Monday, November 21, 2011

...........ಬಣ್ಣ........

ಆ ಹುಡುಗ ಮೊದಲ ನೋಟದಲ್ಲೇ.. ನನಗಿಷ್ಟವಾಗಿದ್ದ...


ಆ ಹಸಿ.. ಹಸಿ ನೋಟ..
ಹಸಿದು ತಿನ್ನುವ ಭಾವ...


ನಾನೊಬ್ಬ ಹೆಣ್ಣು...
ನನ್ನಲ್ಲಿನ ಹೆಣ್ಣುತನವ ಜಾಗ್ರತ ಗೊಳಿಸುವ ಆ ಹುಡುಗನ ಕಣ್ಣಲ್ಲಿ ಬೆತ್ತಲಾಗುವದರಲ್ಲಿ ಖುಷಿಯಾಗುತ್ತಿತ್ತು..
ಆತನ ನೋಟವನ್ನು ನನ್ನ ಏಕಾಂತದಲ್ಲಿ ನೆನಪಿಸಿಕೊಳ್ಳುವದರಲ್ಲೂ.. ಸೊಗಸಿತ್ತು...


ಅವನ ಪೋಲಿತನದ ಮಾತುಗಳು...


ವಯಸ್ಸಿನ ಸಹಜ ಕುತೂಹಲದ..
ಹೆಣ್ಣಿನ ಬಗೆಗಿನ ಹುಚ್ಚು ಹುಚ್ಚಾದ ಪ್ರಶ್ನೆಗಳು..


ಹೆಣ್ಣಿನ ಬಗೆಗಿನ ಅವನ ಮುಗ್ಧತನ ನನಗೆ ಹುಚ್ಚು ಹಿಡಿಸಿದ್ದವು...


ಅವನೊಬ್ಬ ಚಿತ್ರಕಾರ...
ಮಧುರ ಕಂಠದ ಹಾಡುಗಾರ..


ಜೇನು ಮೀಸೆಯ ಹುಡುಗ ನನಗಂತೂ ಸಿನೇಮಾ ಹೀರೋ ಥರಹವೇ ಕಾಣುತ್ತಿದ್ದ...


" ನನಗೆ ಒಂದು ಆಸೆ ಇದೆ...
ನನ್ನ 
ಭಾವಗಳನ್ನು ತುಂಬಿ..
ನಿನ್ನದೊಂದು   ಚಿತ್ರ ಬಿಡಿಸಲಾ ..?"


ಅವನ ಬೇಡಿಕೆ ಕೇಳಿ ನನಗೆ ಒಳಗೊಳಗೇ ಖುಷಿಯಾಗುತ್ತಿತ್ತು...


"ನಿನ್ನ   ...
ಕೆನ್ನೆಯ ಉಬ್ಬು..
ತುದಿಗಲ್ಲದ ನುಣುಪು...
ಅರೆತೆರೆದ ಕಣ್ಣು.. 
ನಿನ್ನ... 
ಆ ಭಾವಗಳನ್ನು ನನ್ನ ಕುಂಚದಲ್ಲಿ ಸೆರೆ ಹಿಡಿದಿಡುವ ಆಸೆ ಕಣೆ......"


ನಾನು ಚಂದ ಇದ್ದೇನೆ ಅಂತ ನನಗೆ ಗೊತ್ತು...
ನನ್ನ ಅಂದವನ್ನು ಹುಡುಗನ ಬಾಯಲ್ಲಿ ಕೇಳುವದೂ ಸೊಗಸೆಂದು ಗೊತ್ತಿರಲಿಲ್ಲ...


"ನೀನು ..
 ಮೂಗಿಗೊಂದು ರಾಜಸ್ತಾನಿ ದೊಡ್ಡ ರಿಂಗು...
ಕೆನ್ನೆ ಸರಪಳಿ...ಕಿವಿಯ ತನಕ..
ಕಿವಿಗೆ ದೊಡ್ಡ ಪದಕದ ರಿಂಗು..


ತಲೆ ತುಂಬಾ ಹೂವು ಮುಡಿದು ಬಾ......."


ಹುಡುಗನ ಬೇಡಿಕೆಗೆ ಇಲ್ಲವೆನ್ನಲಾಗಲಿಲ್ಲ..


ಮನೆಯಲ್ಲಿ ಸುಳ್ಳು ಹೇಳಿ ಹುಡುಗ ಹೇಳಿದಂತೆ ತಯಾರಾಗಿ ಬಂದೆ...
ಅಮ್ಮನ ಸಂಶಯದ ಕಣ್ಣಿಗಳಿಗೆ ಉತ್ತರವನ್ನೂ ಕೊಟ್ಟು ಬಂದಿದ್ದೆ..


ಹುಡುಗ ನನಗೊಂದು ಭಂಗಿಯಲ್ಲಿ ಕುಳ್ಳಿರಿಸಿ ಚಿತ್ರ ಬಿಡಿಸಲು ಶುರುಮಾಡಿದ...


ಅವನು ನನ್ನನ್ನು ನೋಡುವ ರೀತಿ...
ನನ್ನಲ್ಲಿನ ಭಾವಗಳನ್ನು ಹುಚ್ಚೆಬ್ಬಿಸುತ್ತಿತ್ತು...


ಹುಡುಗ ಚಿತ್ರ ಬಿಡಿಸಿ ಮುಗಿಸಿದ...


"ಹುಡುಗಿ...
ನಿನ್ನ   ಅಲಂಕಾರಗಳನ್ನು ಬಿಚ್ಚಿಕೊಡಲಾ....?"


ನನಗೆ ಈಗಲೂ ಒಳಗಿಂದೊಳಗೇ ಸಂತೋಷ...!


ಹುಡುಗ ತುಂಬಾ ಚಾಲೂಕು ಇದ್ದ..


ಆತ ಒಂದೊಂದಾಗಿ ನನ್ನ ಆಭರಣಗಳನ್ನು ಕಳಚುತ್ತಿದ್ದ...
ತಲೆಗೆ ಮುಡಿದ ಹೂಗಳ ಸುವಾಸನೆ  ಹೀರುತ್ತಿದ್ದ...


"ನಿನ್ನ ..
ಆಭರಣಗಳನ್ನು ಬಿಚ್ಚಿಡುತ್ತಿರುವೆ... 
ನಿನಗೆ   ಬೇಸರವಾ...?"


ನನಗೆ ಮೌನವಾಗಿ ಈ ಸಮಯವನ್ನು ಅನುಭವಿಸುವ ಆಸೆ ಇತ್ತು...
ಆದರೂ ಮಾತನಾಡಿದೆ..


"ಬೇಸರ ಇಲ್ಲ...
ನಾನು ಚಂದವಾಗಿ ತಯಾರಾಗಿ ಬಂದಿದ್ದು...ಇದಕ್ಕಾಗಿಯೇ..


ನೀನು  ಅಲಂಕಾರವನ್ನು ಹಾಳು ಮಾಡಲೆಂದೆ ಅಲಂಕರಿಸಿಕೊಂಡಿದ್ದೇನೆ...


ಚಂದದ ತಯಾರಿಗಿಂತ .. 
ಅಲಂಕಾರ ಹಾಳು ಮಾಡಿಕೊಳ್ಳುವದರಲ್ಲೇ ಹೆಚ್ಚು ಸುಖ..


ಹೆಣ್ಣಿನ ಮನಸ್ಥಿತಿ ನಿನಗೆ ಅರ್ಥವಾಗುವದಿಲ್ಲ...ಬಿಡು ...


ನೀನು...
ಮಾಡುತ್ತಿರುವದು ತಪ್ಪಲ್ಲವಾ?"


"ತಪ್ಪಿಲ್ಲ ಕಣೆ......


ನೀನು  ಪ್ರಕೃತಿಯ ಹಾಗೆ...
ಹೆಣ್ಣು  ಭೋಗಿಸುವದಕ್ಕಾಗಿಯೇ ಇರುವದು...


ಅತ್ಯಾಚಾರಕ್ಕೂ ಒಂದು ಚಂದದ "ಬಂಧನದ, ಬಾಂಧವ್ಯದ"  ಹೆಸರುಕೊಟ್ಟು ಭೋಗಿಸುತ್ತಾರೆ..


ಹೆಂಡತಿಯಾದರೂ..
ಗೆಳತಿಯಾದರೂ ಹೆಣ್ಣು  ಇರುವದು ಭೋಗಿಸುವದಕ್ಕೇನೇ.."


ನನಗೆ ಕೋಪ ಬಂತು......


"ಎಷ್ಟು  ಹೊಲಸಾದ ಮಾತುಗಳನ್ನಾಡುತ್ತೀಯಾ.......?
ನಿನಗೆ  ನಾನು ಭೋಗದ ವಸ್ತುವಾಗಿ ಕಾಣಿಸುತ್ತೇನೆಯೇ..?


ನನ್ನೋಳಗಿನ ಹೃದಯ...
ಅದರಲ್ಲಿನ ಪವಿತ್ರವಾದ ಪ್ರೇಮ  ಕಾಣಿಸುವದಿಲ್ಲವಾ?
ಕೆಟ್ಟ ಮನಸ್ಸಿನವನು ನೀನು .....
ಛೇ..."


"ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡ..
ನಮ್ಮ 
ಪುರುಷ ಸಮಾಜ ಇರುವದೇ ಹೀಗೆ..


ನೀನು .
ನಿನ್ನ  ಪ್ರೀತಿ, ..
ಬಾಂಧವ್ಯಕೂಡ ಭೋಗಿಸುವದಕ್ಕಾಗಿಯೇ ಇದೆ..


ಮದುವೆಯೆಂಬ ಬಂಧನವೂ ಒಂದು ಅತ್ಯಾಚಾರ ಕಣೆ.....


ಅತ್ಯಾಚಾರಕ್ಕೆ ..
ಸುಸಂಕೃತ ಪುರುಷ ಸಮಾಜದ ..
ಪರವಾನಿಗೆ ಪತ್ರ "ಈ ಮದುವೆ" ...!


ಆದರೆ..
ನಾನು ಹಾಗಿಲ್ಲ..
ನಿನ್ನನ್ನು  ನನ್ನ ಬದುಕಿನಷ್ಟು ಪ್ರೀತಿಸುತ್ತೇನೆ..."


"ನೋಡು.....
ಬಣ್ಣದ ಮಾತುಗಳು ಬೇಡ...
ನೀನು  ನನ್ನನ್ನು ಮದುವೆಯಾಗುವದಿಲ್ಲವೇ...?


