Saturday, October 1, 2011

.............ಹೀಗೆ .


ನಿರ್ಧಾರಗಳು ಯಾಕೆ ಬದಲಾಗುತ್ತವೆ?


ಉತ್ತರ ಬಲು ಕಷ್ಟ...


ನನ್ನಪ್ಪ ಊರಿಂದ ಬರುವಾಗ ಹೇಳಿದ್ದರು...


"ಮಗಾ..
ಪಟ್ಟಣದಲ್ಲಿ ಇರ್ತೀಯಾ...
ಹದಿಹರೆಯದ ವಯಸ್ಸು... ಮನಸ್ಸು ಹಿಡಿತದಲ್ಲಿರೋದಿಲ್ಲ..


ಮೊದಲಬಾರಿಗೆ ಊರಿಂದ... ಅಪ್ಪ,ಅಮ್ಮರಿಂದ ದೂರ ಇರ್ತಿದ್ದೀಯಾ..
ಒಂಟೀತನ ಕಾಡಬಹುದು...


ಚಟಕ್ಕೆ ..
ಹೆಣ್ಣುಮಕ್ಕಳ ಕಡೆಗೆ  ಮನಸ್ಸು ಎಳೆಯ ಬಹುದು..


ನೀನು ಎಚ್ಚರಿಕೆಯಲ್ಲಿರಬೇಕು..."


ನಾನೂ ಗಟ್ಟಿಯಾಗಿ ನಿರ್ಧರಿಸಿದ್ದೆ... ಅಪ್ಪಹೇಳಿದಂತೆ ನಡೆಯಬೇಕು ಅಂತ...


ಆದರೆ...
ಆ ಹುಡುಗಿ....
ಸ್ವಲ್ಪ ಕುಳ್ಳಿ... 
ಕಣ್ಣಲ್ಲೇ ನಗುವ..ಚಂದದ ತುಟಿಗಳಿಗೆ ಮರುಳಾಗಿಬಿಟ್ಟೆ...


ಅರಳು ಹುರಿದಂತೆ ಅವಳು ಮಾತನಾಡುವಾಗ ನಾನೋ ಎಲ್ಲೋ ಕಳೆದು ಹೋಗುತ್ತಿದ್ದೆ...


ಅವಳ ಧ್ವನಿಯೂ ಇಂಪು...


ಅವಳು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಹಾಡಿದ್ದಳು...


"ನೀ...ನಿರಲು ಜೊತೆಯಲ್ಲಿ.. ಬಾಳೆಲ್ಲ ಹಸಿರಾದಂತೆ..."


ವಾಹ್ !!


ನಾನು ಏನು ಮಾಡಬಾರದಾಗಿತ್ತೋ... ಅದನ್ನು ಮಾಡಿದೆ...
ನನ್ನ ಹೃದಯ ಢವ ಢವ ಅನ್ನುತ್ತಿತ್ತು...
ಧೈರ್ಯಮಾಡಿ ಹುಡುಗಿ ಒಬ್ಬಳೆ ಇದ್ದಾಗ ಹೇಳಿದೆ..


"ಹುಡುಗಿ.. 
ನಿನ್ನನ್ನು ನಾನು ಪ್ರೀತಿಸುತ್ತಿದ್ದೇನೆ..."


ಅವಳ ಜಿಂಕೆ ಕಣ್ಣುಗಳಲ್ಲಿ ಆಶ್ಚರ್ಯ.... !


"ಹೌದಾ...?
ನನ್ನ ಪ್ರೀತಿಸ್ತಿದ್ದೀಯಾ...?


ಯಾಕೆ?"


"ಗೊತ್ತಿಲ್ಲ... 
ನೀನು ನನಗೆ ತುಂಬಾ ತುಂಬಾ ಇಷ್ಟ..
ತುಂಬಾ ತುಂಬಾ ಪ್ರೀತಿಸ್ತಾ ಇದ್ದಿನಿ..."


"ಹುಡುಗಾ...
ಸಿನೇಮಾ ಥರಹ ನನ್ನನ್ನು ತಬ್ಬಿಕೊ ಬೇಕು...
ಹಾಡು ಹೇಳಬೇಕು ...
ಅಂತೆಲ್ಲ  ಅನ್ನಿಸ್ತಾ ಇದೆಯಾ...?"


ಅನಿರೀಕ್ಷಿತವಾದ ಅವಳ ಈ ನೇರ ಮಾತಿಗೆ ನನ್ನಲ್ಲಿ ಉತ್ತರ ಇರಲಿಲ್ಲ...


ತಡಬಡಿಸಿದೆ... 
ಸಣ್ಣಗೆ ಹಣೆಯಲ್ಲಿ ಬೆವರು ಬಂತು...!


"ಹುಡುಗಾ...
ಪ್ರೀತಿ ಎಂದರೆ ಏನು?"


ನಾನು ತಲೆ ಕೆರೆದು ಕೊಂಡೆ...


ಅಸಲಿಗೆ ಪ್ರೀತಿ ಎಂದರೇನು ಅಂತ ನನಗೂ ಗೊತ್ತಿಲ್ಲ...!


"ಗೊತ್ತಿಲ್ಲ ...
ನಿನ್ನನ್ನು ನೋಡಬೇಕು ಅನ್ಸುತ್ತೆ...
ನೀನು ನನಗೆ ಚಂದ ಕಾಣ್ತಾ  ಇದ್ದೀಯ...


ನೋಡ್ತಾ ಇದ್ದೀನಿ...


ನೀನು ಖುಷಿಯಾಗಿರಬೇಕು...
ನಿನ್ನ ಸಂತೋಷ ನಾನು ನೋಡಬೇಕು...


ನಿನಗೆ ಒಳ್ಳೆಯದನ್ನು ಬಯಸುತ್ತೇನೆ... ಹೃದಯಪೂರ್ವಕವಾಗಿ..."


"  ಸರಿ...
ಹಾಗಾದರೆ..ನೀನು ನನ್ನನ್ನು ಪ್ರೀತಿ ಮಾಡಬಹುದು...
ಆದರೆ...
ಒಂದು ಕಂಡೀಷನ್......."


"ಏನು...?"


" ನೀನು ನನ್ನಿಂದ ದೂರ ಇರಬೇಕು...


ನನ್ನ ಕಡೆಗೆ ಪೆಂಗನಂತೆ ನೋಡುತ್ತ.. 
ಹುಚ್ಚುರೀತಿಯಲ್ಲಿ ವರ್ತಿಸಬಾರದು...


ಅವಶ್ಯಕತೆ ಇದ್ದಷ್ಟೇ ಮಾತನಾಡಬೇಕು...
ಕಾರಣವಿಲ್ಲದೆ ನನ್ನನ್ನು ಭೇಟಿ ಮಾಡಬಾರದು..."


ನಾನು ಮತ್ತೆ ತಲೆ ಕೆರೆದುಕೊಂಡೆ...


"ಆಯಿತು...
ಓಕೆ..
ಎಸ್ಸೆಮ್ಮೆಸ್  ಕಳಿಸ ಬಹುದಾ?"


ಹುಡುಗಿ ಈಗ ತುಂಬಾ ಕಠಿಣವಾದಳು...


" ಇಲ್ಲ...
ನಾವಿಬ್ಬರೂ ಇಲ್ಲಿ ಓದಲಿಕ್ಕೆ ಬಂದಿದ್ದೇವೆ... ಚೆನ್ನಾಗಿ ಓದಬೇಕು...
ಅದು ನಮ್ಮ ಮೊದಲ ಗುರಿ...


ನನ್ನ ಓದಿಗೆ ನೀನು ..
ನಿನ್ನ ಪ್ರೀತಿ ...
ನನಗೆ ತೊಂದರೆ ಕೊಡಬಾರದು..."


ನಾನು ಅವಳು ಹೇಳಿದುದಕ್ಕೆ "ಹೂಂ" ಅಂದೆ...


"ನೋಡು ಹುಡುಗಿ...


ನಾನೂ ಕೂಡ ಒಳ್ಳೆಯವನು... 
ಒಳ್ಳೆಯ ಮನೆತನದವನು...
ಕೆಟ್ಟ ಅಭ್ಯಾಸಗಳಿಲ್ಲ..
ದಯವಿಟ್ಟು ನನ್ನನ್ನೂ ಪ್ರೀತಿಸು.... ಪ್ಲೀಸ್...."


ಈ ಪ್ರೀತಿ ನಿವೇದನೆ ಬಲು ಕಷ್ಟ....


ಹುಡುಗಿ ಕಿರುಗಣ್ಣಿನಿಂದ ನೋಡಿದಳು...
ತಕ್ಷಣ ಉತ್ತರ ಕೊಡಲಿಲ್ಲ...


"ಪ್ರೀತಿಗೆ ಬಲವಂತ ಮಾಡಬಾರದು.. .. 
ಹುಡುಗಾ...
ಕಾದು ನೋಡೋಣ...


ನೀನು ನನ್ನನ್ನು ಪ್ರೀತಿಸಿಕೊ.. 


ಪರವಾಗಿಲ್ಲ...
ಆದರೆ ನನಗೆ ತೊಂದರೆ ಕೊಡಬೇಡ...."


ಅಂದಿನಿಂದ ....
ಅವಳನ್ನು ದೂರದಿಂದಲೇ ನೋಡುತ್ತಿದ್ದೆ...
ಕಣ್ಣತುಂಬಾ... ಹೃದಯದ ತುಂಬಾ....


ನೋಡುತ್ತಿದ್ದೆ.. 
ಅವಳಿಗೆ ಗೊತ್ತಾಗದ ಹಾಗೆ... 
ಕವನ ಗೀಚುತ್ತಿದ್ದೆ.... ಕನಸು ಕಾಣುತ್ತಿದ್ದೆ....


ಏನೋ ಒಂಥರಾ ಖುಷಿ..!
ಅವಳಿದ್ದಳು ನನ್ನ  ಮನಸ್ಸಲ್ಲಿ ..
ನಿದ್ದೆ  ಕನಸುಗಳಲ್ಲಿ..


ಪ್ರೀತಿ ಎಂದರೆ  ಇದೇನಾ?


ನೋಡು ನೋಡುತ್ತಿರುವಂತೆ... ನಮ್ಮ ಓದು ಮುಗಿಯಿತು...
ಇಬ್ಬರೂ ಪಾಸಾಗಿದ್ದೆವು...


ನೌಕರಿಯೂ ಸಿಕ್ಕಿತು....


ಇನ್ನೇನು?


ಈ ಆಸೆಗಳದ್ದೇ ಸಮಸ್ಯೆ....!


ಅಸೆಗಳು ಮತ್ತೆ ಗರಿಗೆದರಿತು....


ಆಸೆಗಳಿಗೇನು...?
ಯಾವಾಗಲೂ ಅವಕಾಶ ಹುಡುಕುತ್ತಿರುತ್ತವೆ....


