Monday, November 21, 2011

...........ಬಣ್ಣ........

ಆ ಹುಡುಗ ಮೊದಲ ನೋಟದಲ್ಲೇ.. ನನಗಿಷ್ಟವಾಗಿದ್ದ...


ಆ ಹಸಿ.. ಹಸಿ ನೋಟ..
ಹಸಿದು ತಿನ್ನುವ ಭಾವ...


ನಾನೊಬ್ಬ ಹೆಣ್ಣು...
ನನ್ನಲ್ಲಿನ ಹೆಣ್ಣುತನವ ಜಾಗ್ರತ ಗೊಳಿಸುವ ಆ ಹುಡುಗನ ಕಣ್ಣಲ್ಲಿ ಬೆತ್ತಲಾಗುವದರಲ್ಲಿ ಖುಷಿಯಾಗುತ್ತಿತ್ತು..
ಆತನ ನೋಟವನ್ನು ನನ್ನ ಏಕಾಂತದಲ್ಲಿ ನೆನಪಿಸಿಕೊಳ್ಳುವದರಲ್ಲೂ.. ಸೊಗಸಿತ್ತು...


ಅವನ ಪೋಲಿತನದ ಮಾತುಗಳು...


ವಯಸ್ಸಿನ ಸಹಜ ಕುತೂಹಲದ..
ಹೆಣ್ಣಿನ ಬಗೆಗಿನ ಹುಚ್ಚು ಹುಚ್ಚಾದ ಪ್ರಶ್ನೆಗಳು..


ಹೆಣ್ಣಿನ ಬಗೆಗಿನ ಅವನ ಮುಗ್ಧತನ ನನಗೆ ಹುಚ್ಚು ಹಿಡಿಸಿದ್ದವು...


ಅವನೊಬ್ಬ ಚಿತ್ರಕಾರ...
ಮಧುರ ಕಂಠದ ಹಾಡುಗಾರ..


ಜೇನು ಮೀಸೆಯ ಹುಡುಗ ನನಗಂತೂ ಸಿನೇಮಾ ಹೀರೋ ಥರಹವೇ ಕಾಣುತ್ತಿದ್ದ...


" ನನಗೆ ಒಂದು ಆಸೆ ಇದೆ...
ನನ್ನ 
ಭಾವಗಳನ್ನು ತುಂಬಿ..
ನಿನ್ನದೊಂದು   ಚಿತ್ರ ಬಿಡಿಸಲಾ ..?"


ಅವನ ಬೇಡಿಕೆ ಕೇಳಿ ನನಗೆ ಒಳಗೊಳಗೇ ಖುಷಿಯಾಗುತ್ತಿತ್ತು...


"ನಿನ್ನ   ...
ಕೆನ್ನೆಯ ಉಬ್ಬು..
ತುದಿಗಲ್ಲದ ನುಣುಪು...
ಅರೆತೆರೆದ ಕಣ್ಣು.. 
ನಿನ್ನ... 
ಆ ಭಾವಗಳನ್ನು ನನ್ನ ಕುಂಚದಲ್ಲಿ ಸೆರೆ ಹಿಡಿದಿಡುವ ಆಸೆ ಕಣೆ......"


ನಾನು ಚಂದ ಇದ್ದೇನೆ ಅಂತ ನನಗೆ ಗೊತ್ತು...
ನನ್ನ ಅಂದವನ್ನು ಹುಡುಗನ ಬಾಯಲ್ಲಿ ಕೇಳುವದೂ ಸೊಗಸೆಂದು ಗೊತ್ತಿರಲಿಲ್ಲ...


"ನೀನು ..
 ಮೂಗಿಗೊಂದು ರಾಜಸ್ತಾನಿ ದೊಡ್ಡ ರಿಂಗು...
ಕೆನ್ನೆ ಸರಪಳಿ...ಕಿವಿಯ ತನಕ..
ಕಿವಿಗೆ ದೊಡ್ಡ ಪದಕದ ರಿಂಗು..


ತಲೆ ತುಂಬಾ ಹೂವು ಮುಡಿದು ಬಾ......."


ಹುಡುಗನ ಬೇಡಿಕೆಗೆ ಇಲ್ಲವೆನ್ನಲಾಗಲಿಲ್ಲ..


