ಮತ್ತೊಮ್ಮೆ ನೋಡಿದೆ...
"ಹೌದು...
ಅದೇ ಹುಡುಗಿ... !!...
ನನ್ನ ಮೌನದಲ್ಲಿ ಮಾತನಾಡುವ ಹುಡುಗಿ...!.."
ಅನಿರೀಕ್ಷಿತವಾಗಿ ಎದೆಯ ಬಡಿತ ಜಾಸ್ತಿಯಾಗತೊಡಗಿತು...
ಪಕ್ಕದಲ್ಲಿ ಇದ್ದವ ಬಹುಷಃ ಗಂಡನಿರಬೇಕು...
ಅವಳ ಕೈಯನ್ನು ಹಿಡಿದುಕೊಂಡು ಮಗು ಬರುತ್ತಿತ್ತು....!
ನೇರವಾಗಿ ರಿಸೆಪ್ಷನ್ ಕಡೆಗೇ ಬರುತ್ತಿದ್ದರು...
ಕೆಲವು ಸಂದರ್ಭಗಳನ್ನು ..
ನಾವೇ ತಪ್ಪಿಸಿಕೊಳ್ಳುತ್ತೇವೆ..
ಅದಕ್ಕೆಲ್ಲ ಉತ್ತರ ಇರುವದಿಲ್ಲ..
ನಾನು ತರಾತುರಿಯಲ್ಲಿ ರಿಸೆಪ್ಷನಿಷ್ಟಿಗೆ ಹೇಳಿದೆ...
"ನೋಡಿ..
ಅಲ್ಲಿ ಬರುತ್ತಿರುವ ದಂಪತಿಗಳಿಗೆ ಒಳ್ಳೆಯ ರೂಮನ್ನು ಕೊಡಿ...
ಅವರು ನನಗೆ ಬೇಕಾದವರು...
ನಮ್ಮ ಹೊಟೆಲ್ಲಿನ ಸ್ಪೆಷಲ್ ರಿಯಾಯತಿಯನ್ನು ಕೊಡಿ..."
ನಾನು ಮರೆಯಾದೆ..
ನೀವೀಗ ಅಂದುಕೊಂಡಿದ್ದು ಸರಿಯಾಗಿದೆ...
"ನಾನು ಈ ಹೊಟೆಲ್ಲಿನ ಮಾಲಿಕ"..
ಈ ಹುಡುಗಿ ಯಾರು ಗೊತ್ತಾ?
ನಾನು ಕಾಲೇಜಿಗೆ ಹೋಗುವಾಗ ಪಕ್ಕದ ಮನೆಯಲ್ಲಿದ್ದವಳು...
ಮೊದಲ ಬಾರಿಗೆ ನೋಡಿದಾಗ ..
ಅವಳ ತುಂಬು ಕೆನ್ನೆಗಳ ಆರಾಧಕನಾಗಿ ಹೋದೆ... !
ಆ ಕೆನ್ನೆಯ ಉಬ್ಬುತಗ್ಗುಗಳು,...
ನುಣುಪು ಗಲ್ಲ... ! ವಾಹ್ ....
ಪ್ರೇಮ ಪತ್ರ ಅಲ್ಲೇ ..ಕೆನ್ನೆಯ ಮೇಲೆ ಬರೆಯಬಹುದು ನೋಡಿ....!
ನನ್ನನ್ನು ಹುಚ್ಚ ಅಂದು ಕೊಂಡು ಬಿಟ್ಟೀರಾ....!
ನಾನು ಸರಿಯಾಗಿಯೇ ಇದ್ದೆ...
ಆದರೆ.. ಈ ಪ್ರೀತಿ ಹುಚ್ಚು.... ಕಣ್ರೀ..!!
ಒಂದು ದಿನ ಹುಡುಗಿಗೆ ಧೈರ್ಯ ಮಾಡಿ ಹೇಳಿದೆ...
ಹುಡುಗಿ ಬಾಯಲ್ಲಿ "ಇಷ್ಟವಿಲ್ಲ" ಅಂದರೂ...
ಕಣ್ಣುಗಳು ಓಕೆ ಅಂದಿದ್ದವು...
ಕೊನೆಗೆ ಒಂದು ದಿನ ಒಪ್ಪಿದಳು ಅನ್ನಿ...!
ಈ ಬಯಕೆ..
ಆಸೆಗಳು ..
ಯಾಕೆ ಇಷ್ಟು ರಭಸವಾಗಿರುತ್ತವೆ ? ...
ಗೊತ್ತಿಲ್ಲ...
"ಹುಡುಗಿ...
ನನ್ನ ಕನಸಲ್ಲೆಲ್ಲ ನೀನೇ ಬರ್ತಿಯಾ....
ಒಮ್ಮೆ ತಬ್ಬಿಕೊಳ್ಳಬೇಕು ಅನ್ನಿಸುತ್ತಿದೆ...
ದಯವಿಟ್ಟು ಇಲ್ಲವೆನ್ನ ಬೇಡ ಕಣೆ..."
"ಸರಿ...
ಎಷ್ಟು ಹೊತ್ತು ...?"
"ಅಯ್ಯೋ..
ಹಾಗೆ ಇದ್ದುಬಿಡೋಣ ಅನ್ನಿಸುತ್ತದೆ...
ಊಟ
ತಿಂಡಿ...
ಈ ಪ್ರಪಂಚ ಏನೂ ಬೇಡ ಕಣೆ...
" ಮತ್ತೆ.... ! ...!!.."
ಅವಳ ಕಣ್ಣುಗಳಲ್ಲಿನ ಆಸೆ ಅರಳಿದಂತೆ ಅನ್ನಿಸಿತು...
ನನ್ನಲ್ಲಿನ
ತೀವೃತೆಗೆ ಅವಳು ಹೂಂ ಅಂದಂತಿತ್ತು...
" ಅಷ್ಟು ಹತ್ತಿರವಿದ್ದಾಗ ..
ನಿನ್ನ ಕೆನ್ನೆ ಸಿಕ್ಕರೆ ಸಾಕು..
ಮತ್ತೇನೂ ಬೇಕಿಲ್ಲ...
ಇಷ್ಟೇ ಕಣೆ...
ದಯವಿಟ್ಟು ಇಲ್ಲವೆನ್ನ ಬೇಡ..."
ಹುಡುಗಿ ಗಂಭೀರವಾದಳು...
"ಹುಡುಗಾ....
ಈಗ ನೀನು ಮಾತನಾಡುತ್ತಿಲ್ಲ...
ನಿನ್ನ ಬಣ್ಣದ ಹರೆಯ ಮಾತನಾಡುತ್ತಿದೆ...
ಕೆಲವು ಆಸೆಗಳನ್ನು ಬೇಕಾಬಿಟ್ಟಿ ಹರಿಯಬಿಡಬಾರದು...
ಅದಕ್ಕಾಗಿ ಕಾಯಬೇಕು...
ತಡೆಗೊಡೆ ನಾವೇ ಹಾಕಿಕೊಳ್ಳಬೇಕು...
ಅದಕ್ಕೆಲ್ಲ ಈಗ ಸಂದರ್ಭ ಅಲ್ಲ...
ಚೆನ್ನಾಗಿ ಓದೋಣ...
ನನ್ನನ್ನು ಮದುವೆಯಾಗು...
ಆಗ ನೀನು ಹೇಳಿದ ಹಾಗೆ ಎಲ್ಲವೂ..."
ಹುಡುಗಿ ಕಣ್ಣಿನಲ್ಲಿ ಪ್ರೀತಿಯಿತ್ತು...
ಆ ಪ್ರೀತಿಯಲ್ಲಿ ..
ನಮ್ಮಿಬ್ಬರ ಮಧ್ಯದ "ಬೇಲಿಯೂ" ಇತ್ತು..
ಬೆಟ್ಟದಷ್ಟು ಆಸೆ ಇದ್ದರೂ ಅದು ಹೇಗೆ ಸುಮ್ಮನಿರ್ತಾರಪ್ಪ...!
ಅವಳು ನನ್ನಾಸೆಗೆ ಬೇಡವೆಂದರೂ...
ನಮ್ಮಿಬ್ಬರ ಪ್ರೀತಿಗೆ...
ಪತ್ರಗಳಿಗೆ... ಮಾತುಕತೆ..
ಭೇಟಿಗೆ ಏನೂ ತೊಂದರೆ ಆಗಲಿಲ್ಲ...
ಆ ದೂರದಲ್ಲೂ ಹಿತವಿತ್ತು... ಆಕರ್ಷಣೆ ಇತ್ತು...
ಆಗ ..
ಅಂತಿಮ ವರ್ಷದ ಪರೀಕ್ಷೆ ಓದು ನಡೆಯುತ್ತಿತ್ತು...
