Saturday, October 31, 2009

ಅಪ್ಪನಂಥಹ... ಚಿಕ್ಕಪ್ಪ...!


ನಾನು ಸಣ್ಣವನಿದ್ದಾಗ
ಬಹಳ ವೀಕ್ ಆಗಿದ್ದೆ..
ಬಡಕಲು ಕಾಲು, ಕೈಗಳು..
ದೊಡ್ಡದಾದ ತಲೆ...
"ದೊಡ್ಡತಲೆ ಪ್ರಕಾಶ" ಅನ್ನುವ ಅಡ್ಡ ಹೆಸರು ಕೂಡ ನನಗಿತ್ತು...

ನಾನು ಸಣ್ಣವನಿದ್ದಾಗ ನನಗೆ ರಿಕೆಟ್ಸ್ ರೋಗ ಆಗಿತ್ತು...

ಬಹಳ ವೀಕ್ ಆಗಿದ್ದರಿಂದ ಉಳಿದ ಮಕ್ಕಳ ಹಾಗೆ ಆಡಲು ಕಷ್ಟ ಆಗುತ್ತಿತ್ತು...
ನನ್ನ ಪಾದಗಳು ಎಲ್ಲರಂತೆ ಉದ್ದವಾಗಿರದೆ...
ಅಡ್ಡವಾಗಿ ತಿರುಗಿಕೊಂಡಿದ್ದವು...

ಒಂದು ಮಾರು ನಡೆಯುವಷ್ಟರಲ್ಲಿ ಎರಡುಸಾರಿ ಬೀಳುತ್ತಿದ್ದೆ...

ಓಡಾಡುವಾಗ ಕಾಲುಗಳು ಒಂದಕ್ಕೊಂದು ತಾಗಿ ಬಿದ್ದು ಬಿಡುತ್ತಿದ್ದೆ...
ಆಡಲು ಹೋದರೂ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದೆ...

ಆ ನನ್ನ ಕಾಲುಗಳಿಗೊಂದು ಬೆಳ್ಳಿಯ ಬಳೆ...

ನನ್ನಜ್ಜ ಧರ್ಮಸ್ಥಳಕ್ಕೆ ಹರಕೆ ಹೊತ್ತುಕೊಂಡಿದ್ದನಂತೆ..

ಆ ಬಳೆಗಾಗಿ ಉಳಿದ ಮಕ್ಕಳೆಲ್ಲ ಹಾಸ್ಯ ಮಾಡುತ್ತಿದ್ದರು...
"ಇದು ಸೇರುಗಾರನ ಬಳೆ.." ಅಂತ..

ಬೇಸರವಾಗುತ್ತಿತ್ತು...ನೋವಾಗುತ್ತಿತ್ತು...
ದುಃಖವೂ ಆಗುತ್ತಿತ್ತು...

ಯಾರಬಳಿಯಲ್ಲಾದರೂ ಹೇಳಿಕೊಳ್ಳಬೇಕು ಅನಿಸುತ್ತಿತ್ತು..
ನನ್ನನ್ನು ಚಾಳಿಸುವ ಮಕ್ಕಳಿಗೆ ಬಯ್ಯಿಸ ಬೇಕು ಎಂದು ಅನಿಸುತ್ತಿತ್ತು...

ಯಾರ ಬಳಿ ಹೇಳಿಕೊಳ್ಳ ಬೇಕು...?

ಮನೆತುಂಬಾ ಮಕ್ಕಳು... ಅಮ್ಮನಿಗೋ ಮೈತುಂಬಾ ಕೆಲಸ...

ಒಂಟಿಯಾಗಿರುತ್ತಿದ್ದೆ... ಅದು ಅನಿವಾರ್ಯವೂ ಆಗಿತ್ತು...

ಆಡಲು ಬರದ ಮಕ್ಕಳಿಗೆ
ಯಾರೂ
ಸ್ನೇಹಿತರು ಬರುವದಿಲ್ಲ...

ನಾನಾಗ ನಾಲ್ಕನೆ ತರಗತಿ..
ಒಂದುದಿನ ನನ್ನ ಚಿಕ್ಕಪ್ಪ ಒಂದು ಮಕ್ಕಳ ಪತ್ರಿಕೆ ತಂದುಕೊಟ್ಟರು...

ಈಗಿನ ಪ್ರಖ್ಯಾತ ನಟಿ, ನಿರೂಪಕಿ ಸುಂದರಿ "ಅಪರ್ಣಾ"ರವರ ಮುಖಪುಟದ ಪತ್ರಿಕೆ....!

ಅದು "ಪಾಪಚ್ಚಿ"...! ಅದು ಮಕ್ಕಳ ಪತ್ರಿಕೆ...!

ಅದರಲ್ಲಿರೋ... ಕಥೆಗಳನ್ನು ಓದಿದೆ... ತುಂಬಾ ಚೆನ್ನಾಗಿತ್ತು...

ಯಾರೋ ಪಕ್ಕದಲ್ಲಿ ಕುಳಿತು ಕಥೆ ಹೇಳಿದಂತಿತ್ತು...

ಓದುತ್ತ... ಓದುತ್ತ ಜಗತ್ತನ್ನೇ.. ಮರೆತು ಬಿಟ್ಟೆ...

ಓದುವದು ನನಗೆ ಬಹಳ ಇಷ್ಟವಾಯಿತು...
ಯಾರೂ ನನ್ನೊಂದಿಗೆ ಆಡಲು ಬಾರದ ಸಮಯದಲ್ಲಿ ಪುಸ್ತಕಗಳು ನನಗೆ ಗೆಳೆಯನಾಗಿಬಿಟ್ಟಿತು...

ನನ್ನ ಜೀವನದ ಒಂಟೀತನದಲ್ಲಲ್ಲೆಲ್ಲ ಈ ಗೆಳೆಯ ನನ್ನೊಂದಿಗಿದ್ದಾನೆ..
ಯಾರೂ ಕೊಡದ ಸಮಾಧಾನ, ಸಾಂತ್ವನ.. ಈತ ಕೊಟ್ಟಿದ್ದಾನೆ...

ನನ್ನನ್ನು ನನ್ನಷ್ಟಕ್ಕೇ.. ನಗಿಸಿದ್ದಾನೆ..
ಅಳಿಸಿದ್ದಾನೆ..
ಭಾವದ ಅಲೆಯಲ್ಲಿ ತೇಲಿಸಿದ್ದಾನೆ...!

ನನ್ನಲ್ಲಿದ ಕನಸುಗಳನ್ನು ನನ್ನಲ್ಲಿಟ್ಟಿದ್ದಾನೆ...!
ಎಲ್ಲಿಲ್ಲದ ಹುಚ್ಚು ಕಲ್ಪನೆಯನ್ನು ನನ್ನಲ್ಲಿ ತುಂಬಿದ್ದಾನೆ...!

ಇಂಥಹ ಸ್ನೇಹಿತನನ್ನು ನನಗೆ ಕೊಟ್ಟ ನನ್ನ ಚಿಕ್ಕಪ್ಪನಿಗೆ ಹೇಗೆ ಕೃತಜ್ಞತೆ ಹೇಳಲಿ...?

ಶಬ್ಧಗಳಿಗೆ ಶಕ್ತಿಯಿಲ್ಲ...

ನನಗೆ ಓದುವ ಚಟ ಹಿಡಿಸಿದ ನನ್ನ ಚಿಕ್ಕಪ್ಪನಿಗೆ ನಮನಗಳು....

ನನ್ನ ಪುಸ್ತಕ ನನ್ನ ಚಿಕ್ಕಪ್ಪನಿಗೆ ಅರ್ಪಣೆ....


ನನ್ನ...

ಇಂದಿನ ಸಂತಸ.. ಯಶಸ್ಸೆಲ್ಲ..

ನನ್ನದಲ್ಲ...

ಹಾಗಂತ...ನಿನ್ನದೂ ಅಲ್ಲ..!!

ದಾರಿಗೊತ್ತಿರದ ಬಾಳಲ್ಲಿ..

ಸರಿಯಾಗಿ ನಿಲ್ಲಲೂ ಬಾರದ

ನನ್ನ ಬಾಲ್ಯದಲ್ಲಿ..

ದಿಕ್ಕನ್ನು ತೋರಿದ..

ನಿನ್ನ...ತೋರು ಬೆರಳಿನದು...!

ಚಿಕ್ಕಪ್ಪಾ...

ನನ್ನ ಪುಟ್ಟ ಕೈಗೆ..

ನೀ.... ಕೊಟ್ಟ... ತೋರು ಬೆರಳಿನದು...!!




( ಪ್ರಿಯ ಓದುಗರೆ...
ನನಗಂತೂ ಮೊದಲ ಪ್ರೇಮದ ಸಂಭ್ರಮ... ಸಡಗರ...!
ಹೆಸರೇ... ಬೇಕಿರದ ನನ್ನ ಕಥನಗಳು ಪುಸ್ತಕವಾಗುತ್ತಿವೆ.. ..
ಇದೇ ಬರುವ ನವೆಂಬರ್ ಹದಿನೈದಕ್ಕೆ..
ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ....
ಬಿಡುಗಡೆಯಾಗಲಿದೆ...

