Thursday, June 28, 2012

ಬೋರಾದ ಬದುಕಿಗೆ "ಟಾನಿಕ್" ಕೊಡುವ ಸ್ಥಳ ಇದು....

ಬ್ಲಾಗಿಗರೆಲ್ಲ ಒಂದು ಟ್ರಿಪ್ ಇಡೋಣ ಅಂತ ಆಜಾದ್ ಸೂಚಿಸಿದಾಗ ನನಗೆ ನೆನಪಾದದ್ದು ಬಾಲಣ್ಣ...
ನಿಮ್ಮೊಳಗೊಬ್ಬ ಬಾಲು... !
"ಎಲ್ಲರೂ ಶ್ರೀರಂಗ ಪಟ್ಟಣಕ್ಕೆ ಹೋಗೋಣ...
ಅಲ್ಲಿ ಎರಡು ಬೆಟ್ಟ ಹತ್ತಿಸ್ತಿನಿ...
ಒಂದು ಕರಿಬೆಟ್ಟ..
ಇನ್ನೊಂದು ಸಾಧನೆಯ ಬೆಟ್ಟ ಏರಿದ ಮಹಾನ್ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿಸ್ತಿನಿ..
ಎಲ್ರೂ ಬನ್ನಿ..."

ಅಂಕೆಗೌಡರ ಬಗೆಗೆ ಸ್ವಲ್ಪ ಕೇಳಿದ್ದೆ...
ಪುಸ್ತಕಗಳಿಗಾಗಿ ಜೀವನ ಮುಡಿಪಾಗಿಟ್ಟವರು ಅಂತ..

ಅಲ್ಲಿ ಹೋಗಿ ನೋಡಿದಾಗ ಬೆಕ್ಕಸಬೆರಗಾದೆ.. !!

ಒಬ್ಬ ವ್ಯಕ್ತಿ ತನ್ನ ಜೀವಮಾನದ ಎಲ್ಲ ಗಳಿಕೆಯನ್ನು ಸಂಪೂರ್ಣವಾಗಿ "ಪುಸ್ತಕ ಖರೀದಿಗೆ "ಇಡುವುದೇ...?

ಅವರ ಹೆಂಡತಿ ಮಕ್ಕಳಗತಿಯೇನು ?...
ಅವರೆಲ್ಲ ಇದನ್ನು ಒಪ್ಪಿದ್ದಾರೆಯೇ..?...

ಒಂದು ಹಳೆಯ ಸಿನೇಮಾ ಟೆಂಟ್ ಜಾಗವನ್ನು ಖರಿದಿಸಿ..
ಸ್ಥಳಿಯ ರಾಜಕೀಯದವರೊಬ್ಬರ ಸಹಾಯದಿಂದ ಅದನ್ನು ಸರಿಪಡಿಸಿ..
ಅಲ್ಲಿ ಪುಸ್ತಕಗಳ ಜೊತೆ ಸಂಸಾರ ನಡೆಸುತ್ತಿದ್ದಾರೆ... !!

ಅವರಿಗಾಗಿ ಪ್ರತ್ಯೇಕ ಕೋಣೆ ಇಲ್ಲ.. !

ಅವರ ಹೆಂಡತಿಯ ಕೊರಳಲ್ಲಿ ಬಂಗಾರದ ಕರಿಮಣಿ ಇಲ್ಲ..

ಕಿವಿಯಲ್ಲಿ ಸಣ್ಣ ಎರಡು ಓಲೆಗಳನ್ನು ಬಿಟ್ಟರೆ ಅವರ ಮನೆಯಲ್ಲಿ ಬಂಗಾರ ಲೋಹವೇ ಇಲ್ಲ... !!

"ಅಮ್ಮಾ..
ಊಟಕ್ಕೇನು ಮಾಡುತ್ತೀರಿ...?
ಇವರ ಸಾಧನೆಗೆ ನಿಮ್ಮ ಮನಸ್ಸು ಒಪ್ಪಿ ಪ್ರೋತ್ಸಾಹಿಸುತ್ತಿದ್ದೀರಾ?’

ಕುತೂಹಲ ತಡೇಯಲಾರದೆ ನಾನು ಪ್ರಶ್ನೆ ಕೇಳಿದ್ದೆ....

"ತುಂಬಾ ಖುಷಿಯಿಂದ ಒಪ್ಪಿದ್ದೇನೆ... ನಮ್ಮ್ ಸಂತೋಷಕ್ಕೆ ಇವರ ಸಾಧನೆ ಮೆರಗುಕೊಟ್ಟಿದೆ..
ಊಟತಿಂಡಿಯ ಬಗೆ ನಾನು ತಲೆಕೆಡಿಸಿಕೊಂಡಿಲ್ಲ..

ಅವರು ತಂದು ಹಾಕುತ್ತಾರೆ ..
ನಾನು ಸಂತೋಷದಿಂದ ಬಡಿಸುತ್ತೇನೆ..."

