ಪೆಟ್ಟಿಗೆ ಗಪ್ಪತಿಗೆ ಒಮ್ಮೆ ತಲೆಯಲ್ಲಿ ಒಂದು ವಿಚಾರ ಹೊಕ್ಕಿತು...
ಅದನ್ನ ಕಪನೀಪತಿಯ ತಲೆಗೂ ಹಾಕಿದ..
ಸೀತಾಪತಿಯೂ ಅವರ ಸಂಗಡ ಜೊತೆಗೂಡಿದ...
ಇಂಥಹ ಸಂದರ್ಭಗಳಲ್ಲಿ ಕೊನೆಯ ನಿರ್ಧಾರ ತೆಗೆದುಕೊಳ್ಳುವದು ನಾಗುವಿನ ಸಲಹೆಯ ನಂತರವೇ....
ಏನದು...?
"ಏನೂ ಇಲ್ಲ.. ನಾಗು ಕಾಲೇಜಿನ ಮೊದಲ ವರ್ಷ ಮುಗಿತಾ ಬಂದಿದೆ..
ಹೀಗೆಯೇ ಇದ್ದರೆ ಕಾಲೇಜು ಜೀವನವೇ ಮುಗಿದು ಹೋಗಬಹುದು...
ಏನಾದರೂ ಮಾಡಬೇಕು... ಆ ಅನುಭವವನ್ನೂ ಪಡೆದುಕೊಳ್ಳಬೇಕು ನೋಡು..."
ಏನದು...?
"ಅಲ್ಲಾ... ನಾಗು ನಮ್ಮ ಕ್ಲಾಸಿನ ಹೆಚ್ಚಿನ ಗಂಡು ಮಕ್ಕಳನ್ನು ನೋಡು..
ಅವರೆಲ್ಲರೂ ಹೆಣ್ಣು ಮಕ್ಕಳಿಗೆ ಲೈನ್ ಹೊಡಿತಾರೆ..
ನಮಗೆ ಮಾತ್ರ ಆಗ್ತಾ ಇಲ್ಲ ಕಣೊ..
ಒಂದು ಸಾರಿ ನಾವೂ ಒಮ್ಮೆ ಲೈನ್ ಹೊಡಿಬೇಕು ನೋಡು..
ಏನಾಗ್ತದೆ ಅಂತ ನೋಡಿ ಬಿಡಬೇಕು...!!"
"ಹೋಗ್ರೊ... ಪಕ್ಕಾ ಪೋಲಿ ಅಂತಾರೆ..
ಇದಕ್ಕೆಲ್ಲ ನಾನು ಸಹಾಯ ಮಾಡೊಲ್ಲ..
ಯಾರಾದ್ರೂ .. ಪೋಲಿ ಹುಡುಗರ ಸಹಾಯ ತಗೊಳ್ಳಿ..
ಹಾಗೆ ನನ್ನ ದೋಸ್ತಿನೂ ಮರೆತು ಬಿಡಿ"
ನಾಗು ಖಡಾ ಖಂಡಿತವಾಗಿ ಹೇಳಿ ಬಿಟ್ಟ...
"ಅಲ್ವೊ ನಾಗು ತೀರಾ ಎಡವಟ್ಟುಗಳ ಹಾಗೆ ಲೈನ್ ಹೋಡೆಯೋದು ಬೇಡ್ವೊ..
ಸ್ವಲ್ಪ ಡೀಸೆಂಟಾಗಿ ಹೋಡಿಯೋಣ್ವೊ..
ಸ್ವಲ್ಪ ಡೀಸೆಂಟಾಗಿ ಲೈನ್ ಹೊಡೆಸಿಕೊಳ್ಳೋದು ಹೆಣ್ಣುಮಕ್ಕಳಿಗೂ ಇಷ್ಟವಂತೆ..."
"ಮಾಡೋದೆ ಪೋಲಿ ಕೆಲ್ಸ..!!
ಅದರಲ್ಲಿ ಡೀಸೆಂಟ್ ಅಂತ ಬೇರೆ ಇದೆಯಾ...? ಮಾಡೋಕೆ ಬೇರೆ ಕೆಲ್ಸ ಇಲ್ವಾ...?
ಹೋಗ್ರೋ.. ಓದ್ಕೊಳಿ ಹೋಗಿ..."
"ಇಲ್ವೊ ನಾಗು ಹೀಗೆಲ್ಲ ಹೇಳಿ ನಿರಾಸೆ ಮಾಡಬೇಡ್ವೊ..
ನಿನ್ನ ಎಲ್ಲ ಬೇಡಿಕೆ ಈಡೇರ್ಸ್ತೇವೆ ಕಣೊ..
ಎಂಥಹ ಕಂಡೀಷನ್ ಬೇಕಾದ್ರೂ ಹಾಕು. ಮಾಡ್ತೇವೆ..."
