Saturday, October 25, 2014

ಆ ಚರ ...

ನಮ್ಮ
ಇಷ್ಟ..
ಕಷ್ಟಗಳು ಯಾವಾಗಲೂ ಒಂಟಿ...

ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ ನೋಡಿ.... 


ಹಸಿರು ಚಿಗುರುತ್ತದೆ...

ಮೊಗ್ಗು ಹೂವಾಗಿ ಅರಳುತ್ತದೆ...

ಈ ಹೂವಿಗೆ ಅಷ್ಟು ಸಾಕಾ ?...


ದುಂಬಿ

ತನ್ನೆಡೆಗೆ ಬರಬೇಕು...

ತನ್ನ ಚಂದ ನೋಡಿ ಹಾಡಬೇಕು...


ಮಕರಂದ ಹೀರಬೇಕು...


ಮಕರಂದ ಹೀರಿದ ಮೇಲೆ 

ತನ್ನ ಅಂದ .... 
ಹಾಳಾಗುತ್ತದೆ ಅಂತ ಗೊತ್ತಿದ್ದರೂ..
ಕೊಡುವದರಲ್ಲೇ ತೃಪ್ತಿ ಕಾಣುತ್ತದೆ ಆ ಹೂವು..

ತೃಪ್ತಿ .... 

ಅನ್ನೋದಕ್ಕೆ ವಿಶ್ರಾಂತಿ  ಅನ್ನೋದೆ ಇಲ್ಲ... 

ತನ್ನ ಚಂದವನ್ನು ... 

ಯಾರಾದರೂ ನೋಡಲಿ..

ಹೂ ಮಾಲೆ ಕಟ್ಟಿ 

ಯಾವ ಮೂರ್ತಿಗಾದರೂ ಅಲಂಕರಿಸಲಿ..

ಚಂದದ ಹೆಣ್ಣಿನ ಮುಡಿಸೇರಲಿ..


ಅರಳಿದ 

ಹೂವಿನ ಚಂದ ಕೆಲವೇ ಕ್ಷಣ 
ಅಂತಿದ್ದರೂ
ಚಂದವನ್ನು ಹಾಳುಮಾಡಿಕೊಳ್ಳುವದರಲ್ಲೇ ಸಾರ್ಥಕತೆಯನ್ನು ಕಾಣುತ್ತದೆ...

ಏನು ಮಾಡಲಿ ?


ಹೆಣ್ಣಿಗೆ 

ಈ ಗಂಡಸರು 
ಹೂವು 
ಪ್ರಕೃತಿ ಎನ್ನುತ್ತಾರೆ...

ಪ್ರಕೃತಿಯ 

ಆಗುಹೋಗುಗಳ ಬಗೆಗೆ ಪುರುಷನಿಗೆ ಲಕ್ಷ್ಯವೇ ಇರುವದಿಲ್ಲ...

ರಜಸ್ವಲೆಯಾಗಿ 

ಇಂದು ಮಿಂದಿದ್ದೇನೆ...
ನನ್ನವನಿಗೆ ನನ್ನ ಬಗೆಗೆ ಲಕ್ಷವೇ ಇಲ್ಲ...

ನನ್ನವ ...... 

ನಿಮಗೆ ಗೊತ್ತಿರಬೇಕು...

ದೇವಗುರು "ಬೃಹಸ್ಪತಿ..." !


ನಾನವನ ಮಡದಿ "ತಾರೆ..."


ನನ್ನ ಬದುಕೇನು ಚಂದವೆ ?


ನಿಮಗೇನು ಗೊತ್ತು

ಸನ್ಯಾಸಿಯ 
ಆಶ್ರಮದ ಬೇಲಿಯೊಳಗಿನ ಬದುಕು.... ?

ನನ್ನವ 

ಬದುಕಿನ ಪಾರಮಾರ್ಥಿಕತೆಯನ್ನು ಹುಡುಕುವವ...

ನನ್ನವ 

ನನಗೂ ಮಾತನಾಡುವ ಸ್ವಾತಂತ್ರ್ಯ ಕೊಟ್ಟಿದ್ದಾನೆ...

