Friday, December 6, 2013

..... ಆಯ್ಕೆ .....

ಕತ್ತಲೆಂದರೆ..
ನನಗೆ ಬಲು ಇಷ್ಟ...

ಕತ್ತಲಿಗೆ ಎಲ್ಲ ಬಣ್ಣಗಳೂ ಒಂದೇ...

ಭಾವಗಳೂ ಸಹ ಒಂದೆ...

ಕಣ್ ಮುಚ್ಚಿದರೂ..

ಕಣ್ಣು ಬಿಟ್ಟರೂ ಒಂದೆ...

ಕಪ್ಪು ಬಿಳುಪು ಕೂಡ ಬಣ್ಣಗಳಾಗಿಬಿಡುತ್ತವೆ...

ನೆನಪುಗಳೊಂದಿಗೆ ರಂಗು.. ರಂಗಾಗಿಬಿಡುತ್ತವೆ...

ನನ್ನ

ಎಷ್ಟೋ ಒಂಟಿತನದ ...
ಖಾಲಿ ಖಾಲಿ ಭಾವಗಳನ್ನು ಅದು ತುಂಬಾ ಖುಷಿಯಿಂದ ಮಾತನಾಡಿಸುತ್ತದೆ..

ನನ್ನ

ಏಕಾಂತಗಳಲ್ಲಿ "ಅವಳು" ಇರುತ್ತಾಳೆ..

ಓಹ್..

ಅವಳೆಂದರೆ ನಿಮಗೆ ಗೊತ್ತಿಲ್ಲ..!

ತುಂಬು ... 

ಬಟ್ಟಲ ಕಣ್ಣು..

ಮುತ್ತಿಡಲು ಹರವಾದ ಕೆನ್ನೆ..


ಮುದ್ದು.. ಚೂಪಿನ ಗದ್ದ.

ಕ್ಲಾಸಿನಲ್ಲಿದ್ದಾಗ ಅವಳನ್ನೇ ನೋಡುತ್ತ ಕುಳಿತುಬಿಡುತ್ತಿದ್ದೆ....

ನನ್ನ ಓದಿನ ದಿನಗಳಲ್ಲಿ ನನ್ನ ಮನವನ್ನು ತುಂಬಿದ್ದಳು..


ಮನದಣಿಯೇ ನೋಡುತ್ತಿದ್ದೆ..


ಹೇಗೆ ಮಾತನಾಡಿಸಲಿ ?

ಯಾವಾಗಲಾದರೂ ಎದುರಿಗೆ ಬಂದಾಗ ಧೈರ್ಯವಿರುತ್ತಿರಲಿಲ್ಲ..

ನನ್ನೆದೆಯ ಢವ ಢವಗಳೊಡನೆ

ಸುಮ್ಮನಿದ್ದುಬಿಡುತ್ತಿದ್ದೆ..

ನನ್ನ ಜೀವದ ಗೆಳೆಯ ಸುಮ್ಮನಿರಬೇಕಲ್ಲ..


"ನಾಡಿದ್ದು ಸಂಕ್ರಾಂತಿ ಹಬ್ಬ..

ಶುಭಾಶಯ ಪತ್ರ ಕಳಿಸೋಣ.."

ಅವನೇ ಹೋಗಿ ಗ್ರೀಟಿಂಗ್ ಕಾರ್ಡ್ ತಂದಿದ್ದ..

ಬಹಳ ಬುದ್ಧಿವಂತ ಆತ....

"ಇದರಲ್ಲಿ ಏನಾದರೂ ಬರಿ...

ನೀನು ಅಂತ ಗೊತ್ತಾಗಬೇಕು..
ಆದರೆ...
ಉಳಿದವರಿಗೆ ಗೊತ್ತಾಗಬಾರದು..."

ಅವಳ ಬಳಿ ಯಾವತ್ತೂ ಮಾತನಾಡಿದ್ದಿಲ್ಲ..


ಅವಳ ಜೊತೆಯಲ್ಲಿ ಇರುತ್ತಿದ್ದೆ.. 

ಅವಳ 
ಕೆನ್ನೆಗಳೊಡನೆ...
ಮುದ್ದು ಗಲ್ಲದೊಡನೆ..
ತೆಳುವಾದ ತುಟಿಗಳೊಡನೆ...

ಆಗಾಗ..

ಬೇಡವೆಂದರೂ ಸಂಧಿಸುವ
ಅವಳ ಕುಡಿ ನೋಟದೊಡನೆ.. ಜೊತೆಯಲ್ಲಿರುತ್ತಿದ್ದೆ.. 

ನನ್ನ ನೋಟದ ಇಂಗಿತ ಅವಳಿಗೆ ಗೊತ್ತಾಗಿರಬಹುದಾ ?


" ಗೊತ್ತಾಗದೆ  ಏನು ?

ಅವಳಿಗೂ ಹರೆಯ..."

ಇಬ್ಬರ ನೋಟ ಸಂಧಿಸಿದಾಗ ... 

ಅವಳ ತುಟಿಯಲ್ಲಿ ಸಣ್ಣ ಕಿರುನಗುವಿರುತ್ತಿತ್ತಾ ?

ಅದು ನನ್ನ ಭ್ರಮೆಯಾ ?


ಗೆಳೆಯ ತಂದುಕೊಟ್ಟ ಶುಭಾಶಯ ಪತ್ರದಲ್ಲಿ ಧೈರ್ಯ ಮಾಡಿ ಬರೆದೆ..


"ಆಕಳು..

ಕರುವನ್ನು ಮರೆಯ ಬಹುದು..

ತಾಯಿ..

ಮಗುವನ್ನು ಮರೆಯ ಬಹುದು...

ಆದರೆ..

ನನ್ನ ಕಣ್ಣುಗಳು ನಿನ್ನನೆಂದಿಗೂ ಮರೆಯಲಾರವು..."

ನನ್ನ ಗೆಳೆಯ ನಕ್ಕುಬಿಟ್ಟ..


ವಾಕ್ಯವನ್ನು ಬದಲಿಸಲು ಹೇಳಿದ.. ನಾನು ಬದಲಿಸಲಿಲ್ಲ..


ಮಾರನೆಯ ದಿನ ಕ್ಲಾಸಿಗೆ ಪೋಸ್ಟಮ್ಯಾನ್ ಪತ್ರಗಳನ್ನು ತಂದುಕೊಟ್ಟ..

ನಾನು ಕಳುಹಿಸಿದ್ದು ಅವಳಿಗೆ ತಲುಪಿತ್ತು..

ಅಸಕ್ತಿಯಿಂದ ನೋಡಿದಳು..

ಓದಿ ಆದಮೇಲೆ ... 
ಬೊಗಸೆ  ಕಣ್ಣಿನಿಂದ  ನನ್ನತ್ತ ನೋಡಿದಳು..

ನೋಟದಲ್ಲಿ ನಗುವಿತ್ತಾ ?

ನೋಟಗಳ ಭಾಷೆ ನನಗೆಂದೂ ಗೊತ್ತೇ ಆಗಲಿಲ್ಲ..
ಅರ್ಥವಾಗುವದೇ ಇಲ್ಲ...

ಅಷ್ಟೆ...


ನನಗೆ ಉತ್ತರ ಸಿಗಲಿಲ್ಲ..


ದಿನಗಳು ಕಳೆದವು..

ಬದುಕಿನಲ್ಲಿ ಏಳುತ್ತ ಬೀಳುತ್ತ..
ಈಗ ಒಂದು ಸ್ಥಿತಿಯನ್ನು ಮುಟ್ಟಿದ್ದೇನೆ...

ಕಾರುಗಳ ಮಾಲಿಕನಾಗಿ..

ಚಂದದ ಮಡದಿಗೆ ಪತಿಯಾಗಿ.... ಮಗುವಿಗೆ ಅಪ್ಪನಾಗಿರುವೆ...

ಎಷ್ಟಾದರೂ..

ಏನೇ ಆದರೂ..
ಉದ್ದ ಲಂಗದ..
ನಸುಗಪ್ಪಿನ ಆ ಹುಡುಗಿ ನನ್ನಿಂದ ಮರೆಯಾಗಲೇ ಇಲ್ಲ...

ಅವಳು..

ನನ್ನನ್ನು ಎಂದೂ ಒಂಟಿಯಾಗಿ ಇರಲು ಬಿಡಲೇ ಇಲ್ಲ..
ಮುದ್ದು..
ಮುದ್ದಾಗಿ ನಗುತ್ತಿದ್ದಳು..
ಮಾತನಾಡುತ್ತಿದ್ದಳು..

ನಾನು ಜನಜಂಗುಳಿಯಲ್ಲಿದ್ದರೂ..

ನನ್ನನ್ನು 
ತನ್ನ ಬಳಿ ಕರೆದೊಯ್ದುಬಿಡುತ್ತಿದ್ದಳು..

ನನ್ನ ಬದುಕಿನ  ಯಶಸ್ಸಿನ ಹಿಂದೆ ಇದ್ದವರು ನನ್ನ ಗುರುಗಳು..


ನನಗೆ

ಊಟ ಹಾಕಿ..
ನನ್ನ ಖರ್ಚು.. ವೆಚ್ಚಗಳನ್ನು ತಾವು ಭರಿಸಿಕೊಂಡು ನನ್ನನ್ನು ಓದಿಸಿದರು..

ಅವರ ಮಡದಿ...


ಆಗ 

ಅವರ ಬಗೆಗೆ ಕೆಟ್ಟ ಅನಿಸಿಕೆ ಇದ್ದರೂ..
ಈಗ ಖಂಡಿತ ಇಲ್ಲ..

ಆಗ 

ಅವರೆಲ್ಲರ ಊಟವಾದ ಮೇಲೆ ನನ್ನನ್ನು  ಊಟಕ್ಕೆ ಕರೆಯುತ್ತಿದ್ದರು..

ಸಂಭಾರು ತೆಳ್ಳಗಾಗಿ "ಸಾರು" ಆಗಿರುತ್ತಿತ್ತು.. 

ಉಪ್ಪು.. ಹುಳಿ ಕಡಿಮೆಯಾಗಿರುತ್ತಿತ್ತು..

ಕೆಲವೊಮ್ಮೆ ಬೆಳಗ್ಗೆ ಹೆಚ್ಚಾದ ತಿಂಡಿ ಮಧ್ಯಾಹ್ನ ಸಿಗುತ್ತಿತ್ತು..

ಮಜ್ಜಿಗೆ ನೀರಿನಂತಿರುತ್ತಿತ್ತು..

ಬಡತನಕ್ಕೆ..

ದುಃಖಗಳಿಗೆ ಆಯ್ಕೆಗಳು ಇರುವದಿಲ್ಲ..

ಸಿಕ್ಕಿದಷ್ಟು ಸ್ವೀಕರಿಸುವ ಅನಿವಾರ್ಯ...


ಅವರು ನನ್ನ ಬಡತನದ..

ಹಸಿವಿನ ದಿನಗಳಲ್ಲಿ ಹೊಟ್ಟೆತುಂಬಿಸಿದ್ದರಲ್ಲ..

ಕೃತಜ್ಞತೆ ಹೇಗೆ ಹೇಳಲಿ...?


ಊರಿಗೆ ಹೋಗಿ.. 

ಅವರನ್ನೊಮ್ಮೆ ಭೇಟಿಯಾಗಿ ನಮಸ್ಕರಿಸಬೇಕು ... 

ಸರಿ... 

ಹೊರಟೇ ಬಿಟ್ಟೆ... 

ಕತ್ತಲಾಗಿತ್ತು..

ಗುರುಗಳ ಮನೆ ಮುಂದೆ ಕಾರು ನಿಲ್ಲಿಸಿದಾಗ ಸಾಯಂಕಾಲ ಏಳು ಗಂಟೆ..

ಕರೆಂಟು ಇರಲಿಲ್ಲ..


ಗುರು ದಂಪತಿಗಳಿಗೆ ವಯಸ್ಸಾಗಿತ್ತು..

ಪ್ರೀತಿಯಿಂದ ಬರ ಮಾಡಿಕೊಂಡರು..

ಆದರ.. 

ಉಪಚಾರ ಮಾಡಿದರು..

"ಒಂದು ಲೋಟ ನೀರು ಕೊಡಿ.. ಸಾಕು" 


"ಹಾಗಾದರೆ ಊಟ ಮಾಡಿ ಹೋಗು.."


ನಾನು ತಲೆಯಾಡಿಸಿದೆ..


ಅವರ ಮಡದಿ ನೀರು ತಂದಿಟ್ಟರು..


" ನೋಡಪ್ಪಾ..

ಆಗ ನಮಗೂ ಬಡತನವಿತ್ತು..
ಸರಿಯಾಗಿ ಊಟ ಹಾಕಲಾಗಲಿಲ್ಲ... ಬೇಸರ ಮಾಡ್ಕೋಬೇಡ ..."

ಒಳ್ಳೆಯ ಮನಸಿದ್ದವರಿಗೆ 

ಅಪರಾಧಿ ಮನೋಭಾವ ಕಾಡುತ್ತದೆ..

ಕ್ಷಮೆ ಎನ್ನುವ ಶಬ್ಧವಿಲ್ಲದೆ..

ಕ್ಷಮೆ ಕೋರಿಬಿಡುತ್ತಾರೆ..

"ಇಲ್ಲಮ್ಮ.. 

