Monday, July 26, 2010

ಬದುಕು ಸಿನೇಮಾ ಹಾಡಲ್ಲ...!

part 3

"ಹುಡುಗ ಗಂಡಸೇ ಅಲ್ಲ ಅಂತ ಆರೋಪವಿತ್ತು...
ಎಂಟು ತಿಂಗಳಾದರೂ ಹೊಸ ಸುದ್ಧಿಯಿಲ್ಲ..


ನಾವು ದುಡುಕಿಬಿಟ್ಟೆವಾ.. ಪ್ರಕಾಶು..?
ಒಮ್ಮೆ ಇಲ್ಲಿ ಬಂದು ಏನು ಅಂತ ವಿಚಾರಿಸು...
ಗಣಪ್ತಿ ಭಾವನಿಗೆ ಏನೂ ಗೊತ್ತಾಗೋದಿಲ್ಲ ಮಾರಾಯಾ"


ನನಗೆ ಬೇಕೊ... ಬೇಡವೋ ಮದುವೆ ಮಾತುಕತೆಯಲ್ಲಿ ನಾನಿದ್ದೆ..
ಅದೂ ಶಾರಿ ಅಕ್ಕನ ಕೋರಿಕೆ...
ನನಗೆ ಇಲ್ಲವೆನ್ನಲಾಗಲಿಲ್ಲ..
ನಾಗುವಿನ ಸಹಾಯ ಕೇಳಿದೆ..


ಆತ ನನಗೋಸ್ಕರ ಯಾವತ್ತೂ "ಇಲ್ಲ" ಎಂದವನೇ ಅಲ್ಲ...


ಇನ್ನೇನು?
ಹೊರಟೇ ಬಿಟ್ಟೆವು...


ಹುಡುಗನ ಮನೆ ತಲುಪಿದಾಗ ಬೆಳಿಗ್ಗೆ ಹತ್ತು ಗಂಟೆ..
ಶಾರಿ ಮಗಳಿಗೆ ಬಹಳ ಆಶ್ಚರ್ಯ...
ಸಂತಸ ಹತ್ತಿಕ್ಕಲಾಗಲಿಲ್ಲ...


ಹೆಣ್ಣುಮಕ್ಕಳಿಗೆ ಹಾಗೇನೆ..
ತವರು ಮನೆಯ ಸುವಾಸನೆ ಬಂದರೂ ಕಣ್ಣಲ್ಲಿ ನೀರುಕ್ಕುತ್ತದೆ..
ಕಾಲುತೊಳೆಯಲು ನೀರು...
ಟವೆಲ್ಲು..ಕೊಟ್ಟು..


" ಪ್ರಕಾಶು ಮಾಮಾ...
ಅಡಿಗೆ ಮನೆಗೇ... ಬಂದುಬಿಡಿ...
ಬೆಳಗಿನ ತಿಂಡಿ ತಯಾರಾಗಿದೆ...
ಇವರು ದೇವರ ಪೂಜೆ ಮಾಡುತ್ತಿದ್ದಾರೆ.."


ಕೈಕಾಲು ತೊಳೆದು ಅಡುಗೆ ಮನೆಗೆ ಬಂದೆವು..


ಬಹಳ ಸಂಪ್ರದಾಯಸ್ಥರ ಮನೆ..
ನಮಗೆ ಮಣೆಹಾಕಿ.. ಬಾಳೆ ಎಲೆ ಹಾಕಿ..


ಬಿಸಿ ಬಿಸಿ "ಮೊಗೆಕಾಯಿ ತೆಳ್ಳೆವು" ಹಾಕಿದಳು..!
ಸಂಗಡ.. "ಒಗ್ಗರಣೆ ಬೆಲ್ಲ" !!

ಬಾಯಲ್ಲಿ ನೀರೂರಿತು....!!


ಮನೆಯವರೆಲ್ಲರೂ ಬಾಯಿತುಂಬಾ ಉಪಾಚಾರ ಮಾಡಿದರು..
ನಮ್ಮ ಶಾರಿಯ ಮಗಳನ್ನು ಹೊಗಳಿದರು...


ತವರಿನ ಮನೆಯವರಿಗೆ ಇನ್ನೇನು ಬೇಕು..?
ಹುಡುಗಿ ಹೊಂದಿಕೊಂಡಿದ್ದಾಳಲ್ಲ.. ಬಹಳ ಖುಷಿಯಾಗಿತ್ತು..

ಆದರೆ ....
ಎಲ್ಲರ ಕಣ್ಣಿನಲ್ಲೂ ಆಶ್ಚರ್ಯ..!
ಪ್ರಶ್ನಾರ್ಥಕ ಚಿಹ್ನೆ ಬೇಡವೆಂದರೂ ಎದ್ದು ಕಾಣುತ್ತಿತ್ತು..
ಇವರು  ಯಾಕೆ ಬಂದಿದ್ದಾರೆ...? !!.


ಆದರೆ ಯಾರೂ ಬಾಯಿಬಿಟ್ಟು ಕೇಳುತ್ತಿಲ್ಲ..
ಸಂಪ್ರದಾಯಸ್ಥರೇ.. ಹಾಗೆ..
"ಬಂದವರು ಕಾರಣ ಹೇಳಿಯೇ ಹೇಳುತ್ತಾರಲ್ಲ.. ಅಂತ ಸುಮ್ಮನಿದ್ದಾರೆ" ಅಂದುಕೊಂಡೆ..


ನಾವು ತಿಂಡಿ ಮುಗಿಸಿ ಮತ್ತೆ ಜಗುಲಿಗೆ( ಪಡಸಾಲೆ) ಬಂದೆವು..
ಈಗ ಹುಡುಗನೂ ಬಂದ...


"ಮಾಮಾ...ಮತ್ತೇನು ಸುದ್ಧಿ?
ಮನೆಯಲ್ಲಿ ಎಲ್ಲರೂ ಸೌಖ್ಯವಾ?
ನಿನ್ನೆ ರಾತ್ರಿ.. ಯಕ್ಷಗಾನ ನೋಡಲು ಸಿರ್ಸಿಗೆ ಹೋಗಿದ್ದೆ..
"ಲಂಕಾ ದಹನ"
ಕಣ್ಣಿಮನೆಯವರ "ಹನುಮಂತ" ಅಭಿನಯ ಬಹಳ ಸೊಗಸಾಗಿತ್ತು...
ಬೆಳಗಿನವರೆಗೆ ಯಕ್ಷಗಾನ ನೋಡಿ ಬಂದೆ..
ಹಾಗಾಗಿ ಪೂಜೆಗೆ ತಡವಾಯಿತು.."


ಇಲ್ಲಿಯವರೆಗೆ ಸುಮ್ಮನಿದ್ದ ನಾಗು
"ಸ್ವಲ್ಪ ತೋಟದ ಕಡೆ ಹೋಗಿ ಬರೋಣವೆ..?" ಕೇಳಿದ..


ಹುಡುಗನಿಗೆ ತಾನು ಮಾಡಿದ ಕೃಷಿ ಕೆಲಸವನ್ನು ತೋರಿಸುವ ಉತ್ಸಾಹ ಕಂಡಿತು..
ನಾನು ನಾಗು ಎದ್ದು ಅವನನ್ನು ಹಿಂಬಾಲಿಸಿದೆವು...


ನಾನು ಮೆಲ್ಲನೆ ಮಾತಿಗೆ ಶುರು ಹಚ್ಚಿಕೊಂಡೆ...
"ನಾನು ಹೀಗೆ ಹೇಳುತ್ತೇನೆಂದು ತಪ್ಪು ತಿಳಿಯ ಬೇಡಪ್ಪಾ..."


