Thursday, November 22, 2012

ಭಾವನೆ ...............


ನಿಮಗೆ ನನ್ನ ಸಮಸ್ಯೆ ಅರ್ಥವಾಗೋದಿಲ್ಲ ಬಿಡಿ....

ನನ್ನಷ್ಟಕ್ಕೆ ನಾನು ಆರಾಮಾಗಿದ್ದೆ...


ನನ್ನಪ್ಪ ಬಿಡಬೇಕಲ್ಲ...


"ಮಗನೆ ಮದುವೆ ವಯಸ್ಸಾಯ್ತು.. ಮದುವೆ ಮಾಡಿಕೊ" 


ಅಂತ ತಾನೆ ಒಂದು ಹುಡುಗಿ ಹುಡುಕಿ ನಿಶ್ಚಯಿಸಿಬಿಟ್ಟ..


ಹೆಣ್ಣು ನೋಡಲು ನಾನು ಹೋಗಿದ್ದೆ..


ಹುಡುಗಿ ...

ಹೆಣ್ಣು ಎನ್ನುವದನ್ನು ಬಿಟ್ಟರೆ "ಅಂದ ಚಂದ" ಎನ್ನುವ ಶಬ್ಧ ಅಕ್ಕಪಕ್ಕದಲ್ಲಿಯೂ ಇರಲಿಲ್ಲ...

"ಮಗನೆ...

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸಿಗುವದಿಲ್ಲ...

ಸಿಕ್ಕರೂ "ಸಾಪ್ಟವೇರ್.. ಅಮೇರಿಕಾ ಅಂತ.. 

ಅಂಥವರನ್ನೇ ಹುಡುಕಿಕೊಳ್ತಾರೆ...

ನಿನ್ನಂಥಹ ಮಾಮೂಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರು ...
"ಚಂದದ ಹೆಣ್ಣಿನ ಕನಸನ್ನು ಕಾಣಬಾರದು"...

"ಅಪ್ಪಾ...

ಬದುಕು ಪೂರ್ತಿ ಬಾಳಬೇಕಲ್ಲಪ್ಪಾ...!

ಈ ಮುಖ ನೋಡಿ ಹೇಗೆ ಸಾಧ್ಯ...?

ನನಗೂ ಮಕ್ಕಳ ಆಸೆ ಇದೆ..."

"ಮಗನೆ...

ದೇಹದ ಹಸಿವಿಗೆ ಅಂದ ಬೇಕಿಲ್ಲ...

ರಾತ್ರಿ ಕತ್ತಲೆಯಲ್ಲಿ..

ದೀಪವಾರಿಸಿದ ಮೇಲೆ ....ಯಾವ ಅಂದವೂ ಕಾಣುವದಿಲ್ಲ...!

ದಾಂಪತ್ಯಕ್ಕೆ ಚಂದ ಬೇಕಿಲ್ಲ ಮಗನೆ...........


ನೀ... ಸುಮ್ಮನಿರು..


ನಿನಗಿಂತ ಹೆಚ್ಚಿನ ಬದುಕನ್ನು ನಾನು ನೋಡಿದ್ದೇನೆ...


ನಿನ್ನ ಮಾವ ಪೋಲಿಸು..

ಚೆನ್ನಾಗಿ ಹಣ ಇದೆ..
ಒಬ್ಬಳೇ ಮಗಳು...ಮಾವ ನಿನ್ನನ್ನು  ನೋಡಿಕೊಳ್ತಾನೆ ...

ನಿನ್ನ ಬದುಕು ಚಂದವಾಗಿರುತ್ತದೆ..."


ಅಪ್ಪನ ನನ್ನ ಮದುವೆ ಮಾಡಿ ಮುಗಿಸಿದ...


ನಿಮಗೆಲ್ಲ ನನ್ನ ಮಾವನ ಬಗೆಗೆ ಹೇಳಬೇಕು...


ನನ್ನ ಮಾವ ಪೋಲಿಸ್...


"ಪೇದೆ"  ಎಂದರೆ ಗೌರವ ಕಡಿಮೆ ಆಗಬಹುದು ಅಂತ..

ಆ ಶಬ್ಧ ತಪ್ಪಿಯೂ ಉಪಯೋಗಿಸೋದಿಲ್ಲ  ಬಿಡಿ...

ಬಹಳ ದರ್ಪು...

ಸೊಕ್ಕಿನ ಮೀಸೆ... ಕೆಂಪು ಕಣ್ಣುಗಳು ....

ಬಹುಷಃ ಹುಟ್ಟಾ ಪೋಲಿಸ್ ನನ್ನ ಮಾವ...


ಒಂದು ದಿನ ಕುತೂಹಲ ತಡೆಯಲಾಗದೆ ಕೇಳಿದ್ದೆ...


"ನಮ್ಮ ಜಗತ್ತಿನಲ್ಲಿ ...

ಶಾಂತಿಯಿಂದ ಇರಲಿಕ್ಕೆ ಎಲ್ಲವೂ ಇದೆ...

ಅತ್ಯಂತ ಪವಿತ್ರವಾದ ಧರ್ಮಗಳಿವೆ.....

ಧರ್ಮ ಗ್ರಂಥಗಳಿವೆ ....

ಕಣ್ಣಿಗೆ ಕಾಣದೆ ..

ಇದೆಯೆನ್ನುವ ....
ಕಲ್ಪಿಸಿಕೊಳ್ಳುವ ....
ಬಗೆ ಬಗೆಯ ದೇವರುಗಳಿದ್ದಾರೆ..!

ಮಂದಿರ... ಚರ್ಚು... ಮಸೀದೆ ...

ಮಠಗಳು... ಎಲ್ಲವೂ ಇವೆ....

ಪಾಪ ಪುಣ್ಯಗಳ ಬಗೆಗೆ ತಿಳಿಸಿ ಹೇಳಿ..

ಹೆದರಿಸುವ ...
ಧರ್ಮ ಗುರುಗಳಿದ್ದಾರೆ..

ಶಾಲೆಗಳಿವೆ... ಶಿಕ್ಷಣ ಸಂಸ್ಥೆಗಳಿವೆ ..


ಪ್ರತಿ ಮನೆಯಲ್ಲಿ ...

ಒಳ್ಳೆಯ ದಾರಿ ತೋರಿಸುವ ಅಪ್ಪ ಅಮ್ಮರಿಂದಾರೆ..
ಸರಿ.. ತಪ್ಪುಗಳನ್ನು ತಿಳಿಸಿ ಹೇಳುವ  ಅಜ್ಜ ಅಜ್ಜಿಯರಿದ್ದಾರೆ...

ಮತ್ಯಾಕೆ ಈ ಪೋಲಿಸು..?

ಸೈನಿಕರು...?

ಯಾಕ  ಬೇಕು ಸ್ಟೆನ್  ಗನ್ನುಗಳು..?


ಪರಮಾಣು ಬಾಂಬುಗಳು...?


ಕಾಯಿದೆ ಕಾನೂನು..? ....?.. ಫಾಸಿ  ಶಿಕ್ಷೆಗಳು ...? .."


ನನ್ನ ಮಾವ ...

ಠೀವಿಯಿಂದ ಮೀಸೆಯ ಮೇಲೆ ಕೈಯ್ಯಾಡಿಸಿದ...

"ಅಳಿಮಯ್ಯಾ...


ಈ ಮನುಷ್ಯ ಇದ್ದಾನಲ್ಲ ...

ಈತನೂ ಒಂದು ಪ್ರಾಣಿ...
ಹಿಂಸೆ ಇವನ ಮೂಲ ಪ್ರವೃರ್ತಿ...

ಮೊದಲು ಕಾಡಿನಲ್ಲಿದ್ದ...
ಈಗ ನಾಡಿನಲ್ಲಿದ್ದಾನೆ... ಜಾಸ್ತಿ ವ್ಯತ್ಯಾಸ ಇಲ್ಲ...

ಈತ ಹೊಟ್ಟೆ ತುಂಬಿಸಿಕೊಳ್ಳುವದಕ್ಕೂ   ಸಹ ಸಸ್ಯವನ್ನೋ..

ಪ್ರಾಣಿಯನ್ನೋ ಸಾಯಿಸುತ್ತಾನೆ...

ಹಿಂಸೆ... 

ಇವನಿಗೆ ಅತ್ಯಂತ ಸಹಜ .....!

ಸುಮ್ಮನೆ ಇದ್ದ ಪಕ್ಕದಲ್ಲಿದ್ದವರಿಗೆ ಚಿವುಟಿದರೆನೇ ಇವನಿಗೆ ಖುಷಿ... !

ಮನುಷ್ಯ ಪ್ರಾಣಿಯನ್ನು ...

ಹದ್ದು ಬಸ್ತಿನಲ್ಲಿಡಲು ಧರ್ಮಗಳಿಂದ ...
ದೇವರುಗಳಿಂದ ಆಗುವದಿಲ್ಲ...

ಹೆದರಿಕೆ... ಭಯ ಇವನಿಗೆ ಬೇಕು...

ಅದಕ್ಕಾಗಿ ಪೋಲಿಸರ ಲಾಠಿ ಬೇಕೇ ಬೇಕು....

ಇಲ್ಲಿ ..

ಶಾಂತಿಗಾಗಿಯೇ ಘನ ಘೋರ ಯುದ್ಧಗಳಾಗುತ್ತವೆ..!
ಸಾವಿರಾರು ಜನರು ಸಾಯ್ತಾರೆ...!

ನಿನಗ್ಯಾಕೆ ಇದೆಲ್ಲ... ?


ನೀನು ..

ನಿನ್ನ ಕೆಲಸ..
ಹಾಗು ನನ್ನ ಮಗಳನ್ನು ನೋಡಿಕೊ ಸಾಕು..."

ನನ್ನ ಮಾವ ದಡ್ಡ ಅಂತ ನನಗೆ ತಪ್ಪು ಕಲ್ಪನೆಯಿತ್ತು...

ಆದರೆ ...
ಮಹಾ ಬುದ್ಧಿವಂತ ಅಂತ  ಮದುವೆಯಾದ ಮೇಲೆ ಗೊತ್ತಾಗಿದ್ದು...

ತನ್ನ ಮಗಳಿಗೆ ಯೋಗ್ಯವಾದವರ ನನ್ನನ್ನು ಅಂತ ಆಯ್ಕೆ ಮಾಡಿದ್ದು..


ನಾನು ..

ಸ್ವಲ್ಪ ಪಾಪ ಪುಣ್ಯ ಎನ್ನುವ ವಾತಾವರಣದಲ್ಲಿ ಬೆಳೆದವ...

ಸುಮ್ ಸುಮ್ನೆ ಗಲಾಟೆ... ಜಗಳ  ಕೂಗುವದು ನನಗೆ ಆಗುವದಿಲ್ಲ...


ನನ್ನ ಮಡದಿ ಮಾತ್ರ ನನ್ನ ಸ್ವಭಾವಕ್ಕೆ ತದ್ವಿರುದ್ಧ....


ದಿನಾಲೂ ಗಲಾಟೆ... ಜಗಳ.... !

ಸಮಾಧಾನ... ಶಾಂತಿ ಎನ್ನುವದೇ ಇಲ್ಲ...

ನಾನು ದೇವರ ಬಳಿ ನನ್ನ ಬಗೆಗೆ ಏನೂ ಕೇಳುವದಿಲ್ಲ...


"ದೇವರೆ..