ನನಗೆ ಚೆನ್ನಾಗಿಯೇ ಊಟ ಹಾಕಿದ್ದೀರಿ..
ಹಸಿದ ಹೊಟ್ಟೆಗೆ ಊಟ ಹಾಕಿ ಓದಿಸಿದ್ದೀರಲ್ಲ..

ನಮ್ಮವರೆನ್ನುವವರಿದ್ದೂ..ಅನಾಥನಾಗಿದ್ದೆ..

ಏನೂ ಅಲ್ಲದ 
ಏನೂ ಇಲ್ಲದ .. 
ನನ್ನ ಭವಿಷ್ಯ ರೂಪಿಸಿದ್ದೀರಿ...."

ಕೃತಜ್ಞತೆಯಿಂದ ಕೈ ಮುಗಿದೆ..


ಭಾವುಕರಿಗೆ..

ಭಾವುಕ ಕ್ಷಣಗಳಷ್ಟು ಖುಷಿ ಮತ್ತೆ ಯಾವುದೂ ಇಲ್ಲ..

ಅವರು ..

ಒತ್ತರಿಸಿ ಬರುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತ ಅಡಿಗೆ ಮನೆಗೆ ಹೋದರು..

ಮಾಸ್ತರು ಕನ್ನಡಕ ಸರಿ ಮಾಡಿಕೊಂಡರು..


"ತುಂಬಾ ಖುಷಿ ಆಗುತ್ತಪ್ಪ..


ನಿನ್ನ ಯಶಸ್ಸಿನಲ್ಲಿ ನಾವು ಮಾಡಿದ್ದು ಏನೂ ಇಲ್ಲ..


ನಿನ್ನನ್ನು ಮುಂದೆ ತಂದಿದ್ದು ನಿನ್ನ  

ಓದಿನ ಹಸಿವೆ...
ಶೃದ್ಧೆ.. ಪರಿಶ್ರಮ..

ಪ್ರಾಮಾಣಿಕನಾಗಿರು..

ಎಲ್ಲ ಕಾಲದಲ್ಲೂ ಬೆಲೆ ಬಾಳುವಂಥಾದ್ದು ಪ್ರಾಮಾಣಿಕತೆ.."

ನಾನು ತಲೆ ತಗ್ಗಿಸಿದೆ...

ಅವರ ಪಾದಗಳನ್ನು ನೋಡುತ್ತಿದ್ದೆ...

ಅವರು ನನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು...


"ನಮ್ಮ ಮಕ್ಕಳಿಗೆ ಕೊಡಿಸುವಂಥಹ ಬಟ್ಟೆಗಳನ್ನು ... ನಿನಗೆ ಕೊಡಿಸುವದಿಲ್ಲವಾಗಿತ್ತು..


ಕಡಿಮೆ ಬೆಲೆಯ ಬಟ್ಟೆ ನಿನಗೆ ಕೊಡುತ್ತಿದ್ದೆ.."


ಅವರಿಗೂ 

ಅಪರಾಧಿ ಮನೋಭಾವ !

" ಹಾಗೇನೂ ಇಲ್ಲ ಸಾರ್..

ನಿಮ್ಮ ಇತಿ ಮಿತಿಗಳಲ್ಲಿ ನನಗೆ ಓದಿಸಿದ್ದೀರಿ...

ನಿಮಗೂ ಮಕ್ಕಳಿದ್ದರು..

ಅವರ ಭವಿಷ್ಯ.. ಖರ್ಚು ನಿಮಗೂ ಇತ್ತಲ್ಲ...

ಎಲ್ಲವೂ 

ನಮ್ಮದಾಗಲು ಸಾಧ್ಯವಿಲ್ಲವಲ್ಲ..

ಹತ್ತಿರವಿದ್ದರೂ ನಮ್ಮದೆನಿಸುವದಿಲ್ಲ..


ಅದು ಸಹಜ..


ನನಗೆ ಖಂಡಿತ ಬೇಸರವಿಲ್ಲ.. 


ನನ್ನ 

ಸರಿ..ತಪ್ಪುಗಳನ್ನು ತಿಳಿಸಿ..
ಹತ್ತಿರದವರಾಗಿ ನನಗೆ ಒಂದು ದಾರಿ ತೋರಿಸಿದ್ದೀರಲ್ಲ..

ಅಷ್ಟು ಸಾಕು ನನ್ನ ಕೃತಜ್ಞತೆಯ ಬದುಕಿಗೆ..."


ಕಣ್ಣು ಒದ್ದೆಯಾಗಿತ್ತು.. ಒರೆಸಿಕೊಂಡೆ...


ಕರೆಂಟು ಇರಲಿಲ್ಲ.. 


ಬೆಳಕು ಮಂದವಾಗಿತ್ತು..

"ಒಂದು ವಿಷಯ ... 

ನಿನಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ..
ನನಗಂತೂ ನೆನಪಿದೆ..."

" ಯಾವುದು ಸಾರ್...?.."


ಮಾಸ್ತರು  ಕನ್ನಡಕ ಸರಿಮಾಡಿಕೊಂಡರು..


" ನಿನ್ನ ಕ್ಲಾಸಿನಲ್ಲಿ 

ಒಬ್ಬಳು ನಸುಗಪ್ಪಿನ ಹುಡುಗಿ ಇದ್ದಳು..
ಉದ್ದ ಲಂಗದ.. ಉದ್ದದ ಹುಡುಗಿ..

ಚೆನ್ನಾಗಿ ಹಾಡುತ್ತಿದ್ದಳಲ್ಲ.. ಅವಳು..."


ನನ್ನ ಹೃದಯ ಮತ್ತೆ ಖುಷಿಯಿಂದ ಕುಣಿಯತೊಡಗಿತು..


ಅವಳನೆನಪಲ್ಲೇ ಬದುಕು ..!


ಅವಳ ನೆನಪಿನಲ್ಲೆ ನನ್ನ ಮೌನ...!


"ಹೌದು ಸಾರ್.. ನೆನಪಿದೆ..."


"ನಾನು ಕ್ಲಾಸ್ ಟೀಚರ್ ಆಗಿದ್ದೆ..

ಅವಳು ಕ್ಲಾಸ್ ಮಾನಿಟರ್ ಆಗಿದ್ದಳು..

ನೀವು ಬರೆದ ನೋಟ್ ಬುಕ್ಕುಗಳನ್ನು ನನಗೆ ತಂದುಕೊಡುತ್ತಿದ್ದಳು..."


ನಾನು ತಲೆ ಆಡಿಸಿದೆ..

ಅವರಿಗದು ಕಾಣುತ್ತಿರಲಿಲ್ಲ..

"ಹೂಂ..." ಗುಟ್ಟಿದೆ..


"ಒಂದು ದಿನ ... 

ನಾನು ನೋಡಿ ಇಟ್ಟ ನೋಟ್ ಬುಕ್ಕುಗಳನ್ನು ತೆಗೆದು ಕೊಂಡು ಹೋಗುವಾಗ..
ಅವಳ ಕೈಯಲ್ಲಿ ಏನೋ ಚೀಟಿ ಇತ್ತು..."

ನನಗೆ ಮೈಯೆಲ್ಲ ಕಿವಿಯಾಯಿತು..


"ನಾನು ಗದರಿಸಿ ಅವಳಿಂದ ಕಸಿದುಕೊಂಡೆ..


ಅವಳು ಅಳುತ್ತಿದ್ದಳು.."


ನನಗೆ ದಿಗಿಲು ಶುರುವಾಯಿತು..


ನಾನು ಬರೆದ ಶುಭಾಶಯ ಪತ್ರವಾ ?


ಕತ್ತಲಲ್ಲಿ 

ಢವ.. ಢವ ಶಬ್ದಗಳು ಜೋರಾಗಿ ಕೇಳುತ್ತವೆ...

ಗುರುಗಳು ಸ್ವಲ್ಪ ಹೊತ್ತು ಸುಮ್ಮನಿದ್ದರು...


"ಬಹುಷಃ ಅಂದು ನಾನು ಗದರಿಸಿ ...

ಅದನ್ನು ನನ್ನ ಬಳಿ ಇಟ್ಟುಕೊಳ್ಳದೆ ಹೋಗಿದ್ದರೆ..
ಇಂದು..
ನೀನು ಹೀಗೆ ಆಗುತ್ತಿರಲಿಲ್ಲ...

ಪೋಲಿ ಹುಡುಗನಾಗಿಬಿಡುತ್ತಿದ್ದೆ..."


ಢವ ಢವ ಜೋರಾಯಿತು... 

ನನ್ನ ಹೃದಯ ಬಾಯಿಗೆ ಬಂದಿತ್ತು...!

"ಏನಿತ್ತು ಅದರಲ್ಲಿ...?"


"ಮತ್ತೇನಿಲ್ಲ...

ಆ ವಯಸ್ಸಿನ ಹದಿ ಹರೆಯದ ಭಾವನೆಗಳು..

ಆ ಹುಡುಗಿ ನಿನಗೆ ಮನಸೋತು..

ಪತ್ರ ಬರೆದಿದ್ದಳು...!

ಅವಳ ಭಾಷೆ.. ಪತ್ರ ಓದಿ ನನಗಂತೂ ನಗು ಬಂದಿತ್ತು..


ಈಗಲೂ ನಗು ಬರುತ್ತದೆ.."


ಮಾಸ್ತರು ನಗತೊಡಗಿದರು.... 


ಗಾಳಿ ಜೋರಾಯಿತು..


ಹಚ್ಚಿದ್ದ ಮೊಂಬತ್ತಿ ಗಾಳಿಗೆ ಕುಣಿಯುತ್ತಿತ್ತು..

ಮೊಂಬತ್ತಿ ಬೆಳಕು ಮತ್ತೂ ಸಣ್ಣದಾಯಿತು... .. 


ಹೃದಯ ಭಾರವಾಗಿತ್ತು.. 


ಅಷ್ಟರಲ್ಲಿ ಅವರ ಮಡದಿ ಊಟಕ್ಕೆ ಕರೆದಳು..
ಊಟಕ್ಕೆ ಕುಳಿತೆವು..

ಅವರ ಮಡದಿ 

ಬಹಳ ಪ್ರೀತಿಯಿಂದ ಸಡಗರದಿಂದ ಬಡಿಸುತ್ತಿದ್ದರು...

"ನಿನ್ನ  ಬದುಕು ಈಗ ಚೆನ್ನಾಗಿದೆ... 

ಕೃತಜ್ಞತೆಯಿಂದ ನಮ್ಮನ್ನು ನೆನಪಿಸಿಕೊಳ್ಳುತ್ತೀಯಲ್ಲ.. 

ಒಳ್ಳೆಯ ಮನಸ್ಸು ನಿನ್ನದು.. 

ಸಂಕೋಚ ಮಾಡ್ಕೋಬೇಡ.. 

ಎಲ್ಲವನ್ನೂ ಹಾಕಿಸ್ಕೊ... 

ನಿನ್ನ ಇಷ್ಟಗಳನ್ನೇ ಮಾಡಿದ್ದೇನೆ..."

ಬಾಳೆ ಎಲೆ  ನೋಡಿದೆ... 

ಎಲೆಯ ತುಂಬ ನನ್ನಿಷ್ಟದ ತಿಂಡಿಗಳು..
ಸಿಹಿ..
ಖಾರ... ಎಲ್ಲವೂ ಇತ್ತು...

ಹುಡುಗಿಯ ಬಗೆಗೆ ಇನ್ನೂ ಕೇಳಬೇಕೆನಿಸಿತು... 

" ಆ ಹುಡುಗಿ ಈಗ ಎಲ್ಲಿದ್ದಾಳೆ...?"


"ಅವಳದ್ದೊಂದು ದೊಡ್ಡ ಕಥೆ...."


" ಏನಾಯ್ತು..?... "


" ಗಂಡ ಕುಡುಕ... 

ವ್ಯಸನಿ...
ಪರ ಹೆಣ್ಣುಗಳ ಸಹವಾಸ...

ಪ್ರೀತಿ ಸಿಗದ  ಕಣ್ಣೀರಿನ ಜೊತೆ  ಬದುಕು.. .. !

ನಿನ್ನ ಜೊತೆಯಾಗಿದ್ದರೆ ಸುಖವಾಗಿರುತ್ತಿದ್ದಳೇನೋ...!.. "


ಸಾವಿರ ಸೂಜಿಗಳಿಂದ ಹೃದಯವನ್ನು ಚುಚ್ಚಿದಂತಾಯಿತು.... 

 ಅಯ್ಯೋ.... !!..

ಬೇಡ ಬೇಡವೆಂದರೂ
ಕಣ್ಣಲ್ಲಿ ದಳ ದಳ ನೀರು ಇಳಿಯುತ್ತಿತ್ತು..

ಹೃದಯ ಚೀರಿತು...

ಕಣ್ಣು ಒರೆಸಿಕೊಂಡೆ..

ಬಾಳೆ ಎಲೆ  ನೋಡಿದೆ... 

ಎಲ್ಲವೂ ಮಂಜು ಮಂಜಾಗಿತ್ತು.... 


ಕಿಡಕಿಯಿಂದ ಗಾಳಿ ಜೋರಾಗಿ ಬಂತು... 
ಮೊಂಬತ್ತಿ ಆರಿಹೋಯಿತು.. 

