Thursday, April 22, 2010

ತೊಟ್ಟಿಲು ಕಟ್ಟಿ.. ತೂಗಿದ..ಹಾಗೆ..... !!

part... 2ನಿಂಬೆ ಹುಳಿ ಪೆಪ್ಪರ ಮೆಂಟಿನ ಆಸೆಗಾಗಿ ಚೀಟಿ ವ್ಯವಹಾರಕ್ಕೆ ಒಪ್ಪಿಕೊಂಡಿದ್ದೆ..

ಈಗ ನಾವೇ ಬರೆದ ಚೀಟಿಯನ್ನು ಹೇಗೆ ಮುಟ್ಟಿಸುವದು..?


ಅವರಿಬ್ಬರ ಅಕ್ಷರವನ್ನು ಬಹಳ ಅಭ್ಯಾಸ ಮಾಡಿ..
ನಾಗು ಬರೆದಿದ್ದ..


ಕುಷ್ಟನ ಬಳಿ ಬರೆಯಲು ಆಗಲಿಲ್ಲ..
ಚೀಟಿ ನೋಡಿದ ಕೂಡಲೇ.. ಅವರಿಬ್ಬರಿಗೂ ಗೊತ್ತಾಗಿ ಬಿಡುತ್ತದಲ್ಲವೆ..?
" ಗೊತ್ತಾಗುವ ಛಾನ್ಸೇ...ಇಲ್ವೋ...!


ಅವರಿಬ್ಬರೂ ಲವ್ವಲ್ಲಿ ಮುಳುಗಿ ಹೋಗಿದ್ದಾರೆ..


ಚೀಟಿಯಲ್ಲಿ ಇರೋ ವಿಷಯ ಅವರಿಗೆ ಮುಖ್ಯ..


ಅಕ್ಷರದ ಕಡೆಗೆ ಗಮನ ಇರುವದಿಲ್ಲ..


ನೀನು ಸುಮ್ಮನೆ ಕೊಟ್ಟು ಬಾ..."


ಪದ್ದಿ  ಒಬ್ಬಳೇ ಇರುವ ಸಮಯ ನೋಡಿ ಅವಳಿಗೆ ಚೀಟಿ ಕೊಟ್ಟೆ..


" ಈ ಹೊತ್ತು.. ... ಚೀಟಿನಾ..??  !! "


ಬಹಳ ಆಸಕ್ತಿಯಿಂದ ತಗೊಂಡು ಓದಿದಳು..
ಅವಳಿಗೆ ಆಶ್ಚರ್ಯ ಆಗಿರಬೇಕು..


"ತಗೊ .. ಪ್ರಕಾಶು..
ಇವತ್ತು ಪೆಪ್ಪರ್ ಮೆಂಟು ಇಲ್ಲ..
ಉಪ್ಪು ಹಾಕಿದ ಜೀರಿಗೆ ಅಪ್ಪೆ ಮಾವಿನ ಮಿಡಿ ಇದೆ..
ಇದನ್ನೇ... ತಗೋ.."


ನನಗೆ ಮತ್ತೆ ಬಾಯಲ್ಲಿ...
 ಅಪ್ಪೆ ಮಿಡಿ ಹುಳಿಯ ನೀರು ಬಂದಂತಾಯಿತು...


"ಈ ಪದ್ದಕ್ಕ ಎಷ್ಟು ಒಳ್ಳೆಯವಳು..!
ಹೀಗೆಲ್ಲ ಮಾಡ ಬಾರದಿತ್ತು.."
ಅನಿಸಿತು...


ಅವಳು ಕೊಟ್ಟ ಅಪ್ಪೆ ಮಿಡಿ ತೆಗೆದು ಕೊಂಡು ಅಲ್ಲಿಂದ ಓಡಿದೆ...ಹಾಗೆ ಯಂಕಟಣ್ಣನಿಗೂ ಕೊಟ್ಟು ಬಂದೆ...


ನಾವು ಬರೆದಂತೆ ..
ಭಾನುವಾರ ಮೂರುಗಂಟೆಗೆ ಅಶ್ವತ್ಥ ಮರದ ಕೆಳಗೆ ಬರಲು ಹೇಳಿದ್ದೆವು..


