Friday, June 26, 2009

ಕಣ್ಣು.. ಕಣ್ಣು ಒಂದಾಯಿತು..! .ನನ್ನಾ... ನಿನ್ನಾ ಮನಸೇರಿತು....!!

part 2


"ಪ್ರಕಾಶು ಒಂದು ಕವನ ಬರೆದು ಕೊಡೋ..."

ನನಗೆ ಪಿಕಲಾಟಕ್ಕೆ ಶುರುವಾಯಿತು....

"ಎಂತುದು ಮಾರಾಯಾ...?
ಏನು ವಿಷಯ..? ಏನು ಕಥೆ..?

ನಾನೇನೂ ಕವಿ ಅಲ್ಲ ಮಾರಾಯಾ..."

ನಾಗು ಹೇಳಿದ...
"ಈ ಕವನ, ಕವಿತೆ .. ಬರಿಲಿಕ್ಕೆ ಕವಿಗಳು ಯಾಕೋ...??
ಏನೋ...ಒಂದಷ್ಟು .. ಅರ್ಥವಾಗದ ಶಬ್ಧ ಹಾಕಿ ..
ಗೊಂದಲ ಮಾಡಿದರೆ ಕವನ ಆಗುತ್ತದಪ್ಪಾ..
ಅರ್ಥ ಆಗದಿದ್ದರೂ ಪರವಾಗಿಲ್ಲ ...
ಅದಕ್ಕೇನು ಪ್ರಾಸ ಬೇಕಾ...?
ವ್ಯಾಕರಣ ಬೇಕಾ...?
ಕವಿತೆ ಅಂದ್ರೆ ಹೇಗಿರ ಬೇಕು ಗೊತ್ತಾ...?
ಡಾಕ್ಟರ್ ಮೆಡಿಸಿನ್ ಚೀಟಿ ತರಹ ಇರಬೇಕು..
ನಮ್ಮಂಥವರಿಗೆ ಅರ್ಥ ಆದಹಾಗೆ ಅನಿಸಬೇಕು..
ಅರ್ಥ ಆಗಿರ ಬಾರದು...
ಆದರೆ... ಅರ್ಥ ಆಗೊರಿಗೆ ಅರ್ಥ ಆದ್ರೆ ಸಾಕು...
ನೀನು ಬರೆಯಪಾ......"

"... ಯಾಕೆ..?? "

"ಅದೆಲ್ಲ ಕೇಳ ಬೇಡ ...
ಪ್ರತಿಯೊಂದೂ ಕವಿತೆಗೂ ...

ಸಿದ್ದಾಪುರದ ನಿರ್ಮಲಾ ಹೊಟೆಲನಲ್ಲಿ ಮಸಾಲೆ ದೋಸೆ,..
"ಐನ್ ಕೈ ಜ್ಯೂಸ್" ನಲ್ಲಿ ಜ್ಯೂಸ್...
ಲಕ್ಷ್ಮೀ, ಮತ್ತು ಸೆಂಟ್ರಲ್ ಟಾಕೀಸ್ ನಲ್ಲಿ ಸಿನೇಮಾಗಳು..
ನೀನು ಬರಿ ಮಾರಾಯಾ..."

ನಾನು ಆಯಿತೆಂದೆ...
ಒಂದು ಕವನ ಗೀಚಿದೆ....

ಅವನಿಗೆ ಕೊಟ್ಟೆ...

"ನನ್ನ ಬಿಳಿ ಹಲ್ಲಿನ...
ಕ್ಲೋಸ್ ಅಪ್ ನಗುವಿನ...
ಹಿಂದೆ ..
ಕೊಳೆತು ನಾರಿ...
ಹೊಮ್ಮುತ್ತಿರುವ...
ಹೊಲಸು...
...........
ನನಗಷ್ಟೇ.... ಗೊತ್ತು...!!!.."


ಕವನ ಓದಿ ನಾಗು ದಂಗಾಗಿ ಹೋದ ...!!

" ಏನೋ ಇದು...???.. !!
ಕವಿತೇನಾ ಇದು...?

ಹೋಗ್ಲಿ ಬಿಡು... ಇದು ಚೆನ್ನಾಗಿದೆ... !
ಇಂಥದ್ದೇ ಬರಿ...!
ಇನ್ನೂ ದೊಡ್ಡದಾಗಿ ಬರಿ ಮಾರಾಯಾ..."


ದಿನಾಲೂ ನಾನು ಕವನ ಬರೆಯೋದು...
ಈತ ನನಗೆ ಮಸಾಲೆ ದೋಸೆ ,..
ಸಿನೇಮಾ ತೋರಿಸೋದು ಶುರುವಾಯಿತು...

ಈ ನಾಗು ದಿನಾಲು ನನಗೆ ವಿಷಯ ಕೊಡುತ್ತಿದ್ದ....
'ಇವತ್ತು " ಭಾರತದ ಜನಸಂಖ್ಯೆ " ಬಗೆಗೆ ಬರಿ...!!.."

" ಇವತ್ತು " ಕುಟುಂಬ ಯೋಜನೆ " ಬಗೆಗೆ ಬರಿ...!! "

ಇಂದು "ಇಂದಿರಾ ಗಾಂಧಿ ಮತ್ತು ರಾಜಕುಮರ್ ಮೂಗಿನ " ಬಗೆಗೆ ಬರಿ"

ಇಂದು " ಮುರಾರ್ಜಿ ದೇಸಾಯಿಯವರ ಸ್ವಮೂತ್ರ ಪಾನದ " .. ಬರಿ.."

ಕೊಡುತ್ತಿರುವದು ಎಲ್ಲಾ ಎಡವಟ್ಟು ಐಡಿಯಾಗಳೇ...!

ನನಗೆ ತಲೆ ಕೆಟ್ಟು ಹೋಯಿತು...!!

"ಲೋ ಇವತ್ತು ಇದೆಲ್ಲಾ ಯಾಕೆ ಅಂತ ಹೇಳೋವರೆಗೂ..
ಕವನ ಬರೆದು ಕೊಡೋದಿಲ್ಲ..."

ಪಟ್ಟು ಹಿಡಿದು ಕುಳಿತೆ...

"ಪ್ರಕಾಶು...
ನಮ್ಮ "ಪೆಟ್ಟಿಗೆ ಗಪ್ಪತಿ" ನನಗೊಂದು ಕಾಂಟ್ರಕ್ಟು ಕೊಟ್ಟಿದ್ದಾನೆ..!!"


" ಏನು..?"

" ಅವನೊಂದು ಹುಡುಗಿ ಇಷ್ಟ ಪಟ್ಟಿದ್ದಾನೆ......
ಅವಳು ಇವನನ್ನು ನೋಡಿ ಇಷ್ಟ ಪಡುವಂತೆ ಮಾಡಬೇಕು...
ಅದು ಕಾಂಟ್ರಕ್ಟು...
ಅವಳು ಇವನನ್ನು ಇಷ್ಟ ಪಡುವಂತೆ ನಾನು ಪತ್ರ ಬರೆದು ಕೊಡ ಬೇಕು.."


" ಇಂಥಾ...ಕವಿತೆ ಕೊಟ್ರೆ ...
ಅವಳು ಎಲ್ಲಿ ಇವನನ್ನು ಇಷ್ಟ ಪಡ್ತಾಳೋ...?"


