Wednesday, July 31, 2013

ಕನ್ನಡಿ ...

ಬಹಳ ಲೆಕ್ಕಾಚಾರ ಹಾಕಿ..
ಬುದ್ಧಿವಂತಿಕೆಯಿಂದ ಈ ಕೆಲಸ ಮಾಡಿದ್ದೆ...

ಸಿಕ್ಕಿಕೊಳ್ಳುವದಿಲ್ಲ ಎನ್ನುವ ಭರವಸೆ ನನಗಿತ್ತು..


ನನ್ನಪ್ಪ ನನಗಿಂತ ಬುದ್ಧಿವಂತ..


ನಾನು ಬರೆದ ಪತ್ರ ಅವನಿಗೆ ಸಿಕ್ಕಿಬಿಟ್ಟಿತು...


" ಮಗನೆ..

ಈ ಜಗತ್ತಿನಲ್ಲಿ..
ಆಸೆ... ಬಯಕೆ ಸಹಜ...

ಬಯಸಿದ್ದನ್ನು  ಪಡೆಯುವದು..

ಪಡೆದದ್ದನ್ನು
ಸಂಭಾಳಿಸಿಕೊಂಡು  ಬದುಕಿನುದ್ದಕ್ಕೂ ನಡೆಸಿಕೊಂಡು ಹೋಗುವದಕ್ಕೆ..
ಒಂದು ಯೋಗ್ಯತೆ...
ಅರ್ಹತೆ ಅಂತ ಇರುತ್ತದೆ...

ಅದು ನಮಗೆ ಇದೆಯಾ ?..


ನಮಗೆ ಯೋಗ್ಯತೆ.. 

ಅರ್ಹತೆ ಇದೆ ಅಂತ ನಾವು ಅಂದುಕೊಳ್ಳುತ್ತೇವೆ..
ಈ ಜಗತ್ತು.. 
ನಮ್ಮ ಯೋಗ್ಯತೆಯನ್ನು ಅಳೆಯುವ ಮಾನದಂಡವೇ ಬೇರೆ... 

ನಾವು ಎಲ್ಲಿ ನಿಂತಿದ್ದೇವೆ ಎನ್ನುವದು ಬಹಳ ಮುಖ್ಯ.. 


ಸೂಕ್ಷ್ಮವಾಗಿ ನಿನಗೆ ಹೇಳಿದ್ದೇನೆ...


ಅರ್ಥ ಮಾಡಿಕೊ...


ನಮ್ಮ ಯೋಗ್ಯತೆಯನ್ನು ...

ನಾವು ತಿಳಿದುಕೊಂಡರೆ ..
ಮುಂದೆ ದುಃಖ ಪಡುವ ಸಂದರ್ಭ ಬರುವದಿಲ್ಲ..."

ಅಪ್ಪ..

ಎಂದಿನಂತೆ ತನ್ನ ಅನುಭವದ ವೇದಾಂತವನ್ನು ಕೊರೆದ..

ಮತ್ತೇನಿಲ್ಲ..


ನನ್ನ ಕ್ಲಾಸಿನ ಹುಡುಗಿಯೊಬ್ಬಳನ್ನು ನನ್ನಷ್ಟಕ್ಕೆ ನಾನು ಪ್ರೀತಿಸತೊಡಗಿದ್ದೆ...


ಚೂಪು ಮೂಗಿನ..

ಬಟ್ಟಲುಗಣ್ಣಿನ...
ಆ ಹುಡುಗಿಯ ಗಲ್ಲ ನನಗೆ ಬಲು ಇಷ್ಟ...

ಅವಳು ಮಾತನಾಡುವಾಗ ಅವಳ ತುಟಿಗಳನ್ನೇ ಗಮನಿಸುತ್ತಿದ್ದೆ...


ಮೊದಲೆ ಮುದ್ದು ಮುದ್ದಾಗಿದ್ದಳು..

ಮಾತನಾಡುವಾಗ ಮತ್ತಷ್ಟು ಚಂದ ಕಾಣುತ್ತಿದ್ದಳು...

ನಾನು ಅವಳಿಗೆ ತುಂಬಾ ಸಹಾಯ ಮಾಡುತ್ತಿದ್ದೆ..


ಅವಳ ಪ್ರಾಕ್ಟಿಕಲ್ ಜರ್ನಲ್ಲುಗಳನ್ನು..

ಅದರ ರೇಖಾಚಿತ್ರಗಳನ್ನು ನಾನೆ ಬರೆದುಕೊಡುತ್ತಿದ್ದೆ...

ನನ್ನ ಮುದ್ದಾದ ಅಕ್ಷರಗಳನ್ನು ಯಾವಾಗಲೂ ಹೊಗಳುತ್ತಿದ್ದಳು...


ನನ್ನಮ್ಮ ಮಾಡಿದ ತಿಂಡಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದಳು...


ಕಾಲೇಜು ಬಿಟ್ಟು ಮನೆಗೆ ಬಂದರೂ..

ಅವಳ ಫೋನ್ ಬರುತ್ತಿತ್ತು..
ಕಾಲೇಜಿನ ಅವಳ ಅಭ್ಯಾಸದಲ್ಲಿ ನಾನು ಇರಬೇಕಾಗಿತ್ತು.... 
ನನ್ನನ್ನು ಬಹಳ ಅವಲಂಬಿಸಿದ್ದಳು... .

ಅವಳ ಮನೆಯವರೂ ಸಹ ನಮ್ಮಿಬ್ಬರ ಸ್ನೇಹಕ್ಕೆ ಏನೂ ಹೇಳುತ್ತಿರಲಿಲ್ಲ...


ನನ್ನ ..

ಪ್ರೀತಿಯನ್ನು ಅವಳಿಗೆ ಹೇಗೆ ಹೇಳುವದು ?

ಅಂದು ..

ನಮ್ಮ ಕಾಲೇಜಿನ ಕೊನೆಯ ದಿನ...

ನಾವಿಬ್ಬರೇ ಬರುತ್ತಿದ್ದೆವು...


ಎದೆಯಲ್ಲಿ ಢವ... ಢವ... ನಗಾರಿಯ ಶಬ್ಧ... !


"ಹುಡುಗಿ...


ಒಂದು ಮಾತು ಹೇಳ್ತೀನಿ...

ಬೇಸರ ಮಾಡ್ಕೊ ಬಾರದು.. ಕೋಪ ಮಾಡ್ಕೊ ಬಾರದು..."

"ಹೇಳು ಹುಡುಗಾ...

ನಿನ್ನನ್ನು ದೇವರಷ್ಟು ನಂಬುತ್ತೇನೆ.. ಹೇಳು.."

"ಏನಿಲ್ಲ.. 

ಏನಿಲ್ಲ..."... 

ಈ ಹೃದಯವೇ ಹೀಗೆ..

ಆಸೆಗಳನ್ನು  ಹುಟ್ಟಿಸಿ.. 
ಅವುಗಳನ್ನು  ಹೇಳಿಕೊಳ್ಳುವಾಗ ಕೈ ಕೊಡುತ್ತದೆ...

ಅದರೂ ಧೈರ್ಯ ಮಾಡಿದೆ.. .


"ಹುಡುಗಿ..

ನಿನ್ನನ್ನು ನಾನು ತುಂಬಾ.. ತುಂಬಾ ಪ್ರೀತಿಸ್ತಾ ಇದ್ದೀನಿ...
ನೀನು ಶ್ರೀಮಂತೆ..
ನಾನು ಮಧ್ಯಮವರ್ಗದವ...

ಅಂತರ.. 

ಅಂತಸ್ತು..
ಆಂತರ್ಯದ ಪ್ರೀತಿಗೆ ಆಗತ್ಯವಿಲ್ಲ ಅಂತ ನನ್ನ ಭಾವನೆ..."

ಹುಡುಗಿ ಅಪ್ರತಿಭಳಾದಳು...


ಸ್ವಲ್ಪ ಹೊತ್ತು ಸುಮ್ಮನಿದ್ದಳು...


"ಹುಡುಗಾ...

ನಾನು.. ನೀನು ಇಬ್ಬರೂ ಒಳ್ಳೆಯ ಸ್ನೇಹಿತರು..
ಹಾಗಾಗಿ ನೇರವಾಗಿ ಹೇಳುತ್ತೇನೆ...
ಬೇಸರ ಮಾಡ್ಕೋಬೇಡ...

ನಿನ್ನ ಮುಖವನ್ನು 

ನೀನು  ಯಾವತ್ತಾದರೂ ನೋಡಿಕೊಂಡಿದ್ದೀಯಾ...?

ನಿನ್ನ ಕನ್ನಡಿ .. 

ನಿನಗೆ ಸತ್ಯ ಹೇಳುವದಿಲ್ಲವಾ ?

ನಿನ್ನ 

ದೊಡ್ಡ ಮೂಗು..
ದೊಡ್ಡದಾದ ಹೊಳ್ಳೆಗಳು...
ದಪ್ಪ ತುಟಿಗಳು.. 
ಮುಖದ ಮೇಲಿನ ಕಪ್ಪು ಕಲೆಗಳು.. 
ಎಷ್ಟು ಅಸಹ್ಯವಾಗಿದೆ ಗೊತ್ತಾ ?.. 

ನಾನು ಚಂದ ಇದ್ದೇನೆ... 

ಅಂತ ಅಲ್ವಾ  ನೀನು ನನ್ನನ್ನು ಇಷ್ಟ ಪಡ್ತಿರೋದು ?

ನನಗೂ ಒಂದು ಮನಸ್ಸಿದೆ..

ಆ ಮನಸ್ಸು ಚಂದ ಬಯಸುತ್ತದೆ .. 
ಎನ್ನುವ ಸಾಮಾನ್ಯ  ಜ್ಞಾನ ಬೇಡವಾ ನಿನಗೆ ?

ಹೋಗಲಿ ಬಿಡು...


ನನ್ನ ಶ್ರೀಮಂತಿಕೆ ನಿನಗೆ ಗೊತ್ತಲ್ವಾ?

ನಾನು ಬಳಸುವ ಕ್ರೀಮುಗಳ ಬೆಲೆಯಲ್ಲಿ ... 
ನಿಮ್ಮ ಮನೆಯವರ ತಿಂಗಳ ಜೀವನ ನಡೆಯುತ್ತದೆ..."

ನನಗೆ ಬಹಳ ದುಃಖವಾಯಿತು...