ನನಗೆ ನಮ್ಮ ಪ್ರೀತಿಗೊಂದು ಚೌಕಟ್ಟು ಹಾಕಿ..
ಬದುಕಿನುದ್ದಕ್ಕೂ ಪೂಜಿಸುವ ಆಸೆ..
ನಮ್ಮ ಪ್ರೀತಿಯನ್ನು ನನ್ನ ಪುಟ್ಟ ಸಂಸಾರದ ಬಂಧನದಲ್ಲಿ  ಕಟ್ಟಿಡುವಾಸೆ..


ಆದರೆ....
ನೀನು ಕೇವಲ ನನ್ನ ಅಂದವನ್ನು ಭೋಗಿಸುವದಕ್ಕಾಗಿ ..
ಇಷ್ಟೆಲ್ಲ ನಾಟಕ ಆಡಿದೆಯಾ   ...?
ಛೇ.."


ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..


"ನೋಡು ..
ಗಂಡು ಒಂದು ಸಂಬಂಧವನ್ನು ..
ಸಂದರ್ಭಕ್ಕಾಗಿ.. 
ಕೇವಲ ಒಂದು ಸಮಯಕ್ಕಷ್ಟೇ ಬಳಸುವದಕ್ಕೆ ಇಷ್ಟಪಡುತ್ತಾನೆ..


ಬದ್ಧತೆ ಇಲ್ಲದ ಬಂಧಗಳೆಂದರೆ ಗಂಡಿಗೆ ಇಷ್ಟ..


ನಾನು ಹಾಗಿಲ್ಲ ಕಣೆ....


ನಿನ್ನೊಡನೆ ನನ್ನ  ಬದುಕಿನ ಕನಸನ್ನು ಕಟ್ಟುತ್ತೇನೆ..
ನಿನ್ನ  ಬದುಕಿನ ಭರವಸೆ ನಾನಾಗುತ್ತೇನೆ..
ನಾವಿಬ್ಬರೂ ಮದುವೆಯಾಗೋಣ..
ನಾಳೆಯೇ... ನಿನ್ನ ಮ್ಮ  ಅಪ್ಪನ ಬಳಿ ಬಂದು ಮಾತನಾಡುತ್ತೇನೆ...
ನನ್ನ ಮೇಲೆ ಅನುಮಾನ ಬೇಡ..


ಹುಡುಗಿ..
ಈಗ ಇಷ್ಟು ಹತ್ತಿರ ಬಂದು ಹೇಗೆ ಸುಮ್ಮನಿರಲಿ...?


ಈ ಕೆನ್ನೆ... ಗಲ್ಲ... 
ನನ್ನ ಕೈಯೊಳಗಿನ ಈ ಮುದ್ದು ಮುಖವನ್ನು ಸುಮ್ಮನೆ ಹೇಗೆ ಬಿಡಲಿ...?"


ಹುಡುಗ ತನ್ನ ಅಪ್ಪುಗೆಯನ್ನು ಇನ್ನೂ ಬಿಗಿ ಮಾಡಿದ...


ಮಾತು ಬೇಕಿರದ ಸಂದರ್ಭದಲ್ಲಿ ಏದುಸಿರು ಮಾತನಾಡಿತು..


ಬಯಸಿದಾಗ ಸಿಗುವ..
ಸಾಮಿಪ್ಯದ ಸುಖ ಬಲು ರೋಮಾಂಚಕಾರಿ...


ನಾನು ಕಣ್ಮುಚ್ಚಿ ಅನುಭವಿಸುತ್ತಿದ್ದೆ... 
ಅನುಭವಿಸಿದೆ...
ಆತನ ಉನ್ಮತ್ತತೆಯಲ್ಲಿ ಬೆವರಾಗಿ ಸೋತು ಹೋದೆ....


ನಮ್ಮ ಸಂಬಂಧವನ್ನು ಎಷ್ಟು ದಿನ ಅಂತ ಮುಚ್ಚಿಡಲು ಸಾಧ್ಯ...?


ಹುಡುಗನ ಬಗೆಗೆ ಅಪ್ಪನ ಬಳಿ ಮಾತನಾಡಿದೆ...


"ನೋಡಮ್ಮ..
ಹುಡುಗನನ್ನು ಮನೆಗೆ ಕರೆದುಕೊಂಡು ಬಾ..
ಮಾತನಾಡುವೆ..."


ಮರುದಿನ ಹುಡುಗ ನಮ್ಮನೆಗೆ ಬಂದ...
ಅಪ್ಪ ಹುಡುಗನ ಬಳಿ ಮಾತನಾಡಿದ...


ಹುಡುಗ ಹೋದ ಮೇಲೆ ಅಪ್ಪ ನನ್ನ ಬಳಿ ಹೇಳಿದ...


"ಈ..ಹುಡುಗ ...
ದಾಂಪತ್ಯ ಬದುಕಿಗೆ ಸರಿ ಇಲ್ಲಮ್ಮ..
ಅವನ ಬಳಿ ಅರ್ಧ ಗಂಟೆ ಮಾತನಾಡಿದೆ..
ಆತ ಮಾತನಾಡಿದ್ದು ಸಲ್ಮಾನ್ ಖಾನ್, ಶಾರೂಖ್ ಖಾನ್ ಬಗೆಗೆ..


ಸಿನೆಮಾ ಕಥೆಗಳು..
ಹಾಡುಗಳು.. ಬದುಕಲು  ಬೇಕಾಗುವ ಅಗತ್ಯ ಅಲ್ಲಮ್ಮ..


ಮದುವೆಯಾಗುವ ಹುಡುಗನ ಜವಾಬ್ಧಾರಿ ಅವನ ಮಾತುಗಳಲ್ಲಿ ಇಲ್ಲಮ್ಮ.."


"ಅಪ್ಪಾ..
ಆ ಹುಡುಗ ಹುಟ್ಟು ಪ್ರತಿಭಾವಂತ..
ಹಾಡುಗಾರ... ಚಿತ್ರಕಾರ.."


"ನೋಡಮ್ಮಾ..
ಹಾಡು...
ಬಣ್ಣದ  ಬದುಕು   ತುಂಬಾ ಕಷ್ಟದ್ದು.....


ದೂರದಿಂದ ಚಂದ ಈ ಬಣ್ಣ  ಬಣ್ಣದ ಮಾತುಗಳ ಬದುಕು..


ಬಣ್ಣದ ಮಾತುಗಳು.. ಹಾಡುಗಳು.. ನಟನೆಗಳು ಬದುಕು ಕಟ್ಟುವದಿಲ್ಲವಮ್ಮ..


ನಿನಗೆ ಯೋಗ್ಯವಾದ ಗಂಡನನ್ನು ನಾನು ಹುಡುಕುವೆ..


ಈ ಹುಡುಗ ಮದುವೆ ಜೀವನಕ್ಕೆ ಯೋಗ್ಯ ಇಲ್ಲ..."


ಅಪ್ಪನ ಅಭಿಪ್ರಾಯಕ್ಕೆ ಎದುರಾಡುವ ಸಂದರ್ಭವೇ ಬರಲಿಲ್ಲ..


ಅಂದು ನಮ್ಮ ವಿದಾಯದ ದಿನ ಆತ ಅತ್ತು ಬಿಟ್ಟಿದ್ದ..
ನನಗಂತೂ ಹೃದಯ ದೃವಿಸಿಹೋಗಿತ್ತು..


ಅವನಿಗೆ ಮೋಸ ಮಾಡಿದ ಅಪರಾಧಿ ಭಾವನೆ ಕಾಡತೊಡಗಿತು..


ಅಪ್ಪ ಹುಡುಕಿದ ಹುಡುಗನೊಡನೆ ನನ್ನ ಮದುವೆಯಾಯಿತು..


ಮದುವೆಯಾದ ಗಂಡು ನನ್ನ ಅಂದ ಚಂದಗಳ ಆರಾಧಕ...
ನನ್ನ ಅಂದ, ಚಂದಗಳನ್ನು ಕೃತಜ್ಞತಾಭಾವದಿಂದ ಅನುಭವಿಸುತ್ತಿದ್ದ...


ನನ್ನ ಗಂಡನ ಆರಾಧನಾ ನೋಟಕ್ಕಿಂತ..
ಹುಡುಗನ ಬೆತ್ತಲೆಗೊಳಿಸುವ ನೋಟ ನನಗೆ ಇಷ್ಟವಾಗುತ್ತಿತ್ತು...


ಆತ ಬಹಳ ನೆನಪಾಗುತ್ತಿದ್ದ..


ನಾನು ಆತನಿಗೆ ಮೋಸ ಮಾಡಿದ ಭಾವದಿಂದ ನನಗೆ ಹೊರಗೆ ಬರಲಿಕ್ಕೆ ಆಗಲಿಲ್ಲ..


ಆ ಚಿತ್ರಕಾರನ ಚಿತ್ರಗಳನ್ನು ಮನೆಯ ಗೋಡೆಯ ತುಂಬಾ ಹಾಕಿದ್ದೆ..
ಅವನು ಬಿಡಿಸಿದ ಹೆಣ್ಣಿನ ಚಿತ್ರಗಳಲ್ಲಿ ನನ್ನನ್ನೇ ಕಾಣುತ್ತಿದ್ದೆ..


ಆತನೂ ಒಮ್ಮೆ ನನಗೆ ಹೇಳೀದ್ದ..


" ನಾನು ಬಿಡಿಸುವ ಚಿತ್ರಗಳಲ್ಲಿ..
ನೀನು..
ನಿನ್ನ ಕಣ್ಣು.. ಕೆನ್ನೆ.. ಗಲ್ಲಗಳೇ ಇರುತ್ತವೆ ಕಣೆ..."


ಆಗ ನಾನು ಅವನನ್ನು ಬಿಗಿಯಾಗಿ ತಬ್ಬಿಕೊಂಡಿದ್ದೆ..


ದಿನ ಕಳೆಯುತ್ತಿತ್ತು..
ನನಗೊಬ್ಬ ಮಗಳು.. ಹುಟ್ಟಿದಳು..


ನನ್ನಷ್ಟೇ ಸುಂದರಿ..
ನನ್ನ ಹಾಗೆ ಕಣ್ಣು.. ಕೆನ್ನೆ.. ಗಲ್ಲ.. ಮಾತು..!


ಪುಟ್ಟ ಹುಡುಗಿ ಕಾಲೇಜಿಗೆ ಹೋಗವಷ್ಟು ದೊಡ್ಡವಳಾಗಿದ್ದು..
ಸಮಯ ಸರಿದದ್ದು ಗೊತ್ತೇ ಆಗಲ್ಲಿಲ್ಲ..


