Friday, July 31, 2009

ಗಂಜಿಯಲ್ಲಿ.. ಬಿದ್ದ ..ನೊಣದ ...ಹಾಗೆ..!!

ನಲ್ಮೆಯ... ಓದುಗ ಸಹೋದರ ಸಹೋದರಿಯರಿಗೆ...

" ರಕ್ಷಾ ಬಂಧನದ " ಶುಭಾಶಯಗಳು...

ನಿಮ್ಮೆಲ್ಲ... ಆಸೆ ..
ಕನಸುಗಳು...
ನನಸಾಗಲಿ....
ಪ್ರೀತಿಯಿಂದ....
ಪ್ರಕಾಶಣ್ಣ..)
.................................................................................................................



ಮಲ್ಲಿಕಾರ್ಜುನ್‍ರ ಹೊಸಕಾರು "ರಿಟ್ಜ್ " ನಾನು ಡ್ರೈವ್ ಮಾಡುತ್ತಿದ್ದೆ....


ನಾವು "ಆ" ಊರನ್ನು ತಲುಪಿಯಾಗಿತ್ತು...

ಎಲ್ಲಿಗೆ ಹೋಗಬೇಕಾಗಿತ್ತೊ ಅಲ್ಲಿನ ವಿಳಾಸ ಸರಿಯಾಗಿ ಗೊತ್ತಿರಲಿಲ್ಲ....

ಕಾರು ಪಕ್ಕಕ್ಕೆ ತೆಗೆದುಕೊಂಡು..
"ಇಲ್ಲಿ ವಿಶ್ವ ಜ್ಞಾನ ಶಾಲೆ ಎಲ್ಲಿ ಬರುತ್ತದೆ...?"
ಅಂತ ಒಬ್ಬನನ್ನು ಕೇಳಿದೆವು...

ತಲೆಗೂದಲನ್ನು ಎಣ್ಣೆಹಾಕಿ ಒಪ್ಪವಾಗಿ ಬಾಚಿ, ಹಣೆಗೊಂದು ಗಂಧದ ಬೊಟ್ಟು...
ಬಿಳೆಲುಂಗಿ...
ಜಗತ್ತಿನಲ್ಲಿರುವ ಎಲ್ಲ ಬಗೆಯ ಆತ್ಮ ಸಂತೃಪ್ತಿಯ ಮುಖ ...
ತಲೆಕೆರೆದು ಕೊಳ್ಳುತ್ತ...

"ಏನು ಸಾರ್... ವಿಶ್ವನಾಥ ದೇವಸ್ಥಾನವಾ...?"

ಮಲ್ಲಿಕಾರ್ಜುನ್ ತಮ್ಮ ಎರಡೂ ಕೈಯ್ಯನ್ನು ತಮ್ಮ ಬಾಯಿ ಬಳಿತಂದು..
ತಮ್ಮಲ್ಲಿದ್ದ ಬಲವನ್ನೆಲ್ಲ ಹಾಕಿ ಕೂಗಿ ಮತ್ತೆ ಕೇಳಿದರು..

" ಸಾರ್... ವಿಶ್ವ ಜ್ಞಾನ ಶಾಲೆ..."

ಮತ್ತೆ ತಲೆ ಕೆರೆದು ಕೊಂಡಿತು ಆವ್ಯಕ್ತಿ...
ಆಕಾಶ ನೋಡಿದ....

" ವಿಶಾಖ ಪಟ್ಟಣವಾ...?
ಈ ಹೆಸರು ಎಲ್ಲೋ ಕೇಳಿದಿನಿ... ಅದು ಇಲ್ಲಿ ಬರಲ್ಲ ಸಾರ್.."

ನಾಗು ಕಾರಿನಿಂದ ಇಳಿದು...
ಅವರ ಬಳಿ ಹೋಗಿ...ಜೋರಾಗಿ ಕೇಳಿದ...

"ಸಾರ್... ವಿಶ್ವ ಜ್ಞಾನ ಶಾಲೆ ಎಲ್ಲಿದೆ...?"

"ನಿಧಾನಕ್ಕೆ ಹೇಳಿ.. ನನ್ನ ಕಿವಿ ಸರಿಯಾಗಿದೆ...
ಸಾರ್.... ಪ್ರಾರ್ಥನಾ ಶಾಲೆನಾ...? ಇಲ್ಲೇ ಮುಂದಕ್ಕೆ ಹೋಗಿ..." ಅಂದ....

ನಾಗು ಅತ್ಯಂತ ತಾಳ್ಮೆಯಿಂದ...
"ಹೌದಾ ಸಾರ್... ತುಂಬಾ ಉಪಕಾರವಾಯ್ತು...
ಏನ್ ಸಾರ್ ನೀವು ಇದೇ ಊರಿನವರಾ.....?"
ಅಂತ ಕೇಳಿದ....

"ಹೌದು ಸಾರ್... ಇಲ್ಲೇ ಹುಟ್ಟಿ ಬೆಳ್ದಿರೋದು....
ಮಾರಮ್ಮನ ದೊಡ್ಡಿಯವನು..."

ಮುಂದೆ ಹೋಗಿ ಬೇರೆಯವರನ್ನು ಕೇಳೋಣ ಅಂದು ಕೊಳ್ಳುವಷ್ಟರಲ್ಲಿ ಇನ್ನಿಬ್ಬರು ಬೈಕಿನಲ್ಲಿ ಬಂದರು...
ಅವರನ್ನು ಕೇಳಿದೆವು ..
ಅವರು ಸರಿಯಾದ ವಿಳಾಸ ಕೊಟ್ಟರು...

ನಾಗು ಅವರನ್ನು "ಸಾರ್ ನೀಮ್ಮೂರು ಯಾವುದು..?" ಅಂತ ಕೇಳಿದ....

"ಸಾರ್ ನಾವು ಮಂಗಳೂರಿನವರು" ಅಂತ ಹೇಳಿದರು...

ನಾವು ಅವರು ಹೇಳಿದ ಹಾಗೆ ಆ ಜಾಗ ತಲುಪಿದೆವು...
ಮತ್ತೆ ನಮ್ಮ ಸ್ನೇಹಿತರಿಗೆ ಫೋನ್ ಮಾಡಿ ನಾವು ಅಲ್ಲಿ ಬಂದಿದ್ದೇವೆ ಎಂದೆವು...

" ನೀವು ಅಲ್ಲಿಂದ ನೇರವಾಗಿ ಇನ್ನೂ ಮೂರು ಕಿಲೊಮೀಟರ್ ಮುಂದೆ ಚನ್ನ ಕೇಶವ ಟೆಂಪಲ್ ಬಳಿ ಬನ್ನಿ.." ಎಂದರು....

ನಾವು ಮತ್ತೆ ಮುಂದೆ ಹೋದೆವು...

ನಾವು ಅಲ್ಲಿ ಬರುವಷ್ಟರಲ್ಲಿ ಆ ಮಹಾಶಯರೂ ಬಂದಿದ್ದರು...

"ನೀವು ಈ ವಿಳಾಸ ಮೊದಲೇ ಹೇಳ ಬಹುದಿತ್ತಲ್ಲ... ಸರ್..
ನಮಗೆ ಸ್ವಲ್ಪ ಕನ್ಫ್ಯೂಸ್ ಆಯ್ತು.."

"ಅಯ್ಯೋ... ಹೆಗಡೆಯವರೆ.. ನಾನು ಸ್ವಲ್ಪ ದೂರದಲ್ಲಿದ್ದೆ..
ಬರಲಿಕ್ಕೆ ತಡ ಆಯ್ತು.. ಇರ್ಲಿ...
ಬನ್ನಿ ಜಾಗ ತೋರಸ್ತೀನಿ..."

ಅವರು ಅಲ್ಲಿಂದ ಎರಡು ಗಂಟೆ ಓಡಾಡಿಸಿ ಜಾಗ ತೋರಿಸಿದರು...

