Friday, May 3, 2013

ಎಲ್ಲ ಕಾಲದಲ್ಲೂ.. ಯುಗ ಯುಗಳಲ್ಲೂ .. ಸಲ್ಲುವವರು.. !!


ದ್ವಾಪರಯುಗ ಮುಗಿಯಿತು..
ಜಗತ್ ಪ್ರಳಯವಾಯಿತು....

ಇನ್ನು ಹೊಸದಾಗಿ ಸೃಷ್ಟಿ ಆಗಬೇಕಿತ್ತು...

ಇತ್ತ ನರಕದಲ್ಲಿ ...
ಯಮಧರ್ಮರಾಜನಿಗೆ ಬಹಳ ದೊಡ್ಡ ಸಮಸ್ಯೆ ಎದುರಾಯಿತು...

ಎಲ್ಲ ಯುಗದ ಕೆಟ್ಟ ರಾಕ್ಷಸರು ... 
ಸಿಕ್ಕಾಪಟ್ಟೆ ತೊಂದರೆ ಕೊಡತೊಡಗಿದರು...!
ರಾಕ್ಷಸರ ಉಪಟಳ ಯಮನಿಗೆ ಸಹಿಸುವದು ಕಷ್ಟವಾಗತೊಡಗಿತು....

ಯಮ ಬ್ರಹ್ಮನ ಬಳಿ ಹೋಗಿ ತನ್ನ ತೊಂದರೆ ಹೇಳಿಕೊಂಡ...

"ರಾಕ್ಷಸರೇ . ಹಾಗೆ...
ಅವರು  ಎಲ್ಲಿಯೇ  ಇದ್ದರೂ ತೊಂದರೆ ಕೊಡುತ್ತಾರೆ.. ..

ರಾಕ್ಷಸರ  ಸೃಷ್ಟಿಯೇ ಹಾಗಿದೆ...!

ಕಲಿಯುಗ ಶುರುವಾಗುತ್ತಿದೆಯಲ್ಲ.. 
ಅವರನ್ನು ಅಲ್ಲಿಗೆ ಕಳುಹಿಸಿಬಿಡು...
ಅಲ್ಲಿಯವರೆಗೆ ಸ್ವಲ್ಪ ತಾಳ್ಮೆಯಿಂದ ಇರು..."

ಯಮ ತನ್ನ ಲೋಕಕ್ಕೆ ಬಂದ..

ಇಲ್ಲಿ ... 
ರಾಕ್ಷಸರ ಕಾಟ ತಡೆಯಲಾಗದೆ ಯಮಕಿಂಕರುಗಳು .. 
"ನಾವು ಕೆಲಸಬಿಟ್ಟು ಬಿಡುತ್ತೇವೆ" ಅಂತ ಅಳಲು ತೋಡಿಕೊಂಡರು..

ಯಮನಿಗೆ ಕೋಪ ಬಂತು..

"ದುರುಳ ರಾಕ್ಷಸರೇ...
ಯಮಲೋಕದ ಶಿಕ್ಷೆ ಮುಗಿಸಿ ನಿಮಗೆ ಸ್ವರ್ಗಕ್ಕೆ ಕಳುಹಿಸಬೇಕಾಗಿತ್ತು..
ನಿಮ್ಮ ಉಪಟಳ ಜಾಸ್ತಿಯಾಗಿ ಹೋಯ್ತು...!

ನೀವೆಲ್ಲ ಇನ್ನೊಂದು ಜನ್ಮ ತಳೆದು ಭೂಲೋಕಕ್ಕೆ ಹೋಗಿ ಬನ್ನಿ....!! 

ಸ್ವರ್ಗಕ್ಕಾಗಿ ನೀವು ಇನ್ನೊಂದು ಯುಗ ಕಾಯಬೇಕು.. "

ಅಂತ ಕಣ್ಣು ಕೆಂಪಗೆ ಮಾಡಿ ಶಾಪ ಕೊಟ್ಟು ಬಿಟ್ಟನು...!

ರಾಕ್ಷಸರೆಲ್ಲ ಯಮನ ಕಾಲಿಗೆ ಬಿದ್ದರು..
ಅತ್ತು..ಕರೆದು ಗೋಳಾಡಿದರು...

