Friday, December 6, 2013

..... ಆಯ್ಕೆ .....

ಕತ್ತಲೆಂದರೆ..
ನನಗೆ ಬಲು ಇಷ್ಟ...

ಕತ್ತಲಿಗೆ ಎಲ್ಲ ಬಣ್ಣಗಳೂ ಒಂದೇ...

ಭಾವಗಳೂ ಸಹ ಒಂದೆ...

ಕಣ್ ಮುಚ್ಚಿದರೂ..

ಕಣ್ಣು ಬಿಟ್ಟರೂ ಒಂದೆ...

ಕಪ್ಪು ಬಿಳುಪು ಕೂಡ ಬಣ್ಣಗಳಾಗಿಬಿಡುತ್ತವೆ...

ನೆನಪುಗಳೊಂದಿಗೆ ರಂಗು.. ರಂಗಾಗಿಬಿಡುತ್ತವೆ...

ನನ್ನ

ಎಷ್ಟೋ ಒಂಟಿತನದ ...
ಖಾಲಿ ಖಾಲಿ ಭಾವಗಳನ್ನು ಅದು ತುಂಬಾ ಖುಷಿಯಿಂದ ಮಾತನಾಡಿಸುತ್ತದೆ..

ನನ್ನ

ಏಕಾಂತಗಳಲ್ಲಿ "ಅವಳು" ಇರುತ್ತಾಳೆ..

ಓಹ್..

ಅವಳೆಂದರೆ ನಿಮಗೆ ಗೊತ್ತಿಲ್ಲ..!

ತುಂಬು ... 

ಬಟ್ಟಲ ಕಣ್ಣು..

ಮುತ್ತಿಡಲು ಹರವಾದ ಕೆನ್ನೆ..


ಮುದ್ದು.. ಚೂಪಿನ ಗದ್ದ.

ಕ್ಲಾಸಿನಲ್ಲಿದ್ದಾಗ ಅವಳನ್ನೇ ನೋಡುತ್ತ ಕುಳಿತುಬಿಡುತ್ತಿದ್ದೆ....

ನನ್ನ ಓದಿನ ದಿನಗಳಲ್ಲಿ ನನ್ನ ಮನವನ್ನು ತುಂಬಿದ್ದಳು..


ಮನದಣಿಯೇ ನೋಡುತ್ತಿದ್ದೆ..


ಹೇಗೆ ಮಾತನಾಡಿಸಲಿ ?

ಯಾವಾಗಲಾದರೂ ಎದುರಿಗೆ ಬಂದಾಗ ಧೈರ್ಯವಿರುತ್ತಿರಲಿಲ್ಲ..

ನನ್ನೆದೆಯ ಢವ ಢವಗಳೊಡನೆ

ಸುಮ್ಮನಿದ್ದುಬಿಡುತ್ತಿದ್ದೆ..

ನನ್ನ ಜೀವದ ಗೆಳೆಯ ಸುಮ್ಮನಿರಬೇಕಲ್ಲ..


"ನಾಡಿದ್ದು ಸಂಕ್ರಾಂತಿ ಹಬ್ಬ..

ಶುಭಾಶಯ ಪತ್ರ ಕಳಿಸೋಣ.."

ಅವನೇ ಹೋಗಿ ಗ್ರೀಟಿಂಗ್ ಕಾರ್ಡ್ ತಂದಿದ್ದ..

ಬಹಳ ಬುದ್ಧಿವಂತ ಆತ....

"ಇದರಲ್ಲಿ ಏನಾದರೂ ಬರಿ...

ನೀನು ಅಂತ ಗೊತ್ತಾಗಬೇಕು..
ಆದರೆ...
ಉಳಿದವರಿಗೆ ಗೊತ್ತಾಗಬಾರದು..."

ಅವಳ ಬಳಿ ಯಾವತ್ತೂ ಮಾತನಾಡಿದ್ದಿಲ್ಲ..


