Friday, August 24, 2012

ಪ್ರಿಯ... ಓದುಗ ಗೆಳೆಯಾ.......


ಪ್ರಿಯ... ಓದುಗ ಗೆಳೆಯಾ.......

ಮತ್ತೊಮ್ಮೆ ಸಂಭ್ರಮ... ಖುಷಿ ಪಡುವ ಸಂದರ್ಭ ಬಂದೊದಗಿದೆ...!

ನನ್ನ ಮೂರನೆಯ ಪುಸ್ತಕ ಬಿಡುಗಡೆಯಾಗುತ್ತಲಿದೆ...

ಜೊತೆಗೆ ಗೆಳೆಯರಾದ ಆಜಾದನ..
ಉಮೇಶ ದೇಸಾಯಿಯವರ..
ಚಿಂವ ಚಿಂವ್ ಗೆಳೆಯ "ಸತೀಶನ" ಪುಸ್ತಕಗಳೂ ಬಿಡುಗಡೆಯಾಗುತ್ತಲಿದೆ...

ನಮ್ಮೆಲ್ಲ ಪುಸ್ತಕಗಳನ್ನು ಪ್ರಕಟಿಸಿರುವದು  
ಗೊಮಿನಿ ಪ್ರಕಾಶನದ "ಸತೀಶ್ ಗುಬ್ಬಚ್ಚಿ"

ಇದಲ್ಲದೇ..

ಸಹೋದರಿ ಚೇತನಾ ತೀರ್ಥಹಳ್ಲಿ ಮತ್ತು ತಮ್ಮ ಸುಶ್ರುತ ದೊಡ್ಡೇರಿ..
ಇವರು ಸಂಪಾದಿಸಿದ..
ಸೃಷ್ಟಿ ನಾಗೇಶ್  ಪ್ರಕಟಿಸಿರುವ...

ಬ್ಲಾಗಿಗರ ಹೆಮ್ಮೆಯ "ಬ್ಲಾಗಿಸು ಕನ್ನಡ ಡಿಂಡಿಮವ" ಎನ್ನುವ ಪುಸ್ತಕವೂ ಬಿಡುಗಡೆಯಾಗುತ್ತಲಿದೆ...

"ಇದರ ಹೆಸರು... ಇದಲ್ಲಾ...!"
ಇದು ನನ್ನ ಮೂರನೆಯ ಪುಸ್ತಕ...

ಎಷ್ಟೇ ಸಹಜವಾಗಿರಬೇಕು ಅಂತ ಅಂದು ಕೊಡರೂ..
ಸಣ್ಣ ಆತಂಕ... !!
ಒಳಗೊಳಗೇ ತಡೆಯಲಾಗದ ಖುಷಿ...!

ನೀವೆಲ್ಲ ಇದನ್ನು ಹೇಗೆ ಸ್ವೀಕಾರ ಮಾಡುತ್ತೀರೋ ಎನ್ನುವ "ಢವ...ಢವ.." !

ಪ್ರಿಯ ಓದುಗ ಗೆಳೆಯಾ...

೨೦೦೮ರಲ್ಲಿ ಶುರುವಾದ ಈ ಬ್ಲಾಗ್ ನನ್ನನ್ನು ಎಷ್ಟು ಬದಲಿಸಿದೆ ಗೊತ್ತಾ ? 

ನನಗೇ ಆಶ್ಚರ್ಯವಾಗುತ್ತಿದೆ... !

ಎಲ್ಲೋ ಬೆಂಗಳೂರಿನ ಹೊರವಲಯದಲ್ಲಿ ...
ಮನೆ.. 
ಅಪಾರ್ಟಮೆಂಟು ಕಟ್ಟುತ್ತ...
ಮೇಸ್ತ್ರಿಯೊಡನೆ ಲೆಕ್ಕಾಚಾರ ಮಾಡುತ್ತ...

ಪ್ರತಿ ಶನಿವಾರ ಹಣ ಹೊಂದಿಸುವ ಜಂಜಾಟದಲ್ಲಿ ಕಳೆದು ಹೋಗುತ್ತಿದ್ದ 
ನನ್ನನ್ನು...
ಈ ಬ್ಲಾಗ್ ಎಲ್ಲೋ ತಂದು ನಿಲ್ಲಿಸಿಬಿಟ್ಟಿದೆ...!!

