ನಿಮಗೆ ನನ್ನ ಸಮಸ್ಯೆ ಅರ್ಥವಾಗೋದಿಲ್ಲ ಬಿಡಿ....
ನನ್ನಷ್ಟಕ್ಕೆ ನಾನು ಆರಾಮಾಗಿದ್ದೆ...
ನನ್ನಪ್ಪ ಬಿಡಬೇಕಲ್ಲ...
"ಮಗನೆ ಮದುವೆ ವಯಸ್ಸಾಯ್ತು.. ಮದುವೆ ಮಾಡಿಕೊ"
ಅಂತ ತಾನೆ ಒಂದು ಹುಡುಗಿ ಹುಡುಕಿ ನಿಶ್ಚಯಿಸಿಬಿಟ್ಟ..
ಹೆಣ್ಣು ನೋಡಲು ನಾನು ಹೋಗಿದ್ದೆ..
ಹುಡುಗಿ ...
ಹೆಣ್ಣು ಎನ್ನುವದನ್ನು ಬಿಟ್ಟರೆ "ಅಂದ ಚಂದ" ಎನ್ನುವ ಶಬ್ಧ ಅಕ್ಕಪಕ್ಕದಲ್ಲಿಯೂ ಇರಲಿಲ್ಲ...
"ಮಗನೆ...
ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸಿಗುವದಿಲ್ಲ...
ಸಿಕ್ಕರೂ "ಸಾಪ್ಟವೇರ್.. ಅಮೇರಿಕಾ ಅಂತ..
ಅಂಥವರನ್ನೇ ಹುಡುಕಿಕೊಳ್ತಾರೆ...
ನಿನ್ನಂಥಹ ಮಾಮೂಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರು ...
"ಚಂದದ ಹೆಣ್ಣಿನ ಕನಸನ್ನು ಕಾಣಬಾರದು"...
"ಅಪ್ಪಾ...
ಬದುಕು ಪೂರ್ತಿ ಬಾಳಬೇಕಲ್ಲಪ್ಪಾ...!
ಈ ಮುಖ ನೋಡಿ ಹೇಗೆ ಸಾಧ್ಯ...?
ನನಗೂ ಮಕ್ಕಳ ಆಸೆ ಇದೆ..."
"ಮಗನೆ...
ದೇಹದ ಹಸಿವಿಗೆ ಅಂದ ಬೇಕಿಲ್ಲ...
ರಾತ್ರಿ ಕತ್ತಲೆಯಲ್ಲಿ..
ದೀಪವಾರಿಸಿದ ಮೇಲೆ ....ಯಾವ ಅಂದವೂ ಕಾಣುವದಿಲ್ಲ...!
ದಾಂಪತ್ಯಕ್ಕೆ ಚಂದ ಬೇಕಿಲ್ಲ ಮಗನೆ...........
ನೀ... ಸುಮ್ಮನಿರು..
ನಿನಗಿಂತ ಹೆಚ್ಚಿನ ಬದುಕನ್ನು ನಾನು ನೋಡಿದ್ದೇನೆ...
ನಿನ್ನ ಮಾವ ಪೋಲಿಸು..
ಚೆನ್ನಾಗಿ ಹಣ ಇದೆ..
ಒಬ್ಬಳೇ ಮಗಳು...ಮಾವ ನಿನ್ನನ್ನು ನೋಡಿಕೊಳ್ತಾನೆ ...
ನಿನ್ನ ಬದುಕು ಚಂದವಾಗಿರುತ್ತದೆ..."
ಅಪ್ಪನ ನನ್ನ ಮದುವೆ ಮಾಡಿ ಮುಗಿಸಿದ...
ನಿಮಗೆಲ್ಲ ನನ್ನ ಮಾವನ ಬಗೆಗೆ ಹೇಳಬೇಕು...
ನನ್ನ ಮಾವ ಪೋಲಿಸ್...
"ಪೇದೆ" ಎಂದರೆ ಗೌರವ ಕಡಿಮೆ ಆಗಬಹುದು ಅಂತ..
ಆ ಶಬ್ಧ ತಪ್ಪಿಯೂ ಉಪಯೋಗಿಸೋದಿಲ್ಲ ಬಿಡಿ...
ಬಹಳ ದರ್ಪು...
ಸೊಕ್ಕಿನ ಮೀಸೆ... ಕೆಂಪು ಕಣ್ಣುಗಳು ....
ಬಹುಷಃ ಹುಟ್ಟಾ ಪೋಲಿಸ್ ನನ್ನ ಮಾವ...
ಒಂದು ದಿನ ಕುತೂಹಲ ತಡೆಯಲಾಗದೆ ಕೇಳಿದ್ದೆ...
"ನಮ್ಮ ಜಗತ್ತಿನಲ್ಲಿ ...
ಶಾಂತಿಯಿಂದ ಇರಲಿಕ್ಕೆ ಎಲ್ಲವೂ ಇದೆ...
ಅತ್ಯಂತ ಪವಿತ್ರವಾದ ಧರ್ಮಗಳಿವೆ.....
ಧರ್ಮ ಗ್ರಂಥಗಳಿವೆ ....
ಕಣ್ಣಿಗೆ ಕಾಣದೆ ..
ಇದೆಯೆನ್ನುವ ....
ಕಲ್ಪಿಸಿಕೊಳ್ಳುವ ....
ಬಗೆ ಬಗೆಯ ದೇವರುಗಳಿದ್ದಾರೆ..!
ಮಂದಿರ... ಚರ್ಚು... ಮಸೀದೆ ...
ಮಠಗಳು... ಎಲ್ಲವೂ ಇವೆ....
ಪಾಪ ಪುಣ್ಯಗಳ ಬಗೆಗೆ ತಿಳಿಸಿ ಹೇಳಿ..
ಹೆದರಿಸುವ ...
ಧರ್ಮ ಗುರುಗಳಿದ್ದಾರೆ..
ಶಾಲೆಗಳಿವೆ... ಶಿಕ್ಷಣ ಸಂಸ್ಥೆಗಳಿವೆ ..
ಪ್ರತಿ ಮನೆಯಲ್ಲಿ ...
ಒಳ್ಳೆಯ ದಾರಿ ತೋರಿಸುವ ಅಪ್ಪ ಅಮ್ಮರಿಂದಾರೆ..
ಸರಿ.. ತಪ್ಪುಗಳನ್ನು ತಿಳಿಸಿ ಹೇಳುವ ಅಜ್ಜ ಅಜ್ಜಿಯರಿದ್ದಾರೆ...
ಮತ್ಯಾಕೆ ಈ ಪೋಲಿಸು..?
ಸೈನಿಕರು...?
ಯಾಕ ಬೇಕು ಸ್ಟೆನ್ ಗನ್ನುಗಳು..?
ಪರಮಾಣು ಬಾಂಬುಗಳು...?
ಕಾಯಿದೆ ಕಾನೂನು..? ....?.. ಫಾಸಿ ಶಿಕ್ಷೆಗಳು ...? .."
ನನ್ನ ಮಾವ ...
ಠೀವಿಯಿಂದ ಮೀಸೆಯ ಮೇಲೆ ಕೈಯ್ಯಾಡಿಸಿದ...
"ಅಳಿಮಯ್ಯಾ...
ಈ ಮನುಷ್ಯ ಇದ್ದಾನಲ್ಲ ...
ಈತನೂ ಒಂದು ಪ್ರಾಣಿ...
ಹಿಂಸೆ ಇವನ ಮೂಲ ಪ್ರವೃರ್ತಿ...
ಮೊದಲು ಕಾಡಿನಲ್ಲಿದ್ದ...
ಈಗ ನಾಡಿನಲ್ಲಿದ್ದಾನೆ... ಜಾಸ್ತಿ ವ್ಯತ್ಯಾಸ ಇಲ್ಲ...
ಈತ ಹೊಟ್ಟೆ ತುಂಬಿಸಿಕೊಳ್ಳುವದಕ್ಕೂ ಸಹ ಸಸ್ಯವನ್ನೋ..
ಪ್ರಾಣಿಯನ್ನೋ ಸಾಯಿಸುತ್ತಾನೆ...
ಹಿಂಸೆ...
ಇವನಿಗೆ ಅತ್ಯಂತ ಸಹಜ .....!
ಸುಮ್ಮನೆ ಇದ್ದ ಪಕ್ಕದಲ್ಲಿದ್ದವರಿಗೆ ಚಿವುಟಿದರೆನೇ ಇವನಿಗೆ ಖುಷಿ... !
ಮನುಷ್ಯ ಪ್ರಾಣಿಯನ್ನು ...
ಹದ್ದು ಬಸ್ತಿನಲ್ಲಿಡಲು ಧರ್ಮಗಳಿಂದ ...
ದೇವರುಗಳಿಂದ ಆಗುವದಿಲ್ಲ...
ಹೆದರಿಕೆ... ಭಯ ಇವನಿಗೆ ಬೇಕು...
ಅದಕ್ಕಾಗಿ ಪೋಲಿಸರ ಲಾಠಿ ಬೇಕೇ ಬೇಕು....
ಇಲ್ಲಿ ..
ಶಾಂತಿಗಾಗಿಯೇ ಘನ ಘೋರ ಯುದ್ಧಗಳಾಗುತ್ತವೆ..!
ಸಾವಿರಾರು ಜನರು ಸಾಯ್ತಾರೆ...!
ನಿನಗ್ಯಾಕೆ ಇದೆಲ್ಲ... ?
ನೀನು ..
ನಿನ್ನ ಕೆಲಸ..
ಹಾಗು ನನ್ನ ಮಗಳನ್ನು ನೋಡಿಕೊ ಸಾಕು..."
ನನ್ನ ಮಾವ ದಡ್ಡ ಅಂತ ನನಗೆ ತಪ್ಪು ಕಲ್ಪನೆಯಿತ್ತು...
ಆದರೆ ...
ಮಹಾ ಬುದ್ಧಿವಂತ ಅಂತ ಮದುವೆಯಾದ ಮೇಲೆ ಗೊತ್ತಾಗಿದ್ದು...
ತನ್ನ ಮಗಳಿಗೆ ಯೋಗ್ಯವಾದವರ ನನ್ನನ್ನು ಅಂತ ಆಯ್ಕೆ ಮಾಡಿದ್ದು..
ನಾನು ..
ಸ್ವಲ್ಪ ಪಾಪ ಪುಣ್ಯ ಎನ್ನುವ ವಾತಾವರಣದಲ್ಲಿ ಬೆಳೆದವ...
ಸುಮ್ ಸುಮ್ನೆ ಗಲಾಟೆ... ಜಗಳ ಕೂಗುವದು ನನಗೆ ಆಗುವದಿಲ್ಲ...