ಅವಳ ಜೊತೆಯಲ್ಲಿ ಇರುತ್ತಿದ್ದೆ.. 

ಅವಳ 
ಕೆನ್ನೆಗಳೊಡನೆ...
ಮುದ್ದು ಗಲ್ಲದೊಡನೆ..
ತೆಳುವಾದ ತುಟಿಗಳೊಡನೆ...

ಆಗಾಗ..

ಬೇಡವೆಂದರೂ ಸಂಧಿಸುವ
ಅವಳ ಕುಡಿ ನೋಟದೊಡನೆ.. ಜೊತೆಯಲ್ಲಿರುತ್ತಿದ್ದೆ.. 

ನನ್ನ ನೋಟದ ಇಂಗಿತ ಅವಳಿಗೆ ಗೊತ್ತಾಗಿರಬಹುದಾ ?


" ಗೊತ್ತಾಗದೆ  ಏನು ?

ಅವಳಿಗೂ ಹರೆಯ..."

ಇಬ್ಬರ ನೋಟ ಸಂಧಿಸಿದಾಗ ... 

ಅವಳ ತುಟಿಯಲ್ಲಿ ಸಣ್ಣ ಕಿರುನಗುವಿರುತ್ತಿತ್ತಾ ?

ಅದು ನನ್ನ ಭ್ರಮೆಯಾ ?


ಗೆಳೆಯ ತಂದುಕೊಟ್ಟ ಶುಭಾಶಯ ಪತ್ರದಲ್ಲಿ ಧೈರ್ಯ ಮಾಡಿ ಬರೆದೆ..


"ಆಕಳು..

ಕರುವನ್ನು ಮರೆಯ ಬಹುದು..

ತಾಯಿ..

ಮಗುವನ್ನು ಮರೆಯ ಬಹುದು...

ಆದರೆ..

ನನ್ನ ಕಣ್ಣುಗಳು ನಿನ್ನನೆಂದಿಗೂ ಮರೆಯಲಾರವು..."

ನನ್ನ ಗೆಳೆಯ ನಕ್ಕುಬಿಟ್ಟ..


ವಾಕ್ಯವನ್ನು ಬದಲಿಸಲು ಹೇಳಿದ.. ನಾನು ಬದಲಿಸಲಿಲ್ಲ..


ಮಾರನೆಯ ದಿನ ಕ್ಲಾಸಿಗೆ ಪೋಸ್ಟಮ್ಯಾನ್ ಪತ್ರಗಳನ್ನು ತಂದುಕೊಟ್ಟ..

ನಾನು ಕಳುಹಿಸಿದ್ದು ಅವಳಿಗೆ ತಲುಪಿತ್ತು..

ಅಸಕ್ತಿಯಿಂದ ನೋಡಿದಳು..

ಓದಿ ಆದಮೇಲೆ ... 
ಬೊಗಸೆ  ಕಣ್ಣಿನಿಂದ  ನನ್ನತ್ತ ನೋಡಿದಳು..

ನೋಟದಲ್ಲಿ ನಗುವಿತ್ತಾ ?

ನೋಟಗಳ ಭಾಷೆ ನನಗೆಂದೂ ಗೊತ್ತೇ ಆಗಲಿಲ್ಲ..
ಅರ್ಥವಾಗುವದೇ ಇಲ್ಲ...

ಅಷ್ಟೆ...


ನನಗೆ ಉತ್ತರ ಸಿಗಲಿಲ್ಲ..


ದಿನಗಳು ಕಳೆದವು..

ಬದುಕಿನಲ್ಲಿ ಏಳುತ್ತ ಬೀಳುತ್ತ..
ಈಗ ಒಂದು ಸ್ಥಿತಿಯನ್ನು ಮುಟ್ಟಿದ್ದೇನೆ...

ಕಾರುಗಳ ಮಾಲಿಕನಾಗಿ..

ಚಂದದ ಮಡದಿಗೆ ಪತಿಯಾಗಿ.... ಮಗುವಿಗೆ ಅಪ್ಪನಾಗಿರುವೆ...