ನಾವು ಎರಡುವರೆಗೆ ಅಲ್ಲಿ ಈಶಾಡಿ ಮರದ    ರೆಂಭೆ ಹತ್ತಿ ಕುಳಿತ್ತಿದ್ದೆವು..


ಮೂರುಗಂಟೆಯ ಸುಮಾರಿಗೆ ಪದ್ದಿ ಬಂದಳು...!


ಸ್ವಲ್ಪ ದೂರದಲ್ಲಿ.. ಯಂಕಟೂನೂ ಬರುತ್ತಿದ್ದ......!!


"ಏಯ್.. ಪ್ರಕಾಶು ....!!
ಅಲ್ಲಿ ಈಶಾಡಿ ಮಾವಿನ ಮರದ ಮೇಲೆ ಏನು ಮಾಡ್ತೀರೋ..?"


ಕೆಳಗೆ ನೋಡಿದೆ...


ಟಮ್ಮಟಿ... ಬಂದಿದ್ದ...!


ಅಯ್ಯೋ... ರಾಮಾ... !!
ಟಮ್ಮಟಿ ಅಂದ್ರೆ ಯಂಕಟಿ ತಮ್ಮ...!!


"ಏನೂ ಇಲ್ವೊ..!.
ತಿನ್ನಲಿಕ್ಕೆ ಮಾವಿನ ಕಾಯಿ ಕೊಯ್ತಾ ಇದ್ದೇವೆ...
ನೀನು ಹೋಗು.. ನಾವು  ಬರ್ತೇವೆ..."


ನಾಗು ಬಹಳ ಸಮಯ ಪ್ರಜ್ಞೆಯಿಂದ ಹೇಳಿದ...


"ಹೋಗ್ರೋ..
ಇಲ್ಲಿ ಪಕ್ಕದಲ್ಲಿ ತೋತಾಪುರಿ ಮಾವಿನ ಗಿಡ ಇದೆ..
ಇದನ್ನು ಬಿಟ್ಟು ಅಲ್ಲಿ ಒಗರು ಮಾವಿನ ಕಾಯಿ ಕೊಯ್ತೀರಾ ?
ನೀವೂ..... ಏನೋ .. ನೋಡ್ತಾ ಇದ್ದೀರಿ..?
ಏನದು ?"


"ಏನೂ ಇಲ್ವೊ... ನೀನು ಹೋಗು ..
ನಾವು ಬಂದು ಬಿಡ್ತೇವೆ..."


ಇತ್ತ...
 ಯಂಕಟಿ... ಪದ್ದಿಯ ಹತ್ತಿರ.. ಹತ್ತಿರ ಬರುತ್ತಿದ್ದ...!!


"ಇಲ್ಲಾ.. ನಾನು ಹೋಗೋದಿಲ್ಲ..
ನೀವೇನೋ.. ನೋಡ್ತಾ ಇದ್ದೀರಿ..
ನಾನೂ ನೋಡ್ಬೇಕು....!!..."


"ಏನೂ ಇಲ್ವೊ.. ನೀನು ಹೋಗು.. !!.."


ಇತ್ತ...
ಯಂಕಟಿ ... ಇನ್ನೂ ಹತ್ತಿರ ಬಂದ...!!


"ನೀವು ಸುಳ್ಳು ಹೇಳ್ತಾ ಇದ್ದೀರಿ..!!
ಇರಿ ..... ನಾನೂ ನೋಡಿಯೇ... ಬಿಡ್ತೇನೆ.."


ಎನ್ನುತ್ತ... ಮರದ ರೆಂಭೆಗೆ ಜೋತು ಬಿದ್ದ..!

ಇಲ್ಲಿ ...
"ಯಂಕಟು ಮತ್ತೆ ಪದ್ದಿ " ಮುಖ .. ಮುಖ..
ನೋಡಿ ಮುಗುಳು ನಗೆ ಸೂಸಿದರು..!!.
ಏನೋ ಮಾತಾಡುತ್ತಿದ್ದ ಹಾಗೆ... ಅನಿಸಿತು...


ಟಮ್ಮಟಿ ಮರದ ರೆಂಭೆ ಹಿಡಿದು ಹತ್ತುತ್ತಿದ್ದ...!

ಛೇ... ಇವನೊಬ್ಬ  ತಲೆ ಹರಟೆ...


