Thursday, September 16, 2010

ಹೂವಿನಂಥಹ... ನಗು..!!.


ನಗು ಅನ್ನೋದು.. 

ತಿನ್ನಲು ಬಾರದ ..

ಸಿಹಿ ಸಕ್ಕರೆ...


 
                      
ನನ್ನ  ನಗು ನೋಡಿ ನಿಮಗೆಲ್ಲ  ಆಶ್ಚರ್ಯನಾ??

                                                
 ನನಗೆ ನಗು ಅಂದರೆ ಬಲು ಇಷ್ಟ...
ನನ್ನ  ನಗು ಕಂಡು...
ನನ್ನಮ್ಮನೂ.. ನಕ್ಕು ಬಿಡ್ತಾಳೆ...


ನೀವೆಲ್ಲ ನಗಲಿಕ್ಕೆ ಯಾಕೆ ಇಷ್ಟೆಲ್ಲಾ  ಕಷ್ಟ ಪಡ್ತಿರಿ??

ಏನಾಗಿದೆ ನಿಮಗೆ ??



ಮನಸ್ಸಿನಲ್ಲಿ  ಏನೆಲ್ಲಾ  ಕೆಟ್ಟದ್ದನ್ನೆಲ್ಲಾ  ಇಟ್ಟುಕೊಂಡು...

 ಒದ್ದಾಡುತ್ತಿರಿ...!!

ಯಾಕೆ ??



ನಿಮಗೆ  ಹೇಗೆ  ನಗಬೇಕು ಅನ್ನೋದನ್ನು  ನಾನು ಹೇಳಿಕೊಡ್ತೇನೆ...
ಇದು ...
 ಬಹಳ  ಸಿಂಪಲ್....!!
ಏನೂ ಕಷ್ಟನೆ .. ಇಲ್ಲಾರಿ...!!


 

ನೀವು ಮೊದಲು ನಮ್ಮ ಹಾಗೆ ಇದ್ರಿ ಅಲ್ಲವೇ  ??

ಬರ್ತಾ... ಬರ್ತಾ ...
 ಯಾಕೆ  ನಗುವನ್ನು ಮರೆತ್ರಿ  ??





ಒಮ್ಮೆ  ಹಿಂದೆ ತಿರುಗಿ ನೋಡಿ... 
ನಿಮಗೇ...  
ಗೊತ್ತಾಗುತ್ತದೆ...!!





ದೊಡ್ದವರಾಗ್ತಾ .. ಆಗ್ತಾ ...
ನೀವು  ಬಹಳ ಬದಲಾಗಿ ಬಿಟ್ರಿ....


ಹೀಗೆ ಬದಲಾಗೋ ಅಗತ್ಯ ಇತ್ತಾ  ??

ದೊಡ್ಡವರಾದ ಮೇಲೆ..
ಯಾಕೆ  ಬದಲಾಗ ಬೇಕು...?
ನಮ್ಮ ಹಾಗೆ ಇರಬಹುದಲ್ಲಾ?



ನಮಗೂ ಅಳು ಬರುತ್ತದೆ... ಅಳುತ್ತೇವೆ...







ಆದರೆ...
ಅಳುವನ್ನು ಮರೆತು... 
ತಕ್ಷಣ ....
ನಕ್ಕುಬಿಡುತ್ತೇವೆ...!!
ಹೂವಂತೆ...!! 
ಸಿಹಿ ಸಕ್ಕರೆಯಂತೆ... 
ಜೇನಿನಂತೆ.... ಸವಿಯಾಗಿ...!!.



ಹೋಗ್ರಿ.. ರೀ...!!
ನಗೋದು ಹೇಗಂತ ...
ನಿಮಗೆ  ನಾನು ಹೇಳಿ ಕೊಡ ಬೇಕಾ ? !!

ಪುಕ್ಕಟೆ  ಹಾಗೆಲ್ಲ ಏನೂ  ಹೇಳಿ ಕೊಡೋದಿಲ್ಲ...


   
ನಿಮಗೆ  ಒಂದು  ವಿಷಯ ಹೇಳ್ತೇನೆ  ಕೇಳಿ...
ಏನಾದ್ರೂ.. ಬೇಕಿದ್ರೆ.. 
ಮೊದಲು ಏನಾದ್ರೂ  ಕೊಡ ಬೇಕು....



ನನಗೂ ಏನಾದ್ರೂ  ಕೊಡಿ...
ನಗೋದು ಹೇಗಂತ ಹೇಳಿ ಕೊಡ್ತೇನೆ....