ನನ್ನ ಪಕ್ಕದ ಮನೆಯಲ್ಲಿ ...
ಯಾವುದೇ ಹೊಸ ವಸ್ತುಗಳನ್ನು ತರದೇ ಇರಲಿ..."

ಆ ದೇವರಿಗೂ ನನ್ನ ಹಂಗಿಸುವ ಆಸೆ..!


ನಾನು ದಣಿದು ಮನೆ ಸೇರುತ್ತಲೇ ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ....!


ಆ ಶಬ್ಧಗಳ ಸಭ್ಯತೆಯ ಆಧಾರದ ಮೇಲೆ ...

ಪಕ್ಕದ ಮನೆಯಲ್ಲಿ ಯಾವ ವಸ್ತು ತಂದಿರ ಬಹುದು ಅಂತ ಲೆಕ್ಕಾಚಾರ ಹಾಕುತ್ತಿದ್ದೆ.....

ನಾನು ಹೇಳಿ ಕೇಳಿ ಸಾಮಾನ್ಯ ಕಾರ್ಖಾನೆಯಲ್ಲಿ  ನೌಕರ...


"ನೋಡು..

ನನಗೆ ಎಷ್ಟು ಸಂಬಳ ಅಂತ ಮದುವೆಗೆ ಮುಂಚಿತವಾಗಿ ನಿನಗೆ...
ನಿನ್ನ ಅಪ್ಪನಿಗೂ ಗೊತ್ತಿತ್ತು...

ನಿನ್ನ ಆಸೆಗಳನ್ನು ಪೂರೈಸಲು ನನ್ನಿಂದ ಆಗದ ಕೆಲಸ...


ಹೊಂದಿಕೊಂಡು ಹೋಗೋಣ...

ಪ್ರೀತಿಯಿಂದ ಇರೋಣ..."

"ನಾನು ಹತ್ತು ಹಲವಾರು ಕನಸು ಹೊತ್ತು ಬಂದವಳು....

ನನ್ನ ಗೆಳತಿಯರೆಲ್ಲ ಸಾಫ್ಟವೇರ್ ಇಂಜೀನೀಯರನ್ನು ಮದುವೆಯಾಗಿ ಝುಂ ಅಂತ ಕಾರಲ್ಲಿ ತಿರುಗುತ್ತಿದ್ದಾರೆ...

ನಾನು ನಿಮ್ಮ ಡಕೂಟ ಸ್ಕೂಟಿಯಲ್ಲಿ ತಿರುಗ ಬೇಕಾಗಿದೆ....!


ಇವತ್ತು ನೋಡಿ...

ನಿಮ್ಮ ಸಂಗಡವೇ ಕೆಲಸ ಮಾಡುವ ..
ಪಕ್ಕದ ಮನೆಯವ ಮನೆಗೆ ವಾಷಿಂಗ್ ಮಷಿನ್ ತಂದಿದ್ದಾನೆ...!

ನಾಳೆ ಆ ಹೆಂಗಸಿನ ಡೌಲು...

ದೌಲತ್ತಿನ ಮಾತುಗಳನ್ನು ಕೇಳಿಸಿಕೊಳ್ಳುವವಳು ನಾನು...!

ನಿಮಗೇನು ಗೊತ್ತು ನನ್ನ ಕಷ್ಟ...?  ನನ್ನ ಸಂಕಟ...? ..."


ಮೊದ ಮೊದಲು ಸೌಮ್ಯವಾಗಿ ಚರ್ಚೆ ಆಗುತ್ತಿತ್ತು...

ಕೊನೆಗೆ ಅಕ್ಕ ಪಕ್ಕದ ಮನೆಯವರಿಗೆ ಕೇಳಿಸ ತೊಡಗಿತು...

ಇತ್ತೀಚೆಗಂತೂ ಮಧ್ಯ ರಸ್ತೆಯಲ್ಲಿ ನಿಂತು ಕೂಗತೊಡಗಿದ್ದಾಳೆ....


ಏನು ಮಾಡಲಿ ..?


ಮೊದಲು ನನ್ನ ಅಪ್ಪನಿಗೆ ಹೇಳಿದೆ...


"ಮಗನೆ..

ಇದೆಲ್ಲ ಎಲ್ಲ ಸಂಸಾರದಲ್ಲೂ ಇದ್ದದ್ದೆ...

ಸ್ವಲ್ಪ ಪ್ರೀತಿ ತೋರಿಸು..

ಪ್ರೀತಿಯ ಸಂಗದ ಶಕ್ತಿನೂ ತೋರಿಸು....!

ಎಲ್ಲ ಹೆಣ್ಣು ಮಕ್ಕಳು ಕರಗಿ ಹೋಗುತ್ತಾರೆ...!


ಅದನ್ನೂ ನಾನು ಹೇಳಿಕೊಡಬೇಕಾ... !!... ?...."


ಅಂತ ಅರ್ಥ ಗರ್ಭಿತವಾಗಿ ನಕ್ಕರು.....


ಆದರೆ ಈ ಪ್ರೀತಿ..

ಪ್ರಣಯಕ್ಕೆ ನನ್ನ ಮಡದಿ ಜಗ್ಗಲಿಲ್ಲ.....

ಪ್ರೀತಿ ಮಾಡಿದ ಅದಷ್ಟೇ ಹೊತ್ತು....!


ಮತ್ತೆ ಯಥಾ ಪ್ರಕಾರ.... ಜಗಳ...!


ಯಾರೋ ಹೇಳಿದರು...


"ನಿಮ್ಮ ಮನೆ ವಾಸ್ತು ಸರಿ ಇಲ್ಲ...


ಬೆಡ್ ರೂಮಿನ ನೈರುತ್ಯ ಜಾಗದಲ್ಲಿ ಬಾಗಿಲು ಇದೆ...

ಹಾಗೆ ಇದ್ದಲ್ಲಿ "ಹೆಂಡತಿ ಉಗ್ರ ಪ್ರತಾಪ"  ತೋರಿಸುತ್ತಾಳೆ..."

ಸರಿ..


ನೈರುತ್ಯ ದಿಕ್ಕಿನಲ್ಲಿ ಬಾಗಿಲು ಇಲ್ಲದಿರುವ ಬೆಡ್ ರೂಮ್ ಹುಡುಕಿದೆ...


ಅಲ್ಲಿಯೂ ಅಷ್ಟೇ...! ಯಥಾಪ್ರಕಾರ ಜಗಳ... ಗಲಾಟೆ....!


ಈ ಪಕ್ಕದ ಮನೆಯವರು ಯಾರೂ ಇರದ ಮನೆಯನ್ನೂ ನೋಡಿದೆ....


ಎಲ್ಲ ಕಡೆಯಲ್ಲಿಯೂ ನನ್ನ ಮರ್ಯಾದೆ ಬೀದಿಗೆ ಬರುತ್ತಿತ್ತು...


ನನ್ನ ಮಾವ ಶ್ರೀಮಂತನಾಗಿದ್ದ...


ಆದರೆ ಯಾವುದೋ ಲಂಚದ ಹಗರಣದಲ್ಲಿ ಸಿಕ್ಕಿಕೊಂಡು ..

ನನಗೆ ಸಹಾಯ ಮಾಡಲಾಗದ ಸ್ಥಿತಿಯಲ್ಲಿದ್ದ....

"ಮಾವಯ್ಯಾ...

ನಮ್ಮಿಬ್ಬರ ಹೊಂದಾಣಿಕೆ ಅಸಾಧ್ಯ....

ಒಟ್ಟಿಗೆ ಇರಲು ಆಗ್ತಾ ಇಲ್ಲ....

ನಿಮ್ಮ ಮಗಳಿಗೆ ವಿಚ್ಛೇಧನ  ಕೊಡುತ್ತೇನೆ...."

" ಅಳಿಯಮಯ್ಯಾ...

ನಾನು ಕೆಲಸದಿಂದ ಸಸ್ಪೆಂಡ್ ಆದರೂ ನಾನಿನ್ನೂ ಪೋಲಿಸು....

ಠಾಣೆಯಲ್ಲಿ ನಿನ್ನನ್ನು ಅರೆದು ...

ನೀರು ಇಳಿಸಿಬಿಡ್ತೇನೆ.....!

ಸುಮ್ಮನೆ ಅವಳೊಂದಿಗೆ ಹೊಂದಿಕೊಂಡು ಹೋಗು...."


ಎಂಥಹ ಚಕ್ರವ್ಯೂಹದಲ್ಲಿ  ಸಿಕ್ಕಿಬಿದ್ದುಬಿಟ್ಟಿದ್ದೇನೆ ನಾನು !!


"ಹೇಗೆ ಹೊಂದಿಕೊಳ್ಳಲಿ ಮಾವಯ್ಯಾ...?


ನನ್ನನ್ನು ಅರ್ಥ ಮಾಡಿಕೊಳ್ತಾನೆ ಇಲ್ಲ.... ನಿಮ್ಮ ಮಗಳು..!.. "


"ಅವಳು ..

ಮೊದಲಿನಿಂದಲೂ ಸ್ವಲ್ಪ ಕೋಪಿಷ್ಠೆ...

ನಿನ್ನ ಶಾಂತ ಸ್ವಭಾವ ನೋಡಿಯೇ ..

ನಾನು ಮದುವೆ ಮಾಡಿದ್ದು....
ನೀನು ಅನುಸರಿಸಿಕೊಂಡು ಹೋಗು...

ಪ್ರೀತಿ...
ಮತ್ತು ದಾಂಪತ್ಯದ ಪ್ರೀತಿ ಅನ್ನೋದು ಬೇರೆ ಬೇರೆ ಕಣಪ್ಪಾ....

ಈ ದಾಂಪತ್ಯದ ಪ್ರೀತಿ ಅನ್ನೋದು ...

ಎಲ್ಲರಿಗೂ ಒಂದೇ ರೀತಿಯಲ್ಲಿ  ಅರ್ಥವಾಗೋದಿಲ್ಲ...

ಕೆಲವರಿಗೆ ಈ  ಪ್ರೀತಿ ..

ಪ್ರೀತಿಯಲ್ಲೇ ಅರ್ಥವಾಗಿ ಬಿಡುತ್ತದೆ...

ಕೆಲವರಿಗೆ ಹೊಗಳಬೇಕು....

ಹೆಣ್ಣು ಮಕ್ಕಳನ್ನು ಸ್ವಲ್ಪ ಹೊಗಳಬೇಕು....
ಪೂಸಿಹೊಡೆಯ ಬೇಕು....

ಅದೆಲ್ಲ ನೀನೇ ಸಂದರ್ಭಕ್ಕೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಪ್ಪ.... "


ನನ್ನಾಕೆಗೆ ಎಲ್ಲ ಪ್ರಯೋಗ ಮಾಡಿದೆ....

ಯಾವುದೂ ಪ್ರಯೋಜನವಾಗಲಿಲ್ಲ.....

ನನ್ನಾಕೆಯ ಮುಖ ನೋಡಿಕೂಡಲೇ ...

ಅವಳು ..
ನನ್ನೊಡನೆ ಆಡಿದ ಮಾತುಗಳು..
ಜಗಳಗಳು ನೆನಪಾಗುತ್ತಿತ್ತು....

ನನ್ನನ್ನು ಕುರಿತು ಬೀದಿಯಲ್ಲಿ ನಿಂತು ಕೂಗಾಡಿ ಮರ್ಯಾದೆ ಮೂರುಕಾಸು ಮಾಡಿದ್ದು ಎಲ್ಲ ನೆನಪಾಗುತ್ತಿತ್ತು.....


ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ...

ಮನೆಯ ಚಿಂತೆ....
ಕೆಲಸದ ಒತ್ತಡ...!

ಒಂದು ದಿನ ಕಾರ್ಖಾನೆಯಲ್ಲಿ ಎಚ್ಚರ ತಪ್ಪಿ ಬಿದ್ದುಹೋದೆ...


ವೈದ್ಯರು ಬಂದರು..

ನನ್ನನ್ನು ತಪಾಸಣೆ ಮಾಡಿದರು...

"ನೋಡಿ...

ನಿಮ್ಮ ಬೀಪಿ ಹೆಚ್ಚಿದೆ...
ಸಕ್ಕರೆ ಕೂಡ ಇದೆ...

ನಿಮಗೆ ಮಾನಸಿಕ ಶಾಂತಿ ಅತ್ಯಗತ್ಯ....


ನಾನು ಎಷ್ಟೇ ಮಾತ್ರೆಗಳನ್ನು ಕೊಟ್ಟರೂ...

ನಿಮ್ಮ ಮಾನಸಿಕ ಸಮತೋಲನವನ್ನು ನೀವೇ ನೋಡಿಕೊಳ್ಳಬೇಕು..."

"ಮಾನಸಿಕ ಶಾಂತಿಗಾಗಿ ಏನು ಮಾಡಬೇಕು...?"


"ನೋಡಪ್ಪಾ...

ಇಲ್ಲಿ ಹತ್ತಿರದಲ್ಲಿ ಯೋಗ ಗುರೂಜಿ ಇದ್ದಾರೆ...
ಅಲ್ಲಿ ಹೋಗು...
ನಾನು ಅಲ್ಲಿ ಹೋಗಿ ಶಾಂತಿಯನ್ನು ಪಡೆದಿರುವೆ...."

ಮರುದಿನ ಬೆಳಿಗ್ಗೆ ಅಲ್ಲಿಗೆ ಹೋದೆ...


"ನಮ್ಮಲ್ಲಿ ...

ಹದಿನೈದು  ಸಾವಿರದ   ಒಂದು ಕೋರ್ಸ್ ಮಾಡಿದರೆ ನಿಮಗೆ ಶಾಂತಿ ಸಿಗುತ್ತದೆ..."

ಗುರುಜಿಯವರು ಬಹಳ ಶ್ರೀಮಂತರಾಗಿದ್ದರು.....

ನೂರು ಎಕರೆ ಜಾಗದಲ್ಲಿ ಆಶ್ರಮ ಇತ್ತು....

ಈ ಶಾಂತಿ ಬಹಳ ದುಬಾರಿ ಎನಿಸಿತು....


ನನ್ನ ಮಾವ ಸ್ವಲ್ಪ ಸಹಾಯ ಮಾಡಿದ... ನಾನು ಸೇರಿಕೊಂಡೆ...


"ಉಸಿರಾಟ ಹೇಗೆ ಮಾಡಬೇಕು...?

ಪ್ರಾಣಾಯಾಮ ಹೇಗೆ ಮಾಡಬೇಕು...

ಮನದಲ್ಲಿ ..

ಯಾವಾಗಲೂ ಆಧ್ಯಾತ್ಮದ ಉನ್ನತ ವಿಚಾರಗಳನ್ನು ಇಟ್ಟುಕೊಳ್ಳಬೇಕು...

ಎಲ್ಲರನ್ನೂ... ಪ್ರೀತಿಸ ಬೇಕು...


ನಾವು ಮಗುವಿನಂತೆ ಇರಬೇಕು... 

ಮುಗ್ಧವಾಗಿ...ಶಾಂತವಾಗಿ...."

ಎಂದೆಲ್ಲ ಹೇಳಿ... 

ಹತ್ತು ದಿನ  ಮೂರು ಹೊತ್ತು ಹಸಿತರಕಾರಿ ತಿನ್ನಿಸಿ...

ಕೊನೆಗೆ ಬಿಸಿ ಉಪ್ಪುನೀರು ಕುಡಿಸಿ...


ಒಂಥರಾ ಪ್ರೆಷ್ ಮಾಡಿಕಳುಹಿಸಿದರು....


ಮನೆಗೆ ಬಂದೆ...


ಅವತ್ತು ನನ್ನ ತಂಗಿಯ ಪತ್ರ ಬಂದಿತ್ತು....


"ಅಣ್ಣಾ...

ನನ್ನ ಗಂಡ ಎರಡೆಳೆ ಚಿನ್ನದ ಸರ ಮಾಡಿಸಿದ್ದಾರೆ..."

ಅಡಿಗೆ ಮನೆಯಲ್ಲಿ ಯಥಾ ಪ್ರಕಾರ ಶಬ್ಧಗಳು...!


ಎಷ್ಟೇ ಪ್ರಾಣಾಯಾಮ ಮಾಡಿದರೂ ನನ್ನ ಬಿಪಿ ಜಾಸ್ತಿಯಾಗುತ್ತಿತ್ತು....


"ನಿಮ್ಮ ತಂಗಿ ಗಂಡನ ಯೋಗ್ಯತೆ .. ನಿಮಗಿಲ್ಲವಲ್ರೀ... !


ಥೂ ನಿಮ್ಮ.... !



ಯಾವ ಕಣ್ಣಿಂದ...
ನಿಮ್ಮ ತಂಗಿ ದೌಲತ್ತು ನೋಡ ಬೇಕ್ರಿ .?..."

ನನ್ನ ಮೈ ಕಂಪಿಸತೊಡಗಿತು...


ಗುರುಜಿ ಹೇಳಿಕೊಟ್ಟ ಮಂತ್ರ ಮನದಲ್ಲೇ ಪಟಿಸಿದೆ...

ಉಸಿರಾಟದ ಕಡೆ ಗಮನಕೊಟ್ಟೆ...

"ಯಾವ ಜನ್ಮದಲ್ಲಿ ...

ಎಷ್ಟು ಪಾಪ ಮಾಡಿದ್ನೋ...
ನೀವು ಗಂಡ ಆಗಿ ಸಿಕ್ಕಿದ್ದಿರಲ್ರಿ... !

ನೀವು ಗಂಡಸೇ ಅಲ್ಲವೇನ್ರೀ...?


ನಿಮಗೆ ಏನೂ ಅನ್ನಿಸೋದೇ ಇಲ್ವಾ...?


ಥೂ ನಿಮ್ಮ ಜನ್ಮಕ್ಕೆ... !!..."


ನನ್ನ ಮೈ ಉರಿಯತೊಡಗಿತು.....


ಏನು ಮಾಡ್ತಾ ಇದ್ದೇನೆ ಅಂತ ನನಗೆ ಗೊತ್ತಾಗಲಿಲ್ಲ....


ಪಕ್ಕದಲ್ಲಿ ಇದ್ದ ಕಬ್ಬಿಣದ ರಾಡನ್ನು  ತೆಗೆದು ಮೂಲೆಗೆ ಜೋರಾಗಿ ಎಸೆದೆ...!


ಮರದ  ಖುರ್ಚಿ ಮೇಲೆ ಎತ್ತಿ ಎಸೆದೆ..!


ಸ್ವಲ್ಪದರಲ್ಲಿ ನನ್ನಾಕೆ ತಪ್ಪಿಸಿಕೊಂಡಳು....


ಅಡಿಗೆ ಮನೆಯೊಳಗೆ ಓಡಿ  ಹೋದಳು....


ನಾನು ಅಲ್ಲೆ ಮಂಚದ ಮೇಲೆ ಕುಳಿತುಕೊಂಡೆ....


ಮೈಯೆಲ್ಲ ಬೆವರುತ್ತಿತ್ತು...


ಮನೆಯಲ್ಲಿ ನೀರವ ಮೌನ....


"ಛೇ...

ತಪ್ಪು ಮಾಡಿಬಿಟ್ಟೆ...."

ಅಪರಾಧಿ ಮನೋಭಾವನೆ ಕಾಡತೊಡಗಿತು....

ಬೇಸರವೆನಿಸಿತು ....

ಗುರೂಜಿ ಹೇಳಿಕೊಟ್ಟಂತೆ ಪ್ರಾಣಾಯಾಮ ಶುರುಮಾಡಿದೆ....


ಕಣ್ಮುಚ್ಚಿದೆ...


ಸುಮಾರು ಹೊತ್ತಿನ ಮೇಲೆ...ಯಾರೋ ಪಕ್ಕದಲ್ಲಿ ಬಂದಂತಾಯಿತು...


"ರೀ...

ಬೇಸರಪಟ್ಕೊಳ್ಳಬೇಡಿ....
ನನ್ನಿಂದ ತಪ್ಪಾಯ್ತು...ಕ್ಷಮಿಸಿ ...
ಇನ್ನು ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುವೆ...."

ಅವಳ  ಧ್ವನಿ ನಡುಗುತ್ತಿತ್ತು....!

ಆತಂಕ... 
ಹೆದರಿಕೆಯಿಂದ ಅವಳು  ಅಳುತ್ತಿದ್ದಳು....!



(ಇದು ಕಥೆ..)

ಪ್ರತಿಕ್ರಿಯೆಗಳು ತುಂಬಾ ಚೆನ್ನಾಗಿವೆ...
ದಯವಿಟ್ಟು ಓದಿ...


Sunday, October 14, 2012

........... ತೀವ್ರತೆ .............


ಮತ್ತೊಮ್ಮೆ ನೋಡಿದೆ...

"ಹೌದು... 

ಅದೇ ಹುಡುಗಿ... !!...
ನನ್ನ   ಮೌನದಲ್ಲಿ ಮಾತನಾಡುವ ಹುಡುಗಿ...!.."

ಅನಿರೀಕ್ಷಿತವಾಗಿ ಎದೆಯ ಬಡಿತ ಜಾಸ್ತಿಯಾಗತೊಡಗಿತು...


ಪಕ್ಕದಲ್ಲಿ ಇದ್ದವ ಬಹುಷಃ ಗಂಡನಿರಬೇಕು...

ಅವಳ ಕೈಯನ್ನು ಹಿಡಿದುಕೊಂಡು ಮಗು ಬರುತ್ತಿತ್ತು....!

ನೇರವಾಗಿ ರಿಸೆಪ್ಷನ್   ಕಡೆಗೇ ಬರುತ್ತಿದ್ದರು...


ಕೆಲವು ಸಂದರ್ಭಗಳನ್ನು ..

ನಾವೇ ತಪ್ಪಿಸಿಕೊಳ್ಳುತ್ತೇವೆ.. 

ಅದಕ್ಕೆಲ್ಲ ಉತ್ತರ ಇರುವದಿಲ್ಲ..


ನಾನು ತರಾತುರಿಯಲ್ಲಿ ರಿಸೆಪ್ಷನಿಷ್ಟಿಗೆ ಹೇಳಿದೆ...


"ನೋಡಿ..

ಅಲ್ಲಿ ಬರುತ್ತಿರುವ ದಂಪತಿಗಳಿಗೆ ಒಳ್ಳೆಯ ರೂಮನ್ನು ಕೊಡಿ...
ಅವರು ನನಗೆ ಬೇಕಾದವರು...

ನಮ್ಮ ಹೊಟೆಲ್ಲಿನ ಸ್ಪೆಷಲ್ ರಿಯಾಯತಿಯನ್ನು ಕೊಡಿ..."


ನಾನು ಮರೆಯಾದೆ..


