Tuesday, February 24, 2009

ಅವರವರ ..ಭಾವದಲ್ಲಿ.. ಬಾನಿನ.. "ಭಾಸ್ಕರ"

"ತತ್ವಜ್ಞಾನಿ" ಕಣ್ಣಲ್ಲಿ... ರವಿ..

ಉದಯ ರವಿಗೆ ಎಷ್ಟು ಅಂದದ.. ಬಣ್ಣ
..?

ಅಸ್ತದಲ್ಲೂ ತುಂಬುವನು.. ಕಣ್ಣ
...!

ಸುಖ, ದುಃಖ ಒಂದೇ ಮಾಡಿದನು
...

ತಿಳಿದವರ ನಡೆಯೇ ಹಾಗಲ್ಲವೇನು
...?



"ಹೋರಾಟಗಾರ" (ರಾಜಕಾರಣಿ) ಕಣ್ಣಲ್ಲಿ... ದಿನಕರ..

ಆರಂಭದಲಿ ಹುರುಪು..., ಹೋರಾಟದ ರಂಗು..
ಸುತ್ತೆಲ್ಲ ಕೆಂಪೆರಚಿ..., ಭರವಸೆಯ ಗುಂಗು...
ಎಲ್ಲರ ಬದುಕಿಗೂ ಬಣ್ಣ ತುಂಬುತ್ತಾನೆ..
ಮೊಗ್ಗನರಳಿಸುತ್ತಾನೆ.. , ಹಿಗ್ಗ ಚೆಲ್ಲುತ್ತಾನೆ...
ನಮ್ಮ ನಾಯಕನಾಗುತ್ತಾನೆ..

ತಂಪಾಗಿರುವವರ ಕಿಡಕಿಯಲಿ.. ನುಗ್ಗಿ..
ಅವರ ಶೀತ ಬಿಡಿಸುತ್ತಾನೆ..
ಮೇಲೆರಿದಂತೆ ಅಚ್ಚ ಬಿಳಿಯ ಹೊದಿಕೆ..
ಬಣ್ಣಗಳ ಕೈಬಿಟ್ಟ.. ಕೂಲಿಗಳ ಮೈಸುಟ್ಟ...

ಅಧಿಕಾರ ಕಳೆದು ಸಂಜೆ ಕೆಳಗಿಳಿದಾಗ..
ಮತ್ತೆ ಕೆಂಪನೆಯ ಮುಸುಕು...
ನೆಚ್ಚ ಬಾರದು ನೇಸರನ ಗೋಸುಂಬೆ ಥರದವನು
..!



"ಭಾಮಿನಿ" ಕಣ್ಣಲ್ಲಿ.. ಭಾಸ್ಕರ...


ಮುಂಜಾನೆ "ಉಷೆಯೊಡನೆ"
.....

ಬಣ್ಣ ಬಣ್ಣದ ಇನಿಯ...

ಸಂಜೆ ಮತ್ತದೇ ರಂಗು...

"ಸಂಧ್ಯೆ" ಇದ್ದಾಳೆ ಸನಿಹ....!



ಮಧ್ಯಾನ್ಹದಲಿ ನೋಡಲಾಗದು ಇವನ...

ಒಂಟಿ ನೇಸರ ಕುಕ್ಕುತ್ತಾನೆ ಕಣ್ಣ...

ಹೆಣ್ಣು ಬಳಿಯಲ್ಲಿರದಿದ್ದರೆ ಗಂಡು ಬದುಕಿಗೆ..

ಎಲ್ಲಿದೆ ಚೆಲುವು.., ಚಂದದ.. ಬಣ್ಣ..??!!

Wednesday, February 18, 2009

ಈ...ದೇಹದಿಂದ..ದೂರವಾದೆ.. ಏಕೆ ..ಆತ್ಮನೇ..?

ರುಡಾ ಮಾಲ್ ನಲ್ಲಿ "ಟ್ಯಾಕ್ಸಿ ನಂ. 9211" ನೋಡುತ್ತಿದ್ದೆ...

ನನ್ನ ಮೇಸ್ತ್ರಿ ಮಣಿ ಆತಂಕದಿಂದ ಫೋನ್ ಮಾಡಿದ..


"ಸಾರ್.. ರಾಜಕುಮಾರ್ .. ಸತ್ತೋಗಿ.. ಬುಟ್ಟವ್ರೆ....!
ಉಷಾರಾಗಿ ಮನೆಗೆ ಹೋಗಿ.. ಗಲಾಟೆ ಆದ್ರೂ ಆದೀತು..
ಜಲ್ದಿ ಮನೆಗೆ ಹೋಗಿ ಸೇರ್ಕಳಿ..."


ಅಷ್ಟೊತ್ತಿಗೆ ಸಿನೇಮಾ ಮಧ್ಯದಲ್ಲೇ ಅನೌನ್ಸ್ ಮಾಡಿದರು..

ಸುದ್ಧಿ ನಿಜವಾಗಿತ್ತು....!

ನಾನೂ ತಕ್ಷಣ ಮೇಸ್ತ್ರಿಗೆ ಫೋನ್.. ಮಾಡಿದೆ...

" ನೀವೂ, ನಿಮ್ಮ ಜನಗಳೂ ಸೈಟಿಂದ ಹೊರಗಡೆ ಹೋಗ್ಬೇಡಿ..!
ಗಲಾಟೆ ಆದೀತು" ಎಂದು ಎಚ್ಚರಿಸಿದೆ...


ನನ್ನ ಬಿಸಿನೆಸ್ಸಿಗೂ ತಮಿಳರಿಗೂ ನಂಟು... ಅವರಿಲ್ಲದೇ ನನ್ನ ವ್ಯವಹಾರ ಅಸಾಧ್ಯ..

