ಈ ಶನಿವಾರ ಬಂತು ಅಂದ್ರೆ ನನ್ನಂಥವರಿಗೆ ಟೆನ್ಷನ್ ಜಾಸ್ತಿ..
ಕೆಲಸಗಾರರಿಗೆ..
ಸಪ್ಲೈದಾರರಿಗೆ ಹಣ ಕೊಡಬೇಕಲ್ಲ... !
ಪ್ರತಿವಾರ ಹಣ ಹೊಂದಿಸೋದು ...
ಲೆಕ್ಕಾಚಾರ ಮಾಡಿ ಅವರಿಗೆಲ್ಲ ಹಣ ಹಂಚೋದು ಸಣ್ಣ ವಿಷಯವಲ್ಲ...
ಫೋನ್ ಬಡ್ಕೋತಾ ಇದೆ....!
ಇನ್ಯಾರದ್ದೂ ಬರೋದಿಲ್ಲ...
ಮಾಮೂಲಿ ಸಪ್ಲೈದಾರರು...!
" ಅಣ್ಣಾ...
ನಾಳೆ ಶನಿವಾರ...
ವೀಕ್ನೆಸ್ಸೂ...
ಅಶಕ್ತತೆ ಜಾಸ್ತಿ ಆಗಿಬಿಟ್ಟಿದೆ......
ನಾಳೆ...ಸ್ವಲ್ಪ "ಟಾನಿಕ್ಕು" ಸಿಗಬಹುದಾ?"
" ನಾಳೆ ಜ್ವರ ಬಂದವರಿಗೆ ಮಾತ್ರ ಔಷಧ...!
ಟಾನಿಕ್ಕು ಮುಂದಿನವಾರದ ಮಧ್ಯದಲ್ಲಿ.. !"
ಹಣ ವ್ಯವಸ್ಥೆ ಆಗದಿದ್ದಲ್ಲಿ ನಾನು ಕೊಡುವ ಉತ್ತರ ಇದು...
ಈ ವಾರವೂ .. ಹಣದ ವ್ಯವಸ್ಥೆ ಏನೂ ಆಗಿರಲಿಲ್ಲ....
ಮತ್ತೆ ಫೋನ್ ಬಡ್ಕೋತಾ ಇದೆ.... !!
" ಆಡಿಸಿ ನೋಡು..
ಬೀಳಿಸಿ ನೋಡು ಉರುಳಿ ಹೋಗದು..."
ಇದು ನನ್ನ ಮೊಬೈಲ್ ರಿಂಗ್ ಟೋನ್...
ನಾನು ಫೋನ್ ತಗೊಂಡೆ...
" ಹಲೋ...."
ಅತ್ತ ಕಡೆಯಿಂದ ಯಾರದ್ದೋ ಅಪರಿಚಿತ ಸ್ವರ... !
"ಹಲೋ...
ಸ್ವಾಮಿ...
ನಾನು ಮಾತಾಡ್ತಿರೋದು..
ನಾನು ಹಣ ಕಳಿಸ್ತಾ ಇದ್ದೀನಿ..."
ನನಗೆ ಆಶ್ಚರ್ಯ.. !
"ಹಲೋ... !
ಯಾರು ತಾವು..?.. !!..
ಏನು ಹಣ ಕಳಿಸ್ತಾ ಇದ್ದೀರಾ..?.!!..."
"ಸ್ವಾಮಿ...
ತುಂಬಾ... ತಡ ಆಗೋಯ್ತು...!
ಒಪ್ಕೋತೀನಿ...
ನನ್ನಿಂದ ತಪ್ಪಾಗಿದೆ..
ಮನಸ್ಸಲ್ಲಿ ಏನೂ ಇಟ್ಕೋಬೇಡಿ..
ಈಗ ಹಣವನ್ನು ಕಳಿಸ್ತಾ ಇದ್ದೀನಿ...
ತಗೋಬಿಡಿ..."
ಎಲಾ ಇವರಾ... !
ಯಾರು ಇದು...? !!...
" ಸರ್..
ನಿವ್ಯಾರು ಅಂತ ಗೊತ್ತಾಗಲಿಲ್ಲ...
ಬಹುಷಃ ...
ರಾಂಗ್ ನಂಬರ್ ಇರಬಹುದು !"
"ಸ್ವಾಮಿ...