" ಅಯ್ಯಾ..ಯಮ ದೇವರೆ...
ಇಷ್ಟು ದಿನ ನರಕದ ಘನಘೋರ ಶಿಕ್ಷೆಗಳನ್ನು ಅನುಭವಿಸಿದ್ದೇವೆ...

ಇದಕ್ಕೆ ರಿಯಾಯತಿ ಇಲ್ಲವೆ ?..
ನಮ್ಮ ಮೇಲೆ ಸ್ವಲ್ಪ ಕರುಣೇ ತೋರಿಸು...

ಯುಗ..
ಯುಗಗಳಲ್ಲಿ ನಮಗೆ ಯಾವಾಗಲೂ ಅನ್ಯಾಯವಾಗಿದೆ..!.. ."

"ಅದು ಹೇಗೆ ?"

"ನಮ್ಮನ್ನು .. 
ದೊಡ್ಡ ಹೊಟ್ಟೆ..ದೊಡ್ಡ ಕಣ್ಣು.. ಬಾಯಿ..!
ಕೆಟ್ಟದಾದ ಕೋರೆ ಹಲ್ಲು...!

ನಮ್ಮನ್ನು ಅತ್ಯಂತ ಕ್ರೂರವಾಗಿ... 
ಭಯಂಕರವಾಗಿ ಹುಟ್ಟಿಸಿ... ನಮಗೆ ಅನ್ಯಾಯವಾಗಿದೆ..."

ಯಮನಿಗೂ ರಾಕ್ಷಸರ ಮಾತು ಹೌದೆನಿಸಿತು...

"ಇದಕ್ಕೆ ಏನು ಮಾಡೋಣ.. ?
ನಾನು ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಳ್ಳಲಾಗುವದಿಲ್ಲ..."

ರಾಕ್ಷಸರು..
ಮತ್ತೆ ಯಮನ ಕಾಲಿಗೆ ಬಿದ್ದು ಹೊರಳಾಡಿದರು...

"ಯಮರಾಜ...
ಭೂಲೋಕಕ್ಕೆ ಹೋಗಲು ನಮ್ಮ ಅಭ್ಯಂತರವೇನಿಲ್ಲ...

ಆದರೆ ನಮಗೆ ಸ್ವಲ್ಪ .. 
ಅಂದ.. ಚಂದದ ರೂಪವನ್ನು ಕೊಡು.

ಭೂಲೋಕದ  ಜನರ ಪ್ರೀತಿಯನ್ನೂ ಅನುಗ್ರಹಿಸು..."

ಯಮ .. 
ಬಹಳಷ್ಟು ವಿಚಾರ ಮಾಡಿ .. 
ಅತ್ಯಂತ ಪ್ರಸನ್ನ ವದನದಿಂದ ಹೇಳಿದ..

" ತಥಾಸ್ತು....ರಾಕ್ಷಸರೇ...
ನೀವು... 
ಎಲ್ಲ ಕಾಲ... ಯುಗ.. ಯುಗಗಳಲ್ಲಿಯೂ ಸಲ್ಲುವವರು..... !

ಭೂಲೋಕದಲ್ಲಿ..
ಭರತ ಖಂಡವನ್ನು ನಿಮಗಾಗಿ ಸೃಷ್ಟಿಸಲಾಗಿದೆ...

ಅಲ್ಲಿ ಪ್ರಜಾ ಪ್ರಭುತ್ವವೆಂಬ ರಾಜ್ಯಾಡಳಿತ ಪದ್ಧತಿಯನ್ನು ಅನುಸರಿಸಲಾಗುತ್ತದೆ...

ಅಲ್ಲಿ..
ನೀವು " ಕೆಟ್ಟ ರಾಜಕಾರಣಿಗಳಾಗಿ " ಹುಟ್ಟಿರಿ...!

ಇದುವರೆಗೆ .. 
ಯಾವ ಜನ್ಮದಲ್ಲೂ ಮಾಡಲಾಗದ
ಅತ್ಯಾಚಾರ.. ಅನಾಚಾರಗಳನ್ನು ಮಾಡಿರಿ... !

ಮಾನ..
ಮರ್ಯಾದೆ ಎಲ್ಲವನ್ನೂ ಬಿಟ್ಟು..ದೇಶ... 
ರಾಜ್ಯಗಳನ್ನೂ ಲೂಟಿ ಹೊಡೆಯಿರಿ.. "

ರಾಕ್ಷಸರಿಗೆ ಪರಮಾನಂದವಾಯಿತು..