" ಅದನ್ನು ಕಟ್ಟಿಕೊಂಡು ನಮಗೇನು..??
ಇದು ಎಷ್ಟು ದಿನ ಎಳೆಯುತ್ತೋ...ಅಷ್ಟು ದಿನ ನಮಗೆ ಲಾಭ...!
ಅಷ್ಟು ದಿನ ನಮಗೆ ಸಿನೆಮಾ.., ಮಸಾಲೆ ದೋಸೆ..
ಇನ್ನೋಂದು ವಿಷಯ ...
ಇವನೂ, ಅವಳೂ ... ಇನ್ನೂ ..ಮಾತಾಡ್ತಾ ಇಲ್ಲವಂತೆ..

ಎಲ್ಲ ಕಣ್ಣು ಸನ್ನೆ ಬಾಯಿಸನ್ನೆಯಂತೆ...
ಇವನು ಕೊಟ್ಟ ಪತ್ರಕ್ಕೆ ...
ಸಧ್ಯಕ್ಕೆ ಒಳ್ಳೆಯ ಮುಗುಳ್ನಗೆ ಬಂದರೆ ಸಾಕಂತೆ..!!.
ನೀನು ಬರೆಯೋ ಕವನಕ್ಕೆ ಅವಳು ನಕ್ಕರೆ ಸಾಕು ಕಣೋ..."


" ಯಾರು ಆ ಹುಡುಗಿ...?"

" ಅದನ್ನು ಮಾತ್ರ ನಾನು ಕೇಳ ಬಾರದಂತೆ..."

" ಈ...ಥರ " ಮೂರಾರ್ಜಿಮೂತ್ರ ಪಾನ,..
ರಾಜಕುಮಾರ್ ಮೂಗು.." ಅಂತೆಲ್ಲ ಬರೆದಿದ್ದನ್ನು ಆತ ನೋಡಲ್ವೇನೋ..?"

" ಪೆಟ್ಟಿಗೆ ಗಪ್ಪತಿ ಹತ್ತಿರ ಹೋಗಿ...
ಹುಡುಗಿ ಯಾರೆಂದು ನಾನು ಕೇಳ ಬಾರದು..

ಹಾಗೆ ಆತ ...
ನಾನು ಬರ್ದು ಕೊಟ್ಟ ಪತ್ರ ಒಡೆದು ನೋಡ ಬಾರದು..

ಇದು ಕಂಡೀಷನ್, ಕರಾರು ಆಗಿದೆ..
ನಮಗೇನು ಆಗಬೇಕಿದೆ..?
ನೀನು ನಾನು ಹೇಳಿದ ಹಾಗೆ ಬರಿ..."


"ನಿನಗೇ ಇಂಥವರು ಸಿಗೋದು ಸಾಕು ಮಾರಾಯಾ..."

ಅಂದಿನಿಂದ ಕವನಗಳು, ಕವಿತೆಗಳು....
ಜೋರಾಗಿ.. ಬರೆದಿದ್ದೇ... ಬರೆದದ್ದು...!!


ಪೆಟ್ಟಿಗೆ ಗಪ್ಪತಿ ಬಹಳ ಖುಷಿಯಲ್ಲಿದ್ದ...
ತನ್ನಷ್ಟಕ್ಕೆ ಹಾಡುತ್ತಿದ್ದ...
ನಮ್ಮ ಸಂಗಡ ಮಾತಾಡಲು ಬರುತ್ತಿರಲಿಲ್ಲ...
ಒಬ್ಬಂಟಿಯಾಗಿ...
ರೂಮಿನಲ್ಲಿ ಪ್ರೇಮಗೀತೆಗಳನ್ನು ಷಿಳ್ಳೆ ಹಾಕುತ್ತ.. ಹಾಡುತ್ತಿದ್ದ...

"ಕಣ್ಣು... ಕಣ್ಣು ಒಂದಾಯಿತು....
ನನ್ನಾ... ನಿನ್ನಾ... ಮನಸೆರಿತು..."

ಎಲಾ ಇವನಾ...?

ಈತ ಹುಡುಗಿ ಹತ್ತಿರ ಹೇಗೆ ಭೇಟಿಯಾಗ್ತಾನೆ..?
ಸಂಕ್ಷಿಪ್ತವಾಗಿ ಮಾತನಾಡಲೇ ಬರದ ಈತನಿಗೆ..
ಯಾವ ಹುಡುಗಿ ನೋಡುತ್ತಿರ ಬಹುದು...?

ಇವನ ಘಂಟೆಗಟ್ಟಲೆ ಪುರಾಣದ ಕೊರೆತ ಹೇಗೆ ಸಹಿಸಿ ಕೊಳ್ತಾಳೆ..?

ಸಂಕೋಚ ಸ್ವಭಾವದ ಆತ ಹೇಗೆ , ಎಲ್ಲಿ ..?
ಪತ್ರ ಕೊಡುತ್ತಿದ್ದ ಅನ್ನೋದು ಯಕ್ಷ ಪ್ರಶ್ನೆ ಆಯಿತು...!


ಪ್ರೇಮ ಮತ್ತು ಕೆಮ್ಮು ಮುಚ್ಚಿಡಲಿಕ್ಕೆ, ಬಚ್ಚಿಡಲಿಕ್ಕೆ ಅಗುವದಿಲ್ಲವಂತೆ....

ನನ್ನ ಸಂಗಡ ಸೀತಾಪತಿ, ಉಮಾಪತಿ ಸೇರಿಕೊಂಡರು...

"ತೆಂಗಿನಕಾಯಿತಲೆ ಸೀತಾಪತಿ" ಇದರಲ್ಲಿ ಬಹಳ ಜೋರು...

ಆತ ಕಂಡು ಹಿಡಿದೇ ಬಿಟ್ಟ...!

ಕ್ಲಾಸಿನಲ್ಲಿ ಪೆಟ್ಟಿಗೆ ಗಪ್ಪತಿ ನೋಟ್ ಬುಕ್ ಎಲ್ಲ ಸಂಗ್ರಹ ಮಾಡಿ..
ಸ್ಟಾಫ್ ರೂಮಿನಲ್ಲಿ ಇಟ್ಟು ಬರುತ್ತಿದ್ದ...

ಹಾಗೆಯೇ ಅದನ್ನು ಲೆಕ್ಚರರ್ ನೋಡಿ ಆದಮೇಲೆ....
ಸ್ಟಾಫ್ ರೂಮಿನಿಂದ ಕ್ಲಾಸಿಗೆ ತಂದಿಡುತ್ತಿದ್ದ...

ಅಲ್ಲಿ ..ಆ... ಹುಡುಗಿಯ ನೋಟ್ ಬುಕ್ಕಿನಲ್ಲಿ ..
ಈ ಪ್ರೇಮಪತ್ರ ಇಡುತ್ತಿದ್ದ....!


ಅಬ್ಭಾ...! ಎಂಥಹ ಸಂಪರ್ಕ ಮಾಧ್ಯಮ...!!!!

ಎಲ್ಲಾ ಸರಿ...
ಆ... ಹುಡುಗಿ ಯಾರು...?

ಒಂದುದಿನ ನಾವೆಲ್ಲ ಪೆಟ್ಟಿಗೆ ಗಪ್ಪತಿಯನ್ನೇ ನೋಡುತಿದ್ದೇವು......

