Thursday, August 25, 2011

ಅಜ್ಜಾ.. ನೀನು ಗಾಂಧಿ ತಾತ ಅಲ್ಲ...!


ಪ್ರೀತಿಯ ಅಜ್ಜಾ..


ನಿನ್ನ ಕಂಡರೆ ಯಾಕಿಷ್ಟು ಅಕ್ಕರೆ ಹುಟ್ಟಿದೆ..?
ಗೊತ್ತಿಲ್ಲ...


ನನ್ನ ಮಗನಿಗೆ ..
"ನೀನು ಭಗತ್ ಸಿಂಗ್ ನಂತಾಗು...
ಸುಭಾಸ್ ಚಂದ್ರನಂತಾಗು.. ಗಾಂಧಿತಾತನಂತಾಗು.." ಅಂತೆಲ್ಲ ಹೇಳುತ್ತಿದ್ದೆ..


ಸ್ವಲ್ಪ ದೊಡ್ಡವನಾದ ಹಾಗೆ ಅವರ ಬಗೆಗಿನ ಪುಸ್ತಕವನ್ನು ತಂದು ಕೊಡುತ್ತಿದ್ದೆ..


ಒಂದು ದಿನ ನನ್ನ ಮಗ ನನ್ನನ್ನು ಕೇಳಿದ..


"ಅಪ್ಪಾ..
ಭಗತ್ ಸಿಂಗ್..ಗಾಂಧಿಯವರೆಲ್ಲ ಹಳಬರು...
ನೀನೂ ಸಹ ನೋಡಿಲ್ಲ...


ಈಗಿನವರು ಯಾರೂ ಇಲ್ಲವಾ ಒಳ್ಳೆಯ ನಾಯಕರು  ?


ನಮ್ಮದೇಶದ ಪ್ರಧಾನ ಮಂತ್ರಿಗಳು..
ವಿರೋಧ ಪಕ್ಷದ ನಾಯಕರು... 
ಯಾರೂ ಒಳ್ಳೆಯವರು ಇಲ್ಲವಾ ಅಪ್ಪಾ?"


ಏನು ಹೇಳಲಿ...?
ನಾನು ನಿರುತ್ತರನಾಗಿದ್ದೆ..


ನನಗೆ ಈಗ ಉತ್ತರ ಸಿಕ್ಕಿದೆ...!! ಇಷ್ಟು ದಿನ ಎಲ್ಲಿದ್ದೆ  ಅಜ್ಜಾ...?


ನನ್ನ ಮುದ್ದು ಅಜ್ಜಾ...


ಯಾಕೆ ಉಪವಾಸ ಮಾಡುತ್ತೀಯಾ...?


ಈ ದೇಶದ ಬಗೆಗಾ? ..
ನಮ್ಮ ಮುಂದಿನ ಭವಿಷ್ಯದ ಬಗೆಗಾ?....


ಬೇಡ ಅಜ್ಜಾ...


ನಾವು ಈಗ ಸಂತೃಪ್ತಿಯಿಂದ ಇದ್ದೇವೆ..
ಈಗಿನ ವಾತಾವರಣಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ಹೊಂದಿಕೊಂಡಿದ್ದೇವೆ...


ಬೇಡ ಅಜ್ಜಾ.. ನಮಗಾಗಿ ಉಪವಾಸ ಮಾಡಬೇಡ...


ಹಿಂದೆ ಗಾಂಧಿತಾತ ಉಪವಾಸ ಸತ್ಯಾಗ್ರಹ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು...


ಅಜ್ಜಾ.. 
ನೀನು ಗಾಂಧಿ ತಾತ ಅಲ್ಲ...! 


ನಿನ್ನನ್ನು "ಗಾಂಧಿತಾತನಂತೆ"  ನೋಡುವ ಯೋಗ್ಯತೆಯೂ ನಮಗಿಲ್ಲ..
ನೋಡುವದೂ ಇಲ್ಲ..!

ನನ್ನ ಮುದ್ದು ಪುಟಾಣಿ ಅಜ್ಜ..

ನಮ್ಮನ್ನೆಲ್ಲ ಒಡೆದು ಬಿಟ್ಟಿದ್ದಾರೆ ..

ನಮ್ಮ ಜಾತಿ ...
ಭಾಷೆ ಹೆಸರಲ್ಲಿ... ಮತ ಧರ್ಮದ..
ಸಿದ್ಧಾಂತದ  ಹೆಸರಲ್ಲಿ ಒಡೆದು ಚೂರು ಚೂರಾಗಿ ಹೋಗಿದ್ದೇವೆ..


ಅಯ್ಯೋ ಅಜ್ಜಾ...
ನಿನ್ನ ತತ್ವಗಳ,  ನೀತಿಗಳ .. ದಿನಾಂಕ  ಮುಗಿದಿದೆ..
ಮುಂಬೈ ಸಿನೆಮಾಗಳ ...
ಅಲ್ಲಿನ ಥಳುಕಿನ ನಟರ ದೇಶ ಭಕ್ತಿ....
ಸಾಹಸ ನಮಗಿಷ್ಟ.. ಅದರ ಬಗೆಗೆ ನಮ್ಮ ಚಿಂತನೆ...!

ಮತ್ತೆ ದೇಶದ ಹೆಸರಲ್ಲಿ ನಮ್ಮನ್ನು ಸೇರಿಸುವ ವ್ಯರ್ಥ ಪ್ರಯತ್ನ ಮಾಡಬೇಡ..


ನಾವೆಲ್ಲಾ ಒಡೆದ ಮನಸ್ಸಿನವರು... ಮತ್ತೆ ಒಂದಾಗುವ ಆಸೆ ನಮಗಿಲ್ಲ....

ಒಡೆದ ಮನಸ್ಸುಗಳಲ್ಲಿ... ...
ಒಂದು ತರಹದ ವಿಲಕ್ಷಣ ಸಂತೋಷವನ್ನು ಅನುಭವಿಸುತ್ತಿದ್ದೇವೆ...

ನಮ್ಮ ಖುಷಿಗೆ  ಅಡ್ಡಿ ಪಡಿಸಬೇಡ...

ಆ ಗಾಂಧಿತಾತನಿಗೆ  ಒಂದು ಪಕ್ಷವಿತ್ತು..
ಹಣವಿರುವವರ ಬೆಂಬಲವಿತ್ತು..
ದೇಶದ ತುಂಬಾ ಒಂದು ಸಂಘಟನೆ ಇತ್ತು....


ಮುಂದಿನ ಪ್ರಧಾನ ಮಂತ್ರಿ ಯಾರಾಗ ಬಹುದೆಂದರೆ ಆ ತಾತನ ಬಳಿ ಉತ್ತರ ಸಿದ್ಧವಿತ್ತು..


ಮುದ್ದು ಅಜ್ಜಾ...


ನಿನ್ನ ಬಳಿ ಏನಿದೆ?...


ನಿನ್ನ ಹತ್ತಿರ ಮುಂದಿನ ....
"ಪ್ರಧಾನ ಮಂತ್ರಿ ಸ್ಥಾನಕ್ಕೆ ಯೋಗ್ಯ ರಾಜಕೀಯ  ಉಮೇದುವಾರ " ಇದ್ದಾನೆಯೇ..?..

ನನ್ನ ಪುಟ್ಟು ಅಜ್ಜಾ ಯಾವುದೋ ಭ್ರಮೆ ಬೇಡ...


ಸತ್ಯ.., 
ಅಹಿಂಸೆಯೆಲ್ಲ ಇಂದಿನ ಭಾರತಕ್ಕೆ ಅಲ್ಲ...!
ಇಂದಿನ ಸರಕಾರಕ್ಕೂ ಅಲ್ಲ...


ಅಜ್ಜಾ...


ನಿನಗೆ ಗೊತ್ತಿಲ್ಲದಂತೆ ನಿನ್ನ ಮಕ್ಕಳು.. ಮೊಮ್ಮಕ್ಕಳು...
ನಾವೆಲ್ಲಾ.. ಬದಲಾಗಿಬಿಟ್ಟಿದ್ದೇವೆ..


ಸರಿಯಾಗಲಾರದಷ್ಟು ಬದಲಾಗಿದ್ದೇವೆ..


ನೋಡುತ್ತಾ ಇರು..
ನಿನಗೂ ಒಂದು ಜಾತಿ.. ಬಣ್ಣ ಬಳಿದು..
ನಿನ್ನನ್ನೂ ....
ಒಂದು ಸಮುದಾಯದ ಬಾವುಟವನ್ನಾಗಿ ಮಾಡಿಬಿಡುತ್ತೇವೆ..


ಅಜ್ಜಾ..
ನಮಗೆ ಯಾರಿಗೂ ನಾಚಿಕೆಯಿಲ್ಲ..!


