Tuesday, November 25, 2008

ಹೀಗೂ....ಒಂದು..ಕಾಲವಿತ್ತು...!!!


ಕೆಂಪಜ್ಜಿ ನನ್ನಜ್ಜನ ಅಕ್ಕ. ಬಾಲ್ಯ ವಿಧವೆ. ಮದುವೆಯ ದಿವಸವೆ ಗಂಡನಿಗೆ ಹಾವು ಕಚ್ಚಿ, ತವರು ಮನೆ ಸೇರಿದಳು. ಕೆಂಪು ಸೀರೆ ಉಡುತ್ತಿದ್ದಳು.. ನಮಗೆಲ್ಲ "ಕೆಂಪಜ್ಜಿ" ಯಾಗಿದ್ದಳು.
ನಮ್ಮನೆಯ ಆಧಾರ ಸ್ಥಂಭ ಆ ಕೆಂಪಜ್ಜಿಗೆ ನನ್ನಜ್ಜ ಬಹಳ ಗೌರವ ಕೊಡುತಿದ್ದರು.
ನನ್ನ ಚಿಕ್ಕಪ್ಪ ಹೊಸ ಮನೆ ಕಟ್ಟಿದಾಗ ಕೆಂಪಜ್ಜಿ ಫೋಟೊ ದೇವರ ಪೀಠದಲ್ಲಿಟ್ಟಿದ್ದ.

ನಾವೆಲ್ಲ ಇಂದು ಕಾರಲ್ಲಿ,,, ವಿದೇಶದಲ್ಲಿ,, ಓಡಾಡುತ್ತಿದ್ದೇವೆ. ಇದನ್ನು ನೋಡಿ ಆನಂದ ಪಡಲು ಆ ಜೀವ ಇರಬೇಕಾಗಿತ್ತು...

ಆಗ ನಮ್ಮದು ದೊಡ್ಡ ಕುಟುಂಬ. ಮನೆ ತುಂಬಾ ಮಕ್ಕಳು. ಯಾವ ತಾಯಿಂದಿರಿಗೂ ಮಕ್ಕಳನ್ನು ನೋಡಿಕೊಳ್ಳಲು ಸಮಯ ಇರುತ್ತಿರಲಿಲ್ಲ. ಊಟ, ತಿಂಡಿ, ಸ್ನಾನ ಎಲ್ಲ ಕೆಂಪಜ್ಜಿ ಮಾಡಿಸುತ್ತಿದ್ದಳು.

ನಮಗೆ ಕೆಂಪಜ್ಜಿ ಬಹಳ ಅಚ್ಚುಮೆಚ್ಚು. ಅವಳ ಕಥೆ ಕೇಳಲು ಮುಗಿದು ಬೀಳುತ್ತಿದ್ದೇವು.

ನನಗೆ ಜಗಜಿತ್ ಸಿಂಗರ ಘಝಲ್ ನೆನಪಾಗುತ್ತಿದೆ. " ವೊ ಕಾಗಜ್ ಕಿ ಕಶ್ತಿ..ಬಾರಿಶ್ ಕಾ ಪಾನಿ..."

ಮಳೆಗಾಲ ದಿನಗಳು.. ಒದ್ದೆಯಾದ ಕಂಬಳಿ ಒಣಗಿಸಲು "ಹೊಡಚಲು" ಹಾಕುತ್ತಿದ್ದರು.

ಕಟ್ಟಿಗೆ ಬೆಂಕಿ.. ಅದರ ಮೇಲೆ ಚಪ್ಪರದಲ್ಲಿ ಕಂಬಳಿ...ಹೊಗೆ... ಸುತ್ತಲೂ ನಾವು ಐದಾರು ಮಕ್ಕಳು..

ಕೆಂಪಜ್ಜಿ ಕಥೆ.. ಹೊರಗೆ ಮುಸಲಧಾರೆ ಮಳೆ..

"ಕೆಂಪಜ್ಜಿ..ಕೆಂಪಜ್ಜಿ.. ಕಥೆ ಹೇಳು..."

"ಸ್ವಲ್ಪ ಇರ್ರೋ... ಹಲಸಿನ ಬೇಳೆ ಸುಡೋಣ" ಅನ್ನುತ್ತ ಬೇಳೆ ಸುಡಲು ಶುರು ಮಾಡುತ್ತಿದಳು

"ನಾನು ಸೈಕಲ್ಲು ಮೊದಲ ಬಾರಿ ನೋಡಿದ ವಿಷಯ ಹೇಳಲಾ..?" ಕೇಳಿದಳು.

ನಮಗೇನು..?. ಕೆಂಪಜ್ಜಿಯ ಮೋಡಿಗೆ ಒಳಗಾಗಿದ್ದೆವು..ಸಂಗಡ ಬಿಸಿ ಬಿಸಿಯಾಗಿ ಸುಟ್ಟಿದ ಹಲಸಿನ ಬೇಳೆ..!!
ಶುರುವಾಯಿತು..ಕೆಂಪಜ್ಜಿಯ... ಓಘ....