ನನಗೆ ಏನು ಕೊಡ ಬೇಕು ಅಂತ  ಗೊತ್ತಾಗಲಿಲ್ವಾ?




ಅಯ್ಯೋ.. !!
 ರಾಮಾ..ರಾಮಾ...!!

ನನಗೆ...  ಹಣ ಕೊಡ್ತಿರಾ??

ನೀವು ಎಲ್ಲವನ್ನು  ಹಣದಿಂದಲೇ  ಖರೀದಿ ಮಾಡ್ತಿರಾ??
ನನಗೆ ಹಣ ಬೇಡಾರಿ.....




ನಿಮ್ಮ ಹಣ ನಿಮ್ಮ  ಹತ್ರಾನೆ.. ಇಟ್ಟುಕೊಳ್ಳಿ...




ನೀವೆಲ್ಲ  ಸ್ವಲ್ಪ ವಿಚಾರ ಮಾಡಿ ನೋಡಿ....
..



ಹಣದಿಂದ ಏನೇನು ಖರೀದಿ ಮಾಡ ಬಲ್ಲಿರಿ ?

ಎಷ್ಟು ಹಣ ಬೇಕು ನಿಮಗೆ?

ಹಣ ಬಿಟ್ರೆ ಬದುಕಿನಲ್ಲಿ ಬೇರೆ ಏನೂ ಇಲ್ಲವಾ?

ನೀವೇ.. ಹೇಳಿ..
.



ಬದುಕ ಬೇಕು...
ನಗಬೇಕು...
ಇದ್ದಷ್ಟು ದಿನ  ನಗುತ್ತ ಇರಬೇಕು...




ನನಗೆ  ಒಂದು ಹಿಡಿ  ಪ್ರೀತಿ ಕೊಡಿ...
ನಕ್ಕು ಬಿಡ್ತೇನೆ....
 ಪ್ರೀತಿ ಕೊಡಿ....
 ನಾನು ನಿಮಗೆ  ನಗು ಕೊಡ್ತೇನೆ...
ಹಾ..ಹ್ಹಾ.. !!


ನಗೋದು ತುಂಬಾ  ಸಿಂಪಲ್  ರೀ...!!

ನಗಲಿಕ್ಕೆ ಏನೂ ಮಾಡ ಬೇಕಿಲ್ಲಾ  !!

ಸ್ವಲ್ಪ.. ತುಂಟತನ ಇಟ್ಟುಕೊಳ್ಳಿ....



ಸುಮ್ಮನೆ...
ನಕ್ಕುಬಿಡಿ...! 
ಮನಸ್ಸಲ್ಲಿ ಏನನ್ನು ಇಟ್ಟುಕೊಳ್ಳದೆ..!


.
ಹ್ಹ..ಹ್ಹಾ..  ಹ್ಹಾ  !!

ನಕ್ಕು ಬಿಡಿ ಒಮ್ಮೆ...
ಯಾವುದೇ... 
ಗೋಡೆಗಳನ್ನು ಇಟ್ಟುಕೊಳ್ಳದೆ...
ನನ್ನ ಹಾಗೆ....!!




ಗೆಳೆಯರೇ....
ನಮಗೂ " ನಗಬೇಕು "  ಅಂತ ಅನಿಸುತ್ತದೆ...

ಕೆಲವೊಮ್ಮೆ ನಗುತ್ತೇವೆ...

ಅದು ಒಳಗಿನ ನಗುವಾಗಿರೋದಿಲ್ಲ...

ಏನೇನೋ... 
ದುಃಖ, ದುಗುಡ ..
ದುಮ್ಮಾನ... ನುಂಗಿಕೊಂಡು...
ಲಾಭ, ನಷ್ಟಗಳ...ಲೆಕ್ಕಾಚಾರ ಮಾಡುತ್ತಾ..
ಮುಖದಿಂದ .... 
ನಗುತ್ತೇವೆ....

ಮನಸ್ಸಿಂದ....
 ಹೃದಯದಿಂದ ಅಲ್ಲ....

ಹೊರಗೆ ಕಾಣುವ ಮುಖದಿಂದ..
ವ್ಯವಹಾರಕ್ಕಾಗಿ...
  ನಗುತ್ತೇವೆ... ಅಲ್ಲವೇ?.



