ನಿಮಗೆ ನನ್ನ ಸಮಸ್ಯೆ ಅರ್ಥವಾಗೋದಿಲ್ಲ ಬಿಡಿ....
ನನ್ನಷ್ಟಕ್ಕೆ ನಾನು ಆರಾಮಾಗಿದ್ದೆ...
ನನ್ನಪ್ಪ ಬಿಡಬೇಕಲ್ಲ...
"ಮಗನೆ ಮದುವೆ ವಯಸ್ಸಾಯ್ತು.. ಮದುವೆ ಮಾಡಿಕೊ"
ಅಂತ ತಾನೆ ಒಂದು ಹುಡುಗಿ ಹುಡುಕಿ ನಿಶ್ಚಯಿಸಿಬಿಟ್ಟ..
ಹೆಣ್ಣು ನೋಡಲು ನಾನು ಹೋಗಿದ್ದೆ..
ಹುಡುಗಿ ...
ಹೆಣ್ಣು ಎನ್ನುವದನ್ನು ಬಿಟ್ಟರೆ "ಅಂದ ಚಂದ" ಎನ್ನುವ ಶಬ್ಧ ಅಕ್ಕಪಕ್ಕದಲ್ಲಿಯೂ ಇರಲಿಲ್ಲ...
"ಮಗನೆ...
ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸಿಗುವದಿಲ್ಲ...
ಸಿಕ್ಕರೂ "ಸಾಪ್ಟವೇರ್.. ಅಮೇರಿಕಾ ಅಂತ..
ಅಂಥವರನ್ನೇ ಹುಡುಕಿಕೊಳ್ತಾರೆ...
ನಿನ್ನಂಥಹ ಮಾಮೂಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರು ...
"ಚಂದದ ಹೆಣ್ಣಿನ ಕನಸನ್ನು ಕಾಣಬಾರದು"...
"ಅಪ್ಪಾ...
ಬದುಕು ಪೂರ್ತಿ ಬಾಳಬೇಕಲ್ಲಪ್ಪಾ...!
ಈ ಮುಖ ನೋಡಿ ಹೇಗೆ ಸಾಧ್ಯ...?
ನನಗೂ ಮಕ್ಕಳ ಆಸೆ ಇದೆ..."
"ಮಗನೆ...
ದೇಹದ ಹಸಿವಿಗೆ ಅಂದ ಬೇಕಿಲ್ಲ...
ರಾತ್ರಿ ಕತ್ತಲೆಯಲ್ಲಿ..
ದೀಪವಾರಿಸಿದ ಮೇಲೆ ....ಯಾವ ಅಂದವೂ ಕಾಣುವದಿಲ್ಲ...!
ದಾಂಪತ್ಯಕ್ಕೆ ಚಂದ ಬೇಕಿಲ್ಲ ಮಗನೆ...........
ನೀ... ಸುಮ್ಮನಿರು..
ನಿನಗಿಂತ ಹೆಚ್ಚಿನ ಬದುಕನ್ನು ನಾನು ನೋಡಿದ್ದೇನೆ...
ನಿನ್ನ ಮಾವ ಪೋಲಿಸು..
ಚೆನ್ನಾಗಿ ಹಣ ಇದೆ..
ಒಬ್ಬಳೇ ಮಗಳು...ಮಾವ ನಿನ್ನನ್ನು ನೋಡಿಕೊಳ್ತಾನೆ ...
ನಿನ್ನ ಬದುಕು ಚಂದವಾಗಿರುತ್ತದೆ..."
ಅಪ್ಪನ ನನ್ನ ಮದುವೆ ಮಾಡಿ ಮುಗಿಸಿದ...
ನಿಮಗೆಲ್ಲ ನನ್ನ ಮಾವನ ಬಗೆಗೆ ಹೇಳಬೇಕು...
ನನ್ನ ಮಾವ ಪೋಲಿಸ್...
"ಪೇದೆ" ಎಂದರೆ ಗೌರವ ಕಡಿಮೆ ಆಗಬಹುದು ಅಂತ..
