳು...ನನ್ನನ್ನು ಕಾಡಿದ ಕಪ್ಪನೆಯ ಕಣ್ಣುಗಳು...!

ಇವನು ವಿಜಯಾ ಮಗ...!

"ಯಾರು ಬೇಕಿತ್ತು...?"
" ಪುಟ್ಟಾ.. ಮನೆಯಲ್ಲಿ ಯಾರೂ ಇಲ್ಲವೇನೋ... ನಾವು ಬೆಂಗಳೂರಿನಿಂದ ಬಂದಿದ್ದೇವೆ.."

" ಅಮ್ಮ ತೋಟಕ್ಕೆ ಹೋಗಿದ್ದಾಳೆ... ಅಣ್ಣ ಇಲ್ಲೇ ಎಲ್ಲೊ ಇದ್ದಾನೆ... ಕರೀಲಾ...?"

ನಾನು ಅವನನ್ನು ಹತ್ತಿರ ಕರೆದೆ...

" ಇಲ್ಲಿ ಬಾ... ನಿನ್ನ ಹೆಸರೆನು...? ಯಾವಕ್ಲಾಸಿನಲ್ಲಿ ಓದ್ತಾ ಇದ್ದೀಯಾ...?"

"ನನ್ನ ಹೆಸರು ಸೂರ್ಯ.. ... ಏಳನೇ ಕ್ಲಾಸು...
ನೀವು ಇರಿ...ಅಣ್ಣನನ್ನು ಕರೆದು ಬರ್ತೀನಿ..."

ಹುಡುಗ ಓಡಿ ಹೋದ....

ನಾನು ನಾಗುವಿನ ಮುಖ ನೋಡಿದೆ...

"ಇದೂ ಕಾಕತಾಳೀಯ ಇರಬಹುದೊ... ಪುಣ್ಯಾತ್ಮಾ...!
ನೀನೊಬ್ಬ ದೇವದಾಸ..,!

ಅವಳು ಭಗ್ನ ಪ್ರೇಮಿ... ಇಬ್ಬರ ಅಮರ ಪ್ರೇಮ....!
ಸಾಕು... ಸುಮ್ನಿರೋ...

ಕೆಲಸಕ್ಕೆ ಬಾರದ ವಿಚಾರ ಮಾಡ ಬೇಡ..."

ಕೆಲವು ಕಡೆ ಅಪ್ಪನಿಗೆ ಅಣ್ಣ ಅಂತಾರೆ....

ಅಣ್ಣ ಅಂದರೆ .. ಅಪ್ಪನಾ...? ಅಣ್ಣನಾ...?

ಅಷ್ಟರಲ್ಲಿ ಆ ಹುಡುಗ....ಸುಮಾರು ಹದಿನಾರರ ವಯಸ್ಸಿನ ಹುಡುಗನನ್ನು ಕರೆದುಕೊಂಡು ಬಂದ....

""ನೀವು ಯಾರೆಂದು ಗೊತ್ತಾಗಲಿಲ್ಲ...."

" ನಾವು ಬೆಂಗಳೂರಿನಲ್ಲಿರ್ತೇವೆ...
ಇವನು ಪ್ರಕಾಶ ಅಂತ..

ನಿಮ್ಮಮ್ಮನ ಕ್ಲಾಸ್ ಮೇಟ್...ಇಲ್ಲೇ ಪಕ್ಕದ ಊರಿಗೆ ಬಂದಿದ್ದೆವು...
ನೋಡಿ.. ಮಾತಾಡಿಕೊಂಡು ಹೋಗೋಣ ಅಂತ.. ಬಂದಿದ್ದೇವೆ.."

"ಹೌದಾ.... ಸರ್... !!
ನನ್ನ ಹೆಸರೂ... ಪ್ರಕಾಶ ..ಅಂತ ...!

ನಿಮಗೆ ತಂಪಾಗಿ ಮಜ್ಜಿಗೆ ತರ್ತೇನೆ...
ಹೊರಗಡೆ ಉರಿ ಬಿಸಿಲು... ಸ್ವಲ್ಪ ಇರಿ.."


ಆತ ಒಳಗೆ ಮಜ್ಜಿಗೆ ತರಲು ಹೋದ .. ಹಿಂದೆ.. ಪುಟ್ಟ ಹುಡುಗನೂ ಹೋದ....

ನಾಗು ಬೇರೆ ಮುಖ ಮಾಡಿದ....

ನನ್ನ ಮುಖ ಬೇಕೆಂದೇ ನೋಡುತ್ತಿಲ್ಲವಾಗಿತ್ತು...

ನನಗೆ ಹೇಳಲಾಗದ ಭಾವ...
ಮನಸ್ಸೆಲ್ಲ ಭಾರ..
ಎದೆಯಲ್ಲಿ ಒಂಥರಾ ಕಂಪನ...


ಅಲ್ಲೇ ಇರುವ ಶೋಕೇಸಿನಲ್ಲಿ ಹಲವಾರು ಫೋಟೊಗಳಿದ್ದವು...
ನಾನು ಹತ್ತಿರ ಹೋಗಿ ಗಮನಿಸ ತೊಡಗಿದೆ....


ವಿಜಾಯಾಳ ಮದುವೆ ಜೋಡಿ ಫೋಟೊ....!

ಕಣ್ಣರಳಿಸಿ ನಗುತ್ತಿದ್ದಳು....

ನಾನು ಇಷ್ಟ ಪಡುವ ನಗು... !
ನನ್ನೆದೆಯಲ್ಲಿ ಉಳಿದುಬಿಟ್ಟ ನಗು....!


ಪಕ್ಕದಲ್ಲಿ ಬೆಳ್ಳನೆಯ ಯುವಕ... ಚಂದವಾಗಿದ್ದ....
ಇಬ್ಬರ ಕುತ್ತಿಗೆಯಲ್ಲೂ ಮಾಲೆಯಿತ್ತು...
ಹೊಸ ಕನಸು.... ಸಂತೋಷ.. ಸಂಭ್ರಮ ಕಾಣುತ್ತಿತ್ತು....

" ಪ್ರಕಾಶು... ಇಲ್ಲಿ ನೋಡು...!!!"

ನಾಗು ಸಣ್ಣದಾಗಿ ಚೀರಿದ !! .....ಆತಂಕದಿಂದ....!

"ಅಲ್ಲಿ ಮಧ್ಯ ವಯಸ್ಸಿನ ಒಬ್ಬರ ಫೋಟೊ...
ಗಂಡಸಿನದು...!


ಹಣೆಗೆ ಕುಂಕುಮ....! ಫೋಟೊಕ್ಕೆ ಗಂಧದ ಮಾಲೆ...!

ಅಯ್ಯೋ...! ಇದು... ವಿಜಯಾ ಗಂಡನ ಫೋಟೊವಾ...?

ಮತ್ತೊಮ್ಮೆ... ಮದುವೆ ಫೋಟೊ ನೋಡಿದೆ...!