ನಿಮಗೆ ಬೇಜಾರಾಗಿದ್ದೂ.. ಸಹಜ...
ಬೇಕು ಅಂತ ಯಾರಾದ್ರು ತಪ್ಪು ಮಾಡ್ತಾರಾ...?
ನೀವೇ.. ಹೇಳಿ..
ತಪ್ಪು ನನ್ನಿಂದ ಆಗಿದೆ.. ಹೊಟ್ಟೆಗೆ ಹಾಕ್ಕೊಳ್ಳಿ.."
ಹೊಟ್ಟೆಗೆ ಹಾಕ್ಕೊಂಡು .. ಹಾಕ್ಕೊಂಡು ಇಷ್ಟು ದೊಡ್ಡದಾಗಿ ಬಿಟ್ಟಿದೆ ನನ್ನ ಹೊಟ್ಟೆ...!
ಸ್ವಲ್ಪ ಕೋಪ ಬಂತು ನನಗೆ.....
" ರೀ...
ಯಾರ್ರಿ.. ನೀವು...?
ಯಾರಿಗೆ ಫೋನ್ ಮಾಡ್ತಾ ಇದ್ದೀರಿ...?"
" ಸ್ವಾಮಿ...
ಇಷ್ಟು ವರ್ಷ ವ್ಯವಹಾರ ಮಾಡಿದಿನಿ...
ಇದೇ ಮೊದಲ ಬಾರಿಗೆ ತಪ್ಪಾಗಿ ಬಿಟ್ಟಿದೆ...
ಕ್ಷಮಿಸಿ..
ಏನೋ ತೊಂದರೆ ಆಯ್ತು...
ನಮ್ಮ.... ನಿಮ್ಮ ಸ್ನೇಹ ಹೀಗೆಯೇ ಮುಂದುವರಿಲಿ..."
ನನಗೆ ಪಿಕಾಲಾಟಕ್ಕಿತು...
ಕುತೂಹಲವೂ... ಜಾಸ್ತಿಯಾಯಿತು....!
"ಸರ್..
ಎಷ್ಟು ಹಣ ಕಳಿಸ್ತಾ ಇದ್ದೀರಿ..?"
" ಇನ್ನೂ ಬೇಸರ ಇಳಿದಿಲ್ವಾ?
ಹೋಗ್ಲಿ ಬಿಡಿ...
ಪೂರ್ತಿಯಾಗಿ ಹತ್ತು ಲಕ್ಷ... !.. !!.."
ಈಗ ನನಗೆ ಸಣ್ಣಗೆ ಗಾಭರಿ ಆಗಲಿಕ್ಕೆ ಶುರುವಾಯಿತು...!
ಯಾರು ಇದು.? !
ನನಗೆ ಹತ್ತು ಲಕ್ಷ ಕೊಡುವ ಪಾರ್ಟಿ...!.. ??..
"ಸರ್...
ನಾನು ಪ್ರಕಾಶ ಹೆಗಡೆ ಅಂತ...
ನಿಮಗೆ ಏನೋ.... ಸ್ವಲ್ಪ ಗೊಂದಲ ಆಗಿದೆ ಅಂತ ಅನ್ನಿಸ್ತಿದೆ...."
" ಅಯ್ಯೋ .. ಸ್ವಾಮಿ...!
ಹೆಸರು ಬದಲಾಯಿಸಿಕೊಂಡರೆ ಮನುಷ್ಯ ಬದಲಾಗಿ ಬಿಡ್ತಾನಾ...?
ನಿಮ್ಮ ತಮಾಷೆ ನನಗೆ ಗೊತ್ತಿಲ್ವಾ...?
ತಪ್ಪಾಯ್ತು ಅಂದೇನಲ್ಲ.. ಕ್ಷಮೆ ಕೂಡ ಕೇಳ್ದೆ...
ಇನ್ನು ಸತಾಯಿಸ ಬೇಡಿ..
ಬೇಸರ ಏನೂ ಇಟ್ಕೊಳ್ದೇ.. ತಗೊ ಬಿಡಿ..."
ಇದೇನಪ್ಪಾ... !!..?..
ಯಾವ ಆಸಾಮೀ ಈತ... ?
" ಸರ್...
ಎಲ್ಲಿಗೆ ಕಳಿಸ್ತಾ ಇದ್ದೀರಿ...?