ಮನೆಯಲ್ಲಿ ಸುಳ್ಳು ಹೇಳಿ ಹುಡುಗ ಹೇಳಿದಂತೆ ತಯಾರಾಗಿ ಬಂದೆ...
ಅಮ್ಮನ ಸಂಶಯದ ಕಣ್ಣಿಗಳಿಗೆ ಉತ್ತರವನ್ನೂ ಕೊಟ್ಟು ಬಂದಿದ್ದೆ..


ಹುಡುಗ ನನಗೊಂದು ಭಂಗಿಯಲ್ಲಿ ಕುಳ್ಳಿರಿಸಿ ಚಿತ್ರ ಬಿಡಿಸಲು ಶುರುಮಾಡಿದ...


ಅವನು ನನ್ನನ್ನು ನೋಡುವ ರೀತಿ...
ನನ್ನಲ್ಲಿನ ಭಾವಗಳನ್ನು ಹುಚ್ಚೆಬ್ಬಿಸುತ್ತಿತ್ತು...


ಹುಡುಗ ಚಿತ್ರ ಬಿಡಿಸಿ ಮುಗಿಸಿದ...


"ಹುಡುಗಿ...
ನಿನ್ನ   ಅಲಂಕಾರಗಳನ್ನು ಬಿಚ್ಚಿಕೊಡಲಾ....?"


ನನಗೆ ಈಗಲೂ ಒಳಗಿಂದೊಳಗೇ ಸಂತೋಷ...!


ಹುಡುಗ ತುಂಬಾ ಚಾಲೂಕು ಇದ್ದ..


ಆತ ಒಂದೊಂದಾಗಿ ನನ್ನ ಆಭರಣಗಳನ್ನು ಕಳಚುತ್ತಿದ್ದ...
ತಲೆಗೆ ಮುಡಿದ ಹೂಗಳ ಸುವಾಸನೆ  ಹೀರುತ್ತಿದ್ದ...


"ನಿನ್ನ ..
ಆಭರಣಗಳನ್ನು ಬಿಚ್ಚಿಡುತ್ತಿರುವೆ... 
ನಿನಗೆ   ಬೇಸರವಾ...?"


ನನಗೆ ಮೌನವಾಗಿ ಈ ಸಮಯವನ್ನು ಅನುಭವಿಸುವ ಆಸೆ ಇತ್ತು...
ಆದರೂ ಮಾತನಾಡಿದೆ..


"ಬೇಸರ ಇಲ್ಲ...
ನಾನು ಚಂದವಾಗಿ ತಯಾರಾಗಿ ಬಂದಿದ್ದು...ಇದಕ್ಕಾಗಿಯೇ..


ನೀನು  ಅಲಂಕಾರವನ್ನು ಹಾಳು ಮಾಡಲೆಂದೆ ಅಲಂಕರಿಸಿಕೊಂಡಿದ್ದೇನೆ...


ಚಂದದ ತಯಾರಿಗಿಂತ .. 
ಅಲಂಕಾರ ಹಾಳು ಮಾಡಿಕೊಳ್ಳುವದರಲ್ಲೇ ಹೆಚ್ಚು ಸುಖ..


ಹೆಣ್ಣಿನ ಮನಸ್ಥಿತಿ ನಿನಗೆ ಅರ್ಥವಾಗುವದಿಲ್ಲ...ಬಿಡು ...


ನೀನು...
ಮಾಡುತ್ತಿರುವದು ತಪ್ಪಲ್ಲವಾ?"


"ತಪ್ಪಿಲ್ಲ ಕಣೆ......


ನೀನು  ಪ್ರಕೃತಿಯ ಹಾಗೆ...
ಹೆಣ್ಣು  ಭೋಗಿಸುವದಕ್ಕಾಗಿಯೇ ಇರುವದು...


ಅತ್ಯಾಚಾರಕ್ಕೂ ಒಂದು ಚಂದದ "ಬಂಧನದ, ಬಾಂಧವ್ಯದ"  ಹೆಸರುಕೊಟ್ಟು ಭೋಗಿಸುತ್ತಾರೆ..


ಹೆಂಡತಿಯಾದರೂ..
ಗೆಳತಿಯಾದರೂ ಹೆಣ್ಣು  ಇರುವದು ಭೋಗಿಸುವದಕ್ಕೇನೇ.."


ನನಗೆ ಕೋಪ ಬಂತು......


"ಎಷ್ಟು  ಹೊಲಸಾದ ಮಾತುಗಳನ್ನಾಡುತ್ತೀಯಾ.......?
ನಿನಗೆ  ನಾನು ಭೋಗದ ವಸ್ತುವಾಗಿ ಕಾಣಿಸುತ್ತೇನೆಯೇ..?