ಒಂದು ದಿನ ಸಾಯಂಕಾಲ ಹುಡುಗಿ ಓಡೋಡಿ ಬಂದಳು..
ನನ್ನನ್ನು ಗಟ್ಟಿಯಾಗಿ...
ಬಲವಾಗಿ ತಬ್ಬಿಕೊಂಡಳು....!
ಅವಳ ತೀವ್ರತೆ ತುಂಬಾ ಖುಷಿಕೊಟ್ಟಿತು...
ನಾನು ಅವಳ ಸುತ್ತ ನನ್ನ ಕೈಗಳನ್ನು ಬಳಸುವವನಿದ್ದೆ...
"ಹುಡುಗಾ...
ನನ್ನಪ್ಪ ನನಗೆ ಗಂಡು ನೋಡಿದ್ದಾರೆ..
"ಈ ಪರೀಕ್ಷೆ ಓದು ಎಲ್ಲ ಸಾಕು ಮದುವೆಯಾಗು" ಅಂತಿದ್ದಾರೆ...
ನಾಳೆ ನಿಶ್ಚಿತಾರ್ಥವಂತೆ...
ನನಗೆ ಈ ಮದುವೆ ಬೇಡ..
ನಿನ್ನ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ...
ನನ್ನಪ್ಪ ನಮ್ಮ ಮದುವೆಗೆ ಖಂಡಿತ ಒಪ್ಪಿಗೆ ಕೊಡುವದಿಲ್ಲ...
ಎಲ್ಲಾದರೂ ಓಡಿ ಹೋಗೋಣ...
ನಮ್ಮದೇ ಸಂಸಾರ ಕಟ್ಟೋಣ..."
ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ...
ಅಷ್ಟರಲ್ಲಿ ನನ್ನಪ್ಪ ನನ್ನ ರೂಮಿಗೆ ಬಂದ...
ಹುಡುಗಿ ತನ್ನ ಅಪ್ಪುಗೆ ಸಡಿಲಿಸಿದಳು...
ಅವನಿಗೆ ವಿಷಯ ಗೊತ್ತಾಯಿತು..
ನನ್ನಪ್ಪ ಬಹಳ ಸಮಧಾನಿ...
"ಈ ಪ್ರೀತಿ..
ಪ್ರೇಮ .... ಹೃದಯ..
ಏನೇ ಅಂದರೂ..
ಬದುಕಲಿಕ್ಕೆ ಎರಡು ಹೊತ್ತು ಊಟ ಬೇಕು...
ಧರಿಸಲಿಕ್ಕೆ ಬಟ್ಟೆ ಬೇಕು...
ಸಿನೇಮಾ... ಹೊಟೆಲ್ಲು ..
ಕಾರು..
ದೊಡ್ಡ ಅಪಾರ್ಟಮೆಂಟು ಅಗತ್ಯವಾಗಿ ಬೇಕು..
ಈಗ..
ಈ ಪ್ರೀತಿ..
ಪ್ರೇಮಬದುಕು ತುಂಬಾ ದುಬಾರಿಯಾಗಿಬಿಟ್ಟಿದೆ ..
ಕೋಟಿಗಟ್ಟಲೆ ಹಣ ಬೇಕು...
ನಿಮ್ಮ ಅರ್ಧ ಓದು ಅದನ್ನೆಲ್ಲ ಪೂರ್ತಿಗೊಳಿಸಲಾರದು...
ನಾನು ಶ್ರೀಮಂತನಲ್ಲ...
ನಿಮ್ಮಿಬ್ಬರ ಬದುಕನ್ನು ನೀವೇ ನೋಡಿಕೊಳ್ಳಬೇಕು...
ಜೊತೆಗೆ ನಮ್ಮ "ಮುಪ್ಪನ್ನೂ " ನೋಡಿಕೊಳ್ಳಬೇಕು...
ಓಡಿ ಹೋಗಿ ..
ಬದುಕು ಕಂಡುಕೊಳ್ಳುವದು ಮೂರ್ಖತನ....
ಈಗ ನಿಮ್ಮ ಮದುವೆಗೆ ನನ್ನ ಒಪ್ಪಿಗೆ ಖಂಡಿತ ಇಲ್ಲ...."
ಅಪ್ಪ ಅಷ್ಟು ಹೇಳಿ ಹೊರಟು ಹೋದ...
ಏನು ಮಾಡಲಿ...?
ಆ ಚಂದದ ಹುಡುಗಿಯ ಕೆನ್ನೆಯಲ್ಲಿ ಕಣ್ಣೀರಿತ್ತು...
ಕಣ್ಣುಗಳಲ್ಲಿ ದೈನ್ಯತೆ ಇತ್ತು...
ನನಗಾಗಿ ಎಲ್ಲವನ್ನೂ ಬಿಟ್ಟು ಬರುವ ಪ್ರೀತಿಯಿತ್ತು....
ಎದುರಿಗೆ ..
ಬದುಕಿನ ಸವಾಲುಗಳ ಪ್ರಶ್ನೆ ಇರುವಾಗ ..
ಹುಡುಗಿ...
ಆಕರ್ಷಣೆಗಳು ಕಡಿಮೆಯಾಗುತ್ತವಾ?
ನಾನು ಭವಿಷ್ಯಕ್ಕೆ ಹೆದರಿದೆನಾ ?
ನನ್ನ ಅಸಹಾಯಕ ನಿರುತ್ತರ...
ಅಸಹನೀಯ ಕ್ಷಣಗಳು...
ಇಷ್ಟೆಲ್ಲ ಆರಾಧಿಸಿದ ನನ್ನ ಪ್ರೇಮ ಸುಳ್ಳಾ?
ಈ ಪ್ರೀತಿಗಾಗಿ ಏನನ್ನೂ ಮಾಡಲಾರದೆ ಹೋದೆ...
ಹುಡುಗಿ ನನ್ನ ರೂಮಿನಿಂದ ಅತ್ತೂ.. ಅತ್ತೂ ಹೋದಳು..
ಹೋಗುವಾಗ ..
ಅವಳ ದೈನ್ಯ ಕಣ್ಣಿನ ನೋಟ ನನ್ನೋಳಗೆ ಬಿಟ್ಟು ಹೋದಳು..
ನಾನು ಈಗ ಶ್ರೀಮಂತನಾದರೂ..
ಕೈಗೆ ಸಿಗದ ಅವಳ ಪ್ರೀತಿಗಾಗಿ ಇನ್ನೂ ಮನಸ್ಸು ಕಾತರಿಸುತ್ತಿತ್ತು...
ಅವಳು ಬೇಕು ಎನ್ನುವ ತೀವೃತೆ ಇನ್ನೂ ಜಾಸ್ತಿಯಾಗಿತ್ತು....
ಈಗ ...
ಅನಿರೀಕ್ಷಿತವಾಗಿ ಮತ್ತೆ ನನ್ನೆದುರಿಗೆ ಬಂದಿದ್ದಾಳೆ...
ನನ್ನ ಸಹಾಯಕರಿಗೆ ಹೇಳಿ ಅವರಿಗೆ ಸ್ಪೆಷಲ್ ಊಟ ಕಳುಹಿಸಿದೆ...
"ನಮ್ಮ ಹೊಟೆಲ್ಲಿನ ಇಂದಿನ ಅದೃಷ್ಟದ ಅತಿಥಿಗಳು ನೀವು" ಅಂತ
ನಮ್ಮ ಪ್ರೀತಿಯವರು ....
ಪ್ರೀತಿಯಿಂದ ಊಟ ಮಾಡಿದರೆ ಎಷ್ಟು ಖುಷಿ ಅಲ್ವಾ ..?
ಈ ಹುಡುಗಿಯನ್ನು ಭೇಟಿ ಆಗಬೇಕಲ್ಲಾ?
ಹೇಗೆ...?
ಗಂಡ ಇರಬಾರದು....
ಮಗು... ?
ಮಗು ಓಕೆ.. ಅದು ಪುಟ್ಟ ಮಗು...
ಈ ಹುಡುಗಿಯೊಡನೆ ಮಾತನಾಡಬೇಕು..
"ಅವಳಿಗಾಗಿ ಇಷ್ಟು ವರ್ಷ ಹಂಬಲಿಸಿ..
ಹಂಬಲಿಸಿ ..
ಇನ್ನೂ ಮದುವೆಯಾಗದೆ ಉಳಿದ ನನ್ನ ಕಥೆಯನ್ನು ಹೇಳಬೇಕು....
ಅವಳ ಕ್ಷಮೆ ಕೇಳಬೇಕು...."
ಎಷ್ಟೆಲ್ಲ ಚಂದದ ಹುಡುಗಿಯರು ನನ್ನ ಪ್ರೀತಿ ಹಂಬಲಿಸಿ ಬಂದಿದ್ದರೂ..
ಇವಳ "ದೈನ್ಯ ಕಣ್ಣಿನ ನೋಟ..