"ಆಗೆಲ್ಲಾ ರೆಡಿಯೊ ಕೂಡ ಅಪರೂಪ, ಪಟೆಲಜ್ಜನ ಮನೆಗೆ ಮೊದಲ ಬಾರಿಗೆ ರೆಡಿಯೋ ನೋಡಿ ನಾವೆಲ್ಲಾ ದಂಗಾಗಿ ಬಿಟ್ಟಿದ್ದೇವು.. ಪಟೆಲಜ್ಜ ಪೇಟ್ಟಿಗೆ ಥರ ಇದ್ದಿದ್ದ ಬೊಕ್ಸ್ ತಂದಿದ್ದ.. ಅದನ್ನು ಪಟ್ಟಣದಿಂದ ಬಂದಿದ್ದ ಒಬ್ಬಾತ ಸೆಲ್ಲ್ ಹಾಕಿ ಯಾವುದೊ ಬಿರಡೇ ತಿರುಗಿಸಿದ್ದ..
ಎಂತದೊ ಸುಡುಗಾಡು ಹಾಡು..ಹಿಂದಿ ಹಾಡಂತೆ.. ಬಂದಿತ್ತು..ನಮಗೆ ಅರ್ಥವಾಗದ ಭಾಷೆ.."

" ಕೆಂಪಜ್ಜಿ... ಸೈಕಲ್ಲು..ಕಥೆ..." ಚಂದಾವರದ "ಗಪ್ಪು" ನೆನಪಿಸಿದ..

" ಹೌದಲ್ಲಾ. ಮರೆತೇ ಬಿಟ್ಟಿದ್ದೆ....
ಪಟೆಲಜ್ಜನ ಮನೆಗೆ ಇಂಗ್ಲೀಷ್ ಜನ ಬರುತ್ತಿದ್ದರು. ಒಂದು ದಿನ ಅವರು ಹೋದ ಮೇಲೆ ಪಟೆಲಜ್ಜ
ಊರವರೆಲ್ಲರನ್ನೂ ಕರೆದು " ನಾಡಿದ್ದು ಕಾನಸೂರಿಗೆ ಸೈಕಲ್ಲು ಬರ್ತದೆ.. ಬೆಳಿಗ್ಗೆ ಆರು ಗಂಟೆಗೆ.. ನೋಡೊವರೆಲ್ಲ ಬರಬಹುದು.." ಅಂದ.

ನಮ್ಮನೆ ರಾಮಕ್ರಷ್ಣ( ನನ್ನ ಅಜ್ಜ) " ಅದೆಲ್ಲ..ಎಂತಾ ನೋಡದು..? ಸೈಕಲ್ಲಂತೆ.?
ಎಂಥಾ ಪ್ರಯೋಜನ..?. ಎರಡುಗಾಲಿ ಇರುತ್ತಂತೆ..ನೋಡಿ ಎಂತ ಮಾಡುವದು..?
ಅದ್ರಿಂದ ಹೊಟ್ಟೆ ತುಂಬುತ್ತಾ? ಯಾರೂ ಹೋಗುವದು ಬೇಡ" ಎಂದು ಫರ್ಮಾನು ಹೊರಡಿಸಿದ.

ನನಗೆ ಕೆಟ್ಟ ಕುತೂಹಲ..." ಎಂಥದು ಇದು ಸೈಕಲ್ಲು..? ಎರಡು ಗಾಲಿ ಮೇಲೆ ಮನುಷ್ಯ ಹೋಗಬಹುದಂತೆ..ಜೋರಾಗಿ ಹೋಗುತ್ತದಂತೆ..!.!!"

ರಾತ್ರಿಯಿಡಿ ನಿದ್ದೆಯಿಲ್ಲ.. ಬೆಳಗಾಗುತ್ತಿದ್ದಂತೆ ಗಟ್ಟಿ ಮನಸ್ಸು ಮಾಡಿಕೊಂಡೆ.
ಪಕ್ಕದ ಮನೆ ಭಾಗಕ್ಕ, ಅಣ್ಣಣ್ಣ ಇಬ್ರೂ " ನಾವು ಸೈಕಲ್ಲು ನೋಡಲಿಕ್ಕೆ ಕಾನಸೂರಿಗೆ ಹೋಗ್ತೇವೆ" ಅಂದಿದ್ರು.

ನಾನು ರಾಮಕ್ರಷ್ಣನಿಗೆ ಬೆಣ್ಣೆ ಹೊಸೆದೆ. "ತುಂಬಾ ದೂರ ಆಗಿದ್ರೆ ಹೊಗ್ತಿರಲಿಲ್ಲ..ಇಲ್ಲೇ ಕಾನಸೂರು , ಎಲ್ಲರ ಸಂಗಡ ಹೊಗಿ ಬರ್ತೇನೆ.." ದುಡ್ಡು ಎಂತದೂ ಬೇಡ ಮಾರಯಾ" ಅಂದೆ.