ತಲೆ ತಗ್ಗಿಸಿದ್ದೆ..

" ನನ್ನ ಮನೆಯವರು ..

ನನ್ನನ್ನು ನಿನ್ನೊಡನೆ ... 
ಯಾಕೆ ಹೀಗೆ ಸಲುಗೆಯಿಂದ ಇರಲಿಕ್ಕೆ ಬಿಟ್ಟಿದ್ದಾರೆ ಗೊತ್ತಾ ?

ನಿನ್ನ ಕುರೂಪ... !


ನಿನ್ನ ಕುರೂಪವನ್ನು .. 

ನಾನು ಇಷ್ಟಪಡಲಾರೆ ಎನ್ನುವ ಭರವಸೆ ಅವರಿಗೆ ಇದೆ...

ಹುಡುಗಾ...

ಕುರೂಪದಷ್ಟು ಅಸಹ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ..."

ನಾನು ಕುಸಿದು ಹೋದೆ...


ಈ ಜಗತ್ತಿನ ... 

ಕರಾಳ ಸ್ವರೂಪ ನನ್ನ ಕಣ್ಣೆದುರಿಗೆ ಅಸಹ್ಯವಾಗಿ ಅಣಕಿಸುತ್ತಿತ್ತು....

ಕುರೂಪ ನನ್ನ ತಪ್ಪಾ?


ಸೌಂದರ್ಯ 

ಇಲ್ಲದ ಮೇಲೆ... 
ಪ್ರೀತಿಸುವ ಹೃದಯ ಯಾಕೆ ?... 

ಜೋರಾಗಿ ರೋಧಿಸಿದೆ...

ಅತ್ತೆ...

ಆ ಹುಡುಗಿಯ ..

ಬಟ್ಟಲುಗಣ್ಣು..
ಮುದ್ದಾದ ಗಲ್ಲ ನಾನು ಮರೆಯಲಾರದೆ ಹೋದೆ...

" ಹುಡುಗಾ..

ನನ್ನ ಬಗೆಗೆ ಬೇಸರ ಬೇಡ..
ನಿನ್ನನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ..

ಇಂದಲ್ಲ..

ನಾಳೆ.. 
ನಿನಗೆ ಈ  ಕಹಿ ಸತ್ಯವನ್ನು ಯಾರಾದರೂ ಹೇಳಲೇ ಬೇಕಿತ್ತು.. 
ನಾನು ಹೇಳಿದೆ..
ದಯವಿಟ್ಟು ಬೇಸರ ಬೇಡ.."

ಈ ಪ್ರೀತಿ..

ಪ್ರೇಮ... ಕಾಮಕ್ಕೆಲ್ಲ ಯಾಕೆ ..
ಅಂದ 
ಚಂದ ಬೇಕು... ?

ನನ್ನಂಥಹ ಕುರೂಪದ  ..

ಅಗತ್ಯ ..
ಈ ಜಗತ್ತಿಗೆ  ಇಲ್ಲ ಎಂದ ಮೇಲೆ ...
ನನ್ನಂಥವನ ಹುಟ್ಟು ಇಲ್ಲಿ ಯಾಕೆ?..

ನನಗೆ ಅವಳ ಮೇಲೆ ಕೋಪ ಬರಲಿಲ್ಲ...


ಕನ್ನಡಿಯಲ್ಲಿ ಮುಖ ನೋಡಿಕೊಂಡೆ..


ನನ್ನ ಮೂಗಿನ ಆಕಾರ..

ಹೊಳ್ಳೆಗಳು .. 
ಮುಖದ ಮೇಲಿನ ಕಪ್ಪನೆಯ ಕಲೆಗಳು... 
ತುಟಿಗಳ ಗಾತ್ರ ಚಂದ ಇಲ್ಲವಾ?

ಜಗತ್ತಿನ ದೃಷ್ಟಿಯಲ್ಲಿ ... 

ಅಂದ.. ಚಂದ ಎಂದರೆ ಏನು ?

ಅಂದ 

ಚಂದ ಇಲ್ಲದವರಿಗೆ .. 
ಆಸೆಗಳೂ ಇರಬಾರದು..
ಪ್ರೀತಿ..
ಪ್ರೇಮಗಳ ಬಯಕೆಯೂ ಸುಟ್ಟು ಹೋಗಿಬಿಡಬೇಕು..

ನಾನು ಅಸಹ್ಯವಾಗಿದ್ದರೂ...

ಈ ದೇಹಕ್ಕೆ ..
ಈ ದೇಹದ ಕಾಮಕ್ಕೆ .. 
ಅಂದ.. ಚಂದಗಳೇ.. ಬೇಕಲ್ಲ.. !..

ಕಾಲೇಜು ಮುಗಿದ ಮೇಲೆಯೂ ...

ಆ ಹುಡುಗಿ ಸ್ನೇಹ ಇಟ್ಟುಕೊಂಡಿದ್ದಳು...

ಒಂದು ದಿನ ಸಡಗರದಿಂದ ಓಡೋಡಿ ಬಂದಳು..!


ಸಂಭ್ರಮ ಪಡುವ ... 

ಹುಡುಗಿಯ ಚಂದದ ಸೊಬಗೇ ಬೇರೆ....

ಕಣ್ ತುಂಬ ... 

ಮನದಣಿಯೇ ಅವಳನ್ನು ನೋಡಿದೆ..

" ಹುಡುಗಾ...


ನನ್ನ ಮದುವೆ  ನಿಶ್ಚಯ ಆಗಿದೆ... 

 ಮದುವೆಗೆ ಬಾ...
ಹಳೆಯದನ್ನೆಲ್ಲ ಮರೆತು ಬಿಡು..."

"ಹುಡುಗ ಹೇಗಿದ್ದಾನೆ..?.."


"ತುಂಬಾ ತುಂಟ..

ಅಂದವಿದ್ದಾನೆ... 
ಶ್ರೀಮಂತ...

ನನ್ನ ಚಂದವನ್ನು ಇಷ್ಟಪಟ್ಟು ಬಂದಿದ್ದಾನೆ...

ನಾನೂ ಇಷ್ಟ ಪಟ್ಟಿದ್ದೇನೆ.. "

ನನ್ನ ಹೃದಯವನ್ನು ... 

ಹಿಂಡಿ .... 
ಎಲ್ಲೋ ಕಸದ ತಿಪ್ಪೆಗೆ ಬೀಸಾಕಿ ಒಗೆದ ಅನುಭವಾಯ್ತು...

ನಾನು ಅವಳ ಮದುವೆಗೆ ಹೋಗಲಿಲ್ಲ...


ಮದುವೆಯಾದಮೇಲೂ ಆಹುಡುಗಿ 

ಆಗ ಈಗ ಫೋನ್ ಮಾಡುತ್ತಿದ್ದಳು...

ಬಹುಷಃ ... 

ಅವಳ  ಮದುವೆಯಾಗಿ ನಾಲ್ಕೈದು ವರ್ಷಗಳಾಗಿರಬಹುದು...

"ಹುಡುಗಾ..

ತುರ್ತಾಗಿ ನಿನ್ನ ಬಳಿ ಮಾತನಾಡಬೇಕು... 
ಭೇಟಿ ಆಗ್ತೀಯಾ...?"

ಹೆಚ್ಚಿನ ನಿರೀಕ್ಷೆಗಳಿಲ್ಲದಿರುವಾಗ ಉತ್ಸಾಹವೂ ಕಡಿಮೆ...

ಹೃದಯದ ಬಡಿತವೂ ಕಡಿಮೆ...

ತಿಳಿ ನೀಲಿ ಸಾರಿಯಲ್ಲಿ ಹುಡುಗಿ ಮುದ್ದಾಗಿ ಕಾಣುತ್ತಿದ್ದಳು..

ಮುಖ ಬಾಡಿತ್ತು..

ಅವಳನ್ನು.. 

ಬಾಚಿ ತಬ್ಬಿ ಎದೆಗೆ ಆನಿಸಿಕೊಳ್ಳುವ ಆಸೆ ಆಯ್ತು... 

"ಹುಡುಗಾ...

ಒಂದು ವಂಚನೆಯ ಪ್ರಕರಣದಲ್ಲಿ ನನ್ನ ಗಂಡ ಜೈಲು ಸೇರಿದ್ದಾನೆ...
ಮರ್ಯಾದೆ ಮೂರು ಪಾಲಾಯಿತು...

ಸತ್ತು ಹೋಗೋಣ ಅನ್ನಿಸುತ್ತದೆ..."


"ಸಾಯುವದಕ್ಕಲ್ಲ .. 

ಹುಟ್ಟಿರುವದು..
ಬದುಕಿ ಸಾಧಿಸುವದಕ್ಕೆ...

ನನ್ನಂಥಹ ಹತಭಾಗ್ಯ ಕುರೂಪಿ ಇನ್ನೂ ಬದುಕಿ ಇದ್ದಿನಿ ನೋಡು...


ಧೈರ್ಯವಾಗಿರು.. 

ನಾನಿದ್ದೇನೆ... 
ಸಹಾಯ ಮಾಡುವೆ... "

ಅವಳಿಗೊಂದು ಕೆಲಸದ ಅಗತ್ಯವಿತ್ತು..


ನನ್ನ ಕಂಪನಿಯಲ್ಲೆ ಕೆಲಸ ಕೊಡಿಸಿದೆ...


ಕೆಲಸ..

ದುಡಿಮೆ ದುಃಖವನ್ನು ಮರೆಸಬಲ್ಲದು...

ಹುಡುಗಿ ಕೆಲಸದಲ್ಲಿ ಮಗ್ನಳಾಗಿ ... 

ದುಃಖವನ್ನು ಮರೆಯುತ್ತ ಬಂದಳು...

ಅವಳಿಗೆ ತನ್ನ ಗಂಡನ ಕೇಸನ್ನು ನಡೆಸಲು ... 

ಹಣದ ಸಹಾಯ ಬೇಕಿತ್ತು..
ನಾನು ಮಾಡಿದೆ..

ಅವಳ ಕೃತಜ್ಞತಾ ಭಾವದ ನೋಟದಲ್ಲಿ ಪ್ರೀತಿ ಇತ್ತಾ ?


ನನ್ನೊಳಗೆ ಹುದುಗಿರುವ .. 

ಹುಚ್ಚು ಪ್ರೀತಿ ಯಾವಾಗಲೂ ಹೀಗೆ..
ಏನೆಲ್ಲ ಯೋಚಿಸಿಬಿಡುತ್ತದೆ..

