Wednesday, April 22, 2009

ಹೀಗೊಂದು... ನೆನಪು....!

ಆಗತಾನೆ ಹತ್ತನೆಯ ತರಗತಿಯ ಫಲಿತಾಂಶ ಬಂದಿತ್ತು...

ನಾನು ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿದ್ದೆ...
ಮುಂದೇನು ಓದಬೇಕು ಎನ್ನುವದರ ಬಗೆಗೆ ಮನೆಯಲ್ಲಿ ಚರ್ಚೆ ನಡೆದಿತ್ತು...

ನನಗೆ ಚಿತ್ರಕಲೆಯೆಂದರೆ ಬಹಳ ಇಷ್ಟವಾಗಿತ್ತು.

"ಚಿಕ್ಕಪ್ಪ ... ಡ್ರಾಯಿಂಗ್ ಓದುತ್ತೇನೆ"

" ಡ್ರಾಯಿಂಗ್ ಓದಿ ಹೊಟ್ಟೆ ತುಂಬಿಸಿಕೊಂಡವರು ಕಡಿಮೆ ...
ಮಗನೆ ಅದು ಬೇಡ..

ನೀನು ಸಂಪಾದನೆ ಶುರು ಮಾಡಿಕೊ...
ನಿನ್ನ ಕಾಲಲ್ಲಿ ನಿಂತುಕೊ..
ಆಮೇಲೆ ಹವ್ಯಾಸವಾಗಿ ಏನುಬೇಕಾದರೂ ಮಾಡು"

ಬುದ್ಧಿ ಮಾತು ಹೇಳಿದರು...

ಮತ್ತೇ ಏನು ಮಾಡಬೇಕು...?

" ವಿಜ್ಞಾನ ಓದು"

" ನಿಮ್ಮ ಕುಟುಂಬದಲ್ಲಿ.., ಸುತ್ತಮುತ್ತಲ ಹಳ್ಳಿಯಲ್ಲಿ ವಿಜ್ಞಾನ, ಗಣಿತವನ್ನು ಯಾರೂ ಓದಿಲ್ಲ...
ಇವನು ಪಾಸಾದದ್ದು ಸೆಕೆಂಡ್ ಕ್ಲಾಸ್..
ಇದು ಇವನ ತಲೆಗೆ ಹತ್ತೊದಿಲ್ಲ....
ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಆಗ್ತದೆ..."


ಪಕ್ಕದ ಮನೆಯವರೊಬ್ಬರು ಚಿಕ್ಕಪ್ಪನಿಗೆ ತಮ್ಮ ಅಮೂಲ್ಯ ಸಲಹೆ ಇತ್ತರು

ಅಷ್ಟರಲ್ಲಿ ನನ್ನಮ್ಮ ಕೊಟ್ಟಿಗೆಯಿಂದ ಒಳಗೆ ಅಡುಗೆಮನೆ ಕಡೆ ಹೋಗುತ್ತಿದ್ದರು...

ಅದೇ ಪಕ್ಕದ ಮನೆಯ ಮಹಾಶಯ ಅಮ್ಮನ ಬಳಿ....

"ಸಾವಿತ್ರಿ... ನಿನ್ನ ಮಗ ಮುಂದೆ ಏನಾಗ ಬೇಕು ಅಂತ ಬಯಸ್ತೀಯ..?"

ಅಂತ ಕೇಳಿದ....

"ಅವನು ಏನು ಬೇಕಾದರೂ ಓದಲಿ...
ಒಳ್ಳೆಯ ಮನುಷ್ಯನಾಗಲಿ...
ರಾಜಕುಮಾರ್ ಮಾಡಿದ ಪಾರ್ಟ್ ಹಾಗೆ..
ಹಣ ಮಾಡದಿದ್ದರೂ ಚಿಂತೆಯಿಲ್ಲ..
ಮರ್ಯಾದೆಯಿಂದ ಬಾಳಲಿ.."