ಇದಕ್ಕೆ ಮಾರ್ಗದರ್ಶನ... ಸಹಾಯ, ಸಲಹೆ ಸೂಚನೆ ಕೊಟ್ಟು...
ಸಹಾಯ ಮಾಡಿ...
ಪ್ರೀತಿಯಿಂದ ಮುನ್ನುಡಿ ಬರೆದು ಕೊಟ್ಟವರು ನಮ್ಮ ಮೆಚ್ಚಿನ ಜಿ. ಎನ್. ಮೋಹನ್ ರವರು
ಬೆನ್ನುಡಿಯನ್ನು.. ಬ್ಲಾಗ್ ಲೋಕದ ಕಾಕಾ...
ನಮ್ಮೆಲ್ಲರ ಮೆಚ್ಚಿನ ಸುನಾಥ ಸರ್...
ಅಕ್ಕರೆಯಿಂದ ಬರೆದು ಕೊಟ್ಟು ಬೆನ್ನುತಟ್ಟಿದ್ದಾರೆ...

ನನ್ನ ವ್ಯವಹಾರದ ಕೆಲಸದ ಜೊತೆಗೆ...
ಪುಸ್ತಕ ಸಂಭ್ರಮದ ಖುಷಿ... ಒತ್ತಡ..
ಹೇಗೆ ನಿಭಾಯಿಸುತ್ತೇನೋ.. ಗೊತ್ತಿಲ್ಲ...

ನಿಮಗೆಲ್ಲ ಪ್ರತ್ಯೇಕವಾಗಿ ಕರೆಯುತ್ತೇನೆ...
ಬರುತ್ತೀರಲ್ಲ..!
ಖುಷಿಯಲ್ಲಿ.. ಸಂತೋಷದಲ್ಲಿ ಪಾಲ್ಗೊಳ್ಳುತ್ತೀರಲ್ಲ...?

ನೀವು ಅಲ್ಲಿ ಬಂದಾಗ ನಗಿಸಲು ಸ್ಪೆಷಲ್ ಗೆಸ್ಟ್ ಬರಲಿದ್ದಾರೆ...!

ಸ್ನೇಹಿತ ಶಿವುರವರ "ವೆಂಡರ್ ಕಣ್ಣು"..

ಗೆಳೆಯ ದಿವಾಕರನ ನಾಟಕಗಳು "ಉದ್ಧಾರ ಮತ್ತು ಸಂತೆ"

ನನ್ನ ಪುಸ್ತಕದ ಹೆಸರು...
" ಹೆಸರೇ.. ಬೇಡ..!!..."

ಈ ಹೆಸರು ಕೊಟ್ಟವರು ಯಾರು...?
ಹೇಗೆ ಬಂತು ಈ ಹೆಸರು..?
ನಿಮ್ಮನ್ನು ನಗಿಸಲು ಬರುವ ಸ್ಪೆಷಲ್ ಗೆಸ್ಟ್ ಯಾರು...?

ಇನ್ನು ನಾಲ್ಕಾರು ದಿನಗಳಲ್ಲಿ ಹೇಳುವೆ....

ನಿಮ್ಮ ಪ್ರೋತ್ಸಾಹಕ್ಕೆ ನನ್ನ ನಮನಗಳು...)



Friday, October 23, 2009

ಬದುಕಿ ಉಳಿದರೆ ನಾಚಿಕೆ ಮರ್ಯಾದಿ ಎಲ್ಲ...!!

ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದೆ...

ಸಿರ್ಸಿಯಲ್ಲಿ ನನ್ನ ಸ್ನೇಹಿತರನ್ನು ಭೇಟಿಯಾಗ ಬೇಕಿತ್ತು...


"ಅಣ್ಣಾ... ಸಿರ್ಸಿಗೆ ಹೋಗಿ ಬರ್ತೇನೆ...

ಏನಾದ್ರೂ ಸಾಮಾನು ತರುವದು ಇದೆಯಾ..?"

ಪೇಟೆಗೆ ಹೋಗುವ ಮುನ್ನ ಹೀಗೆ ಕೇಳುವದು.. ವಾಡಿಕೆ...


"ತರಕಾರಿ ತರಬೇಕಿತ್ತು.. ಮಾರಾಯ ..

ನಿನ್ನ ನೋಡಿದರೆ....
ಸಾಮಾನಿನ ಬೆಲೆ ಜಾಸ್ತಿ ಹೇಳಿ ಹೆರೆದು ಬಿಡ್ತಾರೆ..
ಕಾನಸೂರಿನಲ್ಲಿ ಹೆಗಡೇರ ಅಂಗಡಿಯಲ್ಲಿ ಹೇಳಿಟ್ಟಿದ್ದೇನೆ...
ಆ ಸಾಮಾನು ತಗೊಂಡು ಬಾ..."

ನಾನು ಸರಿ ಎಂದೆ...


"ಹೋಗುವಾಗ ಕುಷ್ಟನೂ... ಬರ್ತಾನೆ..

ಅವನಿಗೆ ಆರೋಗ್ಯ ಸರಿ ಇಲ್ಲಂತೆ ಕರೆದು ಕೊಂಡು ಹೋಗು.."

ಕುಷ್ಟನಿಗೂ ಖುಷಿಯಾಗಿತ್ತು..!!


"ಸಣ್ಣ ಹೆಗಡೇರೆ.. ನಿಮ್ಮ ಸಂಗಡ ಕಾರಲ್ಲಿ ಹೋಗಬೇಕು ಅಂತ ಆಸೆ ಇತ್ರ..

ಇವತ್ತು ಪೂರ್ತಿ ಆಯ್ತು ನೋಡಿ... ."

ನಾನೂ ಕುಷ್ಟನೂ ಲೋಕಾಭಿರಾಮವಾಗಿ ಮಾತನಾಡುತ್ತ.. ಸಿರ್ಸಿ ಹತ್ತಿರ ಬಂದೆವು...


"ಕುಷ್ಟ ನಿನಗೆ ಯಾವ ಡಾಕ್ಟರ್ ಹತ್ತಿರ ಹೋಗಬೇಕು..? ಏನಾಗಿದೆ..?"


ಕುಷ್ಟ ಸ್ವಲ್ಪ ನಾಚಿಕೊಂಡ...


"ಪಕಾಸ್ ಹೆಗ್ಡೇರೆ... ನಂಗೆ  ..

ಸಾಮಾನು ಡಾಕ್ಟರ್ " ಹತ್ರ ಹೋಗಬೇಕ್ರಾ..!"

ನನಗೆ ಅಶ್ಚರ್ಯವಾಯಿತು...!!


" ಸಾಮಾನಿನ ಡಾಕ್ಟರ್ರಾ.??.?

ಯಾರು ಅದು..?"

" ಅದೇರ್ರಾ...

ನಿನ್ನೆ ಬೆಟ್ಟದಿಂದ ಇಳಿಯುವಾಗ ಬಿದ್ದು..
ನನ್ನ " ಸಾಮಾನಿಗೆ "  ಪೆಟ್ ಆಗಿದೆರ್ರಾ..
ನಟರಾಜ್ ರೋಡಿನಲ್ಲಿ ಇದ್ದರಲ್ರಾ.." ನಾಯಕ್ ಡಾಕ್ಟ್ರು."...
ಅವ್ರು ಸಾಮಾನು ಡಾಕ್ಟ್ರಂತೆ.. ಅವರ ಬಳಿ ಹೋಗುವಾ ಅಂತ..
ಒಳ್ಳೆ ಔಷಧ ಕೊಡ್ತಾರಂತೆ.."

ನನಗೆ ಈಗ ಅರ್ಥವಾಯಿತು...


ನಾನು ಅವನನ್ನು ಆಲ್ಲೇ ಬಿಟ್ಟು... 

ನನ್ನ ಸ್ನೇಹಿತ ಮೂರ್ತಿಯನ್ನು ನೋಡಲು ಹೊರಟೆ..
ಸಿರ್ಸಿ ಬಸ್ಟಾಂಡಿನ ಹತ್ತಿರ ಅವನ ಅಂಗಡಿ ಇದೆ...

ಕಾಲೇಜು ದಿನಗಳಲ್ಲಿ ಅವನ ಅಂಗಡಿ ನಮ್ಮ ಅಡ್ಡವಾಗಿತ್ತು....


ಮೂರ್ತಿಗೆ ತುಂಬಾ ಖುಷಿ ಆಯ್ತು...

ತುಂಬಾ ದಿನಗಳಾಗಿತ್ತು ಭೇಟಿಯಾಗದೆ..

"ಮೂರ್ತಿ.. ಚೆನ್ನಾಗಿದ್ದೀಯಾ...? ಹೇಗಿದೆ ಬಿಸಿನೆಸ್...?

ಹಬ್ಬ ಜೋರಾ..?"

"ಏನಿಲ್ಲ .. ಪ್ರಕಾಶು...... .

ನಾಳೆ ದೀಪಾವಳಿ.. ಆಯುಧ ಪೂಜೆ..
ಕೆಲಸಗಾರರು ಎಲ್ಲಾ ಸಾಮಾನು ತೊಳೆದು ಇಡ್ತಾ ಇದ್ದಾರೆ..
ನಾಳೆ ಎಲ್ಲಾ ಸಾಮಾನಿಗೂ ಪೂಜೆ ಮಾಡ್ಬೇಕಲ್ಲಾ..
ಅಲ್ಲಾ ಬೆಂಗಳೂರಲ್ಲಿ ಪೂಜೆ ಯಾವಾಗಾ..?
ಅಲ್ಲಿ  ಸಾಮಾನುಗಳ ಪೂಜೆ  ಎಲ್ಲಾ ಇದೆಯಾ..?"