ನನ್ನ ಮಡದಿ ಮಾತ್ರ ನನ್ನ ಸ್ವಭಾವಕ್ಕೆ ತದ್ವಿರುದ್ಧ....
ದಿನಾಲೂ ಗಲಾಟೆ... ಜಗಳ.... !
ಸಮಾಧಾನ... ಶಾಂತಿ ಎನ್ನುವದೇ ಇಲ್ಲ...
ನಾನು ದೇವರ ಬಳಿ ನನ್ನ ಬಗೆಗೆ ಏನೂ ಕೇಳುವದಿಲ್ಲ...
"ದೇವರೆ..
ನನ್ನ ಪಕ್ಕದ ಮನೆಯಲ್ಲಿ ...
ಯಾವುದೇ ಹೊಸ ವಸ್ತುಗಳನ್ನು ತರದೇ ಇರಲಿ..."
ಆ ದೇವರಿಗೂ ನನ್ನ ಹಂಗಿಸುವ ಆಸೆ..!
ನಾನು ದಣಿದು ಮನೆ ಸೇರುತ್ತಲೇ ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ....!
ಆ ಶಬ್ಧಗಳ ಸಭ್ಯತೆಯ ಆಧಾರದ ಮೇಲೆ ...
ಪಕ್ಕದ ಮನೆಯಲ್ಲಿ ಯಾವ ವಸ್ತು ತಂದಿರ ಬಹುದು ಅಂತ ಲೆಕ್ಕಾಚಾರ ಹಾಕುತ್ತಿದ್ದೆ.....
ನಾನು ಹೇಳಿ ಕೇಳಿ ಸಾಮಾನ್ಯ ಕಾರ್ಖಾನೆಯಲ್ಲಿ ನೌಕರ...
"ನೋಡು..
ನನಗೆ ಎಷ್ಟು ಸಂಬಳ ಅಂತ ಮದುವೆಗೆ ಮುಂಚಿತವಾಗಿ ನಿನಗೆ...
ನಿನ್ನ ಅಪ್ಪನಿಗೂ ಗೊತ್ತಿತ್ತು...
ನಿನ್ನ ಆಸೆಗಳನ್ನು ಪೂರೈಸಲು ನನ್ನಿಂದ ಆಗದ ಕೆಲಸ...
ಹೊಂದಿಕೊಂಡು ಹೋಗೋಣ...
ಪ್ರೀತಿಯಿಂದ ಇರೋಣ..."
"ನಾನು ಹತ್ತು ಹಲವಾರು ಕನಸು ಹೊತ್ತು ಬಂದವಳು....
ನನ್ನ ಗೆಳತಿಯರೆಲ್ಲ ಸಾಫ್ಟವೇರ್ ಇಂಜೀನೀಯರನ್ನು ಮದುವೆಯಾಗಿ ಝುಂ ಅಂತ ಕಾರಲ್ಲಿ ತಿರುಗುತ್ತಿದ್ದಾರೆ...
ನಾನು ನಿಮ್ಮ ಡಕೂಟ ಸ್ಕೂಟಿಯಲ್ಲಿ ತಿರುಗ ಬೇಕಾಗಿದೆ....!
ಇವತ್ತು ನೋಡಿ...
ನಿಮ್ಮ ಸಂಗಡವೇ ಕೆಲಸ ಮಾಡುವ ..
ಪಕ್ಕದ ಮನೆಯವ ಮನೆಗೆ ವಾಷಿಂಗ್ ಮಷಿನ್ ತಂದಿದ್ದಾನೆ...!
ನಾಳೆ ಆ ಹೆಂಗಸಿನ ಡೌಲು...
ದೌಲತ್ತಿನ ಮಾತುಗಳನ್ನು ಕೇಳಿಸಿಕೊಳ್ಳುವವಳು ನಾನು...!
ನಿಮಗೇನು ಗೊತ್ತು ನನ್ನ ಕಷ್ಟ...? ನನ್ನ ಸಂಕಟ...? ..."
ಮೊದ ಮೊದಲು ಸೌಮ್ಯವಾಗಿ ಚರ್ಚೆ ಆಗುತ್ತಿತ್ತು...
ಕೊನೆಗೆ ಅಕ್ಕ ಪಕ್ಕದ ಮನೆಯವರಿಗೆ ಕೇಳಿಸ ತೊಡಗಿತು...
ಇತ್ತೀಚೆಗಂತೂ ಮಧ್ಯ ರಸ್ತೆಯಲ್ಲಿ ನಿಂತು ಕೂಗತೊಡಗಿದ್ದಾಳೆ....
ಏನು ಮಾಡಲಿ ..?
ಮೊದಲು ನನ್ನ ಅಪ್ಪನಿಗೆ ಹೇಳಿದೆ...
"ಮಗನೆ..
ಇದೆಲ್ಲ ಎಲ್ಲ ಸಂಸಾರದಲ್ಲೂ ಇದ್ದದ್ದೆ...
ಸ್ವಲ್ಪ ಪ್ರೀತಿ ತೋರಿಸು..
ಪ್ರೀತಿಯ ಸಂಗದ ಶಕ್ತಿನೂ ತೋರಿಸು....!
ಎಲ್ಲ ಹೆಣ್ಣು ಮಕ್ಕಳು ಕರಗಿ ಹೋಗುತ್ತಾರೆ...!
ಅದನ್ನೂ ನಾನು ಹೇಳಿಕೊಡಬೇಕಾ... !!... ?...."
ಅಂತ ಅರ್ಥ ಗರ್ಭಿತವಾಗಿ ನಕ್ಕರು.....
ಆದರೆ ಈ ಪ್ರೀತಿ..
ಪ್ರಣಯಕ್ಕೆ ನನ್ನ ಮಡದಿ ಜಗ್ಗಲಿಲ್ಲ.....
ಪ್ರೀತಿ ಮಾಡಿದ ಅದಷ್ಟೇ ಹೊತ್ತು....!
ಮತ್ತೆ ಯಥಾ ಪ್ರಕಾರ.... ಜಗಳ...!
ಯಾರೋ ಹೇಳಿದರು...
"ನಿಮ್ಮ ಮನೆ ವಾಸ್ತು ಸರಿ ಇಲ್ಲ...
ಬೆಡ್ ರೂಮಿನ ನೈರುತ್ಯ ಜಾಗದಲ್ಲಿ ಬಾಗಿಲು ಇದೆ...
ಹಾಗೆ ಇದ್ದಲ್ಲಿ "ಹೆಂಡತಿ ಉಗ್ರ ಪ್ರತಾಪ" ತೋರಿಸುತ್ತಾಳೆ..."
ಸರಿ..
ನೈರುತ್ಯ ದಿಕ್ಕಿನಲ್ಲಿ ಬಾಗಿಲು ಇಲ್ಲದಿರುವ ಬೆಡ್ ರೂಮ್ ಹುಡುಕಿದೆ...
ಅಲ್ಲಿಯೂ ಅಷ್ಟೇ...! ಯಥಾಪ್ರಕಾರ ಜಗಳ... ಗಲಾಟೆ....!
ಈ ಪಕ್ಕದ ಮನೆಯವರು ಯಾರೂ ಇರದ ಮನೆಯನ್ನೂ ನೋಡಿದೆ....
ಎಲ್ಲ ಕಡೆಯಲ್ಲಿಯೂ ನನ್ನ ಮರ್ಯಾದೆ ಬೀದಿಗೆ ಬರುತ್ತಿತ್ತು...
ನನ್ನ ಮಾವ ಶ್ರೀಮಂತನಾಗಿದ್ದ...
ಆದರೆ ಯಾವುದೋ ಲಂಚದ ಹಗರಣದಲ್ಲಿ ಸಿಕ್ಕಿಕೊಂಡು ..
ನನಗೆ ಸಹಾಯ ಮಾಡಲಾಗದ ಸ್ಥಿತಿಯಲ್ಲಿದ್ದ....
"ಮಾವಯ್ಯಾ...
ನಮ್ಮಿಬ್ಬರ ಹೊಂದಾಣಿಕೆ ಅಸಾಧ್ಯ....
ಒಟ್ಟಿಗೆ ಇರಲು ಆಗ್ತಾ ಇಲ್ಲ....
ನಿಮ್ಮ ಮಗಳಿಗೆ ವಿಚ್ಛೇಧನ ಕೊಡುತ್ತೇನೆ...."
" ಅಳಿಯಮಯ್ಯಾ...
ನಾನು ಕೆಲಸದಿಂದ ಸಸ್ಪೆಂಡ್ ಆದರೂ ನಾನಿನ್ನೂ ಪೋಲಿಸು....
ಠಾಣೆಯಲ್ಲಿ ನಿನ್ನನ್ನು ಅರೆದು ...
ನೀರು ಇಳಿಸಿಬಿಡ್ತೇನೆ.....!
ಸುಮ್ಮನೆ ಅವಳೊಂದಿಗೆ ಹೊಂದಿಕೊಂಡು ಹೋಗು...."
ಎಂಥಹ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದುಬಿಟ್ಟಿದ್ದೇನೆ ನಾನು !!
"ಹೇಗೆ ಹೊಂದಿಕೊಳ್ಳಲಿ ಮಾವಯ್ಯಾ...?
ನನ್ನನ್ನು ಅರ್ಥ ಮಾಡಿಕೊಳ್ತಾನೆ ಇಲ್ಲ.... ನಿಮ್ಮ ಮಗಳು..!.. "
"ಅವಳು ..
ಮೊದಲಿನಿಂದಲೂ ಸ್ವಲ್ಪ ಕೋಪಿಷ್ಠೆ...
ನಿನ್ನ ಶಾಂತ ಸ್ವಭಾವ ನೋಡಿಯೇ ..
ನಾನು ಮದುವೆ ಮಾಡಿದ್ದು....
ನೀನು ಅನುಸರಿಸಿಕೊಂಡು ಹೋಗು...
ಪ್ರೀತಿ...
ಮತ್ತು ದಾಂಪತ್ಯದ ಪ್ರೀತಿ ಅನ್ನೋದು ಬೇರೆ ಬೇರೆ ಕಣಪ್ಪಾ....
ಈ ದಾಂಪತ್ಯದ ಪ್ರೀತಿ ಅನ್ನೋದು ...
ಎಲ್ಲರಿಗೂ ಒಂದೇ ರೀತಿಯಲ್ಲಿ ಅರ್ಥವಾಗೋದಿಲ್ಲ...
ಕೆಲವರಿಗೆ ಈ ಪ್ರೀತಿ ..
ಪ್ರೀತಿಯಲ್ಲೇ ಅರ್ಥವಾಗಿ ಬಿಡುತ್ತದೆ...
ಕೆಲವರಿಗೆ ಹೊಗಳಬೇಕು....