ಹ್ಹಾಂ...!! ಅದೆ... ಫೋಟೊ....!

ಅದೇ ಮುಖದ ಹೋಲಿಕೆ....!


ನನ್ನ ವಿಜಯಾ ವಿಧವೆಯಾ....?

ನನ್ನ ಬದುಕೆಲ್ಲ ಕನಸಾಗಿ ..,ನೆನಪಾಗಿ ಕಾಡಿದ ಹುಡುಗಿ ವಿಧವೆಯಾ...?

ಅಯ್ಯೋ... ದೇವರೆ ! ...ಅವಳ ಮುಖ ಹೇಗೆ ನೋಡಲಿ...?

ಕಣ್ಣಿಗೆ ಕತ್ತಲೆ ಕವಿದಂತಾಯಿತು....

ಅಘಾತ ..! ತಡೆಯಲಾಗದ ಷಾಕ್ ....!

ಸಾವರಿಸಿ ಕೊಂಡೆ...

"ನಾಗು... ಏಳು... ಹೊರಡೋಣ.... ನನಗೆ ಇಲ್ಲಿ ಇರಲಾಗುವದಿಲ್ಲ....

ಪ್ಲೀಸ್ ಹೊರಡು...."

ಅವನಿಗೆ ಮಾತಾಡಲು ಕೊಡದಂತೆ ಅವನ ಕೈಹಿಡಿದು...
ಹೊರಗಡೆ ಎಳೆದು ಕೊಂಡು ಬಂದೆ....

ನಾಗು ಕಾರ ಡ್ರೈವ್ ಸ್ಟಾರ್ಟ್ ಮಾಡಿದ... ನಾನು ಪಕ್ಕದಲ್ಲಿ...

ನನಗೆ ದುಃಖ ತಡೆಯಲಾಗಲಿಲ್ಲ....
ಕಣ್ಣಲ್ಲಿ ದಳದಳನೆ ನೀರಿಳಿಯತೊಡಗಿತು...
ಬಿಕ್ಕಿ... ಬಿಕ್ಕಿ... ಅತ್ತುಬಿಟ್ಟೆ ..ವೇದನೆ... ತಡೆಯಲಾಗದೆ.....
ಅಳುತ್ತಲೇ ಇದ್ದೆ.... ಸುಮಾರು ದೂರ ಬಂದ ಮೇಲೆ....

ನಾಗು ಹೇಳಿದ...

" ನೋಡೊ.... ಪ್ರಕಾಶು... ಅದು ಅವಳ ಗಂಡನ ಅಣ್ಣನ ಫೋಟೊ ಇದ್ದಿರ ಬಹುದು...

ಅಣ್ಣ ತಮ್ಮಂದಿರ ಮುಖದಲ್ಲಿ ಹೋಲಿಕೆ ಇರುತ್ತದಲ್ಲವಾ...?

ನೀನು ಸುಮ್ಮನೆ ಆತುರ ಪಟ್ಟೆ...ನಾವು ಖಚಿತ ಪಡಿಸಿ ಕೊಂಡು ಬರಬೇಕಿತ್ತು"

ಹೌದಲ್ಲ... ಹೀಗೂ ಇರಬಹುದಲ್ಲಾ...?

ಆದರೆ ...

ವಿಧವೆಯೂ ಆಗಿರ ಬಹುದಲ್ಲ.....!

ಇಪ್ಪತ್ತು ವರ್ಷದ ಹಿಂದಿನ ಆ ಮುಖವೇ ನನಗೆ ಸಾಕು...

ಆ ನೆನಪುಗಳು...
ಮಧುರ.. ಭಾವಗಳು ...
ನನ್ನ ...

ಉಳಿದ ಬದುಕಿಗೆ ಸಾಕು....!
ಅವಳ ಕುಂಕುಮವಿರದ ಹಣೆ...

ಅನಾಥ... ದುಃಖ ತುಂಬಿದ ...
ಕಣ್ಣಿನ ಮುಖ ನನಗೆ ಬೇಡ....
ಆ.. ಕಣ್ಣುಗಳನ್ನು ನಾನು ನೋಡಲಾರೆ....!


ಅಷ್ಟರಲ್ಲಿ ಮೊಬೈಲು ರಿಂಗ್ ಆಯಿತು....

ಮಡದಿಯ ಫೋನ್....!

ನನ್ನ ವರ್ತಮಾನದ...ವಾಸ್ತವ ಬದುಕಿನ.. ಕರೆ...!

"ರ್ರೀ... ಊಟಕ್ಕೆ ಬರ್ತಾ ಇದ್ದೀರಾ...?
ನಿಮಗೆ ಇಷ್ಟ ಅಂತ..

ಮಾವಿನ ಕಾಯಿ ಭೂತಗೊಜ್ಜು .. ಮಾಡಿದ್ದೇನೆ...
ಬರ್ತೀರಿ ತಾನೆ..?"

"ನೀನಿದ್ದಲ್ಲೇ... ಬರ್ತಾ ಇದ್ದೀನಿ ಕಣೆ....
ಗೊಜ್ಜು ಸ್ವಲ್ಪ ಜಾಸ್ತಿ ಮಾಡಲಿಕ್ಕೆ ಹೇಳು...

ಸ್ವಲ್ಪ ಖಾರ ಜಾಸ್ತಿ ಹಾಕಲು ಹೇಳು... ನಾಗು ಸಹ ಬರ್ತಾನೆ...
ಇನ್ನು ಐದು ನಿಮಿಷದಲ್ಲಿ ಮನೆಗೆ ಬರ್ತೇವೆ...."

"ನಿಮಗೆ ಏನು ಇಷ್ಟ ಅಂತ ನನಗೆ ಗೊತ್ತು ಕಣ್ರೀ....
ಜಲ್ದಿ ಬನ್ನಿ... ಕಾಯ್ತಾ ಇರ್ತೀನಿ..."

ನಾಗು ಮುಂದಿನ ರಸ್ತೆಯ ತಿರುವಿನಲ್ಲಿ ಕಾರು ತಿರುಗಿಸಿದ...

ನಮ್ಮೂರ ಕಡೆ...

ನಮ್ಮನೆ ಕಡೆಗೆ.......

ಮನೆಯ ಬಾಗಿಲಲ್ಲಿ ನನ್ನಾಕೆ ...
ನನಗಾಗಿ ಕಾಯುತ್ತ... ನಿಂತಿದ್ದಳು......
.......






ಓದುಗ ಬಂಧುಗಳೇ...

) ನಿನ್ನನ್ನೂ... ಕಣ್ ತುಂಬಾ ... ನೋಡುವಾಸೆ.... ಎಲ್ಲಿರುವೆ...?
)ಆಕಾಶ... ದೀಪವೂ... ನೀನು...
) ಹೀಗೂ.... ಆಗಿರಬಹುದಲ್ಲಾ..!