ಎಷ್ಟಾದರೂ..

ಏನೇ ಆದರೂ..
ಉದ್ದ ಲಂಗದ..
ನಸುಗಪ್ಪಿನ ಆ ಹುಡುಗಿ ನನ್ನಿಂದ ಮರೆಯಾಗಲೇ ಇಲ್ಲ...

ಅವಳು..

ನನ್ನನ್ನು ಎಂದೂ ಒಂಟಿಯಾಗಿ ಇರಲು ಬಿಡಲೇ ಇಲ್ಲ..
ಮುದ್ದು..
ಮುದ್ದಾಗಿ ನಗುತ್ತಿದ್ದಳು..
ಮಾತನಾಡುತ್ತಿದ್ದಳು..

ನಾನು ಜನಜಂಗುಳಿಯಲ್ಲಿದ್ದರೂ..

ನನ್ನನ್ನು 
ತನ್ನ ಬಳಿ ಕರೆದೊಯ್ದುಬಿಡುತ್ತಿದ್ದಳು..

ನನ್ನ ಬದುಕಿನ  ಯಶಸ್ಸಿನ ಹಿಂದೆ ಇದ್ದವರು ನನ್ನ ಗುರುಗಳು..


ನನಗೆ

ಊಟ ಹಾಕಿ..
ನನ್ನ ಖರ್ಚು.. ವೆಚ್ಚಗಳನ್ನು ತಾವು ಭರಿಸಿಕೊಂಡು ನನ್ನನ್ನು ಓದಿಸಿದರು..

ಅವರ ಮಡದಿ...


ಆಗ 

ಅವರ ಬಗೆಗೆ ಕೆಟ್ಟ ಅನಿಸಿಕೆ ಇದ್ದರೂ..
ಈಗ ಖಂಡಿತ ಇಲ್ಲ..

ಆಗ 

ಅವರೆಲ್ಲರ ಊಟವಾದ ಮೇಲೆ ನನ್ನನ್ನು  ಊಟಕ್ಕೆ ಕರೆಯುತ್ತಿದ್ದರು..

ಸಂಭಾರು ತೆಳ್ಳಗಾಗಿ "ಸಾರು" ಆಗಿರುತ್ತಿತ್ತು.. 

ಉಪ್ಪು.. ಹುಳಿ ಕಡಿಮೆಯಾಗಿರುತ್ತಿತ್ತು..

ಕೆಲವೊಮ್ಮೆ ಬೆಳಗ್ಗೆ ಹೆಚ್ಚಾದ ತಿಂಡಿ ಮಧ್ಯಾಹ್ನ ಸಿಗುತ್ತಿತ್ತು..

ಮಜ್ಜಿಗೆ ನೀರಿನಂತಿರುತ್ತಿತ್ತು..

ಬಡತನಕ್ಕೆ..

ದುಃಖಗಳಿಗೆ ಆಯ್ಕೆಗಳು ಇರುವದಿಲ್ಲ..

ಸಿಕ್ಕಿದಷ್ಟು ಸ್ವೀಕರಿಸುವ ಅನಿವಾರ್ಯ...


ಅವರು ನನ್ನ ಬಡತನದ..

ಹಸಿವಿನ ದಿನಗಳಲ್ಲಿ ಹೊಟ್ಟೆತುಂಬಿಸಿದ್ದರಲ್ಲ..

ಕೃತಜ್ಞತೆ ಹೇಗೆ ಹೇಳಲಿ...?


ಊರಿಗೆ ಹೋಗಿ.. 

ಅವರನ್ನೊಮ್ಮೆ ಭೇಟಿಯಾಗಿ ನಮಸ್ಕರಿಸಬೇಕು ... 

ಸರಿ... 

ಹೊರಟೇ ಬಿಟ್ಟೆ... 

ಕತ್ತಲಾಗಿತ್ತು..