ಆ ಶಬ್ಧ ತಪ್ಪಿಯೂ ಉಪಯೋಗಿಸೋದಿಲ್ಲ ಬಿಡಿ...
ಬಹಳ ದರ್ಪು...
ಸೊಕ್ಕಿನ ಮೀಸೆ... ಕೆಂಪು ಕಣ್ಣುಗಳು ....
ಬಹುಷಃ ಹುಟ್ಟಾ ಪೋಲಿಸ್ ನನ್ನ ಮಾವ...
ಒಂದು ದಿನ ಕುತೂಹಲ ತಡೆಯಲಾಗದೆ ಕೇಳಿದ್ದೆ...
"ನಮ್ಮ ಜಗತ್ತಿನಲ್ಲಿ ...
ಶಾಂತಿಯಿಂದ ಇರಲಿಕ್ಕೆ ಎಲ್ಲವೂ ಇದೆ...
ಅತ್ಯಂತ ಪವಿತ್ರವಾದ ಧರ್ಮಗಳಿವೆ.....
ಧರ್ಮ ಗ್ರಂಥಗಳಿವೆ ....
ಕಣ್ಣಿಗೆ ಕಾಣದೆ ..
ಇದೆಯೆನ್ನುವ ....
ಕಲ್ಪಿಸಿಕೊಳ್ಳುವ ....
ಬಗೆ ಬಗೆಯ ದೇವರುಗಳಿದ್ದಾರೆ..!
ಮಂದಿರ... ಚರ್ಚು... ಮಸೀದೆ ...
ಮಠಗಳು... ಎಲ್ಲವೂ ಇವೆ....
ಪಾಪ ಪುಣ್ಯಗಳ ಬಗೆಗೆ ತಿಳಿಸಿ ಹೇಳಿ..
ಹೆದರಿಸುವ ...
ಧರ್ಮ ಗುರುಗಳಿದ್ದಾರೆ..
ಶಾಲೆಗಳಿವೆ... ಶಿಕ್ಷಣ ಸಂಸ್ಥೆಗಳಿವೆ ..
ಪ್ರತಿ ಮನೆಯಲ್ಲಿ ...
ಒಳ್ಳೆಯ ದಾರಿ ತೋರಿಸುವ ಅಪ್ಪ ಅಮ್ಮರಿಂದಾರೆ..
ಸರಿ.. ತಪ್ಪುಗಳನ್ನು ತಿಳಿಸಿ ಹೇಳುವ ಅಜ್ಜ ಅಜ್ಜಿಯರಿದ್ದಾರೆ...
ಮತ್ಯಾಕೆ ಈ ಪೋಲಿಸು..?
ಸೈನಿಕರು...?
ಯಾಕ ಬೇಕು ಸ್ಟೆನ್ ಗನ್ನುಗಳು..?
ಪರಮಾಣು ಬಾಂಬುಗಳು...?
ಕಾಯಿದೆ ಕಾನೂನು..? ....?.. ಫಾಸಿ ಶಿಕ್ಷೆಗಳು ...? .."
ನನ್ನ ಮಾವ ...
ಠೀವಿಯಿಂದ ಮೀಸೆಯ ಮೇಲೆ ಕೈಯ್ಯಾಡಿಸಿದ...
"ಅಳಿಮಯ್ಯಾ...
ಈ ಮನುಷ್ಯ ಇದ್ದಾನಲ್ಲ ...
ಈತನೂ ಒಂದು ಪ್ರಾಣಿ...
ಹಿಂಸೆ ಇವನ ಮೂಲ ಪ್ರವೃರ್ತಿ...
ಮೊದಲು ಕಾಡಿನಲ್ಲಿದ್ದ...
ಈಗ ನಾಡಿನಲ್ಲಿದ್ದಾನೆ... ಜಾಸ್ತಿ ವ್ಯತ್ಯಾಸ ಇಲ್ಲ...
ಈತ ಹೊಟ್ಟೆ ತುಂಬಿಸಿಕೊಳ್ಳುವದಕ್ಕೂ ಸಹ ಸಸ್ಯವನ್ನೋ..