ಅವರು ತೋರಿಸಿದ ಸೈಟು, ಪೇಪರ್, ಜಾಗ ಯಾವುದೂ ಸರಿ ಇಲ್ಲವಾಗಿತ್ತು...

"ಸರ್... ನಾವು ಬೆಂಗಳೂರಿಗೆ ಹೋಗಿ ಮನೆಯಲ್ಲೊಮ್ಮೆ ಮಾತಾಡಿ ತಿಳಿಸ್ತೇವೆ..."

ಅವರ ಹಾಗೆ ಮಾತಾಡಿದೆವು...

ಸೈಟ್ ನೋಡಲು ಬಂದಿದ್ದ ನಮ್ಮ ಉತ್ಸಾಹ ಟುಸ್ ಆಯಿತು...!

ಸರಿ ಇನ್ನು ಏನು...?
ವಾಪಸ್ ಹೊರಡ ಬೇಕಲ್ಲ... ಮತ್ತೆ ವಿಳಾಸದ ಸಮಸ್ಯೆ...!

ಈ ಬಾರಿ ಆ ಸ್ನೇಹಿತರೇ ಹೇಳಿದರು..
"ನೀವು ನನ್ನ ಫಾಲೋ ಮಾಡಿ...
ನನ್ನ ಶಾಪ್‍ನಿಂದ ನಿಮಗೆ ಮುಖ್ಯ ರಸ್ತೆ ಸಿಗುತ್ತದೆ"

ನಾವು ಅವರನ್ನು ಅನುಸರಿಸಿ ಅವರ ಶಾಪ್‍ಬಳಿ ಬಂದೆವು...

"ಹೆಗಡೆಯವರೆ... ಬನ್ನಿ ಟೀ ಕುಡಿದು ಹೋಗುವಿರಂತೆ.."

ನಮಗೆ ಸಾಕುಸಾಕಾಗಿತ್ತು...
ಏನೋ ನೆಪ ಹೇಳಿ ಅಲ್ಲಿಂದ ಹೊರಟೇವು....

ನಮಗೆಲ್ಲ ಬಹಳ ಆಶ್ಚರ್ಯವಾಗಿತ್ತು...
" ಅಲ್ಲ ... ಊಟ ಮಾಡುವ ಸಮಯ...ಟೀ ಗೆ ಕರಿತಾ ಇದ್ದಾರಲ್ಲ...!"

ನಾಗುವೇ ಹೇಳಿದ...

"ಅವರು ವ್ಯವಹಾರಸ್ಥರಾಗಿದ್ದರೆ..
ಮುಂದೊಂದು ದಿನದ ಬಿಸಿನೆಸ್ ಲೆಕ್ಕಾಚಾರ ಇಟ್ಟುಕೊಂಡಾದರೂ ಊಟಕ್ಕೆ ಕರಿಯ ಬೇಕಿತ್ತು..
ಪ್ರಕಾಶ್ ಗುತ್ತಿಗೆದಾರ, ಶಿವು, ಮಲ್ಲಿ ಫೋಟೊಗ್ರಾಫರ್ಸ್...
ಇವುರುಗಳ ಸ್ನೇಹ ಲಾಭ ಇತ್ತು...
ಹೋಗಲಿ ಸ್ವಲ್ಪ ಮಾನವೀಯ ಭಾವನೆಗಳು ಇದ್ದಲ್ಲಿ ,..
ಸ್ನೇಹಕ್ಕಾದರೂ ಊಟಕ್ಕೆ ಕರೆಯ ಬೇಕಿತ್ತು..

ನನಗೆ ಅನಿಸುತ್ತೆ...
ಈ ಮನುಷ್ಯ.. ಇಲ್ಲಿನ ಮೂಲ ನಿವಾಸಿ...
ಇಲ್ಲಿಯೇ ಹುಟ್ಟಿ ಬೆಳೆದವರು... ಹೌದೋ.. ಅಲ್ಲವೋ..?"


ನನಗೆ ಆಶ್ಚರ್ಯ...!

"ನಿಜ ಮಾರಾಯಾ...
ಅವನು ಇಲ್ಲಿನ ಮಗ...!! ನೀನು ಹೇಗೆ ಗೆಸ್ ಮಾಡಿದೆ..!!..??.."

ನಾಗು ಮುಗುಳು ನಗೆ ನಕ್ಕ.......

"ಇವತ್ತು ಈ ಊರು ಬಿಡುವದರೊಳಗೆ ನಿಮಗೊಂದು ಆಶ್ಚರ್ಯದ ವಿಷಯವೊಂದನ್ನು ಹೇಳುತ್ತೇನೆ...
ನೀವೂ ಕೂಡ ಜನರನ್ನು ನೋಡಿ ಗೆಸ್ ಮಾಡ ಬಹುದು... ನೋಡುತ್ತಿರಿ.." ಅಂದ...

ನಮಗೆಲ್ಲ ಆಶ್ಚರ್ಯ... ಕುತೂಹಲ....!

ಶಿವು ತಮ್ಮ ಪರಿಚಯದವರೊಬ್ಬರಿಗೆ ಬ್ಯಾಗ್ ಬಗ್ಗೆ ಕೇಳುತ್ತಿದ್ದರು...

"ಹದಿನೈದು ದಿನಗಳ ಹಿಂದೆ ಆರ್ಡರ್ ಕೊಟ್ಟಿದ್ದೆ..
ನಿನ್ನೆನೂ ಫೋನ್ ಮಾಡಿದ್ದೆ..ಬನ್ನಿ ನಾಳೆ ಕೊಡ್ತಿನಿ ಅಂದಿದ್ದರು..
ಆದರೆ ಈಗ ಆ ಬ್ಯಾಗ್ ರೆಡಿ ಇಲ್ಲ ಅನ್ನುತ್ತಿದ್ದಾರೆ ..."

ಬೇಸರ ಮಾಡಿಕೊಳ್ಳುತ್ತಿದ್ದರು...

ನಾಗು ಮತ್ತೆ ಬಾಯಿ ಹಾಕಿದ...
"ಶಿವು ಸಾರ್...
ಆ ಬ್ಯಾಗ್‍ನವರು ಇಲ್ಲಿಯೇ ಹುಟ್ಟಿ ಬೆಳೆದ ಮೂಲನಿವಾಸಿಗಳು.. ಹೌದೋ ಅಲ್ಲವೋ...?"

ಶಿವುಗೂ ಆಶ್ಚರ್ಯ...
"ನಿಮಗೆ ಹೇಗೆ ಗೊತ್ತಾಯಿತು ಮಾರಾಯಾ..?"

ನಾಗು ಮತ್ತೆ ಮುಗುಳು ನಗೆ ನಕ್ಕ..

ಆ ಉರಿನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ
ಶಿವು ಮಲ್ಲಿಕಾರ್ಜುನ್‍ರಿಗೆ ಬಹಳ ದಿನಗಳ ಹಿಂದೆ ಪ್ರಶಸ್ತಿ ಬಂದಿತ್ತು...
ಆದರೆ ಆ ಕಮೀಟಿ ಜನ ಫೋಟೊ ವಾಪಸ್ ಮಾಡಿರಲಿಲ್ಲ...
ಫೋನ್ ಮಾಡಿ ಕೇಳಿದರೆ ಫೋನ್ ಎತ್ತುತ್ತಲೇ ಇಲ್ಲ...
ಅವರಿಗೆ ಹೊರಗಿನಿಂದ ಬಂದು ಪ್ರಶಸ್ತಿ ಪಡೆದ ಇವರ ಬಗೆಗೆ ಅಸೂಯೆ ಇತ್ತಾ...?

ನಾಗು ಮತ್ತೆ ಕೇಳಿದ...
"ಮಲ್ಲಿಯವರೆ...
ನೀವು ಫೋನ್ ಮಾಡಿದ ವ್ಯಕ್ತಿ ಈ ಊರಿನ ಮೂಲ ನಿವಾಸಿಗಳು.. ನಿಜಾನಾ...?"