ಹೆಣ್ಣು ಮಕ್ಕಳನ್ನು ಸ್ವಲ್ಪ ಹೊಗಳಬೇಕು....
ಪೂಸಿಹೊಡೆಯ ಬೇಕು....
ಅದೆಲ್ಲ ನೀನೇ ಸಂದರ್ಭಕ್ಕೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಪ್ಪ.... "
ನನ್ನಾಕೆಗೆ ಎಲ್ಲ ಪ್ರಯೋಗ ಮಾಡಿದೆ....
ಯಾವುದೂ ಪ್ರಯೋಜನವಾಗಲಿಲ್ಲ.....
ನನ್ನಾಕೆಯ ಮುಖ ನೋಡಿಕೂಡಲೇ ...
ಅವಳು ..
ನನ್ನೊಡನೆ ಆಡಿದ ಮಾತುಗಳು..
ಜಗಳಗಳು ನೆನಪಾಗುತ್ತಿತ್ತು....
ನನ್ನನ್ನು ಕುರಿತು ಬೀದಿಯಲ್ಲಿ ನಿಂತು ಕೂಗಾಡಿ ಮರ್ಯಾದೆ ಮೂರುಕಾಸು ಮಾಡಿದ್ದು ಎಲ್ಲ ನೆನಪಾಗುತ್ತಿತ್ತು.....
ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ...
ಮನೆಯ ಚಿಂತೆ....
ಕೆಲಸದ ಒತ್ತಡ...!
ಒಂದು ದಿನ ಕಾರ್ಖಾನೆಯಲ್ಲಿ ಎಚ್ಚರ ತಪ್ಪಿ ಬಿದ್ದುಹೋದೆ...
ವೈದ್ಯರು ಬಂದರು..
ನನ್ನನ್ನು ತಪಾಸಣೆ ಮಾಡಿದರು...
"ನೋಡಿ...
ನಿಮ್ಮ ಬೀಪಿ ಹೆಚ್ಚಿದೆ...
ಸಕ್ಕರೆ ಕೂಡ ಇದೆ...
ನಿಮಗೆ ಮಾನಸಿಕ ಶಾಂತಿ ಅತ್ಯಗತ್ಯ....
ನಾನು ಎಷ್ಟೇ ಮಾತ್ರೆಗಳನ್ನು ಕೊಟ್ಟರೂ...
ನಿಮ್ಮ ಮಾನಸಿಕ ಸಮತೋಲನವನ್ನು ನೀವೇ ನೋಡಿಕೊಳ್ಳಬೇಕು..."
"ಮಾನಸಿಕ ಶಾಂತಿಗಾಗಿ ಏನು ಮಾಡಬೇಕು...?"
"ನೋಡಪ್ಪಾ...
ಇಲ್ಲಿ ಹತ್ತಿರದಲ್ಲಿ ಯೋಗ ಗುರೂಜಿ ಇದ್ದಾರೆ...
ಅಲ್ಲಿ ಹೋಗು...
ನಾನು ಅಲ್ಲಿ ಹೋಗಿ ಶಾಂತಿಯನ್ನು ಪಡೆದಿರುವೆ...."
ಮರುದಿನ ಬೆಳಿಗ್ಗೆ ಅಲ್ಲಿಗೆ ಹೋದೆ...
"ನಮ್ಮಲ್ಲಿ ...
ಹದಿನೈದು ಸಾವಿರದ ಒಂದು ಕೋರ್ಸ್ ಮಾಡಿದರೆ ನಿಮಗೆ ಶಾಂತಿ ಸಿಗುತ್ತದೆ..."
ಗುರುಜಿಯವರು ಬಹಳ ಶ್ರೀಮಂತರಾಗಿದ್ದರು.....
ನೂರು ಎಕರೆ ಜಾಗದಲ್ಲಿ ಆಶ್ರಮ ಇತ್ತು....
ಈ ಶಾಂತಿ ಬಹಳ ದುಬಾರಿ ಎನಿಸಿತು....
ನನ್ನ ಮಾವ ಸ್ವಲ್ಪ ಸಹಾಯ ಮಾಡಿದ... ನಾನು ಸೇರಿಕೊಂಡೆ...
"ಉಸಿರಾಟ ಹೇಗೆ ಮಾಡಬೇಕು...?
ಪ್ರಾಣಾಯಾಮ ಹೇಗೆ ಮಾಡಬೇಕು...
ಮನದಲ್ಲಿ ..
ಯಾವಾಗಲೂ ಆಧ್ಯಾತ್ಮದ ಉನ್ನತ ವಿಚಾರಗಳನ್ನು ಇಟ್ಟುಕೊಳ್ಳಬೇಕು...
ಎಲ್ಲರನ್ನೂ... ಪ್ರೀತಿಸ ಬೇಕು...
ನಾವು ಮಗುವಿನಂತೆ ಇರಬೇಕು...
ಮುಗ್ಧವಾಗಿ...ಶಾಂತವಾಗಿ...."
ಎಂದೆಲ್ಲ ಹೇಳಿ...
ಹತ್ತು ದಿನ ಮೂರು ಹೊತ್ತು ಹಸಿತರಕಾರಿ ತಿನ್ನಿಸಿ...
ಕೊನೆಗೆ ಬಿಸಿ ಉಪ್ಪುನೀರು ಕುಡಿಸಿ...
ಒಂಥರಾ ಪ್ರೆಷ್ ಮಾಡಿಕಳುಹಿಸಿದರು....
ಮನೆಗೆ ಬಂದೆ...
ಅವತ್ತು ನನ್ನ ತಂಗಿಯ ಪತ್ರ ಬಂದಿತ್ತು....
"ಅಣ್ಣಾ...
ನನ್ನ ಗಂಡ ಎರಡೆಳೆ ಚಿನ್ನದ ಸರ ಮಾಡಿಸಿದ್ದಾರೆ..."
ಅಡಿಗೆ ಮನೆಯಲ್ಲಿ ಯಥಾ ಪ್ರಕಾರ ಶಬ್ಧಗಳು...!
ಎಷ್ಟೇ ಪ್ರಾಣಾಯಾಮ ಮಾಡಿದರೂ ನನ್ನ ಬಿಪಿ ಜಾಸ್ತಿಯಾಗುತ್ತಿತ್ತು....
"ನಿಮ್ಮ ತಂಗಿ ಗಂಡನ ಯೋಗ್ಯತೆ .. ನಿಮಗಿಲ್ಲವಲ್ರೀ... !
ಥೂ ನಿಮ್ಮ.... !
ಯಾವ ಕಣ್ಣಿಂದ...
ನಿಮ್ಮ ತಂಗಿ ದೌಲತ್ತು ನೋಡ ಬೇಕ್ರಿ .?..."
ನನ್ನ ಮೈ ಕಂಪಿಸತೊಡಗಿತು...
ಗುರುಜಿ ಹೇಳಿಕೊಟ್ಟ ಮಂತ್ರ ಮನದಲ್ಲೇ ಪಟಿಸಿದೆ...
ಉಸಿರಾಟದ ಕಡೆ ಗಮನಕೊಟ್ಟೆ...
"ಯಾವ ಜನ್ಮದಲ್ಲಿ ...
ಎಷ್ಟು ಪಾಪ ಮಾಡಿದ್ನೋ...
ನೀವು ಗಂಡ ಆಗಿ ಸಿಕ್ಕಿದ್ದಿರಲ್ರಿ... !
ನೀವು ಗಂಡಸೇ ಅಲ್ಲವೇನ್ರೀ...?
ನಿಮಗೆ ಏನೂ ಅನ್ನಿಸೋದೇ ಇಲ್ವಾ...?
ಥೂ ನಿಮ್ಮ ಜನ್ಮಕ್ಕೆ... !!..."
ನನ್ನ ಮೈ ಉರಿಯತೊಡಗಿತು.....
ಏನು ಮಾಡ್ತಾ ಇದ್ದೇನೆ ಅಂತ ನನಗೆ ಗೊತ್ತಾಗಲಿಲ್ಲ....
ಪಕ್ಕದಲ್ಲಿ ಇದ್ದ ಕಬ್ಬಿಣದ ರಾಡನ್ನು ತೆಗೆದು ಮೂಲೆಗೆ ಜೋರಾಗಿ ಎಸೆದೆ...!
ಮರದ ಖುರ್ಚಿ ಮೇಲೆ ಎತ್ತಿ ಎಸೆದೆ..!
ಸ್ವಲ್ಪದರಲ್ಲಿ ನನ್ನಾಕೆ ತಪ್ಪಿಸಿಕೊಂಡಳು....
ಅಡಿಗೆ ಮನೆಯೊಳಗೆ ಓಡಿ ಹೋದಳು....
ನಾನು ಅಲ್ಲೆ ಮಂಚದ ಮೇಲೆ ಕುಳಿತುಕೊಂಡೆ....
ಮೈಯೆಲ್ಲ ಬೆವರುತ್ತಿತ್ತು...
ಮನೆಯಲ್ಲಿ ನೀರವ ಮೌನ....
"ಛೇ...
ತಪ್ಪು ಮಾಡಿಬಿಟ್ಟೆ...."
ಅಪರಾಧಿ ಮನೋಭಾವನೆ ಕಾಡತೊಡಗಿತು....
ಬೇಸರವೆನಿಸಿತು ....
ಗುರೂಜಿ ಹೇಳಿಕೊಟ್ಟಂತೆ ಪ್ರಾಣಾಯಾಮ ಶುರುಮಾಡಿದೆ....
ಕಣ್ಮುಚ್ಚಿದೆ...
ಸುಮಾರು ಹೊತ್ತಿನ ಮೇಲೆ...ಯಾರೋ ಪಕ್ಕದಲ್ಲಿ ಬಂದಂತಾಯಿತು...
"ರೀ...
ಬೇಸರಪಟ್ಕೊಳ್ಳಬೇಡಿ....
ನನ್ನಿಂದ ತಪ್ಪಾಯ್ತು...ಕ್ಷಮಿಸಿ ...
ಇನ್ನು ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುವೆ...."
ಅವಳ ಧ್ವನಿ ನಡುಗುತ್ತಿತ್ತು....!
ಆತಂಕ...
ಹೆದರಿಕೆಯಿಂದ ಅವಳು ಅಳುತ್ತಿದ್ದಳು....!
(ಇದು ಕಥೆ..)
ಪ್ರತಿಕ್ರಿಯೆಗಳು ತುಂಬಾ ಚೆನ್ನಾಗಿವೆ...
ದಯವಿಟ್ಟು ಓದಿ...
