ಈ ತಣ್ಣನೆಯ ಯಲ್ಲಾಪುರದಲ್ಲಿ ಉಳಿಯುವದೆಲ್ಲಿ ?......
ಛಳಿಗಾಲ....
ಸಾಯಂಕಾಲ ಬೇರೆ ಆಗಿತ್ತು...
ಮರುದಿನ ..
ಮುಂಜಾನೆ ಇಬ್ಬನಿ ಬೀಳುವ ಹೊತ್ತು..
ನಾಡಿನ ಅತ್ಯಂತ ಸುಂದರ ..
"ಸಾತೊಡ್ಡಿ ಜಲಪಾತವನ್ನು" ನೋಡುವ ಕಾತುರ...!
ಗೆಳೆಯ ದಿಗ್ವಾಸ ಮತ್ತು ನಾನು ಇಬ್ಬರೇ ಇದ್ದಿದ್ದೆವು...
ಗೆಳೆಯರೊಬ್ಬರಿಗೆ ಫೋನ್ ಮಾಡಿ ...
" ಒಳ್ಳೆಯ ಹೊಟೆಲ್" ಬಗೆಗೆ ವಿಚಾರಿಸಿದೆವು..
ಅವರು ಹೇಳಿದ ಹೊಟೆಲ್ ಒಳಗೆ ಬಂದೆವು..
"ಒಂದು ...
ಡಬಲ್ ಬೆಡ್ ರೂಮ್ ಬೇಕಾಗಿತ್ತು... ಇದೆಯಾ ?"
ದಿಗ್ವಾಸ್ ಕೇಳಿದ...
ಹೊಟೆಲ್ ಮ್ಯಾನೇಜರ್ ನಮ್ಮತ್ತ ಕಣ್ಣೆತ್ತಿ ನೋಡಲೂ ಇಲ್ಲ..
ಹೆಂಡತಿ ಹತ್ತಿರ ...
ಮುಖ.. ಮುಸುಡಿ ಇಲ್ಲದೆ ಬಯ್ಯಿಸಿಕೊಂಡ...
ಹರಳೆಣ್ಣೆ ಕುಡಿದವನ ಮುಖ ಮಾಡಿಕೊಂಡು ಹೇಳಿದ..
"ಇದೆ..."
"ಎಷ್ಟು...?"
" ನಾನೂರಾ... ಐವತ್ತು..."
ನಾನು ಕಿಸೆಗೆ ಕೈ ಹಾಕುವಷ್ಟರಲ್ಲಿ ದಿಗ್ವಾಸನಿಗೆ ಹಣ ಕೊಟ್ಟಾಗಿತ್ತು..
" ಬೆಳಿಗ್ಗೆ ಐದು ಗಂಟೆಗೆ ಬಿಸಿನೀರು ಸಿಗುತ್ತದಾ ?.. ."
ಹರಳೆಣ್ಣೆಯವ ನನ್ನ ಹೊಟ್ಟೆಯನ್ನೇ ದಿಟ್ಟಿಸಿ ನೋಡತೊಡಗಿದ...
ಈ ಹೊಟ್ಟೆ ಹೊತ್ತುಕೊಂಡು ...
ಬೆಳಿಗ್ಗೆ ಐದು ಗಂಟೆಯ ವಿಷಯ ಮಾತಾಡ್ತಾ ಇದ್ದಾನಲ್ಲಾ...
ಅಂತ ಆಶ್ಚರ್ಯ ಆಗಿರಬಹುದು...
"ನೋಡೋಣ... ಬಿಡಿ...
ಬೆಳಗಾಗಲಿ..."
ಆತ ಅತ್ಯಂತ ನಿರ್ವಿಕಾರ ಭಾವನೆಯಿಂದ ಉತ್ತರಿಸಿದ...
ರಿಜಿಸ್ಟರ್ ಬುಕ್ಕಿನಲ್ಲಿ ...
ನಮ್ಮ ವಿಳಾಸ ಬರೆದುಕೊಂಡದ್ದೂ ಆಯ್ತು...