ಇಷ್ಟೆಲ್ಲ ಜನ ಬಂದರು..
ಆಂದೋಲನ ಮಾಡಿದರು ಅಂತ ಭ್ರಮೆಯಲ್ಲಿ ನೀನಿರಬೇಡ..!

ಈ ಜನರಾ...?
ಟಿವಿಯಲ್ಲಿ ತಮ್ಮ ಮುಖ ಬರುತ್ತದೆ ಅಂತ ಬಂದವರೇ ಜಾಸ್ತಿ...!

ಅಜ್ಜಾ..


ನಿನ್ನ ಬೆಂಬಲಕ್ಕೆ ನಿಂತ ಎಲ್ಲ ಮಾಧ್ಯಮದವರು...
ನಿನ್ನೆದುರಿಗೆ ಸೇರಿ ಕೂಗುವ ಜನ...
ಎಲ್ಲರೂ... ಆತ್ಮವಂಚನೆ ಮಾಡಿಕೊಳ್ಳುವವರು..


ಅಜ್ಜಾ...
ನಿನ್ನೆ ನಿನಗೆ "ಜೈಕಾರ ಹಾಕಿ" ..
ಇಂದು ನಗರ ಸಭೆಗೆ ಹೋಗಿ ನಾನು  ಕಾಸು  ಕೊಟ್ಟು ಬಂದೆ...


ಕಾಸು  ಕೊಡುವ ನನಗೂ..
ತೆಗೆದುಕೊಂಡ ಅವನಿಗೂ ...
ಸ್ವಲ್ಪವೂ ಮುಜುಗರವೂ.. ನಾಚಿಕೆಯೂ ಆಗಲಿಲ್ಲ..
ರೂಢಿಯಾಗಿಬಿಟ್ಟಿದೆ...


ನಮ್ಮ "ಆತ್ಮಸಾಕ್ಷಿಯನ್ನು"  ಸಾಯಿಸಿ...
ಇಬ್ಬರೂ ನಗುತ್ತ .. ಸ್ನೇಹಿತರಂತೆ ಇದ್ದೇವೆ..!


ಇಷ್ಟು ದೊಡ್ಡ ಪಟ್ಟಣದಲ್ಲಿ ಹೆಂಡತಿ ಮಕ್ಕಳೊಂದಿಗೆ ಬದುಕಲು ಇದು ಅಗತ್ಯ...


ಪ್ರೀತಿಯ ಅಜ್ಜಾ .... ಬೇಜಾರಾಗಬೇಡ..


ಇನ್ನು ಸರಕಾರದ ಜೊತೆ ನಿನ್ನ ಮಾತುಕತೆ..!


ತಾವು ಕುಳಿತ ಹಣ್ಣಿನ ಮರದ ರೆಂಭೆಯನ್ನು ...
ಯಾರಾದರೂ ಕಡಿಯುತ್ತಾರೆಯೇ ಅಜ್ಜಾ...?


ಅಜ್ಜಾ..
ನಮ್ಮ ಪ್ರತಿನಿಧಿಗಳು ನಾಟಕದವರು...!


ಒಪ್ಪಿಕೊಂಡಂತೆ ಮಾಡಿದರೂ... ರಂಗೋಲಿ ಒಳಗೆ ನುಸಿಯಲು ಜಾಗ ಇಟ್ಟುಕೊಂಡಿರುತ್ತಾರೆ...


ಅಜ್ಜಾ...
ನಮ್ಮ ದೇಶದ ಬ್ರಷ್ಟಾಚಾರ  ವಿದೇಶಗಳಿಂದಲೂ ಬೆಂಬಲಿತ...


ಅನೇಕ ಅಂತರರಾಷ್ಟ್ರೀಯ ಕಂಪೆನಿಗಳು ..
ನಮ್ಮ ದೇಶವನ್ನು ಉದ್ಧಾರ ಮಾಡಲು ಬಂದಿವೆ..


ನಮ್ಮ ದೇಶದ ಅನೇಕ ಗಣ್ಯರು ..!
ಅವರ ಮಕ್ಕಳು ಅದರಲ್ಲಿ ಕೆಲಸ ಮಾಡುತ್ತಾರೆ..

ನಿನ್ನ ಬಿಲ್ಲನ್ನು ಪಾಸು ಮಾಡುತ್ತೇವೆ ಎನ್ನುವ...
ಎಲ್ಲ ಪಕ್ಷದ ಎಂಪಿಗಳಿಗೆ..
ಮಂತ್ರಿಗಳಿಗೆ....
ಸಂಸತ್ತಿನಲ್ಲಿ ಬಿಲ್ಲು ಪಾಸುಮಾಡುವಾಗ...
ಅವರಿಗೆ ತಿಂದ ಲಂಚದ "ಆತ್ಮಸಾಕ್ಷಿಗೆ " ಹೇಗೆ ಮೋಸ ಮಾಡಿಕೊಳ್ಳಲು ಸಾಧ್ಯ...?

ಬಹುರಾಷ್ಟ್ರೀಯ ಕಂಪೆನಿಗಳ  ಎಂಜಲನ್ನು ..
ನಾವು ಗೌರವದಿಂದ ತಿನ್ನುತ್ತಿದ್ದೇವೆ..
ಆ ಅತಿಥಿಗಳಿಗೆ ನಾವು ಹೇಗೆ ಅಗೌರವ ತೋರಿಸಲು ಸಾಧ್ಯ...?


ಈ ಕಾನೂನು ಬಂದರೆ ಎಷ್ಟೊಂದು ಕುಟುಂಬದ ಯಜಮಾನರು ಜೈಲಿನಲ್ಲಿರಬೇಕಾಗುತ್ತದೆ..?


ಸ್ವಲ್ಪ ಯೋಚಿಸು ಅಜ್ಜಾ...ಅವರೂ ನಿನ್ನ ಮಕ್ಕಳು..!


ಅಜ್ಜಾ..
ಈಗ ಸಂಧಾನ ಮಾತುಕತೆ ಅಂತೆಲ್ಲ ನಾಟಕ ನಡೆಯುತ್ತಿದೆಯಲ್ಲ..


ತೆಪ್ಪಗೆ ಒಪ್ಪಿಕೊಂಡುಬಿಡು..
ಈ ಉಪವಾಸ.. ಅಹಿಂಸೆ.. ಸತ್ಯಾಗ್ರಹ ನಮಗೆ ಅಗತ್ಯ ಇಲ್ಲ..


ಪ್ರತಿ  ನಿತ್ಯ "ನೂರಾ ಇಪ್ಪತ್ತು ಕೋಟಿ" ಜನಕ್ಕೆ  ಹೂವಿಡುವವರಿಗೆ..
ಇನ್ನೊಂದು ಹೂ ಇಡುವದು ಕಷ್ಟವೆ?


ಅಜ್ಜಾ..


ಇದುವರೆಗೆ ಯಾರೂ ಇಡದ ...
ಒಂದು ಚಂದದ ಹೂವು ನಿನಗಿಡುತ್ತಿದ್ದಾರೆ..!


ಇಂದು ಅಲ್ಲದಿದ್ದರೆ ನಾಳೆ ಕೊಟ್ಟೆ..ಕೊಡುತ್ತಾರೆ...!


ಇಟ್ಟುಕೊ..!!


ನಾವು ಇಟ್ಟುಕೊಂಡಿದ್ದೇವೆ... ನೀನೂ ಸಹಿಸಿಕೊ..
ಕ್ರಮೇಣ ರೂಢಿಯಾಗುತ್ತದೆ...!


ಅಜ್ಜಾ..


ಇದೆಲ್ಲ ಬಿಟ್ಟು ನಮ್ಮನೆಗೆ ಬಾ..


ಶೇಂಗಾವನ್ನು ನೀರಿನಲ್ಲಿ ಬೇಯಿಸಿ ...
ಉಪ್ಪು ಖಾರ ಹಾಕಿ ಬೇಯಿಸಿಡುತ್ತೇನೆ..


ಅದನ್ನು ತಿನ್ನುತ್ತ..
ನಿನ್ನ ಹಿಂದಿನ ಸಾಹಸದ ಕಥೆಗಳನ್ನು ಹೇಳು..


ನಿನಗೊಂದು ಜಾತಿ ಪಟ್ಟ ಕಟ್ಟಿ..
ಬಣ್ಣ ಬಳಿದು..
ನಿನ್ನನ್ನು...
ಒಂದು ಬಾವುಟವನ್ನಾಗಿ ನೋಡಲು ಮನಸ್ಸು ಒಪ್ಪುತ್ತಿಲ್ಲ..


ಕರಳು ಕಿವುಚಿದಂತಾಗುತ್ತದೆ..