"ಕೇಳೀ .. ಮಾಮ..
ಅದರಲ್ಲಿ ತಪ್ಪು ತಿಳಿಯುವದೇನಿದೆ?"


"ಮತ್ತೇನಿಲ್ಲ..
ಬೇಜಾರೂ ಮಾಡ್ಕೊ ಬಾರ್ದು..
ಮೊದಲೇ.. ನಿನ್ನ ಬಗೆಗೆ  ಈ ಆರೋಪ ಇತ್ತು..
ಇಷ್ಟು ದಿನಗಳಾದರೂ ಹೊಸ ಸುದ್ಧಿಯಿಲ್ಲ..
ಜನ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ..
ಏನಾಯ್ತು?
ಏನು ಸಮಸ್ಯೆ?
ನಾವು ನಿನ್ನ ಸ್ನೇಹಿತರಿದ್ದಂತೆ..
ಮನ ಬಿಚ್ಚಿ ಮಾತಾಡು..
ಯಾವ ಸಂಕೋಚವನ್ನೂ ಇಟ್ಟುಕೊಳ್ಳ ಬೇಡಪ್ಪಾ.."


ಹುಡುಗ ಸ್ವಲ್ಪ ಹೊತ್ತು ಮಾತನಾದಲಿಲ್ಲ..


"ಮಾಮಾ..
ಇವಳಿಗೆ ತುಂಬಾ.. ನಾಚಿಕೆ... ಹೆದರಿಕೆ...!
ರಾತ್ರಿಯಂತೂ ಮಾತೇ ಆಡುವದಿಲ್ಲ..
ನನಗೆ ಏನು ಮಾತಾಡಬೇಕೆಂದು.. ಗೊತ್ತೇ ಆಗುವದಿಲ್ಲ...
ನಮ್ಮಿಬ್ಬರ ನಡುವೆ ತುಂಬಾ ಪ್ರೀತಿಯಿದೆ..
ಆದರೆ..
ಇಬ್ಬರಿಗೂ ಹೇಳೀಕೊಳ್ಳಲು ಬರುವದಿಲ್ಲ...
ನನಗೂ ಸಂಕೋಚ..."


" ಏನು ಹುಡುಗ್ರೋ ನೀವು..?
ಇಷ್ಟೆಲ್ಲಾ ಸಿನೇಮಾ ನೋಡ್ತೀರಿ.. ಏನೂ ಗೊತ್ತಾಗೋದಿಲ್ವಾ? "


" ಬದುಕಿನಲ್ಲಿ ಪ್ರೀತಿ ಅಂದರೆ ....ಸಿನೇಮ ಅಲ್ಲವಲ್ಲ ಮಾಮಾ...!
ಸಿನೆಮಾದಲ್ಲಿ ಹಾಡು ಕುಣಿತ..ಇರ್ತದೆ...
ಇಲ್ಲಿ ನಿಜ ಜೀವನದಲ್ಲಿ ಅದೆಲ್ಲ ಬಿಟ್ಟು ಉಳಿದೆಲ್ಲವೂ ಇದೆ...
ಇಲ್ಲಿ ಜೀವನದಲ್ಲಿ ಬಹಳ ಕಷ್ಟ..
ಅಲ್ಲಿ ಹೀರೋಗೂ.. ಹೀರೋಯಿನ್ನಿಗೂ ಸಂಕೋಚವೇ ಇರೋದಿಲ್ಲ..
ಪಕ್ಕದಲ್ಲಿ ಡ್ಯಾನ್ಸ್ ಮಾಡ್ತಾರಲ್ಲ ...
ಅವರಿಗೂ ನಾಚಿಕೆ ಅನ್ನೋದೆ ಗೊತ್ತಿರೋದಿಲ್ಲ"


"ನೋಡು..
ಹೆಣ್ಣುಮಕ್ಕಳಿಗೆ ನಾಚಿಕೆ ಸಹಜ..
ನೀನು ಗಂಡು...
ಹೆಣ್ಣು ಪ್ರಕೃತಿ ಇದ್ದ ಹಾಗೆ...
ಅದಕ್ಕೆ ಬೇಕಾಗಿರೊ.. ಗಾಳಿ.. ಬೆಳಕು..
ಬೇರುಗಳಿಗೆ ನೀರು.. ಗೊಬ್ಬರ ...ನೀನೇ... ಕೊಡಬೇಕು...
ನೀನು ಧೈರ್ಯ ಕೊಡಬೇಕು...
ಭರವಸೆ ಹುಟ್ಟಿಸ ಬೇಕು...
ಹೊಸ ಕನಸು ಹುಟ್ಟಿಸ ಬೇಕು...
ಅವಳಲ್ಲಿ ಆಸೆಯ  ಚಿಗುರು..
ಚಿಗುರುವ ಹಾಗೆ ನೀನು ಮಾಡಬೇಕು..."


ಹುಡುಗ "ಆಯ್ತು ...ಮಾಮಾ" ಅಂದು ಸುಮ್ಮನಾದ...


ನಾಗು ಹುಡುಗನಿಗೆ ಕೇಳಿದ..
" ನನಗೆ ಸ್ವಲ್ಪ ಸಿರ್ಸಿಯಲ್ಲಿ ಅರ್ಜಂಟ್ ಕೆಲಸವಿದೆ..
ನೀನೂ ನಮ್ಮ ಸಂಗಡ ಬಾ..
ಊಟದ ಸಮಯಕ್ಕೆ ಸರಿಯಾಗಿ ವಾಪಸ್  ಬಂದು ಬಿಡೋಣ.."


ನನಗೆ ಆಶ್ಚರ್ಯವಾದರೂ ಸುಮ್ಮನಿದ್ದೆ...

ಮನೆಯಲ್ಲಿ ಎಲ್ಲರಿಗೂ ಸಿರ್ಸಿಗೆ ಹೋಗಿ ಊಟದ ಸಮಯದೊಳಗೆ ಬಂದು ಬಿಡುತ್ತೇವೆ ಎಂದು ಅಲ್ಲಿಂದ ಹೊರಟೆವು...


ನಾಗು ಸಿರ್ಸಿ "ನಟರಾಜ್" ರೋಡಿನಲ್ಲಿ ಕಾರು ನಿಲ್ಲಿಸಿ ಲಗುಬಗೆಯಿಂದ ಹೋದ...
ಬರುವಾಗ ಕೆಲವು ಪುಸ್ತಕಗಳಿದ್ದವು..
ಸಿಡಿಗಳಿದ್ದವು..!


" ನೋಡಪ್ಪಾ...
ಎಲ್ಲರಿಗೂ..ವಯಸ್ಸಾಗುತ್ತದೆ..
ಪ್ರಾಯವೂ ಬಂದುಬಿಡುತ್ತದೆ...

ಮನೆಯಲ್ಲಿ ಮದುವೆಯನ್ನೂ ಮಾಡುತ್ತಾರೆ..
ಆದರೆ ..
ಆ ಮದುವೆಗೆ ಮಾನಸಿಕವಾಗಿ....
ದೈಹಿಕವಾಗಿ ತಯಾರಾಗೋದೂ ಸಹ ಬಹಳ ಮಹತ್ವ..
ಬದುಕು ಕನಸಲ್ಲ...
ಸಿನೇಮಾವೂ ಅಲ್ಲ...
ದಾಂಪತ್ಯ ಏನೋ.. ಹೇಗೋ .. ಆಗಿಬಿಡುತ್ತದೆ  ಅಂತ ಈಗ ಇಲ್ಲ....