ಕತ್ತಲು.... 


ಕತ್ತಲಿಗೆ ಎಲ್ಲ  ಬಣ್ಣಗಳೂ... 

ಭಾವಗಳೂ   ಒಂದೆ... 


( ಕಥೆ )

(ದಯವಿಟ್ಟು ಪ್ರತಿಕ್ರಿಯೆಗಳನ್ನು ನೋಡಿ................ )

Wednesday, November 27, 2013

" ಬಿಳಿ ಪಂಚೆ ದೇವರಣ್ಣನ " ಮಗಳು .... ಪ್ರಕಾಶನಿಗೆ ಲವ್ ಮಾಡಿಬಿಟ್ಳಂತೆ .. !

ಸಿರ್ಸಿ ಕಾಲೇಜಿಗೆ ಹೋಗುವಾಗ ನಡೆದದ್ದು....

ಪಿಯೂಸಿಯಲ್ಲಿ ಫೇಲಾಗಿ.. 
ಒಂದು ವರ್ಷ ಅಣ್ಣನೊಂದಿಗೆ ತೋಟದಲ್ಲಿ ಕೆಲಸ ಮಾಡಿದ್ದು..
ನಿಜವಾದ ಸ್ನೇಹಿತರ್ಯಾರು..?
ನಾವು ಬಿದ್ದಾಗ ನಗುವವರು ಯಾರು ? ..
ಎಲ್ಲ ಗೊತ್ತಾಗಿತ್ತು... 

ಪ್ರಪಂಚದ  ಬಣ್ಣಗಳು ಗೊತ್ತಾಗತೊಡಗಿದವು... .

ಫೇಲಾಗಿ..
ಆದ ಅವಮಾನ.. ಹೀಯಾಳಿಕೆ ಕೇಳಿ ಕುಗ್ಗಿ ಹೋಗಿದ್ದೆ..

ಮತ್ತೆ ಓದುವ ಅವಕಾಶ ಸಿಕ್ಕಿತಲ್ಲ.. !
ಛಲದಿಂದ ಓದುತ್ತಿದ್ದೆ...

ಸಿರ್ಸಿ ರಾಯ್ಕರ್ ಬಿಲ್ಡಿಂಗಿನಲ್ಲಿ ನಮ್ಮ ವಾಸ..
ನಿತ್ಯ 
ನಾಷ್ಟ ಮಾಡಿ.. ಮಧ್ಯಾಹ್ನಕ್ಕೂ ಅಡಿಗೆ ಮಾಡಿ ಹೋಗಬೇಕಿತ್ತು..

ತಿಂಗಳಿಗೆ ರೂಮಿನ ಬಾಡಿಗೆ ಖರ್ಚೂ ಸೇರಿ ನೂರಿಪ್ಪತ್ತು ರೂಪಾಯಿ...
ಅದೂ ಕೂಡ ಆಗ ಬಹಳ ದೊಡ್ಡ ಮೊತ್ತವಾಗಿತ್ತು...

ಅಂದು...
ಎಂದಿನಂತೆ ಕಾಲೇಜಿಗೆ ಹೊರಟಿದ್ದೆ..

ದಾರಿಯಲ್ಲಿ ಗೆಳೆಯರು ಸಿಕ್ಕರು..

ಒಬ್ಬರೂ ಮಾತನಾಡಿಲ್ಲ..
ಒಂದು ಮುಗುಳ್ನಗೆಯೂ ಇಲ್ಲ  !

ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜಿನ ಹೆಣ್ಣು ಮಕ್ಕಳು ಸಿಕ್ಕರು..

ನಾನು .. 
ಆಗಿನಿಂದಲೂ ಸಾರ್ವತ್ರಿಕವಾಗಿ "ಪ್ರಕಾಶಣ್ಣ"ನಾಗಿದ್ದರಿಂದ..
ಎಲ್ಲ ಹೆಣ್ಣುಮಕ್ಕಳೂ ಸಲುಗೆಯಿಂದ ಮಾತನಾಡುತ್ತಿದ್ದರು..

ಅಂದು ಮುಖ ತಿರುಗಿಸಿಕೊಂಡು ಹೋದರು !

ಏನಾಯ್ತು ?...  !!!!!!.......

ಸ್ವಲ್ಪ ಗೊಂದಲಕ್ಕೆ  ಬಿದ್ದೆ..

ಕಾಲೇಜಿಗೆ ಬಂದೆ...  ಕ್ಲಾಸ್ ಶುರುವಾಗಿತ್ತು..
ಅಲ್ಲೂ ಸಹ ಯಾರೂ ನನ್ನೊಡನೆ ಮಾತನಾಡುತ್ತಿಲ್ಲ...

ಪ್ರಿನ್ಸಿಪಾಲರ ಕ್ಲಾಸ್ ಆಗಿತ್ತು..

ಕ್ಲಾಸ್ ಮುಗಿದು ಹೋಗುವಾಗ ... 
ಚಶ್ಮದೊಳಗಿನಿಂದ ಕೆಂಗಣ್ಣು  ಬೀರಿದರು .. 

"ಪ್ರಕಾಶ್.. ನನ್ನ ಛೇಂಬರಿಗೆ ಬಾ.."

ಹುಡುಗರೆಲ್ಲ ಒಂಥರಾ ನೋಡಿ ಮುಸಿ ಮುಸಿ ನಗುತ್ತಿದ್ದರು...

ಎನ್. ಎನ್. ರಾಯಸದ್  ಪ್ರಿನ್ಸಿಪಾಲರು..

ಅವರಿಗೆ ನನ್ನನ್ನು ಕಂಡರೆ  ಪ್ರೀತಿ..
ಲೈಬ್ರರಿಯಿಂದ ಪುಸ್ತಕ ಒದಗಿಸುತ್ತಿದ್ದರು..
ಪುಸ್ತಕಕ್ಕಾಗಿ ಹಣದ ತೊಂದರೆ ಇತ್ತು..

ಅವರ ಛೇಂಬರಿಗೆ ಹೋದೆ..

ನನ್ನನ್ನು ನೋಡಿದವರೆ ಕೋಪಗೊಂಡರು..

"ಏನೋ ಇದು  ?
ಒಳ್ಳೆಯ ಹುಡುಗ ಅಂದುಕೊಂಡಿದ್ದೆ.. 
ಹೀಗೆ ಮಾಡ್ತೀಯಾ ಅಂತ ಗೊತ್ತಿರಲಿಲ್ಲ..

ಊರಲ್ಲಿ ನಿನ್ನಣ್ಣ ಎಷ್ಟು ಕಷ್ಟ ಪಡ್ತಿದ್ದಾನೆ ಅಂತ ಗೊತ್ತಿದೆಯಲ್ಲ..?

ಒಮ್ಮೆ ಎಡವಿ ಬಿದ್ದಿದ್ದು ಸಾಲದೇನು ?.."

" ಈಗ ಅಂಥಾದ್ದು  ಏನಾಯ್ತು ಸರ್..?..?"

"ಇನ್ನೇನು ಆಗಬೇಕಿದೆ ?
ಯಾವುದೋ ಹುಡುಗಿಗೆ ಪತ್ರ ಬರೆದಿರುವೆಯಂತಲ್ಲ.. !
ಛೇ....!"

"ಇಲ್ಲ.. ಸಾರ್.. 
ನಾನು ಯಾವ ಹುಡುಗಿಗೂ ಪತ್ರ ಬರೆದಿಲ್ಲ.."

"ನಮ್ಮ ಕಾಲೇಜಿನ ಕಂಪೌಂಡ್ ಗೋಡೆಗಳನ್ನು ನೋಡು.. 
ಸತ್ಯ ಗೊತ್ತಾಗುತ್ತದೆ.."

ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ..

ಕುಗ್ಗಿ ಹೋದೆ...

ನಾನು ಯಾವ ಹುಡುಗಿಗೂ ಪತ್ರ ಬರೆದಿಲ್ಲವಾಗಿತ್ತು..

ಕಾಲೇಜಿನ ಪೂರ್ತಿ ನನ್ನನ್ನು ಹೀಯಾಳಿಸುವವರೇ..
ಎಲ್ಲರ ಬಾಯಲ್ಲೂ ನನ್ನದೇ ಮಾತು....!

"ಪ್ರಕಾಶ  ಪ್ರೇಮ ಪತ್ರ ಬರೆದನಂತೆ...!!.. ."

ಕ್ಲಾಸಿನಲ್ಲಿ ಕುಳಿತುಕೊಳ್ಳುವ ಮೂಡ್ ಇಲ್ಲವಾಗಿತ್ತು..
ರೂಮಿಗೆ ಬಂದೆ..

ನಾಗು ಇದ್ದಿದ್ದ..

"ಪ್ರಕಾಶೂ.. ಏನೋ ಅದು..?
ಯಾವ ಹುಡುಗಿನೋ  ?"

ನನಗೆ ಮೈಯೆಲ್ಲ ಉರಿದು ಹೋಯಿತು..
ಕೋಪದಿಂದ ಅಳು ಬರುವಂತಾಯಿತು..

ನನ್ನನ್ನು ... ಕಷ್ಟಪಟ್ಟು ಓಡಿಸುತ್ತಿರುವ ಅಣ್ಣನಿಗೆ ಗೊತ್ತಾದರೆ ಎಷ್ಟು ನೊಂದುಕೊಂಡಾನು... !

ಛೇ...... !

ನಾಗು ನನ್ನನ್ನು ತಬ್ಬಿಕೊಂಡ.. ಸಮಾಧಾನ ಪಡಿಸಿದ..

ಕಷ್ಟ ಬಂದಾಗ... 
ತಪ್ಪಿ ಬೀಳುವಾಗ ... 
ಎಲ್ಲಿಂದ ಬರುತ್ತಾರೋ ನನ್ನ ಗೆಳೆಯರು.. ದೇವರ ಹಾಗೆ...!

"ಯಾರು ಈ ಸುದ್ಧಿ ಹರಡುತ್ತಿರುವವರು...?"

ಎಷ್ಟೇ ವಿಚಾರಿಸಿದರೂ "ಸುದ್ಧಿಯ ಮೂಲ" ಗೊತ್ತಾಗಲಿಲ್ಲ...

ಮಧ್ಯಾಹ್ನದ ಹೊತ್ತಿನಲ್ಲಿ ... 
ಗೆಳೆಯರೆಲ್ಲ ಊಟಕ್ಕೆ ತಯಾರಿ ಮಾಡುತ್ತಿದ್ದೇವು..

ಅಷ್ಟರಲ್ಲಿ ... 
ಒಬ್ಬರು ಬಹಳ ದರ್ಪದಿಂದ  ರೂಮಿನ ಒಳಗೆ ಬಂದರು..

"ಇಲ್ಲಿ ಪ್ರಕಾಶ ಅಂದರೆ ಯಾರು ?... "

"ನಾನು..."

"ಏನಪ್ಪಾ.. 
ಮನೆಯಲ್ಲಿ ಹಿರಿಯರು ಯಾರೂ ಇಲ್ವಾ ?

ನಿನಗೆ ಮಾಡಲಿಕ್ಕೆ ಬೇರೆ ಕೆಲಸ ಇಲ್ವಾ?.... 

ಪತ್ರ ಬರಿಲಿಕ್ಕೆ ನನ್ನ ಮಗಳೇ ಸಿಕ್ಕಳಾ ?
ನಮ್ಮಂಥವರ ಮನೆಯ ಹೆಣ್ಣು ಮಕ್ಕಳು ... 
ಮರ್ಯಾದೆಯಿಂದ ಕಾಲೇಜಿಗೆ ಹೋಗುವದು ಬೇಡವಾ.. ?"

ಸಿಕ್ಕಾಪಟ್ಟೆ ದೊಡ್ಡ ಧ್ವನಿಯಲ್ಲಿ ಕಿರುಚಾಡಿದರು..

ಕರಿ ಟೊಪ್ಪಿ.. 
ಬಿಳಿ ಅಂಗಿ.. ಬಿಳಿ ಪಂಚೆ.. 
ಒಳಗಡೆ 
ಪಟ್ಟೆ... ಪಟ್ಟೆ ಉದ್ದನೆಯ  ಅಂಡರವೇರ್... 

ಪಂಚೆಯ ತುದಿಯನ್ನು ಕೈಯಲ್ಲಿ ಹಿಡಿದು..
ಅದೇ ಕೈಯಲ್ಲಿ ಸಣ್ಣ ಬ್ಯಾಗು...

ಬಾಯಲ್ಲಿ ಎಲೆ ಅಡಿಕೆ....

"ನೀವ್ಯಾರು...?.."

" ನಾನು ಯಾರೂ ಅಂತ ಗೊತ್ತಿಲ್ವಾ ?...  !!.. "

" ಇಲ್ಲ... !.. "

" ನಾನು ಉಪಾಸಕೊಡ್ಳು ದೇವರು ಹೆಗಡೆ...!

"ಬಿಳಿ ಪಂಚೆ ದೇವರು ಹೆಗಡೆ"  ಅಂತ... !
ಸಿದ್ದಾಪುರ ತಾಲೂಕಿನ ಜಗತ್ತಿಗೆಲ್ಲ ಗೊತ್ತು... "

ನಾಗು ತಲೆ ಕೆರೆದು ಕೊಂಡ..