ಅಪರಾಧಿ ಮನೋಭಾವನೆ" ನನ್ನನ್ನು ಸದಾ ಇರಿಯುತ್ತಿತ್ತು...
ನಾನು ಅವಳ ಪ್ರೀತಿಗೆ ಮೋಸ ಮಾಡಬಾರದಿತ್ತು....
"ಸಮಯ" ಅನ್ನೋದು ಇದೆಯಲ್ಲ...
ಎಲ್ಲ ಪ್ರಶ್ನೆಗಳಿಗೆ...ಉತ್ತರ ಕೊಡುತ್ತದೆ..
ನಾನು ಅವರ ಚಲನವಲನ ಗಮನಿಸುತ್ತಿದ್ದೆ..
ಈ ದಿನ ಬೆಳಿಗ್ಗೆ ...
ಅವಳ ಗಂಡ ಹೊಟೆಲ್ಲಿನಿಂದ ಆಚೆಗೆ ಹೋದ...
ಸಾಯಂಕಾಲದವರೆಗೆ ಬಾಡಿಗೆ ಕಾರು ಬೇಕು ಅಂತ ಹೇಳಿದ್ದ...!
ನನ್ನ ಅದೃಷ್ಟಕ್ಕೆ ಮನಸಾರೆ ವಂದಿಸಿದೆ...
ಅವರಿದ್ದ ರೂಮಿನ ಕರೆಗಂಟೆ ಒತ್ತಿದೆ...
ಎದೆಯಲ್ಲಿ ಏನೋ ನಡುಕ.... !
ಆಕೆ ಬಂದು ಬಾಗಿಲನ್ನು ತೆಗೆದಳು...
ಅಶ್ಚರ್ಯವಾಗಿದ್ದರೂ ...
ತೋರ್ಪಡಿಸದ ಮುಖಭಾವ ನನ್ನನ್ನು ಸ್ವಾಗತಿಸಿತು...
ಒಳಗೆ ಬಾ ಅನ್ನಲಿಲ್ಲ...
ನಾನು ಅವಳನ್ನು ಹಿಂಬಾಲಿಸಿದೆ...
ಆ ಮೌನದಲ್ಲಿ ..
ನನ್ನೆದೆಯ ಢವ ಢವದ ಶಬ್ಧ ಜಾಸ್ತಿಯಾಗತೊಡಗಿತು...
ನನ್ನೊಳಗಿನ ತೀವ್ರತೆಗೆ ನನಗೆ ನಾಚಿಕೆ ಆಯಿತು...
"ಪುಟ್ಟಿ ಸ್ನಾನಕ್ಕೆ ಹೋಗಿದ್ದಾಳೆ... ಏನು ವಿಷಯ...?"
ಅವಳ ಕಣ್ಣುಗಳನ್ನು ನೋಡಿದೆ..
ನಿರ್ವಿಕಾರ ಭಾವನೆ ಬಲವಂತವಾಗಿ ಮಾಡಿಕೊಂಡಂತಿತ್ತು ...
"ಹುಡುಗಿ...
ನಾನು ಈ ಹೊಟೆಲ್ ಮಾಲಿಕ ಈಗ....
ನನ್ನ ಬಳಿ ಸಾಕಷ್ಟು ಹಣವಿದೆ...."
ಅದಕ್ಕೇನು ? ..
ಎನ್ನುವಂತಿತ್ತು ಅವಳ ಕಣ್ಣು..........
" ಅಂದು..
ನಿನ್ನ ಪ್ರೀತಿಯನ್ನು ನಿರಾಕರಿಸಿದ್ದು ನನ್ನ ಬದುಕಿನ ಬಲು ದೊಡ್ಡ ತಪ್ಪು...
ಅಪರಾಧಿ ಮನೋಭಾವನೆಯಿಂದ ...
ದಿನಾಲೂ..
ಪ್ರತಿಕ್ಷಣ ಹಿಂಸೆಯಿಂದ ಸಾಯುತ್ತಿರುವೆ..."
ಹುಡುಗಿಯ ಕಣ್ಣು ನೋಡಿದೆ...
ಅಲ್ಲಿ ಪ್ರೀತಿ ಹುಡುಕುವ ಆಸೆ ಆಯ್ತು...
ಅವಳ ಭಾವರಹಿತ ನೋಟ ನೋಡಲಾರದೆ ತಲೆ ತಗ್ಗಿಸಿದೆ....
"ಹುಡುಗಿ...
ನಮ್ಮ ಪ್ರೀತಿಗೆ ಒಂದು ಅವಕಾಶ ಕೊಡೋಣ...
ನಿನ್ನನ್ನು ಈಗಲೂ ಸ್ವೀಕರಿಸುತ್ತೇನೆ...
ನಿನ್ನ ಮಗುವನ್ನೂ ಸಹ ಪ್ರೀತಿಸುತ್ತೇನೆ..
ನೀನಿಲ್ಲದ ಬದುಕು ನನ್ನಿಂದ ಆಗದು...
ದಯವಿಟ್ಟು... ದಯವಿಟ್ಟು.. ಬಾ...
ಈಗ ನನ್ನ ಬಣ್ಣದ ಹರೆಯ ಮಾತಾಡುತ್ತಿಲ್ಲ...
ಹಣಗಳಿಸುತ್ತಿರುವ .....
ಪ್ರಬುದ್ಧತೆಯಿಂದ ಮಾತನಾಡುತ್ತಿರುವೆ...
ನಿನ್ನನ್ನು ಹೂವಿನಂತೆ ನೋಡಿಕೊಳ್ಳಬಲ್ಲೆ....
ಪ್ರೀತಿಯ ಜೊತೆಗೆ ..
ಕಾರು..
ಬಂಗ್ಲೆ... ಹಣ ಸೌಕರ್ಯದ ಸುಖ ಕೊಡಬಲ್ಲೆ..."
ನಾನು ತಲೆ ತಗ್ಗಿಸಿಯೇ ಇದ್ದೆ...
ಹುಡುಗಿಯ ಗಡಸು ಧ್ವನಿ ನನ್ನನ್ನು ಎಚ್ಚರಿಸಿತು..
"ಏಳು...
ಗೆಟ್ ಔಟ್... !!
ಮೊದಲು ಇಲ್ಲಿಂದ ಹೊರಡು...
ರೂಮಿನ ಬಾಗಿಲು ತೆರೆದಿದೆ...."
ನಾನು ಅವಕ್ಕಾದೆ....
"ನನ್ನ ಗಂಡನ ಪ್ರೀತಿಗೆ ಮೋಸದ ಕಲ್ಪನೆಯನ್ನೂ ಮಾಡಲಾರೆ...
ನೀನು ನನ್ನ ನೆನಪು ಅಷ್ಟೆ..
ನನ್ನ ಇಂದಿನ ಬದುಕು ನನ್ನ ಗಂಡ...
ನಮ್ಮಿಬ್ಬರ ಪ್ರೀತಿಯ ವಿಷಯ ಗೊತ್ತಿದ್ದರೂ..
ಒಂದು ದಿನವೂ ..
ಹಂಗಿಸಿ..
ಅಣಕಿಸದ ದೊಡ್ಡ ಮನುಷ್ಯ ಆತ..
ಅವನ ಪ್ರೀತಿ ಬಲು ದೊಡ್ಡದು...
ಇಷ್ಟು ಮಾತನಾಡುವ ಅಗತ್ಯ ನನಗಿಲ್ಲ...
ಮತ್ತೆ ಎಲ್ಲಿಯೂ ನಿನ್ನ ಹ್ಯಾಪು ಮೋರೆಯನ್ನು ನನ್ನ ಕಣ್ಣಿಗೆ ಕಾಣಿಸಬೇಡ... ಹೊರಡು...
ಗೆಟ್ ಔಟ್.. !!..."
ಬಹಳ ತೀಕ್ಷ್ಣವಾಗಿತ್ತು ಧ್ವನಿ...
ಅತ್ಯಂತ ಅಪಮಾನಕರ ಕ್ಷಣಗಳು........ !
ನಾನು ಅಲ್ಲಿಂದ ಹೊರಟೆ..
ಮಗು ಸ್ನಾನದ ರೂಮಿಂದ ಹೊರಗೆ ಬಂತು...
"ಇವರು ಯಾರಮ್ಮಾ?"
"ಗೊತ್ತಿಲ್ಲ...
ಅವರಿಗೆ ಬೇರೆ ಕಡೆ ಹೋಗಬೇಕಿತ್ತಮ್ಮ..
ವಿಳಾಸ ತಪ್ಪಿ ಬಂದಿದ್ದಾರೆ..."
"ಅವರ ಬಳಿ ಅಡ್ರೆಸ್ ಇಲ್ಲವಾ?"
"ಅವರ ಬಳಿ ...