(ಗೆಳೆಯರೇ.. 
ನಾನು ಬರೆದ  "ಬೇಕು.. ಕಪ್ಪು ಬಿಳುಪು"  ಕಥೆಯ ಮುಂದಿನ ಭಾಗವನ್ನು  
ಬಹಳ ಚಂದವಾಗಿ  ಬರೆದಿದ್ದಾರೆ ...
 ನಮ್ಮೆಲ್ಲರ ಮೆಚ್ಚಿನ ಬ್ಲಾಗಿಗ "ದಿನಕರ್ "

"ಕಪ್ಪು ಬಿಳುಪು" ನೆನಪಿನಲ್ಲಿ  ಉಳಿದದ್ದು  ಬರಿ.. ಬಿಳುಪಾ?

Monday, September 6, 2010

ಬೇಕು....ಕಪ್ಪು.. ಬಿಳುಪು..

ಎಲ್ಲಕ್ಕಿಂತ ಮೊದಲು  ನಿಮಗೆ ...
ಈ .. ಸಂದರ್ಭವನ್ನು ಹೇಳಿಬಿಡಬೇಕು...


ನಾನು ಈ ಪ್ರದೇಶದ ಜಿಲ್ಲಾಧಿಕಾರಿ..
ಡಿಸಿ.


ಕಳೆದ ನಾಲ್ಕಾರು ದಿನಗಳಿಂದ ಚುರುಕಾಗಿದ್ದ ಮಳೆ..
ನಿನ್ನೆಯಿಂದ "ಕುಂಭದ್ರೋಣ" ಮಳೆಯಾಗಿ ಸುರಿಯುತ್ತಿದೆ..


ಎಂದೂ ಕಂಡರಿಯದ ಮಳೆ..!


ಈ ಮಳೆಯಿಂದಾಗಿ ಡ್ಯಾಮಿನ ಗೇಟುಗಳನ್ನು ತೆಗಿಯಲೇ ಬೇಕಾಗಿತ್ತು...
ತೆಗೆದಿದ್ದೇವು..


ಅದಕ್ಕೂ ಮೊದಲು ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುವ ಕೆಲಸ ಮಾಡಲಾಯಿತು..


ಅವರಿಗೆ ತಾತ್ಕಾಲಿಕವಾಗಿ ಊಟ , ವಸತಿ ಸೌಕರ್ಯ ಮಾಡಲಾಯಿತು...


ನಮ್ಮ ಮನೆಯೂ ಮುಳುಗುವ ಸಾಧ್ಯತೆಯಲ್ಲಿತ್ತು...!


ನನ್ನಾಕೆ ಮತ್ತು ಮಕ್ಕಳನ್ನು ಮೊದಲೇ ತವರು ಮನೆಗೆ ಕಳುಹಿಸಿ ಬಿಟ್ಟಿದ್ದೆ...


"ಸರ್.. ನಿಮ್ಮ ಮನೆಯ ಕೆಳಗಿನ ರಸ್ತೆಯವರೆಗೆ ನೀರು ಏರಿದೆ..
ನಿಮಗಾಗಿ ಹೆಲಿಕಾಪ್ಟರ್ ಬರುತ್ತಿದೆ...
ನಿಮ್ಮ ಮನೆಯ ಟೆರ್ರೆಸಿಗೆ ಬನ್ನಿ.."


ಇದು ಬಹಳ ಸಂಕಟದ ಸಮಯ..


ಇದು ನನ್ನಾಕೆ ಸ್ವತಃ ನಿಂತು ಕಟ್ಟಿಸಿದ ಮನೆ..
ಪ್ರತಿಯೊಂದನ್ನೂ ತನಗೆ.. ತನ್ನಿಷ್ಟದಂತೆ . ಬಹಳ ಕಷ್ಟಪಟ್ಟು ಕಟ್ಟಿದ್ದಳು..


ನನ್ನ ಸಲಹೆಯನ್ನೂ ಕೇಳಿದ್ದಳು..


ನನ್ನಾಕೆ ನನಗೆ ಸಿಕ್ಕಿದ್ದೇ ನನ್ನ ಪುಣ್ಯ..!
ನಮ್ಮ ಬದುಕಿನಲ್ಲಿ ನಾವು ಇಷ್ಟ ಪಟ್ಟವರೆಲ್ಲ..  "ಹೆಂಡತಿಯಾಗಿ" ಸಿಕ್ಕುವದಿಲ್ಲ..
ಸಿಕ್ಕರೂ  ಪ್ರೀತಿಯಿಂದ ಬಾಳಲೂ ಸಾಧ್ಯವಿಲ್ಲ...
ಅವಳ ಪ್ರೀತಿಗೆ ನಾನು ಸಿಲುಕಿದ್ದೇ ನನ್ನ ಭಾಗ್ಯ..

