Thursday, May 23, 2013

ನಿಮ್ಮದು ಇನ್ನೂ ...ಸಕ್ರೆ ಮೂಟೆ ಆಗಿಲ್ಲ ಬಿಡ್ರಿ.... !


ಈ ತಣ್ಣನೆಯ ಯಲ್ಲಾಪುರದಲ್ಲಿ ಉಳಿಯುವದೆಲ್ಲಿ ?...... 

ಛಳಿಗಾಲ....  
ಸಾಯಂಕಾಲ ಬೇರೆ  ಆಗಿತ್ತು... 

ಮರುದಿನ ..

ಮುಂಜಾನೆ ಇಬ್ಬನಿ ಬೀಳುವ ಹೊತ್ತು..
ನಾಡಿನ ಅತ್ಯಂತ ಸುಂದರ  .. 
"ಸಾತೊಡ್ಡಿ ಜಲಪಾತವನ್ನು" ನೋಡುವ ಕಾತುರ...!

ಗೆಳೆಯ ದಿಗ್ವಾಸ ಮತ್ತು ನಾನು ಇಬ್ಬರೇ ಇದ್ದಿದ್ದೆವು... 


ಗೆಳೆಯರೊಬ್ಬರಿಗೆ ಫೋನ್ ಮಾಡಿ ... 

" ಒಳ್ಳೆಯ ಹೊಟೆಲ್" ಬಗೆಗೆ ವಿಚಾರಿಸಿದೆವು..

ಅವರು ಹೇಳಿದ ಹೊಟೆಲ್ ಒಳಗೆ ಬಂದೆವು..


"ಒಂದು ... 

ಡಬಲ್ ಬೆಡ್ ರೂಮ್ ಬೇಕಾಗಿತ್ತು... ಇದೆಯಾ ?"

ದಿಗ್ವಾಸ್ ಕೇಳಿದ...


ಹೊಟೆಲ್ ಮ್ಯಾನೇಜರ್ ನಮ್ಮತ್ತ ಕಣ್ಣೆತ್ತಿ ನೋಡಲೂ ಇಲ್ಲ.. 


ಹೆಂಡತಿ ಹತ್ತಿರ ... 

ಮುಖ.. ಮುಸುಡಿ ಇಲ್ಲದೆ ಬಯ್ಯಿಸಿಕೊಂಡ... 
ಹರಳೆಣ್ಣೆ ಕುಡಿದವನ ಮುಖ ಮಾಡಿಕೊಂಡು ಹೇಳಿದ..

"ಇದೆ..."


"ಎಷ್ಟು...?"


" ನಾನೂರಾ...  ಐವತ್ತು..."


ನಾನು ಕಿಸೆಗೆ  ಕೈ ಹಾಕುವಷ್ಟರಲ್ಲಿ ದಿಗ್ವಾಸನಿಗೆ ಹಣ ಕೊಟ್ಟಾಗಿತ್ತು..


" ಬೆಳಿಗ್ಗೆ ಐದು ಗಂಟೆಗೆ ಬಿಸಿನೀರು ಸಿಗುತ್ತದಾ ?.. ."


ಹರಳೆಣ್ಣೆಯವ ನನ್ನ ಹೊಟ್ಟೆಯನ್ನೇ ದಿಟ್ಟಿಸಿ ನೋಡತೊಡಗಿದ... 


ಈ ಹೊಟ್ಟೆ ಹೊತ್ತುಕೊಂಡು ... 

ಬೆಳಿಗ್ಗೆ ಐದು ಗಂಟೆಯ ವಿಷಯ ಮಾತಾಡ್ತಾ ಇದ್ದಾನಲ್ಲಾ... 
ಅಂತ ಆಶ್ಚರ್ಯ ಆಗಿರಬಹುದು... 

 "ನೋಡೋಣ... ಬಿಡಿ... 

ಬೆಳಗಾಗಲಿ..."

ಆತ ಅತ್ಯಂತ ನಿರ್ವಿಕಾರ ಭಾವನೆಯಿಂದ ಉತ್ತರಿಸಿದ... 


ರಿಜಿಸ್ಟರ್ ಬುಕ್ಕಿನಲ್ಲಿ ... 

ನಮ್ಮ ವಿಳಾಸ ಬರೆದುಕೊಂಡದ್ದೂ ಆಯ್ತು...

ಮ್ಯಾನೇಜರ್ ಸುಮ್ಮನೇ ಇದ್ದ.. ಏನನ್ನೂ ಹೇಳ್ತಾನೇ.. ಇಲ್ಲ... !


"ಸ್ವಾಮಿ ರೂಮ್ ಎಲ್ಲಿದೆ  ?"


ದಿಗ್ವಾಸ ಎಚ್ಚರಿಸಿದ...


" ಲೆ  .. ಲೇ..... 
ಎಲ್ಲಿ ಹೋದ್ಯೋ... 
ಹರಕ್ ಚಡ್ಡಿ...   ಬಾರಲೇ.. ಇಲ್ಲಿ..."

ಒಬ್ಬ ಹುಡುಗ ಓಡೋಡಿ...  ಬಂದ..


ಅವನ ಚಡ್ಡಿ ಸರಿ ಇತ್ತು..


"ಇವರಿಗೆ .... 

ಅಲ್ಲಿ  ಲಾಸ್ಟ್ ರೂಮ್ ತೋರಿಸೊ....."

ಹರಕು ಚಡ್ಡಿ ಮುಂದೆ ಸಾಗಿದ.. 

ನಾವು ಹಿಂಬಾಲಿಸಿದೆವು...

ಸ್ವಲ್ಪ ದೂರ ಹೋದ ಮೇಲೆ ... 

ಹರಕು ಚಡ್ಡಿ ತಿರುಗಿ ನಿಂತು .... 
ಒಂಥರಾ ಮಾಡಿ ನನ್ನನ್ನೇ ನೋಡತೊಡಗಿದ.. .

ಕಣ್ಣಲ್ಲಿ ಏನೋ ಅನುಮಾನ.... !


ನನಗೆ ಕಸಿವಿಸಿ ಆಯ್ತು...


" ನಿಮಗೆ "ಗುರಿ" ಇದೆಯಾ...?..." 


ಹರಕು ಚಡ್ಡಿ ಗುಂಡು ಹೊಡೆದ ಹಾಗೆ ಪ್ರಶ್ನೆ ಕೇಳಿದ...


ನನಗೆ ಆಶ್ಚರ್ಯ.. !


"ಯಾಕೋ...? .."


"ನಿಮ್ಮನ್ನು ನೋಡಿದ್ರೆ  ... 

"ಗುರಿ"  ಇದ್ದವರ ಹಾಗೆ ಕಾಣಿಸೋದಿಲ್ಲ..." 

"ಏನು ಗುರಿ ಮಾರಾಯಾ ?


ಹೊಟೆಲ್ಲಿನಲ್ಲಿ ಉಳಿಯಲಿಕ್ಕೆ ಯಾವ ಗುರಿ ಬೇಕು ..?"

"ಅಲ್ಲಾ... 

ಬೇಜಾರು ಮಾಡ್ಕೋ ಬೇಡೀ... 
ಮೊದಲೇ ಹೇಳಿಬಿಡ್ತೇನೆ... 
ಗುರಿ ಇದ್ದರೆ ಮಾತ್ರ ಆ ರೂಮಿನಲ್ಲಿರಿ...

ಇಲ್ಲಾ  ಅಂದ್ರೆ ಬೇರೆ ರೂಮ್ ಮಾಡಿ.. !!... "


ದಿಗ್ವಾಸ ತಲೆ ಕೆರೆದು ಕೊಂಡ..!


ಹರಕು ಚಡ್ಡಿ...

ರೂಮಿನ ಬಾಗಿಲು ತೆಗೆದು ... 
ನನ್ನನ್ನು ಟಾಯ್ಲೆಟ್ಟಿನ ಬಳಿ ಕರೆದುಕೊಂಡು ಹೋದ...

ಟಾಯ್ಲೆಟ್ಟಿನ ಬಾಗಿಲಿಗೆ ಭುಜ ಕೊಟ್ಟು ... 

ಕೈ ಹಾಕಿ  ... 
ಬಾಗಿಲನ್ನು ಕಷ್ಟಪಟ್ಟು ಮೇಲೆ ಎತ್ತಿದ..
ಪಕ್ಕಕ್ಕೆ  ಸರಿಸಿದ ... 

ಸೀತಾ ಕಲ್ಯಾಣದಲ್ಲಿ  ಶ್ರೀರಾಮಚಂದ್ರ ಶಿವಧನಸ್ಸು ಎತ್ತಿದ ಹಾಗೆ... 


"ಈ ಬಾಗಿಲು ... 

ಸ್ವಲ್ಪ ಹೀಗೆ ಇದೇರ್ರೀ... !

ಪೇಟೆ ಹೆಣ್ಣು ಮಕ್ಕಳ ಬ್ಲೌಸ್ ಇದ್ದ ಹಾಗೆ... 


ಕೆಳಗೆ ಬಿದ್ದು ಹೋಗಿರ್ತದೆ... 

ಆಗಾಗ ಮೇಲೆ ಎತ್ತುತ್ತಾ ಇರಬೇಕು.. "


"ಇಲ್ಲಿ ನೋಡ್ರಿ... 

ಇದು ನಮ್ ಹೊಟೆಲ್ ಸಂಡಾಸು...."

ಅದು ತುಂಬಾ ಹಳೆಯ ಕಾಲದ ಭಾರತೀಯ ಮಾದರಿ ಪ್ಯಾನ್....

ನೆಲಕ್ಕೆ ಕುಳಿತು .. 
ಉಪಯೋಗಿಸುವಂಥಾದ್ದು... 

ಬಹಳ ಸಣ್ಣದಿತ್ತು...


ಉದ್ದ.. 

ಅಗಲ.. 
ಎತ್ತರ.. ಎಲ್ಲ ರೀತಿಯ ಅಳತೆಗಳಲ್ಲೂ ಚಿಕ್ಕದಾಗಿತ್ತು... 

"ವಿಷಯ ಏನು ಗೊತ್ತುಂಟಾ ?


ದೊಡ್ಡ ... 

ದೊಡ್ಡ ಸಕ್ರೆ ಮೂಟೆಯಂಥಹ ..
ಹೊಟ್ಟೆಯವರು ಬಂದು ಬಿಡ್ತಾರೆ....

ದೇವರಾಣೆ ಮಾಡಿ ಹೇಳ್ತೇನೆ.. !


ಅವರಿಗೆ ಗುರಿ ಇರೋದಿಲ್ಲ....

ಮಾಡುವದನ್ನು 

ಸರಿಯಾದ ಜಾಗದಲ್ಲಿ ಮಾಡುವದಿಲ್ಲ....!