ನಾನು ದಂಗಾಗಿ ಹೋದೆ !!

ನನಗೆ ಮಹಾತ್ಮ ಗಾಂಧಿಗಿಂತ "ಕಸ್ತೂರಬಾ" ಅಂದರೆ ಭಕ್ತಿ ಜಾಸ್ತಿ..
ಅವರ ಮಹಾತ್ಮರಾಗುವ ಹುಚ್ಚಾಟಗಳನ್ನೆಲ್ಲ ಸಹಿಸಿದ ಮಹಾಸಾಧ್ವಿ ಮಹಿಳೆ ಅವರು...

ಈ ಸಾಧ್ವಿಮಣಿ "ಕಸ್ತೂರಬಾ"ಗಿಂತ ಕಡಿಮೆಯೇನಿಲ್ಲ ಅಂತ ಅನ್ನಿಸಿತು...

ಹೆಣ್ಣಾಗಿ ಸಹಜ ಆಸೆ ಬಯಕೆಗಳನ್ನು ಬದಿಗಿಟ್ಟು..
ಗಂಡನೊಂದಿಗೆ ಸಂತೋಷದಿಂದ ಪಾಲ್ಗೊಂಡಿದ್ದು...ಬೆರಗಾಗಿಸಿತು... !

ಇನ್ನು ಅಂಕೆಗೌಡರು ಒಬ್ಬ ಸಿದ್ಧಪುರುಷ....
ವೃತ್ತಿಬದುಕಿನಲ್ಲಿ ಪ್ರಾಮಾಣಿಕರು...

ಲಂಚಮುಟ್ಟಿದವರಲ್ಲ... !!

ಅವರ ಮಾತುಗಳಲ್ಲಿ ಸಾತ್ವಿಕತೆಯೆದೆ.. ಸೌಜನ್ಯವಿದೆ..

ತುಂಬಿದ ಕೊಡ ತುಳುಕುವದಿಲ್ಲ ಎನ್ನುವ  ಮಾತಿಗೆ ತಕ್ಕಂತಿದ್ದಾರೆ...


ನಮ್ಮ ಆಜಾದು ಬ್ಲಾಗಿಗರವತಿಯಿಂದ ಅಂಕೆ ಗೌಡರಿಗೆ ಗೌರವ ಸಲ್ಲಿಸಿದರು...


ಅಕ್ಷರ ಪ್ರೇಮಿ "ಶ್ರೀಕಾಂತ್ " ಸಂತಸಕ್ಕೆ ಪಾರವೇ ಇಲ್ಲವಾಗಿತ್ತು...


ಹೊಸಜೋಡಿ "ಶಿವಪ್ರಕಾಶ್ ದಂಪತಿಗಳು" ಪುಸ್ತಕ ಕಾಶಿಯಲ್ಲಿ ಕಳೆದು ಹೋಗಿದ್ದರು....


ಪುಸ್ತಕ ಪ್ರೇಮಿ ಆಜಾದ್.. ಜ್ಯೋತಿ.. ಸುಧೇಶ್.. ಎಲ್ಲರೂ ಒಂದೊಂದು ಪುಸ್ತಕ ಹಿಡಿದು ಕಳೆದು ಹೋಗಿದ್ದರು..

ಸಾಧನೆಯ ಸಿದ್ಧ ಪುರುಷ "ಅಂಕೆ ಗೌಡರು"......
ನಮಗೆಲ್ಲ ಕಿಟ್ಟೆಲ್ ಶಬ್ಧಕೋಶ ಹಳೆಯದೆಂದು ಕೇಳಿದ್ದೇವೆ.. 
ಇವರ ಬಳಿ ಅದಕ್ಕಿಂತಲೂ ಹಳೆಯ ಶಬ್ಧಕೊಶವಿದೆ..!
ಇದು ನಿಮಗೆ ಗೊತ್ತಿದೆಯಾ?

ರೂಪಾ ಸತೀಶ್ ಬಳಿ "ರವಿ ವರ್ಮ ನ " ಸಮಗ್ರ ಚಿತ್ರಗಳ ಅಪೂರ್ವ ಪುಸ್ತಕ !
ಅಲ್ಲೇ ಫೋಟೋ ತೆಗೆದುಕೊಳ್ಳುವ ತವಕ !
ಮಕ್ಕಳಿಗೊಂದು ವಿಶೇಷ ಪುಸ್ತಕ ತೋರಿಸಿದರು...!

ಪುಸ್ತಕ ತೆರೆದಾಗ ಒಂದು ಬಿಲ್ಡಿಂಗ್ ಮೇಲೆ ಎದ್ದು ಬಂತು ... ! 
ಮಕ್ಕಳೇಕೆ .... ನಮಗೆಲ್ಲ  ಆಶ್ಚರ್ಯ !

ಇದೊಂದು ಅಪೂರ್ವ ಪುಸ್ತಕ .. ನಮ್ಮ ದೇಹದ  ಅಂಗಾಂಗ  ರಚನೆಯ ಮಾಹಿತಿ ಪುಸ್ತಕ...

