Saturday, June 26, 2010

" ಮೇ ಫ್ಲವರ್ ಮಿಡಿಯಾ " ಆಫಿಸಿನಲ್ಲಿ ......

ಅಂದು  ಮೇ ಫ್ಲವರ್ ಮಿಡಿಯಾ   ಆಫಿಸಿನಲ್ಲಿ ನಾನು ಹೇಳಿದ್ದು ಇಷ್ಟು.

"ಎಷ್ಟೊಂದು ಬ್ಲಾಗರ್ಸ್  ಇದ್ದಾರೆ ನಮ್ಮ ಕನ್ನಡದಲ್ಲಿ...!
ಕೆಂಡ ಸಂಪಿಗೆ, ಸಂಪದ, ದಟ್ಸ್ ಕನ್ನಡ,
ಬನವಾಸಿ ಗೆಳೆಯರ ಬಳಗ, ....ಸಾಂಗತ್ಯ...
ಅವಧಿ,....ಇತ್ಯಾದಿ....
 ಬಹಳ ಬಹಳ ಇವೆ...
ಇದನ್ನು ಬಿಟ್ಟು ವಯಕ್ತಿಕವಾಗಿ  ಸಾವಿರಾರು ಬ್ಲಾಗುಗಳಿವೆ...
ಇವರೆಲ್ಲರನ್ನು ಒಟ್ಟು ಸೇರಿಸಿ ಒಂದು  ಸಮ್ಮೇಳನ ಮಾಡಬೇಕು...
ಕೆಲವೇ.. ಗೆಳೆಯರ  ಕೂಟ ಆಗಬಾರದು....
ಇದನ್ನೆಲ್ಲಾ ಬಹಳ ವ್ಯವಸ್ಥಿತವಾಗಿ ಮಾಡ ಬೇಕು "

ಇದಕ್ಕೆ ಸಹಮತವಾಗಿ ಗೆಳೆಯ ಶಿವು, ಮತ್ತಿತರರು  ಮಾತನಾಡಿದರು..

ಎಲ್ಲರ  ಅಭಿಪ್ರಾಯವು ಒಂದೆ ಆಗಿತ್ತು  !!

"ಈ ಸಮ್ಮೇಳನ  ವ್ಯವಸ್ಥಿತವಾಗಿ, ಯಶಸ್ವಿಯಾಗಿ..
ಎಲ್ಲರೂ  ಸೇರಿ  ಸಂಭ್ರಮದ  ಸಂತೋಷದ ಹಬ್ಬದಂತೆ  ಮಾಡಬೇಕು..."

ಇದಕ್ಕೆ  ಜಿ. ಎನ್. ಮೋಹನರು ತಮ್ಮ ಅಭಿಪ್ರಾಯವನ್ನು ಸೇರಿಸಿದರು...

" ಈಗ ಇರುವ  ಸಮಯದಲ್ಲಿ ಇದನ್ನು ವ್ಯವಸ್ಥಿತವಾಗಿ ಮಾಡಲು ಕಷ್ಟ..
(ಅಗಸ್ಟ್ ೨೨)

ಅಂದು  ಶಿವು ಮತ್ತು ಆಜಾದರ  ಕೃತಿಗಳ ಬಿಡುಗಡೆ ಸಮಾರಂಭವಾಗಲಿ..
ಅದು ನಮ್ಮ ಕನ್ನಡ  ಬ್ಲಾಗರ್ಸ್ ಕೃತಿಗಳ  ಬಿಡುಗಡೆ  ಸಮಾರಂಭ..

ಅಂದು  ಎಲ್ಲರೂ ಸೇರೋಣ.. 
ಬಿಡುಗಡೆ ಸಮಾರಂಭಾವಾದಮೇಲೆ ಒಂದು ವಿಚಾರ ಸಂಕಿರಣ ಇಟ್ಟುಕೊಳ್ಳೋಣ..

ಆಗ ಒಂದು ಕಮಿಟಿಯನ್ನು ರಚಿಸಿ...
ಮುಂದಿನ ಕಾರ್ಯಕ್ರಮದ ಬಗೆಗೆ ಸಮಗ್ರವಾಗಿ ಚರ್ಚಿಸಿ ನಿರ್ಧಾರ ತೆಗೆದು ಕೊಳ್ಳೋಣ.

ಈ ಹಿಂದೆ ಬ್ಲಾಗರ್ಸ್  ಕೂಟ ನಡೆಸಿದ "ಪ್ರಣತಿ" ಸಂಸ್ಥೆಯ ಅನುಭವ..ಮಾರ್ಗದರ್ಶನ  ಎಲ್ಲವನ್ನೂ ಪಡೆಯೋಣ.."

ತಮ್ಮ ಪೂರ್ಣ ಸಹಕಾರದ, ಮಾರ್ಗದರ್ಶನದ  ಭರವಸೆಯನ್ನು ಕೊಟ್ಟರು...
ಇದಕ್ಕೆ ಎಲ್ಲರ  ಸಹಮತ ವ್ಯಕ್ತವಾಯಿತು....