34 comments:
ಪ್ರಕಾಶಣ್ಣ,
ಕಥೆಯ ಅಂತ್ಯ ಯಾರೂ ನಿರೀಕ್ಷಿಸಿರದ ಹಾಗೆ ಇದೆ. ..ಕಥಾನಾಯಕ ಪಾಪದ ಪ್ರಾಣಿ, ಆತನ ಹೆಂಡತಿಗೆ ಯಾವ ಮದ್ದೂ ಗುಣ ಮಾಡಲಿಲ್ಲ. ಅವಳಿಗೆ ಇದೇ ಮದ್ದು ಸರಿ.... ಇದು ಎಲ್ಲಾ ಕಡೆ ವರ್ಕ್ ಔಟ್ ಆಗತ್ತೆ ಅಂತ ಅಲ್ಲಾ... ಕಥಾನಾಯಕ ಹಸೀ ತರಕಾರಿ ತಿಂದು ಯೋಗ ಮಾಡಿದರೂ ಕೊನೆಗೆ ಆತನ ಸಮಸ್ಯೆ ಸರಿ ಮಾಡಿದ್ದು ಮೂಲೆಯಲ್ಲಿ ಬಿದ್ದಿದ್ದ ಕಬ್ಬಿಣದ ರಾಡ್......ಹ್ಹ ಹ್ಹಾ..... ಎಲ್ಲರೂ ಇದನ್ನ ಸುಮ್ಮನೇ ಕಥೆಯನ್ನಾಗಿ ತೆಗೆದುಕೊಳ್ಳಲಿ... ತಮಾಶೆಯಾಗಿ ತೆಗೆದುಕೊಳ್ಳಲಿ.... ಇದರ ಪರಿಣಾಮ ಯಾರ ಮೇಲೂ ಆಗದಿರಲಿ...ಹ್ಹ ಹ್ಹಾ...
ಪ್ರೀತಿಯ ದಿನಕರ್....
ಸ್ವಭಾವದೊಡನೆ ಬದುಕುವ ದಾಂಪತ್ಯದಲ್ಲಿ ಪ್ರೀತಿಯನ್ನು ಹೇಗೆ ಸಂಭಾಳಿಸಬೇಕೆನ್ನುವದು ಎಲ್ಲರ ಸಮಸ್ಯೆ....
ಪ್ರೀತಿ..
ಪ್ರೀಯಿಂದ ಅರ್ಥವಾದರೆ ಸುಖ ಶಾಂತಿ...
ಇದು ಕಥೆ...
ನೀವು ಹೇಳಿದಹಾಗೆ ವಾಸ್ತವ ಆಗದಿರಲಿ ಎನ್ನುವದು ಆಶಯ...
ವಾಸ್ತವದಲ್ಲಿ ನಾನು ಚಂದದ ದಾಂಪತ್ಯದ ಜೊತೆಗಾರ....
ಕಥೆ..
ಕಥೆಯಂತೆ ಓದಿದ್ದಕ್ಕಾಗಿ ಜೈ ಹೋ !!
ಚಂದದ ಪ್ರತಿಕ್ರಿಯೆ..
ಪ್ರೋತ್ಸಾಹಕ್ಕಾಗಿ ಪ್ರೀತಿಯ ವಂದನೆಗಳು....
ಅಬ್ಬಬಾ..ಹೀಂಗೂ ಆಗುತ್ತೆ ಅನ್ನೋದು ಗೊತ್ತಿದ್ದರೂ ಹೀಂಗಾಗ್ಬಾರ್ದು ನಮ್ಮ ಮನೆಲಿ ಅಂತ ಸಮಾಧಾನ ಮಾಡ್ಕೊಂಡು ಮುನ್ನಡಿಬೇಕು...ನಮ್ಮಿಂದ ತಪ್ಪ್ಪಾಗದ ಹಾಗೆ ನಡೆದುಕೊಂಡರೆ..ಒಂದಿಲ್ಲೊಂದು ತಿರುವಿನಲ್ಲಿ ಅವಳಿಗೆ ಅರ್ಥವಾಗಿ ಎಲ್ಲ ಸರಿಹೋಗಬಹುದು ಎನ್ನೋ ಸಮಾಧಾನ ಇದ್ರೆ ಸರಿ... ಯೋಗ ಮಾಡಿ ಕೋಪ ಇಳಿಸ್ಕೊಳ್ಳೋದೇನೋ ಸರಿ ಆದರೆ ಅವಳು ಯೋಗಕ್ಕೆ ಹೋಗಿಲ್ಲವಲ್ಲ... ಅದೇನೋ ಹೇಳ್ತಾರಲ್ಲಾ... ಯಾರದೋ ಮನೆಗೆ ಹೋಗಿದ್ದಾಗ ನಾಯಿ ಕಚ್ಚಿತ್ತಂತೆ, ಅಲ್ಲ ಕಣೋ ನಾಯಿಗಳಿವೆ ಎಚ್ಚರಿಕೆ ಅಂತ ಬೋರ್ಡಿತ್ತಲ್ಲೋ ಅಂದಿದ್ದಕ್ಕೆ ಗುಂಡ ಅಂದ್ನಂತೆ..ಆದ್ರೆ ನಾಯಿ ಬೋರ್ಡ್ ಓದೊಲ್ಲವಲ್ಲಾ...ಅಂತ...ಹಹಹ ಅಂತೂ ರಾಡೇಶ್ವರನ ಪ್ರಭಾವ ಚನ್ನಾಗೇ ಆಯ್ತು, ಕೆಲವರು ಬೆತ್ತೇಶ್ವರ ಉಪಯೋಗಿಸ್ತಾರೆ...ಆದರೆ ಅಧಿಕವಾಗು ಉಲ್ಟಾ ಆಗೋದೇ ಹೆಚ್ಚು, ಪಾಪದ ಗಂಡು ಅನ್ನೋ ಪ್ರಾಣಿ ಮೇಲೆ ಪದೇ ಪದೇ..ಲಟ್ಟಣಿಗಾಸ್ತ್ರ, ಸೌಟಾಸ್ತ್ರ, ಪರಕ್ಯಾಸ್ತ್ರ, ಇತ್ಯಾದಿ ಪ್ರಯೋಗ...ಹಹಹಹ್ ಚನ್ನಾಗಿದೆ ಕಥೆ ಪಕಾಶೂ...
ಹಿಂಗಿದ್ ಹೆಂಗಸ್ರು ಇರ್ತ್ವ??? Unbelievable!!!
sooper prakashanna.... yavagu hangeya obru joradre innobru summanagta....
sEಕಥೆ ತುಂಬ ಇಷ್ಟ ಆಯಿತು ಪ್ರಕಾಶಣ್ಣ.. ಬೆಳಕಿದ್ದೆಡೆ ನೆರಳು.. ರಾತ್ರಿಯಾದರೆ ಹಗಲು.. ಗೆದ್ದರೇನೆ ಸೋಲು.. ಅಧರ್ಮವಿದ್ದೇ ಧರ್ಮ.. ಅನ್ಯಾಯವಿದ್ದೇ ನ್ಯಾಯ.. ಸುಳ್ಳಿದ್ದರೇನೆ ಸತ್ಯ.. ಹಾಗೆ ಅಶಾಂತಿಯಿದ್ದರೇನೆ ಶಾಂತಿ.. ಅದು ಅನಿವಾರ್ಯವಲ್ಲ.. ಅನಿವಾರ್ಯವಾಗಿ ಆದ ಅವಶ್ಯಕತೆ. ನಾನೂ ನಮ್ಮೂರು, ಕೇರಿ, ಬೀದಿಗಳಲ್ಲಿ, ನಮ್ಮದೇ ಮನೆಯಲ್ಲಿ.. ಇದನ್ನೇ ನೋಡಿ ಬೆಳೆದದ್ದು. ಒಂದು ನೆಲೆಸಬೇಕಾದಲ್ಲಿ ಇನ್ನೊಂದು ಅವತಾರವೆತ್ತ ಬೇಕ್ಕಾದ್ದು ನಿಜವಾಗಿಯೂ ಅವಶ್ಯಕತೆಯೇ. ಇದಕೆಲ್ಲ ಕಾರಣ ಮನಸ್ಥಿತಿ.. ಹೌದು ಮನಸ್ಥಿತಿಗಳು ಬದಲಾಗದ ಹೊರತು ಮನುಷ್ಯ ಬದಲಾಗಲಾರ. ನಿಮ್ಮ ಕಥೆಯ ಸಾರವೂ ಅದನ್ನೇ ಹೇಳುತ್ತದೆ. ಕಥೆ ನಿಜಕ್ಕೂ ತ್ತುಂಬ ಚೆನ್ನಾಗಿದೆ.. ತುಂಬ ಇಷ್ಟ ಆಯಿತು ಪ್ರಕಾಶಣ್ಣ. :) :)
ಪ್ರೀತಿಯ ಆಜಾದು....
ಇದೊಂದು ಸಾಂಕೇತಿಕ ಕಥೆ....
ದೌರ್ಜ್ಯನ್ಯ ...
ಗಂಡು ಅಥವಾ ಹೆಣ್ಣಿನ ಮೇಲೂ ಆಗಬಹುದು.....
ಎಲ್ಲ ದಾಂಪತ್ಯವೂ ಚಂದವಾಗಿಯೇ ಇರಬೇಕು ಅಂತಿಲ್ಲ.... ಹೀಗೂ ಇರುತ್ತದೆ...
ಇಂಥಹ ಸಂಸಾರಗಳನ್ನು ನಾವು ನೋಡಿರ್ತೇವೆ....
ಪ್ರತಿಯೊಂದಕ್ಕೂ "ಪೆಟ್ಟು" ಎನ್ನುವದು ಮದ್ದಲ್ಲ....
ಮನುಷ್ಯನ ಸಹಜ ಸ್ವಭಾವದ ಬಗೆಗೆ ವಿಶ್ಲೇಶಿಸುತ್ತ ಈ ಕಥೆ ಹೊಳೆಯಿತು.....
ಆದರೆ ಪೆಟ್ಟು ಕೂಡ ಒಂದು ಪರಿಣಾಮಕಾರಿಯಾದ ಮದ್ದು... ಔಷಧ.... ಅಲ್ವಾ?
ಸುಖ ದಾಂಪತ್ಯಕ್ಕೆ ಒಬ್ಬರು ಹೊಂದಿಕೊಂಡರೆ ಸಾಲದು... ಇಬ್ಬರ ಪಾಲೂ ಇರಬೇಕು.... ಅಲ್ವಾ?
ಒಬ್ಬರು ಹೊಂದಿಕೊಳ್ಳಲು ಪ್ರಯತ್ನಿಸುವದು... ಇನ್ನೊಬ್ಬರು ದಬ್ಬಾಳಿಕೆ ಮಾಡುವದು... ಇದು ತಪ್ಪು..
ಚಂದದ ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಜೈ ಹೋ !!
ಪೂರ್ಣಿಮಾ....
ಇಂಥಹ ಹೆಂಗಸರೂ ಇದ್ದಾರೆ.... ಗಂಡಸರೂ ಇದ್ದಾರೆ....!