ನಿತ್ಯ ಅವಳನ್ನು 

ಮನೆಯವರೆಗೆ ನಾನು ನನ್ನ ಕಾರಿನಲ್ಲಿ ಬಿಟ್ಟು ಬರುತ್ತಿದ್ದೆ...

ಅವಳು ಮಾತನಾಡುತ್ತಿದ್ದಳು..
ನಾನು ಅವಳನ್ನು ನೋಡುತ್ತಿದ್ದೆ...

ಕಣ್ ತುಂಬಾ.. 

ಹೃದಯದ ತುಂಬಾ ನೋಡುತ್ತಿದ್ದೆ...

" ಹುಡುಗಾ... 

ನೀನು ಇನ್ನೂ ಯಾಕೆ ಮದುವೆ  ಆಗಲಿಲ್ಲ....?.."

ನಾನು ಸ್ವಲ್ಪ ಹೊತ್ತು ಸುಮ್ಮನಿದ್ದೆ... 


"ಹುಡುಗಿ... 

ನನ್ನ ಬದುಕಿನ ಕುರೂಪವನ್ನು  
ನನ್ನ ಮಡದಿ ನರಕ ಅನುಭವಿಸದೆ ಇರಲಿ ಅಂತ.. 

ನನ್ನ ಅಸಹ್ಯದ ಭಾಗ್ಯ ... 

ನನ್ನ ಮಕ್ಕಳಿಗೆ ಬಾರದಿರಲಿ ಅಂತ... "

ಹುಡುಗಿ ...

ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನು ದಿಟ್ಟಿಸಿದಳು.. 

ಬದುಕಿನುದ್ದಕ್ಕೂ .... 

ಕಾಡಿದ ನೋವು 
ನನ್ನ ಕಣ್ಣಿನಲ್ಲೂ ನೀರಾಡಿತು.. 

ಜಗತ್ತಿನಲ್ಲಿ 

ಕ್ಯಾನ್ಸರಿಗಿಂತ... 
ಏಡ್ಸಿಗಿಂತ ದೊಡ್ಡದಾದ ರೋಗವಿದ್ದರೆ .. 
ಅದು ಕುರೂಪ... 

ಈ ಔಷಧವಿಲ್ಲದ 

ರೋಗದ ಬಗೆಗೆ... 
ನಿತ್ಯ 
ಅಸಹ್ಯ ಭಾವನೆಯ ನರಕವನ್ನು ... 
ಅನುಭವಿಸುವ ನನಗೆ ಗೊತ್ತು... 

ಹೀಗೆ ..

ಒಂದು ದಿನ ಆಫೀಸಿನಲ್ಲಿರುವಾಗ ಹುಡುಗಿ ... 
ಕಣ್ಣಿನಲ್ಲಿ ನಗುತ್ತಾ ಕೇಳಿದಳು...

"ಹುಡುಗಾ..

ನೀನು ನನ್ನನ್ನು ಬಯಸಿದ್ದೆಯಾ?.."

" ಅದೆಲ್ಲ ಯಾಕೆ ಈಗ..?"


"ನಿಜ ಹೇಳು...

ನೀನು ನನ್ನನ್ನು ಬಯಸಿದ್ದೆಯಾ..?"

ನನಗೆ ಅವಳ ಮುಖವನ್ನು ನೋಡಬೇಕೆಂದರೂ... 

ನೋಡಲಾಗಲಿಲ್ಲ... 

"ಹೌದು..."


"ಈಗ...?"


ನಾನು ಅವಳ ಕಣ್ಣುಗಳನ್ನು ನೋಡುವ ಧೈರ್ಯ ಮಾಡಿದೆ...


ಕಣ್ಣಿನಲ್ಲಿ ಆಹ್ವಾನ ಇತ್ತಾ..?


ನನ್ನ ಕುರೂಪ ನೆನಪಾಯಿತು..


"ಹುಡುಗಿ..

ಆಸೆಗಳಿಗೂ..
ಬಯಕೆಗಳಿಗೂ ಅರ್ಹತೆ.. ಯೋಗ್ಯತೆ ಇರಬೇಕಲ್ಲವೆ ?.
ನನಗೆ ಅದು ಇಲ್ಲ..."

"ಹುಡುಗಾ...

ಇವತ್ತು ಯಾವುದಾದರೂ ಒಂದು ಹೊಟೆಲ್ಲಿನಲ್ಲಿ ... 
ರೂಮ್ ಮಾಡು..
ಇಂದು ರಾತ್ರಿ ನಿನ್ನೊಡನೆ ಕಳೆಯುತ್ತೇನೆ.."

ನಾನು ಅವಕ್ಕಾದೆ... 

ಗಾಭರಿಬಿದ್ದೆ...!

"ಹುಡುಗಾ..

ತಮಾಶೆ ಮಾಡುತ್ತಿಲ್ಲ... 
ನನ್ನನ್ನು ನಂಬು... 
ಅನುಕಂಪದಿಂದಲ್ಲ..  ಕರುಣೆಯಿಂದಲೂ ಅಲ್ಲ... 
ಮನಸಾರೆ  ಬಯಸುತ್ತಿರುವೆ... 
ನಿಜವಾಗಿಯೂ ಹೇಳುತ್ತಿರುವೆ..."

ನಾನು ಖುರ್ಚಿಯಿಂದೆದ್ದು ... 

ಹೊರಗೆ ಟಾಯ್ಲೆಟ್ಟಿಗೆ ಹೋಗಿ ಬಂದೆ...

"ಎಲ್ಲಿಗೆ ಹೋಗಿದ್ದೆ..?.."


"ಕನ್ನಡಿಯಲ್ಲಿ ... 

ನನ್ನ ಮುಖ ನೋಡಿಕೊಳ್ಳುವದಕ್ಕೆ..."

ಹುಡುಗಿ ಸುಮ್ಮನಿದ್ದಳು...


"ಹುಡುಗಿ...

ನನ್ನದು ಅದೇ ಮೂಗು..
ಅದೇ .. 
ದೊಡ್ಡದಾದ ಹೊಳ್ಳೆಗಳು...
ದಪ್ಪ ತುಟಿಗಳು.. 
ಮುಖದ ಮೇಲೆ ಅದೇ.. ಕಪ್ಪು ಕಲೆಗಳು.. !

ಅಗಲೂ .. 

ಅರ್ಹತೆ .. 
ಯೋಗ್ಯತೆ ಇರಲಿಲ್ಲ...

ಈಗಲೂ ಇಲ್ಲ..


ಅಂದಿಗೂ..

ಇಂದಿಗೂ ಏನು ವ್ಯತ್ಯಾಸ ಗೊತ್ತಾ ಹುಡುಗಿ...?"

"ಏನು...?"


" ಸಮಯ..... !!


ಸಮಯ...ಟೈಮ್  ..
ಅರ್ಹತೆ.. ಯೋಗ್ಯತೆಯನ್ನು ತಂದುಕೊಡುತ್ತದೆ..!. "    




(ಚಂದದ ಪ್ರತಿಕ್ರಿಯೆಗಳಿವೆ.. ದಯವಿಟ್ಟು ಓದಿ...)

Friday, June 21, 2013

" ನಮ್ಮನ್ನು ಪ್ರೀತಿಸುವ ... ಪ್ರೀತಿಯನ್ನು ಸಾಯಿಸಬಾರದು...."

ಒಬ್ಬ ಅಜ್ಜ..
ಮೊಮ್ಮಕ್ಕಳಿಗೆ ಮಹಾಭಾರತದ ಕಥೆ ಹೇಳುತ್ತಿದ್ದ...

ಯುದ್ಧ ಪರ್ವದ ಕೊನೆಯ ಭಾಗ ಅದಾಗಿತ್ತು...

"ಧುರ್ಯೋಧನ ಯುದ್ಧದಲ್ಲಿ ತನ್ನವರೆನ್ನೆಲ್ಲ ಕಳೆದುಕೊಂಡು..
ಪಾಂಡವರಿಗೆ ಹೆದರಿ...
ರಕ್ತ..
ಹೆಣದ ರಾಶಿಗಳ ಕುರುಕ್ಷೇತ್ರ ರಣರಂಗದಲ್ಲಿ ...
ಒಂಟಿಯಾಗಿ ಬರುತ್ತಿದ್ದ....

ಎಲ್ಲಿ ನೋಡಿದರೂ ಹೆಣಗಳ ರಾಶಿ....!

ತನ್ನ ಛಲದಿಂದಾಗಿ ...
ಎಷ್ಟೆಲ್ಲ ಅಮಾಯಕರು ಸತ್ತರು...!
ಎಷ್ಟೆಲ್ಲ ವಿಧವೆಯರು... ಮಕ್ಕಳು... ಅನಾಥರಾದರು..!... "

"ಇಲ್ಲಿ ಸತ್ತವರು...  
ಜೀವ ಹೋಗುವ ಯಮ ಯಾತನೆಯಲ್ಲಿ ... 
ನೋವಿನಲ್ಲಿ.. 
ನನ್ನನ್ನು  ಶಪಿಸುತ್ತಾ ಸತ್ತಿರಬಹುದೇ ?.. 

ಪ್ರತಿಯೊಂದು ಹೆಣದ ಕಣ್ಣುಗಳು ತನ್ನನ್ನೇ ದಿಟ್ಟಿಸಿ ನೋಡುತ್ತಿವೆ..
ಭರ್ಚಿಯಿಂದ ಇರಿಯುತ್ತಿವೆ... 

ಅಯ್ಯೋ ದೇವರೇ... 
ಹೇಗೆ ಎದುರಿಸಲಿ ಈ ನೋಟಗಳನ್ನು ?"

ಧುರ್ಯೋಧನ ಕೊರಗಿದ... 
ಮಮ್ಮಲ ಮರುಗಿದ... 

ಅಜ್ಜ ... 
ತನ್ನ ಕನ್ನಡಕವನ್ನು ಸರಿ ಪಡಿಸಿಕೊಂಡು ... 
ಮತ್ತೆ ಮುಂದುವರೆಸಿದ...

"ಮುಂದೆ ಹೋಗುವಾಗ ...
ಕಾಲಿಗೆ ಒಂದು ಹೆಣ ತಾಗಿ ... 
ಧುರ್ಯೋಧನ ಬೀಳುವಂತಾದ...

ನೋಡುತ್ತಾನೆ ...!
ಅದು ಅವನ ತಮ್ಮನ ಹೆಣ!!