 ನಾವೆಲ್ಲರೂ ಅಗಸ್ಟ ೨೨ ಕ್ಕೆ  ಕನ್ನಡ ಭವನದಲ್ಲಿ ಸೇರೋಣ..
ಗೆಳೆಯರಾದ  ಶಿವು ಮತ್ತು  ಆಜಾದರ  ಕೃತಿಗಳ ಬಿಡುಗಡೆಯ ಸಂಭ್ರಮದಲ್ಲಿ ಪಾಲ್ಗೊಂಡು  ಮುಂದಿನ  ಕಾರ್ಯಗಳ ಬಗೆಗೆ ಚರ್ಚಿಸೋಣ..

ಎಲ್ಲವೂ ಮುಗಿದ ಮೇಲೆ  ಗೆಳೆಯ ಶಿವಪ್ರಕಾಶ್ ನನ್ನನ್ನು ಕೇಳಿದರು..

"ಪ್ರಕಾಶಣ್ಣ ..
ನಿಮ್ಮ ಎರಡನೇ ಕೃತಿ ಯಾವಾಗ ಬರುತ್ತದೆ...?
ಪ್ರಕಾಶಕರು ಯಾರು..?"

"ಪ್ರಕಾಶಕರು ಯಾರೆಂದು ಇನ್ನೂ  ನಿರ್ಣಯವಾಗಿಲ್ಲ...
ಮುಖ ಪುಟ " ಅಪಾರ" ಮಾಡುತ್ತಿದ್ದಾರೆ...
ಈ ಬಾರಿ  ನಾಡಿನ  ಹೆಸರಾಂತ ವ್ಯಂಗ ಚಿತ್ರಕಾರರು   ಚಿತ್ರ ಬಿಡಿಸಿಕೊಡುತ್ತಾರೆ..."

"ಈ ಪುಸ್ತಕದಲ್ಲಿ  ಏನಿರುತ್ತದೆ...?"

"ಮೊದಲಿನ ಹಾಗೆ ಬ್ಲಾಗಿನಲ್ಲಿ ಪ್ರಕಟವಾದ ಲೇಖನಗಳು.."

" ಪ್ರಕಾಶಣ್ಣ..
 ಒಂದು ಸಲಹೆ...
ಇದರಲ್ಲಿ  ನಾವು ಓದಿರದ  ಕೆಲವು  ಲೇಖನ  ಸೇರಿಸಿ...
ನೀವು ಬೀಡಿ ಸೇದಿದ್ದು...
ಕುಷ್ಟನ,...
 ನಾಗುವಿನ , ರಾಜಿಯರ ಲವ್ವು.... ಇತ್ಯಾದಿ...."

ನನಗೂ ಹೌದೆನಿಸಿತು...

"ಪ್ರಕಾಶಣ್ಣ...
ಈ ಪುಸ್ತಕದ ಹೆಸರೇನು.....?..?  "

" ಇದೇ... ಇದರ ಹೆಸರು...!"

" ಏನು  ??  !!.. "

" ಎರಡನೇ.. ಪುಸ್ತಕದ ಹೆಸರು...

" ಇದೇ... ಇದರ ಹೆಸರು....!!!  "


(ಅಗಸ್ಟ್ ೨೨ಕ್ಕೆ .... ಕನ್ನಡ ಭವನದಲ್ಲಿ  ಗೆಳೆಯರಾದ "ಆಜಾದ್"ರ ಕವನ ಸಂಕಲನ 
"ಜಲನಯನ"
ಹಾಗೂ ...
ನನ್ನನ್ನು ಬ್ಲಾಗ್ ಲೋಕಕ್ಕೆ ಕರೆ ತಂದ ಮತ್ತೊಬ್ಬ ಗೆಳೆಯ 
ಕೆ. ಶಿವುರವರ ....
ಪುಸ್ತಕ ಬಿಡುಗಡೆ ಸಮಾರಂಭಕ್ಕೆ  ನಾವೆಲ್ಲಾ ಸೇರೋಣ...
ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ  ಬನ್ನಿ...) 

Tuesday, June 1, 2010

ಪ್ರೇಮ.. ಆಕರ್ಷಣೆ.. ಅಗತ್ಯ.....

ನಾನು ಸ್ವಲ್ಪ ತುಂಟಿ...

ಗೆಳತಿಯರೊಡನೆ ಹರಟೆ.... ಮಾತುಕಥೆ..
ನಗು ..,
ಹಾಸ್ಯ ಇವೆಲ್ಲ ನನ್ನ ಅಗತ್ಯ....


ನನ್ನ ಆಸೆ..ನನ್ನ ಇಷ್ಟ..
ಮತ್ತು ನನ್ನ ಬದುಕು... ಇವೆಲ್ಲಕ್ಕೂ ಸಂಬಂಧವೇ.. ಇಲ್ಲ..


ಏನಾಯ್ತು ಗೊತ್ತಾ ?


ಅಪ್ಪ, ಅಮ್ಮ ತೋರಿಸಿದ ಹುಡುಗ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ..


ಅವನ ಹಣೆಯ ಮೇಲೆ ಕೂದಲೇ.. ಇಲ್ಲ..!
ಬಾಂಡ್ಲಿ..!
ಬಣ್ಣವೂ ಸ್ವಲ್ಪ ಕಪ್ಪು..
ಮುಖದಲ್ಲಿ ಗೆಲುವೇ.. ಇಲ್ಲ..
ನಗದೇ ವರ್ಷಗಳೇ ಆಯಿತೇನೋ ಎನ್ನುವಂಥಹ ಮುಖ...


ಇಂಥಹವನೊಡನೆ ಹೇಗೆ ಜೀವನ ಪೂರ್ತಿ ಇರುವದು ?