ಪಾಠ ಕೇಳಿಸಿಕೊಳ್ಳಲಿಲ್ಲ....

ಸಾವಕಾಶವಾಗಿ ಪೆಟ್ಟಿಗೆ ಗಪ್ಪತಿಯ ಕಣ್ಣು...
ಹೆಣ್ಣುಮಕ್ಕಳ ಕಡೆಗೆ ತಿರುಗಿತು...!

ಕ್ಯಾಮರಾ ಥರಹ ಅಲ್ಲಿ ,ಇಲ್ಲಿ , ಹುಡುಕಿತು....
ಅವನ ಸಂಗಡ ನಮ್ಮ ಕಣ್ಣುಗಳು ಓಡಾಡಿತು....!
ಎಲ್ಲಕಡೆ ಓಡಾಡಿ ಒಂದು ಕಡೆ ನಿಂತಿತು....!

ನಾವೂ ಅದೇ ಕೋನದಲ್ಲಿ ನೋಡಿದೆವು...!!

ಅರೇ,,..!... ಹಾಂ...!!!!

"ಅವಳು ರಾಜಿ...!!!!"

ತನ್ನ ಕಣ್ಣಂಚಿನ ಮಿಂಚಲ್ಲೇ ಕೊಲ್ಲುವ ಹುಡುಗಿ...!!

ರಾಜಿ.. ಒಂದು ಮುಗುಳ್ನಗು ಪೆಟ್ಟಿಗೆ ಗಪ್ಪತಿಕಡೆ ಕೊಟ್ಟಳು....!!

ಅಬ್ಭಾ.... ಪೆಟ್ಟಿಗೆ ಗಪ್ಪತಿಯೇ...!!

ಭರ್ಜರಿ ಹುಲಿಯನ್ನೇ ಬೇಟೆಯಾಡಿದ್ದ....!

ಅಷ್ಟರಲ್ಲಿ ಕಾಲೇಜಿನ ಜವಾನ...
ಒಂದು ನೋಟಿಸನ್ನು ಲೆಕ್ಚರರಿಗೆ ಕೊಟ್ಟ..

ಅವರು ಅದನ್ನು ಜೋರಾಗಿ ಓದಿದರು....

" ನಾಡಿದ್ದು... ನಮ್ಮ ಕಾಲೇಜಿನಲ್ಲಿ.. ಎಲ್ಲ ಕ್ಲಾಸುಗಳಲ್ಲಿ..
ರಕ್ಷಾಬಂಧನ ಕಾರ್ಯಕ್ರಮವಿದೆ...
ಇದು ಕಡ್ಡಾಯ...
ತಪ್ಪಿಸಿಕೊಂಡವರಿಗೆ ದಂಡ ವಿಧಿಸಲಾಗುವದು...
ಬರದಿದ್ದವರು ಪಾಲಕರನ್ನು ಕರೆದು ಕೊಂಡು ವಿವರಣೆ ಕೊಡಬೇಕು..
ರಕ್ಷಾ ಬಂಧನ ನಮ್ಮ ಕಾಲೇಜಿನಿಂದ ಉಚಿತವಾಗಿ ಸಪ್ಲೈ ಮಾಡಲಾಗುತ್ತದೆ..
ನಾವೆಲ್ಲ ಸಹೋದರತೆ ಬಾಂಧವ್ಯವನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮ ಮಾಡೋಣ.."

ಎಲ್ಲರೂ ನಾಗುವಿನ ಕಡೆಗೆ ಮುಖಮಾಡಿದರು....

"ಕಾಪಾಡು ಮಾರಾಯಾ" ಎನ್ನುವಂತೆ...

ನಾಗು ದೀರ್ಘವಾಗಿ, ಗಹನವಾಗಿ ವಿಚಾರ ಮಡುತ್ತಿದ್ದ......

ಎಂಥ ಐಡಿಯಾ ಕೊಡ ಬಹುದು ಈತ...??
ನಮಗೂ ಕುತೂಹಲ ಜಾಸ್ತಿಯಾಯಿತು....!!(ದಯವಿಟ್ಟು ನಾನು ಬರೆದ.. "ಗಪ್ಪತಿ ಅನ್ನುವ ಅಡಪೊಟ್ರು " ಓದಿ....
http://ittigecement.blogspot.com/2009/03/blog-post_22.html

Saturday, June 20, 2009

" ಯಾರದ್ದೇ.. ದೇಹದ ಬಣ್ಣ.... ಅವರಿಷ್ಟವಲ್ಲ..."..

part ... 1


ರಾಜಿ ಎನ್ನುವ ಮಿಂಚು ...
ಇಡೀ ಕಾಲೇಜಿನಲ್ಲಿ ಸಂಚಲನ ಉಂಟು ಮಾಡಿ ಬಿಟ್ಟಿದ್ದಳು...
ಅವಳ ವಯ್ಯಾರ, ಬಿನ್ನಾಣ..
ಸೊಕ್ಕಿನ ನಡೆ...

ಕಪ್ಪಗಿದ್ದರೂ ಆಕರ್ಷಕ ಕಣ್ಣುಗಳು...!!

ಹುಡುಗರ ಒಂದು ನೋಟ ಅವಳ ಕಡೆಗೆ ಇರುತ್ತಿತ್ತು...

ಅವಳ ನೋಟ...
ಉಪ್ಪು.. ಹುಳಿ... ಮಸಾಲೆ ಹಾಕಿದ ಹಸಿಮೆಣಸಿನ ಕಾಯಿಯಂತೆ ಇತ್ತು....

ಅದು ಅವಳಿಗೂ ಗೊತ್ತಿತ್ತು...

ಒಮ್ಮೆ ನಮ್ಮ ಗುಂಪಿನ ಹುಡುಗ ಮಾತನಾಡಿಸಲು ಹೋಗಿ ಎಲ್ಲರೆದುರು
ಅವಳಿಂದ ಚೆನ್ನಾಗಿ ಉಗಿಸಿಕೊಂಡಿದ್ದ...

ಅವಳು ಹೇಗೆ ಉಗಿದಿದ್ದಳು ಎಂದರೆ...
ಹುಡುಗ ಅವಮಾನದಿಂದ... ನಾಲ್ಕು ದಿನ ಕಾಲೇಜಿಗೆ ಚಕ್ಕರ್ ಹಾಕಿಬಿಟ್ಟಿದ್ದ...
ಹುಡುಗರೆಲ್ಲ ವಯಕ್ತಿಕವಾಗಿ ಮನಸ್ಸಿಗೆ ಹಚ್ಚಿಕೊಂಡು ಬಿಟ್ಟಿದ್ದರು....

ಇದಕ್ಕೊಂದು ಪ್ರತಿಕಾರ ತೆಗೆದುಕೊಳ್ಳವ ಅಗತ್ಯ ಇತ್ತು...

ಸೇಡು ತೀರಿಸಿ ಕೊಳ್ಳಲೇ ಬೇಕಿತ್ತು....

ಹುಡುಗರೆಲ್ಲ ನಾಗುವಿನ ಮೊರೆ ಹೊಕ್ಕರು...
ನಾಗು ಒಂದುದಿನದ ಟೈಮ್ ತೆಗೆದು ಕೊಂಡ...

"ಪ್ರಕಾಶು .... ಒಂದು ಕವನ ಬರೆದು ಕೊಡು..."