ಬಹುಷಃ ಹಳೆ ವಿಳಾಸವಿದ್ದಿರಬಹುದು...
ವಿಳಾಸಗಳು ಬದಲಾಗುತ್ತ ಇರುತ್ತಮ್ಮಾ...
ವಿಳಾಸ..
ಸರಿ ಇದ್ದರೂ ...
ಸಮಯದಲ್ಲಿ ವ್ಯಕ್ತಿಗಳು ಬದಲಾಗುತ್ತಾರಮ್ಮ...
ಕೆಲವೊಮ್ಮೆ ..
ವಿಳಾಸ... ವ್ಯಕ್ತಿಗಳು ಎರಡೂ ಬದಲಾಗಿಬಿಡುತ್ತದಮ್ಮಾ..."..
ನಾನು ಹಿಂತಿರುಗಿ ನೋಡಲಿಲ್ಲ....
(ಚಂದದ ಪ್ರತಿಕ್ರಿಯೆಗಳಿವೆ .... ದಯವಿಟ್ಟು ಓದಿ....)
38 comments:
ವಾಹ್ ....
ಸೂಪರ್ ಅಣ್ಣಯ್ಯ... ನಮಗೆ ಬಂದಿರುವ ವಿಳಾಸ ಭದ್ರಪಡಿಸಿಕೊಳ್ಳಬೇಕಷ್ಟೇ.. ಇಲ್ಲವಾದರೆ ವಿಳಾಸ ಬದಲಾಗುತ್ತದೆ. ಒಳ್ಳೆಯ ಕಥೆ
ಚ೦ದ ಕಲ್ಪನೆ..
ವಾಸ್ತವ,,????
ಸು೦ದರ ಕಥೆ..
ಪ್ರೀತಿಯ ದಿಗ್ವಾಸು...
ಮೊದಲಬಾರಿಗೆ ಮೊದಲ ಪ್ರತಿಕ್ರಿಯೆ !!
ಥ್ಯಾಂಕ್ಯೂ....
ಯಾವುದೇ ಸಂಬಂಧದಲ್ಲಿ..
ಎರಡೂ ಕಡೆಯಿಂದ ಒಂದೇ ರೀತಿಯ "ಸಂವೇದನೆ..." ಇದ್ದಲ್ಲಿ ಮಾತ್ರ..
ಆ ಬಾಂಧವ್ಯ ಮುಂದುವರೆಯುತ್ತದೆ....
ಇಲ್ಲಿ ಮೊದಲು ಹುಡುಗನಿಗೆ ಬಹಳ ಆಸೆಯಿತ್ತು...
ಕೊನೆಗೆ ಹುಡುಗಿಗೆ ಅನಿವಾರ್ಯವಾದ ಆಸೆ ಆಯ್ತು....
ಕೊನೆಯಲ್ಲಿ ಬದಲಾದ ಸಮಯದಲ್ಲಿ ಹುಡುಗನಿಗೆ ಮತ್ತೆ ಆಸೆ ಆಯ್ತು...
ಎರಡೂ ಕಡೆಯಿಂದ ತೀವ್ರತೆ ಇದ್ದಲ್ಲಿ ಮಾತ್ರ ಸಂಬಂಧವಾಗಬಲ್ಲದು...
ಬಾಂಧವ್ಯವಾಗಬಲ್ಲದು...
ಇಲ್ಲವಾದಲ್ಲಿ ಬರಿ ನೆನಪುಗಳು...
ಪ್ರತಿಕ್ರಿಯೆಗೆ ಧನ್ಯವಾದಗಳು...
ಯಾಕೋ...ಎಲ್ಲವನ್ನೂ ಚನ್ನಾಗಿ ಪರಿಶೀಲಿಸಿ ಹೆಜ್ಜೆ ಇಡುತ್ತಿದ್ದ ನಿನ್ನ ನಾಯಕ ಸ್ವಲ್ಪ ಆತುರ ಪಟ್ತ ಅನಿಸುತ್ತೆ, ಹಹಹ ಅವನ ಮೇಲೆ ನನಗೆ ಕನಿಕರ ಮತ್ತು ಅವಳ ಮೇಲೆ ಇದ್ದ ಗೌರವ ಭಾವ ಅವಳ ಗದರುವಿಕೆಯಿಂದ ಹೊರಟು ಹೋಯಿತು... ಕಾರಣ ... ??? ಆಕೆಗೆ ಇದ್ದದ್ದು (ಆಗ) ಪ್ರೇಮವಲ್ಲ ಎನಿಸಿ ಏಕೆಂದರೆ ಪ್ರೇಮವಾದರೆ ಅದು ಮದುವೆಯಲ್ಲೇ ಕೊನೆಯಾಗಬೇಕೆಂದೇನೂ ಇಲ್ಲ... ಅದನ್ನೇ ನಯವಾಗಿ ತಿಳಿಸಿ ಹೇಳಬಹುದಿತ್ತು.. ಅದರಲ್ಲೂ ನಾಯಕ ತನ್ನ ಇಂಗಿತ ಮಾತ್ರ ತಿಳಿಸಿದ್ದ..ಅದು ಅವನ ಅನಿಸಿಕೆ... ಬಲವಂತ ಮಾಡಲಿಲ್ಲ...
ಆದರೆ ಪ್ರಕಾಶ ನೀನು ಗೆದ್ದೆ...ನಿರೂಪಣೆಯಲ್ಲಿ ವಿವಿಧತೆ ತಂದು...
ನಿರೂಪಣೆ ಹಿಡಿಸಿತು..ಕಥಾವಸ್ತು ಸ್ವಲ್ಪ ಹಳೆಯದೆ, ಇನ್ನು ಇದು ಸರಿ ಇದು ತಪ್ಪು
ಅನ್ನೋದು ದಿನದಿನವೂ ಬದಲಾಗುತ್ತಿವೆ ಈಗೀಗ ಯಾವುದೇ ನಿಲುವಿಗೆ ಅಂಟಿಕೊಳ್ಳುವುದು ತ್ರಾಸೇ
ನಿಮ್ಮ ನಾಯಕ ತಪ್ಪು ಹೆಜ್ಜೆ ಇಟ್ಟ್ ಅಂತ ಕೆಲವರು ಹೇಳಬಹುದು..ಅಥವಾ ನನ್ನಂಥವರ ಅಭಿಪ್ರಾಯಪ್ರಕಾರ
ಒಂದು ಚಾನ್ಸ್ ತಗೊಂಡ್ರೆ ತಪ್ಪೇನು ಅನೋ ನಿಲುವು ಇರಬಹುದು..
ಇನ್ನೊಂದು ಮಾತು ನನ್ನ ಬ್ಲಾಗಿಗೂ ಬರ್ರಿ...
ಮನಸು....
ನಿಜ...
ನಮ್ಮಗೆ ಸಿಕ್ಕಿರುವ ವಿಳಾಸವನ್ನು ಯಾವಾಗಲೂ ಭದ್ರವಾಗಿ ಇಟ್ಟುಕೊಳ್ಳಬೇಕು...
ಬದಲಾಗುವ ಸಮಯದಲ್ಲಿ
ವಿಳಾಸಗಳೂ...
ವ್ಯಕ್ತಿಗಳೂ ಬದಲಾಗಿ ...
ತಪ್ಪು ವಿಳಾಸಕ್ಕೆ ಹೋಗುವ ಸಾಧ್ಯತೆಗಳೇ ಜಾಸ್ತಿ...
ಬದಲಾಗುವದು ತೀರಾ ಸಹಜ ಅಲ್ಲವಾ?
ಆದರೂ ನಾವ್ಯಾಕೆ "ಬದಲಾಗಿ ಹೋಯ್ತು" ಅಂತ ಪರಿತಪಿಸುತ್ತೇವೆ...
ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು....
ಚಿಕ್ಕಿಚಿತ್ತಾರ...
ಇದು ನೂರಕ್ಕೆ ನೂರು ಕಲ್ಪನೆ...
ಈ ಕಥೆಯ ಕೊನೆಯನ್ನು ಬೇರೆ ಥರಹ ಮಾಡಿದ್ದೆ...
ಮಗು ತಾಯಿಗೆ "ಇವರ್ಯಾರು..?" ಅಂತ ಕೇಳಿದಾಗ...
ಅಮ್ಮ...
"ಅವರು "ಮಾಮ"... !" ಅಂತ ಉತ್ತರ ಕೊಡುತ್ತಾಳೆ...
"ಈ ಮಾಮನನ್ನು ನಾನು ನೋಡಲಿಲ್ಲವಲ್ಲ.." ಅಂದಾಗ...
"ಇವರು ಹೊಸ ಮಾಮ" ಅನ್ನುತ್ತಾಳೆ...
ಹೀಗೆ ಕಥೆ ಕೊನೆಯಿತ್ತು...
