Tuesday, July 31, 2012

ಹಣಕ್ಕೆ... ರಕ್ತ ಮಾಂಸಗಳಿಲ್ಲ... ...

ನನ್ನ ಗೆಳೆಯನಿಗೆ ಅಪಘಾತವಾಗಿ ಆಸ್ಪತ್ರೆಯಲ್ಲಿದ್ದ...


ಆಕೆ ಗಾಭರಿಯಿಂದ ತನ್ನ ತವರು ಮನೆಯವರಿಗೆ...
ಗಂಡನ ಅಣ್ಣ ತಮ್ಮಂದಿರಿಗೆ ವಿಷಯ ತಿಳಿಸಿದಳು...


ಆ ರಾತ್ರಿಯಲ್ಲಿ ತಾನು ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋದಳು...


ಗಂಡ ಪ್ರಜ್ಞಾಹೀನನಾಗಿ ಮಲಗಿದ್ದಾನೆ...


ಅಲ್ಲಿನ ಡಾಕ್ಟರುಗಳು ಇವಳನ್ನು ನೋಡಿ...


"ಅಪರೇಷನ್ ಮಾಡಬೇಕು...
ಖರ್ಚಾಗುತ್ತದೆ..."


ದೇವರ ದಯೆಯಿಂದ ಅವರಿಗೆ ಹಣದ ತೊಂದರೆ ಇರಲಿಲ್ಲ...


ನನ್ನ ಗೆಳೆಯ ಸಾಕಷ್ಟು ಸ್ಥಿತಿವಂತ..


ಏನೇನೋ ಟೆಸ್ಟುಗಳು...ಸ್ಕ್ಯಾನಿಂಗುಗಳು...


ಆ ಹೆಣ್ಣುಮಗಳು ಅಧೀರಳಾದಳು..


ಅವರ ಹತ್ತಿರದ ಬಂಧುಗಳು ಯಾರೂ ಬರಲೇ ಇಲ್ಲ... !


ಬೆಳಗಿನ ಜಾವ ಅವಳಿಗೆ ಗಂಡನ ಸ್ನೇಹಿತರು ನೆನಪಾದರು...


ನನ್ನಗೆಳೆಯ "ಗಣಪತಿಗೆ" ಫೋನ್ ಮಾಡಿದಳು...


ಆತ ನಮಗೆಲ್ಲರಿಗೂ ಹೇಳಿದ..


ನಾವೆಲ್ಲ ಅಲ್ಲಿಗೆ ಹೋಗಿ ನೋಡಿದಾಗ ನಮಗೂ ಆತಂಕವಾಯಿತು...
ತತಕ್ಷಣ ಎಲ್ಲ ಏರ್ಪಾಡುಗಳನ್ನು ಮಾಡಿದೆವು..


ರಕ್ತ.. ಬೇಕಾಗಿತ್ತು...


ದೇವರ ದಯೆಯಿಂದ ಅದೂ ವ್ಯವಸ್ಥೆ ಆಯಿತು...


ಅಪರೇಶನ್ ಮುಗಿಸಿ ಬಂದ ಡಾಕ್ಟರ್ ಮುಖದಲ್ಲಿ ನಗುವಿತ್ತು...


"ಅಪರೇಶನ್ ಚೆನ್ನಾಗಿ ಆಗಿದೆ..
ಇನ್ನೊಂದು ವಾರದಲ್ಲಿ ಗುಣಮುಖನಾಗುತ್ತಾನೆ..."


ನಮಗೆಲ್ಲ ಹೋದ ಜೀವ ಬಂದಂತಾಯಿತು...!


ಆ ಹೆಣ್ಣುಮಗಳಿಗೂ  ಖುಷಿಯಾಗಿತ್ತು...


ಆಕೆಯ ಬಂಧುಗಳ ಸುಳಿವೇ ಇಲ್ಲ...
ತನ್ನ ತವರಿನವರು... 
ಗಂಡನ ರಕ್ತ ಸಂಬಂಧಿಗಳು ಯಾರೂ ಬರಲೇ ಇಲ್ಲ...!


ಆಮೇಲೆ ಗೊತ್ತಾಗಿದ್ದು ಇಷ್ಟು...


ನನ್ನ ಗೆಳೆಯ ಅವರೆಲ್ಲರಿಗೂ  ಸಹಾಯ ಮಾಡಿದ್ದ...
ಅವರ ಮಕ್ಕಳ ಓದಿಗೆ...
ಕೆಲವರಿಗೆ ಮನೆ ಕಟ್ಟುವಾಗ ಹಣಕಾಸಿನ ನೆರವನ್ನು ಕೊಟ್ಟಿದ್ದ...


ತಾನು ಕೊಟ್ಟ ಹಣವನ್ನು ಯಾವತ್ತೂ ವಾಪಸ್ ಕೇಳಿರಲಿಲ್ಲ...


ಆದರೂ..
ಆ ಬಂಧುಗಳು ಇತ್ತ ಕಡೆ ತಲೆಹಾಕಿಯೂ ನೋಡಲಿಲ್ಲ...


ಇಲ್ಲಿ ಬಂದರೆ ಹಣವನ್ನು ಕೊಡಬೇಕಾಗುತ್ತದೆ ಅಂತ ಬರಲಿಲ್ಲವಾ?..


ಬೇರೆ ಏನೇ ಮನಸ್ತಾಪ ಆಗಿದ್ದರೂ ..
ಇಂಥಹ ಸಮಯದಲ್ಲಿ ಹಗೆತನ ಸಾಧಿಸುವದು ಸರಿ ಅಲ್ಲ.. ಅಲ್ಲವೇ?