"ಹುಡುಗಿ...
ನನ್ನ ಪ್ರೀತಿ ಮರೆತುಬಿಟ್ಟೆಯಾ...?


"ಇಲ್ಲ ಕಣೋ...
ಮರೆತಿಲ್ಲ... 
ನೀನು ತುಂಬಾ ಒಳ್ಳೆಯ ಹುಡುಗ...
ನಾನು ಹೇಳಿದಂತೆ ನಡೇದುಕೊಂಡಿದ್ದೀಯಾ..."


"ಸರಿ...
ಮುಂದೇನು...?


"ಹುಡುಗಾ...
ನನ್ನ ಅಪ್ಪ ತುಂಬಾ ಕಷ್ಟ ಪಟ್ಟು ನನಗೆ ಓದಿಸಿದ್ದಾನೆ..
ನನಗೂ ಒಂದಷ್ಟು ಕನಸಿದೆ..
ನನ್ನ ಅಪ್ಪನಿಗೆ ಏನಾದರೂ ಕೊಡಬೇಕು...
ಒಂದಷ್ಟು ದಿನ ಕೆಲಸ ಮಾಡಿ ....
ಅಪ್ಪನಿಗೆ ಏನಾದರೂ ನನ್ನಿಂದ ಸಹಾಯ ಆಗಬೇಕು....."


ನಿಜ ಹೇಳ್ತೀನಿ...
ಈಗ ಮಾತಾಡಿದ್ದು ನಾನಲ್ಲ...
ನನ್ನ ಆಸೆಗಳು...


ನನ್ನ ಆಸೆಗಳೇ ಮಾತಾಡಿದವು...


" ಖಂಡಿತವಾಗಿ ಕೊಡು ಮಾರಾಯ್ತಿ...
ನನ್ನ ಅಭ್ಯಂತರ ಏನೂ ಇಲ್ಲ...


ನಾನು ನಿನ್ನ ಕೈ ಹಿಡಿದುಕೊಂಡು ಪಾರ್ಕಿನಲ್ಲಿ ಓಡಾಡಬಹುದಾ?
ನಿನ್ನ ಜೊತೆ ಪಾನಿ ಪುರಿ ತಿನ್ನ ಬಹುದಾ?


ನನಗೆ ನಿನ್ನ ಮೇಲೆ ಪ್ರೀತಿ ಇನ್ನೂ ಜಾಸ್ತಿಯಾಗಿದೆ..."


"ಇಲ್ಲ ಕಣೊ...
ನೀನು ನನ್ನನ್ನು ಮುಟ್ಟಬಾರದು...
ದೂರದಿಂದಲೇ ಮಾತನಾಡಬೇಕು...


ಆದರೆ..."


"ಏನು..?"


"ಆದರೆ..
ನನ್ನೊಟ್ಟಿಗೆ ಓಡಾಡ ಬಹುದು...
ವಾರಕ್ಕೊಮ್ಮೆ ಪಾರ್ಕು.. ಸಿನೇಮಾ ನೋಡಬಹುದು...


ಆದರೆ ಎಲ್ಲವೂ ದೂರ...ದೂರದಲ್ಲೇ.. ಇರಬೇಕು...!


ನಿನ್ನ ಪ್ರೀತಿ ನನ್ನ ಮೈ ಮುಟ್ಟಬಾರದು..."


ನನಗೆ ಬಹಳ ಸಂತೋಷವಾಯಿತು...!
ಸ್ವರ್ಗ ಸಿಕ್ಕಿದಷ್ಟು ಖುಷಿಯಾಯಿತು....!


ನನ್ನ ಹುಡುಗಿ ನನಗೆ ಮಾತನಾಡಲು ಸಿಗುತ್ತಾಳಲ್ಲ...!


ವಾಹ್..!


"ಹುಡುಗಿ...
ನಾನು ಫೋನ್ ಮಾಡಬಹುದಾ?"


"ಮಾಡು..
ಸಾಯಂಕಾಲ ಮಾತ್ರ... 
ನಾನು ಆಫೀಸಿನಿಂದ  ಬಂದಮೇಲೆ..."


ನಿಜ ಹೇಳ್ತಾ ಇದ್ದೀನಿ..
ಆಡುವ ಮಾತುಗಳು ಇಷ್ಟು ಅಪ್ಯಾಯಮಾನವಾಗಿರುತ್ತವೆ ...
ಅಂತ ನನಗೆ ಗೊತ್ತಾಗಿದ್ದು ಆವಾಗಲೇ...


ನಾವಿಬ್ಬರೂ ಹರಟಿದೆವು.... ಓಡಾಡಿದೆವು...
ಸಿನೇಮಾ ನೋಡಿದೆವು...


ಪಾರ್ಕಿನ ಮೂಲೆಯಲ್ಲಿ ಕುಳಿತು ನನ್ನ ಹುಡುಗಿ ನನಗಾಗಿ ಹಾಡು ಹಾಡುತ್ತಿದ್ದಳು...
ನನ್ನಿಷ್ಟದ ಹಾಡುಗಳು... !!


"ತುಮ್ ಸೆ.. ನಾರಾಜ್ ನಹೀ...ಜಿಂದಗೀ...
ಹೈರಾನು ಹೂಂ... ಮೈ ಪರೇಶಾನು ಹೂಂ...


ತೆರೆ ಮಾಸೂಮ್ ಸವಾಲೋ ಸೆ  ಪರೆಶಾನೂ ಹೂಂ..."


ಅವಳ ಧ್ವನಿ ಬಲು ಇಂಪು....


ಅವಳು ನನ್ನ ಪ್ರತಿಮಾತಿಗೂ ನಗುತ್ತಿದ್ದಳು...
ನಗುವಾಗ ಅವಳ ಕಣ್ಣುಗಳು ಮುಚ್ಚುತ್ತಿದ್ದವು...


ಅವಳ ಜೊತೆಯಲ್ಲಿ ಏನೇನೋ ಕನಸು ಕಂಡೆ...!
ಅವಳನ್ನು ದೂರದಿಂದ ಕಣ್ಣು ತುಂಬಿಸಿಕೊಳ್ಳುತ್ತಿದ್ದೆ...

ಅವಳು ನನಗೆ ಮತ್ತಷ್ಟು ಇಷ್ಟವಾದಳು... 
ಹತ್ತಿರವಾದಳು...


ವರುಷ ಕಳೆದು ಹೋಯಿತು....


"ಹುಡುಗಾ...
ನಿನ್ನೆ ನನ್ನ ಅಪ್ಪ ....
ನನ್ನ ಮದುವೆಯ ಬಗೆಗೆ ಮಾತನಾಡಿದ..
ನನಗೆ ಗಂಡು ಹುಡುಕುತ್ತಾನಂತೆ...
ನಾನು ನಿನ್ನ ಬಗೆಗೆ ಹೇಳಿಲ್ಲ...


ದಯವಿಟ್ಟು ನೀನು ನಿನ್ನ ಅಪ್ಪನೊಡನೆ ಮಾತನಾಡು...


ನಮ್ಮ ಮದುವೆಯ ಬಗೆಗೆ ಮಾತಾಡು..
ನಮ್ಮ ಸಂಭಂಧಕ್ಕೊಂದು  ಹೆಸರು ಕೊಡು..
ಭದ್ರತೆ  ಕೊಡು.."


"ಹುಡುಗಿ..
ನಿನಗೆ ನಾನು ಇಷ್ಟನಾ?


ನಾನು ಪ್ರೀತಿಸಿದ ಹಾಗೆ ...
ನೀನೂ ನನ್ನನ್ನು  ಪ್ರೀತಿಸುತ್ತೀಯಾ?"


"ಹೌದು ಕಣೋ...


ನನ್ನ ಪ್ರೀತಿ ನನ್ನ ಕಣ್ಣಲ್ಲಿದೆ.. ಗೊತ್ತಾಗಲಿಲ್ಲವಾ?


ಹುಚ್ಚು ಹುಡುಗ ನೀನು...!


ನಿನ್ನ ಸಭ್ಯತೆ... ವಿನಯ...
ಸಂಯಮ...
ನೀನು ದೂರದಿಂದ ನನ್ನನ್ನು ಪ್ರೀತಿಸುವ ರೀತಿ..
ನಿನ್ನ ಪ್ರೀತಿತುಂಬಿದ ಕಣ್ಣುಗಳು ನನಗಿಷ್ಟ ಕಣೊ...


ನಿನ್ನೊಂದಿಗೆ ನನ್ನ ಬದುಕು ಸಂತಸವಾಗಿರುತ್ತದೆ...
ನನ್ನ ಬದುಕಿನ ಭರವಸೆ ನೀನು...


ದಯವಿಟ್ಟು ನಮ್ಮ ಮದುವೆಯ ಪ್ರಸ್ತಾಪ ನಿನ್ನಪ್ಪನೊಡನೆ ಮಾಡು..."


"ಹುಡುಗಿ...
ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅಂತ ನನಗೇ ಗೊತ್ತಿಲ್ಲ...


ನಿನ್ನ ನೋಟ,,.. ಧ್ವನಿ... ಪ್ರೀತಿ... ಎಲ್ಲವನ್ನೂ..
ಇಷ್ಟು ವರ್ಷ ನನ್ನ ಹೃದಯದಲ್ಲಿ ತುಂಬಿಟ್ಟುಕೊಂಡಿದ್ದೇನೆ...


ನಿನ್ನ ಪ್ರೀತಿಯನ್ನು ನಿನ್ನೊಡನೆ ಮಾತನಾಡದೇ ಅನುಭವಿಸಿದ್ದೇನೆ...


ಮಾತಾನಾಡಿಯೂ ಅನುಭವಿಸಿದ್ದೇನೆ...
ನಿನ್ನ ಪ್ರೀತಿಯನ್ನು ನನ್ನೆದೆಯೊಳಗೆ ಪೂಜಿಸಿದ್ದೇನೆ..


ನಿನ್ನಂಥಹ ಹುಡುಗಿ ನನ್ನ ಸಂಗಾತಿಯಾಗುವದು ಎಷ್ಟೋ ಜನ್ಮದ ಪುಣ್ಯ..."


ನನಗೆ ಮುಂದೆ ಮಾತನಾಡಲಾಗಲಿಲ್ಲ...
ಗಂಟಲು ಉಬ್ಬಿ ಬಂತು...


"ಹುಡುಗಾ ..
ಏನಾಯ್ತೋ.....?
ನಾನು ನಿನ್ನವಳು... 
ಇಬ್ಬರೂ ಮದುವೆಯಾಗೋಣ.. ಚಿಂತೆ ಮಾಡಬೇಡ..."


ಹುಡುಗಿ ನನ್ನ ತಲೆ ಸವರಿದಳು...