ನಾನು ಯಾವಾಗಲೂ ಚಿತ್ರಕಾರನ ಧ್ಯಾನದಲ್ಲಿ ಇರುತ್ತಿದ್ದರಿಂದಲೋ..
ಗೊತ್ತಿಲ್ಲ..
ನನ್ನ ಮಗಳಿಗೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಬೆಳೆಯಿತು...


ಒಂದು ದಿನ ನನ್ನ ಗಂಡ ನನಗೆ ಒಂದು ಆಶ್ಚರ್ಯ ತಂದ..


"ನೋಡೆ...
ನಿನ್ನ ಮೆಚ್ಚಿನ ಚಿತ್ರಕಾರನನ್ನು ಮಾತನಾಡಿಸಿದ್ದೇನೆ...


ನಮ್ಮ ಮಗಳಿಗೆ ಚಿತ್ರ ತರಬೇತಿ ಕೊಡಲು ಆತ ಒಪ್ಪಿದ್ದಾನೆ..


ಆತ ಇದುವರೆಗೆ ಯಾರಿಗೂ ತನ್ನ ಕಲೆಯನ್ನು ಹೇಳಿಕೊಟ್ಟಿಲ್ಲ..
ಇದು ನಮ್ಮ ಮಗಳ ಭಾಗ್ಯ ಕಣೆ.."


ಬದುಕಿನ ತಿರುವಗಳಲ್ಲಿ ಅತೀತಗಳು ಧುತ್ತೆಂದು ಎದುರಿಗೆ ಬಂದು ಬಿಡುತ್ತವೆ..


ನನ್ನ ಪ್ರತಿಕ್ಷಣದ ಪ್ರೀತಿ..
ಆ ಹುಡುಗ ಮತ್ತೊಮ್ಮೆ ನನ್ನ ಬಾಳಲ್ಲಿ ಭೇಟಿಯಾದ..


ನನಗೂ ಒಮ್ಮೆ ಅವನನ್ನು ಭೇಟಿಯಾಗುವ ಸುಪ್ತ ಆಸೆ ಮನದೊಳಗೇ ಇತ್ತು..


ಇನ್ನೊಮ್ಮೆ ಆತನ ಕ್ಷಮೆ ಕೇಳಬೇಕು ಅನ್ನಿಸುತ್ತಿತ್ತು..


ಬಹು ದಿನಗಳ ನಂತರ..
ಬಹಳ ಆಸಕ್ತಿಯಿಂದ ಅಲಂಕರಿಸಿಕೊಂಡು ತಯಾರಾಗಿದ್ದೆ..


ಇದು ಯಾಕೆ?
ಮೋಸಮಾಡಿದ ಹುಡುಗನ ಎದುರಲ್ಲಿ ಮತ್ತೆ ನನ್ನ ಅಂದವನ್ನು ತೋರಿಸುವ ಬಯಕೆ...!!


ಆ ಹುಡುಗನ ಮೆಚ್ಚಿನ ಬಣ್ಣದ ಸೀರೆ ಉಟ್ಟುಕೊಂಡಿದ್ದೆ..


ನಾನು ನನ್ನ ಗಂಡ ಇಬ್ಬರೆ ಆತನ ಮನೆಗೆ ಹೋಗಿದ್ದೆವು..


ಆತ ಸ್ವಾಗತಿಸಿದ..


ನನಗೆ ವಿಶ್ವಾಸವಾಗಲಿಲ್ಲ...


ಅವನ ಅದೇ.. ಹಸಿ ಹಸಿ ನೋಟ..
ನನ್ನನ್ನು ಬೆತ್ತಲೆ ಮಾಡಿ ನೋಡುವ ಹಸಿದ ಕಂಗಳ ನೋಟ... !!


ಇಷ್ಟು ವರ್ಷಗಳಾದರೂ ಹೆಣ್ಣಿನ ಮೇಲಿನ ಆಸಕ್ತಿ ಕಡಿಮೆ ಆಗಲಿಲ್ಲವೆ?


"ಬನ್ನಿ ಬನ್ನಿ..
ಇದು ಬ್ರಹ್ಮಚಾರಿ ಮನೆ..
ಅಡಿಗೆಯವರ ಕೈ ಊಟ..
ನಿಮಗೆ ಏನು ಮಾಡಿಸಲಿ...? ಚಹ.. ಕಾಫೀ...?"


ಅಯ್ಯೋ ದೇವರೆ... !
ಈತ ಮದುವೆ ಆಗಲೇ ಇಲ್ಲವೆ? 


ನನ್ನೊಳಗಿನ ಆಪರಾಧಿ ಮನೋಭಾವ ಮತ್ತೂ ಜಾಸ್ತಿಯಾಯಿತು... 


ನನಗೆ ಮಾತಾಡುವ ಆಸಕ್ತಿಯೇ ಹೊರಟು ಹೋಯಿತು..
ನನ್ನನ್ನು ನಾನು ಕ್ಷಮಿಸಿಕೊಳ್ಳಲಾಗಲಿಲ್ಲ...


ನಾನು ಮೌನಕ್ಕೆ ಶರಣಾದೆ..


ಹುಡುಗ ಮತ್ತು ಗಂಡ ಇಬ್ಬರೆ ಮಾತನಾಡಿದರು..


ನನ್ನ ಮಗಳಿಗೆ ಚಿತ್ರ ಕಲೆಯನ್ನು ಧಾರೆ ಎರೆಯಲು ಆತ ಒಪ್ಪಿದ..


ನನ್ನ ಗಂಡ ಬಹಳ ಖುಷಿಯಲ್ಲಿದ್ದ...


ಮಗಳು ಬಹಳ ಖುಷಿಯಿಂದ ಚಿತ್ರ ಕಲೆ ಕಲಿಯಲು ಹೋಗುತ್ತಿದ್ದಳು..
ಯಾವಾಗಲೂ ತನ್ನ ಗುರುವನ್ನು ಹೊಗಳುತ್ತಿದ್ದಳು..


ಒಂದು ದಿನ ಅವಳನ್ನು ಮಾತನಾಡಿಸಿ.. ಅವಳ ಗುರುವಿನ ಫೋನ್ ನಂಬರ್ ತೆಗೆದುಕೊಂಡೆ..


"ಹುಡುಗಾ..
ನಿನ್ನನ್ನೊಮ್ಮೆ ಭೇಟಿ ಮಾಡಬೇಕು..
ಕ್ಷಮೆಗೆ ನಾನು ಅರ್ಹಳಲ್ಲದಿದ್ದರೂ.. ಇನ್ನೊಮ್ಮೆ ಭೇಟಿಗೆ ಅವಕಾಶ ಮಾಡಿಕೊಡು..."


ನಾನು ದುಃಖದಿಂದ ಅಳುತ್ತಿದ್ದೆ..


" ನನ್ನ ಬದುಕೇ.. ಹೀಗೆ..
ಹೀಗೆ ಇರುತ್ತದೆ..


ಬಯಸಿದ್ದೆಲ್ಲ ಸಿಕ್ಕಿದರೆ..ಬವಣೆಗಳಿಗೆ ಬೆಲೆ ಎಲ್ಲಿ?


ನಮ್ಮ ನಿರ್ಧಾರಗಳ ಸರಿ, ತಪ್ಪುಗಳ ಬೆಲೆಯನ್ನು ಸಮಯ ಕಟ್ಟುತ್ತದೆ..


ಸರಿದು ಹೋದ ಸಮಯ ಮತ್ತೆ ತರಲಾಗದು..
ಮತ್ತೆ ಸಿಕ್ಕಿದ್ದೀಯಲ್ಲ..
ನಿನ್ನ ಖುಷಿ ಸಂಸಾರ ನೋಡಿ ಖುಷಿಯಾಯಿತು ...


ನೀನು ಸುಖವಾಗಿದ್ದೀಯಾ... ಸಂತೋಷದಿಂದಿರು..."


"ನಿನ್ನನ್ನು  ಭೇಟಿಯಾಗಬೇಕು ಯಾವಾಗ ಬರಲಿ?"


ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..


"ಕೂದಲು ಹಣ್ಣಾದರೂ.. ಮತ್ತದೆ ನೆನಪುಗಳು...


ಬಯಕೆಗಳು ಗರಿಗೆದರುತ್ತವೆ..


ನಿನ್ನನ್ನು ನೋಡಿ..
ಮತ್ತೆ ನನ್ನ ನೀಯತ್ತು ಸಡಿಲಗೊಂಡರೆ ಕಷ್ಟವಲ್ಲವೆ...?..


ನೀನು ಈಗ ಸಂಸಾರಸ್ಥೆ..."


"ಹುಡುಗಾ..
ಹಾಗೇನೂ ಆಗುವದಿಲ್ಲ..
ನಾನು ಪ್ರಬುದ್ಧಳಾಗಿದ್ದೇನೆ..
ನನಗೂ ವಯಸ್ಸಾಯಿತು..ಯಾವಾಗ ಬರಲಿ..?"


ಹುಡುಗ ಸ್ವಲ್ಪ ವಿಚಾರ ಮಾಡಿದ..


"ಹುಂ..
 ನಾಳೆ ಬೇಡ.. ನಾನು ಬಿಡುವಾಗಿಲ್ಲ ..
ನಾಡಿದ್ದು ಬಾ..."


ನಾನು ಸಣ್ಣ ಹುಡುಗಿಯಂತೆ ನಲಿದೆ...
ಕುಣಿಯುವಾಸೆ ಆಯಿತು....


ಅಪ್ಪ ಮಗಳಿಗೆ ಆಶ್ಚರ್ಯವಾಯಿತು...


"ಏನು ಬಹಳ ಖುಷಿಯಲ್ಲಿದ್ದೀಯಾ...?"


"ಏನೂ ಇಲ್ಲ..
ನನ್ನ ಹಳೆಯ ಗೆಳತಿಯೊಬ್ಬಳು ..
ನಾಡಿದ್ದು ಭೇಟಿಯಾಗುತ್ತೇನೆ ಅಂದಿದ್ದಾಳೆ..
ಅವಳ ಮನೆಗೆ ಹೋಗಬೇಕು..."


"ಅಮ್ಮಾ..
ನಿನ್ನ ಬಳಿ ಮೂಗಿಗೆ ಹಾಕುವ ರಾಜಸ್ತಾನದ ದೊಡ್ಡ ರಿಂಗು..
ಕೆನ್ನೆ ಸರಪಳಿ.. ಇದೆಯೇನಮ್ಮಾ...?"