"ಹೌದೋ ಮಾರಾಯಾ...!
ಸರಿಯಾದ ಊಹೆ... ಇದು ಹೇಗೆ ಗೆಸ್ ಮಾಡ್ತೀಯಾ ...ಪುಣ್ಯಾತ್ಮಾ..!!.."

ನಾಗು ಸ್ವಲ್ಪ ಗಂಭೀರವಾಗಿ ಹೇಳಿದ....

"ನೋಡಿ ನೀವು ಯಾವುದೇ ಸಿಟಿಗೆ ಹೋಗಿ...

ಸಿರ್ಸಿಯಿಂದ ಹಿಡಿದು .., ಸಿಂಗಾಪುರದವರೆಗೂ ಹೋಗಿ ನೋಡಿ...

ಹೆಚ್ಚಿನದಾಗಿ ಆ ಸಿಟಿ ಹೊರಗಿನಿಂದ ಬಂದ ಜನರಿಂದ ಬೆಳೆದಿರುತ್ತದೆ...

ಅಲ್ಲಿನ ಮೂಲ ನಿವಾಸಿಗಳು
ಗಂಜಿಯಲ್ಲಿ ಬಿದ್ದ ನೊಣದ ಹಾಗೆ ಇರುತ್ತಾರೆ...

ಜೀವನ ಉತ್ಸಾಹ... ಏನಾದರೂ ಮಾಡ ಬೇಕೆಂಬ , ಸಾಧಿಸುವ ಛಲ ಬತ್ತಿ ಹೋಗಿರುತ್ತದೆ...

ಆ ನಗರ ಬೇಳೆಯುವ ಓಟದಲ್ಲಿ ಓಡಲಾಗದೆ...
ಹಿಂದುಳಿದು ಬಿಡುತ್ತಾರೆ...
ಅದರಿಂದಾಗಿ ಹೊರಗಿನಿಂದ ಬಂದವರ ಮೇಲೆ..
ಹೊಟ್ಟೆಕಿಚ್ಚು.., ಮತ್ಸರ ಬೆಳೆಸಿಕೊಳ್ಳುತ್ತಾರೆ..."


"ಇದು ಯಾಕೆ... ಹೀಗೆ...?"

"ಹೊರಗಿನಿಂದ ಬಂದವರಿಗೆ ಇಲ್ಲಿ ಪ್ರತಿಯೊಂದನ್ನೂ ತಾವೇ ಸೃಷ್ಟಿಸಿಕೊಳ್ಳ ಬೇಕು...

ಯಾವುದೂ ಪುಕ್ಕಟೆಯಾಗಿ ಇಲ್ಲಿ ಸಿಗುವದಿಲ್ಲ...

ಹಾಗಾಗಿ ಅವರಿಗೆ ಬದುಕು ಕಲಿಸಿದ ಪಾಠ..

ಚುರುಕಾಗಿ ಇರುವ ಅನಿವಾರ್ಯತೆಯಲ್ಲಿ ಅವರಿರುತ್ತಾರೆ...

ಸ್ಪರ್ಧೆಯಲ್ಲಿ ಮುಂದಿರುತ್ತಾರೆ...

ಆದರೆ ಇಲ್ಲೇ ಹುಟ್ಟಿ ಬೆಳೆದ ಶ್ರೀಮಂತರಾದರೆ ಅಪ್ಪ ಮಾಡಿದ ಆಸ್ಥಿಯಿರುತ್ತದೆ...

ಬಡವಾರಾದರೆ ಹೊರಗಿನಿಂದ ಬಂದ ಜನರ ಸ್ಪರ್ಧೆಗೆ ನಿಲ್ಲಲಾಗುವದಿಲ್ಲ...

ಹೀಗಾಗಿ ಒಂಥರಾ ಜೋಗುಭಧ್ರ ಆಗಿಬಿಟ್ಟಿರುತ್ತಾರೆ... "

ನಾಗು ಮತ್ತೂ ಮುಂದುವರೆಸಿದ...

"ನೋಡಿ....
ಮುಂಬೈ ಪಟ್ಟಣ ಹೆಚ್ಚಾಗಿ ಬೆಳೆದದ್ದು ಗುಜರಾತಿಗಳು, ಮಾರ್ವಾಡಿಗಳಿಂದ...
ನಮ್ಮ ಬೆಂಗಳೂರೂ ಸಹ... ಹೀಗೇನೇ...
ಚೆನ್ನೈ.. ಯಾಕೆ ಹೈದರಬಾದ್, ಬೆಂಗಳೂರ್ ಥರಹ ಬೆಳೆದಿಲ್ಲ ಗೊತ್ತಾ...?"

"ಅಯ್ಯೋ.. ಅಲ್ಲಿ ಹೊರಗಿನವರಿಗೆ ಮೂರುಕಾಸಿನ ಬೆಲೆಯೇ ಇಲ್ಲ...!!"

"ಹಾಗೂ ಇರಬಹುದು...
ಅಮೇರಿಕಾ ಡೆವಲಪ್ ಆಗಿದ್ದರೆ ಅಲ್ಲಿನ ಮೂಲನಿವಾಸಿಗಳಿಂದ ಅಲ್ಲ...
ಯುರೋಪ್‍ನಿಂದ ಹೋದ ಬ್ರಿಟಿಷರಿಂದ...ಪೋರ್‍ಚುಗೀಸರಿಂದ...

ಇನ್ನು ಆಸ್ಟ್ರೇಲಿಯಾದಲ್ಲಿ..
ಹೊಟ್ಟೆಕಿಚ್ಚು, ಮತ್ಸರದಿಂದ ಭಾರತೀಯರ ಮೇಲೆ ದಾಳಿ ಆಗ್ತಾ ಇದೆ..."


ನಾಗುವಿನ ವಿಚಾರ ಸರಣಿ ಹೀಗೇ ಸಾಗಿತ್ತು...
ಅದು ಸರಿಯೋ ತಪ್ಪೊ ಅಂತ ವಿಮರ್ಶೆಮಾಡುವ ಸ್ಥಿತಿ ನಮ್ಮದಿರಲಿಲ್ಲ...
ನಮಗೆಲ್ಲ ಬಹಳ ಹಸಿವಾಗಿತ್ತು...
ಹೊಟೆಲ್ ಬಳಿ ಕಾರು ನಿಂತಿತು...

ನಾಗು ಹೇಳಿದ
"ನಮಗೆಲ್ಲ ಒಂದು ಸ್ಪರ್ಧೆ ಇಲ್ಲಿದೆ...
ತಿಂಡಿ ನಾನು ಆರ್ಡರ್ ಮಾಡ್ತೇನೆ..
ನೀವೆಲ್ಲ ನೋಡ್ತಾ ಇರಿ.. ಒಂದು ಮಜಾ ಇದೆ......" ಅಂದ...


ಹೊಟೆಲ್‍ನಲ್ಲಿ ಸಪ್ಲಾಯರ್ ನಾಗು ಕರೆದ...
"ನೋಡಪಾ... ಈ ಹೊಟೆಲ್‍ನಲ್ಲಿ ಯಾವ ತಿಂಡಿ ಚೆನ್ನಾಗಿದೆ...?"

"ಸಾರ್ ಇಡ್ಲಿ ವಡೆ... ಮಸಾಲೆ ದೋಸೆ..ಪ್ಲೇನ್ ದೋಸೆ... ಸೆಟ್ ದೋಸೆ...."

"ನೋಡಿ.. ಇಲ್ಲಿ ಮಾಡಿರುವ ತಿಂಡಿ ನೀವು ರುಚಿನೋಡಿರುತ್ತೀರಿ...
ಅಥವಾ... ಇಲ್ಲಿ ಹೆಚ್ಚಾಗಿ ಇಷ್ಟ ಪಟ್ಟು ತಿನ್ನುವ ತಿಂಡಿಯನ್ನು ಐದು ಪ್ಲೇಟ್ ತನ್ನಿ"
ಅಂದ......