"ಹುಡುಗಿ...
ಮದುವೆಯಾಗಿ  ವಾಸ್ತವದ ಬದುಕಿನಲ್ಲಿ ನನ್ನ ಪ್ರೀತಿಯನ್ನು ಸಾಯಿಸುವದು ನನ್ನಿಂದ ಆಗದು...
ಸಂಸಾರದ ಜಂಜಾಟದಲ್ಲಿ ನಾವು ಜಗಳಕಾದು...
ಕೂಗಾಡುವದು.. ರೇಗಾಡುವದು ನನ್ನಿಂದಾಗದು...


ನಮ್ಮ ಪ್ರೀತಿ ಹೀಗೆಯೇ ಇರಲಿ...


ನಿನ್ನಪ್ಪ ನಿನಗೊಂದು ವರ ಹುಡುಕುತ್ತಾನೆ ಅವನನ್ನು ಮದುವೆಯಾಗು...
ನನಗೂ ಒಬ್ಬಳು ಮಡದಿಯಾಗಿ ಬರುತ್ತಾಳೆ...


ನಮ್ಮ ಪ್ರೀತಿಯನ್ನು ಬಚ್ಚಿಟ್ಟುಕೊಂಡು...
ಆಗಾಗ ತೆರೆದು ಅನುಭವಿಸೋಣ...


ಎಲ್ಲ ಸಂಬಂಧಗಳು... ಬಾಂಧವ್ಯಗಳು...
ಪ್ರೀತಿ..
ಪ್ರೇಮ ದೂರದಿಂದಲೇ ಚಂದ ...
ಸುಂದರ...ಕಣೆ...


ಇಷ್ಟೆಲ್ಲಾ ಕನಸು ಕೊಟ್ಟ 
ನೀನು...
ನಿನ್ನ ಪ್ರೀತಿ ನನ್ನೊಡನೆ ಯಾವಾಗಲೂ ಹೀಗೆಯೇ ಇರಲಿ...

ನಾವು ಮದುವೆಯಾಗುವದು ಬೇಡ.. ಕಣೆ...
ಬೇಡ..."


ಹುಡುಗಿ ಮಾತನಾಡಲಿಲ್ಲ...


ನನಗೆ ...... 
ನನ್ನ ಹುಡುಗಿಯ ಹುಡುಗಿಯ ಮುಖ ನೋಡಬೇಕಿತ್ತು...


ಹುಡುಗಿ ಸರಿಯಾಗಿ ಕಾಣಿಸುತ್ತಿರಲಿಲ್ಲ...
ಮಂಜು ಮಂಜಾಗಿತ್ತು.....

ನನ್ನ ಕಣ್ಣಂಚಲ್ಲಿ  ನೀರಿತ್ತು....




( ಚಂದದ ಪ್ರತಿಕ್ರಿಯೆಗಳು... 
ಪ್ರೀತಿ ಬಗೆಗಿನ ಸಂವಾದ ಚೆನ್ನಾಗಿದೆ...
ದಯವಿಟ್ಟು ನೋಡಿ....)

Sunday, September 18, 2011

ರೀತಿ...


ನನ್ನ ಅಪ್ಪನ ಬಗೆಗೆ ನಿಮಗೆ ಗೊತ್ತಿಲ್ಲ..


ತುಂಬಾ ಹಠದ ಸ್ವಭಾವದವನು..
ಅವನ ಮಗಳಾದ ನಾನೂ ಕೂಡ ಹಾಗೇನೆ..
ಅಪ್ಪ , ಅಮ್ಮರ ಮುದ್ದಿನ ಮಗಳು ನಾನು.. 
ನನ್ನ ಎಲ್ಲ ಬೇಕು ಬೇಡಗಳನ್ನು ನನ್ನ ಅಪ್ಪ, ಅಮ್ಮ ಗೌರವಿಸಿದರು..
ಎಲ್ಲವನ್ನೂ... ನನ್ನ ಇಚ್ಛೆಯಂತೆ ಬೆಳೆಸಿದ್ದಾರೆ..


ಮತ್ತೇನು ಸಮಸ್ಯೆ ಅಂತೀರಾ?


ನನ್ನಪ್ಪ ನನಗೆ ಮದುವೆ ಗಂಡು ಹುಡುಕುತ್ತಿದ್ದಾರೆ...


"ಅಪ್ಪಾ..
ನನ್ನಿಷ್ಟದ ಗಂಡು ನನಗೆ ಬೇಕು..
ನನ್ನ ಸ್ವಭಾವ, ರುಚಿಗಳಿಗೆ ಹೊಂದಿಕೊಳ್ಳುವಂಥಹ ಗಂಡು ನನಗೆ ಬೇಕು..
ನನ್ನ ಗಂಡ ಹೇಗಿರ ಬೇಕು ಅಂತ ನನ್ನದೇ.. ಆದ ಕನಸುಗಳಿವೆ..


ಇದು ನನ್ನ ಮದುವೆ..
ಗಂಡನನ್ನೂ ನಾನೇ ಹುಡುಕಿಕೊಳ್ಳುತ್ತೇನೆ..."


ಅಪ್ಪ ಒಪ್ಪಲಿಲ್ಲ..


"ಮಗಳೆ..
ಪ್ರೇಮ ವಿವಾಹ ಯಶಸ್ಸು ಕಾಣುವದು ಕಷ್ಟ.."


" ಯಾಕೆ ಹಾಗೆ..? 
ಅರೇಂಜ್ ಮದುವೆ ಹೇಗೆ ಯಶಸ್ಸಾಗುತ್ತದೆ..?
ಇದೆಲ್ಲ ನಾನು ಒಪ್ಪೋದಿಲ್ಲ ಅಪ್ಪಾ..."


"ಮಗಳೆ..
ಅರೇಂಜ್ ಮದುವೆಗಳಲ್ಲಿ ಗಂಡು, ಹೆಣ್ಣು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆರೆಂಟು ತಿಂಗಳಾಗಿರುತ್ತದೆ..
ಯೌವ್ವನದ ಬಿಸಿ....
ಅಷ್ಟರಲ್ಲಿ ಮಕ್ಕಳಾಗಿ ಬಿಡುತ್ತದೆ..
ಮಗುವನ್ನು ದೊಡ್ಡ ಮಾಡುತ್ತಿದ್ದಹಾಗೆ ಪರಸ್ಪರ ಹೊಂದಾಣಿಕೆ ಅನಿವಾರ್ಯವಾಗುತ್ತದೆ..


ಇಂಥಹ ಅನಿವಾರ್ಯತೆಗಳು ಪ್ರೀತಿಯನ್ನು ಬೆಳೆಸಿ ....
ದಾಂಪತ್ಯ ಯಶಸ್ವಿಯಾಗುತ್ತದೆ....."


ಅಪ್ಪ ಹೇಳಿದ್ದು ಹೌದಾಗಿರಬಹುದು...


"ಅಪ್ಪಾ...
ಸರಿ... 
ನೀನೇ ಗಂಡು ಹುಡುಕು...
ಮದುವೆಗೆ ಮೊದಲು ನೀನು ಹುಡುಕಿದ ಗಂಡಿನೊಡನೆ ನನಗೆ ಮುಕ್ತವಾಗಿ ಮಾತನಾಡಲು ಬಿಡು..
ಮದುವೆ  ನಂತರ ಬದುಕುವವರು ನಾವು...
ಹಾಗಾಗಿ..
ಮದುವೆಗೆ ಮುನ್ನ  ಹುಡುಗನನ್ನು ಅರ್ಥ ಮಾಡಿಕೊಳ್ಳುವದು ಅತ್ಯವಶ್ಯ...."


ಅಪ್ಪ ಗಂಡು ಹುಡುಕತೊಡಗಿದ..
ಹುಡುಕಿಯೂ ಬಿಟ್ಟ..
ಹುಡುಗ ನನ್ನನ್ನು ಒಪ್ಪಿಯೂ ಬಿಟ್ಟ..


ನಮ್ಮಿಬ್ಬರ ಭೇಟಿಯೂ ನಿಶ್ಚಯವಾಯಿತು..


"ನೋಡಿ..
ನಾನು ಪುರುಷ ಸಮಾಜ ಬಯಸುವಂಥಹ ಹೆಣ್ಣು ನಾನಲ್ಲ..
ನಾನೂ ಕೆಲಸ ಮಾಡುತ್ತೇನೆ.. ಗಳಿಸುತ್ತೇನೆ..
ಮನೆಗೆ ಬಂದ ಮೇಲೆ ಒಬ್ಬಳೇ ...
ಅಡಿಗೆ ಕೆಲಸ ಮಾಡ ಬೇಕೆಂದರೆ ನನ್ನಿಂದ ಆಗುವದಿಲ್ಲ..


ಬಚ್ಚಲು ಮನೆಯಲ್ಲಿ ...
ನಿಮ್ಮ ಒಳ ಚಡ್ಡಿಯನ್ನು ತೊಳೆಯುವಂಥಹ ಹೆಂಡತಿ ನಾನಾಗಲಾರೆ.."


" ಇದನ್ನು ನಾನೂ ಒಪ್ಪುತ್ತೇನೆ..
ನನ್ನ ಅಪ್ಪ, ಅಮ್ಮ ..ನನ್ನನ್ನೂ.. ಮುದ್ದಿನಿಂದ ಬೆಳೆಸಿದ್ದಾರೆ...
ಆದರೆ..
ಅಡಿಗೆ ಕೆಲಸ ನನಗೂ ಗೊತ್ತು.. ನನ್ನಮ್ಮನಿಗೆ ನಾನು ಸಹಾಯ ಮಾಡುತ್ತೇನೆ..
ಗಂಡ ಹೆಂಡತಿಯೆಂದರೆ ಮೇಲು ಕೀಳುಗಳಿಲ್ಲ..
ಇಬ್ಬರೂ ಸಮಾನರು..
ಇಬ್ಬರೂ ಸ್ನೇಹಿತರಂತೆ ಇರಬೇಕು..."


ಹುಡುಗ ನನಗೆ ಇಷ್ಟವಾಗತೊಡಗಿದ..
ಚಿಗುರು ಮೀಸೆಯ ಹುಡುಗ ಬೆಳ್ಳಗೂ ಇದ್ದ...


ಹುಡುಗನ ಬಗೆಗೆ ನನಗೆ ಇನ್ನೂ ತಿಳಿದುಕೊಳ್ಳಬೇಕಿತ್ತು...
ಅವನ ನೀಲಿ ಕಣ್ಣುಗಳನ್ನೇ ನೋಡುತ್ತ ಕೇಳಿದೆ..


" ನಿಮ್ಮ ಸ್ವಭಾವದ ಬಗೆಗೆ ಹೇಳಿ.."