ಅವಳ ತಂದೆ ಈ ಪ್ರದೇಶದ ಬಲುದೊಡ್ಡ ಕೈಗಾರಿಕೋದ್ಯಮಿ..
ಅವರಿಂದಾಗಿಯೇ ನಾನು ಡಿಸಿ ಆಗಿದ್ದು..


ತನ್ನಪ್ಪನಿಂದಾಗಿ ತನ್ನ ಗಂಡ ಡಿಸಿಯಾಗಿದ್ದಾನೆ ..
ಎನ್ನುವಂಥಹ ಸೊಕ್ಕು ನನ್ನಾಕೆ ಎಂದೂ ನನ್ನ ಬಳಿ ತೋರಿಸಿಲ್ಲ..


ನಮ್ಮ ಪ್ರೀತಿ ಶುರುವಾದಾಗಿಲಿನಿಂದ. ಇಲ್ಲಿಯ ವರೆಗೂ ಒಂದೇ ಥರಹದ ಪ್ರೀತಿ..ಕೊಡುತ್ತಿದ್ದಾಳೆ..


ನನ್ನ ಬದುಕಿನ ಪ್ರತಿ ಕ್ಷಣದಲ್ಲೂ ನನ್ನಾಕೆ ಇದ್ದಾಳೆ...

ಪ್ರತ್ಯಕ್ಷವಾಗಿ.. ಇಲ್ಲವೇ.. ಪರೋಕ್ಷವಾಗಿ...ನನ್ನೊಡನೆಯೇ ಇರುತ್ತಾಳೆ..ಮಾನಸಿಕವಾಗಿಯೂ ಸಹ..


ನನ್ನ ಪ್ರತಿಯೊಂದೂ.. ಬೇಕು... ಬೇಡಗಳು....
ನನ್ನ ದೌರ್ಬಲ್ಯಗಳು ...
ನನಗಿಂತ ಹೆಚ್ಚಾಗಿ ಅವಳಿಗೇ ಗೊತ್ತು..


ನನ್ನ ಆಲೋಚನೆಗಳು, ನಾನು ಯೋಚಿಸುವ ರೀತಿ ಅವಳಿಗೆ ತಟ್ಟನೆ ಗೊತ್ತಾಗಿ ಬಿಡುತ್ತದೆ.....
ನನ್ನ ಭಾವನೆಗಳನ್ನು.... ಮುಖನೋಡಿಯೇ... ಓದಿ ಬಿಡುತ್ತಾಳೆ..

ಅಷ್ಟರಲ್ಲಿ ಅವಳ ಫೋನ್.. !


"ರೀ..
ನಮ್ಮ ಮನೆಯನ್ನು ಬಹಳ ಆಸೆ ಪಟ್ಟು ಕಟ್ಟಿದ್ದೇನೆ..
ಮನೆಯಂತೂ ಮುಳುಗುತ್ತಿದೆ...
ನೀವು ಬರುವಾಗ..
ಅದರಲ್ಲಿನ ಕೆಲವು ವಸ್ತುಗಳನ್ನಾದರೂ ತಂದು ಕೊಡಿ ..ಪ್ಲೀಸ್.."


ನನ್ನಾಕೆಯ... ಬೇಡಿಕೆಗಳೇ ಹೀಗೆ...
ಇಲ್ಲವೆನ್ನಲು ಸಾಧ್ಯವೇ ಇಲ್ಲ...


ನಾನು ಲಗುಬಗೆಯಿಂದ ಒಳಗೆ .. ಹಾಲಿಗೆ  ಓಡಿ..  ಬಂದೆ..


ನನ್ನ ಹಿಂದೆ ನನ್ನ ಸಹಾಯಕನೂ ಓಡಿ ಬಂದ..

ದೊಡ್ಡದಾದ ಕಿಡಕಿಗಳು..
ಅದಕ್ಕೆ ಸುಂದರ ಕಸೂತಿಯ ಪರದೆಗಳು..!


ಈ ಪರದೆಗಳನ್ನು ನಾವು ದೆಹಲಿಗೆ ಹೋದಾಗ ತಂದಿದ್ದು...
ಅಲ್ಲಿನ ಪಂಜಾಬಿ ಅಂಗಡಿಯಲ್ಲಿ ದುಬಾರಿಯಾಗಿದ್ದರೂ ಬಹಳ ಆಸೆ ಪಟ್ಟು ತಂದಿದ್ದಳು..


"ಇದನ್ನು ಅರ್ಜಂಟಾಗಿ ಪ್ಯಾಕ್ ಮಾಡಿ"


ನನ್ನ ಸಹಾಯಕನಿಗೆ ಹೇಳಿದೆ..