ಸ್ವಭಾವಗಳಿಗೆ ಲಿಂಗ ಬೇಧವಿಲ್ಲ.....
ನನ್ನ ಅತ್ಯಂತ ಪರಿಚಯದವರೊಬ್ಬರ ಸಂಸಾರದಲ್ಲಿ "ಹೆಂಡತಿ" ಹೀಗೆಯೇ ಇದ್ದಾಳೆ.....
ಆದರೆ ಆತ "ರಾಡ್" ಕೈಗೆ ತೆಗೆದುಕೊಳ್ಳಲಿಲ್ಲ... ಇನ್ನೂ ಹೊಂದಿಕೊಂಡು ಹೋಗುವ ಪ್ರಯತ್ನ ಪಡುತ್ತಿದ್ದಾನೆ....
ಇವರಿಬ್ಬರ ಜಗಳದಲ್ಲಿ ಅನಾಥವಾಗುತ್ತಿರುವದು ಮಗು....
ಅದು ಯಾವ ಪಾಪ ಮಾಡಿದೆ ಅಲ್ವಾ?
ಹಿಂಸೆಯ ಮನೊಬುದ್ಧಿಗೆ "ಪೆಟ್ಟು" ಮಾತ್ರ ಅರ್ಥವಾಗಬಲ್ಲದು.....
ಹಾಗಾಗಿ ಪೋಲಿಸ್ ವ್ಯವಸ್ಥೆ ಇದೆ....
ಪ್ರತಿಕ್ರಿಯೆಯನ್ನು ಫೇಸ್ ಬುಕ್ಕಿನಲ್ಲಿ ಹಾಕದೆ...
ಬ್ಲಾಗಿನಲ್ಲಿ ಹಾಕಿದ್ದಕ್ಕೆ ಪ್ರೀತಿಯ ಧನ್ಯವಾದಗಳು....
ದಯವಿಟ್ಟು ಚಿಕ್ಕದಾದರೂ ಸರಿ ಬ್ಲಾಗಿನಲ್ಲಿ ಪ್ರತಿಕ್ರಿಯೆ ಹಾಕಿ ಪ್ಲೀಸ್......
ಅಮ್ಮ ಜೀವ ಕೊಡುತ್ತಾಳೆ..ಅಪ್ಪ ಬಾಳು ಕೊಡುತ್ತಾನೆ ಎನ್ನುವ ಮಾತು ನಾಯಕನಿಗೆ ಹದಿನೈದು ಸಾವಿರದ ಶಾಂತಿಯನ್ನರಸಿ ಹೋಗಿ ಬಂದು..ಅಚಾನಕ್ ತಾಳ್ಮೆ ಕಳೆದುಕೊಂಡ ಮೇಲೆ ಅರಿವಾಯಿತು. ಕೋಪ ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ ಇದು ನೀತಿ..ಆದರೆ ಸಾತ್ವಿಕ ಕೋಪ ಬಹು ಉಪಯೋಗಕ್ಕೆ ಬರುತ್ತದೆ ಎನ್ನುವ ಅರಿವು ಕಥೆಯ ಸುಖಾಂತ್ಯದಲ್ಲಿ ಅರಿವಾಗುತ್ತದೆ. ತಪ್ಪು ಅರಿತವ ಬೆಪ್ಪು ಸ್ಥಿತಿ ತಲುಪುವುದಿಲ್ಲ...ಇಲ್ಲಿ ನಾಯಕ ನಾಯಕಿ ಇಬ್ಬರು ಬೇರೆ ಹಾಡಿಗೆ ಹೊರಳಿ ಮತ್ತೆ ಮುಖ್ಯದಾರಿಗೆ ಬರುತ್ತಾರೆ..ಅಪ್ಪ, ಮಾವ, ಗುರುಗಳು ಎಲ್ಲರೂ ಉಪದೇಶ ಮಾಡಿದರು ಪರಿಸ್ಥಿತಿಯ ನಿಯಂತ್ರಣ ನಮ್ಮ ಮೇಲೆ ಇರುತ್ತದೆ..ಅವರು ಹೇಳುವ ಮಾತು ಕತ್ತಲಿನ ದಾರಿಯಲ್ಲಿ ತಮಸ್ಸನ್ನು ಓಡಿಸುವ ಬೆಳಕಾಗಿರುತ್ತೆ..ದಾರಿಯ ಆಯ್ಕೆ ನಮ್ಮ ಮೇಲೆಯೇ ಇರುತ್ತದೆ...ಈ ನೀತಿಯನ್ನು ಎಷ್ಟು ಸುಲಲಿತವಾಗಿ ಪದಗಳಲ್ಲಿ ಕಟ್ಟಿ ಕೊಟ್ಟಿದ್ದೀರಿ...ಬಾಕಿ ಮಾತುಗಳು, ಭೋದನೆಗಳು ಇಲ್ಲಿ ಗುಪ್ತ ಗಾಮನಿ ಯಾಗಿ ಹರಿಯುವುದು ನಿಮ್ಮ ಲೇಖನಗಳ ವಿಶೇಷ...ಅದು ನಿಮ್ಮ ಕಥೆಯ ತಾರ್ಕಿಕತೆಗೆ ಹೆಗಲು ಕೊಟ್ಟು ನಿಲ್ಲುತ್ತದೆ.ಸುಂದರ, ಅತಿಸುಂದರ..
(ನಿಮ್ಮ ಲೇಖನಕ್ಕೆ ಜಾತಕ ಪಕ್ಷಿಯ ಹಾಗೆ ಕಾಯುತ್ತ ಕುಳಿತಿದ್ದೆ.ಮೊಬೈಲ್ ನಲ್ಲಿ ಹೊಸ ಲೇಖನ ಇದೆ ಅಂತ ಗೊತ್ತಾದ ತಕ್ಷಣ...ಕಾಯುವ ತಾಳ್ಮೆ (ಹ ಹ ಹ ಹ) ಇಲ್ಲದೆ ಅಲ್ಲಿಯೇ ಓದಿ ಬಿಟ್ಟೆ!)
ಅಬ್ಬಾ...
ಎಂತಹ ದೌರ್ಜ್ಯನ್ಯ ...
ಪಾಪ ಪಾಂಡು....
ಪ್ರಕಾಶಣ್ಣ...ಈ ಕಬ್ಬಿಣದ ರಾಡ್ ಎಲ್ಲಿ ಸಿಗುತ್ತೆ...
ನಾನೊಂದು ಕೊಂಡು ಕೊಳ್ಳೋಣ ಅಂತ...
ಚೆಂದದ ಬರಹ....
ಕೆಲವು ಮನೆಗಳಲ್ಲಿ ನಡೆವ ಘಟವಾವಳಿಗಳಿವು ಆ ಹೆಂಗಸು ಅವಳ ಅಪ್ಪ
ಎಲ್ಲೆಡೆ ಸಿಗತಿರತಾರೆ..ಇನ್ನು ಕೊನೆಯಲ್ಲಿ ನಾಯಕ ತೋರಿಸೋ ಪ್ರತಿಭಟನೆ ಅನಿರೀಕ್ಷೀತ
ಹಾಗೂ ಚೆನ್ನಾಗಿದೆ
kathe tumba chennagide annayya.... nij jeevanakke tumba hattiravagide.. sama dana bhed danda nalknnu upayogisbekaguthe. talme gu ondu miti ede anth thorisuthe.
ಸಮನ್ವಯಾ....
ನಿಮ್ಮ ಹೆಸರಿನಲ್ಲೇ ಇದೆ ಉತ್ತರ....!
ಪ್ರೀತಿ.. ಪ್ರೇಮದ ಸಮಾನ ಸಮನ್ವಯ ಇಬ್ಬರಲ್ಲೂ ಇದ್ದರೆ ಅದು ಬಂಗಾರದ ಸಂಸಾರ...
ಹೆಚ್ಚಿನ ಸಂಸಾರದಲ್ಲಿ ನೀವು ಹೇಳಿದ ಹಾಗೆ "ಇಬ್ಬರಲ್ಲಿ ಒಬ್ಬರು ಸುಮ್ಮನೆ ಅನುಸರಿಸಿಕೊಂಡು ಹೋಗ್ತಾರೆ.."
ಹೆಚ್ಚಾಗಿ ಆರ್ಥಿಕ ಪ್ರಾಬಲ್ಯ ಇರುವವರ ದರ್ಪ ಜಾಸ್ತಿ ಇರುತ್ತದೆ..( ಗಂಡು ಅಥವಾ ಹೆಣ್ಣು)
ವರದಕ್ಷಿಣಿ...
ಅಥವಾ ಪತಿಯ ಹಣ ಅಂತಸ್ತು ಇದೆಲ್ಲ ಪರಿಣಾಮ ಬೀರುತ್ತದೆ...
ನಿಮ್ಮ ಹೆಸರು ಪ್ರತಿ ಸಂಸಾರದಲ್ಲಿ ಇರಲಿ ಎನ್ನುವದು ಆಶಯ....
ಪ್ರತಿಕ್ರಿಯೆಗಾಗಿ ಧನ್ಯವಾದಗಳು ....
ದೇವರು, ದೆವ್ವ - ಪಾಪ ಪುಣ್ಯ ಕಲ್ಪನೆ ಇದ್ದರೂ ಮನುಜ ನಿರಂತರ ಹಿಂಸಾ ಪ್ರಿಯ? ಶಾಂತಿ ಮಂತ್ರ ಸುಮ್ಮನೆ ಹೇಳುತ್ತಾ ಕತ್ತಿ ಮಸೆಯುತ್ತಾನೆ?
ಶಾಂತಿ ಬರೀ ಸುಳ್ಳಿನ ಮಾತೇ ಆಗಿರುವಾಗ ಲಾಠೀ ಬಂದೂಕು ಬೇಕು ಅಲ್ಲವೇ?
ಹಾಸಿಗೆ ಇದ್ದಷ್ಟು ಕಾಲು ಚಾಚಲು ಒಲ್ಲದ ಸಂಸಾರಗಳಲ್ಲಿ ಜಗಳ ತಾಪತ್ರಯ ಇದ್ದದ್ದೇ, ಆದರೆ ಅದು ಬೀದಿ ರಂಪವಾಗಬಾರದು.
ಮನಸ್ಸಿನಲ್ಲಿ ಸುಖದ ವಾಸವೇ ಇಲ್ಲದಾಗ ಶಯನ ಕೋಣೆಯ ಚ್ವಾಸ್ತು ತಿದ್ದುವುದೇ ಹಣೆಯ ಬರಹ?
ದುಡ್ಡಿನ ಹಿಂದೆ ಬಿದ್ದಿರುವ ಆಶ್ರಮಗಳ ಬಟ್ಟೆ ಬಿಚ್ಚಿದಂತಿದೆ, ಆ ಭಾಗ ಖುಷಿಯಾಯ್ತು.