ಪ್ರಾಣಿಯನ್ನೋ ಸಾಯಿಸುತ್ತಾನೆ...
ಹಿಂಸೆ...
ಇವನಿಗೆ ಅತ್ಯಂತ ಸಹಜ .....!
ಸುಮ್ಮನೆ ಇದ್ದ ಪಕ್ಕದಲ್ಲಿದ್ದವರಿಗೆ ಚಿವುಟಿದರೆನೇ ಇವನಿಗೆ ಖುಷಿ... !
ಮನುಷ್ಯ ಪ್ರಾಣಿಯನ್ನು ...
ಹದ್ದು ಬಸ್ತಿನಲ್ಲಿಡಲು ಧರ್ಮಗಳಿಂದ ...
ದೇವರುಗಳಿಂದ ಆಗುವದಿಲ್ಲ...
ಹೆದರಿಕೆ... ಭಯ ಇವನಿಗೆ ಬೇಕು...
ಅದಕ್ಕಾಗಿ ಪೋಲಿಸರ ಲಾಠಿ ಬೇಕೇ ಬೇಕು....
ಇಲ್ಲಿ ..
ಶಾಂತಿಗಾಗಿಯೇ ಘನ ಘೋರ ಯುದ್ಧಗಳಾಗುತ್ತವೆ..!
ಸಾವಿರಾರು ಜನರು ಸಾಯ್ತಾರೆ...!
ನಿನಗ್ಯಾಕೆ ಇದೆಲ್ಲ... ?
ನೀನು ..
ನಿನ್ನ ಕೆಲಸ..
ಹಾಗು ನನ್ನ ಮಗಳನ್ನು ನೋಡಿಕೊ ಸಾಕು..."
ನನ್ನ ಮಾವ ದಡ್ಡ ಅಂತ ನನಗೆ ತಪ್ಪು ಕಲ್ಪನೆಯಿತ್ತು...
ಆದರೆ ...
ಮಹಾ ಬುದ್ಧಿವಂತ ಅಂತ ಮದುವೆಯಾದ ಮೇಲೆ ಗೊತ್ತಾಗಿದ್ದು...
ತನ್ನ ಮಗಳಿಗೆ ಯೋಗ್ಯವಾದವರ ನನ್ನನ್ನು ಅಂತ ಆಯ್ಕೆ ಮಾಡಿದ್ದು..
ನಾನು ..
ಸ್ವಲ್ಪ ಪಾಪ ಪುಣ್ಯ ಎನ್ನುವ ವಾತಾವರಣದಲ್ಲಿ ಬೆಳೆದವ...
ಸುಮ್ ಸುಮ್ನೆ ಗಲಾಟೆ... ಜಗಳ ಕೂಗುವದು ನನಗೆ ಆಗುವದಿಲ್ಲ...
ನನ್ನ ಮಡದಿ ಮಾತ್ರ ನನ್ನ ಸ್ವಭಾವಕ್ಕೆ ತದ್ವಿರುದ್ಧ....
ದಿನಾಲೂ ಗಲಾಟೆ... ಜಗಳ.... !
ಸಮಾಧಾನ... ಶಾಂತಿ ಎನ್ನುವದೇ ಇಲ್ಲ...
ನಾನು ದೇವರ ಬಳಿ ನನ್ನ ಬಗೆಗೆ ಏನೂ ಕೇಳುವದಿಲ್ಲ...
"ದೇವರೆ..
ನನ್ನ ಪಕ್ಕದ ಮನೆಯಲ್ಲಿ ...
ಯಾವುದೇ ಹೊಸ ವಸ್ತುಗಳನ್ನು ತರದೇ ಇರಲಿ..."
ಆ ದೇವರಿಗೂ ನನ್ನ ಹಂಗಿಸುವ ಆಸೆ..!
ನಾನು ದಣಿದು ಮನೆ ಸೇರುತ್ತಲೇ ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ....!
ಆ ಶಬ್ಧಗಳ ಸಭ್ಯತೆಯ ಆಧಾರದ ಮೇಲೆ ...