ಎಂದು ಅದರ ರೂಪು ರೇಷೆಗಳನ್ನು ಕೊಟ್ಟ...
ಅವನ ರೀತಿಯಂತೆ ಕವನ ಬರೆದು ಕೊಟ್ಟೆ...

ಮರುದಿನ ಕಾಲೇಜಿನ ನೋಟಿಸ್ ಬೋರ್ಡಲ್ಲಿ ಉಗಿಸಿಕೊಂಡ ಹುಡುಗನ ಹೆಸರಲ್ಲಿ
ಒಂದು ಕವನ ಹಾಕಲಾಯಿತು...

ನಾಗು ಎಲ್ಲರನ್ನು ಕರೆದು ಹೇಳಿದ....

"ನೋಡ್ರೊ .. ಕನಿಷ್ಠ ..
ಐದು.. ಆರು.. ಹುಡುಗರಾದರೂ ನೋಟಿಸ್ ಬೋರ್ಡ್ ಮುಂದೆ ನಿಂತಿರಬೇಕು...
ಹೆಣ್ಣು ಮಕ್ಕಳು ಬಂದ ಕೂಡಲೇ..
ಆಸಕ್ತಿಯಿಂದ ಬೋರ್ಡ್ ನೋಡಿ..
ಓದಿ ನಗಬೇಕು.. ದೊಡ್ಡದಾಗಿ...
ಸಾಧ್ಯವಾದಷ್ಟು ಸಭ್ಯತೆಯಿಂದ.. ಜೋರಾಗಿ..."

ಹುಡುಗರು ಸರದಿಯಂತೆ ನೋಟಿಸ್ ಬೋರ್ಡ್ ಮುಂದೆ ನಿಂತು ನಗಲು ಶುರು ಮಾಡಿದರು...

ಎಲ್ಲ ಹೆಣ್ಣುಮಕ್ಕಳಿಗೂ ಆಶ್ಚರ್ಯ...!
ಉಗಿಸಿಕೊಂಡ ಹುಡುಗ ಕವನ ಬರೆದಿದ್ದಾನೆ..!
ಕೆಲವರು ಓದಿಕೊಂಡು ಹೋದರು...

ರಾಜಿಗೂ ಸುದ್ಧಿ ಮುಟ್ಟಿತು....!

ತನ್ನ ಗೆಳತಿಯರ ಸಂಗಡ ದೊಡ್ಡ ಗುಂಪಿನೊಂದಿಗೆ ಓದಲು ಬಂದಳು...

ಎಲ್ಲ ಗಂಡು ಮಕ್ಕಳು ನೋಟಿಸ್ ಬೋರ್ಡಿನ ಮುಂದೆ ಜಮಾಯಿಸಿದ್ದರು....

"ಪಕ್ಕಕ್ಕೆ ಬರ್ರೋ... ಓದುವವರು ಓದಿಕೊಳ್ಳಲಿ"

ಅಂತ ಉಗಿಸಿಕೊಂಡ ಹುಡುಗ ದೊಡ್ಡದಾಗಿ ಹೇಳಿದ...
ತನ್ನ ಕೈಯಲ್ಲಿದ್ದ ಕವನದ ಜೆರಾಕ್ಸ್ ಕಾಪಿಯನ್ನು ಎಲ್ಲರಿಗೂ ಹಂಚಿದ....

ಹೆಣ್ಣು ಮಕ್ಕಳೂ ತೆಗೆದು ಕೊಂಡರು...

ಹುಡುಗರ ನಗು ತಾರಕಕ್ಕೆ ಏರಿತ್ತು....

ರಾಜಿ ಅವಮಾನದಿಂದ...
ಉಕ್ಕಿಬಂದ ಅಳುವನ್ನು ನುಂಗುತ್ತಿದ್ದು ನಮಗೆಲ್ಲ ಕಾಣಿಸುತ್ತಿತ್ತು...

ಅವಳ ಅಳು ಮುಖವನ್ನು ನೋಡಿ ನಮಗೆಲ್ಲ ಒಂಥರಾ ಆಯಿತು...
ತಪ್ಪು ಮಾಡಿ ಬಿಟ್ಟೆವೇನೋ ಅನಿಸಿತು...

ಉಗಿಸಿಕೊಂಡವ ಖುಷಿಯಾಗಿದ್ದ....

ನಾವೆಲ್ಲ ಕ್ಲಾಸಿಗೆ ಹೋಗಿ ಕುಳಿತೆವು...

ರಾಜಿ ಸೀದಾ ಪ್ರಿನ್ಚಿಪಾಲರ ಬಳಿ ದೂರು ಕೊಟ್ಟಳು..
ನೋಟಿಸ್ ಬೋರ್ಡಿನ ಕವನ ಸ್ಟಾಫ್ ರೂಮಿಗೂ ತಲುಪಿತು.....

ನಮ್ಮನೆಲ್ಲ ಅಲ್ಲಿಗೆ ಕರೆಸಲಾಯಿತು..

ವಿಚಾರಣೆ ಶುರುವಾಯಿತು.... ಪ್ರಿನ್ಸಿಪಾಲರು ತುಂಬಾ ಗರಂ ಆಗಿದ್ದರು...

"ಯಾಕೆ ಈ ಹುಡುಗಿಯ ಬಗೆಗೆ ಕವನ ಬರೆದು ಬೋರ್ಡಿಗೆ ಬರೆದು ಹಾಕಿದ್ದು..?"

"ಸರ್.... ಅದೊಂದು ತಮಾಷೆ ಕವಿತೆ...
ಹೀಗೆ ಸುಮ್ಮನೆ ..
ಯಾರಿಗೂ ಉದ್ದೇಶಿಸಿ ಹಾಕಿಲ್ಲ..."

ರಾಜಿಯ ಸಪ್ಪೆ ಮೊರೆ ನೋಡಿ ಖೇದವೆನಿಸಿತು...
ಹೆಣ್ಣುಮಕ್ಕಳ ಅಳುಮೋರೆ, ಕಣ್ಣೀರಿಗೆ ಬಹಳ ಶಕ್ತಿ ಇದೆ...

"ಅದು ನನ್ನ ಕಪ್ಪು ಬಣ್ಣದ ಕುರಿತು ಹಾಕಿದ್ದು..
ಇಡೀ ಕಾಲೇಜೇ ಹೇಳ್ತಾ ಇದೆ...
ಅದರಲ್ಲೂ ನಾನು ಓದಲು ಹೋದಾಗ ...
ನನಗೆ ಅವಮಾನವಾಗುವಂತೆ ಜೋರಾಗಿ ನಗುತ್ತಿದ್ದರು.."

ನಾಗು ಪ್ರತಿ ಸವಾಲು ಹಾಕಿದ....
"ನಾವ್ಯಾಕೆ ನಿಮ್ಮ ಬಗ್ಗೆ ಬರೆಯಲಿ...?
ನಮಗೇನು ಹುಚ್ಚುನಾಯಿ ಕಚ್ಚಿದೆಯಾ...?
ಇಷ್ಟಕ್ಕೂ ನೀವು ನಮಗೇನೂ ಮಾಡಿಲ್ಲವಲ್ಲ...!"