"ಜಟ್.. ಪಟ.. ಪಟ್... ರ್...!!!


ನಾವು  ನಿಂತಿದ್ದ  ಹೆಣೆ  ಮುರಿಯುತ್ತಿತ್ತು...!


"ಇಳಿಯೋ.. !  ಇಳಿಯೋ.!. ಟಮ್ಮಟಿ ..!!...
ಎಲ್ಲರೂ ಬಿದ್ದು  ಹೋಗ್ತೀವೋ..!!."


ನಾವು ಹೇಳಿದ್ದನ್ನು ಲೆಕ್ಕಿಸದೇ ಮೇಲೆ ಹತ್ತಲು ಕಸರತ್ತು ಮಾಡುತ್ತಿದ್ದ...!


ಇಲ್ಲಿ ...
ಪದ್ದಿ ..ಯಂಕಟು.. ಅತ್ತಿತ್ತ ..
ಸುತ್ತಲೂ ನೋಡಿದರು.. ಅವರಿಗೆ  ಅನುಮಾನ  ಬಂದಿರ ಬೇಕು...!!


ನಾವು ನಿಂತಲ್ಲೇ  ಕುಳಿತು  ಕೊಂಡೆವು...


ಅಷ್ಟರಲ್ಲಿ ಮಾವಿನ ಮರದ ರೆಂಭೆ ಮುರಿದೇ.. ಹೋಯಿತು....!!


ಎಲ್ಲರೂ ನೆಲಕ್ಕೆ ಮುಳ್ಳಿನ ಪೊದೆಯ ಮೇಲೆ ಬಿದ್ದೇವು....!!


ಮೈಯೆಲ್ಲ ತರಚಿ.... ಪರಚಿ ಗಾಯವಾಯಿತು...


ಅಲ್ಲಲ್ಲಿ ರಕ್ತವೂ ಬಂದು ನೋವಾಗತೊಡಗಿತು...!


"ಯಾಕೆ .. ಇಲ್ಲಿ  ಮಾವಿನ  ಮರ  ಹತ್ತಿದ್ದು ?.. ??.."


ದರ್ಪದ ಧ್ವನಿ ಕೇಳಿಸಿತು...


ತಲೆಯೆತ್ತಿ ನೋಡಿದರೆ... ಮಂಜಣ್ಣ.. !!


ಅಯ್ಯೋ.... !!
ಮೀಸೆ  ಮಂಜಣ್ಣ  ಪದ್ದಿಯ ಅಪ್ಪ... !!


"ಮಂಜಣ್ಣ...
ಮಾವಿನ ಕಾಯಿ ಕೊಯ್ಲಿಕ್ಕೆ.. ಉಪ್ಪು ಹಚ್ಚಿ ತಿನ್ನಲಿಕ್ಕೆ...  !!."


"ಪಕ್ಕದಲ್ಲಿದ್ದ.. 
ತೋತಾ  ಪುರಿ  ಬಿಟ್ಟು..
ಕಹಿ ಮಾವಿನ ಕಾಯಿ ತಿಂತೀರಾ..?
ಸುಳ್ಳು ಹೇಳ್ತಿದ್ದೀರಿ..!..
ಖರೆ... ಹೇಳಿ...?  ಏನು ಮಾಡ್ತಾ  ಇದ್ದಿದ್ರಿ  ?"


ಅವನ ಮೀಸೆ...!
ದರ್ಪದ ಕಂಠ ...!


ಸ್ವಲ್ಪ ಹೆದರಿಕೆ ಆಗತೊಡಗಿತು...


"ಏ..ಯ್.. ಪ್ರಕಾಶು... !
ಇತ್ತೀಚೆಗೆ ನಿನ್ನ ತುಂಟತನ ಜಾಸ್ತಿ ಆಗಿದೆ...
ಮೊನ್ನೆ..
ನಾನು  ಕುಡಿಯೋ...ಬೀಡಿಯಲ್ಲಿ ಕೇಪು (ಸಣ್ಣ ಪಟಾಕಿ) ಇಟ್ಟಿದಿದ್ದೆ..
ಇವತ್ತು ಇಲ್ಲಿ ಸುಳ್ಳು ಹೇಳ್ತ್ತಿದ್ದೀಯಾ..
ಎಲ್ಲರೂ ನಡಿ..ರಿ...!
 ನಿನ್ನ ಚಿಕ್ಕಪ್ಪ ಬಳಿ...
ಒಮ್ಮೆ ಅವನ ಬಳಿ  ಪೆಟ್ಟು ಕೊಡಿಸಿದರೆ ಸರಿ ಆಗ್ತೀಯಾ..."