ನಮ್ಮ ಒಳಗಿನ ಆಸೆಯ ಅಭಿವ್ಯಕ್ತಿ ಬಲು ಕಷ್ಟ...

ನನ್ನವನಿಗೆ
ನನ್ನಾಸೆಯನ್ನು ಹೇಳಲೇ ಬೇಕಲ್ಲ...

ನನ್ನ 

ಮೌನ ಮಾತಾಡುತ್ತದೆ .. 
ಆ ಮೌನವನ್ನು ಕೇಳುವ ಮನಸ್ಥಿತಿ ಪುರುಷನಿಗಿರಬೇಕಲ್ಲ.... 

ಅವನ ಬಳಿ ಸುತ್ತಾಡಿದೆ...


"ಏನು " ಎನ್ನುವಂತೆ ನೋಡಿದ...


ನನಗೆ 

ನಗು ಬಂದರೂ ಪ್ರಶ್ನೆ ಕೇಳಿದೆ...

"ನಮ್ಮ 

ಅಂಗಳಕ್ಕೆ..
ಈ ಆಶ್ರಮಕ್ಕೆ ..... 
ಯಾಕೆ ಬೇಲಿ ಹಾಕಿದ್ದೀರಿ..? ..... 

ಪಕೃತಿ ಸಹಜ ಅಲ್ಲವಾ ?


ಪ್ರಕೃತಿಯ ಮೇಲೇಕೆ 

ಬೇಲಿ ಹಾಕಿ..
ಪ್ರಭುತ್ವ ಸ್ಥಾಪಿಸುವ  ಆಸೆ.. ? ... 

ಯಾವ ಪುರುಷನಿಗೇ ಆಗಲಿ 

ಪ್ರಕೃತಿಯ ಮೇಲೆ ಪ್ರಭುತ್ವ ಸಾಧ್ಯವೆ ?.."

ನನ್ನ ಗಂಡ 

ಗಡ್ಡವನ್ನು ತೀಡುತ್ತಾ ...... 
ನನ್ನನ್ನೊಮ್ಮೆ ವಿಚಿತ್ರವಾಗಿ ನೋಡಿದ...

"ಬೇಲಿ ಹಾಕಿದ್ದು .... 

"ಪ್ರಭುತ್ವ" ಸಾಧಿಸಲಿಕ್ಕೆ ಅಂತ ಯಾಕೆ ತಿಳಿದು ಕೊಳ್ತೀಯಾ ?

ಇದು    "ನಮ್ಮದು"

ನನ್ನದು ಮಾತ್ರ ...
ಅಂತಿದ್ರೆ ಬದುಕು ಕಟ್ಟಿಕೊಳ್ಳುವದು ಸುಲಭ.. 

ಅದು 

ಪ್ರೀತಿಗೆ ... 
ದಾಂಪತ್ಯಕ್ಕೆ ಸಹಾಯಕ ಮತ್ತು ಸಹಜ... "

"ಪ್ರೀತಿ ಅಂದರೆ ಬೇಲಿಯೊಳಗಿನ ಸ್ವಾರ್ಥವಾ ? "


"ಹೌದು ... 


ಈ 

ಪ್ರೀತಿ  ತನ್ನ ಬೇಲಿಯೊಳಗೆ ಇರಬೇಕೆಂದು ಮನಸ್ಸು ಬಯಸುತ್ತದೆ... 

ಬೇಲಿ ಒಳಗಿನ "ಪ್ರಕೃತಿ" ನನ್ನದು ಅಂತಿದ್ದಾಗ  

ಪ್ರೀತಿ ಮಾಡಬಹುದು..

ನಮ್ಮಲ್ಲಿ  "ಬೇಲಿ" ಇಲ್ಲ ಅಂದುಕೊ...


ಇಲ್ಲಿ ಯಾರು ಬೇಕಾದರೂ ಬರಬಹುದು... 

ಹೂ ಕೀಳಬಹುದು... 

ಇದು ತಮ್ಮದಲ್ಲ 

ಅಂತಿದ್ದಾಗ "ಕಾಳಜಿಯೂ" ಇರುವದಿಲ್ಲ... 