ಗುರುಗಳ ಮನೆ ಮುಂದೆ ಕಾರು ನಿಲ್ಲಿಸಿದಾಗ ಸಾಯಂಕಾಲ ಏಳು ಗಂಟೆ..

ಕರೆಂಟು ಇರಲಿಲ್ಲ..


ಗುರು ದಂಪತಿಗಳಿಗೆ ವಯಸ್ಸಾಗಿತ್ತು..

ಪ್ರೀತಿಯಿಂದ ಬರ ಮಾಡಿಕೊಂಡರು..

ಆದರ.. 

ಉಪಚಾರ ಮಾಡಿದರು..

"ಒಂದು ಲೋಟ ನೀರು ಕೊಡಿ.. ಸಾಕು" 


"ಹಾಗಾದರೆ ಊಟ ಮಾಡಿ ಹೋಗು.."


ನಾನು ತಲೆಯಾಡಿಸಿದೆ..


ಅವರ ಮಡದಿ ನೀರು ತಂದಿಟ್ಟರು..


" ನೋಡಪ್ಪಾ..

ಆಗ ನಮಗೂ ಬಡತನವಿತ್ತು..
ಸರಿಯಾಗಿ ಊಟ ಹಾಕಲಾಗಲಿಲ್ಲ... ಬೇಸರ ಮಾಡ್ಕೋಬೇಡ ..."

ಒಳ್ಳೆಯ ಮನಸಿದ್ದವರಿಗೆ 

ಅಪರಾಧಿ ಮನೋಭಾವ ಕಾಡುತ್ತದೆ..

ಕ್ಷಮೆ ಎನ್ನುವ ಶಬ್ಧವಿಲ್ಲದೆ..

ಕ್ಷಮೆ ಕೋರಿಬಿಡುತ್ತಾರೆ..

"ಇಲ್ಲಮ್ಮ.. 

ನನಗೆ ಚೆನ್ನಾಗಿಯೇ ಊಟ ಹಾಕಿದ್ದೀರಿ..
ಹಸಿದ ಹೊಟ್ಟೆಗೆ ಊಟ ಹಾಕಿ ಓದಿಸಿದ್ದೀರಲ್ಲ..

ನಮ್ಮವರೆನ್ನುವವರಿದ್ದೂ..ಅನಾಥನಾಗಿದ್ದೆ..

ಏನೂ ಅಲ್ಲದ 
ಏನೂ ಇಲ್ಲದ .. 
ನನ್ನ ಭವಿಷ್ಯ ರೂಪಿಸಿದ್ದೀರಿ...."

ಕೃತಜ್ಞತೆಯಿಂದ ಕೈ ಮುಗಿದೆ..


ಭಾವುಕರಿಗೆ..

ಭಾವುಕ ಕ್ಷಣಗಳಷ್ಟು ಖುಷಿ ಮತ್ತೆ ಯಾವುದೂ ಇಲ್ಲ..

ಅವರು ..

ಒತ್ತರಿಸಿ ಬರುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತ ಅಡಿಗೆ ಮನೆಗೆ ಹೋದರು..

ಮಾಸ್ತರು ಕನ್ನಡಕ ಸರಿ ಮಾಡಿಕೊಂಡರು..


"ತುಂಬಾ ಖುಷಿ ಆಗುತ್ತಪ್ಪ..


ನಿನ್ನ ಯಶಸ್ಸಿನಲ್ಲಿ ನಾವು ಮಾಡಿದ್ದು ಏನೂ ಇಲ್ಲ..


ನಿನ್ನನ್ನು ಮುಂದೆ ತಂದಿದ್ದು ನಿನ್ನ  

ಓದಿನ ಹಸಿವೆ...
ಶೃದ್ಧೆ.. ಪರಿಶ್ರಮ..

ಪ್ರಾಮಾಣಿಕನಾಗಿರು..

ಎಲ್ಲ ಕಾಲದಲ್ಲೂ ಬೆಲೆ ಬಾಳುವಂಥಾದ್ದು ಪ್ರಾಮಾಣಿಕತೆ.."