ನನ್ನೋಳಗಿನ ಹೃದಯ...
ಅದರಲ್ಲಿನ ಪವಿತ್ರವಾದ ಪ್ರೇಮ  ಕಾಣಿಸುವದಿಲ್ಲವಾ?
ಕೆಟ್ಟ ಮನಸ್ಸಿನವನು ನೀನು .....
ಛೇ..."


"ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡ..
ನಮ್ಮ 
ಪುರುಷ ಸಮಾಜ ಇರುವದೇ ಹೀಗೆ..


ನೀನು .
ನಿನ್ನ  ಪ್ರೀತಿ, ..
ಬಾಂಧವ್ಯಕೂಡ ಭೋಗಿಸುವದಕ್ಕಾಗಿಯೇ ಇದೆ..


ಮದುವೆಯೆಂಬ ಬಂಧನವೂ ಒಂದು ಅತ್ಯಾಚಾರ ಕಣೆ.....


ಅತ್ಯಾಚಾರಕ್ಕೆ ..
ಸುಸಂಕೃತ ಪುರುಷ ಸಮಾಜದ ..
ಪರವಾನಿಗೆ ಪತ್ರ "ಈ ಮದುವೆ" ...!


ಆದರೆ..
ನಾನು ಹಾಗಿಲ್ಲ..
ನಿನ್ನನ್ನು  ನನ್ನ ಬದುಕಿನಷ್ಟು ಪ್ರೀತಿಸುತ್ತೇನೆ..."


"ನೋಡು.....
ಬಣ್ಣದ ಮಾತುಗಳು ಬೇಡ...
ನೀನು  ನನ್ನನ್ನು ಮದುವೆಯಾಗುವದಿಲ್ಲವೇ...?


ನನಗೆ ನಮ್ಮ ಪ್ರೀತಿಗೊಂದು ಚೌಕಟ್ಟು ಹಾಕಿ..
ಬದುಕಿನುದ್ದಕ್ಕೂ ಪೂಜಿಸುವ ಆಸೆ..
ನಮ್ಮ ಪ್ರೀತಿಯನ್ನು ನನ್ನ ಪುಟ್ಟ ಸಂಸಾರದ ಬಂಧನದಲ್ಲಿ  ಕಟ್ಟಿಡುವಾಸೆ..


ಆದರೆ....
ನೀನು ಕೇವಲ ನನ್ನ ಅಂದವನ್ನು ಭೋಗಿಸುವದಕ್ಕಾಗಿ ..
ಇಷ್ಟೆಲ್ಲ ನಾಟಕ ಆಡಿದೆಯಾ   ...?
ಛೇ.."


ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..


"ನೋಡು ..
ಗಂಡು ಒಂದು ಸಂಬಂಧವನ್ನು ..
ಸಂದರ್ಭಕ್ಕಾಗಿ.. 
ಕೇವಲ ಒಂದು ಸಮಯಕ್ಕಷ್ಟೇ ಬಳಸುವದಕ್ಕೆ ಇಷ್ಟಪಡುತ್ತಾನೆ..


ಬದ್ಧತೆ ಇಲ್ಲದ ಬಂಧಗಳೆಂದರೆ ಗಂಡಿಗೆ ಇಷ್ಟ..


ನಾನು ಹಾಗಿಲ್ಲ ಕಣೆ....


ನಿನ್ನೊಡನೆ ನನ್ನ  ಬದುಕಿನ ಕನಸನ್ನು ಕಟ್ಟುತ್ತೇನೆ..
ನಿನ್ನ  ಬದುಕಿನ ಭರವಸೆ ನಾನಾಗುತ್ತೇನೆ..
ನಾವಿಬ್ಬರೂ ಮದುವೆಯಾಗೋಣ..
ನಾಳೆಯೇ... ನಿನ್ನ ಮ್ಮ  ಅಪ್ಪನ ಬಳಿ ಬಂದು ಮಾತನಾಡುತ್ತೇನೆ...
ನನ್ನ ಮೇಲೆ ಅನುಮಾನ ಬೇಡ..


ಹುಡುಗಿ..
ಈಗ ಇಷ್ಟು ಹತ್ತಿರ ಬಂದು ಹೇಗೆ ಸುಮ್ಮನಿರಲಿ...?