ನೀವೀಗ ಅಂದುಕೊಂಡಿದ್ದು ಸರಿಯಾಗಿದೆ... 

"ನಾನು ಈ ಹೊಟೆಲ್ಲಿನ ಮಾಲಿಕ"..

ಈ ಹುಡುಗಿ ಯಾರು ಗೊತ್ತಾ?


ನಾನು ಕಾಲೇಜಿಗೆ ಹೋಗುವಾಗ ಪಕ್ಕದ ಮನೆಯಲ್ಲಿದ್ದವಳು...


ಮೊದಲ ಬಾರಿಗೆ ನೋಡಿದಾಗ ..

ಅವಳ ತುಂಬು ಕೆನ್ನೆಗಳ ಆರಾಧಕನಾಗಿ ಹೋದೆ... !

ಆ ಕೆನ್ನೆಯ ಉಬ್ಬುತಗ್ಗುಗಳು,...

ನುಣುಪು ಗಲ್ಲ... ! ವಾಹ್  ....

ಪ್ರೇಮ ಪತ್ರ ಅಲ್ಲೇ ..ಕೆನ್ನೆಯ ಮೇಲೆ ಬರೆಯಬಹುದು ನೋಡಿ....!

ನನ್ನನ್ನು ಹುಚ್ಚ ಅಂದು ಕೊಂಡು ಬಿಟ್ಟೀರಾ....!

ನಾನು ಸರಿಯಾಗಿಯೇ ಇದ್ದೆ...

ಆದರೆ.. ಈ  ಪ್ರೀತಿ ಹುಚ್ಚು.... ಕಣ್ರೀ..!!

ಒಂದು ದಿನ ಹುಡುಗಿಗೆ ಧೈರ್ಯ ಮಾಡಿ ಹೇಳಿದೆ...


ಹುಡುಗಿ ಬಾಯಲ್ಲಿ "ಇಷ್ಟವಿಲ್ಲ" ಅಂದರೂ...

ಕಣ್ಣುಗಳು ಓಕೆ ಅಂದಿದ್ದವು... 

ಕೊನೆಗೆ ಒಂದು ದಿನ ಒಪ್ಪಿದಳು ಅನ್ನಿ...!


ಈ ಬಯಕೆ..

ಆಸೆಗಳು   ..
ಯಾಕೆ ಇಷ್ಟು ರಭಸವಾಗಿರುತ್ತವೆ  ? ...

ಗೊತ್ತಿಲ್ಲ...


"ಹುಡುಗಿ...


ನನ್ನ ಕನಸಲ್ಲೆಲ್ಲ ನೀನೇ ಬರ್ತಿಯಾ....


ಒಮ್ಮೆ ತಬ್ಬಿಕೊಳ್ಳಬೇಕು ಅನ್ನಿಸುತ್ತಿದೆ...

ದಯವಿಟ್ಟು ಇಲ್ಲವೆನ್ನ ಬೇಡ ಕಣೆ..."

"ಸರಿ...

ಎಷ್ಟು ಹೊತ್ತು ...?"

"ಅಯ್ಯೋ..

ಹಾಗೆ ಇದ್ದುಬಿಡೋಣ ಅನ್ನಿಸುತ್ತದೆ...
ಊಟ
ತಿಂಡಿ... 
ಈ ಪ್ರಪಂಚ ಏನೂ ಬೇಡ ಕಣೆ...

" ಮತ್ತೆ....  ! ...!!.."


ಅವಳ ಕಣ್ಣುಗಳಲ್ಲಿನ ಆಸೆ ಅರಳಿದಂತೆ ಅನ್ನಿಸಿತು...

ನನ್ನಲ್ಲಿನ 
ತೀವೃತೆಗೆ ಅವಳು ಹೂಂ ಅಂದಂತಿತ್ತು...

" ಅಷ್ಟು ಹತ್ತಿರವಿದ್ದಾಗ ..

ನಿನ್ನ ಕೆನ್ನೆ ಸಿಕ್ಕರೆ ಸಾಕು..
ಮತ್ತೇನೂ ಬೇಕಿಲ್ಲ...
ಇಷ್ಟೇ ಕಣೆ... 
ದಯವಿಟ್ಟು ಇಲ್ಲವೆನ್ನ ಬೇಡ..."

ಹುಡುಗಿ ಗಂಭೀರವಾದಳು...


"ಹುಡುಗಾ....


ಈಗ ನೀನು ಮಾತನಾಡುತ್ತಿಲ್ಲ...

ನಿನ್ನ ಬಣ್ಣದ ಹರೆಯ ಮಾತನಾಡುತ್ತಿದೆ...

ಕೆಲವು ಆಸೆಗಳನ್ನು  ಬೇಕಾಬಿಟ್ಟಿ ಹರಿಯಬಿಡಬಾರದು...


ಅದಕ್ಕಾಗಿ ಕಾಯಬೇಕು...


ತಡೆಗೊಡೆ ನಾವೇ ಹಾಕಿಕೊಳ್ಳಬೇಕು...

ಅದಕ್ಕೆಲ್ಲ ಈಗ ಸಂದರ್ಭ ಅಲ್ಲ...

ಚೆನ್ನಾಗಿ ಓದೋಣ...

ನನ್ನನ್ನು ಮದುವೆಯಾಗು...

ಆಗ ನೀನು ಹೇಳಿದ ಹಾಗೆ ಎಲ್ಲವೂ..."


ಹುಡುಗಿ ಕಣ್ಣಿನಲ್ಲಿ ಪ್ರೀತಿಯಿತ್ತು...


ಆ ಪ್ರೀತಿಯಲ್ಲಿ ..

ನಮ್ಮಿಬ್ಬರ ಮಧ್ಯದ  "ಬೇಲಿಯೂ" ಇತ್ತು..

ಬೆಟ್ಟದಷ್ಟು ಆಸೆ ಇದ್ದರೂ ಅದು ಹೇಗೆ ಸುಮ್ಮನಿರ್ತಾರಪ್ಪ...!


ಅವಳು ನನ್ನಾಸೆಗೆ ಬೇಡವೆಂದರೂ... 

ನಮ್ಮಿಬ್ಬರ ಪ್ರೀತಿಗೆ...
ಪತ್ರಗಳಿಗೆ... ಮಾತುಕತೆ..
ಭೇಟಿಗೆ ಏನೂ ತೊಂದರೆ ಆಗಲಿಲ್ಲ...

ಆ ದೂರದಲ್ಲೂ ಹಿತವಿತ್ತು... ಆಕರ್ಷಣೆ ಇತ್ತು...


ಆಗ ..

ಅಂತಿಮ ವರ್ಷದ ಪರೀಕ್ಷೆ ಓದು ನಡೆಯುತ್ತಿತ್ತು...
ಒಂದು ದಿನ ಸಾಯಂಕಾಲ ಹುಡುಗಿ ಓಡೋಡಿ ಬಂದಳು..

ನನ್ನನ್ನು ಗಟ್ಟಿಯಾಗಿ...

ಬಲವಾಗಿ ತಬ್ಬಿಕೊಂಡಳು....!

ಅವಳ ತೀವ್ರತೆ ತುಂಬಾ ಖುಷಿಕೊಟ್ಟಿತು...


ನಾನು ಅವಳ ಸುತ್ತ ನನ್ನ ಕೈಗಳನ್ನು ಬಳಸುವವನಿದ್ದೆ...


"ಹುಡುಗಾ...

ನನ್ನಪ್ಪ ನನಗೆ ಗಂಡು ನೋಡಿದ್ದಾರೆ..
"ಈ ಪರೀಕ್ಷೆ ಓದು ಎಲ್ಲ ಸಾಕು ಮದುವೆಯಾಗು" ಅಂತಿದ್ದಾರೆ...
ನಾಳೆ ನಿಶ್ಚಿತಾರ್ಥವಂತೆ...

ನನಗೆ ಈ ಮದುವೆ ಬೇಡ..

ನಿನ್ನ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ...

ನನ್ನಪ್ಪ ನಮ್ಮ ಮದುವೆಗೆ ಖಂಡಿತ ಒಪ್ಪಿಗೆ ಕೊಡುವದಿಲ್ಲ...


ಎಲ್ಲಾದರೂ ಓಡಿ ಹೋಗೋಣ...

ನಮ್ಮದೇ ಸಂಸಾರ ಕಟ್ಟೋಣ..."

ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ...


ಅಷ್ಟರಲ್ಲಿ ನನ್ನಪ್ಪ ನನ್ನ ರೂಮಿಗೆ ಬಂದ...


ಹುಡುಗಿ ತನ್ನ ಅಪ್ಪುಗೆ ಸಡಿಲಿಸಿದಳು...


ಅವನಿಗೆ ವಿಷಯ ಗೊತ್ತಾಯಿತು..

ನನ್ನಪ್ಪ ಬಹಳ ಸಮಧಾನಿ...

"ಈ ಪ್ರೀತಿ.. 

ಪ್ರೇಮ .... ಹೃದಯ..
ಏನೇ ಅಂದರೂ..

ಬದುಕಲಿಕ್ಕೆ ಎರಡು ಹೊತ್ತು ಊಟ ಬೇಕು...

ಧರಿಸಲಿಕ್ಕೆ ಬಟ್ಟೆ ಬೇಕು...

ಸಿನೇಮಾ...  ಹೊಟೆಲ್ಲು ..

ಕಾರು..
ದೊಡ್ಡ ಅಪಾರ್ಟಮೆಂಟು ಅಗತ್ಯವಾಗಿ ಬೇಕು..

ಈಗ..

ಈ  ಪ್ರೀತಿ.. 
ಪ್ರೇಮಬದುಕು ತುಂಬಾ ದುಬಾರಿಯಾಗಿಬಿಟ್ಟಿದೆ ..
ಕೋಟಿಗಟ್ಟಲೆ ಹಣ ಬೇಕು...

ನಿಮ್ಮ ಅರ್ಧ ಓದು ಅದನ್ನೆಲ್ಲ ಪೂರ್ತಿಗೊಳಿಸಲಾರದು...


ನಾನು ಶ್ರೀಮಂತನಲ್ಲ...

ನಿಮ್ಮಿಬ್ಬರ ಬದುಕನ್ನು ನೀವೇ ನೋಡಿಕೊಳ್ಳಬೇಕು...

ಜೊತೆಗೆ ನಮ್ಮ "ಮುಪ್ಪನ್ನೂ " ನೋಡಿಕೊಳ್ಳಬೇಕು...


ಓಡಿ ಹೋಗಿ ..

ಬದುಕು ಕಂಡುಕೊಳ್ಳುವದು ಮೂರ್ಖತನ....

ಈಗ ನಿಮ್ಮ ಮದುವೆಗೆ ನನ್ನ ಒಪ್ಪಿಗೆ ಖಂಡಿತ ಇಲ್ಲ...."


ಅಪ್ಪ ಅಷ್ಟು ಹೇಳಿ ಹೊರಟು ಹೋದ...


ಏನು ಮಾಡಲಿ...?


ಆ ಚಂದದ ಹುಡುಗಿಯ ಕೆನ್ನೆಯಲ್ಲಿ ಕಣ್ಣೀರಿತ್ತು...


ಕಣ್ಣುಗಳಲ್ಲಿ ದೈನ್ಯತೆ ಇತ್ತು...

ನನಗಾಗಿ ಎಲ್ಲವನ್ನೂ ಬಿಟ್ಟು ಬರುವ ಪ್ರೀತಿಯಿತ್ತು....