"ಓಹೋ.... ಬಾಯಲ್ಲಿ ತಿದ್ದಲು ಆಗದ ಗಟ್ಟಿ ಪಿಂಡಗಳಿಗೆ ಚಪ್ಪಲಿ ಪೂಜೆಯೇ ಸರಿಯೇನೋ?"
ಮಹಿಳಾ ಓದುಗರಿಗೆ ನನ್ನ ಮಾತು ಒಪ್ಪಿಗೆಯಾಗದಿದ್ದರೂ, ಗಂಡಾಗಲಿ ಹೆಣ್ಣಾಗಲಿ ಹದ್ದು ಮೀರಿದಾಗ ಒದೆ ಕೊಟ್ಟು ದಾರಿಗೆ ತಂದರೆ ತಪ್ಪಿಲ್ಲ. ಮಕ್ಕಳನ್ನು ನಾವು ತಿದ್ದುವುದಿಲ್ಲವೇ ಹಾಗೆ.
ಅಯ್ಯಪ್ಪಾ ಪ್ರಕಾಶಣ್ಣಾ,
ಮದುವೆ ಎಂದರೆ ಶಬ್ಧದ ಅರ್ಥವಷ್ಟೇ ಗೊತ್ತಿರುವವನು ನಾನು...ಈಗ್ಲೇ ದೊಡ್ಡ ಬಾಂಬು ಹಾಕಿಬಿಟ್ರಿ!!!!
ಪೋಲೀಸು,ಯುದ್ಧ...ಮಾವನನ್ನು ಬುದ್ಧಿವಂತ ಎಂದು ನಿರೂಪಿಸಿದ ಆ ಸಾಲುಗಳು ಇಷ್ಟವಾಯಿತು...ಇದೇನಿದು ಪ್ರಕಾಶಣ್ಣ ಮಾನವರ ಕ್ರೌರ್ಯದ ಬಗ್ಗೆ ದೊಡ್ಡ ಫಿಲಾಸಫಿ ಹೇಳಲು ಹೊರಟ್ರೇನಪ್ಪಾ ಎಂದುಕೊಳ್ಳುತ್ತಿರುವಾಗಲೇ ಕಥೆಗೆ ಒಂದಿಷ್ಟು ವೇಗ ಬಂದಿತು...
ಜೊತೆಗೆ ಯೋಗದ ಸ್ವಾಮಿ,ಮಾವನ ಕೆಲಸ ಹೋಗಿದ್ದೂ ಆಯಿತು..ಅಲ್ಲಿ "ನಾನಿನ್ನೂ ಪೋಲೀಸು...ಸ್ಟೇಷನ್ನಿಗೆ ಕರೆಸಿ ನೀರಿಳಿಸುತ್ತೇನೆ "ಎಂದಿದ್ದು ಓದಿ ಒಂದ್ ಸಲಾ ನಕ್ಕು ಬಿಟ್ಟೆ...
ಹಮ್...ಚೆನಾಗಿತ್ತು...ಅರ್ಜಂಟ್ ಕಾಲದಲ್ಲೊಂದು ಅರ್ಜಂಟಾಗಿ ಓದಿಮುಗಿಸಿಯೇ ಬಿಡುವ ಎನ್ನುವಂತೆ ಓದಿಸಿಕೊಂಡು ಹೋಗುವ ಕಥೆ....
ಹಾಂ ಈ ಕಥೆಯ ಅಂತ್ಯದ ಬಗ್ಗೆ ಮಾತಾಡುವಷ್ಟೇನೂ ಗೊತ್ತಿಲ್ಲ ನಂಗೆ...ಆದರೆ ಒಂದು ಸುಮ್ನೆ ಮಾತು...
ಕೊನೆಯಲ್ಲಾದರೂ ಹೆಂಡತಿಯ ಮನಸ್ಸಿನ ಮಾತುಗಳನ್ನು ಹಾಕಬಹುದಿತ್ತೇನೋ..ಅವಳು ಬದಲಾಗಲು ಕಾರಣವಾದ ಭಾವನೆಯನ್ನು ಹೇಳಬಹುದಿತ್ತೇನೋ..
ಅದನ್ನು ಓದುಗರ ವಿವೇಚನೆಗೆ ಬಿಟ್ಟಿರಾ???
ಹಂಗಂದ್ರೆ ನನ್ನ ವಿಚಾರ ಕೇಳಿ "
ರಾಡು ಹಿಡುದಿದ್ದು ನೋಡಿ ಅವಳಿಗೆ ಅವರಪ್ಪನ ಲಾಠಿ ನೆನಪಾಗಿ ಚಿಕ್ಕಂದಿನ ಅಪ್ಪನ ಹೊಡೆತದ ಉರಿ ಮರುಕಳಿಸಿ,ಮೆತ್ತಗಾಗಿರಬೇಕು!!!!!!!!!!!"
ಬರೆಯುತ್ತಿರಿ...
ನಮಸ್ತೆ....
ಯೋಗಕ್ಕೆ ಬಗ್ಗದ್ದು ರಾಡಿಗೆ ಬಗ್ಗಿತು. ರಾಡ್ ತುಂಬಾನೇ -ತಾಮಸಿಕವಾಯ್ತು- ಆದ್ರೆ ಸಾತ್ವಿಕ ಖಂಡಿತಾ ಕೆಲಸ ಮಾಡ್ತಿರಲಿಲ್ಲಾ.ಡಿಫೆರೆನ್ಟಲೀ ಹಿರಿಯರೆದುರಿನಲ್ಲಿ ಕುರಿಗಳಾಗುವುದು ಹೀಗೆ ! ಸದ್ಯ, ರಾಡು ಬಿಸಿ ಇಲ್ಲದ್ದು ಆಕೀ ಪುಣ್ಯನೇ ಸರಿ.
ಒಮ್ಮೆ ಕಾಗುಣಿತ ಸರಿಪಡಿಸಿಕೊಳ್ಳಿ.
ಸಾಮಾನ್ಯವಾಗಿ ಮುದ್ದು ಮಾಡಿದರೆ ಹುಡುಗಿಯರು ಸರಿ ಹೋಗುತ್ತಾರೆ.
ಇಲ್ಲಿ ಕಥಾನಾಯಕಿ ಸ್ವಲ್ಪ ಅತಿರೇಕದವಳು, ಗಂಡ ಕೊಟ್ಟ ಮದ್ದು ಸರಿಯಾಗೇ ಇದೆ..
ಚಂದದ ಕತೆ ಅಣ್ಣ...
Good concept.At last he applied violent step to create non violence. Punishment is also one of the method to makeout the awareness.Some people and some countries got satisfied in creating the violence and some in burnig off. Very good story you have written.
ಶಾಂತಿ, ಹಿಂಸೆ, ಮನಸ್ಥಿತಿಗಳನ್ನು ದಾಂಪತ್ಯದಲ್ಲಿ ಸಂಕೇತಿಕವಾಗಿ ಚಿತ್ರಿಸಿ ಮನುಷ್ಯನ ಮನಸ್ಥಿತಿಯ ಅನಾವರಣ ಮಾಡಿದ್ದೀರಿ. ಹೆಣ್ಣಾಗಿ ಪತಿಯ ದೌರ್ಜ್ಯನ್ಯ ಇಷ್ಟವಾಗದಿದ್ದರೂ, ನಿಮ್ಮ ಕಥೆ, ಇದನ್ನು ಹೆಣೆದಿರುವ ರೀತಿ ಬಹಳ ಇಷ್ಟವಾಯಿತು. ಕಥೆಯ ಗುಂಗು ಕೆಲವು ದಿನಗಳ ತನಕ ಕೊರೆಯುವದಂತೂ ಸತ್ಯ. ಧನ್ಯವಾದಗಳು.
ಯಾಕೋ ಕಟುಕನ ಮನೆಯ ಗಿಳಿ ಕಥೆ ನೆನಪಾಯಿತು. ಅಪ್ಪ, ಅಮ್ಮ ಬೆಳೆಸುವುದರ ಜೊತೆಗೆ ಮನುಷ್ಯನ ಮೇಲೆ ಅವನ ಬೆಳೆಯುವ ವಾತಾವರಣವೂ ಪರಿಣಾಮ ಬೀರುತ್ತದೆ. ಒಂದು ಹಂತದ ಬೆಳವಣಿಗೆಯ ನಂತರ ವತಾವರಣ ಪರಿಣಾಮ ಬೀರುವುದೇ ಜಾಸ್ತಿ . ಇಲ್ಲಿ ಆಕೆ ಬೆಳೆದದ್ದು ಹಿಂಸಾತ್ಮಕ ವಾತಾವರಣದಲ್ಲೇ , ದರ್ಪದ ವಾತಾವರಣದಲ್ಲೇ.. ಹಾಗಾಗಿ ಆಕೆಗೆ ಅದೇ ರೀತಿಯಲ್ಲಿ ಹೇಳಿದರೆ ಮಾತ್ರ ಅರ್ಥವಾಗುವಂತಿತ್ತು ಎನಿಸುತ್ತದೆ. ನಾಯಕನ ರಾಡ್ ಎಸೆತ ಪರಿನಾಮಕಾರಿಯಾಗಿದ್ದು ಅಲ್ಲೇ.
ಚಂದದ ಕಥೆ ...
ಸತೀಶು....
ಈ ಕಥೆಯನ್ನು ಬರೆಯಬೇಕೆಂದು ಕಳೆದ ಆರು ತಿಂಗಳಿಂದ ಪ್ರಯತ್ನಿಸುತ್ತಿದ್ದೆ...
ಕಥೆಯನ್ನು ಮೊದಲು ಕೇಳಿದ ನನ್ನ ಮಡದಿ ಚೆನ್ನಾಗಿ ಬೈಯ್ದಿದ್ದಳು...
"ಇಂಥಹ ಕಥೆಗಳಿಂದ ಹೆಣ್ಣು ಮಕ್ಕಳಿಗೆ ನೋವಾಗುತ್ತದೆ"
ಗೆಳೆಯರನೇಕರಿಗೂ ಹೇಳಿದೆ...
ದಿನಕರ ಬೆನ್ನು ತಟ್ಟಿದ...
ಕಸಬ್ ನ ಫಾಸಿ ಶಿಕ್ಷೆಯ ನಂತರ ಇದನ್ನು ಬರೆಯಲೇ ಬೇಕೆಂಬ ತುಡಿತ ಜಾಸ್ತಿ ಆಯ್ತು... ಬರೆದೆ..
ನನ್ನಾಕೆ ಕಥೆ ಕೇಳಲು ಇಷ್ಟ ಪಡಲಿಲ್ಲ...