ಬಂದು ಬಿಡು ಅಜ್ಜಾ...!


ಕಾಯುತ್ತಾ ಇರ್ತೆನೆ...

Monday, August 15, 2011

ಒಂದು ಅಸಾಧ್ಯವನ್ನು "ಸಾಧ್ಯ"ವಾಗಿಸುವ ಪ್ರಯತ್ನ......


ಕಳೆದ ವರ್ಷ ನಾನು ಸಿಂಗಾಪುರಕ್ಕೆ ಹೋಗಿದ್ದೆ..
ನನ್ನ ತಮ್ಮ, ನಾದಿನಿ ತುಂಬಾ ಬಲವಂತ ಮಾಡಿದ್ದರು....


ತುಂಬಾ ದಿನಗಳಾಗಿದ್ದವು ಎಲ್ಲಿಯೂ ಹೋಗದೆ..


ಸಿಂಗಾಪುರಕ್ಕೆ ಹೋಗಿ ಅಲ್ಲಿನ ಅಭಿವೃದ್ಧಿಯನ್ನು ಕಂಡು ಮೂಕನಾಗಿದ್ದೆ..


ನನ್ನ ತಮ್ಮ ನನಗೆ ಅಲ್ಲಿನ ಇತಿಹಾಸ ವಿವರಿಸಿದ..


"ಅಣ್ಣಾ..
ಈ ದೇಶ ಕೆಲವು ದಶಕಗಳ ಹಿಂದೆ ಜೂಜುಕೋರರ..
ಗಾಂಜಾ.. ಮಾದಕ ವಸ್ತು ಸೇವಿಸುವವರ ಅಡ್ಡೆಯಾಗಿತ್ತು..
ಈ ದೇಶವನ್ನು ಈ ಸ್ಥಿತಿಗೆ ತಂದವರು "ಲೀ" ಅಂತ..
ಹಗಲೂ ರಾತ್ರಿ ಕಷ್ಟಪಟ್ಟು..
ಕೆಲವು ನಿರ್ದಾಕ್ಷಿಣ್ಯ ನಿರ್ಧಾರಗಳನ್ನು ತೆಗೆದುಕೊಂಡು ಸಿಂಗಾಪುರವನ್ನು ಈ ರಿತಿ ಅಭಿವೃದ್ಧಿ ಮಾಡಿದ್ದಾರೆ..."


ಜುರಾಂಗ್ ಅಂತ ಒಂದು ದ್ವೀಪವನ್ನು ಕಟ್ಟಿದ್ದಾರೆ..
ಮಣ್ಣನ್ನು ಬೇರೆಕಡೆಯಿಂದ ತಂದು.. 
ಸಮುದ್ರದಲ್ಲಿ ಹಾಕಿ,  ದ್ವೀಪವನ್ನು ನಿರ್ಮಿಸಿ..
ಅದನ್ನು..
ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿ ಮಾಡಿದ್ದಾರೆ...


ದೇಶದ ಜನಕ್ಕೆ ಅಗತ್ಯವಾದ ನೀರೂ ಕೂಡ ಅಲ್ಲಿಲ್ಲ... !
ಪಕ್ಕದ ದೇಶ "ಮಲೇಶಿಯಾದಿಂದ ನೀರನ್ನು ಆಮದು ಮಾಡಿಕೊಳ್ಳುತ್ತಾರೆ..


ಇಂಡೋನೇಶಿಯಾದಿಂದ ಕಚ್ಛಾ ತೈಲವನ್ನು ತಂದು..
ಇಲ್ಲಿನ ರಿಫೈನರಿಯಲ್ಲಿ ಶುದ್ಧಿಗೊಳಿಸಿ..
ಬಹಳಷ್ಟು "ಏಷಿಯಾದ ದೇಶಗಳಿಗೆ" ತೈಲ ರಪ್ತು ಮಾಡುತ್ತಾರೆ...!!


ನಾವು ಹುಚ್ಚರು.. !!
ನಮ್ಮ ಕಬ್ಬಿಣದ ಅದಿರನ್ನು ರಫ್ತು ಮಾಡಿ..
ಕಬ್ಬಿಣದ ಬೆಲೆ ಸಾಮಾನ್ಯ ಜನರ ಕೈಗೆ ಎಟುಕದ ಹಾಗೆ ಮಾಡಿದ್ದೇವೆ...


ನಮ್ಮದೇಶದಲ್ಲಿ ಎಲ್ಲವೂ ಇದೆ..
ಆದರೆ ನಾವೇಕೆ ಹೀಗೆ?


ನೂರು ಕೋಟಿ ಭಾರತೀಯರಲ್ಲಿ ಒಬ್ಬ "ಲೀ" ನಂಥಹ ವ್ಯಕ್ತಿ ಯಾಕೆ ಹುಟ್ಟಿಲ್ಲ...?
ದೇಶವನ್ನಾಳುವ ನೂರಾರು ಧುರಿಣರಲ್ಲಿ ಒಬ್ಬ "ಪ್ರಾಮಾಣಿಕ" ಯಾಕೆ ಇಲ್ಲಾ?


ನಮ್ಮ ಇತಿಹಾಸಗಳು...
ಪುರಾಣಗಳು ಹೇಳುವ  ಸತ್ಯ ಚಾರಿತ್ರದ  ಕಥೆಗಳು..
ಘಟನೆಗಳು ಸುಳ್ಳೇ...?


ಲಾಲ್ ಬಹಾದ್ದೂರ್ ಶಾಸ್ತ್ರಿ,   ಸುಭಾಸ್ ಚಂದ್ರ ಭೋಸ್.. 
ಗಾಂಧಿ ತಾತ.., ಗುರ್ಜಾರಿ ಲಾಲ್ ನಂದಾ...
ಇವರೆಲ್ಲ ನಿಜವಾಗಿಯೂ ಇದ್ದಿದ್ದರಾ?


ನಾವು ಯಾಕೆ ಹೀಗಿದ್ದೇವೆ...?


ಯಾಕೆ ನಾವು ಹೀಗಾಗಿದ್ದೇವೆ ?


ನಾವು ನಮ್ಮ ಆತ್ಮಸಾಕ್ಷಿಯನ್ನೇ ಕಳೆದುಕೊಂಡು ಬದುಕಿದ್ದೇವಾ...?
ಯಾಕೆ ಇಂಥಹ ಬದುಕು  ?


ಮಂತ್ರಿಗಳ ವಿರುದ್ಧ.. ಹಗರಣದ ವಿರುದ್ಧ ನಾವು ಮಾತನಾಡುತ್ತೇವೆ..
ನಿಜ ..
ಕೇವಲ ಮಾತನಾಡುತ್ತೇವೆ..


ಇದು ನಮ್ಮ ಕೈಯಲ್ಲಿ ಏನೂ ಮಾಡಲಾಗುವದಿಲ್ಲ ಅಂತ ಹಳಿದುಕೊಂಡು ಸುಮ್ಮನಾಗಿಬಿಡುತ್ತೇವೆ..


ಚುನಾವಣೆ ಬಂದಾಗ "ನಮ್ಮ ಜಾತಿ.. ಧರ್ಮದ.. ಭಾಷೆಯ" ಪ್ರಲೋಭನೆಗೆ ಒಳಗಾಗಿ "ಮತ" ಚಲಾಯಿಸುತ್ತೇವೆ...


ಇಂದು ನಮ್ಮ ದೇಶದ ಪ್ರಧಾನ ಮಂತ್ರಿ ಕೆಂಪುಕೋಟೆಯಿಂದ ಭಾಷಣ ಮಾಡುತ್ತಾರೆ..


"ಉಪವಾಸ.. ಸತ್ಯಾಗ್ರಹಗಳಿಂದ"...
 ಬ್ರಷ್ಟಾಚಾರ ನಿರೋಧ ಕಾನೂನು" ತರಲಾಗುವದಿಲ್ಲ..."


ಆಯ್ತು...
ನೀವೇ ಮಾಡಿರಪ್ಪಾ...!!


ಹಲ್ಲಿಲ್ಲದ .. ಯಾರಿಗೂ ಪ್ರಯೋಜನವಾಗದ..
ನಿಷ್ಪ್ರಯೋಜನ "ಲೋಕಪಾಲ" ಬಿಲ್ಲು ಯಾಕೆ ಮಂಡಿಸಿದ್ದೀರಿ..?


ಇಂಥಹ ಬಿಲ್ಲು ಮಾಡುವದಿದ್ದರೆ..
"ಅಣ್ಣಾ ಹಜಾರೆ"ಯವರ ತಂಡವನ್ನು  "ಮಸೂದೆ" ಮಾಡಲು ಯಾಕೆ ಕರೆದಿದ್ದೀರಿ..?
ಯಾಕೆ ಮೂರು ತಿಂಗಳ ಸಮಯವನ್ನು ಹಾಳು ಮಾಡಿದ್ದೀರಿ ?