 ಇದು.. ನಾವು ಬೆಳೆಸಿದಷ್ಟು ಬೆಳೆಯುತ್ತದೆ...
ಬೆಳೆಸಿದ ಹಾಗೆ ಬೆಳೆಯುತ್ತದೆ..


ಕಾಲ ಈಗ ಬದಲಾಗಿದೆ..
ಹೆಣ್ಣಿಗೆ ಏನು ಬೇಕೊ.. ಅದನ್ನು ಕೊಡುವ ಸಾಮರ್ಥ್ಯ ಗಂಡಿಗಿರಬೇಕು..
ಅವಳು ಮಾಡಿದ ಕೆಲಸಕ್ಕೆ  ಸ್ವಲ್ಪ ಹೊಗಳಿಕೆ..
ಮುಕ್ತವಾಗಿ ಮಾತನಾಡುವದು..
ಕೆಲವು ರಸಿಕ ಮಾತುಗಳು... ಎಲ್ಲವೂ ಇರಬೇಕಪ್ಪಾ...

ಪ್ರಾಯ ಬಂದಾಗ ಮದುವೆ ಹಕ್ಕು ಒಂದೇ ಅಲ್ಲ..
ಒಂದು ಜವಾಬ್ದಾರಿ ಕೂಡ..


ಉಪದೇಶ ಮಾಡುವದರಿಂದ..ಪ್ರವಚನ ಕೇಳುವದರಿಂದ..
ಗಿಡದಲ್ಲಿ ಹೂವು .. ಹಣ್ಣು ಆಗೋದಿಲ್ಲ..


ಬದುಕು ಸಿನೇಮಾ ಹಾಡಲ್ಲ...


ನಾನು ಕೊಟ್ಟಿದ್ದನ್ನು ಇಬ್ಬರೂ ಓದಿ.. ನೋಡಿ..
 ಆದಷ್ಟು ಬೇಗ ನಮಗೆ ಹೊಸ ಸುದ್ಧಿ ಕೊಡಿ..."


ನಾಗುವಿನ ಮಾತು ಹುಡುಗನಲ್ಲಿ ಬಹಳ ನಾಟಿತು...


ನಾವು ಅದೇ ದಿನ ಬೆಂಗಳೂರಿಗೆ ತಿರುಗಿ ಬಂದೆವು..
ಬರುವಾಗ ನಾಗು..


"ಅಲ್ವೊ ಪ್ರಕಾಶು...ಆ ಹುಡುಗನ ಬಳಿ..
ಹೆಣ್ಣೆಂದರೆ ಪ್ರಕೃತಿ..
ಬೇರು ಗೊಬ್ಬರ ಅಂದರೆ ಅವನಿಗೇನು ಅರ್ಥ ಆಗ್ತದೋ..?
ಪ್ರಕೃತಿ.. ಹಸಿರು.... ಚಿಗುರು..
ಇದೆಲ್ಲ ನಿನ್ನ ಬ್ಲಾಗಿನಲ್ಲಿ ಇಟ್ಕೊ ಮಾರಾಯಾ.."
ಅಂತ ನೆಗೆಯಾಡಿದ...


ನನಗೂ ನಗು ಬಂತು...


ಕಳೆದವಾರ ಶಾರಿಯ ಫೋನ್... !!
ನನ್ನಾಕೆ ಶಾರಿಯ ಫೋನ್ ಎಂದರೆ ಓಡೋಡಿ ಬರುತ್ತಾಳೆ...


ನಾವೆಲ್ಲ ಶಾರಿಯ ದೊಡ್ಡ ಫ್ಯಾನ್.. !

ಸ್ಪೀಕರ್ ಫೋನ್ ಚಾಲೂ ಮಾಡಿ
"ಹಲ್ಲೋ.. ಶಾರಿ.. ಏನು ವಿಷಯ?"

"ಪ್ರಕಾಶು...!!!!
ಹೊಸ ಸುದ್ಧಿ ಕಣೊ...!!
ಮಗಳಿಗೆ ನಾಲ್ಕು ತಿಂಗಳಾಗಿದೆ..!


ಇದೆಲ್ಲ ನಿನ್ನಿಂದ ಆಯ್ತು ಕಣೊ...
ನೀನು ಅಲ್ಲಿ ಹೋಗಿ ಏನು  ಹೇಳಿದ್ಯೋ..?..!!
ಏನು ಮಾಡಿದ್ಯೊ.!!.
ಅಂತೂ.. ಹೊಸ ಸುದ್ಧಿ ಬಂತು ಕಣೊ...!!

ಇದಕ್ಕೆಲ್ಲ  ನೀನೇ.... ಕಾರಣ... ನೋಡು.. !!!!


ನನ್ನಾಕೆ  ಬಿದ್ದೂ .. ಬಿದ್ದು..ನಗುತ್ತಿದ್ದಳು...!


"ಅಯ್ಯೊ..!!
ಅಯ್ಯೊ ....ಶಾರಿ ...!
ಹೀಗೆಲ್ಲ ಹೇಳಬೇಡ್ವೆ... !!
ಜನ ಅಪಾರ್ಥ ಮಾಡ್ಕೋತಾರೆ...!!.."


"ಹೇಳುವವರಿಗೇನೋ... ?  !
ನಾಲಿಗೆಗೆ ಎಲುಬಿಲ್ಲವಲ್ಲ.. ಏನು ಬೇಕಾದ್ರೂ ಹೇಳ್ತಾರೆ...!
ನೀನು ದೊಡ್ಡ ಶರೀರದವ...!
ತಲೆಯಲ್ಲಿ ಏನೂ ಇರೋದಿಲ್ಲ ಅಂದ್ಕೊಂಡಿದ್ದೆ ಕಣೋ..!! "


ನಾನು ಲಗು ಬಗೆಯಿಂದ ಮಾತು ಕಟ್ ಮಾಡಿ ಫೋನ್ ಇಟ್ಟೆ...


ನನ್ನಾಕೆಗೆ ಹೊಸ ವಿಷಯ ಸಿಕ್ಕಿಬಿಟ್ಟಿತ್ತು...!

" ಏನ್ರೀ ಇದು...? !!
ಹೊಸ ವಿಷಯ..?.. !! "
ಕಾಲೆಳೆಯಯುತ್ತ ನಗು ಶುರು ಮಾಡಿದಳು...


ಅಷ್ಟರಲ್ಲಿ ಅಣ್ಣನ ಫೋನ್..!


"ಪ್ರಕಾಶು...
ಶಾರಿ ಮಗಳದು ಹೊಸ ಸುದ್ಧಿಯಂತಲ್ಲಪ್ಪಾ...!!
ಎಂಟು ತಿಂಗಳಿಂದ ಆಗದೇ ಇದ್ದದ್ದು ..
ನೀನು ಹೋಗಿ ಏನು ಮಾಡಿದ್ಯೋ...?..  !! .."


"ಅಯ್ಯೋ ..
ಅಣ್ಣಯ್ಯಾ..!!.
ನಾನು ಏನೂ ಮಾಡಿಲ್ಲ..!
ಎಲ್ಲವನ್ನೂ  ನಾಗು ಮಾಡಿದ್ದು...!!.."