ನಾನು ತಲೆ ತಗ್ಗಿಸಿದೆ...

ಅವರ ಪಾದಗಳನ್ನು ನೋಡುತ್ತಿದ್ದೆ...

ಅವರು ನನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು...


"ನಮ್ಮ ಮಕ್ಕಳಿಗೆ ಕೊಡಿಸುವಂಥಹ ಬಟ್ಟೆಗಳನ್ನು ... ನಿನಗೆ ಕೊಡಿಸುವದಿಲ್ಲವಾಗಿತ್ತು..


ಕಡಿಮೆ ಬೆಲೆಯ ಬಟ್ಟೆ ನಿನಗೆ ಕೊಡುತ್ತಿದ್ದೆ.."


ಅವರಿಗೂ 

ಅಪರಾಧಿ ಮನೋಭಾವ !

" ಹಾಗೇನೂ ಇಲ್ಲ ಸಾರ್..

ನಿಮ್ಮ ಇತಿ ಮಿತಿಗಳಲ್ಲಿ ನನಗೆ ಓದಿಸಿದ್ದೀರಿ...

ನಿಮಗೂ ಮಕ್ಕಳಿದ್ದರು..

ಅವರ ಭವಿಷ್ಯ.. ಖರ್ಚು ನಿಮಗೂ ಇತ್ತಲ್ಲ...

ಎಲ್ಲವೂ 

ನಮ್ಮದಾಗಲು ಸಾಧ್ಯವಿಲ್ಲವಲ್ಲ..

ಹತ್ತಿರವಿದ್ದರೂ ನಮ್ಮದೆನಿಸುವದಿಲ್ಲ..


ಅದು ಸಹಜ..


ನನಗೆ ಖಂಡಿತ ಬೇಸರವಿಲ್ಲ.. 


ನನ್ನ 

ಸರಿ..ತಪ್ಪುಗಳನ್ನು ತಿಳಿಸಿ..
ಹತ್ತಿರದವರಾಗಿ ನನಗೆ ಒಂದು ದಾರಿ ತೋರಿಸಿದ್ದೀರಲ್ಲ..

ಅಷ್ಟು ಸಾಕು ನನ್ನ ಕೃತಜ್ಞತೆಯ ಬದುಕಿಗೆ..."


ಕಣ್ಣು ಒದ್ದೆಯಾಗಿತ್ತು.. ಒರೆಸಿಕೊಂಡೆ...


ಕರೆಂಟು ಇರಲಿಲ್ಲ.. 


ಬೆಳಕು ಮಂದವಾಗಿತ್ತು..

"ಒಂದು ವಿಷಯ ... 

ನಿನಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ..
ನನಗಂತೂ ನೆನಪಿದೆ..."

" ಯಾವುದು ಸಾರ್...?.."


ಮಾಸ್ತರು  ಕನ್ನಡಕ ಸರಿಮಾಡಿಕೊಂಡರು..


" ನಿನ್ನ ಕ್ಲಾಸಿನಲ್ಲಿ 

ಒಬ್ಬಳು ನಸುಗಪ್ಪಿನ ಹುಡುಗಿ ಇದ್ದಳು..
ಉದ್ದ ಲಂಗದ.. ಉದ್ದದ ಹುಡುಗಿ..

ಚೆನ್ನಾಗಿ ಹಾಡುತ್ತಿದ್ದಳಲ್ಲ.. ಅವಳು..."


ನನ್ನ ಹೃದಯ ಮತ್ತೆ ಖುಷಿಯಿಂದ ಕುಣಿಯತೊಡಗಿತು..


ಅವಳನೆನಪಲ್ಲೇ ಬದುಕು ..!


ಅವಳ ನೆನಪಿನಲ್ಲೆ ನನ್ನ ಮೌನ...!


"ಹೌದು ಸಾರ್.. ನೆನಪಿದೆ..."