"ಯಾಮದೇವಾ..
ಅಲ್ಲಿನ ಜನಸಾಮನ್ಯರು ಏನನ್ನೂ ಮಾಡುವದಿಲ್ಲವೆ ?...

ಅಲ್ಲಿನ ಕಾನೂನು... ಆಡಳಿತ..
ಶಿಕ್ಷೆಗಳು ನಮಗೆ ತೊಂದರೆ ಕೊಡುವದಿಲ್ಲವೆ ? "... 

"ಖಂಡಿತ ಇಲ್ಲ.. !
ಅಲ್ಲಿನ ಅಧಿಕಾರ.. ಆಡಳಿತ..
ಕಾನೂನು ನಿಮ್ಮ ಕೈಯಲ್ಲೇ ಇರುತ್ತವೆ...

ಜನ ಸಾಮಾನ್ಯರಿಗೆ ಬಲು ಬೇಗ ಮರೆತು ಹೋಗುವ ಗುಣ ಸ್ವಭಾವವನ್ನು ದಯಾಪಾಲಿಸಿರುವೆ..
ಅಲ್ಲಿ ಯಾರೂ ಸಹ ನಿಮ್ಮನ್ನು ಏನನ್ನೂ ಮಾಡಲಾಗುವದಿಲ್ಲ...

ನಿಮ್ಮ ಹಿಂದೆ "ಎಷ್ಟೇ.. ಬಯ್ದು..
ಕ್ಯಾಕರಿಸಿ ಉಗುಳಿ..
ಲದ್ದಿ..
ಸಗಣಿಗಳಿಂದ ನಿಮ್ಮ ಭಾವಚಿತ್ರಕ್ಕೆ ಅವಮಾನ ಮಾಡಿದರೂ...

ನೀವು ಎದುರಿಗೆ ಬಂದಾಗ .. 
ನಿಮಗೆ ಬಹಳ ಮಾರ್ಯೆದೆಯಿಂದ ಗೌರವಿಸುವರು... !!

ನೀವು ಅಲ್ಲಿನ ಪ್ರಜೆಗಳಿಗೆ ಅನಿವಾರ್ಯ ಶಾಪ... 

ನೀವು ಪಕ್ಷಬೇಧವಿಲ್ಲದೇ.. ಜನಿಸಿ...
ದೇಶದ..
ನಾಡಿನ ಮರ್ಯಾದೆಯನ್ನು ಮೂರುಕಾಸಿಗೆ ಮಾರಾಟ ಮಾಡಿರಿ...!

ನೀವೂ..
ಕೆಟ್ಟು .. ಕೊಳೆತು... ಕೆರವಾಗಿ..
ಅಲ್ಲಿನ ಜನರನ್ನೂ ಬ್ರಷ್ಟರನ್ನಾಗಿ ಮಾಡಿರಿ...!! "

ರಾಕ್ಷಸರೆಲ್ಲ ... 
ಅತ್ಯಂತ ಸಂತೋಷದಿಂದ ಕುಣಿದಾಡಿದರು...!
ನಲಿದು ನರ್ತಿಸಿದರು...!

............... ................. .............. ............

ಆತ್ಮೀಯ.... 
ಭರತ ಖಂಡದ.. 
ಕರ್ನಾಟಕದ ಜನಸಾಮಾನ್ಯರೆ...

ಚುನಾವಣೆ ಹತ್ತಿರ ಬರುತ್ತಾ ಇದೆ...

ಭಸ್ಮಾಸುರ...
ರಕ್ತ ಬೀಜಾಸುರ.. !
ಅಹಿರಾವಣ.. ಮಹಿರಾವಣ.. !

ಬಕಾಸುರ...ನರಕಾಸುರ.. !!

ಎಲ್ಲರೂ ನಮ್ಮ ಎದುರಿಗೆ ಬರುತ್ತಾ ಇದ್ದಾರೆ...!

ಅವರನ್ನು .. 
ಅತ್ಯಂತ ಪ್ರೀತಿಯಿಂದ ಗುರುತಿಸಿ..

ತಮ್ಮ ಅಮೂಲ್ಯವಾದ ಮತವನ್ನು .. 
ಒಳ್ಳೆಯವರಿಗೆ ಚಲಾಯಿಸಿ....


