Sunday, November 28, 2010

ಅಸಹಜ


ನಾನು  ತುಂಬಾ ಒಳ್ಳೆಯ  ಮನುಷ್ಯ..

ಹಾಗಂತ ಎಲ್ಲರೂ ಹೇಳುತ್ತಾರೆ.. 
ಅದನ್ನು ಕೇಳಲಿಕ್ಕೆ  ಬಹಳ ಖುಷಿಯಂತೂ ಹೌದು.....
ಹೆಮ್ಮೆಯೂ ಆಗುತ್ತದೆ...

ಆದರೆ ...
ಆತ್ಮಸಾಕ್ಷಿಯಾಗಿ ನಿಜ ಹೇಳುತ್ತೇನೆ...
ಒಳ್ಳೆಯವನಾಗಿರುವದು  ಒಂಥರಾ  ಹಿಂಸೆ ಕಣ್ರೀ...
ಕೆಲವು ಸಂದರ್ಭ  ಯಾಕಾದ್ರೂ ಒಳ್ಳೆಯವನಾದೆ ಅನ್ನಿಸಿ ಬಿಡುತ್ತದೆ..

ಕೆಲವರು ಹಾಗಿರುವದಿಲ್ಲ ನೋಡಿ...

ಬೇರೆಯವರೆಲ್ಲ ಯಾಕೆ ?
ನನ್ನ  ಪರಮಾಪ್ತ ಗೆಳೆಯನನ್ನೇ ತೆಗೆದು ಕೊಳ್ಳಿ..
ಜೀವನದ ಪ್ರತಿ ಕ್ಷಣವನ್ನೂ  ಸಂತೋಷದಿಂದ  ಕಳೆಯುತ್ತಿದ್ದಾನೆ..

ಬಹಳ ಹೆಣ್ಣುಮಕ್ಕಳ ಗೆಳೆತನ ಅವನಿಗಿದೆ...
ಅದು  ಕೇವಲ ಗೆಳೆತನ ಅಲ್ಲ ಅಂತ ಎಲ್ಲರಿಗೂ ಗೊತ್ತು...
ಕಾಲೇಜಿನಲ್ಲಿ ಪ್ರತಿವರ್ಷ ಒಂದೊಂದು ಹೆಣ್ಣುಮಕ್ಕಳ ಜೊತೆ ಓಡಾಡಿದ..
ಪ್ರೀತಿ, ಪ್ರೇಮ ಅಂತೆಲ್ಲ ಹೇಳಿಕೊಂಡ...

ತಾನು ಮದುವೆಯಾಗುವ ಹೆಣ್ಣನ್ನು ನನ್ನಿಂದ  ಸಿಲೆಕ್ಟ್ ಮಾಡಿಸಿದ..!

ಆತ ನನ್ನ ಬಳಿ ಹೇಳಿದ್ದು ಇಷ್ಟೆ...

"ನೋಡೊ... 
ಬದುಕಿನ ಬಗೆಗೆ  ಬಹಳ ತಲೆ ಕೆಡಿಸಿಕೊಂಡವನು ನೀನು...
ನನ್ನ ಬದುಕಿನ ಬಗೆಗೆ  ನನಗಿಂತ ನಿನಗೆ  ಹೆಚ್ಚಿನ ಕಾಳಜಿ ಇದೆ..
ನನ್ನ  ಸ್ವಭಾವ ಎಲ್ಲದೂ ನಿನಗೆ ಗೊತ್ತು...
ನಾನು ಮದುವೆಯಾಗುವ ಹುಡುಗಿಯನ್ನು ನೀನೇ  ನಿರ್ಧರಿಸು...


ನಾನು ಕಣ್ಮುಚ್ಚಿ  ತಾಳಿ ಕಟ್ಟುತ್ತೇನೆ..."

ನನ್ನ ಗೆಳೆಯನ ಹೆಂಡತಿಯನ್ನು ನಾನೇ  ಹುಡುಕಿ  ನಿಶ್ಚಯ ಮಾಡಿಕೊಟ್ಟೆ...
ಅವನ  ಮನೆಯವರು  ನೋಡಿ "ಸಂಬಂಧ " ಚೆನ್ನಾಗಿದೆ ಅಂತ ನಿರ್ಣಯಿಸಿದ್ದರು..
ನಾನು  ಹೋಗಿ..
ಹುಡುಗಿ ನೋಡಿ...  ನನ್ನ ಗೆಳೆಯನಿಗೆ  " ಯೋಗ್ಯವಾದ "  ಹುಡುಗಿ ಅಂತ  ಒಪ್ಪಿಗೆ  ಕೊಟ್ಟು ಬಂದಿದ್ದೆ...

ಆತ ಕಣ್ಮುಚ್ಚಿ ತಾಳಿಕಟ್ಟಲಿಲ್ಲ..!

ಮದುವೆಗೆ ಮೊದಲು  ಅವಳ ಸಂಗಡನೂ.. 
ಸಿನೇಮಾ....
ಪಾರ್ಕು.. ಲಾಜ್ ಅಂತೆಲ್ಲ ಓಡಾಡಿದ..!

ವಿಷಯ ಏನು ಗೊತ್ತಾ..?

ಮದುವೆಯಾಗಿ ನಾಲ್ಕೈದು ತಿಂಗಳಾಗಿದೆ...

ಇದೀಗ ತಾನೆ  ಅವನನ್ನು ಏರ್ ಪೋರ್ಟ್ ಗೆ ಬಿಟ್ಟು ಬರುತ್ತಿದ್ದೇನೆ...
ನನ್ನ ಜೊತೆ  ಅವನ ಮಡದಿಯೂ ಇದ್ದಾಳೆ..

ಅವನು  ತುರ್ತಾದ ಕೆಲಸದ ಮೇಲೆ ಜಪಾನ್ ದೇಶಕ್ಕೆ ಹೋಗುವ ಕೆಲಸ ಬಂತು..

"ನೋಡೊ... 
ನನಗೇನೂ ಚಿಂತೆಯಿಲ್ಲ...
ಒಂದುವಾರ ಅಷ್ಟೆ ವಾಪಸ್ಸು ಬಂದು ಬಿಡ್ತೇನೆ...
ನೀನಿರ್ತಿಯಲ್ಲ.. ಅವಳಿಗೆ  ದೈರ್ಯ ಹೇಳು..."