ಆ ಹೆಣ್ಣುಮಗಳಿಗೆ ಅಂಥಹ ಸಮಯದಲ್ಲಿ  ಧೈರ್ಯ ಬೇಕಾಗಿತ್ತು...
ಸಲಹೆ.. ಮಾರ್ಗದರ್ಶನ ಬೇಕಾಗಿತ್ತು...


ಎಷ್ಟೇ ಓದಿದ್ದರೂ...
ಬದುಕಿನ ಅನುಭವ ಇದ್ದರೂ..
"ಹಣದ ಜೊತೆಗಿನ ಸಂಬಂಧಗಳು ಬಹಳ ವಿಚಿತ್ರ.."


ಹಣಕ್ಕೆ ರಕ್ತ ಮಾಂಸ ಗಳಿಲ್ಲ...
ಭಾವಗಳಿಲ್ಲ ...
ಸಂಬಂಧಗಳನ್ನು ಹೀರಿ ಬಿಡುತ್ತದೆ...


ತುಂಬಾ ನಿರ್ದಯಿ...
ಹಣಕ್ಕೆ..
ಮಾನವೀಯತೆ.. .. ಸಂವೆದನೆಯಿಲ್ಲ.....


...................................................... .......................


ಇವತ್ತು ಬೆಳಿಗ್ಗೆ  ಗಣಪತಿ ಫೋನ್ ಮಾಡಿದ್ದ...


" ಆತ ಹೋಗಿಬಿಟ್ಟನಂತೆ ......... !! "


ಮನಸ್ಸೆಲ್ಲ ಕದಡಿ ಹೋಯಿತು....!


ಮೈತುಂಬಾ ಕೆಲಸವಿದ್ದರೂ ಮಾಡಲಿಕ್ಕೆ ಮನಸ್ಸಿಲ್ಲ....


ನನ್ನ ಗೆಳೆಯನ ಸಂಬಂಧಿಗಳು...
ಆ ...
ಡಾಕ್ಟರ್  ನೆನಪಾಗುತ್ತಾರೆ ....


" ಅಪರೇಶನ್ ತುಂಬಾ ಚೆನ್ನಾಗಿ ಆಯ್ತು....
ಇನ್ನೊಂದು ವಾರದಲ್ಲಿ ಮನೆಗೆ ಕರೆದುಕೊಂಡು ಹೋಗಿ...."


.............................................................


ವಿಶ್ವವನ್ನೇ ಗೆದ್ದ " ಅಲೆಕ್ಸಾಂಡರ್  " ..
ತನ್ನ ಅಂತಿಮ ಆಸೆಯನ್ನು ತನ್ನ ಆತ್ಮೀಯರಿಗೆ ಹೇಳುತ್ತಾನೆ..


"ನನ್ನ ಅಂತಿಮ ಯಾತ್ರೆಯಲ್ಲಿ..
ನನ್ನ ಹೆಣವನ್ನು ...
ನಾಲ್ಕು ಜನ ವೈದ್ಯರು ಹೊತ್ತುಕೊಂಡು ಹೋಗಬೇಕು..."


ಅವನ ಆತ್ಮೀಯರಿಗೆ ಆಶ್ಚರ್ಯವಾಯಿತಂತೆ..


"ಯಾಕೆ... ಹೀಗೆ..?... !.."


"ಅದರ ಉದ್ದೇಶ ಇಷ್ಟೆ...
ಈ ಜಗತ್ತಿನಲ್ಲಿ ..
ಯಾವ ವೈದ್ಯರ ಬಳಿಯೂ  ಸಾವಿಗೆ ಔಷಧವಿಲ್ಲ... !


ಸಾವನ್ನು  .. ...
ಗುಣಪಡಿಸಲು ಯಾರಿಂದಲೂ ಸಾಧ್ಯವಿಲ್ಲ... !!...... "


...........................................................................................



ಅವನ ಅಪಘಾತದ ಸುದ್ಧಿ ...
ಕೇಳಿದಾಗಲಿನಿಂದ ಮನಸ್ಸು ಗಲಿಬಿಲಿ ಗೊಂಡಿತ್ತು...


ನಾವು ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತೇವೆ...
ಪ್ರತಿಯೊಂದನ್ನೂ ವಿಚಾರ ಮಾಡಿಯೇ ನಿರ್ಧಾರ ತೆಗೆದು ಕೊಳ್ಳುತ್ತೇವೆ...


ಏನೇ ಮಾಡಿದರೂ ಸಾವು ಮಾತ್ರ ನಮಗೆ..
ನಮ್ಮ ನಿಯಂತ್ರಣಕ್ಕೆ ಮೀರಿದ್ದು...


ಸ್ಮಶಾನ ವೈರಾಗ್ಯವೆಂದರೆ ಇದೇ ಇರಬೇಕು...


ಅಲ್ಲಿ ಚಿತಾಗಾರಕ್ಕೆ ದೇಹವನ್ನು ಕಳಿಸಿ..
ಕಣ್ಣೆದುರಿಗೆ ಅವನ ದೇಹ ಬೂದಿಯಾಗಿದ್ದು ನೋಡಿದೆ...


ಮನಸ್ಸೆಲ್ಲ ಭಾರವಾಗಿ..
ಬೇಜಾರದಿಂದ ಮನೆಗೆ ಬಂದೆ...


ಹಸಿವಾಗಿತ್ತು..