ಒಂದುದಿನ ಸೈಟಿಗೆ ಹೋದಾಗ.. ಮೇಸ್ತ್ರಿ ಒಬ್ಬನನ್ನು ಕರೆದು ಕೊಂಡು ಬಂದಿದ್ದ..

"ಸಾರ್ ಇವನು "ಅಮವಾಸ್ಯೆ ಅಂತ.. ನಮ್ಮೂರಿನವನು..
ಒಳ್ಳೇ ಮನುಷ್ಯ..

ಇವನಿಗೆ ವಾಚಮನ್ ಕೆಲಸ ಕೊಡಿ.." ಅಂದ..

ನನಗೆ ಇವನ ಹೆಸರು ವಿಚಿತ್ರವೆನಿಸಿತು..

" ಅದು ಎಂಥಾ ಹೆಸರೊ.."ಅಮವಾಸ್ಯೆ.."..!
ಬೇರೆ ಹೆಸರು ಇಲ್ಲವಾ ಇವನಿಗೆ.... ?"


" ಇದೆ ಸಾರ್ .. ಇನ್ನೊಂದು ಹೆಸರು... "ಗಾಂಧಿ"

" ಗಾಂಧಿ ಅಂತಲಾ..?
ಹೆಸರು ಎಷ್ಟು ಬೆಲೆ ಬಾಳ್ತದೆ ಗೊತ್ತೇನಯ್ಯಾ..?
ಪುಣ್ಯ ಮಾಡಿರಬೇಕು ಹೆಸರು ಪಡೆಯಲಿಕ್ಕೆ.."


"ನಮ್ಮ ಕಡೆ ಹಾಗೇಯಾ..ಸಾರ್..
ಇವನು ಅಮವಾಸ್ಯೆ ದಿನ ಹುಟ್ಟಿದಾನೆ ..
ಅಮವಾಸ್ಯೆ ಒಳ್ಳೆಯ ದಿನ ಅದಕ್ಕೇ ಹೆಸರು..
ಮತ್ತೆ ಇವರ ಕುಟುಂಬದಲ್ಲಿ ಒಬ್ಬರಿಗಾದರೂ "ಗಾಂಧಿ " ಅಂತ ಹೆಸರು ಇದ್ದೇ ಇರ್ತದ್ದೆ..
ಇವನ ಅಪ್ಪನಿಗೆ ಒಬ್ಬನೇ ಮಗ..
ಹಾಗಾಗಿ ಇವನಿಗೆ ಎರಡು ಹೆಸರು.. "


ಅಂದಿನಿಂದ ಇಲ್ಲಿಯವರೆಗೆ "ಗಾಂಧಿ" ನಮ್ಮಲ್ಲೇ ಇದ್ದಾನೆ..

ಹೆಸರಿಗೆ ತಕ್ಕ ಹಾಗೆ ಪ್ರಾಮಾಣಿಕ.. ನಿಷ್ಥಾವಂಥ....
ತನ್ನ ಕುಟುಂಬದ ಸಂಗಡ.. ಒಂದು ನಾಯಿಯನ್ನು ಸಾಕಿದ್ದ.

ಅದು ಮುದಿಯಾಯಿತೆಂದು ಇನ್ನೊಂದು ಮರಿಯನ್ನೂ ಸಾಕಿದ್ದ..
ಅದು ಬೀದಿನಾಯಿಯಾಗಿದ್ದರೂ ಒಂಥರಾ ಮುದ್ದಾಗಿತ್ತು...
ನಾನು ಸೈಟಿಗೆ ಹೋದಾಗಲೆಲ್ಲ ಬಾಲ ಅಲ್ಲಡಿಸುತ್ತ ..
ನಾನು ಬರುವವರೆಗೂ ನನ್ನ ಹಿಂದೆಯೇ ಇರುತ್ತಿತ್ತು...


ನಾನು ವಾಚಮನ್ ಗೆ ದುಡ್ಡು ಕೊಟ್ಟು ಬಿಸ್ಕಿಟ್ ತರಿಸಿ ಕೊಟ್ಟಮೇಲೇಯೇ..
ಅದಕ್ಕೆ ಸಮಾಧಾನ ಆಗುತಿತ್ತು...

ಬಹಳ ಚುರುಕಾಗಿತ್ತು.. ಚೂಟಿಯಾಗಿತ್ತು...

ಮೊನ್ನೆ ಶನಿವಾರ..

ನಾನು ಮತ್ತು ನನ್ನ ಗೆಳೆಯ "ಸತ್ಯ"..
ಇಬ್ಬರೂ ಸೈಟಿಗೆ ಹೋಗಿದ್ದೆವು...
ಪೇಮೆಂಟ್.. ಮಾಡಲಿಕ್ಕೆ...

ನನ್ನ ಬಿಸಿನೆಸ್ಸಿಗೆ "ಸತ್ಯ" ಪಾಲುದಾರ.
ಗೆಳೆಯ ಎಲ್ಲವೂ ಅವನೇ...
ಅವನಿಲ್ಲದೆ ನಾನು ಏನೂ ನಿರ್ಣಯ ತೆಗೆದು ಕೊಳ್ಳುವದಿಲ್ಲ......

ದಿನ ನಾಯಿ ನನ್ನ ಹಿಂದೆ ಬರಲಿಲ್ಲ..
ಸುಮ್ಮನೇ... ಸಪ್ಪೆಯಾಗಿ... ಮಲಗಿ ಕೊಂಡಿತ್ತು..