"ನಿಮ್ಮ ಹುಡುಗಿಯ ಹೆಸರೇನು?..
ಯಾವ ಕ್ಲಾಸು..?.."

ಈಗ..
ಅವರು ಭಯಂಕರ ರಾಕ್ಷಸರಾಗಿ ಹೋದರು... !

ಥೈ ಥೈ ಕುಣಿದಾಡಿಬಿಟ್ಟರು...!

"ಏನೂ ...... ?.... 
ನನ್ನ ಮಗಳ ಹೆಸರು ಗೊತ್ತಿಲ್ಲದಯೇ ಪತ್ರ ಬರೆದದ್ದಾ... ?

ನಾನು ಸುಮ್ಮನಿರ್ತೇನೆ ಅಂದುಕೊಳ್ಳಬೇಡಿ..!

ಪೋಲೀಸ್ ಕಂಪ್ಲೇಂಟ್ ಕೊಡ್ತೇನೆ...

"ಬಿಳಿ ಪಂಚೆ ದೇವರು ಹೆಗಡೆ"  ಅಂದ್ರೆ ಏನು ಅಂತ ಅಂದುಕೊಂಡಿದ್ದೀರಿ...?

ಚರ್ಮ ಸುಲಿಸಿ ಬಿಡ್ತೇನೆ...

ಈ ಬಡಕಲು ಹುಡುಗನಿಗೆ ...
ದುಡ್ಡು ಕೊಟ್ಟು ಪೋಲಿಸರಿಂದ ಹೋಡೆಸುತ್ತೇನೆ...

ಪತ್ರ ಬರಿತಾನಂತೆ.... ಪತ್ರ... !"

ಅವಮಾನದಿಂದ ಕುಗ್ಗಿ ಹೋಗಿದ್ದ ... 
ನನಗೆ ಈಗ ಹೆದರಿಕೆಯೂ ಶುರುವಾಯ್ತು...

ದಿವಾಕರ ಬುದ್ಧಿವಂತ..

" ನೋಡಿ .... 
ಬಿಳಿ ಪಂಚೆ ದೇವರು ಅಣ್ಣಾ... 

ನಮ್ ಹುಡುಗ ಪತ್ರ ಬರೆದಿಲ್ಲ..
ಅಂಥವನಲ್ಲ.. 
ಯಾರೋ..  ಮಾಡಿದ ಕಿತಾಪತಿ ಇದು..

ನೀವು ಪೋಲಿಸ್ ಕಪ್ಲೇಂಟು ಕೊಡುವದಾದರೆ ಕೊಡಿ..

ಆದರೆ ಮರ್ಯಾದೆ ಹೋಗುವದು ಯಾರದ್ದು ?.. 

" ಉಪಾಸಕೊಡ್ಳು ದೇವರಣ್ಣನ  ಮಗಳು .. 
ಪ್ರಕಾಶನ್ನ ಲವ್ ಮಾಡಿದ್ದಳಂತೆ"
ಎನ್ನುವದು  ಸಿರ್ಸಿ ಜಗತ್ತಿಗೇ ಗೊತ್ತಾಗುತ್ತದೆ..!

ಇದನ್ನು ತಾಳ್ಮೆಯಿಂದ ಬಗೆಹರಿಸಿಕೊಂಡರೆ ಒಳ್ಳೆಯದು..."

ಈಗ .... 
ಬಿಳೆ ಪಂಚೆಯವರು ಸ್ವಲ್ಪ ತಣ್ಣಗಾದರು..

ಕರಿ ಟೊಪ್ಪಿಯನ್ನು ತೆಗೆದುಕೊಂಡು.. 
ಅದರಿಂದ  ಗಾಳಿ ಹಾಕಿಕೊಂಡರು... 

ಏದುಸಿರು ಬಿಡುತ್ತ ಒಂದು ಗ್ಲಾಸ್ ನೀರು ಕುಡಿದರು..

"ಹೌದಲ್ವ .... 
ಹಾಗಾದರೆ ಏನು ಮಾಡೋಣ...?... 

ನಾನು ಸುಮ್ಮನಿದ್ದರೂ ನನ್ನ ಮಗ ಸುಮ್ಮನಿರಲ್ಲ..."

"ಯಾರೂ... ನಿಮ್ಮ ಮಗ...?.... "

"ಅಯ್ಯೋ..
ಇದೊಳ್ಳೇ ಫಜೀತಿ ಆಯ್ತಲ್ಲ..!

ನನ್ನ ಮಗನ ಪರಿಚಯವೂ ನಿಮಗೆ ಇಲ್ಲವಾ?.."

"ಇಲ್ಲ.... ! "

ನಮ್ಮ ಹುಬ್ಬುಗಳು ಮೇಲಕ್ಕೇರಿದವು  !

"ಅಯ್ಯೋ ರಾಮಾ...!

ನನ್ನ ಮಗ ಅಂದ್ರೆ ಭಯಂಕರ ಹುಲಿ..!,,.. 

ಕಾಡಿನಲ್ಲಿರೋ ಸಿಂಹ...!

ಮಹಾ ಒರಟ... ರೌಡಿ...!

ಉಪಾಸ್ ಕೊಡ್ಳು " ಕೇಡಿ ಹೆಗಡೇ" ಅಂದ್ರೆ  ಜನ ಉಚ್ಚೆ ಹೊಯ್ಕೋತಾರೆ..."

ನಮಗೆಲ್ಲರಿಗೂ ನಡುಕ ಶುರುವಾಯ್ತು..

"ನಿಮ್ಮ ಮಗ " ಕೇಡಿ "  ನಾ..?... "

"ಕೇಡಿ .... ಅಂದ್ರೆ ಕೇಡಿ ಅಲ್ಲ..

ಕೃಷ್ಣ ದೇವರು ಹೆಗಡೆ.. 
ಇಂಗ್ಲೀಷಿನಲ್ಲಿ " ಕೇಡಿ ಹೆಗಡೆ ".. ಅಂತ...

ಅವ ಸುಮ್ನೆ ಬಿಡೋದಿಲ್ಲ..

ಮೊನ್ನೆ ತಾನೆ ಪೋಲೀಸ್ ಠಾಣೆಗೆ ಹೋಗಿ ಬಂದಿದ್ದಾನೆ...

ನಿಮ್ಮನ್ನು ಭಗವಂತ ಬಂದ್ರೂ ಕಾಪಾಡಲಿಕ್ಕೆ ಸಾಧ್ಯ ಇಲ್ಲ..!.. "

ನಮಗೆ ಈಗ ನಿಜಕ್ಕೂ ಹೆದರಿಕೆ ಶುರುವಾತು....

ತಲೆಯೆಲ್ಲ ಕೆಟ್ಟು ಕೆರವಾಗಿ ಹೋಯ್ತು... !

" ಹುಡುಗಿ ಯಾರು ?

ಎಲ್ಲಿದ್ದಾಳೆ..?
ನೋಡಲಿಕ್ಕೆ ಚಂದ ಇದ್ದೀರಬಹುದಾ ?... 

ಹುಡುಗಿ ಯಾರು ಅಂತ ಗೊತ್ತಿಲ್ಲ.. 

ಅವಳ ಅಣ್ಣ  ರೌಡಿ..!... 

ಕೇಡೀ ಹೆಗಡೆಯನ್ನು ತಡೆಯುವದು ಹೇಗೆ ?... "


(ಇನ್ನೂ ಇದೆ............... )

ಪ್ರತಿಕ್ರಿಯೆಗಳನ್ನು ದಯವಿಟ್ಟು ಓದಿ... ......... 

Monday, August 26, 2013

..... ಮಧ್ಯಮ ....

ಇದು ಬಲು ಕಷ್ಟದ ಕೆಲಸ...

ಹೇಗೆ ಹೇಳುವದು...?


ನಾನು ಮತ್ತು ಅವಳು..

ಇಬ್ಬರೇ ಇದ್ದಾಗ ಕರೆದು ಹೇಳಿದೆ...

"ತುಂಬಾ ದಿನ ಆಗೋಯ್ತು.. 

ಇಂದು ರಾತ್ರಿ ನಾವಿಬ್ಬರೂ ಭೇಟಿ ಆಗೋಣ  ಬಾ..."

ಹೊಟ್ಟೆ ತುಂಬಾ ನಕ್ಕುಬಿಟ್ಟಳು..

ಇವಳು ನಗುವಾಗ ಕಣ್ಮುಚ್ಚಿ ನಗುತ್ತಾಳೆ...!

ಕಷ್ಟವನ್ನು ನೋಡಲೇ ಇಲ್ಲ ಎನ್ನುವಂತೆ...


ನಕ್ಕಾಗ ಬಲು ಚಂದ ಇವಳು..!


"ಯಾಕೆ..?

ರಾತ್ರಿ ಭೇಟಿ...?.."

"ಮಾತಾಡೋಣ...

ಪ್ರೀತಿ ಮಾಡೋಣ..
ಮುದ್ದು ಮಾಡೋಣ.. "... 

"ಬೇಡ..

ಯಾರಾದರೂ ನೋಡಿದರೆ ಕಷ್ಟ...

ಮರ್ಯಾದೆ....  ಮಾನ ಹರಾಜು..."


"ಇಲ್ಲವೆನ್ನಬೇಡ..

ತುಂಬಾ ದಿನಗಳಾಯ್ತು ನೀನು ಕೈಗೆ ಸಿಗದೆ..
ಪ್ರೀತಿ ಮಾಡೋಣ...

ಮತ್ತೆ..

ಮತ್ತೆ..."

"ಮತ್ತೆ.. ಏನು ..?


ಏನು ಪ್ರಯೋಜನ..?


ನೀನು ಗಂಡೂ ಅಲ್ಲ..

ಹೆಣ್ಣೂ ಅಲ್ಲ.. ನಪುಂಸಕ..!.."

ನಾನು ತಲೆ ತಗ್ಗಿಸಿದೆ...


ಮತ್ತೆ ಅವಳೇ ಸಮಾಧಾನಪಡಿಸಿದಳು...


"ಬೇಸರ ಬೇಡ..

ನಿನಗೆ ಬೇಸರ ಮಾಡಬೇಕು  ಅಂತ ಹೇಳಿದ್ದಲ್ಲ.... 

ನಮ್ಮಿಬ್ಬರ 

ವರ್ತಮಾನದ ಏಕಾಂತದಲ್ಲಿ ಮತ್ತೇನು ಮಾಡಲು ಸಾಧ್ಯ?

ಪ್ರೀತಿ.. 

ಪ್ರೇಮ.. ಪ್ರಣಯ..?

ಸಲ್ಲಾಪದ ಮಾತುಗಳು... ?


ಏನೂ ಆಗದ ಸ್ಥಿತಿಯಲ್ಲಿ .. 

ಸುಮ್ಮನಿದ್ದುಬಿಡುವದು ಬುದ್ಧಿವಂತಿಕೆ.... "

ಅಷ್ಟರಲ್ಲಿ ಯಾರೋ ಬಂದ ಸದ್ದಾಯಿತು...


ಆಕೆ ಅಲ್ಲಿಂದ ಹೊರಟು ಹೋದಳು...


ನಿಮಗೆ ನನ್ನ ವಿಷಯ ಗೊತ್ತಿರಬಹುದು...


ನಾನು ಮಧ್ಯಮ ಪಾಂಡವ... 

ಅರ್ಜುನ... 

ಹಿಂದೊಮ್ಮೆ...

ಊರ್ವಶಿ ನನ್ನನ್ನು ಬಯಸಿದ್ದಳು..

"ನೀನು .. 

ಇಂದ್ರನ ಲೋಕದ ಅಪ್ಸರೆ..

ಇಂದ್ರ ನನಗೆ ತಂದೆ..


ನನ್ನ ತಾಯಿಯನ್ನು ಪ್ರೀತಿಸುವದೆ..?... 


ನಿನ್ನೊಡನೆ ಪ್ರಣಯ ನನ್ನಿಂದಾಗದು..."


"ಪಾರ್ಥ...

ನನ್ನದು ಯಾವುದೇ ಬಂಧನ ಬಯಸದ ಸಂಬಂಧ...

ಒಂದು ರಾತ್ರಿಯ...

ಒಂದು ಕ್ಷಣದ 
ಒಂದು ಸಮಾಗಮ ಕೇಳುತ್ತಿರುವೆ...

ಅಮೇಲೆ ನೀನ್ಯಾರೋ.. 

ನಾನ್ಯಾರೋ...!

ಇದೆಲ್ಲ ಇಲ್ಲಿ ಸಹಜ...


ಬೇಲಿ..  

ಅವಶ್ಯವಾಗಿ ಇರಬೇಕು...  
ನಮ್ಮ ಸಂತೋಷವನ್ನು 
ನಾವು ಪಡೆದ ಮೇಲೆ ಬೇಲಿಯನ್ನು ಹಾಕಿಕೊಳ್ಳಬೇಕು.. 

ಬೇಲಿ ಸಂತೋಷವನ್ನು ಹಾಳು ಮಾಡಬಾರದು... 


ಬಾ.. ಪಾರ್ಥಾ ಬಾ... "


ಬೇಲಿ ದಾಟಲು ನನ್ನ ಮನಸ್ಸು ಒಪ್ಪಲಿಲ್ಲ...


ಊರ್ವಶಿಗೆ ಕೋಪ ಬಂತು...