"ನನ್ನ ಸ್ವಭಾವ ತುಂಬಾ ಒಳ್ಳೆಯದು..


ಪ್ರತಿಯೊಬ್ಬರೂ ಹೀಗೇಯೇ ಹೇಳುತ್ತಾರೆ..
ಮಾತನಾಡುವಾಗ ನಾವು ಏನು ಅಲ್ಲವೋ ಅದನ್ನು ನಾವು ಹೇಳುತ್ತೇವೆ..
ಹಾಗಾಗಿ ಮಾತು ಕೇಳುವಾಗ..
"ಏನು ಹೇಳುತ್ತಾರೋ ಅದನ್ನು ಕೇಳಬಾರದು..
ಅವರು ಏನು ಹೇಳುತ್ತಿಲ್ಲವೋ ಅದನ್ನು ಕೇಳಬೇಕು"
ಇದು ನನ್ನ ಅನುಭವ.."


"ಅಂದರೆ ಏನು ಅರ್ಥ..?"


"ನೋಡಿ..


ಮದುವೆಗೆ ಮುನ್ನ ಎಲ್ಲವು ಬಣ್ಣ ಬಣ್ಣದ ಮಾತುಗಳು...
ಅವುಗಳ ಸತ್ಯದ ಬಣ್ಣ ಮದುವೆಯ ನಂತರ ಗೊತ್ತಾಗುತ್ತದೆ..


ಮದುವೆಗೆ ಮುನ್ನ ಏನೆಲ್ಲ ಮಾತನಾಡಿದರೂ..
ಮದುವೆಯಾದ ಮೇಲೆ ಪರಸ್ಪರ ಹೊಂದಾಣಿಕೆ..
ವಿಶ್ವಾಸ ಬಹಳ ಮುಖ್ಯ..
ನಿಮಗಾಗಿ ನಾನು ..
ನನಗಾಗಿ ನೀವು  ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು...


ಮದುವೆಯೆಂದರೆ " ನಮ್ಮದಲ್ಲದ ಅಪರಿಚಿತ ಸ್ವಭಾವದೊಡನೆ ಹೊಂದಾಣಿಕೆ ಮಾಡಿಕೊಳ್ಳುವದು"
ನಾವು ಎಷ್ಟು ಅಡ್ಜಸ್ಟ್ ಆಗುತ್ತೇವೋ ಅಷ್ಟರ ಮಟ್ಟಿಗೆ ದಾಂಪತ್ಯ ಯಶಸ್ಸಾಗುತ್ತದೆ..
ಹಾಗೆಯೇ ಪರಸ್ಪರ ವಿಶ್ವಾಸ..
ಇಬ್ಬರೂ ದುಡಿಯುವದರಿಂದ ನಂಬಿಕೆ ಬಹಳ ಮುಖ್ಯ.."


ಹುಡುಗ ಚಂದವಷ್ಟೇ ಅಲ್ಲ.. ಬುದ್ಧಿವಂತ ಕೂಡ...


ಹುಡುಗನನ್ನು ಇನ್ನೂ ಮಾತನಾಡಿಸಬೇಕು ಅನ್ನಿಸಿತು...


"ನೀವು... ನನ್ನಲ್ಲಿ ಏನನ್ನು ಇಷ್ಟ ಪಟ್ಟಿದ್ದೀರಿ..?"


ಹುಡುಗ ಸ್ವಲ್ಪ ನಾಚಿ ಕೆಂಪಗಾದ..
ತಡವರಿಸಿದ..


"ನನಗೆ....
ನಿಮ್ಮ ತುಂಬು ಕೆನ್ನೆ.. ಕೆನ್ನೆಯ ಮೇಲಿನ ಮಚ್ಚೆ..
ನಿಮ್ಮ ಮುಗುಳು ನಗೆ...
ಕೆನ್ನೆಯ ಮೇಲಿನ ಮಚ್ಚೆಯ ಹುಡುಗಿಯನ್ನು ನಾನು ಹುಡುಕುತ್ತಿದ್ದೆ..


ನನ್ನ ಅದೃಷ್ಟ ನೀವು ಸಿಕ್ಕಿದ್ದೀರಿ..."


ನನಗೂ ನಾಚಿಕೆಯಾಯಿತು.. ಒಳಗೊಳಗೆ ಖುಷಿಯೂ ಆಯಿತು..


ಸರಿ .. ಇನ್ನೇನು..?


ಮದುವೆ ನಿಶ್ಚಯವಾಯಿತು.. 


ಎಷ್ಟೆಲ್ಲ ಸಡಗರ.. ಸಂಭ್ರಮದ ನಡುವೆ..
ಹೆದರಿಕೆಯ ಢವ ಢವದೊಡನೆ  ಮದುವೆಯೂ ಆಯಿತು...!!


ಮೊದಲ ರಾತ್ರಿಯ ಸನ್ನಿವೇಶಗಳನ್ನು ...
ಸಿನೇಮಾದಲ್ಲಿ ನೋಡಿದ್ದೆ...


ಇಂದು ಆ ಅನುಭವ ನನ್ನದಾಗಲಿದೆ !!


ಏನೋ ಒಂದು ರೀತಿಯ ಥ್ರಿಲ್ಲು...!
ಗಂಡು ಬೀರಿಯಾದ ನನಗೂ ಹೆದರಿಕೆ.. 
ನಾಚಿಕೆ.. ಆತಂಕ.. ಆಗತೊಡಗಿತು...


ಹುಡುಗ ನನ್ನ ಹತ್ತಿರ ಬಂದ..
ನನಗೆ ಹೇಗೋ ಹೇಗೋ ಆಯಿತು....
ಕೈ ಕಾಲು ಬೆವರ ತೊಡಗಿತು...


ಎಷ್ಟೆಂದರೂ ಗಂಡಿನ ಮೊದಲ ಸ್ಪರ್ಷ...! 
ರೋಮಾಂಚನ... !


ಹುಡುಗ ನನ್ನ ಕೆನ್ನೆ ಮುಟ್ಟಿದ...
ಕೆನ್ನೆಯ ಮೇಲಿನ ಮಚ್ಚೆಯನ್ನು ಮೃದುವಾಗಿ ಸವರಿದ..


ನನ್ನ ಕೆನ್ನೆಯ ಕಪ್ಪು ಮಚ್ಚೆಯ ಬಗೆಗೆ ನನಗೆ ಹೆಮ್ಮೆಯಾಯಿತು...


" ನೀನು..
ನಿನ್ನ ಕೆನ್ನೆ... ಈ ಮಚ್ಚೆ ನನಗೆ ಬಲು ಇಷ್ಟ.. ಕಣೆ..."


ಹುಡುಗ ಕಿವಿಯಲ್ಲಿ ಉಸುರಿದ...
ಮೈ ಬಿಸಿಯಾಗ ತೊಡಗಿತು...


ಒಂದು ವಿಷಯ ಕೇಳಲು ಮರೆತು ಬಿಟ್ಟಿದ್ದೆ...
ನಡುಗುವ ಧ್ವನಿಯಲ್ಲಿ..


" ಒಂದು ವಿಷಯ ಕೇಳಲಾ...?"


"ಕೇಳು..ಪುಟ್ಟಣ್ಣಿ.."


ಅವನು ಪುಟ್ಟಣ್ಣಿ.. ಅಂತ ಕರೆದದ್ದು ಇಷ್ಟವಾಯಿತು... 
ಅಪ್ಯಾಯಮಾನವಾಯಿತು...


"ನೋಡಿ..
ನೀವೂ ಕೂಡ ತುಂಬಾ ಚಂದವಿದ್ದಿರಿ..
ಮದುವೆಗೆ ಮುನ್ನ ಯಾವುದಾದರೂ ಗೆಳತಿ ಇದ್ದಳಾ...?"


"ಛೇ.. ಛೇ... ನಾನು ಅಂಥವನಲ್ಲ..."


"ನಿಮ್ಮ ಕಾಲೇಜಿನಲ್ಲಿ..."


"ನಾನು ನಾಚಿಕೆ ಸ್ವಭಾವದವನು..
ಕಾಲೇಜಿನ ದಿನಗಳಲ್ಲಂತೂ ಪುಸ್ತಕದ ಹುಳುವಾಗಿದ್ದೆ..
ರಾಜ್ಯಕ್ಕೆ ನಾನು ಎರಡನೆ Rank   ಗೊತ್ತಾ...?"


ನೀಲಿ ಕಣ್ಣಿನ ಹುಡುಗನ ಧ್ವನಿ ಕೇಳಲು  ಇಷ್ಟ...


"ನಿಮ್ಮ ಆಫೀಸಿನಲ್ಲಿ ಚಂದದ ಹುಡುಗಿಯರು ಇಲ್ವಾ?"


"ಇದ್ದಾರೆ..
ಆದರೆ ನನ್ನ ಕೆಲಸ ನನಗೆ ಬಹಳ ಮುಖ್ಯ...
ಆಫೀಸಿನಲ್ಲಿ ನಾನು ಬಹಳ ಕಠಿಣವಾಗಿರುತ್ತೇನೆ"


"ನಿಮ್ಮ ಸಂಬಂಧಿಕರಲ್ಲಿ.. ಅಂದದ ಹುಡುಗಿಯರು ಇಲ್ವಾ?"


"ಹಾಂ...
ಒಬ್ಬಳಿದ್ದಾಳೆ..
ನನ್ನ ಅತ್ತಿಗೆಯ ತಂಗಿ.."


ನನಗೆ ಕುತೂಹಲ... !!


" ಹೇಗಿದ್ದಾಳೆ..??"


" ಚಂದ ಇದ್ದಾಳೆ...
ಒಂದು ವಿಷಯ ಹೇಳಿ ಬಿಡುತ್ತೇನೆ...
ಅವಳಿಗೂ ನಿನ್ನ ಹಾಗೆಯೇ..
ಕೆನ್ನೆ ಮೇಲೆ ಮಚ್ಚೆಯಿದೆ..
ನನ್ನ ಅದೃಷ್ಟ.. ಕೆನ್ನೆ ಮಚ್ಚೆಯ ಹುಡುಗಿಯೇ ನನಗೆ ಸಿಕ್ಕಿದ್ದಾಳೆ..."


ಹೌದಾ... !!
ಅಬ್ಭಾ ಗಂಡಸೆ.. !!
ನನಗೆ ಅನುಮಾನ ಬರತೊಡಗಿತು...!


"ಅವಳು ಮದುವೆಗೆ ಮುನ್ನ ನಿಮ್ಮನೆಗೆ ಬರುತ್ತಿದ್ದಳಾ?"


"ಬರುತ್ತಿದ್ದಳು..."


"ನೀವಿಬ್ಬರೇ ಏಕಾಂತದಲ್ಲಿ ಭೇಟಿಯಾಗಲಿಲ್ವಾ?"