"ಬೇಡ ಮಂಜಣ್ಣ... ನಿನ್ನ ದಮ್ಮಯ್ಯ...
ಚಿಕ್ಕಪ್ಪ.. ಬಳಿ ಬೇಡ..
ನಿನ್ನ ಬೀಡಿಯಲ್ಲಿ ಇನ್ನು ಏನೂ ಮಾಡುವದಿಲ್ಲ.."


"ಸಾಧ್ಯವೇ.. ಇಲ್ಲ...
ಅಪ್ಪ  ಇಲ್ದಿರೋ  ಹುಡುಗ...
ಈ  ನಾಗೂ  ಜೊತೆ ಸೇರಿ...
ನೀನು ಕೆಟ್ಟು ಹಾಳಾಗುವದನ್ನು ನನ್ನಿಂದ ನೋಡಲು ಆಗುವದೇ ಇಲ್ಲ..!...
ಎಲ್ಲರೂ ನಡೆಯಿರಿ.."


ಟಮ್ಮಟಿಗೆ  ನಮಗಿಂತ ಹೆಚ್ಚಿಗೆ ಪೆಟ್ಟಾಗಿತ್ತು...
ಮಂಜಣ್ಣನ ಬಳಿ ಟಮ್ಮಟಿ  ಗೋಗರೆದ...


" ಮಂಜಣ್ಣ..
ನನ್ನನ್ನು ಬಿಟ್ಟು ಬಿಡು...
ಇವರು ಮರ ಹತ್ತಿ ಕಿತಾಪತಿ ಮಾಡ್ತಾ ಇದ್ದವರು...
ನಾನು  ಏನೂ ಮಾಡ್ಲಿಲ್ಲ...!
ಇವರು...
ಮರ ಹತ್ತಿ ಏನನ್ನೋ ನೋಡ್ತಾ ಇದ್ದರು..!
 ಏನೂ ಅಂತ ನನಗೂ ಹೇಳ್ಳಿಲ್ಲ..!.."


"ಇವರು ಮರ ಹತ್ತಿ ನೋಡ್ತಾ ಇದ್ರಾ..?.. !!
 ಏನು ನೋಡ್ತಾ ಇದ್ರೊ...?.."


"ಏನೂ ಇಲ್ಲ ಮಂಜಣ್ಣ...!.."


"ಇವರು ಹೀಗೆಲ್ಲ  ಸುಮ್ಮನೆ ಬಾಯಿ ಬಿಡೋದಿಲ್ಲ...
ಎಲ್ರೂ ನಡೆಯಿರಿ... ನಮ್ಮನೆಗೆ..
ನಾಗು ..ಮತ್ತು ಟಮ್ಮಟಿ..ಇಬ್ಬರ  ಅಪ್ಪಂದಿರನ್ನೂ  ಕರೆಸುತ್ತೇನೆ...
ನಿನ್ನ  ಚಿಕ್ಕಪ್ಪನಿಗೂ  ಬರಲಿಕ್ಕೆ  ಹೇಳ್ತೇನೆ..!!...
ಶಾಲೆಯ ಮಾಸ್ತರರಿಗೂ... ಹೇಳ್ತೇನೆ...!!..
ಹೀಗೆ  ಬಿಟ್ರೆ ನೀವೆಲ್ಲ ಹಾಳಾಗಿ ಹೋಗ್ತಿರಿ..."

ಅಯ್ಯೋ...!
ಇದೇನು  ಆಗ್ತಾ  ಇದೆ..??  !!

ಟಮ್ಮಟಿ  ಯಂಕಟುನ  ತಮ್ಮ...!
ಮಂಜಣ್ಣ  ಪದ್ದಿಯ  ಅಪ್ಪ...!
ಮಾಸ್ತರ್ರು...!ಚಿಕ್ಕಪ್ಪ...!

ಎಲ್ಲರೂ  ಒಟ್ಟಿಗೆ  ಸೇರಿದರೆ...??  !!