ಪಕ್ಕದ ಮನೆಯಲ್ಲಿ ಯಾವ ವಸ್ತು ತಂದಿರ ಬಹುದು ಅಂತ ಲೆಕ್ಕಾಚಾರ ಹಾಕುತ್ತಿದ್ದೆ.....
ನಾನು ಹೇಳಿ ಕೇಳಿ ಸಾಮಾನ್ಯ ಕಾರ್ಖಾನೆಯಲ್ಲಿ ನೌಕರ...
"ನೋಡು..
ನನಗೆ ಎಷ್ಟು ಸಂಬಳ ಅಂತ ಮದುವೆಗೆ ಮುಂಚಿತವಾಗಿ ನಿನಗೆ...
ನಿನ್ನ ಅಪ್ಪನಿಗೂ ಗೊತ್ತಿತ್ತು...
ನಿನ್ನ ಆಸೆಗಳನ್ನು ಪೂರೈಸಲು ನನ್ನಿಂದ ಆಗದ ಕೆಲಸ...
ಹೊಂದಿಕೊಂಡು ಹೋಗೋಣ...
ಪ್ರೀತಿಯಿಂದ ಇರೋಣ..."
"ನಾನು ಹತ್ತು ಹಲವಾರು ಕನಸು ಹೊತ್ತು ಬಂದವಳು....
ನನ್ನ ಗೆಳತಿಯರೆಲ್ಲ ಸಾಫ್ಟವೇರ್ ಇಂಜೀನೀಯರನ್ನು ಮದುವೆಯಾಗಿ ಝುಂ ಅಂತ ಕಾರಲ್ಲಿ ತಿರುಗುತ್ತಿದ್ದಾರೆ...
ನಾನು ನಿಮ್ಮ ಡಕೂಟ ಸ್ಕೂಟಿಯಲ್ಲಿ ತಿರುಗ ಬೇಕಾಗಿದೆ....!
ಇವತ್ತು ನೋಡಿ...
ನಿಮ್ಮ ಸಂಗಡವೇ ಕೆಲಸ ಮಾಡುವ ..
ಪಕ್ಕದ ಮನೆಯವ ಮನೆಗೆ ವಾಷಿಂಗ್ ಮಷಿನ್ ತಂದಿದ್ದಾನೆ...!
ನಾಳೆ ಆ ಹೆಂಗಸಿನ ಡೌಲು...
ದೌಲತ್ತಿನ ಮಾತುಗಳನ್ನು ಕೇಳಿಸಿಕೊಳ್ಳುವವಳು ನಾನು...!
ನಿಮಗೇನು ಗೊತ್ತು ನನ್ನ ಕಷ್ಟ...? ನನ್ನ ಸಂಕಟ...? ..."
ಮೊದ ಮೊದಲು ಸೌಮ್ಯವಾಗಿ ಚರ್ಚೆ ಆಗುತ್ತಿತ್ತು...
ಕೊನೆಗೆ ಅಕ್ಕ ಪಕ್ಕದ ಮನೆಯವರಿಗೆ ಕೇಳಿಸ ತೊಡಗಿತು...
ಇತ್ತೀಚೆಗಂತೂ ಮಧ್ಯ ರಸ್ತೆಯಲ್ಲಿ ನಿಂತು ಕೂಗತೊಡಗಿದ್ದಾಳೆ....
ಏನು ಮಾಡಲಿ ..?
ಮೊದಲು ನನ್ನ ಅಪ್ಪನಿಗೆ ಹೇಳಿದೆ...
"ಮಗನೆ..
ಇದೆಲ್ಲ ಎಲ್ಲ ಸಂಸಾರದಲ್ಲೂ ಇದ್ದದ್ದೆ...
ಸ್ವಲ್ಪ ಪ್ರೀತಿ ತೋರಿಸು..
ಪ್ರೀತಿಯ ಸಂಗದ ಶಕ್ತಿನೂ ತೋರಿಸು....!
ಎಲ್ಲ ಹೆಣ್ಣು ಮಕ್ಕಳು ಕರಗಿ ಹೋಗುತ್ತಾರೆ...!