ಜೀವನದಲ್ಲಿ " ಜಿಗುಪ್ಸೆ " ಬಂದವರ ಹಾಗೆ...!
ಆಳಸಿಯಾಗಿ ಮಣ್ಣಲ್ಲಿ ಬಿದ್ದುಕೊಂಡಿತ್ತು..


ನಾನು ಗಾಂಧಿಯನ್ನು ಕೇಳಿದೆ..

"ಏನಾಗಿದೆಯೋ ಇದಕ್ಕೆ.?
ಥರಹ ಜೀವ ಭಾರ.. ಆದವರ ಹಾಗೆ ಮಲಗಿದೆ..?

ಇದಕ್ಕೇ.... ಕಾಯುತಿದ್ದ ಗಾಂಧಿ.. ಕೋಪದಿಂದ..

" ... ಕಾರ್ಪೋರೇಸನ್ನವರಿಗೆ " ಆತ್ಮಾಗೀತ್ಮಾ".... ಇದೆಯಾ..? ಸಾರ್..
ಏನು ಮಾಡಿದಾರೆ ನೋಡಿ...??...!."

ಏರಿದ ಧ್ವನಿಯಲ್ಲಿ ಕೋಗತೊಡಗಿದ..

" ಏನಾಯ್ತೋ..?."

"ಆಲ್ಲ.. ಕಾರ್ಪೋರೇಸನ್ನವರಿಗೆ "ಆತ್ಮಾಸಾಕ್ಷಿ " ಏನೂ ಇಲ್ಲವಾ ಸಾರ್.?
ಎಂಥಾ.. ಜನ ಸಾರ್..ಇವರು..??
ಇವರು..? ಹೀಂಗೆ ಮಾಡಿದಾರೆ..?
ಅವರ ಆತ್ಮಕಿಷ್ಟು "ಬೆಂಕಿ " ಹಾಕಾ..!
ಅವರ ಆತ್ಮಕ್ಕೆ " ಹುಳ".. ಬಿದ್ದೋಗಾ..!
ಅವರ ಆತ್ಮ.."ಎಕ್ಕುಟ್ಟೋಗ" ...!!.."

ಮಂಗಳಾರತಿ.., ಮಂತ್ರಾಕ್ಷತೆ.. ಹಾಕತೊಡಗಿದ..!
ನನಗೆ ಇವನು ಏನು ಹೇಳ್ತಿದಾನೆ ಅರ್ಥ ಆಗ್ಲಿಲ್ಲ..!

ಅಷ್ಟರಲ್ಲಿ ಸತ್ಯ..

"ಏನೋ "ಆತ್ಮಾ ಗೀತ್ಮಾ" ಅಂತೀಯಾ..?
ಎಲ್ಲರಿಗೂ "ಆತ್ಮಾ" ಇರ್ತದೆ..
ಕಾರ್ಪೋರೆಶನ್ನವರಿಗೂ.. ಇರತ್ತದೆ..
"ನಂಗೂ " ಆತ್ಮ ಇದೆ...ಇದೆ.." ನಿಂಗೂ" ಆತ್ಮ ಇದೆ..
ಯಾಕೋ ಹಾಗಂತೀಯಾ..? ಏನಾಯ್ತ್ಯು?"

" ಅಲ್ಲಾ ಸಾರ್...ಮನುಷ್ಯನ ಆತ್ಮಾ... ಮೂಕ ಪ್ರಾಣಿಗಳ ಆತ್ಮ ಬೇರೆ.. ಬೇರೆನಾ...?
ಎಲ್ಲರಿಗೂ... ಆತ್ಮ ಶಾಂತಿ ಒಂದೆ.. ಆಲ್ವಾ..? "

ಅಷ್ಟರಲ್ಲಿ ಮೇಸ್ತ್ರಿ ಬಂದ..

"ಅವನಿಗೆ ಬೇಜಾರಾಗಿ ಬಿಟ್ಟಿದೆ.. ಸಾರ್...
ಅದಕ್ಕೇ ಹಾಗಂತಾನೆ ಸಾರ್..
ನೀವು ಬನ್ನಿ ಕಡೆ..."

ಅಂದು ನಮ್ಮನ್ನು ಅಲ್ಲಿಂದ ಸಾಗಹಾಕ ತೊಡಗಿದ..

ಗಾಂಧಿಗೆ ತಡೆಯಲಾಗುತ್ತಿಲ್ಲ...! .. ಮತ್ತೆ ಶುರು ಹಚ್ಚಿಕೊಂಡ..
ಕೋಪ.. ಅಸಹಾಯಕತೆಯಿಂದ... ಮತ್ತೂ ..ಕೂಗತೊಡಗಿದ...

" ಇಡಿ.. ದೇಶದಲ್ಲಿ... ಮುಂಡೆ.. ಮಕ್ಕಳು..".. ಹಡೆದೂ.. ಹಡದೂ..
ದೇಶ ಹಾಳು ಮಾಡತಾ.. .. ಇದಾರೆ..!
ಅವ್ರು... ಕಣ್ಣಿಗೆ ಕಾಣ್ತಾ ಇಲ್ಲ ಇವರಿಗೆ..!
ಅಲ್ಲಿ ಹೋಗಿ ಮಾಡ್ಲಿ ಇವರ ಕೆಲಸಾನ.?
ಅವರ ಆತ್ಮ ಇವರಿಗೆ ಕಾಣಲ್ವಾ...?
ಇಲ್ಲಿ ಯಾಕೆ ಬರ್ತಾರೆ..? ನಾವೇನು ಮಾಡಿದೇವೆ..?..
ಎಡವಟ್ಟು ನನ್ನ ಮಕ್ಳನ್ನು ತಂದು.."