ಬೇಲಿ ಇಲ್ಲದ "ಅಂಗಳ" ನಿನಗೆ ಬೇಕಿತ್ತಾ ? "


ಗಂಡಸರೇ ಹೀಗೆ...

ಪ್ರಶ್ನೆಗೆ ಉತ್ತರವಿಲ್ಲವಾದಾಗ "ಪ್ರಶ್ನೆಗೆ" ಪ್ರಶ್ನೆಯನ್ನೇ ಕೇಳುತ್ತಾರೆ..

ಅವನ ಪ್ರಶ್ನೆಗೆ ನಾನೂ ಸಹ ಪ್ರಶ್ನೆಯನ್ನೇ ಕೇಳಿದೆ...


"ಪ್ರಕೃತಿಯ ಸಹಜ ಗುಣವೇನು ? "


"ಏನು ?"


"ಸೃಷ್ಟಿ...!


ಸೃಷ್ಟಿಸುವದು 

ತಾಯಿಯಾಗುವದು ಅವಳ ಬದುಕಿನ ಸಾರ್ಥಕತೆ...

ಬೇಲಿ ಹಾಕಿದವರಿಗೆ 

ಗಿಡಕ್ಕೆ ಗೊಬ್ಬರ ಕೊಡುವದು  ತಿಳಿದಿರಬೇಕು... "

ನನ್ನವ ದುರುಗುಟ್ಟಿದ...


"ಓಹ್ಹೋ ... !

ಇದಕ್ಕೆ ಇಷ್ಟೆಲ್ಲ ಪೀಠಿಕೆಯೇ ?..

ನನಗೆ ಕಾರ್ಯ ನಿಮಿತ್ತ ದೇವಲೋಕ ಹೋಗಬೇಕಾಗಿದೆ...


ಹದಿನೈದು ದಿನ ಬಿಟ್ಟು ಬರುವೆ

ಅಲ್ಲಿಂದ ಬಂದವ ನಿನ್ನಿಷ್ಟವನ್ನು ಪೂರೈಸುವೆ..."

ಆಸೆಯನ್ನು  ಹೇಳಿದ್ದು  ಅಪರಾಧವಾಯಿತೇನೋ ಎನ್ನುವಂತಿತ್ತು..

ನನ್ನವನ ನಡೆ ನುಡಿ...

ಇಷ್ಟಾದರೂ ಅರ್ಥವಾಯಿತಲ್ಲ..

ನನ್ನ ಪುಣ್ಯ..

ಆಸೆ 

"ಹೂವಾಗಿ"  ಅರಳಿದ ಮೇಲೆ  ಎಲ್ಲವೂ ಚಂದವೆ ...

ಆದರೆ ... 

ಇಂದು 
ಈ ಆಸೆಯೇಕೊ ಬೆಂಕಿಯಾಗಿ ಸುಡುತ್ತಿದೆ...
ನನ್ನನ್ನು ದಹಿಸುತ್ತಿದೆ...

ಬಾಯಾರಿದವರಿಗೆ ಗೊತ್ತು 

ಹನಿ 
ಹನಿ ನೀರಿನ ಹಂಬಲ.... 

ಹನಿ

ಹನಿ ಬಿದ್ದು
ತಂಪಾಗಬೇಕಲ್ಲ...

ಯಾರೋ ಕದ ತಟ್ಟುತ್ತಿದ್ದಾರೆ...


ಕದ ತೆರೆದೆ...


ದಿಘ್ಮೂಢಳಾಗಿ ನಿಂತುಬಿಟ್ಟೆ... !


ಬಂದವ ಚಂದದ ಚಂದಿರ... !!


ನಗು ನಗುತ್ತಾ ನಿಂತಿದ್ದಾನೆ !


ಒಳಗಿನ 

ಒತ್ತಾಸೆಗೆ ದೃವಿಸಿಹೋದೆ... !

ಉಟ್ಟ ಸೀರೆ ಜಾರುತ್ತಿದೆಯೇ... ?

ಬಟ್ಟೆ ಭಾರವಾಗುತ್ತಿದೆಯೆ ?

ಚಂದ್ರಮನನ್ನು ಒಳಗೆ ಕರೆದೆ...

ಕುಳ್ಳಿರಿಸಿದೆ... 
ಆದರಿಸಿದೆ...