ನನ್ನ ಮಗ..
ಮಡದಿಯೊಡನೆ...
ಟಿವಿಯ ಸೀರಿಯಲ್...

ಗೆಳೆಯ ಸತ್ಯ ಕುಟುಂಬದವರೊಡನೆ ವರ್ಷಕ್ಕೊಂದೆರಡು   ಬಾರಿ ಪ್ರವಾಸ ಹೋಗುತ್ತ..

ನನ್ನ ದೈನಂದಿನ ವ್ಯವಹಾರಿಕ ಬದುಕಿನಲ್ಲಿ ಕಳೆದು ಹೋಗುತ್ತಿದ್ದೆ...

ಈ ಬ್ಲಾಗ್ ನನಗೊಂದು ಹೊಸ ಪ್ರಪಂಚ ಸೃಷ್ಟಿಸಿಕೊಟ್ಟಿದೆ...!!

ನಾನು ಬರೆದದ್ದು ಬರಹ.. 
ಲೇಖನಗಳಲ್ಲ...
ನನ್ನೊಳಗೆ ಉಳಿದು ಹೋಗಿದ್ದ ಮಾತುಗಳು...

ನಾನು ಮಾತನಾಡಬೇಕೆಂದಿದ್ದ ಧ್ವನಿಗಳು..

ನನ್ನ ಭಾವಗಳಿಗೆ ನೀವು ಸಾಕ್ಷಿಯಾದಿರಿ...!

ಎಷ್ಟೊಂದು ಪ್ರೋತ್ಸಾಹಗಳು..
ಪ್ರತಿಕ್ರಿಯೆಗಳು !!
ಪ್ರೀತಿ ಮಮತೆ ತೋರಿಸಿದ್ದೀರಿ... !

ನಿಜಕ್ಕೂ ಆಶ್ಚರ್ಯವಾಗುತ್ತದೆ...!

ಇದಕ್ಕೆಲ್ಲ ನಾನು ಅರ್ಹನಾ? ..........
ನನಗೆ ಯೋಗ್ಯತೆ ಇದೆಯಾ?.........

ಎಲ್ಲೋ ಒಂದುಕಡೆ ನಿಂತ ನೀರಾಗಿಬಿಡುತ್ತಿದ್ದ ನನ್ನನ್ನು ...
ಪ್ರವಹಿಸುವಂತೆ ಮಾಡಿದ್ದು  ನೀವು...!

ನಿಮ್ಮ ಪ್ರೀತಿಯ ಓದು...!

ನಿಮ್ಮ ಈ ಪ್ರೀತಿ ..
ಮಮತೆ ಹೀಗೆಯೇ ಇರಲಿ...

ಬ್ಲಾಗ್ ಲೋಕದ ನನ್ನೆಲ್ಲ ಗೆಳೆಯರಿಗೆ...
ಪ್ರೀತಿಯ ಸಹೋದರಿಯರಿಗೆ...

ಹಿರಿಯರಿಗೆ.. ಎಲ್ಲರಿಗೂ... ಪ್ರೀತಿಯ ವಂದನೆಗಳು...

ಇಂದು (25/8 2008) ವಾಡಿಯಾ ಸಭಾಂಗಣಕ್ಕೆ ದಯವಿಟ್ಟು ಬನ್ನಿ...

ನಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳಿ...

ರುಚಿಕಟ್ಟಾದ ತಿಂಡಿ.....
ಬಿಸಿ ಬಿಸಿ
ಕಾಫೀ...
ಟೀ .. ಮತ್ತು 

ನಾನು...
ನನ್ನ ಬ್ಲಾಗ್ ಕುಟುಂಬ ನಿಮಗಾಗಿ ಕಾಯುತ್ತೇವೆ...


ಬೆಳಿಗ್ಗೆ ಹತ್ತುಗಂಟೆಗೇ ಬನ್ನಿ ಹರಟೋಣ....