"ಛೇ.. ಛೇ.. ಹಾಗೇನಿಲ್ಲ"


"ಅದು ಹೇಗೆ ಸಾಧ್ಯ..?
ಸಂಬಂಧಿಕರೆಂದ ಮೇಲೆ ಭೇಟಿಯಾಗಿರಬೇಕಲ್ಲವೆ?"


"ಅವಳಿಗೆ ...
ಅತ್ತಿಗೆಯ ಮದುವೆಯಾಗುವ ಮೊದಲೆ ನಿಶ್ಚಯವಾಗಿತ್ತು...
ನನ್ನ ಅತ್ತಿಗೆಯ  ಮದುವೆಯಾಗಿ ಆರು ತಿಂಗಳಲ್ಲಿಯೇ ಅವಳ ಮದುವೆಯೂ ಆಯಿತು.."


"ಅವಳಿಗ ಎಲ್ಲಿದ್ದಾಳೆ...? ಏನು ಮಾಡುತ್ತಾಳೆ...?"


" ಅವಳೂ ಕೆಲಸ ಮಾಡುತ್ತಾಳೆ.. 
ನಮ್ಮ ಆಫೀಸಿನ ಪಕ್ಕದ ಬಿಲ್ಡಿಂಗಿನಲ್ಲಿ ಅವಳ ಆಫೀಸಿದೆ.."


ನನಗೆ ಕೋಪ ಬರತೊಡಗಿತು...


ಇವರಿಬ್ಬರೂ ದಿನಾಲೂ ಭೇಟಿಯಾಗ ಬಹುದಲ್ವಾ?.. 


ಛೇ..!!


"ಇದನ್ನೆಲ್ಲ.... ನೀವು ಮೊದಲೇ ಯಾಕೆ ಹೇಳಲಿಲ್ಲ..?"


"ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ..?


ಅವಳ ಚಂದ ಇಷ್ಟಪಟ್ಟೆ ಅಷ್ಟೆ... 
ಬಯಸಲಿಲ್ಲ..
ನಾನು ಇಷ್ಟಪಟ್ಟು ಬಯಸಿದ್ದು ನಿನ್ನನ್ನು...
ಪ್ರೀತಿಸ್ತಾ ಇರೋದು ನಿನ್ನನ್ನು..."


" ಇದನ್ನು ನಾನು ಹೇಗೆ ನಂಬಲಿ...? "


ನನ್ನನ್ನು ಹಿಡಿದುಕೊಂಡಿದ್ದ ಕೈಗಳು ಸಡಿಲವಾಗತೊಡಗಿತು..
ಹುಡುಗನ ಧ್ವನಿ ಗಡುಸಾಯಿತು... 
ಬಹಳ ಕಠಿಣವಾಗಿ ಹೇಳಿದ...


"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ.. 
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."


ಆತ ...
ಮುಖತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...


ನನಗೂ.. ಅಸಾಧ್ಯ ಕೋಪ ಬಂತು..

ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...








(ಇದು ಕಥೆ...

ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ... ಚೆನ್ನಾಗಿವೆ...)



Thursday, August 25, 2011

ಅಜ್ಜಾ.. ನೀನು ಗಾಂಧಿ ತಾತ ಅಲ್ಲ...!


ಪ್ರೀತಿಯ ಅಜ್ಜಾ..


ನಿನ್ನ ಕಂಡರೆ ಯಾಕಿಷ್ಟು ಅಕ್ಕರೆ ಹುಟ್ಟಿದೆ..?
ಗೊತ್ತಿಲ್ಲ...


ನನ್ನ ಮಗನಿಗೆ ..
"ನೀನು ಭಗತ್ ಸಿಂಗ್ ನಂತಾಗು...
ಸುಭಾಸ್ ಚಂದ್ರನಂತಾಗು.. ಗಾಂಧಿತಾತನಂತಾಗು.." ಅಂತೆಲ್ಲ ಹೇಳುತ್ತಿದ್ದೆ..


ಸ್ವಲ್ಪ ದೊಡ್ಡವನಾದ ಹಾಗೆ ಅವರ ಬಗೆಗಿನ ಪುಸ್ತಕವನ್ನು ತಂದು ಕೊಡುತ್ತಿದ್ದೆ..


ಒಂದು ದಿನ ನನ್ನ ಮಗ ನನ್ನನ್ನು ಕೇಳಿದ..


"ಅಪ್ಪಾ..
ಭಗತ್ ಸಿಂಗ್..ಗಾಂಧಿಯವರೆಲ್ಲ ಹಳಬರು...
ನೀನೂ ಸಹ ನೋಡಿಲ್ಲ...


ಈಗಿನವರು ಯಾರೂ ಇಲ್ಲವಾ ಒಳ್ಳೆಯ ನಾಯಕರು  ?


ನಮ್ಮದೇಶದ ಪ್ರಧಾನ ಮಂತ್ರಿಗಳು..
ವಿರೋಧ ಪಕ್ಷದ ನಾಯಕರು... 
ಯಾರೂ ಒಳ್ಳೆಯವರು ಇಲ್ಲವಾ ಅಪ್ಪಾ?"


ಏನು ಹೇಳಲಿ...?
ನಾನು ನಿರುತ್ತರನಾಗಿದ್ದೆ..


ನನಗೆ ಈಗ ಉತ್ತರ ಸಿಕ್ಕಿದೆ...!! ಇಷ್ಟು ದಿನ ಎಲ್ಲಿದ್ದೆ  ಅಜ್ಜಾ...?


ನನ್ನ ಮುದ್ದು ಅಜ್ಜಾ...


ಯಾಕೆ ಉಪವಾಸ ಮಾಡುತ್ತೀಯಾ...?


ಈ ದೇಶದ ಬಗೆಗಾ? ..
ನಮ್ಮ ಮುಂದಿನ ಭವಿಷ್ಯದ ಬಗೆಗಾ?....


ಬೇಡ ಅಜ್ಜಾ...


ನಾವು ಈಗ ಸಂತೃಪ್ತಿಯಿಂದ ಇದ್ದೇವೆ..
ಈಗಿನ ವಾತಾವರಣಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ಹೊಂದಿಕೊಂಡಿದ್ದೇವೆ...


ಬೇಡ ಅಜ್ಜಾ.. ನಮಗಾಗಿ ಉಪವಾಸ ಮಾಡಬೇಡ...


ಹಿಂದೆ ಗಾಂಧಿತಾತ ಉಪವಾಸ ಸತ್ಯಾಗ್ರಹ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು...


ಅಜ್ಜಾ.. 
ನೀನು ಗಾಂಧಿ ತಾತ ಅಲ್ಲ...! 


ನಿನ್ನನ್ನು "ಗಾಂಧಿತಾತನಂತೆ"  ನೋಡುವ ಯೋಗ್ಯತೆಯೂ ನಮಗಿಲ್ಲ..
ನೋಡುವದೂ ಇಲ್ಲ..!

ನನ್ನ ಮುದ್ದು ಪುಟಾಣಿ ಅಜ್ಜ..

ನಮ್ಮನ್ನೆಲ್ಲ ಒಡೆದು ಬಿಟ್ಟಿದ್ದಾರೆ ..

ನಮ್ಮ ಜಾತಿ ...
ಭಾಷೆ ಹೆಸರಲ್ಲಿ... ಮತ ಧರ್ಮದ..
ಸಿದ್ಧಾಂತದ  ಹೆಸರಲ್ಲಿ ಒಡೆದು ಚೂರು ಚೂರಾಗಿ ಹೋಗಿದ್ದೇವೆ..


ಅಯ್ಯೋ ಅಜ್ಜಾ...
ನಿನ್ನ ತತ್ವಗಳ,  ನೀತಿಗಳ .. ದಿನಾಂಕ  ಮುಗಿದಿದೆ..
ಮುಂಬೈ ಸಿನೆಮಾಗಳ ...
ಅಲ್ಲಿನ ಥಳುಕಿನ ನಟರ ದೇಶ ಭಕ್ತಿ....
ಸಾಹಸ ನಮಗಿಷ್ಟ.. ಅದರ ಬಗೆಗೆ ನಮ್ಮ ಚಿಂತನೆ...!

ಮತ್ತೆ ದೇಶದ ಹೆಸರಲ್ಲಿ ನಮ್ಮನ್ನು ಸೇರಿಸುವ ವ್ಯರ್ಥ ಪ್ರಯತ್ನ ಮಾಡಬೇಡ..


ನಾವೆಲ್ಲಾ ಒಡೆದ ಮನಸ್ಸಿನವರು... ಮತ್ತೆ ಒಂದಾಗುವ ಆಸೆ ನಮಗಿಲ್ಲ....

ಒಡೆದ ಮನಸ್ಸುಗಳಲ್ಲಿ... ...
ಒಂದು ತರಹದ ವಿಲಕ್ಷಣ ಸಂತೋಷವನ್ನು ಅನುಭವಿಸುತ್ತಿದ್ದೇವೆ...

ನಮ್ಮ ಖುಷಿಗೆ  ಅಡ್ಡಿ ಪಡಿಸಬೇಡ...

ಆ ಗಾಂಧಿತಾತನಿಗೆ  ಒಂದು ಪಕ್ಷವಿತ್ತು..
ಹಣವಿರುವವರ ಬೆಂಬಲವಿತ್ತು..
ದೇಶದ ತುಂಬಾ ಒಂದು ಸಂಘಟನೆ ಇತ್ತು....


ಮುಂದಿನ ಪ್ರಧಾನ ಮಂತ್ರಿ ಯಾರಾಗ ಬಹುದೆಂದರೆ ಆ ತಾತನ ಬಳಿ ಉತ್ತರ ಸಿದ್ಧವಿತ್ತು..


ಮುದ್ದು ಅಜ್ಜಾ...


ನಿನ್ನ ಬಳಿ ಏನಿದೆ?...


ನಿನ್ನ ಹತ್ತಿರ ಮುಂದಿನ ....
"ಪ್ರಧಾನ ಮಂತ್ರಿ ಸ್ಥಾನಕ್ಕೆ ಯೋಗ್ಯ ರಾಜಕೀಯ  ಉಮೇದುವಾರ " ಇದ್ದಾನೆಯೇ..?..

ನನ್ನ ಪುಟ್ಟು ಅಜ್ಜಾ ಯಾವುದೋ ಭ್ರಮೆ ಬೇಡ...


ಸತ್ಯ.., 
ಅಹಿಂಸೆಯೆಲ್ಲ ಇಂದಿನ ಭಾರತಕ್ಕೆ ಅಲ್ಲ...!
ಇಂದಿನ ಸರಕಾರಕ್ಕೂ ಅಲ್ಲ...


ಅಜ್ಜಾ...