ಸಪ್ಲಾಯರನಿಗೆ ಆಶ್ಚರ್ಯವಾಗಿರ ಬೇಕು... ಸ್ವಲ್ಪ ಹೊತ್ತು ತಲೆಕೆರೆದು ಕೊಂಡ...

"ಆಯ್ತು ಸಾರ್.. " ಅಂತ ಒಳಗೆ ಹೋದ...

ನಾಗು ಮತ್ತೆ ಶುರು ಹಚ್ಚಿಕೊಂಡ.....

"ನೋಡ್ರೊ....
ಅವನು ತರುವ ತಿಂಡಿಯ ರುಚಿಯ ಮೇಲೆ ನಾವೆಲ್ಲ ಹೇಳ ಬೇಕು..
ಅವನು ಇಲ್ಲಿನ ಮೂಲನಿವಾಸಿ ಹೌದೋ ಅಲ್ಲವೋ ಅಂತ...
ಇದು ಸ್ಪರ್ಧೆ...ಬಹುಮಾನ ಗ್ಯಾರೆಂಟಿ ಇದೆ..."

ನಮಗೆಲ್ಲ ಕುತೂಹಲದಿಂದ ಟೆನ್ಷನ್ ಶುರುವಾಯಿತು....

ಈ ತರಲೆ ನಾಗು ಏನಾದರೂ ಒಂದು ಮಾಡುತ್ತಲೇ ಇರುತ್ತಾನೆ....
ಸ್ವಲ್ಪ ಹೊತ್ತಿನ ಮೇಲೆ ಸಪ್ಲಾಯರ್ ಬಂದ....

ಅವನ ಟ್ರೇ ನಲ್ಲಿ ಐದು "ಮಸಾಲೆದೋಸೆಗಳಿದ್ದವು..."

ನಾಗು ಹೇಳಿದ..
"ರುಚಿನೋಡೀ ... ಹೇಳ್ರೋ...!."

ನಾವು ಲಗುಬಗೆಯಿಂದ ಮಸಾಲೆ ದೋಸೆ ಬಾಯಿಗಿಟ್ಟೇವು...

ನಾಗು ನನ್ನ ಮುಖ ನೋಡಿದ...

"ಈ ಹುಡುಗ ... ಬೇರೆ ಊರಿನವನು..." ಅಂದೆ...

ಮಲ್ಲಿಕಾರ್ಜುನ್ ಹೇಳಿದರು
"..ರುಚಿ ಓಕೆ... ಇವನು ಬೇರೆ ಊರಿನವನೇ ಇರಬಹುದು.."

ನಾಗು ಶಿವು ಮುಖ ನೋಡಿದ...

"ಇದು... ಕ್ರಾಸ್ ಬೀಡ್.... ಸಾರ್.... !!

ಹಳ್ಳಿ ಹಲಸಿನ ಮರ..!

ಪೇಟೆಯ ಜಾತಿ ಮರ...ಮಿಕ್ಸ್ ಆಗಿಬಿಟ್ಟಿದೆ...!!."

ನಮಗೆ ನಗು ತಡೇಯಲಾಗಲಿಲ್ಲ....!
ಹಂಚು ಹಾರಿಹೋಗುವಷ್ಟು ನಗು....!

ನಾಗು ಅಜಿತ್ ಮುಖ ನೋಡಿದ....

" ನಾಗು ಸಾರ್.... ಇದು ಕಸಿ ಮರ.... ಮಿಕ್ಸಡ್ ಸ್ಯಾಂಪಲ್ಲು...."

ನಮಗೆಲ್ಲ ಮತ್ತೆ ನಗು...!
ತಡೆಯಲಾರದಷ್ಟು ನಗು...!

ತಿಂಡಿ ತಿಂದಾಯಿತು ಸಪ್ಲಾಯರ್ ಬಂದು ಬಿಲ್ಲು ಕೊಟ್ಟ......

ನಾಗು ಈಗ ಕೇಳಿದ...
"ನಿಮ್ಮೂರು ಯಾವುದು ಯಜಮಾನ್ರೆ..??."

"ನಮ್ಮೂರಾ... ತುಮಕೂರಿನ ಹತ್ತಿರ ಕೊರಟಗೆರೆ...!!"

ನಮಗೆಲ್ಲ ಮತ್ತೆ ನಗು... ನಗುತ್ತಲೆ ಇದ್ದೆವು...

ನಾಗು ಬಿಲ್ಲ್ ಹಣ ಕೊಟ್ಟ......

ನನಗೆ, ಮಲ್ಲಿಕಾರ್ಜುನ್‍ಗಿಬ್ಬರಿಗೂ ಖುಷಿಯಾಯಿತು.....ನಾವು ಹೇಳಿದ್ದು ಸರಿಯಾಗಿತ್ತಲ್ಲ..!

ಆತ ಬಿಲ್ ವಾಪಸ್ ತಂದು ಕೊಟ್ಟ...

ಅಜಿತ್‍ಗೆ ಇನ್ನೂ ಕುತೂಹಲ ಬಿಟ್ಟಿರಲಿಲ್ಲ...

"ನೋಡ್ರಿ...ಯಜಮಾನ್ರೆ...!
ನಿಮ್ಮ ರಿಲೇಟಿವ್ಸ್ ಯಾರಾದರೂ ಈ ಊರಲ್ಲಿ ಇದ್ದಾರಾ...?"

ಸಪ್ಲಾಯರ್ ತುಂಬ ಖುಷಿಯಿಂದ ಹೇಳಿದ...!!

"ಹೌದು ಸಾರ್....!!

ನನ್ನ ಅಮ್ಮ .... ಇದೇ ಊರಿನವರು..!!.??.!!"

ನಮಗೆಲ್ಲ ನಗು ತಡೆಯಲು ಸಾಧ್ಯವಾಗಲೇ ಇಲ್ಲ....!

ಹೊಟ್ಟೆ ಹುಣ್ಣಾಗುವಷ್ಟು ನಕ್ಕೇವು...
ನಕ್ಕು ನಕ್ಕು ಕಣ್ಣಲ್ಲಿ ನೀರು ಬಂತು.....

ದಾರಿಯಲ್ಲಿ ಬರುವಾಗ ಬಸ್‍ಸ್ಟ್ಯಾಂಡ್‍ಗಳಲ್ಲಿ ನಾಗು ಬಹಳಷ್ಟು ಮೂಲನಿವಾಸಿಗಳನ್ನು ತೋರಿಸಿದ....

ಅವರಲ್ಲಿ ಕೆಲವರು......

ತಲೆ ಮೇಲೆ ಕೈಹೊತ್ತು ಕುಳಿತಿದ್ದರು.....

ಬಾಯಿಗೆ ಕಡ್ಡಿಹಾಕಿ ಕ್ಲೀನ್ ಮಾಡುತ್ತ ಮಾತಾಡುತಿದ್ದರು...

ಸುಮ್ಮನೆ ಆಕಾಶ ನೋಡುತ್ತಿದ್ದರು... ಆಕಳಿಕೆ ಹೊಡೆಯುತ್ತಿದ್ದರು...

ಕೆಲವರ ಮುಖದಲ್ಲಿ ಜಿಗುಪ್ಸೆ ಬೇಸರವಿತ್ತು... ನಿರಾಸೆಯಿತ್ತು...

ಇನ್ನೂ ಕೆಲವರ ಮುಖದಲ್ಲಿ...

ಈ ಜಗತ್ತಿನ ಎಲ್ಲ ಬಗೆಯ ಆತ್ಮ ಸಂತೃಪ್ತಿ ಕಾಣುತ್ತಿತ್ತು...
ತೃಪ್ತ ಭಾವನೆ ಇತ್ತು....

ಆಳಸಿತನದ ಪರಮಾವಧಿ ಭಾವ ಎದ್ದು ಕಾಣುತ್ತಿತ್ತು....

ಗಂಜಿಯಲ್ಲಿ ಬಿದ್ದ ನೊಣದ ಹಾಗೆ...