ನನ್ನಾಕೆ ಮತ್ತೆ  ಎದ್ದೂ..... ಬಿದ್ದೂ  ನಗಲಿಕ್ಕೆ ಶುರು ಮಾಡಿದಳು....


ಅಯ್ಯೋ ರಾಮ...!! ಈ ಶಾರಿ....
 ಊರ ತುಂಬ ಡಂಗುರ ಸಾರಿಬಿಟ್ಟಿದ್ದಾಳಾ.. !!




(ಶಾರಿಯ ಅವಾಂತರ ಇನ್ನೊಂದಿದೆ..)
ಇಲ್ಲಿ ನೋಡಿ...

Sunday, July 18, 2010

"ಸುಳ್ಳಿಗೆ ಸುಲಭದಲ್ಲಿ ಸಾಕ್ಷಿ, ಪುರಾವೆ ಸಿಕ್ಕಿಬಿಡುತ್ತದೆ...!!.."

part 2



ಹುಡುಗನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದರೇ ಹೇಗೆ?



ನನ್ನ ಚಿಕ್ಕಪ್ಪ ಖಡಾ ಖಂಡಿತವಾಗಿ ಒಪ್ಪಲೇ ಇಲ್ಲ..
" ಹೀಗೆಲ್ಲಾ ಮಾಡಿದರೆ.. ಮುಂದೆ ಪತಿಪತ್ನಿಯರಲ್ಲಿ ಹೊಂದಾಣಿಕೆ ಕಷ್ಟವಾಗಿಬಿಡುತ್ತದೆ.."
"ನೋಡೋಣ.. ಅವರು ಏನು ಹೇಳುತ್ತಾರೆಂದು..
ಅವರ ನಡೆಯನ್ನು ನೋಡಿ ನಾವು ಮುಂದುವರೆಯೋಣ..."


ನನಗೂ ಸರಿಯೆನಿಸಿತು..


ಮದುವೆ ಹುಡುಗನ ಮನೆಯಲ್ಲಿ ಮೀಟಿಂಗು ಶುರುವಾಯಿತು...


ಎಲ್ಲರಿಗೂ ಒಂದು ಥರಹದ ಸಂಕೋಚ...
ಹೇಗೆ ವಿಷಯವನ್ನು ಪ್ರಸ್ತಾಪಿಸುವದು?


"ನೋಡಿ ಇದು ನಮಗೆಲ್ಲರಿಗೂ ಒಂದು ಮುಜುಗರದ ಸಂಗತಿ..
ನಮಗೆ ಈ ಅಪವಾದವನ್ನು ಹೇಳುತ್ತಿರುವವರು ನಮ್ಮ ಪರಿಚಯಸ್ಥರು..
ನಿಮ್ಮ ಅಕ್ಕಪಕ್ಕದ ಮನೆಯವರು..!
ಇದರಲ್ಲಿ ಸತ್ಯ ಏನು...?
ಈ ವಿಷಯದ ಸತ್ಯಾಸತ್ಯತೆಯನ್ನು ನಮಗೆ ಮನವರಿಕೆ ಮಾಡಿಕೊಡುವದು ನಿಮ್ಮ ಜವಾಬ್ದಾರಿ.."


ಈಗ ಹುಡುಗ ಗಂಭೀರವಾದ..


" ನಮ್ಮೂರಲ್ಲಿ ಎಂಟು ಮನೆಗಳಿವೆ..
ಇಲ್ಲಿರುವ ಆರು ಮನೆಯವರು ಒಂದು ಜಮೀನಿನ ವಿಷಯದಲ್ಲಿ ನಮ್ಮ ಮೇಲೆ ಕೇಸು ಹಾಕಿದ್ದರು..
ಅದರಲ್ಲಿ ಎಲ್ಲ "ಕೋರ್ಟಿನಲ್ಲಿಯೂ.". ನಮಗೇ ಜಯವಾಯಿತು...
ಆಗ ಅವರೊಂದು ಪ್ರತಿಜ್ನೆ ಮಾಡಿದ್ದರು.."


"ಪ್ರತಿಜ್ಞೆಯಾ..? ಏನಂತ ?? "


"ಈ ಕೇಸಿನಲ್ಲೇನೊ ಗೆದ್ದು  ಬಿಟ್ರಿ..
ಈ ಕೇಸಿನಲ್ಲಿ ನೀವು ಗೆಲ್ಲಲಿಕ್ಕೆ ನಿಮ್ಮ ಮಗ ಕಾರಣ..
ನಿಮ್ಮ ಮಗ ಹೇಗೆ ಮದುವೆಯಾಗುತ್ತಾನೆ ನಾವು ನೋಡಿಯೇ ಬಿಡುತ್ತೇವೆ..
ಯಾರು ಹೆಣ್ಣು ಕೊಡುತ್ತಾರೆ ನೋಡಿಯೇ ಬಿಡೋಣ.." ಅಂತ ಕೂಗಾಡಿದ್ದರು..
ನಮಗೆ ಈಗ ಎಲ್ಲವೂ ಅರ್ಥವಾಗುತ್ತಿದೆ..
ಹಿಂದೆ ಕೂಡಿ ಬಂದ ಸಂಬಂಧಗಳೆಲ್ಲ ಯಾಕೆ ಬೇಡವೆಂದರು ಅಂತ..
ಇದೆಲ್ಲ ಅವರ ಕರಾಮತ್ತು...
ನೀವು ನಮ್ಮ ಬಳಿ ನೇರವಾಗಿ ವಿಷಯ ಹೇಳಿದ್ದು ಒಳ್ಳೆಯದಾಯಿತು..."


ನಾವು ಈಗ ಮತ್ತೆ ಚಿಂತೆಗೆ ಬಿದ್ದೆವು..


"ಈ ಮಾತನ್ನು ಹೇಗೆ ನಂಬಬೇಕು..?
ಇದು ಈವರು ಹೇಳುತ್ತಿರುವದು.. .
ಇದರಲ್ಲಿ ಸತ್ಯ ಏನು? ಎಷ್ಟು..? "


ಅಷ್ಟರಲ್ಲಿ ಗಂಡಿನ ಕಡೆಯವರು ಕೋರ್‍ಟಿನ ಕಾಗದ ಪತ್ರಗಳನ್ನು ತೋರಿಸಿದರು...
ನಮ್ಮ ಕಡೆಯ ಹಿರಿಯರೊಬ್ಬರು ಕೇಳಿದರು..


"ಈ ಮೊದಲು ತಪ್ಪಿಹೋದ ಸಂಬಂಧಗಳ ವಿಳಾಸ ಕೊಡುವಿರಾ,,..?"


"ಓಹೊ...
ಖಂಡಿತ ತಗೊಳಿ..
ನಿಜ ಹೇಳ ಬೇಕೆಂದರೆ ಅವರು ಯಾಕೆ ಬೇಡವೆಂದರು  ಎನ್ನುವದು ನಮಗೂ ಗೊತ್ತಿಲ್ಲ...
ಇದಕ್ಕೂ ಹೆಚ್ಚಿನ ಸಾಕ್ಷಿ , ಪುರಾವೆ ನಮ್ಮಲಿಲ್ಲ.."


ನಾನು ಮತ್ತು ಇನ್ನೊಬ್ಬರು ತಕ್ಷಣ ಅಲ್ಲಿಂದ ಹೊರಟು ಆ ಮೂರು ಜನರನ್ನು ಸಂಪರ್ಕಿಸಿದೆವು...
ಅವರೆಲ್ಲರೂ ಒಂದೇ ಕಾರಣ ಕೊಟ್ಟರು..