ಏನೇನು ತಿಂದಿರ್ತಾರೋ... !


ಯಾರ್ಯಾರದ್ದೋ ... ಹೊಲಸುಗಳು... !


ಮರುದಿನ ... 

ನಾನು ಕ್ಲೀನ್ ಮಾಡಿ ತೊಳೆಯ ಬೇಕು...

ನನ್ನ ಹಣೆ ಬರಹ ನೋಡಿ ಮಾರಾಯ್ರೆ... ! "


ನನಗೆ ಗಾಭರಿ ಆಯ್ತು..!


ಹೊಟ್ಟೆ ನೋಡಿಕೊಂಡೆ..!


"ನಿಮ್ಮದು ... 

ಇನ್ನೂ ಸಕ್ರೆ ಮೂಟೆ  ಆಗಿಲ್ಲ ಬಿಡಿ...

ಯಾವುದಕ್ಕೂ  ಗುರಿ ಇದೆಯಾ ಅಂತ ... 

ಒಂದುಸಾರಿ... 
ಕೂತ್ಕೊಂಡು ನೋಡ್ಕೋ  ಬಿಡಿ... !...

ಬಾಗಿಲು ಹಾಕ್ಕೋತಿರಾ ?..  "

ಯಾರೋ ಕಿಸಕ್ಕನೆ ನಕ್ಕಾಂತಾಯಿತು...


ಹಿಂದೆ ತಿರುಗಿ  ನೋಡಿದೆ.. !


ದಿಗ್ವಾಸ ಬಿದ್ದೂ.. ಬಿದ್ದೂ ನಗುತ್ತಿದ್ದ...


Friday, May 3, 2013

ಎಲ್ಲ ಕಾಲದಲ್ಲೂ.. ಯುಗ ಯುಗಳಲ್ಲೂ .. ಸಲ್ಲುವವರು.. !!


ದ್ವಾಪರಯುಗ ಮುಗಿಯಿತು..
ಜಗತ್ ಪ್ರಳಯವಾಯಿತು....

ಇನ್ನು ಹೊಸದಾಗಿ ಸೃಷ್ಟಿ ಆಗಬೇಕಿತ್ತು...

ಇತ್ತ ನರಕದಲ್ಲಿ ...
ಯಮಧರ್ಮರಾಜನಿಗೆ ಬಹಳ ದೊಡ್ಡ ಸಮಸ್ಯೆ ಎದುರಾಯಿತು...

ಎಲ್ಲ ಯುಗದ ಕೆಟ್ಟ ರಾಕ್ಷಸರು ... 
ಸಿಕ್ಕಾಪಟ್ಟೆ ತೊಂದರೆ ಕೊಡತೊಡಗಿದರು...!
ರಾಕ್ಷಸರ ಉಪಟಳ ಯಮನಿಗೆ ಸಹಿಸುವದು ಕಷ್ಟವಾಗತೊಡಗಿತು....

ಯಮ ಬ್ರಹ್ಮನ ಬಳಿ ಹೋಗಿ ತನ್ನ ತೊಂದರೆ ಹೇಳಿಕೊಂಡ...

"ರಾಕ್ಷಸರೇ . ಹಾಗೆ...
ಅವರು  ಎಲ್ಲಿಯೇ  ಇದ್ದರೂ ತೊಂದರೆ ಕೊಡುತ್ತಾರೆ.. ..

ರಾಕ್ಷಸರ  ಸೃಷ್ಟಿಯೇ ಹಾಗಿದೆ...!

ಕಲಿಯುಗ ಶುರುವಾಗುತ್ತಿದೆಯಲ್ಲ.. 
ಅವರನ್ನು ಅಲ್ಲಿಗೆ ಕಳುಹಿಸಿಬಿಡು...
ಅಲ್ಲಿಯವರೆಗೆ ಸ್ವಲ್ಪ ತಾಳ್ಮೆಯಿಂದ ಇರು..."

ಯಮ ತನ್ನ ಲೋಕಕ್ಕೆ ಬಂದ..

ಇಲ್ಲಿ ... 
ರಾಕ್ಷಸರ ಕಾಟ ತಡೆಯಲಾಗದೆ ಯಮಕಿಂಕರುಗಳು .. 
"ನಾವು ಕೆಲಸಬಿಟ್ಟು ಬಿಡುತ್ತೇವೆ" ಅಂತ ಅಳಲು ತೋಡಿಕೊಂಡರು..

ಯಮನಿಗೆ ಕೋಪ ಬಂತು..

"ದುರುಳ ರಾಕ್ಷಸರೇ...
ಯಮಲೋಕದ ಶಿಕ್ಷೆ ಮುಗಿಸಿ ನಿಮಗೆ ಸ್ವರ್ಗಕ್ಕೆ ಕಳುಹಿಸಬೇಕಾಗಿತ್ತು..
ನಿಮ್ಮ ಉಪಟಳ ಜಾಸ್ತಿಯಾಗಿ ಹೋಯ್ತು...!

ನೀವೆಲ್ಲ ಇನ್ನೊಂದು ಜನ್ಮ ತಳೆದು ಭೂಲೋಕಕ್ಕೆ ಹೋಗಿ ಬನ್ನಿ....!! 

ಸ್ವರ್ಗಕ್ಕಾಗಿ ನೀವು ಇನ್ನೊಂದು ಯುಗ ಕಾಯಬೇಕು.. "

ಅಂತ ಕಣ್ಣು ಕೆಂಪಗೆ ಮಾಡಿ ಶಾಪ ಕೊಟ್ಟು ಬಿಟ್ಟನು...!

ರಾಕ್ಷಸರೆಲ್ಲ ಯಮನ ಕಾಲಿಗೆ ಬಿದ್ದರು..
ಅತ್ತು..ಕರೆದು ಗೋಳಾಡಿದರು...

" ಅಯ್ಯಾ..ಯಮ ದೇವರೆ...
ಇಷ್ಟು ದಿನ ನರಕದ ಘನಘೋರ ಶಿಕ್ಷೆಗಳನ್ನು ಅನುಭವಿಸಿದ್ದೇವೆ...

ಇದಕ್ಕೆ ರಿಯಾಯತಿ ಇಲ್ಲವೆ ?..
ನಮ್ಮ ಮೇಲೆ ಸ್ವಲ್ಪ ಕರುಣೇ ತೋರಿಸು...

ಯುಗ..
ಯುಗಗಳಲ್ಲಿ ನಮಗೆ ಯಾವಾಗಲೂ ಅನ್ಯಾಯವಾಗಿದೆ..!.. ."

"ಅದು ಹೇಗೆ ?"

"ನಮ್ಮನ್ನು .. 
ದೊಡ್ಡ ಹೊಟ್ಟೆ..ದೊಡ್ಡ ಕಣ್ಣು.. ಬಾಯಿ..!
ಕೆಟ್ಟದಾದ ಕೋರೆ ಹಲ್ಲು...!

ನಮ್ಮನ್ನು ಅತ್ಯಂತ ಕ್ರೂರವಾಗಿ... 
ಭಯಂಕರವಾಗಿ ಹುಟ್ಟಿಸಿ... ನಮಗೆ ಅನ್ಯಾಯವಾಗಿದೆ..."

ಯಮನಿಗೂ ರಾಕ್ಷಸರ ಮಾತು ಹೌದೆನಿಸಿತು...

"ಇದಕ್ಕೆ ಏನು ಮಾಡೋಣ.. ?
ನಾನು ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಳ್ಳಲಾಗುವದಿಲ್ಲ..."

ರಾಕ್ಷಸರು..
ಮತ್ತೆ ಯಮನ ಕಾಲಿಗೆ ಬಿದ್ದು ಹೊರಳಾಡಿದರು...

"ಯಮರಾಜ...
ಭೂಲೋಕಕ್ಕೆ ಹೋಗಲು ನಮ್ಮ ಅಭ್ಯಂತರವೇನಿಲ್ಲ...

ಆದರೆ ನಮಗೆ ಸ್ವಲ್ಪ .. 
ಅಂದ.. ಚಂದದ ರೂಪವನ್ನು ಕೊಡು.

ಭೂಲೋಕದ  ಜನರ ಪ್ರೀತಿಯನ್ನೂ ಅನುಗ್ರಹಿಸು..."

ಯಮ .. 
ಬಹಳಷ್ಟು ವಿಚಾರ ಮಾಡಿ .. 
ಅತ್ಯಂತ ಪ್ರಸನ್ನ ವದನದಿಂದ ಹೇಳಿದ..

" ತಥಾಸ್ತು....ರಾಕ್ಷಸರೇ...
ನೀವು... 
ಎಲ್ಲ ಕಾಲ... ಯುಗ.. ಯುಗಗಳಲ್ಲಿಯೂ ಸಲ್ಲುವವರು..... !

ಭೂಲೋಕದಲ್ಲಿ..
ಭರತ ಖಂಡವನ್ನು ನಿಮಗಾಗಿ ಸೃಷ್ಟಿಸಲಾಗಿದೆ...

ಅಲ್ಲಿ ಪ್ರಜಾ ಪ್ರಭುತ್ವವೆಂಬ ರಾಜ್ಯಾಡಳಿತ ಪದ್ಧತಿಯನ್ನು ಅನುಸರಿಸಲಾಗುತ್ತದೆ...

ಅಲ್ಲಿ..
ನೀವು " ಕೆಟ್ಟ ರಾಜಕಾರಣಿಗಳಾಗಿ " ಹುಟ್ಟಿರಿ...!

ಇದುವರೆಗೆ .. 
ಯಾವ ಜನ್ಮದಲ್ಲೂ ಮಾಡಲಾಗದ
ಅತ್ಯಾಚಾರ.. ಅನಾಚಾರಗಳನ್ನು ಮಾಡಿರಿ... !

ಮಾನ..
ಮರ್ಯಾದೆ ಎಲ್ಲವನ್ನೂ ಬಿಟ್ಟು..ದೇಶ... 
ರಾಜ್ಯಗಳನ್ನೂ ಲೂಟಿ ಹೊಡೆಯಿರಿ.. "

ರಾಕ್ಷಸರಿಗೆ ಪರಮಾನಂದವಾಯಿತು..

"ಯಾಮದೇವಾ..
ಅಲ್ಲಿನ ಜನಸಾಮನ್ಯರು ಏನನ್ನೂ ಮಾಡುವದಿಲ್ಲವೆ ?...

ಅಲ್ಲಿನ ಕಾನೂನು... ಆಡಳಿತ..
ಶಿಕ್ಷೆಗಳು ನಮಗೆ ತೊಂದರೆ ಕೊಡುವದಿಲ್ಲವೆ ? "... 

"ಖಂಡಿತ ಇಲ್ಲ.. !
ಅಲ್ಲಿನ ಅಧಿಕಾರ.. ಆಡಳಿತ..
ಕಾನೂನು ನಿಮ್ಮ ಕೈಯಲ್ಲೇ ಇರುತ್ತವೆ...