ನಿಮಗೆ "ಇಚ್ಛಾ ಶಕ್ತಿ" ಇದ್ದಿದ್ದರೆ.. ಅದೇ ಮಸೂದೆಯನ್ನು ಲೋಕಸಭೆಯಲ್ಲಿ ಯಾಕೆ ಮಂಡಿಸಲಿಲ್ಲ..?


ಜನ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ..
ಅಪರೂಪದ ಮಹಾನ್ ವ್ಯಕ್ತಿ "ಬಾಬುರಾವ್ ಕಿಷನ್ ಹಜಾರೆ"


ಇಂಥಹ ವ್ಯಕ್ತಿ ನಿಮಗೆ "ಬ್ರಷ್ಟಾಚಾರಿಯಾಗಿ" ಕಾಣುತ್ತಾನೆಯೆ...?


ಅಣ್ಣಾ ಹಜಾರೆಯವರಿಗೂ ಒಂದು ಬಣ್ಣ ಬಳಿದು ..
ಅವರ ಬಗೆಗೂ ಜನರಲ್ಲಿ ಅನುಮಾನ ತರಲು ಹೊರಟಿದ್ದೀರಾ?
"ಅಣ್ಣಾ ಹಜಾರೆ ಆರೆಸ್ಸಿಗರು.. ಬೀಜೇಪಿಯವರು.. ಕಮ್ಯುನಿಷ್ಟ್ ಬೆಂಬಲಿತರು ಅಂತೆಲ್ಲ ಹೇಳಿ..
ಆಂದೋಲನದ ದಿಕ್ಕು ತಪ್ಪಿಸಲು ಹೊರಟಿದ್ದೀರಾ?


ಛೇ....!!


ಧಿಕ್ಕಾರ ನಿಮ್ಮ ರಾಜಕೀಯಕ್ಕೆ..
ನಿಮ್ಮಂಥಹ "ಮನಸ್ಥಿತಿಗೆ"....


ಗೆಳೆಯರೆ...


ರಾಜಕೀಯದವರನ್ನು, ಅಧಿಕಾರಿಗಳನ್ನು ಬಯ್ಯುವ " ನಾವು " ಸಂಭಾವಿತರೆ?


ನಾವೂ ಕೂಡ ಲಂಚಕೊಟ್ಟಿದ್ದೇವೆ...
ಮನೆ ಕಟ್ಟುವ ಸಂಧರ್ಭದಲ್ಲೋ..
ಡ್ರೈವಿಂಗ್ ಲೈಸನ್ಸ್ ಪಡೆಯುವಾಗಲೋ ಕೊಟ್ಟಿದ್ದೇವೆ...


ನಮ್ಮ ಕೆಲಸ ಜಲ್ದಿಯಾಗಿ ಮುಗಿಯಲಿ ಅಂತಲೂ ಕೊಟ್ಟಿದ್ದೇವೆ...
ಇದೆಲ್ಲ "ಸಹಜ" ಎಂದು ಕೊಟ್ಟಿದ್ದೇವೆ..


ಅದು ಈಗ ನಮ್ಮನ್ನೇ ತಿಂದು ತೇಗುವ ಹಾಗೆ ಬೆಳೆದಿದೆ...


ಇದಕ್ಕೊಂದು ಕಿಡಿ ಹಚ್ಚಿ ...
ಬೆಂಕಿ ಹಚ್ಚಿ ಮುಗಿಸಲೇ ಬೇಕಲ್ಲವೆ?


ಅದಕ್ಕೊಂದು ಕಾಲ ಈಗ ಬಂದಿದೆ...


ನಮಗೊಬ್ಬ "ಗಾಂಧಿ ತಾತ" ಸಿಕ್ಕಿದ್ದಾರೆ..!!


ಅಣ್ಣಾ ಹಜಾರೆ !!!


ಜನ ಲೋಕಪಾಲ ಬಿಲ್ಲು ಜಾರಿಗೆ ಬರುವದು ಅಸಾಧ್ಯ...
ಸತ್ಯ ನಮಗೂ ಗೊತ್ತು..


ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಎಷ್ಟು ಎಂಪಿ ಗಳಾಗಿ ಹೋಗಿದ್ದಾರೆ?
ಎಷ್ಟೊಂದು ಎಮ್ಮೆಲ್ಲೆ ಗಳಾಗಿದ್ದಾರೆ...??


ಅಧಿಕಾರಿವರ್ಗದವರು ... ಇವರೆಲ್ಲ ಸುಮ್ಮನಿರುತ್ತಾರೆಯೇ ?


ಖಂಡಿತ ಇಲ್ಲ...


ಚುನಾವಣೆಯಲ್ಲಿ ಕೋಟಿಗಟ್ಟಲೆ ಖರ್ಚುಮಾಡುವ  ...
ಎಲ್ಲ ರಾಜಕೀಯ ಪಕ್ಷದವರು ಈ ಬಿಲ್ಲನ್ನು ಖಂಡಿತ ಒಪ್ಪುವದಿಲ್ಲ...

ಅಣ್ಣಾ ಹಜಾರೆಯವರ ಈ ಆಂದೋಲವನ್ನು ..
ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿತ್ತುರಾಯೇ ಹೊರತು ಬೆಂಬಲಿಸುವದಿಲ್ಲ...


"ಕಪ್ಪು ಹಣದ" ವಿರುದ್ಧ ಮಾತನಾಡಿದ ಬಾಬಾ ರಾಮದೇವ ಈಗ ಎಲ್ಲಿದ್ದಾರೆ ?


ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ .
ಅವರ  ಸಹಾಯಕರ ವಿರುದ್ಧವೂ ಕೇಸು ಹಾಕಿ...


ಏನೇನೋ ಹುಳುಕು ಎತ್ತುತ್ತ ಆ ಆಂದೋಲನದ ದಿಕ್ಕು ತಪ್ಪಿಸಿದ್ದನ್ನು ಮರೆಯಲು ಸಾಧ್ಯವೇ?


ರಾಮದೇವ ಏನೇ ಇರಬಹುದು...?


ಅವರು ಧ್ವನಿ ಎತ್ತಿದ "ಕಪ್ಪುಹಣ" ವಿಚಾರ ಒಳ್ಳೆಯದಿತ್ತು ಅಲ್ಲವೆ?


ಆದರೆ ಮಧ್ಯರಾತ್ರಿಯಲ್ಲಿ ಅಮಾಯಕರ ಮೇಲೆ ಹಲ್ಲೆ ನಡೇಸಿ ಬಲವಂತವಾಗಿ ಓಡಿಸುವ "ಗಣತಂತ್ರದ" ಸರಕಾರಕ್ಕೆ ಏನನ್ನ ಬೇಕು?


ನಮ್ಮ ತಪ್ಪೂ ಇದೆ...


ನಮಗೆ ಬಾಬಾ ರಾಮದೇವ "ಚೂಡಿದಾರ" ಧರಿಸಿಕೊಂಡು ಓಡಿಹೋಗಿದ್ದು "ಮಾತನಾಡುವ"  ವಿಷಯವಾಗುತ್ತದೆ..!!


" ವಿದೆಶದಲ್ಲಿಟ್ಟ"  ಕಪ್ಪು ಹಣವನ್ನು" ಮರೆತು ಬಿಡುತ್ತೇವೆ...!!


ಅಣ್ಣಾ ಹಜಾರೆಯವರ ಈ ಆಂದೋಲನ ಹೀಗಾಗದಿರಲಿ..


"ಅಣ್ಣಾ ಹಜಾರೆಯವರ " ಈ ಆಂದೋಲನಕ್ಕೆ  ನಾವೇನು ಮಾಡ ಬಹುದು?



ಹಜಾರೆ ತಾತನಿಗೆ ನಾವು ಹೇಗೆ ಬೆಂಬಲ ಕೊಡಬೇಕು...?
ಹೇಗೆ ಕೊಡ ಬಹುದು...?


ನಾವು  ನಮ್ಮ ಸ್ನೇಹಿತರು "ಹದಿನೈದು ಜನ" ಒಂದು ದಿನ ಉಪವಾಸ ಮಾಡಲು ತಯಾರಾಗಿದ್ದೇವೆ...


ನಾವು ಇಲ್ಲಿಯವರೆಗೆ ಲಂಚಕೊಟ್ಟ ಪಾಪಕ್ಕಾಗಿ..
ಪ್ರಾಯಶ್ಚಿತಕ್ಕಾಗಿ ಉಪವಾಸ ಮಾಡೋಣ....