ಪ್ರೀತಿ ತೋರಿದೆ...


ನಕ್ಕೆ...


ಗಡಿಬಿಡಿಯಲ್ಲಿ 

ಸರಿದ 
ಸೆರಗನ್ನು ಸರಿಪಡಿಸಿಕೊಂಡೆ...

ಕಣ್ ತೆರೆದು ಮುಚ್ಚುತ್ತ ಮಾತನಾಡಿದೆ....


ಚಂದಿರ ಬೆಪ್ಪನಂತೆ ನೋಡುತ್ತಿದ್ದ...  !


ಛೇ...

ಈ ಗಂಡಸು ಜಾತಿಯೇ ಇಷ್ಟು !

ಹೆಣ್ಣಿನ ಮಾತು... 

ಮೌನ 
ನೋಟಗಳ ಭಾಷೆಗಳನ್ನು  ಅರ್ಥ ಮಾಡಿಕೊಳ್ಳುವುದೇ ಇಲ್ಲ.. 

ನಾಚಿಕೆ ಬಿಟ್ಟು..

ನನ್ನನ್ನು ದಹಿಸುವ ಆಸೆಯನ್ನು ಹೇಳಿದೆ...

ಚಂದಿರ ಹೆದರಿದ...


"ನೀನು ನನ್ನ ಗುರು ಪತ್ನಿ...


ತಾಯಿಯನ್ನು ಬಯಸುವದೆ ?


ತಪ್ಪು ತಪ್ಪು...


ಇದು ಅನಾಚಾರ.. ಅತ್ಯಾಚಾರ...! "


ಉತ್ತರ ಕೊಡಲು ಕಂಪಿಸಿದ .. 

ಬಡಬಡಸಿದ ... 

ಅವನನ್ನೇ ದಿಟ್ಟಿಸಿದೆ ... 


 ಬಲು ಮುದ್ದು ಈ ಚಂದಿರ  !


"ಚಂದಿರಾ...

ಅನಾಚಾರ ಎನ್ನುತ್ತೀಯಲ್ಲ... 

"ಆಚಾರ" ಎನ್ನುವ ಶಬ್ಧ "ಚರ"ದಿಂದ ಬಂದಿದ್ದು..

ಚರ ಎಂದರೆ ನಡೆ... 

ನಮ್ಮ ನಡೆ ... 


ನಮಗೆ ಬೇಕಾದದ್ದು ಆಚಾರ..

ಬೇಡವಾದದ್ದು ಅನಾಚಾರ.. 
ಅತ್ಯಾಚಾರ ...

ಇಷ್ಟಕ್ಕೂ

ಅನಾಚಾರ..
ಅತ್ಯಾಚಾರ ನಿರ್ಣಯಿಸುವವರು ಯಾರು ?..."

"ಯಾರು ?"


" ನಾನು...

ಪ್ರಕೃತಿ ತಾನೆ ?

ನೀನು ಮಾಡುವ  ಆ" ಚರ"  ನನಗೆ ಅನಾಚಾರ ಅಲ್ಲ..


ಅದು ನನ್ನ ಪಾಲಿಗೆ ಆಚಾರ..


ಬಾರೋ.. ಬಾ.. 

ಆ ಚರವನ್ನು ಆಚರಿಸುವಾ.. ಬಾ.. "

ಚಂದಿರ ಚಲಿಸಲಿಲ್ಲ... 


"ನೀನು 

ಈ ತೋಟದ ಬೇಲಿಯೊಳಗಿನ ಹೂವು .. 

ಈ ಕ್ಷೇತ್ರ ನನ್ನದಲ್ಲ...


ನನ್ನದಲ್ಲದ್ದನ್ನು  ಬಯಸುವದು ತಪ್ಪು..


ಇದು ನಿಜ ಅರ್ಥದಲ್ಲೂ ಅತ್ಯಾಚಾರವೇ  ಸರಿ..."


ನನಗೆ ನಗು ಬಂತು...


ಪುಕ್ಕಲು ಗಂಡಸಿನ ಬಾಯಲ್ಲಿ  

ನೀತಿ
ನಿಯತ್ತಿನ ಮಾತು..!