ನಾನು ಒಳ್ಳೆಯವನಲ್ಲವೇ..
ಇಂಥಹ  ಸಂದರ್ಭಗಳನ್ನು ನಿಭಾಯಿಸಲು  ಖುಷಿಯಾಗುತ್ತದೆ..
ಒಳ್ಳೇ ತನದ ಬದುಕು ಸಾರ್ಥಕ ಅನ್ನಿಸುವಂಥಹ ಸಂದರ್ಭಗಳು...

ನಾನು ಕಾರ್  ಡ್ರೈವ್ ಮಾಡುತ್ತಿದ್ದೇನೆ...

ಅವಳನ್ನೊಮ್ಮೆ ಗಮನಿಸಿದೆ...

ಮನದಲ್ಲಿ ಕೆಟ್ಟ ಯೋಚನೆ ಬರುತ್ತಿದೆಯಾ...?
ಒಂಟಿ ಹೆಣ್ಣು...! 
ಯಾರೂ ಇಲ್ಲದ ಸಂದರ್ಭ...!

ಇದು ಕೆಟ್ಟದ್ದು ಅನ್ನಿಸಿದರೂ... 
ಬೇಡ ಅನ್ನಿಸಿದ್ದರೂ...ಹಿತವಾಗಿತ್ತು....

ತುಂಬಾ ಚೆಲುವೆ...!
ಕಣ್ಣು...  ಮೂಗು..!.
ಕೆನ್ನೆಯ ಮೇಲೆ ಆಗಾಗ ಇಳಿದು ಬರುವ  ಕೂದಲು...!
ಹರವಾದ.... ಬಿಳುಪಾದ...
ನುಣುಪಾದ  ಗಲ್ಲ......!

ವಾಹ್  !!.....

ಛೇ..!! 
ಹೀಗೆಲ್ಲ ನೋಡ ಬಾರದು.. ವಿಚಾರವನ್ನೂ  ಮಾಡಬಾರದು...

"ನಿಮ್ಮ ಗೆಳೆಯ ಕಾಲೇಜುದಿನಗಳಲ್ಲಿ ಹೇಗಿದ್ದ...?’

ಆಕೆ ನನ್ನ  ನೋಟವನ್ನೇ ಗಮನಿಸುತ್ತ ಕೇಳಿದಳು...

" ನನ್ನ ಗೆಳೆಯ ತುಂಬಾ ತುಂಟನಾಗಿದ್ದ..
ಯಾವಾಗಲೂ ಗೆಳೆಯರ ಗುಂಪು  ಅವನ ಹಿಂದೆ ಇರ್ತಿತ್ತು...."

".. ಹೆಣ್ಣುಮಕ್ಕಳು...?..? "

ಬಹಳ ತೀಕ್ಷ್ಣವಾಗಿತ್ತು ಅವಳ ಪ್ರಶ್ನೆ...

ನಾನು ತಡವರಿಸಿದೆ...

"ನನಗೆ ಗೊತ್ತು... ನನ್ನವರು ಹೆಣ್ಣುಮಕ್ಕಳ ಸಂಗಡ ಓಡಾಡುತ್ತಿದ್ದರು...
ಅವರೇ..ನನ್ನ ಬಳಿ ಹೇಳಿಕೊಂಡಿದ್ದಾರೆ..."

"ಹೌದಾ...? !!..
ಅಪಾರ್ಥ ಮಾಡಿಕೊಳ್ಳ ಬೇಡಿ... ಆತನದು ಬರಿ.. ಸ್ನೇಹ ಅಷ್ಟೆ..
ಪ್ರೀತಿ.., ಪ್ರೇಮ  ಏನೂ ಇಲ್ಲವಾಗಿತ್ತು...."

"ಆ ವಯಸ್ಸಿನ  ಪ್ರಿತಿ, ಪ್ರೇಮಗಳ   ಅರ್ಥ  ನನಗೆ ಚೆನ್ನಾಗಿ ಗೊತ್ತು..."

ನಾನು  ತಲೆ ಕೆರೆದು ಕೊಂಡೆ...
ಈ ಮಾತನ್ನು ಎಲ್ಲಿಯವರೆಗೆ  ಅರ್ಥ ಮಾಡಿಕೊಳ್ಳ ಬಹುದು ಅಂತ ...

ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವದೇ.. ಕಷ್ಟ...

ಗೆಳೆಯನಿದ್ದಾಗ ಈ ಥರಹದ ಮಾತುಗಳನ್ನು ಯಾವತ್ತೂ ಆಡಿಯೇ ಇಲ್ಲ...
ಮಾತು ಬಹಳ ಕಡಿಮೆ...

ಒಂದು  ಮುಗಳ್ನಗು.. 
ಚಂದದ ನೋಟದಲ್ಲಿ ಮಾತು ಮುಗಿಸಿ ಬಿಡುತ್ತಿದ್ದಳು...

" ಹೋಗ್ಲಿ ಬಿಡಿ...
ಆಗ ಅಂಥಾದ್ದೇನೂ ನಡೇದಿಲ್ಲ.. 
ಈಗ  ಚೆನ್ನಾಗಿದ್ದನಲ್ಲ...
ನಿಮ್ಮಿಬ್ಬರ ಪ್ರೀತಿ, ಪ್ರೇಮನೋಡಿ ಖುಷಿಯಾಗುತ್ತದೆ..."

" ಥ್ಯಾಂಕ್ಯೂ......
ನೀವು ಯಾಕೆ ಮದುವೆಯಾಗಿಲ್ಲ...?"

" ನಾನು  ಬಯಸುವಂಥಹ  ಹುಡುಗಿ ಸಿಕ್ಕಿಲ್ಲ..."

"ಅಥವಾ... 
ನೀವು ಬಯಸಿದ ಹುಡುಗಿ  ನಿಮ್ಮನ್ನು ಬಯಸಲಿಲ್ಲ..... ಅಲ್ಲವಾ?"

"ಓಹ್...!
 ನನ್ನ ಗೆಳೆಯ  ಅದನ್ನೂ ನಿಮಗೆ ಹೇಳಿಬಿಟ್ಟಿದ್ದಾನೋ...
ಹೋಗ್ಲಿ ಬಿಡಿ..ಅದೆಲ್ಲ ಈಗ ಯಾಕೆ..?"

"ನೀವು ಗಂಡಸರು ....
ನಿಮ್ಮ  ಆಸೆ.. ಬಯಕೆಗಳ ಬಗೆಗಷ್ಟೇ ವಿಚಾರ ಯಾಕೆ ಮಾಡುತ್ತೀರಿ...?
ಪ್ರತಿ ಹೆಣ್ಣಿಗೂ ...
ಬೇಕು  ಬೇಡಗಳಿರುತ್ತವೆ.. 
ಅದರ ಬಗೆಗೆ ಯಾಕೆ ವಿಚಾರ ಮಾಡೋದಿಲ್ಲ...?"