ತನ್ನ ಬದುಕಿನ ಸ್ವಾರ್ಥ .. ಆಸೆಗಳಿಗೆ .. 
ತನ್ನ ತಮ್ಮ ಶವವಾಗಿದ್ದಾನೆ... !

ಅನತಿ ದೂರದಲ್ಲಿ ವೀರ ಅಭಿಮನ್ಯುವಿನ ಹೆಣ....!

ಉಂಡು.. 
ತಿಂದು.. ತುಂಟಾಟವಾಡಿ ..
ಬೆಳೆಯುವ ಪುಟ್ಟ ಕಂದ...  
ತನ್ನ ಛಲದಿಂದಾಗಿ ಹೆಣವಾಗಿದ್ದಾನೆ.. !...

ಎಲ್ಲ ಕಡೆ.. 
ರಕ್ತ ಪಿಪಾಸು ರಣ ಹದ್ದುಗಳ ಹಾರಾಟ.. !
ಕಾಡು ಪ್ರಾಣಿಗಳ ಕೇಕೆ.... !!

ಎತ್ತ ನೋಡಿದರೂ.... ತನ್ನ ಬಂಧುಗಳ ಹೆಣಗಳ ರಾಶಿ.... !

ಅಯ್ಯೋ ದೇವರೆ.... !!

ಧುರ್ಯೋಧನ ವಿಲವಿಲ  ಒದ್ದಾಡಿದ ....

ತಾನು ಪಾಪಿ... !

ಹೆಣಗಳ ರಾಶಿಯಲ್ಲಿ ಜೋರಾಗಿ ಚೀರಿದ.. .. !
ರೋಧಿಸಿದ.....!
ಎದೆ..
ಎದೆ ಬಡಿದುಕೊಂಡ.... !"

ಅಜ್ಜ ಕಥೆಯನ್ನು ನಿಲ್ಲಿಸಿ ಮಕ್ಕಳ ಕಡೆ ನೋಡಿದ...

"ಮಕ್ಕಳೆ...
ಇಲ್ಲಿ ಕುರುಕ್ಷೇತ್ರ.... 
ಹೆಣಗಳು.. 
ಶವಗಳ ರಾಶಿ  ...  ಅಂದರೆ ಏನು ಗೊತ್ತಾ ?... "

ಮಕ್ಕಳಿಗೆ ಅರ್ಥವಾಗಲಿಲ್ಲ...

"ನೀನೆ ಬಿಡಿಸಿ ಹೇಳು ಅಜ್ಜಾ..."

"ಭಾವನೆಗಳು...
ಪ್ರೀತಿ...ಪ್ರೇಮ... 
ನಮ್ಮ ಬಾಂಧವ್ಯಗಳು..  ...

ಕುರುಕ್ಷೇತ್ರವೆಂದರೆ... 
ಸ್ವಾರ್ಥದ..  ಸೊಕ್ಕಿನ... ನಮ್ಮ ಪಾಪದ ಬದುಕು.... 

ಧುರ್ಯೋಧನ ಬದುಕಿರುವಾಗ .... 
ಬಹಳಷ್ಟು  ಜನರ ಭಾವನೆಗಳಿಗೆ ಹಿಂಸಿಸಿದ...
ನೋಯಿಸಿದ..!

ಪಾಂಡವರನ್ನು ಅರಗಿನ ಮನೆಯಲ್ಲಿಟ್ಟು... 
ಬೆಂಕಿ ಇಡುವಾಗ.....
ತನ್ನ ಮಕ್ಕಳ ಬಗೆಗೆ ತಾಯಿ ಕುಂತಿದೇವಿ ... 
ಎಷ್ಟು ಆತಂಕ ಪಟ್ಟಿರ ಬಹುದು...?

ರಾಜಕುಮಾರರಾಗಿದ್ದ ಪಾಂಡವರನ್ನು ... 
ಕಪಟ ಜೂಜಿನಲ್ಲಿ ಸೋಲಿಸಿ..
ವನವಾಸಕ್ಕೆ ಅಟ್ಟಿದಾಗ..
ಪಾಂಡವರ ಹೃದಯ ಎಷ್ಟು ನೊಂದಿರಬಹುದು..?

ಆತಂತ್ರ ಬದುಕಿನ ಆತಂಕ ಎಷ್ಟು ಕಾಡಿರಬಹುದು ?..

ಮಾನವೇ ಭೂಷಣವೆಂದು ನಂಬಿರುವ ... 
ಸಾಧ್ವಿ ದ್ರೌಪದಿಯು ..
ತುಂಬಿದ ಸಭೆಯಲ್ಲಿ ಬೆತ್ತಲಾಗುವಾಗ  .. 
ಎಷ್ಟು  ರೋಧಿಸಿರಬಹುದು  ?.. ...

ನೊಂದವರ...
ನಮ್ಮಿಂದಾಗಿ ಅತ್ತವರ  ... 
ಶಾಪ ನಮ್ಮನ್ನು ಕಾಡದೇ ಬಿಡುವದಿಲ್ಲ...."

ಮಕ್ಕಳು ಸುಮ್ಮನಿದ್ದರು...

"ಮಕ್ಕಳೆ..
ಬದುಕಿನಲ್ಲಿ ನಮ್ಮ ಬಂಧುಗಳ..
ಪ್ರೀತಿಸಿದವರ..
ನಮ್ಮವರ ಭಾವನೆಗಳನ್ನು ಪ್ರೀತಿಸಬೇಕು ...

ಇಲ್ಲವಾದಲ್ಲಿ...
ನಮ್ಮ ವೃದ್ಧಾಪ್ಯದ ಕುರುಕ್ಷೇತ್ರದ ರಣರಂಗದಲ್ಲಿ..

ಒಂಟಿಯಾಗಿ ಸಾಗುವಾಗ.. 
ನಾವು ಕೊಂದ ಭಾವನೆಗಳ ಹೆಣ ..
ನಮ್ಮ ಕಾಲಿಗೇ ..  ಎಡವುತ್ತದೆ ... 
ನಮ್ಮ ಜೀವ ಹಿಂಡುತ್ತದೆ ....  

ನಾನು... ನನ್ನದು... 
ನನಗೆ ಮಾತ್ರ ಎನ್ನುವ ಭಾವರಹಿತ ಬದುಕಿಗೆ... 
ಪ್ರತಿಯೊಬ್ಬರೂ.. 
ಅವರವರ ಬದುಕಿನ ಕುರುಕ್ಷೇತ್ರದಲ್ಲಿ ... 
ಉತ್ತರ ಕೊಡುವ ಸಂದರ್ಭ ಬಂದೇ ಬರುತ್ತದೆ... 

ಎಲ್ಲೋ ಒಂದು ಕಡೆ .. 
ಒಬ್ಬಂಟಿಯಾದಾಗ.. ..
ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ... 
ಯಾರಾದರೂ ಬೇಕು ಎಂದಾಗ

ಬಂಧುಗಳ .. 
ಭಾವನೆಗಳನ್ನು ಕೊಂದ  ಧುರ್ಯೋಧನ ನಾವಾಗಬೇಕಾಗುತ್ತದೆ...!

ಒಬ್ಬಂಟಿಯಾಗಿಯೇ..   ರೋಧಿಸಬೇಕಾಗುತ್ತದೆ...

ಸಹಜ ಬದುಕಿನಲ್ಲಿ ಸಿಗುವ .. ಬಾಂಧವ್ಯಗಳು... 
ಬಂಧುಗಳು... 
ಭಾವನೆ .. 
ಪ್ರೀತಿ.. ಪ್ರೇಮಗಳು ನಮಗೆ ಬೇಕು ಎನ್ನುವಾಗ ಸಿಗುವದಿಲ್ಲ... 

ನಮಗೆ  ಸಿಕ್ಕಿದ 
ಮುಗ್ಧ ಭಾವನೆಗಳನ್ನು .. 
ಹಿಂಸಿಸಬಾರದು.... ನೋಯಿಸಬಾರದು...

ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು...."

ಅಜ್ಜನಿಗೆ ಮಾತು ಮುಂದುವರೆಸಲಾಗಲ್ಲಿಲ್ಲ...

ಕನ್ನಡಕ ಮಂಜು ಮಂಜಾಗಿತ್ತು....




Tuesday, June 4, 2013

ಮಾತಿಲ್ಲ.. ನನ್ನ ಮೌನ ಗೌರಿ.. ನೋಡಲೂ ಚಂದ...!

ಮದುವೆಯಾಗಿ ಒಂದು ವಾರವಷ್ಟೇ ಆಗಿತ್ತು..

"ಪ್ರಕಾಶು..
ಚಂದಾವರದ ಅತ್ತೆ ಮನೆಗೆ ಹೋಗಿ ಬನ್ನಿ.."
ಅಂತ ಮನೆಯ ಹಿರಿಯರ ಸಲಹೆ...

"ನಾನೂ ಬರ್ತೇನೆ.."
ನನ್ನ ಪ್ರೀತಿಯ ಕಮಲಾಕರ ಚಿಕ್ಕಪ್ಪನೂ ನಮ್ಮೊಡನೆ ಹೊರಟ...

"ಚಿಕ್ಕಪ್ಪಾ.. ಕಾರಿಗೆ ಹೇಳುವೆ.."

"ಬೇಡ ಪ್ರಕಾಶು..

ಉಳಿಸಿದ ಹಣವೇ,,.. ಗಳಿಸಿದ ಹಣ...!

ದುಡಿದ ಹಣವನ್ನು ಉಳಿತಾಯ ಮಾಡಬೇಕು..  ಯಾಕೆ ದುಡ್ಡು ವ್ಯರ್ಥವಾಗಿ ಖರ್ಚು ಮಾಡ್ತೀಯಾ..
ಬಸ್ಸಿನಲ್ಲಿ ಹೋಗೋಣ..."

ಸರಿ..
ಸಿರ್ಸಿಗೆ ಬಂದು ಕುಮುಟಾ ಬಸ್ಸು ಹಿಡಿದೆ..

ಮೇ...  ತಿಂಗಳು..
ಸೆಖೆ..

ಸಿಕ್ಕಾಪಟ್ಟೆ ರಷ್...

ಹಾಗೂ ಹೀಗೂ ಒಂದು ಸೀಟು ಹಿಡಿದೆ..

ನಾನು ಮತ್ತು ನನ್ನ ಜಿಂಕೆ ಮರಿ ಇಬ್ಬರೂ ಕುಳಿತೆವು..