ಮೂರನ್ನು ಓದಿದ್ದಿರಾ...
ನಿಮ್ಮೆಲ್ಲರ ಎಣಿಕೆಯ ಹಾಗೆ... ಇದು ಕಥೆ....!
ಅಪ್ಪಟ... ಕಲ್ಪನೆ....!

ನನಗೆ ವಿಜಯಾ ಮೇಲಿನ ಭಾವನೆಯೆ...( ಇದು ಮಾತ್ರ ಸತ್ಯ)
ಪ್ರೇಮದ ಎಳೆಯನ್ನು ಮಾತ್ರ ಇಟ್ಟುಕೊಂಡು ಬರೆದಿದ್ದೇನೆ....

ಇದರಲ್ಲಿ, ನಾನು, ನಾಗು , ವಿಜಯ...
ಇಲ್ಲದೆ ಬೇರೆಯ ಹೆಸರಿದ್ದರೆ ಇಷ್ಟವಾಗುತ್ತಿತ್ತಾ..?

ಬ್ಲಾಗಿನಲ್ಲಿ ನನ್ನ ಮೊದಲ ಕಥೆ ಹೇಗನ್ನಿಸಿತು...?

ನಿಮ್ಮ ಅಭಿಪ್ರಾಯಕ್ಕೆ ಕಾಯುತ್ತಿರುವೆ...

Friday, April 17, 2009

ಆಕಾಶ... ದೀಪವೂ... ನೀನು.....(ಭಾಗ ೨)




ನನಗೆ ಏಸಿಯಲ್ಲೂ... ಮೈ ಬೆವರಿತ್ತು....


ಪೋಲಿಸನಿಗೆ ಫೈನ್ ಕಟ್ಟಿ ಸಾಗ ಹಾಕಿದೆ...

ತಕ್ಷಣ ನಾಗುವಿಗೆ ಫೋನಾಯಿಸಿದೆ....

"ನಾಗು .. ಫೋನ್ ಬಂದಿತ್ತು... ಅವಳು ವಿಜಯನಾ...?"

"... "ರಾಜಿ" ವಿಷಯದಲ್ಲಿ ನೀನೂ ನನಗೆ ಸತಾಯಿಸಿದ್ದೀಯಾ...

ನನ್ನ ಮೇಲೆ ನಂಬಿಕೆ ಇಡು....
ಸತ್ಯನಾರಾಯಾಣ ಪೂಜೆಗೆ ಬರ್ತಿಯಲ್ಲ...

ಎಲ್ಲ.. ಗೊತ್ತಾಗ್ತದೆ... ಬಾ... ಅಲ್ಲಿಯವರೆಗೆ ಏನೂ ಹೇಳಲಾಗುವದಿಲ್ಲ..."

ತಥ್... ಇವನಾ...!

ಹೀಗೆ ಸತಾಯಿಸುವದು ನಾಗುವಿಗೆ ಮೊದಲಿನಿಂದಾ ಅಭ್ಯಾಸ...
ನನಗೆ ಪ್ರಾಣ ಸಂಕಟ...

ಈ ಸಾರಿ ಈ ವಿಷಯ ನನ್ನಾಕೆಗೆ ಹೇಳಲಿಲ್ಲ...

ನನ್ನೊಳಗೇ ಕಾತುರ.., ತಳಮಳ...

ಎಷ್ಟು ...ಬೇಗ.... ನಾಳೆ ...ಇಂದಾಗುತ್ತದೆ..!

ಇಂದು ....ಈಗ ...ಆಗುತ್ತದೆ...!

ಈಗ .. ಈ.. ಕ್ಷಣದಲ್ಲಿ ನಾನಿರ... ಬೇಕು....!


ಬೆಳಿಗ್ಗೆ ಹತ್ತು ಗಂಟೆಗೆ ನಾಗುವಿನ ಮನೆಯಲ್ಲಿ ನಾವಿದ್ದೆವು...


ಬಡ್ಡಿಮಗ... ನಾಗು ಇಂಥಹ ಸಮಯದಲ್ಲಿ....
ಎಂದಿಗಿಂತ ಹಸನ್ಮುಖಿ... ತಾಳ್ಮೆಯ ಪ್ರತೀಕ...

ಸಾಮಾನ್ಯವಾಗಿ ಅರ್ಥವಾಗುವ "ನಮೂನೆಯೇ" ಅಲ್ಲ...

ಯಾರ್ಯಾರೋ ಬಂದಿದ್ದರು.. ಎಲ್ಲಿ ನೋಡಿದರೂ ನಗು..
ನಾಗುವಿನ ಮನೆಗೆ ನಗಲಿಕ್ಕೇ ಬರ್ತಾರೆ...

ನನಗೆ ಆ ನಗು ಬೇಕಾಗಿರಲಿಲ್ಲ....

ನನ್ನ ನಗುವನ್ನು ಕಾಯುತ್ತಿದ್ದೆ....

ಕತ್ತು ತಿರುಗಿಸಿ ಗಮನವೆಲ್ಲ ಬಾಗಿಲ ಕಡೆ ನೋಡುತ್ತಿದ್ದೆ...

ಮಧ್ಯ ವಯಸ್ಸಿನ ದಂಪತಿಗಳು ಬಂದರು....

ಬಂದವರೇ ನನ್ನ ಬಳಿ..ಬಂದು ಪರಿಚಯದ ನಕ್ಕರು...

ಅವರ ಮಡದಿ ನೋಡಿದೆ....
ಹಸಿರು ರೇಷ್ಮೆ ಸೀರೆ.. ದೊಡ್ಡದಾಗಿ ಹಣೆಗೆ ಕುಂಕುಮ.. ಲಕ್ಷಣವಾಗಿದ್ದರು...

ಇವಳು ವಿಜಯಾನಾ...?

" ಸರ್...ನೀವು ಪ್ರಕಾಶ ಹೆಗಡೆಯವರಲ್ಲವೇ...?"

"ನಿಜ...ನನಗೆ ನಿಮ್ಮನ್ನು ನೋಡಿದ ನೆನಪಿಲ್ಲವಲ್ಲ..."

" ನಾವು ಈ ಮೊದಲು ಭೇಟಿಯೇ ಆಗಿಲ್ಲ...
ನಿಮ್ಮ ಸ್ಥೂಲ ಪರಿಚಯ ನಾಗು ಹೇಳಿದ್ದರು ಫೋನಿನಲ್ಲಿ..

ಹಾಗಾಗಿ ಗುರುತು ಹಿಡಿದೆ.."

ಓಹ್... ಇವಳು ವಿಜಯ...!!

ಮತ್ತೊಮ್ಮೆ ನೋಡಿದೆ...

ಕಣ್ಣಲ್ಲಿ ಹೊಳಪಿತ್ತು...

ನಗುವಿನಲ್ಲಿ ಮಿಂಚಿತ್ತು...

ಹದಿಹರೆಯದಲ್ಲಿ...??

ನನ್ನ ವಿಜಯಾ ಥರ...?