ಎದುರಿಗೆ ..

ಬದುಕಿನ ಸವಾಲುಗಳ ಪ್ರಶ್ನೆ ಇರುವಾಗ ..
ಹುಡುಗಿ...
ಆಕರ್ಷಣೆಗಳು ಕಡಿಮೆಯಾಗುತ್ತವಾ?

ನಾನು ಭವಿಷ್ಯಕ್ಕೆ ಹೆದರಿದೆನಾ  ?


ನನ್ನ ಅಸಹಾಯಕ ನಿರುತ್ತರ...

ಅಸಹನೀಯ ಕ್ಷಣಗಳು...

ಇಷ್ಟೆಲ್ಲ ಆರಾಧಿಸಿದ ನನ್ನ ಪ್ರೇಮ ಸುಳ್ಳಾ?

ಈ ಪ್ರೀತಿಗಾಗಿ ಏನನ್ನೂ ಮಾಡಲಾರದೆ ಹೋದೆ...

ಹುಡುಗಿ ನನ್ನ ರೂಮಿನಿಂದ ಅತ್ತೂ.. ಅತ್ತೂ ಹೋದಳು..


ಹೋಗುವಾಗ ..

ಅವಳ ದೈನ್ಯ ಕಣ್ಣಿನ ನೋಟ ನನ್ನೋಳಗೆ ಬಿಟ್ಟು ಹೋದಳು..

ನಾನು ಈಗ ಶ್ರೀಮಂತನಾದರೂ..

ಕೈಗೆ ಸಿಗದ ಅವಳ ಪ್ರೀತಿಗಾಗಿ ಇನ್ನೂ ಮನಸ್ಸು ಕಾತರಿಸುತ್ತಿತ್ತು...

ಅವಳು ಬೇಕು ಎನ್ನುವ ತೀವೃತೆ ಇನ್ನೂ ಜಾಸ್ತಿಯಾಗಿತ್ತು....


ಈಗ ...

ಅನಿರೀಕ್ಷಿತವಾಗಿ ಮತ್ತೆ ನನ್ನೆದುರಿಗೆ ಬಂದಿದ್ದಾಳೆ...

ನನ್ನ ಸಹಾಯಕರಿಗೆ ಹೇಳಿ ಅವರಿಗೆ ಸ್ಪೆಷಲ್ ಊಟ ಕಳುಹಿಸಿದೆ...


"ನಮ್ಮ ಹೊಟೆಲ್ಲಿನ ಇಂದಿನ ಅದೃಷ್ಟದ ಅತಿಥಿಗಳು ನೀವು" ಅಂತ


ನಮ್ಮ ಪ್ರೀತಿಯವರು ....

ಪ್ರೀತಿಯಿಂದ ಊಟ ಮಾಡಿದರೆ ಎಷ್ಟು ಖುಷಿ ಅಲ್ವಾ ..?

ಈ ಹುಡುಗಿಯನ್ನು ಭೇಟಿ ಆಗಬೇಕಲ್ಲಾ?

ಹೇಗೆ...?

ಗಂಡ ಇರಬಾರದು....


ಮಗು...  ?

ಮಗು ಓಕೆ.. ಅದು ಪುಟ್ಟ ಮಗು...

ಈ ಹುಡುಗಿಯೊಡನೆ ಮಾತನಾಡಬೇಕು..


"ಅವಳಿಗಾಗಿ ಇಷ್ಟು ವರ್ಷ ಹಂಬಲಿಸಿ..

ಹಂಬಲಿಸಿ ..
ಇನ್ನೂ ಮದುವೆಯಾಗದೆ ಉಳಿದ ನನ್ನ ಕಥೆಯನ್ನು ಹೇಳಬೇಕು....

ಅವಳ ಕ್ಷಮೆ ಕೇಳಬೇಕು...."


ಎಷ್ಟೆಲ್ಲ ಚಂದದ ಹುಡುಗಿಯರು  ನನ್ನ ಪ್ರೀತಿ ಹಂಬಲಿಸಿ ಬಂದಿದ್ದರೂ..


ಇವಳ "ದೈನ್ಯ ಕಣ್ಣಿನ  ನೋಟ..

ಅಪರಾಧಿ ಮನೋಭಾವನೆ" ನನ್ನನ್ನು ಸದಾ ಇರಿಯುತ್ತಿತ್ತು...

ನಾನು ಅವಳ ಪ್ರೀತಿಗೆ ಮೋಸ ಮಾಡಬಾರದಿತ್ತು....


"ಸಮಯ" ಅನ್ನೋದು ಇದೆಯಲ್ಲ...

ಎಲ್ಲ ಪ್ರಶ್ನೆಗಳಿಗೆ...ಉತ್ತರ ಕೊಡುತ್ತದೆ..

ನಾನು ಅವರ ಚಲನವಲನ  ಗಮನಿಸುತ್ತಿದ್ದೆ..


ಈ ದಿನ ಬೆಳಿಗ್ಗೆ ...

ಅವಳ ಗಂಡ ಹೊಟೆಲ್ಲಿನಿಂದ ಆಚೆಗೆ ಹೋದ...
ಸಾಯಂಕಾಲದವರೆಗೆ ಬಾಡಿಗೆ  ಕಾರು ಬೇಕು ಅಂತ ಹೇಳಿದ್ದ...!

ನನ್ನ ಅದೃಷ್ಟಕ್ಕೆ ಮನಸಾರೆ ವಂದಿಸಿದೆ...


ಅವರಿದ್ದ ರೂಮಿನ ಕರೆಗಂಟೆ ಒತ್ತಿದೆ...


ಎದೆಯಲ್ಲಿ ಏನೋ ನಡುಕ.... !


ಆಕೆ ಬಂದು ಬಾಗಿಲನ್ನು ತೆಗೆದಳು...

ಅಶ್ಚರ್ಯವಾಗಿದ್ದರೂ ...
ತೋರ್ಪಡಿಸದ ಮುಖಭಾವ ನನ್ನನ್ನು ಸ್ವಾಗತಿಸಿತು...

ಒಳಗೆ ಬಾ ಅನ್ನಲಿಲ್ಲ...


ನಾನು ಅವಳನ್ನು ಹಿಂಬಾಲಿಸಿದೆ...


ಆ ಮೌನದಲ್ಲಿ ..

ನನ್ನೆದೆಯ ಢವ ಢವದ ಶಬ್ಧ ಜಾಸ್ತಿಯಾಗತೊಡಗಿತು...

ನನ್ನೊಳಗಿನ ತೀವ್ರತೆಗೆ  ನನಗೆ ನಾಚಿಕೆ ಆಯಿತು...


"ಪುಟ್ಟಿ  ಸ್ನಾನಕ್ಕೆ ಹೋಗಿದ್ದಾಳೆ... ಏನು ವಿಷಯ...?"


ಅವಳ ಕಣ್ಣುಗಳನ್ನು ನೋಡಿದೆ..

ನಿರ್ವಿಕಾರ ಭಾವನೆ ಬಲವಂತವಾಗಿ ಮಾಡಿಕೊಂಡಂತಿತ್ತು ...

"ಹುಡುಗಿ...

ನಾನು ಈ ಹೊಟೆಲ್ ಮಾಲಿಕ ಈಗ....
ನನ್ನ ಬಳಿ ಸಾಕಷ್ಟು ಹಣವಿದೆ...."

ಅದಕ್ಕೇನು ? ..

ಎನ್ನುವಂತಿತ್ತು ಅವಳ ಕಣ್ಣು..........

" ಅಂದು..

ನಿನ್ನ ಪ್ರೀತಿಯನ್ನು ನಿರಾಕರಿಸಿದ್ದು ನನ್ನ ಬದುಕಿನ ಬಲು ದೊಡ್ಡ ತಪ್ಪು...

ಅಪರಾಧಿ ಮನೋಭಾವನೆಯಿಂದ ...

ದಿನಾಲೂ..
ಪ್ರತಿಕ್ಷಣ ಹಿಂಸೆಯಿಂದ ಸಾಯುತ್ತಿರುವೆ..."

ಹುಡುಗಿಯ ಕಣ್ಣು ನೋಡಿದೆ...

ಅಲ್ಲಿ ಪ್ರೀತಿ ಹುಡುಕುವ ಆಸೆ ಆಯ್ತು...

ಅವಳ ಭಾವರಹಿತ ನೋಟ ನೋಡಲಾರದೆ ತಲೆ ತಗ್ಗಿಸಿದೆ....


"ಹುಡುಗಿ...

ನಮ್ಮ ಪ್ರೀತಿಗೆ ಒಂದು ಅವಕಾಶ ಕೊಡೋಣ...
ನಿನ್ನನ್ನು ಈಗಲೂ ಸ್ವೀಕರಿಸುತ್ತೇನೆ...

ನಿನ್ನ ಮಗುವನ್ನೂ ಸಹ ಪ್ರೀತಿಸುತ್ತೇನೆ..

ನೀನಿಲ್ಲದ ಬದುಕು ನನ್ನಿಂದ ಆಗದು...

ದಯವಿಟ್ಟು... ದಯವಿಟ್ಟು.. ಬಾ...


ಈಗ ನನ್ನ ಬಣ್ಣದ ಹರೆಯ ಮಾತಾಡುತ್ತಿಲ್ಲ...

ಹಣಗಳಿಸುತ್ತಿರುವ .....
ಪ್ರಬುದ್ಧತೆಯಿಂದ ಮಾತನಾಡುತ್ತಿರುವೆ...

ನಿನ್ನನ್ನು ಹೂವಿನಂತೆ ನೋಡಿಕೊಳ್ಳಬಲ್ಲೆ....


ಪ್ರೀತಿಯ ಜೊತೆಗೆ ..

ಕಾರು..
ಬಂಗ್ಲೆ... ಹಣ ಸೌಕರ್ಯದ ಸುಖ ಕೊಡಬಲ್ಲೆ..."

ನಾನು ತಲೆ ತಗ್ಗಿಸಿಯೇ ಇದ್ದೆ...


ಹುಡುಗಿಯ ಗಡಸು ಧ್ವನಿ ನನ್ನನ್ನು ಎಚ್ಚರಿಸಿತು..


"ಏಳು...

ಗೆಟ್ ಔಟ್... !!
ಮೊದಲು ಇಲ್ಲಿಂದ ಹೊರಡು... 
ರೂಮಿನ ಬಾಗಿಲು ತೆರೆದಿದೆ...."

ನಾನು ಅವಕ್ಕಾದೆ....


"ನನ್ನ ಗಂಡನ ಪ್ರೀತಿಗೆ ಮೋಸದ ಕಲ್ಪನೆಯನ್ನೂ ಮಾಡಲಾರೆ...


ನೀನು ನನ್ನ ನೆನಪು ಅಷ್ಟೆ..


ನನ್ನ ಇಂದಿನ ಬದುಕು ನನ್ನ ಗಂಡ...


ನಮ್ಮಿಬ್ಬರ ಪ್ರೀತಿಯ ವಿಷಯ ಗೊತ್ತಿದ್ದರೂ..

ಒಂದು ದಿನವೂ ..
ಹಂಗಿಸಿ.. 
ಅಣಕಿಸದ ದೊಡ್ಡ ಮನುಷ್ಯ ಆತ..

ಅವನ ಪ್ರೀತಿ ಬಲು ದೊಡ್ಡದು...


ಇಷ್ಟು ಮಾತನಾಡುವ ಅಗತ್ಯ ನನಗಿಲ್ಲ...