ಈ ಕೆನ್ನೆ... ಗಲ್ಲ... 
ನನ್ನ ಕೈಯೊಳಗಿನ ಈ ಮುದ್ದು ಮುಖವನ್ನು ಸುಮ್ಮನೆ ಹೇಗೆ ಬಿಡಲಿ...?"


ಹುಡುಗ ತನ್ನ ಅಪ್ಪುಗೆಯನ್ನು ಇನ್ನೂ ಬಿಗಿ ಮಾಡಿದ...


ಮಾತು ಬೇಕಿರದ ಸಂದರ್ಭದಲ್ಲಿ ಏದುಸಿರು ಮಾತನಾಡಿತು..


ಬಯಸಿದಾಗ ಸಿಗುವ..
ಸಾಮಿಪ್ಯದ ಸುಖ ಬಲು ರೋಮಾಂಚಕಾರಿ...


ನಾನು ಕಣ್ಮುಚ್ಚಿ ಅನುಭವಿಸುತ್ತಿದ್ದೆ... 
ಅನುಭವಿಸಿದೆ...
ಆತನ ಉನ್ಮತ್ತತೆಯಲ್ಲಿ ಬೆವರಾಗಿ ಸೋತು ಹೋದೆ....


ನಮ್ಮ ಸಂಬಂಧವನ್ನು ಎಷ್ಟು ದಿನ ಅಂತ ಮುಚ್ಚಿಡಲು ಸಾಧ್ಯ...?


ಹುಡುಗನ ಬಗೆಗೆ ಅಪ್ಪನ ಬಳಿ ಮಾತನಾಡಿದೆ...


"ನೋಡಮ್ಮ..
ಹುಡುಗನನ್ನು ಮನೆಗೆ ಕರೆದುಕೊಂಡು ಬಾ..
ಮಾತನಾಡುವೆ..."


ಮರುದಿನ ಹುಡುಗ ನಮ್ಮನೆಗೆ ಬಂದ...
ಅಪ್ಪ ಹುಡುಗನ ಬಳಿ ಮಾತನಾಡಿದ...


ಹುಡುಗ ಹೋದ ಮೇಲೆ ಅಪ್ಪ ನನ್ನ ಬಳಿ ಹೇಳಿದ...


"ಈ..ಹುಡುಗ ...
ದಾಂಪತ್ಯ ಬದುಕಿಗೆ ಸರಿ ಇಲ್ಲಮ್ಮ..
ಅವನ ಬಳಿ ಅರ್ಧ ಗಂಟೆ ಮಾತನಾಡಿದೆ..
ಆತ ಮಾತನಾಡಿದ್ದು ಸಲ್ಮಾನ್ ಖಾನ್, ಶಾರೂಖ್ ಖಾನ್ ಬಗೆಗೆ..


ಸಿನೆಮಾ ಕಥೆಗಳು..
ಹಾಡುಗಳು.. ಬದುಕಲು  ಬೇಕಾಗುವ ಅಗತ್ಯ ಅಲ್ಲಮ್ಮ..


ಮದುವೆಯಾಗುವ ಹುಡುಗನ ಜವಾಬ್ಧಾರಿ ಅವನ ಮಾತುಗಳಲ್ಲಿ ಇಲ್ಲಮ್ಮ.."


"ಅಪ್ಪಾ..
ಆ ಹುಡುಗ ಹುಟ್ಟು ಪ್ರತಿಭಾವಂತ..
ಹಾಡುಗಾರ... ಚಿತ್ರಕಾರ.."


"ನೋಡಮ್ಮಾ..
ಹಾಡು...
ಬಣ್ಣದ  ಬದುಕು   ತುಂಬಾ ಕಷ್ಟದ್ದು.....


ದೂರದಿಂದ ಚಂದ ಈ ಬಣ್ಣ  ಬಣ್ಣದ ಮಾತುಗಳ ಬದುಕು..


ಬಣ್ಣದ ಮಾತುಗಳು.. ಹಾಡುಗಳು.. ನಟನೆಗಳು ಬದುಕು ಕಟ್ಟುವದಿಲ್ಲವಮ್ಮ..


ನಿನಗೆ ಯೋಗ್ಯವಾದ ಗಂಡನನ್ನು ನಾನು ಹುಡುಕುವೆ..


ಈ ಹುಡುಗ ಮದುವೆ ಜೀವನಕ್ಕೆ ಯೋಗ್ಯ ಇಲ್ಲ..."


ಅಪ್ಪನ ಅಭಿಪ್ರಾಯಕ್ಕೆ ಎದುರಾಡುವ ಸಂದರ್ಭವೇ ಬರಲಿಲ್ಲ..