ಕೋಪದಿಂದ ಅವನು ಅದುರತೊಡಗಿದ...ಅವನ ಮೈ ಕಂಪಿಸುತ್ತಿತ್ತು..

ನನಗೆ ಸಮಸ್ಯೆಯಾಯಿತು..
"ಯಾಕೋ ಗಾಂಧಿ...? ಏನೋ ಏನಾಯ್ತು.. ??
ಕಾರ್ಪೋರೇಷನ್ನವರು ನಿನಗೆ ಹೊಡೆಯಲಿಕ್ಕೆ ಬಂದ್ರೇನೋ..?"


"ಅಲ್ಲಾ.... ನನ್ನ ಮೈ ಮುಟ್ಟಿದ್ರೆ ಅವರ "ಆತ್ಮಾನೇ" ತೆಗೆದು ಬಿಡ್ತಿದ್ದೆ.."

"ಛೇ... ಹಾಗೆಲ್ಲ.. " ಕೊಲೆ " ಮಾಡೋದು..
" ಮರ್ಡರ್" ಮಾತೆಲ್ಲ ನಮಗೆಲ್ಲ ಅಲ್ಲಪ್ಪಾ.."
ಸಮಾಧಾನ ಮಾಡ್ಕೋ..
ಹೇಳು ಏನಾಯ್ತು..?"

" ಅಲ್ಲ ಸಾರ.. ಕಾರ್ಪೋರೇಶನ್ನವರು..
ನಮ್ಮ ನಾಯೀನಾ ಹಿಡ್ಕೊಂಡು ಹೋಗಿ ಬಿಟ್ಟಿದ್ರು.."

" ಬಿಟ್ಟಿದ್ದಾರಲ್ಲಪ್ಪ.. ಇಲ್ಲೇ ಇದೆ..!"

"ಹಾಗಲ್ಲ.. ಸಾರ್.. ಅದಕ್ಕೆ ಮಕ್ಕಳಾಗದ ಹಾಗೆ....
ಅದರ " ಆತ್ಮಾನೇ" ಕಟ್ ಮಾಡಿಬಿಟ್ಟಿದ್ದಾರೆ..!.... ಸಾರ್..!!
ಬೇಜಾರಾಗೊಲ್ವಾ..?... ನೀವೇ ಹೇಳಿ..?
ಮುದ್ದಾಗಿ ಸಾಕಿದ್ದಿನಿ..
ಹಿಂಗೆ ಮಾಡಿಬಿಟ್ರೆ ಹೆಂಗೆ..???

ನಾನು ದಂಗಾಗಿ ಹೋದೆ..!!

ಆತ್ಮಕ್ಕೇ ಅರ್ಥನೂ ಇದೆಯಾ..? ..?

"ಅಲ್ಲ ಸಾರ್.. .. ಹೇಗೆ ಕುಣಿತಾ ಇದ್ದ ನಾಯಿಮರಿ ಹೇಗೆ ಮಲಗಿ ಬಿಟ್ಟಿದೆ..?
ಎರಡು ದಿನದಿಂದ ಅನ್ನ ನಿರು ಮುಟ್ಟಿಲ್ಲ.. ಸಾರ್..!
ಅದಕ್ಕೆ ಜೀವನದಲ್ಲಿ ಇನ್ನು ..ಎಂಥಾ ಖುಷಿ ಸಾರ್..?
ಅದರ.. ಆತ್ಮ ಸಂತೋಷಾನೇ ಕಿತ್ಗೋ.. ಬಿಟ್ರಲ್ಲಾ...!
ಕಾರ್ಪೋರೇಶನ್ನವರಿಗೆ... ತಲೆ ಸರಿ ಇದೆಯಾ..?"

ಅವರಿಗೇನು ".ಆತ್ಮಾ ಗಿತ್ಮಾ .. " ಇಲ್ವಾ..?

ಅವರ "ಆತ್ಮಕ್ಕಿಷ್ಟು.. ಬೆಂಕಿ ಹಾಕಾ...!
ಅವರ ಆತ್ಮ ಎಕ್ಕುಟ್ಟೋಗ...!!
ಅವರ ಆತ್ಮಕ್ಕೆ ಹುಳ ಬಿದ್ದೋಗ....!!
ಅವರ ಆತ್ಮಕ್ಕೆ ಬರಬರಾದ ರೋಗ ಬಂದೋಗ....!!.."

ಮತ್ತೆ ಶುರು ಶುರು ಹಚ್ಚಿಕೊಂಡ...

ಸತ್ಯ ಗಹಗ್ಗಹಿಸಿ ನಗತೊಡಗಿದ...

ಮೇಸ್ತ್ರಿ ಮಣಿ ಮೆಲ್ಲಗೇ ಹೇಳಿದ..

"ಸಾರ್... ಅವನ ಹೊಟ್ಟೆಲಿ ಸ್ವಲ್ಪ
"ಪರಮಾತ್ಮ " ಹೋಗಿದೆ ...
ನಿನ್ನೆ ಬೇಜಾರು ಮಾಡ್ಕೊಂಡು ಹಾಕಿದ "ಪರಮಾತ್ಮಾ " ಇನ್ನೂ ಇಳಿದಿಲ್ಲ ಸಾರ್..
ಅದಕ್ಕೇ ಹಾಗಾಡ್ತಿದಾನೆ..
ಆದ್ರೆ... ನಾಯಿ ಮರಿ ನೋಡಿ .. ಸಾರ್..
ಜೀವನದಲ್ಲಿ ಜಿಗುಪ್ಸೆ ಬಂದು ಬಿಟ್ಟಿದೆ..
ಮಲಕ್ಕೊಂಡೇ ಇರ್ತದೆ.. ಯಾವಾಗ್ಲೂ...
ಪಾಪದ ಮುಖ ಮಾಡಿ ಕೊಂಡು.. ಊಟನಾನೂ ಮಾಡಲ್ಲ..
ಛೇ... ಪಾಪ... ತ್ಚು... ತ್ಚು... ಛೇ.... ."