"ಯಾಕೆ ಮಗಳೇ..?"


"ಅಮ್ಮಾ..
ಚಿತ್ರಕಾರರ ಚಿತ್ರದ ಮಾಡೆಲ್ಲು ನಾನು ಆಗುತ್ತಿದ್ದೇನೆ..!


ಅಷ್ಟು ದೊಡ್ಡ ಕಲಾವಿದನ ಮಾಡೆಲ್ಲು ನಾನು.. !!
ನಂಬಲಿಕ್ಕೆ ಆಗ್ತ ಇಲ್ಲ..


ಚಿತ್ರಕಾರರು ನನ್ನ ಚಿತ್ರ ಬಿಡಿಸುತ್ತಾರಂತೆ..!


ನನ್ನ ಕೆನ್ನೆ.. 
ಗಲ್ಲ..ಕಣ್ಣು.. ಎಲ್ಲ ಅವರಿಗೆ ಸ್ಪೂರ್ತಿಕೊಟ್ಟಿದೆಯಂತೆ..!


ನನ್ನ ಚಂದವನ್ನು ಅವರು ಯಾವಾಗಲೂ ಹೊಗಳುತ್ತಾರೆ...!


ನನ್ನ ಅಲಂಕಾರಗಳನ್ನು ಅವರೇ ಬಿಚ್ಚಿಕೊಡುತ್ತಾರಂತೆ... !
ಅದು ಅವರಿಗೆ ತುಂಬಾ ಖುಷಿಯಂತೆ..


ನಾಳೆ ನಾನು ತಯಾರಾಗಿ ಬರಬೇಕಂತೆ.. "


ಮಗಳು ಇನ್ನೂ ಏನೇನೋ ಹೇಳುತ್ತಿದ್ದಳು...


ನಾನು ಅವಕ್ಕಾಳಾದೆ...!! 
ಅಪ್ರತಿಭಳಾದೆ... !!


ತಡೆಯಲಾಗದ ಕೋಪ ಬಂತು...
ಜೋರಾಗಿ ಕೂಗಿದೆ..


"ನೀನು ಚಿತ್ರ ಕಲೆ ಕಲಿಯುವದು ಸಾಕು...!


ಆ ಹಾಳು...
ಕೆಟ್ಟ  ಮನುಷ್ಯನ ಮಾಡೆಲ್ಲು ಆಗುವದೂ ಸಾಕು...!


ನಾಳೆಯಿಂದ ಮನೆಯಲ್ಲೇ ಇರು..


ಈ.. ಧರಿದ್ರ ಗಂಡಸರನ್ನು ನಂಬಲಿಕ್ಕೆ ಆಗುವದಿಲ್ಲ...!.."


ನಾನು ಇನ್ನೂ ಆವೇಶದಿಂದ ಕೂಗುತ್ತಲೇ ಇದ್ದೆ...


ಅಪ್ಪ..
ಮಗಳು ನನ್ನನ್ನೇ ಆಶ್ಚರ್ಯದಿಂದ  ನೋಡುತ್ತಿದ್ದರು...!


ಅಸಹಾಯಕತೆಯ ಭಾವ...!!


ನನ್ನ ಮೈಯೆಲ್ಲ ಕೋಪದಿಂದ ಕಂಪಿಸುತ್ತಿತ್ತು..
(ಉತ್ತಮ ಪ್ರತಿಕ್ರಿಯೆಗಳು ಬಂದಿವೆ..
ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....)

Thursday, October 27, 2011

ಬಸ್ ನಂಬರ್ "ಇಪ್ಪತ್ತೆಂಟು..ಮೂವತ್ತೆರಡು "..... ಹುಕ್ಲಕೈಗೆ ಹೋಗ್ತದೆ......!!


ಶಾರೀ ಮನೆಗೆ ಬಂದಾಗ ಮಧ್ಯಾಹ್ನ ಹನ್ನೊಂದು ಗಂಟೆ...


ಭರ್ಜರಿ ಸ್ವಾಗತ ಸಿಕ್ಕಿತು...


ಪುಟಾಣಿಯೊಬ್ಬಳು ತಂಬಿಗೆಯಲ್ಲಿ ನೀರಿಟ್ಟು ನಮಸ್ಕರಿಸಿ ..
ಒಳಗೆ ಓಡಿದಳು...
ಶಾರೀಗೂ ಖುಷಿಯಾಗಿತ್ತು...


ಗಣಪ್ತಿ ಬಾವ ...
ಬಾಯಲ್ಲಿದ್ದ ಎಲೆ ಅಡಿಕೆಯನ್ನು ಮತ್ತೊಂದು ಪಕ್ಕಕ್ಕೆ ಇಟ್ಟುಕೊಂಡು ಮಾತನಾಡಿಸಿದ..


"ಪ್ರಕಾಶು..
ಬೆಂಗಳೂರಿನ ಕಡೆ ಏನು ವಿಶೇಷ?
ನಮ್ಮ ರಾಜಕೀಯದವರಿಗೆ ಏನಾಗಿದೆ ಮಾರಾಯಾ ?
ಎಲ್ಲರೂ ಜೈಲಿಗೆ ಹೋಗ್ತಿದ್ದಾರೆ... ಹಗರಣ ಮಾಡ್ತಿದ್ದಾರೆ.."


"ಹೌದು ಗಣಪ್ತಿ ಬಾವ..
ನಾವು ಓಟು ಹಾಕಿದ ಜನರ ಬಗೆಗೆ ಬೇಸರ ಆಗುತ್ತದೆ..
ದುಃಖವೂ ಆಗುತ್ತದೆ..."


ಗಣಪ್ತಿ  ಭಾವನೂ ಅದಕ್ಕೆ ತಲೆ ಹಾಕಿದ..
ಅಷ್ಟರಲ್ಲಿ ಶಾರಿ ಬಾಯಿ ಹಾಕಿದಳು..


" ಪ್ರಕಾಶು...
ಇನ್ನೊಂದು ಬೇಜಾರು ಸಂಗತಿ ಇದೆ...
ನಾನೂ ದಿನಾಲೂ ಪೇಪರ್ ಓದ್ತಿನಲ್ಲಾ..


ನಮ್ಮ ದೇಶದಲ್ಲಿ ಬೇಜಾರು ಮಾಡ್ಕೊಳ್ಳೋಕೆ... 
ದುಃಖ ಪಟ್ಕೊಳ್ಳೋಕೆ..
ಎಲ್ಲದಕ್ಕೂ ಜಾತಿ ಬೇಕು...


ಇನ್ನೊಂದು ವಿಷಯ ಗೊತ್ತಾ?


ಅರೋಪ ಮಾಡ್ಳಿಕ್ಕೆ..
ಆರೋಪ ಸಮರ್ಥನೆ ಮಾಡಿಕೊಳ್ಳಲಿಕ್ಕೆ  ಜಾತಿ ಜಾತಿ ಬೇಕಾಗ್ತದೆ....


ನಿನ್ನೆ ಟಿವಿ ಚಾನೆಲ್ಲಿನಲ್ಲಿ "ತಿರುಪತಿ ತಿಮ್ಮಪ್ಪ ದೇವರು" ಯಾವ ಜಾತಿಯವ ಅಂತ ಚರ್ಚೆ ನಡೆಯುತ್ತಿತ್ತು... !!


ಜಾತ್ಯಾತೀತ ದೇಶದಲ್ಲಿ ಜಾತಿ ಮೊದಲಿಗೆ ಬೇಕು..
ಎಲ್ಲ ಜಾತಿ, ಮಠ, ಧರ್ಮ ಮೊದಲು...
ನಮ್ಮ ದೇಶ ಆಮೇಲೆ...
ಅಂಬೇಡ್ಕರ್ರು ಇದ್ದಿದ್ರೆ ಯಾಕಾದ್ರೂ ಸಂವಿಧಾನ ಮಾಡಿಬಿಟ್ಟೆ ಅಂತಿದ್ರೇನೊ !!.."


ಗಣಪ್ತಿ ಬಾವ  ಬಾಯಲ್ಲಿದ್ದ ಎಲೆ ಅಡಿಕೆಯನ್ನು ಇನ್ನೊಂದು ಪಕ್ಕಕ್ಕೆ ಸರಿಸಿದ..


ಅಷ್ಟರಲ್ಲಿ ಮನೆಯ ಫೋನ್ ರಿಂಗಾಯಿತು...


ಗಣಪ್ತಿ  ಭಾವ ಫೋನ್ ತಗೊಂಡ... ಮಾತಾಡಿದ..
ಫೋನ್ ಇಟ್ಟು ಶಾರಿಗೆ ಹೇಳಿದ..


"ಶಾರೀ..
ಇವತ್ತಿನ ಬೆಳಗಿನ ಬಸ್ಸಿಗೆ ..
 ನಮ್ಮ ಮಗಳು ಅಳಿಯ "ಹುಕ್ಲಕೈ ಬಸ್ಸಿಗೆ "  ಹೊರ್ಟಿದ್ದಾರಂತೆ...
ಊಟಕ್ಕೆ ರೆಡಿ ಮಾಡು..."


"ಮಧ್ಯಾಹ್ನ ಬಂದಿದ್ರೆ ಚೆನ್ನಾಗಿತ್ತು...
ಸಾಯಂಕಾಲ ಎಷ್ಟು ಹೊತ್ತಿಗೆ ಬರ್ತಾರೋ.. !
ಏನು ಕಥೆಯೋ... !"


ಶಾರಿ ಬೇಸರ ಪಟ್ಟುಕೊಂಡಳು..


ನನ್ನ ಮಡದಿಗೆ ಆಶ್ಚರ್ಯ..


" ಬೆಳಗಿನ  ಬಸ್ಸಿಗೆ ಬರ್ತಿದ್ದಾರಲ್ಲ.. 
ಇದೀಗ ಇನ್ನೂ ಹನ್ನೊಂದು ಗಂಟೆ..
ಎಷ್ಟೇ ತಡ ಆದರೂ ಮಧ್ಯಾಹ್ನ ಬಂದೇ ಬರ್ತಾರಲ್ವಾ?"


"ಇಲ್ಲಾ.. ಮಾರಾಯ್ತಿ...
ನಮ್ಮೂರಿನ ಬಸ್ಸಿಗೆ ಹೊರಡುವ.. 
ತಲುಪುವ ಸಮಯ  ಯಾರಿಗೂ ಹೇಳಲಿಕ್ಕೆ ಆಗೋದಿಲ್ಲ...