" ಮತ್ತೆ ಗಂಡು ಮಕ್ಕಳೆಲ್ಲ ಗುಂಪು ಸೇರಿಸಿ ..
ನೋಟೀಸ್ ಬೋರ್ಡಿನ ಬಳಿ ನನ್ನನ್ನು ನೋಡಿ ನಕ್ಕಿದ್ದು ಯಾಕೆ..?"

"ಅದೇ ಹೇಳಿದೆವಲ್ಲ... ಅದು ತಮಾಷೆ ಕವನ...
ನಾವು ನಿಮ್ಮ ಬಗೆಗೆ ಯಾಕೆ ನಗಬೇಕು...?
ನೀವೇನೂ ಮಾಡಿಲ್ಲವಲ್ಲ...."

ನಾಗು ಪ್ರಿನ್ಸಿಪಾಲರಿಗೆ ಹೇಳಿದ......
"ಸರ್ ನಮ್ಮ ಕವನದಿಂದ ಯಾರಿಗಾದರೂ ಬೇಜಾರಾದಲ್ಲಿ ಅದಕ್ಕೆ ನಮ್ಮ ವಿಷಾದವಿದೆ...
ಯಾರಿಗೂ ನೋಯಿಸುವ ದ್ರಷ್ಟಿಯಿಂದ ಅದನ್ನು ಹಾಕಿದ್ದಲ್ಲ..."

ನಾಗುವಿನ ಲೆಕ್ಕಾಚಾರದ, ಬುದ್ಧಿವಂತಿಕೆಯ ಮಾತು ರಾಜಿಗೆ ಬಿಸಿ ತುಪ್ಪದಂತಾಯಿತು....
ಇತ್ತ ಪ್ರಿನ್ಸಿಪಾಲರಿಗೆ ತಲೆ ಕೆಟ್ಟು ಹೋಯಿತು...

"ಏನಮ್ಮ ಅದು ಅಶ್ಲೀಲ ಕವನವಾ...? ಕೆಟ್ಟ ಭಾಷೆಯಲ್ಲಿ ಬರೆದಿದ್ದಾರಾ..?"

"ಇಲ್ಲ... ಸ... ನನ್ನ ಕಪ್ಪು ಬಣ್ಣದ ಬಗ್ಗೆ ಹೀಯಾಳಿಸಿದ್ದಾರೆ.."

ನಾಗು ನೇರವಾಗಿ ಹೇಳಿದ....
"ಸರ್ ಅದರಲ್ಲಿ ಯಾರ ಹೆಸರೂ ಇಲ್ಲ...
ಸುಂದರವಾದ ಹಾಸ್ಯ ಕವನ.. ಅಷ್ಟೆ.."

ಈಗ ರಾಜಿ ಇಕ್ಕಟ್ಟಿಗೆ ಸಿಲುಕಿದಳು...
"ಸರ್... ನಾಲ್ಕು ದಿನಗಳ ಹಿಂದೆ... ಇವರಲ್ಲಿ ಒಬ್ಬ ಹುಡುಗನಿಗೆ ನಾನು ಚೆನ್ನಾಗಿ ಬಯ್ದಿದ್ದೆ...
ಅದಕ್ಕೆ ಹೀಗೆ ಸೇಡು ತೀರಿಸಿ ಕೊಳ್ತಿದ್ದಾರೆ"

"ಯಾಕೆ ಬಯ್ದದ್ದು..? ಆತ ಏನು ಮಾಡಿದ...?"

"ಆತ ಸುಮ್ಮನೆ ನನ್ನ ಹಿಂದೆ ಬಿದ್ದಿದ್ದ...ಪೋಲಿ ಥರ ನನ್ನನ್ನೇ ನೋಡ್ತಿದ್ದ...
ಕೊನೆಗೆ ನನ್ನನ್ನೇ ಮಾತಾಡಿಸಲು ಬಂದ... ನಾನು ಚೆನ್ನಾಗಿ ಬಯ್ದು ಕಳಿಸಿದ್ದೆ....."

ಈಗ ನಾಗು ಮಧ್ಯ ಮಾತಾಡಿದ....
"ಆತ ಏನು ಮಾತಾಡಿದ...? ಏನು ಕೇಳಿದ...? ತಪ್ಪಾಗಿ ನಡೆದು ಕೊಂಡನಾ..?
ಇಲ್ಲಾ.. ಅಶ್ಲೀಲ ಮಾತಾಡಿದನಾ...?
ನಿಮ್ಮ ಬಳಿ ಸಹಜ ಸ್ನೇಹದಿಂದ ಮಾತಾಡಲು ಬಂದಿರ ಬಹುದಲ್ಲವಾ..?
ನೀವು ನೇರವಾಗಿ ಇದೆಲ್ಲ ನನಗಿಷ್ಟ ಆಗಲ್ಲ ಅನ್ನೋದು ಬಿಟ್ಟು..
ಎಲ್ಲ ಹುಡುಗರ ಎದುರಿಗೆ ಜೋರಾಗಿ ಸಿಕ್ಕಾಪಟ್ಟೆ ಅವಾಚ್ಯ ಶಬ್ಧದಿಂದ ಬಯದದ್ದು ತಪ್ಪಲ್ಲವಾ...?"

"ಇಲ್ಲ ಆತ ಕೆಲಸವಿಲ್ಲದೆ ನನ್ನ ಹಿಂದೆ ಬರುತ್ತಿದ್ದ..
ನನ್ನ ಪರಿಚಯ ಮಾಡಿಕೊಳ್ಳಲು ಮಾತಾಡಲು ಬಂದಿದ್ದ..
ನನ್ನ ಹಿಂದೆ ಯಾಕೆ ಬರಬೇಕಿತ್ತು...?"

ಈಗ ಪ್ರಿನ್ಸಿಪಾಲರಿಗೆ ಎಲ್ಲದೂ ಅರ್ಥವಾಯಿತು....

"ಎಲ್ಲ್ರೂ ಸುಮ್ನೆ ಇರಿ...
ಓದುವದು ಬಿಟ್ಟು ಹೆಣ್ಣುಮಕ್ಕಳ ಹಿಂದೆ ಹೋಗಿ ಪರಿಚಯ ಮಾಡಿಕೊಳ್ಳುವ ನಾಟಕ ಏಕೆ ಮಾಡ್ತೀರಿ..?
ಇದೆಲ್ಲ ತಪ್ಪು... ಯಾರು ಆ ಹುಡುಗ... ?
ಬಾರೋ... ಇಲ್ಲಿ ಇವರ ಬಳಿ ಸ್ಸಾರಿ ಕೇಳು..."

ಪ್ರಿನ್ಸಿಪಾಲರಿಗೆ ಹೆದರಿದ ಆತ.. ಸ್ಸಾರಿ ಕೇಳಿದ...

"ಮತ್ತೆ ಏನು ಕವನ ಅದು... ನೋಟಿಸ್ ಬೋರ್ಡಿನಿಂದ ತಗೋಂಡು ಬನ್ನಿ..."
ತಂದು ಕೊಡಲಾಯಿತು...
ಪ್ರಿನ್ಸಿಪಾಲರೂ ಸ್ವತಹ ಕವಿಗಳು...

ಓದಿದರು..

" ಭದ್ರಾವತಿ... ಬಂಗಾರಿಗೆ...."

ನಿನ್ನೆ ಕನಸಲ್ಲಿ ...
ಹೆಜ್ಜೆಗೆಜ್ಜೆಯ ಸದ್ದಲ್ಲಿ ನೀನು...
ನನ್ನ ಕನಸಲ್ಲಿ ಬಂದಿದ್ದೆ...