ನನಗೆ ಆಶ್ಚರ್ಯವಾಯಿತು...

"ಯಾಕೆ...? 
ನಿಮಗೆ  ಏನಾದರೂ... ಬೇರೆ   ಬೇಕು  ಬೇಡಗಳಿದ್ದವೆ..? "

" ಇದ್ದವೋ... ಇಲ್ಲವೋ...
ಈಗ ಹೇಳಿ  ಏನು ಪ್ರಯೋಜನ...?
 ಒಂದು  ನೆಲೆ...
ಒಂದು  ಬದುಕು ಸಿಕ್ಕಿದೆ... 
ಬಾಳ ಬೇಕಲ್ಲ... 
ಇಲ್ಲಿಯೇ.. ಖುಷಿ ಕಾಣ ಬೇಕಲ್ಲ..."

ಅಂದರೆ... ..
ಇವಳಿಗೆ  ಮನಸ್ಸಿಲ್ಲದ ಮದುವೆಯಾ?

ಅಷ್ಟರಲ್ಲಿ ಮನೆ ಬಂತು...

ನಾನು ಅವಳನ್ನು ಬಿಟ್ಟು ಕೊಡಲು ಹಾಲ್  ತನಕ ಬಂದೆ...

 "ನೋಡಿ... 
ಹೇಗಿದ್ದರೂ.. ಪಕ್ಕದ ಮನೆಯಲ್ಲೇ ಇರ್ತಿನಲ್ಲ...
ಏನಾದರೂ ಬೇಕಿದ್ದಲ್ಲಿ ಫೋನ್ ಮಾಡಿ... ತಕ್ಷಣ ಬಂದುಬಿಡುತ್ತೇನೆ..."

"ಊಟ ಮಾಡಿ ಹೋಗಿ... 
ಬೇಗನೇ.. ಊಟಕ್ಕೆ  ತಯಾರು ಮಾಡುತ್ತೇನೆ...
ಒಬ್ಬಳೆ ಊಟ ಮಾಡುವದು ಬಲು ಬೋರು..."

ನನಗೂ  ಸರಿಯೆನ್ನಿಸಿತು....

ಹಾಲಿನಲ್ಲಿ ಕುಳಿತೆ... 
ಆಕೆ ಟಿವಿ  ಆನ್ ಮಾಡಿ  ರಿಮೋಟ್  ಕೊಟ್ಟಳು...

ಕಣ್ಣು ಟಿವಿ ನೋಡುತ್ತಿದ್ದರೂ  ಮನ ಎಲ್ಲೋ  ಓಡಾಡುತ್ತಿತ್ತು...
ಮನದಲ್ಲಿ ಕೆಟ್ಟ ಆಲೋಚನೆಗಳು...
ಹೇಳಲಾಗದ ದ್ವಂದ್ವಗಳು...

ಈ ಕೆಟ್ಟ ಮನಸ್ಸು,, ಆಲೋಚನೆಗಳು..  ಖುಷಿ ಕೊಡುವದಂತೂ ನಿಜ...

ಆಕೆ ಲಗುಬಗೆಯಿಂದ ಅಡುಗೆ  ರೆಡಿ ಮಾಡಿ  ಊಟಕ್ಕೆ ಕರೆದಳು...

ಅವಳು...
ಅವಳು ಸೀರೆ ಉಟ್ಟ ರೀತಿ....
ಇಷ್ಟವಾಗ ತೊಡಗಿತು.....

ನಾನು  ಡೈನಿಂಗ್ ಟೇಬಲ್  ಮುಂದೆ ಕುಳಿತೆ...

ಇಂಥಹ ಸಂದರ್ಭ  ಮತ್ತೆ ಸಿಗಲಿಕ್ಕಿಲ್ಲ...
ಮನದಲ್ಲಿ ಏನೇನೋ  ಯೋಚನೆಗಳು...

ಹೊಸ ಅನುಭವಕ್ಕಾಗಿ  ಸಂದರ್ಭವೇ ನನ್ನನ್ನು ಹುಡುಕಿ ಬಂದಂತಿತ್ತು...

" ನಿಮ್ಮನ್ನು ಬಹಳ ದಿನಗಳಿಂದ ಒಂದು ಪ್ರಶ್ನೆ ಕೇಳಬೇಕಿತ್ತು..."

ನನ್ನ ಹೃದಯ ಬಡಿತ ಜೋರಾಯಿತು.. 

"  ಕೇಳಿ... "

"ನೀವು  ...
ನಿಮ್ಮ ಗೆಳೆಯನಿಗಾಗಿ ಹೆಣ್ಣು ನೋಡಲು ಯಾಕೆ  ಬಂದದ್ದು...?
ಗೆಳೆಯನಿಗೆ ಬರಲಿಕ್ಕೆ ಏನಾಗಿತ್ತು...?"

"ಸ್ನೇಹ... ಪ್ರೀತಿ...
ನಮ್ಮಿಬ್ಬರ ಗೆಳೆತನ.. 
ಇಬ್ಬರಿಗೂ   ಒಬ್ಬರಿಗೊಬ್ಬರ ಋಣದ ಬದುಕು..
ನಂಬಿಕೆ... ವಿಶ್ವಾಸ.. 
ನಮ್ಮ ಗೆಳೆತನವೇ  ಹಾಗಿದೆ.."

ಈ ಮಾತುಗಳನ್ನು  ಹೇಳಲು ಬಲು ಕಷ್ಟವಾಯಿತು...

ಈ ಸಂದರ್ಭಕ್ಕೆ  ಬೇಡ ಎನಿಸುತ್ತಿದ್ದರೂ  ನಾಲಿಗೆ  ಗೊತ್ತಿಲ್ಲದಂತೆ ಮಾತು  ಆಡುತ್ತಿತ್ತು...

"ಇದು  ಒಂದು ಥರಹದ ಮೋಸವಲ್ಲವೆ...?
"ತಂಗಿಯನ್ನು ತೋರಿಸಿ  ಅಕ್ಕನನ್ನು ಮದುವೆ ಮಾಡಿದರು" ಅನ್ನುವ ಗಾದೆಯ ಹಾಗಾಯ್ತು ಅಲ್ಲವೆ?"

ನಾನು ಅವಕ್ಕಾದೆ...!!
ಏನಿದರ ಅರ್ಥ..!!.. ??...