ಅಂದು ನಮ್ಮ ವಿದಾಯದ ದಿನ ಆತ ಅತ್ತು ಬಿಟ್ಟಿದ್ದ..
ನನಗಂತೂ ಹೃದಯ ದೃವಿಸಿಹೋಗಿತ್ತು..


ಅವನಿಗೆ ಮೋಸ ಮಾಡಿದ ಅಪರಾಧಿ ಭಾವನೆ ಕಾಡತೊಡಗಿತು..


ಅಪ್ಪ ಹುಡುಕಿದ ಹುಡುಗನೊಡನೆ ನನ್ನ ಮದುವೆಯಾಯಿತು..


ಮದುವೆಯಾದ ಗಂಡು ನನ್ನ ಅಂದ ಚಂದಗಳ ಆರಾಧಕ...
ನನ್ನ ಅಂದ, ಚಂದಗಳನ್ನು ಕೃತಜ್ಞತಾಭಾವದಿಂದ ಅನುಭವಿಸುತ್ತಿದ್ದ...


ನನ್ನ ಗಂಡನ ಆರಾಧನಾ ನೋಟಕ್ಕಿಂತ..
ಹುಡುಗನ ಬೆತ್ತಲೆಗೊಳಿಸುವ ನೋಟ ನನಗೆ ಇಷ್ಟವಾಗುತ್ತಿತ್ತು...


ಆತ ಬಹಳ ನೆನಪಾಗುತ್ತಿದ್ದ..


ನಾನು ಆತನಿಗೆ ಮೋಸ ಮಾಡಿದ ಭಾವದಿಂದ ನನಗೆ ಹೊರಗೆ ಬರಲಿಕ್ಕೆ ಆಗಲಿಲ್ಲ..


ಆ ಚಿತ್ರಕಾರನ ಚಿತ್ರಗಳನ್ನು ಮನೆಯ ಗೋಡೆಯ ತುಂಬಾ ಹಾಕಿದ್ದೆ..
ಅವನು ಬಿಡಿಸಿದ ಹೆಣ್ಣಿನ ಚಿತ್ರಗಳಲ್ಲಿ ನನ್ನನ್ನೇ ಕಾಣುತ್ತಿದ್ದೆ..


ಆತನೂ ಒಮ್ಮೆ ನನಗೆ ಹೇಳೀದ್ದ..


" ನಾನು ಬಿಡಿಸುವ ಚಿತ್ರಗಳಲ್ಲಿ..
ನೀನು..
ನಿನ್ನ ಕಣ್ಣು.. ಕೆನ್ನೆ.. ಗಲ್ಲಗಳೇ ಇರುತ್ತವೆ ಕಣೆ..."


ಆಗ ನಾನು ಅವನನ್ನು ಬಿಗಿಯಾಗಿ ತಬ್ಬಿಕೊಂಡಿದ್ದೆ..


ದಿನ ಕಳೆಯುತ್ತಿತ್ತು..
ನನಗೊಬ್ಬ ಮಗಳು.. ಹುಟ್ಟಿದಳು..


ನನ್ನಷ್ಟೇ ಸುಂದರಿ..
ನನ್ನ ಹಾಗೆ ಕಣ್ಣು.. ಕೆನ್ನೆ.. ಗಲ್ಲ.. ಮಾತು..!


ಪುಟ್ಟ ಹುಡುಗಿ ಕಾಲೇಜಿಗೆ ಹೋಗವಷ್ಟು ದೊಡ್ಡವಳಾಗಿದ್ದು..
ಸಮಯ ಸರಿದದ್ದು ಗೊತ್ತೇ ಆಗಲ್ಲಿಲ್ಲ..


ನಾನು ಯಾವಾಗಲೂ ಚಿತ್ರಕಾರನ ಧ್ಯಾನದಲ್ಲಿ ಇರುತ್ತಿದ್ದರಿಂದಲೋ..
ಗೊತ್ತಿಲ್ಲ..
ನನ್ನ ಮಗಳಿಗೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಬೆಳೆಯಿತು...


ಒಂದು ದಿನ ನನ್ನ ಗಂಡ ನನಗೆ ಒಂದು ಆಶ್ಚರ್ಯ ತಂದ..


"ನೋಡೆ...
ನಿನ್ನ ಮೆಚ್ಚಿನ ಚಿತ್ರಕಾರನನ್ನು ಮಾತನಾಡಿಸಿದ್ದೇನೆ...