"ಮದುವೆ ಹುಡುಗನಿಗೆ,,, "ಅದೇ.." ಇಲ್ಲವಂತೆ....
ಹಾಗಾಗಿ ನಾವು ಮುಂದುವರೆಯಲಿಲ್ಲ..!"


"ನಿಮಗೆ ಈ ವಿಷಯ ಹೇಳಿದವರಾರು?"


"ಜಂಬೆಮನೆ ಗಂಗಕ್ಕ..
ಮತ್ತು ಅವರ ಅಕ್ಕಪಕ್ಕದ ಮನೆಯವರು..."


ನಮಗೆಲ್ಲರಿಗೂ ಈಗ ಸಮಾಧಾನವಾಯಿತು...


ಮದುವೆ ಹುಡುಗನೇ ಮಾತನಾಡಿದ..
"ಎಂಟು ಮನೆಗಳಿರುವ ಈ ಊರಿನಲ್ಲಿ ..
ಆರು ಮನೆಯವರು ಸೇರಿದರೆ..
ಒಬ್ಬನನ್ನು ನಪಂಸಕನನ್ನಾಗಿ ಮಾಡುವದು ಬಹಳ ಸುಲಭ..
ನಾವು ಬಹುಮತವನ್ನು ನಂಬುತ್ತೇವೆ.. ಅಲ್ಲವಾ?"

ಇದಕ್ಕೆ ನಮ್ಮಲ್ಲಿ ಉತ್ತರ ಇಲ್ಲವಾಗಿತ್ತು...
ಹುಡುಗನೇ ಮಾತನಾಡಿದ..

"ಸುಳ್ಳಿಗೆ ಸುಲಭದಲ್ಲಿ ಸಾಕ್ಷಿ, ಪುರಾವೆ ಸಿಕ್ಕಿಬಿಡುತ್ತದೆ...
ಸತ್ಯಕ್ಕೆ, ಪ್ರಾಮಾಣಿಕತೆಗೆ ಬಹಳ ಕಷ್ಟ..
ನಮ್ಮ ಪ್ರಾಮಾಣಿಕತೆಯನ್ನು ನಾವೇ ಹೇಳಿಕೊಳ್ಳುವಂಥಹ,
ಸಾಬಿತು ಮಾಡಿಕೊಳ್ಳುವ ಸಂದರ್ಭ ಯಾರಿಗೂ ಬರಬಾರದು...
ಇದು ಬಹಳ ನೋವಿನ..,
ಅಸಹಾಯಕತೆಯ ಸಂದರ್ಭ...
ನಿಮಗೆ ಇನ್ನೂ ಖಾತ್ರಿ ಬೇಕಾದಲ್ಲಿ ನಾನು ಒಂದು ಪೇಪರಿನಲ್ಲಿ ಬರೆದುಕೊಡುವೆ.."

"ನೋಡಿ ಅದೇನೂ ಬೇಕಿಲ್ಲ...
ಬೇಜಾರು ಮಾಡಿಕೊಳ್ಳಬೇಡಿ..
ಹೆಣ್ಣು ಹೆತ್ತವರಾಗಿ ಮಾತನಾಡಬೇಕಾಯಿತು..
ಈಗ  ಎಲ್ಲವೂ ಸರಿಹೋಯಿತು..
ಇನ್ನು ಹಳೆಯದನೆಲ್ಲವನ್ನೂ ಮರೆತು ...
ನಮ್ಮ ಮಗಳನ್ನು ನಿಮ್ಮ ಮನೆಗೆ ತುಂಬಿಸಿಕೊಳ್ಳಿ..."


ಇನ್ನೇನು ..?


ಸಂಭ್ರಮ.. ಸಂತೋಷದಿಂದ.. ಮದುವೆಯೂ ಆಗಿ ಹೋಯಿತು...!


ಮದುವೆ ಮುಗಿಸಿ ನಾವೂ ಕೂಡ ಬೆಂಗಳೂರಿಗೆ ಬಂದೆವು...

ದಿನಗಳ ನಂತರ ಶಾರಿ ಮತ್ತೆ ಫೋನ್ ಮಾಡಿದಳು...


"ಪ್ರಕಾಶು..
ಮತ್ತೊಂದು ಸಮಸ್ಯೆ ಕಣೊ...!!"


ನನಗೆ ಆತಂಕವಾಯ್ತು..!!


"ಏನಾಯ್ತೆ ಶಾರಿ...??
ಮಗಳು.... ಅಳಿಯ ಹೊಂದಾಣಿಕೆಯಿಂದ ಇದ್ದಾರೇನೆ.?"


"ಪ್ರಕಾಶು... ಅವರಿಗೇನೋ...
ಅವರಿಬ್ಬರೂ ಚಂದವಾಗಿಯೇ ಇದ್ದಾರೆ...
 ವಾರಕ್ಕೊಮ್ಮೆ  ಸಿರ್ಸಿಗೆ ಹೋಗಿ ಸೀನೇಮಾ, ಹೊಟೆಲ್ಲು ಅಂತ ಸುತ್ತಾಡುತ್ತಾರಂತೆ.."


"ಮತ್ತೆ ಇನ್ನೇನು ? !!.."


"ಪ್ರಕಾಶು..
 ಮತ್ತೇನಿಲ್ಲ..
ಏನು ಆಗಬೇಕಿತ್ತೋ.. ಅದು ಆಗಿಲ್ಲ...!
ಮದುವೆಯಾಗಿ... ಎಂಟು ತಿಂಗಳಾಯಿತು..
ಇನ್ನೂ ಹೊಸ ಸುದ್ಧಿಯಿಲ್ಲ...!! "


"ಈಗೆಲ್ಲ  ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಾರೆ..
ನೀನು ಎಲ್ಲದರಲ್ಲೂ ಸಂಶಯ ಮಾಡಬೇಡ ಮಾರಾಯ್ತಿ..."


"ಇಲ್ಲಪ್ಪಾ..
ಹಾಗೇನಿಲ್ಲ...
ಇಬ್ಬರನ್ನೂ ಕೇಳೀದೆ..
ಪ್ಲ್ಯಾನಿಂಗ್ ... ಗ್ಲೀನೀಂಗು ಏನೂ ಇಲ್ಲವಂತೆ..."


"ಮತ್ತೆ.. ???.. !!. ! "


"ಇಬ್ಬರೂ ಏನೂ ಮಾತನಾಡುತ್ತಿಲ್ಲ...ಕಣೋ..
ಹುಡುಗನ ಬಳಿ  ಈ ವಿಷಯ ಕೇಳೀದರೆ ಗಂಭೀರಾನಾಗಿಬಿಡುತ್ತಾನೆ..."


"ಹುಡುಗಿ. ... ಕೇಳಬೇಕಿತ್ತು..?"

"ಅವಳನ್ನು  ಕೇಳೀದರೆ.. ಏನೂ ಉತ್ತರ ಕೊಡುವದಿಲ್ಲ
ಕೋಪ ಮಾಡಿಕೊಳ್ತಾಳೆ...
ನೀನು ಒಮ್ಮೆ ಇಲ್ಲಿಗೆ ಬಾ ಮಾರಾಯಾ..
 ಏನಾಗಿದೆ ಅಂತ ತಿಳಿದು ಕೊಳ್ಳಬೇಕು..
ಇದನ್ನೆಲ್ಲಾ ಸರಿ ಮಾಡಬೇಕು...
  ಪ್ರಕಾಶು...