ನಂಗೆ ನಗು ಬಂತಾದರೂ ತಡೇದು ಕೊಂಡೆ...


"ಬೆಂಗಳೂರಲ್ಲಿ ಆಯುಧ ಪೂಜೆ ನವರಾತ್ರಿಯಲ್ಲಿ ಮಾಡ್ತಾರೆ"


ಮೂರ್ತಿ ನಕ್ಕ...ನಂಗೂ ತಡೆದು ಕೊಳ್ಳಲಾಗಲಿಲ್ಲ..
ಇದೇ ಸಂದರ್ಭ ಅಂತ ಜೋರಾಗಿ ನಕ್ಕು ಬಿಟ್ಟೆ...

ಅಷ್ಟರಲ್ಲಿ ಮೂರ್ತಿ ಗೆಳೆಯ ಗುರು ಬಂದ... ಅವರದು ಹಾರ್ಡ್‍ವೇರ್ ಅಂಗಡಿ ಇದೆ...


"ಮಾರಾಯಾ.. ನಾಳೆ ಪೂಜೆಗೆ ಅಂತ ಸಾಮಾನು ತೊಳಿತಾ ಇದ್ದೆ..

ಎಲ್ಲ ಸಾಮಾನು ಯಾಕೆ ತೊಳಿಬೇಕು..?
ಶಾಸ್ತ್ರಕ್ಕೆ ಅಂತ ಒಂದೆರಡು ತೊಳೆದು ಪೂಜೆ ಮಾಡಿದ್ರೆ ಆಗಲ್ವಾ..?
ಹೀಗೆಲ್ಲ ತೊಳೆದರೆ ಕೆಲವು ಹಳೆ ಸಾಮಾನಿಗೆ ಜಂಗ್ ಹಿಡಿದು ಬಿಡ್ತದೆ..

ಹಳೆ ಸಾಮಾನಿಗೆಲ್ಲಾ ಯಾಕಪ್ಪಾ ಪೂಜೆ...?


ನನ್ನಪ್ಪನಿಗೆ ಹೇಳಿದ್ರೆ ಕೇಳ್ತಾಇಲ್ಲ.. ಮಾರಾಯಾ...

ವರ್ಷಕ್ಕೊಮ್ಮೆ ಆದ್ರೂ ಸಾಮಾನಿಗೆ ನೀರು ಹಾಕಿ ತೊಳಿಬೇಕು ಅಂತ ಹಠ ...
ಅವರ ಹತ್ರ ಎಂತಾ ಜಗಳ ಅಂತ ಈ ಕಡೆ ಬಂದೆ.."

ನನಗೆ ಅಲ್ಲಿ ನಿಲ್ಲಲಾಗಲಿಲ್ಲ...


ಕೆಲಸ ಎಲ್ಲ ಮುಗಿಸಿ ... 

ಕುಷ್ಟನನ್ನು ಕರೆದು ಕೊಂಡು ಕಾನಸೂರಿಗೆ ಹೊರಟೆ..

"ಏನಾಯ್ತು ಕುಷ್ಟ..? ಡಾಕ್ಟ್ರು ಏನು ಹೇಳಿದ್ರು..?"


"ಪಕಾಸ್ ಹೆಗ್ಡೇರೆ.. 

ಈ ಡಾಕ್ಟ್ರು ಸರಿ ಇಲ್ರ..


ಎಂತಾ .... ಮರ್ಯಾದಿ ಇಲ್ಲದ ಜನ ಮಾರಾಯ್ರೆ...!

ರಾಮ...ರಾಮಾ...!... 

ನನ್  ನಾಚಿಕೆ .. ಮರ್ವಾದಿ, ಎಲ್ಲಾ ತೆಗೆದು ಬಿಟ್ರು...!
ಇಶ್ಯೀ... 
ಅದೆಲ್ಲ ...ಹೇಳೂಕೆ ನಾಚ್ಕೇರ್ರಾ....!

ಡಾಕ್ಟ್ರ ಹತ್ರೆ .. 
ಮರ್ಯಾದಿ ಇಟ್ಕೋ ಬಾರ್ದು ಅಂತ ಉಪದೇಸ ಬೇರೆ ಕೊಟ್ರು..
ಈ ಔಷಧ ತಗೊ.., ಎರಡು ದಿನ ಬಿಟ್ಟು ಮತ್ತೆ ಬಾ ಅಂತ ಹೇಳಿದ್ರು.."

"ಹಾಗೆ ಮಾಡು ಎರಡು ದಿನ ಬಿಟ್ಟು ಮತ್ತೆ ಹೋಗಿ ಬಾ.."


" ಇಷ್ಟು .. ಮರ್ಯಾದಿ ಹೋಗಿದ್ದು ಸಾಕ್ರ...


ಪದೆ.. ಪದೆ ಮರ್ಯಾದಿ ತೆಗಿಸಿಕೊಳ್ಳೋಕೆ ನಾನೇನು ರಾಜಕೀಯದವ್ನಾ..?

ಲಂಚ ಕೇಳೋ.. ಆಫಿಸರ್ನಾ...?
ನನ್  ಕೈಲಿ  ಆಗೂದಿಲ್ರ...!
 ಮಗನ್ನ ಕಳಸ್ತೆ.. ಔಷಧಿ ತರ್ಲಿಕ್ಕೆ.."

"ಅವರು "ತಪಾಸಣೆ" ಮಾಡಿ ಔಷಧ ಕೊಡ ಬೇಕಾಗ್ತದೆ...
ಪೆಟ್ಟಾಗಿದ್ದು ನಿಂಗೆ..
ನೀನೇ ಹೋಗಬೇಕು ಮಾರಾಯಾ.."

"ನನ್ನ ಮಗ ಸಣ್ಣವ...ಸರಿ..
ನಮ್ ಪಕ್ಕದ ಮನೆ ನಾಣಿ ಕಳಸ್ತೆ...
ನಂಗೆ ಹೀಗ್ ಹೀಂಗೆ ಆಗ್ತದೆ ಅಂತ ಅವ ಡಾಕ್ಟ್ರ ಹತ್ರ ಹೇಳ್ತಾನೆ..

ಅಲ್ರಾ... 
ಕಾಮತ್ರು ನಂಗೆ ಮಂತ್ರಿಸಿ ಕೊಡ್ಬೇಕಾದ್ರೆ...
ನನ್ನ ಮಗನ್ನ ಕಳಸ್ತಿದ್ದೆ..

ಕಾಮತ್ ರಿಗೆ   ಆಯ್ತದೆ... ಡಾಕ್ಟ್ರಿಗೆ ಆಗೋದಿಲ್ವ..?

ಕಾಮತ್ರು ಎಷ್ಟು ದೊಡ್ಡ ಜನಾ...? 
ಏನು ಕಥೆ..!
ಕಾಮತ್ರ ಯೋಗ್ಯತೆ ಇದೆಯಾ ಇವರಿಗೆ...?

ಮಂತ್ರ ಹೇಳಿ ಗಂಡು ಮಗನ್ನ ಕೊಡ್ಸಿದವ್ರು..!!!

ಅವ್ರಿಗಿಂತ ದೊಡ್ಡವ್ನ... ಈ ಡಾಕ್ಟರ್ರು...?? "

" ಇಲ್ಲಪ್ಪಾ ನೀನೇ ... ಹೋಗ್ಬೇಕು..."

"ಉಪದೇಸ ... ಮಾಡಿದಂಗೆ ಅಲ್ಲ ಮರ್ವಾದಿ ಕಳ್ಕೊಳ್ಳದು.. !

ಮರ್ವಾದಿ ... ಕಳೊಂಡವ್ನಿಗೆ ಗೊತ್ತು..ಅದು ಏನು ಅಂತ...

ನಿಮಗೇನು ಗೊತ್ತು ನನ್ ಕಷ್ಟ...?

ಮರ್ಯಾದಿ  ಬಿಚ್ಕೊಂಡು ಡಾಕುಟ್ರ  ಎದುರಿಗೆ ಕೂತ್ಕೊಳ್ಳೋದು

ಎಷ್ಟು ಕಷ್ಟ ನಿಮಗೆ ಗೊತ್ತಾ ?

ಈ... ಡಾಕ್ಟ್ರು ಸ್ವಲ್ಪ ಮಳ್ಳು..ಮಾರಾಯ್ರೆ....!

ಸುಮ್ನೆ ಔಷಧ ಕೊಡೋದ್ ಬಿಟ್ಟು.. 
ನೆಗಿ ಆಡ್ತಾರ್ರೇ ಮಾರಾಯ್ರೆ..!

ನನ್ನ ನೋಡಿ ಕಿಸಿ ಕಿಸಿ ನಗ್ತಾರೆ...! "

"ನೋಡು... ಕುಷ್ಟ ..
ಕಡಿಮೆ ಆಗದೇ ಇದ್ರೆ ನೀನೇ... ಹೋಗಬೇಕು..
ಕೆಲವೊಂದು ನಿನಗೆ ಗೊತ್ತಾಗುದಿಲ್ಲ..
ನಾನು ಹೇಳಿದ್ದು ಕೇಳು..