"ನಾನು ಮೊದಲೇ  ಹೇಳಿ ಬಂದಿದ್ದೆನಲ್ಲ... 
ಮದುವೆ  ನನಗಲ್ಲ... ನನ್ನ ಗೆಳೆಯನಿಗೆ ಅಂತ..."

" ನೋಡಿ...
ನಾನು ಮೊದಲಿನಿಂದಲೂ ಸ್ವಲ್ಪ ಮಾತಲ್ಲಿ ಜೋರು..
ಮದುವೆಯಾದ ಮೇಲೆ  ಸ್ವಭಾವ ಬದಲಿಸಿಕೊಳ್ಳ ಬೇಕಲ್ಲ..
ಹಾಗಾಗಿ  ಸುಮ್ಮನಿರುವ ಅನಿವಾರ್ಯ.. 
ಸುಮ್ಮನಿರುತ್ತೇನೆ...
ಇವತ್ತು ಸಂದರ್ಭ ಕೂಡಿ ಬಂದಿದೆ..
ಕೇಳಿ ಬಿಡುತ್ತೇನೆ..

ನೀವು ನನ್ನ ಸ್ಥಿತಿಯಲ್ಲಿದ್ದು ವಿಚಾರ ಮಾಡಿ..

ನನ್ನ ಭವಿಷ್ಯದ ಪ್ರೀತಿ...
ನನ್ನ ಮುಂದಿನ ಬಾಳಿನ ಸಂಗಾತಿ ನನ್ನನ್ನು ನೋಡಲು ಬರುವದಿಲ್ಲ...
ನನ್ನ ಅಂದವನ್ನು..ಚಂದವನ್ನು...
ಬೇರೊಬ್ಬರು ಬಂದು  ನಿರ್ಣಯಿಸುತ್ತಾರೆ...
ನನ್ನ ಬದುಕಿನ  ಕನಸನ್ನು ಮದುವೆಗೆ ಮೊದಲು..
ಕೊನೆ ಪಕ್ಷ ನೋಡುವಂಥಹ ಸಂದರ್ಭ ಕೂಡ ನನಗಿರುವದಿಲ್ಲ..."

ನನಗೆ  ಪಿಚ್ಚೆನಿಸಿತು...
ಅವಳ ಮಾತುಗಳ ಸತ್ಯ ನನ್ನನ್ನು ಇರಿಯಿತು...

 ಅವಳೇ.. ಮತ್ತೆ ಮಾತನಾಡಿದಳು..

"ನೀವು ...
ನಿಮ್ಮ ಗೆಳೆಯನಿಗಾಗಿ ನನ್ನನ್ನು ನೋಡಿದರೂ...
ನನ್ನನ್ನು ನೋಡಿದ್ದು ...
ನಿಮ್ಮ ಕಣ್ಣು...
ನಿಮ್ಮ ಮನಸ್ಸು... 
ನಿಮಗೆ "ಇಷ್ಟವಾಗಿದ್ದಕ್ಕೆ"  ನನ್ನನ್ನು ಗೆಳೆಯನಿಗಾಗಿ  ಸಿಲೆಕ್ಟ್ ಮಾಡಿದ್ದೀರಿ ಅಲ್ಲವಾ?" 

ನಾನು  ತಡವರಿಸಿದೆ...

"ಸ್ಸಾರಿ... 
ಆ  ಸಂದರ್ಭದಲ್ಲಿ  ನಮ್ಮ ಗೆಳೆತನ ಬಿಟ್ಟು ಬೇರೆ ಯೋಚನೆ  ಬರಲಿಲ್ಲ..."

ಊಟ  ಸೊಗಸಾಗಿತ್ತು..
ದಿನಾ  ನನ್ನ  ಕೈ ಅಡುಗೆಯ ಸಪ್ಪೆ ಊಟ ನೆನಪಾಯಿತು..
ಆದರೆ.. 
ಆಸ್ವಾದಿಸುವಂಥಹ   ಸವಿಯುವಂಥಹ  ವಾತಾವರಣ ಅಲ್ಲಿರಲ್ಲಿಲ್ಲ...

ಇಬ್ಬರದೂ ಊಟವಾಯಿತು...

"ಸರಿ  ...
ನಾನಿನ್ನು ಹೊರಡುವೆ... ಬಾಗಿಲು ಹಾಕಿಕೊಳ್ಳಿ.."

"ಪ್ಲೀಸ್....
 ನೀವು ಈ ರಾತ್ರಿ ಇಲ್ಲಿಯೇ ಮಲಗಿ..."

"ಬೇಡಾ... ರಿ.." 
ನಾನು  ತೊದಲಿದೆ...
ಮತ್ತೆ ಹೇಳಲಾಗದ ಆಸೆ ಗರಿಗೆದರಿತು...!!

"ಪ್ಲೀಸ್.. ಪ್ಲೀಸ್...
ನನಗೆ  ಬಹಳ ಹೆದರಿಕೆ.."

ಅವಳ ಬೊಗಸೆ ಕಣ್ಣುಗಳಿಗೆ  ಇಲ್ಲವೆನ್ನಲಾಗಲಿಲ್ಲ....

ದೇವರೇ..
ಏನಾದರೂ  ಘಟಿಸಲಿ... !!
ಏನಾದರೂ.....ಆಗಿ ಹೋಗಲಿ....! 
ಅನ್ನುತ್ತಿತ್ತು  ಒಳ ಮನಸ್ಸು...!

ಮನಸ್ಸು  ಬಯಸಿದ್ದು ಅದನ್ನೇ ಆದರೂ... ಬೇಡವೆನ್ನುವ  ಮನಸ್ಸಲ್ಲಿ ಒಪ್ಪಿದೆ...

"ನನಗೆ  ಹಾಸಿಗೆ  ತರಲು ಸಹಾಯ ಮಾಡಿ... 
ದಯವಿಟ್ಟು ಬನ್ನಿ..."
ನಾನು  ಅವಳನ್ನು ಹಿಂಬಾಲಿಸಿದೆ...

ನಾವು ಇಬ್ಬರೇ.. !!
ಈ ರಾತ್ರಿ... ಈ ಮನೆಯಲ್ಲಿ...! 
ಒಂಥರಾ... ಪುಳಕ...! ಅಂಜಿಕೆ..  !!

ಮನದ ಹುಚ್ಚು ಆಲೋಚನೆಗಳಿಂದ  ಒಂಥರಾ ಥ್ರಿಲ್ಲಾಯಿತು....

ಹತ್ತಿ ಹಾಸಿಗೆ ಭಾರವಿತ್ತು...ನಾನು ಅದನ್ನು ಎತ್ತುವಾಗ  ಅವಳು  ಸನಿಹ ಬಂದಳು...