ಉಹೂಂ... ಇವಳು ವಿಜಯ ಅಲ್ಲ...!
ಇವಳು ವಿಜಯ ಆಗಿರಲು ಸಾಧ್ಯವೇ ಇಲ್ಲ....!

ಇವರು ನನ್ನ ಗುರುತು ಹೇಗೆ ಹಿಡಿದರು ...ಆಶ್ಚರ್ಯವಾಯಿತು...

" ನಿಮ್ಮ ನಾಗು ಬಹಳ ಪ್ರತಿಭಾವಂತ ಕಣ್ರೀ...
ಆರಡಿ ಅಗಲ...
ಆರು ಅಡಿ ಉದ್ದವಿದ್ದವರೊಬ್ಬರು ...
ಮೀಸೆ ಇಲ್ಲದೆ ನಗುತ್ತಿರುತ್ತಾರೆ..


ತಲೆಯ ಹಿಂಬದಿಗೆ ಇಥೋಪಿಯಾದ ನಕಾಶೆ ಇರುವವ ನಮ್ಮ ಪ್ರಕಾಶ ಅಂತ..
ನಾಗು ತುಂಬಾ ತಮಾಶೆ ವ್ಯಕ್ತಿ ಕಣ್ರೀ...
ನಿಮ್ಮನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆ...!!
ನನಗೆ ನಿಮ್ಮ ಪರಿಚಯ ಬಹಳ ಸುಲಭದಲ್ಲಿ ಆಯಿತು.. ನೋಡ್ರೀ..."

ನಾಗುವಿನ ತಲೆಗೆ ಏನಾದರೂ ತೆಗೆದು ಕೊಂಡು ಚಚ್ಚಬೇಕು ಅನಿಸಿತು...

ಹೀಗಾ ಪರಿಚಯ ಮಾಡಿ ಕೊಡುವದು...? ಅಹಾ....!

ನಾನು ಬಾರದ ನಗು ನಕ್ಕೆ...

"ನೋಡಿ ನನಗೊಂದು ಮನೆ ಕಟ್ಟ ಬೇಕು... ನೀವು ಚಂದವಾಗಿ ಮನೆ ಕಟ್ಟುತ್ತೀರಂತೆ..
ಪ್ರಾಮಾಣಿಕರಂತೆ..ನಮ್ಮನೆ ಬನ್ನಿ ನಮ್ಮ ಮನೆ ಕಟ್ಟುವ ಜವಾಬ್ದಾರಿ ನಿಮ್ಮದು..
ಹಣ ಕೊಟ್ಟರೂ ಪ್ರಾಮಾಣಿಕರು ಸಿಗುವದಿಲ್ಲವಲ್ಲ ಈ ಪ್ರಪಂಚದಲ್ಲಿ.."

ಇಲ್ಲಿಯವರೆಗೆ ನೆನಪಾಗಿ ಕಾಡಿದ್ದ... ಕನಸಿಗಿಂತ......

ಎದುರಿಗಿದ್ದ ಬದುಕಿನ ಅವಶ್ಯಕತೆ ಮಹತ್ವ ಎನಿಸಿತು....


ವಾಸ್ತವ ಕೂಡ ಅನಿಸಿತು...
ಕೆಲಸ ಸಿಗುತ್ತಿದೆಯಲ್ಲ..!
ಖುಷಿಯಾಯಿತು...

" ಖಂಡಿತ ಸರ್.. ಬರ್ತೀನಿ... ನಾಗುವಿನ ಪರಿಚಯ ಎಂದರೆ ಖಂಡಿತ ಮನೆ ಕಟ್ಟಿಕೊಡುತ್ತೇನೆ..

ಒಂದು ಒಳ್ಳೆಯ ಪ್ಲಾನ್ ಹಾಕಿಕೊಡುತ್ತೇನೆ"

ಕೆಲಸ ಸಿಕ್ಕಿದ ಸಂಭ್ರಮ ಅನುಭವಿಸಲು ಸಾಧ್ಯವಾಗಲಿಲ್ಲ........

ಮಾತಾಡುತ್ತಿರುವಂತೆ ಊಟದ ಸಮಯ ಆಯಿತು..
ಕತ್ತು ತಿರುಗಿಸಿ.., ಕತ್ತು ತಿರುಗಿಸಿ.. ಸುಸ್ತಾಯಿತು...
ವಿಜಯಳ ಸುಳಿವಿಲ್ಲ....

ಆ ದಿನ ವಿಜಯ ಬರಲೇ ಇಲ್ಲ....

ಮನೆಯ ತುಂಬಾ ನೆಂಟರಿದ್ದರಿಂದ ನಾಗೂ ಕೂಡ ಮಾತಿಗೆ ಸಿಗಲಿಲ್ಲ....

ನಿರಾಸೆಯಾದರೂ .. ಮನೆಗೆ ಬಂದೆ...

ಇಂಟರ್ ನೆಟ್ ಓಪನ್ ಮಾಡಿ ಈಮೇಲ್ ನೋಡಿದೆ...

ನಾಗುವಿನ ಮೆಸೇಜ್ ಇತ್ತು...

"ಪ್ರಕಾಶು...
ನನ್ನ ಮೇಲೆ ಸಿಟ್ಟು ಬಂದರೂ ಕುತ್ತಿಗೆ ಹಿಚುಕ ಬೇಡ...

ನಾನು ಮಾಡಿದ ತಮಾಷೆ ಬಗೆಗೆ ಕ್ಷಮೆ ಇರಲಿ...

ಈ ರಜೆಯಲ್ಲಿ ನಿನ್ನ ವಿಜಯಾ ಹುಡುಕಿ..
ನಿನಗೆ, ಆಶಾಳಿಗೆ ತೋರಿಸುತ್ತೇನೆ...
ಇದು ನನ್ನ ಪ್ರತಿಜ್ಞೆ...
ಆಣೆ ಮಾಡಿ ಹೇಳುತ್ತಿದ್ದೇನೆ ಅವಳನ್ನು ಹುಡುಕಲು ಇದೇ ವಾರ ಹೋಗುತ್ತಿದ್ದೇನೆ ..
ಒಂದುವಾರ ಸಮಯ ಕೊಡು"


ಇನ್ನೊಂದು ಹೆಸರಿಲ್ಲದ ಈಮೇಲ್ ಇತ್ತು....!!


" ಪ್ರಕಾಶ....

ಸತ್ಯನಾರಾಯಣ ಪೂಜೆಗೆ ಬರಲಿಲ್ಲ...
ಹಲವಾರು ಕಾರಣಗಳು...ಇವೆ...

ಭೇಟಿಯಾಗಲು ಸಮಯ ಕೂಡಿ ಬರಲಿಲ್ಲ...

ನಮ್ಮವರು ನಮ್ಮನು ಕರೆದು ಕೊಂಡು ಅಮೇರಿಕಾ ಹೋಗುತ್ತಿದ್ದಾರೆ..
ಅವರಿಗೆ ಅಲ್ಲಿ ಕೆಲಸ ಸಿಕ್ಕಿದೆ..
ವೀಸಾ ಸಲುವಾಗಿ ಓಡಾಟ.. ಇತ್ಯಾದಿ...