ಎಲ್ಲರೂ ಒಂದೊಂದು ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೆವು.. ಇಲ್ಲಿ ಉಮೇಶ ದೇಸಾಯಿಯವರು...

ಇದೊಂದು ಅದ್ಭುತ ಪುಸ್ತಕ ಇನ್ನೂರು ವರ್ಷಗಳ ಹಿಂದೆ ಭಾರತದ ಪಟ್ಟಣಗಳು ಹೇಗಿದ್ದವು?
ಆಗಿನ ಬೆಂಗಳೂರನ್ನೂ ನೋಡಿ ನಾವೆಲ್ಲಾ ಪುಳಕಿತರಾದೆವು...
ಇದರಲ್ಲಿ ಲಾಲ್ ಬಾಗ್.. ಕಬ್ಬನ್ ಪಾರ್ಕ ಎಲ್ಲವೂ ಇವೆ......

ನಾವು ಒಂದು ತಾಸಿಗಾಗಿ ಹೋಗಿದ್ದು... ಅಲ್ಲಿ ಇದ್ದಿದ್ದು ನಾಲ್ಕು ತಾಸು...
ಹೊಟ್ಟೆ ಚುರ್ ಗುತ್ತಿದಾಗ ಗಡಿಯಾರ ನೆನಪಾಯಿತು...

ಇದು ಜಗತ್ತಿನ "ಐವತ್ತು ಆಶ್ಚರ್ಯಗಳ "ಪುಸ್ತಕ..... ನಮ್ಮ ಪಕ್ಕದಲ್ಲಿ ಐವತ್ತೊಂದನೆಯ ಆಶ್ಚರ್ಯವಾಗಿ "ಅಂಕೆ ಗೌಡರಿದ್ದರು..
ಕೋಟ್ಯಾಂತರ ಪುಸ್ತಕಗಳ ಸರದಾರ...
ಇಲ್ಲಿ ಸಿಗದಿರುವ ಪುಸ್ತಕಗಳೇ  ಇಲ್ಲ...


ಅಲ್ಲಿ ನಮಗೆಲ್ಲ ಕಾಫೀ ಕೂಡ ಇತ್ತು.. ನಮ್ಮ ಗುಂಪಿನ ಸಂಧ್ಯಾ ಎಲ್ಲರಿಗೂ ಕಾಫಿ ಕೊಟ್ಟರು...

ಸಾಧ್ವಿ ಮಣಿ ಯವರಿಗೆ  ಬ್ಲಾಗಿಗರವತಿಯಿಂದ  ಫಲ ತಾಂಬೂಲ...

ನಮ್ಮ ಬಾಲಣ್ಣನಿಗೆ  ಅಂಕೆ  ಗೌಡರ  ಒಡನಾಟ ಹತ್ತು ವರ್ಷಗಳಿಂದ ಇದೆ...

ಸಾಧನೆಯ ಮೇರು ಪುರುಷನ ಪಕ್ಕದಲ್ಲಿ ನಾನು ನಿಂತು ಮಾತಾಡಿದೆ ...

ಆಶ್ಚರ್ಯ ಚಕಿತರಾದ ರೂಪ ಸತೀಶ "ಭಾವ ಸಿಂಚನ" ಪುಸ್ತಕ ಕೊಟ್ಟು ಗೌಡರನ್ನು ಅಭಿನಂದಿಸಿದರು...

ನಾನು ಹುಟ್ಟಿದ ಮರುವರ್ಷದ ಪ್ರಜಾವಾಣಿ ವಿಶೇಷಾಂಕ... !!

ಹೊಸ ಜೋಡಿಗಳೂ ಸಂತೋಷ  ಹಂಚಿ ಕೊಳ್ಳುತ್ತಿರುವದು ...
..
 ಮಹೇಶ್  ತುಂಬಾ ಅಭಿಮಾನದಿಂದ ಗೌಡರನ್ನು ಅಭಿನಂದಿಸಿದರು...


ನವೀನ ಮೇಷ್ಟ್ರು  ಅವರಿಗೆ ನಮಸ್ಕರಿಸಿ ಪುಸ್ತಕ ಕೊಟ್ಟು ಮಾತಾಡಿದರು...

ಸಂಕೋಚದ ಮುದ್ದೆಯಾದ "ಗಿರೀಶ್" ಕೂಡ ಮಾತಾಡಿದರು...

ಸಾಧನೆಯ ಮೇರು ಪುರುಷ .. ಕನ್ನಡಿಗರ  ಹೆಮ್ಮೆ.... !

ನಾವು ಅಲ್ಲಿಗೆ ಹೋಗಿದ್ದು ಹನ್ನೊಂದು ಗಂಟೆಗೆ... ಅಲ್ಲಿಂದ ಹೊರಟಿದ್ದು ಎರಡು ಗಂಟೆಗೆ...
ಇನ್ನೂ ಅಲ್ಲಿ ಇರಬೇಕಿತ್ತು ಎನ್ನುವದು ಎಲ್ಲರ ಆಶಯವಾಗಿತ್ತು...