ಒಂದು ಅಸಾಧ್ಯವನ್ನು "ಸಾಧ್ಯ"ವಾಗಿಸುವ ಪ್ರಯತ್ನ ಮಾಡೋಣ ಅಲ್ಲವೇ?...


ಇಂದು ಅಗಸ್ಟ್  ಹದಿನೈದು...


ನಿಮಗೆಲ್ಲ "ಸ್ವಾತಂತ್ರ್ಯೋತ್ಸವದ " ಶುಭಾಶಯಗಳು...


ಇಂದು ರಾತ್ರಿ ಎಂಟು ಗಂಟೆಯಿಂದ  ಒಂಬತ್ತು  ಗಂಟೆಯವರೆಗೆ ಮನೆಯ ಎಲ್ಲ ದೀಪಗಳನ್ನು ಆರಿಸೋಣ...


ಒಳ್ಳೆಯ ನಾಯಕನಿಗಾಗಿ ದೇಶ ಹುಡುಕುತ್ತಿರುವಾಗ..
ಒಬ್ಬ ಅಜ್ಜ ಸಿಕ್ಕಿದ್ದಾನೆ ನಮಗೆ..


ರಾಜಕೀಯ ಹಂಬಲವಿಲ್ಲದ..
ಚಾರಿತ್ರ್ಯವುಳ್ಳ ಹಜಾರಿ ತಾತ ...


ಹಜಾರೆ ತಾತನ ಆಂದೋಲನಕ್ಕೆ ಬೆಂಬಲ ಸೂಚಿಸೋಣ..


ಈ ದೇಶ ನಮ್ಮದು...


ಜೈ ಹೋ !!



ಗೆಳೆಯರೆ...

ರಾಮ ಲಂಕಾಪಟ್ಟಣಕ್ಕೆ ಹೋಗಲೆಂದು ಸಮುದ್ರಕ್ಕೆ ಸೇತುವೆ ಕಟ್ಟುತ್ತಿದ್ದನಂತೆ..
ಆಗ ಇಣಚಿಯೊಂದು ಬಂದು ತನ್ನ ಮೈಯನ್ನು ಒದ್ದೆ ಮಾಡಿಕೊಂಡು ..
ಮರಳಲ್ಲಿ ಹೊರಳಾಡಿ ಸೇತುವೆ ಕಟ್ಟುತ್ತಿದ್ದ ಜಾಗದಲ್ಲಿ ಮರಳನ್ನು ಉದುರಿಸುತ್ತಿತ್ತಂತೆ...

ಅದು "ಅಳಿಲು ಸೇವೆ... !!

ನಾವೂ ಕೂಡ ಮಾಡೋಣವೆ?

ಇದೇ ಬರುವ ಶುಕ್ರವಾರ ಬೆಳಿಗ್ಗೆ ..(19/8/2011)
ಎಂಟು ಗಂಟೆಯಿಂದ ಸಾಯಂಕಾಲ ಎಂಟು ಗಂಟೆಯ ತನಕ..

ಫ್ರೀಡಮ್ ಪಾರ್ಕಿನಲ್ಲಿ ಕುಳಿತ ಹೋರಾಟಗಾರರಿಗೆ ಬೆಂಬಲ ಕೊಟ್ಟು ಬರೋಣ ..

ಏನಂತೀರಿ?..

ನಾನು ಇದುವರೆಗೆ ಉಪವಾಸ ಮಾಡಿಲ್ಲ...
ಎಪ್ಪತ್ತು ನಾಲ್ಕರ ಅಜ್ಜ ಆಮರಣ ಉಪವಾಸ ಮಾಡುತ್ತಿದ್ದಾನೆ ...
ನಮಗಾಗಿ..

ನಮಗೆ ಒಂದು ದಿನ ಇರಲಿಕ್ಕೆ ಆಗೊಲ್ಲವೆ?

ನಾನಂತೂ ಒಂದು ಪ್ರಯತ್ನ ಮಾಡೋಣ ಎಂದುಕೊಂಡಿದ್ದೇನೆ..
ಮೈಯಲ್ಲಿ ಗಟ್ಟಿ ಇರುವವರು ಉಪವಾಸ ಮಾಡುತ್ತಾರೆ...
ಆಗದೆ ಇದ್ದ ಗೆಳೆಯರು ಉಪವಾಸ ಕುಳಿತವರ ಉತ್ಸಾಹ ಕೊಡಲಾದರೂ ಬನ್ನಿ..
ಇದರಲ್ಲಿ ನಾಚಿಕೆಯೇನೂ ಇಲ್ಲ..

ದಯವಿಟ್ಟು ನೀವೂ ಕೂಡ ಬನ್ನಿ...

ನಮ್ಮ ದೇಶದ ಬ್ರಷ್ಟಾಚಾರ ಓಡಿಸುವಲ್ಲಿ ನಮ್ಮ "ಅಳಿಲು ಸೇವೆಯನ್ನು" ಮಾಡಿ ಬರೋಣ...

ಒಂದು ಹೆಮ್ಮೆಯ ಕಾರ್ಯದಲ್ಲಿ ಭಾಗವಹಿಸಿ.. ಧನ್ಯತೆ ಪಡೆಯೋಣ...

ದಯವಿಟ್ಟು ಬನ್ನಿ...

ನಮ್ಮ ಸಂಗಡ ಜನಪ್ರಿಯ ಲೇಖಕ "ಮಣಿಕಾಂತ್" ಕೂಡ ಇರುತ್ತಾರೆ...

ಜೈ ಹೋ !!

ಜೈ ಭಾರತ.. !!!!

Thursday, August 4, 2011

....ಅಗತ್ಯ.. ..


ಬಹಳ ಸಾರಿ ನನಗೆ ಅನ್ನಿಸಿದ್ದುಂಟು..
ನಾನೇಕೆ ಹೀಗೆ..?
ಹೀಗಿರಬಾರದು ಅಂತ ಬಹಳ ಪ್ರಯತ್ನ ಪಟ್ಟೆ.. ಆಗಲಿಲ್ಲ..


ಸ್ವಭಾವ...
ನಮ್ಮೊಳಗಿನ ಬಣ್ಣ ಅದು.. ಬದಲಾಗುವದು ಅಸಾಧ್ಯ...


ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ.. ವಾಸ್ತವವಾದಿ..


ನನ್ನಮ್ಮ.. ಅಪ್ಪ.. ಅಣ್ಣ.. ತಂಗಿ ಎಲ್ಲರೂ ಭಾವಜೀವಿಗಳು..


ನಾನೊಬ್ಬ ಮಾತ್ರ ಹೀಗೆ..


ಹಾಗಂತ ನನಗೇನೂ ಬೇಸರವಿಲ್ಲ...


ಯಾರೋ ನೆಂಟರು ಮನೆಗೆ ಬಂದರು ಅಂತ ಸಂಭ್ರಮ ಪಡಲು ನನ್ನಿಂದ ಸಾಧ್ಯವಾಗುವದಿಲ್ಲ..
ಕಾರಣವಿಲ್ಲದೆ ಯಾರ ಬಳಿಯೂ ಯಾರೂ ನಗುವದಿಲ್ಲ..


ಏನೋ ಕೆಲಸ ಆಗಬೇಕಿರುತ್ತದೆ ಹಾಗಾಗಿ ಹತ್ತಿರ ಬರುತ್ತಾರೆ..ನಗುತ್ತಾರೆ...


ನಾನು ಸಣ್ಣವನಿರುವಾಗ ಗಣೇಶ ಹಬ್ಬ ಬಂದಿತೆಂದು ...
ನನ್ನಮ್ಮ ಒಂದು ತಿಂಗಳಿರುವಾಗಲೇ ಸಂಭ್ರಮ ಪಡುತ್ತಿದ್ದಳು..!


"ಅಮ್ಮಾ..
ದೇವರನ್ನು ತನ್ನ  ಅವಶ್ಯಕತೆಗೆ ಅಂತ ಮನುಷ್ಯನೇ ಹುಟ್ಟಿಸಿದ್ದಾನೆ..
ಗಣಪತಿಯ ಮೂರ್ತಿಯನ್ನು ಮಾಡಿದ ಕಲಾವಿದನನ್ನು ಹೋಗಿ ಕೇಳಮ್ಮ..
ಅದರಲ್ಲಿ ದೇವರಿದ್ದಾನೇಯೇ ಅಂತ..


ಅದು ಕಲಾವಿದನ ಹೊಟ್ಟೆಪಾಡು.. ಮೂರ್ತಿ ಮಾಡಿರುತ್ತಾನೆ..


ಮಣ್ಣನ್ನು ಕಾಲಿನಿಂದ ತುಳಿದು.. ಹದ ಮಾಡಿ.. 
ತನಗೆ "ಹಣ" ಬರುತ್ತದೆಂದು ಮಾಡಿರುತ್ತಾನೆ..