ಬರಲಾಗಲಿಲ್ಲ... ಆಸೆ ಇತ್ತು...

ಇನ್ನು ಮುಂದೆ ನಿನ್ನನ್ನು ಭೇಟಿಯಾಗುತ್ತಿರುತ್ತೇನೆ ... ನಿನ್ನ ಬ್ಲಾಗಿನಲ್ಲಿ..
ನಿನಗೆ ಕೊಡುವ ಪ್ರತಿಕ್ರಿಯೆಯಲ್ಲಿ...
ಬೇರೆ ಬೇರೆ ಹೆಸರಲ್ಲಿ...

ವಿಜಯಾ ಮೇಲಿನ ನಿನ್ನ ಆಸಕ್ತಿ ಕಂಡು ಮೂಕನಾಗಿದ್ದೇನೆ...
ಕೆಟ್ಟ ಭಾವನೆ ಇಲ್ಲವಾದರೂ...
ಕೆಲವೊಂದು ಭಾವ ನಮ್ಮಲ್ಲೇ ಬಚ್ಚಿಟ್ಟು ಕೊಂಡಿರ ಬೇಕು... ಜತನವಾಗಿ...

ಏಕಾಂತದಲ್ಲಿ ..ಆಗಾಗ ತೆಗೆದು ನೋಡಿಕೊಳ್ಳುತ್ತಿರಬೇಕು...

ನೋವಾದರೂ ಖುಷಿ ಇರುತ್ತದೆ...
ಹ್ರದಯ ರೋಧಿಸಿದರೂ... ಹಿತವಾದ ಸುಖವಿರುತ್ತದೆ...

ಹಳೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟ... ನೆನಪುಗಳು ಅವು...
ನಮಗೆ ಹ್ರದಯದ ವಿಷಯ ..
ಬೇರೆಯವರಿಗೆ ಹಾಸ್ಯವಾಗ ಬಾರದು...

ಪ್ರಕಾಶು...

ನಿನಗೆ ನಿನ್ನ ನಿನ್ನ ಜೀವನದಲ್ಲಿ ಗೆಳತಿಯಾಗಿ ವಿಜಯಾ ಇದ್ದಳು..
ಇದು ನನಗೇ ಗೊತ್ತೇ ಅಗಲಿಲ್ಲ ನೋಡು..

ಮೂರು ವರ್ಷ ನಿನ್ನಸಂಗಡ ಇದ್ದರೂ ತಿಳಿದಿರಲಿಲ್ಲ...

ದಯವಿಟ್ಟು ನನ್ನ ಭೇಟಿಗೆ.. ಪ್ರಯತ್ನಿಸ ಬೇಡ...
ನಿನ್ನ ವಿಜಯ ನಾನಲ್ಲ...

ನನಗೂ ಆ ದಿನಗಳಲ್ಲಿ ಗೆಳೆಯನೊಬ್ಬನಿದ್ದ..
ನಿನ್ನ ಹಾಗೆ.. ನಿನಗೆ ವಿಜಯ ಇದ್ದ ಹಾಗೆ...

ಯಾರೆಂದು ಕೇಳ ಬೇಡ.. ಅರ್ಥಮಾಡಿಕೊ...

ಹ್ರದಯವಿರುವವರಿಗೆ ಅರ್ಥ ಆಗುತ್ತದೆ...

ನಮ್ಮ ದಿನಗಳ... ಕನಸಿನ ಹಾಗೆ ನಾವಿರ ಬೇಕು...
ನಾನು ,ನಾಗು, ನೀನು.., ನಿನ್ನ ವಿಜಯಾ..
ಎಲ್ಲರೂ ಸೇರಿ ಆಕಾಶದಲ್ಲಿ ಹಾರಾಡ ಬೇಕು...
ಸಂತೋಷದಿಂದ ನಗಬೇಕು...

ನಗುತ್ತಲೇ ಇರ ಬೇಕು...

ನಿನ್ನ ಮಗನಿಗೆ ಆಶೀರ್ವಾದಗಳು.....
ನಿನ್ನ ಬಾಳ ಸಂಗಾತಿಗೆ ಶುಭ ಹಾರೈಕೆಗಳು.. ...

ಇಂತಿ...

ತುಂಬು ಹ್ರದಯದ ಪ್ರೀತಿಯೊಂದಿಗೆ..."
................................
...............................



ಅವಳ ಗೆಳೆಯ ಯಾರು...?

ನನಗೆ ತಲೆಯಲ್ಲ ಧಿಮ್ ಅಂದಿತು...
ಹೀಗೂ ಇರುತ್ತದಾ...?
ಹೀಗೂ ಇದ್ದಿತ್ತಾ...?


ಪ್ರಶ್ನೆಗಳಿಗೆ ಉತ್ತರವಿತ್ತು..!

ಉತ್ತರಗಳಿಗೆ ಪ್ರಶ್ನೆಯೂ ಇತ್ತು....!

ಅರ್ಥವಾದರೂ... ಸಮಾಧಾನವಾಗದ ಸ್ಥಿತಿ ಇತ್ತು....

ಮನಸ್ಸೆಲ್ಲ ಗೋಜಲು... ಗೋಜಲು... ಮನಸ್ಸು ಭಾರವಾಯಿತು....

ಹ್ರದಯ ತುಂಬಿ ಬಂದಿತು....

ಏನೂ.. ಹೇಳಲಾಗದ ಶೂನ್ಯ ಭಾವ ಆವರಿಸಿತು....

ನಾಗುವಿನ ಈಮೇಲ್... ಇನ್ನೊಮ್ಮೆ ಓದಿದೆ........



(ದಯವಿಟ್ಟು... ಹಿಂದಿನ ಲೇಖನ ಓದಿ.....)




Tuesday, April 14, 2009

ನಿನ್ನನ್ನೂ... ಕಣ್ ತುಂಬಾ... ನೋಡುವಾಸೆ.. ಎಲ್ಲಿರುವೇ...? (ಭಾಗ ೧)

ನಾಗು ಯಾವಾಗಲೂ ಹೀಗೆಯೇ..
ಪೂರ್ತಿಯಾಗಿ ವಿಷಯ ಹೇಳುವದೇ ಇಲ್ಲ...

ಎಲ್ಲಾ ಸಸ್ಪೆನ್ಸ್... ಇಟ್ಟಿರುತ್ತಾನೆ....

"ಪ್ರಕಾಶು... ನಿನಗೊಂದು " ಸರಪ್ರೈಜ್ ".. ಇದೆ...
ಬಹುದಿನದ ಆಸೆ ಪೂರ್ತಿಯಾಗುತ್ತಿದೆ..."..