ಇವತ್ತೂ ಕೇಳಿದೆ... "ಕಥೆ ಓದಲೇನೆ..? " ಅಂತ
"ನಿಮ್ಮ ಈ ಕಥೆಗೂ... ನನಗೂ ಸಂಬಂಧವೇ ಇಲ್ಲ" ಅಂತ ಮಾತುಕಥೆ ಮುಗಿಸಿಬಿಟ್ಟಳು.
ನಮ್ಮ ಕಣ್ಣೆದುರಲ್ಲೇ ಇಂಥಹ ಹೆಣ್ಣುಮಗಳನ್ನು ನಾವು ಸಹಿಸಿಕೊಳ್ಳುತ್ತಿದ್ದೇವೆ... "ಮತ್ತೆಂಥಹ ಕಥೆ...? " ಎನ್ನುವ ಧೋರಣೆ ಇದ್ದಿರಬಹುದು...
ದಾಂಪತ್ಯದಲ್ಲಿ ಹೊಂದಾಣಿಕೆ ಎನ್ನುವದು ಒಬ್ಬರ ಪ್ರಯತ್ನವಾಗಬಾರದು....
ತಮಗೆ ಗೊತ್ತಿಲ್ಲದಂತೆ ಇಬ್ಬರದ್ದೂ ಆಗಿಹೋಗಬೇಕು... ಆಗ ಸಂಸಾರ ಬಲು ಚಂದ....
ಹಿಂಸೆ ಮನುಷ್ಯನ ಸಹಜ ಸ್ವಭಾವ... ಕೇಳಲಿಕ್ಕೆ ಕಷ್ಟ...
ಆದರೆ ಸತ್ಯ...
ಪಟಾಕಿ ಹೊಡೆಯುತ್ತೀವಲ್ಲ...
ಇದು ನಮ್ಮೊಳಗಿನ ರಾಕ್ಷಸೀ ಪ್ರವೃರ್ತಿಗೆ...ಹಿಂಸಾ ಮನೊಬುದ್ಧಿಗೆ ಶಮನ ನೀಡುತ್ತದಂತೆ...
ಸತೀಶು...
ನಿಮ್ಮ ಮಾತು ನಿಜ.. "ಮನಸ್ಥಿತಿ ಬದಲಾಗದ ಹೊರತು ಮನುಷ್ಯ ಬದಲಾಗಲಾರ"
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.
ಬರೆದದ್ದು ಸಾರ್ಥಕ ಎನ್ನುವಂಥಹ ಪ್ರತಿಕ್ರಿಯೆಗಳು.... ಧನ್ಯವಾದಗಳು.
ಇಲ್ಲಿ ಹೆಣ್ಣನ್ನು ದೌರ್ಜನ್ಯಕ್ಕೆ ಸಾ೦ಕೇತಿಕವಾಗಿ ತೆಗೆದುಕೊ೦ದರೂ ಈ ದೌರ್ಜನ್ಯ ನಡೆಸುವುದು ಅನ್ನುವುದು ವ್ಯಕ್ತಿಗಳ ಮನಸ್ತಿತಿ.. ಎಲ್ಲಿ ಬಗ್ಗುವವರು ಇರುತ್ತಾರೋ ಅಲ್ಲಿ ಗುದ್ದು ಹೇರುವವರು ಇದ್ದೇ ಯಾವತ್ತಗೂ ಇರುತ್ತಾರೆ. ಅದು ಸ೦ಸಾರವಾಗಲಿ, ಕಾರ್ಯಕ್ಷೇತ್ರವಾಗಲೀ ಎಲ್ಲಾದರೂ ಸರಿ. ದುರ್ಬಲರ ಮೇಲಿನ ಶೋಷಣೆ ಅಷ್ಟೇ.. ಒಮ್ಮೆ ತಿರುಗಿ ಬಿದ್ದಾಗ ದೌರ್ಜನ್ಯ ನಡೆಸುವವನು ಹಿಮ್ಮೆಟ್ಟುತ್ತಾನೆ/ಳೆ. ಈ ಸ್ಥಿತಿ ದೇಶ,ಕಾಲ,ಸ೦ಸಾರ, ಎಲ್ಲಾ ಮೀರಿದ್ದು..
ಉತ್ತಮ ಕಥೆ..
ಪುಟ್ಟ ಕತೆಯಲ್ಲಿ ಜೀವಂತಿಕೆ ತುಂಬಿ ಪ್ರತೀ ಓದುಗನಿಗೂ ಕ್ಷಣ ನಿಂತು ಯೋಚನೆಗೆ ಹಚ್ಚಬಲ್ಲ ಕತೆ. ಕತೆಯ ಶೈಲಿಯೂ ತುಂಬಾ ಇಷ್ಟವಾಯಿತು. ಪ್ರತೀ ದೌರ್ಜನ್ಯವನ್ನು ಗೆಲ್ಲಬೇಕಾದದ್ದು ಕೋಲು ಎಂಬುದಕ್ಕಿಂತ ಗಟ್ಟಿಯಾಗಿ ನಿಲ್ಲಬಲ್ಲ ನಮ್ಮೊಳಗು ಎಂಬುದು ಸೂಕ್ಷ್ಮವಾಗಿ ಹೆಣೆದಿದ್ದೀರಿ. ಕತೆ ಇಷ್ಟವಾಯಿತು..
ಹಿರಿಯರಾದ ಶ್ರೀ ಗೋಪಾಲ ವಾಜಪೇಯಿಯವರು ಈ ಕಥೆಯನ್ನು ಓದಿ ತಮ್ಮ ಅನಿಸಿಕೆ ಮೈಲ್ ಮಾಡಿದ್ದಾರೆ...
Gopal Wajapeyi
9:03 AM
to me
ಮೂವತ್ತೈದು ವರ್ಷಗಳ ಹಿಂದೆ ಹೀಗೆ ಇತ್ತು ನನ್ನ ಸ್ಥಿತಿ. ನೀವು ಈ ಕಥೆಯ ಮೊದಲ ಭಾಗದಲ್ಲಿ ವಿವರಿಸಿದ ಹಾಗೆ. ಅಪ್ಪ ಮೊದಲೇ 'ಜೈ' ಅಂದಿದ್ದ. ಆತನ ಬದಲು, ಹೀಗೆ ಗಂಟು ಬೀಳಲು, ಇದ್ದವ ನಮ್ಮ ಸೋದರ ಮಾವ. ಕುಂತ್ರೆ ನಿಂತರೆ ಅದೇ ವಿಚಾರ : ''ಬೇಗ ಒಂದು ಮದುವೆ ಮಾಡಿಕೊ''...
ಮಾಡಿಕೊಂಡೆ.
ಈಗ ನಾನು ನನ್ನ ಮಗನಿಗೆ ಇದೆ ವಿಚಾರಕ್ಕೆ ವರಾತಕ್ಕೆ ಶುರುವಿಟ್ಟುಕೊಂಡಿರುತ್ತೇನೆ.
ಹಿಂದೆ ನಾನು 'ಸೋ.ಮಾ.'ನಿಗೆ ನೇರವಾಗಿ ಏನೂ ಹೇಳುವ ಹಾಗಿರಲಿಲ್ಲ. ಇವತ್ತು ನನ್ನ ಮಗನಿಗೆ ಆ ಮುಲಾಜೆ ಇಲ್ಲ...
(ಈ ತನಕದ ಆತನ ಸ್ಕೋರು ೫೦ಕ್ಕೆ ಸಮೀಪ... ಆದರೂ 'ಶೋಧನೆ' ನಿಂತಿಲ್ಲ, 'ಎಲ್ಲಿರುವೆ ಮನವ ಕಾಡುವ ರೂಪಸಿಯೇ...'ಎಂದು ಹಾಡಿಕೊಳ್ಳುವುದನ್ನು ಬಿಟ್ಟಿಲ್ಲ.)
ನನ್ನ ಮಾವ ನಿಜಕ್ಕೂ ಪೋಲಿಸ್ ಇಲಾಖೆಯಲ್ಲೇ ಇದ್ದವರು.
ಆದರೆ, ನಾನು ಆ ಪೋಲಿಸನ ಮಗಳ ಕೈ ಹಿಡಿದ ಕೆಲ ದಿನಗಳಲ್ಲೇ ಅವರು ಯಮಪುರಿಯ ಬೀಟಿಗೆ ಹೊರಟು ಹೋದರು.
ಸದ್ಯ ನನಗೆ ಕಬ್ಬಿಣದ ರಾಡು ತೊಗೊಳ್ಳುವ ಪ್ರಮೇಯ ಬಂದಿಲ್ಲ...
ಪ್ರಕಾಶ್ ಜಿ, ನನಗೊಂದು ಮಾತು ಹೇಳಿ : ನಿಮಗೆ ಇಷ್ಟೆಲ್ಲಾ ಯೋಚಿಸಲು, ಬರೆಯಲು ಸಮಯ ಎಲ್ಲಿ ಸಿಗತ್ತೆ ಅಂತ... ಎಂಥ ಚಂದದ ಬರವಣಿಗೆ ನಿಮ್ಮದು. ಸುಭಗ, ಸುಮನೋಹರ ಶೈಲಿ. ಆ ಹಾಸ್ಯದ ಲೇಪವಂತೂ ಹಲಸಿಗೆ ಜೇನು ಲೆಪಿಸಿದಂತೆ.
ಸೂಪರ್............
ಕೆಲವೊಂದು ಸಣ್ಣ ಮನಸ್ಸಿನ ಹೆಂಗಸರು ಹೇಗಿರ್ತಾರೆ ಎಂದು ಮೊದಲು ಹೆಳಿದ್ರಿ, ಅಂಥ ಹೆಂಗಸರಿಗೆ ಯಾವುದೆ ದೊಡ್ಡ ದೊಡ್ಡ ಪ್ರಯೋಗಗಳು ಅವರನ್ನು ಸರಿ ಮಾಡುವುದಿಲ್ಲ, ಅವರನ್ನು ಸರಿ ಮಾಡಲು ಅವರ ಲೆವಲ್ ಗೆ ಇಳಿದು ಸರಿ ಮಾಡಿದ್ದನ್ನಾ ಬಹಳ ಮೆಚ್ಕೊಂಡೆ....
ಕಬ್ಬಿಣದ ರಾಡ್ ಇಲ್ದೆ ಇದ್ರೆ, ಇನ್ನೊಂದು ಪ್ರಯೋಗಃ
ಹೆಂಡತಿ ಹೇಗೆ ವಟ ವಟ ಗುಡುತ್ತಿದ್ದಳೋ, ಗಂಡನೂ ಹಾಗೆ ಮಾಡಬಹುದು, ಪಕ್ಕದ ಮನೆಯವನ ಹೆಂಡತಿ ಎಷ್ಟು ಒಳ್ಳೆಯವಳು, ಹಾಗೆ ಹೀಗೆ, ಗಂಡನ್ನ ಎಷ್ಟು ಪ್ರೀತಿ ಮಾಡ್ತಾಳೆ...ಅಂತ ಅವಳಿಗಿಂತ ಜೊರಾಗಿ ಕೂಗಿ ಪ್ರಯತ್ನಿಸಿ ನೋಡಬಹುದಿತ್ತು....