ನಿನ್ನ ಪಕ್ಕದ ಮನೆ ಯಂಕನಿಗೆ ಏನಾಯ್ತು...?
ಅದೇ ನೋವಲ್ಲಿ  ಕೊನೆಗೆ..ಸತ್ತು ಹೋದ.. 
ನಾಚ್ಕೆ ಮಾಡ್ಕೊಂಡು..!

ಬದುಕಿ ಉಳಿದರೆ ನಾಚ್ಕೆ, ಮರ್ಯಾದಿ...ಎಲ್ಲಾ ..!


 ಇದಕ್ಕೆಲ್ಲ ನಾಚಿಕೆ ಇಟ್ಗೋಬೇಡ....."

"ಆಯ್‍ತ್ರ.. ಹಾಂಗೇ ಮಾಡ್ತೆ.."



ಅಷ್ಟರಲ್ಲಿ ಕಾನಸೂರಿಗೆ ಬಂದೆವು.... 


ಅಲ್ಲಿ.. 
ಕಾನಸೂರು ಹೆಗಡೇರ ಅಂಗಡಿಗೆ ಬಂದೆವು...

ಅದು ಸುತ್ತ ಮುತ್ತಲಿನ ಹಳ್ಳಿಗರ ಅಡ್ಡ...

ಅಲ್ಲಿ  ಕಲ್ಕಟ್ಟೆ  ಗೋವಿಂದಣ್ಣ ಸಿಕ್ಕಿದ...

ಅವ ಹಳೆ ದೋಸ್ತ...

"ಅರೇ... ಪ್ರಕಾಶಾ... !

ಆರಾಮಾ..?
ಸಿರ್ಸಿಗೆ ಬಂದಿದ್ದಾ?"

" ಹೌದು ಮಾರಾಯಾ... ಏನು ವಿಶೇಷ..?"


"ಏನೂ ಇಲ್ಲ ಮಾರಾಯಾ..!

ನಿನ್ನೆ ಸಿರ್ಸಿಯಲ್ಲಿ ಒಂದು ಭಾನಗಡಿ ಘಟನೆ.. ಆಯ್ತು.."

"ಏನಾಯ್ತು...!!.?"

" ಬಸ್ಟಾಂಡಲ್ಲಿ ಎಲ್ಲಕಡೆ ಬರೆಸಿ ಇಟ್ಟಿದ್ದಾರೆ...

" ನಿಮ್ಮ ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರರು.."

" ಸಾಮಾನು ಕಳ್ಳರಿಂದ ಎಚ್ಚರಿಕೆಯಿಂದ ಇರಬೇಕು" ಅಂತ..."


"ಅದು.. ನಿಜ ಏನಾಯ್ತು.!!.?"

" ಅಮ್ಮಚ್ಚಿ ಮಂಜಣ್ಣ ತನ್ನ ಸಾಮಾನು ...
ಅಲ್ಲೇ ಕಲ್ಲು ಬೇಂಚಿನ ಮೇಲಿಟ್ಟು ಒಳಗಡೆ ಹೋಟ್ಲಿಗೆ ಹೋಗಿದ್ನಂತೆ..


ಚಹ ಕುಡಿದು ಬರುವಷ್ಟರಲ್ಲಿ ಮಂಜಣ್ಣನ ಸಾಮಾನು ಮಾಯಾ..!!

ಕಳ್ಳರು ಅವನ ಸಾಮಾನು ಎತ್ತಿಕೊಂಡು ಹೋಗಿ ಬಿಟ್ಟಿದ್ರು..!!!."



ಗೋವಿಂದಣ್ಣ ಬಹಳ ಬೇಸರ ಪಟ್ಟುಕೊಂಡ...

" ಕಾಲ ಕೆಟ್ಟು ಹೋಯ್ತು ಪ್ರಕಾಶ...!!

ಈ ಕಳ್ಳ ಜನ ಎಂತಹ ಸಾಮಾನನ್ನೂ ಬಿಡೋದಿಲ್ಲ.. ಮಾರಾಯಾ..."


ಅಷ್ಟರಲ್ಲಿ ಕುಷ್ಟ ಬಾಯಿ ಹಾಕಿದ...


" ಸಾಮಾನು ಕಳ್ರು ಎಲ್ಲ ಕಡೆ ಇರ್ತಾರ್ರ...

ನಮ್ಮ ಸಾಮಾನು ಬಗ್ಗೆ ನಾವು ಎಚ್ಚರಿಕೆಯಲ್ಲಿ ಇರಬೇಕ್ರ...

ನಂಗೆ ....ಇದು ಮಾತ್ರ ಅರ್ಥ ಆಗೂದಿಲ್ರಾ...!


ಅಲ್ಲಾ.. ಈ.. ಮಂಜಣ್ಣ...!!

ತಮ್ಮ ಸಾಮಾನೂ ... 
ಯಾಕೆ.. ...ಹೊರಗೆ ಇಟ್ಟು ಹೋದ್ರು..?? !!...?"





(ಕುಷ್ಟನ ಕಥೆಯನ್ನು ಕಿರು ಚಿತ್ರ ಮಾಡಿದರೆ ಹೇಗೆ..?
ನಮ್ಮ ಪ್ರತಿಭಾನ್ವಿತ ಸ್ನೇಹಿತರಾದ ಹೇಮಂತ್ ಕೇಳುತ್ತಿದ್ದಾರೆ..

ಖುಷಿಯಾಗುತ್ತಿದೆ....

ವಿವರಗಳಿಗೆ ಪ್ರತಿಕ್ರಿಯೆ ಓದಿ..

ಕಿರು ಚಿತ್ರ ಮಾಡಿದರೆ ಹೇಗಿರುತ್ತದೆ..?)

Saturday, October 17, 2009

ಬಾ.. ಬೆಳಕೆ ಬಾ....!





ಬಾ... ಬೆಳಕೆ ಬಾ....

ಬಾಳ ಬೆಳಗಿಸು ಬಾ....

ನಮ್ಮ.. ಬಾಳಿನ ಹಸಿರಾಗಿ ಬಾ...

ದುಡಿತಕ್ಕೆ ಸರಿಯಾದ ಬೆಲೆಯಾಗಿ ಬಾ....

ದುಃಖದ ಬಾಳಿನ ಬೆಳಕಾಗಿ ಬಾ...

ನಾಡಿನ ಸಂತಸದ ಉಸಿರಾಗಿ ಬಾ....


ನಮ್ಮ.. ಮೊಗದಲ್ಲಿ ನಗುವಾಗಿ ಬಾ...

ನಿರಾಸೆಯ ರಾತ್ರಿಯಲಿ ಆಶಾ ಕಿರಣವಾಗಿ ಬಾ...

ಮುಚ್ಚಿದ ದಾರಿಯ ಸುಗಮಗೊಳಿಸು ಬಾ...

ಕಷ್ಟದ ಬಾಳಿನ ಖುಷಿಯ ಕಣ್ಣೀರಾಗಿ ಬಾ...


ಬಾ ಬೆಳಕೆ.. ಬಾ....
ಬಾಳ ಬೆಳಗಿಸು.. ಬಾ...

ನಮ್ಮೆಲ್ಲರ ಆಸೆ.. ಕನಸುಗಳ...
ನನಸಾಗಿಸು... ಬಾ...
ಬಾ... ಬೆಳಕೆ ಬಾ...

ಹಸಿರಾಗಿ.. ಉಸಿರಾಗಿ..
ಹರುಷ.. ಹರಸುತ ..ಬಾ...
ಬಾ ಬೆಳಕೆ... ಬಾ....


ಸರ್ವರಿಗೂ ದೀಪಾವಳಿಯ ಶುಭಾಶಯಗಳು..
ಬೆಳಕು ಬಾಳನ್ನು ಬೆಳಗಲಿ...

ಸಂತಸ ತರಲಿ...


ಪ್ರೀತಿಯಿಂದ ...

ಇಟ್ಟಿಗೆ ಸಿಮೆಂಟು...



Saturday, October 10, 2009

ಮಾತು ಕೇಳಿದರೆ ... ಮನಸ್ಸು ಗೊತ್ತಾಗುವದಿಲ್ಲವಲ್ಲ... !

part...3




ನನ್ನಾಕೆಯ ಧೈರ್ಯದ ಮಾತುಗಳು ...
ನನ್ನಲ್ಲಿ ಹೊಸ ಹುಮ್ಮಸ್ಸು ತಂದು ಬಿಟ್ಟಿತ್ತು...


"ನೀವು ಈ ವ್ಯವಹಾರದಲ್ಲಿ ಹಾಕಿದ್ದೇನು...?
ಕಳೆದು ಕೊಂಡಿದ್ದೇನು...?



ನಂಬಿಕೆನಾ...? 
ಹಣನಾ..?


ಹಣದ ಸಲುವಾಗಿ ಆತ್ಮವಿಶ್ವಾಸ ಕಳೆದು ಕೊಂಡಿದ್ದು ತಪ್ಪು...


ಅದೆಲ್ಲಾ ದೊಡ್ಡ ವಿಷಯವಲ್ಲ...