ನಾಗು ಫೋನ್ ಮಾಡಿ ಥರ ಹೇಳಿದಾಗ ನನಗೇ ಆಶ್ಚರ್ಯ..

" ನಾಗು.. ಸ್ವಲ್ಪ ಬಿಡಿಸಿ ಹೇಳೊ.. ಪುಟ್ಟಾ...
ಹೀಗೆಲ್ಲ .."ಸಡನ್ ಸರಪ್ರೈಸ್" ತಡೆದುಕೊಳ್ಳುವ ವಯಸ್ಸು ನಂದಲ್ಲಪ್ಪ...
ಒಂದು ಸಾರಿ ಅಟಾಕ್ ಆಗಿದೆ ಮಾರಾಯಾ..."

"ಬಿಡ್ತು ಅನ್ನು...!
ಒಂದು ಕ್ಲೂ ಕೊಡ್ತೀನಪ್ಪಾ...
ನನ್ನಿಂದ ನಿನಗೊಂದು ಸಹಾಯ ಆಗ್ತಾ ಇದೆ..
ಇದರ ಬಗೆಗೆ ನಿನಗೊಂದು ಫೋನ್ ಬರುತ್ತದೆ...
ನೀನು ಇಷ್ಟು ದಿನ ಕಾಯ್ತಾ ಇದ್ದುದು..ಹಣ್ಣಾಗ್ತದೆ..
ಇನ್ನೂ ಮುಂದಿನದು ನಾನು ಹೇಳಲಾಗುವದಿಲ್ಲ..
ಸಾರಿ ಕಣೊ.."

ಇಷ್ಟು ಹೇಳಿ ಫೋನ್ ಇಟ್ಟು ಬಿಟ್ಟಿದ್ದ...

ಆಗಾಗ ನನ್ನ ತಲೆಯಲ್ಲಿ ಹುಳ ಬಿಡುವದು ಅವನ ಅಭ್ಯಾಸ...
ಇಲ್ಲದಿದ್ದರೆ ತಿಂದ ಅನ್ನ ಜೀರ್ಣವಾಗುವದಿಲ್ಲ ಅವನಿಗೆ..
ಕಾಲೇಜಿನ ದಿನಗಳಿಂದಲೂ....ಸ್ವಲ್ಪ ಹಾಗೇಯೇ....ಆತ...

ಏನಿರ ಬಹುದು...?

ವಿಜಯಾ...!!.. ?...?

ಇರಬಹುದಾ...? ಸ್ವಲ್ಪ ಪುಳಕಿತನಾದೆ....!

"ನನಗೊಂದು ಮಹದಾಸೆ"ಯಿಂದ ಅಪರಾಧಿ ಮನೋಭಾವ...
ತನಗೆ ಆಗ್ತಾ ಇದೆ ಅಂತ ಆಗಾಗ ಹೇಳ್ತಾ ಇದ್ದ...!

ಪ್ರಾಯಶ್ಚಿತ ಮಾಡಿಕೊಳ್ಳುತ್ತಿರ ಬಹುದಾ...?

ಕೆಲವು ಸಾರಿ ನನ್ನ ಮಡದಿಗೆ ವಿಷಯ ಹೇಳಿರುತ್ತಾನೆ...

ಮಡದಿಗೆ ಕೇಳಿದೆ.."ನಾಗು ಏನಾದರೂ ಫೋನ್ ಮಾಡಿದ್ದನಾ...?"

"ಏನು ಹೇಳ ಬೇಕಿತ್ತು.. ನಾಗು ನನಗೆ..?
ನೀವು ಮತ್ತು ನಿಮ್ಮ ನಾಗು ಜಗತ್ತಿನ ವಿಚಿತ್ರ ನಮೂನೆಗಳು..
ಯಾರಿಗೂ ಅರ್ಥವಾಗುವಂಥ ವಿಷಯಗಳಲ್ಲ......"

ಸರ್ಟಿಫಿಕೇಟ್ ಕೊಟ್ಟಳು..

ನಾನು ಏನು ಅಂತ ಕೇಳಲಿ......?

ವಿಜಯಾ ವಿಷಯ ಏನಾದರೂ ಹೇಳಿದಾನಾ ಅಂತನಾ...?

ಹೇಗೆ ಕೇಳಲಿ...?

"ವಿಜಯಾ ... ಅಂದರೆ ಅಷ್ಟೆಲ್ಲಾ ಆಸೆಯಾ ನಿಮಗೆ?"

ಅಂತ ಕಾಲೆಳೆಯುವದಕ್ಕೆ ಶುರು ಹಚ್ಚಿಕೊಂಡರೆ...?

"ಏನಿಲ್ಲ ಬೀಡು.." ಅಂತ ಮಾತು ಮುಗಿಸಿದೆ...

.. ಹೈಸ್ಕೂಲ್ ದಿನಗಳು...
ಮಾತಿಲ್ಲದೆ ..
ಕಣ್ಣಲ್ಲಿ ನಡೆದ ಸಂಭಾಷಣೆಗಳು....

ಪ್ರೀತಿ.., ಪ್ರೇಮ.., ಬದುಕಿನ ಆಳವರಿಯದ ಹರೆಯದ...
ಬರೆ... ಬಣ್ಣದ ಕನಸಿನ ದಿನಗಳು....

ಅವೆಲ್ಲ ನನ್ನ ಕಲ್ಪನೆಗಳಾ...?
ವಿಜಯಾಗೆ ಅಂಥಹ ಭಾವನೆಗಳಿದ್ದವಾ...?

ಅವಳ ನಗು...
ದಟ್ಟ ಕಣ್ಣುಗಳು....
ನನ್ನೆದೆಯಲ್ಲಿ ಹಾಗೆ ಉಳಿದು ಬಿಟ್ಟಿವೆ...

ನೆನಪಾದಗಲೆಲ್ಲ ಎದೆಯಲ್ಲೊಂದು ಛಳಕು...
ಅದು ನೋವಾ... ಸುಖವಾ...?

ಹಿತವಾಗಿರುತ್ತದೆ... ಕ್ಷಣಗಳು...
ದಿನಗಳ ನೆನಪಿನ ಮೆಲುಕು.. ಸಿಹಿಯಾಗಿರುತ್ತದೆ....

"ಇದೇ.. ಹುಡುಗಿಯನ್ನು ನನ್ನ ಮನದಲ್ಲೇ ಬಹಳ ಇಷ್ಟ ಪಟ್ಟಿದ್ದೆ ಕಣೆ...!"..

ಅಂತ ನನ್ನಾಕೆಗೊಮ್ಮೆ ತೋರಿಸ ಬೇಕೆಂಬ ನನ್ನ ಹಂಬಲ ಈಡೇರುತ್ತಿದೆಯಾ...?

ನಾಗು ಮನಸ್ಸು ಮಾಡಿದರೆ ಆಗುತ್ತದೆ....


ನಾನು ಹೆಬ್ಬಾಳದ ಕಡೆಗೆ ಹೊರಟಿದ್ದೆ...... ಎಂದಿನಂತೆ...