ಬಹಳ ಕಷ್ಟಪಟ್ಟು ..ಅಂತೂ ಅವನನನ್ನು ಒಪ್ಪಿಸಿದೆ..

ಊರಲ್ಲಿ ಸಂಭ್ರಮ...ಎಲ್ಲರೂ ಎಲ್ಲರನ್ನೂ ಕೇಳುವದು ಒಂದೆ ಪ್ರಶ್ನೆ.." ನೀನು ಸೈಕಲ್ಲು ನೋಡಲೆ ಬರಲ್ವಾ..?"

ಮರು ದಿನ ಬೆಳಿಗ್ಗೆ ನಾಲ್ಕು ಗಂಟೆಗ ಏಳಬೇಕು.. ತಿಂಡಿ ರೆಡಿ ಮಾಡ ಬೇಕು..

" ನಾಲ್ಕು ಗಂಟೆಗೆ ಹೇಗೆ ಏಳುವದು..? "

"ಕೆಂಪಜ್ಜಿ ..ಅಲಾರಮ್ ಕಿವಿ ತಿರುಪಿದ್ರೆ..ಅಯಿತಪ್ಪಾ..?" ರೆಖಾ ಮಧ್ಯದಲ್ಲಿ ಬಾಯಿ ಹಾಕಿದಳು..

"ಆಗೆಲ್ಲ.. ಅಲಾರಮ್ ಎಂತದೂ ಇರ್ಲಿಲ್ಲ.
ಬೇಳ್ಳನಾಯ್ಕನ ಕೋಳಿ ನಾಲ್ಕು ಗಂಟೆಗೆ ಕೂಗ್ತದೆ ಅಂತ ಪಟೇಲಜ್ಜನಿಗೆ ಗೊತ್ತಿತ್ತು.
ಬೆಳ್ಳನಾಯ್ಕಂಗೆ ಪಟೆಲಜ್ಜ ಕರೆಸಿ ಮಾತನಾಡಿದ." ನಾಳೆ ಬೆಳಿಗ್ಗೆ ನಿನ್ನ ಕೋಳಿ ಕೂಗಿದ ಕೂಡ್ಲೆ ನಮ್ಮೂರಿಗೆ ಬಂದು ಎಲ್ಲರನ್ನೂ ಎಬ್ಬಿಸು.."

ಪಟೆಲಜ್ಜ ಅಂದ್ರೆ ಎಲ್ಲರಿಗೂ ಗೌರವ.. ಅವನ ಮಾತಿಗೆ ಯಾರೂ "ಇಲ್ಲ" ಅನ್ನುತ್ತಿರಲಿಲ್ಲ.

ರಾತ್ರಿಯಾಯಿತು. ಜಲ್ದಿ ಊಟಮಾಡಿ ಮಲಗಬೇಕೆಂದು ಅಪ್ಪಣೆಯಾಗಿತ್ತು.
ನನಗೊ..ರಾತ್ರಿಯಿಡಿ ನಿದ್ದೇನೆ ಬರಲಿಲ್ಲ. ತಲೆಯಲೆಲ್ಲ ಇದೆ ಯೋಚನೆ.. "ಹೇಗಿರಬಹುದು..ಈ ಸೈಕಲ್ಲು..? ಎತ್ತಿನಗಾಡಿ ಥರ ಅಲ್ಲಂತೆ..ಇನ್ನು ಹೇಗಿರುತ್ತದೆ?"
ಹಾಸಿಗೆಯಲ್ಲಿ ಆಕಡೆ ಈಕಡೆ ಹೊರಳಾಡಿದೆ..
ಪಕ್ಕದ ಮನೆ ಅಡಿಗೆ ಮನೆಯಲ್ಲಿ ಕಣ ಪಣ ಸದ್ದು. ಕೇಳಿತು...!
ಭಾಗಕ್ಕ ಆಗಲೆ ಎದ್ದು ಬಿಟ್ಟಿದ್ದಾಳೆ..!!ನಾನೂ ಎದ್ದೆ. ನೀರು ಕಾಯಿಸಿ ಸ್ನಾನ ಮಾಡಿದೆ.

ಬೆಳ್ಳನಾಯ್ಕ ಬರುವಷ್ಟರಲ್ಲಿ ಇಡಿ ಊರಿನ ತಿಂಡಿ ಮುಗಿದಿತ್ತು..!!

ಪಟೆಲಜ್ಜನೂ ರೆಡಿ ಆದ. ಅವನಿಗೆ ಎತ್ತಿನ ಗಾಡಿ ತಯ್ಯಾರಾಗಿತ್ತು..
ಆಗ ಅಜಮಾಸು ಬೆಳಗಿನ ಜಾವ ನಾಲ್ಕು ಗಂಟೆ..