ನಿನ್ನ ಮುದ್ದು ಮುಖ ನೋಡಲಾಗಲಿಲ್ಲ...
ಸುತ್ತಲೂ ಕವಿದಿತ್ತು...
ಮುಸ್ಸಂಜೆಯ ಮಂದ ಕತ್ತಲು..
ಏನು ಮಾಡಲಿ ನಾನು..?
ನನ್ನ ಕೈಯ್ಯಲ್ಲಿ ಬ್ಯಾಟರಿ ಇತ್ತಿಲ್ಲ......

ಇನ್ನೊಮ್ಮೆ ಬಾ.. ಗೆಳತಿ...
ಹಗಲಿನಲ್ಲಿ..

ಕಣ್ಣು ತುಂಬಿಸಿಕೊಳ್ಳುವೆ...
ಹ್ರದಯದಲ್ಲಿ ಇರಿಸಿಕೊಳ್ಳುವೆ..
ಕತ್ತಲಲ್ಲೂ ಬೆಳಕಾಗುವಂತೆ ಮಾಡುವೆ....
ಸೀಮೆ ಸುಣ್ಣವ ಸಾರಿಸಿ...
ರೇಡಿಯಂ ಬಳಿದು....
ಮತ್ತೆ ನಿನ್ನನ್ನು ರಾತ್ರಿ ಕನಸಲ್ಲಿ ನೋಡಲು......

ಅವರು ನಗು ಬಂದರೂ ತಡೆದು ಕೊಡಿದ್ದು ಸ್ಪಷ್ಟವಾಗಿತ್ತು...

ತಮ್ಮ ಚಷ್ಮದಿಂದಲೇ ನಮ್ಮನ್ನು ಕೆಕ್ಕರಿಸಿ ನೋಡಿ...
"ಇದು ಯಾರು ಬರೆದದ್ದು...?"

ನಾಗು ಹೇಳಿದ... "ನಾನು "

"ನೀನು ಹೋಗಮ್ಮ..."
ರಾಜಿ ಹೋದಳು...

" ಈ ಹುಡುಗಾಟಿಕೆ ವಯಸ್ಸಲ್ಲಿ ಸ್ವಲ್ಪ ವೀವೇಕ ಇಟ್ಟುಕೊಳ್ಳಿ..
ಯಾರದೇ ದೇಹದ.. ಬಣ್ಣ ಅವರ ಇಷ್ಟವಲ್ಲ...
ಅದನ್ನು ಹೀಯಾಳಿಸುವ ಅಧಿಕಾರ ನಿಮಗೆ ಇಲ್ಲ...
ಪಬ್ಲಿಕ್ಕಿನಲ್ಲಿ ಒಬ್ಬ ಹೆಣ್ಣುಮಗಳಿಗೆ ಈ ರೀತಿಯಾಗಿ ಹೀಯಾಳಿಸುವದು ಅಕ್ಷಮ್ಯ ಅಪರಾಧ...
ನಿಮ್ಮ ತಂಗಿ ಕಪ್ಪಿದ್ದರೆ....
ಯಾರಾದರೂ ಹೀಯಾಳಿಸಿದರೆ ನಿಮಗೆ ಏನು ಅನ್ನಿಸ್ತದೆ..?
ಇದೇ ಕೊನೆಯ ವಾರ್ನಿಂಗ್...
ಅಪ್ಪ, ಅಮ್ಮ ಓದಲಿಕ್ಕೆ ಕಳಿಸ್ತಾರೆ.. ಇಲ್ಲಿ ನೀವು ಈ ಥರಹ ಮಾಡ್ತೀರಿ..
ನಾಚಿಕೆ ಆಗ್ಬೇಕು ನಿಮಗೆ..
ಮುಂದಿನ ವಾರ ರಕ್ಷಾಬಂಧನ ಕಾರ್ಯಕ್ರಮ ಅದ್ದೂರಿಯಾಗಿ ಮಾಡುವ ಅವಶ್ಯಕತೆ ಇದೆ...
ಅದಕ್ಕೆ ಕಡ್ಡಾಯವಾಗಿ ಎಲ್ಲರೂ ಬರಲೇ ಬೇಕು...

ಈಗ ಕ್ಲಾಸಿಗೆ ಹೋಗಿ... "


ನಾನು ನಾಗುವಿನ ಮುಖ ನೋಡಿದೆ...
ನಾಗು ನನ್ನ ಕೈ ಅಲ್ಲಿಯೇ ಗಟ್ಟಿಯಾಗಿ... ಹಿಡಿದುಕೊಂಡ...
ಕೈ ಅದುಮಿದ....
ಸಣ್ಣಗೆ ನನ್ನ ಕಿವಿಯಲ್ಲಿ ಪಿಸುಗುಟ್ಟಿದ...

"ಪ್ರಕಾಶು...
ನನಗೆ ಇನ್ನಷ್ಟು ಕವನ ಬೇಕು ಕಣೋ...
ನನ್ನ ಸ್ನೇಹದ ಮೇಲೆ ಆಣೆ ...
ಇಲ್ಲ ಅನ್ನಬೇಡ.."

ಅವನಿಗೆ ಇನ್ನಷ್ಟು ಕವನ ಬರೆದು ಕೊಟ್ಟಿದ್ದು ದೊಡ್ಡ ಕಥೆ....(ದಯವಿಟ್ಟು "ರಾಜಿ ಬಲು ಸುಂದರಿ " ಓದಿ...Tuesday, June 16, 2009

ಬಳೆಗಾರ ಚನ್ನಯ್ಯ ..ನವಿಲೂರಿಗೆ ಬಂದಾಗ....!!

ಹಲವು ವರ್ಷಗಳ ನಂತರ ಅಣ್ಣ, ಅತ್ತಿಗೆ ಮಕ್ಕಳು ಊರಿಂದ ಬಂದಿದ್ದರು ..
ಬೆಂಗಳೂರೆಲ್ಲ ತೋರಿಸ ಬೇಕಿತ್ತು ..
ಅಷ್ಟರಲ್ಲಿ ಬ್ಲಾಗ್ ಗೆಳೆಯ "ಅಜಿತ್ ಕೌಂಡಿನ್ಯ " ಫೋನ್ ಮಾಡಿ ...
" ಇಂದು ರಂಗ ಶಂಕರದಲ್ಲಿ ಡಾ. ಬಿ.ವಿ. ರಾಜಾರಾಮರ "ಮೈಸೂರು ಮಲ್ಲಿಗೆ" ನಾಟಕವಿದೆ ..
ನೋಡಿ ಬನ್ನಿ " ಎಂದರು....

ನನ್ನಣ್ಣ ಜೀವನದಲ್ಲಿ ನಾಟಕ ನೋಡಿದವರಲ್ಲ...
ಅಳುಕಿನಿಂದಲೇ ಕರೆದು ಕೊಂಡು ಹೋದೆ....

ಶಂಕರ್ ನಾಗ್ ರ ನೆನಪಿನಲ್ಲಿ "ಅರುಂಧತಿ ನಾಗ್" ಕಟ್ಟಿದ ಒಂದು ಸುಂದರ ನಾಟಕ ಮಂದಿರ ಅದು...
ನಾಟಕ ಆಸಕ್ತರಿಗೆ ಅಲ್ಲಿ ಎಲ್ಲವು ಇದೆ...
ಪುಸ್ತಕಗಳು... ಒಳ್ಳೆಯ ಸಿನೆಮಾ ಸೀಡಿಗಳು...
ಸಂಗೀತದ ಸೀಡಿಗಳು...