ಮ್ಯಾನೇಜರ್ ಸುಮ್ಮನೇ ಇದ್ದ.. ಏನನ್ನೂ ಹೇಳ್ತಾನೇ.. ಇಲ್ಲ... !
"ಸ್ವಾಮಿ ರೂಮ್ ಎಲ್ಲಿದೆ ?"
ದಿಗ್ವಾಸ ಎಚ್ಚರಿಸಿದ...
ಎಲ್ಲಿ ಹೋದ್ಯೋ...
ಹರಕ್ ಚಡ್ಡಿ... ಬಾರಲೇ.. ಇಲ್ಲಿ..."
ಒಬ್ಬ ಹುಡುಗ ಓಡೋಡಿ... ಬಂದ..
ಅವನ ಚಡ್ಡಿ ಸರಿ ಇತ್ತು..
"ಇವರಿಗೆ ....
ಅಲ್ಲಿ ಲಾಸ್ಟ್ ರೂಮ್ ತೋರಿಸೊ....."
ಹರಕು ಚಡ್ಡಿ ಮುಂದೆ ಸಾಗಿದ..
ನಾವು ಹಿಂಬಾಲಿಸಿದೆವು...
ಸ್ವಲ್ಪ ದೂರ ಹೋದ ಮೇಲೆ ...
ಹರಕು ಚಡ್ಡಿ ತಿರುಗಿ ನಿಂತು ....
ಒಂಥರಾ ಮಾಡಿ ನನ್ನನ್ನೇ ನೋಡತೊಡಗಿದ.. .
ಕಣ್ಣಲ್ಲಿ ಏನೋ ಅನುಮಾನ.... !
ನನಗೆ ಕಸಿವಿಸಿ ಆಯ್ತು...
" ನಿಮಗೆ "ಗುರಿ" ಇದೆಯಾ...?..."
ಹರಕು ಚಡ್ಡಿ ಗುಂಡು ಹೊಡೆದ ಹಾಗೆ ಪ್ರಶ್ನೆ ಕೇಳಿದ...
ನನಗೆ ಆಶ್ಚರ್ಯ.. !
"ಯಾಕೋ...? .."
"ನಿಮ್ಮನ್ನು ನೋಡಿದ್ರೆ ...
"ಗುರಿ" ಇದ್ದವರ ಹಾಗೆ ಕಾಣಿಸೋದಿಲ್ಲ..."
"ಏನು ಗುರಿ ಮಾರಾಯಾ ?
ಹೊಟೆಲ್ಲಿನಲ್ಲಿ ಉಳಿಯಲಿಕ್ಕೆ ಯಾವ ಗುರಿ ಬೇಕು ..?"
"ಅಲ್ಲಾ...
ಬೇಜಾರು ಮಾಡ್ಕೋ ಬೇಡೀ...
ಮೊದಲೇ ಹೇಳಿಬಿಡ್ತೇನೆ...
ಗುರಿ ಇದ್ದರೆ ಮಾತ್ರ ಆ ರೂಮಿನಲ್ಲಿರಿ...
ಇಲ್ಲಾ ಅಂದ್ರೆ ಬೇರೆ ರೂಮ್ ಮಾಡಿ.. !!... "
ದಿಗ್ವಾಸ ತಲೆ ಕೆರೆದು ಕೊಂಡ..!
ಹರಕು ಚಡ್ಡಿ...
ರೂಮಿನ ಬಾಗಿಲು ತೆಗೆದು ...
ನನ್ನನ್ನು ಟಾಯ್ಲೆಟ್ಟಿನ ಬಳಿ ಕರೆದುಕೊಂಡು ಹೋದ...
ಟಾಯ್ಲೆಟ್ಟಿನ ಬಾಗಿಲಿಗೆ ಭುಜ ಕೊಟ್ಟು ...
ಕೈ ಹಾಕಿ ...
ಬಾಗಿಲನ್ನು ಕಷ್ಟಪಟ್ಟು ಮೇಲೆ ಎತ್ತಿದ..
ಪಕ್ಕಕ್ಕೆ ಸರಿಸಿದ ...