ಅಷ್ಟಕ್ಕೂ ನೀವೆನೂ ಚಟ ಮಾಡಿ, ಜೂಜಾಡಿ ಹಣ ಕಳೆದು ಕೊಂಡಿಲ್ಲವಲ್ಲ...
ಹಣಗಳಿಸದಿದ್ದರೂ..
ನಮ್ಮೊಡನೆ ಜನರಿದ್ದಾರೆ...
ಈ ಸಮಸ್ಯೆಯನ್ನು ನೀವೇ ನಿಭಾಯಿಸಲು ನೋಡಿ...
ಸಾಧ್ಯವಾಗದ್ದಲ್ಲಿ ಹತ್ತಿರದವರ ಸಹಾಯ ಪಡೆಯೋಣ.."


ಅವಳ ಮಾತುಗಳು ನನಗೆ ಸರಿಯಾಗಿ ನಾಟಿದವು...


ನಾನು ಯಾಕೆ ಕಣ್ಣು ತಪ್ಪಿಸಿ,
ಸುಳ್ಳು ಹೇಳುತ್ತ ಇರಬೇಕು...?
ನನಗೇನೂ ಅವರಿಗೆಲ್ಲ ಮೋಸ ಮಾಡುವ ಉದ್ದೇಶವಿಲ್ಲವಲ್ಲ...


ಆಕೆಯ ಸಾಂತ್ವನದ ಮಾತುಗಳು..
ನಾನು ಮಾಡುತ್ತಿದ್ದ ವಿಚಾರ ಸರಣಿಯನ್ನು ಬದಲಿಸಿದವು...
ಉತ್ಸಾಹ ಬಂದು ಬಿಟ್ಟಿತ್ತು....
ಕಷ್ಟಗಳನ್ನೆಲ್ಲ  ಎದುರಿಸುವ ಧೈರ್ಯ ಬಂದುಬಿಟ್ಟಿತ್ತು......


ಬೆಳಗಾಯಿತು...


ಮೊದಲಿಗೆ ಬಂದವರು ಭೈರಪ್ಪನವರು...!


ನಂತರ ಉಳಿದ ಎಂಟೂ ಜನರೂ ಬಂದರು...


ಉಪ್ಪಿಟ್ಟು, ಟೀ ಎಲ್ಲ ಆದಮೇಲೆ ನಾನೇ ಮಾತು ಶುರು ಮಾಡಿದೆ..


"ನೋಡಿ...
ನಾನೊಂದು ಮನೆಕಟ್ಟಿ, ...
ಅದರಲ್ಲಿ ಕೈಸುಟ್ಟು ಕೊಂಡೆ..
ಅದು ಹೇಗೆ, ...
ಯಾರು ಅನ್ನುತ್ತ ಚರ್ಚಿಸುವದರಲ್ಲಿ ಅರ್ಥವಿಲ್ಲ.....

ನಾನು ಎಚ್ಚರಿಕೆಯಲ್ಲಿರಬೇಕಿತ್ತು...
ಇರಲಿ...
ಪರಿಚಯದವರು...., 
ದೊಡ್ಡ ಜನ...ಅಂತ ನಂಬಿದ್ದಕ್ಕೆ ತಕ್ಕ ಶಾಸ್ತಿಯಾಯಿತು...


ನನಗೆ ನಿಮ್ಮ ಹಣ ಮೋಸ ಮಾಡುವ ಉದ್ದೇಶ ಖಂಡಿತ ಇಲ್ಲ...
ನಿಮ್ಮ ಹಣವನ್ನು ಪೈಸೆಗೆ.. ಪೈಸೆ ಎಲ್ಲವನ್ನೂ ಕೊಡುತ್ತೇನೆ..


ಈ ರೀತಿ ಹಣದ ಸಮಸ್ಯೆ ಎದುರಿಸಿದ್ದು ...
ನನ್ನ ಜೀವನದಲ್ಲಿ ಇದೇ ಮೊದಲು...
ಇಂಥಹ ಪರಿಸ್ಥಿಯಲ್ಲಿ ನಾನು ಸ್ವಲ್ಪ ಎದೆಗುಂದಿದೆ...


ಇಂಥಹ ಸಂದರ್ಭವನ್ನು ಎದುರಿಸಲು ನಾನು ಮಾನಸಿಕವಾಗಿ ಸಿದ್ದನಿರಲಿಲ್ಲ...


ಹೇಗೆ ಎದುರಿಸ  ಬೇಕೆಂಬುದೂ... ಗೊತ್ತಾಗಲಿಲ್ಲ...


ನಿಮಗೆಲ್ಲ  ಸುಳ್ಳು ಹೇಳಿದೆ...
ದಯವಿಟ್ಟು  ಕ್ಷಮಿಸಿಬಿಡಿ..


ನನ್ನ ವ್ಯವಹಾರವನ್ನು...
 ನನ್ನ ನಡೆನುಡಿಯನ್ನು ...ಇಲ್ಲಿಯವರೆಗೆ ನೀವು ನೋಡಿದ್ದೀರಿ...
ಪ್ರತಿವಾರ ನಿಮ್ಮಲ್ಲಿಗೆ ಬಂದು ನಾನೇ ನಿಮ್ಮ ಬಿಲ್ ಕ್ಲಿಯರ್ ಮಾಡುತ್ತಿದ್ದೆ...
ಈಗಲೂ...
ನೀವು ಕೊಟ್ಟ ಹಣಕ್ಕೆ ನಾನು ಮೋಸ ಮಾಡುವದಿಲ್ಲ...


ಈಗ ನೀವು ನನಗೆ ಸ್ವಲ್ಪ ಸಹಕಾರ ಕೊಡ ಬೇಕು.."


ನನ್ನ ಮಾತನ್ನು ಆಲಿಸಿದ ಜಲ್ಲಿ ಸಪ್ಲಾಯರ್ ರೆಡ್ಡಿಯವರು...


" ನಿನ್ನ ಮೇಲೆ ನನಗೆ ನಂಬಿಕೆ ಇದೆಯಪ್ಪಾ...
ಆದರೆ ಹೇಗೆ ತೀರಿಸುತ್ತೀಯಾ...?"


ಅವರಿಗೆ ಸುಮಾರು ಎಪ್ಪತ್ತು ವರ್ಷ.... 
ಅವರು ನನ್ನ ಬಳಿ ಮಾತನಾಡುವದೇ... ಹೀಗೆ...


"ಮತ್ತೆ ... ಹೊಸ ಮನೆಕಟ್ಟುವ ಕೆಲಸದ ಮಾತುಕತೆ ನಡೆಯುತ್ತಿದೆ...
ಅವುಗಳಿಗೆ ಮಟೀರಿಯಲ್ಸ್ ನೀವೇ ಕೊಡಿ...
ಕೆಲಸ ಮಾಡುತ್ತ....
ನಿಮ್ಮ ಬಿಲ್ಲನ್ನೂ ತೀರಿಸುವೆ...
ದಯವಿಟ್ಟು ನನ್ನಲ್ಲಿ ನಂಬಿಕೆ ಇಡಿ..."


ಅಷ್ಟರಲ್ಲಿ ನಾಲ್ಕುಜನ ಸಪ್ಲೈದಾರರು ಎದ್ದು ನಿಂತರು...


ನನಗೆ ಹೆದರಿಕೆಯಾಯಿತು.....


" ಹೆಗಡೆಯವರೆ...
ಈ ವಿಷಯವನ್ನು ಫೋನ್‍ನಲ್ಲಾದರೂ ಹೇಳ ಬಹುದಿತ್ತು...
ನಮ್ಮನ್ನು ಇಲ್ಲಿಗೆ ಕರೆಸುವ ಅಗತ್ಯವೇ.. ಇರಲಿಲ್ಲ... 
ನೀವು ಆದಾಗ ಹಣ ಕೊಡಿ..
ಆದರೆ ನಮ್ಮ ಬಿಟ್ಟು ಬೇರೆ ಜನರ ಬಳಿ ಮಟೀರಿಯಲ್ಸ್ ತಗೊ ಬೇಡಿ....
ನಮ್ಮ ಬಳಿಯೇ ವ್ಯವಹಾರ ಮಾಡಿ..
ನಾವು ಬರ್ತೇವೆ.."


ಎಂದು ಎದ್ದು ಹೊರಟರು.....


ನನಗೆ ಅರಿವಿಲ್ಲದೆ  ಕೃತಜ್ಞತೆಯಿಂದ  ಕೈ ಮುಗಿದೆ...


ಕಣ್ಣು ತುಂಬಿ ಬಂದಿತು...ಮಾತು ಬರಲಿಲ್ಲ...



ಅವರ ನಂತರ ಮತ್ತೆ ಮೂವರು ಎದ್ದು ನಿಂತರು...


ಅದರಲ್ಲಿ ಬೈರಪ್ಪನೂ ಇದ್ದ...!
ಅವನೇ ಮಾತಾಡಿದ..


"ಹೆಗಡೆಯವರೆ...
ನನಗೆ ಮಟಿರಿಯಲ್ ಕೊಡಲಿಕ್ಕೆ ಆಗುವದಿಲ್ಲ...
ಆದರೆ...
ಸ್ವಲ್ಪ ದಿನ ತಡೆದುಕೊಳ್ಳ ಬಲ್ಲೆ...
ಬಹಳ ದಿನ ತಡ ಮಾಡ ಬೇಡಿ...ನನಗೂ ಕಷ್ಟ ಇದೆ...
ನಾನೂ ಕೂಡ ನಿಮ್ಮಂತೆ ಹಣ ಇಟ್ಟುಕೊಂಡು ವ್ಯವಹಾರಕ್ಕೆ ಬರಲಿಲ್ಲ..
ಆದಷ್ಟು ಬೇಗ ಕೊಡುವಂತೆ ಮಾಡಿ..."