ಅಮ್ಮ ನನಗೆ ತಿಳುವಳಿಕೆ ಹೇಳುವ ಪ್ರಯತ್ನ ಮಾಡಿದರು..


"ನೋಡು.... ಪುಟ್ಟಿ..
 ನೀನಗೆ ವಾಸ್ತವದ ಅರಿವು ಇಲ್ಲ..
ಚಂದದ ನಗುವಿನ ಬದುಕಿಗೆ ಅಂದ ಬೇಕಿಲ್ಲ ಮಗಳೆ...
ಅದು ನಿನ್ನ ವಯಸ್ಸಿನ, ಹರೆಯದ ತಪ್ಪು.. ಚಂದ ಬಯಸುತ್ತದೆ..
ಆದರೆ..
ದಾಂಪತ್ಯದಲ್ಲಿ  ನೀನು ಸ್ವಭಾವದೊಡನೆ ಬದುಕ ಬೇಕಾಗುತ್ತದೆ...
ಅಲ್ಲಿ  ಚಂದದ ಅಗತ್ಯ  ಬಲು ಕಡಿಮೆ...
ಹುಡುಗ.... ತುಂಬಾ ಒಳ್ಳೆಯವ..
ಒಳ್ಳೆಯ ಸಂಪಾದನೆ ಇದೆ..
ಸುಸಂಕೃತ ಮನೆತನ..
ಹುಡುಗನಿಗೆ ಯಾವುದೇ.. ಚಟ ಇಲ್ಲ..
ಕಟ್ಟು ಮಸ್ತಾಗಿ...ಆರೋಗ್ಯವಾಗಿದ್ದಾನೆ..
ಬದುಕಲಿಕ್ಕೆ ಇನ್ನೇನು ಬೇಕು ?"


"ಅಮ್ಮಾ.. ..
ಈ ಮುಖ ನೋಡಿದರೆ ಪ್ರೀತಿಸ ಬೇಕು ಅಂತಾನೇ ಅನ್ನಿಸುವದಿಲ್ಲ..
ಸ್ವಲ್ಪವಾದರೂ ಚಂದ ಬೇಡವೇ..?
ಕಣ್ಣಲ್ಲೋ.. ಮಾತಲ್ಲೋ ಏನಾದರೂ ಆಕರ್ಷಣೆ ಬೇಡವೆ..?
ಇವನಿಗೆ ಯಾವುದೇ ಹವ್ಯಾಸಗಳೂ ಇಲ್ಲವಂತೆ....
ಸಿನೇಮಾ..ಹಾಡು.. ಸಾಹಿತ್ಯ ಯಾವುದೂ ಗೊತ್ತಿಲ್ಲವಂತೆ.. !
ತಾನಾಯಿತು.. ತನ್ನ ಕೆಲಸವಾಯಿತು...
ಅವನಿಗೆ ಒಂದು ಸಂಬಳವಿಲ್ಲದ ಕೆಲಸದವಳಾಗಿ ಇರಬೇಕಷ್ಟೆ..
ಈ ಮದುವೆ ನನಗೆ ಬೇಕಿಲ್ಲವಮ್ಮ.."


" ಪುಟ್ಟಿ...
ನೀನು ಯಾರನ್ನಾದರೂ ಇಷ್ಟಪಟ್ಟಿದ್ದೀಯೇನೆ..?"


"ಛೇ.. ಇಲ್ಲಮ್ಮ..
ನನಗೆ ನನ್ನ ಮದುವೆಯ ಬಗೆಗೆ..
ಬದುಕಿನ ಬಗೆಗೆ ಒಂದು ಕನಸಿದೆ..
ನನಗೆ ನಾನು ಬಯಸಿದಂಥಹ ಗಂಡು ಬೇಕಮ್ಮ..
ಮದುವೆಯಾಗುವ ಗಂಡನ್ನು ನೋಡಿದರೆ...
 ಪ್ರೀತಿ ಹುಟ್ಟುವಂತಿರ ಬೇಕು..
ಹೃದಯದಲ್ಲಿ ಭಾವನೆಗಳನ್ನು  ಹುಟ್ಟಿಸುವನಂತಾಗಿರ ಬೇಕು..
ನನ್ನ...
ಅವನ  ಬೇಕು ಬೇಡಗಳು  ಹೊಂದಿಕೆಯಾಗಿರಬೇಕು.. .."

"ನೋಡು..
ನಿನ್ನ ಪ್ರೀತಿ.. ಪ್ರೇಮ ಎಲ್ಲ ಹೃದಯದಲ್ಲಿ ಅಲ್ಲ...
ಅವಶ್ಯಕತೆ.. ಅವಲಂಬನೆ...
ಮತ್ತು ತಲೆಯಲ್ಲಿ ಹುಟ್ಟುತ್ತವೆ...
ಹೃದಯದಲ್ಲಿ ಪ್ರೇಮ ಹುಟ್ಟುತ್ತದೆ ಅನ್ನುವದು ಶುದ್ಧ ಸುಳ್ಳು..
ಸ್ವಲ್ಪ ದಿನ ಕತ್ತೆಯೊಡನೆ ಇದ್ದರೂ ಕುರುಡು ಪ್ರೀತಿ ಹುಟ್ಟುತ್ತದೆ..
ಮಗಳೆ...
ಈ ಹುಡುಗ ನಿನಗೆ ತಕ್ಕ ಜೋಡಿ.."