ಆದರೆ ಮನೆಯಲ್ಲಿ "ಯಜಮಾನರು" ಇದನ್ನು ಒಪ್ಪಲಿಲ್ಲ...
ಅವರು ಸೂಚಿಸಿದ ಕೊನೆ ಇದು...
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....
ಆಜಾದೂ...
ನಿನ್ನ ಅನಿಸಿಕೆ ಸರಿ...
ಹೆಚ್ಚಾಗಿ ಹೆಣ್ಣುಮಕ್ಕಳು ಯಾವುದೇ ಸಂಬಂಧಕ್ಕೆ ಒಂದು ಚೌಕಟ್ತು ಹಾಕಿ..
ಅದರೊಳಗೆ ಇರಲು ಬಯಸುತ್ತಾರೆ..
ಭದ್ರತೆಯ ಬಾಂಧವ್ಯವನ್ನು ಇಷ್ಟಪಡುತ್ತಾರೆ...
ಮೊದಲು ಹುಡುಗ ಆಸೆ ವ್ಯಕ್ತ ಪಡಿಸಿದಾಗಲೂ ಸಹಜ ಹೆಣ್ಣಿನಂತೆ ಅವನನ್ನು ತಡೆದಳು..
ಅವಳಪ್ಪ ಮದುವೆ ಮಾಡ್ತಿನಿ ಅಂದಾಗಲೂ ಇಷ್ಟವಿದ್ದವನ ಬಳಿ ಬಂದು "ಓಡಿ ಹೋಗೋಣ " ಎಂದು ಒತ್ತಾಯ ಮಾಡಿದಳು..
ಹಾಗಾಗಲಿಲ್ಲ...
ಕೊನೆಗೆ ಅಪ್ಪ ತೋರಿಸಿದ ಹುಡುಗನ ಜೊತೆ ಫೋಟೊ ತೆಗೆಸಿಕೊಂಡು ಅದಕ್ಕೊಂದು ಫ್ರೇಮು ಹಾಕಿ ಕೊಂಡಳು..
ಇಲ್ಲಿ ವಿಳಾಸ ಕಳೆದು ಕೊಂಡವ ಹುಡುಗ....
ಚಂದದ ಪ್ರತಿಕ್ರಿಯೆಗೆ ..
ಪ್ರೋತ್ಸಾಹಕ್ಕೆ ಧನ್ಯವಾದಗಳು...
Good narration!
ಪ್ರೀತಿಯ ಉಮೇಶ ದೇಸಾಯಿಯವರೆ...
ದೌರ್ಬಲ್ಯಗಳು...
ವೀಕ್ನೆಸ್ಸುಗಳು ಪ್ರತಿಯೊಂದು ಪಾತ್ರದಲ್ಲಿರುತ್ತವೆ..
ಕಥೆಗಳಲ್ಲಿಯೂ ಅದು ಹೊರತಾಗಿಲ್ಲ..
ನಾಯಕ ಸಹಜವಾಗಿ ನಡೆದುಕೊಂಡಿದ್ದಾನೆ ಅಂತ ನನಗನ್ನಿಸುತ್ತದೆ..
ಅವನು ಅವಳನ್ನು ಕೊನೆಯಬಾರಿ ಭೇಟಿಯಾದಾಗ
ಅವಳ ದೈನ್ಯ ನೋಟ ..
ಇವನ ಅಸಹಾಯಕತೆಯ ಪರಮಾವಧಿ
ಮಾತ್ರ ಮನದಲ್ಲಿ ಉಳಿದುಬಿಟ್ಟಿತ್ತು..
ಅಪರಾಧಿ ಮನೋಭಾವನೆ ಕಾಡುತ್ತಿತ್ತು..
ವರ್ಷ ಕಳೆದರೂ ಅದನ್ನು ಹಾಗೆ ಉಳಿಸಿಕೊಂಡು ಬಂದಿದ್ದ..
ಮತ್ತೊಮ್ಮೆ ತನ್ನಿಂದಾದ ತಪ್ಪನ್ನು ಸರಿಪಡಿಸಿಕೊಳ್ಳೋಣ ಎನ್ನುವ ಹಂಬಲ ಅವನಿಗಿತ್ತು..
ಇದು ಸರಿನಾ? ತಪ್ಪಾ? ಇದು ಬೇರೆ ಪ್ರಶ್ನೆ..
ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು..
ಕೆಲಸದ ಒತ್ತಡದ ಮಧ್ಯೆ ಬ್ಲಾಗಿಗೆ ಬರಲಾಗಲಿಲ್ಲ..
ಬೇಸರ ಬೇಡ.. ಬರುವೆ...
ಪ್ರಕಾಶಣ್ಣ,
"ವಿಳಾಸ..
ಸರಿ ಇದ್ದರೂ ...
ಸಮಯದಲ್ಲಿ ವ್ಯಕ್ತಿಗಳು ಬದಲಾಗುತ್ತಾರಮ್ಮ..."
ಈ ಸಾಲಿನಲ್ಲೇ ಕಥೆಯ ಅರ್ಥ ಅಡಗಿದೆ ಅನ್ಸ್ತು...
ಆ ಹುಡುಗನ ಅಪ್ಪನ ಪಾತ್ರ ಯಾಕೋ ಇಷ್ಟವಾಯ್ತು...ಇಲ್ಲಿಯ ತನಕ ಈ ತರಹದ ಕಥೆಗಳಲ್ಲಿ ಜಾತಿಯೋ,ಆಸ್ತಿಯೋ ಅಥವಾ ಪ್ರತಿಷ್ಠೆಯೋ ಮದುವೆ ನಿಲ್ಲಲು ಕಾರಣವಾಗುತ್ತಿದ್ದುದನ್ನು ಓದುತ್ತಿದ್ದ್ದೆ..ಇಲ್ಲಿ ಅದಕ್ಕೊಂದು ಹೊಸತರಹದ ಕಾರಣ ನೀಡಿದ್ದೀರಿ ಅದು ಇಷ್ಟವಾಯ್ತು,ತಾರ್ಕಿಕವಾದದ್ದು ಕೂಡ ಎಂದೆನಿಸಿತು(ಈ ಶಬ್ದದ ಬಳಕೆ ನನ್ನ ವಯಸ್ಸಿಗೆ ತೀರಾ ದೊಡ್ಡದಾಯಿತೇನೋ! ,ಇರಲಿ )...
ಉಳಿದಂತೆ ,ಎಂದಿನಂತೆ ನೀವು ನಾಯಕ,ನಾಯಕಿರೆಗೆಲ್ಲಾ ಹೆಸರು ಹುಡುಕುವುದಕ್ಕೆ ಹೋಗಿಲ್ಲ.."ನಾನು","ಅವಳು" ಇಷ್ಟರಲ್ಲೇ ಮುಗಿಸಿಬಿಡ್ತೀರಿ....("ಹೆಸರಲ್ಲೇನಿದೆ ಬಿಡ್ರಿ?" ಅಂತೀರಾ ಹಾ ಹಾ)..ಚೆನಾಗಿತ್ತು...ಕಣ್ಣನ್ನು ಕಟ್ಟಿ ಹಾಕಿ ಓದಿಸಿಕೊಂಡು ಹೋಯ್ತು...
ಬರಿತಾ ಇರಿ,ಓದ್ತಾ ಇರ್ತೀವಿ...
ನಮಸ್ತೆ...
ಕೆಲವೊಮ್ಮೆ ಬದುಕಿನಲ್ಲಿ ಎಲ್ಲವೂ ಸರಿ ಇದೆ ಎನಿಸಿದರೂ ಪರಿಸ್ಥಿತಿ , ಅಸಹಾಯಕತೆಗಳೊಂದಿಗೆ ನಿರಂತರ ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಬದುಕಬೇಕಾಗಿರುತ್ತದೆ. ಆಕೆಯನ್ನು ಆಗ ತಿರಸ್ಕರಿಸಿದ್ದು ಹುಡುಗನ ಅಸಹಾಯಕಥೆಯಾದರೆ, ಈಗಿನ ಹುಡುಗಿಯ ನಿರ್ಧಾರ ಆಕೆಯ ಪರಿಸ್ಥಿತಿ.
ಎಲ್ಲೋ ಒಂದು ಕಡೆ ಪಡೆಯಲಾರದ ಪ್ರೀತಿಯ ಬಗೆಗಿನ ನೋವು, ಅಪರಾಧಿ ಮನೋಭಾವ ಎಲ್ಲವನ್ನೂ ಕಳೆದುಕೊಳ್ಳಬೇಕೆಂಬ ಹುಡುಗನ ಹಂಬಲ, ತನ್ನೆಲ್ಲ ನೋವನ್ನು ಮರೆಸಿದ ಒಳ್ಳೆಯ ಪತಿ, ಆತ ಕೊಟ್ಟ ಚಂದದ ಬದುಕನ್ನು ಬಿಟ್ಟು ಬರಲಾರೆ ಎಂಬ ಹುಡುಗಿಯ ನಿರ್ಧಾರ ಎರಡೂ ಇಷ್ಟವಾಗುತ್ತವೆ.