ನನ್ನ ಚಿಕ್ಕಪ್ಪ ನಮ್ಮ ಬಳಿ ನಿಂತು ಕೊಡರು...

ಸಂಸ್ಕಾರ...
ಅಪ್ಪನಿಲ್ಲದ ನಮಗೆ ಅವರೇ ಬದುಕು ಕಲಿಸಿದ್ದು..

ನಾನು ಎದ್ದು ನಿಂತು ಅವರಿಗೆ ಜಾಗ ಮಾಡಿಕೊಟ್ಟೆ...

ಆ ನೂಕು ನುಗ್ಗಲಿನಲ್ಲಿ ಮುಂದೆ ಹೋದೆ..
ಅಲ್ಲಿ ಒಂದು ಸೀಟು ಸಿಕ್ಕಿತು...

"ಚಿಕ್ಕಪ್ಪನಿಗೆ ಇಲ್ಲಿ ಕರೆದು ..
ನಾನು ಜಿಂಕೆ ಮರಿ ಹತ್ತಿರ ಹೋಗ ಬಹುದಲ್ಲವಾ ?... "

ತಿರುಗಿ ನೋಡಿದೆ...

ಉಹೂಂ... 
ತುಂಬಾ ರಷ್ ಇತ್ತು.. 

ಅವರು ಇಲ್ಲಿ ಬಂದು .. 
ನಾನು ಅಲ್ಲಿ ಹೋಗುವದು ದೊಡ್ಡ ರಾಮಾಯಣ.. !

ಸುಮ್ಮನೆ ಅಲ್ಲಿಯೇ ಕುಳಿತೆ...

ಎಷ್ಟೆಲ್ಲಾ ಹಂಬಲಿಸಿದ್ದೆ .. ನನ್ನಾಕೆಯ ಬಗೆಗೆ !
ಎಷ್ಟೆಲ್ಲ ಪತ್ರ ಬರೆದಿದ್ದೆ..

ನನ್ನೆಲ್ಲ ಕನಸುಗಳು ನನಸಾಗಿದ್ದವು..
ನಾನು ನಮಸ್ಕರಿಸುವ ದೇವರಿಗೆ  ಮನಸಾರೆ ವಂದಿಸಿದೆ... 

ಮುದ್ದಾದ..
ನನ್ನಿಷ್ಟದ ಹುಡುಗಿ ನನ್ನವಳಾಗಿದ್ದಳು...

ಹನಿಮೂನಿಗೆ ಹೋಗೋಣವೆಂದರೆ ... 
" ನೆಂಟರ ಮನೆಗಳಿಗೆ ಮೊದಲು ಹೋಗಿ ಬನ್ನಿ.." 
ಎನ್ನುವ ಆಜ್ಞೆ..ಮನೆಯ ಹಿರಿಯರದ್ದು... 

ನನ್ನಾಕೆಯ... 
ಹತ್ತಿರ ಕುಳಿತುಕೊಳ್ಳಬೇಕು..
ನನ್ನಾಸೆಗಳನ್ನು ಹೇಳೀಕೊಳ್ಳಬೇಕು..

ಅವಳ ನಾಚಿಕೆಯನ್ನು ಅವಳ ಕಣ್ಣುಗಳಲ್ಲಿ ನೋಡಬೇಕು...!

ಬಸ್ಸಿನಲ್ಲಿ ... 
ಯಾರೋ ಮೂಟೆ ಚೀಲ ನನ್ನ ಪಕ್ಕಕ್ಕೆ ತಳ್ಳಿದಂತಾಯಿತು..

ಭರ್ಜರಿ  ಹೊಟ್ಟೆಯವನೊಬ್ಬ ನನ್ನ ಪಕ್ಕದಲ್ಲಿ ನಿಂತಿದ್ದ..!
ಅವನ ಹಾಕಿದ ಶರ್ಟ್ ಬಟನ್ .... 
ಬಿಚ್ಚಿ ಹರಿದು ಹೋಗುವ ಸ್ಥಿತಿಯಲ್ಲಿತ್ತು..... 
ಹೊಟ್ಟೆಯ ದೊಡ್ಡ ಬಾವಿಯಂಥಹ ಹೊಕ್ಕಳು ಕಾಣುತ್ತಿತ್ತು.... 

ಮುಖ ನೋಡಲು ಪ್ರಯತ್ನಿಸಿದೆ...
ಕುಳಿತಿದ್ದರಿಂದ ಬರಿ ಹೊಟ್ಟೆಯೇ ಕಾಣುತ್ತಿತ್ತು...

ಕುಮುಟಾ ಬಸ್ಸು ದೇವಿಮನೆ ಘಟ್ಟ ಇಳಿಯಲು ಪ್ರಾಂಭಿಸಿತ್ತು..
ತಿರುವು ..
ಮುರುವು..

ಆ ಕಡೆ.. 
ಈ ಕಡೆ ನಮ್ಮ ಶರೀರ ವಾಲುತ್ತಿತ್ತು... !

ಪಕ್ಕದಲ್ಲಿ ಜಿಂಕೆ ಮರಿಯಿದ್ದರೆ ಎಷ್ಟು ಸೊಗಸಿತ್ತು.. !
ರಿಂಗು ಹಾಕಿದ ಮೊಂಡು ಮೂಗು... 
ಮುದ್ದು ಕೆನ್ನೆಗಳನ್ನು ಇಷ್ಟು ಹತ್ತಿರದಲ್ಲಿ ಸವಿಯ ಬಹುದಿತ್ತು... !
ಛೇ... !

ಅಷ್ಟರಲ್ಲಿ .... 
ಬಿಸಿ  ಬಿಸಿ.... 
ಎರಡು ಬಕೆಟ್ ಸಂಬಾರು ಅನ್ನವನ್ನು .. 
ನನ್ನ ತಲೆಯ ಮೇಲೆ ಎರಚಿದಂತಾಯಿತು... ...!

"ಊವ್ವೇ... ಊವ್ವೇ... !!... "

ಆ ದೊಡ್ಡ ಹೊಟ್ಟೆಯವ ನನ್ನ ತಲೆಯ ಮೇಲೆ ವಾಂತಿ ಮಾಡುತ್ತಿದ್ದ..

... !! ಅಯ್ಯಯ್ಯೋ...  !!.. ಗಡಿಬಿಡಿ ಬಿದ್ದೆ... !

ತುಟಿ ಮುಚ್ಚಿಕೊಂಡೆ..

ಹಣೆ..
ಮುಖ... ಕೆನ್ನೆಯ ಮೇಲೆ ವಾಂತಿ ಇಳಿಯುತ್ತಿತ್ತು...

ಕಣ್  ಬಿಡಲಾಗುತ್ತಿಲ್ಲ...
ಸಿಂಬಳದಂಥಹ ದ್ರವ ರೆಪ್ಪೆಗಳಿಗೆ ಅಂಟಿಕೊಂಡಿತ್ತು.... 

ಏಳುವ ಪ್ರಯತ್ನ ಮಾಡಿದೆ..

ಮತ್ತೆ ............ 

"ಊವ್ವೇ.. ಉವ್ವೇ....." ! 
ಮತ್ತೆರಡು ಬಕೆಟ್ ವಾಂತಿ ಚೆಲ್ಲಿದಂತಾಯಿತು...!

ಸಿರ್ಸಿ ಪೇಟೆ  ಗಲೀಜೆಲ್ಲ ... 
ನನ್ನ ಮೈಮೇಲೆ ಎರಚಿದಂತಾಯಿತು.... !

ಷರ್ಟ್..
ಒಳಗೆಲ್ಲ ಅಂಟು.. ಅಂಟು...!

ಲೋಳೇ ದ್ರವ ಕಣ್ಣುಗಳನ್ನು ಮುಚ್ಚಿತ್ತು...

ಕಣ್ಣುಜ್ಜಿಕೊಂಡೆ..

ಕೆಟ್ಟ.. 
ಅಸಾಧ್ಯವಾಸನೆ...!
ನನಗೂ ವಾಂತಿ ಬರುವಂತಾಯಿತು...

ನನ್ನ ಅಕ್ಕ ಪಕ್ಕದವರೆಲ್ಲ ಓಡಿ ಹೋಗಿದ್ದರು...

ಅಯ್ಯೋ ದೇವರೆ...
ಹೊಸ ಹೆಂಡತಿಯ ಎದುರು  ಇದೆಂಥಹ ಅವತಾರ...!

ನಾಚಿಕೆ.. ಅಸಹ್ಯ... !

ನನ್ನಾಕೆ ವ್ಯಾನಿಟಿ ಬ್ಯಾಗಿನಿಂದ ಸಣ್ಣ ಪೌಂಡ್ಸ್ ಪೌಡರ್  ಡಬ್ಬವನ್ನು .. 
ತುದಿ ಬೆರಳಲ್ಲಿ  ಕೊಟ್ಟಳು...
ಮೂಗಿಗೆ ತುರುಕಿ ಕೊಂಡೆ...

ಕುಮುಟಾ ಬರುವಷ್ಟರಲ್ಲಿ .... 
ಮೈಮೇಲಿನ ವಾಂತಿಯೆಲ್ಲ ಅರೆ ಬರೆ ಒಣಗಿತ್ತು..

ವಾಂತಿಯ ಸಂಗಡ ಅಸಾಧ್ಯ ಸೆಖೆ... !

ಒಳಗೆಲ್ಲ ಅಂಟು ಅಂಟು..
ಲೋಳೆಯ ಅನುಭವ... !

ಎಲ್ಲರೂ ನನ್ನನ್ನು ಕರುಣಾಜನಕವಾಗಿ ನೋಡುತ್ತಿದ್ದರು..

ಹೇಗೋ ಹೇಗೋ... ಚಂದಾವರಕ್ಕೆ ಬಂದೆವು...

ಮೊದಲು ಬಚ್ಚಲಿಗೆ ಹೋಗಿ ಸ್ನಾನ ಮಾಡಿದೆ...

ಒಂದು ಹೊಸ ಸೋಪ್ ಪೂರ್ತಿ ಮೈಗೆ ತಿಕ್ಕಿದೆ...

ನನ್ನ ಅವಸ್ಥೆ ನೋಡಿ ... 
ನನ್ನ "ಲಕ್ಷ್ಮಿ ಅತ್ತೆ" ಮನೆಯಲ್ಲಿದ್ದ ಪೌಡರ್ ಡಬ್ಬಗಳನ್ನೆಲ್ಲ ಕೊಟ್ಟರು..

