ನಾನು ಬಹಳ ಲೆಕ್ಕಾಚಾರದ ವ್ಯಕ್ತಿ...
ಇದು ನನ್ನಪ್ಪನಿಂದ ಬಂದ ಬಳುವಳಿ...
ಪ್ರತಿಯೊಂದನ್ನೂ...
ವಿಚಾರ ಮಾಡಿ.. ಪ್ರಮಾಣಿಸಿ... ನಿರ್ಧಾರ ತೆಗೆದುಕೊಳ್ಳುತ್ತೇನೆ...
ಅಪ್ಪನಿಗೂ ನನ್ನ ಮೇಲೆ ಭರವಸೆ...
ಈ ಸಾರಿ ಊರಿಗೆ ಹೋದಾಗ ಅಪ್ಪ ಕೇಳಿದ್ದ..
"ಮಗಳೆ..
ನಿನಗೀಗ ಮದುವೆ ವಯಸ್ಸು...
ಒಳ್ಳೆಯ ಸಂಬಂಧಗಳು ಬರುತ್ತಿವೆ. ....
ಮದುವೆಯಾಗಿಬಿಡು..."
"ಇಲ್ಲಪ್ಪ...
ಇದೀಗ ತಾನೆ ನೌಕರಿ ಸೇರಿದ್ದೇನೆ..
ಈಗ ಕಾಲ ಬದಲಾಗಿದೆಯಪ್ಪ.. ಇನ್ನೂ ಒಂದೆರಡು ವರ್ಷ ಬಿಟ್ಟು ಮದುವೆ.."
"ನೋಡಮ್ಮ..
ಯಾವ ಯಾವ ವಯಸ್ಸಿಗೆ ಏನಾಗ ಬೇಕೋ.. ಅದು ಆಗಬೇಕು..
ನಮ್ಮ ಹಿರಿಯರು ಬಹಳ ಬುದ್ಧಿವಂತರು..
ಗ್ರಹಸ್ಥಾಶ್ರಮ ಅಂತ ಹೇಳಿದ್ದಾರೆ..
ದೇಹಕ್ಕೆ.. ಮನಸ್ಸಿಗೆ ಬೇಕಿದ್ದಾಗಲೇ ಮದುವೆ ಆಗಬೇಕು....
ದೇಹಕ್ಕೆ ಸ್ವಲ್ಪ ವಯಸ್ಸಾದ ಮೇಲೆ ಮನಸ್ಸಿಗೆ ಹೊಂದಾಣಿಕೆ ಮಾಡಿಕೊಳ್ಳುವದು ಕಷ್ಟವಾಗ ಬಹುದು....
ಕಾಲ ಎಷ್ಟೇ ಬದಲಾದರೂ..
ದೇಹ.. ಮನಸ್ಸು ಅದೇ ಇರುತ್ತದೆಯಮ್ಮ...
ನಿನ್ನ ಮನಸ್ಸಲ್ಲಿ ಯಾರದರೂ ಇದ್ದಾರೇನಮ್ಮ?"
"ಖಂಡಿತ ಇಲ್ಲಪ್ಪ.."
"ಮಗಳೇ...
ನನ್ನ ಸ್ನೇಹಿತರೊಬ್ಬರ ಮಗ ಪಟ್ಟಣದಲ್ಲಿ ಬಿಸಿನೆಸ್ ಮಾಡ್ತಾ ಇದ್ದಾನೆ..
ಒಳ್ಳೆ ಹುಡುಗ... ಚಟ ಇಲ್ಲ.."
ಅಪ್ಪಾ..
ದಯವಿಟ್ಟು ಪರಿಚಯದವರಲ್ಲಿ ಸಂಬಂಧ ಬೇಡ.."
"ಪುಟ್ಟಾ...
ನಿನಗಿಂತ ಹೆಚ್ಚು ಬದುಕು ನೋಡಿದ್ದೇನೆ..
ವ್ಯವಹಾರವನ್ನು ಅಪರಿಚಿತರಲ್ಲಿ ಮಾಡ ಬೇಕು...
ಸಂಬಂಧವನ್ನು ಗೊತ್ತಿದ್ದವರಲ್ಲಿ ಮಾಡಬೇಕು..
ಹುಡುಗ ಚೆನ್ನಾಗಿದ್ದಾನೆ..
ಅವನ .. ಮನೆತನ ಒಳ್ಳೆಯದು.. ನೋಡಮ್ಮ.."
"ಅಪ್ಪಾ... ದಯವಿಟ್ಟು ಬೇಡ..."