"ನಾನು ಕ್ಲಾಸ್ ಟೀಚರ್ ಆಗಿದ್ದೆ..

ಅವಳು ಕ್ಲಾಸ್ ಮಾನಿಟರ್ ಆಗಿದ್ದಳು..

ನೀವು ಬರೆದ ನೋಟ್ ಬುಕ್ಕುಗಳನ್ನು ನನಗೆ ತಂದುಕೊಡುತ್ತಿದ್ದಳು..."


ನಾನು ತಲೆ ಆಡಿಸಿದೆ..

ಅವರಿಗದು ಕಾಣುತ್ತಿರಲಿಲ್ಲ..

"ಹೂಂ..." ಗುಟ್ಟಿದೆ..


"ಒಂದು ದಿನ ... 

ನಾನು ನೋಡಿ ಇಟ್ಟ ನೋಟ್ ಬುಕ್ಕುಗಳನ್ನು ತೆಗೆದು ಕೊಂಡು ಹೋಗುವಾಗ..
ಅವಳ ಕೈಯಲ್ಲಿ ಏನೋ ಚೀಟಿ ಇತ್ತು..."

ನನಗೆ ಮೈಯೆಲ್ಲ ಕಿವಿಯಾಯಿತು..


"ನಾನು ಗದರಿಸಿ ಅವಳಿಂದ ಕಸಿದುಕೊಂಡೆ..


ಅವಳು ಅಳುತ್ತಿದ್ದಳು.."


ನನಗೆ ದಿಗಿಲು ಶುರುವಾಯಿತು..


ನಾನು ಬರೆದ ಶುಭಾಶಯ ಪತ್ರವಾ ?


ಕತ್ತಲಲ್ಲಿ 

ಢವ.. ಢವ ಶಬ್ದಗಳು ಜೋರಾಗಿ ಕೇಳುತ್ತವೆ...

ಗುರುಗಳು ಸ್ವಲ್ಪ ಹೊತ್ತು ಸುಮ್ಮನಿದ್ದರು...


"ಬಹುಷಃ ಅಂದು ನಾನು ಗದರಿಸಿ ...

ಅದನ್ನು ನನ್ನ ಬಳಿ ಇಟ್ಟುಕೊಳ್ಳದೆ ಹೋಗಿದ್ದರೆ..
ಇಂದು..
ನೀನು ಹೀಗೆ ಆಗುತ್ತಿರಲಿಲ್ಲ...

ಪೋಲಿ ಹುಡುಗನಾಗಿಬಿಡುತ್ತಿದ್ದೆ..."


ಢವ ಢವ ಜೋರಾಯಿತು... 

ನನ್ನ ಹೃದಯ ಬಾಯಿಗೆ ಬಂದಿತ್ತು...!

"ಏನಿತ್ತು ಅದರಲ್ಲಿ...?"


"ಮತ್ತೇನಿಲ್ಲ...

ಆ ವಯಸ್ಸಿನ ಹದಿ ಹರೆಯದ ಭಾವನೆಗಳು..

ಆ ಹುಡುಗಿ ನಿನಗೆ ಮನಸೋತು..

ಪತ್ರ ಬರೆದಿದ್ದಳು...!

ಅವಳ ಭಾಷೆ.. ಪತ್ರ ಓದಿ ನನಗಂತೂ ನಗು ಬಂದಿತ್ತು..


ಈಗಲೂ ನಗು ಬರುತ್ತದೆ.."


ಮಾಸ್ತರು ನಗತೊಡಗಿದರು.... 


ಗಾಳಿ ಜೋರಾಯಿತು..


ಹಚ್ಚಿದ್ದ ಮೊಂಬತ್ತಿ ಗಾಳಿಗೆ ಕುಣಿಯುತ್ತಿತ್ತು..

ಮೊಂಬತ್ತಿ ಬೆಳಕು ಮತ್ತೂ ಸಣ್ಣದಾಯಿತು... .. 


ಹೃದಯ ಭಾರವಾಗಿತ್ತು.. 