ಮೈಗೆ ಎಲ್ಲವನ್ನೂ ಬಳಿದುಕೊಂಡೆ...

ನನ್ನಾಕೆ ಹತ್ತಿರ ಬರುತ್ತಿಲ್ಲ.. !
ದೂರದಿಂದಲೇ ಮಾತುಕತೆ.. !

ನನ್ನ "ವೆಂಕಟರಮಣ" ಮಾವ ಅವರ ಅಮೂಲ್ಯ ಸಲಹೆ ಕೊಟ್ಟರು..

"ಪ್ರಕಾಶು..
ಇನ್ನೂ ಎರಡು ಬಾರಿ ಸ್ನಾನ ಮಾಡು ಮಗನೆ..
ಲಕ್ಸ್ ಸೋಪು ಹಚ್ಚಿಕೊಂಡು.."

ಎಷ್ಟೇ ಸೋಪು ಹಚ್ಚಿದರೂ..
ಮನಸ್ಸಿಗೆ ಅಂಟಿದ ವಾಸನೆಯನ್ನು ಹೇಗೆ ತೆಗೆಯುವದು ?

ಊಟವೂ ಸರಿಯಾಗಿ ಸೇರಲಿಲ್ಲ...

ಅದೇ.. ವಾಂತಿಯ ದೃಶ್ಯ ಕಣ್ಣೆದುರಿಗೆ ಬರುತ್ತಿತ್ತು...!

ಮಧ್ಯಾಹ್ನ ಊಟವಾದ ಮೇಲೆ...

"ಹೊಸ ಮದುಮಕ್ಕಳು...
ಕೋಣೆಯಲ್ಲಿ ವಿಶ್ರಾಂತಿ ಮಾಡಿ" 
ಲಕ್ಷ್ಮಿ ಅತ್ತೆ ಹಾಸಿಗೆ ಹಾಸಿಕೊಟ್ಟಳು...

ನನ್ನಾಕೆ ದೂರವೇ ಇದ್ದಳು..

ಈ ಅಸಹ್ಯ ... 
ಮುಜುಗರ ಸನ್ನಿವೇಶದಲ್ಲಿ ಏನು ಮಾತನಾಡುವದು ?

ಮಾತಿಲ್ಲ.. 
ನನ್ನ ಮೌನ ಗೌರಿ.. ನೋಡಲೂ ಚಂದ...!

ದೂರವೇ ಮಲಗಿದೆ..

ಫ್ಯಾನ್ ಗಾಳಿ..
ನನ್ನಾಕೆ ಚಂದದ ಮುಖ.. ಸಣ್ಣ ನಿದ್ದೆ ಬಂದಿದ್ದೆ ಗೊತ್ತಾಗಲಿಲ್ಲ...

ಯಾರೊ ಮೈ ತಟ್ಟಿ ಎಬ್ಬಿಸಿದಂತಾಯಿತು..

ನನ್ನಾಕೆ !

ಅವಳ ತುಟಿ ಚಲವಲನೆ ಕಾಣುತ್ತಿತ್ತು.. 
ಶಬ್ಧ ಕೇಳುತ್ತಿಲ್ಲ.. !

ಅಯ್ಯೋ.. !
ನಾನು ... 
ನನಗೆ ಕಿವುಡೆ ?.... 

ಈಗ ನನ್ನ ಮಾವ ಕೂಡ ಕಂಗಾಲಾದರು...
ಹೊಸ ಮದುವೆ ಜೋಡಿ...!
"ತಮ್ಮ ಮನೆಗೆ ಬಂದು ಹೀಗೆ ಆಗಿಹೋಯ್ತೆ..!" 
ಎನ್ನುವ ಗಾಭರಿ... !

ಆತಂಕ ಪಟ್ಟುಕೊಂಡು ಕಿವಿಗೆ ಹಾಕುವ "ಚಿಮಟಿಗೆ" ತಂದರು...

ನನ್ನಾಕೆ ... 
ನನ್ನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು..
ಅನುಭವ 
ಮೃದುವಾಗಿ ಹಿತವಾಗಿತ್ತು ...

ಕಿವಿಗೆ ಚಿಮಟಿಗೆ ಹಾಕಿದ ಅನುಭವ..
ಏನನ್ನೋ ಹೊರಗೆ ತೆಗೆದಳು...

ಮತ್ತೊಂದು ಕಿವಿಗೂ ಚಿಮಟಿಗೆ ಹಾಕಿದಳು..
ಮತ್ತಷ್ಟು ತೆಗೆದಳು..

ನನಗೆ  ಸ್ವಲ್ಪ ಸ್ವಲ್ಪ ಕಿವಿ ಕೇಳತೊಡಗಿತು...!

ಕಿವಿಯಿಂದ ತೆಗೆದದ್ದು ಏನು ಅಂತ ನೋಡಿದೆ..

ಹಳದಿ ಬಣ್ಣದ ಅನ್ನದ ಅಗುಳು..  !!
ಹಳದಿ ಬಣ್ಣದ ಲೋಳೆ.. ಲೋಳೆ.... ಅಂಟು.. !

ಚಿಗುಟಿನಂಥಂಹ .. ಹಲಸಿನ ಗುಜ್ಜಿನಂಥಹದ್ದು..

ಇದು ಚಿಕ್ಕನ್ನು ಇದ್ದಿರ ಬಹುದಾ ?
ಮೀನವಾ !!

"ಊವ್ವೆ.. ಉವ್ವೇ... ಊವ್ವೇ......."

ತಡೆದು ಕೊಳ್ಳಲಾಗದೆ...
ನನ್ನಾಕೆ ವಾಂತಿ ಮಾಡುತ್ತಿದ್ದಳು.... 

ಅಯ್ಯಯ್ಯೋ....  ನನ್ನ ಮೈ ಮೇಲೆ....!



Thursday, May 23, 2013

ನಿಮ್ಮದು ಇನ್ನೂ ...ಸಕ್ರೆ ಮೂಟೆ ಆಗಿಲ್ಲ ಬಿಡ್ರಿ.... !


ಈ ತಣ್ಣನೆಯ ಯಲ್ಲಾಪುರದಲ್ಲಿ ಉಳಿಯುವದೆಲ್ಲಿ ?...... 

ಛಳಿಗಾಲ....  
ಸಾಯಂಕಾಲ ಬೇರೆ  ಆಗಿತ್ತು... 

ಮರುದಿನ ..

ಮುಂಜಾನೆ ಇಬ್ಬನಿ ಬೀಳುವ ಹೊತ್ತು..
ನಾಡಿನ ಅತ್ಯಂತ ಸುಂದರ  .. 
"ಸಾತೊಡ್ಡಿ ಜಲಪಾತವನ್ನು" ನೋಡುವ ಕಾತುರ...!

ಗೆಳೆಯ ದಿಗ್ವಾಸ ಮತ್ತು ನಾನು ಇಬ್ಬರೇ ಇದ್ದಿದ್ದೆವು... 


ಗೆಳೆಯರೊಬ್ಬರಿಗೆ ಫೋನ್ ಮಾಡಿ ... 

" ಒಳ್ಳೆಯ ಹೊಟೆಲ್" ಬಗೆಗೆ ವಿಚಾರಿಸಿದೆವು..

ಅವರು ಹೇಳಿದ ಹೊಟೆಲ್ ಒಳಗೆ ಬಂದೆವು..


"ಒಂದು ... 

ಡಬಲ್ ಬೆಡ್ ರೂಮ್ ಬೇಕಾಗಿತ್ತು... ಇದೆಯಾ ?"

ದಿಗ್ವಾಸ್ ಕೇಳಿದ...


ಹೊಟೆಲ್ ಮ್ಯಾನೇಜರ್ ನಮ್ಮತ್ತ ಕಣ್ಣೆತ್ತಿ ನೋಡಲೂ ಇಲ್ಲ.. 


ಹೆಂಡತಿ ಹತ್ತಿರ ... 

ಮುಖ.. ಮುಸುಡಿ ಇಲ್ಲದೆ ಬಯ್ಯಿಸಿಕೊಂಡ... 
ಹರಳೆಣ್ಣೆ ಕುಡಿದವನ ಮುಖ ಮಾಡಿಕೊಂಡು ಹೇಳಿದ..

"ಇದೆ..."


"ಎಷ್ಟು...?"


" ನಾನೂರಾ...  ಐವತ್ತು..."


ನಾನು ಕಿಸೆಗೆ  ಕೈ ಹಾಕುವಷ್ಟರಲ್ಲಿ ದಿಗ್ವಾಸನಿಗೆ ಹಣ ಕೊಟ್ಟಾಗಿತ್ತು..


" ಬೆಳಿಗ್ಗೆ ಐದು ಗಂಟೆಗೆ ಬಿಸಿನೀರು ಸಿಗುತ್ತದಾ ?.. ."


ಹರಳೆಣ್ಣೆಯವ ನನ್ನ ಹೊಟ್ಟೆಯನ್ನೇ ದಿಟ್ಟಿಸಿ ನೋಡತೊಡಗಿದ... 


ಈ ಹೊಟ್ಟೆ ಹೊತ್ತುಕೊಂಡು ... 

ಬೆಳಿಗ್ಗೆ ಐದು ಗಂಟೆಯ ವಿಷಯ ಮಾತಾಡ್ತಾ ಇದ್ದಾನಲ್ಲಾ... 
ಅಂತ ಆಶ್ಚರ್ಯ ಆಗಿರಬಹುದು... 

 "ನೋಡೋಣ... ಬಿಡಿ... 

ಬೆಳಗಾಗಲಿ..."

ಆತ ಅತ್ಯಂತ ನಿರ್ವಿಕಾರ ಭಾವನೆಯಿಂದ ಉತ್ತರಿಸಿದ... 


ರಿಜಿಸ್ಟರ್ ಬುಕ್ಕಿನಲ್ಲಿ ... 

ನಮ್ಮ ವಿಳಾಸ ಬರೆದುಕೊಂಡದ್ದೂ ಆಯ್ತು...

ಮ್ಯಾನೇಜರ್ ಸುಮ್ಮನೇ ಇದ್ದ.. ಏನನ್ನೂ ಹೇಳ್ತಾನೇ.. ಇಲ್ಲ... !


"ಸ್ವಾಮಿ ರೂಮ್ ಎಲ್ಲಿದೆ  ?"