ನಾನು ಸತ್ಯ ಲಗುಬಗೆಯೋಂದ ಜಾಗ ಖಾಲಿ ಮಾಡಿದೆವು..

" ಇವರು ನಮ್ಮ " ಆಧ್ಯಾತ್ಮದ " ಶಬ್ದ ಎಲ್ಲ ಬದಲಾಯಿಸಿ ಬಿಡ್ತಾರೆ..!

ಯಾವುದು.. ಆತ್ಮಾನೋ..?

ಯಾವುದು.. ಪರಾಮಾತ್ಮನೋ..?

ದೇವರೇ ಕಾಪಾಡ.. ಬೇಕು... .!!.

ನನ್ನ ಅಂತರಾತ್ಮಕ್ಕೆ ಏನು ಗೊತ್ತಾಗ್ತಾ ಇಲ್ಲಪ್ಪ....!"


ಸತ್ಯನೂ "ಆಧ್ಯಾತ್ಮ" ಶುರು ಹಚ್ಚಿಕೊಂಡ...

ಮನೆಗೆ ಬಂದು ಲಗುಬಗೆಯಿಂದ ಬ್ಲಾಗ್ ಓಪನ್ ಮಾಡಿದೆ..

ನಾನು ಯವಾಗಲೂ ಮೊದಲು. ಶಿವು, , ಶಾಂತಲಾ ಭಂಡಿ,. "ಸಲ್ಲಾಪ" ಸರ್, . ಬತ್ತದ ತೂರೆ..

ರಾಜೇಶ್., ಮಲ್ಲಿಕಾರ್ಜುನ್,.. .ಇತ್ಯಾದಿ .. ಬೇರೆಯವರ..ಬ್ಲಾಗ್ ನೋಡಿ.. ನನ್ನ ಬ್ಲಾಗ್ ನೋಡ್ತೀನಿ..


ಶಿವುರವರ ಬ್ಲಾಗ್ ನೋಡಿದೆ... ..!!

ಹಾಗೆಯೇ... ನಿಂತುಬಿಟ್ಟೆ.. ಹ್ಹಾಂ..!!

ಅವರ ಲೇಖನದ.. "ಹೆಡ್ಡಿಂಗ್" ನೋಡಿ.. ದಂಗಾಗಿ ಬಿಟ್ಟೆ..

"... ದೇಹದಿಂದ....

ದೂರವಾದೆ .. ಏಕೇ .. ಆತ್ಮನೇ. ..?.. "

ನನಗೆ ನಗು ತಡೆಯಲಾಗಲಿಲ್ಲ...

ಜೋರಾಗಿ ನಕ್ಕುಬಿಟ್ಟೆ...

ಹಾಗೆಯೇ....

ಪಾಪದ ... ಮುಖದ...
" ನಾಯಿಮರಿಯೂ.. ." . ನೆನಪಾಯಿತು....!!



Thursday, February 12, 2009

ಆದೆ.. ನೀ ಅನಿಕೇತನಾ.. ಓ..ನನ್ನ ಚೇತನಾ...


ಚೇತನಾ ನನ್ನಡೇಗೇ.. ಬರುತ್ತಿದ್ದಳು...!

ನನಗೆ ಕೈ.. ಕಾಲು ಬೆವರತೊಡಗಿತು...!

" ಪ್ರಕಾಶಣ್ಣಾ.." ಅಭಿನಂದನೆಗಳು ಅಂದು ಬಿಡ್ತಾಳಾ..?'

ನನಗೆ ಟೆನ್ಷನ್" ಜಾಸ್ತಿಯಾಗತೊಡಗಿತು...

ಅವಳ ಕಣ್ಣುಗಳನ್ನೇ.. ಗಮನಿಸಿದೆ..

ಏನೋ ಹೇಳಬೆಕೆಂಬ ತವಕ.... ಕಣ್ಣುಗಳಲ್ಲಿತ್ತು.......

ಅಷ್ಟರಲ್ಲಿ ಎಲ್ಲಿದ್ದನೋ ನಾಗು "ಪ್ರಕಾಶಣ್ಣ.. ಇಲ್ಲಿ ಬಾ.. ಪ್ರಿನ್ಸಿ ಕರೆಯುತ್ತಿದ್ದಾರೆ" ಅಂದ..

ಬದುಕಿದೇಯಾ ಬಡ ಜೀವವೆ ಅಂದುಕೊಂಡೆ....!

ಕಡೆ ದೌಡಾಯಿಸಿದೆ...

"
ಚೇತನಾಳ' ಆ.. ಸಂದರ್ಭ ತಪ್ಪಿಸಿಕೊಂಡೆ...

ಕ್ಲಾಸಿಗೆ ಹೋಗುವ ಮೂಡ್ ಇರಲಿಲ್ಲ...

ನಾನು ರೂಮಿಗೆ ಸೀದಾ ಬಂದೆ...ನಾಗೂವೂ ಬಂದ..

ನಾನು ಮಾತೇ ಆಡಲಿಲ್ಲ...

ರೂಮಿನಲ್ಲಿ ಎಲ್ಲ ಪಟಾಲಮ್ ಸೇರಿದ್ದರು..

"ಅಲ್ವೋ... ತೆಂಗಿನಾಕಾಯಿ.."ನೀ ಏನೇ ಹೇಳು.. ನಾಗೂ ..