ಸೀತಾ ಕಲ್ಯಾಣದಲ್ಲಿ ಶ್ರೀರಾಮಚಂದ್ರ ಶಿವಧನಸ್ಸು ಎತ್ತಿದ ಹಾಗೆ...
"ಈ ಬಾಗಿಲು ...
ಸ್ವಲ್ಪ ಹೀಗೆ ಇದೇರ್ರೀ... !
ಪೇಟೆ ಹೆಣ್ಣು ಮಕ್ಕಳ ಬ್ಲೌಸ್ ಇದ್ದ ಹಾಗೆ...
ಕೆಳಗೆ ಬಿದ್ದು ಹೋಗಿರ್ತದೆ...
ಆಗಾಗ ಮೇಲೆ ಎತ್ತುತ್ತಾ ಇರಬೇಕು.. "
"ಇಲ್ಲಿ ನೋಡ್ರಿ...
ಇದು ನಮ್ ಹೊಟೆಲ್ ಸಂಡಾಸು...."
ಅದು ತುಂಬಾ ಹಳೆಯ ಕಾಲದ ಭಾರತೀಯ ಮಾದರಿ ಪ್ಯಾನ್....
ನೆಲಕ್ಕೆ ಕುಳಿತು ..
ಉಪಯೋಗಿಸುವಂಥಾದ್ದು...
ಬಹಳ ಸಣ್ಣದಿತ್ತು...
ಉದ್ದ..
ಅಗಲ..
ಎತ್ತರ.. ಎಲ್ಲ ರೀತಿಯ ಅಳತೆಗಳಲ್ಲೂ ಚಿಕ್ಕದಾಗಿತ್ತು...
"ವಿಷಯ ಏನು ಗೊತ್ತುಂಟಾ ?
ದೊಡ್ಡ ...
ದೊಡ್ಡ ಸಕ್ರೆ ಮೂಟೆಯಂಥಹ ..
ಹೊಟ್ಟೆಯವರು ಬಂದು ಬಿಡ್ತಾರೆ....
ದೇವರಾಣೆ ಮಾಡಿ ಹೇಳ್ತೇನೆ.. !
ಅವರಿಗೆ ಗುರಿ ಇರೋದಿಲ್ಲ....
ಮಾಡುವದನ್ನು
ಸರಿಯಾದ ಜಾಗದಲ್ಲಿ ಮಾಡುವದಿಲ್ಲ....!
ಏನೇನು ತಿಂದಿರ್ತಾರೋ... !
ಯಾರ್ಯಾರದ್ದೋ ... ಹೊಲಸುಗಳು... !
ಮರುದಿನ ...
ನಾನು ಕ್ಲೀನ್ ಮಾಡಿ ತೊಳೆಯ ಬೇಕು...
ನನ್ನ ಹಣೆ ಬರಹ ನೋಡಿ ಮಾರಾಯ್ರೆ... ! "
ನನಗೆ ಗಾಭರಿ ಆಯ್ತು..!
ಹೊಟ್ಟೆ ನೋಡಿಕೊಂಡೆ..!
"ನಿಮ್ಮದು ...
ಇನ್ನೂ ಸಕ್ರೆ ಮೂಟೆ ಆಗಿಲ್ಲ ಬಿಡಿ...
ಯಾವುದಕ್ಕೂ ಗುರಿ ಇದೆಯಾ ಅಂತ ...
ಒಂದುಸಾರಿ...
ಕೂತ್ಕೊಂಡು ನೋಡ್ಕೋ ಬಿಡಿ... !...
ಬಾಗಿಲು ಹಾಕ್ಕೋತಿರಾ ?.. "
ಯಾರೋ ಕಿಸಕ್ಕನೆ ನಕ್ಕಾಂತಾಯಿತು...
ಹಿಂದೆ ತಿರುಗಿ ನೋಡಿದೆ.. !
ದಿಗ್ವಾಸ ಬಿದ್ದೂ.. ಬಿದ್ದೂ ನಗುತ್ತಿದ್ದ...