ಏನು ಅಂತ ಹೇಳುವದು ????


ಚಿಕ್ಕಪ್ಪ...!


ಮಂಜಣ್ಣನ ಮೀಸೆ...!


ದರ್ಪದ ಮಾತುಗಳು...!


ಬಯ್ಗಳು..!
ಮಾಸ್ತರ್ರು...!
ಹೊಡೆತ...! ಪೆಟ್ಟು...!!


ಚಡ್ಡಿ...
ಒದ್ದೆಯಾದ ಅನುಭವ ಆಗತೊಡಗಿತು......


 ಕೆಳಗಡೆ...
ಯಾಕೋ....
ತೊಟ್ಟಿಲು  ಕಟ್ಟಿ.. ತೂಗಿದ..ಹಾಗೆ...... ಭಾಸವಾಗತೊಡಗಿತು.........!!


( ತೊಟ್ಟಿಲು ಕಟ್ಟುವದು...  ??  !!
ಗೊತ್ತಾಗದಿದ್ದಲ್ಲಿ... ಇಲ್ಲಿ  ನೋಡಿ...

post_23.htmlhttp://ittigecement.blogspot.com/2009/05/blog-post_23.html

(ನಾನು .. ಶಾರಿಯ ಗಂಡ " ಗಣಪ್ತಿ.." ಅಂತ.. )

ಪ್ರೀತಿಯ ಓದುಗರೇ...

ನನ್ನ ಬ್ಲಾಗ್ ಅನುಸರಿಸಿ...
ಪ್ರೋತ್ಸಾಹಿಸುವವರ ಸಂಖ್ಯೆ... ಎರಡು ನೂರು  ದಾಟಿದೆ...

It is   200+     now  !!!!

ತುಂಬಾ  ಖುಷಿಯಾಗುತ್ತಿದೆ...

ನಿಮ್ಮ ಒಂದೊಂದು  ಪ್ರೋತ್ಸಾಹದ  ನುಡಿ..
ನನಗೆ ಇನ್ನಷ್ಟು ಬರೆಯಲು  ಉತ್ಸಾಹ  ಕೊಡುತ್ತದೆ...


ಓದುವ  ಎಲ್ಲ  ಆತ್ಮೀಯರಿಗೆ  ನನ್ನ ಹೃದಯ ಪೂರ್ವಕ ವಂದನೆಗಳು...

Monday, April 12, 2010

" ಹ್ಹ..ಹ್ಹ..ಹ್ಹಾ.. ಹ್ಹಾ..ಹ್ಹಾ.... !!.. .! "

part...  1ಆಗ ನಾನು  ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದೆ....
ಬಹುಶಃ..
ಹತ್ತೋ.. ಹನ್ನೆರಡೋ.. ವಯಸ್ಸಿದ್ದಿರಬಹುದು...ಒಂದು ದಿನ ನಮ್ಮೂರ  ಪದ್ದಕ್ಕ ನನ್ನನ್ನು ಗುಟ್ಟಾಗಿ ಕರೆದು..

"ಪ್ರಕಾಶು ಈ ಚೀಟಿ ಯಂಕಟುಗೆ ಕೊಡು..
ಯಾರಿಗೂ ಕಾಣದ ಹಾಗೆ..
ಗೊತ್ತಾಗದ ಹಾಗೆ ಕೊಡು.. !.."


ನಂಗೆ ಕುತೂಹಲವಾಯಿತು..!


"ಪದ್ದಿ..  ...
ಅಂತಾದ್ದು ಏನಿದೆ ಇದರಲ್ಲಿ..? !!
ನೀನೇ...  ಕೊಡು.. "


"ನೋಡು.... ಪ್ರಕಾಶು..
ನೀನು ಜಾಣ ಅಲ್ವಾ...?
ನನ್ನ ರಾಜ...!
ನಿಂಗೆ ನಿಂಬೆ ಹುಳಿ ಪೆಪ್ಪರ ಮೆಂಟು ಕೊಡ್ತಿನಿ..
ಮತ್ತೆ.. ..
ನಾನು ಚೀಟಿ ಕೊಡೊದು ಯಾರಿಗೂ ಹೇಳ ಬಾರದು..
ಹಾಗೆ...
ಯಂಕಟು ಒಂದು ಚೀಟಿ ಕೊಡ್ತಾನೆ..
ಅದನ್ನು ನಂಗೆ ತಂದು  ಕೊಡು..
ಓಕೆ.. ನಾ  ?.."