ಹಾಲಿನಲ್ಲಿ ಟಿಪಾಯಿಯ ಮೇಲೆ ಹಾಕಿದ ಹೊದಿಕೆ...
ಅವಳೇ ಸ್ವತಃ ಸುಂದರ ಚಿತ್ರಗಳನ್ನು ಹಾಕಿದ್ದಳು..


"ಇದನ್ನೂ ಪ್ಯಾಕ್ ಮಾಡಿ ಪ್ಲೀಸ್"


ಆತ ಪ್ಯಾಕ್ ಮಾಡಿದ..


"ಸರ್ ..
ನೀವು ಹೊರಡಿ.. ನೀರು ಏರುತ್ತಿದೆ.."


ನಾನು ಟಿವಿ ಷೋಕೇಸ್ ಬಳಿ ಬಂದೆ..

ನಮ್ಮ ಮದುವೆಯ ಫೋಟೊ... ಅದನ್ನು ತೆಗೆದು ಸಹಾಯಕನ ಬಳಿ ಕೊಟ್ಟೆ...


ಡೈನಿಂಗ್ ಹಾಲಿಗೆ ಬಂದೆ...


ಅಲ್ಲಿಯ ಷೋಕೇಸಿನಲ್ಲಿ ದುಬಾರಿಯಾದ ಪಿಂಗಾಣಿ ಪಾತ್ರೆಗಳು !!


ನಾವು ಮಕ್ಕಳೊಂದಿಗೆ ಯುರೋಪ್ ದೇಶಗಳಿಗೆ ಹೋದಾಗ ತಂದಿದ್ದು...
ಅವುಗಳನ್ನೂ ಪ್ಯಾಕ್ ಮಾಡಲು ಸೂಚಿಸಿದೆ...


ಸಹಾಯಕ ಅದನ್ನೂ ಪ್ಯಾಕ್ ಮಾಡಿದ..


ಕಿಡಕಿಯಿಂದ ಇಣುಕಿ ನೋಡಿದೆ...


ಹೊರಗೆ ಮಳೆ ಇನ್ನೂ ಜೋರಾಗಿ ಹೊಯ್ಯುತ್ತಿತ್ತು...
ನೀರಿನ ಮಟ್ಟ ಒಂದೇ ಸವನೇ ಏರುತ್ತಿತ್ತು...
ಮನೆಯ ಅಂಗಳದವರೆಗೆ ನೀರು ಬಂದಿತ್ತು...


ಪರಿಸ್ಥಿತಿ  ಭಯ ಹುಟ್ಟಿಸುವಂತಿತ್ತು.....!!


"ಜಲ್ದಿ ...
ಆದಷ್ಟು ಬೇಗ.. ಸುರಕ್ಷಿತ ಜಾಗಕ್ಕೆ ಹೋಗಿ  ಬಿಡಲೇ....?"

 ನನಗೂ..ಜೀವದ  ಭಯ ಕಾಡತೊಡಗಿತು..

ಇತ್ತ  ಮಡದಿಯ  ಪ್ರೀತಿಯ ಬೇಡಿಕೆ...!

ಕೊನೆಗೆ ...
ನನ್ನ  ಮಡದಿಯ ಪ್ರೀತಿಯೇ ಗೆದ್ದಿತು..
ಅವಳು ಇಷ್ಟಪಟ್ಟ ಕೆಲವನ್ನಾದರೂ ತೆಗೆದು ಕೊಂಡು  ಹೋಗೋಣ ಅನ್ನಿಸಿತು..

ಅವಳು ಕೊಟ್ಟ ಪ್ರೀತಿಗೆ ಇಷ್ಟನ್ನಾದರೂ ಮಾಡಬೇಕು ಅಲ್ಲವೇ?

ನಾವು ಅಡುಗೆ ಮನೆಗೆ ಬಂದೆವು...


ನನಗೆ ಕಂಡಿದ್ದು... " ಓವನ್."..!!..

ನನಗಾಗಿಯೇ ...ಅಮೇರಿಕಾದಿಂದ ತಂದಿದ್ದಳು..
ಎಣ್ಣೆರಹಿತ ಅಡಿಗೆ ಮಾಡಲು...
ನನ್ನ ತೂಕ ಜಾಸ್ತಿಯಾಗುತ್ತಿದೆ..ಅದನ್ನು  ಕಡಿಮೆ ಮಾಡಲು..!

ಈ ಎಲ್ಲ  ಸಾಮಾನುಗಳು......ಎಲ್ಲಕಡೆಯೂ.. ಸಿಗುತ್ತವೆ..

ಆದರೆ  ಇದರ ಹಿಂದಿನ ಪ್ರೀತಿ...??..