ಕಾಯುತ್ತಾ ಇರುತ್ತೇವೆ...
ನಮ್ಮ 
ಕ್ಯಾಮರಾಗಳೊಡನೆ  .........................


Friday, August 3, 2012

ನಮ್ಮನ್ನು ನಾವು ಸಾಯಿಸಿಕೊಳ್ಳುವದಕ್ಕೆ... ಬೇಕಾದಷ್ಟು ಮಾರ್ಗಗಳಿವೆ !!....."


ಮಹಾಭಾರತದ ಘನ ಘೋರ ಯುದ್ಧ ನಡೆಯುತ್ತಿತ್ತು....


ಕರ್ಣನಿಗೆ ಸಾರಥಿಯಾಗಿ ಶಲ್ಯ ಸಿಕ್ಕಿದ್ದ..
ಆತ ಪಾಂಡವರ ಸೈನ್ಯವನ್ನು ಧ್ವಂಸಗೊಳಿಸುತ್ತ ಸಾಗಿದ್ದ..


ಮಧ್ಯದಲ್ಲಿ ಧರ್ಮರಾಜ ಎದುರಾದ...


ಕರ್ಣ ಧರ್ಮರಾಜನನ್ನು ಸೋಲಿಸಿ...
ಆತನಿಗೆ ಬೀಳಿಸಿ ..
ಚೆನ್ನಾಗಿ ಒದ್ದು ಹೋಗಿಬಿಟ್ಟ...!


ಧರ್ಮರಾಜನಿಗೆ ಬಹಳ ಅಪಮಾನವಾಯಿತು...


ಆಗ ..
ಅಣ್ಣನನ್ನು ಹುಡುಕುತ್ತ ಅರ್ಜುನ ಧರ್ಮರಾಜನ ಬಳಿ ಬಂದ..


ಅರ್ಜುನ ತನ್ನ "ಗಾಂಢೀವ" ಧನಸ್ಸುನ್ನು ಹಿಡಿದಿದ್ದ...


ಅಪಮಾನದಿಂದ ಉರಿಯುತ್ತಿದ್ದ ಧರ್ಮರಾಜ .....


"ಬೆಂಕಿ ಹಾಕು ...
ನಿನ್ನ "ಗಾಂಢೀವ" ಧನುಸ್ಸಿಗೆ...!


ನಮ್ಮ ಮರ್ಯಾದಿ ಕಾಪಾಡಲಾಗದ ..
ಇದೆಂಥಹ ಗಾಂಢೀವ...! .. " 


ಎಂದು ಹೀಗಳೆದ..


ಅರ್ಜುನನ ಒಂದು ಪ್ರತಿಜ್ಞೆಯಿತ್ತು..


" ಗಾಂಢೀವವನ್ನು ..
ಯಾರಾದರೂ ಬಯ್ದರೆ ಅವರನ್ನು ನಾನು ಕೊಲ್ಲುತ್ತೇನೆ...!"


ಅರ್ಜುನ ಖಡ್ಗ ಹಿಡಿದು ...
ಧರ್ಮರಾಜನನ್ನು ಕೊಲ್ಲಲು ಮುಂದಾಗುತ್ತಾನೆ...


ಚತುರ  ಕೃಷ್ಣ ಅಡ್ಡ ಬರುತ್ತಾನೆ...


"ನೋಡು ...
ನಿನ್ನ ಪ್ರತಿಜ್ಞೆಯನ್ನು ಬೇರೆ ರೀತಿಯಿಂದಲೂ ಪೂರೈಸ ಬಹುದು....


ಒಬ್ಬ ಘನವೆತ್ತ ಮರ್ಯಾದಸ್ಥನಿಗೆ ..
ಅವಮಾನವಾಗುವ ಹಾಗೆ ಬಯ್ದು..
ಮರ್ಯಾದೇ  ತೆಗೆದರೆ ...


ಆತನನ್ನು ಹತ್ಯೆ ಮಾಡಿದ ಹಾಗೆ...!


ನೀನು ಧರ್ಮರಾಜನನ್ನು ಬಯ್ಯಿ...! 
ತೆಗಳು...!