ಜೋಗ್ ಭದ್ರನ ಮುಖದ ಕಳೆ ತುಂಬಿ ತುಳುಕುತ್ತಿತ್ತು........

ನಾಗು ಮತ್ತೂ ಹೇಳಿದ....
ಮೂಲ ನಿವಾಸಿಗಳೆಂದರೆ... ಗಂಡಂದಿರುಗಳ ....ಹಾಗೆ...
ಆಫೀಸಿಗೆ ಹೋದರೆ ಕೆಲಸ ಮಾಡ್ತಾರೆ...

ಮನೆಯಲ್ಲಿ
...ಐದು ಪೈಸೆ... ಕೆಲಸ ಮಾಡಲ್ಲ...!!
ಪುಕ್ಕಟೆ ಉಪದೇಶ ಹೊಡೆಯುತ್ತ...
ಕೂತಿರ್ತಾರೆ...!!
(ನನ್ನ ಬ್ಲಾಗ್ ಫಾಲೋ ಮಾಡುವ ಕೆಲವು ಬ್ಲಾಗುಗಳ ಲಿಂಕ್ ಸಿಗುತ್ತಿಲ್ಲ...
ಇನ್ನು ಕೆಲವು ಸ್ನೇಹಿತರ ಈಮೇಲ್ ಕೂಡ ಸಿಗುತ್ತಿಲ್ಲ...
ದಯವಿಟ್ಟು...
ತಮ್ಮ ಬ್ಲಾಗ್ ಲಿಂಕ್ ನೊಂದಿಗೆ ನನಗೆ ಈಮೇಲ್ ಮಾಡುವಿರಾ...?
ನನ್ನ ಈ ಮೇಲ್..
kash531@gmail.com) )


(ಪ್ರಿಯ ಓದುಗರೇ... ನನ್ನ ಪುಸ್ತಕಕ್ಕೆ ಏನು ಹೆಸರು ಇಡಬೇಕು..?
ಹೆಸರುತೋಚುತ್ತಿಲ್ಲ... ದಯವಿಟ್ಟು ಒಳ್ಳೆಯಹೆಸರನ್ನು ಸೂಚಿಸಿ...
ಪುರಸ್ಕಾರವುಂಟು...
ಮೇಲ್ ಮಾಡುವಿರಾ...?)

( ಲೇಖನಕ್ಕೆ ಸುಂದರ
ಪ್ರತಿಕ್ರಿಯೆಗಳಿವೆ... ದಯವಿಟ್ಟು ಓದಿ... ಭಾಗವಹಿಸಿ...)


Sunday, July 26, 2009

ಹಕ್ಕಿ... ಹಕ್ಕಿ..! ಬಣ್ಣದ ಹಕ್ಕಿ...!

ನಾನು..ತಾಯಿ...

ನನ್ನ.. ಮಗು ಇದು...

ಈ ಪುಟ್ಟ ಮರಿಗೆ.. ನಾನು ಹೊಟ್ಟೆ ತುಂಬಿಸ ಬೇಕು.....

ಗೂಡು ಕಟ್ಟಿ ಸಂಸಾರ ಮಾಡಬೇಕು...

ಪುಟ್ಟ ಹಕ್ಕಿಗಳಿಗೆ ಹೇಗೆ ತಿಳಿಯುತ್ತದೆ...??





ಬಣ್ಣ ಬಣ್ಣದ ಹಕ್ಕಿಗಳು....
ಜಾತಿಗಳು ಬೇರೆ.. ಬೇರೆ...!
ಬದುಕಲಿಕ್ಕೆ ಏನೂ ತೊಂದರೆ ಇಲ್ಲವಲ್ಲ.....!!



ನಾನೂ, ನೀನು ಜೋಡಿ...

ಜೀವನ ಎತ್ತಿನ ಗಾಡಿ...

ಗೂಡು ಕಟ್ಟುವದು ಗಂಡು ಹಕ್ಕಿ,..
ಪುಟ್ಟ ಮರಿಗೆ ಹೊಟ್ಟೆ ತುಂಬಿಸಿ..
ಹಾರುವದನ್ನು ಕಲಿಸುವದು ತಾಯಿ ಹಕ್ಕಿ....
ಪುಟ್ಟ ಹಕ್ಕಿಗಳಿಗೆ ಇದೆಲ್ಲ... ಹೇಗೆ ಗೊತ್ತಾಗುತ್ತದೆ...??



"ಹೇಗಿದೆ ಜೀವನಾ... ? ಮಳೆ ಬೆಳೆ ಎಲ್ಲಾ ಹೇಗೆ...?"

ಪಕ್ಷಿಗಳು
ಮಾತಾಡುತ್ತಾವಾ...?
ಸ್ಪಂದಿಸುತ್ತಾವಾ...?
ಅವುಗಳಿಗೊಂದು ಭಾಷೆ ಇದೆಯಾ...?



ಒಂದೊಂದು ಹಕ್ಕಿಗೂ..
ಒಂದೊಂದು ಬಣ್ಣ..
ಇದು ಸ್ರಷ್ಟಿಯ ವೈಚಿತ್ರ್ಯ ಕಣಣ್ಣಾ...


ಕಾಡಿನ ನಾಶ..!
ವಾತಾವರಣ ಮಾಲಿನ್ಯ...!
ಮೂಕ
ಹಕ್ಕಿಯ ರೋದನ.. ಕೇಳುವರಾರು...?




ಹಸಿರೆಲೆ ನಡುವೆ ಹಾಯಾಗಿರುವ...
ನನ್ನ ಪ್ರಪಂಚಕ್ಕೂ ಬಂದಿದೆ ಕುತ್ತು....!


ನಾನು ಪಕ್ಷಿ ರಾಜ...
ನನ್ನ
ಚಂದವೇ ನನಗೆ ವೈರಿ....!




ನನ್ನ ರೆಕ್ಕೆ, ಪುಕ್ಕ ಹೇಗಿದೆ...?



ಕಪ್ಪಿದ್ದರೇನು...?
ಚಂದವೇ ಅಲ್ಲವೇ...?




ಬಾ ಕಟ್ಟೋಣ ಪುಟ್ಟ ಮನೆಯೊಂದನು... .......
ಕೆಟ್ಟ ..ಮಾನವನ ಕಣ್ಣು ಬೇಳದೆಡೆ....



ನನ್ನ ಚಂದಕೆ ಸಾಟಿಯಾರು...?





ಕ್ರೂರತೆಯೂ ಅಂದ...
ಕ್ರೌರ್ಯವೂ..
ಚಂದ... ! ಚಂದ...!




ನಾನು ಹೀಗಿದ್ದರೆನೆ ಚಂದ.....!

ಎಲ್ಲಿ ನನ್ನ ಆಹಾರ....??



ತಲೆಗೊಂದು ಜುಟ್ಟು...
ಇದೆ
ನನ್ನ ಅಂದದ ಗುಟ್ಟು....!



ಸದ್ದಿರದ ಪಸಿರುಡೆಯ..
ಮಲೆನಾಡ
ಬನಗಳಲಿ..........
ಮೊರೆವ ತೊರೆಯೆಡೆಯಲ್ಲಿ... ಗುಡಿಸಲೊಂದಿರಲಿ...




ಕಾಡೆಲ್ಲ ಅಳಿದ ಮೇಲೆ....
ಎಲ್ಲಿದೆ ನನ್ನ ನೆಲೆ...??



ನಮ್ಮ ಪುಟ್ಟ ಸಂಸಾರದ...
ಮೇಲೆ ನಿನಗೇಕೋ... ಕೆಟ್ಟ ..ಕಣ್ಣು.. ??




ನೀಲಿ ಆಗಸದಲ್ಲಿ ... ಸ್ವಚ್ಚಂದವಾಗಿ...

ಹಾಯಾಗಿ ಹಾರಾಡಲು ಬಿಡ ಬಾರದೆ...?