ನನ್ನಪ್ಪ ನನಗೆ ಜಾಸ್ತಿ ಒತ್ತಾಯ ಮಾಡುವದಿಲ್ಲ...
ಅವರು... ನನ್ನ ವಿಚಾರಗಳಿಗೆ..
ಕಾರ್ಯಗಳಿಗೆ ಬಹಳ ಬೆಂಬಲ ಕೊಡುತ್ತಾರೆ..
ನಾನು ಅವರ ಹೆಮ್ಮೆ...
ಯಾಕೆ.... ಇಷ್ಟೆಲ್ಲ ಪೀಠಿಕೆ...?
ಇತ್ತೀಚೆಗೆ ನನಗೊಬ್ಬ ಗೆಳೆಯ ಸಿಕ್ಕಿದ್ದಾನೆ....
ಆರ್ಕುಟ್ಟಿನಲ್ಲಿ ಪರಿಚಯವಾಯಿತು...
ಫೇಸ್ ಬುಕ್ಕಿಗೂ ಬಂದ...
ಬಜ್ ನಲ್ಲಿ ವಿಚಾರ ವಿನಿಮಯವಾಯಿತು....
ಅಲ್ಲಿ ಅವನು ವ್ಯಕ್ತ ಪಡಿಸುವ ವಿಚಾರಗಳು... ಅಭಿಪ್ರಾಯಗಳು ಸೊಗಸಾಗಿರುತ್ತಿದ್ದವು..
ನನ್ನ ಪ್ರತಿಕ್ರಿಯೆಗಳಿಗೂ ಮಹತ್ವ ಕೊಡುತ್ತಿದ್ದ...
ಕೆಲವು ಕಡೆ ಖಾರವಾಗಿ... ನಿಷ್ಠೂರವಾಗಿಯೂ ಇರುತ್ತಿದ್ದ...
ನನಗೆ ಅವನ "ಮುಕ್ತ" ವಿಚಾರಗಳು ಇಷ್ಟವಾಗುತ್ತಿತ್ತು...
ಅವನಿಗೂ.. ನನಗೂ ಮೇಲ್ ನಲ್ಲಿ ಪುಟಗಟ್ಟಲೆ ವಿಚಾರಗಳ ಚರ್ಚೆ.. ವಿನಿಮಯ ನಡೆಯುತ್ತಿತ್ತು...
ಇಷ್ಟವಾಗತೊಡಗಿದ...
ನೋಡಲು ಚಂದವಾಗಿಯೂ ಇದ್ದ....
ಅವನ ಬಗ್ಗೆಯೇ ವಿಚಾರ ಮಾಡತೊಡಗಿದೆ...
ನನ್ನ ಮೊಬೈಲ್ ನಂಬರ್ ಕೊಟ್ಟೆ...
ಮೆಸೆಜುಗಳು...!
ಆಗಾಗ ಮಾತುಗಳು....!
ಇತ್ತೀಚೆಗೆ ಪ್ರತಿ ಕ್ಷಣವೂ ನನ್ನ ಮನದಲ್ಲಿ ಬರತೊಡಗಿದ...
ಆಗಾಗ ಕಾಫೀ ಡೆ ನಲ್ಲಿ ಭೇಟಿಯೂ ಆದೆವು...
ನನಗೆ ಆತನಲ್ಲಿ ಇಷ್ಟವಾಗಿದ್ದು ಎರಡೇ ಸಂಗತಿಗಳು...
ನಯ, ವಿನಯ... ನೇರ ನುಡಿಗಳು...ಬೇಲಿಯೇ ಇಲ್ಲದ ಮುಕ್ತ ಮಾತುಕತೆಗಳು..
ನನ್ನನ್ನೇ... ಆಸಕ್ತಿಯಿಂದ ನೋಡುವ ಆತನ ಕಣ್ಣುಗಳು....!
ಒಂದು ದಿನ ಆತನ ಸಂಬಳದ ವಿವರದ ಸ್ಲಿಪ್ ಸಿಕ್ಕಿತು...
ಕೈತುಂಬ ಸಂಬಳ...!
ಅವನೊಡನೆ ಮಾತನಾಡುತ್ತ ...
ಅವನ ವಯಕ್ತಿಕ ವಿಷಯಗಳೂ ಗೊತ್ತಾಗ ತೊಡಗಿದವು..
ಒಬ್ಬನೇ ಮಗ... ತಂದೆ, ತಾಯಿ ಇರುವದು ಊರಲ್ಲಿ..
ಒಟ್ಟಿನಲ್ಲಿ ಆತ ಎಲ್ಲ ಹೆಣ್ಣುಮಕ್ಕಳು ಬಯಸುವ ಹುಡುಗ...!