ಗೌಡರಿಗೆ ಬೆನ್ನೆಲುಬಾಗಿ ನಿಂತ ಹಳ್ಳಿಯ ಜನ...

ಒಂದು ಗ್ರುಪ್ ಫೋಟೋ... ಮಧುರ ನೆನಪಿಗಾಗಿ...

ನಿಜಕ್ಕೂ ಇದೊಂದು ಪುಸ್ತಕ ದೇಗುಲ.... !


ನಾನು ಹುಟ್ಟಿದ ವರ್ಷ ಸುಧಾ ಪತ್ರಿಕೆಯೂ  ಹುಟ್ಟಿತ್ತು... !
ನನಗಿಂತ ..
ಆರು ದಿನ ಮೊದಲು  ಜನಿಸಿದೆ ಸುಧಾ ವಾರಪತ್ರಿಕೆ...!
ವಾಹ್  !
ನನ್ನ ವರ್ಷ ಭವಿಷ್ಯ ನೋಡಿದರೆ.. ಸರಿಯಾಗಿತ್ತು !
"ಹುಟ್ಟಿದ ಮೂರು ತಿಂಗಳಿಗೆ ನನಗೆ ರಿಕೆತ್ಸ್ ರೋಗವಾಗಿತ್ತು.."
ಅಲ್ಲಿ "ಅನಾರೋಗ್ಯ"  ಅಂತ ಬರೆದಿದ್ದರು...


ಪುಟಾಣಿಗಳೂ ಪುಸ್ತಕ ಹಿಡಿದು ಕುಳಿತಿದ್ದರು...
......................................................................................................ಒಮ್ಮೊಮ್ಮೆ ಬದುಕಿನಲ್ಲಿ ಹೀಗಾಗಿಬಿಡುತ್ತದೆ...


ಎಲ್ಲವೂ ಇದ್ದಿರುತ್ತದೆ... ಸಮಸ್ಯೆಗಳೂ ಅಷ್ಟೇನು ಇದ್ದಿರುವದಿಲ್ಲ... ಹಣವೂ ಇದ್ದಿರುತ್ತದೆ..


ಆದರೆ ಒಂದೊಂದು ದಿನ ತಡೆಯಲಾರದ ಬೋರ್... !
ಕೆಲವೊಂದು ದಿನ ಶೂನ್ಯ ಆವರಿಸಿಕೊಂಡು ಬಿಡುತ್ತದೆ...


ಆಗ ಪಾಂಡವಪುರ ನೆನಪು ಮಾಡಿಕೊಳ್ಳಿ... 
ಅಂಕೆಗೌಡರನ್ನು ಭೇಟಿಯಾಗಿ... ಪುಸ್ತಕ ಕಾಶಿಯಲ್ಲಿ ಮಿಂದು ಬನ್ನಿ...ದೈನಂದಿನ ವ್ಯವಹಾರ..
ಜಂಜಡಗಳಿಂದ ಬೋರಾಗಿ  ತುಕ್ಕುಹಿಡಿದ ನಮ್ಮ ಮನಗಳಿಗೆ ಅಲ್ಲಿ ಖಂಡಿತ ಉಲ್ಲಾಸ ಸಿಗುತ್ತದೆ..


ನಮಗಿಷ್ಟವಾದ ಪುಸ್ತಕ ಹಿಡಿದು ಬೇರೆ ಲೋಕಕ್ಕೆ ಹೋಗಿ ಬರಬಹುದು...ನಿಜಕ್ಕೂ ಬದುಕಿಗೆ ಟಾನಿಕ್ ಕೊಡುವ ಸ್ಥಳ ಅದು !


ವಿವರಗಳು ಇಲ್ಲಿವೆ...


ತಾವು ಸಂಗ್ರಹಿಸಿದ ಪುಸ್ತಕಗಳು ಮುಂದಿನ ಜನಾಂಗಕ್ಕೆ ಅನುಕೂಲವಾಗಿ ಇಡಲು ..
ಅಂಕೆ ಗೌಡರು  ಬಹಳ ಪ್ರಯತ್ನ ಪಡುತ್ತಿದ್ದಾರೆ...
ಅವರು ಪಟ್ಟ ಕಷ್ಟಗಳ ಬಗೆಗೆ ಪುಸ್ತಕವನ್ನೇ ಬರೆಯ ಬಹುದು..


ಇದೀಗ ಎತ್ತೆಚ್ಚ ಸರಕಾರ ಈ  ವರ್ಷದ  ಮುಂಗಡ ಪತ್ರದಲ್ಲಿ "ಐವತ್ತು ಲಕ್ಷ"ವನ್ನು ಇದಕ್ಕಾಗಿ ಮಿಸಲಿಟ್ಟಿದ್ದಾರೆ ..
ಅದು ಅನುಷ್ಟಾನವಾಗಬೇಕಷ್ಟೇ...