ಅದನ್ನೂ ನಾನು ಹೇಳಿಕೊಡಬೇಕಾ... !!... ?...."
ಅಂತ ಅರ್ಥ ಗರ್ಭಿತವಾಗಿ ನಕ್ಕರು.....
ಆದರೆ ಈ ಪ್ರೀತಿ..
ಪ್ರಣಯಕ್ಕೆ ನನ್ನ ಮಡದಿ ಜಗ್ಗಲಿಲ್ಲ.....
ಪ್ರೀತಿ ಮಾಡಿದ ಅದಷ್ಟೇ ಹೊತ್ತು....!
ಮತ್ತೆ ಯಥಾ ಪ್ರಕಾರ.... ಜಗಳ...!
ಯಾರೋ ಹೇಳಿದರು...
"ನಿಮ್ಮ ಮನೆ ವಾಸ್ತು ಸರಿ ಇಲ್ಲ...
ಬೆಡ್ ರೂಮಿನ ನೈರುತ್ಯ ಜಾಗದಲ್ಲಿ ಬಾಗಿಲು ಇದೆ...
ಹಾಗೆ ಇದ್ದಲ್ಲಿ "ಹೆಂಡತಿ ಉಗ್ರ ಪ್ರತಾಪ" ತೋರಿಸುತ್ತಾಳೆ..."
ಸರಿ..
ನೈರುತ್ಯ ದಿಕ್ಕಿನಲ್ಲಿ ಬಾಗಿಲು ಇಲ್ಲದಿರುವ ಬೆಡ್ ರೂಮ್ ಹುಡುಕಿದೆ...
ಅಲ್ಲಿಯೂ ಅಷ್ಟೇ...! ಯಥಾಪ್ರಕಾರ ಜಗಳ... ಗಲಾಟೆ....!
ಈ ಪಕ್ಕದ ಮನೆಯವರು ಯಾರೂ ಇರದ ಮನೆಯನ್ನೂ ನೋಡಿದೆ....
ಎಲ್ಲ ಕಡೆಯಲ್ಲಿಯೂ ನನ್ನ ಮರ್ಯಾದೆ ಬೀದಿಗೆ ಬರುತ್ತಿತ್ತು...
ನನ್ನ ಮಾವ ಶ್ರೀಮಂತನಾಗಿದ್ದ...
ಆದರೆ ಯಾವುದೋ ಲಂಚದ ಹಗರಣದಲ್ಲಿ ಸಿಕ್ಕಿಕೊಂಡು ..
ನನಗೆ ಸಹಾಯ ಮಾಡಲಾಗದ ಸ್ಥಿತಿಯಲ್ಲಿದ್ದ....
"ಮಾವಯ್ಯಾ...
ನಮ್ಮಿಬ್ಬರ ಹೊಂದಾಣಿಕೆ ಅಸಾಧ್ಯ....
ಒಟ್ಟಿಗೆ ಇರಲು ಆಗ್ತಾ ಇಲ್ಲ....
ನಿಮ್ಮ ಮಗಳಿಗೆ ವಿಚ್ಛೇಧನ ಕೊಡುತ್ತೇನೆ...."
" ಅಳಿಯಮಯ್ಯಾ...
ನಾನು ಕೆಲಸದಿಂದ ಸಸ್ಪೆಂಡ್ ಆದರೂ ನಾನಿನ್ನೂ ಪೋಲಿಸು....
ಠಾಣೆಯಲ್ಲಿ ನಿನ್ನನ್ನು ಅರೆದು ...
ನೀರು ಇಳಿಸಿಬಿಡ್ತೇನೆ.....!
ಸುಮ್ಮನೆ ಅವಳೊಂದಿಗೆ ಹೊಂದಿಕೊಂಡು ಹೋಗು...."
ಎಂಥಹ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದುಬಿಟ್ಟಿದ್ದೇನೆ ನಾನು !!
"ಹೇಗೆ ಹೊಂದಿಕೊಳ್ಳಲಿ ಮಾವಯ್ಯಾ...?