(ಎಲ್ಲ ರಾಜಕಾರಣಿಗಳು  ಕೆಟ್ಟವರಲ್ಲ...
ಒಳ್ಳೆಯ ರಾಜಕೀಯದವರ  ಬಗೆಗೆ ಗೌರವದ ಸಲಾಮ್....)



14 comments:

ಚಿನ್ಮಯ ಭಟ್ said...

ಹಾ ಹಾ...
ಪ್ರಕಾಶಣ್ಣಾ...
ಕಣ್ಣ ಮುಂದಿರುವ ದುರಂತಕ್ಕೊಂದು ಕಲ್ಪನೆಯ ಚೌಕಟ್ಟು...
ಚೆನ್ನಾಗಿದೆ ಕಥೆ...
ಆದರೆ ಎದುರುಗಿರುವುದು ವ್ಯಥೆ..
ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಮು...

vasanth said...

ಕೋಟಿ ವಿದ್ಯೆಗಳಲ್ಲ್ಲಿ...ಲೂಟಿ ವಿದ್ಯೆಯೆ ಮೇಲು
ಲೂಟಿಯಿಂ ನೋಟು ಹೊಡೆದುದಲ್ಲದೆ
ವೋಟಿನಾತವದೇತಕೆ ಅಲ್ಪಜ್ಞ...

Ittigecement said...

ಪ್ರೀತಿಯ ಚಿನ್ಮಯ...

ಇವತ್ತು ಸುದ್ಧಿ ಚಾನೆಲ್ ನೋಡ್ತಾ ಇದ್ದೆ...

ಪಾಕಿಸ್ತಾನದಲ್ಲಿ ನಮ್ಮವನೊಬ್ಬನನ್ನು ಬರ್ಬರವಾಗಿ ಕೊಲೆ ಮಾದಲಾಯಿತು..
ಈ ಕಳ್ಳ ರಾಜಕಾರಣಿಗಳು ತಮ್ಮ ಬೇಳೇ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ..

ಇಲ್ಲಿ ಕರ್ನಾಟಕದಲ್ಲಿ ಹಣ..
ಹೆಂಡಗಳ ಸುರಿ ಮಳೆ.. !

ಇವರೆಲ್ಲ ನಿಜವಾಗಿಯೂ ರಾಕ್ಷಸರೇ ಇದ್ದಿರಬೇಕು..

ಒಳ್ಳೆಯ ರಾಕ್ಷಸರನ್ನು ಆರಿಸುವ ಸೌಭಾಗ್ಯ ನಮ್ಮದು...

Ittigecement said...

ವಸಂತರೇ..

ಬಹಳ ಸುಂದರವಾದ ತ್ರಿಪದಿ.. !

ನಮ್ಮ ಸರ್ವಜ್ಞ ..
ಕೆಟ್ಟ ರಾಜಕೀಯದವರನ್ನು ನೋಡಿದರೆ ಹೀಗೆ ಹೇಳುತ್ತಿದ್ದನೇನೊ.. !

ದಯವಿಟ್ಟು
ನಾವೆಲ್ಲ ಒಳ್ಳೆಯವರನ್ನು ಗುರುತಿಸಿ ಮತ ಚಲಾಯಿಸೋಣ...

umesh desai said...

ಈ ರಾಜಕಾರಣಿಗಳ ಉಗಮಕ್ಕೆ ಉತ್ಕರ್ಷಕ್ಕೆ ಜನಸಾಮಾನ್ಯರ ಕೊದುಗೆಯೂ ಇದೆ
ಯಾವುದೇ ಕ್ಷೇತ್ರವಿಂಗಡಣೆಯನ್ನೇ ತಗೊಳ್ಳಿ ಅಲ್ಲಿ ಲಿಂಗಾಯತರು, ಇಂತಿಷ್ಟು, ಒಕ್ಕಲಿಗರು ಇಂತಿಷ್ಟು
ಅಂತ ಇರುತ್ತದ್..ಜಾತಿ ಆಧಾರಿತ ಚುನಾವಣೆ ಇದು..ಮೇಲಾಗಿ ಹಣ ಹೆಂಡದ ಒಗ್ಗರಣೆ ಬೇರೆ
ವಿದ್ಯಾವಂತ್ರು ಒಂದು ದಿನ ರಜೆ ಸಿಕ್ಕಿತಂದು ರೆಸಾರ್ಟ, ಪಿಕನಿಕ್ಕು ಅಂತ ಹೋಗುತ್ತಾರೆ...
ಜಗತ್ತಿನ ಅತಿ ದೊಡ್ಡ ಡೆಮಾಕ್ರಸಿ ಹಾಸ್ಯಾಸ್ಪದ ಆಗಿದೆ..