ಮದುವೆಯಾಗಿ ಎಂಟು ತಿಂಗಳಾಯ್ತು..!
ಜನರೆಲ್ಲ ಬಾಯಿಗೆ ಬಂದಂತೆ ಮತ್ತೆ ಆಡಿಕೊಳ್ಳುತ್ತಿದ್ದಾರೆ...
ಜಂಬೆ ಗಂಗಕ್ಕ.. ಆಗ ನಿಜ ಹೇಳಿರ ಬಹುದಾ??
ನನಗಂತೂ ಏನೂ ತೋಚುತ್ತಿಲ್ಲ... "



ಇದೇನಪ್ಪಾ ಎಲ್ಲವೂ ಸರಿಹೋಯ್ತು ಅಂದುಕೊಳ್ಳುವಷ್ಟರಲ್ಲಿ..
ಇದೊಳ್ಳೆ ಫಜೀತಿಯಾಯ್ತಲ್ಲ.. !


ಊರಿಗೆ ಹೋಗಬೇಕಾಯಿತಲ್ಲ... !
ಜಂಬೆ ಗಂಗಕ್ಕಳ ಮಾತು ನಿಜವಾಗಿರ ಬಹುದಾ?...

ನಾವು ಮೋಸ ಹೋಗಿಬಿಟ್ಟೆವಾ?...

Wednesday, July 14, 2010

ಆ... ಭಗವಂತನ ಹಣೆಯಲ್ಲಿ ...ದೇವರು ಬರೆದ ಹಾಗೆ ಆಗ್ತದೆ...!!

part 1


ಈ ನಡುವೆ ಊರಿಗೆ ಹೋದಾಗಲೆಲ್ಲ ಶಾರಿಯ ಮನೆಗೆ ಹೋಗುವದು ರೂಢಿ..

ಕಳೆದ ವರ್ಷವೂ ಹೋಗಿದ್ದೆ..


"ನೋಡು ಪ್ರಕಾಶು.. ನಾಳೆ ನನ್ನ ಮಗಳಿಗೆ "ಗಂಡು" ನೋಡಲಿಕ್ಕೆ ಬರ್ತಾರೆ..
ನೀನೂ ಇದ್ದು ಬಿಡು ..
ನಿನ್ನ ಈ ಭಾರಿ ಗಾತ್ರದ.. ಶರೀರತೂಕ ಇದ್ದರೆ ...
ನಮಗೂ ಮಾತುಕತೆಗೆ ಅನುಕೂಲ.. ಮಾರಾಯಾ   !!
ದೊಡ್ಡ ಮನುಷ್ಯ ಬಂದಿದ್ದಾರೆ ಅಂದುಕೊಳ್ಳುತ್ತಾರೆ..
ಇದ್ದು ಬಿಡು ಪ್ರಕಾಶು.."


ಅನ್ನುತ್ತ ಗಣಪ್ತಿ ಭಾವನ ಕಡೆ ನೋಡಿದಳು..


ಗಣಪ್ತಿ ಭಾವ ಬಾಯಿತುಂಬಾ ಎಲೆ ಅಡಿಕೆ ಹಾಕಿಕೊಂಡು.."ನೀನು ಇದ್ದು ಬಿಡು" ಎನ್ನುವ ಸನ್ನೆ ಮಾಡಿದರು..


ಶಾರಿಯ ಮಾತಿಗೆ ಇಲ್ಲವೆನ್ನಲು ನನ್ನ ಬಳಿ ಸಾಧ್ಯವೇ ಇಲ್ಲ.


ಸರಿ..


ಮರುದಿನ ನಾನೂ ಸಂಭ್ರಮದಿಂದ .., ಕುತೂಹಲದಿಂದ ತಯಾರಾದೆ..
ಸುಮಾರು ಹತ್ತುಗಂಟೆಯ ವೇಳೆಗೆ ಗಂಡಿನವರು ಬಂದರು...


ಹುಡುಗ ಬಹಳ ಚಂದವಾಗಿದ್ದ...
ಹಣೆಗೆ ಕುಂಕುಮ.. ಬಿಳಿಲುಂಗಿ..ಬಿಳಿ ಶರಟು..
ತುಂಬ ಲಕ್ಷಣವಾಗಿದ್ದ..


"ಈ ಹುಡುಗ ನಮ್ಮ ಹುಡುಗಿಯನ್ನು ಒಪ್ಪ ಬಹುದಾ...?"


ನಮ್ಮ ಶಾರಿಯ ಹುಡುಗಿ ಸ್ವಲ್ಪ ಕಪ್ಪು..
ನಮ್ಮ ಕಣ್ಣಿಗೆ ನಮ್ಮ ಮಕ್ಕಳು ಚಂದವಾಗಿ ಕಂಡರೂ..
ಲೋಕನೀತಿಯ ಸತ್ಯದಲ್ಲಿ.. ಹುಡುಗನಿಗೆ ಸರಿಯಾದ ಜೋಡಿಯಲ್ಲ ಎಂದು ಎನಿಸಿತು....


ಆಶ್ಚರ್ಯವೆಂದರೆ..
ಹುಡುಗನ ಕಡೆಯವರು ತಮ್ಮ ಒಪ್ಪಿಗೆಯನ್ನು ಸೂಚಿಸಿ..
ಅವರೂ ಸಂತೋಷದಿಂದ ಹೊರಟು ಬಿಟ್ಟರು..!


ಶಾರಿ.. ಗಣಪ್ತಿಭಾವ.. ನಮಗೆಲ್ಲ ಬಹಳ ಸಂತೋಷವಾಯಿತು...!


"ಇದು ಪುಟ್ಟಿಯ ಯೋಗ ಶಾರಿ..
ಬಹಳ ಸುಂದರ.. ಹುಡುಗ..
ಸುಸಂಕೃತನ ಹಾಗೆ ಕಾಣುತ್ತಾನೆ.... ಬಲು ಬೇಗ  ವಾಲಗ ಊದಿಸಿ  ಬಿಡು...
ಮದುವೆ ಮುಗಿಸಿ ಬೆಂಗಳೂರಿಗೆ ಹೋಗಿಬಿಡುತ್ತೇನೆ...."
ಎಲ್ಲರಿಗೂ  ಸಂತೋಷವಾಗಿತ್ತು...
ನಮ್ಮ ಕಣ್ಣೆದುರಿಗೆ ಬೆಳೆದ ಹುಡುಗಿಯ ಮದುವೆ...!!
ಒಳ್ಳೆಯ ಸಂಬಂಧ  ಕೂಡಿ ಬಂದಿದೆ  !!


ನಾನೂ ಸಹ ಖುಷಿಯಿಂದ ಮನೆಗೆ ಬಂದೆ..


ಒಂದೆರಡುದಿನಗಳಲ್ಲಿ ನಿಶ್ಚಿತಾರ್ಥವೂ ಆಗಿ ಹೋಯಿತು...!
ಮುಂದಿನವಾರವೇ ಮದುವೆ... !


ಒಂದು ದಿನ ಶಾರಿಯ ಫೋನ್.. !


"ಪ್ರಕಾಶು ಒಂದು ದೊಡ್ಡ ಸಮಸ್ಯೆ ಎದುರಾಗಿದೆ..!
ನೀನೇ ಬಂದು ನಿವಾರಿಸ ಬೇಕು..."


"ಏನಾಯ್ತು,,??"