ತಿನ್ನಲು ಮನಸ್ಸಿಲ್ಲವಾಗಿತ್ತು...


ನಮ್ಮ ಬದುಕು ..
ಓಡುತ್ತಲೇ ಇರುತ್ತದೆ...


ನಮಗಾಗಿ..
ನಮ್ಮ ದುಃಖಕ್ಕಾಗಿ ..
ನಿಲ್ಲುವದೇ ಇಲ್ಲ... ಅಲ್ಲವಾ?...


ಎಲ್ಲೋ ಒಂದು ಕಡೆ ಕುಳಿತು ..
ಮನಸ್ಸು ಹಗುರ ಆಗುವವರೆಗೆ ಅತ್ತು ಬಿಡೋಣ ಆಂದರೆ ...
ಅಳುವದೂ  ಕಷ್ಟ...


ಗೆಳೆಯರೆಲ್ಲ ...
ಒಬ್ಬಬ್ಬರಾಗಿ  ಹೋಗುತ್ತಿದ್ದಾರೆ.....



ನಮ್ಮ ಸರದಿ... ಯಾವಾಗ ಇದೆಯೋ.... !





Wednesday, July 4, 2012

.................. ಸಿದ್ಧತೆ ....



ನನ್ನ ಅಪ್ಪ ಅಮ್ಮ ನನ್ನನ್ನು ತುಂಬಾ ಪ್ರೀತಿಸುತ್ತಾರೆ...


ನನ್ನನ್ನು  ಬಹಳ ಕಷ್ಟಪಟ್ಟು ಓದಿಸಿದ್ದಾರೆ...
ನನ್ನ ಏಳಿಗೆಗಾಗಿ ತಮ್ಮ ಸಂತೋಷವನ್ನು ತ್ಯಾಗ ಮಾಡಿದ್ದಾರೆ....
ಈಗ ನಾನು ..
ನಾನು ಇಷ್ಟಪಟ್ಟ ಹುಡುಗಿಯನ್ನೂ ಮದುವೆಯಾಗಿದ್ದೇನೆ...


ಇನ್ನೇನು ಎಲ್ಲವೂ  ಸ್ವರ್ಗ... 
ಎಲ್ಲವೂ ಸುಖ..!
ಸಂತೋಷ ಅಂದುಕೊಂಡು ಬಿಟ್ಟೀರೇನು...?


ಹಾಗಲ್ಲ ಮಾರಾಯರೆ...


ಮದುವೆಯಾದಮೇಲೆ ಪಟ್ಟಣದಲ್ಲಿ  ಎರಡು ವರ್ಷ ನಾನು ಮತ್ತು ಹೆಂಡತಿ ಇಬ್ಬರೇ ಇದ್ದೆವು..
ಅಪ್ಪನಿಗೆ ಇದ್ದಕ್ಕಿದ್ದಂತೆ "ಪಾರ್ಶ್ವವಾಯು" ಆಯಿತು...
ಎದ್ದು ನಿಲ್ಲಲಿಕ್ಕೂ ಆಗದ ಸ್ಥಿತಿ...


ನಾವು ಅಪ್ಪ  ಅಮ್ಮ ಇದ್ದ ಊರಿಗೆ ಬಂದೆವು....


ಇಲ್ಲಿಂದ ಶುರುವಾದದ್ದು...


ಅಪ್ಪ ಅಮ್ಮ ನನ್ನನ್ನು ಜೀವದಷ್ಟು ಪ್ರೀತಿಸುತ್ತಾರೆ..
ನನ್ನ ಮಡದಿಯೂ ಕೂಡ..ನನ್ನನ್ನು ಪ್ರೀತಿಸುತ್ತಾಳೆ....


ಎಲ್ಲರೂ ಬದುಕುವದು ಪ್ರೀತಿಗಾಗಿಯೇ...


ಈ ಪ್ರೀತಿಗಳ ನಡುವೆ ಯಾಕೆ ಹೊಂದಾಣಿಕೆ  ಆಗುವದಿಲ್ಲ......?


ಅಪ್ಪ ಅಮ್ಮ ..
ನನಗೆ ಬದುಕಿನ ಎಲ್ಲ ಬಗೆಯ ಮಜಲುಗಳನ್ನು ತಿಳಿಸಿದ್ದಾರೆ...
ಇದು ಸರಿ....ಅದು ತಪ್ಪು...
ಮಾರ್ಗದರ್ಶನ ಯಾವಾಗಲೂ ಮಾಡಿದ್ದಾರೆ...


ಆದರೆ ಅವರಿಗೆ ..
ತಮ್ಮ ಸೊಸೆಯ ಸಂಗಡ ಸಾಮರಸ್ಯ ಸಾಧ್ಯವಾಗಲೇ ಇಲ್ಲ...


ನನ್ನಾಕೆಯೂ ಬಹಳ ಓದಿದ್ದಾಳೆ...
ನಮ್ಮ ಓದು ....
ಬದುಕಿನ ಪಾಠಗಳನ್ನು ಹೇಳಿಕೊಡುವದಿಲ್ಲವಲ್ಲ..........


ನಿತ್ಯವೂ ಜಗಳ.....!
ಕೂತಿದ್ದಕ್ಕೆ... ನಿಂತಿದ್ದಕ್ಕೆ...
ನೋಡಿದ್ದಕ್ಕೆ ಜಗಳ.. !


ಮನೆಗೆ ಬಂದಾಗ ಯಾರ ಮಾತು ಕೇಳಬೇಕು ಅಂತ ಗೊತ್ತಾಗುತ್ತಲೇ ಇರಲಿಲ್ಲ....