Srikanth Manjunath said...


("ಪ್ರಭು ನಿನ್ನನ್ನು ಹೆಚ್ಚು ಕಾಲ ಬಿಟ್ಟು ಇರಲಾರೆವು.. ಶತ್ರುಗಳಾದರೂ ಚಿಂತೆಯಿಲ್ಲ ಮೂರೇ ಜನ್ಮಗಳು" ಎನ್ನುವ ಶಾಪಗ್ರಸ್ತ ಜಯ-ವಿಜಯರು ಭೂಲೋಕಕ್ಕೆ ಹೋಗುವ ಮೊದಲು ಯಮಾಲಯಕ್ಕೆ ಹೋಗಿ ನಿಮ್ಮ ಲೇಖನ ಓದುತ್ತಾರೆ.. ಅರೆ ಅರೆ ಕೆಟ್ಟು ಕೆರ ಹಿಡಿಯಲು ಬೇಕಾಗಿರುವ ಎಲ್ಲಾ ಮಾರ್ಗಸೂಚಿಗಳು ಇಲ್ಲಿವೆ ಎಂದು ಕುಣಿದಾಡುತ್ತಾ ಭೂಲೋಕಕ್ಕೆ ದಾಂಗುಡಿ ಇಡುತ್ತಾರೆ)
ಮನದಲ್ಲಿ "ತಮ" ಇಟ್ಟುಕೊಂಡು ಇಟ್ಟುಕೊಂಡು "ಮತ" ನೀಡಿ ಎಂದು ಆಜನ್ಮಕ್ಕೂ ಬರುವ ಈ ಮಂಗ ಮುಸುಡಿ ರಾಜಕಾರಣಿಗಳು ಮತ್ತೆ ಮತ್ತೆ ಬರುವುದನ್ನು ಸ್ವಲ್ಪ ಮಟ್ಟಿಗೆ ತಡೆಯಬೇಕಾದರೆ ನಿಮ್ಮ ಲೇಖನದಲ್ಲಿ ಹೇಳಿರುವಂತೆ ಮತ ಚಲಾಯಿಸಬೇಕು....ಮತ"ದಾನ" ಮಾಡಬಾರದು.. ಕೆಟ್ಟ ತರಕಾರಿಗಳ ಮಧ್ಯೆ ಒಳ್ಳೆಯದನ್ನು ಹುಡುಕಿ ಸೊಗಸಾಗಿ ಅಡುಗೆ ಮಾಡುವಂತೆ...ಅಂತಹವರನ್ನು ಗುರುತಿಸಿ ನಮ್ಮ ಹಕ್ಕನ್ನು ಉಪಯೋಗಿಸಿದಾಗ ನಮ್ಮ ಮಕ್ಕಳ ಕಾಲಕ್ಕೆ ಸುಂದರ ಸಮಾಜವನ್ನು ನೀಡಲು ಪ್ರಯತ್ನಿಸಬಹುದು.

ಸರಿಯಾದ ಸಮಯಕ್ಕೆ ಮನದಲ್ಲಿರುವ ತಮವನ್ನು ಹೊರಗೆ ಹಾಕಲು ಪ್ರೇರೇಪಿಸುವ ಉತ್ತಮ ಲೇಖನ ಸರ್ಜಿ.

Badarinath Palavalli said...

ಸರಿಯಾಗಿ ವಿವೇಚಿಸಿದ್ದೀರಾ ಸಾರ್.

ನಮ್ಮ ಗ್ರಹಚಾರ ನೋಡಿ, ಈ ಸರ್ತಿ ಯಾವ ಪಕ್ಷಕ್ಕೂ ಬಹುಮತ ಗ್ಯಾರಂಟೀ ಇಲ್ಲ. ಬರೀ ಚೌಚೌ ಬಾತ್ ಸರ್ಕಾರವೇ! ಆದ್ದರಿಂದ ರಾಕ್ಷಸರ ಕಾಂಬಿನೇಷನ್ ಆಡಳಿತ. ಹರಕೊಂಡು ಮುಕ್ಕಿ ಬಿಡ್ತಾರೇ.