ನಮ್ಮ ಮಗಳಿಗೆ ಚಿತ್ರ ತರಬೇತಿ ಕೊಡಲು ಆತ ಒಪ್ಪಿದ್ದಾನೆ..


ಆತ ಇದುವರೆಗೆ ಯಾರಿಗೂ ತನ್ನ ಕಲೆಯನ್ನು ಹೇಳಿಕೊಟ್ಟಿಲ್ಲ..
ಇದು ನಮ್ಮ ಮಗಳ ಭಾಗ್ಯ ಕಣೆ.."


ಬದುಕಿನ ತಿರುವಗಳಲ್ಲಿ ಅತೀತಗಳು ಧುತ್ತೆಂದು ಎದುರಿಗೆ ಬಂದು ಬಿಡುತ್ತವೆ..


ನನ್ನ ಪ್ರತಿಕ್ಷಣದ ಪ್ರೀತಿ..
ಆ ಹುಡುಗ ಮತ್ತೊಮ್ಮೆ ನನ್ನ ಬಾಳಲ್ಲಿ ಭೇಟಿಯಾದ..


ನನಗೂ ಒಮ್ಮೆ ಅವನನ್ನು ಭೇಟಿಯಾಗುವ ಸುಪ್ತ ಆಸೆ ಮನದೊಳಗೇ ಇತ್ತು..


ಇನ್ನೊಮ್ಮೆ ಆತನ ಕ್ಷಮೆ ಕೇಳಬೇಕು ಅನ್ನಿಸುತ್ತಿತ್ತು..


ಬಹು ದಿನಗಳ ನಂತರ..
ಬಹಳ ಆಸಕ್ತಿಯಿಂದ ಅಲಂಕರಿಸಿಕೊಂಡು ತಯಾರಾಗಿದ್ದೆ..


ಇದು ಯಾಕೆ?
ಮೋಸಮಾಡಿದ ಹುಡುಗನ ಎದುರಲ್ಲಿ ಮತ್ತೆ ನನ್ನ ಅಂದವನ್ನು ತೋರಿಸುವ ಬಯಕೆ...!!


ಆ ಹುಡುಗನ ಮೆಚ್ಚಿನ ಬಣ್ಣದ ಸೀರೆ ಉಟ್ಟುಕೊಂಡಿದ್ದೆ..


ನಾನು ನನ್ನ ಗಂಡ ಇಬ್ಬರೆ ಆತನ ಮನೆಗೆ ಹೋಗಿದ್ದೆವು..


ಆತ ಸ್ವಾಗತಿಸಿದ..


ನನಗೆ ವಿಶ್ವಾಸವಾಗಲಿಲ್ಲ...


ಅವನ ಅದೇ.. ಹಸಿ ಹಸಿ ನೋಟ..
ನನ್ನನ್ನು ಬೆತ್ತಲೆ ಮಾಡಿ ನೋಡುವ ಹಸಿದ ಕಂಗಳ ನೋಟ... !!


ಇಷ್ಟು ವರ್ಷಗಳಾದರೂ ಹೆಣ್ಣಿನ ಮೇಲಿನ ಆಸಕ್ತಿ ಕಡಿಮೆ ಆಗಲಿಲ್ಲವೆ?


"ಬನ್ನಿ ಬನ್ನಿ..
ಇದು ಬ್ರಹ್ಮಚಾರಿ ಮನೆ..
ಅಡಿಗೆಯವರ ಕೈ ಊಟ..
ನಿಮಗೆ ಏನು ಮಾಡಿಸಲಿ...? ಚಹ.. ಕಾಫೀ...?"


ಅಯ್ಯೋ ದೇವರೆ... !
ಈತ ಮದುವೆ ಆಗಲೇ ಇಲ್ಲವೆ? 


ನನ್ನೊಳಗಿನ ಆಪರಾಧಿ ಮನೋಭಾವ ಮತ್ತೂ ಜಾಸ್ತಿಯಾಯಿತು... 


ನನಗೆ ಮಾತಾಡುವ ಆಸಕ್ತಿಯೇ ಹೊರಟು ಹೋಯಿತು..
ನನ್ನನ್ನು ನಾನು ಕ್ಷಮಿಸಿಕೊಳ್ಳಲಾಗಲಿಲ್ಲ...


ನಾನು ಮೌನಕ್ಕೆ ಶರಣಾದೆ..