"ಚಂದಿರಾ...


ಬಿಸಿಯಾದ ಭೂಮಿಗೆ

ಹನಿ ಬಿದ್ದು ತಂಪಾಗುತ್ತದೆ...

ಅಲ್ಲೇ ಇದ್ದ ಬೀಜ 

ಮೊಳಕೆಯೊಡೆದು ಹಸಿರಾಗುತ್ತದೆ..

ಈ 

ಜಗತ್ತಿನ ಈ ಕಾಡನ್ನೆಲ್ಲ ನೀನು ಬೆಳೆಸಿದ್ದಾ ?

" ಸೃಷ್ಟಿ" ಪ್ರಕೃತಿಯ ಸಹಜ ಗುಣ...


ಇದರಲ್ಲಿ ನಿನ್ನ ಪುರುಷಾರ್ಥವೇನೂ ಇಲ್ಲ...


ಕ್ಷೇತ್ರವೇ ಬೀಜ ಬಿತ್ತಲು ಕರೆಯುವಾಗ

ನಿರಾಕರಿಸುವದು  ... 
ಇಂದಿನ ಕಾಲ ಧರ್ಮದಲ್ಲಿ ತಪ್ಪಾಗುತ್ತದೆ...

ಬಾ.. ಚಂದಿರಾ.."


ಚಂದಿರ ಬರಲಿಲ್ಲ...

ಮೊಂಡು ಹಟ ಮಾಡುತ್ತ ದೂರವೇ ಇದ್ದ...

"ಈ ಅತ್ಯಾಚಾರಕ್ಕೆ..

ಅನಾಚಾರಕ್ಕೆ 
ಮನಸ್ಸು ಒಪ್ಪುತ್ತಿಲ್ಲ..."

ನನ್ನ ದಹಿಸುವ ಆಸೆ ಹೆಚ್ಚಾಯಿತು...


ಸೃಷ್ಟಿ ಕರ್ತ ಬ್ರಹ್ಮ ನನ್ನ ಅಜ್ಜ..

ಅಜ್ಜ ಸಿಕ್ಕಾಗ ಇದನ್ನೊಮ್ಮೆ ಕೇಳಿಬಿಡಬೇಕು...

ಪ್ರಕೃತಿಗೂ

ಪುರುಷನ ಮೇಲೆ ... 
ಅತ್ಯಾಚಾರ ಎಸಗುವ ಅವಕಾಶ ಇರಬೇಕು.. 

ಹಾಗಿದ್ದಲ್ಲಿ 

ನಾನೇ ಮೊದಲ ಅತ್ಯಾಚಾರಿಣಿಯಾಗುತ್ತಿದ್ದೆ .. 

ಚಂದವಿದ್ದವರು 

ಯಾಕಾದರೂ ಹೆದರುತ್ತಾರೊ.. ಗೊತ್ತಿಲ್ಲ...!

ಈ ಹೇಡಿ ಚಂದಿರನಿಗೆ ಉತ್ತರ ಕೊಡಬೇಕಿತ್ತು...


"ಚಂದ್ರಮಾ...

ಎಂಥಹ ಅತ್ಯಾಚಾರ..
ಎಲ್ಲಿಯ ಅನಾಚಾರ ?

ದಿನಾಲೂ

ಊಟ ಮಾಡುವಾಗ 
ನನ್ನ 
ಸರಿದ ಸೆರಗಿನ ಅಂಚನ್ನು ನೀನು ಆಸ್ವಾದಿಸುವದು ನನಗೆ ಗೊತ್ತಿಲ್ಲ ಅಂದುಕೊಂಡೆಯಾ ?

ನಿನಗೆ ನೀನೇ 

ನಿನ್ನ ಮೇಲೆ 
ಎಷ್ಟು ಬಾರಿ ಅತ್ಯಾಚಾರ ಮಾಡಿಕೊಳ್ಳುತ್ತಿದ್ದೀಯಾ ಗೊತ್ತಾ ?

ಅಸಹಜದ 

ನೀತಿಯ ಗೋಡೆಯನ್ನು  ಕಟ್ಟಿಕೊಳ್ಳುತ್ತೀಯಾ...