ನನ್ನಮ್ಮ ಓದಿಲ್ಲ...
ಅಕ್ಷರ ಜ್ಞಾನ ಇಲ್ಲ...
ಅವಳು ಹೇಳಿದ ಮಾತು ಇನ್ನೂ ನನ್ನ ಕಿವಿಯಲ್ಲಿದೆ....

ಇದೇ ಬರುವ ೨೪ನೇ ದಿನಾಂಕದಂದು ರಾಜಕುಮಾರ್ ಹುಟ್ಟಿದ ದಿನ..

ಈ ನಮ್ಮ ರಾಜಕುಮಾರ್ ಬಹಳ ನೆನಪಾಗುತ್ತಿದ್ದಾರೆ..

ತಮ್ಮ ನಡತೆಯಿಂದ..
ಮಾಡಿದ ಪಾತ್ರಗಳಿಂದ...
ರಾಮಾಯಣ, ಮಹಭಾರತದ ಪಾತ್ರಗಳ ಹಾಗೆ..
ನಮ್ಮ ಜನತೆಯ ಜನಜೀವನದಲ್ಲಿ ಬೆರೆತು ಹೋಗಿದ್ದಾರೆ...

ರಜನಿಕಾಂತ್ ಹಾಗೆ ಜಿಲ್ಲೆಗಳಲ್ಲಿ ಬಡವರಿಗೆ ಕಲ್ಯಾಣ ಮಂಟಪ ,
ಬಡವರಿಗೆ ಸಹಾಯವಾಗುವಂಥಹ ಕೆಲಸ ಮಾಡದೇ ಇರಬಹುದು...

ತಮ್ಮ ಕೆಲಸದಲ್ಲಿ ತೋರುವ ಶ್ರದ್ಧೆಯಿಂದ..
ಆದರೆ ತಮ್ಮ ವಿನಮ್ರ ನಡತೆಯಿಂದ..
ಮಾಡಿದ ಪಾತ್ರಗಳಿಂದ..
ತಾವು ಹಾಡಿದ ಹಾಡಿನಿಂದ.. ನಮ್ಮ ಮನಸ್ಸಲ್ಲಿ ಆಳವಾಗಿ ಬೇರೂರಿಬಿಟ್ಟಿದ್ದಾರೆ..

ಕನ್ನಡವನ್ನು ಸ್ಪಷ್ಟವಾಗಿ ಹೇಗೆ ಮತಾಡಬೇಕು ಎನ್ನುವದಕ್ಕೆ ಅವರು ಮಾದರಿ..
ಅವರ ಮಾತುಗಳಲ್ಲಿ, ಹಾಡುಗಳಲ್ಲಿ..
ದೋಷಗಳನ್ನು ನಾವು ಹುಡುಕಿದರೂ ಸಿಗುವದಿಲ್ಲ...

ಅವರ ಸಿನೇಮಾಗಳಲ್ಲಿ ಕೆಟ್ಟ ಭಾಷೆಯಲ್ಲಿ ಬಯ್ಯುವ ಸನ್ನಿವೇಷ ಇರುವದಿಲ್ಲವಾಗಿತ್ತು..
ಗುರು, ಹಿರಿಯರಿಗೆ,
ತಂದೆ ತಾಯಿಯರಿಗೆ ಗೌರವ,
ದೇಶ, ಭಾಷೆಗಳ ಸಂಸ್ಕ್ರತಿ ಬಗೆಗೆ.. ಅವುಗಳ ಹಿರಿಮೆ ಇರುತ್ತಿತ್ತು...

ನಾವು ನಮ್ಮ ಕುಟುಂಬದ ಸದಸ್ಯರ ಸಂಗಡ ಧೈರ್ಯವಾಗಿ ಕುಳಿತು ನೋಡುವ ಸಿನೇಮಾ ಮಾಡುತ್ತಿದ್ದರು..
ಮಕ್ಕಳ , ಹಿರಿಯರ ಸಂಗಡ ಸಿನೇಮಾಕ್ಕೆ ಹೋದರೆ ...
ಮುಜುಗರದ ಸನ್ನಿವೇಶ ಖಂಡಿತ ಬರುವದಿಲ್ಲವಾಗಿತ್ತು...