ಬಿಳಿಯ..
ಕರಿಯ...
ಭೇದ ಭಾವ ನಮ್ಮಲ್ಲಿಲ್ಲವೋ...!

ಪ್ರೀತಿಯಿಂದ ಬದುಕುವ ರೀತಿ, ನೀತಿ..ತಿಳಿಯೋ... !


(ನನ್ನ ಬ್ಲಾಗ್ ಫಾಲೋ ಮಾಡುವ ಕೆಲವು ಬ್ಲಾಗುಗಳ ಲಿಂಕ್ ಸಿಗುತ್ತಿಲ್ಲ...
ಇನ್ನು ಕೆಲವು ಸ್ನೇಹಿತರ ಈಮೇಲ್ ಕೂಡ ಸಿಗುತ್ತಿಲ್ಲ...
ದಯವಿಟ್ಟು...
ತಮ್ಮ ಬ್ಲಾಗ್ ಲಿಂಕ್ ನೊಂದಿಗೆ ನನಗೆ ಈಮೇಲ್ ಮಾಡುವಿರಾ...?
ನನ್ನ ಈ ಮೇಲ್..
kash531@gmail.com) )

ಇಲ್ಲಿ ನೋಡಿ..
ಛಾಯಾ ಚಿತ್ತಾರಾ...
(ನನ್ನ ಪ್ರೊಫೈಲ್)

Monday, July 20, 2009

ಇದು ಜಗತ್ತಿನ ಯಾವ ವಿಜ್ಞಾನಕ್ಕೂ ಅರ್ಥವಾಗದ ವಿಚಾರ...!

ಕಾಲೇಜು ದಿನಗಳಲ್ಲಿಯೂ ನಾನು ಬಹಳ ಸಂಕೋಚದ ಸ್ವಭಾವನಾಗಿದ್ದೆ..

ಕೀಳರಿಮೆ , ಅನಾಥ ಪ್ರಜ್ಞೆ ನನ್ನನ್ನು ಕಾಡುತ್ತಿತ್ತು...
ಬೇರೆಯವರಿಂದ ಅನುಕಂಪ, ಸಿಂಪಥಿ ಯಾವಾಗಲೂ ಬಯಸುತ್ತಿದ್ದೆ...

ಯಾರಾದರೂ ...ಅನುಕಂಪದಿಂದ...
"ಪಾಪ.. ...!!
ಅಪ್ಪ ಇಲ್ಲದ ಹುಡುಗ.. "
ಅಂತ ಅಂದು ಬಿಟ್ಟರೆ ನನ್ನೊಳಗೆ ಒಂಥರಾ... ಖುಷಿಯಾಗುತ್ತಿತ್ತು...
ಅದನ್ನು ನನ್ನ ಮನಸ್ಸು ಬಯಸ್ಸುತ್ತಿತ್ತು.....

ಇದನ್ನು ಹೊರದೊಡಿಸಿದವರು ನನ್ನ ಚಿಕ್ಕಮ್ಮ....

ಅವರು ಸ್ವಲ್ಪ ನಿಷ್ಠೂರವಾದಿ..
ತಮಗೆ ಸರಿ ಎನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಎದುರಿಗೇ ಹೇಳಿ ಬಿಡುವಂತವರು..

"ನೀನು ಅನುಕಂಪ ಬಯಸುತ್ತಿದ್ದಿಯಾ...
ಇದು ತಪ್ಪು....
ಇದು ನಿನ್ನ ಏಳಿಗೆಗೆ ತೊಂದರೆ ಕೊಡುತ್ತದೆ...

ಅಲ್ಪತ್ರಪ್ತನನ್ನಾಗಿ ಮಾಡಿ ಬಿಡುತ್ತದೆ...
ಇದರಿಂದ ಹೊರಗೆ ಬಂದಂತೂ ನೀನು ಉದ್ಧಾರವಾಗೋದಿಲ್ಲ"
ನನ್ನ ಚಿಕ್ಕಮ್ಮ ಅಪ್ಪಟ ಹಳ್ಳಿ ಪ್ರತಿಭೆ...
ಆ ಭಾಗದಲ್ಲಿ...
ಹಾಡು, ಕಲೆ ಕಸೂತಿಯಿಂದಾಗಿ ಬಹಳ ಪ್ರಸಿದ್ದರು...

ಅವರ ಮಾತು ನನ್ನಲ್ಲಿ ಬಹಳ ನಾಟಿತು...

ಆದರೆ ಹೇಗೆ... ಹೊರಬರುವದು...?

ಚಿಕ್ಕಪ್ಪ, ಚಿಕ್ಕಮ್ಮ ಇಬ್ಬರೂ ನನಗೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವದಕ್ಕೆ ಪ್ರೋತ್ಸಾಹಿಸುತ್ತಿದ್ದರು...

"ನಿನ್ನಪ್ಪ ...ಆ ಕಾಲದಲ್ಲಿ ..
ಆ .. ದೇವಿಸರದ ಕುಗ್ರಾಮದಲ್ಲಿ ನಾಟಕ ತಂಡ ಕಟ್ಟಿ..
ನಾಟಕದ ನಿರ್ದೇಶನ ಮಾಡಿ ...
ರಾತ್ರಿಯಿಂದ ಬೆಳಗಿನವರೆಗೆ ನಾಟಕ ಆಡಿಸಿದ್ದರು...

ಅವರೇ ಮುಖ್ಯ ಖಳನಾಯಕನ ಪಾತ್ರ..
ನಮ್ಮೂರಲ್ಲಿ " ನ ಭೂತೋ... ನಭವಿಷ್ಯತಿ.."
ಅನ್ನುವಂಥಹ ನಾಟಕ...
ಅವರ ಮಗ ನೀನು....
ನೀನೂ ಭಾಷಣ ಮಾಡ ಬಲ್ಲೆ ...ಮಾಡು..."
ಎಂದು ಹುರಿದುಂಬಿಸುತ್ತಿದ್ದರು...


ನನ್ನಲ್ಲಿ ಆತ್ಮ ವಿಶ್ವಾಸದ ಕೊರತೆ.....

ಅವರ ಒತ್ತಾಯಕ್ಕೆ ಭಾಷಣ ಮಾಡಿದರೂ ಬಹುಮಾನ ಬಂದಿರಲಿಲ್ಲ....

ಕಾಲೇಜು ದಿನಗಳಲ್ಲಿ ನಾಗು, ದಿವಾಕರ ನನಗೆ ಬಹಳ ಆಪ್ತರಾದರು..
ದಿವಾಕರ ಒಳ್ಳೆಯ ಮಾತುಗಾರ...
ನನ್ನನ್ನೂ ತನ್ನ ಸಂಗಡ ಸೇರಿಸಿಕೊಂಡು ಚರ್ಚಾ ಸ್ಪರ್ಧೆಗೆ ಕರೆದು ಕೊಂಡು ಹೋಗುತ್ತಿದ್ದ...
ತಾನೇ ಭಾಷಣ ಬರೆದು ಕೊಡುತ್ತಿದ್ದ...

ಆದರೆ ....
" ಹೇಳಿಕೊಟ್ಟ ಮಾತು..

ಕಟ್ಟಿಕೊಟ್ಟ ಬುತ್ತಿ ಹೆಚ್ಚು ದಿನ ಬರುವದಿಲ್ಲವಲ್ಲ...!!.."

ಏನಾದರೂ ಇದ್ದರೆ.... ಅದು ನಮ್ಮ ಸ್ವಂಥದ್ದು...
ನಮ್ಮ ಸ್ವಂತಿಕೆ.....

ನನ್ನ ಆತ್ಮ ವಿಶ್ವಾಸದ ಕೊರತೆಯಿಂದಾಗಿ ಆ ಭಾಷಣಗಳೆಲ್ಲ ಸಪ್ಪೆಯಾಗಿ ಬಿಡುತ್ತಿತ್ತು...