ನನ್ನನ್ನು ಅರ್ಥ ಮಾಡಿಕೊಳ್ತಾನೆ ಇಲ್ಲ.... ನಿಮ್ಮ ಮಗಳು..!.. "
"ಅವಳು ..
ಮೊದಲಿನಿಂದಲೂ ಸ್ವಲ್ಪ ಕೋಪಿಷ್ಠೆ...
ನಿನ್ನ ಶಾಂತ ಸ್ವಭಾವ ನೋಡಿಯೇ ..
ನಾನು ಮದುವೆ ಮಾಡಿದ್ದು....
ನೀನು ಅನುಸರಿಸಿಕೊಂಡು ಹೋಗು...
ಪ್ರೀತಿ...
ಮತ್ತು ದಾಂಪತ್ಯದ ಪ್ರೀತಿ ಅನ್ನೋದು ಬೇರೆ ಬೇರೆ ಕಣಪ್ಪಾ....
ಈ ದಾಂಪತ್ಯದ ಪ್ರೀತಿ ಅನ್ನೋದು ...
ಎಲ್ಲರಿಗೂ ಒಂದೇ ರೀತಿಯಲ್ಲಿ ಅರ್ಥವಾಗೋದಿಲ್ಲ...
ಕೆಲವರಿಗೆ ಈ ಪ್ರೀತಿ ..
ಪ್ರೀತಿಯಲ್ಲೇ ಅರ್ಥವಾಗಿ ಬಿಡುತ್ತದೆ...
ಕೆಲವರಿಗೆ ಹೊಗಳಬೇಕು....
ಹೆಣ್ಣು ಮಕ್ಕಳನ್ನು ಸ್ವಲ್ಪ ಹೊಗಳಬೇಕು....
ಪೂಸಿಹೊಡೆಯ ಬೇಕು....
ಅದೆಲ್ಲ ನೀನೇ ಸಂದರ್ಭಕ್ಕೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಪ್ಪ.... "
ನನ್ನಾಕೆಗೆ ಎಲ್ಲ ಪ್ರಯೋಗ ಮಾಡಿದೆ....
ಯಾವುದೂ ಪ್ರಯೋಜನವಾಗಲಿಲ್ಲ.....
ನನ್ನಾಕೆಯ ಮುಖ ನೋಡಿಕೂಡಲೇ ...
ಅವಳು ..
ನನ್ನೊಡನೆ ಆಡಿದ ಮಾತುಗಳು..
ಜಗಳಗಳು ನೆನಪಾಗುತ್ತಿತ್ತು....
ನನ್ನನ್ನು ಕುರಿತು ಬೀದಿಯಲ್ಲಿ ನಿಂತು ಕೂಗಾಡಿ ಮರ್ಯಾದೆ ಮೂರುಕಾಸು ಮಾಡಿದ್ದು ಎಲ್ಲ ನೆನಪಾಗುತ್ತಿತ್ತು.....
ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ...
ಮನೆಯ ಚಿಂತೆ....
ಕೆಲಸದ ಒತ್ತಡ...!
ಒಂದು ದಿನ ಕಾರ್ಖಾನೆಯಲ್ಲಿ ಎಚ್ಚರ ತಪ್ಪಿ ಬಿದ್ದುಹೋದೆ...
ವೈದ್ಯರು ಬಂದರು..
ನನ್ನನ್ನು ತಪಾಸಣೆ ಮಾಡಿದರು...
"ನೋಡಿ...
ನಿಮ್ಮ ಬೀಪಿ ಹೆಚ್ಚಿದೆ...
ಸಕ್ಕರೆ ಕೂಡ ಇದೆ...
ನಿಮಗೆ ಮಾನಸಿಕ ಶಾಂತಿ ಅತ್ಯಗತ್ಯ....
ನಾನು ಎಷ್ಟೇ ಮಾತ್ರೆಗಳನ್ನು ಕೊಟ್ಟರೂ...
ನಿಮ್ಮ ಮಾನಸಿಕ ಸಮತೋಲನವನ್ನು ನೀವೇ ನೋಡಿಕೊಳ್ಳಬೇಕು..."