ಅವಳ ಮೈಯಿಂದ  ಒಂದು ಥರಹದ ಸುವಾಸನೆ...!
ಮತ್ತೇರಿಸುವಂತಿತ್ತು...

ಭಾವನೆಗಳು ಕೆರಳ ತೊಡಗಿತು... ಹಾಲಿಗೆ ಬಂದು  ಇಳಿಸಲು ನೋಡಿದೆ...

ಸಹಾಯಕ್ಕೆ  ಅವಳೂ ಬಂದಳು..
ಮತ್ತೆ  ಹತ್ತಿರ ಬಂದಳು... ಅವಳ ಸ್ಪರ್ಷದಲ್ಲಿ ರೋಮಾಂಚನೆಯಿತ್ತು..

ಅವಳು ಬೆಡ್ ಶೀಟ್ ಹಾಸ ತೊಡಗಿದಳು.....
ಬಗ್ಗುವಾಗ ನನ್ನನ್ನೇ ನೋಡುತ್ತಿದ್ದಳು...!

ಆ ಬೊಗಸೆ ಕಣ್ಣುಗಳಲ್ಲಿ  ಆಸೆ ಇದೆಯಾ?
ಏನಿದು ನೋಟ...?
ಏನಿದರ ಅರ್ಥ...? ನನ್ನನ್ನು  ಬಾ  ಎನ್ನುತ್ತಿದೆಯಾ...?

ಹೆಣ್ಣಿನ ಈ ಮೌನ ಭಾಷೆ ಅರ್ಥವಾಗುವಂತಿದ್ದರೆ...?

ನನ್ನ  ಕಲ್ಪನೆಯಾ  ಇದೆಲ್ಲಾ...?  ನಾನು ಸ್ವಲ್ಪ ಧೈರ್ಯ ಮಾಡಿ ಬಿಡಲಾ...?

" ನೀವು ಮಲಗಿ... ಟಿವಿ  ಆಫ್ ಮಾಡ್ತೀನಿ...
ಮತ್ತೆ ಏನಾದರೂ ಬೇಕಾ...?"

ನಾನು ಸ್ವಲ್ಪ ಮುಂದೆ ಹೋಗಿ ಅವಳ ಕೈ ಹಿಡಿದು ಕೊಳ್ಳ ಬೇಕು ಅಂದುಕೊಂಡೆ....

ಅಥವಾ  ತಬ್ಬಿಕೊಂಡು ಬಿಡಲಾ...?

ಅವಳು ಟಿವಿ  ಆಫ್ ಮಾಡಿದಳು...

ನನ್ನ ಗಮನ ಟಿವಿ ಕಡೆ ಸರಿಯಿತು...

ಟಿವಿ ಪಕ್ಕದಲ್ಲಿ ನನ್ನ ಗೆಳೆಯನ ಮದುವೆ  ಫೋಟೊ...!

ಅವರಿಬ್ಬರ ಹೆಗಲ ಮೇಲೆ ಕೈ  ಹಾಕಿ  ನಿಂತಿರುವ  ನನ್ನ ಫೋಟೊ...!!

ನನಗೆ ಏನನ್ನಿಸಿತೊ ... !

"ನೀವು  ...
ಬೆಡ್ ರೂಮ್ ಬಾಗಿಲು ಹಾಕಿಕೊಳ್ಳಿ... 
ಹೆದರಿಕೆ ಬೇಡ...
ನಾನಿದ್ದೇನೆ... ಧೈರ್ಯವಾಗಿರಿ..."

ಅವಳು ನನ್ನನ್ನೊಮ್ಮೆ ನೋಡಿ...
ಲೈಟ್ ಆಫ್ ಮಾಡಿ ...
ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು...

ಹೇಗೋ  ... ..  ಬೆಳಗಾಯಿತು.. .. ..

ನಾನು ಏಳುತ್ತಿರುವ ಹಾಗೆ ಅವಳು  ಘಮಘಮಿಸುವ ಕಾಫೀ ತಂದಿದ್ದಳು...

" ರಾತ್ರಿ  ನಿದ್ದೆ ಬಂತಾ...? "

ನಾನು ತಲೆಯಾಡಿಸಿದೆ...

" ನೀವು ...
ತುಂಬಾ  ಒಳ್ಳೆಯವರು ಕಣ್ರೀ...!
ನನ್ನ  ಯಜಮಾನ್ರು  ನಿಮ್ಮ ಬಗೆಗೆ   ಏನು  ಹೇಳಿದ್ರು  ಗೊತ್ತಾ  ?  "

" ನನ್ನ  ಬಗೆಗಾ ? 
ಏನು  ಹೇಳೀದ್ದ.. ? "

"ನೋಡು ..
ಕೆಲವೊಮ್ಮೆ ನನಗೆ .. ನನ್ನ ಮೇಲೇ ...ನಂಬಿಕೆ ಇರುವದಿಲ್ಲ...
ಆದರೆ ...
ನನ್ನ ಗೆಳೆಯ ಹಾಗಲ್ಲ...
ಸ್ಪಟಿಕದಂಥಹ  ಮನುಷ್ಯ...!!
ಶುದ್ಧ ಹೃದಯದ ಸ್ನೇಹ ಆತನದು...!!

ನಿಜ...
ನನ್ನವರು ಹೇಳಿದ ಹಾಗೆ .. " ನೀವು ತುಂಬಾ ಒಳ್ಳೆಯವರು ಕಣ್ರೀ..."

ನಾನು ತಲೆಯಾಡಿಸಿದೆ....



ಇದು   "  ಕಥೆ  "





(ಒಳ್ಳೆಯ ಪ್ರತಿಕ್ರಿಯೆಗಳಿವೆ...
ದಯವಿಟ್ಟು  ಪ್ರತಿಕ್ರಿಯೆಗಳನ್ನೂ ಓದಿ....)



Sunday, November 7, 2010

ಮನಸ್ಸು ಕಸದ ತೊಟ್ಟಿಯಲ್ಲ ...

Part 2



ನನಗಂತೂ ತಲೆ ಕೆಟ್ಟು ಹೋಗಿತ್ತು....

ಬೆಳಿಗ್ಗೆ ಆರುಗಂಟೆಯಿಂದ 
"ನೀವು ಏನು ತಿಂತ್ತೀರ್ರಿ.... ಮಾರಾಯ್ರ್ತೆ ?.." 
ಎನ್ನುವದೆ ಕಿವಿಯಲ್ಲಿ ಕೊರೆಯುತ್ತಿತ್ತು...