ಆದರೆ..
ಬಸ್ ನಿಲ್ದಾಣದಿಂದ ಹೊರಟಮೇಲೆ.. 
ಎಷ್ಟೇ ಹೊತ್ತಾದರೂ ನಮ್ಮೂರಿಗೆ ಬಂದೇ ಬರ್ತದೆ..
ಇದು ಮಾತ್ರ ಗ್ಯಾರೆಂಟಿ.."


ಈಗ ಮತ್ತೊಮ್ಮೆ  ಆಶ್ಚರ್ಯ  ಪಡುವ ಸರದಿ ನನ್ನದು..!


"ಅಷ್ಟೇ ಅಲ್ಲ ಪ್ರಕಾಶು...


ಎಲ್ಲೋ ವರ್ಷಕ್ಕೊಮ್ಮೆ ...
ನಮ್ಮೂರ ಬಸ್ಸು ಸರಿಯಾದ ಸಮಯಕ್ಕೆ ಬಂದು ಬಿಟ್ಟರೆ..
ನಮಗೆಲ್ಲರಿಗೂ ಏನೋ ಬೇಸರ...


ನಮ್ಮೂರಲ್ಲಿ ಪ್ರತಿನಿತ್ಯ ಬೆಟ್ಟಿಂಗ್ ಕೂಡ ನಡೆಯುತ್ತದೆ...!


ಬೆಳಿಗ್ಗೆ ಹನ್ನೊಂದು ಗಂಟೆ ಬಸ್ಸು ...
ರಾತ್ರಿ ಎಷ್ಟು ಗಂಟೆಗೆ ತಲುಪುತ್ತದೆ ಅಂತ... !!!


ಒಂಥರಾ "ಓಸೀ" ಆಟ ಇತ್ತಲ್ಲ... ಅದೇ ತರಹದ  ಬೆಟ್ಟಿಂಗ್ ಈಗಲೂ ಇದೆ... !!"


ಗಣಪ್ತಿ  ಭಾವ ಮತ್ತೊಂದು ರೌಂಡ್ ಎಲೆ ಅಡಿಕೆ ಬಾಯಿಗೆ ಹಾಕಿದ..


"ಪ್ರಕಾಶು..
ಒಂದು ಮಜಾ ವಿಷಯ ಗೊತ್ತಾ?
ಕಳೆದ ತಿಂಗಳು ನಮ್ಮೂರ " ಹುಕ್ಲಕೈ" ಬಸ್ಸು ಕಳೆದು ಹೋಗಿತ್ತು...


ಅದೂ ಬಸ್ ನಿಲ್ದಾಣದಲ್ಲಿದ್ದ ಬಸ್ಸು...!!


ಹಗಲು ಹೊತ್ತಿನಲ್ಲಿ !!


ಆಮೇಲೆ ಹದಿನೈದು ದಿನದ ನಂತರ ಸಿಕ್ಕಿತ್ತು...!!"


ನನ್ನ ತಲೆಯಲ್ಲಿ  ಅಳಿದುಳಿದ  ಹದಿನೈದು ಕೂದಲೂ ..
ಉದುರಿ ಹೋದ ಅನುಭವ ನನಗಾಯ್ತು !!


"ಏನು ಗಣಪ್ತಿ  ಬಾವಯ್ಯಾ...?
ಬಸ್ಸನ್ನು ಕದ್ದುಕೊಂಡು ಹೋದ್ರಾ..?"


"ಅದೊಂದು ದೊಡ್ಡ ಕಥೆ...
ಬುಡದಿಂದ ಹೇಳ್ತೀನಿ ಕೇಳು..."


ನನ್ನಾಕೆ.. 
ಮತ್ತು ಆಶೀಷ್ ಕಿವಿ ನೆಟ್ಟಗೆ ಮಾಡಿಕೊಂಡು ಇನ್ನೂ ಹತ್ತಿರ ಬಂದರು...


" ಆ ದಿನ.. ಮಂಗಳವಾರ ..
ಪಟ್ಟಣದಲ್ಲಿ ಸಂತೆ... ಸಿಕ್ಕಾಪಟ್ಟೆ ಜನ...


ಬೆಳಿಗ್ಗೆ ಹನ್ನೊಂದು ಗಂಟೆಗೆ ಬಿಡುವ ಬಸ್ಸು ಮಧ್ಯಾಹ್ನ ಒಂದು ಗಂಟೆಯಾದ್ರೂ ಬಿಡಲಿಲ್ಲ...
ಜನರು.. ಬಸ್ಸು ಹತ್ತೋದು.. ಇಳಿಯೋದು ಮಾಡುತ್ತ ಇದ್ರು.."


"ಬಸ್ಸು ಹಾಳಾಗಿತ್ತೇನೋ.. ಅಲ್ವಾ?"


"ಇಲ್ಲಾ.. ಮಾರಾಯಾ...
ಬಸ್ಸು ಬಸ್ಸು ನಿಲ್ದಾಣದಲ್ಲೇ ಇತ್ತು...
ಕಂಡಕ್ಟರ್ ಕೂಡ ಅಲ್ಲೇ ಒಡಾಡ್ತಾ ಇದ್ದ...
ಡ್ರೈವರ್ ಕೂಡ ಅಲ್ಲೇ ಟೀ ಕುಡಿತಾ ಇದ್ದ...


ಎಷ್ಟೇ ಹೊತ್ತಾದ್ರೂ ಬಸ್ಸು ಬಿಡಲಿಲ್ಲ.. ಜನರು ಹೋಗಿ ಕಂಪ್ಲೇಂಟು ಮಾಡಿದರು...


ಈಗ ಅಲ್ಲಿನ ಆಫೀಸರ್ರುಗಳಿಗೆ ಎಚ್ಚರ ಆಯ್ತು... 
ಮೈಕಿನಿಂದ ಜೋರಾಗಿ ಅನೌನ್ಸ್ ಮಾಡಿದರು...


" ಬಸ್ ನಂಬರ್  "ಇಪ್ಪತ್ತೆಂಟು... ಮೂವತ್ತೆರಡು"  ...
ಹುಕ್ಲಕೈಗೆ.. ಹೋಗ್ತದೆ...
ಕಾನಸೂರು.. 
ಅಜ್ಜಿಬಳ್ಳು..ಯಡಳ್ಳಿ ಹೋಗುವವರು ಇಪ್ಪತ್ತೆಂಟು ಮುವತ್ತೆರಡು ಬಸ್ಸನಲ್ಲಿ ಕುಳಿತುಕೊಳ್ಳಿ.."


ಜನ ಓಡಿದರು...


ಅಲ್ಲಿ  ಬಸ್ಸೇ... ಇರಲಿಲ್ಲ... !!


ಎಲ್ಲರಿಗೂ ಆಶ್ಚರ್ಯ... !!


"ವಾಪಸ್ಸು ಡಿಪೋಕ್ಕೆ  ತೆಗೆದು ಕೊಂಡು ಹೋದ್ರೇನೋ.. ಅಲ್ವಾ?"


"ಇಲ್ಲಾ ಮಾರಾಯಾ... !!
ಮ್ಯಾನೇಜರ್ರು ಡಿಪೋಗೆ ಫೋನ್ ಮಾಡಿದರು..


"ನಾವು ನಿಲ್ದಾಣದಿಂದ ಬಸ್ಸು ತಂದಿಲ್ಲ ಎನ್ನುವ ಉತ್ತರ ಸಿಕ್ಕಿತು.! "


"ಹಾಗಾದರೆ ಬಸ್ಸು ಎಲ್ಲಿ ಹೋಯ್ತು...?"


" ಎಲ್ಲರಿಗೂ ಕುತೂಹಲವಾಯ್ತು...


ಅಲ್ಲಿನ ಸಿಬ್ಬಂದಿ ಅಕ್ಕಪಕ್ಕದ ರಸ್ತೆ..
ಓಣಿ.. ಗಲ್ಲಿ...
ಎಲ್ಲವನ್ನೂ ಹುಡುಕಿದರು.. ಬಸ್ಸು ಸಿಗಲಿಲ್ಲ...!!


"ಹುಕ್ಲಕೈ ಬಸ್ಸು ಕಳುವಾಗಿ ಹೋಯ್ತಂತೆ...!!!!! .."


ಇದು ಬಹಳ ದೊಡ್ಡ ವಿಷಯವೇ ಆಗಿ ಹೋಯ್ತು... !!
ಮರುದಿನ ಅಲ್ಲಿನ ಲೋಕಲ್ ಪತ್ರಿಕೆಗಳಲ್ಲಿ ಮುಖ ಪುಟದ ಸುದ್ಧಿ ಆಯ್ತು.. !!


" ಗಣಪ್ತಿ ಭಾವಾ... ಬಸ್ಸು ಎಲ್ಲಿ ಹೋಯ್ತು...?"


"ಬಹುಷಃ ...
ಬಸ್ ನಿಲ್ದಾಣದ ಮ್ಯಾನೇಜರ್ರು ಪೋಲಿಸ್ ಕಂಪ್ಲೇಂಟು ಕೊಟ್ರು ಅಂತ ಅನಿಸ್ತದೆ...
ಪೋಲಿಸರೂ ಬಂದರು..."


ಆಶೀಷ್ ಗೆ ಕೆಟ್ಟ ಕುತೂಹಲ ಜಾಸ್ತಿ ಆಯ್ತು...


"ಗಣಪ್ತಿ ಮಾಮಾ.. 
ಪೋಲಿಸರು ಬಸ್ಸನ್ನು ಹುಡುಕಿದ್ರಾ...?"


"ಇಲ್ಲಾ.. ಪುಟ್ಟಾ...
ಎಲ್ಲಿ ಅಂತ ಹುಡುಕ್ತಾರೆ...?
ಅದೂ ಮಟ ಮಟ ಮಧ್ಯಾಹ್ನ ...!
ಬಸ್ ನಿಲ್ದಾಣದಲ್ಲಿದ್ದ ಬಸ್ಸು ..
ಕಳುವಾಗಿ ಹೋಯ್ತು ಅಂದ್ರೆ ಏನು ಕಥೆ ?
ಬಸ್ಸಿಗೆ ಸಂಬಂಧ ಪಟ್ಟವರಿಗೆಲ್ಲ ಅವಮಾನ ಅಲ್ವಾ?"


" ಏನು ಮಾಡಿದರು.....?"


"ಯಾರಾದ್ರೂ ಏನು ಮಾಡ್ತಾರೆ?..


ಹೀಗೆ ಹತ್ತು ದಿನ ಕಳೆಯಿತು...