ನನ್ನ ಮನದ ಆಸೆಯನ್ನು ಕೇಳಿ ಬಿಡಲಾ?
ನನ್ನ ಮನಸ್ಸು ಒಪ್ಪಲಿಲ್ಲ...
ನಮ್ಮೊಳಗಿನ ಕೆಲವು ನಮ್ಮ ಬಣ್ಣಗಳನ್ನು ಬದಲಾಯಿಸುವದು ಬಹಳ ಕಷ್ಟ...
ನಾನು ತುಂಬ ಲೆಕ್ಕಾಚಾರದ ವ್ಯಕ್ತಿ...
ನನ್ನ ಬುದ್ಧಿವಂತಿಕೆಯ ಬಗೆಗೆ ನನಗೆ ಅತೀಯಾದ ಆತ್ಮ ವಿಶ್ವಾಸ.. ನನಗಿದೆ..
ನೋಡೋಣ...
ಅವನಿಗೂ ನನ್ನಲ್ಲಿ ಆಸಕ್ತಿಯಿದೆ...
ಅವನಿಂದಲೇ "ಪ್ರಸ್ತಾಪ" ಬರಲಿ ಎಂದು ಕಾಯ ತೊಡಗಿದೆ...
ಒಂದು ದಿನ ಆತ ನನ್ನನ್ನು "ಒಬೆರಾಯ್ ಪ್ಯಾಲೇಸ್" ಗೆ ಕರೆದ...
"ಯಾಕೋ ... ಮನಸ್ಸಿಗೆ ಬೇಸರವಾಗಿದೆ..
ನಿನ್ನೊಂದಿಗೆ ಇರಬೇಕು ಅನ್ನಿಸ್ತ ಇದೆ... ಇಲ್ಲ ಎನ್ನಬೇಡ...
ದಯವಿಟ್ಟು ಬಾ..."
ಒಬೆರಾಯ್ ಪ್ಯಾಲೇಸ್... !! ಪಂಚತಾರ ಹೊಟೆಲ್... !
ಎಲ್ಲೋ ಸಿನೇಮಾಗಳಲ್ಲಿ ನೋಡಿದ್ದೆ...
ನಾನು ಒಪ್ಪಿಕೊಂಡೆ...
"ಒಬೆರಾಯ್ ಪ್ಯಾಲೇಸಿನ" ಒಳಗಡೆ.. ಹೋಗುವಾಗ ನನ್ನೆದೆ ಢವ ಢವ.. ಹೊಡೆದುಕೊಳ್ಳುತ್ತಿತ್ತು...
ಅಲ್ಲಿ ರೆಸ್ಟಾರೆಂಟ್ ವಿಭಾಗದಲ್ಲಿ ಒಂದು ಮೂಲೆಯಲ್ಲಿ ಕುಳಿತೆವು...
ಅಲ್ಲಲ್ಲಿ ಜನರು ಮೆಲ್ಲಗೆ ಮೆಲುಧ್ವನಿಯಲ್ಲಿ ಮಾತನಾಡುತ್ತಿದ್ದರು...
ನಾವು ದಿನ ನಿತ್ಯ ಹೋಗುವಂಥಹ ಹೊಟೆಲ್ಲುಗಳಿಲ್ಲಿರುವಂಥಹ ..
ಗದ್ದಲ, ಗೌಜಿ ಇಲ್ಲವೇ ಇಲ್ಲ...!
ಎಲ್ಲರೂ ತಮ್ಮ ಪಾಡಿಗೆ ತಾವಿದ್ದರು...
ಮಂದವಾದ ಬೆಳಕು...
ಅಲ್ಲಲ್ಲಿ ಒಬ್ಬರೊನೊಬ್ಬರು ಅಪ್ಪಿಕೊಂಡು ಕುಳಿತ ಪ್ರೇಮಿಗಳು....
ಹಿತವಾಗಿ ಕೇಳಿ ಬರುತ್ತಿರುವ ಪ್ರೇಮ ಗೀತೆಗಳು...
ವಾತಾವರಣ ಹಿತವಾಗಿತ್ತು... ... ಮೂಡು ಬದಲಾಗುವಂತಿತ್ತು..
ಆತ ನನ್ನ ಕಣ್ಣುಗಳನ್ನು ಪ್ರೀತಿಯಿಂದ ತುಂಬಿಕೊಳ್ಳುತ್ತ ...ಕೇಳಿದ...
"ನಿನ್ನನ್ನು ಇಲ್ಲಿಗೆ ಬಾ ಅಂತ ಕರೆದದ್ದು ಯಾಕೆ ಗೊತ್ತಾ?"