"ಪ್ರಕಾಶಣ್ಣನಿಗೆ" ಹೀಗೆ ಮಾಡಬಾರದಾಗಿತ್ತು..ತ್ಚು..ತ್ಚು..

ಪಾಪ " ಪ್ರಕಾಶಣ್ಣ.."...!

ಬೆಂಕಿಗೆ ತುಪ್ಪ ಹಾಕುವಹಾಗೆ ಲೊಚಗುಟ್ಟಿದ..

"ಪ್ರಿನ್ಸಿಯವರೂ " ಪ್ರಕಾಶಣ್ಣ " ಅಂದ್ರೂ...ಕಣೊ..! ..
''
ಪ್ರಕಾಶಣ್ಣ" ನೋಡಿದ್ರೆ ನಂಗೆ ಅಯ್ಯೋ ಪಾಪ.. ಅನಿಸುತ್ತದೆ...
ಅಲ್ಲ
ಹೇಗಿದ್ದವ ಹೇಗಾಗಿ ಬಿಟ್ಟೆಯಲ್ಲೊ..
ಎಲ್ಲಾ ನಾಗು ನಿಂದ ಆಗಿದ್ದು.. ಹೀಗಾಗ ಬಾರದಿತ್ತು.. ತ್ಚು..ತ್ಚು.."

ಉಮಾಪತಿ ತನ್ನದೂ ...ಸೇರಿಸಿದ...

ನಾನು ಒಳಗೊಳಗೇ ಕುದಿಯುತ್ತಿದ್ದೆ..

ನಾಗುವಿಗೆ ಕೋಪ ಹತ್ತಿತು..

"ಈಗಲೂ ಕಾಲ ಮಿಂಚಿಲ್ಲ ಕಣ್ರೋ.. ಚೇತನಾ "ಪ್ರಕಾಶಣ್ಣ " ಹೇಳದ ಹಾಗೇ ಮಾಡ್ತೀನಿ..
ಬೆಟ್ ಇದೆಯಾ..?"

"ಇಡೀ ಪ್ರಪಂಚಕ್ಕೇ "ಪ್ರಕಾಶಣ್ಣಾ" ಮಾಡಿಬಿಟ್ಟೀದ್ದೀಯಾ..!

ಇನ್ನು "ವಿಜಯಾ" ಕೂಡ.. "ಪ್ರಕಾಶಣ್ಣ " ಅನ್ನೊ ಹಾಗೆ ಮಾಡಿಬಿಡ್ತೀಯಾ..??"


"ನೋಡ್ರೋ .. ಧೈರ್ಯ ಇದ್ದರೆ ಛಾಲೇಂಜಿಗೆ ಬನ್ನಿ.." ನಾಗು ಮತ್ತೆ ಸವಾಲು ಹಾಕಿದ..

ಉಮಾಪತಿ ,ಸೀತಾಪತಿ ಇಬ್ಬರೂ ಅದಕ್ಕೆ ರೆಡಿ ಆದರು..

"ಸರಿ.. ಚೇತನಾ.." ಪ್ರಕಾಶಣ್ಣ" ಅಂತ.. ಹೇಳಿಯೇ ಹೇಳ್ತಾಳೆ..!

ಅದಕ್ಕೆ ನೀನೇನು.. ಮಾಡ್ತೀಯಾ..ನಾಗು..?"


" ಚೇತನಾ " ಪ್ರಕಾಶಣ್ಣ" ಅಂದುಬಿಟ್ಟರೆ ಮೀಸೆ ತೆಗೆಯುತ್ತೇನೆ..!!..."


ನಾಗುವಿಗೆ ಮೀಸೆಯೆಂದರೆ ಬಹಳ ಅಭಿಮಾನ..


"ಲೋ ತೆಂಗಿನ ಕಾಯಿ ನೀವೇನು ಮಾಡ್ತೀರ್ರೋ.. ಹೇಳಿ.."


"ನಾವು.. .. ಮೀಸೆನೂ ತೆಗೆಯುತ್ತೇವೆ..!

ಸಂಗಡ ತಲೆನೂ ನುಣ್ಣಗೆ ಬೋಳಿಸಿ ಕೊಳ್ಳುತ್ತೇವೆ...!!..."


ಇಂಥಹ.. ಭಯಂಕರ ಭೀಷ್ಮ ಪ್ರತಿಜ್ಞೆಗಳಿಗೆ ನಾನು ಸಾಕ್ಷಿಯಾದೆ...

ನನಗೆ ಭಾಷಣದ ತಯಾರಿಯ ಕೆಲಸ ಇತ್ತು..

ನಾನು "ದಿವಾಕರ" ಬೆಳಗಾವಿ ಸ್ಪರ್ಧೆಗೆ ತಯಾರಿ ಮಾಡಲು ಅನುವಾದೆವು...

ಒಳ್ಳೆಯ ತಯಾರಿಯನ್ನೇ .. ಮಾಡಿದೆವು..

"ನಾಗು" ಮತ್ತೆ ಏನು ಮಾಡಬಹುದು..?"

ತಲೆಯಲ್ಲಿ
ಇದೆ ವಿಷಯ ಕೊರೆಯುತ್ತಿತ್ತು...

"ಕೆಟ್ಟ ಕುತೂಹಲ...!

ನನಗೂ, ಅವನಿಗೂ ಭಾವನಾತ್ಮಕ ಸಂಬಂಧ...

ಏನಾದರೂ ಮಾಡಿಯೇ ತೀರುತ್ತಾನೆಂಬ ಭರವಸೆ...ನನಗಿತ್ತು...