ಬದುಕು ಎಲ್ಲವನ್ನೂ ಬದಲಾಯಿಸುತ್ತದೆ
ವ್ಯಕ್ತಿಗಳನ್ನು..
ವಿಳಾಸಗಳನ್ನು...
Hmmm... good one... nayaki ishtavadalu....
ಯಾಕೋ ಹಳೆಯ ವಿಳಾಸಗಳೆಲ್ಲ ಒಮ್ಮೆಲೆ ನೆನಪಾದವು.
ಚಾಮರಾಜಪೇಟೆಯಿಂದ, ಮದರಾಸಿನವರೆಗೂ ಚಹರೆಗಳು ಬಂದು ಹೋದವು.
ನನ್ನ ಲಕೋಟೆಯ ಮೇಲೆ ಬರೆದಿಟ್ಟವರ ಹಳೇ ವಿಳಾಸಗಳೆಲ್ಲ, ಈಗ ಬದಲಾಗಿ ಹೋಗಿದ್ದರೂ, ಹೊಸ ವಿಳಾಸಕ್ಕೆ ತಪಿಸುವ ನನ್ನ ಒಳ ಮನ ಮಾತಾಡಿತು.
ಸುಮ್ಮನೆ ಅಳಿಸುವ ಇರಾದೆ ಇದ್ದರೆ ಹೇಳೀಪ್ಪಾ!!!
"ಅಗ್ರಹಾರದ ಇರುಕು ವಠಾರದ
ಮೂರನೇ ಬಾಲ್ಕಾನಿಯಲು,
ಮದರಾಸಿನ ಧಗೆ ಬಿಸಿಲಲ
ಆ ಕ್ರೆಸೆಂಟ್ ಪಾರ್ಕಿನ ಗುಲ್ಮೊಹರದಡಿಯ
ಕಲ್ಲು ಬೇಂಚಿನ ಮೇಲೂ,
ಈಗ ನಿನ್ನ ಸುಳಿವಿಲ್ಲ...
ವಿಳಾಸ ಬದಲಾಗಿದೆಯಾ ಗೆಳತಿ?"
ಒಳ್ಳೆ ಕಥೆ....ಸೂಪರ್
ಕಥಾ ವಸ್ತು .. ಈಗಾಗಲೇ ಬಹಳಷ್ಟು ಸಲ ನಿನ್ನದೇ ಬರಹಗಳಲ್ಲಿ ಬಂದು ಹೋಗಿದೆ . ಆದರೆ , ಪ್ರತಿಸಲವೂ ಅದನ್ನು ಹೊಸ ಚೌಕಟ್ಟಿನಲ್ಲಿ ಹಾಕಿ ಚಂದಗೊಳಿಸುವ ಪರಿ ಇಷ್ಟವಾಗುತ್ತದೆ !
ಮತ್ತೊಮ್ಮೆ .. ನಿನ್ನ ಬರಹದ ಮೋಡಿಗೆ ತಲೆಬಾಗುತ್ತೇನೆ ಪ್ರಕಾಶಣ್ಣ !
ಈಗ ನೀನು ಮಾತನಾಡುತ್ತಿಲ್ಲ...ನಿನ್ನ ಬಣ್ಣದ ಹರೆಯ ಮಾತನಾಡುತ್ತಿದೆ...
ಜೊತೆಗೆ ನಮ್ಮ "ಮುಪ್ಪನ್ನೂ " ನೋಡಿಕೊಳ್ಳಬೇಕು...
"ಗೊತ್ತಿಲ್ಲ...ಅವರಿಗೆ ಬೇರೆ ಕಡೆ ಹೋಗಬೇಕಿತ್ತಮ್ಮ..ವಿಳಾಸ ತಪ್ಪಿ ಬಂದಿದ್ದಾರೆ..."
ಮತ್ತೆ ಮತ್ತೆ ಓದಬೇಕೆನಿಸುವ ಸಾಲುಗಳು..ಕತೆಯ ತೀವ್ರತೆಯನ್ನು ಎತ್ತಿ ಸಾರುತ್ತದೆ..ಹರೆಯದ ಬಿಸಿಯಲ್ಲಿ ಎಲ್ಲಾ ಸವಾಲುಗಳು ಸಹನೀಯ ಎನಿಸುತ್ತದೆ...ಒಂದು ರೀತಿಯ ಮಾಡು ಇಲ್ಲವೇ ಮಡಿ ಅನ್ನುವ ಸಂದರ್ಭ..ತೆಗೆದುಕೊಳ್ಳುವ ನಿರ್ಧಾರಗಳು ಬದುಕಿನ ಕವಲನ್ನೇ ಬದಲಿಸುತ್ತದೆ..ಬಿಸಿಯಾಗಿದ್ದಾಗ ಹಾಲು ಕೆನೆ ಕಟ್ಟುವುದಿಲ್ಲ..ಆದ್ರೆ ಕೆನೆ ಕಟ್ಟೋಕೆ ಹಾಲು ಬಿಸಿಯಾಗಿ ತಣ್ಣಗಾದಾಗ ಮಾತ್ರ ಸಾಧ್ಯ.ಜೀವನದಲ್ಲಿನ ತಿರುವುಗಳು ನಮ್ಮನ್ನು ಬಿಸಿ ಮಾಡಿ ಕೆನೆ ಕಟ್ಟುವ ಹಂತಕ್ಕೆ ತಂದು ನಿಲ್ಲಿಸುತ್ತದೆ..ಆ ಕೆನೆಯ ಸಾಂಧ್ರತೆ ಜೀವನದ ತೀವ್ರತೆಯನ್ನ ತೋರಿಸುತ್ತದೆ..ಹಾಲಿಂದ ಕೆನೆಯೇ ಹೊರತು ಕೆನೆಗೋಸ್ಕರ ಹಾಲಲ್ಲಾ..ಹಾಗೆಯೇ ಜೀವನಕ್ಕೋಸ್ಕರ ನಿರ್ಧಾರದ ತೀವ್ರತೆಯೇ ಹೊರತು...ನಿರ್ಧಾರದ ತೀವ್ರತೆಗಳೇ ಜೀವನವಲ್ಲ...ಸೊಗಸಾಗಿದೆ ಲೇಖನದ ಲಹರಿ..ಇಷ್ಟವಾಯಿತು..
sometimes people regret for their whole life for an incorrect decison they made out of situational limits. Rest of the lifetime they keep wishing if they had made the right choice at the right moment. But they can't turn back the time.. can they??
Nicely narrated with simple words.
Sorry for posting comment in English.
ಒಳ್ಳೆಯ ಕಥೆ ಪ್ರಕಾಶಣ್ಣ ......
ಸುನಾಥ ಸರ್ ....
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
"ಅಷ್ಟೆಲ್ಲ ಹಂಬಲಿಸಿ ಬಂದ ಹುಡುಗನಿಗೆ ಹುಡುಗಿ ಅಷ್ಟು ಕೋಪದಿಂದ ಮಾತನಾಡಿದ್ದು ಸಹಜವಲ್ಲ..."
ಇದು ಶುಭಾ ಎನ್ನುವವರು ಕಳುಹಿಸಿದ ಸಂದೇಶ...
ಹುಡುಗಿ ಮೊದಲು ಹುಡುಗನಿಗಾಗಿ ತವರನ್ನೇ ತೊರೆಯಲು ಸಿದ್ದವಿದ್ದಳು..
ಅಷ್ಟು ಪ್ರೀತಿಯಿತ್ತು..
ಈಗ ಬದುಕಿನ ಅನಿವಾರ್ಯತೆಗಳಿಗೆ ಹೊಂದಿಕೊಂಡುಬಿಟ್ಟಿದ್ದಳು...
ಮತ್ತೆ ಎಲ್ಲಿ ಮೊದಲಪ್ರೇಮಕ್ಕೆ ಬಿದ್ದು ತನ್ನ ಚೌಕಟ್ಟಿನಿಂದ ಹೊರಗೆ ಬಂದು ಬಿಡುವೆನೇನೋ ಎನ್ನುವ ಅಳುಕಿನಿಂದ ..
ಅಸಹಜ ಕೋಪ ವ್ಯಕ್ತ ಪಡಿಸಿರ ಬಹುದಲ್ಲವೆ?
ಇನ್ನೊಂದು ವಿಷಯವೆಂದರೆ....
ಹೆಣ್ಣು ಉತ್ಕಟವಾಗಿ ಪ್ರೀತಿಸ ಬಲ್ಲಳು...
ಹಾಗೆ..