" ಆಗ ಬ್ಯಾಟರಿ(ಟಾರ್ಚ್) ಇರ್ಲಿಲ್ಲ.."
ಹಿಂದಿನ ದಿವಸವೇ ಅಡಿಕೆ ಮರದ ದಬ್ಬೆಯನ್ನು ಸೀಳಿ , ಮಾರುದ್ದಕ್ಕೆ ತುಂಡು ಮಾಡಿ.."ಸೂಡಿ" ತಯಾರು ಮಾಡಿದ್ದೆವು...ಅದಕ್ಕೆ ಬೆಂಕಿ ಹಚ್ಚಿಕೊಡೆವು. ಅದು ದಾರಿ ದೀಪವಾಯಿತು..

ರಾಮಕ್ರಷ್ಣನಿಗೆ.. ಹೇಳಿ ಹೊರಡೋಣ ಅಂದು ಕೊಂಡೆ..
ಎಲ್ಲಿ ಕಾಣಿಸ್ತಾನೆ ಇಲ್ಲಾ... ಮುಂದೆ ನೋಡ್ತಿನಿ.. ಬಿಳಿ ಕಚ್ಚೆ ಪಂಚೆ ಹಾಕಿ , ಕಿಸಿ..ಕಿಸಿ..ನಗುತ್ತಿದ್ದ..
ನನಗಿಂತ ಮೋದಲೆ ರೆಡಿ ಆಗಿದ್ದ.. !!

ಎಲ್ಲರೂ ಸಡಗರದಿಂದ ಹೊರಟೆವು..
ಕಾನಸೂರು..ಮೂರು ಮೈಲು.. ದೂರವಾಗಿ ಅನಿಸಲೆ ಇಲ್ಲ..ಕಾನಸೂರಿಗೆ ಬಂದು ನೋಡಿದರೆ.. ಜನಸಾಗರವೆ ಸೇರಿತ್ತು...
ಅಕ್ಕಪಕ್ಕದ ಊರಿಂದ ನಮಗಿಂತ ಮೊದಲೆ ಜಾಗ ಹಿಡಿದು ಕುಳಿತಿದ್ದರು.

ಎಲ್ಲಿ ನೋಡಿದರು ಗೌಜಿ..ಗದ್ದಲ.
ಒಂದು ತರಹದ ಕುತೂಹಲ.. ಕಾತುರ..
ಸಮಯ ಹೊಗ್ತಾನೆ ಇರಲಿಲ್ಲ..
ನಮ್ಮೂರಿನ ಜನ ಒಂದುಕಡೆ ಕಂಬಳಿ ಹಾಸಿ ರಸ್ತೆ ಪಕ್ಕದಲ್ಲಿ ಕುಳಿತು ಕೊಂಡಿದ್ದೆವು.
ಪಟೆಲಜ್ಜನಿಗೆ ಪ್ರತ್ಯೇಕ ಖುರ್ಚಿ ಎತ್ತಿನ ಗಾಡಿಯಿಂದ ಇಳಿಸಲಾಯಿತು..

ಎಲ್ಲರೂ ಆರು ಘಂಟೆ ಆಗುವದನ್ನೆ ಎದುರು ನೋಡುತ್ತಿದ್ದೆವು..

ಯಾರೊ ಕೂಗಿದರು

" ಬಂತು..ಬಂತು.. ಸೈಕಲ್ಲು..!!!??"

ನಾವು ನೋಡುತ್ತ..ನೋಡುತ್ತ ಇರುವ ಹಾಗೆ.. ಸೈಕಲ್ಲು ಬಂತು..

" ಮುಂದೆ ಒಂದು ಗಾಲಿ...!!. ಹಿಂದೆ ಒಂದು ಗಾಲಿ..!!."

ಮೇಲೆ ಒಬ್ಬ ಕುಳಿತ್ತಿದ್ದ...!
ಇದೇನಿದು ....ನೋಡುವಷ್ಟರಲ್ಲಿ.. ಟುಂಯ್ಯನೆ..ನಡೆದು ಬಿಟ್ಟಿದ್ದ...!!

"ಮುಂದೇನಾಯ್ತು..ಕೆಂಪಜ್ಜಿ..?" "ಶಾರಿ" ಬಾಯಿಕಳೆದು ಕೇಳಿದಳು..

"ಎಂತದೂ ಇಲ್ಲ..ನಾವೆಲ್ಲ ಆಶ್ಚರ್ಯದಿಂದ ಮೂಕರಾಗಿದ್ದೇವು. ಕಣ್ಣಾರೆ ನೋಡಿದ್ದರಿಂದ ನಂಬಲೆ ಬೇಕಾಗಿತ್ತು...
ಎಂಥಹ ಅದ್ಭುತ ದ್ರಶ್ಯ ಅದು... ನನ್ನ ಜೀವ ಇರುತನಕ ಮರೆಯಲಿಕ್ಕೆ.. ಅಗಲ್ಲಪ್ಪ..!!"

" ಎಲ್ಲರೂ ಊಟಕ್ಕೆ ಬನ್ನಿ" ಆಯಿ ಕೂಗಿದಳು..