ಆಗ ಧರ್ಮರಾಜ ಸತ್ತ ಹಾಗೆಯೇ ..


ನಿನ್ನ ಪ್ರತಿಜ್ಞೆ ನೆರವೇರಿದಂತಾಗುತ್ತದೆ...!!


ಅರ್ಜುನ ಧರ್ಮರಾಜನಿಗೆ ಯದ್ವಾತದ್ವಾ  ಬಯ್ಯತೊಡಗಿದ...


"ನೀನೆಂಥಹ ಅಣ್ಣ...?
ನಿನ್ನ ..
ಜೂಜಾಟದ ತೆವಲಿಗೆ  ನಮ್ಮನ್ನೆಲ್ಲ ವನವಾಸಕ್ಕೆ ಕರೆದೊಯ್ದೆ...
ಮಹಾರಾಣಿಯಾಗಿದ್ದ ದ್ರೌಪದಿಗೆ ನಾರುಮಡಿಯನ್ನುಡಿಸಿದೆ...


ನನ್ನನ್ನು ಬ್ರಹನ್ನಳೆಯನ್ನಾಗಿಸಿದೆ....
ಭೀಮನನ್ನುಅಡುಗೆ ಭಟ್ಟನನ್ನಾಗಿ  ಮಾಡಿದೆ .


ನಿನೆಂಥಹ ಅಣ್ಣ .. !


ಡ..ಡ.. ಡ್ಡಾ.. ಡ್ಡಾ....."


ಅಂತೆಲ್ಲ ಬಹಳ ಹೀನಾಯವಾಗಿ ಹೀಗಳೆದ...


ಅಣ್ಣನಿಗೆ ಚೆನ್ನಾಗಿ ಬಯ್ದ ಮೇಲೆ ..
ಅರ್ಜುನನಿಗೆ ಪಶ್ಚಾತ್ತಾಪವಾಯಿತು....


"ಮನುಕುಲಕ್ಕೇ ಆದರ್ಶ ಪ್ರಾಯವಾದಂಥಹ..
ಧರ್ಮ ದೇವತೆಯಂಥಹ ...
ದೇವರಂಥಹ ..
ನನ್ನಣ್ಣನನ್ನು ಬಯ್ದುಬಿಟ್ಟೇನಲ್ಲ....!


ಛೆ ...
ನಾನಿನ್ನು ಬದುಕಿರಬಾರದು...   ! "


ಎಂದು ಖಡ್ಗ ಹಿಡಿದು ತನ್ನನ್ನು ತಾನು ಸಾಯಿಸಿಕೊಳ್ಳಲಿಕ್ಕೆ ಹೊರಟ...


 ಮತ್ತೆ ಚಾಣಾಕ್ಷ್ಯ ಕೃಷ್ಣ ಅಡ್ಡ ಬಂದ...


"ನೋಡು ಮತ್ತೆ ತಪ್ಪು ಮಾಡುತ್ತಿದ್ದೀಯಾ...


ನಮ್ಮನ್ನು ..
ನಾವು ಸಾಯಿಸಿಕೊಳ್ಳುವದಕ್ಕೆ ಬೇಕಾದಷ್ಟು ಮಾರ್ಗಗಳಿವೆ..."


"ಏನದು....?  !!..."


" ಎಲ್ಲ ಕ್ರಮಗಳಿಗೂ ಕೆಲವು ಸೂಕ್ಷ್ಮಗಳಿವೆ...
ಸಾಧನೆ ಮಾಡಿರುವ ವ್ಯಕ್ತಿ ತನ್ನನ್ನು ತಾನು ಆತ್ಮ ಪ್ರಶಂಸೆ ಮಾಡಿಕೊಂಡರೆ..
ಆತ ಸತ್ತ ಹಾಗೆಯೇ....


ನೀನು ನಿನ್ನನ್ನು ಸಾಯಿಸಿಕೊಳ್ಳಬೇಕಾಗಿಲ್ಲ...
ಬೇಕಾದಷ್ಟು ಹೊಗಳಿಕೊ... 


ಆಗ ನೀನು ಸತ್ತ ಹಾಗೆಯೇ...!..