ಬಾಗಿಲ ತನಕ ಹೋದವನು ಮತ್ತೆ ತಿರುಗಿ ಬಂದ...


" ಹೆಗಡೆಯವರೆ...
ನಿನ್ನೆ ನಾನು ಹೇಳಿದ ಮಾತು ನಿಮಗೆ ನೋವು ಉಂಟು ಮಾಡಿರ ಬಹುದು....
ಮಾತಿನಿಂದ..
ಯಾರು ಹೇಗೆ ? ಏನು ? ಅಂತ ಗೊತ್ತಾಗುವದಿಲ್ಲ..

ದಿನಾ ಬಣ್ಣದ ಮಾತಾಡುವ ಜನರನ್ನು ನೋಡಿ..
ನೀವೂ ಬಣ್ಣದ ಜನ ಅಂದುಕೊಂಡೆ...


ಮುಖ ನೋಡಿದರೆ..
ಮಾತು ಕೇಳಿದರೆ ...
ಮನಸ್ಸು ಗೊತ್ತಾಗುವದಿಲ್ಲವಲ್ಲ...
ಬೇಸರಿಸ ಬೇಡಿ.."


ಭೈರಪ್ಪ ಗಲಾಟೆ ಮಾಡ ಬಹುದು ಅಂದುಕೊಂಡಿದ್ದೆ...


ಭೈರಪ್ಪನವರಿಗೂ ನಾನು ಕೃತಜ್ಞತೆಯಿಂದ ಕೈಮುಗಿದೆ....
ಹೃದಯ ತುಂಬಿ ಬಂದಿತ್ತು...


ಇನ್ನೊಬ್ಬ ಸಪ್ಲೈದಾರ ಎದ್ದುನಿಂತ...


"ನೋಡಿ ಹೆಗಡೇಯವರೆ...
ನನಗೆ ನಿಮ್ಮ ಕಥೆ, ಪುರಾಣ ಕೇಳಲು ಪುರುಸೊತ್ತಿಲ್ಲ..
ಅದರ ಅಗತ್ಯವೂ ನನಗಿಲ್ಲ...
ನಾನು ಮಟೀರಿಯಲ್ ಕೊಟ್ಟಿದ್ದೇನೆ..
ನನ್ನ ಹಣ ನನಗೆ ಬರಬೇಕು...
ನಾಡಿದ್ದು ಸಾಯಂಕಾಲದ ಒಳಗೆ ನನಗೆ ನನ್ನ ಹಣ ಬಂದುಬಿಡಬೇಕು..."



ಬಹಳ ಖಡಕ್ಕಾದ ಧ್ವನಿಯಲ್ಲಿ ಹೇಳಿದರು...


" ಆಯಿತು...
ನಾನು ವ್ಯವಸ್ಥೆ ಮಾಡುತ್ತೇನೆ.."


ನಾನು ಮತ್ತೇನೂ ಹೇಳಲಿಲ್ಲ...
ಅವರು ಧಡ ಧಡನೆ ಎದ್ದು ಹೋದರು....


ರೆಡ್ಡಿಯವರು ಇನ್ನೂ ಕುಳಿತೇ ಇದ್ದರು...


"ಇಲ್ಲಿ ಬಾಪ್ಪಾ.... ಕುತ್ಗೊ..."
ಪಕ್ಕಕ್ಕೆ ಕುಳಿಸಿಕೊಂಡರು...


"ಎಲ್ಲರಿಗೂ ಒಟ್ಟೂ ಎಷ್ಟು ಹಣ ಕೊಡುವದಿದೆ...?"


"ಸುಮಾರು ಮೂರು ಲಕ್ಷ"


ಅವರು ತಮ್ಮ ಕಿಸೆಯಿಂದ ಚೆಕ್ ತೆಗೆದು ಸಹಿ ಹಾಕಿ ಹೇಳಿದರು...


"ತಗೊಪ್ಪಾ...
ಇದರಲ್ಲಿ ಮೂರು ಲಕ್ಷ ಬರೆದಿದ್ದೇನೆ...
ವ್ಯವಹಾರದಲ್ಲಿ ಇದೆಲ್ಲ ಇದ್ದದ್ದೇ...


ವ್ಯವಹಾರದಲ್ಲಿ ಒಳ್ಳೆಯವರಾಗಿದ್ರೆ ಸಾಲದು...
ಚಾಲಾಕಿತನವೂ ಇರಬೇಕು...
ನೀನು ಮೋಸ ಮಾಡ ಬೇಡ... ಹಾಗೆಯೇ ಮೋಸ ಹೋಗಲೂ ಬೇಡ..


ಜಗತ್ತಿನಲ್ಲಿ ಕೆಟ್ಟವರು ಕಡಿಮೆ ಇರ್ತಾರೆ...
ನಮ್ಮ ಜೀವನದಲ್ಲೂ ಕೆಟ್ಟದ್ದು ಕಡಿಮೆ ಆಗಿರ್ತದೆ..


ಆದರೆ ನಾವು ಕೆಟ್ಟವರನ್ನ, ಕೆಟ್ಟದ್ದನ್ನ ಮರೆಯದೆ...
ಅದನ್ನೇ ದೊಡ್ಡದಾಗಿ ಸಾಯೋತನಕ ಹೇಳ್ತಾ ಇರ್ತೇವೆ...


ನೀನು ಈ ಮೋಸವನ್ನ ಮರಿಬೇಡ..
ಹಾಗೆ ಒಳ್ಳೆತನವನ್ನೂ ಬಿಡ ಬೇಡ... ತಗೊ ಈ... ಚೆಕ್.."


ನನಗೆ ಏನು ಹೇಳ ಬೇಕೆಂದು ಗೊತ್ತಾಗಲಿಲ್ಲ...

ಅವರ ಅಂತಃಕರಣಕ್ಕೆ.. ವಿಶ್ವಾಸಕ್ಕೆ ತುಂಬಾ ಭಾವುಕನಾಗಿಬಿಟ್ಟೆ...

ಮಾತಾಡಲು ಶಬ್ಧಗಳು ಸಿಗುತ್ತಿಲ್ಲ...


ಸಂಬಂಧ ವ್ಯವಹಾರಿಕವಾಗಿದ್ದರೂ....
ಅವರ ವಿಶ್ವಾಸಕ್ಕೆ, ಆತ್ಮೀಯತೆಗೆ ಮೂಕನಾಗಿಬಿಟ್ಟೆ....

ಒಳ್ಳೆಯತನಕ್ಕೆ ಯಾವ ಜಾತಿ..?

ಯಾವ ಭಾಷೆ...?
ಯಾರು ಬಂಧುಗಳು...?

ಯಾರು ಸ್ನೇಹಿತರು...?


ಅಷ್ಟಕ್ಕೂ .....
ನನಗೂ ಇವರಿಗೂ ಏನು ಸಂಬಂಧ...?
ನಮ್ಮವರು ಅನ್ನುವವರೇ ನಡುದಾರಿಯಲ್ಲಿ ಕೈ ಕೊಟ್ಟಾಗ ...
ಬಂಡೆಗಲ್ಲಿನಂತೆ ಬಂದು ನಿಲ್ಲುವ ಇವರು ಯಾರು....?

ಮಾತು ಆಡಲಾಗುತ್ತಿಲ್ಲ...
ಕಣ್ಣು ತುಂಬಿ ಬಂದಿತ್ತು......


ಏನಾದರೂ ಹೇಳಲೇ ಬೇಕಿತ್ತು...


" ಸರ್...
ನನಗೆ ಅವಶ್ಯ ಬಿದ್ದರೆ ನಿಮ್ಮ ಬಳಿ ಕೇಳುತ್ತೇನೆ...
ಈ ತೊಂದರೆಯನ್ನು ನಾನೇ ನಿಭಾಯಿಸಲು ಪ್ರಯತ್ನಿಸುತ್ತೇನೆ...
ನೀವು ಆಶೀರ್ವಾದ ಮಾಡಿ......"


ಎಂದು ಅವರಿಗೆ ಬಗ್ಗಿ ನಮಸ್ಕರಿಸಿದೆ...


ಅವರಿಗೂ ಹೆಚ್ಚು ಮಾತನಾಡಲಾಗಲ್ಲ...


ಮುಂದೆ ನನಗೆ ಹಣದ ಅವಶ್ಯಕತೆ ಬಂದಿತ್ತು...
ಆದರೆ ರೆಡ್ಡಿಯವರ ಬಳಿ ಕೇಳುವ ಪರಿಸ್ಥಿತಿ ಬರಲಿಲ್ಲ...


ಅದಕ್ಕೆ ಕಾರಣ ನನ್ನ ಆತ್ಮೀಯ ಗೆಳೆಯ "ಸತ್ಯ..."


ಬದುಕಿನ ಏರಿಳುವಿನಲ್ಲಿ ನನ್ನ ಜೊತೆಯಿರುವ ಆ ಸ್ನೇಹಿತನ ಬಗೆಗೆ ನಿಮಗೆ ಹೇಳಲೇ ಬೇಕು...