ಅಲ್ಲಿಯವರೆಗೆ  ನನ್ನ ಮೇಲೆ ಕೂಗಾಡಿ, ರೇಗಾಡಿ..
ತಕ್ಷಣ ಹೆಗಲ ಮೇಲೆ ಕೈ ಹಾಕಿ...

"ಬೇಸರ ಮಾಡ್ಕೋ ಬೇಡಿ... ಬನ್ನಿ ಟೀ ಕುಡಿಯೋಣ "

ಅಂದಾಗ... ನನಗೆ ದೊಡ್ಡ ಷಾಕ್...!!

ಯಾವ ಥರಹದ ಮನುಷ್ಯರಿರ ಬಹುದು ಇವರು ?

ವ್ಯವಹಾರದಲ್ಲಿ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವದು ಬಹಳ ಕಷ್ಟ....

ಟೀ ಅಂಗಡಿಯವನು ಟೀ ಕೊಟ್ಟ...

ನಾನು ಸುಮ್ಮನೆ ಟಿ ತೆಗೆದು ಕೊಂಡೆ...

"ಹೆಗಡೆಯವರೆ... ನನ್ನ ಮೇಲೆ ಬೇಸರವಾಯ್ತಾ..?..
ಬೇಸರ ಆದರೆ... ನನಗೂ ಬಯ್ದು ಬಿಡಿ...
ಮನಸ್ಸಲ್ಲಿ  ಏನನ್ನೂ ಇಟ್ಕೋಬೇಡಿ.."


ನನಗೆ ಏನು ಹೇಳಬೇಕು ಅಂತ ಒಂದು ಕ್ಷಣ ಗೊತ್ತಾಗಲಿಲ್ಲ...
ನಾನು ಮಾತನಾಡಲೇ ಬೇಕಿತ್ತು...

"ನೋಡಿ.. ಸರ್...
ನನಗೆ ಕೂಗಾಡಿ, ರೇಗಾಡಿ ಗೊತ್ತಿಲ್ಲ... 
ನನ್ನ ಕೆಲಸಗಾರಿರಿಗೂ ಸಹ ಕೂಗಿ ಬಯ್ಯುವದಿಲ್ಲ...
ನನಗೆ ಇದೆಲ್ಲ ಇಷ್ಟವಾಗೊದಿಲ್ಲ... 
ಗಲಾಟೆಯಲ್ಲಿ ನನಗೆ ನಂಬಿಕೆಯಿಲ್ಲ..."

"ಹೆಗಡೆಯವರೆ...
ನಾನು ಇರುವದೇ.. ಹೀಗೆ... ನಮ್ಮ ಮನೆಯಲ್ಲೂ ಸಹ ಹೀಗೆಯೇ ಇರುತ್ತೇನೆ...
ನಮ್ಮ  ಮನೆಯಲ್ಲಿ ಸ್ವಲ್ಪ  ಶಬ್ಧ ಜಾಸ್ತಿ...!
ನಮ್ಮ ಮನೆ  ವಿಧಾನ ಸೌಧ , 
ಪಾರ್ಲಿಮೆಂಟಿನ  ಥರಹ... ಸ್ವಲ್ಪ ಗಲಾಟೆ..."

ನನಗೆ ಮತ್ತೊಂದು ಷಾಕ್...  !!
ಇವರು  ಈ ಕೆಲಸ ಮುಗಿಯುವವರೆಗೂ ಹೀಗೆ ರೇಗಾಡುತ್ತಲೇ ಇರುತ್ತಾರಾ ??
ಇವರೊಡನೆ ಹೇಗೆ ಹೆಣಗುವದು..??

" ಸರ್... 
ನಿಮ್ಮ  ಮನೆಯವರು ಸುಮ್ಮನಿರುತ್ತಾರಾ..?.."

" ಅವರದ್ದು ತಪ್ಪಿದ್ದರೆ ಸುಮ್ಮನಿರುತ್ತಾರೆ...
ತಪ್ಪಿಲ್ಲದಿದ್ದರೆ..  ಇದಕ್ಕೆ ಪ್ರತಿಯಾಗಿ  ನನ್ನ ಮೇಲೂ ಕೂಗುತ್ತಾರೆ...
ಆಗ ನಾನು ಸುಮ್ಮನಾಗಿ ಬಿಡುತ್ತೇನೆ..."

ನಾನು ಆಶ್ಚರ್ಯ ಚಕಿತನಾದೆ..  !!

" ದಿನಾಲೂ ಹೀಗೆನಾ...? !!.. ??.."

" ನಿಜ  ...
ಹೆಗಡೆಯವರೆ...
ನಾನು  ನನ್ನ ಆಫೀಸಿನಲ್ಲೂ ಹೀಗೆಯೇ ಇದ್ದೆ...
ಈ ಮನೆ ಕಟ್ಟಿ ಮುಗಿಯುವ ತನಕ..
ನಾನು ..
ನಿಮ್ಮೊಂದಿಗೂ ಹೀಗೆಯೇ ಇರುತ್ತೇನೆ... !!.."

ನನಗೆ ಮುಂದೆ ಏನು ಮಾತನಾಡಬೇಕೆಂದೇ ತಿಳಿಯಲಿಲ್ಲ...

ತಲೆ ಕೆಟ್ಟು ಕೊಳೆತ ಕುಂಬಳಕಾಯಿಯಾಗಿ ಹೋಯ್ತು..  !!

ಮನೆಗೆ ಬಂದು ಮಡದಿಗೆ  ನಡೇದ ಸಂಗತಿಯನ್ನೆಲ್ಲ ಹೇಳಿದೆ...

" ನೋಡಿ..
ಯಾವುದೇ  ಹೊಸದಾಗಿ ಶುರುವಾದ ವ್ಯವಹಾರದಲ್ಲಿ...
ಸಂಬಂಧಗಳಲ್ಲಿ ನಯವಾದ ನಡೆ.... 
ಮೃದುವಾದ ಮಾತು...
ಹಿತವಾದ ನಗು ಸಾಮಾನ್ಯ...
ಒಳೊಗೊಳಗೆ ಬೆಟ್ಟದಷ್ಟು ಸಂಶಯವಿದ್ದರೂ.. ಹೊರಗಡೆ  ನಗು ತೋರಿಸುತ್ತಾರೆ...

ಇವರು ಹಾಗೆ ಮಾಡಿಲ್ಲ.....

ಇವರು  ತೀರಾ  ಕೆಟ್ಟವರಿರಬೇಕು...
ಅಥವಾ...
ತುಂಬಾ ನೇರ ನುಡಿಯ  ...
ಸ್ವಚ್ಛ ಹೃದಯದ ಒಳ್ಳೆಯವರಿರ ಬೇಕು..."