" ಬಯಸಿ ಬಂದ ಹೆಣ್ಣನ್ನು ನಿರಾಕರಿಸುವದು ಪೌರುಷವಲ್ಲ ..


ನಪುಂಸಕತೆ !!


ನನ್ನನ್ನು ನಿರಾಕರಿಸಿದ ... 

ನೀನು ಒಂದು ವರುಷ ನಪುಂಸಕನಾಗು ...!!... "

ಮೂರು ಲೋಕದ ಗಂಡ... 

ಮಹಾ ಪರಾಕ್ರಮಿ...

ಶೂರ..ವೀರ ಈ ಅರ್ಜುನ ಈಗ ನಪುಂಸಕ ...!


ಗಂಡು ಅಲ್ಲ.. 

ಹೆಂಗಸೂ ಅಲ್ಲ.... !

ವಿಚಿತ್ರವಾದ ಮನಸ್ಥಿತಿ.... ದೇಹಸ್ಥಿತಿ... !


ಈಗ... 

ವಿರಾಟ ಮಹರಾಜನ ಆಸ್ಥಾನದಲ್ಲಿ ... 
ಅಜ್ಞಾತವಾಸವನ್ನು  .. 
ನಾವು ಪಾಂಡವರು ಪೂರೈಸುತ್ತಿದ್ದೇವೆ...

ವಿರಾಟನ ಮಗಳು ಉತ್ತರೆಗೆ ನಾಟ್ಯವನ್ನು ಹೇಳಿಕೊಡುವ ಕೆಲಸ ನನ್ನದು..


ನಾನು ಬೃಹನ್ನಳೆ ...


ಈ ಜಗತ್ತಿನ ಭಗವಂತ..

ಶಿವನೊಡನೆ ಮಲ್ಲಯುದ್ಧ ಮಾಡಿ "ಭೇಷ್.." ಎನಿಸಿಕೊಂಡವ
ಇಂದು ಷಂಡನಾಗಿದ್ದೇನೆ..

ನಾಗಲೋಕದ ಉಲೂಚಿ...

ಚಿತ್ರಾಂಗದೆ..
ಸುಭದ್ರೆ.. ದ್ರೌಪದಿಯರ ಚಂದವನ್ನು ..
ಸುಖವನ್ನು ಮನಸಾರೆ ಅನುಭವಿಸಿದವ ನಾನು...!

ಅರಮನೆಯ ಸುಂದರ ತರುಣಿಯರ ..

ಚಂದಗಳ ಜೊತೆಯಲ್ಲಿರಬೇಕು...

ಅವರಿಗೋ..

ನಾನೆಂದರೆ ಅಲಕ್ಷ...
ಅಪಹಾಸ್ಯ.. !

ಅರಮನೆಯ ನಾಟ್ಯ ಶಾಲೆಯ ಪಕ್ಕದಲ್ಲಿ ರಾಣಿಯ ಸಹಾಯಕಿ.. 

ಸೈರಂದ್ರಿ..
ನನ್ನ ಮಡದಿ.. ದ್ರೌಪದಿ .. 

ಬಿಚ್ಚು ಕೂದಲಿನ..

ಅಪೂರ್ವ ಸೌಂದರ್ಯ ರಾಶಿ ನನ್ನ ದ್ರೌಪದಿ..!

ನೋಡಿದರೆ... 

ಮತ್ತೆ.. ಮತ್ತೆ ನೋಡಬೇಕೆನ್ನಿಸುವ .. 
ಮತ್ತೇರಿಸುವ.. 
ಮನ ಕೆರಳಿಸುವ ಸೌಂದರ್ಯ ಅವಳದ್ದು... !

ಅಜ್ಞಾತವಾಸದ ಮುನ್ನ ... 

ನಾವು ಪಾಂಡವರು ಹಾಕಿಕೊಂಡ ಕಟ್ಟು ಪಾಡು ನನಗೆ ನೆನಪಿದೆ... 

ಏನು ಮಾಡಲಿ...?


ನಪುಂಸಕನಾದರೂ.. ..

ಉಪ್ಪು ಹುಳಿ ತಿನ್ನುವ ದೇಹವಿದೆಯಲ್ಲ... 

ದೈಹಿಕ .. 

ಕಾಮಾನೆಗಳ ಸುಖ ಅನುಭವಿಸಿದ ನೆನಪು 
ಆಸೆಗಳ ರುಚಿ ಇದೆಯಲ್ಲ... !

ಹಾಗಾದರೆ ... 

ಸುಖ ಅನುಭವಿಸಲಾಗದ.. 
ನಪುಂಸಕನಿಗೆ  ಕಾಮದ ಆಸೆ ಯಾಕೆ ಬರಬೇಕು ?.... 

ಮೊದಲು 

ಇದೇ ದ್ರೌಪದಿಯ ಮೇಲೆ ವಿಜೃಂಭಿಸಿದ್ದೇನೆ. .. !

ಈಗ  ಎಲ್ಲದಕ್ಕೂ ಅಜ್ಞಾತವಾಸ... 

ಆಸೆ.. 
ಬಯಕೆಗಳಿಗೂ ಸಹ... 

ಉದ್ರೇಕವಿಲ್ಲದಿದ್ದರೂ...

ಒಳಗೊಳಗೆ ಕುದಿಯುವ ..
ಬಯಕೆಯ 
ಕಾಮನೆಯ ಕೊಪ್ಪರಿಗೆ ಇದೆಯಲ್ಲ... !

ನಿನ್ನೆಯ ಪೌರುಷವನ್ನು ಕೆಣಕುತ್ತಿರುತ್ತದೆಯಲ್ಲ... 


ಕೆದಕುವ ಆಸೆಗಳಿಗೆ ತೃಪ್ತಿಯನ್ನು ಎಲ್ಲಿ ಹುಡುಕಲಿ ? ?


ಇಲ್ಲದ 

ಸಂವೇದನೆಗಳಿಗೆ ಸಮಾಧಾನ ಎಲ್ಲಿಂದ ತರಲಿ  ?

ಬಲು ಕಷ್ಟ.. ಈ ನಪುಂಸಕ ಬದುಕು... 


ದಿನಕ್ಕೆ ಒಂದೆರಡು ಬಾರಿಯಾದರೂ ನಮ್ಮ ಭೇಟಿ ಆಗುತ್ತಿತ್ತು.... 

ರಾಜ್ಯ.. 

ಅಧಿಕಾರ.. 
ನನ್ನತನವನ್ನೂ  ಕಳೆದುಕೊಂಡ 
ನನಗೆ 
ಇವಳು ನನ್ನ ಮಡದಿಯೆಂಬ ಅಧಿಕಾರದ  ಅಹಂ ಇಣುಕುತ್ತಿತ್ತು.. ಕೆಣಕುತ್ತಿತ್ತು.. ... 

ಆಸೆಗಳೇ ಹಾಗೆ..
ಯಾವಾಗ ..
ಹೇಗೆ ಹೊಂಚು ಹಾಕುತ್ತವೆ ಎನ್ನಲಿಕ್ಕಾಗಲ್ಲ..

ಒಮ್ಮೆ.. ..

ನಾನೊಬ್ಬನೆ ಇರುವಾಗ ದ್ರೌಪದಿ ಸಿಕ್ಕಳು...

"ಇಂದು ರಾತ್ರಿ ಬಾ..."


" ಬರುವದಿಲ್ಲ...."

"ನಮ್ಮಿಬ್ಬರದು... 

ಒಂದು ಅಕ್ರಮ ಸಂಬಂಧವೆಂದು ತಿಳಿದು...
ಸಂತೋಷಕ್ಕಾಗಿ.. .. 
ಒಂದು ಕ್ಷಣದ ರೋಮಾಂಚನೆಗಾದರೂ ...  ಬಾ..."

"ಅಕ್ರಮ ಸಂಬಂಧ ರೋಮಾಂಚನವೆ .. ! ...?.. "


"ಹೌದು...

ಅದಕ್ಕಾಗಿಯೇ ಅಲ್ಲವೆ ಈ ಜಗತ್ತಿನಲ್ಲಿ ಅಕ್ರಮ ಸಂಬಂಧಗಳಿರುವದು...

ಕಾಮದ ರುಚಿ ಎಲ್ಲರಿಗೂ ಸಹಜ... 


ಆದರೆ ಅಕ್ರಮಗಳು ಹಾಗಲ್ಲವಲ್ಲ... "


" ನನಗೇನು ಗೊತ್ತು...?

ನೀವು ರಾಜರು..
ಅಧಿಕಾರದಲ್ಲಿರುವವರು... 

ಬಹಳ ಸಂಬಂಧಗಳನ್ನು ...

ಸಕ್ರಮ ಮಾಡಿಕೊಂಡವರು.."

ಹೆಣ್ಣಿನ  ನಾಲಿಗೆ ಬಾಣಕ್ಕಿಂತಲೂ ಹರಿತ... 


" ನೀನು .. 

ಹೇಗಾದರೂ ಬಾ.. 

ಒಬ್ಬ ಉನ್ಮತ್ತ ಗಂಡಸನ್ನೂ 
ನಪುಂಸಕನನ್ನಾಗಿ ಮಾಡುವ ಶಕ್ತಿ ಹೆಣ್ಣಿಗಿದೆ.. 

ನಪುಂಸಕನನ್ನು 
ಗಂಡಸನ್ನಾಗಿ ಮಾಡುವ ತಾಕತ್ತು ಹೆಣ್ಣಿಗಿದೆ.. 

ನನ್ನನ್ನು 
ನಪುಂಸಕನೆಂದು  ಹೀಯಾಳಿಸ ಬೇಡ...

ನಾನು ಗಂಡಾಗ ಬೇಕು.. 
ನಿನಗೆ ಗಂಡನಾಗಬೇಕು... "

ಸೈರಂದ್ರಿ 

ಮತ್ತೊಮ್ಮೆ ನಕ್ಕಳು...

ಮೋಹಕವಾಗಿ !

ಕಣ್ಮುಚ್ಚಿ... 
ಬಲು ಚಂದದಿಂದ...!

"ಯಾಕೆ ನಗ್ತೀಯಾ...?"


"ಅರಮನೆಯಲ್ಲಿರುವಾಗಲೂ ನಿನ್ನ  ಪರಾಕ್ರಮ ನನಗೆ ಗೊತ್ತಿಲ್ಲವೆ?.."


"ಏನು ಗೊತ್ತಿದೆ...?.."... 


"ಹಾಸಿಗೆಯಲ್ಲಿ  ನೀವಿದ್ದರೂ...


ನೀವು 

ಹೆಚ್ಚಿನ ಬಾರಿ ನನ್ನೊಡನೆ ಇರುತ್ತಿರಲಿಲ್ಲ...

ನಿಮ್ಮ ವೈರಿ... 

 ಕರ್ಣನ ಬಗೆಗೊ..
ಧುರ್ಯೋಧನನ ಬಗೆಗೊ...ಯೋಚಿಸುತ್ತ.. 
ನಿಮ್ಮ ರಾಜಕೀಯದಲ್ಲಿ ನೀವು ಇರುತ್ತಿದ್ದೀರಿ...

ನೀವು ಗಂಡಸರೇ.. ಹೀಗೆ... !.. 

ದಾಂಪತ್ಯದಲ್ಲಿ  ಮಡದಿಯೊಡನೆ ಇರುವದು ಕಡಿಮೆ.. "

ನನಗೆ ಸೋಜಿಗವೆನಿಸಿತು...


" ನಿನ್ನೊಡನೆ .. ಏಕಾಂತದಲ್ಲಿ 

ನಾನಿರುತ್ತಿರಲಿಲ್ಲ..

ಸರಿ..


ನೀನು ಇರುತ್ತಿದ್ದೆಯಾ?..."


ದ್ರೌಪದಿ ಸ್ವಲ್ಪ ಹೊತ್ತು ಸುಮ್ಮನಿದ್ದಳು...


"ಪಾರ್ಥಾ.... 

ಅನಭವಿಸುವಾಗ ತನ್ಮಯತೆ ಇರಬೇಕು....

ತನ್ಮಯತೆ ... 

ತಾದ್ಯಾತ್ಮತೆ... 
ಇಲ್ಲದಿದ್ದರೆ ಅದು ಸುಖವೇ ಅಲ್ಲ..."

"ನಾನು ಕೇಳಿದ್ದು..

ಆಗ ನೀನು ನನ್ನ ಜೊತೆ ಇರುತ್ತಿದ್ದೆಯಾ?.."

"ನಿನಗೆ  ಗೊತ್ತಾಗುತ್ತಿ‌ರಲಿಲ್ಲವೆ..?.."


"ಪಾಂಚಾಲಿ.... 

ನೀನು ಕಣ್ಮುಚ್ಚಿ ಇರುತ್ತಿದ್ದೆ...

ಮುಚ್ಚಿದ ಕಣ್ಣುಗಳ 

ಭಾವನೆಗಳು ಹೇಗೆ ಅರ್ಥವಾಗುತ್ತದೆ ...?...

ಹೇಗೆ ಅರ್ಥ ಮಾಡಿಕೊಳ್ಳಬೇಕು...? 


ನೀನು... 

ನನ್ನೊಡನೆ ಇದ್ದರೂ... 
ಕಣ್ಮುಚ್ಚಿದಾಗ 
ಧರ್ಮಜ.. ಭೀಮರ 
ನೆನಪು ಬಾರದಿರುತ್ತದೆಯೇ ?