"ನಿಮ್ಮ ಅಮ್ಮ .......
ನಿಮ್ಮನ್ನು ಮಾತ್ರ ಪ್ರೀತಿಸುತ್ತಾಳೆ...
ಅಪ್ಪ ಅಮ್ಮರನ್ನು ಬಿಟ್ಟು ಬಂದ ನಾನೂ ಒಂದು ಹೆಣ್ಣು...
ನಾನು ಒಬ್ಬ ಮಗಳು ಎನ್ನುವದನ್ನು ಮರೆತು ಬಿಡುತ್ತಾರೆ...


ನನ್ನೊಂದಿಗೆ ಅವರ ಸ್ಪರ್ಧೆ... !
ಅಡಿಗೆ... 
ಮನೆಯ ಕೆಲಸ ಎಲ್ಲದರಲ್ಲೂ ನನ್ನೊಂದಿಗೆ ಸ್ಪರ್ಧೆ ಮಾಡುತ್ತಾರೆ...
ನನ್ನನ್ನು ಹಂಗಿಸುತ್ತಾರೆ...!"


ನಾನು ಏನು ಹೇಳಲಿ...?


"ನೋಡು ಪುಟ್ಟಣ್ಣಿ.....
ನೀನು ಸುಮ್ಮನಿದ್ದು ಬಿಡು... ಅವರಿಗೂ ವಯಸ್ಸಾಯಿತು..
ಅವರೆಲ್ಲ ಇನ್ನು ಎಷ್ಟು ವರ್ಷ ಇರ್ತಾರೆ...?


ತಾಳ್ಮೆ ಇಟ್ಟುಕೊ.. ಎಲ್ಲವೂ ಸರಿಯಾಗುತ್ತದೆ..."


"ನೋಡಿ....
ಅವರಿಗೆ ವಯಸ್ಸಾಗಿದೆ ಅಂತ ನನಗೂ ಗೊತ್ತು...
ಇತ್ತೀಚೆಗೆ ಅಷ್ಟೆ ಅವರು ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ..


ಎಲ್ಲರಿಗೂ ತಮ್ಮ ವೃತ್ತಿ ಬದುಕಿನ ನಿವೃತ್ತಿಯ ಬಗೆಗೆ ಯೋಚಿಸುತ್ತಾರೆ...
ಅದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಾರೆ...


ಆದರೆ ಬದುಕಿನ ನಿವೃತ್ತಿಯ ಬಗೆಗೆ ... 
ಸಾವು ಬರುವದರ ಬಗೆಗೆ ಯೋಚಿಸುವದೇ ಇಲ್ಲ....
ಅದಕ್ಕೊಂದು ಸಿದ್ಧತೆಯನ್ನೂ ಮಾಡಿಕೊಳ್ಳುವದಿಲ್ಲ....


ಸಾಯುವ ವಯಸ್ಸಿನ ನಿಮ್ಮಮ್ಮನಿಗೆ ನನ್ನನ್ನು ಮಗಳಂತೆ ನೋಡಿಕೊಂಡರೆ ಏನು ಕಷ್ಟ?
ನಾನು ಬೆಟ್ಟದಷ್ಟು ಪ್ರೀತಿಕೊಡಬಲ್ಲೆ...


ಎಷ್ಟೇ ಪ್ರಯತ್ನ ಪಟ್ಟರೂ ..
ಪ್ರೀತಿಸಿದರೂ ನಿಮ್ಮಮ್ಮನಿಗೆ ನಾನು ಸೊಸೆಯಾಗಿಯೇ ಉಳಿದು ಬಿಟ್ಟಿದ್ದೇನೆ...
ಮಗಳಾಗಲಿಲ್ಲ..."


ನನಗೆ ನಿದ್ದೆ ಬರಲಿಲ್ಲ...
ಟಿವಿ ನೋಡೋಣ ಅಂತ ಹಾಲಿಗೆ ಬಂದೆ..


ಅಮ್ಮ ಬಂದು ತಲೆ ಸವರಿದಳು...
ನಾನು ಅಮ್ಮನ ಕೈ ಹಿಡಿದುಕೊಂಡೆ....


"ಅಮ್ಮಾ...
ಬೆಳಿಗ್ಗೆ ಕೆಲಸಕ್ಕೆ ಹೋದವನು ನಾನು ಬರುವದು ರಾತ್ರಿ...
ಶಾಂತಿಯಿಂದ ಮಲಗಲೂ ಸಾಧ್ಯವಿಲ್ಲಮ್ಮ...


ನೀವಿಬ್ಬರೂ ಯಾವಾಗ ಪ್ರೀತಿಯಿಂದ ಇರುತ್ತೀರಮ್ಮ...?"


ಅಮ್ಮ ಕೈ ಬಿಡಿಸಿಕೊಂಡಳು...


"ಓಹೋ...
ನನ್ನ ಬಗೆಗೆ ಚುಚ್ಚಿ ಕಳಿಸಿದ್ದಾಳೋ... ಅವಳು...?"


"ಇಲ್ಲಮ್ಮ... ಹಾಗೇನೂ  ಇಲ್ಲ....
ನೀವಿಬ್ಬರೂ ಪ್ರೀತಿಯಿಂದ ಇರುವದು ನನಗೆ ಮುಖ್ಯ..."


"ಮಗನೆ ..
ಮುದುಕುತನ ..
ವೃದ್ಯಾಪ್ಯ ಅಂದರೆ ಏನು ಗೊತ್ತೇನೋ...?