ನನಗೂ ಹೌದೆನಿಸಿತು...
ಒಂದೆರಡು ದಿನ  ಇವರನ್ನು ನೋಡಿ... ಇಷ್ಟವಾಗದಿದ್ದರೆ...
"ನಿಮ್ಮ ಕೆಲಸ ಬೇಡ" ಅಂತ ಬಿಟ್ಟು ಬಿಡೋಣ ಅಂದು ಕೊಂಡೆ...


ಆ ದಿನಗಳಲ್ಲಿ  ನನ್ನ ಬಳಿ  ಕೆಲಸ ಕಡಿಮೆ ಇತ್ತು...
ಆರ್ಥಿಕ ಹಿಂಜರಿತದ  ದಿನಗಳು ಅವು...
 ನನ್ನ ಬಳಿ  ನಿತ್ಯ ಕೆಲಸ ಮಾಡುವ ಕೆಲಸಗಾರರಿಗೆ ಕೆಲಸ ಕೊಡಲೇ ಬೇಕಾದಂಥಹ ..
ಅನಿವಾರ್ಯ ಸ್ಥಿತಿ ಇತ್ತು...

ತಾಳ್ಮೆ, ಸಂಯಮಗಳನ್ನು   ಪರಿಸ್ಥಿತಿ ಕಲಿಸಿಬಿಡುತ್ತದೆ...


ಮಾರನೆಯ ದಿನ ಮತ್ತೆ ಸೈಟಿಗೆ ಹೋದೆ...

ನನ್ನನ್ನು ನೋಡಿ ಮತ್ತೆ ಕೆಂಡಾ ಮಂಡಲವಾದರು..  !!

ಹೆಗಡೆಯವರೇ... ???.
ನಿಮ್ಮ ಕೆಲಸಗಾರರು ಏನು ತಿಂತಾರೆ.. ? ?
ಅನ್ನ ತಿಂತಾರ್ರೋ...?
 ಹೊಲಸು ತಿಂತಾರ್ರೋ..?"

" ಏನಾಯ್ತು ಸರ್...?"

" ಇವತ್ತು ಬೆಳಿಗ್ಗೆ ಅರ್ಧ ಗಂಟೆ ತಡವಾಗಿ ಬಂದಿದ್ದಾರೆ..!!
ಇವರೇನು ಮನುಷ್ಯರೋ...?..
ರಾಕ್ಷಸರೋ...?.. 
ನಾನು ನಿಮಗೆ ಕೊಡುತ್ತಿರುವದು ಹುಣಸೆ ಬಿಜ ಅಂದುಕೊಂಡಿದ್ದೀರೋ.....  ಹೇಗೆ..?
ನೀವು ಏನು ತಿಂತ್ತಿರ್ರಿ.... ಮಾರಾಯ್ರೇ..?.. !!.."

ಏರಿದ ಧ್ವನಿಯಲ್ಲಿ...
ಹೊಸತಾಗಿ  .. 
ಫ್ರೆಷ್ ಆಗಿ ಬಯ್ಗುಳ ಶುರು ಮಾಡಿದರು...

ಅಕ್ಕಪಕ್ಕದ ಮನೆಯವರೂ ಇಣುಕಿ ನೋಡಲು ಶುರು ಮಾಡಿದರು...

ಇವತ್ತಿನ ಜಗಳವಾದರೂ....  ಯಶಸ್ವಿಯಾಗ ಬಹುದೇ ಅನ್ನುವಂಥಹ ಕುತೂಹಲ...!!

ನಾನೂ ಸ್ವಲ್ಪ ಹೊತ್ತು ನೋಡಿದೆ... ಇವರ ಸೌಂಡ್ ಕಡಿಮೆ ಆಗಲಿಲ್ಲ..
ಕೋಪ ಬಂತು....
ನಾನೂ ಏರಿದ ಧ್ವನಿಯಲ್ಲಿ  ಕೂಗಾಡಿದೆ...

" ಏನ್ .. ಸಾರ್..?...
ಈ ಕೆಲಸ ಅವರಿಗೇ.. ಗುತ್ತಿಗೆ ಕೊಟ್ಟಿದ್ದೇನೆ,,,
ಅವರು ಎಷ್ಟು ಗಂಟೆಗೆ ಬಂದ್ರೆ ನನಗೇನು...? 
ಜಲ್ದಿ ಮುಗಿಸಿದರೆ ಅವರಿಗೆ ಲಾಭ...
ತಡವಾಗಿ ಬಂದ್ರೆ ನಿಮಗೇನೂ  ನಷ್ಟ ಇಲ್ಲ...
....ಡ..ಡಾ..ಡಾ.....!!.
....ಡಿ... ಡೀ... ಡಿ...!!...."

ಅಂತ  ಜೋರಾಗಿ ಧ್ವನಿ  ಏರಿಸಿದೆ...!

ಇಷ್ಟು ಕೂಗುವಾಗ  ನನ್ನ ಧ್ವನಿ ಕಂಪಿಸಿತು... 
ಬೆವರಿಳಿಯಿತು...
ರೂಢಿ ಇಲ್ಲವಲ್ಲ...!

ಈಗ ಅವರಿಗೆ ಸಮಾಧಾನ ವಾಯಿತು...

"ಓಹೋ... !!
ಹೀಗೋ...!
ಸರಿ ಬಿಡಿ ನಮಗೇನು...?

ಬನ್ನಿ .... ಒಂದು ಟೀ ಕುಡಿದು ಬರೋಣ...!!"

ಅಂತ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಹೋದರು  !!

ಕ್ರಮೇಣ ಇದೆಲ್ಲ ಮಾಮೂಲಿಯಾಗಿ ಹೋಯ್ತು...

ಅವರು ಕೂಗಾಡುವದು...
ಅವರ ಸಾಮಾಧಾನಕ್ಕಾಗಿ ನಾನೂ ಕೂಗುವದು...!
ನಂತರ ಟೀ ಕುಡಿಯಲ್ಲಿಕ್ಕೆ ಹೋಗುವದು...!!

ಅಕ್ಕಪಕ್ಕದ ಮನೆಯವರೂ ಇಣುಕಿ ನೋಡುವದನ್ನು  ಬಿಟ್ಟು ಬಿಟ್ಟರು....!