"ನೀನು ಒಂದು ಬಹುಮಾನ ತೆಗೆದು ಕೊಳ್ಳುವವರೆಗೆ ನಾನು ಬೀಡುವದಿಲ್ಲ"
ಎಂದು ದಿವಾಕರ ಭೀಷ್ಮ ಪ್ರತಿಜ್ಞೆ ಮಾಡಿ ಬಿಟ್ಟ...

ನಾಗು, ದಿವಾಕರ ಇಬ್ಬರೂ ಪಣ ತೊಟ್ಟರು....

ಸಿದ್ದಾಪುರದ ಟೌನ್ ಹಾಲಿನಲ್ಲಿ ಒಂದು ಚರ್ಚಾ ಸ್ಪರ್ಧೆ ಇತ್ತು..

" ಅಣುಸ್ಥಾವರಗಳು ವಿನಾಷಕ್ಕೆ ದಾರಿ"

ಆಗ "ಉತ್ತರ ಕನ್ನಡ ಜಿಲ್ಲೆ ಉಳಿಸಿ" ಎನ್ನುವ ಆಂದೋಲನದ ಜೋರಾಗಿತ್ತು...
ಕೈಗಾ ಅಣುಸ್ಥಾವರ ವಿರೋಧ ಎಲ್ಲೆಡೆ ಇತ್ತು....

ಕಾರಂತಜ್ಜ ನಮ್ಮೆಲ್ಲರ ನಾಯಕರಾಗಿದ್ದರು...

"ಅಣುಸ್ಥಾವರಗಳು ಬೇಕು" ಅನ್ನಲಿಕ್ಕೆ ಯಾರೂ ಇರುತ್ತಿರಲಿಲ್ಲ...

ನಾವು.., ನಮ್ಮ ಗುಂಪು ಸ್ವಲ್ಪ ಎಡವಟ್ಟುಗಳು....
"ಅಣುಸ್ಥಾವರಗಳು ಬೇಕು" ಎಂದು ವಾದ ಮಾಡುವದಕ್ಕೆ ತಯಾರಿ ಮಾಡಿದೆವು...

ದಿವಾಕರ ರಾಜ್ಯಮಟ್ಟದಲ್ಲಿ ಭಾಷಣಕ್ಕೆ ಪ್ರಥಮ ಬಹುಮಾನ ಪಡೆದವ..
ಈಗಲೂ ಅತ್ಯುತ್ತಮ ವಾಗ್ಮಿ... ಪ್ರತಿಭಾವಂತ...

ಆದರೂ ನಮಗೆ ಬಹುಮಾನ ಸಿಗುವದು ಸಾಧ್ಯವೇ ಇಲ್ಲವಾಗಿತ್ತು...!!

ಅದಕ್ಕೆ ಕಾರಣ.....
"ನಯನಾ" ಎನ್ನುವ ಹುಡುಗಿ....


ಸುಂದರ ದುಂಡು ಮುಖದ ನೀಲಿ ಕಣ್ಣಿನ ಹುಡುಗಿ ಭಾಷಣಕ್ಕೆ ಬರುತ್ತಿದ್ದಳು..

ನೋಡಲು ನಾಲ್ಕು ಕಣ್ಣು ಸಾಲದು...
ಧ್ವನಿಯೂ ಮತ್ತೇರಿಸುವಂತಿತ್ತು...
ಸ್ವಲ್ಪ ಏರಿದ ಧ್ವನಿಯಲ್ಲಿ...
ಮೇಜು ಕುಟ್ಟಿ... ಮಾತನಾಡಿದರಂತೂ...
..........................................
ನಾವು ಬಹುಮಾನದ ಆಸೆ ಬಿಟ್ಟು ಬಿಡುತ್ತಿದ್ದೇವು...!

ನಾಗು ಹೇಳಿದ...
" ಈ ಬಾರಿ ಇದಕ್ಕೆಲ್ಲ ಕೊನೆ ಹಾಕೋಣ...
ಈ ಬಾರಿ ನಾವೇ ಗೆಲ್ಲುತ್ತೇವೆ..ನನ್ನ ಬಳಿ ಉಪಾಯವಿದೆ.."


ಅವನ ವಿಚಾರಗಳು.. ಧೋರಣೆಗಳು ಬೇರೆಯೇ...

ಭಾಷಣದ ದಿನ ಬಂತು...
ಊರಿನಿಂದ ನನ್ನ ಭಾಷಣ ಕೇಳಲು ನನ್ನ ಅಣ್ಣ ಬಂದಿದ್ದರು...

ಜನಸಾಗರವೇ ಸೇರಿತ್ತು....

ಮೊದಲು ದಿವಾಕರ...!
ಎಂದಿನ ತನ್ನ ಸಿಂಹ ಧ್ವನಿಯಲ್ಲಿ ಹೇಳಿದ..

"ವಿಜ್ಞಾನ ವೆಂದರೆ ಒಂದು ಕತ್ತಿ ಇದ್ದ ಹಾಗೆ...
ಅದು ಒಬ್ಬ ಕ್ರಷಿಕನ ಕೈಗೆ ಸಿಕ್ಕರೆ ಬೆಳೆಯನ್ನು, ಕಳೆಯನ್ನು ಕಡಿಯಲಿಕ್ಕೆ ಉಪಯೋಗಿಸುತ್ತಾನೆ..
ಅದೇ ಕತ್ತಿ ಒಬ್ಬ ಕೊಲೆಗಡುಕನ ಕೈಗೆ ಸಿಕ್ಕರೆ ತಲೆಕಡಿಯಲು ಉಪಯೋಗಿಸುತ್ತಾನೆ..

ಇಲ್ಲಿ ಕತ್ತಿಯ ತಪ್ಪು ಏನೂ ಇಲ್ಲ...

ಕತ್ತಿ ಉಪಯೋಗಿಸುವವನ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ..

ಅಣುಸ್ಥಾವರಗಳೂ ಹಾಗೇ...ಅದು ಇಂದಿನ ವಿಜ್ಞಾನ ..
ಅದು ಭವಿಷ್ಯದ ಅವಶ್ಯಕತೆ...."
ಎಂದು ತನ್ನ ವಾದ ಮಂಡಿಸಿದ...
ಜನರೆಲ್ಲ ತಲೆದೂಗಿದರು....

ನಂತರ ಬಂದವಳು ಬಳುಕುವ .."ನಯನಾ..."...!!!!...
ತನ್ನ ಕಿರುನೋಟವನ್ನು ತೀರ್ಪುಗಾರರ ಮೇಲೆ ಹರಿಸಿದಳು....
ಕಣ್ಣ ಮುಂದೆ ಬಂದ ಕೂದಲನ್ನು ಹಿಂದಕ್ಕೆ ತಳ್ಳುತ್ತಾ...
ತನ್ನ ಮಾದಕ ..
ಮೋಹಕ ಧ್ವನಿಯಲ್ಲಿ
....ಶುರು ಮಾಡಿದಳು...

" ನನ್ನ ಪ್ರೀತಿಯ ಬಂಧುಗಳೇ...

ಅಣು ಶಕ್ತಿಯಿಂದ ವಿಕಿರಣ ಉಂಟಾಗುತ್ತದೆ....!

ಸ್ವಲ್ಪ ಎಚ್ಚರ ತಪ್ಪಿದರೆ... ವಿನಾಷ ಗ್ಯಾರೆಂಟಿ...!

ರಷಿಯಾದ ಚರ್ನೋಬಿಲ್ಲಿನಲ್ಲಿ ಏನಾಯಿತು.....?

ನಾಗಸಾಕಿ, ಹಿರೋಷಿಮಾದಲ್ಲಿ ಏನಾಗಿದೆ..? ಏನಾಗುತ್ತಿದೆ...??

ಸಹಸ್ರಾರು.., ಕೊಟ್ಯಾಂತ ಜನರು.. ಪರಿತಪಿಸುತ್ತಿದ್ದಾರೆ...!