ನಮಗೆ ಏಳಲು ಮನಸ್ಸಿರಲಿಲ್ಲ......
ಇನ್ನೂ ಕೆಂಪಜ್ಜಿಯ ಕಥೆಯ ಗುಂಗಿನಿಂದ ಹೋರಗೆ ಬಂದಿರಲಿಲ್ಲ....

32 comments:

Kishan said...

masto mastu...pleasing presentation.
The kannada language accent (the dialogues which are a mix of Bangalore Kannada and South Kanara at present) could have been slightly 'neutral' but it is a better attempt.
I have heard this story slightly further than this from my "muthajji" who also witnessed this extraordinary event in Kansur. She says it was an amazing sight, two wheels which are one behind the other(unlike 'ettina gaadi) and how can a man climb on top of it and make it run!! How can he balance this ! He even was turning something from his legs but there was no sound from that either!!(They had seen cars making huge noise before in a nearby town)

ಚಂದ್ರಕಾಂತ ಎಸ್ said...

ಒಳ್ಲೆಯ ಬರಹ. ಭಾಷೆ ಸರಳ ಆ ಕಾಲದ ಚಿತ್ರಣ ಚೆನ್ನಾಗಿ ಮೂಡಿಬಂದಿದೆ.

ನಾವು ಚಿಕ್ಕವರಿದ್ದಾಗ ರೇಡಿಯೋ, ಟೇಪ್ ರೆಕಾರ್ಡರ್ ಬಗ್ಗೆ ಇಂತಹ ಆಶ್ಚರ್ಯವನ್ನು ಸ್ವತಃ ಅನುಭವಿಸಿದ್ದೆವು.

Ittigecement said...

ಕಿಶನ್...
ನೀವು ಹೇಳಿದ್ದು ನಿಜ. ಆ ಕಾಲದ ಮುಗ್ಧ ಮನಸ್ಸು ಬದುಕನ್ನು ಹೇಗೆ ಸಂಭ್ರಮ ಪಡುತ್ತಿತ್ತು ಅಲ್ಲವಾ? ನಾನು ಅಲ್ಲಿಯ ಆಡು ಭಾಷೆ ಬಳಸಿದರೆ ಬಹಳ ಮಜ ಬರ್ತಿತ್ತು. ಆದರೆ ನನ್ನ ಹೆಚ್ಚಿನ ಸ್ನೇಹಿತರಿಗೆ ಅರ್ಥವಾಗಲಿ ಅಂತ ಮಿಕ್ಸ್ ಮಾಡಿ ಬರೆದಿದ್ದೇನೆ..
ಹಾಗೆ ತುಂಬಾ ಉದ್ದವಾದೀತು ಅಂತ ನೀವು ಹೇಳಿದ ವಿಷಯ ಸ್ವಲ್ಪ ಕಟ್ ಮಾಡಿದ್ದೇನೆ. ಕ್ಷಮಿಸಿ..
ನಿಮ್ಮ ಪ್ರತಿಕ್ರಿಯೆ ಉತ್ತೇಜನಕವಾಗಿದೆ.. ಇನ್ನೂ ಬರೆಯ ಬೇಕು ಅನಿಸುತ್ತದೆ..
ಧನ್ಯವಾದಗಳು.

Ittigecement said...

ಚಂದ್ರಕಾಂತರವರೆ..
ಆ ಅಜ್ಜಿಯ ತ್ಯಾಗ ನೆನಪಿಸಿ ಕೊಂಡರೆ ಕಣ್ಣೆಲ್ಲ ಒದ್ದೆಯಾಗುವದು. ಜೀವನ ಪೂರ್ತಿ ಏನೂ ಸುಖಪಡದೆ ನಮ್ಮನೆಗೆ ಜೀವ ತೆಯ್ದಿದ್ದಳು.
ವಿಧವೆಯರ ನಿಟ್ಟುಸಿರು ನಮ್ಮ ಧರ್ಮವನ್ನು ಕ್ಷಮಿಸಲಾರದು.


ಇದು "ಬ್ಲೊಗ್ ಶ್ರಂಗ ಸಭೆಯಲ್ಲಿ" ಹೇಳಿದ್ದೆ, ಅವರ ಆಗ್ರಹದ ಮೇರೆಗೆ ಇಲ್ಲಿ ಹಾಕಿದ್ದೇನೆ.
ವಿವರಗಳಿಗೆ ಡಿ. ಮಲ್ಲಿಕಾರ್ಜುನ ಅವರ ಬ್ಲೊಗ್ ಭೇಟಿ ಕೊಡಿ.

shivu.k said...