ಮತ್ತೆ  ಎಲ್ಲಿಯೂ ನಿನ್ನ ಹ್ಯಾಪು ಮೋರೆಯನ್ನು ನನ್ನ ಕಣ್ಣಿಗೆ ಕಾಣಿಸಬೇಡ... ಹೊರಡು... 

ಗೆಟ್ ಔಟ್.. !!..."

ಬಹಳ ತೀಕ್ಷ್ಣವಾಗಿತ್ತು ಧ್ವನಿ...


ಅತ್ಯಂತ ಅಪಮಾನಕರ ಕ್ಷಣಗಳು........ !


ನಾನು ಅಲ್ಲಿಂದ ಹೊರಟೆ..

ಮಗು ಸ್ನಾನದ ರೂಮಿಂದ ಹೊರಗೆ ಬಂತು...

"ಇವರು ಯಾರಮ್ಮಾ?"


"ಗೊತ್ತಿಲ್ಲ...

ಅವರಿಗೆ ಬೇರೆ ಕಡೆ ಹೋಗಬೇಕಿತ್ತಮ್ಮ..
ವಿಳಾಸ ತಪ್ಪಿ ಬಂದಿದ್ದಾರೆ..."

"ಅವರ ಬಳಿ ಅಡ್ರೆಸ್ ಇಲ್ಲವಾ?"


"
ಅವರ ಬಳಿ ...
ಬಹುಷಃ ಹಳೆ ವಿಳಾಸವಿದ್ದಿರಬಹುದು...
ವಿಳಾಸಗಳು ಬದಲಾಗುತ್ತ ಇರುತ್ತಮ್ಮಾ...

ವಿಳಾಸ..
ಸರಿ ಇದ್ದರೂ ...
ಸಮಯದಲ್ಲಿ ವ್ಯಕ್ತಿಗಳು ಬದಲಾಗುತ್ತಾರಮ್ಮ...

ಕೆಲವೊಮ್ಮೆ ..

ವಿಳಾಸ... ವ್ಯಕ್ತಿಗಳು ಎರಡೂ ಬದಲಾಗಿಬಿಡುತ್ತದಮ್ಮಾ..."..

ನಾನು ಹಿಂತಿರುಗಿ ನೋಡಲಿಲ್ಲ....






(ಚಂದದ ಪ್ರತಿಕ್ರಿಯೆಗಳಿವೆ .... ದಯವಿಟ್ಟು ಓದಿ....)


Saturday, October 6, 2012

ಹೊತ್ತು ಹೋಗದ ಹೊತ್ತಿನ ಕಥೆಗಳು ...... " 2 "



ಈಗ ನಡೆಯುತ್ತಿದೆಯಲ್ಲ...

ಇಂತಹುದೇ ಒಂದು  ಕಾಲದಲ್ಲಿ ಒಬ್ಬ ಕಳ್ಳನಿದ್ದ...

ಆತ ಒಂದು ಶಾಲೆಯನ್ನು ನಡೆಸುತ್ತಿದ್ದ...


"ಕಳ್ಳತನ ಹೇಗೆ ಮಾಡಬೇಕು...?

ಅದಕ್ಕೆ ಬೇಕಾದಂಥಹ ಪೂರ್ವ ತಯಾರಿಗಳು...
ಕಳ್ಳತನದ ಇತಿಹಾಸ...
ಇತಿಹಾಸ ಪ್ರಸಿದ್ಧ ಕಳ್ಳರು..
ಅವರೆಲ್ಲ ಹೇಗೆ ಪ್ರಸಿದ್ಧರಾದರು.." ಇತ್ಯಾದಿ ವಿಷಯಗಳನ್ನು ಹೇಳಿಕೊಡುತ್ತಿದ್ದ...

ಅವನ ಶಾಲೆ ಬಹಳ ಪ್ರಸಿದ್ಧಿ ಪಡೆದಿತ್ತು...


ಒಬ್ಬ ಮರಿ ಕಳ್ಳ ..

ಆತನ ಬಳಿ ಕಳ್ಳತನ ಓದುತ್ತಿದ್ದ...
ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕಗಳನ್ನು ತೆಗೆದುಕೊಂಡು ತರಗತಿಗೆ ಮೊದಲಿಗನಾಗಿ ಬರುತ್ತಿದ್ದ...

ಅಂತಿಮ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು ಹೆಮ್ಮೆಯಿಂದ ಬೀಗಿದ..


ಆಗ 

ಗುರು ಕಳ್ಳ ಆತನಿಗೆ ತನ್ನ ಅನುಭವಾಮೃತವನ್ನು  ಹೇಳಿದ...

"ಎಲೈ ಮರಿ ಕಳ್ಳನೆ..

ಪರೀಕ್ಷೆಯಲ್ಲಿ ಅಂಕಗಳನ್ನು ಜಾಸ್ತಿ ತೆಗೆದುಕೊಂಡಿರುವೆಯೆಂದು ..
ಗರ್ವ ಪಡಬೇಡ..

ಮುಂದೆ...

ಬದುಕಿನ ಕಳ್ಳತನದಲ್ಲಿ ..
ಈ ಅಂಕಗಳು ಯಾವ ಕೆಲಸಕ್ಕೂ ಬರುವದಿಲ್ಲ...
ಅಲ್ಲಿ ..
ನಿನ್ನ ಪ್ರಯತ್ನ ಮತ್ತು ಸ್ವಂತಿಕೆ ಮಾತ್ರ ಉಪಯೋಗಕ್ಕೆ ಬರುತ್ತವೆ.."

ಗುರು ಕಳ್ಳನ ಮಾತು ಮರಿ ಕಳ್ಳನ ಕಿವಿ ಒಳಗೆ ಹೋಗಲಿಲ್ಲ...


ಮುಂದೆ....

ಮರಿಕಳ್ಳ ತನ್ನ ಸ್ವಂತ ಉದ್ಯೋಗವಾಗಿ "ಕಳ್ಳತನ" ಶುರು ಮಾಡಿದ...

ಮರಿ ಕಳ್ಳ ತಂತ್ರಿಕವಾಗಿ ಬಹಳ ಪರಿಣತಿ ಹೊಂದಿದ್ದ...

ಚೆನ್ನಾಗಿ ಉಪಾಯ ಮಾಡಿ..
ಗೋಡೆಗಳನ್ನು ಕೊರೆದು.. ಮನೆಯ ಒಳಗೆ ಹೋಗುತ್ತಿದ್ದ..

ಆದರೆ ....

ಮನೆಯ ಒಳಗಡೆ ಏನಾದರೂ ಎಡವಟ್ಟುಗಳನ್ನು ಮಾಡಿಕೊಂಡು ...
ಚೆನ್ನಾಗಿ ಒದೆ ತಿಂದು ಆಸ್ಪತ್ರೆಗೆ ಸೇರುತ್ತಿದ್ದ...

ಪ್ರತಿ ಬಾರಿಯೂ ಹೀಗೆ ಆಗತೊಡಗಿತು...


ಮರಿಕಳ್ಳನಿಗೆ ಬಹಳ ಬೇಸರವಾಯಿತು..


ಮತ್ತೆ ಗುರು ಕಳ್ಳನ ಬಳಿ ಹ್ಯಾಪು ಮೋರೆ ಹಾಕಿಕೊಂಡು ಬಂದ...


"ಎಲೈ ಮರಿಕಳ್ಳನೇ..


ನೀನು ಚಿಂತಿಸ ಬೇಡ..

ನನ್ನ "ವಿಶೇಷ ತರಬೇತಿ ಕಾರ್ಯಗಾರವನ್ನು ಸೇರಿಕೋ...
ಕೇವಲ ಎರಡು ವರ್ಷ..
ನಿನಗೆ ನನ್ನ ವೃತ್ತಿ ಕುಶಲತೆಯನ್ನೆಲ್ಲ ಧಾರೆ ಎರೆಯುತ್ತೇನೆ..."

ಮರಿ ಕಳ್ಳ ಮನದಲ್ಲೇ ಲೆಕ್ಕಾಚಾರ ಹಾಕಿದ..


"ಎರಡು ವರ್ಷ ಶಿಷ್ಯ ವೃತ್ತಿ ಅಂದರೆ ..

ಕಡಿಮೆ ವೇತನದಲ್ಲಿ ಆತನ ಲಾಭಕ್ಕಾಗಿ ಕೆಲಸ ಮಾಡುವದು..."

ಮರಿ ಕಳ್ಳನ ಬಳಿ ಬೇರೆ ದಾರಿ ಇರಲಿಲ್ಲ..

ಗುರು ಕಳ್ಳನ ಮಾತಿಗೆ ಒಪ್ಪಿದ..

ಅಂದು ರಾತ್ರಿ ..

ಗುರು ಕಳ್ಳ ಒಬ್ಬ ಶ್ರೀಮಂತನ ಮನೆಯನ್ನು ತನ್ನ ಶಿಷ್ಯರಿಗಾಗಿ ಆಯ್ದು ಕೊಂಡಿದ್ದ...

ರಾತ್ರಿ..

ಮನೆಯ ಗೋಡೆಯನ್ನು ಕೊರೆದು ಒಳಗೆ ಹೋಗಿ...
ತಿಜೋರಿಯ ಬೀಗವನ್ನು ಶಬ್ಧ ಮಾಡದೆ ಒಡೆದು...
ಅಲ್ಲಿರುವ "ನಗ.. ನಾಣ್ಯಗಳನ್ನು" ಒಂದು ಚೀಲದಲ್ಲಿ ತುಂಬಿ ಕೊಂಡರು...

ಶಿಷ್ಯರೆಲ್ಲ ಗುರುವಿನ ಚಾಕಚಕ್ಯತೆಯನ್ನು ಗಮನಿಸುತ್ತಿದ್ದರು..


ಹಾಗೆ ಕೋಣೆಯ ಹೊರಗೆ ಬರುವಾಗ ಅಜಾಗರುಕತೆಯಿಂದಾಗಿ..

ಗುರು ಕಳ್ಳ ಮಲಗಿದ್ದವರ ಕಾಲನ್ನು  ತಾಗಿಸಿಕೊಂಡು ಬಿಟ್ಟ... !

ಶಿಷ್ಯರೆಲ್ಲ ಉಸಿರು ಬಿಗಿ ಹಿಡಿದು ಗಮನಿಸುತ್ತಿದ್ದರು.... !


ಮಲಗಿದ್ದವ .. 

ಮುಸುಕು ತೆಗಿಯದೆ..

"ಯಾರದು...? ".. ಎಂದು ಕೇಳಿದ ...!


ಗುರು ಕಳ್ಳ  ಮೆಲ್ಲನೆ  ....


"ಮೀಯಾಂವ್... 

ಮೀಯಾಂವ್..."  ಅಂದ... !

"ಛೇ... 

ಧರಿದ್ರ.. ಬೆಕ್ಕು...
ಮಲಗಲಿಕ್ಕೂ ಬಿಡೋದಿಲ್ಲ." 
ಎಂದು ಮಲಗಿದ್ದವ ಮತ್ತೂ ಮುಸುಕು ಎಳೆದು ಮಲಗಿ ಬಿಟ್ಟ...!

ಹೊರಗೆ ಬಂದ ಶಿಷ್ಯ ಕಳ್ಳರೆಲ್ಲ ಗುರುವಿಗೆ ಅಭಿನಂದನೆ ಸಲ್ಲಿಸಿದರು...