ಅಷ್ಟೇ ದ್ವೇಷಿಸಬಲ್ಲಳು...
ಇವರಡರ ಮಧ್ಯದ ನಡಿಗೆ ಅವಳಿಂದಾಗದು...(ಹೆಚ್ಚಾಗಿ)
ಹೀಗೂ ಆಗಿರಬಹುದಲ್ಲವೆ?
ಸುನಾಥ ಸರ್...
ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು...
ಪ್ರೀತಿಯ ಚಿನ್ಮಯ್...
ನಿಮ್ಮ ಪ್ರತಿಕ್ರಿಯೆಗಳು ಟಾನಿಕ್ ಥರಹ...
ನೀವ್ಯಾಕೆ "ಕಿರಿಯರು" ಅಂತ ಭಾವಿಸಿಕೊಳ್ಳಬೇಕು...?
ನಿಮ್ಮ ಅಭಿಪ್ರಾಯ... ನಿಮ್ಮದು.. ಮುಕ್ತವಾಗಿ ವ್ಯಕ್ತಪಡಿಸುವದು ತುಂಬಾ ಖುಷಿಕೊಡುತ್ತದೆ...
ಇರಲಿ...
ಕಥೆಯ ಪಾತ್ರಗಳಿಗೆ "ಹೆಸರು" ಇಡದಿರುವದನ್ನು ಗಮನಿಸಿದ್ದು ಖುಷಿಯಾಯಿತು...
ಕಥೆ ಒಂದು ಪರಿಧಿಯಲ್ಲಿಯೇ ತಿರುಗುವಾಗ ಹೆಸರೇಕೆ ಬೇಕು..ಎನ್ನುವದು ನನ್ನ ಅಭಿಪ್ರಾಯ...
ಮುಂದೆ ಬಹಳ ಪಾತ್ರಗಳ ಕಥೆ ಬರೆದಾಗ ಖಂಡಿತ ಹೆಸರುಗಳನ್ನು ಇಡುವೆ....
ಇದುವರೆಗೆ ಬರೆದ ಕಥಾವಸ್ತುಗಳು...
ಅವುಗಳ ಸಂದೇಶಗಳು ಒಂದಕ್ಕೊಂದು ಭಿನ್ನವಾಗಿದೆ ಎನ್ನುವದು ಅನ್ನ ಅನಿಸಿಕೆ...
ಕೆಲವು ಪಾತ್ರಗಳ "ಸಂಭಾಷಣೆಗಳು ಸ್ವಲ್ಪ ಹೋಲಿಕೆಯಾದಲ್ಲಿ" ಕಥಾವಸ್ತುವನ್ನೇ ಮತ್ತೆ ಬರೆದೆ ಎಂದು ಅರ್ಥವಲ್ಲ...
ನೀವು ಹೇಳಿದ ಹಾಗೆ ಕಥೆಯ ಪಾತ್ರಗಳಿಗೆ ಹೆಸರಿಲ್ಲದಿರುವದು ಆ ರೀತಿ ಅನ್ನಿಸಲಿಕ್ಕೆ ಕಾರಣವೇನೋ...!
ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಚಿನ್ಮಯ....
ಸಂಧ್ಯಾ ಪುಟ್ಟಿ....
ಬಹಳ ಚಂದದ ಅರ್ಥ ವಿವರಣೆ....
ಬದುಕಿನ ಅನಿವಾರ್ಯತೆಗಳಲ್ಲಿ
ವಿಳಾಸಗಳು..
ವ್ಯಕ್ತಿಗಳು ಬದಲಾಗುವದು ತೀರಾ ಸಹಜ ಅಲ್ಲವೆ?
ನಿನ್ನೆ ಒಬ್ಬರು ಕೇಳುತ್ತಿದ್ದರು..
"ಸಾರ್..
ನಿಮ್ಮದು ಎಷ್ಟು ವಿಳಾಸಗಳು ಬದಲಾಗಿವೆ..."
ನಾನೆಂದೆ..
"ನಮ್ಮದು ಈಗ ಸ್ವಂತ,..
ಶಾಶ್ವತ ವಿಳಾಸದಲ್ಲಿದ್ದೇವೆ...
ಬದಲಾಗುವ ಸಾಧ್ಯತೆಯೇ ಇಲ್ಲ....!
ನಿಮ್ಮದು ಯಾವ ವಿಳಾಸ...?"
"ಸಾರ್..
ನಮ್ಮದು ಬಾಡಿಗೆ ವಿಳಾಸ...
ಸ್ವಂತ ವಿಳಾಸಕ್ಕಾಗಿ ಪ್ರಯತ್ನ ಮಾಡುತ್ತಿರುವೆ ... ಸಾರ್... ಸಿಕ್ಕುತ್ತಿಲ್ಲ.."
ಬಹಳ ಪೇಚಾಡಿಕೊಂಡರು...
ನನಗೆ ನಗು ತಡೆಯಲಾಗಲಿಲ್ಲ..
ಅವರಿಗಿನ್ನೂ ಮದುವೆಯಾಗಿಲ್ಲ...
ಬಲು ಚಂದದ ಪ್ರತಿಕ್ರಿಯೆ...
ವಿಮರ್ಶೆಗಾಗಿ ಪ್ರೀತಿಯ ವಂದನೆಗಳು....
ಕಾವ್ಯಾ....
ನಾಯಕಿ ...
ಬದುಕಿನ ಅನಿವಾರ್ಯತೆಗಳಿಗೆ ಸಹಜವೆಂಬಂತೆ ಹೊಂದಿಕೊಂಡಿದ್ದಾಳೆ...
ಬದುಕನ್ನು ಬಂದ ಹಾಗೆಯೆ ಸ್ವೀಕರಿಸಿದ್ದಾಳೆ...
ನಾಯಕ ಅವಳ ಪ್ರಿತಿಯನ್ನು ಸ್ವೀಕರಿಸಲಾಗದೆ...
ಒದ್ದಾಡಿದ್ದಾನೆ... ಅವಳಿಗಾಗಿ ಹಂಬಲಿಸಿದ್ದಾನೆ...
ದೇಸಾಯಿಯವರು ಹೇಳಿದ ಹಾಗೆ ಮತ್ತೊಮ್ಮೆ "ಯಾಕೆ ಒಂದು ಅವಕಾಶ ಕೊಡಬಾರದು "ಅಂತ ಅವಳ ಬಳಿ ಕೇಳಿಯೂ ಇದ್ದಾನೆ...
ಆದರೆ..
ವಾಸ್ತವ ಬದುಕಿನಲ್ಲಿ ಇವೆಲ್ಲ ಮಕ್ಕಳಾಟವಲ್ಲ...
ಹಾಗಾಗಿ ನಾಯಕಿ ಮತ್ತು ಅವಳ ನಿರ್ಧಾರ ಇಷ್ಟವಾಗುತ್ತದೆ..
ಪ್ರತಿಕ್ರಿಯೆಗಾಗಿ ಪ್ರೀತಿಯ ವಂದನೆಗಳು...
ಬದರಿ ಭಾಯ್...
ಹೊಸ ವಿಳಾಸಕ್ಕಾಗಿ ಪರಿತಪಿಸುವ ಒಳಮನಸ್ಸು.....
ಎಲ್ಲರಿಗೂ ಇರುತ್ತದೆ ಅಲ್ವಾ?
ಎಷ್ಟು ಚಂದದ ಕವನ ಬರಿತೀರಿ ಮಾರಾಯರೆ... !!
ವಾಹ್ !!
"ಅಗ್ರಹಾರದ ಇರುಕು ವಠಾರದ
ಮೂರನೇ ಬಾಲ್ಕಾನಿಯಲು,
ಮದರಾಸಿನ ಧಗೆ ಬಿಸಿಲಲ
ಆ ಕ್ರೆಸೆಂಟ್ ಪಾರ್ಕಿನ ಗುಲ್ಮೊಹರದಡಿಯ
ಕಲ್ಲು ಬೇಂಚಿನ ಮೇಲೂ,
ಈಗ ನಿನ್ನ ಸುಳಿವಿಲ್ಲ...
ವಿಳಾಸ ಬದಲಾಗಿದೆಯಾ ಗೆಳತಿ?"
ನನಗೆ ಗೊತ್ತು ಸಾರ್...
"ಗೆಳತಿಯ" ವಿಳಾಸ ಬದಲಾಗಿರಬಹುದು..
ಆದರೆ ನಿಮ್ಮ ವಿಳಾಸ ಒಳಗೊಳಗೆ ಅದೇ ಇದೆ ಅಂತ,.... !!
ನಿಮಗೂ..
ನಿಮ್ಮ ಕವನ ಸ್ಪೂರ್ತಿಗೂ ನಮ್ಮ ನಮನಗಳು....
ಮಹೇಶ ಭಾವಾ... (ಸವಿಗನಸು) .............