ನೀನೆ ಒಡೆದುಕೊಳ್ಳುತ್ತೀಯಾ...


ನೀನು ಮಾಡುತ್ತಿರುವದು  

ಅನಾಚಾರ..
ಇದು ಅತ್ಯಾಚಾರ..."

ಚಂದಿರ ತಗ್ಗಿಸಿದ ತಲೆ ಎತ್ತಲಿಲ್ಲ... 


"ಚಂದಿರಾ... 

ಅತ್ಯಾಚಾರವೆಂದರೆ ಮಾನಸಿಕವೂ ಹೌದು...

ಗಂಡಸು 

ಹೆಣ್ಣಿನ ಮೇಲೆ ದೈಹಿಕ ಅತ್ಯಾಚಾರ ನಡೆಸಿದರೆ ... .

ಗಂಡು ತನ್ನ ಮೇಲೆ 

ತಾನೇ ಮಾನಸಿಕ ಅತ್ಯಾಚಾರ ಮಾಡಿಕೊಳ್ಳುತ್ತಿರುತ್ತಾನೆ...

ಎಲವೊ ಪುರುಷಾ...  !


ಮೊದಲಿಗೆ 

ನೀನು 
ನಿನ್ನ ಮೇಲೆ ಮಾಡಿಕೊಳ್ಳುತ್ತಿರುವ 
ಅತ್ಯಾಚಾರವನ್ನು ನಿಲ್ಲಿಸಿಕೊ.. 

ಚಂದಿರಾ.. 

ಅನ್ನ ಬೆಳೆಯಲು.. 
ಭತ್ತ  
ಬೆಳೆಯಲು ಹೊಲವನ್ನು ಊಳುತ್ತೀಯಲ್ಲ... 

ಅದು ಅತ್ಯಾಚಾರವಲ್ಲವಾ ?"


ಚಂದಿರ 

ಇನ್ನೂ ದೂರವೇ ನಿಂತಿದ್ದ...
ಕಂಪಿಸುವ ಧ್ವನಿಯಲ್ಲಿ ಮಾತನಾಡಿದ...

" ಬೇಡ.. ಬೇಡ..

ನಿನ್ನ ಪತಿ ಸಪ್ತ ಋಷಿಗಳಲ್ಲಿ ಒಬ್ಬ...

ಬದುಕಿನಲ್ಲಿ  ಪಾರಮಾರ್ಥಿಕತೆಯನ್ನು ಕಾಣುವವರು..."


ನನಗೆ ಕೋಪ ತಡೆಯಲಾಗಲಿಲ್ಲ..


ದಹಿಸುವ ಆಸೆ...! 


ಕಂಪಿಸ ತೊಡಗಿದೆ...


"ಚಂದಿರಾ...

ನಾನು ಹೆಣ್ಣು...

ಸಿಕ್ಕಿದ 

ಬದುಕನ್ನು 
ಬದುಕುವದಷ್ಟೇ ನನಗೆ ಗೊತ್ತು...

ಸಾವು..

ಸಾವಿನಾಚೆಯ ಪಾರಮಾರ್ಥಿಕತೆ ನನಗೆ ಬೇಕಿಲ್ಲ...

ಬದುಕಿನ .. 

ಸಾವಿನಾಚೆಯ ತತ್ವ ಬೋಧಿಸುವ 
ಈ ಸಪ್ತ ಋಷಿಗಳಲ್ಲಿ ... 
ಸನ್ಯಾಸಿಗಳಲ್ಲಿ 
ಒಬ್ಬರಾದರೂ ಹೆಣ್ಣು ಇದ್ದಾಳೆಯೇ ?

ಬದುಕಿನ ಸ್ವಾರಸ್ಯ ಬಿಟ್ಟು 

ಸನ್ಯಾಸಿಯಾದ 
ಒಬ್ಬಳಾದರೂ ಹೆಣ್ಣನ್ನು ತೋರಿಸು...

ಜಗತ್ತಿನ ಎಲ್ಲ ತತ್ವ ಶಾಸ್ತ್ರ..

ನೀತಿ 
ಧರ್ಮವನ್ನು ಬೋಧಿಸಿದವ ಪುರುಷ,...