ಇದ್ದರೆ ಇರಬೇಕು ಇಂಥಹ ಗೆಳೆಯ..!



{ಊರಿಗೆ ಹೋಗಿಬಿಟ್ಟಿದ್ದೆ...
ಲೇಖನ ಹಾಕಲಿಕ್ಕೆ ತಡ ಆಯಿತು...
ಬಹಳಷ್ಟು ವಿಷಯ ಹೊತ್ತು ತಂದಿದ್ದೇನೆ...
ಎಲ್ಲವನ್ನೂ..
ಒಂದೊಂದಾಗಿ ಬರೆಯುವೆ...}

Thursday, October 1, 2009

ರಾತ್ರಿಯ ಕತ್ತಲು ಕಂಡರೆ ದುಃಖಕ್ಕೆ ಸಮಾಧಾನ...!


part...2


ಭೈರಪ್ಪ ಬೆಳಿಗ್ಗೆ ಮನೆ ಬಳಿ ಬಂದು ....
ಕೂಗಾಡುವ ದೃಶ್ಯ ಕಣ್ಣೆದುರಿಗೆ ಬಂತು...

ಅಕ್ಕಪಕ್ಕದ ಜನ...
ನನ್ನ ಸಂಬಂಧಿಕರು...

ಪಕ್ಕದ ಮನೆಯ ಸ್ನೇಹಿತ ಕಾಮತ್...!
ಅವರ ಮನೆಯವರು...!

ಇದೆನ್ನೆಲ್ಲ ನೋಡಿ ಅಳುತ್ತಿರುವ ನನ್ನಾಕೆ..


ಗಲಾಟೆಯನ್ನು ನೋಡಿ ಮಾತಾಡದೆ ನಿಲ್ಲುವ...
ಏನೂ ಅರಿಯದ ನನ್ನ ಕಂದ....

ನಾಚಿಕೆ.., ಅಪಮಾನ...ನಾನು ಮಾಡಿಲ್ಲ ತಪ್ಪಿಗೆ...!

ಮನೆಗೆ ಬಂದೆ...

ನನ್ನಾಕೆಯ ನಡತೆಯಲ್ಲಿ ಏನೋ ವ್ಯತ್ಯಾಸ...!!
ಅನುಮಾನ ಬಂದಿರ ಬಹುದಾ...?

ನನ್ನಾಕೆಯ ಮುಖ ನೋಡಿದೆ...

"ಜೀವನ ಪೂರ್ತಿ ನನ್ನನ್ನೇ... ನಂಬಿ ಬಂದವಳನ್ನು ...
ಮಧ್ಯ ದಾರಿಯಲ್ಲಿ...ಬಿಟ್ಟುಹೋಗಬೇಕಾಯಿತಲ್ಲ...

ಅದೂ... ಸಾಲದ ಹೊರೆ ಹೊರಿಸಿ...!
ಮುಂದೆ ಹೇಗೆ ನಿಭಾಯಿಸ ಬಹುದು...?

ಮಗನ ವಿದ್ಯಾಭ್ಯಾಸ...??

ಎಲ್ಲ ಸಮಸ್ಯೆಗಳನ್ನು.. ಒಂಟಿಯಾಗಿ ಹೇಗೆ ಎದುರಿಸ ಬಹುದು...?

ನಾನು ತಪ್ಪು ಮಾಡುತ್ತಿದ್ದೇನೆ... ಅನಿಸತೊಡಗಿತು...
ಅವಳನ್ನು ನೋಡುವ ಧೈರ್ಯ ನನ್ನಲ್ಲಿರಲಿಲ್ಲ..


ಆ ಸಮಯದಲ್ಲಿ. ಪರಿಸ್ಥಿತಿಯಲ್ಲಿ ....
ತಪ್ಪು ಮಾಡುತ್ತಿದ್ದೇನೆ ಎನ್ನುವ ಅಪರಾಧಿ ಮನೋಭಾವವಿದ್ದರೂ... 
ಬೇರೆ ಮಾರ್ಗವಿಲ್ಲವಾಗಿತ್ತು...
 ಮಡದಿ ಮುಂದೇನು ಮಾಡ ಬಹುದು ಎನ್ನುವದರ ಬಗೆಗೆ ತಲೆ ಕೆಡಿಸಿಕೊಳ್ಳುವಷ್ಟು  ವ್ಯವಧಾನವಿರಲಿಲ್ಲ... 
ಸಿಕ್ಕಾಪಟ್ಟೆ ಇನ್ಸುರೆನ್ಸ್ ಪಾಲಿಸಿ ಮಾಡಿಸಿ "ಅಪಘಾತದ" ಥರಹ ಸತ್ತುಬಿಟ್ಟರೆ...?

ಒಹ್.... ಇದೇ ಸರಿ...!



ನಾಳೆಯ ಬೆಳಗನ್ನು ನೋಡದಿರುವದೇ ಉತ್ತಮ...


ಹೇಗೆ...?

ವಿಷ....!
ವಿಷ ಕುಡಿದುಬಿಡುವದು...!

ಮನೆಗೆ ಬಂದು ಹೆಂಡತಿ ಮಗನನ್ನು ಬಿಟ್ಟವನೇ..
ಹೊಸಕೆರೆ ಹಳ್ಳಿಯ ಸರ್ಕಲ್ ಕಡೆ ಹೋದೆ..
ಅಲ್ಲೊಬ್ಬ ಹೆಗ್ಗಣ, ಇಲಿಗಳಿಗೆ ವಿಷ ಕೊಡುತ್ತಿದ್ದ...

ಒಂದು ಬಾಟಲಿಯನ್ನು ತಂದೆ...

ಈ ವಿಷ ನಕಲಿಯಾಗಿದ್ದು ಸರಿಯಾಗಿ ಕೆಲಸ ಮಾಡದಿದ್ದಲ್ಲಿ...?

ಎರಡನೆಯ ಮಾರ್ಗ  ಇರಲೇ ಬೇಕಿತ್ತು....

ನಿದ್ದೆ ಗಳಿಗೆ...!
ವಿಷ ಕುಡಿದು.. ನಿದ್ದೆ ಗುಳಿಗೆ ನುಂಗಿದರಾಯಿತು...!

ನಿದ್ದೆಗುಳಿಗೆ ಎಲ್ಲಿ, ಹೇಗೆ ಪಡೆಯುವದು...?

ಮನೆಗೆ ಬಂದು ಮಲಗುವ ಹಾಸಿಗೆಯ ಕೆಳಗೆ ಬಾಟಲಿಯನ್ನು ಬಚ್ಚಿಟ್ಟೆ...

ಶೆಟ್ಟರ ಮೆಡಿಕಲ್ ಶಾಪಿಗೆ ಬಂದೆ..
ಅವರು ನಾಲ್ಕು ವರ್ಷದಿಂದ ಪರಿಚಯ...

"ಶೆಟ್ರೆ..

ನಮ್ಮ ಪರಿಚಯದವರೊಬ್ಬರು ಊರಿಂದ ಬಂದಿದ್ದಾರೆ..
ಅವರಿಗೆ ನಿದ್ದೆ  ಮಾತ್ರೆ  ಇಲ್ಲದೆ ಮಲಗೊ ಅಭ್ಯಾಸ ಇಲ್ಲ..
ದಯವಿಟ್ಟು ನಿದ್ದೆ ಮಾತ್ರೆ  ಕೊಡಿ..."

ಅವರು ನಯವಾಗಿ ನಿರಾಕರಿಸಿದರು...

" ಹೆಗಡೆಯವರೇ... ಹಾಗಲ್ಲ ಕೊಡಬಾರದು"

ನಾನು ಪರಿಪರಿಯಾಗಿ ಬೇಡಿಕೊಂಡಿದ್ದರಿಂದ...
ಬಹಳ ಪರಿಚಯ ಇದ್ದುದರಿಂದ...
ಎಂಟು ಗುಳಿಗೆ ಕೊಟ್ಟರು...

ಮನಸ್ಸೆಲ್ಲ ಗೊಂದಲದ ಗೂಡಾಗಿತ್ತು...
ಊಟವೂ  ಸರಿಯಾಗಿ ಸೇರಲಿಲ್ಲ...
ಮುದ್ದಿನ ಮಗ ಮಲಗಲು ಕರೆದ...
ದಿನದ ಅಭ್ಯಾಸದಂತೆ ....

"ಅಪ್ಪಾ ... ನನಗೆ ಕಥೆ ಹೇಳು..."

ನನ್ನ ಮಗನಿಗೆ ನಾನು ಕಥೆ ಹೇಳಿ ಮಲಗಿಸುವ ಅಭ್ಯಾಸ...

ಅವನನ್ನು ಮಲಗಿಸಿ ಹೇಳಿದೆ


" ಪುಟ್ಟಾ...
ಇವತ್ತು ನನಗೆ ಕಥೆ ನೆನಪಾಗುತ್ತಿಲ್ಲ...
ನನ್ನ ಮನಸ್ಸು ಸರಿಯಾಗಿಲ್ಲ...
ನಾಳೆ
ಹೇಳುತ್ತೀನಿ ಕಣೊ...

ರಾಜಾ....
ಇವತ್ತು... ನನ್ನ ಕೈ ಹಿಡಿದುಕೊಂಡು ಮಲಗು..."