ಅದರಲ್ಲಿ ದೇವರಿದೆ ಎಂದಿದ್ದರೆ.. ಆತ ಮಾರುತ್ತಿದ್ದನೆ?


ಅಮ್ಮಾ.. 
ಈ ಬದುಕಿನಲ್ಲಿ ಎಲ್ಲವೂ.. ಅಗತ್ಯ.. ಅವಶ್ಯಕತೆಗಳೊಡನೆಯ ನಂಟು..
ಮತ್ತೇನಿಲ್ಲ.."


ನನ್ನಮ್ಮ ಗಾಭರಿಯಾದಳು.. 
ಅಪ್ಪನನ್ನು ಕರೆದು "ಇವನ ವಿಚಾರ ಧಾರೆಗಳೇ ಅರ್ಥವಾಗುತ್ತಿಲ್ಲ..
ವಿಚಿತ್ರ ಮಾತುಗಳನ್ನು ಆಡುತ್ತಾನೆ" ಅಂದಿದ್ದಳು..


ನಾನು ವಿಚಿತ್ರವಾಗಿಯೇ ಬೆಳೆದೆ..


ಒಂದು ದಿನ ನನ್ನಮ್ಮ ತೀರಿಕೊಂಡಳು..


ಅಪ್ಪ.. ಅಣ್ಣ.. ತಂಗಿ.. ಎಲ್ಲರೂ ಗೋಳೋ ಅಂತ ಅತ್ತರು...

ನನಗೆ ಅಳು ಬರಲಿಲ್ಲ..


"ದುಃಖವನ್ನು ಹಿಡಿದಿಟ್ಟುಕೊಳ್ಳಬಾರದು.. ಅತ್ತುಬಿಡಬೇಕು..
ನೀನೂ ಅತ್ತು ಬಿಡು..
ಈ ಅಳು.. ಕಣ್ಣೀರು.. ಮನುಷ್ಯನಿಗೆ ದೇವರು ಕೊಟ್ಟ ವರ..
ಅತ್ತರೆ ನಮಗೆ ಗೊತ್ತಾಗದೆ ಸಮಾಧಾನವಾಗುತ್ತದೆ.." 


ಅಂತ ಹಿರಿಯರು ನನಗೆ ಬುದ್ಧಿವಾದ ಹೇಳಿದರು..


"ಅಮ್ಮನ ಹಾರ್ಟಿನಲ್ಲಿ ಬ್ಲಾಕೇಜ್ ಇತ್ತು...
ರಕ್ತವನ್ನು ಪಂಪ್ ಮಾಡಲು ಅಮ್ಮನ ಹೃದಯಕ್ಕೆ ಆಗಲಿಲ್ಲ..
ಉಸಿರಾಟ ನಿಂತಿತು..
ಇದು ಪ್ರಕೃತಿಯ ಸಹಜ ಕ್ರಿಯೆ.. ಅಷ್ಟೇ... " 


ನನ್ನ ಮಾತು ಕೇಳಿ ಅವರೆಲ್ಲ ದಂಗಾದರು..


ನನಗೆ ಅಳು ಬರಲಿಲ್ಲ... ಅಳಲಿಲ್ಲ..


ಕೆಲವು ದಿನಗಳ ನಂತರ ಅಪ್ಪನೂ ತೀರಿಕೊಂಡ...


ನನ್ನಣ್ಣನಿಗೆ ದುಃಖ ತಡೆಯಲಾಗಲಿಲ್ಲ..


"ನಮ್ಮನ್ನು ಹೆತ್ತು.. ಹೊತ್ತು..
ತುತ್ತು ಅನ್ನ ನೀಡಿ.. 
ಮಮತೆಯಿಂದ ಬೆಳೆಸಿದ ಅಪ್ಪ..ಅಮ್ಮ ಇಬ್ಬರೂ ಹೋಗಿಬಿಟ್ಟರಲ್ಲೋ..!
ನಾವು ಅನಾಥರಾಗಿಬಿಟ್ಟೆವು.."


ನಾನು ನನ್ನಣ್ಣನನ್ನು ದಿಟ್ಟಿಸಿದೆ...


"ಅಣ್ಣಾ...
ರಾತ್ರಿಯಲ್ಲಿ..
ಯೌವ್ವನದ ಹುಮ್ಮಸ್ಸಿನಲ್ಲಿ...
ದೇಹದ ತೆವಲಿಗೆ ನಡೆದ.. 
ಹೆಣ್ಣುಗಂಡಿನ ಸಹಜ ಕ್ರಿಯೆಗೆ ಸಾಕ್ಷಿಯಾಗಿ ನಾವು ಹುಟ್ಟಿದ್ದು..


ಇನ್ನು ...
ಮಮತೆ ವಾತ್ಸ್ಯಲ್ಲವೆಲ್ಲ ಬಣ್ಣದ ಮಾತುಗಳು...


ಹುಟ್ಟಿದ ಪುಟ್ಟ ಮರಿಗಳಿಗೆ...
ಏನೂ ತಿಳಿಯದ ಪ್ರಾಣಿ ಪಕ್ಷಿಗಳೇ ಆಹಾರ ತಂದು ನೀಡುತ್ತವೆ..
ಇದು ಸಹಜ ಪ್ರಕೃತಿಯಲ್ಲಿ ನಡೆಯುವಂಥದ್ದು..


ನಮ್ಮ ಅಪ್ಪ ಅಮ್ಮ..
ನಮ್ಮ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡರು.. ಹಾಗಾಗಿ ಪ್ರೀತಿ.. ಮಮತೆ.."


ನಾನು ಸತ್ಯ ಹೇಳುವ ಸಮಯ ಅದಾಗಿರಲಿಲ್ಲ..


ಅಣ್ಣ ನನ್ನನ್ನು ದೂಡಿದ...


"ನೀನೊಬ್ಬ  ಮನುಷ್ಯನಾ..? 
ಥೂ.. ಮನುಷತ್ವವೇ ಇಲ್ಲದ ಕ್ರೂರಿ ನೀನು..
ದೂರ ಹೋಗು.."


ನಾನು ನಮ್ಮವರೊಂದಿಗೆ ಬೆರೆಯಲೇ ಇಲ್ಲ...


ಒಂಟಿತನವೇ ನನಗೆ ಇಷ್ಟವಾಯಿತು...


ನಾನೂ ದೊಡ್ಡವನಾದೆ..


" ಮದುವೆಯಾಗು .. 
ಯಾವ ವಯಸ್ಸಿನಲ್ಲಿ ಏನೇನು ಆಗಬೇಕೋ ಅದು ಆಗಬೇಕು..."


ನನ್ನಣ್ಣ  ಒತ್ತಾಯ ಮಾಡಿದ..


ನನಗೂ ಯೌವ್ವನವಲ್ಲವೇ.. ದೈಹಿಕ ಆಸೆಗಳಿದ್ದವು..


ಹೊರಗಡೆ ಹೋಗಿ ರೋಗ ತಂದುಕೊಳ್ಳುವದು ಬುದ್ಧಿವಂತಿಕೆಯಲ್ಲ...


ಇನ್ನು ನನ್ನ ಊಟ.. ತಿಂಡಿ..
ಈ ಅಣ್ಣ .. ಅತ್ತಿಗೆ ಎಷ್ಟು ದಿನ ಅಂತ ನನ್ನನ್ನು ನೋಡಿಕೊಂಡಾರು?


" ಸರಿ.. ಆಯ್ತಣ್ಣ.."


"ಹುಡುಗಿ ಹೇಗಿರಬೇಕು...?
ನಿನ್ನಿಂದ ಏನಾದರೂ ಬೇಡಿಕೆಗಳಿವೆಯಾ?"


"ಅಣ್ಣಾ..
ಹುಡುಗಿ.. ಹುಡುಗಿಯಂತಿದ್ದರೆ ಸಾಕು..
ಅಡಿಗೆ ಮಾಡಿಕೊಂಡು... 
ನನ್ನ ಬಟ್ಟೆ..ಬರೆ .. ಮನೆಯನ್ನು ನೋಡಿಕೊಂಡರೆ ಸಾಕು..
ಅಂಥಹ ಹುಡುಗಿ ಬಯಸುತ್ತೇನೆ.."


ಅಣ್ಣನ ಮುಖದಲ್ಲಿ ಹುಸಿನಗು ಇತ್ತು...


ಅಣ್ಣ ಬಹಳ ಹುಡುಕಿ.. ಒಂದು ಹುಡುಗಿಯನ್ನು ನಿಶ್ಚಯಿಸಿದ..


ಹುಡುಗಿ ನೋಡಲಿಕ್ಕೆ ಚಂದವಾಗಿದ್ದಳು..