ಪ್ರಕಾಶಣ್ಣ ನೀವು ಫಾಸ್ಟ್ ಅಂಡ್ ಪ್ಯೂರಿಯಸ್ ಬಿಡಿ, ಒಂದೇ ಏಟಿಗೆ ಎಲ್ಲಾ ಮುಗಿಸಿಬಿಟ್ರಿ... ಃ)
ಈ ಕಥೆಯಿಂದ ತಿಳಿದುಬರುವ ನೀತಿಃ
"ಆ ಆ ಲೆವಲ್ನವರನ್ನಾ, ಆ ಆ ಲೆವಲ್ಲಲ್ಲೇ ಡೀಲ್ ಮಾಡಿ"
ನಿಮ್ಮ ಈ ಕಥೆಯಲ್ಲಿ ಬರುವ ಪಾತ್ರಗಳು ನಿಜವಾಗಿವೆ, ಕೆಲವೊಮ್ಮೆ ಹೆಣ್ಣುಮಕ್ಕಳನ್ನು ಬೆಳೆಸಿರುವ ತಂದೆ ತಾಯಿಗಳು ಅವರನ್ನು ತಿದ್ದಿ ತೀಡದೆ ಅತಿಯಾಗಿ ಮುದ್ದುಮಾಡಿ ಬೆಳಸಿದಾಗ ಇಂತಹ ಅನಾಹುತಗಳು ಆಗುತ್ತವೆ. ಇನ್ನು ಈ ಕಥೆಯ ಹೀರೋ ಪುಣ್ಯಾತ್ಮ ವಾಸ್ತವತೆಯ ಅರಿವು ಇಲ್ಲದವ,ತಾನು ತನ್ನ ಮದುವೆ ವಿಚಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳಲೂ ಆಗದೆ ಬಲವಂತವಾಗಿ ಹಿರಿಯರ ಮಾತಿಗೆ ತಲೆಬಾಗಿದವ, ಕಥೆಯ ಯಾವ ಹಂತದಲ್ಲಿಯೂ ತನ್ನ ಸ್ಪಷ್ಟ ನಿರ್ಧಾರ ಪ್ರದರ್ಶಿಸದೆ ಮೂಕನಾಗಿ ಸಹಿಸಿಕೊಂಡು ಆಪತ್ತನ್ನು ತಂದುಕೊಂಡಂತೆ ಅನ್ನಿಸಿತು. ಆದರೆ ಹೆಂಡತಿಯ ದೌರ್ಜನ್ಯ ಮಿತಿಮೀರಿದಾಗ ದಂಡ ಪ್ರಯೋಗ ಮಾಡಿದ್ದು ಸೋಜಿಗ ಎನ್ನಿಸಿತು. ಇನ್ನು ದುಡ್ಡಿಗೆ ಮಾರುವ ಯೋಗ ಮನಸಿನ ರೋಗವನ್ನು ಗುಣಪಡಿಸದು ಎಂಬ ವಾಸ್ತವತೆ ದರ್ಶನ ಚೆನ್ನಾಗಿ ಆಗಿದೆ. ಕೊನೆಗೆ ಕಥೆಯ ಸಂದೇಶ "ರಾಡಂ ಶರಣಂ ಗಚ್ಚಾಮಿ"
ಎಲ್ಲ ಮನೆಗಳಲ್ಲೂ ಹೀಗೆಯೇ ಸಮಸ್ಯೆ ಪರಿಹಾರವಾಗಿದ್ದರೆ ಎಷ್ಟು ಚೆನ್ನ ಇರುತ್ತಿತ್ತು ಅಲ್ಲವೇ ??
ವಿಷಯ ವಸ್ತು ಚೆನ್ನಾಗಿದೆ ,ಇಷ್ಟ ಆಯಿತು .
ಅಂತ್ಯ ಸೊಗಸಾಗಿದೆ
ಪ್ರಕಾಶಣ್ಣ ...
ಕಥೆ ತುಂಬಾ ಚೆನ್ನಾಗಿದೆ... ಓದಿಸುತ್ತಾ ಹೋಗುವ ನಿಮ್ಮ ಬರವಣಿಗೆಗೆ ಒಂದು ಸೆಲ್ಯೂಟ್..
ಮೊದಲಿಗೆ ಕಥಾ ನಾಯಕನ ಅಸಹಾಯಕತನ ನಿಜಕ್ಕೂ ಪಾಪ ಅನ್ನಿಸುತ್ತದೆ.
ಕಥೆಯ ಮಧ್ಯ ಭಾಗದಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಯಾವುದೇ ಪೋಲಿಸ್ ಅಗತ್ಯವಿಲ್ಲದೆ ಕಾಪಾಡಬಹುದು ಅನ್ನೋದನ್ನ ಚೆನ್ನಾಗಿ ನಿರೂಪಿಸಿದ್ದೀರಿ.
ಆದರೆ!?..(ನಾನು ಕಥಾನಾಯಕ ,ಮತ್ತು ನಾಯಕಿಯನ್ನು ನೋಡಿದ ದೃಷ್ಟಿ )
ಇಲ್ಲಿ ಕಥಾ ನಾಯಕಿಗೆ ಪ್ರೀತಿಯ ಮಾತುಗಳು ಬರಿ ಬೊಗಳೆ ಭರವಸೆಯಂತೆ ಕಂಡಿರಬಹುದೇ? ಬರಿ ಮಾತುಗಳು ಹೊಟ್ಟೆ ತುಂಬಿಸುತ್ತಾ ಅನ್ನೋ ಹಾಗೆ ಗಂಡ ಬರಿ ಪ್ರೀತಿಯ ಮಾತುಗಳನ್ನಾಡಿ ತನ್ನ ವಾಸ್ತವವನ್ನು ಮರೆಸುತ್ತಿದ್ದಾನೆ ಎಂಬ ಭಾವನೆ ಆಕೆಗೆ ಇರಬಹುದೇ?
೨. ಕಥಾನಾಯಕ ಶಾಂತಿಗಾಗಿ ಹದಿನೈದು ಸಾವಿರ ಹಣ ಕೊಟ್ಟು ಯೋಗ ಕೋರ್ಸ ಸೇರುವ ಬದಲು ಅದರಲ್ಲಿ ಹೆಂಡತಿಯ ಬೇಡಿಕೆಯ ಒಂದು ಭಾಗವಾದ ವಾಷಿಂಗ್ ಮಷಿನ್ ತೆಗಸಿಕೊಡಬಹುದಿತ್ತಲ್ಲವೇ?( ಇಲ್ಲಿ ಆತ ಸ್ವಲ್ಪ ಸ್ವಾರ್ಥಿ ಅನ್ನಿಸುವದಿಲ್ಲವೇ? ತನ್ನ ಶಾಂತಿಗಾಗಿ ೧೫ ಸಾವಿರ ಖರ್ಚು ಮಾಡುವ ಈತ ಹೆಂಡತಿಯ ಇಷ್ಟಾರ್ಥ ಬಂದಾಗ ಬಡವ ಎಂದು ಕೊರಗುವದು ಏಕೆ?)ಅವನಿಗೆ ಅಲ್ಲೇ ಸ್ವಲ್ಪ ಮಟ್ಟಿನ ಶಾಂತಿ ಸಿಗುತ್ತಿತ್ತು ಹಾಗೂ ಅವಳಿಗೆ ತನ್ನ ಗಂಡ ಆಡುವ ಮಾತುಗಳಲ್ಲಿ ಹುರುಳಿದೆ ಅನ್ನಿಸಿ ಕೋಪ ಕಡಿಮೆ ಆಗಿ ಆತ ನೆಮ್ಮದಿ ಕಾಣಬಹುದಿತ್ತಲ್ಲವೇ?
೩. ಕಥೆಯ ಕೊನೆಯ ಹಂತದಲ್ಲಿ, ಕಥಾನಾಯಕನಿಗೆ ಮೊದಲು ಹೆಂಡತಿಯ ಕ್ರೂರ ಎನಿಸಿದರು ಅವಳಲ್ಲೂ ಒಂದು ಪ್ರೀತಿ- ಮಮಕಾರದ ಹೃದಯ ಇದೆ ಎಂಬುದು ಕೊನೆಯಲ್ಲಿ ಮನವರಿಕೆ ಆಗಿರಬಹುದಲ್ಲವೇ?
ಇದೆಲ್ಲದರ ನಡುವೆ ಕಟ್ಟಾ ಕಡೆಯದಾಗಿ ನನ್ನಲ್ಲಿ ಮೂಡುವ ಪ್ರಶ್ನೆ ಹೆಂಡತಿಯ ಕೋಪ ತಣಿಸಲು ಗಂಡನ ಕೈಯಲ್ಲಿ ರಾಡೆ ಬೇಕೆ?
ಪ್ರಕಾಶಣ್ಣ ಕಥೆ ಬಹಳ ಚನ್ನಾಗಿದೆ.... ಎಲ್ಲವನ್ನೂ ಪ್ರಯೋಗಿಸಿದ ನ೦ತರ, ಇನ್ನು ’ದ೦ಡ೦ ದಶಗುಣ೦’ ಎ೦ಬುದೇ ಸರಿ ಎನಿಸಿ ರಾಡು ಎತ್ತಿರಬೇಕು ಅಲ್ಲವಾ....??
ಬರಹ ಮತ್ತು ಅದಕ್ಕೆ ಬರುವ ಪ್ರತಿಕ್ರಿಯೆಗಳು ಎರಡೂ ಇಟ್ಟಿಗೆ ಸೀಮೆಂಟಿನ ವಿಶೇಷತೆ.
ಇಂತಹ ಹೆಂಡಿರನ್ನು ಮದುವೆಯಾದ ಮೊದಲಿನಿಂದಲೇ ಹದ್ದುಬದ್ದಿಸ್ತಿನಲ್ಲಿ ಇಟ್ಕೊಬೇಕು ಗಂಡಂದಿರು .... ಅನ್ನುವ ನೀತಿ.... ಹಾ ಹಾ ಹಾ... ಚೆನ್ನಾಗಿದೆ... :) :)
helokenide Prakashanna...Simply Superb.....
ಹಿಂಸೆ ಮಾನವನ ಮೂಲ ಪ್ರವೃರ್ತಿ.. ಎಂತಹ ಅಂತ್ಯ..
Post a Comment