ಜನ ಸಾಮಾನ್ಯರಿಗೆ ಬಲು ಬೇಗ ಮರೆತು ಹೋಗುವ ಗುಣ ಸ್ವಭಾವವನ್ನು ದಯಾಪಾಲಿಸಿರುವೆ..
ಅಲ್ಲಿ ಯಾರೂ ಸಹ ನಿಮ್ಮನ್ನು ಏನನ್ನೂ ಮಾಡಲಾಗುವದಿಲ್ಲ...

ನಿಮ್ಮ ಹಿಂದೆ "ಎಷ್ಟೇ.. ಬಯ್ದು..
ಕ್ಯಾಕರಿಸಿ ಉಗುಳಿ..
ಲದ್ದಿ..
ಸಗಣಿಗಳಿಂದ ನಿಮ್ಮ ಭಾವಚಿತ್ರಕ್ಕೆ ಅವಮಾನ ಮಾಡಿದರೂ...

ನೀವು ಎದುರಿಗೆ ಬಂದಾಗ .. 
ನಿಮಗೆ ಬಹಳ ಮಾರ್ಯೆದೆಯಿಂದ ಗೌರವಿಸುವರು... !!

ನೀವು ಅಲ್ಲಿನ ಪ್ರಜೆಗಳಿಗೆ ಅನಿವಾರ್ಯ ಶಾಪ... 

ನೀವು ಪಕ್ಷಬೇಧವಿಲ್ಲದೇ.. ಜನಿಸಿ...
ದೇಶದ..
ನಾಡಿನ ಮರ್ಯಾದೆಯನ್ನು ಮೂರುಕಾಸಿಗೆ ಮಾರಾಟ ಮಾಡಿರಿ...!

ನೀವೂ..
ಕೆಟ್ಟು .. ಕೊಳೆತು... ಕೆರವಾಗಿ..
ಅಲ್ಲಿನ ಜನರನ್ನೂ ಬ್ರಷ್ಟರನ್ನಾಗಿ ಮಾಡಿರಿ...!! "

ರಾಕ್ಷಸರೆಲ್ಲ ... 
ಅತ್ಯಂತ ಸಂತೋಷದಿಂದ ಕುಣಿದಾಡಿದರು...!
ನಲಿದು ನರ್ತಿಸಿದರು...!

............... ................. .............. ............

ಆತ್ಮೀಯ.... 
ಭರತ ಖಂಡದ.. 
ಕರ್ನಾಟಕದ ಜನಸಾಮಾನ್ಯರೆ...

ಚುನಾವಣೆ ಹತ್ತಿರ ಬರುತ್ತಾ ಇದೆ...

ಭಸ್ಮಾಸುರ...
ರಕ್ತ ಬೀಜಾಸುರ.. !
ಅಹಿರಾವಣ.. ಮಹಿರಾವಣ.. !

ಬಕಾಸುರ...ನರಕಾಸುರ.. !!

ಎಲ್ಲರೂ ನಮ್ಮ ಎದುರಿಗೆ ಬರುತ್ತಾ ಇದ್ದಾರೆ...!

ಅವರನ್ನು .. 
ಅತ್ಯಂತ ಪ್ರೀತಿಯಿಂದ ಗುರುತಿಸಿ..

ತಮ್ಮ ಅಮೂಲ್ಯವಾದ ಮತವನ್ನು .. 
ಒಳ್ಳೆಯವರಿಗೆ ಚಲಾಯಿಸಿ....


(ಎಲ್ಲ ರಾಜಕಾರಣಿಗಳು  ಕೆಟ್ಟವರಲ್ಲ...
ಒಳ್ಳೆಯ ರಾಜಕೀಯದವರ  ಬಗೆಗೆ ಗೌರವದ ಸಲಾಮ್....)



Wednesday, February 27, 2013

ನಿರ್ಗಮನ...


ಮೈ.. ಕೈ ನೋವು ಜಾಸ್ತಿಯಾಗಿತ್ತು.... 
ಅತ್ತಿತ್ತ ಹೊರಳಾಡಿದೆ.... 

ನನ್ನ .. 

ನೋವಿನಲ್ಲೂ  ರಾಧೆಯ ನೆನಪು ಸಿಹಿ.. ಸವಿ .... !

ನನ್ನ ರಾಧೆ ಇದ್ದಾಳಲ್ಲ...

ಅವಳೊಂದು ವಿಚಿತ್ರ...

"ಕೃಷ್ಣಾ...

ನನಗಾಗಿ ಕೊಳಲ ನುಡಿಸು...."

ಕೊಳಲೆಂದರೆ ನನಗೆ ಪಂಚ ಪ್ರಾಣ... ...

ನಾನು ಹೇಳಲಾಗದ ಭಾವಗಳಿಗೊಂದು ಅದು ಧ್ವನಿ... !

ಕಣ್ಮುಚ್ಚಿ..

ತನ್ಮಯನಾಗಿ ನುಡಿಸುತ್ತಿದ್ದೆ...

ಗಿರಿ 

ಪರ್ವತಗಳನ್ನೇರಿ... 
ಆಕಾಶದಲ್ಲಿ.. 
ಮೋಡಗಳ ಜೊತೆಯಾಗಿ....  ತೇಲಿ... ತೇಲಿಹೋಗುತ್ತಿದ್ದೆ.... 

"ನನ್ನ ಮುದ್ದು ಕೃಷ್ಣಾ..

ನಿನ್ನ ಮುದ್ದಾದ ತುಟಿಗಳು ನನಗೆ ಮಾತ್ರ ಬೇಕು...

ಬಾ..

ನನ್ನ ಅಧರಗಳಲ್ಲಿ .. 
ನಿನ್ನ ಕೊಳಲ ನುಡಿ ನುಡಿಸು....

ನಿನ್ನಿಷ್ಟದ ರಾಗ ನುಡಿಸು ಬಾ..."


ಹುಚ್ಚು ರಾಧೆ... !! 

ನನಗೆ ನಗು ಬಂತು... ನಕ್ಕೆ...

" ನಗಬೇಡ ಶ್ಯಾಮಾ....


ನಾನು ಎದುರಿಗಿದ್ದರೂ...

ನನ್ನನ್ನು  ಬಿಟ್ಟು .. 
ಕಣ್ಮುಚ್ಚಿ ಈ ಕೊಳಲಿಗೆ ತುಟಿ ಹಚ್ಚಿ ಅನುಭವಿಸುವೆಯಲ್ಲ...
ಅದು ಹೇಗೊ ??.... 

ನನ್ನಲ್ಲಿ ಇಲ್ಲದ್ದು ಈ ಕೊಳಲಲ್ಲಿ ಏನಿದೆ ಶ್ಯಾಮಾ  ? "


ನಾನು ರಾಧೆಗೆ ಕೊಳಲು ಕೊಟ್ಟೆ...


"ನೀನೇ ನೋಡು... 

ಏನಿದೆ ಅಂತ..."

ರಾಧೆ ಕೊಳಲ ಒಳಗೆ ಇಣುಕಿ ನೋಡಿದಳು..


" ಇದರಲ್ಲಿ ಏನೂ ಇಲ್ಲ .. 

ನನ್ನ ಶ್ಯಾಮಾ...."

"ಈ ಕೊಳಲು ...

ನನ್ನ ಬಳಿ ಬಂದಾಗ .. 
ಏನನ್ನೂ  ಬಯಸದೆ ಬರುತ್ತಾಳೆ...

ನನ್ನ ಅಧರ ಸೋಕಿದಾಗಲೂ ... 

ಏನನ್ನೂ ಬೇಡುವದಿಲ್ಲ....
ಬಯಸುವದಿಲ್ಲ... 

ನೀನು  ಹಾಗಲ್ಲ.... "


ರಾಧೆ ನನ್ನ ಬಾಯಿ ಮುಚ್ಚಿದಳು....

ಬಿಗಿಯಾಗಿ ಅಪ್ಪಿದಳು...

"ಶ್ಯಾಮಾ....

ನನ್ನ ಮುಂದೆ ಯಾರನ್ನೂ ಹೊಗಳಬೇಡ..
ಈ ಕೊಳಲನ್ನೂ ಸಹ....

ನನ್ನ ಮುದ್ದು ಶ್ಯಾಮ ನನ್ನವನು .. 

ನನಗೆ ಮಾತ್ರ ಬೇಕು.... "... 

ಪ್ರೇಮವಿದ್ದಲ್ಲಿ ಅಧಿಕಾರವಿರಲೇ.... ಬೇಕಾ ?


ನನ್ನ .. 

ಏಕಾಂತದಲ್ಲೂ ಕಾಡುವಳು ಈ ರಾಧೆ....!

ರಾಧೆಯ ಹುಚ್ಚು ಪ್ರೇಮ ನನಗೂ ಇಷ್ಟ...


ಅತ್ತಿತ್ತ ಹೊರಳಾಡಿದೆ...

ಮೈ ಕೈ ನೋಯುತ್ತಿತ್ತು...

ನಿನ್ನೆ ಕಂಸ ಕಳುಹಿಸಿದ ರಾಕ್ಷಸನೊಡನೆ ಹೋರಾಡಿ ಸಾಯಿಸಿದ್ದೆ...


ಅಷ್ಟರಲ್ಲಿ ಬಾಗಿಲು ಕಿರ್ರ್.. ಶಬ್ಧ...


"ಕೃಷ್ಣಾ..."


" ಯಾರದು...?"


"ನಾನೊಬ್ಬ ಗೋಪಾಲಕ..

ನಂದ ಪ್ರಭುಗಳು ಕಳುಹಿಸಿದ್ದಾರೆ...
ನಿನ್ನ  ಸೇವೆ ಮಾಡಲಿಕ್ಕೆ..."

ನಾನು ಪ್ರಶ್ನಾರ್ಥಕವಾಗಿ ನೋಡಿದೆ...


"ಕೃಷ್ಣಾ...

ನಾನು ಚೆನ್ನಾಗಿ ತೈಲ ಸ್ನಾನ ಮಾಡಿಸುವೆ...
ಗೋಕುಲದಲ್ಲೇ ಪ್ರಸಿದ್ದ..."

ಆತ ... 

ತಾನು ತಂದಿದ್ದ ತೈಲವನ್ನು ಕೈಗೆ ಹಾಕಿಕೊಂಡು ಕಾಲುಗಳಿಗೆ ಸವರತೊಡಗಿದ.....

ನನಗೆ ಹಿತವಾಗುತ್ತಿತ್ತು...


"ನಾನು ನಿನ್ನ ಭಕ್ತ ...