ಬೆಡ್ ರೂಮಿನ ಏಕಾಂತದಲ್ಲಿ ...
ಸಿನೇಮಾ ನಟಿಯರನ್ನು ನೆನಪಿಸಿಕೊಳ್ಳುವ ಅಗತ್ಯವಿಲ್ಲ ಎನಿಸಿತು....


ಮದುವೆಯೂ ಆಯಿತು..


ಮೊದಲ ರಾತ್ರಿಯ ಮೊದಲು ನಾನೇ ಮಾತನಾಡಿದೆ..


"ನೋಡು..
ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ...


ಈಗ ನಾನು ನೀನು ಒಂದಾಗೋದು.. ಸಹಜವಾಗಿ ಗಂಡು ಹೆಣ್ಣಿನ ನಡುವೆ ನಡೆಯುವಂಥಾದ್ದು..


ಯಾವುದೇ ಗಂಡು ಅನ್ನುವ ಪ್ರಾಣಿ ನಿನ್ನನ್ನು ಸ್ವಲ್ಪ ಹೊತ್ತು ಆಲಂಗಿಸಿಕೊಂಡರೆ ನೀನು ಕ್ರಿಯೆಗೆ ಸಹಜವಾಗಿ ರೆಡಿ ಆಗಿರುತ್ತೀಯಾ..


ನನ್ನ.. ನಿನ್ನ ಸಂಬಂಧ...
ದಾಂಪತ್ಯವೆಂದರೆ ಜನ್ಮ ಜನ್ಮಾಂತರದ್ದು.. ಅದೆಲ್ಲ ನಾನು ನಂಬೋದಿಲ್ಲ.."


ನಾನು ಇನ್ನೂ ಮಾತನಾಡಬೇಕೆಂದಿದ್ದೆ..
ಆದರೆ ಅವಳೇ ಮೌನ ಮುರಿದಳು..


"ನನಗೆ ನೀವೆನ್ನುವದು ಯಾವುದೂ ಅರ್ಥವಾಗುವದಿಲ್ಲ..
ನಿಮ್ಮಣ್ಣ ಹೇಳಿದ್ದಾರೆ.. ನೀವು ಬಹಳ ಬುದ್ಧಿವಂತರು..
ನೀವು ಹೇಳಿದ್ದಕ್ಕೆಲ್ಲ ಹೂಂ ಅಂತ ಸುಮ್ಮನಿದ್ದುಬಿಡಬೇಕೆಂದು..


ನಾನೆಂದೂ ನಿಮ್ಮ ಮಾತಿಗೆ ಎದುರಾಡೋದಿಲ್ಲ..
ಗಂಡನಿಗೆ ಎದುರಾಗಿ ಮಾತಾಡಬಾರದೆಂದು ನನ್ನಮ್ಮನೂ ಹೇಳಿದ್ದಾರೆ...
ನಿಮಗೆ ಹೇಗೆ ಬೇಕೋ ಹಾಗಿರಬೇಕೇಂದು ಅಪ್ಪನೂ ನನಗೆ ಹೇಳಿದ್ದಾನೆ..."


ನನ್ನಣ್ಣ ನನಗೆ ಯೋಗ್ಯವಾದ ಹುಡುಗಿಯನ್ನೇ ಹುಡುಕಿದ್ದ...!


ಈ ಭಾವುಕರೊಡನೆ ಹೆಚ್ಚಿನ ತಲೆಕೆಡಿಸಿಕೊಳ್ಳಬೇಕಿಲ್ಲ..


ಅವರ ಅನಗತ್ಯವಾದ ಕಣ್ಣೀರು.. 
ಉದ್ವೇಗದ ಮಾತುಗಳನ್ನು ಸಹಿಸಿಕೊಳ್ಳಬೇಕು ಅಷ್ಟೆ...


ನಮಗೆ ಸಭ್ಯವಾಗಿ ಹೊಂದಿಕೊಂಡಿರುತ್ತಾರೆ..


ನನ್ನನ್ನು ನನ್ನ ಮಡದಿಗೆ ಅರ್ಥ ಮಾಡಿಸುವ ಪ್ರಮೆಯವೇ ನನಗೆ ಬರಲಿಲ್ಲ...


ನನಗೆಂದೂ ಎದುರು ಮಾತನಾಡಲೇ ಇಲ್ಲ..


ನನ್ನ ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ಸೇವೆ ಮಾಡುತ್ತಿದ್ದಳು..


ನನ್ನ ಬಟ್ಟೆಯನ್ನು ಒಗೆಯುವದು..
ನನಗೆ ಬೇಕಾದ ಊಟ ತಿಂಡಿಯನ್ನು ಮಾಡುವದು...


ಹಣವನ್ನು ಕೊಡದೆ ಕೆಲಸ ಮಾಡಿಸಿಕೊಳ್ಳುವದು ಅಂದರೆ ...
ಮದುವೆ.. ದಾಂಪತ್ಯ ...
ಅಂತ ನನಗೆ ಗೊತ್ತಿರಲಿಲ್ಲ..


ಸಮಯ ಕಳೆಯ ತೊಡಗಿತು..


ಸಮಯಕ್ಕೇನು...?
ಕ್ಷಣ ಕ್ಷಣಕ್ಕೂ ನಡೆಯುತ್ತಲೇ ಇರುತ್ತದೆ..!
ನಾವು ಮಾತ್ರ ಪ್ರತಿಕ್ಷಣಕ್ಕೂ ಹಿಂದಕ್ಕೆ ಹೋಗುತ್ತಿರುತ್ತೇವೆ....!
ವಯಸ್ಸಾಗುತ್ತಿರುತ್ತದೆ...!


ನನ್ನ ಕಪ್ಪು ಕೂದಲು ಅಲ್ಲಲ್ಲಿ ಬಿಳಿಯಾಗತೊಡಗಿತು...


ನನ್ನ ಮಡದಿ ಒಂದು ಆಸೆ ನನ್ನೆದುರಿಗೆ ಇಟ್ಟಳು...


"ನೋಡಿ..
ನಿಮಗೆ ಎದುರಾಡುತ್ತಿಲ್ಲ..
ನಾನು ತಾಯಿಯಾಗಬೇಕು.. 
ಇಲ್ಲಿಯವರೆಗೆ ನಿಮ್ಮ ಬಳಿ ನಾನು ಏನೊಂದನ್ನೂ ಕೇಳಿಲ್ಲ..
ನಮಗೆ ವಯಸ್ಸಾಯಿತು ಎಂದೆಲ್ಲ ನೆಪಗಳು ಬೇಡ...
ನನಗೊಂದು ಮಗು ಬೇಕು..."


ನಾನು ಬಹಳ ವಿಚಾರ ಮಾಡಿದೆ..


ಮಕ್ಕಳು.. ಮರಿಗಳ ಜಂಜಾಟ ಬೇಡ ಅಂತಲೇ...  ನಾನಿದ್ದೆ..


ಇಷ್ಟು ದಿನದ ದಾಂಪತ್ಯದಲ್ಲಿ ನನ್ನ ಬೇಕು ಬೇಡಗಳೇ ಆದವು..
ಅವಳದೊಂದು ಆಸೆ ಈಡೇರಿಸಿ ಬೀಡೋಣ..


ಮಗುವಿನ ಜವಾಬ್ದಾರಿ ನನಗೇನೂ ಇಲ್ಲವಲ್ಲ.. ಅವಳೇ ನೋಡಿಕೊಳ್ಳುತ್ತಾಳೆ..


ಸರಿ..
ಒಂದು ಮಗು ಮಾಡಿಕೊಂಡರಾಯಿತು.. ಅಂದುಕೊಂಡೆ...


ಕೆಲವು ತಿಂಗಳು ಕಳೆಯಿತು..


ನನ್ನಾಕೆ ಬಸುರಿಯಾದಳು..


ಅವಳ ನಡತೆಯೇ ಸ್ವಲ್ಪ ಬದಲಾಗತೊಡಗಿತು..
ನನಗೂ ಸ್ವಲ್ಪ ಕೆಲಸ ಹೇಳಲು ಶುರು ಮಾಡಿದಳು..


ತಾಯ್ತನವೆಂದರೆ ಹಿರಿತನವೆ..? ಯಜಮಾನಿಕೆಯೆ..?
ಆತ್ಮವಿಶ್ವಾಸ ಕೊಟ್ಟುಬಿಡುತ್ತದೆಯಾ..?


ನಾನು ದೊಡ್ಡ ತಪ್ಪು ಮಾಡಿದೆ ಅನ್ನಿಸತೊಡಗಿತು...


ಕಾಲ ಮಿಂಚಿ ಹೋಗಿತ್ತು..