"ಮಾನಸಿಕ ಶಾಂತಿಗಾಗಿ ಏನು ಮಾಡಬೇಕು...?"
"ನೋಡಪ್ಪಾ...
ಇಲ್ಲಿ ಹತ್ತಿರದಲ್ಲಿ ಯೋಗ ಗುರೂಜಿ ಇದ್ದಾರೆ...
ಅಲ್ಲಿ ಹೋಗು...
ನಾನು ಅಲ್ಲಿ ಹೋಗಿ ಶಾಂತಿಯನ್ನು ಪಡೆದಿರುವೆ...."
ಮರುದಿನ ಬೆಳಿಗ್ಗೆ ಅಲ್ಲಿಗೆ ಹೋದೆ...
"ನಮ್ಮಲ್ಲಿ ...
ಹದಿನೈದು ಸಾವಿರದ ಒಂದು ಕೋರ್ಸ್ ಮಾಡಿದರೆ ನಿಮಗೆ ಶಾಂತಿ ಸಿಗುತ್ತದೆ..."
ಗುರುಜಿಯವರು ಬಹಳ ಶ್ರೀಮಂತರಾಗಿದ್ದರು.....
ನೂರು ಎಕರೆ ಜಾಗದಲ್ಲಿ ಆಶ್ರಮ ಇತ್ತು....
ಈ ಶಾಂತಿ ಬಹಳ ದುಬಾರಿ ಎನಿಸಿತು....
ನನ್ನ ಮಾವ ಸ್ವಲ್ಪ ಸಹಾಯ ಮಾಡಿದ... ನಾನು ಸೇರಿಕೊಂಡೆ...
"ಉಸಿರಾಟ ಹೇಗೆ ಮಾಡಬೇಕು...?
ಪ್ರಾಣಾಯಾಮ ಹೇಗೆ ಮಾಡಬೇಕು...
ಮನದಲ್ಲಿ ..
ಯಾವಾಗಲೂ ಆಧ್ಯಾತ್ಮದ ಉನ್ನತ ವಿಚಾರಗಳನ್ನು ಇಟ್ಟುಕೊಳ್ಳಬೇಕು...
ಎಲ್ಲರನ್ನೂ... ಪ್ರೀತಿಸ ಬೇಕು...
ನಾವು ಮಗುವಿನಂತೆ ಇರಬೇಕು...
ಮುಗ್ಧವಾಗಿ...ಶಾಂತವಾಗಿ...."
ಎಂದೆಲ್ಲ ಹೇಳಿ...
ಹತ್ತು ದಿನ ಮೂರು ಹೊತ್ತು ಹಸಿತರಕಾರಿ ತಿನ್ನಿಸಿ...
ಕೊನೆಗೆ ಬಿಸಿ ಉಪ್ಪುನೀರು ಕುಡಿಸಿ...
ಒಂಥರಾ ಪ್ರೆಷ್ ಮಾಡಿಕಳುಹಿಸಿದರು....
ಮನೆಗೆ ಬಂದೆ...
ಅವತ್ತು ನನ್ನ ತಂಗಿಯ ಪತ್ರ ಬಂದಿತ್ತು....
"ಅಣ್ಣಾ...
ನನ್ನ ಗಂಡ ಎರಡೆಳೆ ಚಿನ್ನದ ಸರ ಮಾಡಿಸಿದ್ದಾರೆ..."
ಅಡಿಗೆ ಮನೆಯಲ್ಲಿ ಯಥಾ ಪ್ರಕಾರ ಶಬ್ಧಗಳು...!
ಎಷ್ಟೇ ಪ್ರಾಣಾಯಾಮ ಮಾಡಿದರೂ ನನ್ನ ಬಿಪಿ ಜಾಸ್ತಿಯಾಗುತ್ತಿತ್ತು....
"ನಿಮ್ಮ ತಂಗಿ ಗಂಡನ ಯೋಗ್ಯತೆ .. ನಿಮಗಿಲ್ಲವಲ್ರೀ... !
ಥೂ ನಿಮ್ಮ.... !
ಯಾವ ಕಣ್ಣಿಂದ...