ಗೆಳೆಯ ಮಲ್ಲಿಕಾರ್ಜುನನನಿಗೆ ಫೋನ್ ಮಾಡು ಚಟ ...
ಮಾಡಲೆಂದು ನೋಡಿದಾಗ ಮಿಸ್ಸಡ್ ಕಾಲ್ ಕಾಣಿಸಿತು..
ಅದಕ್ಕೇ ರಿಂಗ್ ಮಾಡಿದೆ...

"ಹಲೋ.. ನಾನು ಪ್ರಕಾಶ್ ಹೆಗಡೆ ಅಂತ...
ನನಗೆ ನಂಬರಿಂದ ಕಾಲ್ ಬಂದಿತ್ತು.. ಯಾರೆಂದು ಗೊತ್ತಾಗಲಿಲ್ಲ...."
ಅಂದೆ...

ಕಡೆಯಿಂದ ಧ್ವನಿ ಏನೂ ಕೇಳಿಸಲಿಲ್ಲ...
ನಾ ಮತ್ತೆ "ಹಲೋ" ಅಂದೆ...

ಒಂದು ಸುಂದರವಾದ ಹೆಣ್ಣು ಧ್ವನಿ ನಿಧಾನವಾಗಿ "ಹಲೋ" ಅಂದಿತು...

ವಿಜಯಾ ಧ್ವನಿ ಹೀಗಿರ ಬಹುದಾ...? ನನ್ನೆದೆ ಢವ.. ಢವ ಅನ್ನತೊಡಗಿತು...

"ನೀವು ಯಾರೆಂದು ಗೊತ್ತಾಗಲಿಲ್ಲ.."

" ನಿಜವಾಗಿಯೂ ...ಗೊತ್ತಾಗಲಿಲ್ಲವಾ...?"

ಬೇರೆ ಯಾವುದೇ ಗಂಡಿನ ಧ್ವನಿಯಾಗಿದ್ದರೆ ಝಾಡಿಸಿ ಬಿಡುತ್ತಿದ್ದೆ..
ಈಗ ಹಾಗೆ ಮಾಡಲು ಮನಸ್ಸು ಬರಲಿಲ್ಲ...

"ಇಲ್ಲಾರಿ ಗೊತ್ತಾಗಲಿಲ್ಲ.."

"ನಿಮ್ಮ ಬ್ಲಾಗ್ ನಾನು ಯಾವಾಗಲೂ ಓದುತ್ತಿರುತ್ತೇನೆ...
ಚೆನ್ನಾಗಿ
ಬರೆಯುತ್ತೀರಿ ನೀವು..."

"ಥಾಂಕ್ಸ್.. ನೀವು ಯಾರು..?"

"ನಿಮ್ಮ ಕ್ಲಾಸ್ ಮೇಟ್... ಹೈಸ್ಕೂಲ್ ನಲ್ಲಿ ಜೊತೆಯಾಗಿ ಓದಿದ್ದೇವೆ.."

ಅಯ್ಯೋ... ದೇವರೆ.. ಇದೇನಿದು...?
ನಿಜವಾಗುತ್ತಿದೆಯಾ...?

ಏನು ಕೇಳಲಿ..?
ಏನು ಹೇಳಲಿ..?
ಕೈಯೆಲ್ಲ ...ಬೆವರ ತೊಡಗಿತು...

ವಿಜಯಾ ಎದುರಿಗೆ ಬಂದು ನಸು ನಕ್ಕಂತೆ ಭಾಸ ವಾಯಿತು...

ಕಾರ್ ಸ್ಪೀಡ್ ಕಡಿಮೆ ಮಾಡಿದೆ...

" ಕ್ಲಾಸ್ ಮೇಟಾ..? ಯಾರು..?"

"ನಿಜವಾಗಿಯೂ ಗೊತ್ತಾಗಲಿಲ್ಲವಾ,,,? ಪ್ರಕಾಶಾ.... "

"ದಯವಿಟ್ಟು ಹೇಳಿ... ನನಗೆ ಗೊತ್ತಾಗಲಿಲ್ಲ..."

" ಬಹುವಚನ ಬೇಡೋ... ಮಾರಾಯಾ..!.. ಅದು ರೂಢಿ.. ಇಲ್ಲ...
ನೀನು ಡ್ರಾಯಿಂಗ್ ಕ್ಲಾಸಿನಲ್ಲಿ ಬಿಡಿಸಿದ್ದ ಚಿತ್ರ ಇನ್ನೂ ನನ್ನ ಬಳಿ ಇದೆ..
ನೀನೇ ನನಗೆ ಕೊಟ್ಟಿದ್ದೀಯಾ..."

ಅರೆ... ಇದು ನನಗೆ ನೆನಪಾಗುತ್ತಿಲ್ಲ...

"ಪ್ರಕಾಶ.. ನನಗೆ ಮದುವೆಯಾಗಿ ಎರಡು ಹೆಣ್ಣು ಮಕ್ಕಳಿದ್ದಾರೆ..
ಒಬ್ಬಳು ಸಾಫ್ಟವೇರ್ ಇಂಜನೀಯರ್.. ನಿನ್ನ ಬ್ಲಾಗ್ ಓದುತ್ತಾಳೆ..
ನಿನ್ನ ಬ್ಲಾಗ್ ಫಾಲೋ ಮಾಡ್ತಾಳೆ...
ಅವಳೇ ನನಗೆ ನಿನ್ನ ಬಗೆಗೆ ಹೇಳಿದ್ದಾಳೆ...
ನೀನು
ಬರೆದದ್ದೆಲ್ಲ ಓದಿದ್ದೇನೆ..."

ಹೌದಾ...?"

" ನೀನು ಬರೆದ " ನನಗೊಂದು ಮಹದಾಸೆ " ಓದಿದೆ..."

ಬ್ಲಾಗ್ ಯಾರಾದರೂ ಹೊಗುಳುತ್ತಾರೆಂದರೆ ಏರಿಬಿಡುವ ನನಗೆ...
ಹೀಗೆಲ್ಲ ಹೊಗಳಿದರೆ ಏನಾಗಿರ ಬೇಡ...!

ನನಗೆ ಹ್ರದಯ ಬಾಯಿಗೆ ಬಂದಿತ್ತು....

"ಪ್ರಕಾಶಾ...ವಿಜಯಾ ಅನ್ನೋದು..
ನಿಜವಾದ ಹೆಸರು ಅಲ್ಲ ..!
ವಿಜಯಾ ಹೆಸರು ಬೇರೇನೇ ಇದೆ ..ಅಲ್ಲವಾ..?......"

"ನಿಜವಾದ ಹೆಸರು ಹೇಗೆ ಬರೆಯಲಿಕ್ಕೆ ಸಾಧ್ಯ..?

"ಅದೂ ಸರಿ ಅನ್ನು.."