ಸರಕಾರದ ಮಾತು ಬಿಡಿ..
ಸದಾ ಜಗಳದಲ್ಲೇ ಮೈ ಮರೆತ ಸರಕಾರ  ತನ್ನ ಮಾತನ್ನು ಉಳಿಸಿ ಕೊಳ್ಳುವದಿರಲಿ .
ಅದರ ಅಸ್ತಿತ್ವವೇ ಇಂದು  ಡೋಲಾಯಮಾನವಾಗಿದೆ ..


ನಾವು ಇದನ್ನು ಚೆನ್ನಾಗಿಡಬೇಕು...
ನಮ್ಮಿಂದ ಇದು ಸಾಧ್ಯ.. 
ನಮ್ಮ... ನಿಮ್ಮಂತವರು ಸಾಧ್ಯವಾದ ದೇಣಿಗೆ ಕೊಟ್ಟು ನಮ್ಮ ಕೈಲಾದ ಸಹಾಯ ಮಾಡೋಣ ...


ದಯವಿಟ್ಟು ಅಲ್ಲಿಗೆ ಭೇಟಿ ಕೊಡಿ..
ನಿಮಗೆ ನೀವೇ  ಮನಗಾಣುತ್ತೀರಿ ...


Tuesday, June 19, 2012

ನಾನು ನಮ್ಮನೆಯಲ್ಲಿ ...ಒಂದು ಹಳೆ ಹಾರ್ಮೋನಿಯಂ ಪೆಟ್ಟಿಗೆ... ಇಟ್ ಕೊಂಡಿದ್ದಿನಿ ..!ನಮ್ಮ ಕ್ಲಾಸಿನಲ್ಲೊಬ್ಬ ಮಹಾ ಪುಣ್ಯಾತ್ಮನಿದ್ದ...


ನಾವೆಲ್ಲ ಅವನಿಗೆ ಬಹಳ ಪ್ರೀತಿಯಿಂದ "ಕಾಚಶ್ರೀ" ಅಂತ ಕರೀತಿದ್ವಿ...


ಆತ "ಲೈನಿಂಗ ಡಿಪಾರ್ಟಮೆಂಟಿನಲ್ಲಿ" ಬಹಳಷ್ಟು ಅನುಭವ ಸಂಪಾದಿಸಿದ್ದ..


ಆತ ಯಾವಾಗ್ಲೂ ಹುಡುಗಿಯರ ಹಿಂದೇನೆ ಸುತ್ತುತ್ತಿದ್ದ...
ಆ ಹುಡುಗಿಯರಿಗೂ ಅಷ್ಟೆ ಈತನೆಂದರೆ ಅಚ್ಚುಮೆಚ್ಚು.......


ಆತನನ್ನು ಕಂಡಕೂಡಲೇ ಹಲ್ಲುಕಿಸಿಯುತ್ತಿದ್ದರು..


ಆತನ ವೇಶ ಭೂಷಣಗಳೂ ಹಾಗೆ ಇರುತಿದ್ವು...


ನಮ್ಮ ನಾಗೂ ಅವನಿಂದ ನಮಗೆಲ್ಲ ಒಮ್ಮೆ "ಲೈನಿಂಗ್ " ಬಗೆಗೆ  ಟ್ರೇನಿಂಗ ಕೊಡಿಸಿದ್ದ..
ಅದು ನಮಗೆ ಒಗ್ಗಿ ಬರ್ಲಿಲ್ಲ ಅನ್ನಿ..


ಕಾಚಶ್ರೀ ಕಂಡರೆ ನಮಗೆಲ್ಲ ಒಳಗೊಳಗೆ ಬಹಳ ಹೊಟ್ಟೆಕಿಚ್ಚೂ ಇತ್ತು....
ಅವನ ಮೇಲೆ ಸೇಡು ತಿರಿಸ್ಕೊಲ್ಲಿಕ್ಕೆ ಸಮಯ ಕಾಯ್ತಾ ಇದ್ದಿದ್ವಿ....


ಅದು ಹೇಗೆ ಹುಡುಗಿಯರನ್ನು ಪಟಾಯಿಸುತ್ತಾನೆ ?


ನಾವು ಎಷ್ಟೇ ಡೀಸೆಂಟ್ ಆಗಿದ್ದರೂ ಹುಡುಗಿಯರು ನಮ್ಮತ್ತ ತಲೆ ಎತ್ತಿ ನೋಡುತ್ತಲೂ ಇರಲಿಲ್ಲ...


"ನೋಡ್ರೋ...
ಹುಡುಗೀಯರೆಂದರೆ ಒಂದು ಮಧುರ ಸಂಗೀತ...
ಅವರೊಂದು ಸಂಗೀತ ಸಾಧನ..