ಪ್ರಾಯಶಃ ಈ ಚುನಾವಣೆಯು ಅತಿ ಶೀಘ್ರದಲ್ಲಿ ಬರುವ ಉಪ ಚುನಾವಣೆಗಳಿಗೆ ರಿಹರ್ಸಲ್ ಅಷ್ಟೇ!

Sudeepa ಸುದೀಪ said...

ಹ ಹ...ಚಂದದ ಸಾಲುಗಳನ್ನ ಕಟ್ಟಿದ್ದೀರ...

ಜನರಿಗೆ ರಾಜಕಾರಣಿ, ರಾಜಕೀಯ ಎಂಬ ಶಬ್ದಗಳನ್ನ ನೆನೆದರೆ ವಾಕರಿಕೆ ತರಿಸುವ ಪರಿಸ್ಥಿತಿ ಉಂಟಾಗಿದೆ .....

Dileep Hegde said...
This comment has been removed by the author.
Dileep Hegde said...

ಆ ಕಾಲದ ರಾಕ್ಷಸರು ಏನಾದರೂ ಒಂದು ಶಾಪ ಹೊತ್ತಿರ್ತಾ ಇದ್ರೂ ಪ್ರಕಾಶಣ್ಣ.. ಕಠಿಣ ತಪಸ್ಸು ಮಾಡಿ ಪಡೀತಾ ಇದ್ದ ವರವೇ ಅವ್ರಿಗೆ ಸಾವು ತರ್ತಾ ಇತ್ತು.. ಆದ್ರೆ ಈಗ ಖಾದಿ ತೊಟ್ಟಿರೋ ರಾಕ್ಷಸರಿದಾರೆ ನೋಡಿ... ಅವ್ರು ಚಿರಂಜೀವಿಗಳು... ಅವ್ರು ಸತ್ರೂ ಅವರು ನೀರು ಗೊಬ್ರಾ ಹಾಕಿ ಬೆಳೆಸಿರೋ ಗಬ್ಬು ಭೃಷ್ಟಾಚಾರಕ್ಕೆ ಮಾತ್ರ ಸಾವಿಲ್ಲ...

Ittigecement said...

ಉಮೇಶ ದೇಸಾಯಿಯವರೆ..

ವಿದ್ಯಾವಂತ ಮತದಾರ ಪ್ರಜಾಪ್ರಭುತ್ವದ ಬೆನ್ನೆಲಬು ಎನ್ನುತ್ತಾರೆ..
ನಮ್ಮಲ್ಲಿ ಹಾಗಾಗಿಲ್ಲ..
ಇದು ವಿಪರ್ಯಾಸ.

ಈ ಬಾರಿ ನಾವೆಲ್ಲ ಮತ ಚಲಾಯಿಸಿ ನಮ್ಮ ಕರ್ತವ್ಯವನ್ನು ನಿಭಾಯಿಸೋಣ...

ಒಳ್ಳೆಯ ಅಭ್ಯರ್ಥಿಗಳಿಗೇ ಮತ ಚಲಾಯಿಸೋಣ..

Jayalaxmi said...

"ನಿಮ್ಮ ಹಿಂದೆ "ಎಷ್ಟೇ.. ಬಯ್ದು..
ಕ್ಯಾಕರಿಸಿ ಉಗುಳಿ..
ಲದ್ದಿ..
ಸಗಣಿಗಳಿಂದ ನಿಮ್ಮ ಭಾವಚಿತ್ರಕ್ಕೆ ಅವಮಾನ ಮಾಡಿದರೂ...

ನೀವು ಎದುರಿಗೆ ಬಂದಾಗ ..
ನಿಮಗೆ ಬಹಳ ಮಾರ್ಯೆದೆಯಿಂದ ಗೌರವಿಸುವರು... !!"
ಇದು ನೋಡಿ ಪಕ್ಕಾ ಚಿತ್ರಣ!!!

sunaath said...

ಸುತ್ತಲೆಲ್ಲಾ ರಾಕ್ಷಸರೇ ತುಂಬಿರುವಾಗ, ಯಾರಿಗೆ ಮತ ಒತ್ತಿ ಬರೋದು?

Ittigecement said...

Thank you all .....