ಸಾವು ಬದುಕಿನ ಮದ್ಯೆ ಒದ್ದಾಡುತ್ತಿದ್ದಾರೆ....!

ಅಣು ವಿಕಿರಣದಿಂದ ಪರಿಸರ ನಾಶವಾಗುತ್ತದೆ...

ನಯನಾ ತನ್ನ ಧ್ವನಿಯನ್ನು ಮತ್ತೂ ಏರಿಸಿ...
ಮೇಜು ಕುಟ್ಟಿದಳು...!

ಆವೇಶ ...ಜಾಸ್ತಿಯಾಯಿತು..!!

"ಬದುಕು ದುಸ್ಥರವಾಗುತ್ತದೆ...!
ಗಂಡಸರು ನಪಂಸಕರಾಗುತ್ತಾರೆ...!
ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!
ಕಣ್ಣಿಲ್ಲದ, ಕಾಲಿಲ್ಲದ ಮಕ್ಕಳು ನಮ್ಮ ಭವಿಷ್ಯವಾಗುತ್ತಾರೆ...!

ನನ್ನ ಆತ್ಮೀಯ ಬಂಧುಗಳೇ.....
ಇಂಥಹ ಬದುಕು ನಿಮಗೆ ಬೇಕಾ...?

ನೀವೇ ಹೇಳಿ ಅಣು ಸ್ಥಾವರ ನಮಗೆ ಬೇಕಾ..?"

ಅವಳ ಸೌಂದರ್ಯ, ಮಾದಕ ಧ್ವನಿಗೆ ....ಮರುಳಾಗಿದ್ದ ಜನರೆಲ್ಲ...
"ಬೇಡ .. ಬೇಡ " ಎಂದರು...

ನಂತರ ಸರದಿ ನನ್ನದು...!!
ಸೋಲು.... ಖಚಿತವಾಗಿತ್ತು...!!

ಒಂಬತ್ತನೆ ವಿಕೆಟ್ಟಿಗೆ ಅನಿವಾರ್ಯವಾಗಿ ಆಡಲು ಬರುವ ಆಟಗಾರನ ಸ್ಥಿತಿ ನನ್ನದಾಯಿತು..

ನರ್ವಸ್ ಆಗಿಬಿಟ್ಟಿದ್ದೆ..

ಅವಳ ಭಾಷಣದ ಮೋಡಿಯಿಂದ ..
ಜನರ ತಪ್ಪಾಳೆ ನನ್ನನ್ನು ಅಧಿರನನ್ನಾಗಿ ಮಾಡಿ ಬಿಟ್ಟಿತ್ತು....!

ಅಷ್ಟರಲ್ಲಿ ನಾಗು ಓಡೋಡಿ ಬಂದ...!
ಕಿವಿಯಲ್ಲಿ ಏನೇನೋ ಹೇಳಿದ...! ಹುರಿದುಂಬಿಸಿದ....!!

"ಈ ಸ್ಟೇಜು ನಿಂದು.. ಈ ಕ್ಷಣ ಈ ಘಳಿಗೆ ನಿನ್ನದು...
ಈ ಸಮಯ ಮತ್ತೆ ಸಿಗುವದಿಲ್ಲ...
ಪ್ರಕಾಶು.. ...
ಸೋಲು... ಸೋಲುತ್ತಿರುವಾಗ... ಗೆಲ್ಲ ಬೇಕು ..
ಹೋಗು... ಗೆದ್ದೇ ಗೆಲ್ತಿಯಾ.!!..!!"
ಬೆನ್ನುತಟ್ಟಿದ....

ನಾನು ದಿವಾಕರನ ಮುಖ ನೋಡಿದೆ...

"ಹೊಡಿ... ಮುಂದುವರೆಸು.." ಎಂದು ಕಣ್ಣಸನ್ನೆಯಲ್ಲೇ ಹೇಳಿದ...

ನಾನು ಸ್ಟೇಜಿಗೆ ಬಂದೆ...

ಎಲ್ಲೆಲ್ಲೂ ಪಿನ್ ಡ್ರಾಪ್ ಸೈಲೆನ್ಸ್.... !!

ಜನರೆಲ್ಲ ನನ್ನನ್ನೇ ದಿಟ್ಟಿಸುತ್ತಿದ್ದರು.....!
ನನಗೆ ಎಲ್ಲಿಲ್ಲದ ಧೈರ್ಯ ಬಂದು ಬಿಟ್ಟಿತ್ತು....

"ಮಾನ್ಯರೆ....
ನಮ್ಮ ವಿರೋಧಿಯವರು ಈಗ ತಾನೆ ಹೇಳಿದರು...

ಇದು ನಮ್ಮ ಜಗತ್ತಿನ ಯಾವ ವಿಜ್ಞಾನಕ್ಕೂ ...
ಸಾಧ್ಯವಾಗದ, ಅರ್ಥವಾಗದ ವಿಚಾರ...!!

ನನಗಂತೂ ಅರ್ಥವಾಗುತ್ತಿಲ್ಲ....
ನಿಮಗೆ ಅರ್ಥವಾಯಿತಾ...??

"ಗಂಡಸರೆಲ್ಲ ನಪಂಸಕರಾಗುತ್ತಾರೆ...!!

ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!!!!!!

ಗಂಡಸರು ನಪಂಸಕರಾದರೆ...
ಅಂಗವಿಕಲ ಮಕ್ಕಳು ಹೇಗೆ ಹುಟ್ಟುತ್ತಾರೆ..???..!!!


ಇದನ್ನು ಕಂಡು ಹಿಡಿದ ಪುಣ್ಯಾತ್ಮ ಯಾರು..???...!!

ಮಹಾಜನಗಳೆ....

ನಾವೆಲ್ಲ ಅವನಿಗೆ ಕರೆದು ಸನ್ಮಾನ ಮಾಡಬೇಕು.....!!.."


ಇಡಿ ಸಭೆಯಲ್ಲಿ ಹಂಚು ಹಾರಿಹೋಗುವಷ್ಟು.. ನಗು.. ತಪ್ಪಾಳೆ...!!!

ಶಿಳ್ಳೆ... ಮುಂದೆ ಮಾತನಾಡಲಾಗದ ಸ್ಥಿತಿ....!!

ನನಗೆ ಉತ್ಸಾಹ ಜಾಸ್ತಿಯಾಯಿತು..... ಮಾತು ಮುಂದುವರೆಸಿದೆ.....

ನಾನು ಸ್ಟೇಜಿನಿಂದ ಹೊರಗೆ ಬರುತ್ತಲೇ ದಿವಾಕರ ನಾಗು ನನ್ನ ಆಲಂಗಿಸಿ ಕೊಂಡರು...

ನನ್ನಣ್ಣನ ಕಣ್ಣಂಚಲ್ಲಿ ನೀರಿತ್ತು...
ಅವನ ಖುಷಿ, ಸಂತೋಷ...
ಹೇಳದಿದ್ದರೂ ಗೊತ್ತಾಗುತ್ತಿತ್ತು...

ಆದರೆ ....
ಅಲ್ಲೂ ನಮಗೆ ಎರಡನೆಯ ಬಹುಮಾನ...!

ಕಾರ್ಯಕ್ರಮವನ್ನು ಸಂಘಟಿಸಿದವರು ಪರಿಸರವಾದಿಗಳು...!
ಕೈಗಾ ಅಣುಸ್ಥಾವರ ವಿರೋಧಿಸುವ ನಮಗೆ...
ಯಾರಿಗೂ "ಆ ವಿಷಯದಲ್ಲಿ" ಮೊದಲ ಬಹುಮಾನ ಬೇಡವಾಗಿತ್ತು...

ಆದರೆ ಸ್ಟೇಜಿನಲ್ಲಿ ಗಟ್ಟಿಯಾಗಿ ನಿಂತು ಮಾತಾಡಿ ಜನರ ಶಿಳ್ಳೆ ಸಿಕ್ಕಿದ್ದು ನನಗೆ ಖುಷಿಯಾಗಿತ್ತು...