ಥ್ಯಾಂಕ್ಯೂ.... ಕಥೆಯನ್ನು ಮೆಚ್ಚಿದ್ದಕ್ಕೆ...
ಇವತ್ತು ಮಂಜುನಾಥ ಎನ್ನುವವರು ಫೋನ್ ಮಾಡಿದ್ದರು..
"ಸಾರ್...
ಕೆಲವರು ..
ವಿಳಾಸ ಚೇಂಜ್ ಮಾಡ್ತಾನೆ ಇರ್ತಾರೆ ...
ಇನ್ನು ..
ಕೆಲವರು ವಿಳಾಸ ಹುಡುಕ್ತಾನೇ ಇರ್ತಾರೆ...
ಇನ್ನೂ ಕೆಲವರು ಹಳೆ ಅಡ್ರೆಸ್ ನಲ್ಲೇ ಖುಷಿಯಲ್ಲಿರ್ತಾರೆ..
ಮತ್ತೆ ಕೆಲವರು ಹೊಸ ಅಡ್ರೆಸ್ಸುಗಳಲ್ಲಿ ಸಂತೋಷ ಹುಡುಕ್ತಾರೆ...
ಒಟ್ಟಿನಲ್ಲಿ
ಈ ಲೈಫು ಅಡ್ರೆಸ್ ಒಳಗೇ ಸುತ್ತುತ್ತಾ ಇರುತ್ತೆ..."
ಎಂದು ಬಹಳ ವೇದಾಂತವಾಗಿ ಮಾತನಾಡಿದರು..
ನನಗೂ ಮಜಾ ಬಂತು....
ಹ್ಹಾ ಹ್ಹಾ... !
"ನಮ್ ನಮ್ ವಿಳಾಸ ನಮ್ಮ ಹತ್ತಿರ ಇದ್ರೆ ಆಯ್ತಪ್ಪ.." ಅಂತ ನಾನು ಮಾತು ಮುಗಿಸಿದೆ...
ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು .............
ಹಲ್ಲು ಇದ್ದಾಗ ಕಡ್ಲೆ ಇರೋಲ್ಲ.. ಕಡ್ಲೆ ಇದ್ದಾಗ ಹಲ್ಲು ಇರೋಲ್ಲ.
ಒಳ್ಳೆಯ ಬರಹ. :)
ಸೂಪರ್... ಮಾವಾ... ಜೀವನದ ವಾಸ್ತವವನ್ನ ತುಂಬಾ ಚಂದ ಮಾಡಿ ತೋರಿಸಿಕೊಟ್ಟಿದ್ದೆ
ಚಿತ್ರಾ....
ಪ್ರತಿ ಕಥೆಯ ಕಥಾವಸ್ತು..
ಸಂದೇಶ....
ಭಿನ್ನವಾಗಿದೆಯೆನ್ನುವದು ನನ್ನ ಅನಿಸಿಕೆ...
ಅಥವಾ ಎಲ್ಲ ಕಥೆಗಳಲ್ಲಿ "ನಾನು" ಎನ್ನುವದು ಬರುವದು ಹೀಗೆ ಅನ್ನಿಸಿತೇನೊ..
ಅದು ಹೇಗೆ ಹಾಗೆ ಅನ್ನಿಸಿತೊ ನನಗೆ ತಿಳಿಯದು..
ಇರಲಿ...
ಇಷ್ಟಪಟ್ಟಿದ್ದಕ್ಕೆ..
ಪ್ರೀತಿಯ ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು....
ಪ್ರೀತಿಯ ಶ್ರೀಕಾಂತ್...
ಈ ಕಥೆಯಲ್ಲಿ ಮುಖ್ಯವಾಗಿ ಇಬ್ಬರಲ್ಲೂ "ತೀವ್ರತೆ" ಇದ್ದಾಗಲೆ ಸಂಬಂಧಗಳು ಚಿಗುರುತ್ತವೆ ಎನ್ನುವದನ್ನು ಹೇಳಲು ಹೊರಟಿದ್ದೆ...
ಬರೆಯುತ್ತ ಬರೆಯುತ್ತ ಬೇರೆಡೆಗೆ ಹೋಗಿಬಿಟ್ಟಿತು...
ಪೂರ್ತಿಯಾದಮೇಲೆ "ಕೊನೆಯನ್ನು" ಮಾತ್ರ ತಿದ್ದಿದೆ ( ನಮ್ಮನೆಯ ಯಜಮಾನರ ಸಲಹೆಯಂತೆ)...
ಗೆಳೆತನವಿರಲಿ...
ಬೇರೆ ಯಾವುದೇ ಬಾಂಧವ್ಯವಿರಲಿ..
ಇಬ್ಬರಲ್ಲೂ ಏಕರೂಪ ಸಂವೇದನೆ ಇದ್ದಲ್ಲಿ ಮಾತ್ರ ಮುಂದುವರೆಯುತ್ತದೆ...
ಕನ್ನಡದಲ್ಲಿ ಒಂದು ಗಾದೆಯಿದೆಯಲ್ಲ...
"ರಾಮನಿಗೂ.. ಸುಗ್ರೀವನಿಗೂ ಗೆಳೆತನವಾಗಿತ್ತಂತೆ"
ಇಬ್ಬರೂ ಹೆಂಡತಿಯನ್ನು ಕಳೆದುಕೊಂಡಿದ್ದರಂತೆ.. ಹಾಗಾಗಿ ದೋಸ್ತಿಯಾಯಿತಂತೆ...!
ಎಂಥಹ ಮುತ್ತಿನಂಥಹ ಮಾತು !
ಬಲು ಚಂದದ ವಿಮರ್ಶೆಗೆ ಪ್ರೀತಿಯ ವಂದನೆಗಳು....
ವಾವ್ ಎಂತಹ ಚಂದದ ವಾಸ್ತವತೆಯ ದರ್ಶನ , ಕಳೆದುಹೋದ ಕನಸನ್ನು ಮತ್ತೆ ನನಸಾಗಿಸಿಕೊಳ್ಳುವ ಹುಡುಗನ ಹುಚ್ಚುಕುದುರೆಗೆ ಅವಳು ಸರಿಯಾದ ಲಗಾಮು ಹಾಕಿದ್ದಾಳೆ . ಕಥೆಯ ವಿಸ್ತಾರ ಮನಸಿಗೆ ನಿಜ ಜೀವನದ ದರ್ಶನ ಮಾಡಿಸುತ್ತದೆ.ಕಥೆಯ ನಿರೂಪಣೆ ಹಾಗು ಕಲ್ಪನೆ ಮಾಡಿದ ನಿಮಗೆ ಬೋಪರಾಕ್ .ಮೊದಲು ಜೀವನ ನಂತರ ಪ್ರೀತಿ ಎಂಬ ಸಂದೇಶ ನೀಡುವ ಪರಿಯನ್ನು ಯುವ ಜನತೆ ಅರ್ಥ ಮಾಡಿಕೊಂಡರೆ ಈ ಲೇಖನ ಸಾರ್ಥಕವಾಗುತ್ತೆ.ಜೈ ಹೋ ಪ್ರಕಾಶಣ್ಣ.
nice,ಎಂದಿನಂತೆ
-ವೆಂಕಟ್ರಮಣ
very beautiful story..proper address is very important to find proper person..but sometimes it may be possible to have correct person with wrong address..here is a good message.. opportunity knock at your door only once,if u don't avail next time it sends her 'daughter' miss fortune..very short and sweet story..keep writing
ಚೆಂದದ ಕಥೆ!!!ನಿರೂಪಣೆ ಸೊಗಸಾಗಿದೆ ಪ್ರಕಾಶಣ್ಣ.ನಮಸ್ಕಾರ.
ಚೆನ್ನಾಗಿದೆ... ಕಥೆಯನ್ನು ಓದುವಾಗ ಹೀಗೆ ಕೇಳಿದ ನೋಡಿದ ಹಲವು ಘಟನೆಗಳು ನೆನಪಿಗೆ ಬಂದವು.. ನಾಯಕಿಯ ತುಮುಲಗಳನ್ನು ಕಲ್ಪಿಸುವ (ಖಳ)ನಾಯಕನನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ.
ನನ್ನ ಬ್ಲಾಗಗೂ ಒಮ್ಮೆ ಭೇಟಿ ಕೊಡಿ. ಈಗಷ್ಟೆ ಹೆಜ್ಜೆಯನ್ನಿಡುತ್ತಿದ್ದೇನೆ, ತಿದ್ದಿ ಬೆಳೆಸಿ.
ಹುಡುಗಿಗಿದ್ದ ದೈರ್ಯ ಹುಡುಗನಿಗಿಲ್ಲದೆ ಹೋಯ್ತಲ್ಲ!!!! ಬಹಳ ಚೆನ್ನಾಗಿದೆ ಸರ್!!
Post a Comment