"ಇವತ್ತು ಬೆಳಗಿನಿಂದ ಒಂದೇ ಸವನೆ ಫೋನ್ ಬರ್ತಿದೆ...
ಮದುವೆ ಗಂಡು "ಗಂಡಸೇ.. ಅಲ್ಲ..." .
ನಿಮ್ಮ ಮಗಳ ಜೀವನ ಹಾಳು ಮಾಡ ಬೇಡಿ... ಅಂತ..
ನನಗಂತೂ ತಲೆ ಕೆಟ್ಟು ಹೋಗಿದೆ.. ಮದುವೆಯ ಆಮಂತ್ರಣ ಪತ್ರಿಕೆ ಕೂಡ ಹಂಚುತ್ತಿದ್ದೇವೆ..
ಏನು ಮಾಡೋಣ ಮಾರಾಯಾ...?"


ನನಗೆ  ಆಶ್ಚರ್ಯವಾಯಿತು...ಆತಂಕವೂ  ಆಯಿತು  !


"ಯಾರು ಫೋನ್ ಮಾಡ್ತಿರೋದು...? ಪರಿಚಯದವರಾ ?"


"ಹೌದು ಪ್ರಕಾಶು..!
ಜಂಬೆಮನೆ ಗಂಗಕ್ಕ... ಫೋನು ಮಾಡಿದ್ದು..."


"ನನಗೆ ಅವಳ ಫೋನ್ ನಂಬರು ಕೊಡು.."
ನಾನು ಅವಳ ಫೋನ್ ನಂಬರ್ ತೆಗೆದುಕೊಂಡೆ..


ನನಗೆ ಜಂಬೆ ಮನೆ ಗಂಗಕ್ಕ ಪರಿಚಯ ಇದೆ..
ಸ್ವಲ್ಪ ಮಾತು ಜಾಸ್ತಿ... ಗಯ್ಯಾಳಿ..


ಗಂಗಕ್ಕನಿಗೆ ಫೋನ್ ಮಾಡಿದೆ..


" ಅಯ್ಯೋ.. ಪ್ರಕಾಶು... !
ನಾನು ಯಾಕೆ ಸುಳ್ಳು ಹೇಳಲಿ..? !!...
ಆ ಹುಡುಗನನ್ನು ನಾನು ಎತ್ತಿ ಆಡಿಸಿ ಬೆಳಸಿದ್ದೇನೆ...
ನಾನು ಕಣ್ಣಾರೆ ನೋಡಿದ್ದೇನೆ....!.
ಹುಡುಗನಿಗೆ  " ಅದೇ ",,,. ಇಲ್ಲ..  ಮಾರಾಯಾ..!!...
ನಿಮ್ಮ ಹುಡುಗಿಯ ಬಾಳು ಹಾಳು ಮಾಡಬೇಡಿ..."


ಈಗ ನನಗೂ... ತಲೆ ಕೆಟ್ಟು ಹೋಯಿತು....
ಮದುವೆ ಇನ್ನು ಒಂದುವಾರ ಇದೆ... ಈಗ ಈ ಸಮಸ್ಯೆ.. !
ಹಗುರವಾಗಿ ತೆಗೆದುಕೊಳ್ಳವ ಹಾಗೆಯೇ ಇಲ್ಲ....

ಇದು.. ಹುಡುಗಿಯ  ಬದುಕಿನ  ಪ್ರಶ್ನೆ.....!!

ನನ್ನ ಚಿಕ್ಕಪ್ಪನಿಗೆ ಫೋನ್ ಮಾಡಿದೆ...
" ಚಿಕ್ಕಪ್ಪ...
ಈ ಹುಡುಗನ ಬಗೆಗೆ ಈ ಥರಹದ ಅಪವಾದ ಬಂದಿದೆ...
ಸ್ವಲ್ಪ ಪೂರ್ವಾಪರ ವಿಚಾರಿಸ ಬೇಕಿತ್ತು..."


ಚಿಕ್ಕಪ್ಪನೂ ನಾಲ್ಕಾರು ಜನರನ್ನು ವಿಚಾರಿಸಿದ...

"ಹುಡುಗ ಒಳ್ಳೆಯ ಸ್ವಭಾವದವನು..
ಇಂಥಹ ಸಮಸ್ಯೆ ಇರಲಿಕ್ಕಿಲ್ಲ..!
ಹುಡುಗನ ಕಡೆಯವರು ಇಂಥಹ ಸುಳ್ಳು ಹೇಳಿ ಮದುವೆ ಮಾಡುವಂತಿಲ್ಲ..
ಇದು ಅಪರಾಧ..
ಒಂದು  ಪಂಚಾಯತಿ ಸಭೆ  ನಡೆಸಿದರೆ  ಉತ್ತಮ.."
ಅನ್ನುವ ಅಭಿಪ್ರಾಯ ಕೊಟ್ಟರು...


ಈ ಮಧ್ಯ ಶಾರಿಗೆ ಮತ್ತೆ ಬೇರೆ .. ಬೇರೆ ಫೋನ್ ಕಾಲ್ ಬಂದಿತು...
"ಹುಡುಗ ಗಂಡಸೇ.. ಅಲ್ಲ...
ಈ.. ಮೊದಲು ಮೂರು ಹೆಣ್ಣು ಮಕ್ಕಳು ಈ ಸಂಬಂಧ ಬೇಡವೆಂದಿದ್ದಾರೆ... !!"

ಈ ಥರಹ ಫೋನ್ ಮಾಡುವವರೆಲ್ಲರೂ  ನಮಗೆ ಪರಿಚಯದವರು ..  !!!

ನಮಗೆಲ್ಲ ತಲೆ ಕೆಟ್ಟು ಹೋಯಿತು.....

ಬಹಳ ವಿಚಿತ್ರ ಸನ್ನಿವೇಶ..!!.

ಹುಡುಗನಿಗೆ ಈ ವಿಷಯ ತಿಳಿಸುವದು ಹೇಗೆ..  ?? 
ಮುಂದೆ ಏನು ಮಾಡಬೇಕು..  ??

ಹೇಗೋ ಮಾಡಿ..ಹುಡುಗನ ಕಡೆಯವರಿಗೂ ಈ ಸಮಸ್ಯೆ ತಿಳಿಸಿದೆವು....
ಹುಡುಗನ ಕಡೆಯಿಂದ ಫೋನ್ ಬಂತು...


" ನನಗೆ ಇಂಥಹ ಸಮಸ್ಯೆಯಿಲ್ಲ...
ನೀವು ನನ್ನನ್ನು ನಂಬಬಹುದು..."

"ನೋಡಿ...
ಒಂದು ಪಂಚಾಯತಿ ಸಭೆ ನಡೆಸೋಣ... ಅಲ್ಲಿಯೇ ನಿರ್ಧಾರವಾಗಲಿ...
ನಿಮ್ಮ ಕಡೆಯ ಹಿರಿಯರೂ ಬರಲಿ...
ನಾವೂ ಬರುತ್ತೇವೆ..."