ಕೃಷ್ಣಾ.....
ನಿನ್ನನ್ನು ಹತ್ತಿರದಿಂದ ನೋಡಬೇಕು... 
ಮಾತನಾಡಿಸಬೇಕು ...
ಎನ್ನುವದು ನನ್ನ ಬಹುದಿನಗಳ ಹಂಬಲ.. "

ಆತನ 

ನಡೆ..ನುಡಿಯಲ್ಲಿ  ಭಕ್ತಿ ಗೊತ್ತಾಗುತ್ತಿತ್ತು...

ಆತ ಮೃದು ಹೂವನ್ನು ಮುಟ್ಟುವಂತೆ ನನ್ನನ್ನು ಸ್ಪರ್ಷಿಸುತ್ತಿದ್ದ....


ಆತ ...

ಸಣ್ಣ ಧ್ವನಿಯಲ್ಲಿ ಮಾತನಾಡುತ್ತ ತೈಲ ಹಚ್ಚುವದನ್ನು ಮುಗಿಸಿ...
ಹಿತವಾಗಿ ಸ್ನಾನ ಮಾಡಿಸಿದ...

ಓಡೋಡಿ ಹೋಗಿ ಧೂಪವನ್ನು ತಂದ....


"ಕೃಷ್ಣಾ...

ನನ್ನ ಮನೆಯವರೆಲ್ಲ ನಿನ್ನ ಭಕ್ತರು...

ನನ್ನ ಮಡದಿಯಂತೂ ನಿನ್ನ ಹೆಸರಿನಲ್ಲೇ  .. 

ಊಟ...
ನಿನ್ನ ಹೆಸರಲ್ಲೇ ದಿನ ... 
ಬೆಳಗು ... ರಾತ್ರಿ.... ನಿನ್ನದೇ ಧ್ಯಾನ... !

ಅವಳ ಮನದಲ್ಲಿ .. ನೀನಿಲ್ಲದ ಕ್ಷಣವಿಲ್ಲ...


ಪ್ರತಿ ಕ್ಷಣ ನಿನ್ನದೇ ಭಜನೆ...."


" ಹೌದಾ.. !

ಯಾರವಳು....? "

"ರಾಧೆ....."


"ಯಾವ ರಾಧೆ.... ?"


"ಯಶೋಧೆಯಮ್ಮನ ಕಣ್ಣು ತಪ್ಪಿಸಿ...

ನಿನಗೆ .. 
ನಿತ್ಯ ಬೆಣ್ಣೆ ಕೊಡುವಳಲ್ಲ...ಆ  ರಾಧೆ...!

ನಮ್ಮ ಗೋಕುಲದಲ್ಲಿ ಒಬ್ಬಳೇ ರಾಧೆ...."...


ಸಾವಿರ ಭರ್ಚಿಗಳಿಂದ ಚುಚ್ಚಿದಂತೆ ಭಾಸವಾಯಿತು...!


ಹೇಳಲಾಗದ .. 

ಅಪರಾಧಿ ಮನೋಭಾವ ನನ್ನೊಳಗೆ......

"ಕೃಷ್ಣಾ...


ಪಾದಗಳನ್ನೊಮ್ಮೆ ಇತ್ತ ಕೊಡು...

ಮೃದುವಾಗಿ ಒತ್ತುವೆ...
ಆಯಾಸ ಕಡಿಮೆಯಾಗುತ್ತದೆ...."

"ಬೇಡ.. ಬೇಡ.. ಸಾಕು...

ನನಗೆ ನಿದ್ದೆ ಬರುತ್ತಿದೆ..
ಸ್ವಲ್ಪ ಹೊತ್ತು ನಿದ್ರಿಸುವೆ..."

"ಕೃಷ್ಣಾ...

ನೀನು ನಿದ್ರಿಸು...

ನನ್ನ ಮಡದಿ ಹೇಳುತ್ತಿರುತ್ತಾಳೆ...


" ಮಲಗಿದ ಕೃಷ್ಣನ ಮುಖ ಇನ್ನೂ ಮುದ್ದಾಗಿರುತ್ತದೆ..."


ನಾನು ಇಲ್ಲೇ ಗಾಳಿಬೀಸುತ್ತ ಇರುವೆ..."


ಮುಗ್ಧ ಭಕ್ತಿ... 

ಉತ್ಕಟ ಪ್ರೇಮ ...
ಎರಡನ್ನೂ ಹೇಗೆ ನಿಭಾಯಿಸಲಿ ?.. 

ನನಗೆ ನಾನು ಹೇಗೆ ಉತ್ತರಿಸಲಿ ?


ವಾತಾವರಣ .. 

ಬದಲಾಗಲು ಕೆಲವು ಶಬ್ಧಗಳು..
ಮಾತುಗಳು ಸಾಕು....

"ಬೇಡ...

ನನಗೆ ಏಕಾಂತ ಬೇಕು....
ದಯವಿಟ್ಟು ಹೊರಟು ಹೋಗು...."

ಆತ ನಿರಾಸೆಯಿಂದ ತಲೆ ತಗ್ಗಿಸಿ...

ನಮಸ್ಕರಿಸಿ ಹೊರಟು ಹೋದ...

ಆತ ಹೋಗುವಾಗ ... 

ಆತನ ಪ್ರತಿ ಹೆಜ್ಜೆ ನನ್ನ ಎದೆಯ ಮೇಲೆ ನಡೆದಂತಿತ್ತು....

ಅತ್ತಿತ್ತ ಹೊರಳಾಡಿದೆ....


ಮತ್ತೆ ಬಾಗಿಲು ಕಿರ್ರ್ ಶಬ್ಧ....


ರಾಧೆ... !!!!!!

ನನ್ನ ರಾಧೆ ಬರ್ತಿದ್ದಾಳೆ... !

ಕಣ್ಣು ಒರೆಸಿಕೊಂಡು ನೋಡಿದೆ... 


ನಿಜ .. !

ರಾಧೆ ಗಡಿಗೆಯಲ್ಲಿ ಬೆಣ್ಣೆ ತಂದಿದ್ದಳು.....

ಓಡೊಡಿ ಬಂದು ತಬ್ಬಿಕೊಂಡಳು..


ಮುಳ್ಳಿಂದ ಚುಚ್ಚಿದಂತಿತ್ತು...

ಕಸಿವಿಸಿ...

"ನನ್ನ ಮನಸ್ಸು ಸರಿ ಇಲ್ಲ..

ದಯವಿಟ್ಟು ದೂರ ಇರು...."

ಕಠಿಣವಾಗಿ ಹೇಳಬೇಕೆಂದುಕೊಂಡೆ... ಆಗಲಿಲ್ಲ...


" ನನ್ನ ಮುದ್ದು ಶ್ಯಾಮಾ...

ನಿನ್ನ ಮನಸ್ಸು ಸರಿ ಮಾಡುವದೇ.. ನನ್ನ ಕೆಲಸ..
ನಾನು ನಿನ್ನ ಸ್ಪೂರ್ತಿ...

ಏನಾಯ್ತು...? "


"ಹೇಳಿದೆನಲ್ಲ..

ಮನಸ್ಸು ಸರಿ ಇಲ್ಲ ಅಂತ.." 

ಕ್ಷಣ..

ಕ್ಷಣಕ್ಕೂ ಭಾವಗಳು ಬದಲಾಗಬಲ್ಲದು...

ಬದಲಾಗುವ ಸಮಯದಲ್ಲಿ ನಾವೂ ಬದಲಾಗಲೇ ಬೇಕು.... 


"ದಯವಿಟ್ಟು ದೂರ ಇರು.... 

ನನ್ನನ್ನು ಮುಟ್ಟಬೇಡ.."

"ಶ್ಯಾಮಾ...

ಆಯ್ತು..

ದೂರ ಕೂಡ ಹತ್ತಿರ ಮಾಡುತ್ತೇನೆ...


ನಾನು ನಿನ್ನನ್ನು ನೋಡಬಹುದಲ್ಲ...."


ಬಹಳ ಹಠಮಾರಿ ಈ ರಾಧೆ...


ರಾಧೆ ನನ್ನನ್ನೇ ನೋಡತೊಡಗಿದಳು...


ನನ್ನ ಹಣೆ...

ಹುಬ್ಬು..
ಕಣ್ಣು... ಕೆನ್ನೆ..
ತುಟಿ...
ಗಲ್ಲ....

ಈ ಜಗತ್ತಿನ ಸಮಸ್ತ ಪ್ರೇಮಧಾರೆ ಆ ನೋಟದಲ್ಲಿತ್ತು....

ಕ್ಷಣ..

ಕ್ಷಣದ ಆ ನೋಟ.. !
ಆ ಆಸೆ.. !
ಆ ಪ್ರೇಮ.. !!

ಅವಳ ನೋಟ ಮೃದುವಾದ ಚುಂಬನದಂತಿತ್ತು.... !

ನನಗೆ ಸುಮ್ಮನಿರಲಾಗಲಿಲ್ಲ...

ಬರಸೆಳೆದು ತಬ್ಬಿಕೊಂಡೆ....

"ಹೇಳು ಕೃಷ್ಣಾ...ಏನಾಯ್ತು...? "


"ಈಗ .. 

ಸ್ವಲ್ಪ ಸಮಯದ ಮೊದಲು .. 
ನಿನ್ನ ಗಂಡ..
ಗೋಪಾಲಕ ಬಂದಿದ್ದ... ತೈಲ ಸ್ನಾನ ಮಾಡಿಸಲು..."

ಇಬ್ಬರಲ್ಲೂ ಮಾತಿರಲಿಲ್ಲ....


ಮಾತುಗಳಿಗೆ ಶಬ್ದ ಸಿಗುತ್ತಿರಲಿಲ್ಲ.... 


ಸ್ವಲ್ಪ ಹೊತ್ತು ಬಿಟ್ಟು ರಾಧೆಯೇ ಕೇಳಿದಳು..


"ಜಾರಿ ..

ಬೀಳುವಾಗ..
ಬಿದ್ದಿದ್ದಷ್ಟೇ ಗೊತ್ತು..

ಎಲ್ಲಿ..  ?

ಏನು ಗೊತ್ತಾಗುವದಿಲ್ಲ....!

ಬೇಕೆಂದು  ಬಿದ್ದಿಲ್ಲವಲ್ಲ...."


"ಬಿದ್ದಮೇಲೆ ... 

ಎದ್ದು ನಿಲ್ಲಲೇ ... ಬೇಕಲ್ಲ... !

ನಾವೂ ನಿಲ್ಲಬೇಕು..."


"ಕೃಷ್ಣಾ....

ಜಾರಿ ಬಿದ್ದ ನೆಲದ ಮಣ್ಣು ಹೇಗೆ ಬಿಡುವದು... ?

ಅಂಟಿಕೊಂಡ ... 