ಅವರು ಇನ್ನಷ್ಟು ನಮ್ಮ ನಾಡಿಗೆ ಮಾಡಬಹುದಿತ್ತು ಅನ್ನುವವರಿಗೆ...

ನನ್ನದೊಂದು ಮಾತು...

ಮಾಡಿದ್ದು, ಸಾಧಿಸಿದ್ದು ಬಹಳ ಇದೆಯಲ್ಲ....

ನಾವೆಲ್ಲ ಹೇಗಿರಬೇಕು ಅನ್ನುವದಕ್ಕೆ ಅವರೊಂದು ಉದಾಹರಣೆಯಾಗಿದ್ದರು.. ಮಾದರಿಯಾಗಿದ್ದರು...

ನಾವೆಲ್ಲ ಅಂಥಹ ಸಿನೇಮಾನಟನನ್ನು ಆದರ್ಶವಾಗಿಟ್ಟುಕೊಂಡು ಬೆಳೆದಿದ್ದೇವೆ...

ನಮ್ಮ ಮಕ್ಕಳಿಗೆ ಯಾರಿದ್ದಾರೆ ಅಂಥಹ ಆದರ್ಶದ ವ್ಯಕ್ತಿ...?

ಅವರ ಜನ್ಮದಿನದ ಸಂದರ್ಭದಲ್ಲಿ ಅವರ ನೆನಪು...
ಅವರ ಸಾಧನೆಗಳ ಇಣುಕು ನೋಟ ನನ್ನ ದ್ರಷ್ಟಿಯಲ್ಲಿ...

ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ....
(ಸಿರ್ಸಿಗೆ ಹೋಗುತ್ತಿರುವೆ... ಹತ್ತು ದಿವಸ...

ನನ್ನ ಮಿತ್ರರ ಬ್ಲಾಗ್ ಗಳಿಗೆ ಹೋಗಿ ಪ್ರತಿಕ್ರಿಯೆ ಕೊಡಲಿಕ್ಕೆ ಆಗದಿರಬಹುದು...

ಅಲ್ಲಿಂದ ಬಂದ ಮೇಲೆ ನಿಮ್ಮೆಲ್ಲ ಪ್ರತಿಕ್ರಿಯೆಗಳಿಗೆ ಉತ್ತರ ಕೊಡುವೆ...

ಬಂದಮೇಲೆ ....

ಹೊಸದೊಂದು ಲೇಖನ ನನ್ನ ಬ್ಲಾಗಿನಲ್ಲಿ...

ಸಹಕರಿಸಿ...

ಪ್ರೀತಿಯಿಂದ

ಇಟ್ಟಿಗೆ ಸಿಮೆಂಟು)

19 comments:

Amit Hegde said...

ಪ್ರಯಾಣ ಸುಖಕರವಾಗಿರಲಿ.... :-) ದಯವಿಟ್ಟು ಕಜ್ಜಾಯ ತನ್ನಿ... ;-)

ಮನಸು said...