ಮಕ್ಕಳಿರಾ....
ಹುಡುಗೀಯರು " ಪಿಟಿಲು"  ಥರಹ..ಕಣ್ರೋ.. !


ಪಿಟಿಲು ನುಡಿಸುವದೊಂದು ಕಲೆ..."


ಅಂದಿನಿಂದ ಮುಂದೆ ಈತ "ಪಿಟಿಲು ಮಾಸ್ಟರ್" ..
ಅಂತ ಬಹಳ ಪ್ರಸಿದ್ಧಿ ಹೊಂದಿದ...


ಕಾಚಶ್ರೀ ಹೆಚ್ಚಾಗಿ ಕ್ಲಾಸಿಗೆ ಚಕ್ಕರ್ ಹಾಕ್ತಿದ್ದ..
ಪರೀಕ್ಷೆಗಳಲ್ಲಿ ಹಾಗೂ ಹೀಗೂ ಪಾಸಾಗುತ್ತಿದ್ದ..


ಒಮ್ಮೆ ಯಾರೋ ಉಪನ್ಯಾಸಕರು ರಜೆ ಹಾಕಿದರು....
ಆ ಕ್ಲಾಸಿಗೆ  ನಮ್ಮ ಪ್ರಿನ್ಸಿಪಾಲರು ಬಂದರು....


ಮೊದಲಿಗೆ ಹಾಜರಿ ತಗೊಳ್ಳುತ್ತಿದ್ದರು...


"ರೋಲ್ ನಂಬರ್ ಇಪ್ಪತ್ತೆಂಟು..."


ಅಂದು ಕಾಚಶ್ರೀ ಬಂದಿರಲಿಲ್ಲ..


ಪ್ರಿನ್ಸಿಪಾಲರು ಮತ್ತೊಮ್ಮೆ ಕೂಗಿದರು..


ನಾಗು ತಣ್ಣಗೆ ಹೇಳಿದ..


"ಸಾರ್..
ಆತ ಬರ್ಲಿಲ್ಲ ..  ಸಾ...
ಪಿಟಿಲು ಪ್ರ್ಯಾಕ್ಟೀಸ್ ಮಾಡ್ತಿರ ಬಹುದು..."


ಪ್ರಿನ್ಸಿಯವರಿಗೆ ಹುಬ್ಬು ಮೇಲೇರಿತು...


"ಏನು...?
ಏನದು..? 
ಆತನಿಗೆ ಪಿಟಿಲು ಬಾರಿಸಲಿಕ್ಕೆ ಬರುತ್ತದೆಯೆ... ?.. !"


"ಹೌದು ಸಾರ್...
ತುಂಬಾ ಎಕ್ಸಪರ್ಟಿದ್ದಾನೆ...


ಏಕಕಾಲದಲ್ಲಿ ಎರಡು ಪಿಟಿಲುಗಳನ್ನೂ ನುಡಿಸ್ತಾನೆ...! !.."


ಆಶ್ಚರ್ಯದಿಂದ ಪ್ರಿನ್ಸಿಪಾಲರ ಕನ್ನಡಕವೂ ಅಲುಗಾಡಿತು.. !


ಅವರಿಗೆ  ಸಂಗೀತ ಎಂದರೆ  ಬಹಳ ಪ್ರೀತಿ....!


"ಏನು...? !!!!!
ಒಂದೇ ಸಾರಿ ಎರಡು ಪಿಟಿಲು ಬಾರಿಸ್ತಾನಾ.. ?..!


ಎಷ್ಟು ವರ್ಷದಿಂದ ಪ್ರ್ಯಾಕ್ಟೀಸ್ ಮಾಡ್ತಿದ್ದಾನೆ...?.."


ಈಗ ಸೀತಾಪತಿ ಎದ್ದುನಿಂತ...


"ಸಾರ್...
ಹೈಸ್ಕೂಲಿನಿಂದ ನನಗೆ ಗೊತ್ತು...!
ಆಗ್ಲಿಂದಲೇ ಬಾರಿಸ್ತಿದ್ದ... !


ಅದಕ್ಕೂ ಮೊದಲು ಕನ್ನಡ ಶಾಲೆ ವಿಷಯ ಗೊತ್ತಿಲ್ಲ... !."


"ಏನ್ರಪ್ಪಾ ನೀವೆಲ್ಲ... !
 ನನಗೆ ಮೊದಲೇ ಯಾಕೇ ಹೇಳ್ಳಿಲ್ಲ...?
ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇದನ್ನೂ ಇಡಬಹುದಿತ್ತಲ್ಲ...


ನೀವೂ ಇದ್ದೀರಾ...!
ದಂಡಪಿಂಡಗಳು.. !


ಪ್ರತಿಭೆಗಳು ಎಲ್ಲಿ ಇರುತ್ತವೆ ಅಂತ ಹೇಳ್ಳಿಕ್ಕೆ ಬರೋದಿಲ್ಲ..."