ನಿನಗೆ ಗೊತ್ತಿಲ್ಲದಂತೆ ನಿನ್ನ ಮಕ್ಕಳು.. ಮೊಮ್ಮಕ್ಕಳು...
ನಾವೆಲ್ಲಾ.. ಬದಲಾಗಿಬಿಟ್ಟಿದ್ದೇವೆ..


ಸರಿಯಾಗಲಾರದಷ್ಟು ಬದಲಾಗಿದ್ದೇವೆ..


ನೋಡುತ್ತಾ ಇರು..
ನಿನಗೂ ಒಂದು ಜಾತಿ.. ಬಣ್ಣ ಬಳಿದು..
ನಿನ್ನನ್ನೂ ....
ಒಂದು ಸಮುದಾಯದ ಬಾವುಟವನ್ನಾಗಿ ಮಾಡಿಬಿಡುತ್ತೇವೆ..


ಅಜ್ಜಾ..
ನಮಗೆ ಯಾರಿಗೂ ನಾಚಿಕೆಯಿಲ್ಲ..!


ಇಷ್ಟೆಲ್ಲ ಜನ ಬಂದರು..
ಆಂದೋಲನ ಮಾಡಿದರು ಅಂತ ಭ್ರಮೆಯಲ್ಲಿ ನೀನಿರಬೇಡ..!

ಈ ಜನರಾ...?
ಟಿವಿಯಲ್ಲಿ ತಮ್ಮ ಮುಖ ಬರುತ್ತದೆ ಅಂತ ಬಂದವರೇ ಜಾಸ್ತಿ...!

ಅಜ್ಜಾ..


ನಿನ್ನ ಬೆಂಬಲಕ್ಕೆ ನಿಂತ ಎಲ್ಲ ಮಾಧ್ಯಮದವರು...
ನಿನ್ನೆದುರಿಗೆ ಸೇರಿ ಕೂಗುವ ಜನ...
ಎಲ್ಲರೂ... ಆತ್ಮವಂಚನೆ ಮಾಡಿಕೊಳ್ಳುವವರು..


ಅಜ್ಜಾ...
ನಿನ್ನೆ ನಿನಗೆ "ಜೈಕಾರ ಹಾಕಿ" ..
ಇಂದು ನಗರ ಸಭೆಗೆ ಹೋಗಿ ನಾನು  ಕಾಸು  ಕೊಟ್ಟು ಬಂದೆ...


ಕಾಸು  ಕೊಡುವ ನನಗೂ..
ತೆಗೆದುಕೊಂಡ ಅವನಿಗೂ ...
ಸ್ವಲ್ಪವೂ ಮುಜುಗರವೂ.. ನಾಚಿಕೆಯೂ ಆಗಲಿಲ್ಲ..
ರೂಢಿಯಾಗಿಬಿಟ್ಟಿದೆ...


ನಮ್ಮ "ಆತ್ಮಸಾಕ್ಷಿಯನ್ನು"  ಸಾಯಿಸಿ...
ಇಬ್ಬರೂ ನಗುತ್ತ .. ಸ್ನೇಹಿತರಂತೆ ಇದ್ದೇವೆ..!


ಇಷ್ಟು ದೊಡ್ಡ ಪಟ್ಟಣದಲ್ಲಿ ಹೆಂಡತಿ ಮಕ್ಕಳೊಂದಿಗೆ ಬದುಕಲು ಇದು ಅಗತ್ಯ...


ಪ್ರೀತಿಯ ಅಜ್ಜಾ .... ಬೇಜಾರಾಗಬೇಡ..


ಇನ್ನು ಸರಕಾರದ ಜೊತೆ ನಿನ್ನ ಮಾತುಕತೆ..!


ತಾವು ಕುಳಿತ ಹಣ್ಣಿನ ಮರದ ರೆಂಭೆಯನ್ನು ...
ಯಾರಾದರೂ ಕಡಿಯುತ್ತಾರೆಯೇ ಅಜ್ಜಾ...?


ಅಜ್ಜಾ..
ನಮ್ಮ ಪ್ರತಿನಿಧಿಗಳು ನಾಟಕದವರು...!


ಒಪ್ಪಿಕೊಂಡಂತೆ ಮಾಡಿದರೂ... ರಂಗೋಲಿ ಒಳಗೆ ನುಸಿಯಲು ಜಾಗ ಇಟ್ಟುಕೊಂಡಿರುತ್ತಾರೆ...


ಅಜ್ಜಾ...
ನಮ್ಮ ದೇಶದ ಬ್ರಷ್ಟಾಚಾರ  ವಿದೇಶಗಳಿಂದಲೂ ಬೆಂಬಲಿತ...


ಅನೇಕ ಅಂತರರಾಷ್ಟ್ರೀಯ ಕಂಪೆನಿಗಳು ..
ನಮ್ಮ ದೇಶವನ್ನು ಉದ್ಧಾರ ಮಾಡಲು ಬಂದಿವೆ..


ನಮ್ಮ ದೇಶದ ಅನೇಕ ಗಣ್ಯರು ..!
ಅವರ ಮಕ್ಕಳು ಅದರಲ್ಲಿ ಕೆಲಸ ಮಾಡುತ್ತಾರೆ..

ನಿನ್ನ ಬಿಲ್ಲನ್ನು ಪಾಸು ಮಾಡುತ್ತೇವೆ ಎನ್ನುವ...
ಎಲ್ಲ ಪಕ್ಷದ ಎಂಪಿಗಳಿಗೆ..
ಮಂತ್ರಿಗಳಿಗೆ....
ಸಂಸತ್ತಿನಲ್ಲಿ ಬಿಲ್ಲು ಪಾಸುಮಾಡುವಾಗ...
ಅವರಿಗೆ ತಿಂದ ಲಂಚದ "ಆತ್ಮಸಾಕ್ಷಿಗೆ " ಹೇಗೆ ಮೋಸ ಮಾಡಿಕೊಳ್ಳಲು ಸಾಧ್ಯ...?

ಬಹುರಾಷ್ಟ್ರೀಯ ಕಂಪೆನಿಗಳ  ಎಂಜಲನ್ನು ..
ನಾವು ಗೌರವದಿಂದ ತಿನ್ನುತ್ತಿದ್ದೇವೆ..
ಆ ಅತಿಥಿಗಳಿಗೆ ನಾವು ಹೇಗೆ ಅಗೌರವ ತೋರಿಸಲು ಸಾಧ್ಯ...?


ಈ ಕಾನೂನು ಬಂದರೆ ಎಷ್ಟೊಂದು ಕುಟುಂಬದ ಯಜಮಾನರು ಜೈಲಿನಲ್ಲಿರಬೇಕಾಗುತ್ತದೆ..?


ಸ್ವಲ್ಪ ಯೋಚಿಸು ಅಜ್ಜಾ...ಅವರೂ ನಿನ್ನ ಮಕ್ಕಳು..!


ಅಜ್ಜಾ..
ಈಗ ಸಂಧಾನ ಮಾತುಕತೆ ಅಂತೆಲ್ಲ ನಾಟಕ ನಡೆಯುತ್ತಿದೆಯಲ್ಲ..


ತೆಪ್ಪಗೆ ಒಪ್ಪಿಕೊಂಡುಬಿಡು..
ಈ ಉಪವಾಸ.. ಅಹಿಂಸೆ.. ಸತ್ಯಾಗ್ರಹ ನಮಗೆ ಅಗತ್ಯ ಇಲ್ಲ..


ಪ್ರತಿ  ನಿತ್ಯ "ನೂರಾ ಇಪ್ಪತ್ತು ಕೋಟಿ" ಜನಕ್ಕೆ  ಹೂವಿಡುವವರಿಗೆ..
ಇನ್ನೊಂದು ಹೂ ಇಡುವದು ಕಷ್ಟವೆ?


ಅಜ್ಜಾ..


ಇದುವರೆಗೆ ಯಾರೂ ಇಡದ ...
ಒಂದು ಚಂದದ ಹೂವು ನಿನಗಿಡುತ್ತಿದ್ದಾರೆ..!


ಇಂದು ಅಲ್ಲದಿದ್ದರೆ ನಾಳೆ ಕೊಟ್ಟೆ..ಕೊಡುತ್ತಾರೆ...!


ಇಟ್ಟುಕೊ..!!


ನಾವು ಇಟ್ಟುಕೊಂಡಿದ್ದೇವೆ... ನೀನೂ ಸಹಿಸಿಕೊ..
ಕ್ರಮೇಣ ರೂಢಿಯಾಗುತ್ತದೆ...!


ಅಜ್ಜಾ..


ಇದೆಲ್ಲ ಬಿಟ್ಟು ನಮ್ಮನೆಗೆ ಬಾ..


ಶೇಂಗಾವನ್ನು ನೀರಿನಲ್ಲಿ ಬೇಯಿಸಿ ...
ಉಪ್ಪು ಖಾರ ಹಾಕಿ ಬೇಯಿಸಿಡುತ್ತೇನೆ..


ಅದನ್ನು ತಿನ್ನುತ್ತ..
ನಿನ್ನ ಹಿಂದಿನ ಸಾಹಸದ ಕಥೆಗಳನ್ನು ಹೇಳು..


ನಿನಗೊಂದು ಜಾತಿ ಪಟ್ಟ ಕಟ್ಟಿ..
ಬಣ್ಣ ಬಳಿದು..
ನಿನ್ನನ್ನು...
ಒಂದು ಬಾವುಟವನ್ನಾಗಿ ನೋಡಲು ಮನಸ್ಸು ಒಪ್ಪುತ್ತಿಲ್ಲ..


ಕರಳು ಕಿವುಚಿದಂತಾಗುತ್ತದೆ..


ಬಂದು ಬಿಡು ಅಜ್ಜಾ...!


ಕಾಯುತ್ತಾ ಇರ್ತೆನೆ...

Monday, August 15, 2011

ಒಂದು ಅಸಾಧ್ಯವನ್ನು "ಸಾಧ್ಯ"ವಾಗಿಸುವ ಪ್ರಯತ್ನ......


ಕಳೆದ ವರ್ಷ ನಾನು ಸಿಂಗಾಪುರಕ್ಕೆ ಹೋಗಿದ್ದೆ..
ನನ್ನ ತಮ್ಮ, ನಾದಿನಿ ತುಂಬಾ ಬಲವಂತ ಮಾಡಿದ್ದರು....


ತುಂಬಾ ದಿನಗಳಾಗಿದ್ದವು ಎಲ್ಲಿಯೂ ಹೋಗದೆ..


ಸಿಂಗಾಪುರಕ್ಕೆ ಹೋಗಿ ಅಲ್ಲಿನ ಅಭಿವೃದ್ಧಿಯನ್ನು ಕಂಡು ಮೂಕನಾಗಿದ್ದೆ..


ನನ್ನ ತಮ್ಮ ನನಗೆ ಅಲ್ಲಿನ ಇತಿಹಾಸ ವಿವರಿಸಿದ..