ಮಳೆಗಾಲದಲ್ಲಿ ಬೆಚ್ಚನೆಯ ಟೀ, ಕಾಫಿ....
ಕುರುಕುಲು ತಿಂಡಿಗಳು....

ಅಲ್ಲಿನ ವಿನ್ಯಾಸದಲ್ಲಿ ಒಂದು ರೀತಿಯ ಪ್ರತ್ಯೇಕತೆ ಎದ್ದು ಕಾಣುತ್ತಿತ್ತು.....

Tickets ಸಮಸ್ಯೆ ಇರಲಿಲ್ಲ...

ಡಾ. ರಾಜಾರಾಮರಿಗೆ ಮೊದಲೇ ಫೋನ್ ಮಾಡಿ ಬುಕ್ ಮಾಡಿದ್ದೆ....

ಅಲ್ಲಿನ ಆಸನಗಳ ವ್ಯವಸ್ಥೆಯು ಚೆನ್ನಾಗಿದೆ....


ನಾಟಕ ಶುರುವಾಯಿತು....

ಪ್ರೇಕ್ಷಕರ ನಡುವಿನಿಂದ ಒಬ್ಬ ಬಳೆಗಾರ ಸ್ಟೇಜ್ಗೆ ಹೋಗುತ್ತಿದ್ದಾನೆ....!!

ಬಳೆಗಾರ ಚನ್ನಯ್ಯ..!!
ನಮ್ಮ ನಾಡಿನ ಪ್ರೇಮಕವಿ ಡಾ. ಕೆ. ಎಸ. ನರಸಿಂಹ ಸ್ವಾಮಿಯವರ ಸ್ರಷ್ಟಿಸಿದ ಪಾತ್ರ...!

ಪ್ರೀತಿಸುವ ಹ್ರದಯಗಳಿಗೆ..
ಬೆಚ್ಚನೆಯ ಪಿಸುನುಡಿಗಳ ಕವನ ಬರೆದ...
ಜನಸಾಮಾನ್ಯರ ನಾಲಿಗೆಯಲ್ಲಿ ನಲಿವ..
ಒಲವಿನ ಮಲ್ಲಿಗೆಯ ಕವಿ....

ಐವತ್ತುವರ್ಷಗಳ ನಂತರ ಚನ್ನಯ್ಯ ನವಿಲೂರಿಗೆ ಬರುತ್ತಾನೆ...
ನವಿಲೂರಿನ ಅವನ ನೆಚ್ಚಿನ "ಮೈಸೂರು ಮಲ್ಲಿಗೆಯ" ಕವಿಯ ಮನೆಗೆ ಬರುತ್ತಾನೆ..

ಇಂದಿನ ನವಿಲೂರನ್ನು ಕಂಡು ದಂಗಾಗಿ ಹೋಗುತ್ತಾನೆ...!"ನಮ್ಮ ಕಾಲದಲ್ಲಿ ಇಂಗೆಲ್ಲಿತ್ರವ್ವಾ...?"...?"

ಅಲ್ಲಿ ಕವಿಯ ಮನೆಯವರ ಬಳಿ ತನ್ನ ಹಳೆಯ ನೆನಪಿನ ಸಿಹಿ ಬುತ್ತಿಯನ್ನು ಬಿಚ್ಚುತ್ತಾನೆ...

ಒಂದರ ಹಿಂದೊಂದು ಸುಂದರ ಧ್ವನಿಯಲ್ಲಿ...
ಮನಮೋಹಕ ಹಾಡುಗಳು...!
ಕಚಗುಳಿಯಿಕ್ಕುವ ಮಾತಿನ ಚಟಾಕಿಗಳು....

ವಾಹ್...!!" ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ..."

ಅಹಾ...!!
.. ಹಾಡು ...!
.... ಧಾಟಿ...!
ನಮ್ಮನ್ನೇ .... ಕುಣಿಸಿ ಬಿಡುವ .....
ಸರಳ ನ್ರತ್ಯ.... ವಾಹ್ .!!

ಕವಿಯೋಡನೆ ಕುಣಿಯುವ ಬಳೆಗಾರ ಚನ್ನಯ್ಯ...!


ಕವಿಯ ಒಳ್ಳೆಯ ತನವನ್ನು.., ಅವನ ಸಂಗಡದ ಒಡನಾಟವನ್ನು ಮೆಲುಕುಹಾಕುತ್ತಾನೆ ....
ನಮ್ಮನ್ನೂ ಕಾಲಕ್ಕೆ ಕರೆದೊಯ್ಯುತ್ತಾನೆ....


" ಇವಳು ಯಾರು ಬಲ್ಲೆಯೇನು..?" ಹಾಡುವ ಪ್ರೇಮಕವಿ....

ಗ್ರಾಮೀಣ ಸೊಗಡಿನ .... ಸಭ್ಯತೆಯ ಗಡಿದಾಟದ... ...
ನವಿರಾದ... ಹ್ರದಯ ತಟ್ಟುವ ಪ್ರೇಮ....!!" ರಾಯರು ಬಂದರು ಮಾವನ ಮನೆಗೆ...
ರಾತ್ರಿಯಾಗಿತ್ತು...
ಹುಣ್ಣಿಮೆ ಹರಸಿದ......"


ವಿರಹ ತಾಳದೆ ಪ್ರೇಮಕವಿ ಮಾವನ ಮನೆಗೆ ಬರುತ್ತಾನೆ.....!
ಹೆಂಡತಿ ಕಾಣದ ಪರಿತಪಿಸುತ್ತಾನೆ...!

ಅಕ್ಕ ಎಲ್ಲೆಂದು
ನಾದಿನಿಯೂ ಸರಿಯಾದ ಉತ್ತರ ಕೊಡುವದಿಲ್ಲ....!


"ಪದುಮಳು.... ಬಂದಳು ನಸುನಗುತಾ..."

ಮರುದಿನ ಬೆಳಿಗ್ಗೆ ಮನದನ್ನೆಯ ಮುಖನೋಡಿ ಸಂತಸ....!!
ಅಂದಿನ ಕಾಲದ ದಾಂಪತ್ಯದ ಸೊಗಸು...!
ಬೆಡಗು... ಬಿನ್ನಾಣ....
!
ಆಡಂಬರವಿಲ್ಲದ ಸರಳತೆಯ ಬದುಕು....."ನಿ... ಬರುವದಾರಿಯಲಿ...."

ಕವಿಯ ಮಗಳನ್ನು ನೋಡಲು ಬಂದಾಗ ಮಗಳು ಹೇಳುವ ಹಾಡು....

"ಶಾನಭೋಗರ ಮಗಳು ತಾಯಿ ಇಲ್ಲದ ಹುಡುಗಿ ...""ಎಮ್ಮಮನೆ ಅಂಗಳದೀ.... ಬೆಳೆದೊಂದ ಹೂ ವನ್ನು ನಿಮ್ಮ ಮಡಿಲಿಗೆ....."