ಸ್ಪರ್ಧೆ ಮುಗಿಸಿ ಸಿದ್ದಾಪುರಕ್ಕೆ ಬಂದೆ..

ಅಷ್ಟರಲ್ಲಿ ಎರಡು ದಿನ ಕಳೆದಿತ್ತು......

ಬರುತ್ತಲೆ.. ತೆಂಗಿನ ಕಾಯಿ ಒಂದು ದಪ್ಪನೆಯ ಲೆಟರ್ ತಂದು ಕೊಟ್ಟ....

"ಚೇತನಾ" ಕೊಟ್ಟಿದ್ದಾಳೆ... ನಿನಗೇ ಬರೆದಿದ್ದಾಳೆ ಕಣೊ....

ನಾವೆಲ್ಲ
ಓದಿಯಾಗಿದೆ...! .. ಬೇಜಾರಾಗಬೇಡಪ್ಪ.."
ಅಂದ

ಅವರೆಲ್ಲ ಹಾಗೇನೆ.. ತರಲೆಗಳು...!

ಅವರ ಕೈಗೆ ಪತ್ರ ಸಿಕ್ಕರೆ.. ಓದಿಯೇ ತಂದು ಕೊಡುವ "ಅಭ್ಯಾಸ" ..

ನಾನು ಲಗುಬಗೆಯಿಂದ ಬಿಡಿಸಿದೆ..


"ನಾನು.. " ಏನಂತ " ಸಂಬೋಧಿಸಲಿ.....?

" ಪ್ರಕಾಶೂ "..," ಪ್ರಕಾಶಣ್ಣಾ "....," ಪ್ರಕಾಶ "..!...!

ಏನು ಹೇಳಿದರೇನು....?

ನನ್ನೊಳಗಿನ ಭಾವ ಮಹತ್ವವಲ್ಲವೇ..?

ಇಬ್ಬರಿಗೂ.. ಕೆಟ್ಟ ಭಾವನೆ.." ಇಲ್ಲವೆಂದಮೇಲೆ....

ಕೂಗಿ.. ಕರೆಯುವ... ಹೆಸರಲ್ಲೇನಿದೆ..?

ನಾಗು ..ನನಗೆಲ್ಲ ಹೇಳಿದ್ದಾನೆ...

ನಿನ್ನ ಆಶಯ ನನಗೆ ಖುಷಿಯಾಗಿದೆ...

ನನಗೆ ನಿಮ್ಮ ಗೆಳೆಯರು.., ಗೆಳೆತನ ಕಂಡು ಹೊಟ್ಟೆಕಿಚ್ಚಾಗುತ್ತಿದೆ...

ನಿಮ್ಮೊಡನೆ ನನ್ನನ್ನೂ ಸೇರಿಸಿ ಕೊಳ್ಳಿ...

ಗೆಳತಿಯಾಗಿ ನಾನೂ ಮೌನವಾಗಿ...ನಿಮ್ಮೊಡನೆ.. . ಇರುವೆ...

ಆದರೆ.. .. ಸಮಾಜ ನಮ್ಮ ಸಂಬಂಧಕ್ಕೆ ಒಂದು ಹೆಸರು ಕೇಳುತ್ತಲ್ಲಾ..

ನಾನು ನಿನಗೆ "ಪ್ರಕಾಶಣ್ಣ" ಅಂದು ಹೇಳಲಾ..?

ಅಣ್ಣ ತಂಗಿಯ ಸಂಬಂಧವನ್ನು ಮೀರಿದ ಸ್ನೇಹದ ಭಾವ ನಮ್ಮದಾಗಲಿ....

ಗೆಳೆಯ, ಗೆಳತಿಯ ಭಾವಕ್ಕೂ ಮೀರಿದ ಅನುಬಂಧ ನಮ್ಮದಾಗಲಿ...

ಇದಕ್ಕೆ ಹೆಸರು, ಬಂಧನದ ಗೊಡವೆ ಬೇಕಿಲ್ಲ...

ಒಂಟಿಯಾದ ನನಗೆ ಜೀವದಲ್ಲಿ ನಿಮ್ಮ ಸ್ನೇಹ ಬೇಕು....

ಆದರೆ ಗೆಳೆಯಾ...

ನಾನು ನಿನ್ನ ಹಾಗೆ ಮನಬಿಚ್ಚಿ ಭಾವನೆ ಹೇಳಿಕೊಳ್ಳಲಾರೆ..

ನಿಮ್ಮಂತೆ ದೊಡ್ಡದಾಗಿ ನಕ್ಕು, ಕೂಗಿ,..

ಕೇಕೆ ಹಾಕಿ..ನಗಲಾರೆ..

ಮಾತನಾಡಲಾರೆ..

ಪುಟ್ಟಹಕ್ಕಿಗೂ ಚಿಲಿಪಿಲಿ ರಾಗವ ಕೊಟ್ಟ ... ಭಗವಂತ...

ನನಗೆ ಧ್ವನಿ ಕೊಡಲೇ ಇಲ್ಲ..

ನಾನು ಮೂಕ ಹಕ್ಕಿ....ಹುಟ್ಟಿನಿಂದ...!!"


ಚೇತನಾ ಮೂಕಳಾ..? ಮೂಗಿಯಾ..?


ಅಯ್ಯೊ ದೇವರೆ..!!..

ಇದೆಂಥಹ ಅನ್ಯಾಯ..!

ನನಗೆ ಕಣ್ಣಲ್ಲಿ ನೀರಾಡಿತು....

ಅದಕ್ಕೇ ಅವಳ ಕಣ್ಣುಗಳು ಅಷ್ಟು ಸುಂದರವಾಗಿದೆ..!