"ಅಣ್ಣಾ..
ಈ ದೇಶ ಕೆಲವು ದಶಕಗಳ ಹಿಂದೆ ಜೂಜುಕೋರರ..
ಗಾಂಜಾ.. ಮಾದಕ ವಸ್ತು ಸೇವಿಸುವವರ ಅಡ್ಡೆಯಾಗಿತ್ತು..
ಈ ದೇಶವನ್ನು ಈ ಸ್ಥಿತಿಗೆ ತಂದವರು "ಲೀ" ಅಂತ..
ಹಗಲೂ ರಾತ್ರಿ ಕಷ್ಟಪಟ್ಟು..
ಕೆಲವು ನಿರ್ದಾಕ್ಷಿಣ್ಯ ನಿರ್ಧಾರಗಳನ್ನು ತೆಗೆದುಕೊಂಡು ಸಿಂಗಾಪುರವನ್ನು ಈ ರಿತಿ ಅಭಿವೃದ್ಧಿ ಮಾಡಿದ್ದಾರೆ..."


ಜುರಾಂಗ್ ಅಂತ ಒಂದು ದ್ವೀಪವನ್ನು ಕಟ್ಟಿದ್ದಾರೆ..
ಮಣ್ಣನ್ನು ಬೇರೆಕಡೆಯಿಂದ ತಂದು.. 
ಸಮುದ್ರದಲ್ಲಿ ಹಾಕಿ,  ದ್ವೀಪವನ್ನು ನಿರ್ಮಿಸಿ..
ಅದನ್ನು..
ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿ ಮಾಡಿದ್ದಾರೆ...


ದೇಶದ ಜನಕ್ಕೆ ಅಗತ್ಯವಾದ ನೀರೂ ಕೂಡ ಅಲ್ಲಿಲ್ಲ... !
ಪಕ್ಕದ ದೇಶ "ಮಲೇಶಿಯಾದಿಂದ ನೀರನ್ನು ಆಮದು ಮಾಡಿಕೊಳ್ಳುತ್ತಾರೆ..


ಇಂಡೋನೇಶಿಯಾದಿಂದ ಕಚ್ಛಾ ತೈಲವನ್ನು ತಂದು..
ಇಲ್ಲಿನ ರಿಫೈನರಿಯಲ್ಲಿ ಶುದ್ಧಿಗೊಳಿಸಿ..
ಬಹಳಷ್ಟು "ಏಷಿಯಾದ ದೇಶಗಳಿಗೆ" ತೈಲ ರಪ್ತು ಮಾಡುತ್ತಾರೆ...!!


ನಾವು ಹುಚ್ಚರು.. !!
ನಮ್ಮ ಕಬ್ಬಿಣದ ಅದಿರನ್ನು ರಫ್ತು ಮಾಡಿ..
ಕಬ್ಬಿಣದ ಬೆಲೆ ಸಾಮಾನ್ಯ ಜನರ ಕೈಗೆ ಎಟುಕದ ಹಾಗೆ ಮಾಡಿದ್ದೇವೆ...


ನಮ್ಮದೇಶದಲ್ಲಿ ಎಲ್ಲವೂ ಇದೆ..
ಆದರೆ ನಾವೇಕೆ ಹೀಗೆ?


ನೂರು ಕೋಟಿ ಭಾರತೀಯರಲ್ಲಿ ಒಬ್ಬ "ಲೀ" ನಂಥಹ ವ್ಯಕ್ತಿ ಯಾಕೆ ಹುಟ್ಟಿಲ್ಲ...?
ದೇಶವನ್ನಾಳುವ ನೂರಾರು ಧುರಿಣರಲ್ಲಿ ಒಬ್ಬ "ಪ್ರಾಮಾಣಿಕ" ಯಾಕೆ ಇಲ್ಲಾ?


ನಮ್ಮ ಇತಿಹಾಸಗಳು...
ಪುರಾಣಗಳು ಹೇಳುವ  ಸತ್ಯ ಚಾರಿತ್ರದ  ಕಥೆಗಳು..
ಘಟನೆಗಳು ಸುಳ್ಳೇ...?


ಲಾಲ್ ಬಹಾದ್ದೂರ್ ಶಾಸ್ತ್ರಿ,   ಸುಭಾಸ್ ಚಂದ್ರ ಭೋಸ್.. 
ಗಾಂಧಿ ತಾತ.., ಗುರ್ಜಾರಿ ಲಾಲ್ ನಂದಾ...
ಇವರೆಲ್ಲ ನಿಜವಾಗಿಯೂ ಇದ್ದಿದ್ದರಾ?


ನಾವು ಯಾಕೆ ಹೀಗಿದ್ದೇವೆ...?


ಯಾಕೆ ನಾವು ಹೀಗಾಗಿದ್ದೇವೆ ?


ನಾವು ನಮ್ಮ ಆತ್ಮಸಾಕ್ಷಿಯನ್ನೇ ಕಳೆದುಕೊಂಡು ಬದುಕಿದ್ದೇವಾ...?
ಯಾಕೆ ಇಂಥಹ ಬದುಕು  ?


ಮಂತ್ರಿಗಳ ವಿರುದ್ಧ.. ಹಗರಣದ ವಿರುದ್ಧ ನಾವು ಮಾತನಾಡುತ್ತೇವೆ..
ನಿಜ ..
ಕೇವಲ ಮಾತನಾಡುತ್ತೇವೆ..


ಇದು ನಮ್ಮ ಕೈಯಲ್ಲಿ ಏನೂ ಮಾಡಲಾಗುವದಿಲ್ಲ ಅಂತ ಹಳಿದುಕೊಂಡು ಸುಮ್ಮನಾಗಿಬಿಡುತ್ತೇವೆ..


ಚುನಾವಣೆ ಬಂದಾಗ "ನಮ್ಮ ಜಾತಿ.. ಧರ್ಮದ.. ಭಾಷೆಯ" ಪ್ರಲೋಭನೆಗೆ ಒಳಗಾಗಿ "ಮತ" ಚಲಾಯಿಸುತ್ತೇವೆ...


ಇಂದು ನಮ್ಮ ದೇಶದ ಪ್ರಧಾನ ಮಂತ್ರಿ ಕೆಂಪುಕೋಟೆಯಿಂದ ಭಾಷಣ ಮಾಡುತ್ತಾರೆ..


"ಉಪವಾಸ.. ಸತ್ಯಾಗ್ರಹಗಳಿಂದ"...
 ಬ್ರಷ್ಟಾಚಾರ ನಿರೋಧ ಕಾನೂನು" ತರಲಾಗುವದಿಲ್ಲ..."


ಆಯ್ತು...
ನೀವೇ ಮಾಡಿರಪ್ಪಾ...!!


ಹಲ್ಲಿಲ್ಲದ .. ಯಾರಿಗೂ ಪ್ರಯೋಜನವಾಗದ..
ನಿಷ್ಪ್ರಯೋಜನ "ಲೋಕಪಾಲ" ಬಿಲ್ಲು ಯಾಕೆ ಮಂಡಿಸಿದ್ದೀರಿ..?


ಇಂಥಹ ಬಿಲ್ಲು ಮಾಡುವದಿದ್ದರೆ..
"ಅಣ್ಣಾ ಹಜಾರೆ"ಯವರ ತಂಡವನ್ನು  "ಮಸೂದೆ" ಮಾಡಲು ಯಾಕೆ ಕರೆದಿದ್ದೀರಿ..?
ಯಾಕೆ ಮೂರು ತಿಂಗಳ ಸಮಯವನ್ನು ಹಾಳು ಮಾಡಿದ್ದೀರಿ ?


ನಿಮಗೆ "ಇಚ್ಛಾ ಶಕ್ತಿ" ಇದ್ದಿದ್ದರೆ.. ಅದೇ ಮಸೂದೆಯನ್ನು ಲೋಕಸಭೆಯಲ್ಲಿ ಯಾಕೆ ಮಂಡಿಸಲಿಲ್ಲ..?


ಜನ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ..
ಅಪರೂಪದ ಮಹಾನ್ ವ್ಯಕ್ತಿ "ಬಾಬುರಾವ್ ಕಿಷನ್ ಹಜಾರೆ"


ಇಂಥಹ ವ್ಯಕ್ತಿ ನಿಮಗೆ "ಬ್ರಷ್ಟಾಚಾರಿಯಾಗಿ" ಕಾಣುತ್ತಾನೆಯೆ...?


ಅಣ್ಣಾ ಹಜಾರೆಯವರಿಗೂ ಒಂದು ಬಣ್ಣ ಬಳಿದು ..
ಅವರ ಬಗೆಗೂ ಜನರಲ್ಲಿ ಅನುಮಾನ ತರಲು ಹೊರಟಿದ್ದೀರಾ?
"ಅಣ್ಣಾ ಹಜಾರೆ ಆರೆಸ್ಸಿಗರು.. ಬೀಜೇಪಿಯವರು.. ಕಮ್ಯುನಿಷ್ಟ್ ಬೆಂಬಲಿತರು ಅಂತೆಲ್ಲ ಹೇಳಿ..
ಆಂದೋಲನದ ದಿಕ್ಕು ತಪ್ಪಿಸಲು ಹೊರಟಿದ್ದೀರಾ?


ಛೇ....!!


ಧಿಕ್ಕಾರ ನಿಮ್ಮ ರಾಜಕೀಯಕ್ಕೆ..
ನಿಮ್ಮಂಥಹ "ಮನಸ್ಥಿತಿಗೆ"....


ಗೆಳೆಯರೆ...


ರಾಜಕೀಯದವರನ್ನು, ಅಧಿಕಾರಿಗಳನ್ನು ಬಯ್ಯುವ " ನಾವು " ಸಂಭಾವಿತರೆ?


ನಾವೂ ಕೂಡ ಲಂಚಕೊಟ್ಟಿದ್ದೇವೆ...
ಮನೆ ಕಟ್ಟುವ ಸಂಧರ್ಭದಲ್ಲೋ..
ಡ್ರೈವಿಂಗ್ ಲೈಸನ್ಸ್ ಪಡೆಯುವಾಗಲೋ ಕೊಟ್ಟಿದ್ದೇವೆ...


ನಮ್ಮ ಕೆಲಸ ಜಲ್ದಿಯಾಗಿ ಮುಗಿಯಲಿ ಅಂತಲೂ ಕೊಟ್ಟಿದ್ದೇವೆ...
ಇದೆಲ್ಲ "ಸಹಜ" ಎಂದು ಕೊಟ್ಟಿದ್ದೇವೆ..


ಅದು ಈಗ ನಮ್ಮನ್ನೇ ತಿಂದು ತೇಗುವ ಹಾಗೆ ಬೆಳೆದಿದೆ...