ದಿಗ್ವಾಸ ಎಚ್ಚರಿಸಿದ...


" ಲೆ  .. ಲೇ..... 
ಎಲ್ಲಿ ಹೋದ್ಯೋ... 
ಹರಕ್ ಚಡ್ಡಿ...   ಬಾರಲೇ.. ಇಲ್ಲಿ..."

ಒಬ್ಬ ಹುಡುಗ ಓಡೋಡಿ...  ಬಂದ..


ಅವನ ಚಡ್ಡಿ ಸರಿ ಇತ್ತು..


"ಇವರಿಗೆ .... 

ಅಲ್ಲಿ  ಲಾಸ್ಟ್ ರೂಮ್ ತೋರಿಸೊ....."

ಹರಕು ಚಡ್ಡಿ ಮುಂದೆ ಸಾಗಿದ.. 

ನಾವು ಹಿಂಬಾಲಿಸಿದೆವು...

ಸ್ವಲ್ಪ ದೂರ ಹೋದ ಮೇಲೆ ... 

ಹರಕು ಚಡ್ಡಿ ತಿರುಗಿ ನಿಂತು .... 
ಒಂಥರಾ ಮಾಡಿ ನನ್ನನ್ನೇ ನೋಡತೊಡಗಿದ.. .

ಕಣ್ಣಲ್ಲಿ ಏನೋ ಅನುಮಾನ.... !


ನನಗೆ ಕಸಿವಿಸಿ ಆಯ್ತು...


" ನಿಮಗೆ "ಗುರಿ" ಇದೆಯಾ...?..." 


ಹರಕು ಚಡ್ಡಿ ಗುಂಡು ಹೊಡೆದ ಹಾಗೆ ಪ್ರಶ್ನೆ ಕೇಳಿದ...


ನನಗೆ ಆಶ್ಚರ್ಯ.. !


"ಯಾಕೋ...? .."


"ನಿಮ್ಮನ್ನು ನೋಡಿದ್ರೆ  ... 

"ಗುರಿ"  ಇದ್ದವರ ಹಾಗೆ ಕಾಣಿಸೋದಿಲ್ಲ..." 

"ಏನು ಗುರಿ ಮಾರಾಯಾ ?


ಹೊಟೆಲ್ಲಿನಲ್ಲಿ ಉಳಿಯಲಿಕ್ಕೆ ಯಾವ ಗುರಿ ಬೇಕು ..?"

"ಅಲ್ಲಾ... 

ಬೇಜಾರು ಮಾಡ್ಕೋ ಬೇಡೀ... 
ಮೊದಲೇ ಹೇಳಿಬಿಡ್ತೇನೆ... 
ಗುರಿ ಇದ್ದರೆ ಮಾತ್ರ ಆ ರೂಮಿನಲ್ಲಿರಿ...

ಇಲ್ಲಾ  ಅಂದ್ರೆ ಬೇರೆ ರೂಮ್ ಮಾಡಿ.. !!... "


ದಿಗ್ವಾಸ ತಲೆ ಕೆರೆದು ಕೊಂಡ..!


ಹರಕು ಚಡ್ಡಿ...

ರೂಮಿನ ಬಾಗಿಲು ತೆಗೆದು ... 
ನನ್ನನ್ನು ಟಾಯ್ಲೆಟ್ಟಿನ ಬಳಿ ಕರೆದುಕೊಂಡು ಹೋದ...

ಟಾಯ್ಲೆಟ್ಟಿನ ಬಾಗಿಲಿಗೆ ಭುಜ ಕೊಟ್ಟು ... 

ಕೈ ಹಾಕಿ  ... 
ಬಾಗಿಲನ್ನು ಕಷ್ಟಪಟ್ಟು ಮೇಲೆ ಎತ್ತಿದ..
ಪಕ್ಕಕ್ಕೆ  ಸರಿಸಿದ ... 

ಸೀತಾ ಕಲ್ಯಾಣದಲ್ಲಿ  ಶ್ರೀರಾಮಚಂದ್ರ ಶಿವಧನಸ್ಸು ಎತ್ತಿದ ಹಾಗೆ... 


"ಈ ಬಾಗಿಲು ... 

ಸ್ವಲ್ಪ ಹೀಗೆ ಇದೇರ್ರೀ... !

ಪೇಟೆ ಹೆಣ್ಣು ಮಕ್ಕಳ ಬ್ಲೌಸ್ ಇದ್ದ ಹಾಗೆ... 


ಕೆಳಗೆ ಬಿದ್ದು ಹೋಗಿರ್ತದೆ... 

ಆಗಾಗ ಮೇಲೆ ಎತ್ತುತ್ತಾ ಇರಬೇಕು.. "


"ಇಲ್ಲಿ ನೋಡ್ರಿ... 

ಇದು ನಮ್ ಹೊಟೆಲ್ ಸಂಡಾಸು...."

ಅದು ತುಂಬಾ ಹಳೆಯ ಕಾಲದ ಭಾರತೀಯ ಮಾದರಿ ಪ್ಯಾನ್....

ನೆಲಕ್ಕೆ ಕುಳಿತು .. 
ಉಪಯೋಗಿಸುವಂಥಾದ್ದು... 

ಬಹಳ ಸಣ್ಣದಿತ್ತು...


ಉದ್ದ.. 

ಅಗಲ.. 
ಎತ್ತರ.. ಎಲ್ಲ ರೀತಿಯ ಅಳತೆಗಳಲ್ಲೂ ಚಿಕ್ಕದಾಗಿತ್ತು... 

"ವಿಷಯ ಏನು ಗೊತ್ತುಂಟಾ ?


ದೊಡ್ಡ ... 

ದೊಡ್ಡ ಸಕ್ರೆ ಮೂಟೆಯಂಥಹ ..
ಹೊಟ್ಟೆಯವರು ಬಂದು ಬಿಡ್ತಾರೆ....

ದೇವರಾಣೆ ಮಾಡಿ ಹೇಳ್ತೇನೆ.. !


ಅವರಿಗೆ ಗುರಿ ಇರೋದಿಲ್ಲ....

ಮಾಡುವದನ್ನು 

ಸರಿಯಾದ ಜಾಗದಲ್ಲಿ ಮಾಡುವದಿಲ್ಲ....!

ಏನೇನು ತಿಂದಿರ್ತಾರೋ... !


ಯಾರ್ಯಾರದ್ದೋ ... ಹೊಲಸುಗಳು... !


ಮರುದಿನ ... 

ನಾನು ಕ್ಲೀನ್ ಮಾಡಿ ತೊಳೆಯ ಬೇಕು...

ನನ್ನ ಹಣೆ ಬರಹ ನೋಡಿ ಮಾರಾಯ್ರೆ... ! "


ನನಗೆ ಗಾಭರಿ ಆಯ್ತು..!


ಹೊಟ್ಟೆ ನೋಡಿಕೊಂಡೆ..!


"ನಿಮ್ಮದು ... 

ಇನ್ನೂ ಸಕ್ರೆ ಮೂಟೆ  ಆಗಿಲ್ಲ ಬಿಡಿ...

ಯಾವುದಕ್ಕೂ  ಗುರಿ ಇದೆಯಾ ಅಂತ ... 

ಒಂದುಸಾರಿ... 
ಕೂತ್ಕೊಂಡು ನೋಡ್ಕೋ  ಬಿಡಿ... !...

ಬಾಗಿಲು ಹಾಕ್ಕೋತಿರಾ ?..  "

ಯಾರೋ ಕಿಸಕ್ಕನೆ ನಕ್ಕಾಂತಾಯಿತು...


ಹಿಂದೆ ತಿರುಗಿ  ನೋಡಿದೆ.. !


ದಿಗ್ವಾಸ ಬಿದ್ದೂ.. ಬಿದ್ದೂ ನಗುತ್ತಿದ್ದ...


Friday, May 3, 2013

ಎಲ್ಲ ಕಾಲದಲ್ಲೂ.. ಯುಗ ಯುಗಳಲ್ಲೂ .. ಸಲ್ಲುವವರು.. !!


ದ್ವಾಪರಯುಗ ಮುಗಿಯಿತು..
ಜಗತ್ ಪ್ರಳಯವಾಯಿತು....

ಇನ್ನು ಹೊಸದಾಗಿ ಸೃಷ್ಟಿ ಆಗಬೇಕಿತ್ತು...

ಇತ್ತ ನರಕದಲ್ಲಿ ...
ಯಮಧರ್ಮರಾಜನಿಗೆ ಬಹಳ ದೊಡ್ಡ ಸಮಸ್ಯೆ ಎದುರಾಯಿತು...

ಎಲ್ಲ ಯುಗದ ಕೆಟ್ಟ ರಾಕ್ಷಸರು ... 
ಸಿಕ್ಕಾಪಟ್ಟೆ ತೊಂದರೆ ಕೊಡತೊಡಗಿದರು...!
ರಾಕ್ಷಸರ ಉಪಟಳ ಯಮನಿಗೆ ಸಹಿಸುವದು ಕಷ್ಟವಾಗತೊಡಗಿತು....

ಯಮ ಬ್ರಹ್ಮನ ಬಳಿ ಹೋಗಿ ತನ್ನ ತೊಂದರೆ ಹೇಳಿಕೊಂಡ...

"ರಾಕ್ಷಸರೇ . ಹಾಗೆ...
ಅವರು  ಎಲ್ಲಿಯೇ  ಇದ್ದರೂ ತೊಂದರೆ ಕೊಡುತ್ತಾರೆ.. ..

ರಾಕ್ಷಸರ  ಸೃಷ್ಟಿಯೇ ಹಾಗಿದೆ...!

ಕಲಿಯುಗ ಶುರುವಾಗುತ್ತಿದೆಯಲ್ಲ.. 
ಅವರನ್ನು ಅಲ್ಲಿಗೆ ಕಳುಹಿಸಿಬಿಡು...
ಅಲ್ಲಿಯವರೆಗೆ ಸ್ವಲ್ಪ ತಾಳ್ಮೆಯಿಂದ ಇರು..."

ಯಮ ತನ್ನ ಲೋಕಕ್ಕೆ ಬಂದ..

ಇಲ್ಲಿ ... 
ರಾಕ್ಷಸರ ಕಾಟ ತಡೆಯಲಾಗದೆ ಯಮಕಿಂಕರುಗಳು .. 
"ನಾವು ಕೆಲಸಬಿಟ್ಟು ಬಿಡುತ್ತೇವೆ" ಅಂತ ಅಳಲು ತೋಡಿಕೊಂಡರು..