ನಾಗು ಸ್ವಲ್ಪ ಹೊತ್ತು ವಿಚಾರ ಮಾಡಿದ...
"ಓಕೆ... ಎರಡು ಕಂಡಿಷನ್ ಇದೆ...
ಮೊದಲನೆಯದುಮಸಾಲೆ ದೋಸೆ, ಸಿನೇಮಾ ಎಲ್ಲಾ ಇರಬೇಕು...
ಎರಡನೇ ಕಂಡೀಷನ್ ನಿಮ್ಮ ಕೆಲ್ಸ ಆದಮೇಲೆ ಕೇಳ್ತೀನಿ..."
ಸರಿ ಆಯ್ತು ಎಂದರು...
ಅವತ್ತಿನಿಂದ ಕಾಲೇಜು ಬಿಟ್ಟ ಮೇಲೆ ಭಟ್ಟರ ಮನೆಯ ಹಿಂದಿನ ಬೆಟ್ಟದ ಮೇಲೆ ಟ್ರೇನಿಂಗ್ ಶುರುವಾಯಿತು....
ತರಬೇತಿ ಒಂದುವಾರ ನಡೆಯಿತು....
ತರಬೇತಿಗಾಗಿ ಆರ್ಟ್ಸ್ ವಿದ್ಯಾರ್ಥಿ "ಕಾಚಶ್ರೀ" ವಿಶೇಷ ತರಬೇತಿ ಕೊಡಲು ಬಂದಿದ್ದ..
ಕಾಚಶ್ರೀ ಅಂದರೆ ಕಾನೂರು ಚನ್ನಪ್ಪನ್ನ ಮಗ ಶ್ರೀಪಾದ ಅಂತ...
ಇಂಥಹ ಕೆಲಸಗಳಲ್ಲಿ ಆತ ಬಲು ಪ್ರಸಿದ್ಧಿ...
ಹೇಗೆ ನಿಲ್ಲ ಬೇಕು..?
ಹೇಗೆ ಸ್ಟೈಲ್ ಮಾಡ ಬೇಕು...
ತಲೆಕೂದಲನ್ನು ಹೇಗೆ ಒಪ್ಪವಾಗಿ ಸರಿಸಿಕೊಳ್ಳ ಬೇಕು...?
ಅನ್ನುವದೆಲ್ಲ ಹೇಳಿಕೊಡಲಾಯಿತು....
ಕಪನೀಪತಿಗೆ ಒಂದು ಸಂಶಯ ತಲೆಹೊಕ್ಕಿತು...
"ಇಷ್ಟು ಚೆನ್ನಾಗಿ ಲೈನ್ ಹೊಡೆದರೆ ಲವ್ವು ಶುರುವಾಗಿ ಬಿಟ್ಟರೆ..?"
"ಶುರುವಾದರೆ... ಏನು..? ಮಾಡಿಬಿಡು.."
"ಛೇ.. ಚೇ.. ಅದೆಲ್ಲ ಆಗೋದಿಲ್ಲಪ್ಪ...
ಆಮೇಲೆ ಓದಲಿಕ್ಕೆ ಅಗಲ್ಲಪ್ಪ... ಎಕ್ಸಾಮ್ ಹೇಗೆ ಬರೆಯೋದು...?"
"ಅದೆಲ್ಲ ಸಮಸ್ಯೆ ಅಲ್ರೋ... ಯಾರಿಗೆ ಲೈನ್ ಹೊಡೆಯ ಬೇಕು ಅನ್ನುವದು.. ಬಲು ಮುಖ್ಯ ಆಗ್ತದೆ.."
ಕಾಚಶ್ರೀ ತನ್ನ ಅನುಭವದ ಪ್ರವಚನ ಶುರು ಮಾಡಿದ..
"ಹುಡುಗಿ ತೀರಾ ಹಳ್ಳಿಯ ಸಂಪ್ರದಾಯಸ್ಥರ ಮನೆಯಿಂದ ಬಂದಿದ್ದರೆ ಅದಕ್ಕೆ ಬೇರೆ ಥರಹ ಇದೆ..
ಪಟ್ಟಣದಲ್ಲಿ ಬೆಳೆದಿದ್ದರೆ ಬೇರೆ ಥರಹ ವ್ಯವಹಾರ ಮಾಡಬೇಕಾಗುತ್ತದೆ..."
ಕಪನೀಪತಿ ತಲೆಕೆರೆದು ಕೊಂಡ...
" ನೀನೇ ಹೇಳಪ್ಪಾ...! ಅನುಭವಸ್ಥ... ನಮಗೇನು ಗೊತ್ತಾಗ್ತದೆ...?"
"ನಿಮಗೆ ಯಾರು ಇಷ್ಟ ಅದನ್ನು ಹೇಳಿ.. ಅವರಿಗೆ ತಕ್ಕಂತೆ ಟ್ರೇನಿಂಗ್ ಕೊಡ್ತೇನೆ..."