ಕಳೆದು ಹೋಗಿದ್ದು  ಸಿಗಲಿಕ್ಕೆ ಅದೇನು ಎಮ್ಮೆ ನಾ? 
ಹಸು ನಾ?


ಒಟ್ಟಿನಲ್ಲಿ  ಬಸ್ಸು ಸಿಗಲಿಲ್ಲ... !!
ಎಲ್ಲರ ಬಾಯಲ್ಲೂ ಒಂದೇ ಮಾತು ... !


" ಹುಕ್ಲಕೈ ಬಸ್ಸು ಕಳುವಾಗಿ ಹೋಯ್ತಂತೆ !!"


"ಮುಂದೆ ಏನಾಯ್ತು,...?"


"ಒಂದು ದಿನ ಪಕ್ಕದ ಊರಿನ   "ಅಟ್ಲಕಾಯಿ ಹೆಗಡೆ" ಸಿರ್ಸಿಗೆ ಹೋಗಿದ್ದ..."


"ಏನದು "ಅಟ್ಲಕಾಯಿ ಹೆಗಡೆ..".. ?.. !!!...


"ಅಯ್ಯೋ ಮಾರಾಯಾ..
ಅದು ಅವನ ಅಡ್ಡ ಹೆಸರು...!!


ಆತ ಯಾವುದೇ ವಿಷಯ ಇರಲಿ...
ಚೆನ್ನಾಗಿ ನೋರೆ ಬರುವ ಹಾಗೆ ಮಸೆದು ಮಸೆದು ...
ತಿಕ್ಕಿ.. ತಿಕ್ಕಿ...
ವಿಚಾರ ಮಾಡ್ತಾನೆ.. ನೊರೆ ತಂದು ಇಡ್ತಾನೆ...


ಹಾಗಾಗಿ ನಾವೆಲ್ಲ ಅವನಿಗೆ  "ಅಟ್ಲಕಾಯಿ ಹೆಗಡೆ" ಅಂತ ಕರೆಯೋದು..."


"ಸರಿ... ಮುಂದೆ ಏನಾಯ್ತು...?"


"ಈ ಅಟ್ಲಕಾಯಿ ಹೆಗಡೆಗೆ  ಯಾರೋಹೇಳಿದ್ರು .. 
"ಹುಕ್ಲಕೈ ಬಸ್ಸು ಕಳುವಾಗಿದೆ.. ಇನ್ನೂ ಸಿಕ್ಕಿಲ್ಲ" ಅಂತ..."


ಆತ ಸೀದಾ ಬಸ್ ನಿಲ್ದಾಣದ ಮ್ಯಾನೇಜರ್ರ ಬಳಿ ಹೋಗಿ ಹೇಳಿದ..


"ನಮ್ಮೂರ ಶಾಲೆ ಮನೆ ಹತ್ರ ...
ಒಂದು ಬಸ್ಸು ಬಂದು ಸುಮ್ನೆ ನಿಂತುಕೊಂಡಿದೆ......
ಹತ್ತು ದಿನದಿಂದ  ಆ ಬಸ್ಸು ಅಲ್ಲೇ ಇದೆ..!!..."


ಮ್ಯಾನೇಜರ್ರಿಗೆ ಹೊಟ್ಟೆ ಒಡೆದು ಹೋಗುವಷ್ಟು ಸಂತೋಷ ಆಯ್ತು..
ಅವನನ್ನು ತಬ್ಬಿ ಮುದ್ದಾಡುವಷ್ಟು ಖುಶಿಆಯ್ತು... !!


"ನೋಡಿ.. 
ದಮ್ಮಯ್ಯ...
ಇಲ್ಲಿ ನಮ್ಮ ಮರ್ಯಾದೆ ಮೂರುಕಾಸಿಗೆ ಮಾರಾಟ ಆಗ್ತ ಇದೆ..


ಇಲ್ಲಿ ಬಂದವರೆಲ್ಲ ..


"ಹುಕ್ಲಕೈ  ಬಸ್ಸು ಸಿಗ್ತಾ?
ಹುಕ್ಲಕೈ ಬಸ್ಸು ಸಿಗ್ತಾ..?' 


ಅಂತ ಕೇಳಿ ಕೇಳಿ ನನ್ನ ತಲೆ ತಿಂತಾ ಇದ್ದಾರೆ...!


ಎಲ್ಲಾದ್ರೂ ನೀರು ಇರುವ ಹೊಳೆಗೆ ಹಾರಿಬಿಡೋಣ ಅಂತ ಅನ್ನಿಸ್ತಾ ಇತ್ತು...!
ದಯವಿಟ್ಟು ಬನ್ನಿ .. 
ಎಲ್ಲಿದೆ ಅಂತ ತೋರಿಸಿ..."


ಮ್ಯಾನೇಜರ್ರು ಪೋಲಿಸರಿಗೆ ಫೋನ್ ಮಾಡಿದರು...


ಪೋಲಿಸರನ್ನು ನೋಡಿ ಅಟ್ಲಕಾಯಿ ಹೆಗಡೇರಿಗೆ ಹೆದರಿಕೆ ಆದ್ರೂ ..
ಪೋಲಿಸ್ ಜೀಪು ಹತ್ತಿದರು...


ಇಲ್ಲಿ ಶಾಲೆ ಮನೆ ಹತ್ತಿರ ಬಂದು ನೋಡಿದರೆ...


"ಹುಕ್ಲಕೈ ಬಸ್ಸು"  ತಣ್ಣಗೆ ನಿಂತುಕೊಂಡಿದೆ.....!!


"ಯಾರು ಈ ಬಸ್ಸುನ್ನು ತಂದು ಇಲ್ಲಿ ನಿಲ್ಲಿಸಿದ್ದಾರೆ...? !!..’


ಎಲ್ಲರೂ ತಲೆ ಕೆರೆದು ಕೊಂಡರು...


ಬಹಳ ವಿಚಾರ ಮಾಡಿ ಅಟ್ಲಕಾಯಿ ಹೆಗಡೆ ಹೇಳಿದ..


"ಸರ್ರಾ...
ಇದು ನಮ್ಮ ಕೇಡಿಭಟ್ರ ಕೆಲ್ಸ ಆಗಿರಬಹುದು...
ಅವರೊಬ್ಬರಿಗೆ ಡ್ರೈವಿಂಗು ಬರ್ತದೆ...
ತುಂಬಾ ಒಳ್ಳೆಯ ಜನ..
ಆದರೆ.. ತುಂಬಾ ಕೊಪಿಷ್ಟರು... 
ಹುಶಾರಿಯಿಂದ ಮಾತನಾಡಬೇಕು..
ತಿಳಿತಾ..?"


ಸರಿ...


ಎಲ್ಲರೂ ಕೇಡಿ ಭಟ್ರ ಮನೆಗೆ ಹೋದರು...


ಕೇಡಿ ಭಟ್ರು..ಎಮ್ಮೆಗೆ ಸ್ನಾನ ಮಾಡಿಸ್ತ ಇದ್ದರು...


" ಕೇಡಿ ಭಟ್ರೆ...
ಒಂದು ವಿಷಯಾ..ಬೇಜಾರು ಮಾಡ್ಕೋಬೇಡಿ...
ಹುಕ್ಲಕೈ ಬಸ್ಸು ತಂದಿದ್ದು ನೀವಾ...?"


ಕೇಡಿ ಭಟ್ರಿಗೆ ಎಲ್ಲಿಲ್ಲದ ಕೆಂಡಾ ಮಂಡಲ  ಕೋಪ ಬಂತು...!!


"ಹೌದ್ರಿ... !!
ನಾನೇ... ತಂದಿದ್ದು...!  
ಏನೀಗಾ..?...
ಏನು ಮಾಡ್ತೀರ್ರೀ..ಈಗಾ .?


ಮಾತನಾಡಲಿಕ್ಕೆ ಬಂದವರು ಕಂಗಾಲಾದರು...!
ಕಣ್ಣು ಕೆಂಪಗೆ ಮಾಡಿಕೊಂಡು  ಭಟ್ರು ಇನ್ನೂ ಜೋರಾಗಿ ಹೇಳಿದ್ರು...


" ಅಲ್ರೀ....
 ಅವತ್ತು ಹನ್ನೊಂದು ಗಂಟೆಗೆ ಬಿಡೋ ಬಸ್ಸನ್ನು ..
ಒಂದು ಗಂಟೆ ಆದ್ರೂ ಬಿಡಲಿಲ್ಲ..!


ಕಂಡಕ್ಟರ್ ಕೇಳಿದ್ರೆ "ಡ್ರೈವರ್ ರಿಪೋರ್ಟ್ ಮಾಡ್ಲಿಲ್ಲ" ಅಂತಾರೆ..


ಡ್ರೈವರ್ರು ಕೇಳಿದ್ರೆ... "ನನಗೆ ಯಾರೋ ಹೇಳಿಲ್ಲ ಅಂತಾರೆ.."...


ಮ್ಯಾನೇಜರ್ರು ಕೇಳಿದ್ರೆ "ಬಸ್ಸು ಬಂದಿದ್ದ ಬಗೆಗೆ ಏನೂ ಗೊತ್ತಿಲ್ಲ" ಅಂತ ಹೇಳ್ತಾರೆ...


ನನಗೆ ಸಿಟ್ಟು ಬಂತು...


ಬಸ್ಸನ್ನು ಇಲ್ಲಿ ತಂದಿಟ್ಟಿದ್ದೇನೆ...


ನನ್ನ ಮೇಲೆ ಪೋಲಿಸ್ ಕೇಸ್ ಹಾಕ್ತೀರಾ...? 
ಹಾಕಿ...
ನಾನೂ ಕಾನೂನು ಓದಿದ್ದೇನೆ ..
ಒಂದು ಕೈ ನೋಡ್ಕೋತೇನೆ..."


ಎಂದು ಅಬ್ಬರಿಸಿದ...


ಅಷ್ಟರಲ್ಲಿ  ಅಟ್ಲಕಾಯಿ ಹೆಗಡೆ.. ಮ್ಯಾನೆಜರ್ರಿಗೆ ಕಿವಿಯಲ್ಲಿ ಕಿಸಿಪಿಸಿ ಮಾತನಾಡಿದ..


"ಮ್ಯಾನೆಜರ್ರೆ..
ಇವರಿಗೆ ನಮ್ಮೂರಲ್ಲಿ ಭಾರಿ ಜನ ಬೆಂಬಲ ಉಂಟು..
ಹುಷಾರಿ...
ಇವರನ್ನು ಎದುರು ಹಾಕ್ಕೊಬೇಡಿ..."