ಪುರುಷ ಜಾತಿಗೆ ಬೇಕಾದಂತೆ  ಜಾತಿ 

ಮತಗಳನ್ನು ಸ್ಥಾಪಿಸಿದವ ಪುರುಷ.. !

ಸಿಕ್ಕಿದ 

ಬದುಕನ್ನು ಬಿಟ್ಟು
ಸಾವಿನಾಚೆಯ ಸುಖವನ್ನು ಹುಡುಕುವದು ಗಂಡು..

ಪುರುಷನ ಪುರುಷಾರ್ಥ ಇಷ್ಟೇ...


ಇದು ಸಹಜ ಅಲ್ಲ..."


ಚಂದಿರ ಮುಖ ಬಾಡಿಸಿದ..


"ತಾರೆ...

ಇದು ನಿಜ...

ನನಗೆ ನಿನ್ನ ಮೇಲೆ ಆಸೆ ಇದೆ...


ಆದರೆ ..... 

ಬೃಹಸ್ಪತಿ ಶಕ್ತಿ ಶಾಲಿ...

ದೇವತೆಗಳ ಗುರು... !


ಶಾಪ ಕೊಟ್ಟರೆ ನಾನೆಲ್ಲಿ ಹೋಗಲಿ ?.. ".. 


ಅಂತೂ 

ಈ ಚಂದಿರ ತನ್ನ ನಿಜವಾದ ಬಣ್ಣವನ್ನು ತೋರಿಸಿದ.. ...

ಅವನನ್ನು ಹಿಡಿದು ಬಿಗಿದಪ್ಪಿದೆ... 

ಮುದ್ದಿಸಿದೆ.. 

ಅವನ ಎದೆಗೊರಗಿ ಉಸುರಿದೆ... 


" ಚಂದಿರಾ

ನಿನಗೆ ಹೇಗಿದ್ದರೂ ಶಾಪ ತಪ್ಪಿದ್ದಲ್ಲ....

ನನ್ನನ್ನು ಅನುಭವಿಸಿದರೆ 

ನನ್ನ ಗಂಡ ನಿನ್ನನ್ನು ಶಪಿಸದೆ ಬಿಡುವದಿಲ್ಲ... 

ನನ್ನನ್ನು

ನಿರಾಕರಿಸಿದರೆ ನಾನು ಶಾಪ ಕೊಡುವೆ...!

ಪ್ರಕೃತಿ ಅಬಲೆಯಲ್ಲ... 


ಚಂದ್ರಮಾ..


ಪುರುಷ ಹೇಗಿದ್ದರೂ ಶಾಪಗ್ರಸ್ಥ... !


ಪುರುಷ... 

ಪ್ರಕೃತಿ ನಾಶದ ಮೂಲ ..

ಏನೂ ಮಾಡದೆ ... 

ವಿನಾಕಾರಣ 
ಯಾಕೆ ಶಾಪ ತೆಗೆದುಕೊಳ್ಳುತ್ತೀಯಾ?

ನನ್ನನ್ನು  ಅನುಭವಿಸಿ ..

ಸುಖಿಸಿ... 
ಶಾಪ ತೆಗೆದು ಕೊ.."

ನನ್ನ ಅಪ್ಪುಗೆಯನ್ನು ಬಿಗಿಗೊಳಿಸಿದೆ...


ನನಗೆ ಗೊತ್ತು 

ಚಂದಿರನಿಗೆ ಬೇರೆ ದಾರಿ ಇಲ್ಲ... 

ಚಂದಿರನೂ  ಅಪ್ಪಿದ.. 


ಇದು

ಪ್ರೀತಿಯೋ...
ಕಾಮವೋ...!

ಎಲ್ಲವೂ ಅಪ್ಪುಗೆಯಲ್ಲಿ ಗೊತ್ತಾಗಿಬಿಡುತ್ತದೆ...


ಒಪ್ಪಿದ ಮೇಲೆ  ಪ್ರೇಮವೇನು ..  ?

ಕಾಮವೂ ಚಂದ..... !




(ಚಂದದ  ಪ್ರತಿಕ್ರಿಯೆಗಳಿವೆ... 
ದಯವಿಟ್ಟು ನೋಡಿ ...)