ಬದುಕಿನ ಎಲ್ಲ ...ವ್ಯವಹಾರ ಮುಗಿಸಿ  
" ಕಾಣದ ಸಾವಿಗಾಗಿ ಕಾಯುವ ಸಮಯ ..."


ನಿಮಗಾದರೆ ...
ರಾತ್ರಿ ಮಲಗಿದರೆ ಕನಸುಗಳಿರುತ್ತವೆ....
ಬೆಳಿಗ್ಗೆ ಏಳಲು ಹೊಸ ಆಸೆ ಗಳಿರುತ್ತವೆ ..


ದಿನವೆಲ್ಲ ಹೊಸ ...ಹಸಿವು ಇರುತ್ತದೆ ..


ಊಟದಲ್ಲಿ  ಬಗೆ ಬಗೆಯ ರುಚಿಗಳಿರುತ್ತವೆ .. 
ಆ ರುಚಿಯನ್ನು ಸವಿಯುವಂಥಹ  ನಾಲಿಗೆ ಇದ್ದಿರುತ್ತದೆ...
ಜೀರ್ಣ ಶಕ್ತಿಯೂ ಇದ್ದಿರುತ್ತದೆ...
ನಮಗೆ ಹಾಗಲ್ಲ .ಮಗನೆ...."


".ಅಮ್ಮಾ...
ಇಷ್ಟೆಲ್ಲಾ  ಗೊತ್ತಿರೋ ನೀನು  ..
ಅವಳನ್ನು  ಮಗಳಂತೆ  ಪ್ರೀತಿ ಮಾಡಮ್ಮಾ...."


"ಪ್ರೀತಿ ಅನ್ನೋದು ತಂತಾನೆ ಹುಟ್ಟಬೇಕು ಕಣೊ...
ಬಲವಂತವಾಗಿ ಹುಟ್ಟಿಸಲು ಸಾಧ್ಯವಿಲ್ಲ..


ಮದುವೆಯಾಗಿ ಎರಡು ವರ್ಷವಾದರೂ...
ಅವಳು ಇನ್ನೂ ತವರಿನ ಮಗಳಾಗಿಯೇ ಇದ್ದಾಳೆ.. 


ಅಪ್ಪ... ಅಮ್ಮನ ..
ಮುದ್ದಿನಲ್ಲಿ ಬೆಳೆದ ಅವಳು ಯಾವಾಗಲೂ .. 
ಗಂಡನ  ಮನೆಯ ಜವಾಬ್ದಾರಿಯನ್ನು .. ತನ್ನ ಅಪ್ಪ ಅಮ್ಮನ ಪ್ರೀತಿಗೆ ಹೊಲಿಸುತ್ತಾಳೆ....


ನನ್ನೊಂದಿಗೆ ಸಿಡಿ ಮಿಡಿಗುಡುತ್ತಲೇ  ಇರುತ್ತಾಳೆ.....


ನೆನಪಿಟ್ಟುಕೋ...
ನಾನು  ಎಷ್ಟೇ  ಪ್ರೀತಿ ಕೊಟ್ಟರೂ  ..


ಅಮ್ಮ ಅಮ್ಮನೇ....
ನಾನು ಯಾವಾಗಲೂ ಅತ್ತೆ  ನೇ ...


ತನ್ನ ಅಪ್ಪನ ಮನೆಯೇ ಇಂದಿಗೂ ಅವಳಿಗೆ ತನ್ನ ಮನೆ...


ನಾವೆಲ್ಲ ಪರಕಿಯರು ಕಣಪ್ಪಾ...
ಯಾವಾಗಲೂ..
ಮೂರೂ ಹೊತ್ತು ಅಪ್ಪನ ಮನೆಗೆ ಫೋನ್ .ಮಾಡ್ತಾಳೆ...


ಅವರ ಬಳಿ ನನ್ನ ಬಗೆಗೆ ಇಲ್ಲ ಸಲ್ಲದ ಮಾತು ಆಡ್ತಾನೇ ಇರ್ತಾಳೆ"


"ಇರ್ಲಿ ಬಿಡಮ್ಮಾ..
ನೀನು ವಯಸ್ಸಲ್ಲಿ ದೊಡ್ಡವಳು ..
ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಮ್ಮ.."


"ಇದೊಂದು ಬಾಕಿ ಇತ್ತು ಕಣೊ..
ನಮ್ಮ ಬದುಕಿನ ಕನಸ್ಸೆಲ್ಲ ನಿನ್ನಲ್ಲಿ ಕಾಣಲು ಪ್ರಯತ್ನ ಪಟ್ಟೆವಲ್ಲಾ..


ನಾವು ಹೇಗಿದ್ದರೂ ..
ನನ್ನ ಮಗ ಚೆನ್ನಾಗಿರಬೇಕು ಅಂತ ಕಷ್ಟ ಪಟ್ಟಿದ್ದೆಲ್ಲ ಸಾರ್ಥಕ ಆಯ್ತು ಕಣೊ..


ಒಂದು ಹೆಣ್ಣನ್ನು ಹದ್ದುಬಸ್ತಿನಲ್ಲಿಡೊ ಆಗದವ ಇನ್ನೇನು ಹೇಳಲು ಸಾಧ್ಯ...?"


ನನಗೆ ತಲೆ ಕೆಟ್ಟು ಹೋಯ್ತು....