ಹುಡುಗ ಮತ್ತು ಗಂಡ ಇಬ್ಬರೆ ಮಾತನಾಡಿದರು..


ನನ್ನ ಮಗಳಿಗೆ ಚಿತ್ರ ಕಲೆಯನ್ನು ಧಾರೆ ಎರೆಯಲು ಆತ ಒಪ್ಪಿದ..


ನನ್ನ ಗಂಡ ಬಹಳ ಖುಷಿಯಲ್ಲಿದ್ದ...


ಮಗಳು ಬಹಳ ಖುಷಿಯಿಂದ ಚಿತ್ರ ಕಲೆ ಕಲಿಯಲು ಹೋಗುತ್ತಿದ್ದಳು..
ಯಾವಾಗಲೂ ತನ್ನ ಗುರುವನ್ನು ಹೊಗಳುತ್ತಿದ್ದಳು..


ಒಂದು ದಿನ ಅವಳನ್ನು ಮಾತನಾಡಿಸಿ.. ಅವಳ ಗುರುವಿನ ಫೋನ್ ನಂಬರ್ ತೆಗೆದುಕೊಂಡೆ..


"ಹುಡುಗಾ..
ನಿನ್ನನ್ನೊಮ್ಮೆ ಭೇಟಿ ಮಾಡಬೇಕು..
ಕ್ಷಮೆಗೆ ನಾನು ಅರ್ಹಳಲ್ಲದಿದ್ದರೂ.. ಇನ್ನೊಮ್ಮೆ ಭೇಟಿಗೆ ಅವಕಾಶ ಮಾಡಿಕೊಡು..."


ನಾನು ದುಃಖದಿಂದ ಅಳುತ್ತಿದ್ದೆ..


" ನನ್ನ ಬದುಕೇ.. ಹೀಗೆ..
ಹೀಗೆ ಇರುತ್ತದೆ..


ಬಯಸಿದ್ದೆಲ್ಲ ಸಿಕ್ಕಿದರೆ..ಬವಣೆಗಳಿಗೆ ಬೆಲೆ ಎಲ್ಲಿ?


ನಮ್ಮ ನಿರ್ಧಾರಗಳ ಸರಿ, ತಪ್ಪುಗಳ ಬೆಲೆಯನ್ನು ಸಮಯ ಕಟ್ಟುತ್ತದೆ..


ಸರಿದು ಹೋದ ಸಮಯ ಮತ್ತೆ ತರಲಾಗದು..
ಮತ್ತೆ ಸಿಕ್ಕಿದ್ದೀಯಲ್ಲ..
ನಿನ್ನ ಖುಷಿ ಸಂಸಾರ ನೋಡಿ ಖುಷಿಯಾಯಿತು ...


ನೀನು ಸುಖವಾಗಿದ್ದೀಯಾ... ಸಂತೋಷದಿಂದಿರು..."


"ನಿನ್ನನ್ನು  ಭೇಟಿಯಾಗಬೇಕು ಯಾವಾಗ ಬರಲಿ?"


ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..


"ಕೂದಲು ಹಣ್ಣಾದರೂ.. ಮತ್ತದೆ ನೆನಪುಗಳು...


ಬಯಕೆಗಳು ಗರಿಗೆದರುತ್ತವೆ..


ನಿನ್ನನ್ನು ನೋಡಿ..
ಮತ್ತೆ ನನ್ನ ನೀಯತ್ತು ಸಡಿಲಗೊಂಡರೆ ಕಷ್ಟವಲ್ಲವೆ...?..


ನೀನು ಈಗ ಸಂಸಾರಸ್ಥೆ..."


"ಹುಡುಗಾ..
ಹಾಗೇನೂ ಆಗುವದಿಲ್ಲ..
ನಾನು ಪ್ರಬುದ್ಧಳಾಗಿದ್ದೇನೆ..
ನನಗೂ ವಯಸ್ಸಾಯಿತು..ಯಾವಾಗ ಬರಲಿ..?"


ಹುಡುಗ ಸ್ವಲ್ಪ ವಿಚಾರ ಮಾಡಿದ..


"ಹುಂ..
 ನಾಳೆ ಬೇಡ.. ನಾನು ಬಿಡುವಾಗಿಲ್ಲ ..
ನಾಡಿದ್ದು ಬಾ..."


ನಾನು ಸಣ್ಣ ಹುಡುಗಿಯಂತೆ ನಲಿದೆ...
ಕುಣಿಯುವಾಸೆ ಆಯಿತು....