"ಅದು ಹೇಗೆ ಸಾಧ್ಯ ಅಮ್ಮಾ ?
ಇವನನ್ನು ...
ಯಾವ ದೃಷ್ಟಿಯಲ್ಲಿ...ಹೇಗೆ ಪ್ರೀತಿ ಮಾಡಲಿ ?"


"ನೋಡೂ ಪುಟ್ಟಿ...
ನಿನ್ನ ಅಪ್ಪನನ್ನು ನೋಡಿದ್ದೀಯಾ ?
ಇಡೀ ದಿನ ಗುಟ್ಕಾ ಜಗಿದು...
ಕಪ್ಪಾಗಿರುವ ಹಲ್ಲಿನೊಡನೆ ನಾನು ಮುವತ್ತು ವರ್ಷ ಸಂಸಾರ ಮಾಡಿಲ್ಲವೆ..?
ಅಂದ ಚಂದದೊಡನೆ ಬದುಕು ಇರುವದಿಲ್ಲವಮ್ಮ...
ಭಾವನೆಗಳನ್ನು ಹಂಚಿಕೊಂಡು..
ತ್ಯಾಗ ಹೊಂದಾಣಿಕೆಯಲ್ಲಿ ಬದುಕು ಇದೆಯಮ್ಮ...
ನೀನು ಇವನನ್ನೇ ಮದುವೆಯಾಗು...
ಈತ ಒಳ್ಳೆಯ .. ಚಟ ಇಲ್ಲದ ಹುಡುಗ..."


ನನ್ನ ಅಭಿಪ್ರಾಯಗಳಿಗೆ..
ಮಾತುಗಳಿಲ್ಲವಾಯಿತು..
ಶಬ್ಧಗಳಿಲ್ಲವಾಯಿತು...


ನೋಡು.. ..
ನೋಡುತ್ತಿದ್ದಂತೆ..
ಅಪ್ಪನ ಮಾತಿಗೆ ಎದುರಾಡಲಾಗದೆ ಅದೇ ಹುಡುಗನ ಮಡದಿಯಾದೆ...


ಮನಸ್ಸಿಗೆ ಬೇಕಿರದ ಬದುಕು..
ಬೇಡದ ಗಂಡಿನೊಡನೆ ಬಾಳು.. ಬಹಳ ಕಷ್ಟವಾಯಿತು...


ಯಾವಾಗಲೂ ನಗುನಗುತ್ತ..
ಗಂಡುಬೀರಿಯಂತಿದ್ದ ನನಗೆ.. ಬದುಕು ಹಿಂಸೆಯಾಗತೊಡಗಿತು...

ಈತ ಯಾವಾಗಲೂ ಸುಮ್ಮನೇ.. ಮೌನವಾಗಿ  ಇರುತ್ತಿದ್ದ.....
ಅದು ಸಹಿಸಲು  ಆಸಾಧ್ಯ ಮೌನ....!

ಆ ಮೌನದಷ್ಟು  ದೊಡ್ದಾದಾದ ಶಬ್ದ .., ಗಲಾಟೆ ಇನ್ನೊಂದಿಲ್ಲ..


ನನಗೆ ಮಾತು ಬೇಕು.. ನಗು ಬೇಕು..


ಈತ ಮನೆಗೆ ಬಂದ ಮೇಲೂ ತನ್ನ ಲಾಪ್‍ಟಾಪ್ ತೆಗೆದು ಅದರಲ್ಲಿ ಮುಳುಗಿ ಹೋಗುತ್ತಿದ್ದ...


ಇವನೋ..
ಇವನ ದೈನಂದಿನ ಚಟುವಟಿಕೆಗಳೋ... ನನಗೆ ಹಿಡಿಸದಾಯಿತು...

ನನಗೆ ಬೆಳಿಗ್ಗೆ ಎದ್ದು ಬೆಡ್ ಕಾಫಿ ಕುಡಿದು ಅಭ್ಯಾಸ..


"ಅದು ಆರೋಗ್ಯಕ್ಕೆ ಹಾಳು...
ಮೊದಲು ಬ್ರಷ್ ಮಾಡಿ ಕಾಫಿ ಕುಡಿ.."


ಇವನಿಗೆ ಬೆಳಿಗ್ಗೆ ಅಕ್ಕಿ ದೋಸೆಯೇ ಆಗಬೇಕು...
ನನಗೆ ನೂಡಲ್ಸ್..,
ಪೂರಿ ಚಪಾತಿ ಎಂದರೆ ಇಷ್ಟ..


ಇವೆಲ್ಲ ಆತನಿಗೆ ಸೇರುವದಿಲ್ಲ...


ನನ್ನಾಸೆ.. ಇಷ್ಟಗಳಿಗೂ.. ಅವನ ಅಭಿರುಚಿಗಳಿಗೂ ಬಹಳ ವ್ಯತ್ಯಾಸವಿತ್ತು..
ಇಷ್ಟವಿಲ್ಲದವರೊಡನೆಯ ಬದುಕು ಬಲು ಕಷ್ಟ...


ಬೆಳಗು.. ಸಂಜೆ..
ರಾತ್ರಿಗಳೆಲ್ಲ ನೀರಸವಾಗಿ...
ಯಾಂತ್ರಿಕವಾಗಿ..... ಉರುಳುತ್ತಿತ್ತು...