ಅಮ್ಮನ ಮಾತುಗಳು ಅಂದರೆ ಹಾಗೆ ಅಲ್ಲವೇ, ಅವರು ಮಕ್ಕಳು ಒಳ್ಳೆ ಮನುಷ್ಯನಾದರೆ ಸಾಕು ಎಂದು ಬಯಸುತ್ತಾರೆ. ನಿಮ್ಮ ಅಮ್ಮನ ಹರಕೆ ನಿಮ್ಮ ಸಾಧನೆಗೆ ಯಶಸ್ಸನ್ನು ನೀಡಲೆಂದು ಆಶಿಸುತ್ತೇವೆ.
ಈಗಿನ ಸಿನಿಮಾಗಳನ್ನು ಸಂಸಾರ ಸಮೇತರಾಗಿ ಕೂತು ನೋಡುವುದು ಕಷ್ಟ ಅಲ್ಲವೇ..? ನಿಮ್ಮ ಪ್ರಯಾಣ ಸುಖವಾಗಿರಲಿ ಅಲ್ಲಿನ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ನನ್ನಮ್ಮ ನಾನು ಹುಟ್ಟುವ ಎರಡು ದಿನ ಮುಂಚೆ, ಆಮೇಲೆ ನೋಡಲು ಆಗುವುದಿಲ್ಲ ಫಿಲಂ ನೋಡಲೇಬೇಕು ಎಂದು ಬ್ಲಾಕಲ್ಲಿ ಟಿಕೇಟ್ ತಗೊಂಡು ತನ್ನಣ್ಣನ ಸಂಗಡ ನವರಂಗ್ ನಲ್ಲಿ ಪಿಚ್ಚರ್ ನೋಡಿದ್ದರಂತೆ. ಆ ಫಿಲಂ "ಬಂಗಾರದಮನುಷ್ಯ"!
ನಿಮ್ಮ ಪ್ರಯಾಣ ಸುಖವಾಗಿರಲಿ. ಊರಿನ ಸಂಗತಿಗಳ ಬಗ್ಗೆ ಬ್ಲಾಗಿಗರೆಲ್ಲ ಕಾತರತೆಯಿಂದ ಕಾಯುತ್ತಿರುತ್ತೇವೆ. ನಿರಾಸೆ ಮಾಡಬೇಡಿ.ಒಳ್ಳೆಯದಾಗಲಿ.

PARAANJAPE K.N. said...

ಡಾ:ರಾಜ್ ಹುಟ್ಟುಹಬ್ಬದ ದಿನಕ್ಕೆ ಅವರನ್ನು ನೆನಪಿಸುವ ಬರಹ ಕೊಟ್ಟಿದ್ದೀರಿ,ಚೆನ್ನಾಗಿದೆ. ಜೊತೆಗೆ ಹತ್ತು ದಿನಗಳ ರಜೆ ಘೋಷಿಸಿದ್ದಿರಿ. ನಿತ್ಯಜ೦ಜಡದ ಸ೦ತೆಯಿ೦ದ ಮುಕ್ತರಾಗಿ ಆರಾಮಾಗಿದ್ದು ಬನ್ನಿ.

ಸುಧೇಶ್ ಶೆಟ್ಟಿ said...

ಡಾ. ರಾಜ್ ಕುಮಾರ್ ಅವರ ನೆನಪುಗಳು ಚೆನ್ನಾಗಿತ್ತು. ನನ್ನ ಅಚ್ಚುಮೆಚ್ಚಿನ ಗಾಯಕ ರಾಜ್ ಕುಮಾರ್...

ಶಿರ್ಸಿಯ ಪ್ರಯಾಣ ಸುಖಕರವಾಗಿರಲಿ ಪ್ರಕಾಶಣ್ಣ.

Unknown said...
This comment has been removed by the author.
Unknown said...

ಪ್ರಯಾಣ ಸುಖಕರವಾಗಿರಲಿ...

ನಾಗೇಶ್ said...

ನಿಮ್ಮ ಪ್ರಯಾಣ ಸಂತೋಷ ವಾಗಿರಲಿ ,

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ರಾಜ್ ಕುಮಾರ್ ಅವರ ರ ಬಗ್ಗೆ ಒಳ್ಳೆಯ ಲೇಖನ ಬರಿದಿದ್ದಿರಿ...

ನಿಮ್ಮ ಪ್ರಯಾಣ ಸುಖಕರವಾಗಿರಲಿ...
ಧನ್ಯವಾದಗಳು...

ಧರಿತ್ರಿ said...

ಪ್ರಕಾಶ್ ಸರ್...
ಡಾ! ರಾಜ್ ಹಾಡಿರುವ ಹಾಡುಗಳು, ನಟಿಸಿರುವ ಚಿತ್ರಗಳು ನನಗೆ ತುಂಬಾನೇ ಇಷ್ಟ.

ಮತ್ತೆ ಕುಟುಂಬ ಸಮೇತ ನೋಡುವ ಸಿನಿಮಾಗಳು ಈಗಂತೂ ಮರೀಚಿಕೆಯೇ ಸರಿ. ನಮ್ಮಲ್ಲಿ ಇನ್ನೊಬ್ಬ ಪುಟ್ಟಣ್ಣ ಕಣಗಾಲ್, ಇನ್ನೊಬ್ಬ ರಾಜ್ ಮತ್ತೆ ಹುಟ್ಟಿಬಂದರೆ,..ಬಹುಶಃ ನಾವು ಮರಳಿ ದಶಕಗಳ ಕಡೆ ಸಾಗಬಹುದೇನೋ?!