ನಿಮ್ಮ ತಂಗಿ ದೌಲತ್ತು ನೋಡ ಬೇಕ್ರಿ .?..."
ನನ್ನ ಮೈ ಕಂಪಿಸತೊಡಗಿತು...
ಗುರುಜಿ ಹೇಳಿಕೊಟ್ಟ ಮಂತ್ರ ಮನದಲ್ಲೇ ಪಟಿಸಿದೆ...
ಉಸಿರಾಟದ ಕಡೆ ಗಮನಕೊಟ್ಟೆ...
"ಯಾವ ಜನ್ಮದಲ್ಲಿ ...
ಎಷ್ಟು ಪಾಪ ಮಾಡಿದ್ನೋ...
ನೀವು ಗಂಡ ಆಗಿ ಸಿಕ್ಕಿದ್ದಿರಲ್ರಿ... !
ನೀವು ಗಂಡಸೇ ಅಲ್ಲವೇನ್ರೀ...?
ನಿಮಗೆ ಏನೂ ಅನ್ನಿಸೋದೇ ಇಲ್ವಾ...?
ಥೂ ನಿಮ್ಮ ಜನ್ಮಕ್ಕೆ... !!..."
ನನ್ನ ಮೈ ಉರಿಯತೊಡಗಿತು.....
ಏನು ಮಾಡ್ತಾ ಇದ್ದೇನೆ ಅಂತ ನನಗೆ ಗೊತ್ತಾಗಲಿಲ್ಲ....
ಪಕ್ಕದಲ್ಲಿ ಇದ್ದ ಕಬ್ಬಿಣದ ರಾಡನ್ನು ತೆಗೆದು ಮೂಲೆಗೆ ಜೋರಾಗಿ ಎಸೆದೆ...!
ಮರದ ಖುರ್ಚಿ ಮೇಲೆ ಎತ್ತಿ ಎಸೆದೆ..!
ಸ್ವಲ್ಪದರಲ್ಲಿ ನನ್ನಾಕೆ ತಪ್ಪಿಸಿಕೊಂಡಳು....
ಅಡಿಗೆ ಮನೆಯೊಳಗೆ ಓಡಿ ಹೋದಳು....
ನಾನು ಅಲ್ಲೆ ಮಂಚದ ಮೇಲೆ ಕುಳಿತುಕೊಂಡೆ....
ಮೈಯೆಲ್ಲ ಬೆವರುತ್ತಿತ್ತು...
ಮನೆಯಲ್ಲಿ ನೀರವ ಮೌನ....
"ಛೇ...
ತಪ್ಪು ಮಾಡಿಬಿಟ್ಟೆ...."
ಅಪರಾಧಿ ಮನೋಭಾವನೆ ಕಾಡತೊಡಗಿತು....
ಬೇಸರವೆನಿಸಿತು ....
ಗುರೂಜಿ ಹೇಳಿಕೊಟ್ಟಂತೆ ಪ್ರಾಣಾಯಾಮ ಶುರುಮಾಡಿದೆ....
ಕಣ್ಮುಚ್ಚಿದೆ...
ಸುಮಾರು ಹೊತ್ತಿನ ಮೇಲೆ...ಯಾರೋ ಪಕ್ಕದಲ್ಲಿ ಬಂದಂತಾಯಿತು...
"ರೀ...
ಬೇಸರಪಟ್ಕೊಳ್ಳಬೇಡಿ....
ನನ್ನಿಂದ ತಪ್ಪಾಯ್ತು...ಕ್ಷಮಿಸಿ ...
ಇನ್ನು ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುವೆ...."
ಅವಳ ಧ್ವನಿ ನಡುಗುತ್ತಿತ್ತು....!
ಆತಂಕ...
ಹೆದರಿಕೆಯಿಂದ ಅವಳು ಅಳುತ್ತಿದ್ದಳು....!
(ಇದು ಕಥೆ..)
ಪ್ರತಿಕ್ರಿಯೆಗಳು ತುಂಬಾ ಚೆನ್ನಾಗಿವೆ...
ದಯವಿಟ್ಟು ಓದಿ...