ನಾವಿದ್ದಿದ್ದು ಮೊದಲ ಅಂತಸ್ಥಿನಲ್ಲಿ...

ಅಂದು ಬೆಳಿಗ್ಗೆ ಯಾವತ್ತಿನಂತೆ ಮೌನವಾಗಿಯೇ ದಿನ ಶುರುವಾಯಿತು..
ಯಾರೋ ಬೆಲ್ ಮಾಡಿದ್ದರು..
ನಾನು ಬಂದು ಬಾಗಿಲು ತೆಗೆದೆ..

ಎತ್ತರದ...
ನಗುಮುಖದ ವ್ಯಕ್ತಿಯೊಬ್ಬ ನಿಂತಿದ್ದ....


"ನಾನು.. ಕೆಳಗಡೆ ಇರ್ತೇನೆ.. ಈ ಮನೆ ಓನರ್..
ಇವತ್ತು ನನ್ನ ಮಡದಿಯ ಸೀಮಂತ..
ಡೆಲಿವರಿ ದಿನ ಹತ್ತಿರ ಬಂದಿವೆ..
ಸಮಯದ ಅಭಾವ.... ಹಾಗಾಗಿ ಇವತ್ತೇ ಇಟ್ಟುಕೊಂಡಿದ್ದೇನೆ..
ಸಾಯಂಕಾಲ ನೀವೆಲ್ಲ ನಮ್ಮನೆಗೆ ಬರಬೇಕು..
ನಮ್ಮ ಮನೆಯಲ್ಲೇ ಊಟ.."


"ಬನ್ನಿ...ಒಳಗೆ.. ಬನ್ನಿ.. "


ನನ್ನ ಗಂಡ ಅವರು ಬಂದೊಡನೆ ಎದ್ದು ನಿಂತ..


"ನೋಡಿ.... ನೀವು ಇವತ್ತು ನಿಮ್ಮ ಕೆಲಸದಿಂದ.. ಸ್ವಲ್ಪ ಬೇಗ ಬನ್ನಿ.."


ನನ್ನ ಗಂಡ ಕಂಡೂ ಕಾಣದ ಮುಗುಳುನಗೆ ನಕ್ಕ..
ಅವರ ನಗುವೇ.. ಹಾಗೆ..


"ಆಯ್ತು ಸರ್.."


ನಾನು ಅವರಿಗೆ ಉಪಚಾರ ಮಾಡಿದೆ..
".. ಕುತ್ಕೊಳ್ಳಿ .. ಕಾಫಿ ಮಾಡ್ತೇನೆ.."


"ಇಲ್ಲಾರಿ ಕಾಫೀ ಕುಡಿದರೆ ...
ನನ್ನ ದೈನಂದಿನ ಸಿಸ್ಟಮ್ ಸರಿ ಇರೋದಿಲ್ಲ..
ಇನ್ನು..ಟೀ..ಈಗ ಕುಡಿದರೆ ರಾತ್ರಿ ನಿದ್ದೆ ಬರೋದಿಲ್ಲ..!
ದಯವಿಟ್ಟು ಏನೂ ಬೇಡ.."


ಅವರ ಮಾತಿನಲ್ಲಿರುವ ಹಾಸ್ಯ ನನಗೆ ಇಷ್ಟವಾಯಿತು...


"ಇರಿ ...
ಬಿಸಿ.. ಬಿಸಿ ಹಾಲು ಹಾರ್ಲಿಕ್ಸ್ ತರ್ತೇನೆ.."


ಆತ ಮಾತನಾಡುವಾಗ ಕಣ್ಣನ್ನೇ... ನೋಡುತ್ತಿದ್ದ..
ಸಣ್ಣ ಮುಗುಳು ನಗು ತುಟಿಯಲ್ಲಿರುತ್ತಿತ್ತು...


"ಅಯ್ಯೋ..
ಹಾರ್ಲಿಕ್ಸು ಹಾಗೆ ಕುಡಿಯೋದಿಲ್ಲಾರಿ...
ಅದನ್ನು ಕುಡಿಯ ಬೇಕಾದರೆ..
ನನಗೆ ಬಾಟಲಿ ಮತ್ತು ನಿಪ್ಪಲ್ಲು ಬೇಕು..
ಹ್ಹ್ಹಾ..ಹ್ಹಾ.. !!
ತಮಾಶೆ ಮಾಡಿದೇರಿ..
ಹಾಲು ನನಗೆ ಇಷ್ಟವಿಲ್ಲ.. ಪ್ಲೀಸ್.. ಏನೂ ಬೇಡ..
ನೀವು ಇವತ್ತು ನಮ್ಮನೆಗೆ ಬನ್ನಿ.."


ನನಗೂ ನಗು ಬಂತು... ನಕ್ಕೆ..
ನಗದೇ.. ಬಹಳದಿಗಳಗಿದ್ದವು ..


"ಆಯ್ತು ಸರ್..
ನಾವು ಇಬ್ಬರೂ ಬರ್ತೇವೆ..."


ಬಂದವ ಕೆಲವೇ ಹೊತ್ತಿನಲ್ಲಿ ನನ್ನನ್ನು ಇಂಪ್ರೆಸ್ ಮಾಡಿಬಿಟ್ಟಿದ್ದ...