ಪ್ರಕಾಶ್ ಸಾರ್,
ಬಲು ಸೊಗಸಾದ ಬರಹ! ಓದುತ್ತಿದ್ದಂತೆ ನಂದಿಬೆಟ್ಟದಲ್ಲಿ ರಾತ್ರಿ ನೀವು ಇದೇ ಕತೆ ಹೇಳಿದ್ದ ನೆನಪಾಯಿತು. ಮತ್ತೊಮ್ಮೆ ಬ್ಲಾಗಿನಲ್ಲಿ ಓದುತ್ತಿದ್ದರೆ ನನಗೆ ಚಿಕ್ಕವಯಸ್ಸಿನಲ್ಲಿ ಹತ್ತು ಪೈಸೆ ಕೊಟ್ಟು ಬಾಕ್ಸ್ ನೊಳಗೆ ಸಿನಿಮಾ ನೋಡುತ್ತಿದ್ದೆವಲ್ಲ , ಆ ಸಿನಿಮಾ ಡಬ್ಬದಲ್ಲಿ ನಿಮ್ಮ ಕತೆಯ ಒಂದೊಂದು ದೃಶ್ಯಗಳು ಸಿನಿಮೀಯಾ ರೀತಿ ಸಾಗಿದಂತೆ ನಾನು ತನ್ಮಯನಾಗಿ ನೋಡುತ್ತಿದ್ದ ಅನುಭವವಾಯಿತು.

Ittigecement said...

ಆತ್ಮೀಯ ಶಿವು...
ಬಾಲ್ಯದ ಮುಗ್ಧತೆ ಎಲ್ಲರನ್ನೂ ಮುದಗೊಳಿಸುತ್ತದೆ. ಅದರಲ್ಲೂ ಇಂಥಹ ಅಜ್ಜಿ ಪ್ರೀತಿ ಸಿಕ್ಕಿದ್ದರೆ...!! ಆ ಅಜ್ಜಿ ಹೇಳಿದ ಕಥೆಗಳು..ಒಂದೆ..ಎರಡೆ..?
ಲೆಕ್ಕವಿಲ್ಲದಷ್ಟು.. ಆ ಅಜ್ಜಿ ಕಥೆ ಹೆಳುತ್ತಿದ್ದರೆ..
ಕಥೆ ದೊಡ್ಡದಿರುತ್ತಿತ್ತು..
ರಾತ್ರಿ ಚಿಕ್ಕದಾಗಿರುತ್ತಿತ್ತು..
ಜಗಜಿತ್ ಸಿಂಗರು ಗಝಲ್ನಲ್ಲಿ ಹೇಳುವಹಾಗೆ...
"ಛೊಟಿಸಿ...ರಾತೆ...ಲಂಬಿಸಿ ಕಹಾನಿ...!!"

ಮತ್ತೆ ಆ ದಿನಗಳನ್ನು ನೆನಪಿಸಿದ್ದಕ್ಕಾಗಿ..ಧನ್ಯವಾದಗಳು...

ಅಂತರ್ವಾಣಿ said...

ಪ್ರಕಾಶ್ ಅವರೆ,
ಅಜ್ಜ, ಅಜ್ಜಿಯರು ಹೇಳುವ ಕಥೆಗಳು ನಿಜಕ್ಕೂ ಅದ್ಭುತವಾಗಿರುತ್ತವೆ.

ಮಲ್ಲಿಕಾರ್ಜುನ.ಡಿ.ಜಿ. said...

ಅಜ್ಜಿಯರ ಬೆಚ್ಚನೆ ಪ್ರೀತಿ ಎಷ್ಟು ಜನರಿಗೆ ಸಿಗುತ್ತದೆ.ನನ್ನಜ್ಜಿ ನನ್ನ ಮಗನಿಗೆ ಕತೆ ಹೇಳುತ್ತಾರೆ.ಅವರಂತೆ ನಮಗ್ಯಾರಿಗೂ ಹೇಳವು ಸಾಧ್ಯವಿಲ್ಲ.ಅಂಥಹವರಿಂದ ಬಂದ ಸಂಸ್ಕಾರದಿಂದಲೇ ನಿಮ್ಮ ಬರಹ ಹೊಳಪನ್ನು ಪಡೆದಿರುವುದು.

NilGiri said...

ಅಜ್ಜಿಯ ಅನುಭವ ಕಥನವನ್ನು ಓದುತ್ತಿದ್ದರೆ, ನಾವೂ ಸೈಕಲ್ ನೋಡಲು ರೆಡಿಯಾಗುತ್ತಿದ್ದಂತೆ ಅನ್ನಿಸಿತು! ಬಹಳ ಚೆನ್ನಾಗಿ ಬರೆದಿದ್ದೀರಿ.

ಅದ್ಸರಿ ನೀವು " ಇಟ್ಟಿಗೆಯಿಂದ ಸಿಮೆಂಟಿಗೆ" ಯಾವಾಗ ಹೋದಿರಿ? ;)

Seema S. Hegde said...

ಇಂಥದೇ ಸೈಕಲ್ಲು ಮತ್ತೆ ಬಸ್ಸು ನೋಡಿದ ಕಥೆ ನನ್ನ ಅಜ್ಜಿನೂ ಹೇಳಿತ್ತು. ಚೆನ್ನಾಗಿದ್ದು. ಅಜ್ಜಿ ಹೇಳಿದ ಕಥೆ ನೆನಪಾತು.
ಇಷ್ಟ ಆತು :)

Ittigecement said...