ಕೆಸರಿನೊಡನೆ ನಂಟು ಹೇಗೆ ಬಿಡುವದು...?... "

"ರಾಧೆ..

ನಮಗೆ ಅಂಟಿದ ಕೆಸರನ್ನು ನಾವು ಸ್ವಚ್ಛ ಮಾಡಿಕೊಳ್ಳಬಹುದು... 

ಲೋಕದ ಕಣ್ಣಿನ ಕೆಸರನ್ನು ಏನು ಮಾಡುವದು  ?

ಯಾವಾಗಲೂ ಕೆಸರಿನ ಕಣ್ಣಿನಲ್ಲೇ ನೋಡುತ್ತಾರಲ್ಲ  ... !

ಈ ಕೃಷ್ಣನನ್ನು ಒಬ್ಬರೂ ಅರ್ಥ ಮಾಡಿಕೊಂಡಿಲ್ಲ...


ಯಾರ್ಯಾರು ಹೇಗೆ ಬಯಸಿದ್ದಾರೋ..

ಅವರವರಿಗೆ 
ಅವರು ಬಯಸಿದಂತೆಯೇ .. ಹಾಗೆಯೇ..  ಸಿಕ್ಕಿದ್ದೇನೆ....

ಯಶೋಧೆ ... 

ನಂದರಿಗೆ ಹೆತ್ತ ಮಗನಂತೆಯೇ ಕಂಡಿರುವೆ...

ಅಕ್ರೂರನಿಗೆ ದೇವರಂತೆ...


ದುರುಳ ಕಂಸನಿಗೆ ತನ್ನ ಸಾವಿನಂತೆ...


ಗೋಪಿಕಾಸ್ತ್ರೀಯರಿಗೆ ಅವರ ಮನೋಭಾವಂದಂತೆ.. 

ಪ್ರೇಮ.. ಪ್ರೀತಿಯಂತೆ..ಕಂಡಿರುವೆ..."

"ಶ್ಯಾಮಾ...

ನನಗೆ... ?  !!..."

"ನಿನಗೆ..

ನಿನ್ನ ಪವಿತ್ರ ಪ್ರೇಮದಂತೆ ಸಿಕ್ಕಿರುವೆ... 
ಕಣ್ಮುಚ್ಚಿ ಕೊಟ್ಟಿರುವೆ.... 

ರಾಧೆ...

ನನ್ನ ಈ ಜನ್ಮದಲ್ಲಿ ... 
ನನಗಾಗಿ ನಾನು ಏನನ್ನೂ ಬಯಸಲಿಲ್ಲ....

ಅವರವರ ಭಾವದಂತೆ ... 

ಅವರವರಿಗೆ ಕಂಡಿದ್ದೇನೆ....
ಅವರವರಿಗೆ ಅದನ್ನೇ..  ಕೊಟ್ಟಿರುವೆ..."

ರಾಧೆ ಮತ್ತಷ್ಟು ತಬ್ಬಿಕೊಂಡಳು...


"ನನ್ನ ಪ್ರೇಮಕ್ಕೆ ನೀನು ಪ್ರೇಮ ಕೊಟ್ಟಿರುವೆ.... 


ಸರಿ... 


ಈ ಪ್ರೇಮವನ್ನು ನೀನೂ ಸಹ  ಅನುಭವಿಸಿಲ್ಲವೇ ?... 


ಅವರವರಿಗೆ ಬಯಸಿದ್ದನ್ನು ಕೊಡುವಾಗ .. 

ನೀನೂ ಸಹ ಅನುಭವಿಸಿರುವೆಯಲ್ಲವೇ ? .. 

ಭಕ್ತಿಯನ್ನೋ... 

ಪ್ರೀತಿ.. ಪ್ರೇಮವನ್ನೋ.. 
ಕಾಮವನ್ನೊ... ಅನುಭವಿಸಿಲ್ಲವೇ ?.... 

ಕೊಟ್ಟಿರುವೆ ಎನ್ನುವ ಅಹಂಭಾವ ಇದೆಯಲ್ಲವೇ ?... "

ನಾನು ಸುಮ್ಮನಿದ್ದೆ.... 

ಎಲ್ಲ ಪ್ರಶ್ನೆಗಳಿಗೂ ಮಾತಿನಲ್ಲಿ ಉತ್ತರ ಕೊಡಬೇಕು ಅಂತ ಇಲ್ಲವಲ್ಲ.... 

"ನನ್ನ ಶ್ಯಾಮಾ...


ಹತ್ತಿರವಾದರೂ ಸರಿ..

ದೂರವಾದರೂ ಸರಿ.. ನನಗೆ ನೀನು ಬೇಕು...
ನಿನ್ನ ಪ್ರೇಮ ಬೇಕು...
ಸುಡುವ ವಿರಹವಾದರೂ ನನಗೆ ನಿನ್ನ ನೆನಪು ಬೇಕು..."

ನಾನು ಮಾತನಾಡಲೇ ಬೇಕಿತ್ತು....


"ವಿರಹವಿಲ್ಲದ ಪ್ರೇಮ ಅಪೂರ್ಣ....


ರಾಧೆ...

ನಾಳೆ...
ಗೋಕಲ ಬಿಟ್ಟು ಹೋಗಬೇಕಾಗಿದೆ...
ಕಂಸನ ಆಮಂತ್ರಣವಿದೆ.. ಮಥುರೆಗೆ ಬರಲು...

ಹೆತ್ತ .. 

ತಂದೆ ತಾಯಿಯರನ್ನು ಕಂಸನ ಬಂಧನದಿಂದ  ಬಿಡಿಸಬೇಕಾಗಿದೆ...."

"ಮತ್ತೆ ತಿರುಗಿ ಬರುವೆಯಲ್ಲ...?.."


ಅವಳ ಮಾತನ್ನು ಮುಚ್ಚಿಸಲೇ ಬೇಕಿತ್ತು....

ಮೃದುವಾಗಿ ಅವಳ ತುಟಿಗಳನ್ನು ಸವರಿದೆ..... 
ಕೆನ್ನೆಗಳು.. 
ಕಿವಿಯ ಬಳಿ ಮೃದುವಾಗಿ ಸ್ಪರ್ಶಿಸಿದೆ.... 

ರಾಧೆ  ಉನ್ಮತ್ತಳಾದಳು..... !

ರಾಧೆಯನ್ನು ದಿಕ್ಕು ತಪ್ಪಿಸಲು ಇಷ್ಟು ಸಾಕು..... 


"ರಾಧೆ...

ಸಿಕ್ಕಿದೆಯಲ್ಲ ಈ ಕ್ಷಣ... !

ಈ ಮಧುರ ಪ್ರೇಮದಲ್ಲಿ..

ಮಿಲನದಲ್ಲಿ... 
ವಿಚಾರಕ್ಕೆ..
ಬುದ್ಧಿಗೇಕೆ ಜಾಗ ಕೊಡುವೆ ?..

ನನ್ನೆಲ್ಲ ಪ್ರೇಮಧಾರೆ ನಿನಗಾಗಿ...

ನಿನ್ನ ಪ್ರೀತಿಗಾಗಿ..."

ರಾಧೆ ಬಿಗಿಯಾಗಿ ತಬ್ಬಿದಳು...


ಬಿಟ್ಟರೆ..

ಎಲ್ಲಿ ಓಡಿಹೋಗುವೆನೇನೋ ಎಂಬಂತೆ.....

ಮತ್ತೆ ..
ತಿರುಗಿ ಬರಲಾಗದ  ಮಥುರೆ.. ನನ್ನ ಕರೆಯುತ್ತಿತ್ತು...

ನನ್ನ ಅವತಾರದ ಅಪೂರ್ಣ ಕೆಲಸಗಳು... ನೆನಪಾಗುತ್ತಿತ್ತು...


ಗೋಕಲ ಬಿಟ್ಟು ಹೊರಡಲೇ ಬೇಕಿತ್ತು...


ಮುದ್ದು ರಾಧೆಯ .. 

ಮುದ್ದು ತುಟಿಗಳು ನನ್ನ ಅಧರಗಳನ್ನು   ಸೋಕುತ್ತಿದ್ದವು.... 

ರಾಧೆಯ ಕಣ್ಣುಗಳು ಮುಚ್ಚಿದ್ದವು.... 


ಮುಚ್ಚಿದ 
ಕಂಗಳಲ್ಲೂ ...  ಭರವಸೆ  ಕಾಣುತ್ತಿತ್ತು... 
ತನ್ನ ಪ್ರೀತಿಯ ಮೇಲೆ... 
ನನ್ನ ಮೇಲೆ.... 

ರಾಧೆಯ ಕಣ್ಣುಗಳು ಮುಚ್ಚಿಯೇ.. ಇದ್ದವು.... .....



(ಉತ್ತಮ ಪ್ರತಿಕ್ರಿಯೆಗಳಿವೆ .. 
ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....  )


Thursday, January 24, 2013

...... ಮೌನ .......


ನನ್ನ ಮೌನ ನನಗಿಷ್ಟ...

ಮೌನ ನನಗೆ ಅನಿವಾರ್ಯ ಕೂಡ...


ನನ್ನ ಅಪ್ಪ.. ಅಮ್ಮ ..

ಹಿರಿಯರೂ ಇದನ್ನೇ ಹೇಳಿದರು....

"ನೋಡಮ್ಮ...

ನೀನು ಪ್ರಕೃತಿ .. ಹೆಣ್ಣು...

ಮೌನ ...ನಿನಗೆ ಭೂಷಣ..


ಮೌನ .... ನಿನಗೆ ಚಂದ..."


ನನಗೆ ಗೊತ್ತು...

ನಾನು ನೋಡಲಿಕ್ಕೂ ಸುಂದರಿ....

ಈ ಚಂದ ..

ಸೌಂದರ್ಯ ಎನ್ನುವದು ಸಂತೋಷ ಕೊಡುತ್ತದೆ..

ನಿಜ..

ಚಂದದ ಆತಂಕಗಳೇನು ಎನ್ನುವದನ್ನು ಚಂದವಿದ್ದವರನ್ನು ಕೇಳಬೇಕು...

ಬೇರೆಯವರೆಲ್ಲ ಯಾಕೆ...?

ನಾನೇ ಹೇಳುತ್ತೇನೆ ಕೇಳಿ..

ಒಹ್.. !!

ನಾನು ಯಾರೆಂದು ನಿಮಗೆ ಹೇಳಲೇ ಇಲ್ಲವಲ್ಲ... !

ನಾನು ತುಳಸಿ...

ಧರ್ಮಧ್ವಜ... ಮಹಾರಾಜನ ಮಗಳು....

ಮಹಾವಿಷ್ಣುವಿನ ಪರಮ ಭಕ್ತೆ...


ನನ್ನ..

ಮೌನಕ್ಕೆ  ಭಾವನೆಗಳಿವೆ.... ಮಾತುಗಳಿವೆ...