ಸಾಯಂಕಾಲ ನಾನು ಚೆನ್ನಾಗಿಯೇ ತಯಾರಾದೆ...


ಕಿವಿಗೆ ದೊಡ್ಡ ರಿಂಗು..
ಕೈ ತುಂಬಾ ಬಳೆ..
ಹಳದಿ ರೇಷ್ಮೇ ಸೀರೆ.. ಚಿಕ್ಕ ತೋಳಿನ ಬ್ಲೌಸ್...


ಕನ್ನಡಿಯಲ್ಲೊಮ್ಮೆ ನನ್ನನ್ನೇ ನೋಡಿಕೊಂಡೆ...


ಒಂದು ರಸಿಕ ಮನಸ್ಸಿನ ಮಡದಿ ನಾನಾಗ ಬೇಕಿತ್ತು...!!


ಮಾಡುವ ವಿಚಾರ ಕೆಟ್ಟದಾಗಿದ್ದರೂ...
ಬೇಡವೆಂದು ಹೇಳಲು ಮನ ಒಪ್ಪುತ್ತಿಲ್ಲ..


ನನ್ನ ಗಂಡ ಆ ದಿನವೂ ತಡವಾಗಿಯೇ ಬಂದ..
ನಾವು ಅವರ ಮನೆಯೊಳಗೆ ಹೋಗುವ ಹೊತ್ತಿನಲ್ಲಿ ಎಲ್ಲ ನೆಂಟರಿಷ್ಟರು ಖಾಲಿಯಾಗಿದ್ದರು..


"ಬನ್ನಿ... ಬನ್ನಿ.. ನಿಮಗೇ...
 ಕಾಯುತ್ತಿದ್ದೆ..."


ಅದೇ ತುಂಟ ಕಣ್ಣಿನಿಂದ ಮೆಚ್ಚುಗೆಯ ನೋಟ... !


ನಾನು ಮುಗುಳು ನಗೆ ನಕ್ಕೆ..


ಅತನ ಮಡದಿಯನ್ನೊಮ್ಮೆ ನೋಡಿದೆ..
ತುಂಬು ಬಸುರಿ..
ಲಕ್ಷಣವಾಗಿದ್ದಳು.. ಮೈತುಂಬ ಬಂಗಾರ...
ಅವಳ ತಾಯಿತನ... ಅವಳಿಗೊಂದು ಕಳೆ ಕೊಟ್ಟಿತ್ತು...
ತುಂಬಾ  ಮುಗ್ಧೆ ಅನಿಸುತ್ತಿತ್ತು....


"ನಮ್ಮನೆಯವರು... ನಿಮ್ಮನ್ನು ತುಂಬಾ ಹೊಗಳಿದ್ದಾರೆ..
ಮನೆಯನ್ನು ತುಂಬಾ ಚೆನ್ನಾಗಿ ಇಟ್ಟು ಕೊಂಡಿದ್ದೀರಂತೆ....
ನಿಮ್ಮ  ಚಂದದಷ್ಟೆ..
ಚಂದ ನಿಮ್ಮ  ಮನೆಯ ಅಲಂಕಾರ...ಎಂದೆಲ್ಲ ಹೊಗಳಿದ್ದಾರೆ..
ಅವರು ಹೇಳಿದ ಹಾಗೆ ನೀವು ಸುಂದರವಾಗಿದ್ದೀರಾ ...!!
ನನಗೆ ನಿಮ್ಮ ಮನೆಯನ್ನೂ ನೋಡ ಬೇಕಲ್ಲ.."


ನನಗೆ ನಾಚಿಕೆಯೂ...
ಸಂತೋಷವೂ ಆಯಿತು..
ಬಹಳ ದಿನಗಳ ನಂತರ ನನ್ನ  ಚಂದವನ್ನು ಒಬ್ಬರು ಗುರುತಿಸಿದ್ದರು..  !


ಆತ ಮತ್ತೆ ಬಂದ...
ಕೈಯಲ್ಲಿ ಸ್ವೀಟು.. ಖಾರ ಹಿಡಿದು...


"ನೋಡಿ...
ಇದನ್ನು.. ಬೇಡವೆನ್ನಬೇಡಿ..
ಮದುವೆಯಾದ ಬ್ರಹ್ಮಚಾರಿಯ ಉಪಚಾರ,..ಇದು..
ಸಂಗಡ ಜ್ಯೂಸ್ ಇದೆ.. ನೀವು ಮಾತನಾಡುತ್ತಾ ಇರಿ.."

ಹೆಂಡತಿಯ ಮುಖನೋಡಿ...
" ಚಿನ್ನಾ....
ನಿನಗೇನು ಕೊಡಲಿ...?"

ನನ್ನ ಗಂಡ ಇಂಥಹ ಭಾಷೆ..
ತಮಾಷೆ... ಒಮ್ಮೆಯಾದರೂ ಮಾಡಬಹುದಾ ?


ಆತ ಹೆಂಡತಿಯ ಬಳಿ ಮಾತನಾಡಿದರೂ...
ಮೆಚ್ಚುಗೆಯ ನೋಟ ನನ್ನಮೇಲಿತ್ತು..!


ತನ್ನ ಅಲಂಕಾರ, ಚಂದದ ಪ್ರಶಂಸೆ ಯಾವ ಹೆಣ್ಣಿಗೆ ತಾನೆ ಇಷ್ಟವಾಗುವದಿಲ್ಲ ?