ಅಂತರ್ವಾಣಿಯವರೆ..
ಧನ್ಯವಾದಗಳು..ಇಂದಿನ ಮಕ್ಕಳಿಗೆ ಅಜ್ಜ , ಅಜ್ಜಿಯರ ಮಹತ್ವ ನಾವುಗಳು ತಿಳಿಸಿ ಹೇಳಬೇಕು..ಅಲ್ಲವಾ?

Ittigecement said...

ಮಲ್ಲಿಕಾರ್ಜುನರವರೆ...
ಅದು ಹೌದೆಂದು ನನಗೂ ಕೂಡ ಅನಿಸುತ್ತದೆ.
ನಿಮ್ಮ ಬ್ಲೊಗ್ ನಲ್ಲಿ ನಂದಿಬೆಟ್ಟದ ಬಗೆಗೆ ತುಂಬಾ ಚಂದವಾಗಿ ಬರೆದಿದ್ದೀರಿ.
ಧನ್ಯವಾದಗಳು...

Ittigecement said...

ಗಿರಿಜಾರವರೆ..
ಕೆಂಪಜ್ಜಿ ಬೆಳಿಗ್ಗೆ ಐದು ಗಂಟೆಗೆ ಎದ್ದು ಬೆಳಗಿನ ಸುಪ್ರಭಾತ ಹೇಳುತ್ತಿದ್ದಳು. ನಮ್ಮನೆ ಎಲ್ಲರಿಗೂ ಆ ಹಾಡು ಈಗಲೂ ಬರುತ್ತದೆ. ತುಂಬಾ ಹಳೆಯ ಕಾಲದ ಜನಪದ ಧಾಟಿಯ ಹಾಡುಗಳು.. ನನ್ನ ಚಿಕ್ಕಪ್ಪ ಅಜ್ಜಿ ಸಾಯುವ ಮೊದಲು ಆ ಹಾಡುಗಳನ್ನು ರೆಕಾರ್ಡ್ ಮಾಡಿ ಇಟ್ಟಿದ್ದಾರೆ.. ಈಗಲೂ ಕೇಳಲು ಮಜವಾಗಿರುತ್ತದೆ..
ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ. ನಾನು ಯಾವಾಗಲೂ ಇಟ್ಟಿಗೆ, ಸಿಮೆಂಟು, ಮರಳಿನ ಸಂಗಡ ಇರುತ್ತೇನೆ...
ಧನ್ಯವಾದಗಳು..ಬರುತ್ತಾಇರಿ..

Ittigecement said...

ಸೀಮಾ ರವರೆ...
ಈ ಕೆಂಪಜ್ಜಿ ಗಾಂಧಿ ಅಜ್ಜನನ್ನು ನೋಡಲು ಸಿರ್ಸಿಗೆ ಹೋಗಿ ಬಂದ ಕಥೆ ಕೂಡ ಮಜ ಇದ್ದು..
ಮುಂದೆ ಯವಾಗಾದರೂ ಬರೀತಿ...
ಧನ್ಯವಾದಗಳು...

Santhosh Rao said...

ನಿಜಕ್ಕೂ ತುಂಬಾ ಸುಂದರವಾದ ಹಾಗು ಸರಾಗವಾದ ನಿರೂಪಣೆ ... ಎಲ್ಲವು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರ .

Ittigecement said...

ಸಂತೋಶ್....
ನಾನು ಈ ಬರಹ ಪ್ರಪಂಚಕ್ಕೆ ಹೊಸಬ.
ಜನರು ಹೇಗೆ ಸ್ವೀಕಾರ ಮಾಡುತ್ತಾರೊ ಎನ್ನುವ ಅಳುಕಿತ್ತು.
ನಿಮ್ಮ ಪ್ರತಿಕ್ರಿಅಯೆಗೆ ಧನ್ಯವಾದಗಳು..
ಬರುತ್ತಾ ಇರಿ..

Mohan said...

ಪ್ರಕಾಶ್ ನನ್ನ ಹೆಸರು ಮೋಹನ ಅಂತ, ಬರಹ ಚೆನ್ನಾಗಿದೆ, ಸದ್ಯ ನಿವು ಇಟ್ಟಿಗೆ ಸಿಮೆಂಟು ಮದ್ಯ ಕಳ್ಧೊಗಿಲ್ಲ. ಚೆನ್ನಾಗಿದೆ

Ittigecement said...

ಮೋಹನ್...
ನನ್ನ ಬ್ಲೊಗ್ ಗೆ ಸ್ವಾಗತ...
ದಯವಿಟ್ಟು ಬರ್ತಾ ಇರಿ,, ಸಲಹೆ, ಸೂಚನೆ ಕೊಡುತ್ತಿರಿ...
ಧನ್ಯವಾದಗಳು...

Prakash Payaniga said...

good. ajji ee kathe nimge yawaga heliddu. kelo talme itta? keep it up

Lakshmi Shashidhar Chaitanya said...