ಸುಖ ಸಿಗುವದಲ್ಲ... 

ಸುಖವನ್ನು ಪಟ್ಟುಕೊಳ್ಳಬೇಕು... 

ಸುಖ..

ಹೋಲಿಕೆಯಲ್ಲಿರುತ್ತದೆ ಅಲ್ಲವಾ?..."

ದ್ರೌಪದಿ ಕಿಲ ಕಿಲನೆ ನಕ್ಕಳು...!


ನಗು ... 

ಒಂದು ಉತ್ತರವೆಂದು ನನಗೆ ಗೊತ್ತಿರಲಿಲ್ಲ.....

 ನನ್ನ ಜೊತೆ ಮಿಲನವನ್ನು ಯಾಕೆ ನಿರಾಕರಿಸುತ್ತಾಳೆ ಈ ಸೈರಂದ್ರೀ...?


ನನಗೆ ಅರ್ಥವಾಗಲಿಲ್ಲ...


ಈಗ ನಪುಂಸಕನಾದರೂ ... 

ನಾನು ಗಂಡು...

ಗಂಡಸಿನ .. 

ಪುರುಷನ ಅಹಂಕಾರವನ್ನು ಮನಸಾರೆ ಅನುಭವಿಸಿದವನು...

ಒಂದು ಕಾಲದಲ್ಲಿ ..

ಅನುಭವಿಸಿದ ಭಾವನೆಗಳು.. ..
ಸುಖದ ನೆನಪುಗಳು  ಇನ್ನೂ ಹಸಿರಾಗಿ ಇದೆಯಲ್ಲ....

ಆಗ..

ವಿಜೃಂಭಿಸುವಾಗ   ಹರಿದ ಬೆವರುಗಳ..
ತಂಪು..
ಕಂಪು ಇನ್ನೂ ಕಾಡುತ್ತಿದೆ...!

ಮತ್ತೊಮ್ಮೆ ದ್ರೌಪದಿಯೊಡನೆ ವಿಜೃಂಭಿಸಬೇಕು... ....


ಸುಸ್ತಾದ... 

ಅವಳ ಸಂತೃಪ್ತಿಯ .... 
ತೇಲುಗಣ್ಣಿನ ನೋಟವನ್ನು ಮನಸಾರೆ ನೋಡಿ ಆನಂದಿಸಬೇಕು....

ಮತ್ತೆ....

ಮೂರು ನಾಲ್ಕು ದಿನ ಸೈರಂಧ್ರಿ ನನಗೆ ಕಾಣಲಿಲ್ಲ...

ರಾಜಕುಮಾರಿ ಉತ್ತರೆಗೆ ನಾಟ್ಯ ಹೇಳಿಕೊಡುತ್ತಿದ್ದರೂ..

ಮನಸ್ಸು ಸೈರಂಧ್ರಿಯ ಬಗೆಗೆ ಯೋಚಿಸುತ್ತಿತ್ತು..

ದ್ರೌಪದಿ..

ನನ್ನ ಪೌರುಷದ ಅಪಹಾಸ್ಯ ಮಾಡಿದಳೆ...?

ಸಾವಿರ ಮುಳ್ಳುಗಳಿಂದ ಚುಚ್ಚಿದಂತಾಯಿತು...


ದ್ರೌಪದಿಯ ಮೇಲೆ ಕೋಪ ಉಕ್ಕಿಬಂತು...


ಇಂದು ಬೆಳಿಗ್ಗೆ...

ನಾನು ನಾಟ್ಯ ಶಾಲೆಯಲ್ಲಿ ಒಬ್ಬನೆ ಇದ್ದೆ..

ರಾಜಕುಮಾರಿ ಇನ್ನೂ ಬಂದಿರಲಿಲ್ಲ....

ವೀಣೆಯನ್ನು ಹಿಡಿದುಕೊಂಡು ವಿರಹದ ರಾಗ ನುಡಿಸುತ್ತಿದ್ದೆ...

ನುಡಿಸುತ್ತ..

ನುಡಿಸುತ್ತ ತನ್ಮಯತೆಯಲ್ಲಿ  ಕಳೆದು ಹೋಗಿದ್ದೆ...

ಯಾರೋ ಬಂದಂತೆ... 

ಕಾಲು ಗೆಜ್ಜೆಯ ಸದ್ದು... ನನ್ನನ್ನು ಎಚ್ಚರಿಸಿತು..

ಎದುರಿಗೆ ನನ್ನ ದ್ರೌಪದಿ... !


ಅದೇ ತಾನೆ ಸ್ನಾನ ಮಾಡಿ ಬಂದಂತಿತ್ತು..


ಕಣ್ಣುಗಳು ನಗು ಸೂಸುತ್ತಿದ್ದವು... 


"ಇಂದು ಬರುತ್ತೇನೆ... 

ರಾತ್ರಿ.. ನಿಮ್ಮ ಏಕಾಂತದಲ್ಲಿ...."

ಇನ್ನೊಮ್ಮೆ ದ್ರೌಪದಿಯ ಚಂದದ ಮುಖವನ್ನು ನೋಡಿದೆ..


ಓಹ್...!

ರಜಸ್ವಲೆಯಾಗಿ ಮಿಂದು ಬಂದಿದ್ದಾಳೆ... !

ಬಯಕೆ ತುಂಬಿದ ಕಣ್ಣುಗಳು  .. 

ನನ್ನನ್ನು ಆಸೆಯಿಂದ ಬಯಸಿ.. ಬಯಸಿ ನೋಡುತ್ತಿದ್ದವು...

"ಪಾಂಚಾಲಿ.... 

ನೀನು ರಾತ್ರಿ... 
ಪಾರ್ಥನನ್ನು ಬಯಸಿ ಬಂದರೂ..
ಅಲ್ಲಿ ಸಿಗುವವ  " ಬೃಹನ್ನಳೆ  " ... ಪರವಾಗಿಲ್ಲವೆ ?...."

ದ್ರೌಪದಿ ಮತ್ತೊಮ್ಮೆ ನಕ್ಕಳು..


"ಪಾರ್ಥಾ.. 


ವಾಸ್ತವದ ಮುಳ್ಳು ಚುಚ್ಚುತ್ತಿದ್ದರೂ... 

ಭಾವಲೋಕದ ಗುಲಾಬಿ ಹೂ ಸುಂದರ...!

ಕಲ್ಪನೆಗಳು ಸೊಗಸು....


ಕನಸುಗಳು ಅದಕ್ಕಾಗಿಯೇ ಇಷ್ಟವಾಗುತ್ತವೆ...


ಮನಸ್ಸು..

ದೇಹ..
ಬಯಸುವದು ಮೂರು ಲೋಕದ ಗಂಡನಾದ ಪಾರ್ಥನನ್ನು.. 

ಸಿಗುವದು "ಬೃಹನ್ನಳೆ "...

ಇದೇ ದಾಂಪತ್ಯವಲ್ಲವೆ...?..

ಪಾರ್ಥ..

ಪ್ರತಿಯೊಂದೂ ಹೆಣ್ಣು ಸಹ .. 
"ಪಂಚ ಪಾಂಡವರನ್ನು ಬಯಸುತ್ತಾಳೆ..."

"ಹೌದಾ...!!..?"


"ಹೌದು... ಪಂಚಪಾಂಡವರೆಂದರೆ..

ಪ್ರೀತಿ...
ಭದ್ರತೆ..
ಸುಖ..
ಸಂತಾನ..
ಒಂದು ಮರ್ಯಾದೆಯ ಭರವಸೆಯ ಬದುಕು.."

ನಾನು ಸ್ವಲ್ಪ ಹೊತ್ತು ಸುಮ್ಮನಿದ್ದೆ...


" ಪಾಂಚಾಲಿ...


ಪ್ರತಿಯೊಬ್ಬ ಗಂಡ.. 

ಪತಿ.. 
ಹೆಂಡತಿಯಲ್ಲಿ ಒಬ್ಬ ಪತಿವೃತೆಯನ್ನು ಬಯಸುತ್ತಾನೆ...

ಆದರೆ ಅವನೊಳಗಿನ ಗಂಡಸು ಹಾಗಲ್ಲ..."


"ಏನು...?"


"ಪ್ರತಿಯೊಬ್ಬ ಗಂಡಸು.. ಪಾಂಚಾಲಿಯನ್ನು ಇಷ್ಟಪಡುತ್ತಾನೆ..."


ದ್ರೌಪದಿಯ ಕಣ್ಣುಗಳು ಬಹಳ ಮಾತನಾಡುತ್ತವೆ... 


ಅವಳ ಆಸೆ ತುಂಬಿದ ಕಣ್ಣುಗಳು ನನ್ನನ್ನು ಕೆರಳಿಸುತ್ತಿತ್ತು...


"ಪಾರ್ಥಾ...

ನಾನು ದ್ರೌಪದಿ .. ..

ನಿನ್ನೊಳಗಿನ ಗಂಡಸು  ಬಯಸುವ ಪಾಂಚಾಲಿ..  ...!


ಇಂದು ನಿನ್ನ ಏಕಾಂತದ ರಾತ್ರಿಯಲ್ಲಿ ನಿನ್ನ ಜೊತೆ ಇರುವೆ...."


ನನಗೆ ಸಂತೋಷವಾಯಿತು...


ಕೈಯಲ್ಲಿದ್ದ  ವೀಣೆಯನ್ನು ಪಕ್ಕದಲ್ಲಿಟ್ಟೆ...


ಆಗ ನನ್ನ ಸೆರಗು ಜಾರಿತು..


ಕುಪ್ಪುಸ ಕಾಣುತ್ತಿತ್ತು... 


"ಸೈರಂಧ್ರೀ...

ಇಂದು ಬರುವದು ಬೇಡ... 
ಇನ್ನೊಮ್ಮೆ ಭೇಟಿಯಾಗೋಣ..."

ನನಗೆ..

ನಾನು ಉಟ್ಟಿದ್ದ ಸೀರೆಯನ್ನು ಸರಿಪಡಿಸಿಕೊಳ್ಳಬೇಕಿತ್ತು....

ನನ್ನ ಹೊಕ್ಕಳು ಬೇರೆಯವರಿಗೆ ಕಾಣಿಸದಂತೆ ಮರೆಮಾಚಬೇಕಾಗಿತ್ತು...


"ಪಾರ್ಥಾ... 


ನಪುಂಸಕತೆ.. .. 

ಬದುಕಿನ ಕಾಲಘಟ್ಟದಲ್ಲಿ 
ಕೆಲವರಿಗೆ... 
ಕೆಲವೊಮ್ಮೆ 
ಮನಸ್ಥಿತಿ... ದೇಹಸ್ಥಿತಿ.... 

ನಪುಂಸಕತೆ... .. 

ಪ್ರತಿಯೊಬ್ಬ ಗಂಡಸನ್ನು .. ಹೆಣ್ಣನ್ನೂ ಕಾಡುವ... 

ಜೊತೆಯಾಗಿ ... 

ಬದುಕುವ ದಾಂಪತ್ಯದಲ್ಲಿ  ಅನಿವಾರ್ಯವಾದ ಒಂದು ಸ್ಥಿತಿ... 

ನಿನಗೆ.. 

ಈ ಸ್ಥಿತಿ ಅಸಹನೀಯವಾಗಿರಬಹುದು.... 

ಸಹಿಸಿಕೊಳ್ಳುವದು ನನಗೆ ದೊಡ್ಡ ಸಂಗತಿಯಲ್ಲ...  


ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ... 

"ಬೃಹನ್ನಳೆಗಳೇ.. ... 

ಕೆಲವರು ಮಾನಸಿಕವಾಗಿ... 

ಇನ್ನು ಕೆಲವರು ದೈಹಿಕವಾಗಿ... "

ದ್ರೌಪದಿ ಕಣ್ಮುಚ್ಚಿ ಗಲಗಲನೆ  ನಕ್ಕಳು...


ನಗು ....

ಎಷ್ಟೆಲ್ಲಾ ಮಾತನಾಡುತ್ತದೆ.. . !!
(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....)


Wednesday, July 31, 2013

ಕನ್ನಡಿ ...

ಬಹಳ ಲೆಕ್ಕಾಚಾರ ಹಾಕಿ..
ಬುದ್ಧಿವಂತಿಕೆಯಿಂದ ಈ ಕೆಲಸ ಮಾಡಿದ್ದೆ...

ಸಿಕ್ಕಿಕೊಳ್ಳುವದಿಲ್ಲ ಎನ್ನುವ ಭರವಸೆ ನನಗಿತ್ತು..


ನನ್ನಪ್ಪ ನನಗಿಂತ ಬುದ್ಧಿವಂತ..


ನಾನು ಬರೆದ ಪತ್ರ ಅವನಿಗೆ ಸಿಕ್ಕಿಬಿಟ್ಟಿತು...


" ಮಗನೆ..

ಈ ಜಗತ್ತಿನಲ್ಲಿ..
ಆಸೆ... ಬಯಕೆ ಸಹಜ...

ಬಯಸಿದ್ದನ್ನು  ಪಡೆಯುವದು..