ನಾನು ಮುಖ ತಿರುಗಿಸಿ ನನ್ನ ಗಂಡನ ಬಳಿ ಬಂದೆ...


ಆತ ಪಾದ ರಸದಂತೆ ಓಡಾಡುತ್ತಿದ್ದ..
ಆಗಾಗ ನಮ್ಮ ಬಳಿ ಬಂದು ಮಾತನಾಡಿಸುತ್ತಿದ್ದ...


ತಾನು ದೂರದಲ್ಲಿದ್ದರೂ ...
ಮೆಚ್ಚುಗೆಯ ನೋಟವನ್ನು ನನ್ನ ಮೇಲೆ ಇಡುತ್ತಿದ್ದ...


ನಾವು ಅಲ್ಲಿ ಊಟವನ್ನೂ ಮುಗಿಸಿ ಹೊರಟೆವು...
ಬೀಳ್ಕೊಡಲು ಬಾಗಿಲವರೆಗೂ ಆತ ಬಂದ...


"ನೀವು ಬಂದಿದ್ದು ಬಹಳ ಖುಷಿಯಾಯಿತು..
ನಮ್ಮನೆಗೆ ಕಳೆ ಬಂದಿತ್ತು..
ನೀವು ಬರುತ್ತಾ ಇರಿ..
ನಮ್ಮನೆಯವರಿಗೂ ಸಮಯ ಕಳೆಯಲು ಅನುಕೂಲವಾಗುತ್ತದೆ.."

ಆತ ನನ್ನ ಬಳಿ  ಮಾತನಾಡಿದ ..
ವಿಷಯವೇ.....ಬೇರೆ...!
ಕಣ್ಣಲ್ಲಿ ಹೇಳಿದ ವಿಷಯವೇ.. ಬೇರೆ....!


ನಾನು ತಲೆಯಾಡಿಸಿದೆ...


ಮನೆಗೆ ಬಂದವಳಿಗೆ ಮನಸೆಲ್ಲ ಕಸಿವಿಸಿ...


ನನ್ನ ವಿಚಾರಗಳು ತಪ್ಪಲ್ಲವೆ...?


ಜಾರುವ ಮನಸ್ಸು..
ಹಿಡಿತವಿಲ್ಲದೆ ...ಹೋಗುವಾಗಲೂ..
ಮಧುರ ಆಸೆಯ..
ಕುತೂಹಲದ....
ರೋಮಾಂಚನದ ಕಾತುರ... !


ನನ್ನ ದಾರಿ... ಜಾರುತ್ತಿದೆಯಾ ??
ನಾನು ಬೀಳುತ್ತಿರುವೆನಾ  ?


ಮಧ್ಯ ರಾತ್ರಿ ಬಾಗಿಲು ತಟ್ಟಿದ ಶಬ್ಧ...!
ನನ್ನವರು ಲಗುಬಗೆಯಿಂದ ಬಾಗಿಲು ತೆಗೆದರು..

ಆತ  ಗಾಭರಿಯಲ್ಲಿದ್ದ..!


"ರೀ.... ನನ್ನಾಕೆಗೆ ಹೆರಿಗೆ ನೋವು ಶುರುವಾಗಿದೆ..
ದಯವಿಟ್ಟು ನೀವೂ ಬನ್ನಿ...
ಅಂಬ್ಯುಲೆನ್ಸ್ ಈಗ ಬಂದು ಬಿಡುತ್ತದೆ.."


ನನ್ನವರು ಅದೇ ಲುಂಗಿಯ ಮೇಲೆ ಶರಟು ಹಾಕಿ ಹೊರಟರು..
ಅವರಿಗೆ  ಸಹಾಯ ಮಾಡುವದೆಂದರೆ..... ಬಹಳ ಇಷ್ಟ......


ಅವರು ಹೋದ ಮೇಲೆ..
ನನಗೆ ಒಬ್ಬಳಿಗೆ ನಿದ್ದೆಯೇ ಬರಲಿಲ್ಲ...
ಆಚೆ ಈಚೆ ಹೊರಳಾಡಿದೆ...


ಆತನ ರಸಿಕ ಮಾತು...
ತುಂಟ ನೋಟ... ಎಲ್ಲವೂ ನೆನಪಾಗುತ್ತಿತ್ತು....

ಅಪ್ಪ.. ಅಮ್ಮ ಕೊಟ್ಟ  ಸಂಸ್ಕಾರಕ್ಕಿಂತ...
ದೈಹಿಕ ಆಕರ್ಷಣೆ ದೊಡ್ಡದೇ...?


ಅಷ್ಟರಲ್ಲಿ ಫೋನ್ ರಿಂಗಾಯಿತು...
ನನ್ನವರು ಫೋನ್ ಮಾಡಿದ್ದರು...


" ನೋಡೇ...
ಡೆಲಿವರಿ ನಾರ್ಮಲ್ ಆಯಿತು.. ಗಂಡು ಮಗು..
ಆದರೆ..."


"ಏನು ಆದರೆ..?"


"ಮತ್ತೇನಿಲ್ಲ..
ಪಾಪುವಿಗೆ ಎರಡು ಕಿವಿಗಳೇ ಇಲ್ಲ..!
ಆದರೆ ಕಿವಿಯಲ್ಲಿ ತೂತು ಇದೆ!
ಕಿವಿ ಕೇಳ ಬಹುದು !!"