ಬಸ್ ಮ್ಯಾನೇಜರ್ರಿಗೆ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ...
ಬಹಳ ವಿಚಾರ ಮಾಡಿ...


"ಆಗಿದ್ದು ಆಗಿ ಹೋಯ್ತು...
ಭಟ್ರೆ... 
ಇನ್ನು ಮುಂದೆ ಹೀಗೆ ಮಾಡಬೇಡಿ"


 ಅಂತ.. ಬಸ್ಸು ತಗೊಂಡು  ಬಂದ್ರು.... "


ನಮಗೆಲ್ಲರಿಗೂ ಹೊಟ್ಟೆ ಹುಣ್ಣಾಗುವಷ್ಟು ನಗು...!!
ತಡೆಯಲಿಕ್ಕೆ ಆಗ್ಲಿಲ್ಲ...!


ಆಶೀಷ್ ಗೆ ಒಂದು ಅನುಮಾನ.. !!


"ಗಣಪ್ತಿ  ಮಾಮಾ.....
ಕೇಡಿ ಭಟ್ರು  ಅಂದ್ರೆ ಏನದು?
ಅದೆಂಥಾ ವಿಚಿತ್ರ ಹೆಸರು...?.. !!.."


ಗಣಪ್ತಿ ಬಾವ ಬಾಯಿತುಂಬಾ ಎಲೆ ಅಡಿಕೆ ಇಟ್ಟುಕೊಂಡೇ ನಗೆಯಾಡಿದ...


" ಅಯ್ಯೋ.. 
ಅದು ಅವರ  ಹೆಸರು...!
" ಕೃಷ್ಣಯ್ಯ  ದಶರಥ  ಭಟ್ " ಅಂತ..


ಅದನ್ನು ಶಾರ್ಟ್ ಆಗಿ ಇಂಗ್ಲಿಷಿನಲ್ಲಿ  "ಕೆ.ಡಿ. ಭಟ್ " ಅಂತ ಕರಿತಾರೆ...
ಅವರು ಕೇಡಿ ಅಲ್ಲ..
ತುಂಬಾ ತಂಬಾ.. ಒಳ್ಳೆ ಮನುಷ್ಯ...! 
ಊರಿನಲ್ಲಿ ಎಲ್ಲರಿಗೂ ಬೇಕಾದವರು...!


ಇನ್ನೂ ಒಂದು ವಿಷ್ಯಾ ಹೇಳ್ತೀನಿ ಕೇಳು..
ಕೇಡಿ ಭಟ್ರ ತಮ್ಮನ ಹೆಸರು "ಭಾಸ್ಕರ ದಶರಥ ಭಟ್"...


ಇಂಗ್ಲಿಷಿನಲ್ಲಿ  "ಬೀಡಿ  ಭಟ್" ಅಂತ..


ಆ ಮನುಷ್ಯನಿಗೆ ತಂಬಾಕು ಚಟ ಇಲ್ಲವೇ.. .. ಇಲ್ಲ....!! .."


ಮತ್ತೊಮ್ಮೆ ನಮಗೆಲ್ಲ ನಗು ಉಕ್ಕಿತು.....

(ಪ್ರೀತಿಯ ಓದುಗ ಬಂಧುಗಳಿಗೆ 
ಬೆಳಕಿನ ಹಬ್ಬದ ಶುಭಾಶಯಗಳು... )....


ಈ ಬಸ್ಸಿಗೆ ಸಂಬಂಧ ಪಟ್ಟ ಇನ್ನು ಕೆಲವು ಸಂಗತಿಗಳಿವೆ...!
ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ....
ಆಗ..
ಬಸ್ ನಿಲ್ದಾಣಗಳಲ್ಲಿ ಇದೆ ರೀತಿ..
ಇದೆ ಧ್ವನಿಯಲ್ಲಿ..
ಇದೆ ಧಾಟಿಯಲ್ಲಿ ಬಸ್ ಬಗೆಗೆ ವಿವರಗಳನ್ನು ಕೊಡುತ್ತಿದ್ದರು..

ಇದನ್ನು ಓದಿದವರು ನಮ್ಮ ಪ್ರೀತಿಯ "ಗಂಗಣ್ಣ"...

Thursday, October 20, 2011

ನೀವು ...ನಾ ಖರೆ ಹೇಳಿದ್ರೂ ಹೂಂ ಅಂತಿರಿ..! ಸುಳ್ಳು ಹೇಳಿದ್ರೂ ಹೂಂ ಅಂತಿರ್ರಿ.!!."


ಕುಷ್ಟ ಬೆಂಗಳೂರಿಗೆ ಬಂದಿದ್ದ..
ಒಂದು ವಾರ ಆಗಿತ್ತು...


ಅವನ ಸಂಬಂಧಿಕರೊಬ್ಬರ ಹೊಟೆಲ್ ಮಾಗಡಿ ರೋಡಿನಲ್ಲಿದೆ..
ಅಲ್ಲಿಗೆ ಬಂದ ಕುಷ್ಟನನ್ನು ಅವರು ನಮ್ಮನೆಗೆ ಕರೆತಂದಿದ್ದರು..


ಯಾಕೋ ಕುಷ್ಟನ ಮುಖ ಬಾಡಿತ್ತು..


"ಏನಾಯ್ತು ಕುಷ್ಟ..?
ಬೆಂಗಳೂರು ಇಷ್ಟ ಆಗ್ಲಿಲ್ವಾ?"


"ಇಲ್ರ... 
ಇದು ಎಂಥಾ ಪಟ್ಟಣವ್ರಾ?...
ಗಲೀಜು..
ರೋಗ ಹಿಡಿಸ್ಕಳ್ಳಿಕ್ಕೆ..!


ನಮ್ಮೂರಲ್ಲೂ ಗಲೀಜು ಇದೇರ್ರಾ.. 


ಆದ್ರೆ ಅದರಿಂದ..ಗೊಬ್ಬರ ಆಗ್ತದೆ ..!
ಇಲ್ಲಿನ ಗಲೀಜಿಂದ ರೋಗ ಹಿಡಿತದೆ...!


ಇಲ್ಲಿ ಹ್ಯಾಂಗೆ ಇರ್ತೀರಿ ಪಕ್ಕೇಶ್ ಹೆಗ್ಡೇರ್ರೇ..?


"ಹೋಗ್ಲಿ ಬಿಡು ಮಾರಾಯಾ..
ನಮಗೆ ಇದು ರೂಢಿ ಆಗಿಬಿಟ್ಟಿದೆ..
ಇವತ್ತು ರಾಜಕುಮಾರನ ಸಣ್ಣ ಮಗನ ಸಿನೇಮಾ ನೋಡೋಣ.."


" ದೊಡ್ಡ ನಮಸ್ಕಾರ ಪಕ್ಕೇಶಣ್ಣಾ...!!


ಅದು ಎಂಥಾ ಸಿನೇಮಾರ್ರಾ...?


ಬರಿ ಬುರ್ನಾಸು ಪಿಲ್ಮು..."


ನನಗೆ ಆಶ್ಚರ್ಯವಾಯ್ತು.. !


"ನಾನು ಆ ಸಿನೇಮಾ ನೋಡಿದೇರ್ರಾ...


ಅರ್ಧ ಸಿನೇಮಾ ನೋಡುವ ಹೊತ್ತಿಗೆ..
ನಾನು ದಡ್ಡ ..
ನನ್ನ ತಲಿ ಒಳಗೆ ಬರಿ  ಆಲೂ ಗಡ್ಡೆ ಇದೆ ..
ಬೇರೆ ಏನೂ ಇಲ್ಲ ಅಂತ  ಅನ್ನಿಸ್ಲಿಕ್ಕೆ ಶುರುವಾಗಿ ಬಿಡ್ತು.....


ನನ್ನ ಬಗ್ಗೆ ನನಗೆ ಪಾಪ ಅನ್ನಿಸಲಿಕ್ಕೆ ಶುರುವಾತ್ರ...


ಪೂರ್ತಿ ನೋಡಿದ್ರೂ ತಲೆ ಬುಡ ಗೊತ್ತಾಗ್ಲಿಲ್ರ...


ನಿಮಗೆ ಇನ್ನೊಂದು ವಿಷ್ಯ ಗೊತ್ತಾ?"


"ಏನು?"


"ರಾಜಕುಮಾರನ  ದೊಡ್ಡ ಮಗನ ಸಿನೇಮಾನೂ ನೋಡಿದೇರ್ರಾ...
ಜೋಗಯ್ಯ..."


"ಹೇಗಿದೆ...?"


"ತಲಿ ಕೆಟ್ಟು ಹೋತ್ರಾ..!!


ಈಗಿನ ಸಿನೇಮಾದಾಗೆ  "ಕಥಿನೇ.." ಇರೋದಿಲ್ರಾ.....
ಆದ್ರೆ..
" ಶ್ಟೋರಿ ".. ಇರ್ತದೆ...
ಅದು ನಮಗೆ ಅರ್ಥ ಆಗೂದಲ್ರ...!!.."


"ಹೀಗಂದ್ರೆ ಏನು ಮಾರಾಯಾ.."


"ಅವರಿಗೆ ಪಿಲ್ಮು  ಮಾಡಿ.. 
ದುಡ್ಡು ಹಾಳು ಮಾಡ್ಲಿಕ್ಕೆ ಶ್ಟೋರಿ ಇರ್ತದೆ...!


ನಮಗೆ ಸಿನೆಮಾ  ನೋಡ್ಲಿಕ್ಕೆ "ಕಥಿ" ಇರೋದಿಲ್ರಾ...!


ಅಲ್ರಾ.. ಪಕ್ಕೆಶ್  ಹೆಗ್ದೆರ್ರೆ..


ಈ ರಾಜಕುಮಾರನ ಮಕ್ಕಳಿಗೆ ...
ಹೊಡೆದಾಟ ಮಾಡ್ಲಿಕ್ಕೂ ಬರೂದಿಲ್ರಾ...!


ಅವ್ರು ಅಂತ ಅಲ್ರಾ...
ಈಗಿನ ಸಿನೆಮಾದವ್ರಿಗೆ ಹೊಡೆದಾಟ ಮಾಡ್ಲಿಕ್ಕೆ ಬರೂದಿಲ್ರಾ..!!..."


"ಹಾಗೆಲ್ಲ ಅನ್ನಬೇಡ ಕುಷ್ಟಾ..
ನಾನು ಪುನೀತ್ ಅಭಿಮಾನಿ...
ಅವರ ಬಾಡಿ ನೋಡಿದಿಯಾ... ಮಸ್ತ್ ಫೈಟ್ ಮಾಡ್ತಾರೆ ಮಾರಾಯಾ.."