ಮಾತನಾಡುತ್ತದೆ...., ನಗುತ್ತದೆ...!


"ಗೆಳೆಯಾ.. ನನ್ನಮ್ಮ ಕೂಡ ..

ನನ್ನ
... ಕಣ್ಣೀರು ನೋಡಿಯೇ ನನ್ನ ಅಳುವನ್ನು ಕೇಳುತ್ತಿದ್ದಳು..!

ಸಮಧಾನ ಮಾಡುತ್ತಿದ್ದಳು...!

ನನ್ನ ನಗುವನ್ನು ...

ನನ್ನ
ಕಣ್ಣಲ್ಲಿ ಕಂಡು ಖುಷಿ ಪಡುತ್ತಿದ್ದಳು...!"


ನನಗೆ ಮುಂದೆ ಓದಲಾಗಲಿಲ್ಲ..ಭಾವೋದ್ವೇಗಕ್ಕೆ ಒಳಗಾಗಿದ್ದೆ..

ನಾಗುವಿನ ಭುಜಕ್ಕೆ ಒರಗಿದೆ...

ನಾಗು ನನ್ನ ಭುಜ ತಟ್ಟಿ ಸಮಾಧಾನ ಪಡಿಸಿದ..


ಆದರೆ ತರಲೆ ತೆಂಗಿನ ಕಾಯಿ...

"ನಾವೇನೂ ತಲೆ ಮೀಸೆ ಬೋಳಿಸುವ ಹಾಗಿಲ್ಲ....!

ನಾವು
ಬಚಾವಾದ್ವಿ,,!...

ಅವಳು.. "ಪ್ರಕಾಶಣ್ಣ : ಅಂದುಬಿಟ್ಟಳಲ್ಲ.."


ತೆಂಗಿನಕಾಯಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ..
ಅವರೆಲ್ಲ ಹಾಗೆಯೇ.. ನನ್ನನ್ನು ನಗಿಸಲು .. ಹಾಗೆ ಮಾಡುತ್ತಾರೆ...

""ಎಲ್ರೋ.. ಯಾವಾಗ ಹೇಳಿದ್ದಾಳೋ.. ?

ಯಾರು
ಕೇಳಿದಾರ್ರೋ...?

ಪ್ರಕಾಶಣ್ಣ ಅಂದಿದ್ದನ್ನು ನಾನೇನೂ ಕೇಳಿಲ್ಲವಪ್ಪ..

ಅವಳು
ಹಾಗೇ ಎಲ್ಲಿ ಹೇಳಿದ್ದಾಳೆ..?

ಪ್ರೂವ್ ಮಾಡ್ರೊ..!"

ನಾಗೂವೂ ಶುರು ಹಚ್ಚಿಕೊಂಡ....

ಅವರಲ್ಲಿ
ಮತ್ತೆ ತಗಾದೆ.. ಶುರುವಾಯಿತು...


ಯಾರೂ ಏನೂ ಮಾಡಿಕೊಳ್ಳಲಿಲ್ಲ...

ಏನೂ
ಬೋಳಿಸಿಕೊಳ್ಳಲಿಲ್ಲ..


ಅವಳು ನಮ್ಮ ಗುಂಪಿನಲ್ಲಿ ಗೆಳತಿಯಾದಳು..

.. ಸಹೋದರಿಯಾದಳು....!

ನನ್ನ ಸಹಪಾಠಿಯನ್ನೇ ಪ್ರೇಮಿಸಿ ಮದುವೆಯಾದಳು....

.. ಅವಳ.. ಮದುವೆಗೆ ನಾವೇ ಓಡಾಡಿದ್ದೇವೆ...

ಅವಳ ಸಹೋದರರ.. ಹಾಗೆ....

ಜನರೆಲ್ಲ
ಹಾಗೇ ಅಂದರು...


ನಾನು ಜೋಕ್ ಹೇಳುತ್ತಿದ್ದೆ.... ಅವಳು ಕೇಳುತ್ತಿದ್ದಳು...

ಅವಳಿಗೆ ನಗು ಬಂದಿದೆ..!

ಖುಷಿಯಾಗಿದೆ ...!

ಅಂದು ಕೊಳ್ಳುತ್ತಿದ್ದೆ.....

ಅವಳು ಮೌನವಾಗಿ ನಗುತ್ತಿದ್ದಳು... ಮಾತನಾಡುತ್ತಿದ್ದಳು...!

ಅವಳ ಕಿರು ನಗುವಿನಲ್ಲಿಯೇ.. ಏನೋ.. ..ಹೇಳುತ್ತಿದ್ದಳು...!

ಅವಳ ಎಲ್ಲ ಭಾವ ಕಣ್ಣಲ್ಲೇ ವ್ಯಕ್ತವಾಗುತ್ತಿತ್ತು......

ಸುಂದರ ಕಣ್ಣುಗಳು ಇನ್ನೂ ನನ್ನ .. ಹ್ರದಯದಲ್ಲಿದೆ...

ಚೇತನಾ ನನ್ನಲ್ಲಿ ಯಾವಾಗಲೂ ಸ್ಪೂರ್ತಿಯಾಗಿದ್ದಾಳೆ...

ಬೇಜಾರಾದಾಗ.. ದುಃಖವಾದಾಗ..

ಮನದ ಖುಷಿಯ ಚಿಲುಮೆಯಾಗಿದ್ದಾಳೆ...

ಹೆಸರೇ..ಇಲ್ಲದ.. ಆ....

"
ಭಾವ.. ಸಂಬಂಧಕ್ಕೆ.. " ಎಲ್ಲೆಯುಂಟೆ..?