ಮರಿಕಳ್ಳ ಮತ್ತೆ ಲೆಕ್ಕಾಚಾರ ಹಾಕಿದ...


"ಗುರು ಕಳ್ಳ ಮಾಡಿದ ಇಂಥಹ ಉಪಾಯಗಳು ತನ್ನ ಬಳಿಯೂ ಇದೆ..

ಮತ್ಯಾಕೆ ..
ಇವನ ಬಳಿ ಬಿಟ್ಟಿಯಾಗಿ ಕೆಲಸ ಮಾಡಬೇಕು...?..."

ಮರಿ ಕಳ್ಳ ...

ಗುರು ಕಳ್ಳನ ಬಳಿ ತರಬೇತಿ ಕಾರ್ಯಾಗಾರವನ್ನು ಬಿಟ್ಟು ..
ಮತ್ತೆ ಸ್ವತಂತ್ರವಾಗಿ ದಂಧೆ ಶುರು ಮಾಡಲು ನಿರ್ಧರಿಸಿದ...

ಅಂದು ರಾತ್ರಿ...


ಒಂದು ಮನೆಯ ಗೋಡೆ ಕೊರೆದು...

ನಿಧಾನವಾಗಿ ಒಳಗೆ ಹೋಗಿ...
ತಿಜೋರಿಯ ಬೀಗ ಒಡೆದು ಅಲ್ಲಿನ ಸಂಪತ್ತುಗಳನ್ನು ಮೂಟೆ ಕಟ್ಟಿಕೊಂಡ..

ಬಹಳ ಹೆಮ್ಮೆಯಾಯಿತು ತನ್ನ ಚಾಕಚಕ್ಯತೆ ಬಗೆಗೆ..


ಸಾವಾಕಾಶವಾಗಿ ಹೊರಗೆ ಬರುವಾಗ ಮಲಗಿದ್ದವರೊಬ್ಬರನ್ನು ತುಳಿದು ಬಿಟ್ಟ...


ಮಲಗಿದ್ದವ ..

ಮುಸುಕು ತೆಗಿಯದೆ "ಯಾರದು...?" ಅಂತ ಕೇಳಿದ...

ಮರಿ ಕಳ್ಳನಿಗೆ ಖುಷಿಯಾಯಿತು...

ಎಲ್ಲವೂ ನಿನ್ನೆಯ ತರಹವೇ ಆಗುತ್ತಿದೆ... !

ಸಂತೋಷದಿಂದ  ಜೋರಾಗಿ  ಹೇಳಿದ...


"  ಬೆಕ್ಕು.... .............. !! 

ಇದು ....ಬೆಕ್ಕು... !!

...       ....          ..........          ........  


ಮುಂದೆ ಏನಾಯ್ತು ಅಂತಿರಾ ...?


ಮತ್ತೆ ಏನಿಲ್ಲ ..


ಚೆನ್ನಾಗಿ ಒದೆ ತಿಂದು ..

ಹಿಗ್ಗಾ ಮುಗ್ಗ ಥಳಿಸಿಕೊಂಡು ಆಸ್ಪತ್ರೆ ಸೇರಿದ...

.............  ...............  .............  ..............................


ಪುಸ್ತಕದ  ಓದು ಎಷ್ಟೇ ಇದ್ದರೂ...


ನಮ್ಮ ಬಳಿ..

ನಮ್ಮದಾಗಿ ಕೊನೆಯತನಕ ಇರುವದು ....

"ನಮ್ಮ ..

ಪ್ರಯತ್ನ ... ಅನುಭವ..
ಸ್ವಂತಿಕೆ   ಮಾತ್ರ..."

Tuesday, September 11, 2012

.................ಅರ್ಧ ಸತ್ಯ .

ಆಗಾಗ....
ನನ್ನೆದೆಯಲ್ಲಿ ಒಂದು ಥರಹದ "ಆತಂಕ " ಆದ ಅನುಭವ ಆಗುತ್ತಿತ್ತು...

ತಣ್ಣಗೆ... 
ತಲ್ಲಣ ... ಆದ ಅನುಭವ ...  ........... !

ಹಾಗೆ ಆಗುವದು ಕೆಲವೇ ಕ್ಷಣಗಳು ಮಾತ್ರ ...!

ನಲವತ್ತೈದು ವರ್ಷ ಆಯಿತಲ್ಲ.... 
ಸಕ್ಕರೆ.. 
ಬಿಪಿ ಶುರುವಾಗಿರ ಬಹುದೆಂಬ ಅನುಮಾನ ನನ್ನ ಮಡದಿಗೆ.....

ನನ್ನ ಪ್ರೀತಿಯ ಮುದ್ದಿನ ಮಡದಿ...
ಅವಳು ಹೇಳಿದ ಹಾಗೆ ಕೇಳಲೇ ಬೇಕಲ್ಲ..

ನಾನೂ.. ಅವಳೂ..
ಒಂದು ಮಲ್ಟಿ ಸ್ಪೆಷಲ್ ಆಸ್ಪತ್ರೆಗೆ ತಪಾಸಣೆ ಮಾಡಲು ಹೋದೆವು...

ಅವರು ಹತ್ತು ಹಲವಾರು ಟೆಸ್ಟ್ ಮಾಡಿ ವರದಿ ಕೊಟ್ಟರು.....

ಅದನ್ನು ನೋಡಿದ ಡಾಕ್ಟರು...

" ನಿಮ್ಮ ..
ಆರೋಗ್ಯ ತುಂಬಾ ಚೆನ್ನಾಗಿದೆ...
ಎಲ್ಲವೂ ಸರಿಯಾಗಿಯೇ ಇದೆ...

ಆದರೆ ಒಂದು ಸಮಸ್ಯೆ ಇದೆ  ....! ... "

"ಏನು.....?"

"ಮತ್ತೇನಿಲ್ಲ...
ನೀವು ಒತ್ತಡದಲ್ಲಿ ಕಾರ್ಯ ನಿರ್ವಹಿಸುವಾಗ ..
ಹೃದಯದ ಒಂದೆರಡು ಭಾಗಕ್ಕೆ ರಕ್ತ ಸಂಚಲನೆಯಾಗುವದಿಲ್ಲ..."

"ಅಂದರೆ ಏನು ...?"

ನನ್ನ ಹೆಂಡತಿ ನನಗಿಂತ ಗಾಭರಿಯಾದಳು....!

" ನಿಮ್ಮ ಹೃದಯದಲ್ಲಿ ಬ್ಲಾಕೇಜು ಇದೆ....
ಇದು ಹೃದಯಾಘಾತದ ಮುನ್ಸೂಚನೆ...

ನಿಮ್ಮ  ಬಿಪಿ ಕೂಡ  ಜಾಸ್ತಿ ಇದೆ..."

ಇಷ್ಟು ಬೇಗ  ವಯಸ್ಸಾಗಿ ಹೋಯಿತಾ ನನಗೆ...?
ಮುಪ್ಪು ಆವರಿಸಿ ಬಿಟ್ಟಿತಾ  ?

ನನ್ನಮಡದಿಗೆ ಅಳು ಬಂದಿತು...
ನಾನು ಸಮಾಧಾನಿಸುವ ಪ್ರಯತ್ನ ಮಾಡಿದೆ...

"ನೀವು ...
ಗಾಭರಿ ಪಡುವಂಥಾದು ಏನೂ ಇಲ್ಲ...

ಇದು ಹೃದಯದ ಸ್ನಾಯುಗಳು ಸ್ವಲ್ಪ ಕಠಿಣವಾದರೂ ..
ಈ ಫಲಿತಾಂಶ ಬರುತ್ತದೆ...

ಇದಕ್ಕಾಗಿ "ಇಕೋ " ಟೆಸ್ಟ್ ಮಾಡಿಸಿ..."

 ನಾವು ಒಪ್ಪಿದೆವು...

ಅತಂಕಗೊಂಡ ನನ್ನಾಕೆ ಲಾಬ್ ನ ಬಾಗಿಲವರೆಗೆ ಬಂದಳು...

ತಬ್ಬಿಕೊಂಡೇ ಬಂದಳು... 
ಕಣ್ಣಲ್ಲಿ ನೀರು ಜಿನುಗಿತ್ತು...

"ಏನೂ ಆಗಿಲ್ಲಾರಿ...
ಏನೂ ಆಗೋದೂ ಇಲ್ಲ ಬಿಡಿ...
ನಾನು ಹರಕೆ ಹೊತ್ತಿದ್ದೇನೆ... ನಮ್ಮ ಮನೆ ಕುಲ ದೇವರಿಗೆ..."

ನನಗೆ ಪ್ರೀತಿಯುಕ್ಕಿತು...

ನನ್ನ 
ಎಷ್ಟೆಲ್ಲ ದೌರ್ಬಲ್ಯಗಳ ಜೊತೆ ಬದುಕುತ್ತಿದ್ದಾಳೆ...!
ಆದರೂ ಎಷ್ಟೊಂದು ಪ್ರೀತಿ... ನನ್ನ ಮೇಲೆ... !

ನನ್ನಾಕೆಯ ಕೆನ್ನೆಯೆಂದರೆ ನನಗೆ ಬಲು ಇಷ್ಟ...

ಅವಳ ಕೆನ್ನೆಯನ್ನು ಸಣ್ಣದಾಗಿ ಚಿವುಟಿದೆ   ..
ನಾನು ಹಾಗೆ ಚಿವುಟುವದು  ಅವಳಿಗೂ ಇಷ್ಟ...

ಒಳಗೆ ಬಂದು ಷರ್ಟ್ ಬಿಚ್ಚಿ ಮಲಗಿದೆ...

ನರ್ಸ್ ನನ್ನೆದೆಗೆ ಜೆಲ್ ಸವರಿ... 
ಒಂದು ಸಣ್ಣ ಮಷೀನನ್ನು ಎದೆಯ ಭಾಗದಲ್ಲಿ ಓಡಾಡಿಸ ತೊಡಗಿದಳು...

ಪಕ್ಕದ ಕಂಪ್ಯೂಟರಿನಲ್ಲಿ ಅದರ ಚಿತ್ರ ಬರುತ್ತಿತ್ತು...

" ಕಂಪ್ಯೂಟರಿನಲ್ಲಿ ಏನು ಕಾಣುತ್ತಿದೆ...?"

" ನಿಮ್ಮ ಹೃದಯ...! "

 ನನಗೆ ಕುತೂಹಲವಾಯ್ತು...

" ವಾವ್... !
ನನ್ನ ಹೃದಯವಾ...?
ಪ್ಲೀಸ್... ದಯವಿಟ್ಟು ನನಗೊಮ್ಮೆ ತೋರಿಸಿ...

ನನ್ನ ಹೃದಯ ನಾನು ಇನ್ನೂ ನೋಡೇ ಇಲ್ಲ .. !"

ನರ್ಸ್ ಕಂಪ್ಯೂಟರ್ ಟೇಬಲ್ಲನ್ನು ನನಗೆ ಕಾಣುವ ಹಾಗೆ ತಿರುಗಿಸಿದಳು...

 ನಾನು ಮಲಗಿದ್ದಲ್ಲೇ  ಹೃದಯವನ್ನು ನೋಡಿದೆ...

ಅದು ವಿಲ ..ವಿಲನೆ  .. 
ಒದ್ದಾಡಿದ ಹಾಗೆ ಭಾಸವಾಗುತ್ತಿತ್ತು....!