ಅಷ್ಟರಲ್ಲಿ ಅವರ ಮಡದಿ ಊಟಕ್ಕೆ ಕರೆದಳು..
ಊಟಕ್ಕೆ ಕುಳಿತೆವು..

ಅವರ ಮಡದಿ 

ಬಹಳ ಪ್ರೀತಿಯಿಂದ ಸಡಗರದಿಂದ ಬಡಿಸುತ್ತಿದ್ದರು...

"ನಿನ್ನ  ಬದುಕು ಈಗ ಚೆನ್ನಾಗಿದೆ... 

ಕೃತಜ್ಞತೆಯಿಂದ ನಮ್ಮನ್ನು ನೆನಪಿಸಿಕೊಳ್ಳುತ್ತೀಯಲ್ಲ.. 

ಒಳ್ಳೆಯ ಮನಸ್ಸು ನಿನ್ನದು.. 

ಸಂಕೋಚ ಮಾಡ್ಕೋಬೇಡ.. 

ಎಲ್ಲವನ್ನೂ ಹಾಕಿಸ್ಕೊ... 

ನಿನ್ನ ಇಷ್ಟಗಳನ್ನೇ ಮಾಡಿದ್ದೇನೆ..."

ಬಾಳೆ ಎಲೆ  ನೋಡಿದೆ... 

ಎಲೆಯ ತುಂಬ ನನ್ನಿಷ್ಟದ ತಿಂಡಿಗಳು..
ಸಿಹಿ..
ಖಾರ... ಎಲ್ಲವೂ ಇತ್ತು...

ಹುಡುಗಿಯ ಬಗೆಗೆ ಇನ್ನೂ ಕೇಳಬೇಕೆನಿಸಿತು... 

" ಆ ಹುಡುಗಿ ಈಗ ಎಲ್ಲಿದ್ದಾಳೆ...?"


"ಅವಳದ್ದೊಂದು ದೊಡ್ಡ ಕಥೆ...."


" ಏನಾಯ್ತು..?... "


" ಗಂಡ ಕುಡುಕ... 

ವ್ಯಸನಿ...
ಪರ ಹೆಣ್ಣುಗಳ ಸಹವಾಸ...

ಪ್ರೀತಿ ಸಿಗದ  ಕಣ್ಣೀರಿನ ಜೊತೆ  ಬದುಕು.. .. !

ನಿನ್ನ ಜೊತೆಯಾಗಿದ್ದರೆ ಸುಖವಾಗಿರುತ್ತಿದ್ದಳೇನೋ...!.. "


ಸಾವಿರ ಸೂಜಿಗಳಿಂದ ಹೃದಯವನ್ನು ಚುಚ್ಚಿದಂತಾಯಿತು.... 

 ಅಯ್ಯೋ.... !!..

ಬೇಡ ಬೇಡವೆಂದರೂ
ಕಣ್ಣಲ್ಲಿ ದಳ ದಳ ನೀರು ಇಳಿಯುತ್ತಿತ್ತು..

ಹೃದಯ ಚೀರಿತು...

ಕಣ್ಣು ಒರೆಸಿಕೊಂಡೆ..

ಬಾಳೆ ಎಲೆ  ನೋಡಿದೆ... 

ಎಲ್ಲವೂ ಮಂಜು ಮಂಜಾಗಿತ್ತು.... 


ಕಿಡಕಿಯಿಂದ ಗಾಳಿ ಜೋರಾಗಿ ಬಂತು... 
ಮೊಂಬತ್ತಿ ಆರಿಹೋಯಿತು.. 

ಕತ್ತಲು.... 


ಕತ್ತಲಿಗೆ ಎಲ್ಲ  ಬಣ್ಣಗಳೂ... 

ಭಾವಗಳೂ   ಒಂದೆ... 


( ಕಥೆ )

(ದಯವಿಟ್ಟು ಪ್ರತಿಕ್ರಿಯೆಗಳನ್ನು ನೋಡಿ................ )