ಯಾರ ಸಂಗಡ ಕಳಿಸ್ತಾ ಇದ್ದೀರಿ...?"
" ಇನ್ನೆಲ್ಲಿ ಕಳಿಸ್ತೀನಿ ಸ್ವಾಮಿ...
ನಿಮ್ಮ ಅಂಗಡಿಗೆ..ಕಳಿಸ್ತೀನಿ..
ನನ್ನ ಮಗನೇ.. ಬರ್ತಾನೆ...
ನಿಮ್ಮ ಕೋಪ ಎಲ್ಲಾ ಸೇರ್ಸಿ ಅವನಿಗೂ ಜೋರಾಗಿ ಬಯ್ದು ಬಿಡಿ...
ನೀವು ಒಂದು ಪೆಟ್ಟು ಕೊಟ್ರೂ.. ನನ್ನ ಮಗ ಮಾತನಾಡಲ್ಲ..."
ಛೇ....!
ಈ ಮನುಷ್ಯನ ಹತ್ತಿರ ಇನ್ನು ಏನು ಮಾತಾಡುವದು...?
"ಆಯ್ತು...
ಧಾರಾಳವಾಗಿ ಕಳ್ಸಿ... !!... !.."
ಬಹುಷಃ ... ಈಗ ಆತನಿಗೆ ಸಮಾಧಾನವಾಗಿರಬೇಕು...
"ಸ್ವಾಮಿ..
ಹೊಸಾ.. ಫಾರಿನ್ ಮಾಲು ಬಂದಿದೆ...
ಕಳಿಸ್ಲಾ...?.."
ಸ್ವಲ್ಪ ಸಣ್ಣ ಧ್ವನಿಯಲ್ಲಿ..
ಗುಟ್ಟಾಗಿ ಹೇಳುವಂತೆ...... ಕೇಳಿದ... !
ನನಗೆ ಮತ್ತೆ ಟೆನ್ಷನ್ ಶುರುವಾಯ್ತು...
"ಕಳ್ಸಿ...!
ಸ್ವಾಮಿ... ಕಳ್ಸಿ...!
ಫಾರಿನ್.. ಮಾಲು..!!
ದೇಶೀ... ಮಾಲು...ಯಾವ ಮಾಲು ಇದ್ರೂ ಕಳ್ಸಿ...!
ಏನೇ.. ಮಾಲೂ.. ಇದ್ರೂ ಕಳ್ಸಿ... !"
ನನಗೂ ಕೋಪ ಬಂದಿತ್ತು...
ಗಂಟಲು ಹರಿದು ಹೋಗವ ಹಾಗೆ ಜೋರಾಗಿ ಹೇಳಿದೆ...
ಅಡಿಗೆ ಮನೆಯಿಂದ ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡು ...
ನನ್ನ ಯಜಮಾನರು ಬಂದರು...
" ಏನ್ರೀ.....ಅದೂ...?
ಫಾರಿನ್.. ಮಾಲು?
ಏನು ವಿಷಯಾ...?
ಲಕ್ಷಣವಾಗಿ ಮನೆ ಕಟ್ಟೋದು ಬಿಟ್ಟು..
ಇದೇನೋ ಹೊಸ ದಂಧೆ ಶುರು ಮಾಡಿದ ಹಾಗಿದೆ...?"
ನನ್ನಾಕೆ ನನ್ನನ್ನೇ ದಿಟ್ಟಿಸಿ ನೋಡತೊಡಗಿದಳು..
ಕೆಲವೊಮ್ಮೆ ನಾವು ಸರಿ ಇದ್ದರೂ ಹೆಂಡತಿಯನ್ನು ನೋಡಲಿಕ್ಕೆ ...
ಧೈರ್ಯ ಸಾಕಾಗುವದಿಲ್ಲ....
ಅವಳಿಗೆನೋ....
ಸಂಶಯ...??...
ಅನುಮಾನ... ??
ಸಂದೇಹ...!..?
ಒಮ್ಮೊಮ್ಮೆ ...
ಎಲ್ಲವೂ ಒಟ್ಟಿಗೇ .....ನನಗೇ... ಯಾಕೆ ವಕ್ರಿಸಿಕೊಳ್ಳುತ್ತವೆ....?
ಛೇ...!