ಆತ್ಮ ಹತ್ಯೆ ಮಾಡಿಕೊಂಡ  ಹಾಗೆಯೇ ! .."


ಅರ್ಜುನ ಶುರು ಹಚ್ಚಿಕೊಂಡ...


"ನಾನು ..
ನಾನು ಶಿವನನ್ನು ಕುರಿತು ಘೋರ ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆದೆ...!


ಗಂಧರ್ವರೊಡನೆ ಹೋರಾಡಿ ಕೌರವ, ಪಾಂಡವರನ್ನು ಬಿಡಿಸಿದ್ದೇನೆ.....!


ನಾನು " ಅದು" ಮಾಡಿದ್ದೇನೆ...!!


ನಾನು "ಇದು" ಮಾಡಿದ್ದೇನೆ... !!


ಮೆಂತೆ ಕದ್ದಿದ್ದೇನೆ.. !!


ಡ..ಡ..ಡ್ಡಾ..ಡ್ಡ... !!... "


ಅಂತೆಲ್ಲ ಹೊಗಳಿಕೊಂಡ...


.... ..... ............. ....... ...  


ಈ ಮಹಾಭಾರತದ ಕಥೆ ಇನ್ನೂ ಇದೆ.. !


ಮುಗಿಯುವಂಥದ್ದಲ್ಲ...!


ಎಂಥಹ ಮಹಾಕಾವ್ಯ ಇದು...!!


ಆಸ್ತಿಕರಿಗೆ ಪವಿತ್ರಗ್ರಂಥವಾದರೆ...
ಓದುಗನಿಗೆ ಒಳ್ಳೆಯ ಕಾದಂಬರಿಯೂ ಹೌದು... !


ಮಾನವ ಬದುಕಿನ ಎಲ್ಲ ಸಂಗತಿಗಳಿಗೆ ...
ಸಮಸ್ಯೆಗಳಿಗೆ ಇಲ್ಲಿ ಉತ್ತರ ಇದೆ ... !


ನಮ್ಮ ಬದುಕಿನ ಎಲ್ಲ ಪಾತ್ರಗಳು ಇಲ್ಲಿ ಸಿಗುತ್ತವೆ !!!


..........   ....  ....  ..........  ............  ..........


ನಮ್ಮ ದೇಶದ ಒಬ್ಬ ಮಹಾಪುರುಷನಿಗೆ ..
ಕೆಲವರು ಹೋಗಿ ವಿನಂತಿಸಿದರಂತೆ ....


"ಗುರೂಜಿಯವರೆ...
ನೀವ್ಯಾಕೆ ರಾಜಕೀಯಕ್ಕೆ ಬರಬಾರದು...?...


ನಿಮ್ಮಂಥವರು ರಾಜಕೀಯಕ್ಕೆ ಬಂದರೆ..
ಈ..
ಕೊಳಚೆ ನೀರನ್ನು ಪವಿತ್ರಗೊಳಿಸ ಬಹುದಲ್ಲ... !"


ಆಗ ಆ ಮಹಾಪುರುಷ ಕೊಟ್ಟ ಉತ್ತರ ಇಂದಿಗೂ ಪ್ರಸ್ತುತ.... !


"ನೋಡಿ...


ಈ ರಾಜಕೀಯದಲ್ಲಿ  ದಿನ ನಿತ್ಯ ...
ಪ್ರತಿಕ್ಷಣ  "ಪರನಿಂದೆ " ಮಾಡಬೇಕು...!


ಯಾವಾಗಲೂ ....ಆತ್ಮ ಪ್ರಶಂಸೆ ಮಾಡಕೊಳ್ಳುತ್ತಿರಬೇಕು... !


ಬೇರೆಯವರನ್ನು ಸಾಯಿಸುತ್ತ...
ನನ್ನನ್ನೂ ಸಾಯಿಸಿಕೊಳ್ಳುತ್ತ ಇರುವದು ನನ್ನಿಂದ ಸಾಧ್ಯವಿಲ್ಲ...!


ಹಾಗಾಗಿ ನಾನು ರಾಜಕೀಯಕ್ಕೆ ಬರುವದಿಲ್ಲ....!  ..."