ನನ್ನ..

ಮೌನದೊಡನೆ ಮಾತನಾಡುವಷ್ಟು ವ್ಯವಧಾನ ಯಾರಿಗಿದೆ ಹೇಳಿ....?

ನನ್ನ ಅಪ್ಪ ಬಾಡಿದ ಮುಖ ಮಾಡಿಕೊಂಡು ನನ್ನ ಬಳಿ ಬಂದಿದ್ದ..

ದುಗುಡ... ಆತಂಕ ಎದ್ದು ಕಾಣುತ್ತಿತ್ತು...

"ಮಗಳೆ..

ಇದೊಂದು ಇಕ್ಕಟ್ಟಿನ ಪರಿಸ್ಥಿತಿ..
ರಾಕ್ಷಸ ದೊರೆ..
" ಶಂಖಚೂಡ "  ನಿನ್ನನ್ನು  ಮದುವೆಯಾಗ ಬಯಸಿದ್ದಾನೆ...

ನಾನು ಒಪ್ಪಿಗೆ ಕೊಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ..."


ನಾನು ಸುಮ್ಮನಿದ್ದೆ..


"ಮಗಳೆ...

ನಿನಗೆ ಗೊತ್ತಲ್ಲ...
ನಾನು ನಿನ್ನನ್ನು ಕೊಡುವದಿಲ್ಲ ಅಂತ ಹೇಳಿದರೆ ..
ನಮ್ಮ ರಾಜ್ಯವನ್ನು ಆತ ಸರ್ವ ನಾಶ ಮಾಡಿಬಿಡುತ್ತಾನೆ..

ಈ ರಾಜ್ಯದ ರಾಜನಾಗಿ ..

ನಾನು ಆತಂಕದಲ್ಲಿದ್ದೇನೆ ಮಗಳೆ.."

ರಾಜ್ಯದ ಹಿತಾಸಕ್ತಿಯೋ ..

ಅಧಿಕಾರದ ಆಸೆಯೋ ನಾನು ರಾಕ್ಷಸನನ್ನು ಮದುವೆಯಾಗಬೇಕಿತ್ತು..
ನನ್ನಾಸೆಗಳನ್ನು ಬದಿಗಿಟ್ಟು...

"ಅಪ್ಪಾ...

ಆತ ರಾಕ್ಷಸ.. ಕೆಟ್ಟವ ಅಂತ ಹೇಳಿದವರ್ಯಾರು...?"

"ಇನ್ಯಾರಮ್ಮ...

ನಮ್ಮಂಥ ಮಾನವರು.. ದೇವತೆಗಳು.... "

"ಅಪ್ಪಯ್ಯ..

ಹುಲಿ.. ಸಿಂಹಗಳು  ಕ್ರೂರಿಗಳೆಂದು   ಹೇಳುವರ್ಯಾರು..?

ನಮ್ಮಂಥವರು ತಾನೆ..?


ಹುಲಿ ಜಿಂಕೆಯನ್ನು ಕೊಲ್ಲುತ್ತದೆ .. ..

ನಮ್ಮನ್ನೂ ತಿಂದುಬಿಡುತ್ತದೆ ಅಂತ..?.. "

"ಅಂದರೆ...?...... "


" ನಮ್ಮ ಹಿತಾಸಕ್ತಿಗಳಿಗೆ ಯಾರಾದರೂ ವಿರೋಧ ಮಾಡಿದರೆ ..

ಅವರು ಕೆಟ್ಟವರಾಗುತ್ತಾರೆ...
ರಾಕ್ಷಸರಾಗುತ್ತಾರೆ.. !..."

ದೇವತೆಗಳಿಗೂ... ರಾಕ್ಷಸರಿಗೂ ಎಷ್ಟೆಲ್ಲ ವರ್ಷಗಳಿಂದ ಯುದ್ಧ ನಡೆಯುತ್ತಿದೆಯಲ್ಲ...

ರಾಕ್ಷಸರೂ ಕಡಿಮೆಯೇನಿಲ್ಲ.."

"ಸ್ವಲ್ಪ ಬಿಡಿಸಿ ಹೇಳಮ್ಮ..."


"ಅಪ್ಪಯ್ಯಾ..

ಈ ದೇವತೆಗಳಿಗೆ ರಾಕ್ಷಸರು ಕೆಟ್ಟವರು  !...

ಮನುಷ್ಯರು..

ಮಾನವೀಯತೆ...
ಈ ದೇವತೆಗಳು ..
ಎಲ್ಲರೂ  ಸೇರಿಕೊಂಡು ಈ ಜಗತ್ತಿಗೆ ಇಷ್ಟೆಲ್ಲ ವರ್ಷಗಳಿಂದ ಏನು ಮಾಡಿದ್ದಾರೆ...?

ಈ ಒಳ್ಳೆಯವರೆಲ್ಲ ಸೇರಿ ...

ಇಲ್ಲಿತನಕ ಮಾಡಿದ್ದು ಜಗತ್ತಿನ..
ಈ ಭೂಮಿಯ ವಿನಾಶ ತಾನೆ?

ಒಂದು ವ್ಯವಸ್ಥಿತ ಅತ್ಯಾಚಾರ ತಾನೆ?...?.." 


ಅಪ್ಪ ಸುಮ್ಮನಿದ್ದ...


"ಪಾಪ..

ಪುಣ್ಯಗಳು  .. ತಪ್ಪು.. ಒಪ್ಪುಗಳು  ..
ಎಲ್ಲವೂ ..
ಅವರವರ ಮೂಗಿನ ನೇರಕ್ಕೆ ಅಪ್ಪಯ್ಯಾ..."

ನನಗೆ ..

ವೈಯಕ್ತಿವಾಗಿ  ನೋವಾದರೆ ಅದು ಅತ್ಯಾಚಾರ...
ಸಂತೋಷವಾದರೆ ಅದು ಸದಾಚಾರ..."

"ಮಗಳೆ..

ಈ ಮದುವೆಗೆ ನಿನ್ನ ಒಪ್ಪಿಗೆ ಇದೆಯಾ ? ... "

" ಅಪ್ಪಯ್ಯಾ..

ನನಗೆ ..
ನನ್ನ ಮೌನಕ್ಕೆ ಆಯ್ಕೆಯ ಸ್ವಾತಂತ್ರ್ಯವೆಲ್ಲಿದೆ...?

ರಾಕ್ಷಸರೋ... ಅಥವಾ ದೇವತೆಗಳೋ..
ಒಳ್ಳೆಯವರೋ... ಕೆಟ್ಟವರೋ...

ಎಲ್ಲರಿಗೂ ಬೇಕಾಗಿದ್ದು ನನ್ನ ಸೌಂದರ್ಯ ತಾನೆ...?


ನನ್ನ ಈ ಚಂದ ..

ಭೋಗಿಸಲ್ಪಡುವದಕ್ಕಾಗಿಯೇ.. ಇದ್ದದ್ದು...
ಉಪಯೋಗಿಸುವದಕ್ಕಾಗಿಯೇ .. ಇದ್ದದ್ದು..

ನನ್ನನ್ನು ಮದುವೆಯಾಗುವವ ..

ನನ್ನ ..
ಅಂದವನ್ನು ಆರಾಧಿಸುತ್ತಾನೋ...
ಭೋಗಿಸುತ್ತಾನೋ... ಗೊತ್ತಿಲ್ಲ...

ಪರಿಣಾಮ ನನ್ನ ದೇಹದ ಮೇಲೆ ತಾನೆ ?..


ಅಪ್ಪ ನನಗೂ ಈ ಭೂಮಿಗೂ ವ್ಯತ್ಯಾಸವೇನಿದೆ...?..


ಭಾಷೆ.. 

ಶಬ್ಧಗಳು ಏನೇ ಇದ್ದರೂ...
ಯಾವಾಗಲೂ "ಸೌಂದರ್ಯದ"  ಮೇಲೆ ನಡೆಯುವದು ..
ಅತ್ಯಾಚಾರವೇ ಅಲ್ಲವೇ ..?

ಅಪ್ಪಾ...
ಮೌನವೆಂದರೆ  "ಹೊಂದಾಣಿಕೆ"  ಅಲ್ವೇನಪ್ಪಾ.?

ನಾನು ಎಷ್ಟೆಂದರೂ  ಪ್ರಕೃತಿ... ಹೆಣ್ಣು...

ಪರಿಸ್ಥಿತಿಗೆ ಹೊಂದಿಕೊಂಡು ಹೋಗುವದೊಂದೆ ಉಳಿದಿರುವ ದಾರಿ...."

ಅಪ್ಪ ತಲೆ ತಗ್ಗಿಸಿದ...

ಅಪ್ಪನ ಅಸಹಾಯಕತೆಗೆ ಇನ್ನಷ್ಟು ಉಪದೇಶ ಕೊಡುವ ಮನಸ್ಸಾಗಲಿಲ್ಲ...

ನಮ್ಮ ಮದುವೆ ಬಲು ವಿಜ್ರಂಭಣೆಯಿಂದ ನಡೆಯಿತು...


ನನ್ನ ಗಂಡ..

ಮೊದಲ ರಾತ್ರಿಯಲ್ಲಿಯೇ..  ನನ್ನ  ಮನ ಗೆದ್ದ...

"ನೋಡು...

ಲೋಕದ ಕಣ್ಣಿಗೆ ನಾನು ರಾಕ್ಷಸ...

ನನಗೆ ಬೇಕಾಗಿದ್ದನ್ನು  "ಬೇಡಿ "ಅಭ್ಯಾಸವಿಲ್ಲ...


ಬೇಕಿದ್ದನ್ನು ..

ಯಾವ ಮುಲಾಜಿಲ್ಲದೆ ಪಡೆದು ..
ಅನುಭವಿಸುವದು ನನ್ನ ಸ್ವಭಾವ.."

ನನ್ನ ಬದುಕಿನಲ್ಲಿ..

ಮೊದಲ ಬಾರಿಗೆ ..
ನನ್ನ ಬಳಿ ಒಬ್ಬರು ಮುಖವಾಡವಿಲ್ಲದೆ ಮಾತನಾಡಿದ್ದರು... !

ನನಗೆ ಹೆದರಿಕೆ ಆಗಲೇ ಇಲ್ಲ...


ಬಲು ರಸಿಕ ಈ ಶಂಖಚೂಡ ...!


ಮಲಗುವ ಕೋಣೆಯ ಸೊಗಸಾದ ವಿನ್ಯಾಸ..

ಮೃದು ಹಾಸಿಗೆ...
ಉಣ್ಣೆಯ ಹೊದಿಕೆಗಳು...!