ಈಗಿನ ಹಾಡುಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ..ಬಹುತೇಕ ಹಾಡುಗಳು ಬರೇ ಪ್ರಾಸಕ್ಕಾಗಿ ಬರೆದಿರುತ್ತಾರೆಯೇ ವಿನಹಃ ಅದಕ್ಕೆ ಅರ್ಥಕ್ಕಿಂತ ಅನರ್ಥವೇ ಹೆಚ್ಚು.

ಒಳ್ಳೆಯ ಬರಹಕ್ಕೆ ಅಭಿನಂದನೆಗಳು.

-ಧರಿತ್ರಿ

Unknown said...

ಪ್ರಕಾಶ್ ಸರ್,
ಚೆನ್ನಾಗಿದೆ... ಡಾ. ರಾಜ್ ರನ್ನು ನೆನಪಿಸಿದ್ದೀರಿ... ನಾನು ಅವರ ಸಿನೆಮಾ ನೋಡಿದ್ದು ಬೆರಳೆಣಿಕೆಯಷ್ಟು.... ಆದರೆ ಹಾಡು ಮಾತ್ರ ತುಂಬಾ ಕೇಳುತ್ತೇನೆ...
ನಿಮ್ಮ ಪ್ರಯಾಣಕ್ಕೆ ಶುಭ ಹಾರೈಕೆಗಳು....

ಕ್ಷಣ... ಚಿಂತನೆ... said...

ಸರ್‍, ಡಾ. ರಾಜ್‌ ಅವರ ನೆನಪನ್ನು ಸಣ್ಣ ಒಂದು ಘಟನೆಯೊಂದಿಗೆ ನೆನಪು ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು ಮತ್ತು ಅಭಿನಂದನೆಗಳು
ಹಿರಿಯರು, ಮಕ್ಕಳು ಎಲ್ಲರೂ ಸಹ ಡಾ.ರಾಜ್‌ ಅವರ ಚಲನಚಿತ್ರಗಳನ್ನು ಯಾವುದೇ ಮುಜುಗರವಿಲ್ಲದೇ, ಆನಂದಿತರಾಗಿ ನೋಡುತ್ತಿದ್ದಂತಹ ಕಾಲ ಹೋಗಿದೆ. ಅಂತಹ ಸರಳ, ಕನ್ನಡಿಗ ನಟನ ನೆನಪು ಸದಾ ಹಸಿರಾಗಿ ಜನರಲ್ಲಿ ಮನೆಮಾಡಿರುತ್ತದೆ.

Godavari said...

ರಾಜ್ ಅವರ ವ್ಯಕ್ತಿತ್ವವೇ ಹಾಗೆ.. ಸದಾ ನೆನಪಿನಲ್ಲಿ ಉಳಿಯುವ ಕಲಾವಿದ ಅವರು..

ನಿಮ್ಮ ಚಿಕ್ಕ ಕಥೆಗಳು ಇಷ್ಟ ಆಗುತ್ತವೆ..

ಅಂದ ಹಾಗೆ..

ಶಿರ್ಸೀಲಿ ಮಳೆ ಶುರುವಾಯ್ದ??

ವಿನುತ said...