ನನಗೆ ಸಣ್ಣಗೆ ಹೆದರಿಕೆ... !
ಅಂಜಿಕೆ...!
ಕರ್ಚೀಫ್ ತೆಗೆದು ಅಂಗೈ ಒರೆಸಿಕೊಂಡೆ...
"ಯಾಕೆ..?"
" ನನ್ನಮ್ಮನಿಗೂ...
ನಿನಗೂ ಮಾತನಾಡಿಸ ಬೇಕಿತ್ತು"
"ಹೌದಾ?.. !!"
ನಾನು ಅವನ ಕಣ್ಣುಗಳನ್ನು ನೋಡುವ ಪ್ರಯತ್ನ ಮಾಡಿದೆ...
ಈತನನ್ನು ನಂಬ ಬಹುದು...
ಹಿರಿಯೊರಡನೆ ಪ್ರಸ್ತಾಪಿಸಿ...
ಅವರ ಒಪ್ಪಿಗೆ ಪಡೆದು ನಂತರ ನನ್ನ ಬಳಿ ಮಾತಾಡುತ್ತಿದ್ದಾನೆ...!
ಚಂದದೊಡನೆ ಒಳ್ಳೆಯತನವೂ ಸೇರಿದೆ ಅನಿಸ್ತು ನನ್ನ ಲೆಕ್ಕಾಚಾರದ ಮನಸು...
ಆತ ತನ್ನ ಅಮ್ಮನೊಡನೆ ಮಾತನಾಡಿದ..
ನಂತರ ಅವನ ಅಮ್ಮನೊಡನೆ ನಾನೂ ಮಾತನಾಡಿದೆ..
"ನೋಡಮ್ಮ...
ನಿನ್ನ ಬಗೆಗೆ ಎಲ್ಲವನ್ನೂ ಹೇಳಿದ್ದಾನೆ...
ನಿನ್ನ ಫೋಟೊವನ್ನೂ ತೋರಿಸಿದ್ದಾನೆ..
ನೀನು ಮುದ್ದಾಗಿ ಮಹಾಲಕ್ಷ್ಮಿಯಂತೆ ಇದ್ದಿಯಮ್ಮ...
ನನಗೆ ನಿನ್ನಂಥಹ ಸೊಸೆ ಬೇಕಿತ್ತು...
ಆದರೆ ನಮ್ಮ ಭಾಷೆ... ಆಹಾರ ಊಟಗಳು ಬೇರೆ ಬೇರೆ...
ನಿನ್ನ ಮದುವೆ ಆದರೆ ನಮ್ಮ ಹುಡುಗ ತುಂಬಾ ಅದೃಷ್ಟವಂತ ಕಣಮ್ಮಾ..."
ನನಗೆ ನಾಚಿಕೆಯಾಯಿತು...
ಮುಜುಗರವೂ ಆಯಿತು...
ಹುಡುಗನ ಬಗೆಗೆ ಅಭಿಮಾನ ಜಾಸ್ತಿಯಾಯಿತು...
ಹುಡುಗ ನನ್ನ ಕಣ್ಣುಗಳನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದ....
ಹೆಣ್ಣು ಬಯಸುವಂಥಹ ನೋಟ ಅದು... !
ಆತನ ಕೈಗಳು ನನ್ನ ಕೈ ಮುಟ್ಟಿದವು....!
ಮೈ ರೋಮಾಂಚನವಾಯಿತು...!
ಆತ ಇನ್ನೂ ಹತ್ತಿರ ಬಂದ... !
ಸಾವಕಾಶವಾಗಿ ನನ್ನ ಭುಜ ಬಳಸಿದ...!
ನಾನು ಪ್ರತಿರೋಧ ಮಾಡಬೇಕಾ ?
ಆಗಲಿಲ್ಲ...
ಆತ ಸಾವಕಾಶವಾಗಿ ಮೈಯೆಲ್ಲ ಸವರಿದ...!
ಮೈ ಜುಮ್ ಎಂದಿತು....!
ಮತ್ತೆ ನನ್ನ ಅಂಗೈ ಬೆವರತೊಡಗಿತು...
ಆತ ಸಾವಕಾಶವಾಗಿ ತನ್ನ ಕೆನ್ನೆಯನ್ನು ನನ್ನ ಕೆನ್ನೆಯ ಬಳಿ ತಂದ...!
ಬಿಸಿಯುಸಿರು...!
ಒಂಥರಾ ಉನ್ಮಾದ ಹೆಚ್ಚಿಸಿತು...
ಇದು ಪ್ರೀತಿನಾ ?