ಹ್ರದಯ ಕಲುಕುವ ಮಗಳ ವಿದಾಯ....!
ವ್ಯವಹಾರದ ಬದುಕು ಅರಿಯದ....
ಪ್ರೇಮಕವಿ ಬಾಳಲ್ಲಿ ಸಮಸ್ಯೆಗಳ ಸರಮಾಲೆ...
ಕತ್ತಲೆ ಬೆಳಕಿನ ಮೋಡಿ...

ಬಳೆಗಾರ ಚನ್ನಯ್ಯನ ಸಾಂತ್ವನ...
ಮಾವನ ಅಭಿಮಾನಿ ಮಗಳ ಗಂಡ...

ಮಾತು ಮಾತಿಗೂ ಹಾಡು...!
ಮಾತಿನ ನಡುವೆ ನಗೆ ಚಟಾಕಿ...
!


ಇಳಿವಯಸ್ಸಿನಲ್ಲಿ ತಾನು ಬರೆದ ಹಾಡುಗಳ ನೆನಪು...
ಮಡದಿಯೊಡನೆ ಸರಸ .....
ಮನ ಬಿಚ್ಚಿ ಮಾತು... ಹ್ರದಯದ ಅಳಲು....
" ನಿನ್ನ... ಪ್ರೇಮದ ....ಪರಿಯ...

ನಾನರಿಯೆ ....ಕನಕಾಂಗಿ..."
...............................................

"ನನ್ನ ಹಾಡಿನ ನಾಯಕಿ ನೀನೆ... ಕಣೆ..."

"ನನ್ನ ಹಾಡುಗಳಲ್ಲಿ ಯಾವುದು ಇಷ್ಟವಾಗುತ್ತೆ ನಿನಗೆ...?"


ಇಳಿವಯಸ್ಸಿನ ಸರಸ ಪ್ರೆಮಸಲ್ಲಾಪ....!
ಮಡದಿಯ ನಾಚಿಕೆ.... !

ಮುದಿವಯಸ್ಸಿನ ಮಾಗಿದ ಪ್ರೇಮ...
.!"ಮೈಸೂರು ಮಲ್ಲಿಗೆಯ" ಕಂಪನ್ನು ಬೇರೆ ಊರಿಗೆ ಹರಡಲು ಹೊರಟ ಬಳೆಗಾರ ಚನ್ನಯ್ಯ....

ಕವಿಯ ಮನೆಯವರ ಕೈಯಲ್ಲಿ ಮೈಸೂರು ಮಲ್ಲಿಗೆ ಗಿಡದ ಕಾಣಿಕೆ ಕೊಡುತ್ತಾನೆ....
ಕೊನೆಯಲ್ಲಿ ಕಲಾಗಂಗೋತ್ರಿ ತಂಡದವರಿಂದ ...
ಆಗಮಿಸಿದ ಆಯ್ದ ಮಹನೀಯರಿಗೆ ನೆನಪಿನ ಕಾಣಿಕೆ...
"ಮೈಸೂರು ಮಲ್ಲಿಗೆ ಗಿಡ..!!"
(" ಯುದ್ಧ ಭಾರತ " ನಾಟಕ ಮತ್ತು ಹಲವಾರು ಗಿತನಾಟಕಗಳ ರಚನೆಕಾರ ದಿವಾಕರ ಹೆಗಡೆಯವರಿಗೆ ಮಲ್ಲಿಗೆ ಗಿಡದ ಕಾಣಿಕೆ)ನಾಟಕ ಮುಗಿದ ಮೇಲೆ ಮನದಲ್ಲಿ ಕಾಡುವ ...
ಕೆ.ಎಸ. . ಮತ್ತು ...
ಅವರ ಪ್ರೇಮ ಗೀತೆಗಳು....

ಕಣ್ಣಿರು ತರಿಸುವ ....
ನಾಟಕ ನಿರ್ದೇಶಕ ಡಾ. ಬಿ.ವಿ. ರಾಜಾರಾಂರವರ ಮನೋಜ್ಞ ಅಭಿನಯ...ಹಾಡು ಹೇಳುತ್ತಾ..
ನವಿಲಿನಂತೆ ನರ್ತಿಸುತ್ತಾ...
ನಾಟಕದ ನಿರೂಪಕನಾಗಿ...
ನಮ್ಮ ನಿಮ್ಮಲ್ಲಿ ಒಂದಾಗಿ ...
ಮರೆಯಲಾಗದ ... ಅದ್ಭುತ ಪ್ರತಿಭೆ....
ನಾಟಕದ ರಚನೆಕಾರ... "ರಾಜೇಂದ್ರ ಕಾರಂತ..."


ನಾಟಕ ಮುಗಿದ ಮೇಲೆ ಅಣ್ಣನನ್ನು ಕೇಳ್ದೆ "ಅಣ್ಣ ನಾಟಕ ಹೇಗಿತ್ತು...??"

"ಅದ್ಭುತ ಕಣೋ.... !
ಇದನ್ನು
ನಾನು ನೋಡದಿದ್ದರೆ ಏನನ್ನೋಕಳೆದು ಕೊಳ್ಳುತ್ತಿದ್ದೆ...
ಬೆಂಗಳೂರಿಗೆ ಬಂದಿದ್ದು ಸಾರ್ಥಕ ಆಯಿತು ಕಣೋ...!"

ಅಣ್ಣನಿಗೆ ಬಹಳ ಖುಷಿಯಾಗಿತ್ತು...
ಕಣ್ಣಿನ ಅಂಚಿನಲ್ಲಿ ಕಂಡೂ ಕಾಣದಂತೆ ಕಣ್ಣಿರಿನ ಹನಿಯಿತ್ತು...!

ನೀವು ಇದನ್ನು ನೋಡಿರದಿದ್ದರೆ ಖಂಡಿತ ನೋಡಿ....
ಇನ್ನೊಮ್ಮೆ...
ಮತ್ತೊಮ್ಮೆ...
ಮಗದೊಮ್ಮೆ....
ಯಾಕೆಂದರೆ ನಾಟಕದ ಕೆಲವು ಸನ್ನಿವೇಶಗಳು...,
ಪಾತ್ರಧಾರಿಗಳು...
ಬದಲಾಗುತ್ತ...
ಪ್ರತಿನಿತ್ಯ ಹೊಸತಾಗಿ... ಹೊಸತನವಿರುತ್ತದೆ...

ಕೆ.ಎಸ. . "ಮೈಸೂರು ಮಲ್ಲಿಗೆ ಕವನಗಳ ಹಾಗೆ....

ನಿತ್ಯ ನೂತನವಾಗಿರುತ್ತದೆ...(21/06/2009 ಮತ್ತೆ ರಂಗ ಶಂಕರದಲ್ಲಿ
"ಮೈಸೂರು ಮಲ್ಲಿಗೆ" ನಾಟಕವಿದೆ..
ಮಧ್ಯಾಹ್ನ 3.30pm ಮೊದಲನೆಯ ಷೋ...
7pm ಎರಡನೆಯ ಷೋ...
ಟಿಕೆಟ್ ಗಾಗಿ 9448069667 ಫೋನ್ ಮಾಡಿ ಮೊದಲೇ ಬುಕ್ ಮಾಡಿಕೊಳ್ಳಿ
ಇದು ಡಾ.ಬಿ.ವಿ. ರಾಜಾರಾಮರ ಫೋನ್ ನಂಬರ್))