ನನಗೆ ನಿಂಬೆ ಹುಳಿ ಪೆಪ್ಪರ ಮೆಂಟಿನ ಹೆಸರು ಕೇಳಿ ಬಾಯಲ್ಲಿ ನೀರು ಬಂತು..
ಯಾರಾದರು ಪೇಟೆಗೆ ಹೋದಾಗ..
ಮಕ್ಕಳಿಗೆ  ಬಹಳ  ಅಪರೂಪವಾಗಿ   ಸಿಗುತ್ತಿತ್ತು...


ಅವಳ ಶರತ್ತುಗಳಿಗೆ ಒಪ್ಪಿಕೊಂಡೆ..


ಒಂದು ಚೀಟಿ ವ್ಯವಹಾರದಲ್ಲಿ  ಐದು ಪೆಪ್ಪರ ಮೆಂಟು ಸಿಗುತ್ತಿತ್ತು...


ನನಗೆ ಖುಷಿಯಾಯಿತು..


ಒಂದು ದಿನ ನನಗೆ ಸಿಕ್ಕ ಪೆಪ್ಪರ ಮೆಂಟಲ್ಲಿ ..
ಒಂದನ್ನು ನಾಗುವಿಗೂ..ಕುಷ್ಟನಿಗೂ  ಕೊಟ್ಟೆ..


ಅವರಿಬ್ಬರಿಗೂ ಆಶ್ಚರ್ಯ.. !


"ಯಾರು ಕೊಟ್ರೊ ನಿಂಗೆ..?
ಎಲ್ಲಿ ಸಿಕ್ತೋ..?"


ಅವರಿಗೆ ಗೊತ್ತು..


ನನಗೆ ಪೆಪ್ಪರ ಮೆಂಟು ಹಾಗೆಲ್ಲ ಸಿಗೊದಿಲ್ಲ ಅಂತ..


"ಯಾರಿಗೂ ಹೇಳ ಬೇಡ್ರೋ.. ..
ಪದ್ದಿ ಕೊಟ್ಳು..."


ಎಲ್ಲ ವಿವರ ಹೇಳಿದೆ..


"ಎಲ್ಲಿ  ?...
ಆ ಚೀಟಿ ತೋರಿಸು.. !!..."


"ಅದು ಹಾಗೆಲ್ಲ ತೋರಿಸ ಬೇಡ ಹೇಳಿದ್ದಾಳೆ ಕಣೊ..."


"ನಾವು ಯಾರಿಗೂ ಹೇಳೋದಿಲ್ವೊ.."


ಅವರಿಬ್ಬರಿಗೆ  ಗುಟ್ಟಾಗಿ  ತೋರಿಸಿದೆ..
ಇಬ್ಬರೂ  ಬಹಳ ಆಸಕ್ತಿಯಿಂದ  ಓದಿದರು...!!


"ಓ.... ಇದಾ... !!
ಇದು ಲವ್ವು ಲೆಟರು...!!"


"ಲವ್ ಲೆಟರಾ..? !! 
 ಏನೋ .. ಹಾಗಂದ್ರೆ.. !! ?.. "


" ಈ.. ಪದ್ದಿಗೆ...
ಆ... ಯಂಕಟು ಮೇಲೆ ಲವ್  ಆಗಿದೆ...!
ಅದಕ್ಕೆ ಪತ್ರ ಬರೆದಿದ್ದಾಳೆ..!
ಅದೇ.. ಲವ್ ಲೆಟರು..!.. "


"ನಾಗು...
 ಲವ್  ಅಂದ್ರೆ ಏನೋ..?"