ಅಪ್ಪ ಮಗಳಿಗೆ ಆಶ್ಚರ್ಯವಾಯಿತು...


"ಏನು ಬಹಳ ಖುಷಿಯಲ್ಲಿದ್ದೀಯಾ...?"


"ಏನೂ ಇಲ್ಲ..
ನನ್ನ ಹಳೆಯ ಗೆಳತಿಯೊಬ್ಬಳು ..
ನಾಡಿದ್ದು ಭೇಟಿಯಾಗುತ್ತೇನೆ ಅಂದಿದ್ದಾಳೆ..
ಅವಳ ಮನೆಗೆ ಹೋಗಬೇಕು..."


"ಅಮ್ಮಾ..
ನಿನ್ನ ಬಳಿ ಮೂಗಿಗೆ ಹಾಕುವ ರಾಜಸ್ತಾನದ ದೊಡ್ಡ ರಿಂಗು..
ಕೆನ್ನೆ ಸರಪಳಿ.. ಇದೆಯೇನಮ್ಮಾ...?"


"ಯಾಕೆ ಮಗಳೇ..?"


"ಅಮ್ಮಾ..
ಚಿತ್ರಕಾರರ ಚಿತ್ರದ ಮಾಡೆಲ್ಲು ನಾನು ಆಗುತ್ತಿದ್ದೇನೆ..!


ಅಷ್ಟು ದೊಡ್ಡ ಕಲಾವಿದನ ಮಾಡೆಲ್ಲು ನಾನು.. !!
ನಂಬಲಿಕ್ಕೆ ಆಗ್ತ ಇಲ್ಲ..


ಚಿತ್ರಕಾರರು ನನ್ನ ಚಿತ್ರ ಬಿಡಿಸುತ್ತಾರಂತೆ..!


ನನ್ನ ಕೆನ್ನೆ.. 
ಗಲ್ಲ..ಕಣ್ಣು.. ಎಲ್ಲ ಅವರಿಗೆ ಸ್ಪೂರ್ತಿಕೊಟ್ಟಿದೆಯಂತೆ..!


ನನ್ನ ಚಂದವನ್ನು ಅವರು ಯಾವಾಗಲೂ ಹೊಗಳುತ್ತಾರೆ...!


ನನ್ನ ಅಲಂಕಾರಗಳನ್ನು ಅವರೇ ಬಿಚ್ಚಿಕೊಡುತ್ತಾರಂತೆ... !
ಅದು ಅವರಿಗೆ ತುಂಬಾ ಖುಷಿಯಂತೆ..


ನಾಳೆ ನಾನು ತಯಾರಾಗಿ ಬರಬೇಕಂತೆ.. "


ಮಗಳು ಇನ್ನೂ ಏನೇನೋ ಹೇಳುತ್ತಿದ್ದಳು...


ನಾನು ಅವಕ್ಕಾಳಾದೆ...!! 
ಅಪ್ರತಿಭಳಾದೆ... !!


ತಡೆಯಲಾಗದ ಕೋಪ ಬಂತು...
ಜೋರಾಗಿ ಕೂಗಿದೆ..


"ನೀನು ಚಿತ್ರ ಕಲೆ ಕಲಿಯುವದು ಸಾಕು...!


ಆ ಹಾಳು...
ಕೆಟ್ಟ  ಮನುಷ್ಯನ ಮಾಡೆಲ್ಲು ಆಗುವದೂ ಸಾಕು...!


ನಾಳೆಯಿಂದ ಮನೆಯಲ್ಲೇ ಇರು..


ಈ.. ಧರಿದ್ರ ಗಂಡಸರನ್ನು ನಂಬಲಿಕ್ಕೆ ಆಗುವದಿಲ್ಲ...!.."


ನಾನು ಇನ್ನೂ ಆವೇಶದಿಂದ ಕೂಗುತ್ತಲೇ ಇದ್ದೆ...


ಅಪ್ಪ..
ಮಗಳು ನನ್ನನ್ನೇ ಆಶ್ಚರ್ಯದಿಂದ  ನೋಡುತ್ತಿದ್ದರು...!


ಅಸಹಾಯಕತೆಯ ಭಾವ...!!


ನನ್ನ ಮೈಯೆಲ್ಲ ಕೋಪದಿಂದ ಕಂಪಿಸುತ್ತಿತ್ತು..
(ಉತ್ತಮ ಪ್ರತಿಕ್ರಿಯೆಗಳು ಬಂದಿವೆ..
ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....)