ಅಯ್ಯೋ....!
ನನ್ನ ಹೃದಯ ಸಂಕಟ ಪಡುತ್ತಿದೆಯಾ !!

"ನೋಡ್ರೀ...
ನನ್ನ ಹೃದಯ ಅಳುತ್ತಿದೆಯಾ?
ತುಂಬಾ ಸಂಕಟ  ಪಡುವ ಹಾಗೆ ಕಾಣುತ್ತಿದೆ... !’

"ಹೌದು ಸಾರ್....
ಅಳುತ್ತಾ ಇರೋ ಹಾಗೆ ಕಾಣ್ತಿದೆ...

ನೀವು ಏನು ಮಾಡಿಕೊಂಡಿದ್ದೀರಿ...?"

"ನನ್ನದು ಸ್ವಂತ ಬಿಸಿನೆಸ್ ಇದೆ..."

"ಬೇಸರ ಮಾಡ್ಕೋಬೇಡಿ.. 
ಸಾರ್..
ವ್ಯಾಪಾರಮ್ ದ್ರೋಹ ಚಿಂತನಮ್...

ಜನರಿಗೆ ಮೋಸ ಮಾಡುತ್ತೀರಾ ಸಾರ್...?"

" ಇಲ್ವಲ್ಲಮ್ಮಾ...
ಇಷ್ಟು ವರ್ಷವಾದರೂ ..
ಒಂದು ಸೈಟು ಖರಿದಿಸಿಲ್ಲ...

ಬದಲಿಗೆ ಜನರೇ ನನಗೆ ಕೆಲವು ಬಾರಿ ಮೋಸ ಮಾಡಿದ್ದಾರೆ..."

 ನರ್ಸ್ ಮಾತನಾಡುವ ರೀತಿ ನನಗೆ ಬಲು ಇಷ್ಟವಾಯ್ತು...

" ಸಾರ್..
ತಪ್ಪು ತಿಳಿಯ ಬೇಡಿ...

ಕಾಲೇಜು ದಿನಗಳಲ್ಲಿ ..
ಯಾವುದಾದರೂ ಹುಡುಗಿ ..
ಪ್ರೀತಿ ಮಾಡಿ..ನಿಮಗೆ ಮೋಸ ಮಾಡಿದ್ದಳಾ...?"

"ಇಲ್ಲಮ್ಮ...
ಒಂದು ಹುಡುಗಿಯನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ...

ಆದರೆ ಹೇಳಲಿಕ್ಕೆ ಧೈರ್ಯ ಸಾಲದೆ... 
ಸುಮ್ಮನಿದ್ದು ಬಿಟ್ಟೆ..

ಬಹುಷಃ ಆ ನೋವು  ..
ನನ್ನ ಹೃದಯದಲ್ಲಿ ಉಳಿದು ಬಿಟ್ಟಿದೆ ಅಂತ ಅನ್ನಿಸುತ್ತದೆ..."

"ಹೋಗಿ ಸಾರ್ ನೀವು..!

ಅಂಥಹ ಪ್ರೀತಿ ..
ಯಾವಾಗಲೂ ಒಂದು ಮಧುರ ಭಾವನೆಯನ್ನು ಉಳಿಸುತ್ತದೆ...
ಅದು ನಿಮ್ಮ ಹೃದಯಕ್ಕೆ ಖುಷಿ ಕೊಡುತ್ತದೆ..."

"ಹಾಗಾದರೆ...
 ನನ್ನ ಹೃದಯ ವಿಲ ವಿಲನೆ  ಒದ್ದಾಡುತ್ತಿರುವುದು ಏಕೆ...?"

"ನೀವು ಯಾರಿಗಾದರೂ..
ಮೋಸ ಮಾಡಿರುತ್ತೀರಿ ಸರ್..
ಬಿಸಿನೆಸ್ ಅಲ್ಲವಾ?...."

"ಇಲ್ಲಮ್ಮ..
ನನಗೆ ಲಾಸ್ ಆದರೂ ಪರವಾಗಿಲ್ಲ...
ವ್ಯವಹಾರದಲ್ಲಿ ನಾನು ತುಂಬಾ ಕ್ಲೀನ್...

ನಾನು ಯಾವಾಗ್ಲೂ ನಗು ನಗ್ತಾ ಇರ್ತಿನಿ...
ನನ್ನ ಹೃದಯಕ್ಕೆ ..
ಅಳು.. 
ದುಃಖ ಕೊಡುವದು ಕಡಿಮೆ.."

"ಸಾರ್...
ನಾನು ದಿನಾಲೂ  ..
ನೂರಾರು ಹೃದಯ ನೋಡ್ತಾ ಇರ್ತೇನೆ...

ಎಲ್ಲ ಹೃದಯಗಳು ಅಳುತ್ತಾ ಇರುತ್ತವೆ... ವಿಲಿ ವಿಲಿ ಒದ್ದಾಡುತ್ತ ಇರುತ್ತವೆ...!

ಎಲ್ಲರೂ...
ಬೇರೆಯವರಿಗೆ ಮೋಸ ಮಾಡುತ್ತಾರೆ...!

ಅಥವಾ..

ತಮಗೇ  ತಾವು ಮೋಸ ಮಾಡಿಕೊಳ್ಳುತ್ತಾರೆ... "

"ಇಲ್ಲಮ್ಮ...
ನಾನು ಯಾರಿಗೂ ಮೋಸ ಮಾಡಿಲ್ಲಮ್ಮ..."

"ಸಾರ್..
ನಾನು ಇಂಥಾದ್ದೆಲ್ಲ ನಿಮ್ಮ ಬಳಿ ಮಾತನಾಡಬಾರದು...

ಹೋಗ್ಲಿ ಬಿಡಿ ...

ಇಲ್ಲಿ ಹೃದಯದ ಟೆಸ್ಟಿಗೆ ಬರುವವರೆಲ್ಲ ಹೆಚ್ಚಾಗಿ ಸಾವಿನ ಹತ್ತಿರ ನಿಂತಿರುವವರು......

ಸಾವಿನ ಎದುರಿಗೆ ..
ಎಲ್ಲರೂ ಪ್ರಾಮಾಣಿಕರಾಗಿರುತ್ತಾರೆ...
ತಮ್ಮೊಳಗೂ ಪ್ರಾಮಾಣಿಕರಾಗಲು ಪ್ರಯತ್ನಿಸುತ್ತಾರೆ..

ನೀವು ನಿಜ ಹೇಳಿರ್ತೀರಿ...

ನಿಮ್ಮ ಹೃದಯ ..
ನಿಮ್ಮ ಮಡದಿಯ ದುಃಖ ನೋಡಿ ಅಳುತ್ತಿರಬಹುದು...."

ನನಗೀಗ ಸಮಾಧಾನವಾಯಿತು...

ಎಲ್ಲರ ಹೃದಯಗಳೂ ಅಳುತ್ತವೆ.. 
ನನ್ನೊಬ್ಬನದೇ ಅಲ್ಲ...

ಟೆಸ್ಟ್ ಮುಗಿಸಿ ಹೊರಗಡೆ ಬಂದೆ...

ನನ್ನಾಕೆ ಕಾಯ್ತ ನಿಂತಿದ್ದಳು...

"ತಗೊಳ್ಳಿ...
ನಿಮ್ಮ ಮುದ್ದಿನ ಮಗಳು ಫೋನ್ ಮಾಡಿದ್ದಾಳೆ..."

"ಹಲ್ಲೋ.. 
ಏನಮ್ಮಾ ಪುಟ್ಟಿ...?
ನಿನ್ನಮ್ಮ ಸುಮ್ಮನೆ ಗಾಭರಿಯಾಗಿದ್ದಾಳಮ್ಮ..
ನನಗೇನೂ ಆಗಿಲ್ಲ..
ಈಗ ತಾನೆ..
ನನ್ನ ಹೃದಯ ನೋಡ್ಕೊಂಡು ಬಂದೆ ಕಣೆ..."

"ಅಪ್ಪಾ...
ನಿನ್ನ ಹೃದಯಕ್ಕೆ ಏನೂ ಆಗೊಲ್ಲಪ್ಪಾ...
ನಾನೂ ಅಮ್ಮ.. ಪ್ರೀತಿಯಿಂದ ಕಾಯ್ತಾ ಇರ್ತೀವಿ....

ಅಪ್ಪೂ ...
ಇನ್ನು ಮುಂದೆ ನೋ ಡ್ರಿಂಕ್ಸ್... ಪ್ಲೀಸ್.. !.."

" ಓಕೆ ಪುಟ್ಟಾ...
ಆಮೇಲೆ ಸಿಗೋಣ..."

ನಾನೇ..
ಕಟ್ಟಿಕೊಂಡ ಈ ಪುಟ್ಟ ಗೂಡು ಯಾಕೋ ಬಹಳ ಆಪ್ತವಾಯಿತು....

ನನ್ನವರೆನ್ನುವ ಭರವಸೆ...
ಆಪ್ತವಾಯಿತು...

ಕಣ್ಣು ಒದ್ದೆಯಾಯಿತು...
ಅಲ್ಲೇ ಮಡದಿಯ ಭುಜ ಹಿಡಿದು ತಬ್ಬಿಕೊಂಡೆ...

ನನ್ನಾಕೆಯ ಕಣ್ಣಲ್ಲಿನ ನೀರು ಹಾಗೆ ಇತ್ತು....

ಅಷ್ಟರಲ್ಲಿ..
ನರ್ಸ್ ಲ್ಯಾಬಿನಿಂದ ಹೊರಗೆ ಬಂದಳು...

"ಸಾರ್..
ಮೊಬೈಲ್ ಬಿಟ್ಟು ಬಂದಿದ್ದೀರಿ... ತಗೊಳ್ಳಿ..
ಮೆಸೇಜ್ ಇದೆ...

ಕ್ಷಮಿಸಿ.. "

ನಾನು ಲಗುಬಗೆಯಿಂದ ಮೆಸೇಜ್ ನೋಡಿದೆ...

ಓಹ್...
ಚಂದದ ಮೊಂಡು ಮೂಗಿನ...
ಚೂಪು ಗಲ್ಲದ  ಹುಡುಗಿ.... !

" ಗೆಳೆಯಾ...
ಹೇಗಿದ್ದೀಯೋ ಪುಟ್ಟಣ್ಣಿ...!

ಹೃದಯ ಸ್ಕ್ಯಾನಿಂಗ್ ಮಾಡಿಸಿದೆಯಾ...?

ನಿನ್ನ ..
ಹೃದಯದ ಕತ್ತಲ ಕೋಣೆಯಲ್ಲಿ ...
ನನ್ನನ್ನು ಎಲ್ಲಿ ಬಚ್ಚಿಟ್ಟಿದ್ದೀಯಾ ..?

ನಾನು ನಿನ್ನ ಹೃದಯದಲ್ಲಿ ಎಲ್ಲಿದ್ದೆನೆ  ? 

ನನ್ನನ್ನು ಕಂಡೆಯೇನೋ...?

ನನ್ನ ಹೃದಯ ಅಲ್ಲಿ ಸುಮ್ಮನಿತ್ತೇನೋ...!... "

ನಾನು ನರ್ಸ್ ಮುಖ ನೋಡಿದೆ...

ನರ್ಸ್ ...
ನನ್ನನ್ನು ಒಂಥರಾ ನೋಡುತ್ತ ಲ್ಯಾಬ್ ಒಳಗೆ ಹೋದಳು....



(ಇದು ಕಥೆ ....)