ಬದುಕಿನಲ್ಲಿ ಆರ್ಥಿಕವಾಗಿ ಹೇಗಿರಬೇಕು ಎಂದು ಎಲ್ಲರೂ ಕನಸು ಕಾಣುತ್ತೇವೆ...
ಅದಕ್ಕಾಗಿ ಒಂದು ಯೋಜನೆಯನ್ನು ಹಾಕಿಕೊಳ್ಳುತ್ತೇವೆ...


ಆದರೆ ಬದುಕಿನ ಸಂತೋಷದ ಮೂಲ...
ಪ್ರೀತಿ ...
ಸಂಬಂಧಗಳ ಬಗೆಗೆ ಏನನ್ನೂ ಮಾಡುವದಿಲ್ಲ...


ಇದಕ್ಕೊಂದು ಕೊನೆ ಹಾಡಬೇಕು... 
ಏನು ಮಾಡಲಿ?


ಮರುದಿನ ಅಮ್ಮ ಮತ್ತು ಮಡದಿಯನ್ನು ಕರೆದೆ....


"ನಾವೆಲ್ಲರೂ ಒಟ್ಟಿಗೆ ಪ್ರೀತಿಯಿಂದ ಬದುಕಬೇಕು...
ನಮಗ್ಯಾರಿಗೂ ಅಗಲಿ ಬೇರೆಯಾಗಿ ಬದುಕಲು ಸಾಧ್ಯವಿಲ್ಲ..
ನಿಮ್ಮಿಬ್ಬರಲ್ಲಿ ಹೊಂದಾಣಿಕೆ ಇದ್ದರೆ ಇದು ಸಾಧ್ಯ...


ಏನು ಮಾಡಬೇಕು .... ನೀವೇ ನಿರ್ಣಯಿಸಿ..."


ಸ್ವಲ್ಪ ಹೊತ್ತು ಬಹಳ ಮೌನವಿತ್ತು....... ಇಬ್ಬರೂ ಬಾಯಿಬಿಡಲಿಲ್ಲ..


"ಏನಾದರೂ ಮಾತನಾಡಿ.." ಅಂತ ನಾನು ಹೇಳಿದೆ...


"ಮಗನೆ...
ನಮ್ಮನ್ನು ವೃದ್ಧಾಶ್ರಮಕ್ಕೆ ಕಳುಹಿಸು....
ನೀವಿಬ್ಬರೂ ಶಾಂತಿಯಿಂದ ಇರಿ..."


"ಇಲ್ಲ...
ನಾನು ತವರಿಗೆ ಹೋಗುತ್ತೇನೆ...


ನೀವು ಅಮ್ಮ.. ಮಗ ಸಂತೋಷದಿಂದ ಇರಿ..."..


ಇವರಿಬ್ಬರ ಬಳಿ ಹೊಂದಾಣಿಕೆ ಸಾಧ್ಯವೇ ಇಲ್ಲ ಅಂತಾಯ್ತು 


ಇದುವರೆಗೂ ಜಗತ್ತಿನ ಯಾವ ವಿಜ್ಞಾನವೂ ..
ಬದುಕಿಗೆ ಅತ್ಯಗತ್ಯವಾದ ಸಂಬಂಧಗಳ "ಹೊಂದಾಣಿಕೆಯ" ಬಗೆಗೆ ಯಾವ ಸಂಶೋಧನೆಯನ್ನೂ ಮಾಡಿಲ್ಲ....
ಔಷಧವನ್ನೂ ಕಂಡು ಹಿಡಿದಿಲ್ಲ.....


ರಾತ್ರಿ ನಾವಿಬ್ಬರು  ಮಲಗಿರುವಾಗ ಮಡದಿಯೇ ಮಾತನಾಡಿದಳು...
"ನೋಡಿ..
ನನಗೂ ಸಾಕಾಗಿಹೋಗಿದೆ..
ಬೆಳೆಯುತ್ತಿರುವ ನಮ್ಮ ಮಗನನ್ನು ನೋಡಿ..
ದಿನ ನಿತ್ಯ ಈ ಜಗಳದ ಮನೆಯಲ್ಲಿ ಅವನು ದೊಡ್ಡವನಾದರೆ ಅವನ ಮನಸ್ಥಿತಿ ಏನಾಗಬಹುದು?


ದೊಡ್ಡವನಾದ ಮೇಲೆ ಪ್ರೀತಿ ಪ್ರೇಮ..
ಬಾಂಧವ್ಯಗಳನ್ನು ಅರಿಯದ ಒಂಟಿ ಸ್ವಭಾವದವನಾಗುತ್ತಾನೆ...


ನನ್ನ ಮಗನ ಒಳ್ಳೆಯದಕ್ಕಾಗಿಯಾದರೂ ನೀವು ಏನನ್ನಾದರೂ ಮಾಡಿ..


ಇಲ್ಲವಾದಲ್ಲಿ ನಾನು ತವರಿಗೆ ಹೋಗುತ್ತೇನೆ..."


ನನ್ನಾಕೆ ಮುಖ ತಿರುವಿ ಕವಚಿ ಮಲಗಿಬಿಟ್ಟಳು....
ಇದು ಹೆಂಗಸರ  ಪ್ರಬಲ ಅಸ್ತ್ರ.........


ಏನು ಮಾಡಲಿ...?
ಒಂದು ವಾರ ಕಳೆಯಿತು...


ಒಂದು ದಿನ ಅಪ್ಪ ಅಮ್ಮ ಇಬ್ಬರೇ ಇದ್ದಾಗ ನಾನು ಮಾತನಾಡಿಸಿದೆ....