ಕೊನೆ ಕೊನೆಗೆ  ಅವರು ಕೂಗಾಡದಿದ್ದರೆ ನನಗೆ  ಒಂಥರಾ ಕಸಿವಿಸಿ  ಆಗುತ್ತಿತ್ತು...
ಏನೋ ಕಳೆದುಕೊಂಡವರ ಹಾಗೆ...
ಆಗ ಅವರಿಗೆ ಫೋನ್ ಮಾಡಿಯಾದರೂ ಕೇಳೀ ಬಿಡುತ್ತಿದ್ದೆ..

"ಏನ್ ಸಾರ್... ಆರೋಗ್ಯ ಸರಿ ಇಲ್ಲವಾ..?" 
ಅಂತ... !!

ನಮ್ಮ ಮನೆಯಲ್ಲೂ ಕೆಲವೊಮ್ಮೆ ನನ್ನ  ಅನ್ಯ ಮನಸ್ಕತೆಯನ್ನು ನೋಡಿ ಕೇಳುತ್ತಿದ್ದರು...
"ಏನ್ರಿ ಒಂಥರಾ ಇದ್ದೀರಿ...
ಮನೆ ಮಾಲಿಕರು ಭೇಟಿ ಆಗಲಿಲ್ವಾ..?...!"


ಮಾಡಿದ ಕೆಲಸದ ಬಿಲ್ಲಿನ ಹಣವನ್ನು  ಒಂದು ದಿನವೂ ತಡವಾಗದಂತೆ  ಕರೆದು ಕೊಡುತ್ತಿದ್ದರು....
ಹಣಕಾಸಿನ ವಿಚಾರದಲ್ಲಿ ಒಂದು ದಿನವೂ  "ಎರಡು" ಮಾತನಾಡಲಿಲ್ಲ !!!

ಕೆಲವೊಮ್ಮೆ ಅವರು ಹೇಳುತ್ತಿದ್ದರು...

"ಹೆಗಡೆಯವರೆ...
ನನ್ನ  ಮನಸ್ಸು  ಕಸದ ತೊಟ್ಟಿಯಲ್ಲ ನೋಡಿ...
ಅಲ್ಲಿ ಬೇಡದ  ಕೊಳಕನ್ನು ಅಲ್ಲಿ ಇಟ್ಟುಕೊಳ್ಳುವ ಸ್ವಭಾವ ನನ್ನದಲ್ಲ...
ಕೊಳಕನ್ನು ಮುಚ್ಚಿಟ್ಟು ಗಲೀಜು ಮಾಡಿಕೊಳ್ಳುವದಿಲ್ಲ...


ಎಲ್ಲವೂ ಮುಕ್ತ... ! 

ನಾನು  ಅಲ್ಲಿ ಸುಗಂಧ ಇಡಲಿಕ್ಕೆ ಆಗದಿದ್ದರೂ..
ಅಲ್ಲಿ  ಕ್ಲೀನ್  ಇಡುತ್ತೇನೆ...

ನನಗೆ ಸಿಟ್ಟು ಬರಲಿ...
ಖುಷಿಯಾಗಲಿ...   ದುಃಖವೇ ಆಗಿರಲಿ...ನಾನು ಹೀಗೆಯೇ ಇರುತ್ತೇನೆ...
ಕೆಲವರಿಗೆ ಕಿರಿಕಿರಿ ಆದರೂ... 
ನಾನು ಆರೋಗ್ಯವಾಗಿದ್ದೇನೆ...!

ನನ್ನ ಸ್ವಭಾವ ಬದಲಿಸ ಬೇಕು ಅಂತ  ಬಹಳ ಪ್ರಯತ್ನ ಮಾಡಿದೆ..
ಆಗಲಿಲ್ಲ ನೋಡಿ...

ಎಪ್ಪತ್ತು ವರ್ಷ ನನಗೆ  ಬೀಪಿಯಿಲ್ಲ.. !
ಸಕ್ಕರೆ ಖಾಯಿಲೆಯಿಲ್ಲ..!!..."

ನನಗೆ ಕುತೂಹಲ ಜಾಸ್ತಿಯಾಯಿತು...

"ಸರ್ ...
 ನಿಮ್ಮ  ಮಡದಿಯವರಿಗೆ  ಅಂಥಹ ಖಾಯಿಲೆ  ಇದೆಯಾ ? "

"ದೇವರ ದಯೆಯಿಂದ ಅವರಿಗೂ ಇಲ್ಲ...
ಅವರೂ  ಮನಸಾ ಇಚ್ಛೇ.. ನನ್ನ ಮೇಲೆ ರೇಗಾಡುತ್ತಾರಲ್ಲ...!!
ನಮ್ಮ ಮನೆಯಲ್ಲಿ ಪ್ರಜಾಪ್ರಭುತ್ವವಿದೆ ಸ್ವಾಮಿ..!!.."

ನನಗೆ ಅಬ್ಭಾ ಅನಿಸಿತು  !!

ಇದೆಲ್ಲ  ಸರಿ...
ಅವರ  ಮನೆಯ ಗೃಹಪ್ರವೇಶದ ದಿನ ಹತ್ತಿರ ಬಂತು...

"ಹೆಗಡೆಯವರೆ...
ನೀವು.. ನಿಮ್ಮ  ಮನೆಯವರು...
ಮಗನನ್ನೂ...
 ಕರೆದು ಕೊಂಡು  ಗೃಹಪ್ರವೇಶಕ್ಕೆ ಬರಲೇ.. ಬೇಕು..."

ನನಗೆ ಪಿಕಲಾಟಕ್ಕೆ ಶುರುವಾಯಿತು...!!

ಗೃಹಪ್ರವೇಶಕ್ಕೆ  ತುಂಬಾ ಜನ ಬಂದಿರುತ್ತಾರೆ...
ಹೆಂಡತಿ....!
ಮಗ... !
ಎಲ್ಲರ ಎದುರಿಗೆ  "ಏನು ತಿಂತ್ತೀರ್ರಿ.. ಮಾರಾಯ್ರೆ..?" ಅಂತ ಕೂಗಾಡಿ  ಬಿಟ್ಟರೆ..??

ಏನು ಮಾಡಲಿ...?..?



( "ನೀವು.. ಏನು ತಿನ್ತ್ತಿರ್ರಿ.. ಮಾರಾಯ್ರೇ .??... "
ಮೊದಲ ಭಾಗವನ್ನು  ಪ್ರಕಟಿಸಿದ...
ಬಳಗಕ್ಕೆ  ಧನ್ಯವಾದಗಳು...)


ಎಲ್ಲರಿಗೂ...


ಬೆಕಿ ಬ್ಬ" ....
  
ಶುಭಾಶಯಗಳು... !