ಪಡೆದದ್ದನ್ನು
ಸಂಭಾಳಿಸಿಕೊಂಡು  ಬದುಕಿನುದ್ದಕ್ಕೂ ನಡೆಸಿಕೊಂಡು ಹೋಗುವದಕ್ಕೆ..
ಒಂದು ಯೋಗ್ಯತೆ...
ಅರ್ಹತೆ ಅಂತ ಇರುತ್ತದೆ...

ಅದು ನಮಗೆ ಇದೆಯಾ ?..


ನಮಗೆ ಯೋಗ್ಯತೆ.. 

ಅರ್ಹತೆ ಇದೆ ಅಂತ ನಾವು ಅಂದುಕೊಳ್ಳುತ್ತೇವೆ..
ಈ ಜಗತ್ತು.. 
ನಮ್ಮ ಯೋಗ್ಯತೆಯನ್ನು ಅಳೆಯುವ ಮಾನದಂಡವೇ ಬೇರೆ... 

ನಾವು ಎಲ್ಲಿ ನಿಂತಿದ್ದೇವೆ ಎನ್ನುವದು ಬಹಳ ಮುಖ್ಯ.. 


ಸೂಕ್ಷ್ಮವಾಗಿ ನಿನಗೆ ಹೇಳಿದ್ದೇನೆ...


ಅರ್ಥ ಮಾಡಿಕೊ...


ನಮ್ಮ ಯೋಗ್ಯತೆಯನ್ನು ...

ನಾವು ತಿಳಿದುಕೊಂಡರೆ ..
ಮುಂದೆ ದುಃಖ ಪಡುವ ಸಂದರ್ಭ ಬರುವದಿಲ್ಲ..."

ಅಪ್ಪ..

ಎಂದಿನಂತೆ ತನ್ನ ಅನುಭವದ ವೇದಾಂತವನ್ನು ಕೊರೆದ..

ಮತ್ತೇನಿಲ್ಲ..


ನನ್ನ ಕ್ಲಾಸಿನ ಹುಡುಗಿಯೊಬ್ಬಳನ್ನು ನನ್ನಷ್ಟಕ್ಕೆ ನಾನು ಪ್ರೀತಿಸತೊಡಗಿದ್ದೆ...


ಚೂಪು ಮೂಗಿನ..

ಬಟ್ಟಲುಗಣ್ಣಿನ...
ಆ ಹುಡುಗಿಯ ಗಲ್ಲ ನನಗೆ ಬಲು ಇಷ್ಟ...

ಅವಳು ಮಾತನಾಡುವಾಗ ಅವಳ ತುಟಿಗಳನ್ನೇ ಗಮನಿಸುತ್ತಿದ್ದೆ...


ಮೊದಲೆ ಮುದ್ದು ಮುದ್ದಾಗಿದ್ದಳು..

ಮಾತನಾಡುವಾಗ ಮತ್ತಷ್ಟು ಚಂದ ಕಾಣುತ್ತಿದ್ದಳು...

ನಾನು ಅವಳಿಗೆ ತುಂಬಾ ಸಹಾಯ ಮಾಡುತ್ತಿದ್ದೆ..


ಅವಳ ಪ್ರಾಕ್ಟಿಕಲ್ ಜರ್ನಲ್ಲುಗಳನ್ನು..

ಅದರ ರೇಖಾಚಿತ್ರಗಳನ್ನು ನಾನೆ ಬರೆದುಕೊಡುತ್ತಿದ್ದೆ...

ನನ್ನ ಮುದ್ದಾದ ಅಕ್ಷರಗಳನ್ನು ಯಾವಾಗಲೂ ಹೊಗಳುತ್ತಿದ್ದಳು...


ನನ್ನಮ್ಮ ಮಾಡಿದ ತಿಂಡಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದಳು...


ಕಾಲೇಜು ಬಿಟ್ಟು ಮನೆಗೆ ಬಂದರೂ..

ಅವಳ ಫೋನ್ ಬರುತ್ತಿತ್ತು..
ಕಾಲೇಜಿನ ಅವಳ ಅಭ್ಯಾಸದಲ್ಲಿ ನಾನು ಇರಬೇಕಾಗಿತ್ತು.... 
ನನ್ನನ್ನು ಬಹಳ ಅವಲಂಬಿಸಿದ್ದಳು... .

ಅವಳ ಮನೆಯವರೂ ಸಹ ನಮ್ಮಿಬ್ಬರ ಸ್ನೇಹಕ್ಕೆ ಏನೂ ಹೇಳುತ್ತಿರಲಿಲ್ಲ...


ನನ್ನ ..

ಪ್ರೀತಿಯನ್ನು ಅವಳಿಗೆ ಹೇಗೆ ಹೇಳುವದು ?

ಅಂದು ..

ನಮ್ಮ ಕಾಲೇಜಿನ ಕೊನೆಯ ದಿನ...

ನಾವಿಬ್ಬರೇ ಬರುತ್ತಿದ್ದೆವು...


ಎದೆಯಲ್ಲಿ ಢವ... ಢವ... ನಗಾರಿಯ ಶಬ್ಧ... !


"ಹುಡುಗಿ...


ಒಂದು ಮಾತು ಹೇಳ್ತೀನಿ...

ಬೇಸರ ಮಾಡ್ಕೊ ಬಾರದು.. ಕೋಪ ಮಾಡ್ಕೊ ಬಾರದು..."

"ಹೇಳು ಹುಡುಗಾ...

ನಿನ್ನನ್ನು ದೇವರಷ್ಟು ನಂಬುತ್ತೇನೆ.. ಹೇಳು.."

"ಏನಿಲ್ಲ.. 

ಏನಿಲ್ಲ..."... 

ಈ ಹೃದಯವೇ ಹೀಗೆ..

ಆಸೆಗಳನ್ನು  ಹುಟ್ಟಿಸಿ.. 
ಅವುಗಳನ್ನು  ಹೇಳಿಕೊಳ್ಳುವಾಗ ಕೈ ಕೊಡುತ್ತದೆ...

ಅದರೂ ಧೈರ್ಯ ಮಾಡಿದೆ.. .


"ಹುಡುಗಿ..

ನಿನ್ನನ್ನು ನಾನು ತುಂಬಾ.. ತುಂಬಾ ಪ್ರೀತಿಸ್ತಾ ಇದ್ದೀನಿ...
ನೀನು ಶ್ರೀಮಂತೆ..
ನಾನು ಮಧ್ಯಮವರ್ಗದವ...

ಅಂತರ.. 

ಅಂತಸ್ತು..
ಆಂತರ್ಯದ ಪ್ರೀತಿಗೆ ಆಗತ್ಯವಿಲ್ಲ ಅಂತ ನನ್ನ ಭಾವನೆ..."

ಹುಡುಗಿ ಅಪ್ರತಿಭಳಾದಳು...


ಸ್ವಲ್ಪ ಹೊತ್ತು ಸುಮ್ಮನಿದ್ದಳು...


"ಹುಡುಗಾ...

ನಾನು.. ನೀನು ಇಬ್ಬರೂ ಒಳ್ಳೆಯ ಸ್ನೇಹಿತರು..
ಹಾಗಾಗಿ ನೇರವಾಗಿ ಹೇಳುತ್ತೇನೆ...
ಬೇಸರ ಮಾಡ್ಕೋಬೇಡ...

ನಿನ್ನ ಮುಖವನ್ನು 

ನೀನು  ಯಾವತ್ತಾದರೂ ನೋಡಿಕೊಂಡಿದ್ದೀಯಾ...?

ನಿನ್ನ ಕನ್ನಡಿ .. 

ನಿನಗೆ ಸತ್ಯ ಹೇಳುವದಿಲ್ಲವಾ ?

ನಿನ್ನ 

ದೊಡ್ಡ ಮೂಗು..
ದೊಡ್ಡದಾದ ಹೊಳ್ಳೆಗಳು...
ದಪ್ಪ ತುಟಿಗಳು.. 
ಮುಖದ ಮೇಲಿನ ಕಪ್ಪು ಕಲೆಗಳು.. 
ಎಷ್ಟು ಅಸಹ್ಯವಾಗಿದೆ ಗೊತ್ತಾ ?.. 

ನಾನು ಚಂದ ಇದ್ದೇನೆ... 

ಅಂತ ಅಲ್ವಾ  ನೀನು ನನ್ನನ್ನು ಇಷ್ಟ ಪಡ್ತಿರೋದು ?

ನನಗೂ ಒಂದು ಮನಸ್ಸಿದೆ..

ಆ ಮನಸ್ಸು ಚಂದ ಬಯಸುತ್ತದೆ .. 
ಎನ್ನುವ ಸಾಮಾನ್ಯ  ಜ್ಞಾನ ಬೇಡವಾ ನಿನಗೆ ?

ಹೋಗಲಿ ಬಿಡು...


ನನ್ನ ಶ್ರೀಮಂತಿಕೆ ನಿನಗೆ ಗೊತ್ತಲ್ವಾ?

ನಾನು ಬಳಸುವ ಕ್ರೀಮುಗಳ ಬೆಲೆಯಲ್ಲಿ ... 
ನಿಮ್ಮ ಮನೆಯವರ ತಿಂಗಳ ಜೀವನ ನಡೆಯುತ್ತದೆ..."

ನನಗೆ ಬಹಳ ದುಃಖವಾಯಿತು...

ತಲೆ ತಗ್ಗಿಸಿದ್ದೆ..

" ನನ್ನ ಮನೆಯವರು ..

ನನ್ನನ್ನು ನಿನ್ನೊಡನೆ ... 
ಯಾಕೆ ಹೀಗೆ ಸಲುಗೆಯಿಂದ ಇರಲಿಕ್ಕೆ ಬಿಟ್ಟಿದ್ದಾರೆ ಗೊತ್ತಾ ?

ನಿನ್ನ ಕುರೂಪ... !


ನಿನ್ನ ಕುರೂಪವನ್ನು .. 

ನಾನು ಇಷ್ಟಪಡಲಾರೆ ಎನ್ನುವ ಭರವಸೆ ಅವರಿಗೆ ಇದೆ...

ಹುಡುಗಾ...

ಕುರೂಪದಷ್ಟು ಅಸಹ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ..."

ನಾನು ಕುಸಿದು ಹೋದೆ...


ಈ ಜಗತ್ತಿನ ... 

ಕರಾಳ ಸ್ವರೂಪ ನನ್ನ ಕಣ್ಣೆದುರಿಗೆ ಅಸಹ್ಯವಾಗಿ ಅಣಕಿಸುತ್ತಿತ್ತು....

ಕುರೂಪ ನನ್ನ ತಪ್ಪಾ?


ಸೌಂದರ್ಯ 

ಇಲ್ಲದ ಮೇಲೆ... 
ಪ್ರೀತಿಸುವ ಹೃದಯ ಯಾಕೆ ?... 

ಜೋರಾಗಿ ರೋಧಿಸಿದೆ...

ಅತ್ತೆ...

ಆ ಹುಡುಗಿಯ ..

ಬಟ್ಟಲುಗಣ್ಣು..
ಮುದ್ದಾದ ಗಲ್ಲ ನಾನು ಮರೆಯಲಾರದೆ ಹೋದೆ...

" ಹುಡುಗಾ..

ನನ್ನ ಬಗೆಗೆ ಬೇಸರ ಬೇಡ..
ನಿನ್ನನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ..

ಇಂದಲ್ಲ..

ನಾಳೆ.. 
ನಿನಗೆ ಈ  ಕಹಿ ಸತ್ಯವನ್ನು ಯಾರಾದರೂ ಹೇಳಲೇ ಬೇಕಿತ್ತು.. 
ನಾನು ಹೇಳಿದೆ..
ದಯವಿಟ್ಟು ಬೇಸರ ಬೇಡ.."

ಈ ಪ್ರೀತಿ..

ಪ್ರೇಮ... ಕಾಮಕ್ಕೆಲ್ಲ ಯಾಕೆ ..
ಅಂದ 
ಚಂದ ಬೇಕು... ?

ನನ್ನಂಥಹ ಕುರೂಪದ  ..

ಅಗತ್ಯ ..
ಈ ಜಗತ್ತಿಗೆ  ಇಲ್ಲ ಎಂದ ಮೇಲೆ ...
ನನ್ನಂಥವನ ಹುಟ್ಟು ಇಲ್ಲಿ ಯಾಕೆ?..

ನನಗೆ ಅವಳ ಮೇಲೆ ಕೋಪ ಬರಲಿಲ್ಲ...


ಕನ್ನಡಿಯಲ್ಲಿ ಮುಖ ನೋಡಿಕೊಂಡೆ..


ನನ್ನ ಮೂಗಿನ ಆಕಾರ..

ಹೊಳ್ಳೆಗಳು .. 
ಮುಖದ ಮೇಲಿನ ಕಪ್ಪನೆಯ ಕಲೆಗಳು... 
ತುಟಿಗಳ ಗಾತ್ರ ಚಂದ ಇಲ್ಲವಾ?

ಜಗತ್ತಿನ ದೃಷ್ಟಿಯಲ್ಲಿ ... 

ಅಂದ.. ಚಂದ ಎಂದರೆ ಏನು ?

ಅಂದ 

ಚಂದ ಇಲ್ಲದವರಿಗೆ .. 
ಆಸೆಗಳೂ ಇರಬಾರದು..
ಪ್ರೀತಿ..
ಪ್ರೇಮಗಳ ಬಯಕೆಯೂ ಸುಟ್ಟು ಹೋಗಿಬಿಡಬೇಕು..