" ತಬ್ಬಿಕೊಳ್ಳೋದು..
ಅಷ್ಟೂ... ಗೊತ್ತಾಗದಿಲ್ವೇನೋ...? "


" ತಬ್ಬಿ ಕೊಳ್ಳುವದಾ?  ಅದೆಲ್ಲಾ  ಹೇಗೊ...?
ನಾನು ನಿನ್ನನ್ನು ತಬ್ಬಿ ಕೊಂಡರೆ ಲವ್ವಾ  ?"
"ಅಲ್ವೋ...
ಗಂಡು ಮಕ್ಕಳು  ಹೆಣ್ಣು ಮಕ್ಕಳನ್ನು  ತಬ್ಬಿಕೊಳ್ಳುವದು...
ಅಪ್ಪ.. ಅಮ್ಮನನ್ನು  ತಬ್ಬಿ ಕೊಳ್ಳುವದು...
ಅದು  ಲವ್ವು...!

 "ಇಶ್ಶಿ...!..
ಶೀ... ಥೂ... !
ಅದು ಹೇಗೋ...? !!
 ನೀನು  ಕೆಟ್ಟದ್ದಲ್ಲಾ  ಹೇಳ್ತಿಯಾ.."


" ಇದೆಲ್ಲಾ  ಹೇಗೆ  ಕೆಟ್ಟದ್ದೋ...?
ಎಲ್ಲ ಸಿನೆಮಾದಲ್ಲಿ ತೋರಿಸೋದಿಲ್ವೇನೋ...?
ನಾವು "ಶಂಕರ್ ಗುರು"  ಸಿನೇಮಾ ನೋಡಿಲ್ವಾ..?
ಅದರಲ್ಲಿ ಒಂದು ಹಾಡಿದೆ ಗೊತ್ತಾ...?"


"ಯಾವ ಹಾಡು...?"


"ಅದೇ......
ಚಿನ್ನಾ....
ಬಾಳಲ್ಲಿ...
ಈ ರಾತ್ರಿ ಇನ್ನೆಂದೂ ...
ಬರದೂ..
ಹೂ... ಮಂಚ..
 ನಮಗಾಗಿದೆ... ಈ ಹಾಡು ಕೇಳಿಲ್ವಾ ..?"


"ಹೌದು...!
ಅಲ್ಲಿ ಲವ್ ಎಲ್ಲಿದೆ...?"


" ಪ್ರಕಾಶು...
ಆ ಹಾಡಲ್ಲಿ.. ಮುಂದೆ ಒಂದು ಸಾಲಿದೆ...
ಅದರಲ್ಲಿ ... ಲವ್  ಇದೆ...!.."


"ಏನದು...??


"ನಾನೂ... ನೀನು...
ನೀನೂ.. ನಾನು..
ಸೇರಿ..
ಇಂದು..
ಇಲ್ಲೇ ..
ಈಗ..
ಹ್ಹ..ಹ್ಹ..ಹ್ಹಾ.. ಹ್ಹಾ..ಹ್ಹಾ.... !!.!


ಇಲ್ಲಿ ಹ್ಹಾ..ಹ್ಹಾ.. ಹ್ಹಾ ಹ್ಹಾ... ಅಂದ್ರೆ ಲವ್ವು ಕಣೊ..."

"ಅದು ಹೇಗೊ..?? !!
ಹ್ಹ... ಹ್ಹಾ... ಹ್ಹಾ..ಹ್ಹಾ.. ಹ್ಹಾ.. ಅಂದ್ರೆ ಲವ್ವಾ..!! ?.."


" ಥೂ... ಹೋಗಪ್ಪಾ...
ನಿಂಗೆ ಏನೂ... ಗೊತ್ತಾಗೋದಿಲ್ಲ...
ಎಲ್ಲಾ ಬಿಡಿಸಿ ಹೇಳ್ಬೇಕು...
ಶಂಕರ್ ಗುರು ಸಿನೇಮಾದಲ್ಲಿ..
ರಾಜಕುಮಾರ ಪದ್ಮಪ್ರಿಯಾಳನ್ನು ತಬ್ಬಿಕೊಳ್ಳುವದಿಲ್ವೇನೊ...
ಹಾಡು ಹೇಳೊದಿಲ್ವೇನೊ...
ಅದೇ ಲವ್ವು.. !!."


ನಾನು ತಲೆ ಕೆರೆದು ಕೊಂಡೆ...


ಕಳೆದವಾರವಷ್ಟೆ ಮನೆಯವರೆಲ್ಲ ಹೋಗಿ "ಶಂಕರ್ ಗುರು" ಸಿನೇಮಾ ನೋಡಿ ಬಂದಿದ್ದೆವು...
ಆ ಹಾಡು... ಸನ್ನಿವೇಶ ಎಲ್ಲವೂ ನೆನಪಿದ್ದವು...