ಸೀತಾಪತಿ ಗಾಭರಿ ಬಿದ್ದ..
"ಹಾಗೆಲ್ಲ ಮಾಡಬೇಡಪ್ಪಾ... ಇಷ್ಟವಾದವರಿಗೆ ಇದೆಲ್ಲ ಮಾಡೋದು ಬೇಡ..
ಆಮೇಲೆ ಬೇಸರ ಮಾಡಿಕೊಂಡು ಬಿಟ್ಟಾರು..
ಯಾರಾದ್ರು ಬೇರೆ ಕ್ಲಾಸಿನ ಹುಡುಗಿಯರಿಗೆ... ಸ್ವಲ್ಪ ಚಂದ ಇದ್ದವರಿಗೆ.. ಓಕೆ..."
ಈಗ ನಾಗು ತಲೆ ಹಾಕಿದ...
"ಈ ಪ್ರೀತಿ, ಪ್ರೇಮಕ್ಕೆ ಚಂದಕ್ಕೆ, ಶ್ರೀಮಂತಿಕೆಗೆ ಎಷ್ಟು ನಂಟಿದೆ ನೋಡಿ...
ಲೈನ್ ಹೊಡಿಲಿಕ್ಕೂ ಚಂದ ಬೇಕು ಅಂತಾಯಿತು...
ಬಡತನ, ಕುರೂಪ ಪ್ರೀತಿ, ಪ್ರೇಮದಿಂದ ದೂರ ಇರ್ತವೆ ಅಲ್ವಾ...?
ಹುಡುಗಿ ಶ್ರೀಮಂತಳಿರ ಬೇಕೆನ್ರಪ್ಪಾ...?
ಯಾವುದಾದ್ರೂ ಚಂದ ಇಲ್ದಿರೊವ್ರಿಗೆ ಹೊಡೆಯಿರಿ...
ಅವಳೂ ಖುಷಿಯಾಗ್ತಾಳೆ.."
ಕಾಚಶ್ರೀ ತನ್ನ ಅನುಭವವನ್ನೂ ಹೇಳಿದ...
"ಚಂದ ಇರೋವ್ರಿಗೆ ಧಿಮಾಕು ಜಾಸ್ತಿ... ಕಣ್ರೋ...
ನಾಳೆ ಬೆಳಿಗ್ಗೆ ಕಾಲೇಜಿನ ಮುಂದುಗಡೆ ಸಿರ್ಸಿ ರೋಡಿಗೆ ಎಲ್ರೂ ಬರ್ರೋ...
ನಾನೇ ನಿಮಗೆ ಹೇಳಿಕೊಡ್ತೀನಿ..."
ಅಂದಿನ ಶಿಬಿರ ಮುಕ್ತಾಯವಾಯಿತು....
ಮರುದಿನ ಬೆಳಿಗ್ಗೆ ಕಾಲೇಜು ಶುರುವಾಗುವ ಸಮಯಕ್ಕೆ ಮೊದಲೇ ಎಲ್ಲರೂ ಅಲ್ಲಿ ಸೇರಿದ್ದೆವು...
ಕಾಚಶ್ರೀ ಅಲ್ಲಿ ತಮಿಳು ಸಿನೇಮಾದ ಹೀರೋ ಹಾಗೆ ತಯಾರಾಗಿ ಬಂದಿದ್ದ...
" ನಿಮ್ಮದೆಲ್ಲ ಎಂಥಾ ಡ್ರೆಸ್ಸೋ ಇದು...
ಇದಕ್ಕೆಲ್ಲ ಈ ಥರಹದ ಡೀಸೆಂಟ್ ಇದ್ರೆ ಆಗಲ್ರಪ್ಪಾ...
ಸ್ವಲ್ಪ ಕೆಂಪು.. ಕಪ್ಪು ಹಳದಿ ಬಣ್ಣದ ಡ್ರೆಸ್ಸ್ ಇರಬೇಕು.. ಛೇ..!!"
ಕಪನೀಪತಿಯ ಕಣ್ಣು ರೋಡಿನ ಮೇಲಿತ್ತು....
"ಅಲ್ಲಿ ನೋಡ್ರೋ ರಾಜಿ ಬರ್ತಾ ಇದ್ದಾಳೆ...
ಅದೂ ಒಬ್ಬಳೆ ಬರ್ತಾ ಇದ್ದಾಳೆ... ಎಲ್ಲಾ ರೆಡಿ ಆಗ್ರೋ..."
ಗಡಬಡಿಸಿದ....!
ಎಲ್ಲರೂ ತಡಬಡಿಸಿ ಮಾನಸಿಕವಾಗಿ ತಯಾರಗತೊಡಗಿದರು...!!
ನಾನು ನಾಗು ಮುಖ ನೋಡಿದೆ....