ನನಗೆ ಏನು ಹೇಳ ಬೇಕೆಂದೇ ತೋಚಲಿಲ್ಲ...
ಆಶ್ಚರ್ಯವೂ ಆಯಿತು...!
ಬೇಸರವೂ ಆಯಿತು... ಯಾಕೆ ಹೀಗೆ ?


ಅವರು ಆಸ್ಪತ್ರೆಯಿಂದ ಬಂದಾಗ ಬೆಳಗಾಗಿತ್ತು...
ಅವರು ಗಂಭೀರವಾಗಿದ್ದರು...


ಅವರು ಸ್ನಾನ ಮಾಡಿಯಾದ ಮೇಲೆ ನಾಷ್ಟಾ ಇಟ್ಟೆ....


ಅವರು ಇನ್ನೂ ಗಂಭೀರವಾಗಿಯೇ ಇದ್ದರು...
ಮಗು ಹಾಗೆ ಇದ್ದಿದ್ದಕ್ಕೆ ಬೇಸರ ಆಗಿರ ಬಹುದಾ ?
ನನಗೆ ಕುತೂಹಲ ತಡೇಯಲಾಗುತ್ತಿಲ್ಲ..

ಕಿವಿಯಿಲ್ಲದ  ಪಾಪು.....!


ನಾನು ತುಸು ಧೈರ್ಯ ಮಾಡಿದೆ...


" ತಾಯಿ ಮಗು ಆರೋಗ್ಯವಾಗಿದ್ದಾರಾ ?"


"ಹುಂ...
 ಚೆನ್ನಾಗಿದ್ದಾರೆ...
ಇನ್ನೊಂದು ಬೇಸರದ ವಿಷಯವಿದೆ...! "


"ಏನು ?? !!"


"ಪಾಪು ಹೃದಯದಲ್ಲಿ ತೂತು ಇದೆ.. !!
ಹಾರ್ಟಿನಲ್ಲಿ ಹೋಲ್ ಇದೆ.. !!"


" ಅಯ್ಯೋ...!!
ಹೌದಾ ? !!
ಯಾಕೆ ಹೀಗೆ ಇಂಥಹ ಪಾಪು ಹುಟ್ಟುತ್ತವೆ ?"


"ನೋಡು...
 ಇದಕ್ಕೆ.. ಹಲವಾರು ಕಾರಣ ಇದೆಯಂತೆ...
ಅಲ್ಲಿನ  ನರ್ಸ್ ಕೇಳಿದೆ....
ಅವಳು ಹೇಳಿದ ಕಾರಣ ಕೇಳಿ ಬಹಳ ಬೇಸರವಾಯಿತು..."

"ಏನದು  ??"


"ಹೆಂಡತಿ ಬಸುರಿಯಿದ್ದಾಗ..
ಗಂಡ ಬೇರೆ ಹೆಂಗಸರ ಸಹವಾಸ ಮಾಡುತ್ತಿದ್ದರೆ...
ಇನ್ಫೆಕ್ಷನ್  ಆಗಿ..ಹೀಗೆಲ್ಲ ಆಗುತ್ತದಂತೆ.....!
ಅಷ್ಟು ಚಂದದ ಹೆಂಡತಿ...!
ಮೋಸ ಮಾಡುವ ಮನಸ್ಸು  ಹೇಗೆ ಬರುತ್ತದೋ...?
ಏನೋ...
ಛೇ...
ಅವರ ಮೇಲಿನ ಗೌರವ ಹೊರಟು ಹೋಯಿತು ನೋಡು...!!"


ನನಗೆ  ದೊಡ್ಡ  ಷಾಕ್....!


ಗಂಡನ ಮುಖವನೊಮ್ಮೆ ನೋಡಿದೆ...
ಹಣೆಯ ಮೇಲೆ ಕೂದಲು ಇರದಿದ್ದರೂ...
ಒಂದು ಥರಹ ಚಂದವೇ ಕಾಣುತ್ತಿದ್ದ...!


ಬಕ್ಕ ತಲೆಯ ಮೇಲೆ ಕೈಯಾಡಿಸ ಬೇಕು ಎನಿಸಿತು....!


ಅವನನ್ನೊಮ್ಮೆ ...
ಹಿಂದಿನಿಂದ...ತಬ್ಬಿ...
ಹಣೆಯ ಮೇಲೆ ಮುತ್ತಿಡಬೇಕೆಂದೆನಿಸಿತು....!

ಸಂಭಾವಿತ .. ಸಭ್ಯಸ್ಥ ..
ನನ್ನ..
ಗಂಡನನ್ನು ಮುದ್ದಿಸ ಬೇಕೆನಿಸಿತು....!


(ಬಹಳ ..
ಸುಂದರ... ಒಳ್ಳೆಯ.. ಪ್ರತಿಕ್ರಿಯೆಗಳಿವೆ....
ದಯವಿಟ್ಟು ಪ್ರತಿಕ್ರಿಯೆಗಳನ್ನೂ.. ಓದಿ...

ಎಲ್ಲ ಪ್ರತಿಕ್ರಿಯೆಗಳಿಗೂ ಉತ್ತರಿಸುವೆ.. ಸ್ವಲ್ಪ  ಕಾಲಾವಕಾಶ ಕೊಡುವಿರಲ್ಲವೇ?...)