"ಸಾ..
ಇದೊಂದು ಅದ್ಭುತ ಪ್ರತಿಭೆ...!
ಆತನನ್ನು ನೋಡಿ ನಾವೂ ಪ್ರಯತ್ನ ಪಟ್ವಿ.. !
ಆಗ್ಲಿಲ್ಲ...


ಈ ಪಿಟಿಲುಗಳಿಗೂ ನಮಗೂ ಸರಿ ಬರ್ಲಿಲ್ಲ... ಸಾರ್.. ! "


"ಹೌದು.. ಹೌದು... !


ಎಲ್ಲರೂ ವೀಣೆ  ಶೇಷಣ್ಣ  ಆಗಲಿಕ್ಕೆ ಸಾಧ್ಯ ಇಲ್ಲ.... !


ಕಲೆ ಎಂದರೆ ದೈವಿದತ್ತವಾದದ್ದು...
ಎಲ್ಲರಿಗೂ ಪಿಟಿಲು ಬಾರಿಸಲಿಕ್ಕೆ ಬರೊಲ್ಲ..


ಈಗ ನಾನು ಪಿಟಿಲು ಬಾರಿಸ್ತಿನಿ ಅಂದ್ರೆ ಸಾಧ್ಯವಾ..?


ನಾನು  ಸಹ...ನಮ್ಮನೆಯಲ್ಲಿ ...
ಒಂದು ಹಳೆ  ಹಾರ್ಮೋನಿಯಂ ಪೆಟ್ಟಿಗೆ ಇಟ್ ಕೊಂಡಿದ್ದಿನಿ ..!
ಅದು ಧೂಳ್  ಹಿಡಿತಾ ಇದೆ... !


ರಿಟೈರ್ಡ್  ಆದಮೆಲೆ  ಕಲಿಬೇಕು ಅಂದುಕೊಂಡಿದ್ದೀನಿ...!.."


ನಮಗೆ ಉಕ್ಕಿ ಬರುತ್ತಿದ್ದ ನಗು ತಡಿಯಲಿಕ್ಕೆ ಕಷ್ಟ ಆಗ್ತಿತ್ತು....


" ಸಾರ್..
ನೀವೆಲ್ಲಿ..?
ಪಿಟಿಲೆಲ್ಲಿ...? 
ಪಾಪ  ಆ.. ಹಾರೋಮೊನಿಯಂ ಪೆಟ್ಟಿಗೆ ಎಲ್ಲಿ...? !!


ಎಲ್ಲದಕ್ಕೂ ಯೋಗಬೇಕು ಸಾ... !.."


ಕಷ್ಟಪಟ್ಟು ತಡೆಹಿಡಿದ ನಗು ಬ್ರೇಕ್ ಆಗುವದರಲ್ಲಿ ಇತ್ತು...
................


ಅಷ್ಟರಲ್ಲಿ...


" ಸಾರ್.. ಒಳಗೆ ಬರ್ಲ್ಲಾ.."


ಅಯ್ಯೋ..!
ನಮ್ಮ ಸಾಕ್ಷಾತ್  "ಕಾಚಶ್ರೀ " ಒಳಗೆ ಬರ್ತಿದ್ದ...!


ಪ್ರಿನ್ಸಿಪಾಲರ ಮುಖ ಮೊರದಷ್ಟು ಅಗಲವಾಯಿತು...


ಕಣ್ಣು..
ಬಾಯಿ..
ಮುಖ.. 
ಮಾತಿನಲ್ಲಿ ಪ್ರೀತಿಯ ಹೊಳೆಯನ್ನೇ ಹರಿಸಲಿಕ್ಕೆ  ಪ್ರಯತ್ನ ಪಟ್ಟರು...
ಆಗಲಿಲ್ಲ....


ಅವರದ್ದು ಗಂಟು ಮುಖ....


"ಬಾರಪ್ಪಾ... !
ಬಾ... ಬಾ.. !


ಏನಪ್ಪಾ...
ಪಿಟಿಲು ಬಾರಸ್ತೀಯಂತೆ..!
ನಮಗೆಲ್ಲ ಗೊತ್ತೇ ಇರ್ಲಿಲ್ಲ.. ನೋಡು... !.."


ಕಾಚಶ್ರೀ ಗಾಭರಿ ಬಿದ್ದ.. !


"ಇ..ಇಇ.. ಇಲ್ಲಾ.. ಸಾರ್... ! "


"ನಾಚಿಕೆ ಪಟ್ಕೋ ಬೇಡ್ವೊ...
ಇಷ್ಟು ದಿನ ಸುಮ್ನೆ ನಿನಗೆ ಬಯ್ತಿದ್ನಲ್ಲೋ...!


ಒಂದು ಮಾತು ಹೇಳಬಾರದಾ...?


ಹೋಗ್ಲಿ ಬಿಡು...