ಇಂಥಹ ಒಂದು ಹಿಡಿ  ಪ್ರಿತಿಗಾಗಿಯೇ,, ಅಲ್ಲವೇ ನಾವೆಲ್ಲಾ ಬದುಕುವದು?


ಎಷ್ಟು ಪ್ರೀತಿ ಮಾಡುತ್ತಾಳೆ ನನ್ನವಳು..!
ಅವಳ ಬಗೆಗೆ ಮತ್ತಷ್ಟು ಪ್ರೀತಿ ಉಕ್ಕಿತು...!


ಅದನ್ನೂ ಪ್ಯಾಕ್ ಮಾಡಿಸಿದೆ..
ಆತ ನಾನು ಪ್ಯಾಕ್ ಮಾಡಿದ ವಸ್ತುಗಳನ್ನು ಹೆಲಿಕಾಪ್ಟರಿನಲ್ಲಿ ಇಟ್ಟು ಬಂದ...


ಈಗ ನಾನು ಬೆಡ್ ರೂಮಿಗೆ ಬಂದೆ...


ನನಗೆ ಮೊದಲು ಕಂಡಿದ್ದು ಮೃದುವಾದ ಉಣ್ಣೆಯ ಚಾದರ..!
ನಾವು ಸ್ವಿಟ್ಸರ್ ಲ್ಯಾಂಡಿಗೆ ಹನಿ ಮೂನ್ ಗೆ ಹೋದಾಗ ಆಸೆ ಪಟ್ಟು ತಂದಿದ್ದಳು..


ಅದನ್ನೂ ಪ್ಯಾಕ್ ಮಾಡಿಸಿದೆ..


"ಸರ್ .. ಹೆಲಿಕಾಪ್ಟರಿನಲ್ಲಿ ಜಾಗ ಸಾಕಾಗುವದಿಲ್ಲ..
ಬನ್ನಿ....
ಜಲ್ದಿ ಹೊರಡೋಣ.. ನೀರು ಏರುತ್ತಿದೆ... !!.."

ಅವನ ಧ್ವನಿಯಲ್ಲಿ ಆತಂಕ ಕಾಣುತ್ತಿತ್ತು...!


"ನೀನು...
 ಒಂದು ಕೆಲಸ ಮಾಡು...
ಇವುಗಳನ್ನು ಸುರಕ್ಷಿತ ಜಾಗದಲ್ಲಿ ಇಟ್ಟು ಬೇಗ ಬಾ...
ನಾನು ಮೇಲೆ ಮಹಡಿಗೆ  ಹೋಗಿ ನೋಡಿ ಬರುತ್ತೇನೆ...."


ನನ್ನ ಸಹಾಯಕ ಒಲ್ಲದ ಮನಸ್ಸಿನಿಂದ ಅವುಗಳನ್ನು ಎತ್ತಿಕೊಂಡು ಹೋದ..
ತನ್ನ ಜೀವದ ಭಯವೂ ಅವನಿಗೆ ಕಾಡಿರಬಹುದಲ್ಲವೇ?


ಅಷ್ಟರಲ್ಲಿ ನನ್ನಾಕೆಯ ಫೋನ್...


"ರೀ ....
ಎಲ್ಲಿದ್ದೀರಿ..? ಜಲ್ದಿ ಹೊರಡಿ....
ಬರುವಾಗ...
ಮೇಲೆ ಮಹಡಿಯಲ್ಲಿ ರಿಕ್ರಿಯೇಷನ್  ರೂಮಿನ.. 
ವಾರ್ಡ್ ರೋಬಿನಲ್ಲಿ ನಮ್ಮ ಫೋಟೊ ಅಲ್ಬಮ್ಮುಗಳಿವೆ ..


ನಮ್ಮ ಹಳೆಯ ನೆನಪುಗಳಿಗಾಗಿ ಅವುಗಳನ್ನು ಮರೆಯದೇ.. ತನ್ನಿ..."


ನಾನು ಮಹಡಿ ರೂಮಿಗೆ  ಲಗುಬಗೆಯಿಂದ  ಬಂದೆ..


ಅದು ನನ್ನ ಆಸೆಗಾಗಿ ಕಟ್ಟಿದ ರೂಮು..!


ಎಷ್ಟೋ ಮುಸ್ಸಂಜೆಗಳನ್ನು ....
ಸಣ್ಣ ದೀಪಗಳನ್ನು ಹಾಕಿಕೊಂಡು...
ಘಜಲ್ಲುಗಳನ್ನು...
ಭಾವಗೀತೆಗಳನ್ನು..
ಹಳೆಯ ಸಿನೇಮಾ ಹಾಡುಗಳನ್ನು ಕೇಳುತ್ತ ಕಳೆದ ಜಾಗ ಇದು.. !!