ಇದಕ್ಕೊಂದು ಕಿಡಿ ಹಚ್ಚಿ ...
ಬೆಂಕಿ ಹಚ್ಚಿ ಮುಗಿಸಲೇ ಬೇಕಲ್ಲವೆ?


ಅದಕ್ಕೊಂದು ಕಾಲ ಈಗ ಬಂದಿದೆ...


ನಮಗೊಬ್ಬ "ಗಾಂಧಿ ತಾತ" ಸಿಕ್ಕಿದ್ದಾರೆ..!!


ಅಣ್ಣಾ ಹಜಾರೆ !!!


ಜನ ಲೋಕಪಾಲ ಬಿಲ್ಲು ಜಾರಿಗೆ ಬರುವದು ಅಸಾಧ್ಯ...
ಸತ್ಯ ನಮಗೂ ಗೊತ್ತು..


ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಎಷ್ಟು ಎಂಪಿ ಗಳಾಗಿ ಹೋಗಿದ್ದಾರೆ?
ಎಷ್ಟೊಂದು ಎಮ್ಮೆಲ್ಲೆ ಗಳಾಗಿದ್ದಾರೆ...??


ಅಧಿಕಾರಿವರ್ಗದವರು ... ಇವರೆಲ್ಲ ಸುಮ್ಮನಿರುತ್ತಾರೆಯೇ ?


ಖಂಡಿತ ಇಲ್ಲ...


ಚುನಾವಣೆಯಲ್ಲಿ ಕೋಟಿಗಟ್ಟಲೆ ಖರ್ಚುಮಾಡುವ  ...
ಎಲ್ಲ ರಾಜಕೀಯ ಪಕ್ಷದವರು ಈ ಬಿಲ್ಲನ್ನು ಖಂಡಿತ ಒಪ್ಪುವದಿಲ್ಲ...

ಅಣ್ಣಾ ಹಜಾರೆಯವರ ಈ ಆಂದೋಲವನ್ನು ..
ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿತ್ತುರಾಯೇ ಹೊರತು ಬೆಂಬಲಿಸುವದಿಲ್ಲ...


"ಕಪ್ಪು ಹಣದ" ವಿರುದ್ಧ ಮಾತನಾಡಿದ ಬಾಬಾ ರಾಮದೇವ ಈಗ ಎಲ್ಲಿದ್ದಾರೆ ?


ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ .
ಅವರ  ಸಹಾಯಕರ ವಿರುದ್ಧವೂ ಕೇಸು ಹಾಕಿ...


ಏನೇನೋ ಹುಳುಕು ಎತ್ತುತ್ತ ಆ ಆಂದೋಲನದ ದಿಕ್ಕು ತಪ್ಪಿಸಿದ್ದನ್ನು ಮರೆಯಲು ಸಾಧ್ಯವೇ?


ರಾಮದೇವ ಏನೇ ಇರಬಹುದು...?


ಅವರು ಧ್ವನಿ ಎತ್ತಿದ "ಕಪ್ಪುಹಣ" ವಿಚಾರ ಒಳ್ಳೆಯದಿತ್ತು ಅಲ್ಲವೆ?


ಆದರೆ ಮಧ್ಯರಾತ್ರಿಯಲ್ಲಿ ಅಮಾಯಕರ ಮೇಲೆ ಹಲ್ಲೆ ನಡೇಸಿ ಬಲವಂತವಾಗಿ ಓಡಿಸುವ "ಗಣತಂತ್ರದ" ಸರಕಾರಕ್ಕೆ ಏನನ್ನ ಬೇಕು?


ನಮ್ಮ ತಪ್ಪೂ ಇದೆ...


ನಮಗೆ ಬಾಬಾ ರಾಮದೇವ "ಚೂಡಿದಾರ" ಧರಿಸಿಕೊಂಡು ಓಡಿಹೋಗಿದ್ದು "ಮಾತನಾಡುವ"  ವಿಷಯವಾಗುತ್ತದೆ..!!


" ವಿದೆಶದಲ್ಲಿಟ್ಟ"  ಕಪ್ಪು ಹಣವನ್ನು" ಮರೆತು ಬಿಡುತ್ತೇವೆ...!!


ಅಣ್ಣಾ ಹಜಾರೆಯವರ ಈ ಆಂದೋಲನ ಹೀಗಾಗದಿರಲಿ..


"ಅಣ್ಣಾ ಹಜಾರೆಯವರ " ಈ ಆಂದೋಲನಕ್ಕೆ  ನಾವೇನು ಮಾಡ ಬಹುದು?



ಹಜಾರೆ ತಾತನಿಗೆ ನಾವು ಹೇಗೆ ಬೆಂಬಲ ಕೊಡಬೇಕು...?
ಹೇಗೆ ಕೊಡ ಬಹುದು...?


ನಾವು  ನಮ್ಮ ಸ್ನೇಹಿತರು "ಹದಿನೈದು ಜನ" ಒಂದು ದಿನ ಉಪವಾಸ ಮಾಡಲು ತಯಾರಾಗಿದ್ದೇವೆ...


ನಾವು ಇಲ್ಲಿಯವರೆಗೆ ಲಂಚಕೊಟ್ಟ ಪಾಪಕ್ಕಾಗಿ..
ಪ್ರಾಯಶ್ಚಿತಕ್ಕಾಗಿ ಉಪವಾಸ ಮಾಡೋಣ....


ಒಂದು ಅಸಾಧ್ಯವನ್ನು "ಸಾಧ್ಯ"ವಾಗಿಸುವ ಪ್ರಯತ್ನ ಮಾಡೋಣ ಅಲ್ಲವೇ?...


ಇಂದು ಅಗಸ್ಟ್  ಹದಿನೈದು...


ನಿಮಗೆಲ್ಲ "ಸ್ವಾತಂತ್ರ್ಯೋತ್ಸವದ " ಶುಭಾಶಯಗಳು...


ಇಂದು ರಾತ್ರಿ ಎಂಟು ಗಂಟೆಯಿಂದ  ಒಂಬತ್ತು  ಗಂಟೆಯವರೆಗೆ ಮನೆಯ ಎಲ್ಲ ದೀಪಗಳನ್ನು ಆರಿಸೋಣ...


ಒಳ್ಳೆಯ ನಾಯಕನಿಗಾಗಿ ದೇಶ ಹುಡುಕುತ್ತಿರುವಾಗ..
ಒಬ್ಬ ಅಜ್ಜ ಸಿಕ್ಕಿದ್ದಾನೆ ನಮಗೆ..


ರಾಜಕೀಯ ಹಂಬಲವಿಲ್ಲದ..
ಚಾರಿತ್ರ್ಯವುಳ್ಳ ಹಜಾರಿ ತಾತ ...


ಹಜಾರೆ ತಾತನ ಆಂದೋಲನಕ್ಕೆ ಬೆಂಬಲ ಸೂಚಿಸೋಣ..


ಈ ದೇಶ ನಮ್ಮದು...


ಜೈ ಹೋ !!



ಗೆಳೆಯರೆ...

ರಾಮ ಲಂಕಾಪಟ್ಟಣಕ್ಕೆ ಹೋಗಲೆಂದು ಸಮುದ್ರಕ್ಕೆ ಸೇತುವೆ ಕಟ್ಟುತ್ತಿದ್ದನಂತೆ..
ಆಗ ಇಣಚಿಯೊಂದು ಬಂದು ತನ್ನ ಮೈಯನ್ನು ಒದ್ದೆ ಮಾಡಿಕೊಂಡು ..
ಮರಳಲ್ಲಿ ಹೊರಳಾಡಿ ಸೇತುವೆ ಕಟ್ಟುತ್ತಿದ್ದ ಜಾಗದಲ್ಲಿ ಮರಳನ್ನು ಉದುರಿಸುತ್ತಿತ್ತಂತೆ...

ಅದು "ಅಳಿಲು ಸೇವೆ... !!

ನಾವೂ ಕೂಡ ಮಾಡೋಣವೆ?

ಇದೇ ಬರುವ ಶುಕ್ರವಾರ ಬೆಳಿಗ್ಗೆ ..(19/8/2011)
ಎಂಟು ಗಂಟೆಯಿಂದ ಸಾಯಂಕಾಲ ಎಂಟು ಗಂಟೆಯ ತನಕ..

ಫ್ರೀಡಮ್ ಪಾರ್ಕಿನಲ್ಲಿ ಕುಳಿತ ಹೋರಾಟಗಾರರಿಗೆ ಬೆಂಬಲ ಕೊಟ್ಟು ಬರೋಣ ..

ಏನಂತೀರಿ?..

ನಾನು ಇದುವರೆಗೆ ಉಪವಾಸ ಮಾಡಿಲ್ಲ...
ಎಪ್ಪತ್ತು ನಾಲ್ಕರ ಅಜ್ಜ ಆಮರಣ ಉಪವಾಸ ಮಾಡುತ್ತಿದ್ದಾನೆ ...
ನಮಗಾಗಿ..

ನಮಗೆ ಒಂದು ದಿನ ಇರಲಿಕ್ಕೆ ಆಗೊಲ್ಲವೆ?

ನಾನಂತೂ ಒಂದು ಪ್ರಯತ್ನ ಮಾಡೋಣ ಎಂದುಕೊಂಡಿದ್ದೇನೆ..
ಮೈಯಲ್ಲಿ ಗಟ್ಟಿ ಇರುವವರು ಉಪವಾಸ ಮಾಡುತ್ತಾರೆ...
ಆಗದೆ ಇದ್ದ ಗೆಳೆಯರು ಉಪವಾಸ ಕುಳಿತವರ ಉತ್ಸಾಹ ಕೊಡಲಾದರೂ ಬನ್ನಿ..
ಇದರಲ್ಲಿ ನಾಚಿಕೆಯೇನೂ ಇಲ್ಲ..

ದಯವಿಟ್ಟು ನೀವೂ ಕೂಡ ಬನ್ನಿ...

ನಮ್ಮ ದೇಶದ ಬ್ರಷ್ಟಾಚಾರ ಓಡಿಸುವಲ್ಲಿ ನಮ್ಮ "ಅಳಿಲು ಸೇವೆಯನ್ನು" ಮಾಡಿ ಬರೋಣ...

ಒಂದು ಹೆಮ್ಮೆಯ ಕಾರ್ಯದಲ್ಲಿ ಭಾಗವಹಿಸಿ.. ಧನ್ಯತೆ ಪಡೆಯೋಣ...

ದಯವಿಟ್ಟು ಬನ್ನಿ...

ನಮ್ಮ ಸಂಗಡ ಜನಪ್ರಿಯ ಲೇಖಕ "ಮಣಿಕಾಂತ್" ಕೂಡ ಇರುತ್ತಾರೆ...

ಜೈ ಹೋ !!

ಜೈ ಭಾರತ.. !!!!