"ಅಮ್ಮಾ...
ಈ ಮನೆಯನ್ನು ಕೊಳ್ಳುವಾಗ ಸಾಲ ಮಾಡಿದ್ದೇನಲ್ಲ...
ಅದನ್ನು ತೀರಿಸುವದು ಕಷ್ಟವಾಗುತ್ತಿದೆ...
ಈಗ ನನಗೊಂದು ಒಳ್ಳೆಯ ಅವಕಾಶ ಬಂದಿದೆ..."


"ಏನು...?"


"ನನಗೆ ಅಮೇರಿಕಾದಲ್ಲಿ ಕೆಲಸ ಮಾಡಲು ಅವಕಾಶ ಬಂದಿದೆ..
ದುಪ್ಪಟ್ಟು ಹಣ..."


ಅಮ್ಮ...
ಮಲಗಿರುವ  ಅಪ್ಪನನ್ನು ನೋಡುತ್ತ ಕೇಳಿದಳು...


"ಒಬ್ಬನೇ  ಹೋಗುತ್ತೀಯೋ...?"


"ಇಲ್ಲಮ್ಮ..
ಅಲ್ಲಿ ಊಟಕ್ಕೆ ಸಮಸ್ಯೆ..
ಹಾಗಾಗಿ ನಾವು ಮೂವರೂ ಹೋಗುತ್ತೇವೆ...
ನೀವು ಒಪ್ಪಿಗೆ ಕೊಟ್ಟರೆ...... "


ಮತ್ತೆ ಸ್ವಲ್ಪ ಹೊತ್ತು ಮೌನ..........


ಈ ಮೌನಗಳು ಮಾತನಾಡುವಷ್ಟು "ಮಾತುಗಳನ್ನು"  ..........
"ಮಾತುಗಳು" ಮಾತನಾಡುವದಿಲ್ಲ....


"ಎಲ್ಲವೂ ನಿರ್ಧಾರವಾದಮೇಲೆ ನಮ್ಮ ಒಪ್ಪಿಗೆಯ ಮಾತು ಯಾಕೆ?...
ಇಲ್ಲಿ ನಮ್ಮ ಬದುಕು ಏನು ?
ನಮ್ಮ  ಬದುಕು ಹೇಗೆ.......?  "


ನನಗೆ ಸ್ವಲ್ಪ ಉತ್ಸಾಹ ಬಂದಿತು...


"ಅಮ್ಮಾ...
ಅದಕ್ಕೆಲ್ಲ ನಾನು ವ್ಯವಸ್ಥೆ ಮಾಡುತ್ತೀನಮ್ಮ...
ನನ್ನ ಮೇಲೆ ಭರವಸೆ ಇರಲಿ...."


ಅಮ್ಮ ಸುಮ್ಮನಾದಳು...


ಮಡದಿ ಖುಷಿಯಾದಳು...


 "ಈಗ  ..
ನಾವು ದೂರ ಇದ್ದೇವೆ ಅನ್ನದೊಂದೇ ದೂರು ಇರುತ್ತದೆ....
ದಿನಾಲೂ ಜಗಳವಾಡಿ...
ಬದುಕನ್ನು ಕೆಸರು ಮಾಡಿಕೊಳ್ಳುವದಕ್ಕಿಂತ  ..
ನಿಮ್ಮ ನಿರ್ಧಾರ ಸರಿಯಾಗಿದೆ  ....  ..."


ನಾನು ಅಮೇರಿಕಾ ಹೋಗುವ ವಿಚಾರ ಎಲ್ಲರಿಗೂ ಗೊತ್ತಾಯಿತು...
ನಮ್ಮ ಮನೆಗೆ ಎಂದಿಗೂ ಬಾರದ ನೆಂಟರೆಲ್ಲ ಬಂದರು...


ಅಮ್ಮನ ಬಳಿ ಗುಸು ಗುಸು ಮಾತನಾಡುತ್ತಿದ್ದರು...
ಒಂದಿಬ್ಬರು ಸಂಬಂಧಿಕರು ಅಧಿಕಾರಯುತವಾಗಿ....
"ಅಪ್ಪ.. ಅಮ್ಮರನ್ನು ಈ ವಯಸ್ಸಿನಲ್ಲಿ...
ಈ ಸ್ಥಿತಿಯಲ್ಲಿ ...
ಬಿಟ್ಟು ಹೋಗುವದು ಸರಿಯಲ್ಲ...


ಹಣವನ್ನು ಯಾವಾಗಲಾದರೂ ಗಳಿಸ ಬಹುದು...


ಅಪ್ಪ.. ಅಮ್ಮ ಯಾವಾಗಲೂ ಸಿಗುವದಿಲ್ಲ....
ಹೋದ ಮೇಲೆ ಬೇಕೆಂದರೆ ವಾಪಸ್ಸ್ ಬರುವದಿಲ್ಲ...."


ಯಾರಿಗೂ ನಾನು ಉತ್ತರ ಕೊಡಲಿಲ್ಲ.


ಬದುಕಿನಲ್ಲಿ ಕೆಲವೊಂದು ಪ್ರಶ್ನೆಗಳಿಗೆ   ...
ಉತ್ತರವಿದ್ದರೂ  ಉತ್ತರ  ಕೊಡಲು ಆಗುವದಿಲ್ಲ......


ನನ್ನ ಉತ್ತರ ಅವರಿಗೆ ಪ್ರಶ್ನೆಯಾಗಿಯೇ ಇದ್ದಿರುತ್ತದೆ....