ಹೌದು ಪ್ರಕಾಶ್ ಅವರೇ, ರಾಜ್ ನಮ್ಮ ಮನೆ ಮನಗಳಲ್ಲಿ ನೆಲೆಸಿದ್ದಾರೆ. ನಾವಿರುವವರೆಗೂ ಅವರು ನಮ್ಮೊ೦ದಿಗಿರುತ್ತಾರೆ.
ಆ 'ಬ೦ಗಾರದ ಮನುಷ್ಯ' ನ ಚಿತ್ರಗಳೆ೦ದರೆ ಇ೦ದಿಗೂ ರಸದೌತಣ ಮನೆಯಲ್ಲಿ. 'ಮಯೂರ' ನ ಸಂಭಾಷಣೆಗಳೆಲ್ಲವೂ ಕ೦ಠಪಾಠ. 'ಬಭ್ರುವಾಹನ' ನನ ಅಪ್ಪ ಮಗನಾಗಿ ನಾವೇ ಅಪ್ಪ ಮಗಳು! ಕನ್ನಡಿಗ ಎ೦ಬುದಕ್ಕೇ ಅನ್ವರ್ಥದ೦ತಿದ್ದ ಅವರ ಹೆಸರೇ ನಮ್ಮೆಲ್ಲರನ್ನು ಇ೦ದಿಗೂ ಬೆಸೆಯುವುದು.

Prabhuraj Moogi said...

ಚಿಕ್ಕಂದಿನಲ್ಲಿ ನನಗೂ ಡ್ರಾಯಿಂಗ ಹವ್ಯಾಸವಿತ್ತು ನಿಮ್ಮ ಹಾಗೆ ನನಗೂ ಅದರ ಹುಚ್ಚು ಬಿಡಿಸಿದರು... ಈಗೀಗ ಮಾದರೀ ವ್ಯಕ್ತಿಗಳು ಕಡಿಮೆಯಾಗಿದ್ದಾರೆ ಅನ್ನೋದು ಸುಳ್ಳಲ್ಲ.. ಅದರೂ ಅಲ್ಲಿ ಇಲ್ಲಿ ಕೆಲವು ಇರುತ್ತಾರೆ..

Geetha said...

hello sir,
ಆಗ ಅವರು ಡ್ರಾಯಿಂಗ್ ಬೇಡ ಅಂದಿದ್ದಕ್ಕೆ ನೀವು ಒಪ್ಪಿದಿರಿ...ಆದರೆ ಈಗ ನೀವು ಡ್ರಾಯಿಂಗ್ (ಆರ್ಕಿಟೆಕ್ಚರಲ್ ಡ್ರಾಯಿಂಗು..!!) ಮಾಡೆ ಬೆಳೆದಿದ್ದಿರಲ್ವಾ ಸರ್..

happy holdiays :)

Unknown said...

ರಾಜ್ ಬಗ್ಗೆ ಮಾತು ಮನಮುಟ್ಟುವಂತೆ ಬಂದಿದೆ. ಹಳ್ಳಿಯ ನಿರಕ್ಷರಕುಕ್ಷಿಗಳೂ ಸಹ ರಾಜ್ ಪಾತ್ರಗಳಿಂದ ಪ್ರಭಾವಿತರಾಗಿದ್ದಾರೆ. ರಾಜ್ ನೆನಪು ಒಂದು ರೀತಿಯ ಸುಖದ ನೋವು.
ಊರಿನಿಂದ ಒಂದಷ್ಟು ಚೆಂದದ ಫೋಟೋ ಫನ್ ಜೊತೆ ಬನ್ನಿ!

ಗಿರಿ said...

ಪ್ರಕಾಶ್,

ನಿಮ್ಮದೇ ಬಾಳ ಪುಟದಿಂದ ಒಂದು ಹಾಳೆ ತಿರುವಿ ರಾಜ್ ಜನ್ಮದಿನದ ನೆನಪು ಮಾಡಿದ ನಿಮ್ಮ ಶೈಲಿಯೇ ವಿಷೇಶ ಹಾಗೂ ಅಪರೂಪ. ಅಭಿನಂದನೆಗಳು.

ಧನ್ಯವಾದಗಳು,
-ಗಿರಿ

shivu.k said...

ರಾಜ್ ಹುಟ್ಟು ಹಬ್ಬಕ್ಕೆ ಶುಭಾಶಯಗಳು....

ಸದ್ಯಕ್ಕೆ ಹೊಸತನದ ಬರವಣಿಗೆಯನ್ನು ನಿರೀಕ್ಷಿಸುತ್ತಿದ್ದೇನೆ...

ಧನ್ಯವಾದಗಳೂ...