ನನ್ನ ಮಡದಿಗೆ ದಿನ ತುಂಬಿತ್ತು..


ಒಂದು ದಿನ ಹೆರಿಗೆ ನೋವೂ ಕೂಡ ಶುರುವಾಯಿತು...


ಅವಳ ಅಪ್ಪ.. ಅಮ್ಮ ಇಬ್ಬರೂ ಬಂದಿದ್ದರು...
ಲಗು ಬಗೆಯಿಂದ.. ಆಸ್ಪತ್ರೆಗೆ ಸೇರಿಸಿದೆವು..


ನನ್ನಣ್ಣ.. ಅತ್ತಿಗೆಯರೂ ಬಂದರು..


" ಗಾಭರಿ ಆಗಬೇಡಯ್ಯಾ...
ಬಸುರಿ.. ಸಹಜ.. ಕ್ರಿಯೆ ಅಂತೆಲ್ಲ ಕೊರಿಬೇಡ..
ಪಾಪು ಬರಲಿ ನೋಡು.. !
ನೀನೂ ನಿನ್ನ ಸ್ವಭಾವವೂ ರಿಪೇರಿ ಆಗಿ ಹೋಗ್ತದೆ..!
ಸಂಸಾರದೊಳಗೆ ಬಿದ್ದವರು ಯಾರೂ ಎದ್ದಿಲ್ಲ ಕಣಯ್ಯಾ..!.."


ನನ್ನ ಮಡದಿಯನ್ನು ಜನರಲ್ ವಾರ್ಡಿನಿಂದ ಐ.ಸಿ.ಯೂ.ಗೆ ಬದಲಾಯಿಸಿದರು...


ಸ್ವಲ್ಪ ಹೊತ್ತು ಕಳೆಯಿತು...
ನಮಗೆಲ್ಲ ಆತಂಕ ಶುರುವಾಯಿತು...!


ಡಾಕ್ಟರ್ ಬೆವರು ಒರೆಸಿಕೊಳ್ಳುತ್ತ ಬಂದರು...


ಅಣ್ಣ.. ಅತ್ತಿಗೆ.. ಅತ್ತೆ ಮಾವ ಡಾಕ್ಟರ್ ಬಳಿ ಓಡಿದರು...


"ನೋಡಿ..
ತುಂಬಾ ಕಷ್ಟಕರವಾದ ಹೆರಿಗೆ...
ಬಸುರಿಯಾಗಿದ್ದಾಗ ಸರಿಯಾಗಿ ನೋಡಿಕೊಂಡಿಲ್ಲ ಅನ್ಸುತ್ತೆ...


ಹೆಣ್ಣು ಮಗು.. ತುಂಬಾ.. ತುಂಬಾ ಮುದ್ದಾಗಿದೆ..


ಆದರೆ ತಾಯಿಯನ್ನು ಉಳಿಸಲಾಗಲಿಲ್ಲ..."


ಮರುಕ್ಷಣ ಆಸ್ಪತ್ರೆಯಲ್ಲಿ ಬರಿ ರೋಧನವೇ ಶುರುವಾಯಿತು..
ಅತ್ತೆ ಮಾವ.. ಬಹಳ ದುಃಖಪಟ್ಟರು.. ಗೋಳೋ ಅಂತ ಅತ್ತರು...
ಸಂಕಟದಿಂದ ಹೊರಳಾಡ ತೊಡಗಿದರು...


ನರ್ಸ್ ಮಗುವನ್ನು ಕರೆ  ತಂದಳು..


ನನ್ನತ್ತೆ ಮಗುವನ್ನು ಎತ್ತಿಕೊಂಡಳು...


"ಅಯ್ಯೋ .. ದುರ್ವಿಧಿಯೇ..!
ಚಿನ್ನ ದಂಥಹ ಅಮ್ಮ ಹೋಗಿಬಿಟ್ಟಳಮ್ಮಾ...!!


ಒಬ್ಬರಿಗೂ ಒಂದು ಕೆಟ್ಟ ಮಾತು ಹೇಳಿದವಳಲ್ಲ ನನ್ನ ಮಗಳು..!!


ಆ ದೇವರು ಬಹಳ ಕೆಟ್ಟವನು..!
ಈ ಮಗುವನ್ನು ಕೊಟ್ಟು ತಾನು ಹೊರಟು ಹೋದಳು..!


ಅಯೋ ದೇವರೆ  ...
ಎಷ್ಟು ಕ್ರೂರಿಯಪ್ಪಾ ನೀನು..!!"


ನನ್ನತ್ತೆಯನ್ನು ಸಮಾಧಾನ ಪಡಿಸುವವರು ಯಾರೂ ಇರಲಿಲ್ಲ..
ಎಲ್ಲರೂ ಅಳುತ್ತಿದ್ದರು..


ನನ್ನತ್ತೆ ಮಗುವನ್ನು ನನ್ನ ಕೈಗೆ ಕೊಟ್ಟಳು..


ಮಗುವನ್ನು ಕೈಗೆ ತೆಗೆದು ಕೊಂಡೆ..


ದುಃಖ ತಡೆಯಲಾಗಲಿಲ್ಲ...


ಮಗುವಿನ ಮುಗ್ಧ ಮುಖ ನೋಡಿದೆ...


ಎಂದೂ ಅಳದ ನನಗೂ ಅಳು ಬಂದಿತು...!


ಧಾರಕಾರವಾಗಿ ಕಣ್ಣೀರಿಳಿಯತೊಡಗಿತು...!


ನನ್ನಣ್ಣ ನನ್ನನ್ನು ಸಮಾಧಾನ ಪಡಿಸಿದ..


"ಎಲ್ಲವೂ ದೇವರಾಟ ಕಣಪ್ಪಾ.. 
ನಮ್ಮ ಕೈಯಲ್ಲಿ ಏನೂ ಇಲ್ಲ..


ಅಪ್ಪ.. ಅಮ್ಮ ಸತ್ತಾಗಲೂ ನಿನ್ನ ಕಣ್ಣಲ್ಲಿ ನೀರುಬರಲಿಲ್ಲ...!


ಕರುಳಿನ ಪಾಶ ನೋಡು ಹೇಗಿರುತ್ತದೆ..!


ಮಗುವನ್ನು ನೋಡಿ ನಿನಗೂ ದುಃಖವಾಯಿತಲ್ಲ..!


ಸಮಾಧಾನ ಮಾಡ್ಕೋ.. "


ಅಣ್ಣ ಇನ್ನೂ ಏನೇನೋ ಹೇಳುತ್ತಿದ್ದ..


ಮಗು ಅಳತೊಡಗಿತು.... 
ಸಮಾಧಾನ ಪಡಿಸಲು ನನಗಾಗಲಿಲ್ಲ....


ಎದೆ ಹಾಲು ಬೇಕಿತ್ತೇನೋ...!


ಅಯ್ಯೋ.... !!


ನನಗೆ  ಮತ್ತೂ ದುಃಖ ಉಕ್ಕಿತು..


ಏನು ಮಾಡಲಿ... ?  


ದುಃಖ ತಡೆಯಲಾಗಲಿಲ್ಲ....


" ಅಯ್ಯೋ..
ಈ ಮಗುವನ್ನು ಹೇಗೆ ನೋಡಿಕೊಳ್ಳಲಿ...?
ಇದರ ಪಾಲನೆ.. ಪೋಷಣೆ.. 
ಇದರ ಸ್ನಾನ.. ಊಟ ತಿಂಡಿ.. ಹೇಗೆ ಮಾಡಲಿ...?


ಮಗುವೇ ಬೇಡವಾಗಿತ್ತು...


ಛೇ.. ಎಂಥಾ ಅನರ್ಥ ಆಗಿಹೋಯಿತು...!!!


ಈ ಮಗುವನ್ನು ಹೇಗೆ ನೋಡಿಕೊಳ್ಳುವದು..?


ಇನ್ನು ನನ್ನ ಊಟ.. ತಿಂಡಿ.. ಬಟ್ಟೆ ಬರೆ.. ನನ್ನ ಬೇಕು ಬೇಡಗಳು..


ಹೆಂಡತಿಯಂಥಹ ಹೆಣ್ಣನ್ನು ಎಲ್ಲಿಂದ ತರಲಿ...?.. "


ಅಣ್ಣ.. ಅತ್ತಿಗೆ..
ಅತ್ತೆ.. ಮಾವ...
ಅಳು ಮರೆತು ನನ್ನನ್ನೇ ನೋಡ ತೊಡಗಿದರು.....




(ಇದು ಕಥೆ) 
( ಚಂದದ ಪ್ರತಿಕ್ರಿಯೇಗಳಿವೆ... ದಯವಿಟ್ಟು ಓದಿ...)