ಮೊದಲ ರಾತ್ರಿಯಲ್ಲಿ ಪ್ರೀತಿಯ ಮಳೆಗರೆದ...
ತನ್ನ
ಪೌರುಷ ಶಕ್ತಿಯಲಿ ನನ್ನನ್ನು ತೇಲಿಸಿದ...
ಭೋರ್ಗರೆದ....

ಭೋರ್ಗರೆವ ರಭಸದಲ್ಲೂ ಹಿತವಿತ್ತು....


ಪ್ರೇಮವೋ..

ಕಾಮವೋ....
ದೇಹಕ್ಕೂ  ಅದು ಬೇಕಿತ್ತು....

ನನ್ನನ್ನು ಅರ್ಪಿಸಿಕೊಂಡ ಧನ್ಯತಾ ಭಾವನೆಯನ್ನು ಆತ ಮೂಡಿಸಿದ...


ಶಂಖಚೂಡ...ನನಗೆ ಇಷ್ಟವಾದ...

ಮನಸಾರೆ ಪ್ರೀತಿಸಿದೆ...

ಒಳಗಿನ ಹುಳುಕು..

ಕೆಟ್ಟತನವನ್ನು ಮುಚ್ಚಿ ...
ಹೊರಗೆ ಸಭ್ಯತೆಯ ಸೋಗಲಾಡಿತನ ಅವನಲ್ಲಿರಲಿಲ್ಲ....

ನನ್ನ ...

ಅಂತಃಪುರದಲ್ಲಿ ದೊಡ್ಡ ದೊಡ್ಡ ಕಿಡಕಿಗಳಿದ್ದವು...
ದೊಡ್ಡ ದೊಡ್ಡ ಪರದೆಗಳು ಇದ್ದವು..

ಶಂಖಚೂಡ  ನನ್ನ ಗಂಡ...

ನನ್ನನ್ನು ಪ್ರೀತಿಸುತ್ತಾನೆ... 
ಇಷ್ಟು ಸಾಕಿತ್ತು ನನ್ನ ಅಂತಃಪುರದ ರಾಣಿಯ ಪರದೆಯ ಬದುಕಿಗೆ....

ಹೊರಗಿನ ಪ್ರಪಂಚ ಏನು ಹೇಳುತ್ತದೆ..

ಅಲ್ಲಿ ಏನಾಯ್ತು...? ನನಗೆ ಅದೆಲ್ಲ ಬೇಕಿರಲಿಲ್ಲ..

ಒಂದು ದಿನ ನನ್ನ ಅಪ್ಪ ಬಂದ..

ಮತ್ತೆ ಅದೇ ಆತಂಕದ ಮುಖವಿತ್ತು...

"ಮಗಳೆ....

ನಿನಗೊಂದು ಕೆಟ್ಟ ಸುದ್ಧಿ..."

"ಏನು...?"


"ನಿನ್ನ ಗಂಡನನ್ನು ಸಾಯಿಸಲಿಕ್ಕೆ ...

ದೇವತೆಗಳಲ್ಲಿ ಸಭೆ ನಡೆಯಿತಂತೆ..."

ನನ್ನ ಗಂಡ ದಿನ ನಿತ್ಯ ಯುದ್ಧ ಮಾಡುತ್ತಿದ್ದ....

ಅದು ನನಗೆ ಗೊತ್ತಿತ್ತು...

ನಾನು ಏನ ಮಾತನಾಡಲಿ ಅಂತ ಗೊಂದಲದಲ್ಲಿದ್ದೆ...


ಮೌನವೆಂದರೆ ..

ದ್ವಂದ್ವ .... ಗೊಂದಲ... !

ನಾನು ಮಾತನಾಡಲೇಬೇಕಿತ್ತು...


"ಅಪ್ಪ...

ನನ್ನ ಗಂಡ ರಾಜ....
ಅದರಲ್ಲೂ ಆತ ಲೋಕದ ಕಣ್ಣಿಗೆ  ರಾಕ್ಷಸ...
ಯುದ್ಧ ಅವನಿಗೆ ಅನಿವಾರ್ಯ...
ಯುದ್ಧವೆಂದಮೇಲೆ ನೋವಿನ  ನಿರೀಕ್ಷೆಯನ್ನೂ ಇಟ್ಟುಕೊಳ್ಳಬೇಕು...."

"ಅದಲ್ಲ ಮಗಳೆ...

ಶಂಖಚೂಡ  ಎಷ್ಟೇ ಯುದ್ಧ ಮಾಡಿದರೂ ಅವನಿಗೆ ಸಾವಿಲ್ಲ...!

ನಿನ್ನ ಪಾತಿವೃತ್ಯ ಅವನನ್ನು ಕಾಪಾಡುತ್ತದೆ...

ಕಾಪಾಡುತ್ತಿದೆ...!

ಆತ ಲೋಕ ಕಂಟಕನಾಗಿದ್ದಾನೆ...

ಮಾನವರ.. 
ಮಾನವೀಯತೆಯ ಹತ್ಯೆ ಮಾಡುತ್ತಿದ್ದಾನೆ...

ದೇವತೆಗಳನ್ನು ಯುದ್ಧದಲ್ಲಿ ಸೋಲಿಸುತ್ತಿದ್ದಾನೆ...."


ನನ್ನ ಅಪ್ಪ ...

ನನ್ನ ಬಳಿ ಯಾವಾಗಲೂ ನೇರವಾಗಿ ಮಾತನಾಡಿಮಾತನಾಡಿದ್ದೇ ಇಲ್ಲ...

ನಾನೇ ..

ಅವನ ಮಾತಿನ ಅರ್ಥವನ್ನು ಮಾಡಿಕೊಳ್ಳಬೇಕಿತ್ತು....

ನಾನು ನನ್ನ ಅಪ್ಪನ ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿದೆ...


"ಅಪ್ಪಯ್ಯಾ...

ನಾನೀಗ ನಿಮ್ಮ ಮಗಳಿಗಿಂತ ..
ನಾನವನ ಧರ್ಮ ಪತ್ನಿ..

ನನ್ನ  ಮದುವೆಯ..

ಬಾಳಿನ ಪ್ರಶ್ನೆ ಇರುವಾಗ 
ನಿನ್ನ..
ರಾಜ್ಯದ ಹಿತಾಸಕ್ತಿಗಾಗಿ  ಇವನೊಡನೆ ನನ್ನ ಮದುವೆ ಮಾಡಿದೆ...

ನಾನಿಲ್ಲಿ ಸುಖವಾಗಿರುವೆ...


ಲೋಕದಲ್ಲಿ ಏನೇ ನಡೆದರೂ ..

ನನಗೂ ಅದಕ್ಕೂ  ಏನೂ ಸಂಬಂಧವಿಲ್ಲ...
ನನಗೆ ಅದರ ಅಗತ್ಯವೂ ಇಲ್ಲ..

ನನ್ನಗಂಡ...

ನನ್ನ ಸಂಸಾರ... ನನ್ನ ಗಂಡನ ಸುಖವಷ್ಟೇ ನನಗೆ ಮುಖ್ಯ...."

ಅಪ್ಪ ಹೆಚ್ಚಿಗೆ ಮಾತನಾಡದೆ ಹೊರಟು ಹೋದ...


ಕೊನೆಗೆ ಗೊತ್ತಾಗಿದ್ದು..

ನನ್ನಪ್ಪ ತಾನಾಗಿಯೇ ನನ್ನನ್ನು ನೋಡಲು ಬಂದಿಲ್ಲ...
ದೇವತೆಗಳು ನನ್ನನ್ನು ಮಾತನಾಡಿಸಲು ಕಳಿಸಿದ್ದರಂತೆ....

ನನ್ನ ಪಾತಿವೃತ್ಯದ ಬಗೆಗೆ ವಿಷಯದ ಬಗೆಗೆ ಮಾತನಾಡಲಿಕ್ಕೆ...


ನನ್ನ ಗಂಡ ..

ತನ್ನ ಯುದ್ಧ ಕವಚವನ್ನು ಎಲ್ಲಿಯವರೆಗೆ ಕಳಚುವದಿಲ್ಲವೋ....
ನಾನು ಎಲ್ಲಿಯವರೆಗೆ ಪತಿವೃತೆಯಾಗಿರುತ್ತೇನೆಯೋ..
ಅಲ್ಲಿಯತನಕ ನನ್ನ ಗಂಡನಿಗೆ ಸಾವಿಲ್ಲ.... 

ಇದು ಸತ್ಯ...


ನನ್ನ ಅಪ್ಪನಿಗೆ ನನ್ನ ಪಾತಿವೃತ್ಯ ಬೇಕಿಲ್ಲವಾಗಿತ್ತಾ... !


ದೇವತೆಗಳಲ್ಲಿ 

ಈ ವಿಷ್ಣು ಮಹಾ  ಬುದ್ಧಿವಂತ..
ಆತನೇ ಏನಾದರೂ ಉಪಾಯ ಮಾಡಬಹುದೆ?

ನಾನು ಎಷ್ಟೆಂದರೂ ವಿಷ್ಣುವಿನ ಪರಮ ಭಕ್ತೆ...

ನಾನು ಪೂಜಿಸುವ ದೇವರು ನನಗೆ ಅನ್ಯಾಯ ಮಾಡುವದಿಲ್ಲವೆಂಬದು ನನ್ನ ನಂಬಿಕೆ...

ಇಂದು...

ನನ್ನ ಗಂಡ ಯುದ್ಧಕ್ಕೆ ಹೊರಡುವ ಮುನ್ನ ನನ್ನ ಎಡಗಣ್ಣು  ಅದುರಿತು...!

ನನಗೆ ಆತಂಕವಾಯಿತು..

ತಕ್ಷಣ ದೇವರಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿದೆ....

ನನ್ನ ಪತಿದೇವ ಯುದ್ಧಕ್ಕೆ ಹೋಗಿ ಸ್ವಲ್ಪದರಲ್ಲೇ ತಿರುಗಿ ಬಂದ....


ನಾನು ಸ್ನಾನ ಮಾಡಿ...

ಪೂಜೆಗೆ ಅಣಿಯಾಗುತ್ತಿದ್ದೆ.... ತಲೆ ಕೂದಲು ಒದ್ದೆಯಿತ್ತು..
ಮುಡಿ ಕಟ್ಟಿಕೊಳ್ಳುತ್ತಿದ್ದೆ...

ಎಂದಿನಂತೆ 

ಮೌನವಾಗಿ ನಗು ಮುಖದಿಂದ ಸ್ವಾಗತಿಸಿದೆ...

ಆತ  ನನ್ನನ್ನು ತಬ್ಬಿಕೊಂಡ...

ನಮ್ಮ ಮಲಗುವ ಕೋಣೆಯವರೆಗೆ   ತಬ್ಬಿಕೊಂಡೇ.. ಬಂದ....!

ಒಮ್ಮೆ "ಬೇಕು" ಅಂತಾದರೆ ...