ಮತ್ತೆ  ಹಳೆಯ ನೆನಪುಗಳು...!


ಎಷ್ಟೊಂದು  ದಿನಗಳ ಸಂಜೆಯಲ್ಲಿ ಇಲ್ಲಿ ನಾವು ಮೈಮರೆತಿದ್ದೇವೆ !!
ಜಗತ್ತನ್ನೇ ಮರೆತು...
ಕಳೆದು ಹೋಗಿದ್ದೇವೆ...!


ಓಹ್...!!


ಎಷ್ಟೊಂದು...  ಮಧುರವಾದ ಕ್ಷಣಗಳನ್ನು ಇಲ್ಲಿ ನಾವಿಬ್ಬರೂ ಕಳೆದಿದ್ದೇವೆ...!!..


ಒಂದು ಹೆಣ್ಣಿನಿಂದ ...
ಎಷ್ಟು ಬಗೆಯ ಸುಖಗಳನ್ನು ಪಡೆಯಲು ಸಾಧ್ಯವೋ...
ಅವುಗಳನ್ನೆಲ್ಲವನ್ನೂ... ನನ್ನಾಕೆ ಕೊಟ್ಟಿದ್ದಾಳೆ..!

ನನ್ನ  ಈ  ಅಧಿಕಾರ..!
ಅಂತಸ್ತು..
ಈ..ವೈಭೋಗ.. !
ಎಲ್ಲವೂ  ನನ್ನಾಕೆಯಿಂದ ...!
ನನ್ನಾಕೆಯ ಪ್ರೀತಿಯಿಂದ ಸಿಕ್ಕಿದ್ದು.. !


ನಾನೇ ಪುಣ್ಯವಂತ...!


ನಾನು ಲಗುಬಗೆಯಿಂದ ಅಲ್ಲಿನ ಹಾಡಿನ ಸೀಡಿಗಳನ್ನು ತೆಗೆದೆ..  
ಆ ನೆನಪುಗಳು.. ಅವುಗಳ ಮೆಲುಕು..
ಎಲ್ಲವೂ ಒಂದಕ್ಕಿಂತ ಒಂದು  ಮಧುರ.. !!


ಆ ಸಿಡಿಗಳನ್ನು ಒಂದು ಬ್ಯಾಗಿನಲ್ಲಿ ತುಂಬಿದೆ...


ಹೆಲಿಕಾಪ್ಟರ್ ಶಬ್ಧ ಜೋರಾಗಿ ಕೇಳಿತು...!


ನನ್ನ ಸಹಾಯಕ ಲಗು ಬಗೆಯಿಂದ ಓಡೋಡಿ ಬಂದ...


"ಸರ್..
ಜಲ್ದಿ ಬನ್ನಿ...  ಬನ್ನಿ.. ಸರ್..
ಎಲ್ಲಕ್ಕಿಂತ ನಮ್ಮ ಜೀವ ದೊಡ್ಡದು..
ನಮ್ಮ ಬಳಿ ಹೆಚ್ಚು ಸಮಯವಿಲ್ಲ...
ಮನೆಯ ಹಾಲಿನ ವರೆಗೆ ನೀರು ಬಂದಿದೆ.. ಬನ್ನಿ... ಬನ್ನಿ"


"ನೋಡಿ..
ಇನ್ನು ಒಂದೆರಡು ಸಾಮಾನುಗಳಿವೆ..
ತೆಗೆದುಕೊಂಡು ಬರುತ್ತೇನೆ..
ಬಂದೆ ಇರಿ.."


"ಸರ್..
ಬರುವಾಗ ಅಸಹಾಯಕರಾಗಿ ನಿಂತಿದ್ದ.. ಕೆಲವು ಜನರನ್ನು ಕರೆದು ಕೊಂಡು ಬಂದಿದ್ದೇನೆ..
ಹೆಲಿಕಾಪ್ಟರಿನಲ್ಲಿ ಜಾಗ ಇಲ್ಲ..
ಹೆಚ್ಚೆಂದರೆ ನೀವು...
ನಿಮ್ಮ ಸಂಗಡ ಒಂದು ಬ್ಯಾಗ್..ತೆಗೆದುಕೊಂಡು ಹೋಗ ಬಹುದು..
ದಯವಿಟ್ಟು ... ಜಲ್ದಿ ಬನ್ನಿ"


ನಾನು ಲಗು ಬಗೆಯಿಂದ ವಾರ್ಡ್ ರೋಬ್ ಬಾಗಿಲು ತೆಗೆದೆ..