"ಅಪ್ಪಾ...
ನಿನಗೆ ಹಣದ ತೊಂದರೆ ಇದೆಯಂತೆ ಹೌದಾ..?

ನಾನು ಇನ್ಮೇಲೆ ಸಿನೇಮಾ , ಹಣ್ಣು ...ಅಂತೆಲ್ಲ ಖರ್ಚು ಮಾಡಿಸೋದಿಲ್ಲಪ್ಪ...
ಅಮ್ಮ ನನಗೆಲ್ಲ ಹೇಳಿದ್ದಾಳೆ..
ನಾನು ಗುಡ್ ಬಾಯ್ ಆಗ್ತಿನಪ್ಪಾ...
ನಿಂಗೊಂದು ಒಳ್ಳೇ ಕೆಲಸ ಸಿಕ್ಕಮೇಲೆ ಸಿನೆಮಾ  ತೋರಿಸು...
ನೀನು ತುಂಬಾ... ತುಂಬಾ ಹಣ ಮಾಡಿಕೊ...
ಅಲ್ಲಿವರೆಗೆ ನನಗೆ ಏನೂ ಬೇಡಪ್ಪಾ..
ಇವತ್ತು ನಿನಗೆ ತೊಂದರೆ ...ಆಯ್ತಾ...  ಅಪ್ಪಾ...?"



ನನ್ನ  ಕಂದನಿಗೆ  ಏನಂತ ಹೇಳಲಿ...?



ನನಗೆ ಮಾತಾಡಲು ಆಗಲಿಲ್ಲ... ಗಂಟಲು ಉಬ್ಬಿ ಬಂತು...


ನನ್ನಲ್ಲಿ ಶಬ್ಧಗಳಿಲ್ಲವಾಗಿತ್ತು...

ಅವನನ್ನು ಅಲ್ಲೇ ಬಿಗಿದಪ್ಪಿದೆ...

ಇದೇ.. ನನ್ನ ಕೊನೆಯ  ಅಪ್ಪುಗೆಯಾ?

ಆತ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದ...



ನಾಳೆ ಬೆಳಗಾದರೆ...
ಭೈರಪ್ಪನನ್ನು ..
ಆತನ ಜನರನ್ನು ಹೇಗೆ ಎದುರಿಸುವದು...?
ಏನು ಹೇಳಲಿ...? ಏನು ಉತ್ತರ ಕೊಡಲಿ...?


ಅಷ್ಟರಲ್ಲಿ ನನ್ನಾಕೆ ಬಂದಳು...

"ಸ್ವಲ್ಪ .... ಹಾಲಿಗೆ ಬನ್ನಿ.. ನಿಮ್ಮ ಬಳಿ ಮಾತನಾಡ ಬೇಕು.."

ಹಾಲಿಗೆ ಬಂದೆ...
ಹಾಲಲ್ಲಿ ಕತ್ತಲೆ ಇತ್ತು.... ಲೈಟ್ ಹಾಕಲಿಲ್ಲ...

ಆ ಸನ್ನಿವೇಶಕ್ಕೆ ಬೆಳಕು ಬೇಕಿರಲಿಲ್ಲ....


ಮಾತೂ ಬೇಕಿರಲಿಲ್ಲ.....


"ನೋಡಿ...
ನೀವು ವಿಷದ ಬಾಟಲು ತಂದಿದ್ದು ನನಗೆ ಗೊತ್ತಾಗಿದೆ...
ಯಾಕೆ ಧೈರ್ಯ ಕಳೆದು ಕೊಂಡು ಬಿಟ್ಟಿರಿ..?

ನೀವೇನೂ ತಪ್ಪು ಮಾಡಿಲ್ಲವಲ್ಲ...
ಏನೇ ಬಂದರೂ ಧೈರ್ಯವಾಗಿ ಎದುರಿಸೋಣ...


ತೀರಾ ಕಷ್ಟ ಎನಿಸಿದರೆ ಎಲ್ಲರೂ ಒಟ್ಟಿಗೆ ಹೋಗೋಣ...!


ನಾವು ನಂಬಿ ಮೋಸ ಹೋದೆವು...
ನಿಜ...
ಸ್ವಲ್ಪ ತಾಳ್ಮೆ ತಂದು ಕೊಳ್ಳಿ...

ನಾವೆಲ್ಲ ಒಂದಾಗಿ ಎದುರಿಸೋಣ...
ನಮ್ಮ ಸಂಗಡ ನ್ಯಾಯ ಇದೆ.....

ನಂಬಿದ  ದೇವರಿದ್ದಾನೆ.."

ನನಗೆ ದುಃಖ ತಡೆಯಲಾಗಲಿಲ್ಲ...
ಇಬ್ಬರಿಗೂ ದುಃಖ ಒತ್ತರಿಸಿ ಬಂತು....

ರಾತ್ರಿಯ ಕತ್ತಲು ಕಂಡರೆ.... ದುಃಖಕ್ಕೆ ಸಮಾಧಾನ...!

ಆ ಕತ್ತಲಲ್ಲೇ ಇಬ್ಬರೂ..ಅತ್ತೆವು...


ಸ್ವಲ್ಪ ಹೊತ್ತು ....
ಸಮಾಧಾನವಾದನಂತರ ಒಂದು ದೃಢ ನಿರ್ಧಾರ ಮಾಡಿದೆ..

ಬದುಕನ್ನು... ಬದುಕಿ...ಗೆಲ್ಲ ಬೇಕು....

ಕಾಣದ ಸಾವಿಗಿಂತ ....
ಎದುರಿಗಿರುವ ..ಬದುಕು ದೊಡ್ಡದು.....


ಬೆಳಕು ಬೆತ್ತಲೆ ಮಾಡಿಬಿಡುತ್ತದೆ.....
ದುಃಖ ತಪ್ತ ಮನಸ್ಸು ಕತ್ತಲೆಯನ್ನು ಬಯಸುತ್ತದೆ...

ಕತ್ತಲು ಕೊಡುವ ಸಮಾಧಾನ..
ಸಾಂತ್ವನ...
ಬೆಳಕು ಕೊಡಲಾರದು....



ಇಂಥಹ ಚಂದದ ಸಂಸಾರ...
ಹೆಂಡತಿ.. ಮಗನನ್ನು... ಬಿಟ್ಟು ಹೋಗಬಾರದು.....
ನನ್ನಿಂದ ಎಂಥಹ ಪ್ರಮಾದವಾಗಿಬಿದುತ್ತಿತ್ತು !!


ಛೇ...


ಯಾಕೋ ಎಲ್ಲಿಲ್ಲದ ಆತ್ಮವಿಶ್ವಾಸ  ನನ್ನಲ್ಲಿ ಬಂದಿತ್ತು...


ಇಟ್ಟಿಗೆ ಕೊಟ್ಟ  ಭೈರಪ್ಪನವರಿಗೆ ನಾನೇ ... ಫೋನ್ ಮಾಡಿದೆ...


" ಭೈರಪ್ಪನವರೆ....
ನೀವು ನಾಳೆ ಹತ್ತು ಗಂಟೆಗೆ ನಮ್ಮನೆಗೆ ದಯವಿಟ್ಟು ಬರಬೇಕು...
ನಿಮಗೆ ಇಷ್ಟು ದಿನ ಸುಳ್ಳು ಹೇಳಿ ತಪ್ಪಿಸಿ ಕೊಂಡಿದ್ದಕ್ಕೆ ...
ಕ್ಷಮಿಸಿ ಬಿಡಿ....

ನಿಮ್ಮ ಬಳಿ ಮಾತನಾಡಬೇಕು...
ನಾನು ಮನೆಯಲ್ಲೇ ಇರುತ್ತೇನೆ...

ದಯವಿಟ್ಟು ಬನ್ನಿ.."


ಅವರು ...ಬರುತ್ತೇನೆಂದರು...


ನಾನು ಒಟ್ಟೂ .. " ಒಂಬತ್ತು" ಜನರಿಗೆ ಹಣ ಕೊಡಬೇಕಾಗಿತ್ತು...

ಅವರೆಲ್ಲರಿಗೂ.... ಬೆಳಿಗ್ಗೆ ಹತ್ತು ಗಂಟೆಗೆ ಬರಲು ಹೇಳಿದೆ....

ರಾತ್ರಿ ನಿದ್ದೆ ಬರದಿದ್ದರೂ...
ರಾತ್ರಿ ಬಹಳ ಉದ್ದವಾಗಿದೆ ಅನಿಸಿದರೂ...

ಹೊಸ...
ಬೆಳಗಿಗಾಗಿ....
ಹೊಸ ಬೆಳಕಿಗಾಗಿ...ಕಾಯತೊಡಗಿದೆ.....



( ದಯವಿಟ್ಟು ಇದರ ಹಿಂದಿನ ಲೇಖನ ಓದಿ...)


(ಇದು ಯಾವುದೇ ವ್ಯಕ್ತಿ ದೂಷಣೆಗಾಗಿ ಅಲ್ಲ...
ಯಾವುದೇ ಸಂದರ್ಭದಲ್ಲಿ ದುಡುಕಿನ ನಿರ್ಧಾರ ತೆಗೆದು ಕೊಳ್ಳ ಬಾರದು..
ಇದು ಇದರ ಉದ್ದೇಶ...)