"ಎಂಥಾ ಅಭಿಮಾನೀರ್ರಾ...?


ನೋಡಿ..
ನೀವು...
ನಾ ಖರೆ ಹೇಳಿದ್ರೂ ಹೂಂ ಅಂತಿರಿ..!
ಸುಳ್ಳು ಹೇಳಿದ್ರೂ ಹೂಂ ಅಂತಿರ್ರಿ..!.."


"ಏನು ಹಾಗಂದ್ರೆ?.."


"ಇವ್ರು..
ಒಬ್ಬಂವಂಗೆ ಹೊಡಿಬೇಕಾದ್ರೆ ..
ಮೈತುಂಬಾ ಮೈ ತುಂಬಾ ಗಾಯ ಮಾಡ್ಕೋತಾರ್ರೆ..!!
ಸುಸ್ತಾಗಿ ಬಿಡ್ತಾರ್ರೆ..


ನೋಡ್ಲಿಕ್ಕೆ ಆಗೂದಿಲ್ರಾ.. !
ಮುಖದ ತುಂಬಾ ರಕ್ತ...ಗಾಯ...!!


ಪಾಪ ಅನ್ನಿಸ್ತದರ್ರಾ...!


" ಮಾರಾಯಾ...
ನಿನಗೆ ಅದೆಲ್ಲಾ ಅರ್ಥ ಆಗೋದಿಲ್ಲಾ ಬಿಡು...
ಮೊದಲಿಗಿಂತ ಈಗ ಫೈಟಿಂಗು ಚೆನ್ನಾಗಿ ತೋರಸ್ತಾರೆ.."


"ನೀವ್...  ಏನೇ ಹೇಳ್ರ...
ಅದೇ.. ನಮ್ಮ ರಾಜ್ಕುಮಾರ ಇದ್ದ..


ಸಿನೇಮಾದಲ್ಲಿ  ಹೊಡೆದಾಟದಾಗೆ ಹೆಂಗೆ ಪೈಟಿಂಗು ಮಾಡ್ತಿದ್ದಾ ಅಂತೀರ್ರೀ...?..


"ಹೇಗೆ...? "


ನಮ್ಮ ರಾಜಕುಮಾರ ಕೈ ಎತ್ತೋದ್ರೊಳಗೆ...
ಅಲ್ಲಿ  ನಾಲ್ಕು ಜನ ಬಿದ್ದು ಹೋಗ್ತಿದ್ರು...!


ಶಂಕರ ಗುರು ಪಿಲ್ಮು ನೋಡ್ರಾ...!!


ಹತ್ತು ಹದಿನೈದು ಜನಕ್ಕೆ ಒಬ್ನೆ ರಾಜಕುಮಾರ ಹೊಡಿತಿದ್ದಾನ್ರಾ...!


ಹದಿನೈದು ಜನಕ್ಕೆ ಹೊಡೆದ್ರೂ.. 
ಒಂದು ಕೂದಲೂ ಅಲುಗಾಡ್ತಿಲಿಲ್ರ..


ಹಾಕ್ಕೊಂಡಿದ್ದ ಅಂಗಿ ಮಣ್ಣು ಆಗ್ತಿರಿಲಿಲ್ರ..


ಆ ಥರ ಪೈಟು ಇವರ ಹತ್ರ ಬರೂದಿಲ್ರ.."


" ನೀನು ರಾಜಕುಮಾರ ಅಭಿಮಾನಿ ಅನ್ನು.."


"ಹೌದ್ರಾ..
ಮಯೂರ ಪಿಲ್ಮು ನೋಡ್ರಾ...


ಎಲ್ಲಾದ್ರೂ ಅಪರೂಪಕ್ಕೆ ರಾಜಕುಮಾರ್ಗೆ ರಕ್ತ ಬಂದು ಬಿಟ್ರೆ...
ಹೊಡೆದವನ ಸಾಯಿಸುವ ಹಾಗೆ ಹೊಡೆದು ಬಿಡ್ತಿದ್ದಾ...


ನಮ್ಮ ರಾಜಕುಮಾರ..
ಅಂತಾವ್ರು ಈಗ ಯಾರಿದ್ದಾರ್ರಾ..?..


ಅವನ ಮಕ್ಕಳು ಇನ್ನೂ ಹೊಸಬ್ರು..
 ರೂಢಿ ಇಲ್ರ..
ಮುಂದೆ ಹೊಡೆದಾಟ ಕಲ್ತುಕೋತಾರೆ ಬಿಡಿ.."


"ಕುಷ್ಟ..
ಮೆಜೆಷ್ಟಿಕ್ ಕಡೆ ಹೋಗುವಾ..
ಅಲ್ಲಿ ರಾಜಕುಮಾರನ ಸಿನೇಮಾ ಇರಬಹುದು..."


"ಪಕ್ಕೆಶ್  ಹೆಗ್ದೆರ್ರೆ..
ಈ ಟ್ರಾಫಿಕ್ ಕಾಟ ಬಾಳ ಮಾರಾಯ್ರೆ..


ಯಾವ ನಮೂನಿ ಗಾಡಿ.. ?
ಅದೆಷ್ಟು ಜನರ್ರಾ...?


ಜಗತ್ತಿನ ಜನ ಎಲ್ಲ ಬೆಂಗಳೂರು ಸೇರ್ಕೋಬಿಟ್ಟಿದಾರ್ರಾ ..!!


ಇವತ್ತು ಹೊರಟ್ರೆ ನಾಳೆ ಮುಟ್ತೀವಿ ಅಷ್ಟೆ..."


"ಕುಷ್ಟಾ ನಿನಗೆ ಗೊತ್ತೇನೊ.. ?
ಮೆಟ್ರೋ ಟ್ರೇನ್ ಆಗ್ತ ಇದೆ... ಬೆಂಗಳೂರಿನಲ್ಲಿ  !!
ಆಗ ಟ್ರಾಫಿಕ್ ಕಡ್ಮೆ ಆಗ್ತದೆ.."


"ನಾನು ಬಂದು ಒಂದು ವಾರ ಆತ್ರಾ..
ಎಲ್ಲ ಓದಿ.. 
ನೋಡಿ ತಿಳ್ಕೊಂಡೆ.. ಈ ಬೆಂಗಳೂರು ಎಂಥದ್ದು ಅಂತ..."


ಅಲ್ರಾ...
ಅದು ಯಾವ ಪುಣ್ಯಾತ್ಮ ಈ ಹೆಸರು ಈಟ್ಟಿದ್ದಾನೊ ಗೊತ್ತಿಲ್ರ..!


"ನಮ್ಮ ಮೆಟ್ರೊ" ಅಂತ...!!.."


ನನಗೆ ಸ್ವಲ್ಪ ಖುಷಿ ಆಯ್ತು...


"ಚೆನ್ನಾಗಿದೆ ಅಲ್ವಾ.. ಹೆಸರು...?
ನಮ್ಮ ಮೆಟ್ರೋ...!!"


"ಪಕ್ಕೇಶ್ ಹೆಗ್ಡೆರ್ರೇ.. 
ನಿಮಗೊಂದು ವಿಷ್ಯಾ ಹೇಳ್ತೀನ್ರ.....


ಬೆಂಗಳೂರ್ಗೆ ತೆಲಗಿನವರು ಬಂದ್ರು...
ಹಿಂದಿ ಜನ  ಬಂದ್ರು...


ತಮಿಳ್ರು ಬಂದ್ರು...


ಬಂದ್ರು.. ಸರಿ..


ಬಂದವ್ರು ಸುಮ್ನೆ ಇದ್ದಾರ್ರಾ...?..


"ಏನು  ಮಾಡಿದ್ರು ?.."


"ಅಲ್ಲಿಂದ ಬಂದವರು  ನಮ್ಮವರನ್ನ ತುಳಿದ್ರು.. !
ಮೆಟ್ಟಿದ್ರು...!!


ಇಲ್ಲಿನ  ಕನ್ನಡಿಗ್ರು...
ಕನ್ನಡ ಭಾಷೆನಾ ತುಳಿದ್ರು...!


ಇನ್ನು " ಮೆಟ್ರೊ "  ಬರ್ಲಿ...


ಇನ್ನಷ್ಟು  ಹೊರಗಿನ ಜನ ಬರ್ತಾರೆ...
ನಮ್ಮವರನ್ನ ತುಳಿತ್ತಾರ್ರೆ...
ಮೆಟ್ಟುತ್ತಾರೆ...

ನಮ್ಮವರು ಆಗ್ಲೂ  ಸುಮ್ನೆ ಇದ್ರು..
ಈಗ್ಲೂ ಸುಮ್ನೆ ಇದ್ದಾರೆ..


ಹಾಗಾಗಿ   ನಾವು ಕನ್ನಡಿಗರು ...
"ನಮ್ಮನ್ನು ಮೆಟ್ರೊ...!!.."
ನಮ್ಮನ್ನು ತುಳಿರ್ರೋ.. !!.." 
ಅಂತ ಹೇಳ್ತಾ ಇದ್ದೇವ್ರಾ...


"ನಮ್ಮ ಮೆಟ್ರೊ" ಅಂತ ಚೆನ್ನಾಗಿ ಹೆಸರು ಇಟ್ಟಿದಾರೆ ಬಿಡಿ...!!


" ಬನ್ನಿ.. ಎಲ್ರೂ ಬನ್ನಿ..ನಮ್ಮನ್ನು ಮೆಟ್ಟಿ ಬಿಡಿ.."


 ಅಂತ ನಾವೆ ಅವರನ್ನ ಕರಿತಾ ಇದ್ದಿವಿ...!!.."


ನನಗೆ ಏನು ಹೇಳ ಬೇಕು ಅಂತ ಗೊತ್ತಾಗಲಿಲ್ಲ....


 ಪಕ್ಕನೆ ನಗು ಬಂತು...... 
ಜೋರಾಗಿ ನಕ್ಕುಬಿಟ್ಟೆ...


"ನಮ್ಮ ಮೆಟ್ರೋ.. 
ನಮ್ಮನ್ನು ಮೆಟ್ರೋ..ನಮ್ಮನ್ನು ಇನ್ನೂ ಮೆಟ್ರೋ..!! .."(ಕುಷ್ಟನ ಮಾತು ವಿಚಿತ್ರ ..
ಅರ್ಥ ಆಗುತ್ತದೆ ಆಲ್ವಾ?..)