ಹೌದಾ...? ದೇವರೆ.. ಇದೇನಿದು...?
ಇಷ್ಟು ದಿನಗಳ ಕನಸು ನಿಜವಾಗುತ್ತಿದೆಯಾ...?

ಈಗ ಏನು ಹೇಳಬೇಕು..?
ಏನು ಮಾತಾಡ ಬೇಕು...??

ಬಾಯೆಲ್ಲ ಒಣಗಿದ ಅನುಭವ....!

"ಪ್ರಕಾಶ.. ಬ್ಲಾಗ್ ಓದಿ ಗೊತ್ತಾಯಿತು ..
ನಿನ್ನ ಸಂಸಾರ ಚೆನ್ನಾಗಿದೆ ಅಂತ.. ನಿನ್ನ ಮಗ ಚಂದ ಇದ್ದಾನೆ..
ಬಹಳ ಖುಷಿಯಾಗ್ತಿದೆ.."

" ನೀನು ಹೇಗಿದ್ದೀಯಾ..?"

" ಚೆನ್ನಾಗಿದ್ದೀನಿ...ಎರಡು ಮಕ್ಕಳ ಸಂಗಡ.. ಇದ್ದೇನೆ..
ನಾಗೂ ಮನೆಯ ಸತ್ಯನಾರಾಯಣ ಪೂಜೆಗೆ ಬರ್ತಾ ಇದ್ದೇನೆ ..
ಬಾ ಅಲ್ಲಿ ಭೇಟಿಯಾಗುವ...
ನನ್ನ ಮಕ್ಕಳೂ ಬರ್ತಾರೆ.. "

ನನಗೆ ಟೆನ್ಷನ್ ಜಾಸ್ತಿಯಾಗ ತೊಡಗಿತು...

"ನೀನು ವಿಜಯಾನಾ..? ಪ್ಲೀಸ್ ಹೇಳು.."

" ನಾನು ಹೇಗೆ ಹೇಳಲು ಸಾಧ್ಯ...?
ನೀನು ಹೇಳಿದರೆ ತಾನೆ ..?
ಈಗ ಗೊತ್ತಾದರೂ ಏನು ಪ್ರಯೋಜನ...?
ಒಂದಷ್ಟು ಹಗಲು ಕನಸು...ಅಲ್ಲವಾ...? "

ಆದರೂ... ನನ್ನ ಆಶಾಗೆ ..
ವಿಜಯಾ
ತೋರಿಸೊ ಆಸೆ ಇದೆ...
ಮತ್ತೆ ಯಾವುದೇ ಕೆಟ್ಟ ಉದ್ದೇಶ ಇಲ್ಲ.."

"ನಿನ್ನ ಬಗ್ಗೆ ನನಗೆ ಗೊತ್ತಿದೆ ಕಣೊ...
ಪುಕ್ಕಲು..ಹಿಡಿ ಕಡ್ಡಿಯ ಹಾಗಿದ್ದೆ ಆಗ....
ಡುಮ್ಮ ಆಗಿದೆಯಂತೆ.. ನೀನೆ ಬರ್ಕೊತಿಯಲ್ಲ..."

ನನ್ನ ತಾಳ್ಮೆ ...ಸಹನೆಯ ಕಟ್ಟೆ ಮೀರತೊಡಗಿತು....

" ಪ್ರಕಾಶಾ ...
...ಛಾನ್ಸು ಬಿಟ್ಟರೆ ಇನ್ನು ಸಿಗಲಿಕ್ಕಿಲ್ಲ... !

ಬಿಡ ಬೇಡ ಕೇಳು ...!

ಒಳಗಿನ ಮನಸ್ಸು ಕೂಗ ತೊಡಗಿತು...!!

"ನೀನು ವಿಜಯಾ ಹೌದೋ ಅಲ್ಲವೊ...?
ನಿನ್ನ ನಿಜವಾದ ಹೆಸರು ಹೇಳು ಮಾರಾಯ್ತಿ..
ನನಗೆ ವಿಜಯಾ ಹೌದಾ ಅಲ್ಲದಾ ಗೊತ್ತಾಗ್ತದೆ..."

ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಕಾರು ನಿಲ್ಲಿಸಿದ...

ನಾನು ಗ್ಲಾಸ್ ಇಳಿಸಿದೆ...

"ಸರ್ ... ಡ್ರೈವಿಂಗ್ ಮಾಡುವಾಗ ಮೋಬೈಲು...
ಯೂಸ್ ಮಾಡಬಾರದು...
ಐನೂರು ರುಪಾಯಿ ಫೈನ್ ಕಟ್ಟಿ..."

ಇವನು ಈಗಲೇ.. ವಕ್ರಿಸ ಬೇಕಾ...? ಛೇ...

" ಸ್ವಲ್ಪ ಇರಿ ಸಾರ್...ಫೈನ್ ಕಡ್ತೀನಿ.. ಮಾತು ಕಂಪ್ಲೀಟ್ ಮಾಡ್ತೀನಿ.."

"ಹಲೋ ನೀನು ಯಾರು...?
ನಿಜವಾದ ಹೆಸರು ಹೇಳು ಮಾರಾಯ್ತಿ.. ಪ್ಲೀಸ್.."

"ಪ್ರಕಾಶಾ... ನಾಗೂ ಮನೆ ಸತ್ಯನಾರಾಯಣ ಪೂಜೆಗೆ ನಾಳೆ ಬರ್ತೀನಿ..
ಮಕ್ಕಳನ್ನೂ ಕರ್ಕೊಂಡು ಬರ್ತೀನಿ.. ಅಲ್ಲಿ ಭೇಟಿಯಾಗುವ...
ಸ್ಸಾರಿ... ನೀನು... ಡ್ರೈವ್ ಮಾಡ್ತಿರೋದು ಗೊತ್ತಾಗಲಿಲ್ಲ....
ನೀನು ಫೈನ್ ಕಟ್ಟು... ಬೈ.."

ಫೋನ್ ಕಟ್ ಆಯಿತು...

ಛೇ,,...!

ನಾನು ಫೈನ್ ಕಟ್ಟಲು ಜೇಬು ತಡಕಾಡಿದೆ...

ಎದೆಯ ಢವ.. ಢವ ಶಬ್ದ ಹೊರಗಡೆ ಕೇಳುವ ಹಾಗೆ ಬಡಿದು ಕೊಳ್ಳುತ್ತಿತ್ತು...
ದೇವಾಲಯದ ನಗಾರಿಯ ಹಾಗೆ...

ಏಸಿಯಲ್ಲೂ ಸೆಖೆಯಾಗಿತ್ತು...

ಹೇಳಲಾಗದ ಭಾವ ..
ಖುಷಿನಾ.. ನೋವಾ...
ಗೊತ್ತಾಗಲಿಲ್ಲ... ಬೆವರು ಹನಿಹನಿಯಾಗಿತ್ತು...!


( ನಾನು ಬರೆದ
ನನಗೊಂದು ಮಹದಾಸೆ. ಓದಿ...)