ಇದು ನಿನಗೆ ಹೇಗೆ ಈ ಕಲೆ ಬಂತು....?..
ಈ ಕಲೆ ನಿಮ್ಮ ಮನೇಲಿ ಯಾರಿಗಿದೆ...? . !!.. "


ಈಗ ಕಾಚಶ್ರೀ ಮತ್ತೂ ಗಾಭರಿ ಆದ...!!


ನಮ್ಮ ಪ್ರಿನ್ಸಿ ಬಗೆಗೆ ನಿಮಗೆ ಒಂದು ಮಾತು ಹೇಳಲೇ ಬೇಕು.....
ಅವರು ಹೊಗಳುವಾಗಲೂ ಬಯ್ಯುವಾಗಲೂ ..


ಒಂದೇ ರೀತಿ... !
ಒಂದೇ ಧಾಟಿ... !
ಘನ ಘೋರ ಗಂಭೀರತೆ .... !


ಇಲ್ಲಿ ..
ಕಾಚಶ್ರೀಗೆ ತಾನು ಲೈನ್ ಹೊಡೆಯುವ ಘನಂದಾರಿ ಕೆಲ್ಸ ಅವರಿಗೆ ಗೊತ್ತಾಗಿ ಹೋಯ್ತು ಅಂದುಕೊಂಡ...


"ಇ  ಇ...ಇಲ್ಲಾ.. ಸಾರ್.. !
ಇದರಲ್ಲಿ ಮನೆಯವರೆಲ್ಲ ಯಾಕೆ..? "


"ಹೋಗ್ಲಿಬಿಡು...


ನೀನು ..
ಪಿಟಿಲು ನುಡಿಸೋದು ನಿಮ್ಮ ಮನೆಯವರಿಗೆ ಗೊತ್ತೇನೋ...? "


"ಇಲ್ಲಾ... ಸಾರ್...
ಗೊತ್ತಾದ್ರೆ ಸಾಯ್ಸಿ ಬಿಡ್ತಾರೆ...!


ಸಾರ್.. ಸಾರ್.. !


ಇನ್ನು ಮುಂದೆ ಹೀಗೆಲ್ಲ ಮಾಡೊಲ್ಲ... !
ಬಿಟ್ ಬಿಡಿ ಸಾ.. 


ಚೆನ್ನಾಗಿ ಓದ್ತೀನಿ... !
ಬಿಟ್ ಬಿಡಿ ಸಾ... "


" ಅಲ್ಲಯ್ಯಾ..
ಕಲೆಯ ಬೆಲೆ ಎಲ್ಲರಿಗೂ ಗೊತ್ತಾಗೊಲ್ಲ...


ನಿಮ್ ಮನೆಯವರಿಗೆ ನಾನು ಮಾತಾಡ್ತಿನಿ...


ಇವತ್ತು ನೀನು ನನ್ ಛೇಂಬರಿಗೆ ಬಾ....
ಪಿಟಿಲು ಬಾರಿಸು...!!
ನಾನೂ ನಮ್ ಸ್ಟಾಫ್ ಎಲ್ರೂ ಕೇಳಬೇಕು....


ಎರಡು ಪಿಟೀಲು ಒಂದೇ ಸಾರಿ ಬಾರಿಸ್ತಿಯಂತೆ !! "


ಕಾಚಶ್ರೀ ಮತ್ತೂ ಗೊಂದಲಕ್ಕೆ ಬಿದ್ದ... !


ಬೆವರು ಒರೆಸಿ ಕೊಳ್ಳುತ್ತಿದ್ದ...


"ಮುಂದಿನ ವಾರ ನಮ್ ಕಾಲೇಜಿಗೆ ..
"ವಿದ್ಯಾ ಭೂಷಣ" ಸ್ವಾಮೀಜಿ ಬರ್ತಿದ್ದಾರೆ... !


ಆಗ ನಿನ್ನದೂ ..
ಒಂದು "ಪಿಟೀಲು"  ಕಛೇರಿ ಇಡಲಿಕ್ಕೆ ಹೇಳ್ತೀನಿ... !.."


ಅಷ್ಟರಲ್ಲಿ ಜವಾನ ಬಂದು ಏನೋ ಚೀಟಿ ಕೊಟ್ಟ...
ಪ್ರಿನ್ಸಿಪಾಲರು ಹೊರಗೆ ನಡೆದರು...


ಕಾಲೇಜಿನ ಮಾಳಿಗೆ ಹಾರಿ ಹೋಗುವಷ್ಟು ಜೋರಾಗಿ ನಕ್ಕೆವು...


ಪ್ರಿನ್ಸಿಯವರ ಛೇಂಬರಿನಲ್ಲಿ ...
ಕಾಚಶ್ರೀ ಪಿಟಿಲುವಾದನ ಹೇಗಿರಬಹುದು..... !!!!(ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ..............


ಕಾಚಶ್ರೀ  ಅಂದರೆ ಕಾನೂರು ಚನ್ನಪ್ಪನ್ನ ಮಗ ಶ್ರೀಪಾದ ಅಂತ...)