ಈ ಗಂಡಸರಿಗೆ ತಾಳ್ಮೆಯೇ ಇರುವದಿಲ್ಲ....

ಪ್ರಕೃತಿಯಲ್ಲವೇ ...?

ನನ್ನ ಬೇಕು ಬೇಡಗಳನ್ನು ಕೇಳುವವರ್ಯಾರು..?

ಮೌನವೆಂದರೆ  ಒಪ್ಪಿಗೆ......

ಸಮ್ಮತಿ.... !

ನನ್ನನ್ನು ರಮಿಸಿದ...

ಉನ್ಮಾದಿಸಿದ....ಉದ್ರೇಕಿಸಿದ...
ಮಧಿಸಿದ....

ನನ್ನೊಳಗಿನ ಉತ್ಕಟ ಬಯಕೆಗಳನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ...!


ಆತನ ಕ್ರೀಡೆಗಳಿಂದ ..

ನಾನು ಯಾವಾಗಲೂ ಮೈಮರೆತುಬಿಡುತ್ತಿದ್ದೆ...

ಜೊತೆಯಲ್ಲೇ ...

ಜೊತೆಯಾಗಿ ಕೊನೆಯ ಹಂತ ಸೇರಿಸುವ ಆತನ ಪರಿಗೆ ಆತನೇ ಸಾಟಿ... !

ಇಂದು  ಯಾಕೋ ಹಾಗೆ ಆಗುತ್ತಿಲ್ಲ....!


ಮುಖ ನೋಡಿದೆ... !


ಹೌದು.. !

ನನ್ನ ಪತಿಯೇ ಹೌದು....

ಕಸಿವಿಸಿ ತಡೆಯಲಾಗಲಿಲ್ಲ....


"ನಿಜ ಹೇಳಿ... ಯಾರು ನೀವು...?"


ಆತ ನಸು ನಕ್ಕ.... ನಿಜ ರೂಪ  ತೋರಿಸಿದ....!


ನನಗೆ  ದಿಗ್ಭ್ರಮೆ ... !


ನಾನು ದಿನವೂ ಪೂಜಿಸುವ...

ಆರಾಧಿಸುವ ನನ್ನ ದೇವರು... ! ಮಹಾವಿಷ್ಣು... !!

ಛೇ.... !!


ಇವನೆದುರು ಬೆತ್ತಲಾದೇನೆ? 


ಅಸಹ್ಯ... ಜಿಗುಪ್ಸೆ....

ಅಸಹಾಯಕತೆ...
ದುಃಖ... ಕೋಪ.... ನನಗೆ ಏನು ಮಾಡಬೇಕೆಂದು ತೋಚಲಿಲ್ಲ... !

ಮೌನ ..

ಅಸಹಾಯಕತೆ !!

ವಿಷ್ಣುವೇ ಮಾತನಾಡಿದ...


"ನಿನ್ನ ಗಂಡ ರಾಕ್ಷಸ...

ಲೋಕ ಕಂಟಕ....

ಅಲ್ಲಿ ಯುದ್ಧದಲ್ಲಿ ಶಿವ ನಿನ್ನ ಗಂಡನನ್ನು ವಧಿಸಿಯಾಗಿದೆ.....


ಬೇಸರಿಸದಿರು... 

ಇದೆಲ್ಲವೂ ಲೋಕ ಕಲ್ಯಾಣಕ್ಕಾಗಿ..."

ನಾನು ಪೂಜಿಸುವ.. 

ಆರಾಧಿಸುವ ದೇವರ ಬಾಯಲ್ಲಿ ಇಂಥಹ ಮಾತು !!

"ವಿಷ್ಣು....

ನಿನಗೂ ನನ್ನ ಚಂದವೇ ಬೇಕಾಯಿತೆ...?

ನನ್ನ ಮನಸ್ಸು..

ನನ್ನ ಭಾವಗಳಿಗೆ ಬೆಲೆಯೇ ಇಲ್ಲವಾಯಿತೆ...?..

ಇದು ಯಾವ ನ್ಯಾಯ...? ಇದು ಅತ್ಯಾಚಾರವಲ್ಲವೆ?


ನನಗೇಕೆ ಈ ಶಿಕ್ಷೆ.. ?.. "


ವಿಷ್ಣು ಮುಗುಳ್ನಕ್ಕ...


" ತುಳಸಿ...

ನನ್ನಲ್ಲೂ  ನಿನಗೆ ಪ್ರಶ್ನೆಯೆ...?... "

"ಪೂಜೆ ಮಾಡುತ್ತೇವೆ ಎಂದಾಕ್ಷಣ ಪ್ರಶ್ನಿಸ ಬಾರದೆ...?


ಲೋಕ ಕಲ್ಯಾಣಕ್ಕಾಗಿ ..

ಹತ್ತಾರು ಅವತಾರಗಳನ್ನು ಎತ್ತುವವನು ನೀನು...!

ನನ್ನಂಥಹ ಹುಲು ಮಾನವಳ  ..

ಪಾತಿವೃತ್ಯ ಹರಣಕ್ಕೆ ನೀನೇ ಬರಬೇಕಾಯಿತೆ...?

ಮನ್ಮಥನನ್ನು ಕಳಿಸಿ ..

ನನ್ನ ಮನಸ್ಸನ್ನು ಚಂಚಲಗೊಳಿಸ ಬಹುದಿತ್ತಲ್ಲವೆ...?

ವಿಷ್ಣು...

ನಿನ್ನ ಪರಮ ಭಕ್ತೆಯಾದ ನನ್ನಲ್ಲೂ ಕೆಟ್ಟ ಕಾಮದಾಸೆಯೇ...? 
ಛೀ...!"

ಕೋಪದಿಂದ ನನ್ನ ಮೈ ಅದುರುತ್ತಿತ್ತು....


ದೇವರಿಂದಲೇ ...

ಸೃಷ್ಟಿಯಿಂದಲೇ..... ಪ್ರಕೃತಿಯ ಮೇಲೆ ಅತ್ಯಾಚಾರವೇ...?...

ಆತ  ಮುಗುಳ್ನಕ್ಕ....


"ಬೇಸರಿಸದಿರು ..

ತುಳಸಿ..
ಲೋಕಕಲ್ಯಾಣಕ್ಕಾಗಿ ಇದೆಲ್ಲ...!

ನಿನಗೊಂದು ವರವ ಕೊಡುವೆ....


ನನ್ನ ..

ನಿತ್ಯದ ಪೂಜೆ  ತುಳಸಿ ದಳದ ಸಂಗಡ ಪೂಜಿಸಲಿ...

ಅದು ನನಗೆ  ಶ್ರೇಷ್ಠ ಪೂಜೆಯಾಗಲಿ...""


ನನಗೆ ಮತ್ತೂ ಕೋಪ ಉಕ್ಕಿತು...


"ವಿಷ್ಣು...

ಇದು ಅತ್ಯಾಚಾರ...!

ನನ್ನ ಮನಸ್ಸಿನ ಮೇಲಿನ ಬಲಾತ್ಕಾರ.... !


ಅತ್ಯಾಚಾರಕ್ಕೆ ಯಾವ ಬಣ್ಣಕೊಟ್ಟರೇನು...?..


ಅಧಿಕಾರದವರು...

ದೊಡ್ಡವರು ಮಾಡಿದರೆ... ಅದು ಸದಾಚಾರವೆ..?

ವರಗಳ .. ಪರಿಹಾರಗಳ .... ಆಸೆ ತೋರಿಸುತ್ತೀಯಾ.. ?


ನಿನಗೆ ನನ್ನ ಧಿಕ್ಕಾರವಿದೆ ..... !! "


ನಾನು ಧಿಕ್ಕರಿಸಿದೆ....


ವಿಷ್ಣು ನನ್ನನ್ನು ರಮಿಸಿದ...

ತಿಳಿಸಿ ಹೇಳಿದ...

ಬುದ್ಧಿವಂತರ ನಡೆಯೇ ಹಾಗೆ....!


ಅವರ ಎಲ್ಲ ಕಾರ್ಯಗಳಿಗೂ...

ಅವರಲ್ಲಿ...
ಎಲ್ಲಕ್ಕೂ ಉತ್ತರ... ಪರಿಹಾರವಿರುತ್ತದೆ....

ಆತನ ವಾದ ಸರಣಿಗೆ  ನಾನು ಮೌನವಾಗಬೇಕಾಯಿತು ..


ಲೋಕದ ಹಿತಕ್ಕಾಗಿ..

ನನ್ನ ಮೇಲಿನ ಅತ್ಯಾಚಾರವನ್ನೂ ಸಹಿಸಬೇಕಾಯಿತು....

"ವಿಷ್ಣು...

ನಿನ್ನ ವರವನ್ನು ಒಪ್ಪುವೆ...

ಉಳ್ಳವರ..

ಬುದ್ಧಿವಂತರ  ಮುಂದೆ ನನ್ನದು ಯಾವ ಆಟ..?

ಸಮಸ್ತ ಜಗತ್ತಿನ ...

ಅಸಹಾಯಕ ..
"ಮೌನ ಪ್ರಕೃತಿಯ"  ಮೇಲಿನ ಅತ್ಯಾಚಾರಕ್ಕೆ.. ಪ್ರತಿಭಟನೆಯಾಗಿ..
ಅನಿವಾರ್ಯವಾಗಿ..

ನಿನ್ನ ವರವನ್ನು ಒಪ್ಪುವೆ...."


ವಿಷ್ಣು ಮುಗುಳ್ನಕ್ಕ....

ನನ್ನ ಹಿಂದಿನ ಜನ್ಮಗಳ ಕಥೆ ಹೇಳಿದ.....

ನಾನು ಮತ್ತೆ ಮೌನವಾದೆ ಎಂದಿನಂತೆ......


ಈ ..

ಮೌನ ...
ಒಂದು ಪ್ರತಿಭಟನೆ....

ಅಂತರಂಗದಲಿ ನಡೆಯುವ ಯುದ್ಧ.. !


ಕುದಿಯುವ  ಜ್ವಾಲಾಮುಖಿಯಂತೆ ....

ಭೂಕಂಪದಂತೆ....

ಪ್ರಳಯದಂತೆ....




( ಪುರಾಣದ ತುಳಸಿ ಕಥೆಯ ..
ಎಳೆ ಎಳೆಯ ಜೋತೆಗೆ..
ನನ್ನ ಒಂದಿಷ್ಟು ಕಲ್ಪನೆ... ಈ ಕಥೆ...

ಆಸ್ತಿಕ  ಮನಗಳ ಕ್ಷಮೆ ಕೋರಿ....)

ಚಂದದ ಪ್ರತಿಕ್ರಿಯೆಗಳಿವೆ ದಯವಿಟ್ಟು ನೋಡಿ....

.