ನಾನು ಕಣ್ಮುಚ್ಚಿದೆ...!
ಆ ಕ್ಷಣದಲ್ಲಿ ನಾನು ಎಲ್ಲೋ ತೇಲಿ ಹೋದ ಅನುಭವ....!
ಸಣ್ಣ ಧ್ವನಿಯಲ್ಲಿ ಬರುತ್ತಿರುವ ಹಾಡು ಬದಲಾಯಿತು...
ನನಗೆ ಎಚ್ಚರವಾದಂತಾಯಿತು..
ಆತ ನನ್ನನ್ನು ಬಿಟ್ಟು ಸ್ವಲ್ಪ ದೂರ ಕುಳಿತುಕೊಂಡ.....
"ಸ್ಸಾರಿ..."
ಅಂದ...
ಇದರಲ್ಲಿ ಅವನ ತಪ್ಪು ಇರಲಿಲ್ಲ..
ಆ ವಾತಾವರಣ...
ಸಂದರ್ಭ ಹಾಗಿತ್ತು.. !
ನಾನು ತಲೆ ತಗ್ಗಿಸಿ ಕುಳಿತೆ...
ಮೈ ಕಂಪನ ಇನ್ನೂ ಇಳಿದಿರಲಿಲ್ಲ..
"ಒಂದು ನಿಮಿಷ...
ಇಲ್ಲೇ ವಾಷ್ ರೂಮಿಗೆ ಹೋಗಿ ಬರ್ತೇನೆ.. "
ಆತ ಎದ್ದು ಹೋದ...
ನನಗೀಗ ಪೂರ್ತಿ ಎಚ್ಚರವಾಯಿತು...
ನಾನು ತಪ್ಪು ಮಾಡಿಬಿಟ್ಟೆನಾ?
ಹೇಗಿದ್ದರೂ ಈತನನ್ನೇ ಮದುವೆಯಾಗುವದು...
ನನ್ನ ಅಪ್ಪ.. ಅಮ್ಮ ನನ್ನ ಅಭಿಪ್ರಾಯಕ್ಕೆ ಇಲ್ಲ ಅಂತ ಹೇಳೋದಿಲ್ಲ..
ಅವರನ್ನು ಒಪ್ಪಿಸಲು ತೊಂದರೆಯಾಗುವದಿಲ್ಲ ಅನಿಸಿತು...
ಅಷ್ಟರಲ್ಲಿ ಫೋನ್ ಶಬ್ಧಮಾಡಿತು...
ಅದು ನನ್ನ ಹುಡುಗನ ಮೊಬೈಲ್....
ಆತ ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಮರೆತು ಹೋಗಿದ್ದ...!
ಹೇಗಿದ್ದರೂ ನನ್ನ ಹುಡುಗ... !
ನನ್ನ ಬಾಳ ಸಂಗಾತಿ..!
ನಾನು ಸಹಜವಾಗಿ ಕಾಲ್ ತೆಗೆದು ಕೊಂಡೆ...
ಅಲ್ಲಿಂದ ಬೇರೆ ಯಾರೋ ಹುಡುಗನೊಬ್ಬ ಮಾತನಾಡುತ್ತಿದ್ದ...
"ಹೇ..ಯ್... !
ನೀನು ಎದ್ದು ಬಂದಿದ್ದು ನೋಡಿದೆ...
ನಾನೂ ಹೊಟೆಲ್ ಹೊರಗಿನಿಂದ ಮಾತಾಡ್ತ ಇದ್ದೇನೆ.....
ನಿಮ್ಮಿಬ್ಬರ ವಿಡಿಯೋ..ಶೂಟಿಂಗ್ ಮಾಡಿದ್ದು ಚೆನ್ನಾಗಿ ಬಂದಿದೆ...!
ನಿನೊಬ್ಬ ಅದ್ಭುತ ನಟ ಕಣೋ...!
ನೀನು ಕಿಸ್ ಮಾಡಿದ ಸನ್ನೀವೇಶ ...!!
ತುಂಬಾ ಸೊಗಸಾಗಿದೆ ಬಂದಿದೆ ಕಣೊ..... !! ~.. .
ಆ ಹುಡುಗಿ ದೊಡ್ಡ ಪೆದ್ದು ...
ಅವಳಿಗೆ ಏನೂ ಗೊತ್ತೇ ಆಗಿಲ್ಲ... ಹ ಹ್ಹಾ.. !!"
( ಉತ್ತಮ ಪ್ರತಿಕ್ರಿಯೆಗಳಿವೆ.. ದಯವಿಟ್ಟು ನೋಡಿ....)