ನಾನು ಅಸಹ್ಯವಾಗಿದ್ದರೂ...

ಈ ದೇಹಕ್ಕೆ ..
ಈ ದೇಹದ ಕಾಮಕ್ಕೆ .. 
ಅಂದ.. ಚಂದಗಳೇ.. ಬೇಕಲ್ಲ.. !..

ಕಾಲೇಜು ಮುಗಿದ ಮೇಲೆಯೂ ...

ಆ ಹುಡುಗಿ ಸ್ನೇಹ ಇಟ್ಟುಕೊಂಡಿದ್ದಳು...

ಒಂದು ದಿನ ಸಡಗರದಿಂದ ಓಡೋಡಿ ಬಂದಳು..!


ಸಂಭ್ರಮ ಪಡುವ ... 

ಹುಡುಗಿಯ ಚಂದದ ಸೊಬಗೇ ಬೇರೆ....

ಕಣ್ ತುಂಬ ... 

ಮನದಣಿಯೇ ಅವಳನ್ನು ನೋಡಿದೆ..

" ಹುಡುಗಾ...


ನನ್ನ ಮದುವೆ  ನಿಶ್ಚಯ ಆಗಿದೆ... 

 ಮದುವೆಗೆ ಬಾ...
ಹಳೆಯದನ್ನೆಲ್ಲ ಮರೆತು ಬಿಡು..."

"ಹುಡುಗ ಹೇಗಿದ್ದಾನೆ..?.."


"ತುಂಬಾ ತುಂಟ..

ಅಂದವಿದ್ದಾನೆ... 
ಶ್ರೀಮಂತ...

ನನ್ನ ಚಂದವನ್ನು ಇಷ್ಟಪಟ್ಟು ಬಂದಿದ್ದಾನೆ...

ನಾನೂ ಇಷ್ಟ ಪಟ್ಟಿದ್ದೇನೆ.. "

ನನ್ನ ಹೃದಯವನ್ನು ... 

ಹಿಂಡಿ .... 
ಎಲ್ಲೋ ಕಸದ ತಿಪ್ಪೆಗೆ ಬೀಸಾಕಿ ಒಗೆದ ಅನುಭವಾಯ್ತು...

ನಾನು ಅವಳ ಮದುವೆಗೆ ಹೋಗಲಿಲ್ಲ...


ಮದುವೆಯಾದಮೇಲೂ ಆಹುಡುಗಿ 

ಆಗ ಈಗ ಫೋನ್ ಮಾಡುತ್ತಿದ್ದಳು...

ಬಹುಷಃ ... 

ಅವಳ  ಮದುವೆಯಾಗಿ ನಾಲ್ಕೈದು ವರ್ಷಗಳಾಗಿರಬಹುದು...

"ಹುಡುಗಾ..

ತುರ್ತಾಗಿ ನಿನ್ನ ಬಳಿ ಮಾತನಾಡಬೇಕು... 
ಭೇಟಿ ಆಗ್ತೀಯಾ...?"

ಹೆಚ್ಚಿನ ನಿರೀಕ್ಷೆಗಳಿಲ್ಲದಿರುವಾಗ ಉತ್ಸಾಹವೂ ಕಡಿಮೆ...

ಹೃದಯದ ಬಡಿತವೂ ಕಡಿಮೆ...

ತಿಳಿ ನೀಲಿ ಸಾರಿಯಲ್ಲಿ ಹುಡುಗಿ ಮುದ್ದಾಗಿ ಕಾಣುತ್ತಿದ್ದಳು..

ಮುಖ ಬಾಡಿತ್ತು..

ಅವಳನ್ನು.. 

ಬಾಚಿ ತಬ್ಬಿ ಎದೆಗೆ ಆನಿಸಿಕೊಳ್ಳುವ ಆಸೆ ಆಯ್ತು... 

"ಹುಡುಗಾ...

ಒಂದು ವಂಚನೆಯ ಪ್ರಕರಣದಲ್ಲಿ ನನ್ನ ಗಂಡ ಜೈಲು ಸೇರಿದ್ದಾನೆ...
ಮರ್ಯಾದೆ ಮೂರು ಪಾಲಾಯಿತು...

ಸತ್ತು ಹೋಗೋಣ ಅನ್ನಿಸುತ್ತದೆ..."


"ಸಾಯುವದಕ್ಕಲ್ಲ .. 

ಹುಟ್ಟಿರುವದು..
ಬದುಕಿ ಸಾಧಿಸುವದಕ್ಕೆ...

ನನ್ನಂಥಹ ಹತಭಾಗ್ಯ ಕುರೂಪಿ ಇನ್ನೂ ಬದುಕಿ ಇದ್ದಿನಿ ನೋಡು...


ಧೈರ್ಯವಾಗಿರು.. 

ನಾನಿದ್ದೇನೆ... 
ಸಹಾಯ ಮಾಡುವೆ... "

ಅವಳಿಗೊಂದು ಕೆಲಸದ ಅಗತ್ಯವಿತ್ತು..


ನನ್ನ ಕಂಪನಿಯಲ್ಲೆ ಕೆಲಸ ಕೊಡಿಸಿದೆ...


ಕೆಲಸ..

ದುಡಿಮೆ ದುಃಖವನ್ನು ಮರೆಸಬಲ್ಲದು...

ಹುಡುಗಿ ಕೆಲಸದಲ್ಲಿ ಮಗ್ನಳಾಗಿ ... 

ದುಃಖವನ್ನು ಮರೆಯುತ್ತ ಬಂದಳು...

ಅವಳಿಗೆ ತನ್ನ ಗಂಡನ ಕೇಸನ್ನು ನಡೆಸಲು ... 

ಹಣದ ಸಹಾಯ ಬೇಕಿತ್ತು..
ನಾನು ಮಾಡಿದೆ..

ಅವಳ ಕೃತಜ್ಞತಾ ಭಾವದ ನೋಟದಲ್ಲಿ ಪ್ರೀತಿ ಇತ್ತಾ ?


ನನ್ನೊಳಗೆ ಹುದುಗಿರುವ .. 

ಹುಚ್ಚು ಪ್ರೀತಿ ಯಾವಾಗಲೂ ಹೀಗೆ..
ಏನೆಲ್ಲ ಯೋಚಿಸಿಬಿಡುತ್ತದೆ..

ನಿತ್ಯ ಅವಳನ್ನು 

ಮನೆಯವರೆಗೆ ನಾನು ನನ್ನ ಕಾರಿನಲ್ಲಿ ಬಿಟ್ಟು ಬರುತ್ತಿದ್ದೆ...

ಅವಳು ಮಾತನಾಡುತ್ತಿದ್ದಳು..
ನಾನು ಅವಳನ್ನು ನೋಡುತ್ತಿದ್ದೆ...

ಕಣ್ ತುಂಬಾ.. 

ಹೃದಯದ ತುಂಬಾ ನೋಡುತ್ತಿದ್ದೆ...

" ಹುಡುಗಾ... 

ನೀನು ಇನ್ನೂ ಯಾಕೆ ಮದುವೆ  ಆಗಲಿಲ್ಲ....?.."

ನಾನು ಸ್ವಲ್ಪ ಹೊತ್ತು ಸುಮ್ಮನಿದ್ದೆ... 


"ಹುಡುಗಿ... 

ನನ್ನ ಬದುಕಿನ ಕುರೂಪವನ್ನು  
ನನ್ನ ಮಡದಿ ನರಕ ಅನುಭವಿಸದೆ ಇರಲಿ ಅಂತ.. 

ನನ್ನ ಅಸಹ್ಯದ ಭಾಗ್ಯ ... 

ನನ್ನ ಮಕ್ಕಳಿಗೆ ಬಾರದಿರಲಿ ಅಂತ... "

ಹುಡುಗಿ ...

ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನು ದಿಟ್ಟಿಸಿದಳು.. 

ಬದುಕಿನುದ್ದಕ್ಕೂ .... 

ಕಾಡಿದ ನೋವು 
ನನ್ನ ಕಣ್ಣಿನಲ್ಲೂ ನೀರಾಡಿತು.. 

ಜಗತ್ತಿನಲ್ಲಿ 

ಕ್ಯಾನ್ಸರಿಗಿಂತ... 
ಏಡ್ಸಿಗಿಂತ ದೊಡ್ಡದಾದ ರೋಗವಿದ್ದರೆ .. 
ಅದು ಕುರೂಪ... 

ಈ ಔಷಧವಿಲ್ಲದ 

ರೋಗದ ಬಗೆಗೆ... 
ನಿತ್ಯ 
ಅಸಹ್ಯ ಭಾವನೆಯ ನರಕವನ್ನು ... 
ಅನುಭವಿಸುವ ನನಗೆ ಗೊತ್ತು... 

ಹೀಗೆ ..

ಒಂದು ದಿನ ಆಫೀಸಿನಲ್ಲಿರುವಾಗ ಹುಡುಗಿ ... 
ಕಣ್ಣಿನಲ್ಲಿ ನಗುತ್ತಾ ಕೇಳಿದಳು...

"ಹುಡುಗಾ..

ನೀನು ನನ್ನನ್ನು ಬಯಸಿದ್ದೆಯಾ?.."

" ಅದೆಲ್ಲ ಯಾಕೆ ಈಗ..?"


"ನಿಜ ಹೇಳು...

ನೀನು ನನ್ನನ್ನು ಬಯಸಿದ್ದೆಯಾ..?"

ನನಗೆ ಅವಳ ಮುಖವನ್ನು ನೋಡಬೇಕೆಂದರೂ... 

ನೋಡಲಾಗಲಿಲ್ಲ... 

"ಹೌದು..."


"ಈಗ...?"


ನಾನು ಅವಳ ಕಣ್ಣುಗಳನ್ನು ನೋಡುವ ಧೈರ್ಯ ಮಾಡಿದೆ...


ಕಣ್ಣಿನಲ್ಲಿ ಆಹ್ವಾನ ಇತ್ತಾ..?


ನನ್ನ ಕುರೂಪ ನೆನಪಾಯಿತು..


"ಹುಡುಗಿ..

ಆಸೆಗಳಿಗೂ..
ಬಯಕೆಗಳಿಗೂ ಅರ್ಹತೆ.. ಯೋಗ್ಯತೆ ಇರಬೇಕಲ್ಲವೆ ?.
ನನಗೆ ಅದು ಇಲ್ಲ..."

"ಹುಡುಗಾ...

ಇವತ್ತು ಯಾವುದಾದರೂ ಒಂದು ಹೊಟೆಲ್ಲಿನಲ್ಲಿ ... 
ರೂಮ್ ಮಾಡು..
ಇಂದು ರಾತ್ರಿ ನಿನ್ನೊಡನೆ ಕಳೆಯುತ್ತೇನೆ.."

ನಾನು ಅವಕ್ಕಾದೆ... 

ಗಾಭರಿಬಿದ್ದೆ...!

"ಹುಡುಗಾ..

ತಮಾಶೆ ಮಾಡುತ್ತಿಲ್ಲ... 
ನನ್ನನ್ನು ನಂಬು... 
ಅನುಕಂಪದಿಂದಲ್ಲ..  ಕರುಣೆಯಿಂದಲೂ ಅಲ್ಲ... 
ಮನಸಾರೆ  ಬಯಸುತ್ತಿರುವೆ... 
ನಿಜವಾಗಿಯೂ ಹೇಳುತ್ತಿರುವೆ..."

ನಾನು ಖುರ್ಚಿಯಿಂದೆದ್ದು ... 

ಹೊರಗೆ ಟಾಯ್ಲೆಟ್ಟಿಗೆ ಹೋಗಿ ಬಂದೆ...

"ಎಲ್ಲಿಗೆ ಹೋಗಿದ್ದೆ..?.."


"ಕನ್ನಡಿಯಲ್ಲಿ ... 

ನನ್ನ ಮುಖ ನೋಡಿಕೊಳ್ಳುವದಕ್ಕೆ..."

ಹುಡುಗಿ ಸುಮ್ಮನಿದ್ದಳು...


"ಹುಡುಗಿ...

ನನ್ನದು ಅದೇ ಮೂಗು..
ಅದೇ .. 
ದೊಡ್ಡದಾದ ಹೊಳ್ಳೆಗಳು...
ದಪ್ಪ ತುಟಿಗಳು.. 
ಮುಖದ ಮೇಲೆ ಅದೇ.. ಕಪ್ಪು ಕಲೆಗಳು.. !

ಅಗಲೂ .. 

ಅರ್ಹತೆ .. 
ಯೋಗ್ಯತೆ ಇರಲಿಲ್ಲ...

ಈಗಲೂ ಇಲ್ಲ..


ಅಂದಿಗೂ..

ಇಂದಿಗೂ ಏನು ವ್ಯತ್ಯಾಸ ಗೊತ್ತಾ ಹುಡುಗಿ...?"

"ಏನು...?"


" ಸಮಯ..... !!


ಸಮಯ...ಟೈಮ್  ..
ಅರ್ಹತೆ.. ಯೋಗ್ಯತೆಯನ್ನು ತಂದುಕೊಡುತ್ತದೆ..!. "    
(ಚಂದದ ಪ್ರತಿಕ್ರಿಯೆಗಳಿವೆ.. ದಯವಿಟ್ಟು ಓದಿ...)