ಹೊರಡುವ ದಿನ....
....... 
.... ಸಮಯವೂ ಹತ್ತಿರ ಬಂದಿತು....


ನಾನು ಯಾವಾಗಲೂ ಅಪ್ಪನ ಬಳಿ ಮಾತನಾಡುವದು ಕಡಿಮೆ...
ನನ್ನ ಬೇಕು ಬೇಡಗಳನ್ನು ಅಮ್ಮನಿಂದಲೇ ಮಾಡಿಸಿಕೊಳ್ಳುತ್ತಿದ್ದೆ...


ಅಪ್ಪ ಮಲಗಿದ್ದರು....
ಅಪ್ಪನ ತಲೆ ಮುಟ್ಟಿದೆ...


ಅಪ್ಪ ನನ್ನ ಕೈಯನ್ನು  ಬಿಗಿಯಾಗಿ ಹಿಡಿದುಕೊಂಡರು..


ಸ್ಪರ್ಶದ  ಮಾತುಗಳು ಯಾವಾಗಲೂ ಆಪ್ತವಾಗಿರುತ್ತದೆ.....


ನನಗೆ ಮಾತನಾಡಲು ಕಷ್ಟವಾಗುತ್ತಿತ್ತು...


"ಅಪ್ಪಾ...
ಇಲ್ಲಿ ಯಾವುದಕ್ಕೂ ತೊಂದರೆ ಇಲ್ಲ...
ಕಿರಾಣಿ ಅಂಗಡಿಯವರಿಗೆ ಹೇಳಿದ್ದೇನೆ...
ಹದಿನೈದು ದಿನಕ್ಕೊಮ್ಮೆ ಬಂದು ಕಿರಾಣಿ ಸಾಮಾನುಗಳನ್ನು ಅವರೇ ಬಂದು ಕೊಟ್ಟು ಹೋಗುತ್ತಾರೆ...


ಸಿಲೆಂಡರ್ ಗ್ಯಾಸನ್ನು ನಾನು ಅಲ್ಲಿಂದಲೇ ಬುಕ್ ಮಾಡಿಕೊಡುತ್ತೇನೆ...
ಮನೆ ಬಾಗಿಲಿಗೆ ಬರುತ್ತದೆ..


ಪರಿಚಯದ ಡಾಕ್ಟರ್ರಿಗೂ ಹೇಳಿದ್ದೇನೆ...
ಅವರು ಮನೆಗೆ ಬಂದು  ಚೆಕ್ಕಪ್ ಮಾಡಿ ಹೋಗುತ್ತಾರೆ..


ಎಲ್ಲರಿಗೂ ನಾನು ಇಂಟರನೆಟ್ಟಿನಿಂದ ಹಣವನ್ನು ಕೊಡುತ್ತೇನೆ...


ನಿಮಗೆ ಮೊಮ್ಮಗನನ್ನು ನೋಡಬೇಕೆನಿಸಿದಾಗಲ್ಲೆಲ್ಲ..
ಪಕ್ಕದ ಮನೆಯ ಹುಡುಗ ಬಂದು ಕಂಪ್ಯೂಟರ ಹಚ್ಚಿ..
ವಿಡಿಯೋ ಕಾಲ್ ಮಾಡಿಕೊಡುತ್ತಾನೆ...


ಈಗ ಪ್ರಪಂಚ ಬಹಳ ಹತ್ತಿರಾಗಿದೆ ಅಪ್ಪ...


ಎಲ್ಲ ವ್ಯವಸ್ಥೆಗಳನ್ನೂ ಅಮೇರಿಕಾದಿಂದಲೇ ಮಾಡಿಕೊಡುತ್ತೇನೆ............"


ಅಪ್ಪ ನನ್ನ ಕೈಯನ್ನು ಬಿಟ್ಟು ಬಿಟ್ಟರು...


"ಮಗಾ...
ಇನ್ನೂ ಒಂದು ವಿಷಯ ಮರೆತು ಬಿಟ್ಟಿದ್ದೀಯಾ...


ಹತ್ತಿರದಲ್ಲಿರೋ  ಸ್ಮಶಾನದವರಿಗೆ ಹೇಳಿ ಹೋಗು...


ಹಾಗೇನೆ..
ಅಂಬ್ಯುಲೆನ್ಸ್...,, ಕ್ರಿಯಾಕರ್ಮ ಮಾಡುವವರಿಗೂ ಹೇಳಿ ಹೋಗು....


ನಿನಗೆ ಅಮೇರಿಕಾದಿಂದ ಬರಲಿಕ್ಕೆ ತಡವಾಗಬಹುದಲ್ಲ...


ಇಲ್ಲಿ ತೊಂದರೆ ಆಗಬಾರದು ನೋಡು..."


ನಾನು ನಿಂತೇ ಇದ್ದೇ..........
ನನಗೆ ಏನು ಹೇಳಬೇಕೆಂದು ತೋಚಲಿಲ್ಲ........


ಆಗ..
ಮಡದಿ ರೂಮಿನಿಂದ ಸೂಟ್ ಕೇಸನ್ನು  ಬಹಳ ಕಷ್ಟಪಟ್ಟು  ಎಳೆದು ತರುತ್ತಿದ್ದಳು...


ಇನ್ನೊಂದು  ಕೈಯಲ್ಲಿ ಮಗುವಿತ್ತು...


ಹೊರಗಡೆ ಟ್ಯಾಕ್ಸಿ ಹಾರನ್ ಶಬ್ಧ ಕೇಳಿಸಿತು..................





(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ.............)