ನನಗೆ  ಈಗ ಕುತೂಹಲ ಜಾಸ್ತಿಯಾಯಿತು....!


" ನಾಗೂ...
ಪದ್ದಕ್ಕ... ಯಂಕಟುಗೆ ತಬ್ಬಿ .. ಹಾಡು ಹೇಳ್ತಾಳೇನೊ...?"


"ಈ.. ಹಾಡು ಎಲ್ಲಾ.. ಸಿನೇಮಾದಲ್ಲಿ..
ಪದ್ದಿ.. ಯಂಕಟು ಹೇಗೆ ಲವ್ವು ಮಾಡ್ತಾರೆ ..?
ನೋಡ್ಬೇಕು ಕಣ್ರೊ..."


"ಬೇಡ್ವೊ...
ಅದೆಲ್ಲ ನಮಗ್ಯಾಕೆ... ?
ಆಮೇಲೆ ನಿಂಬೆ ಹುಳಿ ಪೆಪ್ಪರ ಮೆಂಟು ಸಿಗೊದಿಲ್ವೊ... !!."


"ನಾವು ಅವರಿಗೆ ಗೊತ್ತಾಗದ ಹಾಗೆ ನೋಡೋಣ್ವೊ..!! ."


" ಅದು ಹೇಗೆ ?? !!.."

" ನನ್ನ  ಹತ್ರ  ಒಂದು  ಉಪಾಯ  ಇದೆ..."


"ಹೌದಾ...! ಹೇಳು ಹಾಗಾದ್ರೆ.. !!

"ಪ್ರಕಾಶು...
ನಮ್ಮ ಕುಷ್ಟನ ಹತ್ತಿರ..
 ಪದ್ದಿ ಬರೆದ  ಹಾಗೆ ಒಂದು ಪತ್ರ ಬರೆಸೋಣ..
ಹಾಗೆ..
ಯಂಕಟು ಬರೆದ ಹಾಗೆ ಒಂದು ಪತ್ರ ನಾನು ಬರಿತೇನೆ..
ನೀನು.. ಇಬ್ಬರಿಗೂ.. ಈ ಪತ್ರ  ಕೊಟ್ಟು ಬಾ..."


"ಆಗ..  ಏನಾಗ್ತದೆ...?"


" ಆ. .. ಪತ್ರದಲ್ಲಿ...
ನಮ್ಮನೆ ತೋಟದ..
ಅಶ್ವತ್ಥ ಮರದ  ಬಳಿ ಬರುವಂತೆ ಬರೆಯುವಾ...!
ಅಲ್ಲಿ..
 ನಾವು ನಮ್ಮನೆ ಈಶಾಡಿ ಮಾವಿನ ಮರ ಹತ್ತೋಣ....
ಯಾರಿಗೂ ಕಾಣುವದಿಲ್ಲ..!
ಅವರು ಹೇಗೆ  "ಲವ್"  ಮಾಡ್ತಾರೆ ...
ನೋಡಿಯೇ.. ಬಿಡೋಣ..!..! !.."


ನನಗೆ  ಒಂಥರಾ  ಥ್ರಿಲ್  ಆಗತೊಡಗಿತು..  !!

ಪದ್ದಕ್ಕ,.. ಯಂಕಟು .. ಹಾಡು  ಹೇಳ ಬಹುದಾ  ??  !!....

ಹೆದರಿಕೆ .... !!
ಆತಂಕ.. .. !!

ಮುಂದೆ  ಏನಾಗ ಬಹುದು  ?(" ಶಂಕರ್ ಗುರು "ಹಾಡಿನ ಲಿಂಕ್ ...
ಇಲ್ಲಿದೆ....
ದಯವಿಟ್ಟು ಕೇಳಿ..
http://www.youtube.com/watch?v=lsly78fanNM)

ಕ್ಲಿಕ್  ಮಾಡಿ...
ಹಾಡು ಕೇಳಿ....


"ಹ... ಹ್ಹ.. ಹ್ಹ... ಹ್ಹಾ..ಹ್ಹಾ.. ಹ್ಹಾ.. !!.. "