ಮೊದಲನೆಯ ಮಗನ ಅಲ್ಬಮ್.. ಬ್ಯಾಗ್ ಓಳಗೆ ತುರುಕಿದೆ...
ಮತ್ತೆ ನೋಡಿದೆ..
ಮತ್ತೆರಡು ಅಲ್ಬ್ಬಮ್.. ಅದೂ ಮಕ್ಕಳದು..
ಅವುಗಳನ್ನೂ..  ಬ್ಯಾಗಿನಲ್ಲಿ  ಕಷ್ಟಪಟ್ಟು ಹಾಕಿದೆ...!


ಇನ್ನೂ ಎರಡು ಅಲ್ಬಮ್ ಇದ್ದವು..


ಒಂದು ನಮ್ಮ ಮದುವೆಯ ಫೋಟೋಗಳು..... !!


ಕಷ್ಟಪಟ್ಟು ಅದನ್ನೂ ಬ್ಯಾಗ್  ಒಳಗೆ ಹಾಕಿದೆ..


ಇನ್ನೊಂದು ಅಲ್ಬಮ್.. !
ಅದು ನನ್ನ ಕಾಲೇಜು ದಿನಗಳದ್ದು..!


ನಾನು ಲಗು ಬಗೆಯಿಂದ ತೆಗೆದೆ..


ನಮ್ಮ ಕೊನೆಯ ವರ್ಷದ ಗ್ರೂಪ್ ಫೋಟೊ...!


ಅದರ ಹಿಂಬದಿಗೆ ಬೆರಳು ಹಾಕಿ ತಡಕಾಡಿದೆ..!

ಏನೋ.. ಹುಡುಕುತ್ತಿದ್ದೆ..

ಸಿಗುತ್ತಿಲ್ಲ..!


ಹಾಂ..! ಸಿಕ್ಕಿತು..!!


"ಬ್ಲ್ಯಾಕ್.. ಎಂಡ್  ವೈಟ್.."..  ಫೋಟೊ..!..


ಗುಂಗುರು ಕೂದಲಿನ..
ಮುಂಗುರುಳು.. ..
ಆ.. ಹುಡುಗಿಯ... ಫೋಟೊ..!!. !


ಹರವಾದ ಕೆನ್ನೆಯ..
ಮುಂದು.. ಹಲ್ಲಿನ..
ದಟ್ಟ ಕಣ್ಣುಗಳ .... ಆ.. ಫೋಟೊ..!!


ನನ್ನ ಶರ್ಟಿನ ಕಿಸೆಯಲ್ಲಿ ಇಟ್ಟುಕೊಂಡೆ..


ನಾನು ಹೆಲಿಕಾಪ್ಟರ್ ಏರಲು ಬಂದೆ...


ನನ್ನ ಸಹಾಯಕ ಮಳೆಗೆ ಅಡ್ಡವಾಗಿ.. ಕೊಡೆಯನ್ನು ಹಿಡಿದ..
ಮಳೆ ಜೋರಾಗಿ ಹೊಯ್ಯುತ್ತಿತ್ತು..


ಮೈಯೆಲ್ಲ ಒದ್ದೆಯಾಗುತ್ತಿತ್ತು..!


ನಾನು ನನ್ನ ಕೈಯನ್ನು ಶರ್ಟಿನ ಕಿಸೆಗೆ.. ಅಡ್ಡವಾಗಿ ಹಿಡಿದು..
ಹೆಲಿಕಾಪ್ಟರ್ ಏರಿದೆ...


ಒಳಗಿನ ಫೋಟೊ ಒದ್ದೆಯಾಗಿರಲಿಲ್ಲ....!


ಅಷ್ಟರಲ್ಲಿ ನನ್ನಾಕೆಯ ಫೋನ್..!
ನಾನು ತೆಗೆದು ಕೊಳ್ಳಲಿಲ್ಲ..
ಫೋನ್ ರಿಂಗ್ ನಿಲ್ಲಿಸಲಿಲ್ಲ..


ಯಾಕೋ..
ಆ...
ಹಳೆಯ  ಕನಸುಗಳೊಡನೆ.. ...
ಆ ...
ಹುಡುಗಿಯ  ನೆನಪುಗಳೊಡನೆ..
ಒಮ್ಮೆ....
ಕಣ್ಣು ಮುಚ್ಚೋಣ ಅನಿಸಿತು...



(ಇದು ಕಥೆ )