ಯಮನಿಗೆ ಕೋಪ ಬಂತು..

"ದುರುಳ ರಾಕ್ಷಸರೇ...
ಯಮಲೋಕದ ಶಿಕ್ಷೆ ಮುಗಿಸಿ ನಿಮಗೆ ಸ್ವರ್ಗಕ್ಕೆ ಕಳುಹಿಸಬೇಕಾಗಿತ್ತು..
ನಿಮ್ಮ ಉಪಟಳ ಜಾಸ್ತಿಯಾಗಿ ಹೋಯ್ತು...!

ನೀವೆಲ್ಲ ಇನ್ನೊಂದು ಜನ್ಮ ತಳೆದು ಭೂಲೋಕಕ್ಕೆ ಹೋಗಿ ಬನ್ನಿ....!! 

ಸ್ವರ್ಗಕ್ಕಾಗಿ ನೀವು ಇನ್ನೊಂದು ಯುಗ ಕಾಯಬೇಕು.. "

ಅಂತ ಕಣ್ಣು ಕೆಂಪಗೆ ಮಾಡಿ ಶಾಪ ಕೊಟ್ಟು ಬಿಟ್ಟನು...!

ರಾಕ್ಷಸರೆಲ್ಲ ಯಮನ ಕಾಲಿಗೆ ಬಿದ್ದರು..
ಅತ್ತು..ಕರೆದು ಗೋಳಾಡಿದರು...

" ಅಯ್ಯಾ..ಯಮ ದೇವರೆ...
ಇಷ್ಟು ದಿನ ನರಕದ ಘನಘೋರ ಶಿಕ್ಷೆಗಳನ್ನು ಅನುಭವಿಸಿದ್ದೇವೆ...

ಇದಕ್ಕೆ ರಿಯಾಯತಿ ಇಲ್ಲವೆ ?..
ನಮ್ಮ ಮೇಲೆ ಸ್ವಲ್ಪ ಕರುಣೇ ತೋರಿಸು...

ಯುಗ..
ಯುಗಗಳಲ್ಲಿ ನಮಗೆ ಯಾವಾಗಲೂ ಅನ್ಯಾಯವಾಗಿದೆ..!.. ."

"ಅದು ಹೇಗೆ ?"

"ನಮ್ಮನ್ನು .. 
ದೊಡ್ಡ ಹೊಟ್ಟೆ..ದೊಡ್ಡ ಕಣ್ಣು.. ಬಾಯಿ..!
ಕೆಟ್ಟದಾದ ಕೋರೆ ಹಲ್ಲು...!

ನಮ್ಮನ್ನು ಅತ್ಯಂತ ಕ್ರೂರವಾಗಿ... 
ಭಯಂಕರವಾಗಿ ಹುಟ್ಟಿಸಿ... ನಮಗೆ ಅನ್ಯಾಯವಾಗಿದೆ..."

ಯಮನಿಗೂ ರಾಕ್ಷಸರ ಮಾತು ಹೌದೆನಿಸಿತು...

"ಇದಕ್ಕೆ ಏನು ಮಾಡೋಣ.. ?
ನಾನು ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಳ್ಳಲಾಗುವದಿಲ್ಲ..."

ರಾಕ್ಷಸರು..
ಮತ್ತೆ ಯಮನ ಕಾಲಿಗೆ ಬಿದ್ದು ಹೊರಳಾಡಿದರು...

"ಯಮರಾಜ...
ಭೂಲೋಕಕ್ಕೆ ಹೋಗಲು ನಮ್ಮ ಅಭ್ಯಂತರವೇನಿಲ್ಲ...

ಆದರೆ ನಮಗೆ ಸ್ವಲ್ಪ .. 
ಅಂದ.. ಚಂದದ ರೂಪವನ್ನು ಕೊಡು.

ಭೂಲೋಕದ  ಜನರ ಪ್ರೀತಿಯನ್ನೂ ಅನುಗ್ರಹಿಸು..."

ಯಮ .. 
ಬಹಳಷ್ಟು ವಿಚಾರ ಮಾಡಿ .. 
ಅತ್ಯಂತ ಪ್ರಸನ್ನ ವದನದಿಂದ ಹೇಳಿದ..

" ತಥಾಸ್ತು....ರಾಕ್ಷಸರೇ...
ನೀವು... 
ಎಲ್ಲ ಕಾಲ... ಯುಗ.. ಯುಗಗಳಲ್ಲಿಯೂ ಸಲ್ಲುವವರು..... !

ಭೂಲೋಕದಲ್ಲಿ..
ಭರತ ಖಂಡವನ್ನು ನಿಮಗಾಗಿ ಸೃಷ್ಟಿಸಲಾಗಿದೆ...

ಅಲ್ಲಿ ಪ್ರಜಾ ಪ್ರಭುತ್ವವೆಂಬ ರಾಜ್ಯಾಡಳಿತ ಪದ್ಧತಿಯನ್ನು ಅನುಸರಿಸಲಾಗುತ್ತದೆ...

ಅಲ್ಲಿ..
ನೀವು " ಕೆಟ್ಟ ರಾಜಕಾರಣಿಗಳಾಗಿ " ಹುಟ್ಟಿರಿ...!

ಇದುವರೆಗೆ .. 
ಯಾವ ಜನ್ಮದಲ್ಲೂ ಮಾಡಲಾಗದ
ಅತ್ಯಾಚಾರ.. ಅನಾಚಾರಗಳನ್ನು ಮಾಡಿರಿ... !

ಮಾನ..
ಮರ್ಯಾದೆ ಎಲ್ಲವನ್ನೂ ಬಿಟ್ಟು..ದೇಶ... 
ರಾಜ್ಯಗಳನ್ನೂ ಲೂಟಿ ಹೊಡೆಯಿರಿ.. "

ರಾಕ್ಷಸರಿಗೆ ಪರಮಾನಂದವಾಯಿತು..

"ಯಾಮದೇವಾ..
ಅಲ್ಲಿನ ಜನಸಾಮನ್ಯರು ಏನನ್ನೂ ಮಾಡುವದಿಲ್ಲವೆ ?...

ಅಲ್ಲಿನ ಕಾನೂನು... ಆಡಳಿತ..
ಶಿಕ್ಷೆಗಳು ನಮಗೆ ತೊಂದರೆ ಕೊಡುವದಿಲ್ಲವೆ ? "... 

"ಖಂಡಿತ ಇಲ್ಲ.. !
ಅಲ್ಲಿನ ಅಧಿಕಾರ.. ಆಡಳಿತ..
ಕಾನೂನು ನಿಮ್ಮ ಕೈಯಲ್ಲೇ ಇರುತ್ತವೆ...

ಜನ ಸಾಮಾನ್ಯರಿಗೆ ಬಲು ಬೇಗ ಮರೆತು ಹೋಗುವ ಗುಣ ಸ್ವಭಾವವನ್ನು ದಯಾಪಾಲಿಸಿರುವೆ..
ಅಲ್ಲಿ ಯಾರೂ ಸಹ ನಿಮ್ಮನ್ನು ಏನನ್ನೂ ಮಾಡಲಾಗುವದಿಲ್ಲ...

ನಿಮ್ಮ ಹಿಂದೆ "ಎಷ್ಟೇ.. ಬಯ್ದು..
ಕ್ಯಾಕರಿಸಿ ಉಗುಳಿ..
ಲದ್ದಿ..
ಸಗಣಿಗಳಿಂದ ನಿಮ್ಮ ಭಾವಚಿತ್ರಕ್ಕೆ ಅವಮಾನ ಮಾಡಿದರೂ...

ನೀವು ಎದುರಿಗೆ ಬಂದಾಗ .. 
ನಿಮಗೆ ಬಹಳ ಮಾರ್ಯೆದೆಯಿಂದ ಗೌರವಿಸುವರು... !!

ನೀವು ಅಲ್ಲಿನ ಪ್ರಜೆಗಳಿಗೆ ಅನಿವಾರ್ಯ ಶಾಪ... 

ನೀವು ಪಕ್ಷಬೇಧವಿಲ್ಲದೇ.. ಜನಿಸಿ...
ದೇಶದ..
ನಾಡಿನ ಮರ್ಯಾದೆಯನ್ನು ಮೂರುಕಾಸಿಗೆ ಮಾರಾಟ ಮಾಡಿರಿ...!

ನೀವೂ..
ಕೆಟ್ಟು .. ಕೊಳೆತು... ಕೆರವಾಗಿ..
ಅಲ್ಲಿನ ಜನರನ್ನೂ ಬ್ರಷ್ಟರನ್ನಾಗಿ ಮಾಡಿರಿ...!! "

ರಾಕ್ಷಸರೆಲ್ಲ ... 
ಅತ್ಯಂತ ಸಂತೋಷದಿಂದ ಕುಣಿದಾಡಿದರು...!
ನಲಿದು ನರ್ತಿಸಿದರು...!

............... ................. .............. ............

ಆತ್ಮೀಯ.... 
ಭರತ ಖಂಡದ.. 
ಕರ್ನಾಟಕದ ಜನಸಾಮಾನ್ಯರೆ...

ಚುನಾವಣೆ ಹತ್ತಿರ ಬರುತ್ತಾ ಇದೆ...

ಭಸ್ಮಾಸುರ...
ರಕ್ತ ಬೀಜಾಸುರ.. !
ಅಹಿರಾವಣ.. ಮಹಿರಾವಣ.. !

ಬಕಾಸುರ...ನರಕಾಸುರ.. !!

ಎಲ್ಲರೂ ನಮ್ಮ ಎದುರಿಗೆ ಬರುತ್ತಾ ಇದ್ದಾರೆ...!

ಅವರನ್ನು .. 
ಅತ್ಯಂತ ಪ್ರೀತಿಯಿಂದ ಗುರುತಿಸಿ..

ತಮ್ಮ ಅಮೂಲ್ಯವಾದ ಮತವನ್ನು .. 
ಒಳ್ಳೆಯವರಿಗೆ ಚಲಾಯಿಸಿ....


(ಎಲ್ಲ ರಾಜಕಾರಣಿಗಳು  ಕೆಟ್ಟವರಲ್ಲ...
ಒಳ್ಳೆಯ ರಾಜಕೀಯದವರ  ಬಗೆಗೆ ಗೌರವದ ಸಲಾಮ್....)

.