ನನಗೆ ನನ್ನ ಅಜ್ಜಿ ಹೇಳುತ್ತಿದ್ದ ಕಥೆಗಳು ನೆನಪಾದವು...ಚೆಂದ ಬರಹ

Ittigecement said...

ಪ್ರಕಾಶ್..
ಚಿಕ್ಕವರಿದ್ದಾಗ ಕೇಳಿದ ಅಜ್ಜಿ ಕಥೆಗಳ ಮಹತ್ವವೇ ಹಾಗೆ.. ಅವರು ನಮಗೆ ತಿಳಿಯದಂತೆ ನಮಗೆ ನೀತಿ ಪಾಠ ಮಾಡಿರುತ್ತಾರೆ.. ಧನ್ಯವಾದಗಳು..

Ittigecement said...

ಲಕ್ಶ್ಮೀಯವರೆ...
ತುಂಬಾ ತುಂಬಾ ಧನ್ಯವಾದಗಳು...

Harisha - ಹರೀಶ said...

ಪಾಪ ಕೆಂಪಜ್ಜಿ... ಮದುವೆ ದಿನವೇ ಗಂಡನ ಕಳ್ಕಂಡು ಎಷ್ಟು ದುಃಖ ಅನುಭವಿಸಿಕ್ಕು ಅಲ್ದ?

ಮತ್ತಷ್ಟು ಕೆಂಪಜ್ಜಿ ಕಥೆಗಳು ಬರ್ಲಿ :-)

Ittigecement said...

ಹರೀಷ್....
ಖಂಡಿತ ಕೆಂಪಜ್ಜಿ ಕಥೆ ಬರೆಯುತ್ತೇನೆ...
ಅವಳ ಜೀವನ ಕಾರಂತರ "ಮೂಕಜ್ಜಿಯ ಕನಸುಗಳು" ನೆನಪಾಗುತ್ತವೆ..
ನಮ್ಮ ಧರ್ಮ "ವಿಧವೆ"ಯರನ್ನು ಸರಿಯಾಗಿ ನಡೆಸಿಕೊಂಡಿಲ್ಲ.
ಧನ್ಯವಾದಗಳು...

ಹಿತ್ತಲಮನೆ said...

ಸೂಪರ್..! ಒಂಚೂರೂ ಬೋರ್ ಹೊಡಸ್ದೆ ಹೇಳ್ತೆ.... ನೀನು ಮತ್ತೆ ಕೆಂಪಜ್ಜಿ ಇಬ್ರೂ...!

Ittigecement said...

ಹಿತ್ತಲ ಮನೆಯವರೆ...

ಆ ಕೆಂಪಜ್ಜಿ ಅಷ್ಟು ಚಂದವಾಗಿ ಕಥೆ ಹೇಳಿದ್ದಳು...
ಅದನ್ನು ಯಥಾವತ್ತಾಗಿ ಭಟ್ಟಿ ಇಳಿಸಿದ್ದೇನೆ..

ಇದು ಕೆಂಪಜ್ಜಿಗೆ ಹೋಗಬೇಕು..

Chaitra said...

The simple pleasure we take for granted were so precious to our elders!!! This was an eye opener!! One of the best articles I have read..

Shashi jois said...

ಪ್ರಕಾಶಣ್ಣ
ತುಂಬಾ ಸೊಗಸಾದ ನಿರೂಪಣೆಯ ಕತೆ ..ನನಗೂ ಅಜ್ಜಿ ಸಣ್ಣದರಲ್ಲಿ ಕತೆ ಹೇಳುತ್ತಿದ್ದದ್ದು ನೆನಪಾಯ್ತು...ಕೆಂಪಜ್ಜಿ ಮದುವೆ ದಿನವೇ ಗಂಡನ ಕಳೆದು ಕೊಂಡು ಎಷ್ಟು ನೋವು ಅನುಭವಿಸಿರಬೇಕಲ್ಲ!!!!

Unknown said...

Super....sundara nirupane... sogasagi modi bandide... nanagu nanna ajja, ajjiya nenapu kadutiruttade...

hi ajjiya anubhavada innu kelavu ghatanegalannu bareyiri....dhanyavadagalu....

ಮನಸು said...

mattade nirupaNeya hosatanavide... ajjiya kate sogasagi needidderi thnq

ಜಲನಯನ said...

ಅಜ್ಜಿ ಅಜ್ಜಂದಿರು ಮನೆ ಇತಿಹಾಸ ಹೇಳುವ ವಿಕಿಪೀಡಿಯಾಗಳು...ಅವರನ್ನು ಕಥೆ ಹೇಳುವಂತೆ ಪೀಡಿಸೋದು ಎಲ್ಲ ಮನೆ ಕಥೆ...ಅದನ್ನು ಬಹು ಸ್ವಾರಸ್ಯಕರವಾಗಿ ಹೇಳುವುದು ನಿನ್ನ ಛಾಪು ...ಮುಂದೆ.....??

V.R.BHAT said...

Nice!