ಮದುವೆ ಹುಡುಗನಿಗೆ ಕೋಪ ಬಂತು..
"ಇದರಿಂದ  ನನ್ನ  ಮರ್ಯಾದೆ ಹೋಗುತ್ತದೆ..
ಇದಕ್ಕೆ ನಾನು ಒಪ್ಪುವದಿಲ್ಲ.. "

"ನಾವು ಹೆಣ್ಣು ಹೆತ್ತವರು..
ನಮ್ಮ ಕಷ್ಟವನ್ನು  ಸ್ವಲ್ಪ ಅರ್ಥ ಮಾಡಿಕೊಳ್ಳಿ...
ನಿಮಗೆ ಈಗಾಗಲೆ ಮೂರು ಮದುವೆಯ ಮಾತುಕತೆ ಮುರಿದು ಬಿದ್ದದ್ದು ನಮಗೆ ಗೊತ್ತಿದೆ...
ನಾವು ನಿಮಗೆ ಆಗುವ ಅವಮಾನ ತಪ್ಪಿಸಲು ಈ ಪಂಚಾಯತಿ ಸಭೆ ನಡೆಸಲು ಹೇಳಿದ್ದು.
ಬೇರೆ ಯಾವುದೇ ದುರುದ್ದೇಶವಿಲ್ಲ..
ನಮ್ಮ ಸಂಬಂಧವೂ ತಪ್ಪಿದರೆ ನಿಮಗೇ.. ಅವಮಾನ..."

ಈಗ  ಹುಡುಗ ಪಂಚಾಯತಿ ಸಭೆಗೆ ಒಪ್ಪಿದ....

ಶಾರಿಗೂ ಬಹಳ ಆತಂಕ..  !

"ಇಲ್ಲಿ  ಹುಡುಗನಿಗೂ ಅವಮಾನವಾಗಬಾರದು...
ನಮಗೂ ಮೋಸವಾಗ ಬಾರದು...
ಈ ಮದುವೆ ತಪ್ಪಿ ಹೋದರೂ  ಕಷ್ಟ...
ಏನಾಗ ಬಹುದು  ಪ್ರಕಾಶು...?"

"ಶಾರಿ... ಏನೂ ಭಯ ಪಡಬೇಡ...
ಪಂಚಾಯತಿ ಸಭೆಯಲ್ಲಿ ಎಲ್ಲವೂ ನಿರ್ಣಯವಾಗುತ್ತದೆ..."

ಶಾರಿಗೆ ಸಮಾಧಾನವಾಗಲಿಲ್ಲ...ಬಹಳ  ಬೇಸರವೂ ಆಗಿತ್ತು...

" ಪ್ರಕಾಶು..
ನನ್ನ ಪುಟ್ಟಿ  ಬಹಳ ಮುಗ್ಧೆ ಕಣೋ...
ಇದೆಲ್ಲ ಏನಾಗ ಬಹುದು  ??  
ಇದು ಈಗ  ನಮ್ಮ  ಕೈ ಮೀರಿದೆ...
ಏನಾಗುತ್ತದೋ ಆಗಲಿ ಬಿಡು... ದೇವರಿದ್ದಾನೆ...!
ಆ... ಭಗವಂತನ ಹಣೆಯಲ್ಲಿ ... ದೇವರು ಬರೆದ ಹಾಗೆ ಆಗ್ತದೆ..  !!

ಮುಂದೆ ಏನಾಗ ಬಹುದು..  ??  !!
ಎಲ್ಲರಿಗೂ  ಆತಂಕ ಶುರುವಾಯಿತು....




( ಇದು ಒಂದು ಸತ್ಯ ಘಟನೆ.. ...)


ಶಾರಿಯ ಪರಿಚಯಕ್ಕಾಗಿ  ಇಲ್ಲಿ ಕ್ಲಿಕ್ಕಿಸಿ...
http://ittigecement.blogspot.com/2009/05/blog-post_23.html











Sunday, July 4, 2010

ಕದ..

ಹಾಕದ..
ತೆಗಿಯದ..
ಕದ...
ಯಾಕದ?
ಯಾಕಂದ್ರ "ರಜಾ ಅದ."..

ಗೋಡೆ  ಕಟಗೊಂಡವರಿಗೆ... ಕದದ್ದೇ.. ಕಷ್ಟಅದ....

ತೆಗದ್ರ ...
ಗಾಳಿ ಧೂಳು ಒಳಗೆ ಬರ್ತದ..
ಹಾಕಿದ್ರೆ ...
ಉಸಿರು  ಕಟ್ಟತದ..

ಬಾಗಿಲು ಹಾಕಿ..
ಕಿಟಕಿ ತೆರೆದರ ಹೆಂಗಿರ್ತದ?

ಪರದೆ ಒಳಗೆ ಕುಳಿತವರು  ಸೊಳ್ಳೆ ಎಣಿಸಿದಂಗಿರ್ತದ...
ಇಲ್ಲಂದ್ರ...
ಮಗಳಿಗೆ  ಕಾಲೇಜ್ ಬಿಡಿಸಿ ಮೊಬೈಲ್ ಕೊಡಿಸಿದಂಗಿರ್ತದ....

ಗೋಡೆ ಕಟಗೊಂಡವರಿಗೆ... ಕದದ್ದೇ.. ಕಷ್ಟಅದ....


ಮಗನ ರೂಮು ಬಾಗಿಲು ಹಾಕ್ಯದ..
ಅಂವ ಇಂಟರ್ ನೆಟ್ ನಲ್ಲಿದಾನ ..
ಮಗಳೂ ...
ರೂಮಿನ ಬಾಗಿಲು ಮುಚ್ಯಾಳ...
ಅವಳ ಕೈಯಲ್ಲಿ  ಮೊಬೈಲ್  ಅದ..

ಗೋಡೆ ಕಟಗೊಂಡವರಿಗೆ... ಕದದ್ದೇ.. ಕಷ್ಟಅದ.....

ಯಜಮಾನ ಮನೆ ಬಾಗಿಲು ಬಡಿತಿದ್ದಾನ...
ಆದರ...
ಅಮ್ಮಾವ್ರಿಗೆ ಅದು ಕೇಳಂಗಿಲ್ಲ...
ಅವರ ಕೈಯಲ್ಲಿ  "ರಿಮೋಟ್ "  ಅದ....

ಗೋಡೆ  ಕಟಗೊಂಡವರಿಗೆ  ಕದದ್ದೇ... ಕಷ್ಟ ಅದ..


ತೆಗದ್ರ..
ಗಾಳಿ ಧೂಳು ಒಳಗೆ ಬರ್ತದ...
ಮುಚ್ಚಿದರ ..
ಉಸಿರುಗಟ್ಟತದ ....







( ಗೆಳೆಯರೇ...
ಅಪಾರ ಪ್ರತಿಭೆಯಿದ್ದು...
"ಕದ" ಮುಚ್ಚಿದಂಗೆ ಇದ್ದು...
ಪ್ರತಿಭೆಗೊಂದು  ಸರಿಯಾದ ವೇದಿಕೆ ಸಿಗದ
ನನ್ನ ಜೀವದ ಗೆಳೆಯ... "ದಿವಾಕರನ"  ರಚನೆ ಇದು...)


ದಿವಾಕರನ  ರಚನೆ ...
 "ಹ್ಯಾಂಗದ?"   ?"

(ಮಿತ್ರರೇ..
ಇನ್ನೊಬ್ಬ ಬ್ಲಾಗ್ ಮಿತ್ರ  " ಅನಿಲ್ ಬೆಡಗೆ" ಪ್ರೀತಿಯಿಂದ...
ನನ್ನ ಬಗೆಗೆ ಕೆಲವು "ಜೋಕ್ " ಬರೆದಿದ್ದಾರೆ...
ನೋಡಿ ನಕ್ಕುಬಿಡಿ...
ವಿ.ಸೂ.  " ಗಂಭಿರವಾಗಿ "  ತೆಗೆದುಕೊಳ್ಳ ಬೇಡಿ... ಹ್ಹಾ..ಹ್ಹಾ... !

http://pennupaper.blogspot.com/2010/07/blog-post.html